ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅಪ್ಡೇಟ್ ಆಗುತ್ತಿರುವ ತಂತ್ರಜ್ಞಾನವನ್ನು ಒಂದೇ ಸೂರಿನಲ್ಲಿ ನೋಡುವ ಯಂತ್ರಮೇಳವು ಕೃಷಿಕ ವಲಯಕ್ಕೆ ದೊಡ್ಡ ಕೊಡುಗೆ. ಸುಮಾರು ಮೂರೂವರೆ ಲಕ್ಷ ಕೃಷಿಕರು ಭಾಗವಹಿಸಿದ ಕೃಷಿ ಯಂತ್ರಮೇಳವು ಹೊಸ ಭರವಸೆ ಮೂಡಿಸಿದೆ.
ದೇಶದ ರೈತನ ಬದುಕಿನ ಕಡೆಗಣನೆಗೆ ನ್ಯಾಯಾಲಯವು ಗರಂ ಆಗಿದೆ!
ಈಚೆಗೆ ಪ್ರಕಟವಾದ ಸುದ್ದಿ. ಸರಕಾರಗಳು ಮಾಡಲೇಬೇಕಾದ ಕರ್ತವ್ಯಗಳಿಗೆ ನ್ಯಾಯಸ್ಥಾನ ಎಚ್ಚರಿಸಬೇಕಾದ ದುಃಸ್ಥಿತಿಗೆ ಆಡಳಿತ ತಲಪಿದೆ. ಇದಕ್ಕೆ ವರಿಷ್ಠರ ಜಾಣಮರೆವಿನ ಲೇಪ. ಪ್ರತಿಭಟನೆ, ಮುಷ್ಕರ ರೂಪ ತಾಳಿದಾಗ ಹೇಳಿಕೆಗಳ ಮಹಾಪೂರ. ದೇಶಕ್ಕೆ ಅನ್ನ ಕೊಡುವ ಕೃಷಿಯ ಅವಗಣನೆಯಿಂದ ದಾರಿದ್ರ್ಯ. ಹಣ ಕೊಟ್ಟರೆ ಎಲ್ಲವೂ ಸಿಗಬಹುದೆಂಬ ಭ್ರಮೆ. ಕೃಷಿಭೂಮಿಯ ದಾಸೋಹ ರಾಜಕಾರಣದ ಪ್ರತಿಬಿಂಬವಾಗುತ್ತಿದೆ. ಈ ಮಧ್ಯೆ ಕೃಷಿಕನ ಸಂಕಟ ಯಾರಿಗೆ ಅರ್ಥವಾಗುತ್ತಿದೆ?
ಪುತ್ತೂರಿನಲ್ಲಿ (ದ.ಕ. ಜಿಲ್ಲೆ) ಜರುಗಿದ ಕೃಷಿ ಯಂತ್ರಮೇಳದ ಮಳಿಗೆಯನ್ನು ಸುತ್ತಾಡುತ್ತಿದ್ದಾಗ ಈ ವಿಚಾರಗಳು ಗಿರಕಿ ಹೊಡೆದವು. ಅನ್ನ ಕೊಡುವ ರೈತನ ಸಂಕಟಕ್ಕೆ ಪರಿಹಾರ ಬಿಡಿ, ಸ್ಪಂದನವನ್ನು ನೀಡುವ ಮನಃಸ್ಥಿತಿ ಆಡಳಿತದಲ್ಲಿ ಆರ್ದ್ರವಾಗಿದೆ. ಸಂಕಟಕ್ಕೆ ಪರಿಹಾರದ ಬದಲು, ಏನು ಪರ್ಯಾಯ ಎನ್ನುವ ವಿಚಾರವನ್ನು ವಿಮರ್ಶೆ ಮಾಡಿ ಅದನ್ನು ಒದಗಿಸುವ ಕನಿಷ್ಠ ವ್ಯವಸ್ಥೆಗಳನ್ನು ಕೃಷಿಕನಿಂದು ಬಯಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಯಂತ್ರಮೇಳವು ಪ್ರಕೃತ ಕೃಷಿ ಸಮಸ್ಯೆಗಳಿಗೆ ತಾವೇ ಪರಿಹಾರವನ್ನು ಹುಡುಕುವ ಹಾದಿಯನ್ನು ತೆರೆದಿಟ್ಟಿದೆ. ಮಳಿಗೆಯನ್ನು ಸುತ್ತಾಡಿದ ಸಾವಿರಾರು ಮುಖಗಳ ಬಿಗು ನೆರಿಗೆ ಸಡಿಲವಾಗಿದೆ. ಹಲವು ನಿರೀಕ್ಷೆಗಳನ್ನು ಹೊತ್ತು ಬಂದ ಕೃಷಿಕರಿಗೆ ಮೇಳ ನಿರಾಶೆಯಾಗಲಿಲ್ಲ.
ಮಂಗಳೂರಿನ ಕ್ಯಾಂಪ್ಕೋ ನಿ., ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಪುತ್ತೂರು ಇಂಜಿನಿಯರಿಂಗ್ ಕಾಲೇಜು, ಪುತ್ತೂರು ಪಾಲಿಟೆಕ್ನಿಕ್ ಜಂಟಿಯಾಗಿ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕೃಷಿ ಯಂತ್ರಮೇಳವನ್ನು ಆಯೋಜಿಸಿದ್ದವು. ೨೦೦೯ರ ಮೊದಲ ಮೇಳದಲ್ಲಿ ಅಡಿಕೆ ಸುಲಿಯುವ ಯಂತ್ರಗಳ ಸದ್ದು. ೨೦೧೨ರ ಮೇಳದಲ್ಲಿ ಅಂತರ್ಸಾಗಾಟ ಯಂತ್ರಗಳ ಭರಾಟೆ. ೨೦೧೫ ಜನವರಿ ೨೪-೨೬ರ ತನಕ ನಡೆದುದು ಮೂರನೇ ಮೇಳ.
ಮರವೇರುವ ಸಾಧನಗಳ ಕ್ಷಮತೆ
ಅಡಿಕೆ ಕೃಷಿಯು ಹೆಚ್ಚು ಶ್ರಮ ಮತ್ತು ಅವಲಂಬನಾ ಕೆಲಸಗಳನ್ನು ಬೇಡುತ್ತದೆ. ಗೊಬ್ಬರ, ನೀರಾವರಿ, ಔಷಧ ಸಿಂಪಡಣೆ, ಕೊಯಿಲು, ಸುಲಿತ…. ಮೊದಲಾದ ಕೆಲಸಗಳು ಕಾಲಕಾಲಕ್ಕೆ ಆಗಲೇಬೇಕು. ಇಂತಹ ಕೆಲಸಗಳಿಗೆ ಅದರದ್ದೇ ಆದ, ಇಂಜಿನಿಯರ್ ಪದವಿ ಪಡೆಯದ ತಂತ್ರಜ್ಞರಿದ್ದರು. ಬದಲಾದ ಕಾಲಘಟ್ಟದಲ್ಲಿ ಇಂತಹ ತಂತ್ರಜ್ಞರ ಸಂಖ್ಯೆ ವಿರಳವಾಗುತ್ತಿದೆ. ಕೃಷಿಕನ ಮಗನಿಂದು ಹೇಗೆ ಕೃಷಿಕನಾಗುತ್ತಿಲ್ಲವೋ, ಅದೇ ರೀತಿ ಕೃಷಿ ಕೆಲಸಗಳನ್ನು ಮಾಡುವ ಸಹಾಯಕರ ಮಕ್ಕಳಿಂದು ನಗರಮುಖಿಯಾಗುತ್ತಿದ್ದಾರೆ.
ವಯಸ್ಸಾದ, ಹಳ್ಳಿಯಲ್ಲೇ ಇರಬೇಕಾದ ಅಸಹಾಯಕತೆಯಿಂದ ಹಳ್ಳಿಯಲ್ಲಿ ಉಳಿದ ಇಂತಹ ತಂತ್ರಜ್ಞರು ತೋಟದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರಷ್ಟೇ. ಅಲ್ಲೋ ಇಲ್ಲೋ ಕೆಲವರು ಸಿದ್ಧರಾಗುತ್ತಿರುವುದು ಖುಷಿಯ ಸಂಗತಿ. ತನುಶ್ರಮದ ಕೆಲಸಗಳಿಗೆ ಯುವಕರು ತಯಾರಾಗುತ್ತಿಲ್ಲ. ಯಾಕೆಂದರೆ ಪಟ್ಟಣದಲ್ಲಿ ಹೆಚ್ಚು ಶ್ರಮವಹಿಸದ ಕೆಲಸಗಳು ಅವರನ್ನು ಕರೆಯುತ್ತಿವೆ. ಈ ಹಿನ್ನೆಲೆಯಲ್ಲಿ ಯಂತ್ರಮೇಳದಲ್ಲಿ ಅಡಿಕೆಮರ ಏರುವ, ಏರಿ ಬೋರ್ಡೋ ದ್ರಾವಣ ಸಿಂಪಡಿಸುವ, ಅಡಿಕೆ ಕೊಯಿಲು ಮಾಡುವ ಯಂತ್ರಗಳ ಹುಡುಕಾಟದತ್ತ ಕೃಷಿಕರ ಚಿತ್ತವಿತ್ತು. ಪ್ರಾತ್ಯಕ್ಷಿಕೆಗಳ ಮೂಲಕ ಮರ ಏರಿ-ಇಳಿವ ಉಪಕರಣಗಳ ಕ್ಷಮತೆಯನ್ನು ತೋರಿಸಲಾಗುತ್ತಿತ್ತು. ಸ್ವತಃ ಮರವೇರಿ ಕ್ಷಮತೆಯನ್ನು ಪರೀಕ್ಷಿಸಿದ ಕೃಷಿಕರು ನೂರಾರು. ಇವರೆಲ್ಲ ಉಪಕರಣಗಳನ್ನು ಕೊಳ್ಳಲು ಮಾನಸಿಕ ಸಿದ್ಧತೆ ಮಾಡಿಕೊಂಡಿದ್ದಾರೆ.
೨೦೦೯ರಲ್ಲಿ ಜರುಗಿದ ಮೊದಲ ಕೃಷಿ ಯಂತ್ರಮೇಳವು ಅಡಿಕೆ ಸುಲಿಯುವ ಯಂತ್ರಗಳನ್ನು ಒಂದೇ ಸೂರಿನಡಿ ತರುವ ಕೆಲಸ ಮಾಡಿತ್ತು. ಆಗಲೇ ಕಾರ್ಮಿಕ ಸಮಸ್ಯೆಯಿಂದ ಹೈರಾಣವಾಗಿದ್ದವರು ಯಂತ್ರಗಳ ಸದ್ದನ್ನು ಅನುಕರಿಸಿದರು. ಇಂದು ಕರಾವಳಿ, ಮಲೆನಾಡಿನಲ್ಲಿ ಅಡಿಕೆ ಸುಲಿಯುವ ಯಂತ್ರಗಳು ಸದ್ದು ಮಾಡುತ್ತಿದ್ದರೆ ಅದು ಯಂತ್ರಮೇಳಗಳ ಫಲಶ್ರುತಿ ಎಂದರೂ ತಪ್ಪಲ್ಲ. ಈ ಯಂತ್ರಗಳು ಅವಲಂಬನಾ ಕೆಲಸಗಳನ್ನು ಹಗುರ ಮಾಡಿವೆ.
ಅಡಿಕೆ ಸುಲಿ ಯಂತ್ರಗಳ ಸದ್ದು
ಮಾರುಕಟ್ಟೆಯಲ್ಲಿ ಉತ್ತಮ ದರವಿದ್ದಾಗ ಅಡಿಕೆ (ಚಾಲಿ) ಸುಲಿದು ಮಾರಾಟ ಮಾಡುವ ಜಾಣ ವ್ಯವಸ್ಥೆಗೆ ಕೃಷಿಕರು ಒಗ್ಗಿಹೋಗಿದ್ದಾರೆ. ಕೆಲವೆಡೆ ಜಾಬ್ವರ್ಕ್ ತಂಡಗಳು ರೂಪುಗೊಂಡಿವೆ. ಮೇಳದಲ್ಲಿ ಹಸಿ ಅಡಿಕೆ ಸುಲಿಯುವ ಕುಂಟುವಳ್ಳಿಯ ವಿ.ಟೆಕ್. ಯಂತ್ರಗಳು, ಐವಾಕ್ ಕಂಪೆನಿಯ ಯಂತ್ರಗಳು, ಚಾಲಿ ಅಡಿಕೆ ಸುಲಿಯುವ ಸುಳ್ಯದ ಅಪರ್ಣಾ ಸ್ಟೀಲ್ ಇಂಡಸ್ಟ್ರೀಸ್, ಬೆಂಗಳೂರು ಬಸವೇಶ್ವರ ಇಂಜಿನಿಯರ್ಸ್, ಬೆಳಗಾವಿಯ ಸ್ಟಾರ್ ಅಸೋಸಿಯೇಟೆಡ್ ಇಂಡಸ್ಟ್ರೀಸ್, ಶಿರಸಿಯ ಶ್ರೀಕೃತಿ ಆಗ್ರೋ ಪವರ್ ಇಕ್ವಿಪ್ಮೆಂಟ್ಸ್, ಸಾಗರದ ಮಥನ ಹೋಂ ಇಂಡಸ್ಟ್ರೀಸ್…. ಇವರೆಲ್ಲರ ಆವಿಷ್ಕಾರಗಳು ಕೃಷಿಕ ಸ್ವೀಕೃತಿ ಪಡೆದಿದೆ. ಹದಿನೇಳು ಮಳಿಗೆಗಳಲ್ಲಿ ಅಡಿಕೆ ಯಂತ್ರಗಳು ಸದ್ದು ಮಾಡುತ್ತಿದ್ದವು.
ಚಿಕ್ಕ ಕೈಚಾಲಿತ ಅಡಿಕೆ ಸುಲಿ ಸಾಧನಗಳು ಹೆಚ್ಚು ಗಮನ ಸೆಳೆದವು. ಐನೂರು ರೂಪಾಯಿಯೊಳಗೆ ದೊರಕುವ ಸಲಕರಣೆಗೆ ಬೇಡಿಕೆ. ಕುಳಮರ್ವ ವೆಂಕಟ್ರಮಣ ಭಟ್, ಕೇರಳದ ಜೇಸುದಾಸ್, ಕೋಝಿಕೋಡಿನ ಶಾನ್ ಆಗ್ರೋ ಇಂಡಸ್ಟ್ರೀಸ್ ಇವರ ಚಿಕ್ಕ ಉಪಕರಣದ ದೊಡ್ಡ ಕೆಲಸವನ್ನು ಶ್ಲಾಘಿಸಿದವರು ಅಧಿಕ.
ಅಂತರ್ಸಾಗಾಟಕ್ಕೆ ಅನುಕೂಲವಾಗುವ ಮಿನಿ ಗಾಡಿ, ಟಿಪ್ಪರ್ಗಳ ಸುತ್ತ ಆಸಕ್ತರ ಸುತ್ತಾಟ; ಅವುಗಳ ಕಾರ್ಯವನ್ನು ಪರೀಕ್ಷಿಸುವ ತವಕ. ಸಿಂಪಡಣಾ ಯಂತ್ರಗಳು, ಮರವೇರುವ ಯಂತ್ರಗಳನ್ನು ನೋಡಲೆಂದೇ ದೂರದೂರಿನಿಂದ ಆಗಮಿಸಿದ ಕೃಷಿಕರ ತಂಡಗಳಿಗೆ ಅರಿವು ಮೂಡಿಸುವಲ್ಲಿ ಪ್ರಾತ್ಯಕ್ಷಿಕೆಗಳು ಯಶಸ್ಸಾಗಿವೆ. ದೊಡ್ಡ ಉದ್ಯಮವಾಗಿ ರೂಪುಗೊಂಡ ಹಲವಾರು ಮಳಿಗೆಗಳ ಮಧ್ಯೆ ಕೃಷಿಕರೇ ರೂಪಿಸಿದ ಯಂತ್ರಗಳ ಮಾದರಿಗಳತ್ತ ಕೃಷಿಕರ ಒಲವು ಹೆಚ್ಚಾಗಿ ಕಂಡು ಬಂತು.
ಗಣೇಶ ಶೆಟ್ಟಿಯವರ ಅಡಿಕೆಮರವೇರುವ ರೋಬೋಟ್, ಕ್ಲೈಂಬರ್ ತಯಾರಿಸಿದ ಸುಬ್ರಹ್ಮಣ್ಯ ಹೆಗಡೆಕಟ್ಟಾ, ನಿತಿನ್ ಹೇರಳೆಯವರ ಮರವೇರುವ ಸಾಧನ, ಗಣೇಶ ಆಚಾರ್ಯರ ಡೈನಮೋ, ಮೋಹನ್ ರಾಜ್ ಆವಿಷ್ಕರಿಸಿದ ವಾಟರ್ ಲಿಫ್ಟರ್, ಜೋಯ್ ಆಗಸ್ಟಿನ್ ಅವರ ಅಡಿಕೆ ಸುಲಿ ಯಂತ್ರಗಳು ಕಾಲದ ಆವಶ್ಯಕತೆಗಳು. ಇಂತಹ ಆವಿಷ್ಕಾರಗಳಿಗೆ ಜನರ ಪ್ರೋತ್ಸಾಹದ ಜತೆಗೆ ಆರ್ಥಿಕ ಸಹಕಾರಗಳೂ ಬೇಕಾಗಿವೆ. ಸಂಶೋಧನೆ ಮತ್ತು ಅಭಿವೃದ್ಧಿ ಎರಡರದೂ ಬೇರೆ ಬೇರೆ ದಿಕ್ಕುಗಳು. ಹಾಗಾಗಿ ಸಂಶೋಧಿತ ಉಪಕರಣ-ಯಂತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಉದ್ಯಮಗಳು, ಸಂಘಸಂಸ್ಥೆಗಳು ಮುಂದೆ ಬರಬೇಕಾಗಿವೆ.
ವಿದ್ಯಾರ್ಥಿಯೊಳಗೆ ‘ವಿಜ್ಞಾನಿ’
ಇಂಜಿನಿಯರಿಂಗ್, ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಆವಿಷ್ಕಾರಗಳು ಯಂತ್ರಮೇಳದ ಹೈಲೈಟ್. ಸಾಮಾನ್ಯವಾಗಿ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಭಾಗವಾಗಿ ವಿವಿಧ ಪ್ರಾಜೆಕ್ಟ್ಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಅಧ್ಯಾಪಕರ ನಿರ್ದೇಶನದಂತೆ ರೂಪುಪಡೆದ ಪ್ರಾಜೆಕ್ಟ್ಗಳು ಎಷ್ಟೋ ಬಾರಿ ಮಾಧ್ಯಮದಲ್ಲಿ ಬೆಳಕು ಕಂಡಲ್ಲಿಗೆ ಸಮಾರೋಪಗೊಳ್ಳುತ್ತವೆ! ಯಂತ್ರಮೇಳದ ರೂವಾರಿ ಕ್ಯಾಂಪ್ಕೋ ಸಂಸ್ಥೆಯು ವಿದ್ಯಾರ್ಥಿಯೊಳಗಿನ ವಿಜ್ಞಾನಿಗೆ ಮಾನ ಕೊಡುವ ದೃಷ್ಟಿಯಿಂದ ಉತ್ತಮ ಕೃಷಿ ಸಂಬಂಧಿ ಆವಿಷ್ಕಾರಕ್ಕೆ ಪ್ರಶಸ್ತಿಯನ್ನು ಘೋಷಿಸಿತ್ತು. ಸುಮಾರು ನಲವತ್ತೈದಕ್ಕೂ ಮಿಕ್ಕಿ ಮಳಿಗೆಗಳಲ್ಲಿ ಕನ್ನಾಡಿನ ವಿವಿಧ ಕಾಲೇಜುಗಳ ಆವಿಷ್ಕಾರಗಳ ಪ್ರದರ್ಶನವಿದ್ದವು.
ಅತ್ಯುತ್ತಮ ಎರಡು ಆವಿಷ್ಕಾರಕ್ಕೆ ನಿಧಿ ಸಹಿತ ಕ್ಯಾಂಪ್ಕೋ ಸ್ಥಾಪಕ ‘ವಾರಣಾಶಿ ಸುಬ್ರಾಯ ಭಟ್ ಪ್ರಶಸ್ತಿ’. ಅನುಭವಿ ತಂತ್ರಜ್ಞರ ತಂಡ ಅನುಶೋಧನೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಂಶೋಧನೆ ‘ಅಡಿಕೆ ಕೀಳುವ ಹಾಗೂ ಔಷಧಿ ಸಿಂಪಡಿಸುವ ಯಂತ್ರ’ವು ಪ್ರಥಮ ಪ್ರಶಸ್ತಿಯನ್ನು ಐವತ್ತು ಸಾವಿರ ರೂಪಾಯಿ ಮೊತ್ತದೊಂದಿಗೆ ಗಳಿಸಿತು. ಉಜಿರೆಯ ಎಸ್.ಡಿ.ಎಂ. ಪಾಲಿಟೆಕ್ನಿಕ್ನ ‘ಅಡಿಕೆ ತೆಗೆಯುವ ಯಂತ್ರ’ಕ್ಕೆ ದ್ವಿತೀಯ ಪ್ರಶಸ್ತಿ. ಇಪ್ಪತ್ತೈದು ಸಾವಿರ ರೂಪಾಯಿ ಮೊತ್ತ. ಬಹುಶಃ ಮುಂದಿನ ಮೇಳಕ್ಕಾಗುವಾಗ ಮಳಿಗೆಗಳ ಸಂಖ್ಯೆ ಖಂಡಿತವಾಗಿ ವೃದ್ಧಿಸಬಹುದೇನೋ?
ಚಾಕೋಲೇಟ್ ದಾಖಲೆ ಮಾರಾಟ
ಕೃಷಿ ಯಂತ್ರಮೇಳದಲ್ಲಿ ನಾಲ್ಕೈದು ಚಾಕೋಲೇಟ್ ಮಳಿಗೆಗಳನ್ನು ಕ್ಯಾಂಪ್ಕೋ ತೆರೆದಿತ್ತು. ಆಸಕ್ತ ಕೃಷಿಕರಿಗೆ ಚಾಕೋಲೇಟ್ ಫ್ಯಾಕ್ಟರಿಯನ್ನು ವೀಕ್ಷಿಸುವ ಅವಕಾಶವೂ ಇತ್ತು. ಇಲ್ಲೂ ಕೂಡಾ ಮಾರಾಟ ಮಳಿಗೆಯಿದ್ದವು. ಮೂರು ದಿವಸದ ಯಂತ್ರಮೇಳದಲ್ಲಿ ಖರೀದಿಸುವ ಚಾಕೋಲೇಟಿಗೆ ಶೇ. ೪೦ ರಿಯಾಯಿತಿ. ಬರೋಬ್ಬರಿ ಹತ್ತೊಂಭತ್ತು ಲಕ್ಷ ರೂಪಾಯಿಗಳ ಮಾರಾಟ!
ಗೋಷ್ಠಿಗಳಲ್ಲಿ ಸಮಸಾಮಯಿಕ ಚಿಂತನೆ
ಮೂರು ವಿಚಾರಗೋಷ್ಠಿಗಳು ಸಾಮಯಿಕ ಸಮಸ್ಯೆಯೊಂದರ ಪರಿಹಾರಕ್ಕೆ ಬೆಳಕು ಚೆಲ್ಲಿತ್ತು. ಮಂಗಗಳ ಕಾಟದಿಂದ ಕೃಷಿ ಉತ್ಪನ್ನಗಳನ್ನು ರಕ್ಷಿಸಲು ಸೋತ ಕೃಷಿಕರಿಗೆ ಗೋಷ್ಠಿಯು ಕೈತಾಂಗಾಗಿ ಪರಿಣಮಿಸಿತು. ವಿವಿಧ ಧ್ವನಿಗಳನ್ನು ಬಳಸಿ ಮಂಗನನ್ನು ಮಂಗ ಮಾಡುವ ತಂತ್ರಗಾರಿಕೆ ಸ್ವೀಕೃತಿ ಪಡೆಯಿತು. ಸೌರಶಕ್ತಿ ಮತ್ತು ‘ತೆಂಗಿನಿಂದ ನೀರಾ ತಯಾರಿ’ ಗೋಷ್ಠಿಗಳು ಗೊತ್ತಿಲ್ಲದ ಹೊಸ ವಿಚಾರವನ್ನು ತಿಳಿಸುವಲ್ಲಿ ಶಕ್ತವಾಯಿತು.
ಸೆಲ್ಕೋ ಸಂಸ್ಥೆಯ ಹರೀಶ್ ಹಂದೆ ಮಾತು ಗಮನಿಸಿ, ನಮ್ಮ ದೇಶದಲ್ಲಿ ಸುಮಾರು ಮೂವತ್ತು ಕೋಟಿಯಷ್ಟು ಜನಕ್ಕೆ ವಿದ್ಯುತ್ ಸೌಲಭ್ಯ ಇಲ್ಲ. ಬಿಹಾರದಂತಹ ರಾಜ್ಯಗಳಲ್ಲಿ ಮೊಬೈಲ್ ಚಾರ್ಜು ಮಾಡಲು ಐದರಿಂದ ಎಂಟು ರೂಪಾಯಿಗಳಷ್ಟು ಖರ್ಚು ಮಾಡುತ್ತಾರೆ. ಸೌರಶಕ್ತಿಯನ್ನು ಸಮರ್ಪಕವಾಗಿ ಬಳಸುವ ಯೋಚನೆ ಮಾಡಿದರೆ ದೇಶದ ವಿದ್ಯುತ್ ಕೊರತೆಯನ್ನು ನೀಗಿಸಬಹುದು.
ಮೇಳದಲ್ಲಿ ಕೃಷಿಕರ ಪ್ರಶ್ನೆಗಳಿಗೆ ಸ್ಥಳದಲ್ಲೇ ಉತ್ತರವನ್ನು ಕಂಡುಕೊಳ್ಳುವ ‘ಕೃಷಿ ಸಂಸತ್’ ಬಹುನಿರೀಕ್ಷಿತ ಕಲಾಪ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದು ಕಲಾಪವನ್ನು ನಡೆಸಿಕೊಟ್ಟರು. ಒಪ್ಪಿಕೊಂಡಿದ್ದ ಆಮಂತ್ರಿತ ಸಂಸದರ ಗೈರುಹಾಜರಿ ಕೃಷಿಕರಲ್ಲಿ ಅಸಮಾಧಾನ ಮೂಡಿಸಿತ್ತು. ಸುಮಾರು ನಲವತ್ತು ಪ್ರಶ್ನೆಗಳು ಉತ್ತರಕ್ಕಾಗಿ ಕಾಯುತ್ತಿದ್ದವು. ಸಮಯದ ಮಿತಿಯಲ್ಲಿ ಇಪ್ಪತ್ತಕ್ಕೆ ಪ್ರಶ್ನೆಯನ್ನು ಸೀಮಿತಗೊಳಿಸಲಾಯಿತು. ಒಂದು ಪ್ರಶ್ನೆ ಹೀಗಿದೆ. ಕೃಷಿಕ ಮೋನಪ್ಪ ಕರ್ಕೆರಾ, ‘ಭತ್ತದ ಗದ್ದೆ ಯಾವುದೇ ಕಾರಣಕ್ಕೂ ಪರಿವರ್ತನೆ ಆಗಬಾರದು, ಇದಕ್ಕೆ ಕ್ರಮ ಇದೆಯಾ?’ ಎಂದು ಯಡಿಯೂರಪ್ಪನವರಲ್ಲಿ ಪ್ರಶ್ನಿಸಿದರು. ಭತ್ತದ ಗದ್ದೆಗೆ ಗುಡ್ಡ ಮಣ್ಣು ಬಿದ್ದು ಗದ್ದೆ ನಾಶವಾಗುತ್ತಿದೆ. ಮುಂದಿನ ದಿನಗಳಲ್ಲಿ ಗದ್ದೆಯನ್ನು ಯಾವುದೇ ಕಾರಣಕ್ಕೂ ಪರಿವರ್ತನೆ ಆಗದಂತೆ ಕೇರಳ ಮಾದರಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಆಮಂತ್ರಿತ ಸಂಸದರೆಲ್ಲರೂ ಭಾಗವಹಿಸುತ್ತಿದ್ದರೆ ನಿಜಕ್ಕೂ ಉತ್ತಮ ಕಲಾಪ.
ಸುಮಾರು ಮೂರೂವರೆ ಲಕ್ಷ ಕೃಷಿಕರು ಭಾಗವಹಿಸಿದ ಕೃಷಿ ಯಂತ್ರಮೇಳವು ಹೊಸ ಭರವಸೆ ಮೂಡಿಸಿದೆ. ಕೃಷಿ ಯಾಂತ್ರೀಕರಣದತ್ತ ಹೆಜ್ಜೆಯೂರಿದೆ. ತಮಗೆ ಬೇಕಾದ ಉಪಕರಣ, ಯಂತ್ರಗಳ ಹುಡುಕಾಟ ಶುರುವಾಗಿದೆ. ಕೃಷಿಕರ ದನಿಗೆ ಕೃಷಿಕರಿಂದಲೇ ಉತ್ತರ ಕಂಡುಕೊಳ್ಳುವ ಉತ್ರಮ ಪ್ರಕ್ರಿಯೆಯಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅಪ್ಡೇಟ್ ಆಗುತ್ತಿರುವ ತಂತ್ರಜ್ಞಾನವನ್ನು ಒಂದೇ ಸೂರಿನಲ್ಲಿ ನೋಡುವ ಯಂತ್ರಮೇಳವು ಕೃಷಿಕ ವಲಯಕ್ಕೆ ದೊಡ್ಡ ಕೊಡುಗೆ. ಮೇಳವು ಸಮಾರೋಪಗೊಳ್ಳುತ್ತಿದ್ದಂತೆ ಮುಂದಿನ ಮೇಳದ ಕಡತಕ್ಕೆ ಶ್ರೀಕಾರವೂ ಬಿದ್ದಿತು.?
ಅಡಿಕೆ ಮರವೇರಲು ತರಬೇತಿ
ಯಂತ್ರಮೇಳವನ್ನು ಆಯೋಜಿಸಿದ ಕ್ಯಾಂಪ್ಕೋ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನವು ಈ ಹಿಂದೆ ಜಪಾನಿನಿಂದ ಅಡಿಕೆಮರವೇರುವ ಉಪಕರಣವೊಂದನ್ನು ತರಿಸಿತ್ತು. ಆ ಯಂತ್ರವು ಪುತ್ತೂರಿಗೆ ತಲಪುವಾಗ ಏನಿಲ್ಲವೆಂದರೂ ನಲವತ್ತು ಸಾವಿರ ರೂಪಾಯಿ ಮೀರಿತ್ತು. ಇದನ್ನು ಕ್ಯಾಂಪ್ಕೋ ಅಭಿವೃದ್ಧಿಪಡಿಸಿದೆ. ಐದು ಸಾವಿರ ರೂಪಾಯಿಯೊಳಗೆ ಕೃಷಿಕರಿಗೆ ಇದು ಸಿಗುವಂತೆ ಅಭಿವೃದ್ಧಿಪಡಿಸಿದ್ದೇವೆ. ಈ ಸಲಕರಣೆ ಮೂಲಕ ಅಡಿಕೆಮರವೇರುವ ತರಬೇತಿಯನ್ನು ಶೀಘ್ರದಲ್ಲಿ ಹಮ್ಮಿಕೊಳ್ಳುತ್ತೇವೆ. ತರಬೇತಿ ಪಡೆದ ಯುವಕರಿಗೆ ಇದನ್ನು ರಿಯಾಯಿತಿ ದರದಲ್ಲಿ ನೀಡುವ ಕುರಿತು ಚಿಂತನೆ ನಡೆಯುತ್ತಿದೆ ಎನ್ನುತ್ತಾರೆ ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ. ಮಳೆಗಾಲದಲ್ಲಿ ಅಡಿಕೆ ಮರಗಳು ಜಾರುವುದು ಸಹಜ. ಇಂತಹ ಸಂದರ್ಭದಲ್ಲಿ ಈಗ ಮಾರುಕಟ್ಟೆಯಲ್ಲಿರುವ ಸಲಕರಣೆಗಳು ಸೋಲುತ್ತವೆ. ಕ್ಯಾಂಪ್ಕೋ ಅಭಿವೃದ್ಧಿಪಡಿಸಿದ ಸಾಧನದಲ್ಲಿ ಮಳೆಗಾಲದಲ್ಲೂ ಮರವೇರಬಹುದು. ಈಚೆಗೆ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿಯಲ್ಲಿ ಅಡಿಕೆಮರವೊಂದಕ್ಕೆ ಗ್ರೀಸ್ ಹಚ್ಚಿ ಮರವೇರಿ ಕ್ಷಮತೆಯನ್ನು ಪರೀಕ್ಷಿಸಲಾಯಿತು.
ಕ್ಯಾಂಪ್ಕೋ ಅಡಿಕೆ ಸುಲಿ ಯಂತ್ರ
ಅಡಿಕೆ ಸುಲಿಯುವ ಯಂತ್ರವನ್ನು ಕ್ಯಾಂಪ್ಕೋ ಸಂಸ್ಥೆಯು ಮೂರು ವರುಷಗಳ ಹಿಂದೆ ಸಿದ್ಧಪಡಿಸಿತ್ತು. ಈಗಾಗಲೇ ಸುಮಾರು ನೂರಕ್ಕೂ ಮಿಕ್ಕಿ ಕೃಷಿಕರು ಯಂತ್ರವನ್ನು ಖರೀದಿಸಿದ್ದಾರೆ. ಇದನ್ನು ಇನ್ನೂ ಆವಿಷ್ಕರಿಸಿ ಅಪ್ಡೇಟ್ ಮಾಡುವ ಯೋಜನೆ, ಯೋಚನೆಯು ಕ್ಯಾಂಪ್ಕೋ ಅಧ್ಯಕ್ಷರಲ್ಲಿದೆ. ಸಹಕಾರ ಸಂಘಗಳಿಗೆ ಯಂತ್ರವನ್ನು ನೀಡಿ ಜಾಬ್ವರ್ಕ್ ವ್ಯವಸ್ಥೆಯನ್ನು ಆಯಾಯ ಗ್ರಾಮದಲ್ಲಿ ಮಾಡುವುದರಿಂದ ಕೃಷಿಕರಿಗೆ ಅನುಕೂಲ. ಈ ಕುರಿತು ಕ್ಯಾಂಪ್ಕೋ ಹೆಜ್ಜೆಯಿಟ್ಟಿದೆ. ಕೃಷಿ ಯಂತ್ರಗಳು, ಸಲಕರಣೆಗಳ ರಿಪೇರಿಗಾಗಿಯೇ ಪುತ್ತೂರಿನಲ್ಲಿ ವರ್ಕ್ಶಾಪ್ ತೆರೆಯಲಿದ್ದೇವೆ. ಇಂಜಿನಿಯರ್, ತಂತ್ರಜ್ಞರ ತಂಡ ಇದನ್ನು ನಿರ್ವಹಿಸುತ್ತದೆ ಎನ್ನುತ್ತಾರೆ ಕೊಂಕೋಡಿ ಪದ್ಮನಾಭ.