ಕಾಲದ ಶಿಖೆ ಹಿಡಿದು, ಸ್ವಲ್ಪ ವಿರಮಿಸಿ ನಡೆ ಎನ್ನಲು ಅದು ಕೈಗೆ ಸಿಗುತ್ತಾ? ದಿನ, ತಿಂಗಳು, ವರ್ಷ ಎಂದು ಅದು ಸಲೀಸಾಗಿ ಅಂಗನವಾಡಿ ಮಗುವಿನಂತೆ ಮುಂಬರುವುದನ್ನು ಗ್ರಹಿಸದೆ ಬಿರುಸಿನ ಹೊಸ ಹೆಜ್ಜೆ ಇಡುತ್ತಿರುವಾಗ ಪಟೇಲರ ಗಾಯ ಒಂದಿಷ್ಟು ಮಾಸಿತ್ತು. ಇನ್ನೂ ಹರೆಯ ಇಳಿಯದ ದೇಹ ಕಾಮನೆಯ ಕಾವಿಗೆ ಕರಗದೆ ಇದ್ದೀತೇ? ಮಗನ ಬಾಲಲೀಲೆಯಲ್ಲಿಯೇ ಪಟೇಲರು ಮೈಮರೆತರು ಎಂದು ಊರವರು ಅಂದುಕೊಂಡಿದ್ದರೆ ಕುಡುಕ ತ್ಯಾಂಪುವಿನ ಮಗಳು ವಿಧವೆ ಪಾರು ಜೊತೆ ಪಟೇಲರ ಒಡನಾಟದ ಸುದ್ದಿ ಊರ ಮಂದಿಯ ಮಾತಿನ ನಡುವೆ ಮೆತ್ತಗೆ ನುಸುಳುತ್ತಿತ್ತು. ಗಾಳಿ ಸುದ್ದಿ ಸುಳಿಗಾಳಿಯಾಗುವ ಮುಂಚೆ ಪಟೇಲರು ಹತ್ತು ಜನರ ಸಮ್ಮುಖದಲ್ಲಿ ಆಕೆಯನ್ನು ಕೈಹಿಡಿದು ತಾಳಿ ಕಟ್ಟಿ ಮನೆಗೆ ಕರೆದುಕೊಂಡು ಬಂದಿದ್ದರು. ಊರಿನವರಿಗೆ ಅವರ ನಿರ್ಧಾರದಿಂದ ಬಹಳ ಇರಿಸುಮುರುಸು ಆಗಿತ್ತು, ಮರುಮದುವೆ ಆಗುವುದೇ ಆದರೆ ಒಳ್ಳೆ ಮನೆತನದ ಹುಡುಗಿಯರಿಗೇನು ಬರ ಬಂದಿತ್ತಾ? ಅವಳೇ ಏನೋ ಮಾಟ ಮಂತ್ರ ವಶೀಕರಣ ಮಾಡಿಸಿರಬೇಕು. ಯಾರಿಗೂ ಅವರೆದುರು ಈ ಬಗ್ಗೆ ಕೇಳುವ ಧೈರ್ಯ ಇರಲಿಲ್ಲ.
ಇತ್ತೀಚೆಗೆ ಹೊಲ-ಗದ್ದೆಗಳಲ್ಲಿ ಮೈಮುರಿದು ದುಡಿಯುವವರಿಲ್ಲ. ಇಂದಿನ ಯುವಕರಿಗೆ ಈ ಹಳ್ಳಿಯ ಜನಗಳು, ಹೊಲದ ನಡುವಿನ ಮನೆಗಳು, ವಾಹನ ಮುಖ ಮಾಡದ ಕೆರೆ ಒಡ್ಡು ಬೆಟ್ಟಗುಡ್ಡಗಳ ಕಠಿಣ ಹಾದಿ, ಇಲ್ಲಿನ ವಿಮರ್ಶೆಗೊಳ್ಳದ ಸಂಪ್ರದಾಯ, ಮಡಿ ಇತ್ಯಾದಿ ಒಗ್ಗಲ್ಲ. ಅವರು ಮನೆ ಮಾರಿ ಪೇಟೆಯಲ್ಲಿ ಖಾಯಂ ಆಗಿ ನೆಲೆಸುವ ನಿರ್ಧಾರ ಮಾಡಿದ್ರಲ್ಲಿ ತಪ್ಪೇನಿದೆ? ಈ ಮೂಕ ಹೆಂಗಸು ಹೀಗೆ ಹಠ ಹಿಡಿದು ಕೂತರೆ ಅವಳು ಮತ್ತು ಆ ಮುದುಕ ಆ ಮನೆಯ ಗೋಡೆಗಂಟಿಸಿದ ಹಳೇ ಕಪ್ಪು-ಬಿಳುಪು ಚಿತ್ರಗಳ ಹಾಗೆ ಅಂಟಿಕೊಂಡು ನಿಲ್ಲುವುದಕ್ಕೆ ಆಗುತ್ತದೆಯೆ? ಎಷ್ಟಾದರೂ ಮಗನಿಗೆ ಅಪ್ಪನ ಬಗ್ಗೆ ಕಾಳಜಿ ಇಲ್ಲದೆ ಇರುತ್ತಾ? ನನಗಂತೂ ಅವನದ್ದು ಸಾಸಿವೆ ಕಾಳಿನಷ್ಟೂ ತಪ್ಪು ಇಲ್ಲ ಅಂತ ಅನ್ನಿಸುತ್ತದೆ” ಪುರೋಹಿತರ ಹೆಂಡತಿ ಪಂಕಜಕ್ಕ ಜಗಲಿಯಲ್ಲಿ ಕಾಲು ಚಾಚಿ ಕುಳಿತು ದೀಪದ ಬತ್ತಿ ಹೊಸೆಯುತ್ತ ಮನೆ ಕೆಲಸದಾಳಿನ ಜೊತೆ ಊರ ಪಟೇಲರ ಮನೆಯ ಸುದ್ದಿ ಮಾತನಾಡುತ್ತಿದ್ದರು.
“ಹೌದು ಅಕ್ಕಯ್ಯಾ, ನನಗೂ ಹಾಗೆ ಅನ್ನಿಸಿತು. ಗಂಡು ಮಗನನ್ನು ಸಣ್ಣಪ್ರಾಯದಲ್ಲೇ ದೂರ ಕಳುಹಿಸಿ ಅವನಿಷ್ಟಕ್ಕೆ ಬಿಟ್ರು. ಅವನಿಗೆ ಈಗ ಮತ್ತೆ ಇಲ್ಲಿಗೆ ಹೊಂದಿಕೊಂಡು ಈ ಜೀಟಿಗೆ ಬೆಳಕಲ್ಲಿ ಬದುಕುವುದಕ್ಕೆ ಆಗುತ್ತಾ? ಮನೆ ಒಂದು ಇದೆ, ಭೂತ ಬಂಗಲೆ ಹಾಗೆ! ಮತ್ತೊಂದು ವಿಚಾರ ಗೊತ್ತಾ ನಿಮಗೆ…!?” ಅವಳು ಮೆಲುಧ್ವನಿಯಲ್ಲಿ ಹೇಳುತ್ತ ತುಟಿ ಬಿರುಕಿನಿಂದ ಹೊರನುಸುಳಿದ ವೀಳ್ಯದ ರಸದ ಹರಿವನ್ನು ಹಾಗೆ ಕೈಯಿಂದ ಒತ್ತಿ ಕಪೋಲಕ್ಕೆ ಓರೆ ಒರಸಿ ತೀರ್ಥ ಪ್ರಸಾದ ತೆಗೊಂಡವಳಂತೆ ಕೈಯನ್ನು ಸೆರಗಿಗೆ ಉಜ್ಜಿಕೊಂಡು ಕುಳಿತಲ್ಲಿಂದಲೇ ಗೊನೆ ಹಾಕಿದ ಬಾಳೆಯ ಹಾಗೆ ಮುಂದೆ ಬಾಗಿದಳು.
“ಅಕ್ಕಯ್ಯಾ… ನಾನು ಈ ವಿಚಾರ ಯಾರ ಹತ್ತಿರ ಕೂಡ ಈವರೆಗೆ ಬಾಯಿಬಿಟ್ಟಿಲ್ಲ. ಯಾಕೋ ನೆನೆಸಿಕೊಂಡರೆ ಭಯ! ಪಟೇಲರಿಗೆ ಮೈ ಸರಿ ಇಲ್ಲದಿರುವಾಗ ನನ್ನ ಮೈದುನ ಚೋಮನ ಹೆಂಡತಿ ಸಾವಿತ್ರಿ ನಾಲ್ಕು ದಿನದ ಮಟ್ಟಿಗೆ ಪಟೇಲರ ಮನೆಯಲ್ಲಿ ರಾತ್ರಿ ತಂಗುವುದಕ್ಕೆ ಹೋಗಿದ್ಳು ಅಲ್ವಾ. ಮರಳಿ ಬಂದು ಐದು ದಿನ ಚಳಿ ಜ್ವರ ಹಿಡಿದು ಮಲಗಿದ್ದಳು! ಒತ್ತಾಯ ಮಾಡಿ ಕೇಳಿದ್ದಕ್ಕೆ ಸತ್ಯ ಬಾಯಿಬಿಟ್ಟಳು. ಆ ಮನೆಯಲ್ಲಿ ನಡುರಾತ್ರಿ ಹೊತ್ತು ಏನೋ ವಿಚಿತ್ರ ಸದ್ದು ಬರುತ್ತಿತ್ತಂತೆ ಅಕ್ಕಯ್ಯಾ! ನಂಗೆ ಚಿಕ್ಕವಳಿಂದಲೇ ಇದೆಲ್ಲ ಪೀಡೆ ಪಿಶಾಚಿ ಸುದ್ದಿ ಮಾತನಾಡಿದ್ರೆ ರಾತ್ರಿ ಮೂತ್ರಕ್ಕೆ ಹೋಗಲು ಭಯ. ಮೂತ್ರ ಕಟ್ಟಿ ಉರಿ ಸುರುವಾದರೆ ಅದೂ ಒಂದು ಕಿರಿಕಿರಿ. ಅವಳು ಆ ವಿಚಾರ ಹೇಳಿದ ನಂತರ ನಾನು ಆ ಮನೆಯತ್ತ ತಲೆ ಹಾಕಿ ಕೂಡ ಮಲಗಿಲ್ಲ” ಅವಳು ನಿಜವಾಗಿಯೂ ಹೆದರಿಕೊಂಡಿದ್ದಳು ಎಂದು ಅವಳ ಮುಖ ನೋಡಿದರೆ ಅರ್ಥ ಮಾಡಿಕೊಳ್ಳಬಹುದಿತ್ತು. ಕಂಕುಳಿನಡಿಯ ರವಿಕೆ ಒದ್ದೆ ವಿಸ್ತರಿಸುತ್ತಿತ್ತು. ಪುರೋಹಿತರ ಹೆಂಡತಿಗೆ ಅವಳ ಮಾತಿನ ಮೇಲೆ ನಂಬಿಕೆ ಬರಲಿಲ್ಲ. ಮೂಕವ್ವನಿಗೆ ರಾತ್ರಿ-ಹಗಲು ಎನ್ನುವ ಭಯ ಮೊದಲೇ ಇಲ್ಲ. ಅರ್ಥ ಆಗದ ವಿಚಿತ್ರ ಸ್ವರ ಹೊರಡಿಸುತ್ತಾಳೆ. ರಾತ್ರಿ ನಿದ್ದೆಯಲ್ಲಿ ಇದ್ದವರಿಗೆ ಒಮ್ಮೆಗೆ ಬಾವಲಿ ಹಾರಿ ಕಿಚಕಿಚ ಅಂದರೂ ಗಾಬರಿಯಾಗುತ್ತದೆ. ಅಷ್ಟು ಸಾಲದ್ದಕ್ಕೆ ನಾಲ್ಕು ಸೂತ್ರದ ಮನೆ, ಎರಡು ಅಂತಸ್ತು, ಅದರ ಮೇಲೆ ಅಟ್ಟ, ಕೆಳಗೊಂದು ನೆಲಮಾಳಿಗೆ, ಮನೆಗೆ ತಾಗಿಕೊಂಡು ದೈವದ ಗುಡಿ. ಊರಿನ ಎತ್ತರದ ಜಾಗದಲ್ಲಿ ಇರುವ ಅರಮನೆಯಂಥ ಈ ಮನೆಯನ್ನು ಯಾರು ಯಾವ ಕಾಲದಲ್ಲಿ ಕಟ್ಟಿಸಿದ್ದು ಎಂದು ಯಾರಿಗೂ ತಿಳಿದಿಲ್ಲ. ಹಲವಾರು ಕುಟುಂಬಗಳಿಗೆ ಒಂದೇ ಕಾಲಘಟ್ಟದಲ್ಲಿ ಆಶ್ರಯ ನೀಡಿದ ಮನೆಯಲ್ಲಿ ಈಗ ಸದ್ದೇ ಇಲ್ಲ. ಜನರೇ ಇಲ್ಲದ ಗೋಡೆಗಳ ನಡುವೆ ಗಾಳಿ ನುಸುಳಿ ಬಿರುಸಾಗಿ ಸಾಗಿದರೂ ಗೊಯೋ ಸದ್ದೇ.
ಊರಿನ ದೇವಸ್ಥಾನದ ಅರ್ಚಕರ ಹೆಂಡತಿ ಪಂಕಜಕ್ಕ ಮದುವೆ ಆಗಿ ಈ ಊರಿಗೆ ಬಂದಾಗ ಪಟೇಲರ ಯೌವ್ವನದ ಕಾಲ. ಆನಂತರದ ದಿನಗಳ ಪಟೇಲರ ಬದುಕಿನ ಎಲ್ಲ ಆಗುಹೋಗುಗಳಿಗೆ ಪಂಕಜಕ್ಕನೂ ಒಂದು ಸಾಕ್ಷಿ. ಪಟೇಲರದ್ದು ಎತ್ತರದ ನಿಲವು, ನಸುಕಪ್ಪು ಬಣ್ಣದ ಗಟ್ಟಿಮುಟ್ಟಾದ ದೇಹದ ಚೆಲುವ. ಅವರ ಮಡದಿ ಸೀತಕ್ಕ ಅವರಿಗೆ ಹೇಳಿ ಮಾಡಿಸಿದಂತಹ ಹೆಣ್ಣು. ಅವರಿಬ್ಬರನ್ನು ನೋಡಿದರೆ ದೃಷ್ಟಿಯಾಗಬೇಕು, ಅಷ್ಟು ಚಂದದ ಜೋಡಿ. ದಂಪತಿಗಳಿಗೆ ತಡವಾಗಿ ಒಂದು ಗಂಡು ಮಗು ಹುಟ್ಟಿತ್ತು, ಚಾಕರಿಯವರಿಗೆ, ಊರಿನವರಿಗೆ ಹಬ್ಬದೂಟ ಬಡಿಸಿದ್ದರು. ಮಗನನ್ನು ರಾಜಕುಮಾರನ ಹಾಗೆ ಬೆಳೆಸಿದ್ದರು. ಅವನ ಶಾಲೆ ಮುಗಿಯೋ ತನಕ ಎಲ್ಲ ಸರಿಯಾಗಿತ್ತು. ಈ ಸಂಸಾರದ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ, ಪಟೇಲರ ಮಡದಿಗೆ ಸರ್ಪಸುತ್ತು ಬಂದು ಚಿಕಿತ್ಸೆ ಪಡೆದುಕೊಳ್ಳುವುದಕ್ಕೂ ಅವಕಾಶವಾಗದಂತೆ ಮೈಯೆಲ್ಲ ನೀರಿನ ಗುಳ್ಳೆ ತುಂಬಿ, ಯಾವ ವೈದ್ಯರಿಂದಲೂ ಆಕೆಯ ಜೀವ ಉಳಿಸೋಕೆ ಆಗಲೇ ಇಲ್ಲ. ಊರಿನ ಎಲ್ಲರ ಕಣ್ಣಲ್ಲೂ ನೀರು ಜಿನುಗಿತ್ತು. ಪಾಪ, ಪಟೇಲರಂತೂ ಮನದನ್ನೆಯ ಅಗಲುವಿಕೆಯಿಂದ ಒಂದಿಷ್ಟು ದಿನ ಅರೆಹುಚ್ಚನ ತರ ಆಡುತ್ತಿದ್ದರು.
ಕಾಲದ ಶಿಖೆ ಹಿಡಿದು, ಸ್ವಲ್ಪ ವಿರಮಿಸಿ ನಡೆ ಎನ್ನಲು ಅದು ಕೈಗೆ ಸಿಗುತ್ತಾ? ದಿನ, ತಿಂಗಳು, ವರ್ಷ ಎಂದು ಅದು ಸಲೀಸಾಗಿ ಅಂಗನವಾಡಿ ಮಗುವಿನಂತೆ ಮುಂಬರುವುದನ್ನು ಗ್ರಹಿಸದೆ ಬಿರುಸಿನ ಹೊಸ ಹೆಜ್ಜೆ ಇಡುತ್ತಿರುವಾಗ ಪಟೇಲರ ಗಾಯ ಒಂದಿಷ್ಟು ಮಾಸಿತ್ತು. ಇನ್ನೂ ಹರೆಯ ಇಳಿಯದ ದೇಹ ಕಾಮನೆಯ ಕಾವಿಗೆ ಕರಗದೆ ಇದ್ದೀತೇ? ಮಗನ ಬಾಲಲೀಲೆಯಲ್ಲಿಯೇ ಪಟೇಲರು ಮೈಮರೆತರು ಎಂದು ಊರವರು ಅಂದುಕೊಂಡಿದ್ದರೆ ಕುಡುಕ ತ್ಯಾಂಪುವಿನ ಮಗಳು ವಿಧವೆ ಪಾರು ಜೊತೆ ಪಟೇಲರ ಒಡನಾಟದ ಸುದ್ದಿ ಊರ ಮಂದಿಯ ಮಾತಿನ ನಡುವೆ ಮೆತ್ತಗೆ ನುಸುಳುತ್ತಿತ್ತು. ಗಾಳಿ ಸುದ್ದಿ ಸುಳಿಗಾಳಿಯಾಗುವ ಮುಂಚೆ ಪಟೇಲರು ಹತ್ತು ಜನರ ಸಮ್ಮುಖದಲ್ಲಿ ಆಕೆಯನ್ನು ಕೈಹಿಡಿದು ತಾಳಿಕಟ್ಟಿ ಮನೆಗೆ ಕರೆದುಕೊಂಡು ಬಂದಿದ್ದರು. ಊರಿನವರಿಗೆ ಅವರ ನಿರ್ಧಾರದಿಂದ ಬಹಳ ಇರಿಸುಮುರುಸು ಆಗಿತ್ತು, ಮರುಮದುವೆ ಆಗುವುದೇ ಆದರೆ ಒಳ್ಳೆ ಮನೆತನದ ಹುಡುಗಿಯರಿಗೇನು ಬರ ಬಂದಿತ್ತಾ? ಅವಳೇ ಏನೋ ಮಾಟ ಮಂತ್ರ ವಶೀಕರಣ ಮಾಡಿಸಿರಬೇಕು. ಯಾರಿಗೂ ಅವರೆದುರು ಈ ಬಗ್ಗೆ ಕೇಳುವ ಧೈರ್ಯ ಇರಲಿಲ್ಲ. ಪಟೇಲರಿಗೆ ದೇಹದ ಹಸಿವು ಮಾತ್ರ ಆದರೆ ಕದ್ದುಮುಚ್ಚಿಯೇ ಈ ಸಂಬಂಧವನ್ನು ಮುಂದುವರಿಸಬಹುದಿತ್ತು. ಆದರೆ ಪಟೇಲರಿಗೂ ಆ ದೊಡ್ಡ ಮನೆಯ ಆವಶ್ಯಕತೆಗಳಿಗೆ ತುತ್ತಾಗಿ ಸುಮ್ಮನಿದ್ದುಬಿಡುವ ಹೆಣ್ಣಿನ ಆವಶ್ಯಕತೆ ಖಂಡಿತಾ ಇತ್ತು. ಪಾರುವಿನ ಕುಡುಕ ಅಪ್ಪನಿಗೆ ಆಕೆ ಭಾರ ಆಗಿದ್ದಳು. ಅಷ್ಟು ಸಾಲದ್ದಕ್ಕೆ ಆಕೆಗೆ ಒಂದು ಹೆಣ್ಣು ಮಗು ಬೇರೆ ಇತ್ತು. ಪಟೇಲರ ನಿರ್ಧಾರ ಊರಿನ ಒಂದಿಷ್ಟು ಮಂದಿಗಳ ಪ್ರಶಂಸೆಯನ್ನು ಗಳಿಸಿದ್ದೂ ಕೂಡ ಗುಟ್ಟಾಗಿ ಉಳಿಯಲಿಲ್ಲ.
ಪಾರುವನ್ನು ಪಟೇಲರ ಹೆಂಡತಿ ಎಂದು ಯಾರೂ ಒಪ್ಪಿಕೊಳ್ಳಲಿಲ್ಲ ಎನ್ನುವುದು ವಾಸ್ತವ ಸಂಗತಿ. ಯಾರಿಗೂ ಸೀತಕ್ಕನ ಜಾಗದಲ್ಲಿ ಪಾರುವನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗುತ್ತಿರಲಿಲ್ಲ. ಜೊತೆಗೆ ಆ ಹೆಣ್ಣುಮಗು. ಪಟೇಲರ ಮಗನಂತೂ ಹತ್ತಿರ ಸುಳಿದರೆ ಕೈಗೆ ಸಿಕ್ಕಿದ್ದರಲ್ಲಿ ಅದಕ್ಕೆ ಹೊಡೆಯುತ್ತಿದ್ದ. ಪಾರು ತನ್ನ ಚಾಕರಿಗಾಗಿ ಬಂದವಳು ಎನ್ನುವ ಸಣ್ಣ ಸಾಂತ್ವನ ಇದ್ದರೆ, ಈ ಹುಡುಗಿ ತನ್ನ ಎಲ್ಲವನ್ನೂ ಕಿತ್ತುಕೊಂಡು ಹೋಗುತ್ತಾಳೆ ಎನ್ನುವ ಆತಂಕ ಮತ್ತು ಕೋಪ. ಆ ಮಗುವಿಗೆ ಏಟು ಹೊಸತೇನಲ್ಲ. ಅಜ್ಜ ಕುಡಿದು ಬಂದರೆ ಅವನ ಕಾಲು ನೀವುದಕ್ಕೂ ಇವಳೇ ಆಗಬೇಕಿತ್ತು. ಎಷ್ಟೋ ಸಲ ಕುಡಿತದ ಅಮಲಿಂದ ಜಾಡಿಸಿ ಒದ್ದು ತುಟಿಯ ಒಸಡು ಒಡೆದು ರಕ್ತ ಸೋರಿದ್ದು ಉಂಟು. ಪಾಪ! ಇಲ್ಲೂ ಮಗು ಎಲ್ಲವನ್ನೂ ಸಹಿಸಿಕೊಳ್ಳುತ್ತಿತ್ತು. ಯಾರಲ್ಲಾದರೂ ಹೇಳಬಹುದು ಎಂದರೆ, ಮಾತಿನ ದಾರಿಗೆ ಬೀಗ ಜಡಿದು ಕೀಲಿಕೈ ಬಿಸುಟೇ ಪರಮಾತ್ಮ ಭೂಮಿಗೆ ಕಳುಹಿಸಿದ್ದ. ಅವಳೋ ಹುಟ್ಟು ಕಿವುಡಿ ಮತ್ತು ಮೂಕಿ. ಅವಳಿಗೆ ಆ ಮೊದಲು ಹೆಸರಿಟ್ಟಿದ್ದರೋ ಇಲ್ವೋ, ಅಲ್ಲಿ ಎಲ್ಲರೂ ಮೂಕವ್ವ ಅಂತಲೇ ಆಕೆಯನ್ನು ಕರೆಯುತ್ತಿದ್ದದ್ದು. ಪಾರು ಎಲ್ಲರಿಗೂ ಎಷ್ಟು ಹೊಂದಿಕೊಂಡು ಹೋದರೂ ಸಾಕಾಗುತ್ತಿರಲಿಲ್ಲ. ಮಗುವಂತೂ ಕೆಲಸದವರ ಮಗುವಿಗಿಂತ ಕಡೆಯಾಗಿತ್ತು. ಆಳುಕಾಳುಗಳು ಪಟೇಲರ ಎದುರು ನಯವಿನಯದ ನಾಟಕ ಮಾಡಿ, ಅವರಿಲ್ಲದಾಗ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಯಾವಾಗಲಾದರೂ ಒಮ್ಮೊಮ್ಮೆ ದೇವಸ್ಥಾನದ ಮೆಟ್ಟಿಲ ಮೇಲೆ ಮುಖ ಬಾಡಿಸಿ ಕುಳಿತ ಮಗುವಿಗೆ ಪಂಕಜಕ್ಕ ನೈವೇದ್ಯದ ಅನ್ನದ ಮುದ್ದೆ ಅಂಗೈಗೆ ಹಾಕಿದರೆ ಸಾಕು, ಅದು ಗಬಗಬನೆ ತಿಂದು ಮುಗಿಸುತ್ತಿತ್ತು. ಪಂಕಜಕ್ಕನಿಗೋ ದೇವರು ಒಂದು ಕೂಸು ಕೊಟ್ಟಿರಲಿಲ್ಲ. ಹಾಗಾಗಿ ಬೀದಿಯಲ್ಲಿ ಹೋಗುವ ಮಕ್ಕಳನ್ನು ಯಾರು, ಏನು, ಎತ್ತ ಅಂತ ವಿಚಾರಿಸದೆ ಮುದ್ದಿಸುವುದು ಸಾಮಾನ್ಯವಾಗಿತ್ತು. ಇತ್ತ ಮೂಕವ್ವ ಬೆಳೆದಂತೆ ಮನೆಯಿಂದ ಹೊರಗೆ ಕಾಣಿಸಿಕೊಳ್ಳುವುದೇ ಅಪರೂಪವಾಗಿತ್ತು. ಅದಕ್ಕೂ ಒಂದು ಘಟನೆಯೇ ಪರೋಕ್ಷ ಕಾರಣವಾಗಿತ್ತು.
ಒಮ್ಮೆ ಪಟೇಲರ ಮಗನ ಪಠ್ಯಪುಸ್ತಕ ಕಾಣೆಯಾಗಿತ್ತಂತೆ. ಎಲ್ಲಿ ಹುಡುಕಿದರೂ ಸಿಗದ್ದು, ಸ್ನಾನದ ಮನೆಯ ಒಲೆಯಲ್ಲಿ ಅರ್ಧ ಸುಟ್ಟು ಕರಟಿ ಕರಿ ಉದುರಿಸಿಕೊಂಡ ಕರಿದ ಹಪ್ಪಳದಂತೆ ಸಿಕ್ಕಿತ್ತು. ಮೂಕವ್ವನೇ ಅವನ ಮೇಲಿನ ಅಸೂಯೆಗೆ ಸುಟ್ಟಿದ್ದು ಎನ್ನುವುದು ಅವನ ಆಪಾದನೆ. ಅವಳನ್ನು ಶಿಕ್ಷಿಸುವ ನೆಪಕ್ಕಾಗಿ ಅವನದ್ದೇ ಏನೋ ಕಿತಾಪತಿ ಎಂದು ಸುಲಭವಾಗಿ ಯಾರೂ ಊಹಿಸಬಹುದಾಗಿತ್ತು. ಸಿಟ್ಟಿನಲ್ಲಿ ಮೈಮೇಲೆ ಭೂತ ಬಂದ ಹಾಗೆ ನಡೆದುಕೊಂಡಿದ್ದ. ಹೈಸ್ಕೂಲು ಹುಡುಗ ಮೀಸೆ ಚಿಗುರುವ ಹೊತ್ತಿನ ನಡವಳಿಕೆ. ಮೂಕವ್ವನ ಬಟ್ಟೆ ಬಿಚ್ಚಿಸಿ ಬರೇ ಚಡ್ಡಿಯಲ್ಲಿ ಗದ್ದೆ ಬದುವಿನಲ್ಲಿ ಬೆತ್ತ ಹಿಡಿದು ನಡೆಸಿದ್ದ. ಅವಳೀಗ ಸಣ್ಣ ಹುಡುಗಿಯೇನಲ್ಲ. ದೇಹ ಹೆಣ್ತನದ ನಕ್ಷೆ ಬಿಡಿಸಿಕೊಂಡಿತ್ತು. ಭಯ, ನೋವು, ಅವಮಾನಗಳಿಂದ ಕುಸಿದು ಹೋಗಿದ್ದಳು. ಅದೇ ಹೊತ್ತಿಗೆ ಪೇಟೆಗೆ ಹೋಗಿ ಪಟೇಲರು ಮರಳಿದ್ದರು. ಆ ಕ್ಷಣದ ಅಸಹಾಯಕತೆಗೆ ಬೇರೆ ದಾರಿ ಕಾಣದೆ ಆಕೆ ರಕ್ಷಣೆಗಾಗಿ ಓಡಿ ಹೋಗಿ ಅವರನ್ನು ತಬ್ಬಿ ಹಿಡಿದುಕೊಂಡಿದ್ದಳು. ಒಂದಿಷ್ಟು ಹೊತ್ತು ಆಕೆಯತ್ತಲೇ ನೋಡಿ ಅವಳನ್ನು ತಬ್ಬಿಕೊಂಡವರಿಗೆ ಆಳುಕಾಳುಗಳು ಈ ಪ್ರಹಸನವನ್ನು ನೋಡುತ್ತಿರುವುದು ಅರಿವಿಗೆ ಬಂದದ್ದೇ ಪಕ್ಕನೆ ಗಲಿಬಿಲಿಗೊಂಡವರಂತೆ ತನ್ನ ಹೆಗಲಲ್ಲಿ ಇದ್ದ ರುಮಾಲನ್ನು ಬಿಡಿಸಿ ಅವಳಿಗೆ ಹೊದೆಸಿ ಒಳಗೆ ಕರಕೊಂಡು ಹೋದರು. ಯಾಕೋ ಹುಡುಗ ಅಪ್ಪನನ್ನು ಅಸಹನೆಯಿಂದ ದುರುಗುಟ್ಟಿ ನೋಡಿ ಒಳಹೋಗಿದ್ದ. ಇದು ಊರೆಲ್ಲ್ಲ ಸುದ್ದಿಯಾಗಿತ್ತು. ಪೋಲಿ ಮನಸ್ಸುಗಳು ಆ ಹಸುಳೆ ಮನಸ್ಸಿನ ಹುಡುಗಿಯ ದೇಹವನ್ನೂ ವರ್ಣಿಸುವುದಕ್ಕೂ ಹಿಂಜರಿಕೆ ತೋರಿರಲಿಲ್ಲ. ಹಾಗೆಂದು ಅವಳು ಪಟೇಲರ ಮನೆಯ ಸದಸ್ಯೆಯಾದ ಕಾರಣ ಚಾಲಿಪೋಲಿಗಳಿಗೆಲ್ಲ ಅವಳತ್ತ ನೋಡುವ ಧೈರ್ಯ ಬರುತ್ತಿರಲಿಲ್ಲ. ಹೆಂಗಳೆಯರು ಪಟೇಲರನ್ನು ಮನಸಾರೆ ಹೊಗಳಿದ್ದರು. ಆಮೇಲೆ ಏನಾಯಿತೋ ಮೂಕವ್ವ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ವರ್ಷಗಳು ಉರುಳಿದಂತೆ ಹೆತ್ತ ತಾಯಿಯೇ ಹೊಸ ಶತ್ರುವಿನಂತೆ ವರ್ತಿಸುತ್ತಿದ್ದಳು. ಅದ್ಯಾಕೋ ಪಾರು ಕೂಡ ಅವಳಿಗೆ ಸರಿಯಾಗಿ ಊಟತಿಂಡಿ ಕೊಡುತ್ತಿರಲಿಲ್ಲ! ಒಪ್ಪವಾಗಿ ತಲೆಬಾಚಿ ಉಡುಗೆಯುಟ್ಟರೂ ತಪ್ಪೆ. ಸಣ್ಣಪುಟ್ಟ ತಪ್ಪಿಗೂ ಬಾರುಕೋಲು ತೆಗೆದುಕೊಂಡು ಚೆನ್ನಾಗಿ ಬಾರಿಸುತ್ತಿದ್ದಳು. ತಾಯಿಯೇ ಹೀಗೆ ಮಾಡಿದ ಮೇಲೆ ಮಾತು ಬತ್ತಿದ ಅವಳ ಪರ ಮಾತನಾಡುವವರು ಯಾರು? ಅದಲ್ಲದೆ ಇತ್ತೀಚೆಗೆ ಪಾರು ಕೂಡ ಮೊದಲಿನ ಹಾಗೆ ಪಟೇಲರಿಗೆ ತಗ್ಗಿ ಬಗ್ಗಿ ನಡೆಯುತ್ತಿರಲಿಲ್ಲ. ಅರಮನೆ ಅನ್ನ ಅಂದ ಹೆಚ್ಚಿಸಿತು ಎಂದು ಊರವರು ಗೊಣಗಿದ್ದರು. ಪಟೇಲರ ಜೊತೆ ಹಠಕ್ಕೆ ಬಿದ್ದವಳಂತೆ ತಾನೇ ಎಲ್ಲದರ ಯಜಮಾನಿ, ತಾನು ಹೇಳಿದ್ದೇ ನಡೆಯಬೇಕು ಎನ್ನುವ ಹಾಗೆ ವರ್ತಿಸುತ್ತಿದ್ದಳು. ಹುಲಿಯಂತಿದ್ದ ಪಟೇಲರು ಬರುಬರುತ್ತಾ ಇಲಿಯಂತಾಗಿದ್ದರು. ಪಾರುವಿನ ಕಾರುಬಾರು ಜೋರಾಗಿತ್ತು.
ಈ ನಡುವೆ ಪಟೇಲರ ಮಗನಿಗೆ ಪಾರುವಿನ ಕೈ ಅಡುಗೆ, ಯಜಮಾನಿಕೆ ಯಾವುದೂ ಹಿಡಿಸುತ್ತಿರಲಿಲ್ಲ. ‘ಹಳ್ಳಿ ಪೆಕ್ರಗಳು… ಮ್ಯಾನರ್ಸೆ ಇಲ್ಲ ಇವಕ್ಕೆ…’ ಅಂತ ಯಾವಾಗಲೂ ಬೈದು ಬೈದು ಅವನಿಗೂ ಸುಸ್ತಾಗಿತ್ತು. ಕೊನೆಗೆ ಅವನು ಪೇಟೆಯಲ್ಲಿ ಸ್ನೇಹಿತರ ಜೊತೆ ರೂಂ ಮಾಡಿ ಅಲ್ಲಿಗೆ ವಾಸ ಬದಲಿಸಿದ್ದ. ತಿಂಗಳಿಗೊಮ್ಮೆ ಅಪರೂಪಕ್ಕೆ ಬಂದರೆ ಬಂದ, ಇಲ್ಲದಿದ್ದರೆ ಪಟೇಲರೇ ಹೋಗಿ ಖರ್ಚಿಗೆ ಬೇಕಾದಷ್ಟು ಕಾಸು ಕೊಟ್ಟು ಮರಳುತ್ತಿದ್ದರು. ಲಂಗುಲಗಾಮಿಲ್ಲದೆ ಪೇಟೆಯ ಬದುಕಿನ ಮೋಜಿನಲ್ಲಿ ಅವನು ಮೈಮರೆತಿದ್ದ. ಯಾವತ್ತಾದರೂ ಒಮ್ಮೊಮ್ಮೆ ತನ್ನ ಪುಂಡರ ದಂಡಿನ ಜೊತೆ ಮನೆಗೆ ಬಂದಿದ್ದು ಹೋಗುತ್ತಿದ್ದ.
ಮದುವೆ ದಲ್ಲಾಳಿ ಪಕೀರಣ್ಣ ಒಂದು ಮದುವೆ ಮಾತುಕತೆ ಪ್ರಸ್ತಾಪ ತೆಗೆದುಕೊಂಡು ಪಟೇಲರ ಮನೆಗೆ ಬಂದಾಗಲೇ ಮೂಕವ್ವ ಮದುವೆ ವಯಸ್ಸಿಗೆ ಬಂದಿದ್ದಾಳೆ ಎಂದು ಅಕ್ಕಪಕ್ಕದವರಿಗೆ ಅರಿವಿಗೆ ಬಂದದ್ದು. ಪಟೇಲರೆ ಆ ಹುಡುಗನನ್ನು ಬೇಡ ಅಂದ್ರಂತೆ! ಅವನು ನನ್ನ ಆಸ್ತಿ ಆಸೆಗೆ ಇವಳನ್ನು ಕಟ್ಟಿಕೊಂಡು ನಾಳೆ ಏನಾದರೂ ಮಾಡಿದರೆ ಏನು ಗತಿ ಅಂತ ಹೇಳಿದ್ರಂತೆ. ಅವರು ಕೊಟ್ಟ ಕಾರಣ ಯಾರಿಗೂ ಅಷ್ಟು ಸಮಂಜಸ ಅಂತ ಅನ್ನಿಸಿರಲಿಲ್ಲ. ಯಾಕೆಂದರೆ ಮೂಕವ್ವನಿಗೆ ಮಾತು ಬರುವುದಿಲ್ಲ ಮತ್ತು ಕಿವಿ ಕೇಳಿಸದು ಎನ್ನುವುದು ಬಿಟ್ಟರೆ ಬೇರೆ ತೊಂದರೆ ಏನಿಲ್ಲ. ಮೈಕೈ ತುಂಬಿಕೊಂಡು ವಯಸ್ಸಿಗೆ ಮೀರಿದ್ದೂ ಎನ್ನಬಹುದಾದ ಶರೀರದ ಬೆಳವಣಿಗೆ. ಪಾರು ಮತ್ತು ಅವಳನ್ನು ಅಪರಿಚಿತರು ನೋಡಿದರೆ ಅಕ್ಕ-ತಂಗಿ ಎಂದು ತಪ್ಪು ತಿಳಿದುಕೊಳ್ಳಬೇಕು. ಪೇಟೆಗೆ ಒಗ್ಗಿಕೊಳ್ಳುವುದು ಕಷ್ಟ ಆದರೂ ಹಳ್ಳಿ ಬದುಕು ನಿಭಾಯಿಸುವಷ್ಟು ಚಾತುರ್ಯ ಆಕೆಗಿತ್ತು. ಪಟೇಲರಿಗೆ ಆಕೆಯ ಮದುವೆ ಮಾಡಿಸಿ ಬಿಡಬಹುದಿತ್ತು ಎಂಬುದೇ ಎಲ್ಲರ ಅಭಿಪ್ರಾಯವಾಗಿತ್ತು. ಪಟೇಲರ ನಿರ್ಧಾರದಿಂದ ಪಾರು ಬಹಳ ಅಸಮಧಾನದಲ್ಲಿರುವಂತೆ ಕಾಣುತ್ತಿದ್ದಳು. ಮಗಳನ್ನು ವಿಪರೀತ ಕೆಲಸ ಮಾಡಿಸುತ್ತಿದ್ದಳು. ಆದರೂ ಮೂಕವ್ವ ಮೈಕೈ ತುಂಬಿಕೊಂಡ ಸಹಜ ಸೌಂದರ್ಯದ ಹೆಣ್ಣು. ಒಂದು ದಿನ ಹೊಳೆಯಲ್ಲಿ ಬಟ್ಟೆ ಒಗೆಯುತ್ತಿದ್ದ ಮೂಕವ್ವನ ನೋಡಿ ಪಕ್ಕದ ಮನೆಗೆ ನೆಂಟಳಾಗಿ ಬಂದ ಅಜ್ಜಿ, ಅವಳ ಹೊಟ್ಟೆ ಯಾಕೆ ಹಾಗೆ ಉಬ್ಬಿದೆ? ಅಂತ ಕೇಳಿದ್ದು ಪಾರುವಿಗೆ ಇರುಸುಮುರುಸು ಉಂಟುಮಾಡಿತ್ತು. ನಿಜ ಹೇಳಬೇಕೆಂದರೆ ಆಗಲೇ ಆಕೆ ಮಗಳ ದೇಹವನ್ನು ಸರಿಯಾಗಿ ಗಮನಿಸಿದ್ದು. ಒಳಗೆ ಕರೆದುಕೊಂಡು ಹೋದವಳೇ ವಿನಾಕಾರಣ ಮೈಯೆಲ್ಲ ಬಾಸುಂಡೆ ಬರುವಂತೆ ಬಾರಿಸಿದ್ದಳು. ಪಾಪ ಮೂಕವ್ವನಿಗೆ ಯಾಕೆ ಏನು ಎತ್ತ ಒಂದೂ ಗೊತ್ತಾಗಲಿಲ್ಲ.
“ನಿಮ್ಮ ಮಗ ಅವನ ಸ್ನೇಹಿತರನ್ನು ಕರೆದುಕೊಂಡು ಬರುವುದು ಹೆಚ್ಚಾಗಿದೆ. ಹುಡುಗರು ನಡುರಾತ್ರಿಯವರೆಗೆ ನಶೆ ಏರಿಸಿ ನಲೀತಾರೆ, ಅವರೋ, ಹಾಲು ಹಲ್ಲು ಮೊಳೆವ ಸೂಚನೆಗೆ ವಸಡು ತುರಿಸುವ ಹಾಗೆ ಕೈಗೆ ಸಿಕ್ಕಿದ್ದನ್ನು ಕಡಿಯುವವರು. ಇವಳೊಬ್ಬಳು ಅವರ ಬಿಟ್ಟಿ ಚಾಕರಿಗೆ. ಅವರಿಗೆ ಮೈಮೇಲೆ ಜ್ಞಾನ ಇಲ್ಲ, ಇವಳಿಗೆ ಮೈಮೇಲೆ ಕೈಹಾಕಿದ್ರು ಹೇಳೋಕೆ ನಾಲಗೆ ಮಗಚೋದಿಲ್ಲ. ಯಾಕೋ ಏನೋ ಎಡವಟ್ಟಾಗಿದೆ ಅಂತ ಅನ್ನಿಸುತ್ತೆ. ಈ ಮನೆಗೆ ಬಂದ ನಂತರ ನನ್ನ ಹೊಟ್ಟೆ ಬಟ್ಟೆಗೆ ತೊಂದರೆ ಆಗಲಿಲ್ಲ. ಹಾಗಂತ ನನ್ನ ಹೊಟ್ಟೆಯಲ್ಲಿ ಒಂದು ಹುಳ ಕೂಡ ಹುಟ್ಟಲಿಲ್ಲ. ಇವಳನ್ನು ಮದುವೆ ಮಾಡುವ ಅಂದರೆ ನಿಮ್ಮದು ಒಂದು ಕೊಂಕು ಎಲ್ಲದಕ್ಕೂ! ಹೇಗೆ? ಎತ್ತ? ಯಾರು? ಎಂದು ಬಾಯಿಬಿಡ್ತಿಲ್ಲ. ಎಲ್ಲ ನನ್ನ ಕರ್ಮ” ಗಂಡನೆದುರು ಅನ್ನದ ತಟ್ಟೆ ಕುಕ್ಕಿ ಪಾರು ಹೇಳಿದ್ದಳು. ಪಟೇಲರು ತಟ್ಟೆಯ ಮೇಲೆ ಇದ್ದ ದೃಷ್ಟಿ ಮೇಲೆತ್ತುವ ಧೈರ್ಯ ತೋರಲೇ ಇಲ್ಲ. ನಿಧಾನಕ್ಕೆ ಅನ್ನ ಬಾಯಿಗಿಡಬೇಕಾದರೆ ಪಾರುವಿನ ಸಿಟ್ಟು ನೆತ್ತಿಗೇರಿತ್ತು.
“ಏನಾದ್ರೂ ನಿಮಗೇನು? ನಿಮ್ಮ ಮಗನನ್ನು ನೀವು ಬಿಟ್ಟುಕೊಡೋದಿಲ್ಲ ಅಂತ ಗೊತ್ತು ನನಗೆ. ಅವನಿಗೆ ಇವಳೊಂದು ಆಟದ ವಸ್ತು. ಅವನ ಎದುರು ನಿಮ್ಮದೇನು ನಡೆಯುತ್ತೆ? ಬೆರ್ಚಪ್ಪನ ಹಾಗೆ ನಿಲ್ಲುತ್ತೀರಿ ಅಷ್ಟೇ. ಇವಳನ್ನು ಸುಟ್ಟು ನಿಮ್ಮನ್ನು ಕಟ್ಟಿಕೊಳ್ಳಬೇಕಿತ್ತು. ಈಗ ನಾನು ಏನೇ ಹೇಳಿದ್ರೂ ನೀವು ನಂಬಲ್ಲ. ನಿಮ್ಮ ಮಗನನ್ನು ಬಿಟ್ಟುಕೊಡಲ್ಲ. ಊರಿಗೆಲ್ಲ ಗೊತ್ತಾಗಿ ಮುಖ ತೋರಿಸಲು ಆಗದ ಹಾಗೆ ಆಗುವ ಮೊದಲು ನಾನೇ ಏನಾದರು ಮಾಡಿಕೊಂಡು ಸಾಯ್ತೀನಿ.” ಆಕೆ ಅಡುಗೆ ಕೋಣೆಯಲ್ಲಿ ಅನ್ನದ ಪಾತ್ರೆಯ ಮುಚ್ಚಳ ಟಣ್ ಅಂತ ಮುಚ್ಚಿದಾಗ ಪಟೇಲರು ಬಟ್ಟಲಿನಲ್ಲಿದ್ದ ಅನ್ನವನ್ನು ತಟ್ಟೆಯಲ್ಲಿಯೇ ಬಿಟ್ಟು ಎದ್ದು ಒಳಹೋಗಿದ್ದರು. ಮರುದಿನ ಪಾರು ಅದೆಲ್ಲೋ ಹೋಗಿ ಏನು ಹಸಿಮದ್ದು ತಂದು ಕುಡಿಸಿದಳೋ ಮೂಕವ್ವ ನಾಲ್ಕು ದಿನ ಹಾಸಿಗೆಯಿಂದ ಏಳಲೇ ಇಲ್ಲ. ಪಾರಕ್ಕ ಮುಟ್ಟು ನಿಲ್ಲುವ ಹೊತ್ತಿಗೆ ಬಸುರಾದಳು ಅಂತೆ ಎನ್ನುವ ಸುದ್ದಿ ಸದ್ದಿಲ್ಲದೆ ಅವರಿವರ ಕಿವಿಗೆ ಮುತ್ತಿಡುತ್ತಿತ್ತು, ಈಗ ಇಳಿಸ್ಕೊಳ್ಳೋಕೆ ಮದ್ದಿಗೆ ಅಲೆಯುತ್ತಿದ್ದಾಳೆ ಎನ್ನುವ ಅಣಕು ಬೇರೆ! ಆದರೆ ಪಟೇಲರ ಮನೆಯ ಬಗೆಗಿನ ಸುದ್ದಿಯ ಸತ್ಯಾಸತ್ಯತೆ ಪರೀಕ್ಷಿಸಿ ತಿಳಿಯುವ ಧೈರ್ಯ ಯಾರಿಗಿದೆ. ಮೂಕವ್ವ ಕೆಲಸದವರ ಕಣ್ಣಿಗೂ ಕಾಣಲು ಸಿಗುತ್ತಿರಲಿಲ್ಲ. ಮೂಕವ್ವನಿಗೆ ತಲೆ ಕೆಟ್ಟಿದೆ, ಹಾಗೆ ಕೋಣೆಯಲ್ಲಿ ಕೂಡಿ ಹಾಕಿದ್ದಾರಂತೆ ಅಂತ ಆಳುಕಾಳುಗಳು ಮೆಲ್ಲಮೆಲ್ಲ ಮಾತನಾಡಿ ಎದುರಿಗಿರುವವರಿಗೆ ಸೋಕದಂತೆ ಉಸಿರ ವೇಗ ಕತ್ತರಿಸಿ ಗಾಳಿ ತುಣುಕುಗಳ ಹೊರ ನೂಕಿದ್ದರು. ಪಾರು ಕೂಡ ಅವರ ಸಂಶಯಕ್ಕೆ ಪುಷ್ಠಿ ದೊರಕುವಂತೆ ಯಾರಿಗೂ ಸರಿಯಾಗಿ ಮುಖ ಕೊಡದೆ ಏನೋ ಮುಚ್ಚಿಡುತ್ತಿರುವಂತೆ ನಡೆದುಕೊಂಡಿದ್ದಳು. ಆ ಸಲ ಪಟೇಲರ ಮಗ ಬಂದಾಗಲೂ ಮೂಕವ್ವ ಆತನ ಕಣ್ಣಿಗೆ ಬೀಳಲಿಲ್ಲ. ತಡೆಯಲಾರದೆ ಪಾರು ಹತ್ರ ನೇರವಾಗಿ ಕೇಳಿದ್ದ. ಅವಳು ಅವನು ಕೇಳಿದ್ದು ತನಗೆ ಕೇಳಿಸಿಯೇ ಇಲ್ಲ ಎನ್ನುವ ಹಾಗೆ ಎದ್ದು ಹೊರಗೆ ಹೋಗಿದ್ದಳು. ಸುಮ್ಮನೆ ವಿಚಾರಿಸಿಕೊಳ್ಳಲು ಹೋಗಿ ನಾಚಿಗೆಗೆಟ್ಟೆ ಅಂತ ಅವನಿಗೆ ಅನ್ನಿಸಿತು. ಅನ್ಸಿವಿಲೈಸ್ಡ್…! ಅಂತ ತಂದೆಯ ಎದುರು ಗೊಣಗಿದ್ದ. ಅವರು ಆತನ ಮುಖ ನೋಡಲು ಧೈರ್ಯ ಸಾಲದೆ ತಲೆ ಮೇಲಕ್ಕೆತ್ತಲಿಲ್ಲ. ಸಾಯಲಿ, ಶನಿ ಹೋಯಿತು ಅಂತ ಆತನೂ ನಂತರ ವಿಚಾರಿಸಲು ಹೋಗಲಿಲ್ಲ. ಅವನಿಗವಳು ಕಿತ್ತೋಗಿರುವ ಒಂದು ಬೊಂಬೆ ಅಷ್ಟೇ!
ರಾತ್ರಿ ಗದ್ದೆಯ ನೀರು ಕಟ್ಟಲು ಹೋಗುವ ಕೆಲಸದವರು ಪಟೇಲರ ಮನೆಯಿಂದ ಮಗು ಅಳುವುದು ಕೇಳಿಸುತ್ತದೆ ಎಂದು ಹೇಳುತ್ತಿದ್ದರು. ಮತ್ತದು ತಮ್ಮ ಭ್ರಮೆ ಎಂದು ಸುಮ್ಮಗಾಗುತ್ತಿದ್ದರು. ನಿಧಾನಕ್ಕೆ ಮೂಕವ್ವ ಮೊದಲಿನ ಹಾಗೆ ಮನೆಯ ಕೆಲಸ ಮಾಡತೊಡಗಿದಾಗ ಎಲ್ಲರ ಕೆರಳಿದ ಕುತೂಹಲವೂ ತಣ್ಣಗಾಗಿತ್ತು. ಆದರೆ ಒಂದು ದಿನ ಅಡುಗೆ ಕೋಣೆಯಲ್ಲಿ ಅನ್ನ ಬಸಿಯುತ್ತಿದ್ದ ಅವಳೆದೆಯ ನಡುವಿನಿಂದ ಬಿಳಿನೀರು ಸೋರುವುದನ್ನು ಗಮನಿಸಿದ ಕೆಲಸದ ಸಾಕವ್ವ ಅಚ್ಚರಿಯಿಂದ ಪಾರಕ್ಕನ ಹತ್ತಿರ ವಿಚಾರಿಸಿದಾಗ ಅವಳು ಏನೇನೋ ಸಬೂಬು ಹೇಳಿ ಬಾಯಿ ಮುಚ್ಚಿಸಿದ್ದಳು. ಇತ್ತೀಚಿನ ವರ್ಷಗಳಲ್ಲಿ ದೀಪಾವಳಿಯ ಸಮಯದಲ್ಲಿ ಮನೆ ಪೂರ್ತಿ ಗುಡಿಸಿ ಸ್ವಚ್ಛ ಮಾಡಿದರೂ ನೆಲಮಾಳಿಗೆಯ ಬೀಗ ತೆರೆಯಲೇ ಇಲ್ಲ. ಕೆಲಸದವರಿಗಂತೂ ಕತ್ತಲೆ ಕತ್ತು ಕೆಳಗೆ ಹಾಕಿ ಮಲಗಿರುವ ಆ ಮನೆಯ ಹಲವು ಕೋಣೆಗಳ ಒಳಗೆ ಹೋಗುವುದಕ್ಕೆ ಒಂದು ರೀತಿಯ ಭಯ. ಮನೆಯವರಿಗೆ ಮರೆತು ಹೋದದ್ದಾದರೆ ನೆನಪಿಸುವುದೇ ಬೇಡ ಎನ್ನುವ ಹಾಗೆ ಅವರೂ ಸುಮ್ಮನಿದ್ದರು. ಎರಡು-ಮೂರು ವರ್ಷ ಹೀಗೆ ಆದ ನಂತರ ಹೊಸತಾಗಿ ಬಂದ ಕೆಲಸದರಿಗೆ ಆ ಮನೆಯಲ್ಲಿ ನೆಲಮಾಳಿಗೆ ಇರುವ ವಿಚಾರವೇ ಮರೆತುಹೋಯಿತು. ದಿನ ವರುಷಗಳು ಒಣಗಿದ ತರಗೆಲೆಯಂತೆ ಹಗುರವಾಗಿ ಸರಿದು ಹೋಗುತ್ತಿದ್ದವು.
ಪಟೇಲರ ಮಗ ದೂರದ ಊರಿನ ದೊಡ್ಡ ಸಿರಿವಂತರ ಮನೆ ಮಗಳನ್ನು ಪ್ರೀತಿಸಿದ್ದ. ಅವನಿಗೆ ಊರಲ್ಲಿ ತನ್ನ ಮನೆಯಂಗಳದಲ್ಲಿ ಮದುವೆ ಚಪ್ಪರ ಏರಿಸಬೇಕು ಎಂಬ ಆಸೆ. ಆ ಪೇಟೆಯ ಮಂದಿಗೆ ಈ ಹಳ್ಳಿ ಮನೆ, ಹಸಿರು ಮೆತ್ತಿದ ಗದ್ದೆ, ಬೆತ್ತಲಾದ ಬಯಲು ಪ್ರವಾಸಿತಾಣದ ಹಾಗೆ ಕಂಡಿತ್ತು. ಆದರೆ ಪಟೇಲರು ಮತ್ತು ಪಾರು ಅವನ ಮಾತಿಗೆ ಒಪ್ಪಲೇ ಇಲ್ಲ. ಬೀಗರು ಬಂದ ದಿನ ಒಂದು ಸಣ್ಣ ಕಟಿಪಿಟಿ ಬೇರೆ ಆಯಿತು. ಹೊಸಬರಿಗೆ ಹಳೆ ಮನೆಯ ಎಲ್ಲ ಕೋಣೆಗಳ ಒಳಗೆ ಹೋಗಲು ಮೂಕವ್ವ ಮತ್ತು ಪಾರಕ್ಕ ಬಿಡಲಿಲ್ಲ. ಅಲ್ಲೆಲ್ಲ ವರ್ಷಗಟ್ಟಲೆ ಗುಡಿಸಿ ಒರೆಸದೆ ಇಲಿಯ ಹಿಕ್ಕೆ ಬಿದ್ದು ಗಲೀಜಾಗಿದೆ ಎಂದು ಪಾರಕ್ಕ ನಯವಾಗಿ ನಿರಾಕರಿಸಿದರೆ, ಮೂಕವ್ವ ಆತಂಕಗೊಂಡು, ವಕ್ರ ಸ್ವರ ಎಬ್ಬಿಸಿ ವಿಚಿತ್ರವಾಗಿ ವರ್ತಿಸಿದ್ದಳು. ನನ್ನ ಮನೆಯಲ್ಲಿ ನನಗೇ ಸ್ವಾತಂತ್ರö್ಯವಿಲ್ಲ ಎಂದು ಪಟೇಲರ ಮಗ ಮುಖ ಊದಿಸಿಕೊಂಡಿದ್ದ. ಹೊಸಬರು ಬಂದವರ ಎದುರು ಕೂಗಾಡಿದರೆ ಅವರು ಏನು ತಿಳಿದುಕೊಳ್ಳುತ್ತಾರೋ ಎನ್ನುವ ಕಾರಣಕ್ಕೆ ಕಷ್ಟಪಟ್ಟು ಸ್ವಯಂ ನಿಯಂತ್ರಣ ಮಾಡಿಕೊಂಡಿದ್ದ. ಮದುವೆ ಒಂದು ಕಳೆಯಲಿ, ಇವರ ಅಹಂಕಾರಕ್ಕೆ ಮದ್ದರೆಯದೆ ಬಿಡಲಾರೆ ಎಂದು ಮನಸ್ಸಿನಲ್ಲಿಯೇ ನಿಶ್ಚಯ ಮಾಡಿಕೊಂಡಿರಬೇಕು. ಪಟೇಲರಿಗೆ ಯಾರ ಪಕ್ಷಕ್ಕೂ ನಿಲ್ಲಲಾಗದ ಅಸಹಾಯಕ ಪರಿಸ್ಥಿತಿ. ಮಗನನ್ನು ಸಮಾಧಾನಿಸದೆ ಬೇರೆ ದಾರಿ ಇರಲಿಲ್ಲ. ಒಂದು ತಿಂಗಳಲ್ಲಿ ಅವರು ಕೂಡಿಟ್ಟ ಹಣ, ಊರಿನ ಮನೆ, ಜಮೀನು ಎಲ್ಲ ಮಗನ ಹೆಸರಿಗೆ ವರ್ಗಾವಣೆಯಾಗಿತ್ತು. ಮದುವೆಗೆ ಅವರು ಹೋದರೂ ಪಾರಕ್ಕ ಮತ್ತು ಮೂಕವ್ವ ಹೋಗಲಿಲ್ಲ.
ಮಗನ ಮದುವೆ ಗೌಜಿ ಮುಗಿದು ಹತ್ತು ದಿನ ಬಿಟ್ಟು ಮನೆಗೆ ಮರಳಿದ ಪಟೇಲರಿಗೆ ಆಘಾತವಾಗಿತ್ತು! ಪಾರಕ್ಕನ ಕೊಳೆತ ಶವ ನಡುಕೋಣೆಯೊಳಗೆ ಇತ್ತು. ಹಾಸಿಗೆಯಲ್ಲಿ ಮಲಗಿದಲ್ಲಿಯೇ ಪ್ರಾಣ ಹೋಗಿರಬೇಕು. ದೇಹದ ಹಸಿನೀರು ಬಸಿದು ಹಾಸಿಗೆ ಒದ್ದೆಯಾಗಿತ್ತು. ಕೈಕಾಲಿನ ಬೆರಳುಗಳು ಗಂಜಿ ತಿಳಿ ಹೆಪ್ಪುಗಟ್ಟಿದಂತೆ ಮೆತ್ತಗಾಗಿದ್ದವು. ಮೂಕವ್ವ ಕೆಲಸದಾಳುಗಳ ಹತ್ತಿರ ಅತ್ತು ಕರೆದು ನೆಲಮಾಳಿಗೆಯತ್ತ ತೋರಿಸಿ ಸನ್ನೆಯಲ್ಲಿ ಏನೋ ಹೇಳಿದ್ದಳಂತೆ. ಆದರೆ ಅವರಿಗೆ ಏನು ಅಂತಲೇ ಅರ್ಥ ಆಗಿರಲಿಲ್ಲ. ಅಲ್ಲದೆ ಪಾರಕ್ಕನ ಅನುಮತಿ ಇಲ್ಲದೆ ಈಗ ಆ ಮನೆಯೊಳಗೆ ಅವರಿಗೆ ಎಲ್ಲೆಂದರಲ್ಲಿ ಓಡಾಡುವ ಹಾಗಿರಲಿಲ್ಲ. ಪಾರಕ್ಕನ ಶವದ ಕುತ್ತಿಗೆಯಲ್ಲಿ ಆಳವಾಗಿ ಕಚ್ಚಿದ ಗಾಯವಿತ್ತು. ಆ ಗಾಯದ ತೂತಿನಲ್ಲಿ ಕೀವಾಗಿ ಅದರಿಂದ ಅನ್ನದ ಅಗಳಿನ ಹಾಗೆ ಕಾಣುವ ಬಿಳೀ ದುಂಡಗಿನ ಹುಳುಗಳು ಹೊರಗೆ ಇಣುಕುತ್ತಿದ್ದವು. ಶವ ಕೊಳೆತು ನಾರುತ್ತಿದ್ದ ಕಾರಣ ಉಳಿದವರು ಯಾರೂ ಅದನ್ನೆಲ್ಲ ಅಷ್ಟು ಸರಿಯಾಗಿ ಗಮನಿಸಲು ಹೋಗಲಿಲ್ಲ. ಬೇಗ ಒಮ್ಮೆ ಚಟ್ಟಕ್ಕಿಟ್ಟರೆ ಸಾಕು ಅನ್ನುವ ಅವಸರ ಸಹಜವಾಗಿ ಎಲ್ಲರದ್ದಾಗಿತ್ತು. ಆದರೆ ಅಂತ್ಯಕ್ರಿಯೆ ನಡೆದ ನಂತರ ಮೂಕವ್ವ ಜೋರಾಗಿ ಅಳುತ್ತ ಅದೇನೋ ವಿಚಾರ ಕೈಸನ್ನೆಯಲ್ಲಿ ಪಟೇಲರ ಹತ್ತಿರ ಹೇಳುತ್ತಿದ್ದಳಂತೆ!
ವೃದ್ಧಾಪ್ಯದ ದಣಿವು ಪಟೇಲರ ದೇಹಕ್ಕೆ ಜಾಸ್ತಿಯೇ ಅಂಟಿಕೊಂಡಿತ್ತು. ಸದಾ ಚಿಂತಾಮಗ್ನರಾಗಿರುತ್ತಿದ್ದರು. ಯಾರಲ್ಲೂ ಅಗತ್ಯಕ್ಕಿಂತ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ. ಮೂಕವ್ವ ಕೂಡ ಅಷ್ಟೊಂದು ಗೆಲುವಾಗಿರಲಿಲ್ಲ. ಯಾಂತ್ರಿಕವಾಗಿ ಅವಳ ಕೆಲಸ ಮಾಡುತ್ತಿದ್ದಳು. ರಾತ್ರಿ ಚೆನ್ನಾಗಿ ನಿದ್ದೆ ಮಾಡುತ್ತಿರಲಿಲ್ಲ ಎಂದು ಕಾಣುತ್ತದೆ. ಕಣ್ಣು ಕೆಂಪಗಾಗಿ ಮುಖ ಊದಿಕೊಂಡಿರುತ್ತಿತ್ತು. ಒಂದು ದಿನ ಅವಳ ಬಲ ಅಂಗೈಯಲ್ಲಿ ಮಾಂಸ ಕಿತ್ತು ಹೋಗಿದ್ದು ನೋಡಿದ ಯಾರೋ, ಏನಾಯಿತು? ಅಂತ ವಿಚಾರಿಸಿದರಂತೆ. ಅವಳು ಏನು ಉತ್ತರ ಹೇಳಿದಳೋ! ಕೆಲಸದವರಿಗೆ ಆಕೆಯ ಭಾಷೆ ಅರ್ಥ ಆಗುತ್ತಿರಲಿಲ್ಲ. ಅದೇ ದಿನ ಸಂಜೆ ಪಟೇಲರು ಸಂಕೋಲೆಯೊಂದನ್ನು ಮೂಕವ್ವನ ಕೈಯಲ್ಲಿ ಕೊಡುತ್ತಿರುವುದನ್ನು ನೋಡಿದ ಕೆಲಸದವರಿಗೆ ಸಂಶಯ ಹುಟ್ಟಿದರೂ ಪಟೇಲರಲ್ಲಿ ಕೇಳುವ ಧೈರ್ಯ ಬಾರದೆ ಅವರವರೇ ಚರ್ಚಿಸಿಕೊಂಡು ಸುಮ್ಮನಾಗಿದ್ದರು. ಆನಂತರ ಪಟೇಲರು ವಿಪರೀತ ಜ್ವರದಿಂದ ನಾಲ್ಕು ದಿನ ಮಲಗಿದಲ್ಲಿಯೇ ಆದರು. ಆಗ, ರಾತ್ರಿ ತಂಗಿದ್ದ ಸಾವಿತ್ರಿಯ ಮಾತಿನಿಂದ ಊರಿನವರಿಗೆ ಪಟೇಲರ ಮನೆಯ ಬಗ್ಗೆ ಒಂದು ರೀತಿಯ ಭಯ ಆವರಿಸಿತ್ತು. ರಾತ್ರಿ ಆಗಾಗ ಗರ್ರು… ಗರ್ರು… ಅಂತ ಅಸ್ಪಷ್ಟ ಧ್ವನಿ ಬರುತ್ತಿತ್ತಂತೆ! ಮನುಷ್ಯನೋ, ಯಾವುದೋ ಪ್ರಾಣಿಯ ದ್ವನಿಯೋ ಎಂದು ಗೊತ್ತಾಗುತ್ತಿಲ್ಲ. ಆ ಮನೆಯಲ್ಲಿ ಪ್ರೇತ ಸೇರಿಕೊಂಡಿರುವುದಂತೂ ಖಂಡಿತಾ. ಮೂಕವ್ವನಿಗೆ ಕಿವಿ ಕೇಳಿಸುವುದಿಲ್ಲ. ಪಟೇಲರಿಗೆ ಕೇಳುವುದಿಲ್ವಾ? ಪ್ರಾಯ ಆಯಿತಲ್ವಾ, ಅವರಿಗೂ ಈಗ ಕಿವಿ ಸರಿಯಾಗಿ ಕೇಳಿಸೋದಿಲ್ಲ ಅಂತ ಕಾಣುತ್ತದೆ. ಹೀಗೆ ಏನೇನೋ ಮಾತುಗಳು.
“ಈ ಪ್ರಾಯದ ಕಾಲದಲ್ಲಿ ಈ ಮೂಕಿ ಜೊತೆ ನೀವು ಇಲ್ಲಿ ಇರುವುದು ಎಷ್ಟು ಸುರಕ್ಷಿತ, ಪಟೇಲರೇ? ಮಗನ ಮಾತಿಗೆ ಹೂಂ… ಅಂದು ಬಿಡಿ. ಅದೇ ಅಲ್ವಾ ಉತ್ತಮ” ದೇವಸ್ಥಾನದ ಬೀದಿಯಲ್ಲಿ ಎದುರಾದ ಪಟೇಲರ ಹತ್ತಿರ ಪಂಕಜಕ್ಕ ನಯವಾಗಿ ಹೇಳಿದರು. ಅವರು ಆಕೆಯತ್ತ ನೋಡುವ ಧೈರ್ಯ ತೋರಿಸಲಿಲ್ಲ.
“ವಿಷಯ ಹೌದು, ಆದರೆ ಮೂಕವ್ವ ನನ್ನ ಜೊತೆ ಬರೋದಕ್ಕೆ ಒಪ್ಪೋದಿಲ್ಲ. ಅವಳು ಈ ಮನೆ ಬಿಟ್ಟು ಬರಲ್ಲ. ಮಗನಿಗೆ ನಾನು ಅವನ ಜೊತೆ ಬಂದು ಇರಬೇಕು ಎನ್ನುವ ಆಸೆಯೇನು ಇಲ್ಲ. ಅವನು ಈ ಮನೆಯನ್ನು ಅದೇನೋ ಹೆರಿಟೇಜ್ ಹೋಮ್ ಅಂತ ಮಾಡುತ್ತಾನಂತೆ. ಅವನದ್ದು ದುಡ್ಡಿನ ಲೆಕ್ಕಾಚಾರ. ನಾವು ಇಲ್ಲಿಯ ಹಳೆಯ ತುಕ್ಕು ಹಿಡಿದ ಕಂಬಗಳಷ್ಟು ಬೆಲೆಬಾಳುವುದಿಲ್ಲ. ಏನೇ ಅದ್ರೂ ಮೂಕವ್ವನನ್ನು ಸದ್ಯ ಇದಕ್ಕೆ ಒಪ್ಪಿಸುವುದಕ್ಕೆ ಆಗಲ್ಲ ಪಂಕಜಕ್ಕ” ಅವರ ಮಾತಿನಲ್ಲಿ ಅವ್ಯಕ್ತವಾದ ನೋವಿತ್ತು.
“ಕಾರಣ ಏನೇ ಇರಲಿ, ನೀವು ಮಗನ ಜೊತೆ ಹೋಗುವುದು ಉತ್ತಮ ಅಂತ ನನಗನ್ನಿಸುತ್ತೆ. ಆವತ್ತು ನೋಡಿ ನೀವಿಲ್ಲದಿರುವಾಗ ಪಾರುವಿನ ಪ್ರಾಣ ಹೋಯಿತು. ಈ ಮೂಕವ್ವ ಹೇಳಿದ್ದು ಯಾರಿಗಾದ್ರು ಅರ್ಥ ಆಯಿತಾ? ನಾಳೆ ನಿಮಗೂ ರಾತ್ರೋರಾತ್ರಿ ಏನಾದರೂ ಹುಷಾರು ತಪ್ಪಿತು ಅಂತ ಇಟ್ಕೊಳ್ಳಿ, ಯಾರಿಗೆ ಗೊತ್ತಾಗುತ್ತದೆ?” ಅವರು ತಮ್ಮ ಹಿರಿತನದ ಭಾವದಲ್ಲಿ ಹಿತನುಡಿಯನ್ನಾಡಿದ್ದರು. ಪಾರಕ್ಕನ ಸಾವಿನ ವಿಷಯ ಎತ್ತುತ್ತಿದ್ದ ಹಾಗೆ ಪಟೇಲರ ಮೊಗ ಬಿಳುಚಿಕೊಂಡಿತು. ಪಂಕಜಕ್ಕನ ಮಾತಿಗೆ ಏನೂ ಉತ್ತರ ಹೇಳದೆ ಅವರು ವೇಗವಾಗಿ ಮುಂದೆ ನಡೆದುಹೋದರು. ಪಂಕಜಕ್ಕ ದೀರ್ಘ ನಿಟ್ಟುಸಿರು ಬಿಟ್ಟು ತಮ್ಮ ಮನೆಯ ಕಡೆಗೆ ನಡೆದರು.
ಮರುದಿನ ಮಗ ಕಾರು ತೆಗೆದುಕೊಂಡು ಕರೆದೊಯ್ಯಲು ಬರುತ್ತೇನೆ ಎಂದಿದ್ದ. ಮೂಕವ್ವನನ್ನು ಅದ್ಯಾವುದೋ ಆಶ್ರಮಕ್ಕೆ ಸೇರಿಸುತ್ತಾನಂತೆ. ಅವರಿಗೆ ವರ್ಷಕ್ಕೆ ಇಂತಿಷ್ಟು ದುಡ್ಡು ಕೊಟ್ಟರೆ ಸಾಕು, ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವಳದ್ದು ಅನಾಗರಿಕ ವರ್ತನೆ, ಪೇಟೆಯ ಮನೆಯಲ್ಲಿ ಅವಳನ್ನು ಇಟ್ಟುಕೊಂಡರೆ ಎಲ್ಲರಿಗೂ ಕಿರಿಕಿರಿಯಾಗುತ್ತದೆ ಅಂತ ಹೇಳಿದ್ದ. ನಡುರಾತ್ರಿ ಪಟೇಲರು ಜಗಲಿಯಲ್ಲಿ ಒಂಟಿಯಾಗಿ ಕುಳಿತಿದ್ದರು. ಮಗ ಮೂಕವ್ವನ ಬಗ್ಗೆ ಹೇಳಿದ ಮಾತು ಮತ್ತೆ ಮತ್ತೆ ಅವರನ್ನು ಚುಚ್ಚುತ್ತಿತ್ತು. ಅವರಿಗೆ ಎದುರಾಗಿ ಮೊಣಕಾಲು ಮಡಚಿ ಅದರ ಮೇಲೆ ಗದ್ದವಿರಿಸಿ ಮೂಕವ್ವ ಕುಳಿತಿದ್ದಳು. ಅವಳ ಕಂಗಳು ಅಸಹಾಯಕತೆಯಿಂದ ನೀರು ಸುರಿಸುತ್ತಿದ್ದವು. ಆಗ ಅವರಿಬ್ಬರಿಗೂ ಪರಿಚಿತ ಆ ದ್ವನಿ ಜೋರಾಗಿ ಕೇಳಲಾರಂಭಿಸಿತು. ಮೂಕವ್ವನಿಗೆ ಏನನ್ನಿಸಿತೋ ಪಕ್ಕನೆ ಏನೋ ನೆನಪಾದ ಹಾಗೆ ಎದ್ದು ಅಡುಗೆಮನೆಗೆ ಹೋದವಳೇ ತಟ್ಟೆಗೊಂದಿಷ್ಟು ಅನ್ನ ಸಾಂಬಾರು ಹಾಕಿಕೊಂಡು ಅದನ್ನೆತ್ತಿಕೊಂಡು ಒಳಹೋದಳು. ಪಟೇಲರು ಟಾರ್ಚ್ ತೆಗೆದುಕೊಳ್ಳುವಂತೆ ಸನ್ನೆ ಮಾಡಿದರೂ ಆಕೆಯ ಗಮನಕ್ಕೆ ಅದು ಬರಲಿಲ್ಲ. ಅವಳು ಅವಸರದಲ್ಲಿದ್ದಳು.
ಸ್ವಲ್ಪ ಹೊತ್ತಾದ ನಂತರ ಆಕೆ ಬಂದಾಗ ಮುಖದಲ್ಲಿ ಯಾವ ಭಾವವೂ ಇರಲಿಲ್ಲ. ಕತ್ತಲೆಯ ಬಲೆಯಲ್ಲಿ ಸಿಲುಕಿದ ಕೀಟಗಳು ಕಿರುಚುತ್ತಿದ್ದವು. ನಡುರಾತ್ರಿ ಇದ್ದಕ್ಕಿದ್ದಂತೆ ಪಟೇಲರ ಬರಿ ಮೈಗೆ ತಣ್ಣನೆ ದೇಹ ಸ್ಪರ್ಶದ ಅನುಭವವಾದಾಗ ಅರೆ ನಿದ್ದೆಯ ಅಮಲಿನಲ್ಲೇ ಮೆಲ್ಲ ಕೈಯಲ್ಲಿ ತಡವಿದರು. ಯಾರೋ ಪಕ್ಕದಲ್ಲಿ ಮಲಗಿದ್ದಾರೆ ಅನ್ನಿಸಿ ಪೂರ್ತಿ ಎಚ್ಚರವಾಯಿತು. ಅರೆನಿದ್ರೆಯ ಭ್ರಮೆಯಿರಬಹುದು ಎಂದು ನಿಟ್ಟುಸಿರಿಟ್ಟು ಏನು ಆಗದಂತೆ ಮಗ್ಗುಲು ಬದಲಾಯಿಸಿ ಮಲಗಿದರು. ಹೊತ್ತು ಮೂಡುವುದಕ್ಕೆ ಇನ್ನೂ ಹೊತ್ತಿರಬೇಕು. ಇರುಳಿಗೆ ಮತ್ತೇರಿದೆ. ಎಲ್ಲವೂ ಗೊತ್ತಿದ್ದು ಏನೂ ಗೊತ್ತಿಲ್ಲದ ಹಾಗೆ ಕತ್ತಲು ಜಡ ಹಿಡಿದು ಎಲ್ಲಾ ಬಿಚ್ಚಿಟ್ಟು ಕಪ್ಪು ಚಾದರದೊಳಗೆ ಹೊರಳಾಡುತ್ತಿತ್ತು. ಮೋಡಗಳು ನೀರ ಭಾರಕ್ಕೆ ಸೋರುತ್ತಿದ್ದವು. ಹನಿ ನೀರು ನೆಲಕ್ಕೆ ಹಾರಿ ಪುಟಾಣಿ ಹುಡುಗಿ ಗಾಳಿಯಲ್ಲಿ ಲಂಗ ಹರವಿದಂತೆ ನೀರು ಹರವಿಟ್ಟು ನಲಿವ ಸದ್ದನ್ನು ಕೇಳಿ ಮತ್ತೊಮ್ಮೆ ಅರೆ ಎಚ್ಚರಗೊಂಡ ಪಟೇಲರಿಗೆ ಇದ್ದಕ್ಕಿದ್ದಂತೆ ತೀರಾ ಸಮೀಪದಲ್ಲಿ ಯಾವುದೋ ಅಸ್ಪಷ್ಟ ಆಕೃತಿ ಚಲಿಸುತ್ತಿರುವಂತೆ ಅನ್ನಿಸಿತು. ಮೂಕವ್ವನಿಗೆ ಗಾಢ ನಿದ್ರೆ. ಪಟೇಲರು ಮತ್ತೆ ನಿದ್ರಾದೇವಿಯ ಸೆರಗಿನ ಚುಂಗಿನಲ್ಲಿ ಬಲವಂತವಾಗಿ ಮುಖ ಹುದುಗಿಸಬೇಕು ಎನ್ನುವಾಗ ತೀರ ಹತ್ತಿರದಿಂದ ಆ ಗರ ಗರ ದ್ವನಿ! ಅವರು ಬೆಚ್ಚಿಬಿದ್ದು ಧಡಕ್ಕನೆ ಎದ್ದುದ್ದರಿಂದ ಮೂಕವ್ವನು ಭಯಗೊಂಡು ಒಮ್ಮೆಗೆ ಬೊಬ್ಬೆ ಹಾಕುತ್ತಾ ಎದ್ದು ಕುಳಿತಳು. ಅವಳಿಗೆ ಏನು ಎತ್ತ ಗೊತ್ತಾಗಲಿಲ್ಲ. ಕಣ್ಣು ಹೊಸಕಿಕೊಳ್ಳುತ್ತಿದ್ದಳು. ಆ ಕ್ಷಣದ ಗಾಬರಿ, ಭಯದಲ್ಲಿ ಪಟೇಲರಿಗೆ ಆಕೆ ಮೂಕಿ ಎನ್ನುವುದೇ ಮರೆತು ಹೋಗಿರಬೇಕು!
“ಏ… ಏ… ನೀನು ಬಾಗಿಲ ಚಿಲಕ ಹಾಕದೆ ಬಂದಿಯಾ? ಅ…ಅ…ದು ಹೊ..ಹೊ..ರಗೆ ಬಂದಿದೆ ನೋಡು…?”
ಭೀತಿಯಿಂದ ಅವರ ನಾಲಗೆ ಸರಿಯಾಗಿ ಹೊರಳುತ್ತಿರಲಿಲ್ಲ. ಅವರಿಗಿಂತ ಹೆಚ್ಚು ಅವಳು ಭಯಕೊಂಡಿದ್ದಳು. ಮುಂದೆ ಹೆಜ್ಜೆ ಇಡುವ ಧೈರ್ಯ ಆಕೆಗೆ ಇರಲಿಲ್ಲ. ನಿಧಾನಕ್ಕೆ ಅವರತ್ತ ಬರುತ್ತಿದ್ದ ಆ ಆಕೃತಿಯ ಕೈಯಲ್ಲಿ ಏನೋ ಇತ್ತು. ಕತ್ತಲೆಯಲ್ಲಿ ಎಲ್ಲವೂ ಅಸ್ಪಷ್ಟವಾಗಿತ್ತು. ಪಟೇಲರು ಹಿಂದೆ ಹಿಂದೆ ಸರಿದಂತೆ ಮೂಕವ್ವನೂ ಹಿಂದೆ ಹೆಜ್ಜೆಯಿಟ್ಟರೆ ಆ ಆಕೃತಿ ಒಮ್ಮೆಗೆ ಮೂಕವ್ವನನ್ನು ಗಟ್ಟಿಯಾಗಿ ಎಳೆದು ಹಿಡಿದು ನೆಲಕ್ಕೆ ಕೊಡವಿತ್ತು. ಅವಳಿಗೆ ಬಿಡಿಸಿಕೊಳ್ಳುವ ಯಾವ ಅವಕಾಶವೂ ಇರಲಿಲ್ಲ. ಅವಳು ಕೊಸರಾಡಿದಳು. ಪಟೇಲರು ಪ್ರಾಣ ಭಯದಿಂದ ಎತ್ತ ಓಡುವುದೆಂದು ಕತ್ತಲಲ್ಲಿ ಅತ್ತಿತ್ತ ನೋಡಿ ಸಿಕ್ಕಲ್ಲೆ ಮುಂದಡಿ ಇಡಲು ಹೋದಾಗ ಬಾಗಿಲು ಕಾಲಿಗೆ ತಗುಲಿ ನೆಲಕ್ಕೆ ವಾಲಿದರು. ಪ್ರಾಣಭಯದಿಂದ ಅವರಿಗೆ ಬೊಬ್ಬೆ ಹಾಕುವುದಕ್ಕೂ ಆಗುತ್ತಿರಲಿಲ್ಲ. ಅಲ್ಲಲ್ಲಿ ಹಲ್ಲಿಂದ ಕಚ್ಚಿ ಕಿತ್ತು ಗರಗಸದಂತಿದ್ದ ಉಗುರು, ಚರ್ಮ ಮಾಂಸ ಬಿಡಿಸಿ ಕತ್ತಿಗೆ ಊರುತ್ತಾ ಆಳಕ್ಕಿಳಿದಂತೆ ಉಸಿರಿಗೆ ಬೇಲಿ ತೊಡಿಸಿಕೊಂಡವರAತೆ ನರಳಾಡಿದರು.
“ಬಿಟ್ಟು ಬಿಡೋ…, ನಾನು ನಿನ್ನ ಅಪ್ಪಾ….”
ಅಷ್ಟೇ ಹೇಳಿದ್ದು. ಮನೆಯ ಸುಣ್ಣ ಬಳಿದ ಗೋಡೆಯಲ್ಲಿ ಈಗ ರಕ್ತದ ಅಡ್ಡಾದಿಡ್ಡಿ ರೇಖೆಗಳು!
ಮುಂಜಾನೆ ಕೆಲಸಕ್ಕೆ ಬಂದವರಿಗೆ ತೆರೆದಿಟ್ಟ ಮನೆಯ ಬಾಗಿಲು ಮತ್ತು ಚಾವಡಿಯಲ್ಲಿ ಬೆತ್ತಳಾಗಿ ಬಿದ್ದ ಎರಡೂ ಶವಗಳು ಕಾಣಿಸಿದವು. ಅವರಿಬ್ಬರ ದೇಹದ ಮಾಂಸವನ್ನು ಅಲ್ಲಲ್ಲಿ ಕಿತ್ತು ತಿನ್ನಲಾಗಿತ್ತು. ಚಾವಡಿಯ ತುಂಬೆಲ್ಲಾ ಹೆಪ್ಪುಗಟ್ಟಿ ನಿಂತ ಕೆಂಪು ಮಾಸಿ ಕಪ್ಪಾದ ನೆತ್ತರ ಗೀಟುಗಳು. ಆ ದೃಶ್ಯ ನೋಡುವುದಕ್ಕೆ ಭೀಕರವಾಗಿ ಕಾಣುತ್ತಿತ್ತು. ಇಬ್ಬರೂ ನಿಗೂಢ ರೀತಿಯಲ್ಲಿ ಬರ್ಬರವಾಗಿ ಕೊಲೆಯಾದ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಶವಗಳನ್ನು ವೀಕ್ಷಿಸಲು ಅಲ್ಲಿ ಬಂದು ಸೇರುತ್ತಿರುವ ಜನಸಂದಣಿಯನ್ನು ಕಂಡು ಬೆದರಿ ನಾಲ್ಕು ಕಾಲಿನಲ್ಲಿ ತೆವಲುತ್ತಾ ಆ ಮನುಷ್ಯ ಜೀವಿ ಮೆಲ್ಲ ಮೆಲ್ಲನೆ ಪೊದೆಯತ್ತ ಸಾಗಿ, ಅಲ್ಲಿ ಮರೆಯಲ್ಲಿ ಅವಿತುಕೊಳ್ಳಲು ಪ್ರಯತ್ನಿಸುತ್ತಿತ್ತು. ನೀರು ಕಾಣದೆ ಎಲುಬಿಗಂಟಿದ ಒಣ ಚರ್ಮವನ್ನು ಪರಪರನೆ ಕೆರೆದು ಹುಡಿಯುದುರಿಸಿ ಕಣ್ಣರಳಿಸಿ ಸುತ್ತಲೂ ಬೆರಗಿನಿಂದ ನೋಡುತ್ತಿತ್ತು! ಜಡ್ಡುಗಟ್ಟಿದ ಕೂದಲ ಗೊಂಚಲು ಹರವಿ, ಈವರೆಗೆ ಬಟ್ಟೆ ಸೋಕದ ನಗ್ನ ದೇಹದಲ್ಲಿ ತುಂಬಿದ ಉದ್ದಿಗ್ನತೆಗೆ ಏದುಸಿರು ಬಿಸುಟು, ಇಲಿ ಜಿರಲೆಗಳ ಹಸಿ ಮಾಂಸ ಅರಗಿಸಿದ ಆ ಜೀವ, ಬಣ್ಣದಂಗಿಯ ಬಲಿಗಳತ್ತ ಕದ್ದು ನೋಡಿ ಜೊಲ್ಲು ಸುರಿಸುತ್ತಾ ಬಾಯಿಗಂಟಿದ ಒಣ ರಕ್ತವನ್ನು ಸವರಿ ಆಸೆಯಿಂದ ನೆಕ್ಕುತ್ತಿತ್ತು!.