ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
61ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ನಿಗೂಢ ಜಾಲ..!

ಇತಿಹಾಸದ ಅದೆಷ್ಟು ಅಮೂಲ್ಯ ದಾಖಲೆಗಳ ಅರಿವಿಲ್ಲದೆ ಕಲ್ಲುಗಳ ಮೇಲೆಯೇ ನಮ್ಮ ಜನ ಬಟ್ಟೆ ತೊಳೆಯುತ್ತಿಲ್ಲವೆ? ದೇವಸ್ಥಾನಗಳ ಅಪರೂಪದ ಶಿಲ್ಪಗಳನ್ನು ಹಾಳುಮಾಡಿಲ್ಲವೆ? ಸಾವಿರಾರು ವರ್ಷಗಳ ಪುರಾತನ ಗೋಡೆಗಳ ಮೇಲೆಶಿಲ್ಪಾ ಲವ್ ಶಿವಣ್ಣಎಂದು ತಮ್ಮ ಅಮರಪ್ರೇಮವನ್ನು ಕೆತ್ತಿ ಅವುಗಳನ್ನು ಹಾಳುಮಾಡಿಲ್ಲವೆ ಎಂದುಕೊಳುತ್ತಾ

ಪುಣ್ಯಕ್ಕೆ ಸುಣ್ಣ ಅಷ್ಟೇ ಬಳಿದಿದ್ದಾರೆ, ಗುಡಿಯ ಕಲ್ಲನ್ನು ಕಿತ್ತುಹಾಕ್ಕೊಂಡ್ಹೋಗಿ ಮನೆಗೆ ಹಾಸುಗಲ್ಲೊ, ಬುನಾದಿಗೋ ಹಾಕಿಲ್ಲವಲ್ಲ ಸಾರ್, ಅದಕ್ಕೆ ಖುಷಿಪಡಿಎಂದ ಕೆಂಪರಾಜು. ಕರ್ಣನೂ ವಿಷಾದದ ನಗೆ ನಕ್ಕ.

ಈ ಜಗತ್ತಿನಲ್ಲಿರೋ ಜನರಿಗೆಲ್ಲ ದುಡ್ಡು ಮಾಡೊದೊಂದೇ ಹುಚ್ಚು. ಅದಕ್ಕಿಂತ ದೊಡ್ಡದು ಏನೂ ಇಲ್ಲ ಅನ್ನೋ ಭ್ರಮೆಯಲ್ಲಿದ್ದಾರೆ ಅಂತ ಹೇಳುತ್ತಲೇ ದುಡ್ಡು ಮಾಡುತ್ತಿದ್ದ ಕಂಟ್ರಾಕ್ಟರ್ ಶಿವಣ್ಣ ಪಂಚಾಯತಿಯ ಎಲ್ಲ್ಲ ಯೋಜನೆಗಳಿಗೂ ಪಂಚರ್ ಹಾಕಿ ದುಡ್ಡು ಹೊಡೆಯುತ್ತಿದ್ದ ಮೆಂಬರ್ ವೆಂಕಟೇಶಿ. ದುಡ್ಡು ಮಾಡೋಕೆ ಅಂತಾನೇ ‘ದೇವ್ರಿದಾನೇ ಸ್ವಾಮಿ’ ಅಂತಿದ್ದ ಮಹಾಲಿಂಗಸ್ವಾಮಿ, ಅದೇ ದುಡ್ಡು ಮಾಡೋಕೆ ಅಂತ ಬಯಲುಸೀಮೆ ಬಿಟ್ಟು ಬೆಂಗಳೂರು ಸೇರಿದವರು. ಇವರೆಲ್ಲರ ಮಧ್ಯೆ ಇನ್ನೂ ವಿಚಿತ್ರವಾಗಿದ್ದ ಸೂಜಿ ಸೂರಣ್ಣ ಮತ್ತು ಅವನ ಮೊಮ್ಮಗ ಕಿಟ್ಟಿ. ಇಂತಹ ಮಹಾವಿಚಿತ್ರ ಮನುಷ್ಯ ಪ್ರಾಣಿಗಳಿದ್ದ ಊರಿನ ಗರ್ಭದಲ್ಲಿ ಅಡಗಿದ್ದ ನಿಗೂಢವೊಂದರ ಜಾಲವನ್ನು ಹುಡುಕಿಕೊಂಡು ಬಯಲುಸೀಮೆಯ ಆ ಊರಿನೆಡೆಗೆ ಕರ್ಣ ಹೊರಟು ಬಂದಿದ್ದ.

* * *

“ಈ ಮನ್ಸಾ ಅನ್ನೋನು ವಿಚಿತ್ರ. ಯಾವ್ದಕ್ಕೂ ಅವ್ನಿಗೆ ಸಾಕಪ್ಪಾ ಅನ್ಸೋದೆ ಇಲ್ಲ. ಹುಟ್ಟಿದಾವ್ನಿಗೆ ಹೊಟ್ಟೆ ತುಂಬುಸ್ಕಳ್ ಬೇಕು, ಹೊಟ್ಟೆ ತುಂಬ್ತಾ ಕೂಡಿಡ್ ಬೇಕು, ತನ್ಗೆ ಸಾಕು ಅನಿಸ್ತಾ ಅವ್ನ ಹೆಂಡ್ತಿ, ಮಕ್ಳು, ಮೊಮ್ಮಕ್ಕಳು… ಜಗತ್ಗೇ ಕಾಣ್ದೆ ಇರೋ ಮಕ್ಳಿಗೂ ಕೂಡ ಆಸ್ತಿ ಮಾಡೋಕೆ ಹೋಗ್ತಾನೆ. ಇವತ್ ಬದ್ಕಿರೋ ಮನ್ಷಾ, ನಾಳೆ ಸೂರ್ಯ ಹುಟ್ಟೊದ್ರೊಳಗೆ ಬದ್ಕಿರ್ತಾನೊ, ಹೊಗೆ ಹಾಕಿಸ್ಕೊಂಡಿರ್ತಾನೊ ಗೊತ್ತಿಲ್ಲ. ಆದ್ರೂ ರೊಕ್ಕ ಮಾಡ್ಬೇಕು, ಎಂಗಾದ್ರೂ ಮಾಡಿ ರೊಕ್ಕ ಮಾಡ್ಬೇಕು ಅಂತ ಊಟ, ನಿದ್ರೆ ಬಿಟ್ಗಂಡು ಬದ್ಕಿದಾನಾ ಸತ್ನಾ ಅಂತ್ಲೂ ಯೋಚ್ನೇ ಮಾಡ್ದೆ ಕಾಸಿನ ಹಿಂದೆ ಕತ್ತೆ ತರ ಹೋಗ್ತಾನೆ” – ಅಂತ ಪಂಚಾಯತಿ ಕಟ್ಟೆ ಮೇಲೆ ಕುತ್ಕೊಂಡು ಅಕ್ಕಪಕ್ಕದವರು ಕೇಳಿಸಿಕೊಳ್ತಿದಾರೊ, ಇಲ್ವೋ ಅನ್ನೋದರ ಪರಿವೆಯೂ ಇಲ್ಲದೆ ಕಂಟ್ರಾಕ್ಟರ್ ಶಿವಣ್ಣ ಬಾಯಿ ಬಡಿದುಕೊಳ್ಳುತಿದ್ದ. ಅಲ್ಲಿ ಕುಳಿತಿದ್ದ ಬೇರೆಯವರೂ ಮಾಡೋಕೆ ಏನೂ ಕೆಲಸವಿಲ್ಲದೆ ಅಲ್ಲಿ ಅಂಡೂರಿಕೊಂಡಿದ್ದರಿಂದ ಅವರೂ ಶಿವಣ್ಣನ ಆಲಾಪವನ್ನು ಕೇಳಿಸಿಕೊಂಡಂತೆ ಮಾಡುತ್ತಿದ್ದರು. ಶಿವಣ್ಣನ ಕಂಟ್ರಾಕ್ಟ್ ಮಹಿಮೆ ಗೊತ್ತಿದ್ದ ಕೆಲವರು, ‘ಕದ್ದು ಹಾಲು ಕುಡಿಯೊ ಕಳ್ ಬೆಕ್ಕು ಹಾಲನ್ನೇ ಕುಡಿಬೇಡಿ ಅಂದಗಾಯ್ತು’ ಅಂತ ಮನಸ್ಸಲ್ಲೇ ಅಂದುಕೊಳ್ಳುತ್ತಿದ್ದರು.

ಅಷ್ಟರಲ್ಲಿ ಶಿವಣ್ಣನ ಪ್ರವಚನವನ್ನು ತುಂಡರಿಸುವಂತೆ ಶಿವಗಂಗಾ ಬಸ್ಸಿನ ಹಾರನ್ ಕೇಳಿಬಂತು. ಪಂಚಾಯತಿ ಕಟ್ಟೆಯೇ ಪಾರಂಪರಿಕವಾಗಿ ಬಸ್‌ಸ್ಟಾಂಡ್ ಕೂಡ ಆಗಿದ್ದರಿಂದ ಬಸ್ಸಿನ ಡ್ರೈವರ್ ಅದಕ್ಕೆ ಇನ್ನೂ ಅರ್ಧ ಮೈಲಿ ಇದೆಯೆನ್ನುವಾಗಲೇ ಹಾರನ್ ಹಾಕಿಕೊಂಡು ಬರುತ್ತಿದ್ದದ್ದು ಸಂಪ್ರದಾಯ. ಇಮಾಮ್ ಸಾಬಿಯ ಅಲ್ಲಾಗೂ, ಬಸವಣ್ಣನ ಗುಡಿಯ ಸುಪ್ರಭಾತಕ್ಕೂ ಮೇಲೇಳದ ಮಹಾ ಸೊಂಬೇರಿಗಳೆಲ್ಲ್ಲ ಹಾರನ್ ಕೇಳಿ ಮೇಲೆದ್ದು ಚಾಪೆ ಸುತ್ತಿದರೆ, ಬೇರೆ ಊರಿಗೆ ಕೂಲಿಗೆ ಹೋಗುತಿದ್ದ ಹೆಂಗಸರು, ಪಟ್ಟಣದ ಪ್ರೈವೇಟ್ ಶಾಲೆಗೆ ಹೋಗುತಿದ್ದ ಮಕ್ಕಳು, ಬೇರೆಬೇರೆ ಕೆಲಸಕ್ಕೆ ಊರು ಬಿಡುವವರೆಲ್ಲರೂ ಮನೆ ಬಿಡುತ್ತಿದ್ದರು. ಗವರ್ನಮೆಂಟ್‌ನ ಕೆಂಪು ಬಸ್‌ಗಳೇ ಕಾಲಿಡದ ಆ ಊರಿನಲ್ಲಿ ಜನರು ಎಲ್ಲಿ ಕೈ ಒಡ್ಡುತ್ತಾರೋ ಅಲ್ಲೆಲ್ಲ ಬ್ರೇಕ್ ಹಾಕಿ ಹಾಕಿ ಪಂಚಾಯತಿಕಟ್ಟೆಗೆ ಬರುವಷ್ಟರಲ್ಲಿ ಹಾರನ್ ಸದ್ದು ಕೇಳಿಸಿಕೊಂಡವರೆಲ್ಲ ಪಂಚಾಯತಿಕಟ್ಟೆಯ ಬಳಿ ಹಾಜರಿರುತ್ತಿದ್ದರು. ಹಾಗಾಗಿ ಇನ್ನೂ ಪಂಚಾಯತಿಕಟ್ಟೆ ಅಷ್ಟು ದೂರ ಎನ್ನುವಾಗಲೇ ಡ್ರೈವರ್ ಹಾರನ್ನಿನ ಮೇಲೆ ಕೈಯಾಡಿಸುತ್ತ, ಪಂಚಾಯತಿಕಟ್ಟೆಯ ಬಳಿ ಬ್ರೇಕ್ ಹಾಕಿದ. ಬ್ರೇಕ್ ಬಿದ್ದಿದ್ದೇ ತಡ, ಕಿಟಕಿಗಳ ಮೂಲಕ ಒಂದೆರಡು ಟವೆಲ್ ಒಳನುಗ್ಗಿ ಸೀಟ್ ರಿಜರ್ವ್ ಮಾಡಿದರೆ, ಬಸ್ಸಿನ ಒಳಗಿದ್ದವರಿಗೆ ಕೆಳಗೆ ಇಳಿಯಲೂ ಬಿಡದೆ ಕೆಳಗಿದ್ದವರು ಬಸ್ ಹತ್ತುತ್ತಿದ್ದರು. ಮುಂಜಾನೆಯ ನಿದ್ದೆಗಣ್ಣಿನಲ್ಲಿದ್ದ ಕರ್ಣನನ್ನು “ರೀ ಎದ್ದೇಳ್ರೀ, ಚಿನ್ನೊಬನಹಳ್ಳಿ ಬಂತು. ಏನ್ ಜನಾನೋ ಬೆಳಬೆಳಗ್ಗೆ ನಿದ್ದೆ ಹೊಡ್ಕೊಂಡು” ಅಂತ ಅವನನ್ನು ದಾಟಿ, ಬಸ್ ಇಳಿಯುವವರಿಗೆ ದಾರಿ ಮಾಡಿಕೊಡುತ್ತ, “ಚಿನ್ನೊಬನಹಳ್ಳಿ ಇಳಿಯೋರು ಯಾರು ರ‍್ರೀ…” ಎಂದು ಕಂಡಕ್ಟರ್ ಹೇಳಿದ್ದು, ಡ್ರೈವರ್‌ನ ಹಾರನ್ನಿನ ಸದ್ದಿನಲ್ಲಿ, ಬಸ್ ಹತ್ತಿ ಇಳಿಯುವವರ ಗದ್ದಲದಲ್ಲಿ ಯಾರಿಗೂ ಕೇಳಲಿಲ್ಲ. ಬಸ್ ಇನ್ನೇನು ಹೊರಟಿತು ಅನ್ನುವಷ್ಟರಲ್ಲಿ ಕರ್ಣ ಕೆಳಗಿಳಿದ.

ಜನಗಳ ಜೊತೆ ಟಾರಿಲ್ಲದ ಮಣ್ಣು ರೋಡಿನ ಧೂಳನ್ನೂ ಹೊತ್ತು ಶಿವಗಂಗಾ ಬಸ್ ಮುಂದೆ ಸಾಗಿತು.

ಕರ್ಣ ಕೆಳಗಿಳಿದಿದ್ದೇ ತಡ ಪಂಚಾಯತಿಕಟ್ಟೆಯ ಮೇಲೆ ಕುಳಿತಿದ್ದ ಮುಖಗಳೆಲ್ಲ ಅವನತ್ತಲೇ ಮುಖ ತಿರುಗಿಸಿದವು. ಇನ್ನೂ ಮೂವತ್ತು ದಾಟಿಲ್ಲದ, ಈಗಿನ್ನೂ ಗಡ್ಡ ಮೀಸೆ ಕುಡಿಯೊಡೆದಿದ್ದ ಆ ಆಗಂತುಕನನ್ನು ಅವರೆಲ್ಲರೂ ಇದೇ ಮೊದಲಬಾರಿಗೆ ನೋಡುತ್ತಿದ್ದರು. ಹಾಗಾಗಿ ಅವನು ಇತ್ತ ಬರುತ್ತಿರುವುದನ್ನೇ ಕಂಡ ಶಿವಣ್ಣ, ಅವನ ಕಡೆ ತಿರುಗಿದ. ಬಂದ ಅಪರಿಚಿತ ವ್ಯಕ್ತಿ “ಇಲ್ಲಿ ಮೆಂಬರ್ ವೆಂಕಟೇಶ್ ಅವ್ರ ಮನೆ ಎಲ್ಲಿದೆ?” ಎಂದಿದ್ದೆ ತಡ, ಊರಿಗೆ ಕಾಲಿಟ್ಟ ಹೊಸ ಪ್ರಾಣಿಯ ಪರಿಚಯ ಮಾಡಿಕೊಳ್ಳುವ, ಆ ಪ್ರಾಣಿಯ ಕುಲ ಜಾತಕ ತಿಳಿಯುವ ಉದ್ದೇಶದಿಂದ ಮೆಂಬರ್ ವೆಂಕಟೇಶಿಯ ಮನೆಯನ್ನು ತೋರಿಸುವ ಕೆಲಸವನ್ನು ಶಿವಣ್ಣನೇ ವಹಿಸಿಕೊಂಡ. ಅಲ್ಲೇ ಕುಕ್ಕರಗಾಲಲ್ಲಿ ಕುಳಿತು, ಆಗಲೇ ಒಂದೆರಡು ಗಣೇಶ್ ಬೀಡಿ ಮುಗಿಸಿ, ವಿಮಾಲ್ ಬಾಯಿಗೆ ತುರುಕಿಕೊಂಡು ಕುಳಿತಿದ್ದ ತನ್ನ ಎಡಗೈ ಬಸ್ಯಾನಿಗೆ ಬೈದು, ಕರ್ಣನ ಲಗೇಜ್ ಎತ್ತಿಕೊಳ್ಳುವಂತೆ ಹೇಳಿದ. ಕೈಯಲ್ಲಿದ್ದ ವಿಮಾಲ್‌ನ ಧೂಳನೆಲ್ಲಾ ಶತಮಾನಗಳಿಂದ ತೊಳೆಯದೆ ಇದ್ದ ತನ್ನ ಪಂಚೆಗೆ ಒರಸಿಕೊಂಡು, ಲಗೇಜ್ ಹಿಡಿದು ಆ ಅಪರಿಚಿತನನ್ನೂ, ತನ್ನ ಧಣಿ ಶಿವಣ್ಣನನ್ನೂ ಹಿಂಬಾಲಿಸಿ ನಡೆದರೆ, ಇತ್ತ ಪಂಚಾಯತಿಕಟ್ಟೆಯಲ್ಲಿ ಅದ್ಯಾರಿರಬಹುದು ಅಂತ ಗುಸುಗುಸು ಶುರುವಾಗಿತ್ತು.

ಕರ್ಣನ ಜೊತೆ ಬರುತ್ತಿದ್ದ ಶಿವಣ್ಣನೇ ತನ್ನ ಪರಿಚಯ ಮಾಡಿಕೊಂಡ. ನಂತರ “ನೀವ್ಯಾರು, ಈ ಊರಿಗೆ ಯಾಕೆ ಬಂದಿದ್ದೀರಾ? ಮೆಂಬರ್ ವೆಂಕಟೇಶಿ ಮನೇಲಿ ಏನ್ ಕೆಲ್ಸಾ…” ಎಂದೆಲ್ಲ್ಲ ವಿಚಾರಿಸಿದ.

ಆ ಅಪರಿಚಿತ, “ನನ್ನೆಸ್ರು ಕರ್ಣ ಅಂತಾ, ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯಲ್ಲಿ ಆಫೀಸರ್. ನಿಮ್ಮೂರಿನಲ್ಲಿ ಶಿಲಾಯುಗದ ಕಾಲದ ಸಮಾಧಿ ಇದೆ ಅಂತ ನಮ್ಮ ಡಿಪಾರ್ಟ್ಮೆಂಟ್‌ಗೆ ಇನ್ಫಾರ್ಮೇಶನ್ ಇತ್ತು. ಹಾಗಾಗಿ ಅದ್ರ ಬಗ್ಗೆ ಸ್ಟಡಿ ಮಾಡೋಕೆ ನನನ್ನು ಕಳ್ಸಿದ್ದಾರೆ” ಎಂದು ಕರ್ಣ ಹೇಳಿದ. ಶಿವಣ್ಣನಿಗೆ ನಮ್ಮೂರಿನಲ್ಲಿ ಯಾವ ಸಮಾಧಿ ಇದೆ, ಸಮಾಧಿ ನೋಡೋಕೆ ಅಷ್ಟು ದೂರದಿಂದ ಈ ನನ್ನಮಗ ಬಂದ್ನಾ? ಅಲ್ಲಾ, ಗವರ್ನಮೆಂಟ್ ಅವ್ರೇ ಕಳ್ಸಿರಬೇಕಾದ್ರೆ ಏನೋ ದೊಡ್ ಡೀಲೇ ಇರ್ಬೇಕು. ಅದೂ ಅಲ್ದೇ ಆ ಪಂಚಾಯತಿ ವೆಂಕಟೇಶಿ ಮನೆಗೇ ಹೊಗ್ತಿದಾನೆ ಅಂದ್ರೆ ಏನೋ ದೊಡ್ಡ ವ್ಯವಹಾರ ಇರ್ಬೇಕು. ಆ ಮೆಂಬರ್ ಬಡ್ಡಿ ಮಗಾ ಏನೋ ಸಂಚು ಮಡಗವ್ನೇ – ಅಂದುಕೊಳ್ಳುತ್ತ ವೆಂಕಟೇಶಿ ಮನೆ ಕಡೆ ನಡೆದ.

ಮನೆಯ ಮುಂದೆ ಸೆಗಣಿ ಸಾರ್ಸಿ, ರಂಗೋಲಿ ಹಾಕುತ್ತಿದ್ದ ವೆಂಕಟೇಶಿಯ ಹೆಂಡತಿ ದೊಡ್ಡಕ್ಕ, ಮನೆಯ ಕಡೆಗೆ ಬೆಳ್ಳಂಬೆಳಗ್ಗೆ ಬಂದ ಶಿವಣ್ಣನನ್ನು ಮನಸಿನಲ್ಲೇ ಬೈದುಕೊಳುತ್ತ, ಅವನ ಜೊತೆ ಬಂದ ಅಪರಿಚಿತನನ್ನು ಬಿಟ್ಟಗಣ್ಣಿನಲ್ಲೇ ನೋಡಿ, ರಂಗೋಲಿ ಹಾಕುವುದನ್ನು ಬಿಟ್ಟು, ಅವರನ್ನೆಲ್ಲ ಮನೆಯ ಜಗಲಿಯ ಮೇಲೆ ಕೂರಿಸಿ, ಒಳಗೆ ದೇವರ ಪೂಜೆ ಮಾಡುತ್ತಿದ್ದ ಗಂಡನನ್ನು ಕರೆಯಲು ಹೋದಳು. ಹೊರಗೆ ಯಾರೋ ಅಪರಿಚಿತರು ಬಂದ ಸುದ್ದಿ ಗೊತ್ತಾಗಿ ಹೆಂಡತಿಯಲ್ಲಿ ಎಲ್ಲರಿಗೂ ಟೀ ತರಲು ಹೇಳಿ ವೆಂಕಟೇಶಿ ದೇವರಿಗೆ ಕೈ ಮುಗಿದು ಹೊರಬಂದ. ವೆಂಕಟೇಶಿ ಜಗಲಿಯ ಮೇಲೆ ಕುಳಿತವನನ್ನು ನೋಡಿದರೆ, ಅವನಿಗೂ ಅದ್ಯಾರು ಅಂತ ಗೊತ್ತಾಗಲಿಲ್ಲ.

ಕರ್ಣನೇ ತನ್ನ ಪರಿಚಯ ಮಾಡಿಕೊಂಡು, “ಬಂದ ಕೆಲಸ ಒಂದೆರಡು ವಾರ ಆಗಬಹುದು, ಅಲ್ಲಿಯವರೆಗೂ ಪ್ರವಾಸಿಮಂದಿರದಲ್ಲಿ ಉಳಿದುಕೊಳ್ಳೋಕೆ ಮೇಲಧಿಕಾರಿ ಹೇಳಿದ್ದಾರೆ” ಎಂದು ತನ್ನನ್ನು ಪರಿಚಯಿಸಿಕೊಂಡ. ಈಗ ವೆಂಕಟೇಶಿಯ ಜೊತೆಗೆ ಕಾಂಟ್ರಾಕ್ಟರ್ ಶಿವಣ್ಣನಿಗೂ ಪಜೀತಿಗಿಟ್ಟುಕೊಂಡಿತು. ಊರಿನಲ್ಲಿ ಪ್ರವಾಸಿಮಂದಿರ ಇದ್ರೆ ಅಲ್ವಾ, ಇವನಿಗೆ ಅಲ್ಲಿ ವ್ಯವಸ್ಥೆ ಮಾಡೋಕೆ? ಪ್ರವಾಸಿಮಂದಿರಕ್ಕೆ ಸ್ಯಾಂಕ್ಷನ್ ಆಗಿದ್ದ ದುಡ್ಡೆಲ್ಲವೂ ಅದಾಗಲೇ ವೆಂಕಟೇಶಿಯ ಉಗ್ರಾಣ ಸೇರಿದ್ದರೆ, ಅದರಲ್ಲಿ ಸ್ವಲ್ಪ ಪಾಲು ಕಾಂಟ್ರಾಕ್ಟ್ ಶಿವಣ್ಣನಿಗೂ ದಕ್ಕಿತ್ತು. ಇಬ್ಬರೂ ಸೇರಿ ಇಲ್ಲದೆ ಇರೋ ಪ್ರವಾಸಿಮಂದಿರವನ್ನು ಪೇಪರ್ ಮೇಲೆ ತೋರಿಸಿ ಸರ್ಕಾರದಿಂದ ಬಿಡುಗಡೆಯಾಗಿದ್ದ ಅಷ್ಟೂ ಹಣವನ್ನು ನುಂಗಿದ್ದರು. ಆಮೇಲೆ ಅದರ ದುರಸ್ತಿ ಅಂತಲೂ ಒಂದಷ್ಟು ಸರ್ಕಾರದ ಹಣ ಇವರ ಜೇಬು ಸೇರಿತ್ತು.

ಸುಮಾರು ಹೊತ್ತು ಯೋಚಿಸಿದರೂ ಬೇರೆ ಐಡಿಯಾ ಸಿಗದೆ ವೆಂಕಟೇಶಿಯೇ “ಏನ್ ಸಾರ್ ನೀವು, ಅಪರೂಪಕ್ಕೆ ನಮ್ಮೂರಿಗೆ ಬಂದಿದ್ದೀರಾ. ಹೋಗಿಹೋಗಿ ಪ್ರವಾಸಿಮಂದಿರದಾಗೆ ಇರ್ತೀನಿ ಅಂತೀರಲ್ಲ. ಊರಾಗೆ ನನ್ನ ಮರ್ಯಾದೆ ಏನ್ ಆಗ್ಬೇಡ, ಅತಿಥಿಯಾಗಿ ಬಂದೋವ್ರನಾ ಅಲ್ಲಿ ಇಟ್ರೆ ಇಷ್ಟು ದೊಡ್ಡ ಮನೆ ಕಟ್ಸಿ ಏನ್ ಪ್ರಯೋಜ್ನ” ಎನ್ನುವಷ್ಟರಲ್ಲಿ ಕರ್ಣ ಏನೋ ಮಾತನಾಡಲು ಬಾಯಿ ತೆರೆದ. ಅಷ್ಟರಲ್ಲಿ ಅವನಿಗೆ ಅವಕಾಶವೇ ಕೊಡದೆ ಶಿವಣ್ಣನು ತನ್ನ ಶಿಷ್ಯನಿಗೆ ಕರ್ಣನ ಲಗೇಜ್ ಒಳಗಿಡಲು ಆದೇಶ ಕೊಟ್ಟ. ಇನ್ನೂ ಇಲ್ಲಿದ್ದರೆ ಸಮಸ್ಯೆ ನನಗೇ ಒಕ್ಕರಿಸಿಕೊಂಡು ಬರುತ್ತದೆ ಎಂದುಕೊಂಡು ಶಿವಣ್ಣ ಅಲ್ಲಿಂದ ಕಾಲ್ಕಿತ್ತ.

ಕರ್ಣನಿಗೂ ಪ್ರವಾಸಿಮಂದಿರದಲ್ಲಿರಲು ಇಷ್ಟವಿಲ್ಲದ್ದರಿಂದ, ಕೆಲಸವೂ ಬೇಗ ಮುಗಿಯಬೇಕಿದ್ದರಿಂದ ಮೆಂಬರ್ ವೆಂಕಟೇಶಿಯ ಮನೆಯಲ್ಲಿ ಉಳಿದುಕೊಳ್ಳಲು ಅವನೂ ಮೌನ ಸಮ್ಮತಿ ಕೊಟ್ಟ.

ದೊಡ್ಡಕ್ಕ ತಂದುಕೊಟ್ಟಿದ್ದ ಖಾರದ ರೊಟ್ಟಿ ಜೊತೆಗೆ ಶೇಂಗಾ ಚಟ್ನಿ ತಿನ್ನುತ್ತ ಕರ್ಣ, “ವೆಂಕಟೇಶಿಯವ್ರೇ, ನಾನು ಬಂದ ಕೆಲ್ಸ ಸಕ್ಸಸ್ ಆಯ್ತು ಅಂದ್ರೆ ಸಾಕು ನಿಮ್ಮೂರು ದೇಶಾದ್ಯಂತ ಪ್ರಸಿದ್ಧಿಯಾಗಿಬಿಡುತ್ತದೆ. ಆಮೇಲೆ ದೇಶ ವಿದೇಶದಿಂದ ನಿಮ್ಮೂರು ನೋಡೋಕೆ ಜನ ಬರ್ತಾರೆ” – ಎಂದ. ಅಷ್ಟರಲ್ಲಿ ತಮ್ಮೂರು ದೇಶ ವಿದೇಶಗಳಲ್ಲಿ ಫೇಮಸ್ ಆಗುತ್ತೆ ಅನ್ನೋದನ್ನು ಕೇಳಿ ಉಬ್ಬಿಹೋದ ದೊಡ್ಡಕ್ಕ, ಇನ್ನೆರಡು ಖಾರದ ರೊಟ್ಟಿ ತಂದು ಕರ್ಣನ ತಟ್ಟೆಗೆ ಹಾಕಿದಳು. ಎದುರಿಗೆ ಕೂತಿದ್ದ ವೆಂಕಟೇಶಿ ಕೂಡ, ಬೇರೆ ಊರಿನ ಜನ ಬರ್ತಾರೆಂದ್ರೆ ಸರ್ಕಾರದವರು ಬೇರೆಬೇರೆ ಯೋಜನೆಗಳನ್ನು ಜಾರಿ ಮಾಡ್ತಾರೆ. ಯೋಜನೆ ಜಾರಿಯಾದ್ರೆ ಆ ದುಡ್ಡು ನನ್ನ ಖಜಾನೆ ತುಂಬುತ್ತೆ ಅಂತ ಯೋಚನೆ ಮಾಡುತ್ತಾ ಕುಳಿತಿದ್ದ.

ಅವನ ಯೋಚನಾಲಹರಿಯನ್ನು ತುಂಡರಿಸುವಂತೆ “ವೆಂಕಟೇಶಿಯವ್ರೇ, ನಿಮ್ಮಿಂದ ನನಗೊಂದು ಸಹಾಯ ಆಗ್ಬೇಕಿತ್ತು ಅಲ್ಲಾ…” ಎಂದಾಗ, ವೆಂಕಟೇಶಿ ವಾಸ್ತವಕ್ಕೆ ಬಂದ. ಏನೆನ್ನುವಂತೆ ತಲೆಯಾಡಿಸಿದ. “ನಾನು ಈ ಊರಿಗೆ ಹೊಸಬ. ಇಲ್ಲಿನ ಜಾಗ, ಜನಗಳ ಬಗ್ಗೆ ಕೂಡ ಗೊತ್ತಿಲ್ಲ. ಯಾರಾದ್ರೂ ನಿಮ್ಗೆ ಗೊತ್ತಿರೋ ಎಜುಕೇಟೆಡ್ ಇದ್ರೆ, ಅವನನ್ನು ನನ್ನ ಜೊತೆ ಮಾಡಬಹುದಾ? ಬೇಕಾದ್ರೆ ಅವನು ನನ್ನ ಜೊತೆ ಇದ್ದಷ್ಟು ದಿನಾ ಅವನಿಗೆ ಸಂಬಳದ ವ್ಯವಸ್ಥೆ ಮಾಡ್ತೀನಿ” – ಎಂದ.

ಅಂತವನು ಈ ಊರಿನಲ್ಲಿ ಯಾರಿರಬಹುದು ಅಂತ ವೆಂಕಟೇಶಿ ಒಂದೈದು ನಿಮಿಷ ಯೋಚಿಸುತ್ತಿದ್ದ. ಅಷ್ಟರಲ್ಲೇ ಅವನಿಗೆ ಏನೋ ನೆನಪಾಗಿ “ಏನೂ ಯೋಚ್ನೆ ಮಾಡ್ಬೇಡಿ ಬಿಡ್ರೀ ಸಾರ್, ಕೆಂಪ್ರಾಜು ಅಂತ ಇದಾನೆ. ನಮ್ಮೂರ ಹುಡ್ಗಾನೇ, ಬಾರೀ ಓದ್ಕಂಡಿದಾನೇ. ಈಗ ನಮ್ಮೂರ ಶಾಲೆನಾಗೆ ಪಾಠ ಮಾಡ್ಕಂಡಿದಾನೆ. ಒಳ್ಳೆ ಹುಡ್ಗ. ಅವ್ನ ಜೊತೆ ಮಾಡ್ತೀನಿ” ಎಂದಾಗ ಕರ್ಣನಿಗೆ ಸಮಾಧಾನವಾಯ್ತು.

ಇಬ್ಬರೂ ಸೇರಿ ಕೆಂಪರಾಜುವನ್ನು ಹುಡುಕಿಕೊಂಡು ಶಾಲೆಯ ಕಡೆ ಹೊರಟರು. ಆಗತಾನೇ ಗೊಣ್ಣೆ ಸುರಿಸಿಕೊಂಡು ನೀಲಿ ಚಡ್ಡಿ ಮೇಲೇರಿಸಿಕೊಂಡು ಚಿಕ್ಕಚಿಕ್ಕ ಮಕ್ಕಳು ಶಾಲೆ ದಾರಿ ಹಿಡಿದಿದ್ದರು. ಕೆಂಪರಾಜು ಅಲ್ಲೇ ಶಾಲೆಯ ಪಕ್ಕದಲ್ಲಿದ್ದ ಅಂಗಡಿ ಹತ್ತಿರ ನಿಂತು ದಾರಿಯಲ್ಲಿ ಹೋಗಿ ಬರುವವರ ಜೊತೆಯಲ್ಲಿ ಹರಟೆ ಹೊಡೆಯುತ್ತಾ ನಿಂತಿದ್ದ. ಅಷ್ಟರಲ್ಲಿ ಮೆಂಬರ್ ವೆಂಕಟೇಶಿ ಯಾರ ಜೊತೆಗೊ ಬರುತ್ತಿರುವುದು ಕಂಡು ಶಾಲೆಯ ಕಡೆಗೆ ಜಾರಿಕೊಳ್ಳುವ ಯತ್ನದಲ್ಲಿದ್ದ. ಅಷ್ಟರಲ್ಲೇ ವೆಂಕಟೇಶಿಯೇ “ಲೋ, ಕೆಂಪ್ರಾಜು…” ಎಂದು ಕೂಗಿದ. ಕೆಂಪರಾಜುವಿಗೆ ತಾನು ಬೇರೆ ಊರಿನಲ್ಲಾದರೂ ಮೇಷ್ಟಾçಗಿದ್ದರೆ ಒಂದಿಷ್ಟಾದರೂ ರೆಸ್ಪೆಕ್ಟ್ ಸಿಕ್ಕಿರೋದು ಎಂದುಕೊಳ್ಳುತ್ತ ಹಿಂದೆ ತಿರುಗಿ ನೋಡಿ “ನಮಸ್ಕಾರ” ಎಂದು ಹಲ್ಲುಬಿಟ್ಟ. ಪಕ್ಕದಲ್ಲಿ ನಿಂತಿದ್ದ ಅಪರಿಚಿತನಿಗೂ “ನಮಸ್ಕಾರ ಸರ್” ಎಂದ. ಅಷ್ಟರಲ್ಲಿ “ನಿನ್ನ ನಮಸ್ಕಾರ ಮನೆ ಹಾಳಾಗ್ಲಿ, ಇವ್ರು ಕರ್ಣಾ ಅಂತ. ದೊಡ್ಡ ಆಫೀಸರ್. ನಮ್ಮರ‍್ನಾಗೆ ಅದೆಂತದೋ ಸಮಾಧಿ ಹುಡ್ಕಂಡು ಬಂದಿದ್ದಾರೆ. ಅವ್ರಿಗೆ ಅದ್ನ ತೋರ್ಸಿ ಪುಣ್ಯ ಕಟ್ಗಾಳಪ್ಪಾ” ಎನ್ನುತ್ತ ಬೇಡಿಕೊಳ್ಳುವವನಂತೆ ವೆಂಕಟೇಶಿ ಎರಡು ಕೈ ಜೋಡಿಸಿ ಮುಗಿದ.

ಕೆಂಪರಾಜು ಅದೇನೋ ಯೋಚಿಸುತ್ತ ರೋಡಿನ ಪಕ್ಕವೇ ನಿಂತಿದ್ದ. ಕೆಂಪರಾಜುವಿನ ಆಲೋಚನೆ ಅರ್ಥವಾದವನಂತೆ “ಕೆಂಪ್ರಾಜು, ನೀನೇನೂ ಯೋಚ್ನೇ ಮಾಡ್ಬೇಡ ಕಣಪ್ಪಾ. ನಮ್ ಪಂಚಾಯ್ತಿ ಕೆಲ್ಸಾ ಅಂತೇಳಿ, ನಿಮ್ ಹೆಡ್‌ಮಾಸ್ಟರಿಗೇಳಿ ಒಂದ್ವಾರ ರಜೆ ಕೊಡಿಸ್ತೀನಿ. ಇವ್ರಿಗೆ ಏನ್ ಸಹಾಯ ಬೇಕೋ ಅದ್ನ ಮಾಡು. ಇವ್ರ ಕೆಲ್ಸ ಸಕ್ಸಸ್ ಆದ್ರೆ ನಮ್ಮೂರಿಗೆ ಹೆಸ್ರು ಬರ್ತಾದಂತೆ. ನನ್ಗೆ ಒಸಿ ಮಹಾಲಿಂಗಸ್ವಾಮಿಗೊಳ ಹತ್ರ ಕೆಲ್ಸ ಅದೆ, ನಿಮ್ ಹೆಡ್‌ಮಾಸ್ಟಿçಗೆ ಹೇಳಿ ಹಂಗೇ ಹೋಗ್ತೀನಿ. ಜ್ವಾಪಾನ ಕೆಂಪ್ರಾಜು” ಎನ್ನುತ್ತ ಕರ್ಣನನ್ನು ಕೆಂಪರಾಜುವಿಗೆ ಪರಿಚಯ ಮಾಡಿ ವೆಂಕಟೇಶಿ ಹೊರಟುಹೋದ.

ಬಹುಶಃ ಇವನ ಕೆಂಬಣ್ಣ, ಗುಂಗುರು ಕೂದಲು ನೋಡಿ ಹಳ್ಳಿಯವರು ಇವನಿಗೆ ಕೆಂಪರಾಜು ಅಂತ ಹೆಸರಿಟ್ಟಿರಬೇಕು ಎಂದುಕೊಳ್ಳುತ್ತ, ಕರ್ಣ ತನ್ನ ಪರಿಚಯ ಮಾಡಿಕೊಂಡ. ತಾನು ಇತಿಹಾಸ ಶಿಕ್ಷಕ ಅಂತಲೂ, ತನಗೂ ಈ ರೀತಿಯ ಕೆಲಸದಲ್ಲಿ ಆಸಕ್ತಿ ಇರುವುದಾಗಿಯೂ ಕೆಂಪರಾಜು ಹೇಳಿದ್ದು, ಕರ್ಣನಲ್ಲಿ ಉತ್ಸಾಹ ತಂದಿತು.

ಇಬ್ಬರೂ ಅದು ಇದು ಎಂದು ಊರ ಬಗ್ಗೆ, ಅಲ್ಲಿನ ಜನರ ಬಗ್ಗೆ ಮಾತನಾಡುತ್ತ ಸಾಗುತ್ತಿದ್ದರು. ಊರಲ್ಲಿರೋ ಜಾತಿವ್ಯವಸ್ಥೆ, ಬಡತನ, ಭ್ರಷ್ಟಾಚಾರ, ಸೀಕ್ರೇಟ್ ಮ್ಯಾಟರ್‌ಗಳು ಎಲ್ಲವೂ ಅದರೊಳಗೆ ಸೇರಿತ್ತು.

ಜಗತ್ತಿನಲ್ಲಿರೋ ತೊಂದರೆಗಳೆಲ್ಲ ಇದೇ ಊರಿನಲ್ಲಿದೆ ಎನ್ನುವಂತೆ ಕೆಂಪರಾಜು ಗೊಣಗುತ್ತಿದ್ದ. ವಿಷಯವನ್ನು ಡೈವರ್ಟ್ ಮಾಡುವ ಉದ್ದೇಶದಿಂದ “ಮಿಸ್ಟರ್ ಕೆಂಪರಾಜು, ವೆಂಕಟೇಶಿಯವ್ರು ಅದ್ಯಾರೋ ಮಹಾಲಿಂಗಸ್ವಾಮಿ ಹತ್ರ ಹೋಗ್ತೀನಿ ಅಂತ ಹೋದ್ರೂ ಅಲ್ವಾ.. ಯರ‍್ರೀ ಈ ಮಹಾಲಿಂಗಸ್ವಾಮಿ?”

“ಓ… ಅದಿನ್ನೂ ದೊಡ್ ಕತೆ ಬಿಡಿ ಸಾರ್. ಆಯಪ್ಪಾ ಬುಡುಬುಡುಕೆಯೋನು. ಊರೂರು ಅಲ್ದಾಡ್ಕೊಂಡ್ ಇರ್ತಾನೆ. ನಮ್ಮೂರ ಜನ್ಗಳ ಬಂಡವಾಳ ನೋಡ್ಕೊಂಡು, ‘ನಾನು ಹಿಮಾಲಯದಿಂದ ಬಂದ ಸನ್ಯಾಸಿ’ ಅಂತ ಹೇಳ್ಕಂಡು ದೇವ್ರು ದಿಂಡ್ರು, ತಾಯ್ತ ಅಂತ ನಮ್ಮೂರಿನ ಜನಕ್ಕೆ ಸರೀ ಪಂಗನಾಮ ಹಾಕಿ, ದೇವ್ರ ಹೆಸ್ರಲ್ಲಿ ದುಡ್ಡು ಮಾಡ್ಕೊಂಡು ಅಲ್ಲೇ ಹಳ್ಳದ ದಂಡೆ ಮ್ಯಾಲೆ ಒಂದು ಚಿಕ್ಕ ಮಠ ಕಟ್ಗೊಂಡು ಇದಾನೆ. ಈ ವೆಂಕಟೇಶಿ ಅವ್ನ ಎಂಗಾದ್ರೂ ಬುಟ್ಟಿಗಾಕ್ಕೊಂಡು ಆ ಹಳ್ಳದ ದಂಡೆನಾಗಿರೋ ಗೋಮಾಳದ ಜಮೀನೆಲ್ಲ ಅವ್ರ ಹೆಸರಿಗೆ ಮಾಡ್ಕೊಬೇಕು ಅಂತಿದಾನೆ” ಎಂದು ಉತ್ತರಿಸಿದ.

ಕರ್ಣನಿಗೆ ಕೆಂಪರಾಜುವಿನ ಪುರಾಣ ಕೇಳಿಕೇಳಿ ತಲೆ ಚಿಟ್ಟು ಹಿಡಿದುಹೋಯಿತು. ಆದಷ್ಟು ಬೇಗ ತಾನು ಬಂದ ಕೆಲಸ ಮುಗಿಸಬೇಕು, ಇವ್ರ ಪುರಾಣ ತಗೊಂಡ್ ನನಗೇನಾಗ್ಬೇಕು ಎಂದುಕೊಂಡವನೇ, “ಕೆಂಪರಾಜು, ನಿಮ್ಮ ಊರಿನಲ್ಲಿ ಕಾಡುಗೀಡು ಸುತ್ತಿ ಅಭ್ಯಾಸ ಇರೋರು ಯಾರೂ ಇಲ್ವೇನ್ರೀ? ಇನ್ನೊಂದೆರಡು ದಿನದೊಳಗೆ ನಿಮ್ಮೂರ ಸುತ್ತಮುತ್ತಲಿನ ಎಲ್ಲ ಜಾಗವನ್ನೂ ಸುತ್ತಾಡಬೇಕು. ಸ್ವಲ್ಪ ಅನುಭವ ಇರೋರಾಗಿದ್ರೆ ಒಳ್ಳೇದಿರ್ತಿತ್ತು” – ಎಂದ.

ಸ್ಪಲ್ಪ ಯೋಚಿಸಿದ ಕೆಂಪರಾಜು, “ಸರ್, ಇಲ್ಲೇ ರೋಡಿನ ಪಕ್ಕ ಒಂದು ಮನೆಯಿದೆ. ಅಲ್ಲಿ ಸೂಜಿ ಸೂರಣ್ಣ ಅಂತ ಒಬ್ರು ಇದಾರೆ, ಅವ್ರು ಸಿಕ್ಕರೆ ತುಂಬಾ ಹೆಲ್ಪ್ ಆಗ್ಬೋದು. ಆ ಮನ್ಷ ಕಾಡುಗೀಡು ಎಲ್ಲ ಅಲೆಯೋದ್ರಲ್ಲಿ ಎತ್ತಿದ ಕೈ” ಎಂದ.

“ಮತ್ತೆ ಬೇಗ ಅವ್ರ ಮನೆಗೆ ಹೋಗೊಣ ನಡೀರಿ.” ಕರ್ಣ ಅವಸರ ಮಾಡಿದ.

“ಆದ್ರೂ ಆ ಮನ್ಷ ಅಷ್ಟು ಸುಲಭದಲ್ಲಿ ಸಿಗೋನಲ್ಲ ಬಿಡಿ ಸಾರ್. ಬೇಕಿದ್ರೆ ಆ ಸುಡಗಾಡು ಸಿದ್ರನ್ನೇ ಹುಡಿಕ್ಕೊಂಡು ಬರ್ಬೋದು; ಆದ್ರೆ ಈ ಮನ್ಷ ಮಾತ್ರ ಕೈಗೆ ಸಿಗಲ್ಲ ಸಾರ್, ಒಂಥರಾ ಹುಚ್ ನನ್‌ಮಗ. ಯಾವಾಗ ಎಲ್ಲಿ ಇರ್ತಾನೋ ಆಯಪ್ಪನಿಗೆ ಗೊತ್ತು…” ಎಂದು ರಾಗ ಎಳೆದ.

“ಅವರತ್ರ ಮೊಬೈಲ್ ಇಲ್ವೇನ್ರೀ..?”

“ಅದ್ನ ಯಾವ್ ದಿಕ್ಕಿಗೆ ಇಟ್ಗೊಬೇಕು ಅನ್ನೊದೇ ಗೊತ್ತಿರೋದು ಡೌಟೂ. ಸೂರಣ್ಣನಿಗೆ ಏನಿದ್ರೂ ಸೂಜಿ ಇಡ್ಕೊಂಡು ತಿರುಗೋದು ಅಷ್ಟೇ ಗೊತ್ತಿರೋದು. ಬನ್ನಿ ಸಿಕ್ಕರೆ ನಿಮ್ ಪುಣ್ಯ” – ಎನ್ನುತ್ತ ಇಬ್ಬರೂ ಸೂಜಿ ಸೂರಣ್ಣನ ಮನೆಯ ಕಡೆ ಕಾಲು ಹಾಕಿದರು.

“ಸೂರಣ್ಣಾ.. ಓ ಸೂರಣ್ಣಾ..”

ಗುಡಿಸಲಿನಂತಹ ಮನೆಯೊಳಗಿನಿಂದ ಯಾವುದೇ ಧ್ವನಿ ಕೇಳಲಿಲ್ಲ. ನಂತರ ಒಬ್ಬ ಚಿಕ್ಕ ಹುಡುಗ ಒಳಗಿನಿಂದ ಎದ್ದು ಬಂದ.

“ಏನ್ರೀ ಅನುಭವಸ್ತನ್ನ ತೋರ್ಸಿ ಅಂದ್ರೆ, ಪುಟಗೋಸಿನ ತೋರಿಸ್ತಿರರ್ಲಿ…” ಕರ್ಣ ಕಿಚಾಯಿಸಿದ.

“ಸುಮ್ನಿರಿ ಸಾರ್, ಇವನು ಕಿಟ್ಟಿ ಅಂತ ನನ್ನ ಸ್ಟೂಡೆಂಟ್. ಸೂರಣ್ಣನ ಮೊಮ್ಮಗ. ಅವ್ನ ಮಗ ಸೊಸೆ ಬೆಂಗ್ಳೂರಿಗೆ ದುಡಿಯೋಕೆ ಹೋಗಿದಾರೆ. ಇವುö್ನ ಒಬ್ನೇ ಸೂರಣ್ಣನ ಜೊತೆ ಇರ್ತಾನೆ. ಇವ್ನೂ ಈವಾಗ್ಲೇ ಅವ್ರ ತಾತನ್ನ ಮೀರಿಸ್ತಾನೆ ಸರ್” ಎಂದ. ಶಾಲೆಯ ಕಡೆ ತಲೆ ಹಾಕಿಲ್ಲದ್ದಕ್ಕೆ ಮೇಷ್ಟುç ಹುಡುಕಿಕೊಂಡು ಬಂದಿದ್ದಾರೆ ಎಂದು ಗಾಬರಿಯಾಗಿದ್ದ ಕಿಟ್ಟಿ, ತನ್ನನ್ನು ಹೊಗಳಿದ್ದಕ್ಕೆ ಖುಷಿಯಾದ.

ಕರ್ಣ, ಆ ಮನೆಯ ಗೋಡೆಯನ್ನೇ ನಿರುಕಿಸುತ್ತ್ತ ನಿಂತ. ಅಲ್ಲಿ ಒಂದೆರಡು ಜಿಂಕೆಯ ಕೊಂಬು, ನವಿಲು ಗರಿಗಳು ಮತ್ತು ಒಂದು ನಾಡಕೋವಿ ಗೋಡೆಯಲ್ಲಿ ನೇತಾಡುತ್ತಿದ್ದವು. ಅದರ ಪಕ್ಕ ಇನ್ನೇನೋ ವಿಚಿತ್ರ ವಸ್ತುಗಳ ರಾಶಿಯೇ ಸೇರಿತ್ತು. ಅದರ ಎದುರುಗಡೆ ಕೈಕಟ್ಟಿ ಕಿಟ್ಟಿ ನಿಂತಿದ್ದ.

“ಲೋ ಕಿಟ್ಟಿ, ಸೂರಣ್ಣ ಎಲ್ಲೋ?

“ಲೋಕಣ್ಣನ ಹಸುಗೆ ಏನೋ ಕಾಯಿಲೆ ಬಂದೈತಿ ಅಂತೆ ಸಾರ್. ಔಷ್ದಿ ತರೋಕೆ ಕಾಡಿಗೆ ಹೋಗಿದ್ದಾನೆ.” ಕಿಟ್ಟಿಯು ಕೆಂಪರಾಜುವಿಗೆ ಪಾಠ ಒಪ್ಪಿಸಿದ.

ಕರ್ಣನ ಕಡೆ ತಿರುಗಿದ ಕೆಂಪರಾಜು, “ಸಾರ್, ಈ ಮನ್ಷ ಔಷ್ದ ಹುಡ್ಕೊಂಡು ಕಾಡೊಳಗೆ ಹೋದ್ರೆ ಮುಗೀತೂ… ಮತ್ತೆ ಯಾವಾಗ ಈ ಊರೊಳಗೆ ಪ್ರತ್ಯಕ್ಷವಾಗ್ತಾನೋ ಆ ದೇವ್ರಿಗೆ ಗೊತ್ತು.”

“ಇವತ್ತು ಕತ್ಲಾಗದ್ರೊಳಗೆ ಬರ್ತಾನೆ ಸಾರ್.. ಆಯಪ್ಪ ಬೆಳ್ಗೆ ಬುತ್ತಿ ಕಟ್ಕೊಂಡ್ಹೋಗಿಲ್ಲ” ಎಂದ ಕಿಟ್ಟಿ.

“ತುಂಬಾ ಚುರುಕಿದಾನೆ ಕಣ್ರೀ ಈ ಹುಡ್ಗ” ಎನ್ನುತ್ತ ಕರ್ಣ, ಕಿಟ್ಟಿಯ ತಲೆ ಸವರಿದ.

“ನಾವು ಇವತ್ತು ಸ್ವಲ್ಪನಾದ್ರೂ ನಿಮ್ಮೂರ ಅಕ್ಕಪಕ್ಕ ಸುತ್ತಾಡಬೇಕು ಕೆಂಪರಾಜು. ಏನಾದ್ರೂ ಹಿಸ್ಟಾರಿಕಲ್ ಆಗಿರೋ ಅಂತದ್ದು ಇಲ್ಲೇ ಹತ್ರದಲ್ಲಿ ಏನಾದ್ರೂ ಇದೆಯೇನ್ರೀ?” ಕರ್ಣ ಕೇಳಿದ.

ಕೆಂಪರಾಜು ಜೊತೆ ಕಿಟ್ಟಿಯೂ ಯೋಚಿಸಲು ಕುಳಿತ.

“ಸಾರ್ ನಮ್ಮೂರ ಹಳ್ಳ ದಾಟಿ ಮುಂದೆ ಹೋದ್ರೆ, ಸ್ವಲ್ಪ್ಪ ದೂರದಲ್ಲೇ ಒಂದು ಗುಡ್ಡದ ಮ್ಯಾಲೆ ಹಳೇಕಾಲದ ಚಿಕ್ಕ ಗುಡಿ ಇದೆ. ಗರ್ಭಗುಡೀಲಿ ಯಾವ್ದೂ ದೇವ್ರ ಮೂರ್ತಿಯಿಲ್ಲ. ಆದ್ರೂ ವರ್ಷಕ್ಕೊಂದು ಬಾರಿ ಸೂರಣ್ಣನ ವಂಶದವ್ರು ಹೋಗಿ ಅಲ್ಲಿ ಪೂಜೆ ಮಾಡಿ ಬರ್ತಿರ್ತಾನೆ!” ಕೆಂಪರಾಜು ತನಗೆ ಗೊತ್ತಿದ್ದನ್ನು ಹೇಳಿದ.

ಕೆಂಪರಾಜು ಕರ್ಣನನ್ನು ಸರ್ ಅಂದಿದ್ದಕ್ಕೇನೋ, ಕಿಟ್ಟಿಯೂ ಅವನನ್ನು ಪ್ಯಾಂಟ್ ಮುಟ್ಟಿ ಕರಿಯುತ್ತಾ, “ಸಾರ್, ಗುಡಿ ಪಕ್ಕದಲ್ಲೇ ಬಾವಿ ಐತೆ, ಅದ್ರಲ್ಲಿ ವರ್ಷಾಪೂರ್ತಿ ನೀರಿರುತ್ತೆ! ಯಾವತ್ತೂ ಅದ್ರಲ್ಲಿ ನೀರು ಖಾಲಿನೇ ಆಗಲ್ಲ. ಹ ಮತ್ತೇ… ಅಲ್ಲಿ ಬಿಳಿ ಇಲಿ ಇದಾವೆ ಗೊತ್ತಾ!” ಎಂದು ಗುಟ್ಟು ಹೇಳುವವನಂತೆ ಹೇಳಿದ.

ಅದು ಊರಿಗೆಲ್ಲ್ಲ ಗೊತ್ತಿದ್ದ ವಿಷ್ಯಾ ಆಗಿದ್ದರಿಂದ, ಕೆಂಪರಾಜು ಯಾವುದೇ ರಿಯಾಕ್ಷನ್ ಕೊಡಲಿಲ್ಲ. ಆದ್ರೆ ಕರ್ಣನಿಗೆ ಏನೋ ಹೊಳೆದಂತಾಗಿ,

“ಏ ಕಿಟ್ಟಿ, ಅಲ್ಲಿ ಯಾವ್ದಾದ್ರೂ ಗುಹೆ ಇದೆಯೆನೋ?”

“ಗುಡಿ ಇದೆ ಅಂದ್ನಲ್ಲಾ ಸರ್. ಅದ್ರ ಪಕ್ಕದಲ್ಲೇ ಕಲ್ಲುಬಂಡೆಗಳ ಮಧ್ಯೆ ಗುಹೆ ತರ ಜಾಗ ಇದೆ. ಅಲ್ಲೇ ಬಿಳಿ ಇಲಿಗಳು ಕಾಣಿಸಿಕೊಳ್ಳೋದು. ಇವ್ರ ವಂಶದವ್ರು ಪೂಜೆ ಮಾಡೋಕೆ ಹೋದಾಗ ಆ ಇಲಿಗಳು ಕಾಣಿಸಿಕೊಂಡರೆ ಒಳ್ಳೇದು ಅಂತ ನಂಬ್ಕೆ…” ಎಂದ ಕೆಂಪ್ರಾಜು.

“ಸಾರ್ ಅದು ಗುಹೆ ಅಲ್ಲ, ಸುರಂಗಮಾರ್ಗ! ಸೂರಜ್ಜನೇ ಅದ್ರ ಕಥೆ ಹೇಳಿದ್ರು. ಆ ಸುರಂಗದ ಮೂಲಕ ಹೋದ್ರೆ ಕಾಡೊಳಗೆ ಹೋಗ್ತೀವಿ ಅಂತೆ. ಅಲ್ಲೊಂದು ಬಾವಿಗುಂಟಾ ಹೊರಗೆ ಬರ್ತೀವಿ ಅಂತೆ. ಬಾವಿ ಪಕ್ಕದಲ್ಲಿ ಇನ್ನೊಂದು ಗುಹೆಯಿದೆ. ಅದರೊಳಗೆ ದೊಡ್ಡ ನಿಧಿ ಐತೆ ಅಂತೆ, ಆದರೆ ಅದ್ನ ಏಳಡಿ ಸರ್ಪ ಕಾದ್ಕೊಂಡು ಇರುತ್ತೆ ಅಂತೆ. ಯಾರಾದ್ರೂ ನಿಧಿ ಆಸೆಗೆ ಅದ್ರೊಳಗೆ ಹೋದ್ರೆ ಅವ್ರನ್ನ ಏಳಡಿ ಸರ್ಪ ಹೆಡೆ ಎತ್ತಿ ವಿಷ ಬಿಟ್ಟು ಸಾಯಿಸಿಬಿಡುತ್ತೆ ಅಂತೆ ಸಾರ್.” ಕಿಟ್ಟಿ ತನಗೆ ಸೂಜಿ ಸೂರಣ್ಣ ಹೇಳಿದ್ದ ಕಥೆಯನ್ನು ಹೇಳಿದ.

ವಿಗ್ರಹವಿಲ್ಲದ ಹಳೇ ದೇವಸ್ಥಾನ, ಅದಕ್ಕೆ ವರ್ಷಕ್ಕೊಮ್ಮೆ ಒಂದೇ ವಂಶದವರು ಪೂಜೆ ಮಾಡ್ಕೊಂಡು ಬರ್ತಿರೋದು, ಗುಹೆ, ಬಿಳಿ ಇಲಿ, ಅದರ ಪಕ್ಕ ನೀರೇ ಖಾಲಿಯಾಗದ ಬಾವಿ, ಸುರಂಗಮಾರ್ಗ, ನಿಧಿ, …ಇದೆಲ್ಲ ಕೇಳಿದ ಮೇಲೆ ಕರ್ಣ ಮನಸ್ಸಿನಲ್ಲೇ ಯೋಚಿಸತೊಡಗಿದ.

ಬಹುಶಃ ನಾನು ಊಹೆ ಮಾಡಿದ್ದು ಸರಿಯಿರಬೇಕು. ಏಳಡಿ ಸರ್ಪ ಎಲ್ಲ್ಲ ಬುರುಡೆಯಾಗಿದ್ದರೂ, ಇವರಿಬ್ಬರೂ ಹೇಳೋ ತರ ಬೇರೆಲ್ಲವೂ ಅಲ್ಲಿದ್ದರೆ ಖಂಡಿತವಾಗಿ ನಾನು ಹುಡುಕಿಕೊಂಡು ಬಂದಿರೋದು ಅಲ್ಲಿರಲೇಬೇಕು. ಅದ್ರಲ್ಲೂ ಬಿಳಿ ಇಲಿಗಳು ಕಾಣಿಸಿಕೊಳ್ತಿವೆ ಅಂದ್ರೆ ಹತ್ತಿರದಲ್ಲೆಲ್ಲೋ ಶಿಲಾ ಸಮಾಧಿಗಳು ಅಥವಾ ಆ್ಯಂಟಿಕ್‌ಗಳು ಇರಲೇಬೇಕು. ನೀರು ಬತ್ತದೆ ಇರೋ ಬಾವಿಯಿದೆ ಅಂದ್ರೆ ಈಗಲ್ಲದಿದ್ದರೂ ಒಂದಾನೊಂದು ಕಾಲದಲ್ಲಿಯಾದರೂ ಅಲ್ಲಿ ಜನವಸತಿ ಇದ್ದಿರಲೇಬೇಕು. ಏಳಡಿ ಸರ್ಪದ ಭಯದಿಂದ ಜನಗಳೂ ಅಲ್ಲಿಗೆ ಹೋಗ್ತಿಲ್ಲ ಅಂದ್ರೆ ಅದೆಲ್ಲ ನಾಶವಾಗಿರೋದಕ್ಕೂ ಸಾಧ್ಯವಿಲ್ಲ. ತಡಮಾಡದೆ ಬೇಗ ಕೆಲ್ಸ ಮುಗಿಸಬೇಕು. ಈ ಹುಡ್ಗ ನನಗೆ ಬೇಕಾಗಿರೋ ಮಾಹಿತಿಯನ್ನೆಲ್ಲ ತಾನಾಗೇ ಬಾಯಿಬಿಡ್ತಿದ್ದಾನೆ. ಇವನನ್ನೂ ಜೊತೆಯಲ್ಲಿ ಕರೆದುಕೊಂಡು ಹೋದ್ರೆ ಏನಾದ್ರೂ ಹೆಲ್ಪ್ ಆಗಬಹುದು ಎಂದು ಯೋಚಿಸಿ. ನನ್ನೊಬ್ಬನ ಜೊತೆಯಲ್ಲಿ ಆ ಹುಡ್ಗ ಬರೋದು ಡೌಟ್, ಇವರಿಬ್ಬರನ್ನೂ ಕರೆದುಕೊಂಡು ಹೋಗೋದು ಒಳ್ಳೆಯದು ಎಂಬ ತೀರ್ಮಾನವನ್ನು ಮನಸ್ಸಿನೊಳಗೇ ತಂದುಕೊಂಡ.

“ಕಿಟ್ಟಿ ಈಗ ನೀನು ನಮ್ಮ ಜೊತೆ ಬರ್ತೀಯಾ?” ಕರ್ಣ ಕೇಳಿದ.

“ಈಗೆಲ್ಲಿಗೆ ಸಾರ್?” ಕೆಂಪರಾಜು ಪ್ರಶ್ನೆ ಎಸೆದ.

“ಹಿಂಗೇ ಒಂದು ಸುತ್ತು ಹಾಕಿಕೊಂಡು ಬರೋಣ ಅಂತ ಕೆಂಪರಾಜು, ಹೇಗೂ ಇವತ್ತು ಸೂರಣ್ಣನವ್ರು ಸಿಗೋದಿಲ್ಲ. ಹೋಗಿ ಆ ಗುಡ್ಡನಾದ್ರೂ ನೋಡ್ಕೊಂಡು ಬರೋಣ. ನಾಳೆ ಸೂರಣ್ಣ ಸಿಕ್ಕರೆ ಕಾಡಿನೊಳಗೆ ಎಲ್ಲಾದ್ರೂ ಈ ತರದ ಇತಿಹಾಸದ ಕುರುಹು ಇರೋದು ಅವ್ರಿಗೆ ಗೊತ್ತಿದ್ರೆ ನಾಳೆ ಅಲ್ಲಿಗೆ ಹೋಗೋಣ” ಎಂದ ಕರ್ಣ. ಬೇರೇನೂ ಹೇಳಲು ಗೊತ್ತಾಗದೆ ಕೆಂಪರಾಜು ಒಪ್ಪಿಕೊಂಡ. ಕಿಟ್ಟಿಯೂ ಹೊರಗಡೆ ಹೊರಡಲು ಉತ್ಸಾಹದಿಂದಲೇ ಸಿದ್ಧವಾಗಿ ನಿಂತ.

ಮೂವರೂ ಬತ್ತಿ ಹೋಗಿದ್ದ ಹಳ್ಳವನ್ನು ದಾಟಿ, ಬಯಲುಸೀಮೆಯ ಆ ಬಿಸಿಲಿಗೆ ಶಾಪ ಹಾಕುತ್ತಾ ಅಡ್ಡದಾರಿಯಲ್ಲಿ ಗುಡ್ಡದ ಕಡೆಗೆ ಬಿರಬಿರನೆ ನಡೆಯುತ್ತಿದ್ದರು.

ಅವರು ಹುಡುಕಿಕೊಂಡು ಹೊರಟಿದ್ದ ಗುಡ್ಡದ ಬುಡಕ್ಕೆ ಬಂದು ತಲಪಿದರು. ಅದೇನೂ ಅಷ್ಟೊಂದು ದೊಡ್ಡ ಗುಡ್ಡದಂತೆ ಕರ್ಣನಿಗೆ ಭಾಸವಾಗಲಿಲ್ಲ. ಕಿಟ್ಟಿಗೂ ಆ ಜಾಗ ಪರಿಚಿತವಾಗಿದ್ದರಿಂದ ಬೇಗಬೇಗನೆ ಮೇಲೇರುತ್ತಿದ್ದರೆ, ಕೆಂಪರಾಜುವಿಗೆ ಮಾತ್ರ ಈ ಬೆಟ್ಟ ಹತ್ತೋದಕ್ಕಿಂತ ಶಾಲೆಯಲ್ಲಿ ಪಾಠ ಮಾಡ್ಕೊಂಡು ಆರಾಮಾಗಿ ಇರ್ಬೋದಿತ್ತು ಎಂದುಕೊಳುತ್ತ್ತ ಮೆಲ್ಲನೆ ತೆವಳುತ್ತ ಸಾಗುವವನಂತೆ ಬೆಟ್ಟ ಹತ್ತುತ್ತಿದ್ದ.

ಕರ್ಣ ಬೆಟ್ಟದ ತುದಿಗೆ ಬಂದು ನೋಡಿದ ಊರಿನಿಂದ ಬೆಟ್ಟದ ಬುಡದವರೆಗೂ ಬಳ್ಳಾರಿ ಜಾಲಿ ತುಂಬಿಕೊಂಡಿದ್ದರೆ, ಬೆಟ್ಟದ ಇನ್ನೊಂದು ಬದಿಯಿಂದ ಕುರುಚಲು ಕಾಡು ಶುರುವಾಗಿತ್ತು. ಅಲ್ಲೊಂದು ಕಲ್ಲಿನ ಗುಡಿ ಇತ್ತು. ಗುಡಿಯ ಒಳಗಡೆ ಮೂರ್ತಿ ಇಲ್ಲದಿದ್ದರೂ, ಒಂದು ಕಲ್ಲಿಗೆ ಕುಂಕುಮ, ಗಂಧ ಸವರಿ ಕೆಲ ದಿನಗಳ ಹಿಂದಷ್ಟೇ ಅಲ್ಲಿ ಪೂಜೆ ಮಾಡಿದ್ದರ ಕುರುಹಾಗಿ ಅಲ್ಲಿ ಬಾಡಿದ ಹೂಗಳು ಬಿದ್ದಿದ್ದವು. ಕಲ್ಲಿನ ಗೋಡೆಗೆ ಸುಣ್ಣ ಬಳಿದಿದ್ದರು. ಕಿಟ್ಟಿಯನ್ನು ಕೇಳಿದ್ದಕ್ಕೆ “ಹೋದ ಹುಣ್ಣಿಮೆ ದಿನ ನಮ್ ಮನೆಯವರೆಲ್ಲ ಬಂದು ಪೂಜೆ ಮಾಡ್ಕೊಂಡು ಹೋಗಿದ್ವಿ” ಎಂದ. ಕರ್ಣ ಆ ಗುಡಿಯ ಸುತ್ತಲೂ ನೋಡಿದ. ಆ ಕಲ್ಲಿನ ಗೋಡೆಯ ಮೇಲೆ ಏನೋ ಚಿತ್ರವಿಚಿತ್ರ ರೇಖಾಚಿತ್ರಗಳಿದ್ದವು. ಆದರೆ ಅದೇನೂ ಸ್ಪಷ್ಟವಾಗಿ ಕಾಣದಂತೆ ಆ ಕಲ್ಲಿಗೆಲ್ಲ ಸುಣ್ಣ ಬಳಿದಿದ್ದರಿಂದ ಎಲ್ಲವೂ ಅಸ್ಪಷ್ಟ ಗೆರೆಗಳಾಗಿ ಕಾಣುತ್ತಿದ್ದವು. ಅಷ್ಟರಲ್ಲಿ ಕೆಂಪರಾಜು ಕೂಡ ಅಲ್ಲಿಗೆ ತಲಪಿದ್ದ, “ನೋಡಿ ಕೆಂಪರಾಜು, ಇತಿಹಾಸದ ಗಂಧಗಾಳಿ ಗೊತ್ತಿಲ್ಲದ ಮೂರ್ಖ ಹಳ್ಳಿಜನರು ಹೀಗೆ ಕಂಡಕಂಡಿದ್ದಕ್ಕೆಲ್ಲ ಸುಣ್ಣಬಣ್ಣ ಬಳಿದ್ರೆ ನಮ್ಮಂತಹವರು ಏನೂ ಸಿಗದೆ ಚಿಪ್ಪಿಡುಕೊಂಡು ಅಲೆದಾಡಬೇಕಷ್ಟೇ” ಅಂತ ತನ್ನ ಅಸಹಾಯಕತೆಯನ್ನು ತೋಡಿಕೊಂಡ.

ಇತಿಹಾಸದ ಅಮೂಲ್ಯ ದಾಖಲೆಗಳ ಅರಿವಿಲ್ಲದೆ ಆ ಕಲ್ಲುಗಳ ಮೇಲೆಯೇ ನಮ್ಮ ಜನ ಬಟ್ಟೆ ತೊಳೆಯುತ್ತಿಲ್ಲವೆ? ಅದೆಷ್ಟೋ ದೇವಸ್ಥಾನಗಳ ಅಪರೂಪದ ಶಿಲ್ಪಗಳನ್ನು ಹಾಳುಮಾಡಿಲ್ಲವೆ? ಸಾವಿರಾರು ವರ್ಷಗಳ ಪುರಾತನ ಗೋಡೆಗಳ ಮೇಲೆ ‘ಶಿಲ್ಪಾ ಲವ್ ಶಿವಣ್ಣ’ ಎಂದು ತಮ್ಮ ಅಮರಪ್ರೇಮವನ್ನು ಕೆತ್ತಿ ಅವುಗಳನ್ನು ಹಾಳುಮಾಡಿಲ್ಲವೆ? ಎಂದುಕೊಳುತ್ತಾ, “ಪುಣ್ಯಕ್ಕೆ ಸುಣ್ಣ ಅಷ್ಟೇ ಬಳಿದಿದ್ದಾರೆ, ಗುಡಿಯ ಕಲ್ಲನ್ನು ಕಿತ್ತುಹಾಕ್ಕೊಂಡ್ಹೋಗಿ ಮನೆಗೆ ಹಾಸುಗಲ್ಲೊ, ಬುನಾದಿಗೋ ಹಾಕಿಲ್ಲವಲ್ಲ ಸಾರ್, ಅದಕ್ಕೆ ಖುಷಿಪಡಿ” ಎಂದ ಕೆಂಪರಾಜು. ಕರ್ಣನೂ ವಿಷಾದದ ನಗೆ ನಕ್ಕ.

ಅಷ್ಟರಲ್ಲಿ ಕಿಟ್ಟಿ, “ನಿಮಗೆ ಸುರಂಗ ತೋರಿಸ್ತೀನಿ ಬನ್ನಿ ಸಾರ್” ಎಂದು ಕೂಗಿದ. ಗುಡಿಯ ಎದುರುಗಡೆಯೇ ಸ್ವಲ್ಪ ದೂರದಲ್ಲಿ ಕಲ್ಲಿನ ಬಾವಿಯಿತ್ತು. ಗುಡ್ಡದ ಮೇಲೆ ಬೀಳುತ್ತಿದ್ದ ಮಳೆ ನೀರೆಲ್ಲ ಅಲ್ಲಿ ಶೇಖರಣೆಯಾಗುವಂತೆ ಅದರ ನಿರ್ಮಾಣ ಮಾಡಿದ್ದರಿಂದ ಅಲ್ಲಿ ನೀರು ಬತ್ತಿಲ್ಲ ಎಂದುಕೊಂಡು ಕರ್ಣ ಕಿಟ್ಟಿಯ ಬಳಿ ನಡೆದ.

ಕಿಟ್ಟಿಯು ದೊಡ್ಡ ಬಂಡೆಗಳ ಮಧ್ಯೆ ಬಿರುಕೊಂದನ್ನು ಕರ್ಣನಿಗೆ ತೋರಿಸುತ್ತ, “ಸಾರ್… ಅದೇ ಸುರಂಗಮಾರ್ಗ. ಅಲ್ಲೇ ಬಿಳಿ ಇಲಿ ಕಾಣಿಸಿಕೊಳ್ಳೋದು” ಎನ್ನುತ್ತ ಆ ಬಂಡೆಗಳ ಬಿರುಕಿನೊಳಗೆ ಸ್ವಲ್ಪ ದೂರ ಹೋಗಿ, ವಾಪಾಸು ಬಂದು “ಇವತ್ತು, ಇಲಿ ಕಾಣಿಸ್ತಿಲ್ಲ ಸಾರ್. ಮೊನ್ನೆ ಪೂಜೆ ಮಾಡಿಸೋಕೆ ಬಂದಾಗ ಕಾಣಿಸಿದ್ವು. ಎಲ್ಲ್ಲ ಇಲಿಗಳು ಮಲಗಿರಬೇಕು ಅನ್ಸುತ್ತೆ” ಅಂತ ಬೇಜಾರಲ್ಲಿ ಹೇಳಿದ. ಕರ್ಣನೂ ಸುರಂಗದ ಬಳಿ ಬಂದ. ಅದರೆ ಸ್ವಲ್ಪ ದೂರ ಹೋಗುವಷ್ಟರಲ್ಲೇ ಮುಂದೆ ದಾರಿ ಕಾಣದೆ, ಮೊಬೈಲ್ ಟಾರ್ಚ್ ಬಿಟ್ಟ. ಟಾರ್ಚ್ನ ಬೆಳಕಿಗೆ ಅದೆಲ್ಲಿಂದಲ್ಲೋ ಒಂದಿಷ್ಟು ಹುಳುಗಳು ಹೊರಬಂದವು. ಕರ್ಣ ಮುಂದೆ ಹೋಗಲಾರದೆ ವಾಪಾಸು ಹೊರಬಂದ.

ಸುರಂಗದ ಬಾಗಿಲ ಬಳಿನಿಂತು ಹೊರ ನೋಡುತ್ತಾನೆ. ಆಶ್ಚರ್ಯ! ಸುರಂಗದ ಬಾಗಿಲಿನ ನೇರಕ್ಕೆ ಸ್ವಲ್ಪ ದೂರದಲ್ಲೇ ಒಂದು ಕಲ್ಲಿನ ಆಕಾರ ಕಾಡಿನ ದಿಕ್ಕಿಗಿತ್ತು. ಹತ್ತಿರ ಹೋಗಿ ನೋಡಿದರೆ ಅದೊಂದು ಯೂಪಸ್ತಂಭ! ಕರ್ಣನಿಗೆ ಆಶ್ಚರ್ಯದ ಜೊತೆಯಲ್ಲಿ ತಾನು ಬಂದ ದಾರಿ ಸರಿಯಿದೆ, ನನ್ನ ಊಹೆ ನಿಜವಾಗಲಿದೆ ಎಂದು ತುಂಬಾ ಖುಷಿಯಾಯಿತು.

ಅಲ್ಲೇ ಎತ್ತಲೋ ನೋಡಿಕೊಂಡಿದ್ದು ನಿಂತಿದ್ದ ಕೆಂಪರಾಜುವನ್ನು ಕರೆದು “ನೋಡ್ರೀ ಕೆಂಪ್ರಾಜು, ನಾನು ಹೇಳಿದ್ದು ನಿಜ ಅನಿಸ್ತಿದೆ. ಇದು ಯೂಪಸ್ತಂಭ” ಎಂದು ಹೇಳಿದ. ಕೆಂಪರಾಜು ಅದನ್ನೇ ನೋಡಿದ. ಯಾವುದೋ ಇತಿಹಾಸದ ಪುಸ್ತಕದಲ್ಲಿ ಇದನ್ನು ನೋಡಿರುವ ನೆನಪಾಯಿತು. “ಓ, ಇದು… ಪ್ರಾಚೀನ ಕಾಲದಲ್ಲಿ ಜನರು ಪ್ರಾಣಿಗಳನ್ನು ಬಲಿ ಕೊಡೋಕೆ ಯೂಪಸ್ತಂಭಗಳನ್ನು ಕಟ್ತಾರಾಂತ ಕೇಳಿದ್ದೆ ಸಾರ್. ನೋಡಿದ್ರೆ ನಮ್ಮೂರಲ್ಲೇ ಇದೆ!” ಕೆಂಪರಾಜು ಆಶ್ಚರ್ಯದಿಂದಲೇ ಯೂಪಸ್ತಂಭ ನೋಡುತ್ತ ನಿಂತ.

ಕರ್ಣ ತಲೆ ಎತ್ತಿ ಕಾಡಿನ ಕಡೆ ದೃಷ್ಟಿ ನೆಟ್ಟ. ಯೂಪಸ್ತಂಭಕ್ಕೆ ನೇರವಾಗಿ ದೂರದಲ್ಲಿ ವೃತ್ತಾಕಾರದ ದೊಡ್ಡದೊಡ್ಡ ಕಲ್ಲುಗಳು ಕಾಡಿನ ನಡುವೆ ತಲೆ ಎತ್ತಿದ್ದವು. ಗುಡ್ಡದ ಮೇಲೆ ನಿಂತು ನೋಡಿದ್ದರಿಂದಲೋ ಅಥವಾ ಕುರುಚಲು ಕಾಡಿನ ಜಾಗವಾದ್ದರಿಂದಲೋ ಅಥವಾ ಬೃಹತ್ ಕಲ್ಲುಗಳ ಗಾತ್ರದಿಂದಲೋ ಕಲ್ಲುಗಳು ದೂರದಿಂದಲೇ ವೃತ್ತಾಕಾರವಾಗಿ ಕಾಣುತ್ತಿದ್ದವು. ಕರ್ಣ ತನ್ನ ಅದೃಷ್ಟವನ್ನು ಮನಸ್ಸಿನಲ್ಲೇ ಹೊಗಳಿಕೊಳುತ್ತ ಆ ಕಲ್ಲಿನ ರಾಶಿಯನ್ನೇ ನೋಡುತ್ತ, “ಕೆಂಪ್ರಾಜು, ಈ ಯೂಪಸ್ತಂಭನಾ ಅದೇನ್ ಹಾಗೇ ನೋಡ್ತಿದಿರಾ, ಅಲ್ಲಿ ನೋಡ್ರೀ..” ಎಂದ. ಕೆಂಪರಾಜು ಆ ಕಡೆ ನೋಡಿದ. ಅವನಿಗೆ ಅಲ್ಲೇನೂ ಕಾಣಲಿಲ್ಲ. ಅದನ್ನೇ ಕರ್ಣನಿಗೆ ಹೇಳಿದ. “ಸರಿಯಾಗಿ ನೋಡ್ರೀ…” ಎಂದು ಮತ್ತೆ ಹೇಳಿದ. ಕೆಂಪ್ರಾಜು ಸರಿಯಾಗಿ ಗಮನವಿಟ್ಟು ಆ ಕಡೆ ನೋಡಿದ. ಕುರುಚಲು ಕಾಡು ಬಿಟ್ಟು ಬೇರೇನೂ ಕಾಣಲಿಲ್ಲ. “ಯೂಪಸ್ತಂಭದ ನೇರಕ್ಕೆ ನೋಡ್ರಿ ಕೆಂಪ್ರಾಜು” – ಕರ್ಣ ಮತ್ತೆ ಹೇಳಿದ. ಕರ್ಣನ ಮಾತಿನಂತೆ ಕೆಂಪರಾಜು ಆ ಕಡೆಯೇ ನೋಡಿದ. ದೂರದಲ್ಲಿ ಕಾಡಿನ ಮಧ್ಯೆ ವೃತ್ತಾಕಾರದಲ್ಲಿ ದೊಡ್ಡದೊಡ್ಡ ಕಲ್ಲುಗಳು ಕಾಣಿಸಿದವು. ಆದರೆ ಅದೇನು ಅಂತ ಅವನಿಗೆ ಅರ್ಥವಾಗದೆ, ‘ಅದೇನು ಹೇಳಿ’ ಎನ್ನುವಂತೆ ಕರ್ಣನ ಕಡೆ ತಿರುಗಿ ನೋಡಿದ.

“ಗೊತ್ತಾಗಲಿಲ್ಲವೇನ್ರೀ? ಅದ್ನ ನೋಡ್ತಿದ್ರೆ ‘ಡಾಲ್ಮೊನೈಡ್ ಸಿಸ್ಟ್’ ಕಾಲಕ್ಕಿಂತಲೂ ಹಳೆಯಕಾಲದ ಕಬ್ಬಿಣಯುಗದ ಶಿಲಾ ಸಮಾಧಿಗಳ ರೀತಿ ಕಾಣ್ತಿದೆ. ನಿಮ್ಮ ಜಿಲ್ಲೆಯ ಕೆಲವು ಕಡೆ ಡಾಲ್ಮೊನೈಡ್ ಸಿಸ್ಟ್ ಕಾಲದ ಸುಮಾರು ಶಿಲಾಗೋರಿಗಳು ಪತ್ತೆಯಾಗಿವೆ. ಸಮಾಧಿಯ ಮೇಲೆ ಚಿಕ್ಕಮನೆಯ ಆಕಾರದಲ್ಲಿ ಕಲ್ಲು ನೆಟ್ಟಿರ್ತಾರೆ. ಆದರೆ ಇದು ಅದಕ್ಕಿಂತಲೂ ಹಿಂದಿನ ಮನುಷ್ಯರ ಸಮಾಧಿಗಳು ಇರಬೇಕು. ಆಗಿನ ಕಾಲದಲ್ಲಿ ಜನರು ಹೆಣವನ್ನು ಹೂಳಿ, ಹೆಣದ ಜೊತೆಗೆ ಸತ್ತವನಿಗೆ ಪ್ರಿಯವಾದ ವಸ್ತುಗಳನ್ನು ಇಡ್ತಿದ್ರು. ಈಜಿಪ್ಟಿನ ಮಮ್ಮಿಗಳು ಕೂಡ ಇದೇ ಪರಂಪರೆಯ ಮುಂದುವರಿದ ಭಾಗ. ಆದರೆ ಈ ಸಮಾಧಿಗಳು ಅದಕ್ಕೂ ಪೂರ್ವದ್ದು. ಹಾಗಾಗಿ ಸಮಾಧಿಯನ್ನು ಗುರುತಿಸಲಿಕ್ಕೆ ಮತ್ತು ಯಾರೂ ಹೆಣದ ಜೊತೆಗೆ ಇಟ್ಟ ವಸ್ತುಗಳನ್ನು ಕದೀಬಾರ್ದು ಅಂತ ಸಮಾಧಿಗಳ ಮೇಲೆ ಈ ರೀತಿ ದೊಡ್ಡ ಕಲ್ಲುಗಳನ್ನು ಇಡ್ತಿದ್ರೂ” ಕರ್ಣ, ಕೆಂಪರಾಜುವಿಗೆ ಹೇಳಿದ.

“ಕೆಂಪ್ರಾಜು, ಇದುವರೆಗೂ ನಮ್ಮ ದೇಶದಲ್ಲೇ ಕೆಲವೇ ಕೆಲವು ಕಡೆ ಮಾತ್ರ ಕಬ್ಬಿಣಯುಗದ ಶಿಲಾ ಸಮಾಧಿಗಳು ಪತ್ತೆಯಾಗಿರೋದು. ಇದೀಗ ನಾವು ನಿಮ್ಮೂರಿನ ಕಾಡಿನಲ್ಲಿ ಇವನ್ನು ಪತ್ತೆ ಮಾಡಿದೀವಿ..”

ಕರ್ಣ ಮತ್ತು ಕೆಂಪರಾಜು ಇಬ್ಬರೂ ಏನೋ ಸಾಧಿಸಿದ ಹುಮ್ಮಸ್ಸಿನಲ್ಲಿದ್ದರೆ, ಕಿಟ್ಟಿಯು ಅರ್ಥವಾಗದ ಅವರ ಮಾತುಗಳಿಗೆ ಕಿವಿ ಕೊಡುತ್ತ, ಸಂಜೆಯಾಗುತ್ತಾ ಬಂದರೂ ಹೊಟ್ಟೆಗೆ ಕೂಳು ಬಿದ್ದಿಲ್ಲವಾದ್ದರಿಂದ ಹೊಟ್ಟೆಯ ಮೇಲೆ ಕೈ ಸವರುತ್ತಾ ಸುಮ್ಮನೆ ನಿಂತಿದ್ದ.

ಅವರಿಬ್ಬರೂ ಆ ಕಲ್ಲುಗಳ ಕಡೆಯೇ ನೋಡಿ ಮಾತನಾಡುತ್ತಿದ್ದರಿಂದ ಕಿಟ್ಟಿಗೆ ಅದೇನೋ ಜ್ಞಾಪಕವಾಗಿ “ಸಾರ್ ನಿಮ್ಗೊಂದು ವಿಷ್ಯಾ ಗೊತ್ತಾ? ಅಲ್ಲಿ ಕಲ್ಲುಬಂಡೆಗಳು ಇದಾವಲ್ಲಾ ಅಲ್ಲಿ ರಾತ್ರಿ ಹೊತ್ತು ಕೊಳ್ಳಿದೆವ್ವಾ ಕಾಣಿಸಿಕೊಳ್ಳುತ್ತೆ ಅಂತೆ. ನಮ್ಮ ಸೂರಜ್ಜ ಎಷ್ಟೋ ಸಲ ಅಲ್ಲಿ ಕೊಳ್ಳಿ ದೆವ್ವ ನೋಡಿದಾರಂತೆ. ನಂಜನ ಅಪ್ಪ ಕೂಡ ಹೋದ ವರ್ಷ ಕಾಡಿನಾಗೆ ಕೊಳ್ಳಿ ದೆವ್ವ ನೋಡಿ ಹೆದ್ರಕೊಂಡು ಓಡಿ ಬರ್ಬೇಕಾದ್ರೆ ಹಾವು ಕಚ್ಚಿ ಸತ್ತೋಗಿದ್ದ. ಆ ಜಾಗ ಬಲು ಡೇಂಜರ್ ಐತಿ ಸಾರ್” ಅಂತ ಮತ್ತೊಂದು ಹುಳ ಬಿಟ್ಟ.

ಕೊಳ್ಳಿ ದೆವ್ವದ ಕತೆಗೆಲ್ಲ ಕರ್ಣ ಹೆದರದಿದ್ದರೂ, ಕೆಂಪ್ರಾಜು ಬೆವರತೊಡಗಿದ. ಎಷ್ಟಾದರೂ ಹಳ್ಳಿಯವನು, ಅವನೂ ಕಣ್ಣಾರೆ ನೋಡದಿದ್ದರೂ, ಕಿವಿಯಾರೆ ಅದೆಷ್ಟು ಸಲ ಕೊಳ್ಳಿ ದೆವ್ವದ ಮಹಾತ್ಮೆಯನ್ನು ಅದೆಷ್ಟು ಜನರ ಬಾಯಲ್ಲಿ ಕೇಳಿಲ್ಲ. ಅಷ್ಟೇ ಅಲ್ಲದೆ, ಕಿಟ್ಟಿ ಹೇಳಿದಂತೆ ನಂಜನ ಅಪ್ಪ ಕೊಳ್ಳಿ ದೆವ್ವ ನೋಡಿ ಸತ್ತಾಗ ಅವನ ಹೆಣವನ್ನು ಸುಡಗಾಡಿನಲ್ಲಿ ಸುಡುವಾಗ ತಾನೂ ಅಲ್ಲೇ ಇದ್ದೆನಲ್ಲ. ಕೆಲವ್ರು ಹಾವು ಕಚ್ಚಿ ಸತ್ತಿದಾನೆ, ಅದ್ಕೆ ಮೈ ನಂಜೇರಿದೆ ಅಂದ್ರೂ ಕೂಡ ಮಹಾಲಿಂಗಸ್ವಾಮಿಗಳೇ “ಅಲ್ಲಿ ಕೊಳ್ಳಿ ದೆವ್ವ ಇದೆ ಅಂತ ನನ್ನ ತಾತ ಮುತ್ತಾತನೂ ಹೇಳ್ತಿದ್ರು. ಇವನು ಸಾಯಾಕೆ ಅಲ್ಲಿಗೆ ಯಾಕೆ ಹೋಗ್ಬೇಕಿತ್ತು!” ಅಂತ ಸತ್ತ ಹೆಣಕ್ಕೆ ಉಗಿದದ್ದೂ ಜ್ಞಾಪಕಕ್ಕೆ ಬಂತು.

ಕೆAಪರಾಜು ಇನ್ನೂ ಅವರೂರಿನ ಕೊಳ್ಳಿ ದೆವ್ವದ ಕಥೆಯಲ್ಲೇ ಮುಳುಗಿದ್ದ. ಅಷ್ಟರಲ್ಲಿ ಕರ್ಣ “ಸಾರ್, ನಾವೂ ಒಂದ್ ಸಲ ಅಲ್ಲಿಗೋಗಿ ಅದೇನೂ ಅಂತ ಡೀಟೇಲ್ ಆಗಿ ನೋಡಿ ಬರೋಣ” ಎಂದು ಕರೆದ.

ಅದಾಗಲೇ ಸೂರ್ಯ ಕಾಡಿನ ಮರೆಗೆ ಸ್ವಲ್ಪಸ್ವಲ್ಪವೇ ವಾಲಿಕೊಳ್ಳುತ್ತಿದ್ದ. ಕೊಳ್ಳಿ ದೆವ್ವದ ಗುಂಗಿನಲ್ಲಿದ್ದ ಕಿಟ್ಟಿಗೆ ಅಲ್ಲಿಗೆ ಹೋಗೋಣ ಅಂದಿದ್ದಕ್ಕೆ ಗಾಬರಿಯಾಗಿ, ಸುತಾರಂ ಬರಲು ಒಪ್ಪಲಿಲ್ಲ. ಈ ಪುಕ್ಕಲನನ್ನು ಕರ್ಕೊಂಡು ಇಷ್ಟು ದೂರ ಬಂದಿದ್ದಕ್ಕೆ ಕರ್ಣನೂ ತಲೆ ಚಚ್ಚಿಕೊಂಡ. ಆದರೂ ತನಗೀಗ ದಾರಿ ಗೊತ್ತಾಗಿದೆ. ನಾನೇ ಹೋಗಿ ಆದಷ್ಟು ಬೇಗ ಕೆಲ್ಸ ಮುಗಿಸಿ ಊರು ಬಿಡೋದು ಒಳ್ಳೇದು. ಈ ಕೆಂಪ್ರಾಜುವನ್ನು ಜೊತೆ ಮಾಡಿಕೊಂಡು ಏನಾದ್ರೂ ಎಡವಟ್ಟಾದರೆ ಕಷ್ಟ ಎಂದುಕೊಂಡು “ಕಿಟ್ಟಿ ಒಬ್ಬನನ್ನೇ ಇಷ್ಟು ಹೊತ್ತಿನಲ್ಲಿ ಊರಿಗೆ ಕಳಿಸೋದು ಸ್ವಲ್ಪ್ಪ ರಿಸ್ಕ್ ಕೆಂಪ್ರಾಜು, ನೀವೂ ಅವನ ಜೊತೆಗೆ ಊರಿಗೆ ಹೋಗಿಬಿಡಿ. ನಾನೊಂದು ಸ್ವಲ್ಪ ಅದನ್ನು ನೋಡಿಕೊಂಡು ಬೇಗ ವಾಪಾಸು ಬರ್ತೀನಿ” ಎಂದು ಕಿಟ್ಟಿ ಮತ್ತು ಕೆಂಪ್ರಾಜುವಿಗೆ ಹೇಳಿ, ಕರ್ಣ ಕಾಡಿನ ದಾರಿ ಹಿಡಿದ.

ಕುರುಚಲು ಕಾಡಾಗಿದ್ದರಿಂದಲೊ ಅಥವಾ ಆ ಬೆಟ್ಟದ ನೇರಕ್ಕೆ ಹೋಗುತ್ತಿದ್ದುದರಿಂದಲೊ ಅಥವಾ ಆದಷ್ಟು ಬೇಗ ಕೆಲಸ ಮುಗಿಸಿ ಜಾಗ ಖಾಲಿ ಮಾಡಬೇಕೆಂಬ ಅವಸರದಲ್ಲಿ ಕೆಲಸ ಮುಗಿಸಲು ಹೊರಟ್ಟಿದ್ದರಿಂದಲೊ ಏನೋ ಅಂತೂ ಕರ್ಣ ವೇಗವಾಗಿ ಕಾಡಿನ ನಡುವೆ ಹಾಗೂಹೀಗೂ ದಾರಿ ಮಾಡಿಕೊಂಡು, ಜಾಲಿ ಗಿಡಗಳಿಂದ ಮೈ ಕೈ ತರಚಿಕೊಂಡು, ಒಂದೆರಡು ಬಾರಿ ನೆಲದೊಳಗೆ ಹಬ್ಬಿದ್ದ ಬಳ್ಳಿಗೂ, ಮರದ ಕಾಂಡಕ್ಕೂ ಎಡವಿ ಕಾಡಿನೊಳಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತ ಕೊನೆಗೂ ಸಮಾಧಿಯಿದ್ದ ಜಾಗಕ್ಕೆ ಬಂದ. ಆ ಜಾಗವನ್ನು ನೋಡಿದವನಿಗೆ ತನ್ನ ಊಹೆ ನಿಜವಾಗಿ, ಇಷ್ಟು ವೇಗವಾಗಿ ಬಂದ ಕೆಲಸವೂ ಒಂದು ಹಂತಕ್ಕೆ ಮುಗಿದಿದ್ದು ನೋಡಿ ಬಾರೀ ಖುಷಿಯಾಯಿತು. ಆ ಸಮಾಧಿ ಕಲ್ಲುಗಳ ರಾಶಿಯ ಬಳಿ ಹೋದಂತೆ ಕಲ್ಲುಗಳ ಅಗಾಧತೆಯೇ ಅವನನ್ನು ಬೆಚ್ಚಿಬೀಳಿಸಿತು. ಸುಮಾರಾಗಿ ಬೇರೆಲ್ಲ ಕಡೆಗಳಲ್ಲೂ ಮೂರರಿಂದ ನಾಲ್ಕಡಿ ಕಲ್ಲುಗಳಷ್ಟೇ ಶಿಲಾ ಸಮಾಧಿಗಳ ಮೇಲೆ ಕಾಣಿಸಿಕೊಂಡಿದ್ದರೆ ಇಲ್ಲಿನ ಶಿಲಾ ಸಮಾಧಿಗಳ ಮೇಲಿನ ಕಲ್ಲುಗಳು ಮನುಷ್ಯನ ಗಾತ್ರದಲ್ಲಿದ್ದವು. ಹಾಗಾಗಿಯೇ ಗುಡ್ಡದ ಮೇಲಿಂದಲೇ ಈ ಆಕೃತಿ ಅಷ್ಟು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದುಕೊAಡ. ಆದರೂ ಇಷ್ಟು ದೊಡ್ಡ ಕಲ್ಲುಗಳಿರುವುದರಿಂದ ಕೆಲಸ ಸ್ವಲ್ಪ ನಿಧಾನವಾಗಲಿದೆ. ಇರ್ಲಿ ಇಷ್ಟು ವರ್ಷ ಎಲ್ಲೆಲ್ಲೋ ಅಲೆದಾಡಿದ ನಂತರ ದೊಡ್ಡ ಬೇಟೆಯೇ ಎದುರಿಗೆ ಸಿಕ್ಕಿರುವಾಗ ಒಂದೆರಡು ದಿನ ತಡವಾದರೂ ಪರವಾಗಿಲ್ಲ, ತನ್ನ ಕೆಲಸ ಮುಗಿಸಿಯೇ ಬಿಡಬೇಕು ಎಂದು ನಿಶ್ಚಯಿಸಿಕೊಂಡ.

ಅಷ್ಟರಲ್ಲಿ ಅಲ್ಲಿ ಯಾವುದೋ ಹೆಜ್ಜೆಯ ಸಪ್ಪಳ ಕೇಳಿಸಿತು. ಈ ಕಾಡಿನೊಳಗೆ ಯಾರಿರಬಹುದು ಎಂಬ ಕುತೂಹಲದಿಂದ ತಾನು ಬಂದ ವಿರುದ್ಧ ದಿಕ್ಕಿಗೆ ನೋಡುತ್ತಾನೆ. ಎರಡು ದೊಡ್ಡ ಆಲದಮರದ ಬಿಳಲಿನ ಕೆಳಗೆ ಗುಹೆಯ ರೀತಿಯ ಜಾಗವೊಂದು ಕರ್ಣನಿಗೆ ಕಂಡಿತು. ತಕ್ಷಣವೇ ಕಿಟ್ಟಿ ಹೇಳಿದ ನಿಧಿಯ ಕತೆ ನೆನಪಾಗಿ, ಆ ಗುಹೆ ಇರೋದಂತೂ ನಿಜ… ಎಂದು ಆಶ್ಚರ್ಯಪಟ್ಟ. ಗುಹೆಯ ಒಳಗೊಮ್ಮೆ ಹೋಗಿ ಬರುವ ಮನಸ್ಸಾಗಿ, ಮೆಲ್ಲನೆ ಆ ಕಡೆ ಹೆಜ್ಜೆಯಿಟ್ಟ. ಕಳ್ಳ ಬೆಕ್ಕಿನ ತರ ಹೆಜ್ಜೆ ಇಡುತ್ತ ಕರ್ಣ ಆಲದಮರದ ಕೆಳಗೆ ಬಂದ. ಎರಡು ಆಲದಮರದ ನಡುವೆ ಆ ಗುಹೆಯೊಳಗೆ ಹೋಗಲು ದಾರಿಯಿತ್ತು. ಹೊರಗಿನಿಂದ ಅದೇನೂ ಅಷ್ಟೊಂದು ದೊಡ್ಡ ಗುಹೆಯಾಗಿರಲಿಲ್ಲ. ಕರ್ಣ ಆಲದಮರದ ಬಿಳಲುಗಳನ್ನು ಸರಿಸುತ್ತ, ಗುಹೆಯ ಒಳಹೊಕ್ಕ. ಗುಹೆಯ ಒಳಗಡೆ ಕತ್ತಲ್ಲಿದ್ದುದರಿಂದ ಮೊಬೈಲ್ ಟಾರ್ಚ್ ಬಿಟ್ಟು ಒಳನಡೆದ. ಗುಹೆಯ ಒಳಗಡೆ ಹೋದವನಿಗೆ ಏನೋ ಕಂಡಂತಾಗಿ ಆ ಕಡೆ ಟಾರ್ಚ್ ಬಿಟ್ಟ. ಅಲ್ಲೊಂದು ಕಲ್ಲಿನ ತೊಟ್ಟಿ ಕಂಡಿತು. ಆಶ್ಚರ್ಯದಿಂದ ಕರ್ಣ ಆ ಕಡೆ ನಡೆದ. ಹತ್ತಿರ ಹೋಗಿ ನೋಡಿದರೆ ತೊಟ್ಟಿಯ ಮೇಲೆ ಆಲದಮರದ ಎಲೆಗಳು ಬಿದ್ದಿದ್ದವು. ಅದರ ಮೇಲೆಯೇ ಟಾರ್ಚ್ ಬಿಟ್ಟು ನೋಡಿದರೆ ಯಾರೋ ಮನುಷ್ಯರು ಎಲೆಯನ್ನು ಹರಡಿದಂತೆ ಕಂಡಿತು. ಕುತೂಹಲದಿಂದ ಎಲೆಗಳನ್ನು ಸರಿಸಿನೋಡಿದ.

ಟಾರ್ಚ್ನ ಬೆಳಕಿಗೆ ಬಂಗಾರದ ಬಣ್ಣ ಗೋಚರಿಸಿತು. ಅಷ್ಟರಲ್ಲಿ ಗುಹೆಯ ಕತ್ತಲಿಗೆ ಕಣ್ಣು ಹೊಂದಾಣಿಕೆಯಾಗಿತ್ತು. ಬಂಗಾರದ ನಿಧಿ ಎಂದುಕೊಂಡು ಮುಟ್ಟಿ ನೋಡುತ್ತಾನೆ, ಅದು ಬಂಗಾರ ಅಲ್ಲ; ಚರ್ಮದ ರೀತಿಯಲ್ಲಿ ಇತ್ತು.

ಅದು ಜಿಂಕೆಯ ಚರ್ಮ!

ಕರ್ಣನಿಗೆ ತನ್ನ ಕಣ್ಣನ್ನು ತಾನೇ ನಂಬಲು ಸಾಧ್ಯವಾಗಲೇ ಇಲ್ಲ. ಎಲೆಗಳನ್ನು ಸರಿಸಿ ಚರ್ಮ ಎತ್ತಿಕೊಂಡರೆ, ಅದರ ಕೆಳಗೆ ಇನ್ನೂ ಚರ್ಮದ ರಾಶಿಯೇ ಇತ್ತು. ಎಂಟೋ ಹತ್ತೋ ಜಿಂಕೆಗಳ ಚರ್ಮ ಅಲ್ಲಿ ಶೇಖರಣೆಯಾಗಿತ್ತು. ಕರ್ಣನಿಗೆ ತಾನು ಹುಡುಕಿಕೊಂಡು ಬಂದ ನಿಧಿಗಿಂತ ದೊಡ್ಡ ನಿಧಿ ಇಲ್ಲೇ ದೊರಕಿತ್ತು. ಹೇಗಾದರೂ ಮಾಡಿ ಬೇಗ ಎರಡೂ ಕೆಲಸವನ್ನೂ ಮುಗಿಸಬೇಕು ಎಂದುಕೊಂಡ. ಆದರೆ ಕಣ್ಣಮುಂದೆಯೇ ಲಕ್ಷಗಟ್ಟಲೆ ಬೆಲೆಬಾಳುವ ಚರ್ಮವಿದ್ದರೂ ಅದನ್ನು ಹೇಗೆ ಸಾಗಿಸಬೇಕು ಎನ್ನುವುದು ಹೊಳೆಯದೇ, ಮೊದಲಿನಂತೆಯೇ ಎಲೆಗಳನ್ನು ಮುಚ್ಚಿ ಗುಹೆಯ ದ್ವಾರದ ಬಳಿ ಬಂದ.

ಅಷ್ಟರಲ್ಲೇ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಎದುರಿಗೆ ಪ್ರತ್ಯಕ್ಷವಾಗಿದ್ದ. ಅದಾಗಲೇ ಕತ್ತಲು ಕಾಡನ್ನೆಲ್ಲ ಆವರಿಸಿಕೊಳ್ಳುತ್ತಿದ್ದರಿಂದ ಎದುರಿಗೆ ನಿಂತ ವ್ಯಕ್ತಿಯ ಮುಖವೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಆದರೆ ಉದ್ದ ಕೂದಲಿದ್ದ, ಎದೆಯವರೆಗೂ ಗಡ್ಡಬಿಟ್ಟಿದ್ದ ಆ ವ್ಯಕ್ತಿಯು ಕರ್ಣ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಅದೆಲ್ಲಿಂದಲೋ ಕೊಳಲಿನಾಕಾರದ ಬಿದಿರನ್ನು ಹೊರತೆಗೆದು ಅದನ್ನು ಬಾಯಿಯ ಎದುರಿಗಿಟ್ಟುಕೊಂಡ. ಇದೇನು – ಎಂದು ಕುತೂಹಲದಿಂದ ನೋಡುವಷ್ಟರಲ್ಲೇ, ಅದರಿಂದ ಹಾರಿದ ದೊಡ್ಡ ಸೂಜಿಯೊಂದು ಕರ್ಣನ ಕುತ್ತಿಗೆಗೆ ಬಂದು ಬಿತ್ತು. ಅಷ್ಟೇ ವೇಗದಲ್ಲಿ ಕರ್ಣ ಕುಸಿದುಬಿದ್ದ.

ಕೆಳಗೆ ಬಿದ್ದವನು ಮತ್ತೊಮ್ಮೆ ಮೇಲೇಳುವುದೇ ಇಲ್ಲ ಎಂದು ಗೊತ್ತಿದ್ದ ಆ ಗಡ್ಡಧಾರಿ ವ್ಯಕ್ತಿ, ಗುಹೆಯ ಒಳಗ್ಹೋಗಿ ಅಲ್ಲಿದ್ದ ಜಿಂಕೆಯ ಚರ್ಮವನ್ನೆಲ್ಲ ತನ್ನ ಗೋಣಿಚೀಲದೊಳಗೆ ತುಂಬಿಕೊಂಡು ಹೊರಬಂದ.

ಅಷ್ಟೊತ್ತಿಗಾಗಲೇ ಅಲ್ಲಿ ಬಿದ್ದಿದ್ದವನ ಪ್ರಾಣಪಕ್ಷಿ ಹಾರಿಹೋಗಿರುವುದನ್ನು ಖಚಿತಪಡಿಸಿಕೊಂಡ ಆ ಗಡ್ಡಧಾರಿ ವ್ಯಕ್ತಿ, ಕುತ್ತಿಗೆಯ ಬಳಿ ಸಿಲುಕಿದ್ದ ಸೂಜಿಯನ್ನು ಸೂಕ್ಷ್ಮವಾಗಿ ಕಿತ್ತು, ಅದಕ್ಕೆ ಅಂಟಿದ್ದ ರಕ್ತದ ಕಲೆಯನ್ನು ಒರೆಸಿ, ತನ್ನ ಉರ್ಜಿಲದೊಳಗೆ ಹಾಕಿಕೊಂಡ. ಬೆನ್ನಿನ ಮೇಲಿದ್ದ ನಾಡಬಂದೂಕನ್ನೂ, ಕೈಯಲ್ಲಿದ್ದ ಕೊಳಲಿನಂತಹ ಬಿದಿರನ್ನೂ ಗೋಣಿಚೀಲದೊಳಗೆ ತುರುಕಿಕೊಂಡು ಅಲ್ಲಿ ನಡೆದಿರುವುದಕ್ಕೂ ತನಗೂ ಸಂಬಂಧವಿಲ್ಲ ಎನ್ನುವಂತೆ ತನ್ನ ಚರ್ಮದ ಚಪ್ಪಲಿ ಎಳೆಯುತ್ತ ಊರಿನ ದಾರಿ ಹಿಡಿದ.

ಗೋಣಿಚೀಲದೊಳಗೆ ಜಿಂಕೆಯ ಚರ್ಮವನ್ನಿಟ್ಟುಕೊಂಡು ಹೋಗುತ್ತಿದ್ದ ಗಡ್ಡಧಾರಿ ವ್ಯಕ್ತಿಯು, ತಾನೀಗ ಬಿದಿರಿನಿಂದ ವಿಷದ ಸೂಜಿ ಊದಿ ಕೊಂದು ಬಂದ ವ್ಯಕ್ತಿ ಯಾರಿರಬಹುದು ಎಂದು ಯೋಚಿಸತೊಡಗಿದ. ತಮ್ಮ ದಂಧೆಯ ವಿಷಯ ತಿಳಿದಿರೋದು ನನಗೆ ಮತ್ತು ಮಹಾಲಿಂಗಸ್ವಾಮಿಗಷ್ಟೇ. ನಾನು ಕಾಡಿನಲ್ಲಿ ಜಿಂಕೆಯನ್ನು ಬೇಟೆಯಾಡಿ ಚರ್ಮ ಒಣಗಿಸಿ ಮಹಾಲಿಂಗಸ್ವಾಮಿ ಹತ್ರ ಕೊಡ್ತೀನಿ. ಆತ ಬುಡುಬುಡುಕೆಯವನ ವೇಷ ಹಾಕಿಕೊಂಡು ಆರಾಮಾಗಿ ಮಾಲು ಸಾಗಿಸ್ತಾನೆ. ಇದರ ಸುಳಿವೇ ನಮ್ಮೂರಿನ ಯಾರಿಗೂ ಇಲ್ಲ. ಹೋದ ವರ್ಷ ನಮ್ಮೂರೊನೊಬ್ಬ ನಮ್ ದಂಧೆ ವಾಸ್ನೇ ಹುಡ್ಕಂಡು ಬಂದಾಗ ಈಗ ಮಾಡಿದಂಗೆ ಹಾವಿನ ವಿಷವಿದ್ದ ಸೂಜಿಯನ್ನು ಬಿದಿರಿನ ಮೂಲಕ ಹಾರಿಸಿ ಅವನ ಪ್ರಾಣ ತೆಗೆದಿದ್ದೆ.

ಊರ ಜನಾನೂ ಅವನು ಹಾವು ಕಡಿಸ್ಕೊಂಡು ಸತ್ತ ಅಂತಾನೇ ನಂಬಿದ್ರು. ಕೊಳ್ಳಿ ದೆವ್ವ, ಏಳಡಿ ಸರ್ಪ ಅಂತ ಕತೆ ಕಟ್ಟಿರೋದ್ರಿಂದ ನಮ್ಮೂರ ಯಾವನಿಗೂ ಈ ಕಡೆ ತಲೆಹಾಕಿ ಮಲ್ಗೋ ಧೈರ್ಯ ಬರಾಕಿಲ್ಲ. ಅಂತಾದ್ರಲ್ಲಿ ಇದ್ಯಾರಿರಬಹುದು ಅಂತ ಯೋಚನೆ ಮಾಡ್ತಾ “ಯಾವಾನಾದ್ರೂ ಆಗಿರ್ಲಿ ನಂಗೇನು? ಇವತ್ತೇ ಆ ಮಹಾಲಿಂಗನಿಗೆ ಇದನ್ನೆಲ್ಲ ಇಡ್ಕೊಂಡು ಊರು ಬಿಡೋಕೆ ಹೇಳ್ಬೇಕು” ಅಂತ ಬಿರಬಿರನೆ ಹಳ್ಳದ ದಂಡೆಯ ಮೇಲಿದ್ದ ಮಠದ ಕಡೆಗೆ ನಡೆದ. ನಡೆದ ವಿಷಯವನ್ನೆಲ್ಲ ಮಹಾಲಿಂಗನಿಗೆ ಹೇಳಿದ. ಗೋಣಿಚೀಲ ಅವನ ಕೈಗಿಟ್ಟು, ವೇಷ ಹಾಕಿಸಿ ಮಹಾಲಿಂಗಸ್ವಾಮಿಯನ್ನು ಬುಡುಬುಡಿಕೆಯವನನ್ನಾಗಿ ರೂಪಾಂತರ ಮಾಡಿ ಊರು ಬಿಡಿಸಿದ.

ರಾತ್ರಿ ಎಲ್ಲ ಕಳೆದರೂ ಕರ್ಣ ಮನೆಗೆ ಬಾರದೆ ಇದಿದ್ದರಿಂದ, ಬೆಳ್ಳಂಬೆಳಗ್ಗೆಯೇ ಮೆಂಬರ್ ವೆಂಕಟೇಶಿ ಊರ ತುಂಬಾ ತನ್ನ ಜನರನ್ನು ಬಿಟ್ಟು ಅವನನ್ನು ಹುಡುಕಿಸಿದ. ಎಲ್ಲೂ ಕರ್ಣ ಪತ್ತೆಯಾಗದಿದ್ದಾಗ, ಕೆಂಪ್ರಾಜುವನ್ನು ಕರೆದು ಕೇಳಿದ. ಅವನು ನಡುಗುತ್ತಾ ನಿನ್ನೆ ನಡೆದ ಎಲ್ಲ ವಿಷಯವನ್ನೂ ಹೇಳಿದ. ವೆಂಕಟೇಶಿ ತನ್ನ ಒಂದೈದು ಜನರನ್ನು ಕರೆದು ಕಾಡಿನಲ್ಲಿ ಕರ್ಣನನ್ನು ಹುಡುಕಲು ಹೇಳಿದ. ಕೆಂಪರಾಜು ಮಾತ್ರ ಅವರ ಜೊತೆ ಮತ್ತೆ ಕಾಡಿನೊಳಗೆ ಹೋಗಲು ತಯಾರಿರಲಿಲ್ಲ, ವೆಂಕಟೇಶಿ ಗದರಿಸಿ “ಹೋಗ್ದಿದ್ದರೆ ನಿನ್ನ ಕೆಲ್ಸದಿಂದ ತಗಸಾಕ್ತೀನಿ…” ಎಂದು ಗದರಿಸಿದಾಗ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡು ಅವರ ಜೊತೆ ಹೊರಟುನಿಂತ. ಏನಾದ್ರೂ ಆಗಲಿ ಅಂತ ಮೆಂಬರ್ ವೆಂಕಟೇಶಿ ಕೂಡ ಅವರ ಜೊತೆ ನಡೆದ. ಕೆಂಪರಾಜುವನ್ನು ಮುಂದೆಬಿಟ್ಟು ಎಲ್ಲರೂ ಅವನನ್ನು ಅನುಸರಿಸಿ ಹೊರಟರು. ಕೊನೆಗೂ ಶಿಲಾಸಮಾಧಿಗಳಿದ್ದ ಜಾಗಕ್ಕೆ ಬಂದು ತಲಪಿದರು.

“ವೆಂಕಟೇಶಣ್ಣಾ…” ಕೆಂಪ್ರಾಜು ಕೂಗಿಕೊಂಡ.

“ಏನಾತ್ಲಾ ನಿನ್ಗೆ..” ಎನ್ನುತ್ತ ವೆಂಕಟೇಶಿಯ ಜೊತೆಗೆ ಅವನ ಆಳುಗಳೆಲ್ಲ ಕೆಂಪ್ರಾಜು ಕೂಗಿಕೊಂಡ ಸ್ಥಳಕ್ಕೆ ಬಂದು ನೋಡುತ್ತಾರೆ, ಅಲ್ಲಿ ಕರ್ಣನ ಮೈಯೆಲ್ಲ ವಿಷವೇರಿ ನೀಲಿಬಣ್ಣಕ್ಕೆ ತಿರುಗಿತ್ತು.

ಅಲ್ಲಿದ್ದ ವೆಂಕಟೇಶಿಯ ಆಳುಗಳೆಲ್ಲ ಇದು ಏಳಡಿ ಸರ್ಪದ್ದೇ ಕೆಲ್ಸ ಎಂದುಕೊಂಡು ಭಯಬಿದ್ದು, ಅವನ ಹೆಣವನ್ನು ಹೊತ್ತುಕೊಂಡು ಓಡೋಡಿ ಊರು ತಲಪಿದರು. ಕರ್ಣನು ಹೆಣವಾಗಿದ್ದರಿಂದ, ವೆಂಕಟೇಶಿ ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ. ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ಆಫೀಸರ್ ಒಬ್ಬರು ಸತ್ತಿದ್ದಾರೆ ಎಂದು ಗೊತ್ತಾಗಿದ್ದೇ ತಡ, ಪೊಲೀಸರು ಕೂಡ ಮೀಡಿಯಾದವರು ಮತ್ತು ಒಂದಿಬ್ಬರು ಸ್ಥಳೀಯ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳನ್ನು ಕರೆದುಕೊಂಡು ಚಿನ್ನೊಬನಹಳ್ಳಿ ಕಡೆಗೆ ಗಾಡಿ ತಿರುಗಿಸಿದರು.

ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು “ತಮಗೆ ನಮ್ಮ ಇಲಾಖೆಯ ಯಾವ ಅಧಿಕಾರಿ ಕೂಡ ಇಲ್ಲಿಗೆ ಬಂದಿರುವ ಬಗ್ಗೆ ಮಾಹಿತಿ ಇಲ್ಲ ಸಾರ್” ಎಂದು ಪೊಲೀಸರಿಗೆ ಮತ್ತೆ ಪತ್ರಕರ್ತರಿಗೆ ಪದೇಪದೇ ಹೇಳುತ್ತಿದ್ದರು. ಹಾಗಾಗಿ ಊರ ಜನಗಳ ಜೊತೆಗೆ ಪತ್ರಕರ್ತರಿಗೂ, ಪೊಲೀಸರಿಗೂ ‘ಹಾಗಾದರೆ ಸತ್ತವನು ಯಾರಿರಬಹುದು?’ ಎಂಬ ಕುತೂಹಲ ಜಾಸ್ತಿಯಾಯ್ತು. ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳು ತಮ್ಮ ಮೇಲಧಿಕಾರಿಗಳಿಗೆ ಫೋನ್ ಮಾಡಿ ಕೇಳಿದರೆ, ತಾವು ಯಾರನ್ನೂ ಅಲ್ಲಿಗೆ ಕಳಿಸಿಲ್ಲ ಎಂದು ಉತ್ತರಿಸಿ ಫೋನ್ ಕಟ್ ಮಾಡಿದ್ದರು.

ಹಾಗಾಗಿ ಕರ್ಣನ ಹೆಣ ಹೊತ್ತುಕೊಂಡು ವೆಂಕಟೇಶಿಯ ಜೊತೆಗೆ ಅವನ ಆಳುಗಳು ಬರುವ ವೇಳೆಗೆ ಊರಿನ ಪಂಚಾಯತಿಕಟ್ಟೆಯ ಬಳಿ ಜಾತ್ರೆಯೇ ನೆರೆದಿತ್ತು.

ಹೆಣ ಹೊತ್ತುಕೊಂಡು ಬಂದ ವೆಂಕಟೇಶಿಯ ಆಳುಗಳೆಲ್ಲ, “ಈಯಪ್ಪಾ, ನಿಧಿಯಿರೋ ಗುಹೆ ಹತ್ರ ಹೋಗಿದ್ದ. ಏಳಡಿ ಸರ್ಪ ಕಡ್ದು ಸತ್ತುಹೋಗಿದಾನೆ” ಅಂತ ತಮ್ಮೂರಿನ ಜನರಿಗೆ ಹೇಳುತ್ತಿದ್ದರೆ, ಅವರೆಲ್ಲರೂ ನೀಲಿಬಣ್ಣಕ್ಕೆ ತಿರುಗಿದ್ದ ಕರ್ಣನ ಹೆಣವನ್ನು ಬಿಟ್ಟ ಬಾಯಿಯಿಂದ ನೋಡುತ್ತ್ತ, ಏಳಡಿ ಸರ್ಪವನ್ನೂ, ನಿಧಿಯ ಮಹಾತ್ಮೆಯನ್ನು ಪಕ್ಕದಲ್ಲಿ ನಿಂತಿದ್ದವರಿಗೆಲ್ಲ ಹೇಳುತ್ತ ನಿಂತರು.

ಅಷ್ಟರಲ್ಲಿ ಪೊಲೀಸರು ಊರಿನವರನ್ನು ಪಕ್ಕಕ್ಕೆ ಸರಿಸುತ್ತ, ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳಿಗೆ ಜಾಗ ಮಾಡಿಕೊಟ್ಟರು. ನೀಲಿಬಣ್ಣಕ್ಕೆ ತಿರುಗಿದ್ದ ಹೆಣದ ಮುಖವನ್ನು ನೋಡುತ್ತಲೇ ಒಬ್ಬ ಅಧಿಕಾರಿಗೆ ಏನೋ ಹೊಳೆದಂತಾಯಿತು.

ಪೊಲೀಸರು ಹಾಗೂ ಮೀಡಿಯಾದವರನ್ನು ಹತ್ತಿರ ಕರೆದು “ನಿಮಗೊಂದು ಇಂಪಾರ್ಟೆಂಟ್ ವಿಷಯ ಹೇಳ್ಬೇಕು. ಇಲ್ಲಿ ಸತ್ತು ಬಿದ್ದಿರೋನು ನಮ್ಮ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿ ಅಲ್ಲ. ಇವನೊಬ್ಬ ಮೋಸ್ಟ್ ವಾಂಟೆಡ್ ಆ್ಯಂಟಿಕ್ ಕಳ್ಳ!” – ಎಂದರು.

ಗುಂಪಿನಲ್ಲಿ ಮತ್ತೆ ಗದ್ದಲ ಎದ್ದಿತು.

“ಹೌದು, ಇವನೊಬ್ಬ ಕುಖ್ಯಾತ ಆ್ಯಂಟಿಕ್ ಕಳ್ಳ. ಇವನು ನಮ್ಮ ಇಲಾಖೆಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್‌ಗಳಲ್ಲಿ ಒಬ್ಬ. ಹಲವು ವರ್ಷಗಳಿಂದ ನಮ್ಮ ಇಲಾಖೆ ಇವನ ಬೆನ್ನು ಬಿದ್ದಿತ್ತು. ಈತ ಇಂಡಿಯಾದಲ್ಲಿರುವ ಎಷ್ಟೋ ಬೆಲೆಬಾಳುವ ಆ್ಯಂಟಿಕ್‌ಪೀಸ್‌ಗಳನ್ನು ಬ್ಲಾಕ್‌ಮಾರ್ಕೆಟ್‌ನಲ್ಲಿ ಲಕ್ಷಗಟ್ಟಲೆ ಬೆಲೆಗೆ ಮಾರುತ್ತಿದ್ದ. ಅದರಲ್ಲೂ ಇವನು ಶಿಲಾಸಮಾಧಿಗಳ ಕೆಳಗೆ ಸಿಗೋ ಆ್ಯಂಟಿಕ್‌ಪೀಸ್‌ಗಳನ್ನು ಹುಡುಕಿ, ವಿದೇಶಗಳಿಗೆ ಸಾಗಿಸೋದ್ರಲ್ಲಿ ಎಕ್ಸ್ಫರ್ಟ್. ಅವುಗಳಿಗೆ ವಿದೇಶಗಳ ಬ್ಲಾಕ್‌ಮಾರ್ಕೆಟ್‌ನಲ್ಲಿ ಕೋಟಿಗಟ್ಟಲೆ ಬೆಲೆ ಇದೆ” ಎಂದು ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿ ಬ್ರೇಕಿಂಗ್‌ನ್ಯೂಸ್ ಕೊಟ್ಟರು.

ಎಲ್ಲ ಮೀಡಿಯಾದವರು ತಮಗೆ ಸಿಕ್ಕ ಸುದ್ದಿಯನ್ನು ಬ್ರೇಕಿಂಗ್‌ನ್ಯೂಸ್‌ನಲ್ಲಿ ಪ್ರಸಾರ ಮಾಡಲು ಸಿದ್ಧವಾದರೆ, ಇದಾವುದೂ ಅರ್ಥವಾಗದ ಹಳ್ಳಿಯ ಜನ ಏಳಡಿ ಸರ್ಪದ ಕಲ್ಪನೆಯಲ್ಲೇ ತೇಲಾಡುತ್ತಿದ್ದರು. ಇದೆಲ್ಲವನ್ನೂ ದೂರದಿಂದಲೇ ನೋಡುತ್ತಿದ್ದ ಸೂಜಿ ಸೂರಣ್ಣ ತನ್ನ ಕೊಳಲಿನಾಕಾರದ ಬಿದಿರಿನ ಕೋಲನ್ನು ತಿಪ್ಪೆಗೆಸೆದು, ಕಿಟ್ಟಿಯ ಕೈ ಹಿಡಿದುಕೊಂಡು ಶಿವಗಂಗಾ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat