ಜನರ ಮಾತಿಗೇಕೆ ಬೆಲೆ ಕೊಡುವುದು? ಹೇಗೂ ನಾವೀಗ ಅರಮನೆಯಲ್ಲಿ ಇಲ್ಲ. ಇರುವುದು ಈ ಆಶ್ರಮದಲ್ಲಿ. ವೃದ್ಧ ಗಂಡನಿಗೆ ಕಣ್ಣಾಗಿ, ಅವನ ಶುಷ್ರೂಷೆ ಮಾಡುತ್ತ ದಿನಕಳೆಯುವುದೇ ನನ್ನ ಕಾಯಕ. ಅದರಿಂದಾದರೂ ನಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಲಿ. ಯಾರಿಗೂ ತೊಂದರೆ ಕೊಡಬಾರದು, ಎಲ್ಲರನ್ನೂ ಗೌರವಿಸುತ್ತ, ಕಾಳಜಿ ಮಾಡುತ್ತ ಬದುಕಬೇಕೆಂದು ಪಿತಾಶ್ರೀ, ಮಾತೃಶ್ರೀ ನನಗೆ ಬಾಲ್ಯದಿಂದಲೂ ಕಲಿಸಿದ್ದು ಸಾರ್ಥಕವಾಯಿತು. ಹಾಗೆಯೇ ಬದುಕಲು ತೊಡಗಿದ್ದೆ.
ಮದುವೆಯೆಂಬುದು ಒಬ್ಬೊಬ್ಬರಿಗೆ ಒಂದೊಂದು ಭಾವವನ್ನು ತರುತ್ತದೆಯಂತೆ. ಸಂಗಾತಿ ದೊರೆಯುವ ಖುಷಿ, ಕಷ್ಟ ಸುಖ ಸಾಂಗತ್ಯಕ್ಕೆ ಜೊತೆಗಾರರೊಬ್ಬರು ಸಿಗುವ ಕ್ಷಣ ಬಹು ಅಮೂಲ್ಯ ಎಂದು ನನ್ನ ಗೆಳತಿಯರು ಆಗಾಗ ಹೇಳುತ್ತಿದ್ದರು. ನನಗೂ ಮದುವೆಯ ಬಗ್ಗೆ, ನಂತರದ ದಾಂಪತ್ಯ ಜೀವನದ ಬಗ್ಗೆ ಬಗೆಬಗೆಯ ಹೊಂಗನಸುಗಳಿದ್ದವು, ಎಲ್ಲರ ಹಾಗೆಯೇ.
ಆದರೆ ವಿಧಾತ ಎಲ್ಲರ ಹಣೆಯ ಬರೆಹವನ್ನು ಒಂದೇ ಲೇಖನಿಯಿಂದ ಬರೆಯುತ್ತಾನೇನೋ? ಆದರೆ ಒಂದೇ ರೀತಿ ಎಲ್ಲಿ ಬರೆಯುತ್ತಾನೆ? ಅವನ ಮಸ್ತಿಷ್ಕದಲ್ಲಿ ಮೂಡುವ ಯೋಚನೆಗಳು ಅವನದೇ ಹಸ್ತಾಕ್ಷರದಲ್ಲಿ ನಮ್ಮ ಲಲಾಟಕ್ಕೆ ಬರುವ ಹೊತ್ತಿಗೆ ಯಾವ ರೂಪ ತಳೆಯುತ್ತದೆಯೋ ಏನೋ. ಸ್ವತಃ ಬರೆದ ಅವನಿಗೂ ಗೊತ್ತಿರುವುದಿಲ್ಲ.
ಬಂದ ಪರಿಸ್ಥಿತಿಯನ್ನು ಅನುಭವಿಸಲೇಬೇಕಲ್ಲ. ಏನಾದರಾಗಲಿ, ಎದುರಿಗಿರುವ ಸತ್ಯವನ್ನು ಖುಷಿಯಿಂದಲೇ ಸ್ವೀಕರಿಸಬೇಕು ಎನ್ನುವವಳು ನಾನು. ಹಿಂದೆ ಅನುಭವಿಸಿದ ಸುಖ ದುಃಖದ ಕ್ಷಣಗಳು ಏನೇ ಇರಲಿ. ಮುಂದೆ ಏನಾಗುತ್ತದೆಯೋ ಎಂಬುದೂ ಸಹ ಹಾಗೆಯೆ ಇರಲಿ.
ಈಗಿರುವ ಕ್ಷಣವನ್ನು ಇದ್ದಂತೆಯೇ ಸ್ವೀಕರಿಸುತ್ತೇನೆ. ಇದು ಬಾಲ್ಯದಿಂದಲೂ ನಾನು ಬದುಕಿದ ರೀತಿ.
ಇಷ್ಟಕ್ಕೂ ಅಂತಹ ಸ್ಥಿತಿ ಬರಲು ಕಾರಣವಾಗಿದ್ದು ನಾನೇ ಅಲ್ಲವೆ?
ಸುಮ್ಮನೆ ಅರಮನೆಯಲ್ಲಿ ಸುಖವಾಗಿದ್ದ ನಾನು ಸಖಿಯರೊಡನೆ ಅರಣ್ಯಕ್ಕೆ ಹೋದದ್ದೇ ತಪ್ಪಾಯಿತು. ಅಪ್ಪನೇನೋ ಬೇಟೆಯಾಡಲು ಸೈನಿಕರೊಂದಿಗೆ ಹೋಗುವುದು ಸಹಜ. ನಾನೂ ಸಹ ಸಖಿಯರೊಡನೆ ಜಲಕ್ರೀಡೆ, ವನವಿಹಾರ ಎಂದೆಲ್ಲ ಹೋಗುತ್ತಿದ್ದುದೂ ಸಹಜ. ಎಂದಿನ ಹಾಗೆ ಪಿತಾಶ್ರೀಯವರು ವನಕ್ಕೆ ಹೊರಟೊಡನೆ ನಾನೂ ಜೊತೆಗೆ ಸಾಗಿದೆ, ಸಖಿಯರೂ ಇದ್ದರು.
ಯಾವಾಗಲೂ ತೊಂದರೆ ಆಗಿರಲಿಲ್ಲ.
ಆದರೆ ಆ ಬಾರಿ ಮಾತ್ರ ಹಾಗಾಗಲೇ ಇಲ್ಲ, ತಪ್ಪು ಮಾಡಿಬಿಟ್ಟೆ. ಕುತೂಹಲಕ್ಕೆ ಮದ್ದಿಲ್ಲ ಎಂಬುದು ನನ್ನ ವಿಚಾರದಲ್ಲಿ ನಿಜವಾಗಿ ಹೋಯಿತು. ಸುಮ್ಮನೆ ಓಡಾಡಿಕೊಂಡು, ಖುಷಿಯಾಗಿರುವ ಬದಲು, ಯಾವುದೋ ಹುತ್ತದ ಬಳಿ ಹೋದೆ. ಕೆಟ್ಟದ್ದರ ಆಕರ್ಷಣೆ ಬಹುಬೇಗ. ಅಲ್ಲಾದರೂ ಸುಮ್ಮನಿದ್ದೆನಾ ಎಂದರೆ, ಉಹೂಂ. ಆ ಹುತ್ತಕ್ಕೆ ಚುಚ್ಚಿದೆ.
ಚುಚ್ಚಿದ್ದು ಹುತ್ತಕ್ಕಾ? ಅಲ್ಲ, ಖಂಡಿತಾ ಅಲ್ಲ. ಹಾಗಾದರೆ ಮತ್ತೇನಿತ್ತು ಅಲ್ಲಿ? ಅಷ್ಟು ದಟ್ಟ ಹಗಲಿನಲ್ಲೂ ಕಣ್ಣು ಕೋರೈಸುವ ಎರಡು ಬೆಳಕಿನ ಪುಂಜಗಳು! ಏನಿರಬಹುದೆಂದು ಕುತೂಹಲ ಮೂಡಿತು. ಆಲೋಚಿಸದೇ ತಕ್ಷಣ ಮೊನಚಾದ ದರ್ಭೆಯ ತುದಿಯಿಂದ ಚುಚ್ಚಿಬಿಟ್ಟೆ. ಎರಡೂ ತೇಜಪುಂಜಗಳಿಗೂ ಚುಚ್ಚಿಬಿಟ್ಟೆ. ಏನಾಶ್ಚರ್ಯ! ಮರುಕ್ಷಣವೇ ಆ ಬೆಳಕಿನ ಕಿಂಡಿಯಿಂದ ರಕ್ತ ಸುರಿಯಲಾರಂಭಿಸಿತು. ಆಘಾತವಾಯಿತು. ಮತ್ತೆ ಅದೇನೆಂದು ನೋಡುವ ಧೈರ್ಯವಾಗಲೇ ಇಲ್ಲ. ಭಯವಾಯಿತು.
ಸಖಿಯರೊಡನೆ ಹೇಳಲು ಮಾತೇ ಹೊರಡಲಿಲ್ಲ. ಅಪ್ಪಯ್ಯನ ಬಳಿ ಬಂದು ಬೇಗ ಅರಮನೆಗೆ ಹೋಗೋಣ ಎಂದು ದುಂಬಾಲು ಬಿದ್ದೆ.
ಅರಮನೆಗೆ ಬಂದು ಎರಡೇ ದಿನವಾಗಿತ್ತು. ಇದ್ದಕ್ಕಿದ್ದಂತೆ ಎಲ್ಲರಿಗೂ ಮಲಮೂತ್ರ ನಿಂತುಹೋಯಿತು. ಮೈಲಿಗೆಯಾದರೆ, ಅಪಚಾರವಾದರೆ, ಅನರ್ಥಕಾರಿ ಘಟನೆ ನಡೆದರೆ ಮಾತ್ರ ಹೀಗಾಗುತ್ತದೆ ಎಂದು ಅಪ್ಪಯ್ಯ ಪುರೋಹಿತರಲ್ಲಿ ವಿಚಾರಿಸಿದರು. ಅವರೂ ಸಹ ಅದನ್ನೇ ನುಡಿದರು. “ಋಷಿಮುನಿಗಳಿಗೆ ಯಾರೋ ನೋವು ಮಾಡಿದ್ದಾರೆ, ತೊಂದರೆ ಕೊಟ್ಟಿದ್ದಾರೆ. ಅವರು ನೊಂದಿರುವುದರಿಂದ ಹೀಗಾಗಿದೆ” ಎಂಬ ಉತ್ತರ ಬಂತು. ಮತ್ತೆ ಪಿತಾಶ್ರೀಯವರು ಎಲ್ಲರನ್ನೂ ವಿಚಾರಿಸಿದರು. ಆಗ ನನಗೆ ಕಾಡಿನಲ್ಲಿ ಆ ದಿನ ನಡೆದ ಘಟನೆ ನೆನಪಾಯಿತು. ಅದನ್ನೇ ಕಣ್ತುಂಬಿಕೊಂಡು ಅರುಹಿದೆ. “ನಾನು ಬೇಕಂತಲೇ ಮಾಡಿದ್ದಲ್ಲ. ಈ ಕ್ಷಣದವರೆಗೂ ಆ ಹುತ್ತದಲ್ಲಿ ಏನಿದೆಯೆಂಬುದು ತಿಳಿದಿಲ್ಲ” ಎಂದೆ. ಅಪ್ಪ ಮೃದುಹೃದಯಿ. ಮಗಳ ಮೇಲೆ ಪ್ರಾಣ ಇಟ್ಟವರು. ಬೈಯಲಿಲ್ಲ. ಆದರೆ ಬೇಸರಗೊಂಡದ್ದಂತೂ ನಿಜ. ಅಪ್ಪಯ್ಯನ ಬೇಸರಕ್ಕೆ, ನೋವಿಗೆ ನಾನು ಕಾರಣವಾಗಿಬಿಟ್ಟೆನೆಲ್ಲ ಎಂಬ ನೋವು ನನ್ನನ್ನು ಬಾಧಿಸಲಾರಂಭಿಸಿತು.
ತಂದೆಯವರು ತತ್ಕ್ಷಣವೇ ಕಾಡಿಗೆ ತೆರಳಿದರು. ಜೊತೆಯಲ್ಲಿ ನಾನೂ ಇದ್ದೆ. ಹೋಗಿ ನೋಡಿದಾಗ ಕಂಡದ್ದಾದರೂ ಏನು? ನೆಲದ ಮೇಲೆ ಅಸಹಾಯಕನಾಗಿ ಕೂತ ವಯಸ್ಸಾದ ಋಷಿ. ಚರ್ಮ ಜೋತು ಬಿದ್ದಿದೆ. ಬಾಗಿನ ಬೆನ್ನು, ಕಡ್ಡಿಯಂತಹ ಕಾಯ. ಜಟೆ ಗಡ್ಡ ಮೀಸೆಗಳು ಬಿಳಿಯಾಗಿ ಹೋಗಿವೆ. ಜೊತೆಗೆ ಕಣ್ಣು ಕಾಣುತ್ತಿಲ್ಲ. ಕಣ್ಣಿನ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿದ ಗುರುತು! ನೋಡಿದೊಡನೆ ಅರ್ಥವಾಯಿತು. ಆ ದಿನ ನಾನು ಚುಚ್ಚಿದ್ದು ಈ ಋಷಿಯ ಕಣ್ಣಿಗೆ!
ಛೆ! ಇದೇನಾಗಿ ಹೋಯಿತು. ನಾನು ಇಂತಹ ಅಪಸವ್ಯ ಮಾಡಿದ್ದಾದರೂ ಹೇಗೆ? ನನ್ನ ಸಂಸ್ಕಾರ ಹೀಗೆ ಮಾಡಿಸಿತಾ? ಅಳುತ್ತಾ ನಿಂತೆ. ಕ್ಷಮೆ ಕೇಳಿದೆ. ತಂದೆಯವರಂತೂ ಕೈ ಮುಗಿದು ನಿಂತರು. ಕ್ಷಮಿಸೆಂದು ಬೆನ್ನು ಬಾಗಿಸಿದರು.
ಆ ಮುನಿ ಹೇಳಿದ್ದಿಷ್ಟೇ. “ಶರ್ಯಾತಿ ಮಹಾರಾಜನೇ, ನನಗೆ ವಯಸ್ಸಾಗಿದೆ. ಇಷ್ಟು ವರ್ಷ ತಪಸ್ಸಿನಲ್ಲಿ ಕಾಲಕಳೆದೆ. ಈಗ ತಪಸ್ಸು ಮುಗಿಸಿ ಏಳೋಣವೆಂದರೆ ನಿನ್ನ ಮಗಳು ನನ್ನ ಕಣ್ಣಿನ ಶಕ್ತಿಯನ್ನು ನೀಗಿದ್ದಾಳೆ. ಇನ್ನು ನನ್ನ ಬದುಕು ಹೇಗೆ? ಹಾಗಾಗಿ ನನ್ನ ಕಣ್ಣಾಗಿ ಈ ಮಗಳನ್ನು ನನಗೆ ಮದುವೆ ಮಾಡಿಕೊಡು.”
ತಂದೆಯವರಿಗೆ ಆಘಾತದ ಮೇಲೆ ಆಘಾತ. ರಾಜಕುಮಾರಿ, ಮೇಲಾಗಿ ಅತೀ ರೂಪವತಿ, ತುಂಬು ಯೌವನೆ. ಅರಮನೆಯಲ್ಲಿ ಸುಖವಾಗಿ ಬೆಳೆದ ಏಳುಮಲ್ಲಿಗೆ ತೂಕದ ಮೃದುದೇಹೀ ಮಗಳು, ಈ ವಯಸ್ಸಾದ ಋಷಿಯನ್ನು ಮದುವೆಯಾಗಿ, ಸೇವೆ ಮಾಡುತ್ತ ವಿರಾಗಿಣಿಯಂತೆ ಬದುಕುವುದೆಂದರೆ? ಯಾವ ತಂದೆಯ ಮನಸ್ಸು ಒಪ್ಪೀತು? ಆದರೆ ಅದು ನಾನು ಮಾಡಿದ ತಪ್ಪಲ್ಲವೇ? ಅದನ್ನು ಸರಿಮಾಡುವ ಜವಾಬ್ದಾರಿ ನನ್ನದೇ. ಹಾಗಾಗಿ ನಾನೇ ಮುಂದೆ ನಿಂತು ಮದುವೆಗೆ ಒಪ್ಪಿದೆ. ಅಪ್ಪಯ್ಯನಿಗೆ ಇಷ್ಟವಿಲ್ಲ. ಆದರೆ ಇಡೀ ವಂಶಕ್ಕೆ ಕಳಂಕ ಬರುತ್ತದೆ. ತಪೋಬಲದ ಋಷಿ, ಶಾಪಕೊಟ್ಟರೆ? ಹಾಗಾಗಿ ಸುಮ್ಮನಾದರು.
ಕನಸುಗಳು, ಆಸೆಗಳು ಏನೇ ಇದ್ದರೂ ನನಗೂ ಈ ಮುನಿಗೂ ಮದುವೆಯಾಯಿತು. ಶರ್ಯಾತಿ ಮಹಾರಾಜನ ಮಗಳು ಸುಂದರಿ ಸುಕನ್ಯೆ, ಮುದಿ ವಯಸ್ಸಿನ ಕಣ್ಣಿಲ್ಲದ ಋಷಿಯನ್ನು ಮದುವೆಯಾದಳು ಎಂದು ಜನರು ಆಡಿಕೊಳ್ಳುತ್ತಿದ್ದರಂತೆ. ನನ್ನ ಕಿವಿಗೂ ವಿಚಾರ ಬಿದ್ದಿತ್ತು ಆದರೇನಂತೆ? ಮಾಡಿಕೊಂಡದ್ದು.
ಜನರ ಮಾತಿಗೇಕೆ ಬೆಲೆ ಕೊಡುವುದು? ಹೇಗೂ ನಾವೀಗ ಅರಮನೆಯಲ್ಲಿ ಇಲ್ಲ. ಇರುವುದು ಈ ಆಶ್ರಮದಲ್ಲಿ. ವೃದ್ಧ ಗಂಡನಿಗೆ ಕಣ್ಣಾಗಿ, ಅವನ ಶುಶ್ರೂಷೆ ಮಾಡುತ್ತ ದಿನಕಳೆಯುವುದೇ ನನ್ನ ಕಾಯಕ. ಅದರಿಂದಾದರೂ ನಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಲಿ. ಯಾರಿಗೂ ತೊಂದರೆ ಕೊಡಬಾರದು, ಎಲ್ಲರನ್ನೂ ಗೌರವಿಸುತ್ತ, ಕಾಳಜಿ ಮಾಡುತ್ತ ಬದುಕಬೇಕೆಂದು ಪಿತಾಶ್ರೀ, ಮಾತೃಶ್ರೀ ನನಗೆ ಬಾಲ್ಯದಿಂದಲೂ ಕಲಿಸಿದ್ದು ಸಾರ್ಥಕವಾಯಿತು. ಹಾಗೆಯೇ ಬದುಕಲು ತೊಡಗಿದ್ದೆ.
ನನಗೆ ಕೊರಗೇನಿರಲಿಲ್ಲ. ನನ್ನ ಪತಿ ಸಾಮಾನ್ಯದವರೇನಲ್ಲ. ಭೃಗು ಮಹರ್ಷಿ ಹಾಗೂ ಪುಲೋಮೆಯ ಮಗ. ದೈತ್ಯ ಗುರು ಶುಕ್ರಾಚಾರ್ಯರ ಸೋದರ. ಹುಟ್ಟುವಾಗಿನಿಂದಲೂ ಸುದ್ದಿಯಾದವರು. ನನ್ನತ್ತೆ ಪುಲೋಮೆ ಗರ್ಭಿಣಿಯಾಗಿದ್ದಾಗ ಒಬ್ಬ ರಾಕ್ಷಸ ಅವರನ್ನು ಅಪಹರಣ ಮಾಡಿದನಂತೆ. ಆಗ ಅತ್ತೆಯವರು ಹೆದರಿದ್ದಷ್ಟೇ. ಗರ್ಭ ಜಾರಿತು. ಹಾಗಂತ ಅದು ಮರಣವೀಯಲಿಲ್ಲ. ಶಿಶುವಾಯಿತು. ಜಾರಿದ ಗರ್ಭ ಸೂರ್ಯನಷ್ಟೇ ಕಾಂತಿಯನ್ನು ಹೊಂದಿತ್ತು. ಕಣ್ಣುಗಳು ಅಪಾರ ಪ್ರಭೆಯನ್ನು ಸೂಸುವ ತೇಜೋಪುಂಜಗಳು. ಅದರಿಂದ ಆ ರಾಕ್ಷಸನನ್ನು ದಿಟ್ಟಿಸಿ ನೋಡಲಾಗಿ, ರಾಕ್ಷಸನು ಸುಟ್ಟು ಭಸ್ಮವೇ ಆದನಂತೆ. ಅಷ್ಟು ಶಕ್ತಿ ಹುಟ್ಟಿದಾಗಲೇ ಇತ್ತು ನನ್ನವರಿಗೆ. ಹಾಗೆ ಗರ್ಭದಿಂದ ಚ್ಯುತಿಯಾದ್ದರಿಂದ ಅವರಿಗೆ “ಚ್ಯವನ” ಎಂದು ಹೆಸರಿಟ್ಟರಂತೆ.
ಶೈಶವದಿಂದಲೇ ಅಂತಹದೊಂದು ಶಕ್ತಿ ಪಡೆದ ನನ್ನವರು ಸದಾ ತಪಸ್ಸು ಮಾಡಿದವರು. ಬ್ರಹ್ಮ ತೇಜಸ್ಸಿನವರು. ನಂತರ ಮನುಪುತ್ರಿಯಾದ ಅರುಷಿಯನ್ನು ಮದುವೆಯಾಗಿ ಔರ್ವನೆಂಬ ಮಗನನ್ನೂ ಪಡೆದರಂತೆ. ಈಗ ಅವರೆಲ್ಲಿದ್ದಾರೋ ಏನೋ. ಋಷಿಮುನಿಗಳ ತಪಸ್ಸಿಗೆ ಭಂಗ ತರುವ ಹೆಂಡತಿಯರು ನಾವಲ್ಲ. ನಂತರ ನರ್ಮದೆಯ ತೀರದಲ್ಲಿ ತಪಸ್ಸು ಗೈಯುತ್ತಿರುವಾಗಲೇ ನನ್ನಿಂದ ಆ ಅಪಚಾರವಾದದ್ದು.
ಅವರು ಆ ಪರಿ ಮೈಮೇಲೆ ಹುತ್ತ ಬೆಳೆಯುವಷ್ಟು ತಪಸ್ಸುಗೈಯುತ್ತಾರೆಂದು ಯಾರಿಗೆ ಗೊತ್ತು? ಆದರೂ ನಾನು ತೇಜೋಪುಂಜವನ್ನು ಚುಚ್ಚುವ ಸಾಹಸಕ್ಕೆ ಹೋಗಬಾರದಿತ್ತು. ಈಗ ಋಷಿಪತ್ನಿಯಾಗಿ ಬದುಕಿನಲ್ಲಿ ಒಂದು ವೈರಾಗ್ಯ ಬಂದಿದೆ. ಆದರೂ ಯೌವ್ವನದ ಬದುಕನ್ನು, ರಾಣಿಯಾಗಿ ಬದುಕುವ ಅವಕಾಶವನ್ನು ನಾನೇ ಕೈಯಿಂದ ಕಳೆದುಕೊಂಡೆನಾ ಎಂದು ಯೋಚನೆ ಬಂದಿತ್ತು.
ಹಾಗೆ ಯೋಚಿಸುವುದು ಖಂಡಿತಾ ತಪ್ಪು. ನಾನೇ ಮುಂದೆ ಬಂದು ಮಾಡಿದ ತಪ್ಪಿನ ಪ್ರಾಯಶ್ಚಿತ್ತಕ್ಕಾಗಿ ಹಾಗೂ ವಂಶದ ಗೌರವಕ್ಕಾಗಿ ಮದುವೆಯಾದದ್ದು. ಈಗ ಆ ನಿರ್ಧಾರದ ಕುರಿತು ದುಃಖಿಸಬಾರದು ಎಂದು ಸಮಾಧಾನಿಯಾಗಿ ಬದುಕಲಾರಂಭಿಸಿದ್ದೆ. ಜೊತೆಗೆ ಅವರ ಮೇಲೆ ಅಪರಿಮಿತವಾದ ಪ್ರೇಮವೂ ಇತ್ತು.
ಅಷ್ಟರಲ್ಲಿ ನನ್ನ ಬದುಕಿನಲ್ಲೂ ವಸಂತ ಬಂದಿತು!
ಒಂದು ದಿನ ಹೀಗೆಯೇ ನೀರು ತರಲು ಕೊಳಕ್ಕೆ ಹೋಗಿದ್ದೆ. ಬಿಂದಿಗೆ ಹೊತ್ತು ಬರುವಾಗ ದಾರಿಯಲ್ಲಿ ಅವಳಿಗಳಿಬ್ಬರು ಎದುರಾಗಿ ನನ್ನ ಮೇಲೆ ಮೋಹಿತರಾದರು. ಕೈ ಹಿಡಿಯಲು ಬಂದರು. “ವಯಸ್ಸಾದ ಗಂಡನೊಡನೆ ಅದೇನು ಬಾಳ್ವೆ ಮಾಡುವೆ? ನಮ್ಮ ಜೊತೆ ಬಾ” ಎಂದು ಕರೆದರು. ಮುದುಕನ ಹೆಂಡತಿ ಪ್ರಾಯದವಳಾದರೆ ಊರೆಲ್ಲಾ ನೋಡುವ ದೃಷ್ಟಿಯೇ ಬೇರೆ ಎಂಬುದು ಅಗಾಗ ನನ್ನ ಅನುಭವಕ್ಕೆ ಬರುತ್ತಿತ್ತು. ಆದರೆ ಎದುರಿಗೆ ಬಂದು ಮಾತಾಡುವಷ್ಟು ದಾರ್ಷ್ಟ್ಯ ಯಾರಿಗೂ ಇರಲಿಲ್ಲ. ಆದರೆ ಈ ದಿನ ಈ ಅವಳಿಗಳಿಬ್ಬರೂ ನೇರವಾಗಿಯೇ ಕರೆಯುತ್ತಿದ್ದಾರೆ.
ಸಿಟ್ಟು ಬರದಿರಲು ನಾನೇನು ಋಷಿಯೇ? ಋಷಿಪತ್ನಿ ನಾನು. ನನಗೂ ಶಕ್ತಿ ಇದೆ. ಶಾಪ ಕೊಡಲು ಕೈಯೆತ್ತಿದೆ. ಅಷ್ಟೇ. ಅವರಿಬ್ಬರೂ ತಪ್ಪಾಯಿತೆಂದು ಕಾಲಿಗೆ ಬಿದ್ದರು!
ಆಮೇಲೆ ನೋಡಿದರೆ ಅವರು ಅಶ್ವಿನಿದೇವತೆಗಳೆಂದು ಗೊತ್ತಾಯಿತು. ವರ ಕೊಡುತ್ತೇವೆ, ಏನು ಬೇಕು ಎಂದರು. “ನನಗೆ ಬೇಕಾದುದು ಏನೆಂಬುದು ನಿಮಗೂ ಗೊತ್ತಿದೆಯಲ್ಲವೆ? ನನ್ನ ಗಂಡನಿಗೆ ದೃಷ್ಟಿ ಕೊಡಿ. ಅವರ ತೇಜೋಪುಂಜದ ಕಣ್ಣುಗಳನ್ನು ಹಿಂದಿರುಗಿಸಿ” ಎಂದೆ.
ದೇವತೆಗಳು ಅಸ್ತು ಎಂದರು. ಆದರೆ ಒಂದು ಷರತ್ತು ವಿಧಿಸಿದರು.
ಚ್ಯವನರು ಹಾಗೂ ದೇವತೆಗಳು ಮೂರೂ ಜನರು ಒಂದೇ ರೂಪದಲ್ಲಿ ನನ್ನೆದುರು ಬಂದಾಗ, ನಾನು ನನ್ನ ಪತಿಯನ್ನು ಗುರುತಿಸಬೇಕಿತ್ತು. ನನ್ನ ಪಾತಿವ್ರತ್ಯದ ಫಲವೋ, ಚ್ಯವನರ ಹಾರೈಕೆಯೋ, ನನ್ನ ವಂಶದ ಪುಣ್ಯವೋ ಏನೋ ನಾನು ಪತಿಯನ್ನು ಗುರುತಿಸಿದೆ. ಇದರಿಂದ ಪತಿಗೂ ಸಂತೋಷವಾಯಿತು. ಅಶ್ವಿನಿದೇವತೆಗಳಿಗೂ ಸಂತೋಷವಾಯಿತು.
ದೃಷ್ಟಿ ಮರಳಿತು. ಚ್ಯವನರು ಅಶ್ವಿನಿದೇವತೆಗಳಿಗೆ ಹವಿರ್ಭಾಗ ಸಿಗುವ ಹಾಗೆ ಮಾಡಿದ್ದಲ್ಲದೆ, ಸೋಮರಸ ಕುಡಿಯಲು ಅವಕಾಶ ಕಲ್ಪಿಸಿದರು. ಇದರಿಂದ ಸಂತೋಷಗೊAಡ ಅಶ್ವಿನಿದೇವತೆಗಳು ಚ್ಯವನರನ್ನು ಮುದಿತನದಿಂದ ಯೌವನಾವಸ್ಥೆಗೆ ತಂದರು.
ಇಷ್ಟೇ ಆಗಿದ್ದರೆ ಬದುಕು ಸುಲಭವಾಗಿ ಸಾಗುತ್ತಿತ್ತು.
ಆದರೆ ಅಶ್ವಿನಿದೇವತೆಗಳಿಗೆ ಹವಿರ್ಭಾಗ ಸಿಗುವುದು, ಸೋಮರಸ ಕುಡಿಯುವ ಅವಕಾಶ ಸಿಗುವುದು ದೇವೇಂದ್ರನಿಗೆ ಒಪ್ಪಿತವಿರಲಿಲ್ಲ. ಹಾಗಾಗಿ ದೇವೇಂದ್ರ ಇವರ ಮೇಲೆ ಕುಪಿತಗೊಂಡು ಎರಗಲು ಬಂದ. ಆದರೆ ನಮ್ಮವರ ಶಕ್ತಿಯ ಮುಂದೆ ದೇವೇಂದ್ರ ತೃಣಕ್ಕೂ ಸಮವಲ್ಲ. ಮೇಲೆತ್ತಿದ ದೇವೇಂದ್ರನ ಕರ ಅಲ್ಲೇ ನಿಂತುಬಿಟ್ಟಿತು. ಅದು ನಮ್ಮವರ ಶಕ್ತಿ. ಅಲ್ಲೂ ದೇವೇಂದ್ರನಿಗೆ ಬುದ್ಧಿ ಕಲಿಸಿ, ಅಶ್ವಿನಿದೇವತೆಗಳಿಗೆ ಒಂದು ಸ್ಥಾನಮಾನ ದೊರಕಿಸಿಯೇ ಬಂದರು.
ಮತ್ತೆ ನಾವಿಬ್ಬರೂ ಸಮಾನ ವಯಸ್ಕರೂ, ಮನಸ್ಕರೂ ಆಗಿ ಬದುಕುವಂತಾಯಿತು. ಇದು ನನ್ನ ತಂದೆಗೆ ಗೊತ್ತಾಗಲೇ ಇಲ್ಲ. ಮತ್ತೆ ನಾನು ಚ್ಯವನರನ್ನು ಕರೆದುಕೊಂಡು ಅರಮನೆಗೆ ಹೋದಾಗ ತಂದೆಯವರು ನನ್ನ ಮೇಲೆ ಕುಪಿತಗೊಂಡರು. ನಾನು ಮುದಿ ಋಷಿಯನ್ನು ಬಿಟ್ಟು ಇದಾವುದೋ ಯುವಕನೊಡನೆ ಬದುಕುತ್ತಿದ್ದೇನೆಂದು ಬೇಸರಗೊಂಡರು.
ಆಗ ನಾನು ಎಲ್ಲವನ್ನೂ ವಿವರಿಸಿದ ಮೇಲೆ ಅತ್ಯಂತ ಸಂತೋಷಗೊಂಡರು. ಮಗಳ ಬದುಕು ಹೀಗಾಯಿತಲ್ಲ ಎಂದು ನನ್ನ ತಂದೆ ಶರ್ಯಾತಿ ಮಹಾರಾಜರಿಗೆ ಬಹಳ ಖೇದವಾಗಿತ್ತು. ಈಗ ಅವರ ಮನಸ್ಸು ತೃಪ್ತವಾಯಿತು.
ಅದನ್ನೇ ನೆನಪು ಮಾಡಿಕೊಂಡು ಅರಮನೆಯ ಉಪ್ಪರಿಗೆ ಮೇಲೆ ಕುಳಿತಿದ್ದೆ. ಮದುವೆಯೆಂಬುದು ಯಾವುದೋ ಕ್ಷಣದಲ್ಲಿ, ಹೇಗೋ ನಡೆದುಹೋಗುತ್ತದೆ. ಯಾರನ್ನು ವರಿಸಬೇಕೆಂದು ಆ ಬ್ರಹ್ಮ ಬರೆದಿರುತ್ತಾನೋ, ಯಾರಿಗೆ ಗೊತ್ತು? ತಾಳ್ಮೆಯಿಂದ ನಾನು ಕಾದಿದ್ದು ನಿಷ್ಪçಯೋಜಕ ಅನಿಸಲಿಲ್ಲ. ನನ್ನ ಸಂಸ್ಕಾರ, ಭಗವಂತನ ಮೇಲಿಟ್ಟ ನಂಬಿಕೆ ನನ್ನ ಪತಿದೇವರ ಕಣ್ಣಿನ ದೃಷ್ಟಿಯನ್ನು ಮರಳಿ ನೀಡಿತು.
ಇನ್ನು ಮುಂದಿನ ಬದುಕು ನಮ್ಮದೇ. ಅದೇ ಸಂತೋಷದಲ್ಲಿ ಬದುಕನ್ನು ಸ್ವೀಕರಿಸಿದ್ದೇನೆ. ಚ್ಯವನರ ದಾರಿಯನ್ನು ಕಾಯುತ್ತಿದ್ದೇನೆ.