ಜರ್ಮನಿಯ ಜನ ಸಮಯಕ್ಕೆ ಕೊಡುವ ಬೆಲೆ, ಪರಿಸರವನ್ನು ಕಾಯ್ದುಕೊಳ್ಳುವ ರೀತಿ, ಅಲ್ಲಿನ ರಸ್ತೆಗಳು, ಸಾರಿಗೆ ವ್ಯವಸ್ಥೆ, ಸಾರಿಗೆ ನಿಯಮಗಳು, ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನ ಕಾಯ್ದುಕೊಳ್ಳುವ ರೀತಿ ಎಲ್ಲದರ ಬಗ್ಗೆಯೂ ಹರಿಗಿರುವಷ್ಟೇ ಖುಷಿ, ಸಹಮತ ಮಣಿಕರ್ಣಿಕಾಗೂ ಇದೆ.
ಆದರೆ ಕೆಲವೊಮ್ಮೆ ಅಲ್ಲಿನ ನಿಯಮಗಳು ಉಸಿರುಗಟ್ಟಿಸಿದ ಹಾಗೂ ಅನ್ನಿಸುತ್ತದೆ. ಮದ್ಯಪಾನ, ಧೂಮಪಾನವನ್ನು ರಾಜಾರೋಷವಾಗಿ ಮಾಡಿದರೂ ಕೇಳುವವರಿಲ್ಲ, ಅಲ್ಲಿ ಎಲ್ಲದಕ್ಕೂ ಅವಕಾಶ. ಮುಕ್ತ ಲೈಂಗಿಕತೆಗೂ! ಬಸ್ಸ್ಟಾಪಿನಲ್ಲಿ ಪಕ್ಕವೇ ಕೂತು ಯಾರೋ ಒಬ್ಬ ಸಿಗರೇಟ್ ಸೇದುತ್ತಿದ್ದರೂ ಹೊಗೆ ಕುಡಿದುಕೊಂಡು ಪ್ಯಾಸಿವ್ ಸ್ಮೋಕರ್ ಆಗಿ ಅಸಹಾಯಕವಾಗಿ ನಿಂತಿರಬೇಕು. ಇಲ್ಲ, ನಾವೇ ದೂರ ಹೋಗಬೇಕು. ಒಂದು ಸಲ ಹಾಗೇ ಆಗಿತ್ತು! ಮಣಿಕರ್ಣಿಕಾ, ಹರಿ ಮತ್ತು ಅರುಂಧತಿ ಜೆಕ್ ರಿಪಬ್ಲಿಕ್ನ ಪ್ರಾಗ್ಗೆ ಪ್ರವಾಸಕ್ಕೆ ಹೊರಟು ನಿಂತಿದ್ದರು. ಬಸ್ಸಿನಲ್ಲಿ ತಮ್ಮ ಎದುರಿನ ಸೀಟಿನಲ್ಲಿ ಕುಳಿತ ವ್ಯಕ್ತಿ ಕಂಠಪೂರ್ತಿ ಕುಡಿದು
ಆ ಮದ್ಯದ ಬಾಟಲಿಯನ್ನೆಲ್ಲ ಬಸ್ಸಿನಲ್ಲೇ ಬಿಸಾಕಿದ್ದ.
ಮಾರೀಚ, ಅತ್ರಿ, ಅಂಗಿರಸ… ಅರುಂಧತಿ ತನ್ನ ನೋಟ್ಬುಕ್ನಲ್ಲಿ ಸಪ್ತರ್ಷಿಮಂಡಲದ ಚಿತ್ರ ಬರೆದು ಒಂದೊಂದು ನಕ್ಷತ್ರದ ಹೆಸರನ್ನೂ ಹೇಳುತ್ತ ಕೂತಿದ್ದರೆ, ಪಿಜ್ಜಾಕ್ಕೆಂದು ಈರುಳ್ಳಿ, ಕ್ಯಾಪ್ಸಿಕಂ, ಮಶ್ರೂಮ್ ಎಲ್ಲವನ್ನೂ ಹೆಚ್ಚುತ್ತಿದ್ದ ಮಣಿಕರ್ಣಿಕಾ ಕಿಸಕ್ಕನೆ ನಕ್ಕಳು. “ಮಾರೀಚ ಅಲ್ಲ ಕಣೆ, ಅದು ಮರೀಚಿ!! ಮಾರೀಚ ಅಂದ್ರೆ ಸೀತಾಮಾತೆನಾ ರಾವಣ ಅಪಹರಿಸೋ ಟೈಮ್ನಲ್ಲಿ ಮಾಯಾಜಿಂಕೆ ವೇಷದಲ್ಲಿ ಬರ್ತಾನಲ್ಲ, ಅವ್ನು!” ಅಂದ್ರೆ ಅರುಂಧತಿ ಮುಖದಲ್ಲಿ ಏನೋ ಮಹಾಪರಾಧ ಮಾಡಿದ ಪಾಪಪ್ರಜ್ಞೆ! “ಸಾರಿ ಸಾರಿ ಸಾರಿ. ಅವ್ನು ರಾಕ್ಷಸ ಅಲ್ವಾ? ಆಲ್ಮೋಸ್ಟ್ ಸೇಮ್ ಸ್ಪೆಲಿಂಗ್ಸ್ ಇತ್ತಲ್ಲ. ಅದ್ಕೇ ಕನ್ಫ್ಯೂಸ್ ಆಯ್ತು. ಸಾರಿ ಸಾರಿ!!” ಎಂದು, “ದೇವ್ರೇ ಕ್ಷಮ್ಸಪ್ಪ, ಅದು ಮಾರೀಚ ಅಲ್ಲ, ಮರೀಚಿ. ಮರೀಚಿ, ಅತ್ರಿ, ಅಂಗಿರಸ, ಪುಲಹ, ಪುಲಸ್ತ್ಯ, ಕ್ರತು, ಅಗಸ್ತ್ಯ ಕೈಬೆರಳುಗಳನ್ನು ಲೆಕ್ಕ ಮಾಡುತ್ತ ಏಳು ಎಣಿಸುತ್ತಿದ್ದಂತೆಯೆ ಖುಷಿಯಲ್ಲಿ ಕುಡಿದಾಡೋದಕ್ಕೆ ಶುರುಮಾಡಿದ್ಲು.
ಅವಳ ಸಂಭ್ರಮ ನೋಡುತ್ತ ಮಣಿಕರ್ಣಿಕಾ ವಾಚು ನೋಡಿದರೆ ಆಗಲೇ ಆರೂವರೆಯಾಗಿತ್ತು! ಜರ್ಮನಿಯ ಬ್ಲ್ಯಾಕ್ ಫಾರೆಸ್ಟ್ನಿಂದ ತಂದ ಕುಕು ಕ್ಲಾಕ್ ಆಗಲೇ ಹತ್ತು ತೋರಿಸ್ತಿತ್ತು! ಈ ಜೂನ್ ತಿಂಗಳು ಬಂದರೆ ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಜರ್ಮನಿಗೆ ಬಂದು ೮ ವರ್ಷ ಆಗುತ್ತೆ. ಎಂಟು ವರ್ಷಗಳಲ್ಲಿ ಐದಾರು ಮನೆ ಬದಲಾಗಿವೆ. ಆದರೆ ಎಲ್ಲೇ ಹೋದರೂ ಈ ಕುಕು ಗಡಿಯಾರದ್ದು ಮಾತ್ರ ಹಾಲಿನ ಗೋಡೆಯ ಮೇಲೆ ಕೂತು ಭಾರತೀಯ ಕಾಲಮಾನವನ್ನಷ್ಟೇ ತೋರಿಸುವ ಕಾಯಕ! ಆ ಗಡಿಯಾರವನ್ನು ನೋಡುವಾಗೆಲ್ಲ, ‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ?’ ಅಂತ ಮಣಿಕರ್ಣಿಕಾ ತನ್ನನ್ನು ತಾನೇ ಸಂತೈಸಿಕೊಳ್ಳುತ್ತಾಳೆ.
“ಅರುಂಧತಿ, ನಾನ್ ದೀಪ ಹಚ್ತಾ ಇರ್ತೀನಿ. ತಗೋ ಈ ಹೂರಣಾನಾ ಉಂಡೆ ಮಾಡು” ಎಂದು ಕಾಯಿ, ಬೆಲ್ಲ, ಎಳ್ಳು, ಏಲಕ್ಕಿ ಪುಡಿ ಹಾಕಿ ತಯಾರಿಸಿದ್ದ ಕಾಯಿಕಡುಬಿನ ಹೂರಣದ ತಟ್ಟೆಯನ್ನು ಅರುಂಧತಿಯ ಮುಂದಿಟ್ಟಳು ಮಣಿಕರ್ಣಿಕಾ. “ಕಾಯಿಕಡುಬಾ” ನಂಗೊತ್ತಿತ್ತು, ಅಪ್ಪ ಬೇಡ ಅಂದ್ರೂ ನೀನ್ ಮಾಡೇ ಮಾಡ್ತೀಯಾ ಅಂತ!” ಅರುಂಧತಿಯ ಮುಖ ಆಗಲೇ ಅರಳಿತ್ತು.
“ನಿಮ್ಮಪ್ಪಂಗೆ ಕ್ರಿಸ್ಮಸ್ ಪಿಜ್ಜಾ! ನಮ್ ಹೊಟ್ಟೆ ಗಣಪನ್ ಸಂಕಷ್ಟಹರ ಚತುರ್ಥಿ ಹೆಸ್ರಲ್ಲಿ ನಮ್ಗೆ ಕಾಯಿಕಡುಬು!” ಎಂದು ನಗುತ್ತ ಪಿಜ್ಜಾ ಬೇಸ್ ತಯಾರಿಸಿ ಅದರ ಮೇಲೆ ತರಕಾರಿಗಳನ್ನಿಡುತ್ತಿದ್ದ ಮಣಿಕರ್ಣಿಕಾ ಗಡಿಯಾರ ನೋಡಿದವಳೇ ಎಲ್ಲವನ್ನೂ ಅಲ್ಲೇ ಬಿಟ್ಟು ಲಗುಬಗೆಯಲ್ಲಿ ಓಡಿದಳು. ಹೋಗಿ ಕೈಕಾಲು ತೊಳೆದುಕೊಂಡು “ಓಂ ಅಸತೋಮಾ ಸದ್ಗಮಯಾ, ತಮಸೋಮಾ ಜ್ಯೋತಿರ್ಗಮಯಾ…” ಎನ್ನುತ್ತ ನಂದಾದೀಪ ಹಚ್ಚೋದಕ್ಕೆ ಶುರುಮಾಡಿದ್ಲು. ಹರಿಗೆ ತಿಳಿಯದಂತೆ ಅವಸರದಲ್ಲಿ ದೀಪ ಹಚ್ಚುವಾಗೆಲ್ಲ ಅವಳ ಮನಸ್ಸಲ್ಲೆ ಪ್ರಶ್ನೆಯೊಂದು ಮೂಡುತ್ತದೆ, “ಈ ಹರಿ ಯಾಕೆ ಹೀಗೆ” ಅಂತ!
* * *
ಹರಿ! ಅಂದ್ರೆ ಇಲ್ಲೆಲ್ಲ ಹ್ಯಾರಿ ಅಂತಲೇ ಕರೆಯಲ್ಪಡುವ ಹರಿಶ್ಚಂದ್ರನ ಮನಸ್ಸಲ್ಲಿ ಭಾರತದ ಬಗ್ಗೆ ಅಸಾಧ್ಯ ಅನ್ನಿಸೋ ಅಷ್ಟು ಪೂರ್ವಗ್ರಹ ಇದೆ. ಭಾರತ ಬಿಟ್ಟು ಬಂದಮೇಲೆ ಅಲ್ಲಿನ ಸಂಸ್ಕೃತಿ ಯಾಕೆ ಬೇಕು ಅನ್ನೋದು ಅವನ ಅರ್ಥವಿಲ್ಲದ ವಾದ. ಈ ಶ್ಲೋಕ, ಪುರಾಣ, ಆಚರಣೆ ಎಲ್ಲ ಪ್ರಾಕ್ಟಿಕಲಿ ಯಾವ್ದಕ್ಕಾದ್ರೂ ಉಪಯೋಗಕ್ ಬರತ್ತಾ ಅಂತ ವಾರಕ್ಕೊಮ್ಮೆಯಾದರೂ ಅವನ ಪ್ರಶ್ನೆ ಇದ್ದಿದ್ದೇ! ಅವನ ಮಾತನ್ನೆಲ್ಲ ತಲೆಗೆ ಹಾಕಿಕೊಳ್ಳದೆ ಮನಸ್ಸಿಗೆ ತೃಪ್ತಿಯಾಗುವಷ್ಟು ದಿನವೂ ಮಣಿಕರ್ಣಿಕಾ ಲಲಿತ ಸಹಸ್ರನಾಮ ಪಠಿಸುತ್ತಾಳೆ. ಹರಿ ಅವಳಿಗೆ ಹೇಳೋದನ್ನು ಬಿಟ್ಟಿದ್ದಾನೆ, ಮಣಿಕರ್ಣಿಕಾಗೆ ಬುದ್ಧಿ ಹೇಳೋದಂದ್ರೆ ‘ಗೋರ್ಕಲ್ಲ ಮೇಲೆ ಮಳೆ ಸುರಿದ ಹಾಗೆ’ ಅನ್ನೋದು ಅವನಿಗೂ ಗೊತ್ತು. ಆದ್ರೆ ಅವನ ತಕರಾರಿರೋದು, ಈ ಮಣಿಕರ್ಣಿಕಾ ಅರುಂಧತಿಯ ಮನಸ್ಸಲ್ಲೂ ಪುರಾಣ, ಆಚಾರ, ವಿಚಾರ, ಸಂಸ್ಕೃತಿ ಅಂತೆಲ್ಲ ಬೀಜ ಬಿತ್ತುತ್ತಾ ಇರೋದರ ಬಗ್ಗೆ! ಅವನ ಪ್ರಕಾರ ಸಪ್ತರ್ಷಿ ಮಂಡಲ ಅನ್ನೋದು ಕಲ್ಪನೆ, ಬಿಗ್ ಡಿಪ್ಪರ್ ಅನ್ನೋದು ಸತ್ಯ. ಅದಕ್ಕೆಂದೇ ಮಣಿಕರ್ಣಿಕಾ ಅರುಂಧತಿಗೆ ಸಪ್ತರ್ಷಿ ಮಂಡಲ ಎಂದು ಕಲಿಸಿದರೆ ಅವನು ಅದನ್ನು ಸುತಾರಾಂ ನಿರಾಕರಿಸಿ, ಬಿಗ್ ಡಿಪ್ಪರ್ ಎಂದೇ ಹೇಳಿಕೊಡುತ್ತಾನೆ.
ಜರ್ಮನಿಯಲ್ಲೇ ಶಾಶ್ವತ ವಿಳಾಸ ಹುಡುಕಿಕೊಳ್ಳುವ ತವಕದಲ್ಲಿರುವ ಹರಿಯದು ಒಂದೇ ರಗಳೆ, ತನ್ನ ಪತ್ನಿ ಮತ್ತು ಮಗಳು ಅಲ್ಲಿನ ಆಚಾರ, ವಿಚಾರವನ್ನೇ ಅಳವಡಿಸಿಕೊಳ್ಳಬೇಕು ಅನ್ನೋದು! ಮೊದಲನೆಯದಾಗಿ ಅರುಂಧತಿ ಅನ್ನೋ ಹೆಸರಿನ ಬಗ್ಗೆಯೂ ಹರಿಯ ಸಹಮತವಿಲ್ಲ. ಅವಳ ಸ್ಕೂಲಿನ ರಿಜಿಸ್ಟ್ರೇಶನ್ ‘ಆರು’ ಅಂತಲೇ ಬರೆಸಿದ್ದಾನೆ. ಅವನೂ ಮಗಳನ್ನು ಕರೆಯೋದು ‘ಆರು’ ಎಂದೇ. ಆದರೆ ಮಣಿಕರ್ಣಿಕಾಳಿಗೆ ಮಾತ್ರ ಅವಳು ಅರುಂಧತಿ! ಎಷ್ಟೋ ಸಲ ಹರಿ ‘ಆರು’ ಎಂದರೆ ಮಣಿಕರ್ಣಿಕಾ ರೇಗಿಸೋ ಧಾಟಿಲಿ ‘ಏಳು’ ಅಂತ ಕೂಗಿದ್ದು ಇದೆ!
* * *
ಇವತ್ತು ಹರಿಯ ಬಾಸ್ ಮತ್ತು ಅವರ ಪತ್ನಿ, ಮಗು ತಮ್ಮ ಮನೆಗೆ ರಾತ್ರಿ ಊಟಕ್ಕೆಂದು ಬರುತ್ತಿರುವುದರಿಂದ ಹರಿ ಇಂಥದೇ ಮೆನು ಬೇಕು ಅಂತ ಮೊದಲೇ ಆರ್ಡರ್ ಮಾಡಿದ್ದ. ಪಿಜ್ಜಾ, ಪಾಸ್ತಾ, ಕೇಕ್, ಸೂಪ್, ವೈನ್ಗಳೊಟ್ಟಿಗೆ ಮಣಿಕರ್ಣಿಕಾ ಹರಿಗೆ ಹೇಳದೆ ಕಾಯಿಕಡುಬನ್ನೂ ಮಾಡಿದ್ದಾಳೆ. ಹರಿಗೆ ಭಾರತೀಯ ಅಡುಗೆಗಳೇ ಇಷ್ಟವಾದರೂ ಇಲ್ಲಿಗೆ ಬಂದ ಮೇಲೆ ಇದೇ ಇಷ್ಟ ಅಂತ ತನ್ನ ಮನಸ್ಸನ್ನು ತಾನೇ ಒಪ್ಪಿಸಿಕೊಂಡಿದ್ದಾನೆ! ಈ ವರ್ಷ ಪ್ರತಿ ವರ್ಷಕ್ಕಿಂತ ದೊಡ್ಡ ಕ್ರಿಸ್ಮಸ್ ಟ್ರೀಯನ್ನು ತಂದು, ಅವನೇ ಮನೆಯನ್ನೆಲ್ಲ ಅಲಂಕಾರ ಮಾಡಿದ್ದಾನೆ. ‘ಸಂಜೆ ಕ್ಯಾಂಡಲ್ ಹಚ್ಚೋಣ, ನೀನು ಟಿಪಿಕಲ್ ಇಂಡಿಯನ್ ಲೇಡಿ ಥರ ದೀಪ ಹಚ್ತೀನಿ ಅಂತ ರಗಳೆ ಎಬ್ಬಿಸ್ಬೇಡ’ ಅಂತ ಮಣಿಕರ್ಣಿಕಾಗೆ ಮೊದಲೇ ತಾಕೀತು ಮಾಡಿದ್ದ. ಆದ್ರೆ ಹರಿ ಮಣಿಕರ್ಣಿಕಾಗೆ ಹೇಳೋ ಮಾತುಗಳೆಲ್ಲ ಅವನ ಸಮಾಧಾನಕ್ಕೆ ಹೇಳಿಕೊಳ್ಳೋದಷ್ಟೇ! ಮಣಿಕರ್ಣಿಕಾ ಅವುಗಳಲ್ಲಿ ಒಂದನ್ನಾದರೂ ಕೇಳಿದ್ದರೆ ಹೆಚ್ಚು! ಅದೂ ಅಲ್ದೆ ಆವತ್ತು ಸಂಕಷ್ಟಹರ ಚತುರ್ಥಿ ಬೇರೆ. ದೀಪ ಹಚ್ದೆ ಇರೋಕಾಗತ್ತಾ?
ಬಾಸ್ ಬರುವ ಕಾರಣಕ್ಕೆ ಹರಿಯೇ ಖುದ್ದಾಗಿ ಮನೆಯನ್ನೆಲ್ಲ ಕ್ಲೀನ್ ಮಾಡಿದ್ದ. ಹೊಸ ಪ್ಲೇಟ್ಗಳು, ಗ್ಲಾಸ್ಗಳು ಕಪಾಟಿನಿಂದ ಆಚೆ ಬಂದಿದ್ದವು. ಹೊಸ ನ್ಯಾಪ್ಕಿನ್ಗಳು, ಫೋರ್ಕ್, ಶೋಪೀಸ್ಗಳು, ಯೂರೋಪಿನ ಬೇರೆಬೇರೆ ಸ್ಥಳಕ್ಕೆ ಫ್ಯಾಮಿಲಿ ಟ್ರಿಪ್ ಹೋಗಿದ್ದ ಫೊಟೋ ಫ್ರೇಮ್ಗಳು, ಫ್ರಿಡ್ಜ್ ಮ್ಯಾಗ್ನೆಟ್ಗಳು ಇಷ್ಟು ದಿನ ಕಪಾಟಿನಲ್ಲಿ ಉಸಿರುಗಟ್ಟಿಸಿಕೊಳ್ಳುತ್ತಿದ್ದವು, ಈಗ ವಾಯುವಿಹಾರಕ್ಕೆ ಬಂದಂತೆ ಆಚೆ ಬಂದಿದ್ದವು. ಎರಡು ದಿನದಿಂದ ಹರಿ ಇವೇ ಕೆಲಸಗಳಲ್ಲಿ ಬ್ಯುಸಿಯಾಗಿದ್ದ.
“ನಮ್ ಬಾಸ್ ನಿನ್ನ ಪರಿಚಯ ಮಾಡ್ಕೊಳ್ಳುವಾಗ ಮೈಸೆಲ್ಫ್ ಮಣಿ, ವೈಫ್ ಆಫ್ ಹ್ಯಾರಿ ಅಂತ ಹೇಳು. ಕಿಲೋಮೀಟರ್ ಉದ್ದ ಇರೋ ನಿನ್ ಅಡಗೂಲಜ್ಜಿ ಹೆಸ್ರನ್ ಹೇಳಿ ನನ್ ಮರ್ಯಾದೆ ತೆಗಿಬೇಡ! ನೀನೂ ಅಷ್ಟೇ, ಆರು ಅಂತಾನೇ ಹೇಳು” ಅಂದ್ರೆ ಅರುಂಧತಿ ವಿಧೇಯವಾಗಿ ತಲೆಅಲುಗಾಡಿಸುವಂತೆ ಮಾಡಿ ನಂತರ ಮಣಿಕರ್ಣಿಕಾ ಕಡೆ ಓರೆಗಣ್ಣಲ್ಲಿ ನೋಡಿ ಕಣ್ಮಿಟುಕಿಸಿ ನಕ್ಕಿದ್ದಳು.
“ಆಮೇಲೆ, ಕಾಯಿಕಡುಬು, ಚಕ್ಲಿ, ಕಜ್ಜಾಯ, ಅಕ್ಕಿರೊಟ್ಟಿ, ಪಾಯಸ ಅಂತೆಲ್ಲ ಕೂರ್ಬೇಡ. ಇಲ್ಲೆಲ್ಲ ಪಾಸ್ತಾ, ಬಗರ್ರು, ಪಿಜ್ಜಾ ಇದೇ ಆಗ್ಬೇಕು. ಇನ್ನೊಂದು ಇಂಪಾರ್ಟೆಂಟ್ ವಿಷ್ಯ ನೆನ್ಪಿದೆ ತಾನೇ? ಸಂಜೆ ಕ್ಯಾಂಡಲ್ಸ್ ಹಚ್ಬೇಕು? ಎಣ್ಣೆ ದೀಪ, ತುಪ್ಪದ್ ದೀಪ ಅಂದ್ಕೊಂಡು ಜಾತ್ರೆ ಮಾಡ್ಬೇಡಿ. ಸ್ವಲ್ಪ ಡೀಸೆಂಟ್ ಆಗಿರಿ…” ಎಂದು ತನ್ನ ರೂಮಿಗೆ ಹೊರಟ ಹರಿ. ಅವನು ಹೋಗೋದನ್ನೇ ಕಾಯ್ತಾ ಇದ್ದ ಅಮ್ಮ, ಮಗಳು ಇಬ್ಬರೂ ಒಟ್ಟಿಗೇ, “ಡೀಸೆಂಟ್ ಆಗಿರ್ಬೇಕು ಗೊತ್ತಾಯ್ತಾ?” ಅಂದ್ಕೊಂಡು, ತಮ್ಮ ಮಾತಿಗೆ ತಾವೇ ನಗೋದಕ್ಕೆ ಶುರು ಮಾಡಿದ್ದರು.
ಈ ಹರಿಯ ಲೆಕ್ಕಾಚಾರವೇ ಮಣಿಕರ್ಣಿಕಾಗೆ ಅರ್ಥವಾಗೋದಿಲ್ಲ. ಇಲ್ಲಿಗೆ ಬಂದಮೇಲೆ ಭಾರತವನ್ನು ಹಳಿಯೋದು ಅವನ ಅಭ್ಯಾಸವಾಗಿಬಿಟ್ಟಿದೆ. ಎಷ್ಟೋ ದಿನ ಇದೇ ವಿಷ್ಯಕ್ಕೆ ಗಂಡ-ಹೆಂಡತಿಯ ಮಧ್ಯೆ ಜಗಳವಾಗಿದೆ. “ಇಲ್ಲಿರ್ಬೇಕು ಅಂದ್ರೆ ಇಷ್ಟ ಇದ್ಯೋ ಬಿಟ್ಟಿದ್ಯೋ ಇಲ್ಲಿನ್ ಸಂಸ್ಕೃತಿನೇ ಅಡಾಪ್ಟ್ ಮಾಡ್ಕೊಬೇಕು” ಅಂತ ಹರಿ ಆಗಾಗ ಹೇಳ್ತಾನೇ ಇರ್ತಾನೆ. “ಅಯ್ಯೋ ಅಳವಡಿಸ್ಕೊಳ್ಳೋದ್ ಬೇಡ ಅಂತ ಯಾರ್ ಹೇಳಿದ್ದು. ಎಲೆ ಚಿಗರ್ತಾ ಇರ್ಬೇಕು, ಹಾಗಂತ ಬೇರನ್ನ ಮರೀಬಾರ್ದು ಅಂತಿದೀನಷ್ಟೇ. ಆಫೀಸಿಗೆ ಹೋಗಿ ಬರೋ ನಿಮ್ಗೆ ಇಲ್ಲಿಯವ್ರ್ ಹಾಗೆನೇ ಇರೋದು ಅನಿವಾರ್ಯ ಇರ್ಬೋದು. ಆದ್ರೆ ನಮ್ ದೇಶಾನಾ, ನಮ್ಮ ಮಣ್ಣನ್ನ ಹಳೀತಾ ಇರ್ಬೇಕು ಅಂತ ಎಲ್ಲೂ ಇಲ್ವಲ್ಲ? ಹಾಗೇ ಮನೇಲಿ ನಮ್ಗ್ ಹೇಗ್ ಬೇಕೋ ಹಾಗೆ ನಾವಿರ್ತೀವಿ. ನಿಮ್ಗ್ ಹೇಗೆ ಪಾಪ್ಸಾಂಗ್ ಖುಷಿ ಕೊಡುತ್ತೋ, ಹಾಗೇ ನಂಗೆ ಭಗವದ್ಗೀತೆ, ಭಜಗೋವಿಂದಂ ಖುಷಿಕೊಡುತ್ತೆ. ನೀವು ಪಾಪ್ಸಾಂಗಿಗೆ ಸ್ಟೆಪ್ ಹಾಕ್ದ್ರೇ ನಾನ್ ಪ್ರಶ್ನೆ ಮಾಡಲ್ವಲ್ಲ? ಹಾಗೇ ನಾನು ಭಜಗೋವಿಂದಂಗೆ ತಾಳ ಹಾಕ್ದ್ರೇ ನೀವ್ ಯಾಕ್ ಪ್ರಶ್ನೆ ಮಾಡ್ತೀರಾ?” ಮಣಿಕರ್ಣಿಕಾ ಈ ಪ್ರಶ್ನೆನಾ ಸಾವಿರಕ್ಕೂ ಹೆಚ್ಚು ಸಲ ಕೇಳಿದ್ದಾಳೆ. ಇದಕ್ಕೆಲ್ಲ ಸ್ಪಷ್ಟ ಉತ್ತರ ಕೊಡೋ ಅಷ್ಟು ವೈಚಾರಿಕತೆ ಹರಿಗಿಲ್ಲ. ಆಫೀಸಿನಲ್ಲಿ ಮಾತಿಗೆ ಯಾರಾದರೂ “ಹೆ, ಯು ಆರ್ ಫ್ರಂ ಇಂಡಿಯಾ ರೈಟ್?” ಅಂದ್ರೆ ಹರಿಗೆ ಹೌದು ಅನ್ನೋದಕ್ಕೂ ಮುಜುಗರವಾಗತ್ತೆ. “ಯಾ, ಬಟ್ ಐ ಹ್ಯಾವ್ ಬೀನ್ ಹಿಯರ್ ಫಾರ್ ಮೆನಿ ಇಯರ್ಸ್ ಸೋ, ನೌ ಐ ಆ್ಯಮ್ ಮಚ್ ಮೋರ್ ಅ ಜರ್ಮನ್” ಎಂದು ಹಲ್ಲುಕಿಸಿಯುತ್ತಾನೆ.
ಇದನ್ನೆಲ್ಲ ಕೀಳರಿಮೆ ಅನ್ನಬೇಕಾ? ಏನು ಅನ್ನೊದೇ ಮಣಿಕರ್ಣಿಕಾಗೆ ಅರ್ಥವಾಗೋದಿಲ್ಲ. ಹಾಗಂತ ಮಣಿಕರ್ಣಿಕಾ ಅವನ ಮಾತುಗಳನ್ನೆಲ್ಲ ಕೇಳುವವಳೂ ಅಲ್ಲ. ತನಗೆ ಯಾವುದು ಸರಿ ಅನ್ನಿಸತ್ತೋ ಅದನ್ನೇ ಮಾಡುವವಳು ಅವಳು.
ಜರ್ಮನಿಯ ಜನ ಸಮಯಕ್ಕೆ ಕೊಡುವ ಬೆಲೆ, ಪರಿಸರವನ್ನು ಕಾಯ್ದುಕೊಳ್ಳುವ ರೀತಿ, ಅಲ್ಲಿನ ರಸ್ತೆಗಳು, ಸಾರಿಗೆ ವ್ಯವಸ್ಥೆ, ಸಾರಿಗೆ ನಿಯಮಗಳು, ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನ ಕಾಯ್ದುಕೊಳ್ಳುವ ರೀತಿ ಎಲ್ಲದರ ಬಗ್ಗೆಯೂ ಹರಿಗಿರುವಷ್ಟೇ ಖುಷಿ, ಸಹಮತ ಮಣಿಕರ್ಣಿಕಾಗೂ ಇದೆ.
ಆದರೆ ಕೆಲವೊಮ್ಮೆ ಅಲ್ಲಿನ ನಿಯಮಗಳು ಉಸಿರುಗಟ್ಟಿಸಿದ ಹಾಗೂ ಅನ್ನಿಸುತ್ತದೆ. ಮದ್ಯಪಾನ, ಧೂಮಪಾನವನ್ನು ರಾಜಾರೋಷವಾಗಿ ಮಾಡಿದರೂ ಕೇಳುವವರಿಲ್ಲ, ಅಲ್ಲಿ ಎಲ್ಲದಕ್ಕೂ ಅವಕಾಶ. ಮುಕ್ತ ಲೈಂಗಿಕತೆಗೂ! ಬಸ್ಸ್ಟಾಪಿನಲ್ಲಿ ಪಕ್ಕವೇ ಕೂತು ಯಾರೋ ಒಬ್ಬ ಸಿಗರೇಟ್ ಸೇದುತ್ತಿದ್ದರೂ ಹೊಗೆ ಕುಡಿದುಕೊಂಡು ಪ್ಯಾಸಿವ್ ಸ್ಮೋಕರ್ ಆಗಿ ಅಸಹಾಯಕವಾಗಿ ನಿಂತಿರಬೇಕು. ಇಲ್ಲ, ನಾವೇ ದೂರ ಹೋಗಬೇಕು. ಒಂದು ಸಲ ಹಾಗೇ ಆಗಿತ್ತು! ಮಣಿಕರ್ಣಿಕಾ, ಹರಿ ಮತ್ತು ಅರುಂಧತಿ ಜೆಕ್ ರಿಪಬ್ಲಿಕ್ನ ಪ್ರಾಗ್ಗೆ ಪ್ರವಾಸಕ್ಕೆ ಹೊರಟು ನಿಂತಿದ್ದರು. ಬಸ್ಸಿನಲ್ಲಿ ತಮ್ಮ ಎದುರಿನ ಸೀಟಿನಲ್ಲಿ ಕುಳಿತ ವ್ಯಕ್ತಿ ಕಂಠಪೂರ್ತಿ ಕುಡಿದು ಆ ಮದ್ಯದ ಬಾಟಲಿಯನ್ನೆಲ್ಲ ಬಸ್ಸಿನಲ್ಲೇ ಬಿಸಾಕಿದ್ದ.
ಮಣಿಕರ್ಣಿಕಾ ಕೋಪದಲ್ಲಿ ಹರಿಯತ್ತ ನೋಡುವಾಗೆಲ್ಲ ಹರಿ ಸುಮ್ನಿರು ಅನ್ನೋ ಥರ ಸನ್ನೆ ಮಾಡ್ತಿದ್ದ. “ಎಟ್ಲೀಸ್ಟ್ ಡ್ರೈವರ್ ಹತ್ರಾ ಹೇಳೋಣ ಹರಿ” ಅಂದ್ರೂ, “ಇಲ್ಲೆಲ್ಲ ಇದು ಕಾಮನ್. ನಾವು ಅಡ್ಜೆಸ್ಟ್ ಮಾಡ್ಕೊಂಡ್ ಹೋಗ್ಬೇಕಷ್ಟೇ” ಎಂದಿದ್ದ. ಆ ರಾತ್ರಿಯದ್ದು ಒಂಥರಾ ಭಯಾನಕವಾದ ಪ್ರಯಾಣ!! ರೆಪ್ಪೆಯನ್ನೇ ಮುಚ್ಚದೆ ಕಳೆದ ರಾತ್ರಿ ಅದು!
ಹರಿ ಇಂಥವುಗಳ ಬಗ್ಗೆ ಸೊಲ್ಲೆತ್ತೋದಿಲ್ಲ ಅನ್ನೋದೇ ಮಣಿಕರ್ಣಿಕಾಗೆ ಕೋಪ. ಇವುö್ನ ಬೇರೆ ಏನೂ ಮಾಡೋದ್ ಬೇಡ, ಕೊನೇಪಕ್ಷ ತನ್ ಬಳಿ ಆದ್ರೂ ಇದೆಲ್ಲ ತಪ್ಪು ಅಂತ ಹೇಳ್ಬೋದಲ್ಲ? ಉಹುಂ! ಅವ್ನಿಗೆ ಈ ದೇಶದ ಬಗ್ಗೆ ಒಂದು ಪದವನ್ನೂ ಋಣಾತ್ಮಕವಾಗಿ ಮಾತನಾಡೋದು ಸಹ್ಯವಲ್ಲ!
* * *
ಈಗ ಹರಿಗೆ ಆಫೀಸ್ನಲ್ಲಿ ಪ್ರಮೋಶನ್ ಬೇಕು. ಅದು ಜರ್ಮನಿಯಲ್ಲೇ ಶಾಶ್ವತ ವಿಳಾಸ ಹುಡ್ಕೊಳ್ಳೋದಕ್ಕೆ ಒಂದು ದಾರಿನೂ ಹೌದು! ಅದಕ್ಕೆಂದೇ ಅವ್ನು ತನ್ನ ಬಾಸನ್ನು ಮನೆಗೆ ಆಮಂತ್ರಿಸಿದ್ದಾನೆ. “ಹೊಸ ಬಾಸು ಮಣಿ, ನಂಜೊತೆ ತುಂಬಾ ಚೆನ್ನಾಗ್ ಮಾತಾಡ್ತಾರೆ. ಮನೆಗ್ ಕರೀತೀನಿ, ಅವ್ರ್ ಜೊತೆ ಕ್ರಿಸ್ಮಸ್ ಮಾಡೋಣ. ಫ್ಯಾಮಿಲಿನೇ ಬನ್ನಿ ಅಂತ ಹೇಳ್ತೀನಿ? ನೀನೂ ಅವ್ರ್ ವೈಫ್ ಜೊತೆ ಚೆನ್ನಾಗ್ ಮಾತಾಡು. ಅವ್ರ್ ಇಂಪ್ರೆಸ್ ಆದ್ರೆ ನಂಗ್ ಪ್ರಮೋಶನ್ ಗ್ಯಾರಂಟಿ” ಎಂದಿದ್ದ. ಅಂದು ಹರಿ ಅವರ ಆಗಮನದ ಬಗ್ಗೆ ತೀವ್ರವಾಗಿ ಉತ್ಸುಕನಾಗಿದ್ದ.
ಮಣಿಕರ್ಣಿಕಾ ಜರ್ಮನಿಗೆ ಬಂದ ಮೇಲೆ ಅಲ್ಲಿ ವಾಸವಿರುವ ಎಷ್ಟೋ ಭಾರತೀಯರ ಪರಿಚಯ ಮಾಡಿಕೊಂಡಿದ್ದಾಳೆ. ತಾವಿರುವ ಅಪಾರ್ಟ್ಮೆಂಟ್ನಲ್ಲೇ ಹಲವರೊಂದಿಗೆ ಸೇರಿ ಯೋಗ, ಭಜನೆ, ಹಬ್ಬ-ಹರಿದಿನ ಆಚರಣೆ ಮಾಡ್ತಾಳೆ. ಇಷ್ಟೆಲ್ಲ ಆದರೂ ಚಳಿಗಾಲದ ಸಮಯದಲ್ಲಿ ಒಬ್ಬರು ಇನ್ನೊಬ್ಬರ ಮನೆಗೂ ಹೋಗಲಾಗದಷ್ಟು ಅಸಹನೀಯ ಅನ್ನುವಂಥ ವಾತಾವರಣವಾದ್ದರಿಂದ ಮಣಿಕರ್ಣಿಕಾಗೆ ಎಷ್ಟೋ ಸಲ ಒಂಟಿತನ ಕಾಡುತ್ತದೆ. ಆಗೆಲ್ಲ ತಮ್ಮನೆಗೆ ಯಾರಾದ್ರೂ ಬರ್ತಾರೆ ಅಂದ್ರೆ ಮಣಿಕರ್ಣಿಕಾಗೆ ಖುಷಿ. ಈಗಲೂ ಹರಿಯ ಬಾಸ್ ಬರ್ತಾರೆ ಅಂದ್ರೆ ಅವ್ಳಿಗೆ ಏನೋ ಸಂಭ್ರಮ.
* * *
ಕುಕು ಕ್ಲಾಕ್ ೧೧ ತೋರಿಸುತ್ತಿತ್ತು!! ಮಣಿಕರ್ಣಿಕಾ ವಾಚ್ನಲ್ಲಿ ೭.೩೦. ಕಾಲಿಂಗ್ ಬೆಲ್ ಆಗುತ್ತಿದ್ದಂತೆಯೆ ಹರಿ ಉದ್ವೇಗದಲ್ಲಿ ಹೋಗಿ ಬಾಗಿಲು ತೆಗೆದು ಅಗತ್ಯಕ್ಕಿಂತ ಹೆಚ್ಚೇ ನಯ, ವಿನಯದಲ್ಲಿ ‘ವೆಲ್ಕಂ ವೆಲ್ಕಂ…’ ಅಂದ! ಸುಮಾರು ೫೦ ವರ್ಷದ ರಿಚರ್ಡ್ ಮನೆಯೊಳಗೆ ಕಾಲಿಡುತ್ತಿದ್ದಂತೆಯೆ ಅವರ ಹಿಂದೆ ಸುಮಾರು ನಾಲ್ಕೈದು ವರ್ಷದ ಪುಟ್ಟ ಮಗು ಓಡಿಬಂತು. ಮಣಿಕರ್ಣಿಕಾ ಕಣ್ಣು ರಿಚರ್ಡ್ ಪತ್ನಿಗಾಗಿ ತಡಕಾಡುತ್ತಿದ್ದರೆ ಸುಮಾರು ೪೫ ವರ್ಷದ ಮಹಿಳೆ ಬಿಳಿ ಬಣ್ಣದ ಸೀರೆ ಉಟ್ಟು, ಹಣೆಗೆ ಕೆಂಪು ಕುಂಕುಮವನ್ನಿಟ್ಟುಕೊಂಡು ತೀರಾ ಆತ್ಮೀಯ ಅನ್ನಿಸುವ ನಗುಮುಖದೊಂದಿಗೆ ಮನೆಯೊಳಗೆ ಕಾಲಿಟ್ಟರು.
ಆ ಕ್ಷಣಕ್ಕೆ ಮಣಿಕರ್ಣಿಕಾಗಿಂತ ಹೆಚ್ಚು ಅಚ್ಚರಿ, ಆಘಾತ ಆಗಿದ್ದು ಹರಿಗೆ! “ಹ್ಯಾರಿ! ಮೀಟ್ ಮೈ ವೈಫ್ ಮೀರಾ…!” ಹರಿ ಶೇಕ್ಹ್ಯಾಂಡ್ ಮಾಡೋದಕ್ಕೆ ಕೈ ಮುಂದೆ ಮಾಡುವ ಮೊದಲೇ ಮೀರಾ ಎರಡೂ ಕೈಗಳನ್ನೂ ಜೋಡಿಸಿ ಕೈ ಮುಗಿದರು! ಒಂದು ಕ್ಷಣ ಇದೆಲ್ಲ ಕನಸಾ ಅನ್ನಿಸೋದಕ್ಕೆ ಶುರುವಾಯ್ತು. ನೋಡಿದರೆ ಮೀರಾ ಭಾರತೀಯಳೇನಲ್ಲ! ಬಿಳಿ ಕೂದಲು, ನೀಲಿ ಕಣ್ಣು, ಆದರೆ ಈ ಸೀರೆ, ಈ ಕುಂಕುಮ, ಈ ಹೆಸರು! ಮಣಿಕರ್ಣಿಕಾಗೆ ಏನೊಂದೂ ಹೊಳೆಯಲಿಲ್ಲ!
* * *
ಬಾಲ್ಕನಿಯಲ್ಲಿ ಕೂತು ಹರಿ, ರಿಚರ್ಡ್ಸ್ ವೈನ್ ಹೀರುತ್ತಿದ್ದರೆ ಅರುಂಧತಿ ಆಗಲೇ ಮೀರಾ ಮಗಳು ಗಂಗಾಳ ಫ್ರೆಂಡ್ಶಿಪ್ ಮಾಡಿದ್ದಳು. ಮಣಿಕರ್ಣಿಕಾ ಮತ್ತು ಮೀರಾ ಡೈನಿಂಗ್ ಟೇಬಲ್ನಲ್ಲಿ ಕೂತಿದ್ದರೆ ಮಣಿಕರ್ಣಿಕಾ ಇನ್ನೂ ಶಾಕ್ನಿಂದ ಆಚೆ ಬಂದಿರಲಿಲ್ಲ.
“ಆರ್ ಯು ಆ್ಯನ್ ಇಂಡಿಯನ್?!” ಕುತೂಹಲ ತಡೆಯಲಾರದೆ ಮಣಿಕರ್ಣಿಕಾ ಕೇಳಿಯೇ ಬಿಟ್ಟಳು.
“ನೋ. ನಾನ್ ಹುಟ್ಟಿ, ಬೆಳ್ದಿದ್ದು ಆಸ್ಟಿçಯಾದಲ್ಲಿ. ಆದ್ರೆ ಇಂಡಿಯಾ ಅಂದ್ರೆ ನಂಗ್ ತುಂಬಾ ಇಷ್ಟ. ನಮ್ಮನೇಲಿ ಇಂಡಿಯನ್ ಹಬ್ಬಗಳ್ನೆಲ್ಲ ಮಾಡ್ತೀವಿ. ಭಗವದ್ಗೀತೆ ಅಂದ್ರೆ ನಂಗ್ ಅಚ್ಚುಮೆಚ್ಚು. ನಿಜ ಹೇಳ್ಬೇಕಂದ್ರೆ ಐ ಆ್ಯಮ್ ಮಚ್ ಮೋರ್ ಆ್ಯನ್ ಇಂಡಿಯನ್” ಅಂದ್ಲು!
* * *
“ನನ್ ಮೂಲ ಹೆಸರು ಗ್ರೇಸ್ ಅಂತ. ಆಸ್ಟಿçಯಾದ ಸುಂದರ ನಗರ ಸಾಲ್ಜಬರ್ಗ್ನವಳು. ೧೩ನೇ ವಯಸ್ಸಲ್ಲಿರುವಾಗ್ಲೇ ತಂದೆ-ತಾಯಿಗೆ ವಿಚ್ಛೇದನವಾಗಿ ಕೆಲವು ದಿನ ತಂದೆಯೊಟ್ಟಿಗೆ, ನಂತರ ತಾಯಿಯೊಟ್ಟಿಗೆ ಇರೋ ಹಾಗಾಯ್ತು. ಕೊನೆಗೆ ಅವರಿಬ್ಬರೂ ತಮ್ಮದೇ ಸಂಸಾರ ನೋಡಿಕೊಂಡ ಮೇಲೆ ಬೋರ್ಡಿಂಗ್ ಸ್ಕೂಲಿಗೆ ಸೇರಬೇಕಾದ ಅನಿವಾರ್ಯತೆ. ಇಲ್ಲೆಲ್ಲ ಅದು ಕಾಮನ್! ಆದ್ರೆ ನಂಗೆ ತಂದೆ-ತಾಯಿ ಯಾರೂ ಇಲ್ದೆ ತೀರಾ ಒಂಟಿ ಅನ್ಸೋದಕ್ ಶುರುವಾಯ್ತು – ಎಷ್ಟೋ ಸಲ ಆತ್ಮಹತ್ಯೆಗೂ ಪ್ರಯತ್ನಪಟ್ಟಿದ್ದೆ. ಆದ್ರೆ ಒನ್ ಫೈನ್ ಡೇ ನನ್ ಸ್ಕೂಲಿಗೆ ಹಿಂದು ಸಂತರೊಬ್ರು ಬಂದಿದ್ರು. ಅವುö್ರ ಆವತ್ತು ಕೊಟ್ಟ ಉಪನ್ಯಾಸ ನನ್ನ ತುಂಬಾನೇ ಇಂಪ್ರೆಸ್ ಮಾಡ್ತು. ಕೊನೆಗೆ ಅವರನ್ನು ಭೇಟಿಯಾಗಿ ನನ್ನ ಸಮಸ್ಯೆಗಳನ್ನೆಲ್ಲ ಹೇಳ್ಕೊಂಡೆ! ಅವ್ರು ಏನೂ ಹೇಳ್ಲಿಲ್ಲ! ಆದ್ರೆ ತಮ್ಮ ಜೋಳಿಗೆಯಿಂದ ಅಂಗೈಯಷ್ಟು ಪುಟ್ಟ ಗಾತ್ರದ ಪುಸ್ತಕವೊಂದನ್ನ ತೆಗ್ದು ನನ್ನ ಕೈಗಿಟ್ರು! ‘ಈ ಪುಸ್ತಕವನ್ನು ಪೂರ್ತಿ ಏಕಾಗ್ರತೆಯಿಂದ ಓದು’ ಅಂದ್ರು. ನಾನು ಅಷ್ಟೇ ಮುಗ್ಧವಾಗಿ ಕೇಳಿದ್ದೆ, ‘ಇದ್ರಲ್ಲಿ ನನ್ ಸಮಸ್ಯೆಗಳ್ಗೆಲ್ಲ ಪರಿಹಾರ ಇದ್ಯಾ ಸ್ವಾಮಿ?’ ಎಂದು. ಅದಕ್ಕವರು ನಕ್ಕು, ‘ಸಮಸ್ಯೆನಾ ಎದರಿಸೋದ್ ಹೇಗೆ ಅಂತ ಇದೆ, ಓದು’ ಅಂದ್ರು. ಸಮಸ್ಯೆಯಿಂದ ಓಡೋದು ಪಲಾಯನವಾದವಾಗತ್ತೆ, ಎದರ್ಸೋದು ಹೇಗೆ ಅಂತ ಕಲಿ. ನಿನ್ ಪ್ರಯತ್ನ ಮಾಡು, ಫಲ ದೇವ್ರಿಗ್ ಬಿಡು’ ಅಂದ್ರು. ಕರ್ಮಣ್ಯೇವಾಧಿಕಾರಸ್ತೆ… ಅಂದ್ರೆ ಅದೇ ಅಲ್ವಾ? ಆ ಪುಸ್ತಕ ಓದಿ ಮುಗ್ಸೋ ಹೊತ್ತಿಗೆ ನಾನು ಬದ್ಲಾಗಿದ್ದೆ. ಎಲ್ಲ ಸಂಕಟಕ್ಕೂ ನಿರೀಕ್ಷೆಯೇ ಮೂಲ ಅನ್ನೋದಾದ್ರೆ ಆ ನಿರೀಕ್ಷೆ ಯಾಕೆ ಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದೆ!
ನಾನಿದ್ದ ಬೋರ್ಡಿಂಗ್ ಶಾಲೆಯಲ್ಲೇ ಶಿಕ್ಷಕಿಯಾಗಿ ಸೇರಿ ಹೊಟ್ಟೆಪಾಡು ನೋಡ್ಕೊಳ್ಳೋದಕ್ಕೆ ಶುರು ಮಾಡ್ದೆ. ಬಿಡುವಿನ ವೇಳೆಯಲ್ಲೆಲ್ಲ ಬೇರೆ ಬೇರೆ ಲೈಬ್ರೆರಿಗಳಿಗೆ ತೆರಳಿ ಸನಾತನ ಧರ್ಮಕ್ಕೆ ಸಂಬAಧಿಸಿದ ಪುಸ್ತಕಗಳನ್ನು ಓದ್ತಾ ಇದ್ದೆ. ಮೂವತ್ತನೇ ವರ್ಷದಲ್ಲಿ ಜರ್ಮನಿಗೆ ಕೆಲ್ಸದ ನಿಮಿತ್ತ ಬಂದಾಗ ರಿಚರ್ಡ್ ಪರಿಚಯವಾದ. ಅವ್ನಿಗೂ ಭಾರತ ಅಂದ್ರೆ ಏನೋ ಹುಚ್ಚು. ಆ ಹುಚ್ಚೇ ನಮ್ಮಿಬ್ಬರ ಮದ್ವೆ ಮಾಡಿಸ್ತು. ಜೀವ್ನದಲ್ಲಿ ಎಲ್ಲಾನೂ ಸರಿಹೋಯ್ತು ಅನ್ನೋ ಹೊತ್ಗೆ ನಂಗೆ ಮಕ್ಳಾಗೋದಿಲ್ಲ ಅನ್ನೋದು ಗೊತ್ತಾಯ್ತು. ನಲವತ್ತು ವರ್ಷದವರೆಗೂ ಸಾಕಷ್ಟು ಚಿಕಿತ್ಸೆ ಮಾಡಿ ಕೊನೆಗೆ ಬಾಡಿಗೆ ತಾಯಿಯ ಮೊರೆಹೋಗೋದೊಂದೇ ದಾರಿ ಅನ್ನೋ ನಿರ್ಧಾರಕ್ಕೆ ಬಂದ್ವಿ. ನಂಗೆ ನನ್ ಮಗು ಭಾರತೀಯ ತಾಯಿಯ ಹೊಟ್ಟೆಯಲ್ಲೇ ಹುಟ್ಬೇಕು ಅನ್ನೋ ಆಸೆ. ಭಾರತಕ್ಕೆ ಹೋಗ್ಬೇಕು, ಗಂಗಾನದಿಯ ತಟದಲ್ಲಿ ಕೂರ್ಬೇಕು ಅನ್ನೋ ನನ್ನ ಎಷ್ಟೋ ವರ್ಷಗಳ ಬಯಕೆ ಈಗ ಈಡೇರೋ ಹಾಗಾಗಿತ್ತು. ಯಾಕಂದ್ರೆ ಬಾಡಿಗೆ ತಾಯಿಯ ಹುಡುಕಾಟಕ್ಕೆ ನಾವು ಭಾರತಕ್ಕೆ ಹೊರಟು ನಿಂತಿದ್ವಿ. ಈ ಗ್ರೇಸ್ ಮೀರಾ ಆಗಿ ಬದಲಾಗಿದ್ದು ಆಗ್ಲೇ!
* * *
ಅಷ್ಟೊತ್ತು ತನ್ನ ಬದುಕನ್ನು ಮಣಿಕರ್ಣಿಕಾ ಮುಂದೆ ತೆರೆದಿಡುತ್ತಿದ್ದ ಮೀರಾ ಬಾಯಾರಿಕೆಯಾಗಿಯೋ ಏನೋ ನಿಟ್ಟುಸಿರುಬಿಟ್ಟಳು. ಅವಳಿಗೆ ನೀರು ಕೊಡಬೇಕು ಅನ್ನೋದೂ ಸೂಚಿಸದ ಹಾಗೆ ಮಣಿಕರ್ಣಿಕಾ ಕಣ್ಣಲ್ಲಿ ನೀರು ತುಂಬ್ಕೊಂಡು ಮೀರಾಳನ್ನೇ ನೋಡುತ್ತ ಕೂತಿದ್ದಳು. ತಾನೇ ಕಿಚನ್ಗೆ ಎದ್ದು ಹೋಗಿ, ಅಕ್ವಾಗಾರ್ಡ್ನಿಂದ ನೀರು ಹಿಡಿದುಕೊಂಡ ಮೀರಾಳನ್ನು ನೋಡಿ, ಮಣಿಕರ್ಣಿಕಾ ತನ್ನ ತಲೆಯನ್ನು ತಾನೇ ಚಚ್ಕೊಂಡು, “ಅಯ್ಯೋ ಕ್ಷಮ್ಸಿ., ನಿಮ್ಗೆ ನೀರ್ ಬೇಕಿತ್ತು ಅನ್ಸತ್ತೆ?!” ಅಂದ್ರೆ ಮೀರಾ, “ಇಟ್ಸ್ ಓಕೆ! ಅದೇನೋ ಗೊತ್ತಿಲ್ಲ, ನಂಗೆ ಯಾರಾದ್ರೂ ಭಾರತೀಯರ ಮನೆಗ್ ಹೋದ್ರೆ ಅದು ಬೇರೆ ಮನೆ ಅನ್ಸಲ್ಲ, ನಮ್ಮನೆನೇ ಅನ್ಸಿಬಿಡತ್ತೆ” ಅಂದ್ಲು.
“ಖಂಡಿತ ಇದು ನಿಮ್ಮನೆನೇ! ಯಾವ್ದಕ್ಕೂ ಸಂಕೋಚ ಮಾಡ್ಕೊಬೇಡಿ” ಅಂದ ಮಣಿಕರ್ಣಿಕಾ ಕುತೂಹಲ ತಾಳಲಾರದೆ, “ಆಮೇಲೇನಾಯ್ತು? ಬಾಡಿಗೆ ತಾಯಿ ಸಿಕ್ಕಿದ್ರಾ?” ಅಂದ್ಲು. ಕಣ್ಮುಚ್ಚಿಕೊಂಡು ನೀರು ಹೀರುತ್ತಿದ್ದ ಮೀರಾ ಕುಕು ಕ್ಲಾಕ್ನ ಟಿಕ್ ಟಿಕ್ ಸದ್ದು ಕೇಳಿ ಆ ಕಡೆ ಕಣ್ಣು ಹಾಯಿಸಿದ್ಲು. ಗಡಿಯಾರದಲ್ಲಿದ್ದ ಭಾರತೀಯ ಕಾಲಮಾನ ಮೀರಾಳನ್ನ ಭಾರತಕ್ಕೆ ಕರೆದೊಯ್ದಿತ್ತು.
* * *
ಬಾಡಿಗೆ ತಾಯಿಯನ್ನು ಹುಡ್ಕೊಂಡು ಭಾರತಕ್ಕೇನೋ ಹೋದ್ವಿ! ಆದ್ರೆ ನಂಗೆ ಬೇಕಿದ್ದ ಟಿಪಿಕಲ್ ಭಾರತೀಯ ಮಹಿಳೆ ಎಷ್ಟೇ ಹುಡ್ಕಿದ್ರೂ ಸಿಗ್ಲೇ ಇಲ್ಲ. ತುಂಬಾ ಹುಡ್ಕೋದಕ್ಕೆ ಸಮಯಾನೂ ಇರ್ಲಿಲ್ಲ. ತಿಂಗಳಾನುಗಟ್ಲೇ ಅಲ್ಲೇ ಇದ್ದ ನಾವು ನಿರಾಸೆಲೇ ಜರ್ಮನಿಗೆ ವಾಪಸ್ ಬರ್ಬೇಕು ಅಂತ ಟಿಕೆಟ್ ಕೂಡ ಬುಕ್ ಮಾಡಿದ್ವಿ. ಆದ್ರೆ ಹೇಗೂ ಭಾರತಕ್ಕೆ ಬಂದಿದ್ದೀವಿ. ಇಲ್ಲಿವರ್ಗೂ ಬಂದು ಗಂಗಾನದಿ ತಟದಲ್ಲಿ ಕೂರ್ದೆ ಹೋದ್ರೆ ಹೇಗೆ ಅಂತ ಒಂದು ದಿನ ಕಾಶಿಗೆ ಹೋಗಿ, ಅದೇ ಸಂಜೆ ನಾನು, ರಿಚರ್ಡ್ ಗಂಗಾನದಿಯ ಬಳಿ ಹೋಗಿ ಕೂತ್ವಿ! ಸ್ವಲ್ಪ ದೂರ ದೂರ ಕೂತು ಮೌನವಾಗಿ ಕಣ್ಮುಚ್ಕೊಂಡಿದ್ದ ನಮ್ಗೆ ಗಂಗೆಯ ಜುಳುಜುಳು ಬಿಟ್ರೆ ಬೇರೆ ಸದ್ದು ಕೇಳ್ತಿರ್ಲಿಲ್ಲ. ಕೆಲವು ಗಂಟೆಯೇ ಕಳೆದಿರಬಹುದೇನೋ, ಅಲ್ಲಿಂದ ಎದ್ದು ಹೋಗೋದಕ್ಕೆ ಇಬ್ಬರಿಗೂ ಮನಸ್ಸಿರಲಿಲ್ಲ! ಗಂಗೆ ಅಂದ್ರೆ ಹಾಗೇ ಅಲ್ವಾ, ಏನೋ ಸೆಳೆತ! ಇನ್ನೈದು ನಿಮಿಷ, ಎದ್ದು ಹೊರಡಬೇಕು ಅನ್ನೋ ಅಷ್ಟ್ರಲ್ಲಿ ಗಂಗೆಯ ಜುಳುಜುಳು ಸದ್ದನ್ನು ಸೀಳಿಕೊಂಡು ಯಾವುದೋ ಮಗುವಿನ ಅಳುವ ಸದ್ದು ಕೇಳ್ಸೋದಕ್ಕೆ ಶುರುವಾಯ್ತು. ಬಾಡಿಗೆ ತಾಯಿಯ ಹುಡುಕಾಟದಲ್ಲಿದ್ದ ನಾನು ಇವೆಲ್ಲ ಭ್ರಮೆನಾ ಅಂದ್ಕೊಂಡಿದ್ರೆ ರಿಚರ್ಡ್ ನನ್ನ ಭುಜ ಅಲ್ಲಾಡಿಸಿ, ನನ್ನ ಎಬ್ಬಿಸಿದ. ಕಣ್ಬಿಟ್ಟು ನೋಡಿದರೆ ನನ್ನಿಂದ ಕೆಲವೇ ಮೀಟರ್ ದೂರದಲ್ಲಿ ನವಜಾತ ಶಿಶುವೊಂದು ಬಿದ್ದಿತ್ತು! ಇಬ್ಬರೂ ಓಡಿಹೋಗಿ ನೋಡಿ, ತಕ್ಷಣವೇ ಆಸ್ಪತ್ರೆಗೆ ಸೇರಿಸಿದೆವು. ಯಾರೋ ಸಾಕೋದಕ್ಕೆ ಶಕ್ತಿ ಇಲ್ಲವೆಂದೋ, ಹೆಣ್ಣು ಮಗುವೆಂದೋ ಬಿಟ್ಟು ಹೋಗಿದ್ದಿರಬಹುದು ಎಂದು ಪೊಲೀಸರು ಹೇಳಿದರು. ಯಾರು ಏನೇ ಅಂದರೂ ನನ್ನ ಮಟ್ಟಿಗೆ ಗಂಗಾಮಾತೆಯೇ ಬಾಡಿಗೆತಾಯಿಯಾಗಿ ನನಗಾಗಿ ಹೆತ್ತು ಕೊಟ್ಟ ಕೂಸು ಇವ್ಳು! ನದಿ ತೀರದಲ್ಲಿ ಸಿಕ್ಕ ಈ ಮಗುವನ್ನೇ ನಾವು ದತ್ತು ತೆಗೆದುಕೊಂಡ್ವಿ. ಅದಕ್ಕೇ ಇವಳ ಹೆಸರು ಗಂಗಾ!
* * *
ಮೀರಾ ಮಾತು ಮುಗಿಸಿ ಗಂಗಾಳ ಕಡೆ ನೋಡಿದರೆ ಹರಿ ಮತ್ತು ರಿಚರ್ಡ್ಸ್ ಬಾಲ್ಕನಿಯಿಂದ ಒಳಗೆ ಬಂದು ಅರುಂಧತಿ ಮತ್ತು ಗಂಗಾಳ ಜೊತೆ ಕೂತಿದ್ದರು. ಅರುಂಧತಿ ಆಗಲೇ ಬರೆದಿದ್ದ ಸಪ್ತರ್ಷಿ ಮಂಡಲದ ಹಾಳೆಯನ್ನು ಕೈಗೆತ್ತಿಕೊಂಡಿದ್ದ ಗಂಗೆಯ ಬಳಿ ಹರಿ “ಇದೇನ್ ಗೊತ್ತಾ? ಬಿಗ್ ಡಿಪ್ಪರ್” ಅಂದ. ತಕ್ಷಣವೇ ರಿಚರ್ಡ್ಸ್, “ನೋ ಇಟ್ಸ್ ಸಪ್ತರ್ಷಿ ಮಂಡಲ್” ಎಂದು ನಗುತ್ತ ಗಂಗೆಯನ್ನು ನೋಡಿದ. ಅವಳೂ ತನ್ನ ತೊದಲು ನುಡಿಯಲ್ಲಿ ‘ಸಪ್ತರ್ಷಿ ಮಂಡಲ’ ಅನ್ನೋದಕ್ಕೆ ಪ್ರಯತ್ನಿಸ್ತಾ ಇದ್ದಳು. ಆಗ ಹರಿಯ ಮುಖಭಾವ ಹೇಗಿತ್ತು ಅಂತ ಮಣಿಕರ್ಣಿಕಾಗೆ ಗೊತ್ತಾಗಲೂ ಇಲ್ಲ. ಅದನ್ನು ತಿಳಿದುಕೊಳ್ಳಬೇಕು ಅಂತಲೂ ಅನ್ನಿಸಲಿಲ್ಲ. ಯಾಕಂದ್ರೆ ಮೀರಾ ಮಾತು ಮುಗಿದು ಹತ್ತು ನಿಮಿಷವಾದರೂ ಮಣಿಕರ್ಣಿಕಾ ಬಾಯಲ್ಲಿ ಶಬ್ದಗಳು ಹೊರಳಲಿಲ್ಲ! ಸೆಟೆದೆದ್ದ ಮಣಿಕರ್ಣಿಕಾ ಕೈಯ ರೋಮಗಳೆಲ್ಲ ಮತ್ತೆ ಮಲಗೋಕೂ ಮರೆತಂತೆ ಹಾಗೆಯೇ ನಿಂತಿದ್ದವು!
* * *
ಕುಕು ಗಡಿಯಾರ ರಾತ್ರಿ ೨.೩೦ ತೋರಿಸ್ತಿತ್ತು!! ಅಂದ್ರೆ ಮಣಿಕರ್ಣಿಕಾ ವಾಚಲ್ಲಿ ಆಗ ೧೧ ಗಂಟೆ! ಅರುಂಧತಿ ಆಗಲೇ ಮಲಗಿದ್ದಳು. ಮೀರಾ, ರಿಚರ್ಡ್ಸ್, ಗಂಗೆ ಹತ್ತಕ್ಕೆಲ್ಲ ಹೊರಟಿದ್ದರು. ಮಣಿಕರ್ಣಿಕಾ ಮುಂದೆ ಹರಿ ತಲೆತಗ್ಗಿಸಿ ಕೂತಿದ್ದ. ಮಣಿಕರ್ಣಿಕಾಗೆ ಮಾತುಗಳು ಬೇಡವಾಗಿತ್ತು. ತೀರಾ ಖುಷಿಯಾದಾಗಲೋ, ನೋವಾದಾಗಲೋ ಮೌನಕ್ಕೇ ಹೆಚ್ಚು ಅರ್ಥ ಅನ್ಸುತ್ತಲ್ಲ, ಹಾಗೆ!
ಅವರು ಉಂಡು ಹೋದ ಟೇಬಲನ್ನೂ ಕ್ಲೀನ್ ಮಾಡೋಕೆ ಮರೆತ ಹಾಗೆ ಮಣಿಕರ್ಣಿಕಾ ಕೂತಿದ್ದರೆ, ಅವಳ ಮುಂದೆ ಮುಖ ಎತ್ತುವ ಧೈರ್ಯವಿಲ್ಲದೆ ಕುಳಿತಿದ್ದ ಹರಿ ಡೈನಿಂಗ್ ಟೇಬಲ್ ಮೇಲೊಮ್ಮೆ ಕಣ್ಣು ಹಾಯಿಸಿದ.
ಮಣಿಕರ್ಣಿಕಾ ಕಷ್ಟಪಟ್ಟು ಮಾಡಿದ್ದ ಪಿಜ್ಜಾ ಹಾಗೇ ಉಳಿದಿತ್ತು! ಕಾಯಿಕಡುಬಿನ ಪಾತ್ರೆ ತಳ ಕಾಣುವ ಹಾಗೆ ಖಾಲಿಯೇ ಆಗಿತ್ತು! ಅತ್ತ ಕ್ರಿಸ್ಮಸ್ ಟ್ರೀ ಸುತ್ತಲೂ ಹಚ್ಚಿದ್ದ ಬಣ್ಣಬಣ್ಣದ ಮೊಂಬತ್ತಿಗಳು ಕರಗಿ ಆರಿದ್ದವು. ದೇವರ ಮನೆಯಲ್ಲಿ ಹಚ್ಚಿದ್ದ ನಂದಾದೀಪ ಇನ್ನೂ ಬೆಳಗುತ್ತಲೇ ಇತ್ತು!