ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ ೨೦೨೧ರಲ್ಲಿ ಪ್ರಥಮ ಬಹುಮಾನ ಪಡೆದ ಪ್ರಬಂಧ
ಇತಿಹಾಸದ ಕುರಿತು ಚಿಂತಿಸುವುದು ನಿಷ್ಪ್ರಯೋಜಕವಾದ್ದರಿಂದ ಭವಿಷ್ಯದತ್ತ ಮಾತ್ರ ಯೋಚಿಸಬೇಕು ಎಂಬ ಮಾತು ಅರ್ಥಹೀನ. ಏಕೆಂದರೆ ತನ್ನ ನೈಜ ಸತ್ತ್ವವನ್ನು ಕೈಬಿಟ್ಟ ರಾಷ್ಟ್ರ ವಿಕಾಸಗೊಳ್ಳಲಾರದು. ಹಿಂದಿನದರ ತಳಹದಿಯ ಮೇಲೆಯೇ ಭರವಸೆಯ ಭವಿಷ್ಯದ ಸುಂದರ ಸೌಧವನ್ನು ನಿರ್ಮಿಸಲು ಸಾಧ್ಯ. ಭಾರತದ ಗತದಷ್ಟು ವೈಭವಯುತ ದಿನಗಳು ಜಗತ್ತಿನ ಮತ್ತಾವುದೇ ದೇಶಗಳ ಇತಿಹಾಸದ ಕಾಲಗರ್ಭದೊಳಗೆ ಶೋಧಿಸಿದರೂ ಸಿಗಲಾರದು. ಅಂತಹ ಶ್ರೇಷ್ಠವಾದ ನಾಡಿನಲ್ಲಿ ಜನಿಸಿದ ನಾವು ನಮ್ಮ ಪೂರ್ವಜರು ಧಾರೆಯೆರೆದ ವಿಚಾರಸಂತೆಯ ಅಮೃತ ಚಿಲುಮೆಗಳ ಪಾನ ಮಾಡಿ, ಗತವೈಭವದ ಅರಿವಿನಿಂದ ಮತ್ತು ಅದರ ಮೇಲಿನ ಶ್ರದ್ಧೆಯಿಂದ ಪರಮ ವೈಭವಯುತ ನಾಳೆಗಳನ್ನು ದೃಢವಾಗಿ ನಿರ್ಮಿಸಬೇಕು. ಭಾರತ ತನ್ನ ಧ್ಯೇಯ ಮುಟ್ಟಬೇಕಾದರೆ ಅದು ಭಾರತವಾಗಿಯೇ ಉಳಿಯಬೇಕೆಂಬುದು ಅನೇಕ ಹಿರಿಯರ ನಿರ್ದೇಶನ.
ನಮ್ಮ ಪೂರ್ವಜರು ಭಾರತವು ಭಾರತವಾಗಿಯೇ ಇರಬೇಕೆಂದು ಕೇವಲ ಬಯಸಿದ್ದರೆ ಅವರ ಮಾತಿಗೆ ಹೆಚ್ಚು ಗಮನನೀಡಬೇಕಾದ ಆವಶ್ಯಕತೆಯಿರಲಿಲ್ಲವೊ ಏನೋ?! ಆದರೆ ಎರಡು ಸಾವಿರಕ್ಕೂ ಅಧಿಕ ವರ್ಷಗಳ ಸಂಘರ್ಷಮಯ ಯಜ್ಞದಲ್ಲಿ ಅವರು ತಮ್ಮನ್ನು ಅನೇಕ ಮಜಲುಗಳಲ್ಲಿ ಸಮಿಧೆಯಂತೆ ಸಮರ್ಪಿಸಿಕೊಂಡಿದ್ದಾರೆ. ನಮ್ಮೆಲ್ಲರ ಸ್ವಾತಂತ್ರ್ಯಯುತ ದಿನಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಆಶಯವನ್ನು ನಾವು ಪೂರ್ಣಗೊಳಿಸಿದ್ದೇವೆಯೆ? ನಮಗಾಗಿ, ನಮ್ಮ ಕರ್ತವ್ಯದ ಆಧಾರದ ಮೇಲೆ ನಿರ್ಮಾಣಗೊಳ್ಳಬೇಕಿರುವ ನಾಡಿಗಾಗಿ ವಿವಿಧ ಧಾರೆಗಳಲ್ಲಿ ದುಡಿದು ಮಡಿದವರ ಆಶಯವನ್ನು ಪೂರ್ಣಗೊಳಿಸುವುದಿರಲಿ, ಅವರನ್ನು ನೆನಪಿಸಿಕೊಳ್ಳುವುದಕ್ಕಾದರೂ ನಮ್ಮಿಂದ ಸಾಧ್ಯವಾಗಿದೆಯೆ? – ಎಂದು ನಮ್ಮ ಆತ್ಮಸಾಕ್ಷಿಯ ಮೊರೆಹೊಕ್ಕಾಗ, ದರ್ಪಣದೆದುರು ನಿಂತು ನಮ್ಮ ಪ್ರತಿಬಂಬವನ್ನೇ ನೋಡಿಕೊಳ್ಳಲು ನಮಗೆ ಲಜ್ಜೆಯಾಗುತ್ತದೆ! ರಾಷ್ಟ್ರೀಯತೆ ಎನ್ನುವುದು ರಾಜಕೀಯವಲ್ಲ, ಅದೊಂದು ಜೀವನಶ್ರದ್ಧೆ ಎನ್ನುವುದನ್ನು ಗಾಳಿಗೆ ತೂರಿ ಸ್ವಾತಂತ್ರ್ಯದ ಮೊದಲ ದಶಕದಲ್ಲೇ ಸ್ವಾತಂತ್ರ್ಯ ತಂದುಕೊಟ್ಟವರು ಎಂಬ ಅನುಕಂಪದ ಮೇಲೆ ಅಧಿಕಾರಕ್ಕೆ ಬಂದವರು ತಮ್ಮ ಮೇಲಿನ ಅನುಕಂಪವನ್ನು ಉಳಿಸಿಕೊಂಡು, ಶಾಶ್ವತವಾಗಿ ಅಧಿಕಾರವನ್ನು ಇರಿಸಿಕೊಳ್ಳುವುದಕ್ಕಾಗಿ ಹಲವು ವಿಪರ್ಯಾಸಗಳಿಗೆ ಕಾರಣವಾದರು. ಅವುಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಮುಖ್ಯಧಾರೆಯಲ್ಲಿ ಕೆಲಸ ಮಾಡದವರನ್ನು ಇತಿಹಾಸದ ಪುಟಗಳಲ್ಲಿ ಮರೆಮಾಚುವುದಕ್ಕೆ ನಡೆದ ಹಲವು ಪ್ರಯತ್ನಗಳೂ ಪ್ರಮುಖವಾದದ್ದು. ಆದರೆ ಇತಿಹಾಸ-ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ಹಲವರು ಜನಮಾಸನದಲ್ಲಿ ಅಚ್ಚಳಿಯದೇ ಉಳಿಯಲೇಬೇಕಾದ ಸಂಗತಿಗಳನ್ನು ಸಮರ್ಥವಾಗಿ ಸಮಾಜದ ಮುಂದಿಟ್ಟರು.
ಅದರ ಪರಿಣಾಮವಾಗಿ ಅಲೆಕ್ಸಾಂಡರ್ನಿಂದ ಹಿಡಿದು, ಮೌಂಟ್ಬ್ಯಾಟನ್ವರೆಗೂ, ‘ಹರಹರ ಮಹಾದೇವ’ ದಿಂದ ಹಿಡಿದು ‘ಮಾರೋ ಫಿರಂಗೀ ಕೋ’ ಎಂಬ ಘೋಷಣೆಯವರೆಗಿನ ಬೇರೆ ಬೇರೆ ಕಾಲಘಟ್ಟದಲ್ಲಿ, ಸ್ವದೇಶ ಮತ್ತು ಸ್ವಧರ್ಮವೆಂಬ ಧ್ಯೇಯಕ್ಕಾಗಿ ನಡೆದ ಸಂಘರ್ಷದ ವಿವಿಧ ಮಜಲುಗಳನ್ನು ಗುರುತಿಸಲು ಸಾಧ್ಯವಾಯಿತು. ಸ್ವಾತಂತ್ರ್ಯ ಹೋರಾಟವೆಂದೊಡನೆ ನಮಗೆಲ್ಲ ಬ್ರಿಟಿಷರು ಬಂದ ನಂತರದ ಕಾಲಘಟ್ಟವಷ್ಟೆ ನೆನಪಾದರೆ ನಾವಿನ್ನೂ ಅವರ ಬೌದ್ಧಿಕ ದಾಸ್ಯದಲ್ಲಿದ್ದೇವೆ ಎಂದರ್ಥ! ಅವರು ಬಯಸಿದ್ದೂ ಇಂತಹ ಮನೋಧರ್ಮವನ್ನೇ ಅಲ್ಲವೇ! ಇನ್ನು ವಿದೇಶಿಗರ ವಿರುದ್ಧದ ಎಲ್ಲ ಹೋರಾಟವೂ ಸ್ವಾತಂತ್ರ್ಯ ಹೋರಾಟವೆ? – ಎನ್ನುವ ಗೊಂದಲದಲ್ಲಿ ನಾವಿದ್ದರೆ, ಸ್ವಾತಂತ್ರ್ಯದ ಪರಿಕಲ್ಪನೆಯನ್ನೊಮ್ಮೆ ಮರುನೆನಪಿಸಿಕೊಳ್ಳೋಣ.
ಸ್ವರಾಜ್ಯ ಅಥವಾ ಸ್ವಾತಂತ್ರ್ಯದ ಕಲ್ಪನೆ
ಅನ್ಯರ ದೃಷ್ಟಿಯಲ್ಲಿ ನಮ್ಮತನವನ್ನು ಕಾಣಲು ಯತ್ನಿಸುವುದೇ ನಮ್ಮ ನಾಡಿನ ಎಲ್ಲ ಕ್ಷೇತ್ರಗಳಲ್ಲಿನ ವಿಕೃತಿಗಳಿಗೆ ಕಾರಣ. ಅಂತಹ ವಿಕೃತಿಗಳ ದಾಳಿ ನಮ್ಮ ಮೇಲೆ ಮತ್ತೆಮತ್ತೆ ಆಗುತ್ತಿರುವುದರಿಂದ ಸ್ವಾತಂತ್ರ್ಯ ಮತ್ತು ಸ್ವರಾಜ್ಯವೆಂಬ ವಿಷಯಗಳೂ ಗೊಂದಲದ ಗೂಡಾಗಿವೆ. ಸ್ವಾತಂತ್ರ್ಯದ ಅರ್ಥವನ್ನರಿಯುವ ಮುನ್ನ ಅದರ ಬಳಕೆಗೆ ಕಾರಣವಾದ ಘಟನಾವಳಿಗಳ ಕುರಿತು ಸಂಕ್ಷಿಪ್ತವಾಗಿಯಾದರೂ ಅರಿತಿರಬೇಕು. ಭಾರತದ ಇತಿಹಾಸದ ಮಜಲುಗಳನ್ನೊಮ್ಮೆ ಮೇಲ್ನೋಟಕ್ಕೆ ಗಮನಿಸಿದರೂ ಮೂರು ರೀತಿಯ ಜನರು ಭಾರತಕ್ಕೆ ಆಗಮಿಸಿದ್ದಾರೆ. ಮೊದಲನೆಯವರು ಆಶ್ರಯವನ್ನು ಬಯಸಿ ಬಂದು ಇಲ್ಲಿ ನೆಲೆನಿಂತು ಇಂದಿಗೂ ನಮ್ಮವರಾಗಿಯೇ ಇರುವವರು (ಪಾರ್ಸಿಗಳು, ಯಹೂದ್ಯರು). ವ್ಯಾಪಾರ, ಅಧಿಕಾರದ ದೃಷ್ಟಿಯಿಂದ ಭಾರತಕ್ಕೆ ಬಂದು ಇಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಲೂಟಿ, ಆಕ್ರಮಣಗಳನ್ನು ಮಾಡಿ ಪ್ರಬಲ ವಿರೋಧ ವ್ಯಕ್ತವಾದಾಗ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿ ಹೋದವರು. ಎರಡನೆಯವರು (ಗ್ರೀಕರಿಂದ ಬ್ರಿಟಿಷರವರೆಗೆ). ಕೊನೆಯವರು, ಅನೇಕ ದುರುದ್ದೇಶಗಳಿಂದ ಭಾರತಕ್ಕೆ ಬಂದು, ಇಲ್ಲಿಯೇ ನೆಲೆಸಿ, ಇಂದಿಗೂ ಪ್ರತ್ಯೇಕತಾವಾದವನ್ನೇ ಮಂಡಿಸುತ್ತಾ, ಹೊರಗಿನವರಿಗೆ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸುತ್ತಿರುವವರು (ಮುಸಲ್ಮಾನ ರಾಜವಂಶಗಳವರು). ಇವರೆಲ್ಲರಿಗೂ ಅವರವರ ಮನೋಧರ್ಮಕ್ಕೆ ಅನುಗುಣವಾಗಿ ಭಾರತ ಸ್ಪಂದಿಸಿದೆ. ನಮ್ಮ ಸಂಸ್ಕೃತಿಯನ್ನು ಒಪ್ಪಿಕೊಂಡು ಬಂದವರ ಜೊತೆಗೆ ಸಾಮರಸ್ಯದಿಂದಿದ್ದು, ಆಕ್ರಮಣ, ಅತ್ಯಾಚಾರ, ದಾಳಿ, ದಬ್ಬಾಳಿಕೆಗಳಿಗಾಗಿ ಬಂದವರ ವಿರುದ್ಧ ನಮ್ಮಲ್ಲಿನ ಕ್ಷಾತ್ರತೇಜದ ಪರಿಚಯವನ್ನು ಮಾಡುವುದರ ಜೊತೆಗೆ ಸ್ವಾತಂತ್ರ್ಯದ, ಸ್ವದೇಶದ, ಸ್ವಧರ್ಮದ ಅಸ್ತಿತ್ವಕ್ಕಾಗಿ ತ್ಯಾಗ ಬಲಿದಾನವನ್ನು ಮಾಡಿದ್ದೇವೆ. ಸ್ವದೇಶಕ್ಕಾಗಿ, ಧರ್ಮಕ್ಕಾಗಿ ನಡೆದ ಎಲ್ಲಾ ಹೋರಾಟಗಳೂ ಸ್ವಾತಂತ್ರ್ಯದ ಹೋರಾಟವೇ ಆದ್ದರಿಂದ, ಭಾರತದ ಈ ಹೋರಾಟದ ಅವಧಿ ಸುಮಾರು ೨೦೦೦ ವರ್ಷಕ್ಕಿಂತಲೂ ಅಧಿಕ!
ಅಭಿವ್ಯಕ್ತಿಸ್ವಾತಂತ್ರ್ಯ, ವಾಕ್ಸ್ವಾತಂತ್ರ್ಯ, ಮಾಧ್ಯಮದ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಎಂಬಿತ್ಯಾದಿ ಪರಿಭಾಷೆಯ ಕಾಲಘಟ್ಟದಲ್ಲಿ ನಿಜವಾದ ಸ್ವಾತಂತ್ರ್ಯದ ಪರಿಕಲ್ಪನೆಯ ವಿಸ್ತಾರದ ಪರಿಚಯ ನಮ್ಮೆಲ್ಲರಿಗೂ ಆಗಬೇಕಿದೆ.
“ಈ ರಾಷ್ಟ್ರದಲ್ಲಿರುವ ಎಲ್ಲ ಸಂಸ್ಕೃತಿಗಳಿಗೆ ಯಾವುದೇ ಅಪಾಯವಿಲ್ಲದೆ, ಅವುಗಳ ವಿಕಾಸವಾಗುವುದಕ್ಕೆ ಇರುವ ವಾತಾವರಣವೇ ಸ್ವಾತಂತ್ರ್ಯ. ಈ ಸ್ವಾತಂತ್ರ್ಯದಿಂದ ಆಯಾ ಸಂಸ್ಕೃತಿಯ ಜನರಿಗೆ ಮುಕ್ತವಾಗಿ, ನಿರ್ಭೀತಿಯಿಂದ, ಪ್ರಾಮಾಣಿಕವಾಗಿ, ಜವಾಬ್ದಾರಿಯುತವಾಗಿ ಬದುಕುವುದಕ್ಕೆ ಸಾಧ್ಯವಾಗಬೇಕು.”
ಸ್ವಾತಂತ್ರ್ಯ ಎನ್ನುವುದನ್ನು ವ್ಯಕ್ತಿಗತವಾಗಿರಿಸದೆ ರಾಷ್ಟ್ರೀಯ ಪರಿಕಲ್ಪನೆಯಲ್ಲೇ ನೋಡಬೇಕಾಗುತ್ತದೆ. ಏಕೆಂದರೆ ಕೆಲವೇ ಆಕ್ರಮಣಗಳಿಂದ ತಮ್ಮ ಅಸ್ತಿತ್ವವನ್ನು ಕಳೆದುಕೊಂಡ ಅನೇಕ ದೇಶಗಳ ನಿದರ್ಶನಗಳಿರುವಾಗ, ಭೌಗೋಳಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ನಡೆದ ಸಹಸ್ರಾರು ದಾಳಿಗಳ ನಂತರವೂ ನಮ್ಮತನ ಉಳಿದುಕೊಳ್ಳುವುದಕ್ಕೆ ರಾಷ್ಟ್ರೀಯತೆಯ ತಳಹದಿಯ ಮೇಲೆಯೇ ನಿಂತಿರುವ ಪ್ರೀತಿ-ಪ್ರಜ್ಞೆಯಾಧಾರಿತ ಜೀವನಧರ್ಮ ಕಾರಣ. ನಮ್ಮ ಪೂರ್ವಜರು ವ್ಯವಸ್ಥಿತವಾಗಿ ರಚಿಸಿಕೊಟ್ಟ ಈ ಸತ್ತ್ವಯುತ ಜೀವನಧರ್ಮವನ್ನು ಪಾಲಿಸುವುದಕ್ಕಿರುವುದೇ ನಮ್ಮ ಸ್ವಾತಂತ್ರ್ಯ. ಇಡೀ ರಾಷ್ಟ್ರದ ಅಸ್ಮಿತೆಯಾದ ಈ ಜೀವನಧರ್ಮದ ಅಳವಡಿಕೆಗೆ ಸ್ವಾತಂತ್ರ್ಯವಿರದೆ ಹೇಗೆ ತಾನೆ ವೈಯಕ್ತಿಕ ಸ್ವಾತಂತ್ರ್ಯವನ್ನು ಊಹಿಸಿಕೊಳ್ಳುವುದಕ್ಕೆ ಸಾಧ್ಯ!
ಸ್ವಾತಂತ್ರ್ಯ ಹೋರಾಟದ ಧಾರೆಗಳು
ನಮ್ಮ ಸಂಸ್ಕೃತಿಯ ವಿಕಾಸ ಆಗುವುದಕ್ಕೆ ಎದುರಾದ ಅಡಚಣೆಗಳನ್ನು ಹೋಗಲಾಡಿಸುವುದಕ್ಕೆ ವಹಿಸಿದ ವಿವಿಧ ಪ್ರಯತ್ನಗಳೇ ಸ್ವಾತಂತ್ರ್ಯ ಹೋರಾಟದ ಮಜಲುಗಳೆಂದು ಗುರುತಿಸಬಹುದು. ಅವುಗಳಲ್ಲಿ ಈ ಕೆಳಗಿನವುಗಳನ್ನು ಪ್ರಮುಖ ಮಜಲುಗಳೆನ್ನಬಹುದು.
ಶಾಂತಿ ಪರಾಕ್ರಮದ ಮುಖ: ಭಾರತದ ಇತಿಹಾಸದಲ್ಲಿ ಇಂದಿನವರೆಗೆ ವಿದೇಶಿಗರ ಮೇಲೆ ಆಕ್ರಮಣ ಮಾಡಿದ ಉದಾಹರಣೆಗಳಿಲ್ಲ ಎನ್ನುವ ಅಂಶ ನಮ್ಮನ್ನು ಜಗತ್ತಿಗೆ ಶಾಂತಿಯ ರಾಯಭಾರಿಯನ್ನಾಗಿಸಿದೆ. ಲೋಕಾಃ ಸಮಸ್ತಾಃ ಸುಖಿನೋ ಭವಂತು, ಕೃಣ್ವಂತೋ ವಿಶ್ವಮಾರ್ಯಂ, ಸರ್ವೇ ಭವಂತು ಸುಖಿನಃ, ವಸುಧೈವ ಕುಟುಂಬಕಮ್ ಎಂಬಿತ್ಯಾದಿ ಅನಾದಿಕಾಲದಿಂದ ಬಂದ ಆಚರಣೆಗಳು ವಿಶ್ವಪ್ರೇಮದ ಕುರಿತು ತಿಳಿಸುತ್ತವೆ. ಭಾರತ ಯಾರ ಧಾರ್ಷ್ಟ್ಯವನ್ನೂ ಸಹಿಸಿಕೊಳ್ಳುವುದಿಲ್ಲ ಬದಲಾಗಿ ಎಲ್ಲರನ್ನೂ ಒಪ್ಪಿಕೊಳ್ಳುತ್ತದೆ ಎಂಬ ವಿವೇಕವಾಣಿ ಭಾರತೀಯರ ಮನೋಧರ್ಮದ ಪ್ರತೀಕ.
ಪುರಾಣಗಳಿಂದ ಹಿಡಿದು ಬುದ್ಧ, ಅಶೋಕ, ಭಕ್ತಿಪಂಥ, ವಚನ ಸಾಹಿತ್ಯ, ದಾಸ ಪರಂಪರೆಯವರೆಗೂ ಸಮಾಜದ ತೊಡಕುಗಳನ್ನು ತೆಗೆದುಹಾಕಿ ಸ್ವಾತಂತ್ರ್ಯದ ಬೆಳಕನ್ನು ತರುವುದಕ್ಕಾಗಿ ನಡೆದ ವಿವಿಧ ಪ್ರಯತ್ನಗಳೆಲ್ಲವೂ ಯಾರನ್ನೂ ಬೆದರಿಸಿ ಸ್ಥಾಪಿಸಿದ್ದಲ್ಲ, ಬದಲಾಗಿ ಜಾಗೃತಿಯ ಹೆಸರಲ್ಲಿ ನಂಬಿಕೆ ಎಂಬ ಸ್ತಂಭಗಳ ಮೇಲೆ ನಿರ್ಮಿತಗೊಂಡ ಶಾಂತಿಯ ಸೌಧವಾದ್ದರಿಂದ ಅಹಿಂಸಾತ್ಮಕ ಹೋರಾಟ ಭಾರತದಲ್ಲಿ ಹೊಸ ಪ್ರಯೋಗವೇನಲ್ಲ. ಆದರೆ ೧೮೮೫ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ನಂತರ ಈ ಅಹಿಂಸಾತ್ಮಕ ಹೋರಾಟ ತನ್ನ ಮಗ್ಗಲನ್ನು ಬದಲಿಸಿತು. ಅದರಲ್ಲೂ ಕೇವಲ 3P (PRAYER, PETITION, PROTEST) ಕಾರ್ಯತಂತ್ರಕ್ಕೆ ಸೀಮಿತಗೊಂಡಿದ್ದ ಅಹಿಂಸಾತ್ಮಕ ಹೋರಾಟಗಳು, ೧೯೨೦ರ ನಂತರ ಗಾಂಧಿಯವರ ಆಲೋಚನೆಗಳ ಮೂಲಕ ವ್ಯಾಪಕವಾಗಿ ಬೆಳೆದವು. ಹಲವು ಸತ್ಯಾಗ್ರಹಗಳು, ಅಸಹಕಾರ ಆಂದೋಲನ, ಉಪ್ಪಿನ ಸತ್ಯಾಗ್ರಹ, ಸ್ವದೇಶಿ ಮತ್ತು ಸ್ವಚ್ಛತಾ ಅಭಿಯಾನ, ಕ್ವಿಟ್ ಇಂಡಿಯಾ ಆಂದೋಲನಗಳು – ಇವೆಲ್ಲ ಶಾಂತಿಯುತ ಹೋರಾಟಕ್ಕೆ ಸಹಕಾರಿಯಾದವು.
ಅಹಿಂಸಾತ್ಮಕ ಹೋರಾಟ ಮೇಲ್ನೋಟಕ್ಕೆ ನಿರಂತರತೆಯನ್ನು ಉಳಿಸಿಕೊಂಡಂತೆ ಕಂಡರೂ ಉದ್ದೇಶದ ಸಾಧನೆಯಲ್ಲಿ ಪೂರ್ಣವಾಗಿ ಸಫಲಗೊಳ್ಳದುದು ಐತಿಹಾಸಿಕ ಸತ್ಯ. ಆದರೆ ಅಹಿಂಸೆಯ ಹೆಸರಿನಲ್ಲಾದ ಪ್ರಯತ್ನವೂ ಮಹತ್ತ್ವಪೂರ್ಣ ಕೊಡುಗೆಯನ್ನು ನೀಡಿದೆ. ಪ್ರತ್ಯೇಕವಾದ ಸಣ್ಣ ಗುಂಪುಗಳಿಗೆ ಮಾತ್ರ ಸೀಮಿತವಾಗಿದ್ದ ಹೋರಾಟಗಳು ರಾಷ್ಟ್ರವ್ಯಾಪಿಯಾಗಿ ಬೆಳೆಯುವುದಕ್ಕೆ, ಜನಸಾಮಾನ್ಯರನ್ನೂ ಒಳಗೊಂಡು ರಾಜಕೀಯ ಜಾಗೃತಿಯ ಸಂದೇಶವನ್ನು ಒಯ್ಯುವುದಕ್ಕೆ ಸಹಕಾರಿಯಾದವು.
ಕ್ರಾಂತಿ ಪರಾಕ್ರಮದ ಮುಖ
ಅಹಿಂಸಾ ಪರಮೋ ಧರ್ಮಃ, ಧರ್ಮಹಿಂಸಾ ತಥೈವ ಚ ಎಂಬ ಸಾಲಿನಂತೆ ಅಹಿಂಸೆಯ ಮಾರ್ಗದಲ್ಲಿ ನಡೆಯುವುದೇನೋ ಪರಮಧರ್ಮ, ಆದರೆ ಧರ್ಮದ ಉಳಿವಿಗಾಗಿ ಮಾಡಿದ ಆಪಾತ ಹಿಂಸೆಯೂ ಅಹಿಂಸೆಯೇ ಎನ್ನುವುದು ಭಾರತದ ಗುಣಧರ್ಮ. ವಾಸ್ತವವಾಗಿ ನಾವು ಶಾಂತಿಪ್ರಿಯರಾಗಿದ್ದರೂ, ನಾವು ಆಚರಿಸುವ ಸಂಸ್ಕೃತಿಗೆ ಧಕ್ಕೆಯಾದಾಗ ಅದನ್ನು ನಿವಾರಿಸಲು ಬೇಕಾದ ಮಾರ್ಗವನ್ನು ಅನುಸರಿಸಿ ನಮ್ಮತನವನ್ನು ಕಾಪಾಡಿಕೊಂಡಿದ್ದೇವೆ. ಮಹಾಕಾವ್ಯಗಳಿಂದ ಹಿಡಿದು ಮೊನ್ನೆ ಮೊನ್ನೆಯ ಏರ್ಸ್ಟ್ರೈಕ್ನ ವರೆಗಿನ ಘಟನೆಗಳೇ ಇದಕ್ಕೆ ನಿದರ್ಶನಗಳು.
ಕ್ಷಾತ್ರವಿಲ್ಲದೆ ಧರ್ಮ ಊರ್ಜಿತವಾಗದು ಎಂಬುದು ಇತಿಹಾಸಸಿದ್ಧ ತಥ್ಯ. ಅಲೆಗ್ಸಾಂಡರ್ನನ್ನು ಎದುರಿಸಿದ ಪುರೂರವ, ಶಕರನ್ನು ಹಿಮ್ಮೆಟ್ಟಿಸಿ ಹೊಸ ಶಕೆಯನ್ನು ಆರಂಭಿಸಿದ ವಿಕ್ರಮಾದಿತ್ಯ, ಘಜನಿಗೆ ಸಮರ್ಥ ವಿರೋಧವನ್ನು ನೀಡಿದ ಸಾಮಾನ್ಯ ಜನರು, ಘೋರಿಯನ್ನು ಮಣಿಸಿದ ಪೃಥ್ವಿರಾಜ ಚೌಹಾಣ, ಅಕ್ಬರನಿಗೆ ಸಿಂಹಸ್ವಪ್ನನಾದ ಮಹಾರಾಣಾ ಪ್ರತಾಪ, ರಾಷ್ಟ್ರದಾದ್ಯಂತ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದ ಔರಂಗಜೇಬನಿಗೆ ಪ್ರಳಯರುದ್ರರಂತೆ ಕಾಣಿಸಿದ ಛತ್ರಪತಿ ಶಿವಾಜಿ ಮತ್ತು ಗುರುಗೋವಿಂದ ಸಿಂಹ, ಅಥಕ್ನಿಂದ ಕಟಕ್ನವರೆಗೂ ಹಿಂದೂ ಸಾಮ್ರಾಜ್ಯವನ್ನು ವಿಸ್ತರಿಸಿದ ಪೇಶ್ವೆಗಳು ಇತ್ಯಾದಿ ನಿದರ್ಶನಗಳು ಬ್ರಿಟಿಷ್ಪೂರ್ವದ ಕ್ಷಾತ್ರತೇಜದ ನಿದರ್ಶನಗಳು.
೧೭೫೭-೧೮೫೭ರ ಅವಧಿಯಲ್ಲಿ ಭಾರತೀಯ ಸಮಾಜದ ವಿವಿಧ ವರ್ಗಗಳಲ್ಲಿ ಬ್ರಿಟಿಷರ ವಿರುದ್ಧ ಅಸಮಾಧಾನದ ಜ್ವಾಲೆಯೂ ಒಳಗಿಂದೊಳಗೆ ತೀವ್ರಗೊಂಡು ೧೮೫೭ರಲ್ಲಿ ಮಂಗಲಪಾಂಡೆಯಿಂದ ಮುನ್ನೆಲೆಗೆ ಬಂದ ಮಹಾಸಂಗ್ರಾಮ, ನಾನಾಸಾಹೇಬ, ತಾತ್ಯಾಟೋಪೆ, ಝಾನ್ಸಿರಾಣಿ ಲಕ್ಷ್ಮೀಬಾಯಿಯಾದಿಯಾಗಿ ರಾಷ್ಟ್ರದ ಅನೇಕ ಭಾಗಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಆಸ್ಪೋಟಿಸಿತು. ಆದರೆ ಸಂಘಟನೆ, ಸಂಪರ್ಕ, ಸರಬರಾಜು ವ್ಯವಸ್ಥೆ, ನಾಯಕತ್ವದ ಕೊರತೆಯಿಂದಾಗಿ ಈ ಸಂಗ್ರಾಮ ಯಶಸ್ವಿಯಾಗಲು ಸಾಧ್ಯವಾಗದಿದ್ದರೂ, ಬ್ರಿಟಿಷರಿಗೆ ಭಾರತೀಯರು ಸಂಘಟಿತರಾದರೆ ಎದುರಾಗಬಹುದಾದ ಸಂಕಷ್ಟದ ಸ್ಪಷ್ಟ ಚಿತ್ರಣವನ್ನೂ, ಮುಂದಿನ ಹೋರಾಟಗಾರರಿಗೆ ಹೋರಾಟದ ಕಿಚ್ಚನ್ನೂ ದಾಟಿಸಿದ್ದು ಸುಳ್ಳಲ್ಲ. ಇದು ಮುಂದಿನವರಿಗೆ ಪ್ರೇರಣೆಯಾಗಬಾರದೆಂದೇ ಬ್ರಿಟಿಷ್ ಇತಿಹಾಸಕಾರರು ಮತ್ತು ಅವರ ಮಾನಸಪುತ್ರರಂತಿದ್ದ ದೇಶೀಯ ಇತಿಹಾಸಕಾರರು ಇದನ್ನು ‘ಸಿಪಾಯಿ ದಂಗೆ ಎಂದು ಸರಳೀಕರಿಸಿದ್ದನ್ನು ಕಾಣಬಹುದು.
೧೮೫೭ರ ಸ್ವಾತಂತ್ರ್ಯಸಂಗ್ರಾಮದ ನಂತರ ವಾಸುದೇವ ಬಲವಂತ ಫಡ್ಕೆಯ ಹೋರಾಟ, ಕೂಕಾ ಆಂದೋಳನದ ಜೊತೆಗೆ, ಲಾಲ್-ಬಾಲ್-ಪಾಲ್ರ ವಿವಿಧ ಹೋರಾಟಗಳು ಬ್ರಿಟಿಷರಿಗೆ ಸವಾಲಾದವು. ಚಾಪೇಕರ್ ಸಹೋದರರ ಪರಾಕ್ರಮ ರಾಷ್ಟ್ರದ ಯುವಕರಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿತು. ಸ್ವಾತಂತ್ರ್ಯವೀರ ಸಾವರಕರ್ ಅವರ ಕೆಚ್ಚೆದೆಯ ಹೋರಾಟ ಬ್ರಿಟಿಷರ ನಿದ್ದೆಗೆಡಿಸುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತೀಯರ ಸ್ವಾತಂತ್ರ್ಯದ ಕೂಗು ಮಾರ್ದನಿಸಲು ಕಾರಣವಾಯಿತು. ಸಾವರಕರರ ಪ್ರೇರಣೆಯಿಂದ ಧಿಂಗ್ರಾ, ಕಾನ್ಹೇರೆ, ವಾಂಚಿ ಅಯ್ಯರ್ರಂತಹ ನೂರಾರು ತರುಣರು ಬ್ರಿಟಿಷರಿಗೆ ತಕ್ಕ ಪಾಠವನ್ನು ಕಲಿಸಿದರು. ೧೯೦೫ರ ಬಂಗಾಲ ವಿಭಜನೆ ಭಾರತೀಯರನ್ನು ಅಖಂಡತೆಗಾಗಿ ಹೋರಾಡುವುದಕ್ಕೆ ಪ್ರೇರೇಪಿಸಿತು.
೧೯೧೯ರ ಜಲಿಯನ್ವಾಲಾಬಾಗ್ ಭಾರತದ ಸ್ವಾತಂತ್ರ್ಯದ ಇತಿಹಾಸದ ಮಹತ್ತ್ವಪೂರ್ಣ ಮೈಲಿಗಲ್ಲು. ಈ ದುರಂತ ಹುಟ್ಟುಹಾಕಿದ ಆವೇಶದ ಕಾರಣದಿಂದಲೇ ಉಧಮ್ಸಿಂಗ್, ಭಗತ್ಸಿಂಗ್ರಂತಹ ಯುವಕರ ಹೋರಾಟ ಪ್ರಾರಂಭವಾಯಿತು. ರಾಮಪ್ರಸಾದ್ ಬಿಸ್ಮಿಲ್ಲ, ಆಜಾದ್, ರಾಜಗುರು, ಸುಖದೇವ, ಜತಿನ್ ಮುಂತಾದ ಯುವಕರು ಸ್ವಾತಂತ್ರ್ಯಕ್ಕಾಗಿ ಬಲಿದಾನಗೈಯಲು ಮುಂದೆ ಬಂದರು. ಕೊನೆಯದಾಗಿ ಸುಭಾಷ್ಚಂದ್ರ ಬೋಸರ ಸೇನೆ ಬ್ರಿಟಿಷರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿ ಭಾರತದ ಸ್ವಾತಂತ್ರ್ಯವನ್ನು ಸನ್ನಿಹಿತಗೊಳಿಸಿತು.
“The role played by Netaji’s army was paramount in India’s being granted independence, while the role played by the non-violent movement was dismissed as MINIMAL” – ಎಂದಿದ್ದ ಕ್ಲೈಮೆಂಟ್ ಆಟ್ಲಿ.
ಈ ಮೇಲಿನ ಮಾತು ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಹೊತ್ತಿಸಿ, ೧೯೪೭ರಲ್ಲಿ ಬ್ರಿಟಿಷರನ್ನು ಈ ದೇಶದಿಂದ ಕಿತ್ತೊಗೆಯುವಲ್ಲಿ ಸೇನೆಯ ಪಾತ್ರವನ್ನು ಪರಿಚಯಿಸುತ್ತದೆ. ಸೈನಿಕರ ದಂಗೆಗಳು, ಐಎನ್ಎಯ ಹೋರಾಟ, ೧೯೪೬ರಲ್ಲಿ ಮುಂಬಯಿಯಲ್ಲಿ ನಡೆದ ನೌಕಾ ಸೈನಿಕರ ಬಂಡಾಯ ಮತ್ತು ಈ ಪ್ರಸಂಗದ ಪರಿಣಾಮವಾಗಿ ಅಂಬಾಲಾ, ಕರಾಚಿ, ಮದ್ರಾಸ್, ಕಲ್ಕತ್ತಾ, ರಂಗೂನ್ನಲ್ಲೂ ಸ್ವಾತಂತ್ರ್ಯ ಘೋಷಣೆ ಪ್ರತಿಧ್ವನಿಸಿತು. ನೌಕಾಬಲ ತೋರಿದ್ದ ದಿಟ್ಟತನವು ಸೇನೆ ಮತ್ತು ವಾಯುದಳಗಳಲ್ಲೂ ಮರುಕಂಪನ ಆರಂಭಿಸಿತು. ದೆಹಲಿಯಲ್ಲಿ ಪೊಲೀಸರೂ ದಂಗೆಯೆದ್ದರು. ತಮಗೆ ಅತ್ಯಂತ ವಿಧೇಯವಾಗಿರುತ್ತಿದ್ದ ಸಿಬ್ಬಂದಿ ವರ್ಗ, ಪೊಲೀಸರು, ಅಷ್ಟೇಕೆ ತಾವು ನೆಚ್ಚಿಕೊಂಡಿದ್ದ ಸೇನೆಯೂ ಸಹ ರಾಷ್ಟ್ರೀಯತೆಯ ಭಾವದಿಂದ ಪ್ರೇರಿತವಾಗಿ ತಮ್ಮ ವಿರುದ್ಧ ನಿಂತಿದ್ದು ಗಂಟುಮೂಟೆಕಟ್ಟಲು ಮುನ್ನುಡಿ ಎಂದು ಬ್ರಿಟಿಷರೇ ತಿಳಿಸಿದ್ದಾರೆ.
ಕ್ರಾಂತಿಕಾರಿ ಹೋರಾಟ ದೇಶದ ಬೇರೆ ಬೇರೆ ಭಾಗಗಳಲ್ಲಿ, ಸಮಯಗಳಲ್ಲಿ, ಹೆಸರುಗಳಲ್ಲಿ, ಸಂಘಟನೆಗಳ ನೇತೃತ್ವದಲ್ಲಿ, ಹಲವರ ನಾಯಕತ್ವದಲ್ಲಿ ನಡೆದರೂ ಆ ಎಲ್ಲ ಹೋರಾಟಗಳ ನಡುವೆ ಏಕಸೂತ್ರತೆ, ಗುರಿಯಲ್ಲಿನ ಸ್ಪಷ್ಟತೆ, ಸರ್ವ ತ್ಯಾಗಕ್ಕೂ ಸದಾ ಸಿದ್ಧರಾಗಿರುವ ಮಾನಸಿಕತೆ, ವ್ಯಕ್ತಿನಿಷ್ಠೆಯನ್ನೂ ಮೀರಿದ ತತ್ತ್ವನಿಷ್ಠೆ, ಮೂಲ ಉದ್ದೇಶಗಳೊಂದಿಗೆ ರಾಜಿಮಾಡಿಕೊಳ್ಳದ ಧೀಮಂತಿಕೆ – ಮೊದಲಾದ ಉದಾತ್ತ – ಉಜ್ವ್ವಲ ಮೌಲ್ಯಗಳನ್ನು ಕಾಣುತ್ತೇವೆ. ಕ್ರಾಂತಿಕಾರಿಗಳ ಈ ಪ್ರಖರ ತೇಜಸ್ಸನ್ನು ಎದುರಿಸಲಾರದೆ ಅಂತಿಮವಾಗಿ ಬ್ರಿಟಿಷರು ಭಾರತ ಬಿಡುವ ನಿರ್ಣಯಕ್ಕೆ ಬಂದರು ಎಂಬುದು ವಿವಾದಾತೀತ ಸತ್ಯವಾಗಿದೆ.
ಭಕ್ತಿ ಪಂಥಗಳು ಮತ್ತು ಆಧ್ಯಾತ್ಮಿಕ ಪುರುಷರ ಕೊಡುಗೆ
ಸನಾತನಧರ್ಮವೇ ರಾಷ್ಟ್ರೀಯತೆ ಎಂಬ ಅರವಿಂದರ ಮಾತಿನಂತೆ ಈ ನಾಡಿನಲ್ಲಿ ಕಾಲಕಾಲಕ್ಕೆ ಅವತರಿಸಿದ ಸಂತರು, ಯೋಗಿಗಳು, ಆಧ್ಯಾತ್ಮಿಕ ಮಹಾಪುರುಷರು ತಮ್ಮ ವಾಙ್ಮಯದಿಂದಲೂ, ಪ್ರತ್ಯಕ್ಷ ಕೃತಿಗಳಿಂದಲೂ ಸ್ವಾತಂತ್ರ್ಯ ಸಂಘರ್ಷವನ್ನು ಧರ್ಮಯುದ್ಧವಾಗಿಸಿದರು. ಹಿಂದಿನ ಕಾಲದಿಂದಲೂ ಕುಲಗುರುಗಳು ರಾಜ್ಯದ ಸತ್ಪಥಕ್ಕೆ ಕಾರಣೀಭೂತರಾಗಿದ್ದರು. ಚಾಣಕ್ಯ, ವಿದ್ಯಾರಣ್ಯರು, ಸಮರ್ಥ ರಾಮದಾಸರಂತಹ ಗುರುಗಳು ಹಿಂದೂ ಸಾಮ್ರಾಜ್ಯದ ಸ್ಥಾಪನೆಗೆ ಪ್ರೇರಕಶಕ್ತಿಯಾಗಿದ್ದರು. ಚತುರ್ಧಾಮಗಳ ಮೂಲಕ ಭಾರತದ ಅಖಂಡತೆಗೆ ಕಾರಣವಾದ ಶಂಕರರು, ದ್ವೈತ-ವಿಶಿಷ್ಟಾದ್ವೈತದ ಮೂಲಕ ಜನಸಾಮಾನ್ಯರನ್ನು ಬೆಸೆದ ರಾಮಾನುಜ-ಮಧ್ವರು, ಚೈತನ್ಯ ಮಹಾಪ್ರಭು, ಗುರುನಾನಕರು, ಕಬೀರರು, ತುಳಸೀದಾಸರು, ಸೂರದಾಸರು, ವ್ಯಾಸರಾಯ-ಪುರಂದರ-ಕನಕರಾದಿಯಾಗಿ ಸಮಾಜದಲ್ಲಿ ಮೂಢನಂಬಿಕೆ ತಾಂಡವವಾಡುತ್ತಿರುವಾಗಲೆಲ್ಲ ಸಮಾಜ ಸುಧಾರಕರುಗಳ ರೂಪದಲ್ಲಿ ಸಮಾಜದ ತಪ್ಪನ್ನು ತಿದ್ದುವ ಪ್ರಯತ್ನವನ್ನು ಮಾಡಿದರು.
ತಮ್ಮ ಕರ್ತವ್ಯದ ಅರಿವಾಗದೆ, ಕ್ಷಣಿಕವಾದ ಸುಖ ನಿದ್ರೆಯಲ್ಲಿದ್ದ ಭಾರತೀಯರನ್ನು ಎಚ್ಚರಿಸುವಲ್ಲಿ ರಾಮ ಮೋಹನ್ ರಾಯ್, ದಯಾನಂದ ಸರಸ್ವತಿ, ಪರಮಹಂಸರು, ವಿವೇಕಾನಂದರು, ಜ್ಯೋತಿ ಭಾ ಪುಲೆ, ನಾರಾಯಣಗುರುಗಳು, ಅರವಿಂದರು, ರಾಮತೀರ್ಥರು ಪ್ರಮುಖವಾದ ಪಾತ್ರವಹಿಸಿದರು. ಜಾತಿಭೇದ ನಿರೋಧ, ಅಸ್ಪೃಶ್ಯತಾನಿವಾರಣೆ, ರಾಷ್ಟ್ರಭಾಷೆಯ ಪ್ರಚಾರ, ಸ್ವದೇಶಿ ವಸ್ತುಗಳ ಬಳಕೆ, ದೇಶಪ್ರೇಮ, ಗೋರಕ್ಷಾ ಅಭಿಯಾನ, ವೈದಿಕ ಪರಂಪರೆಯ ರಕ್ಷಣೆ, ಧಾರ್ಮಿಕ ಉನ್ನತಿಯನ್ನೇ ಜೀವನದ ಗುರಿಯಾಗಿಸಿಕೊಂಡು ನೂರಾರು ಸಂತರು ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ಜವಾಬ್ದಾರಿಯ ಅರಿವಿಲ್ಲದ ತರುಣರನ್ನು ಜ್ಞಾನಾಧಾರವಾದ ಬ್ತಹ್ಮಶಕ್ತಿಯ ಮೂಲಕ ಪ್ರೇರೇಪಿಸಲು ಪಣತೊಟ್ಟು ಇಂದಿಗೂ ಕೋಟ್ಯಂತರ ಜನರ ಹೃದಯಸಿಂಹಾಸನದಲ್ಲಿ ರಾರಾಜಿಸುತ್ತಿದ್ದಾರೆ.
ಸಾಹಿತ್ಯ ಮತ್ತು ಪತ್ರಿಕಾರಂಗ
“THE PEN IS MIGHTIER THAN THE SWORD” ಎಂಬ ಮಾತಿನಂತೆ ಲೇಖನಿಯನ್ನು ಪ್ರಖರ ಅಸ್ತ್ರವನ್ನಾಗಿಸಿಕೊಂಡ ಸಾವಿರಾರು ಧೀಮಂತರ ಕೊಡುಗೆ ಕಡಮೆಯದ್ದೇನಲ್ಲ. ಸ್ವರಾಜ್ಯದ ಕಲ್ಪನೆಯನ್ನು ಕಟ್ಟಿಕೊಡುವ ವೇದ-ಪುರಾಣಗಳು, ಜನನಿ-ಜನ್ಮಭೂಮಿಯ ಮಹತ್ತ್ವವನ್ನು ಸಾರುವ ಮಹಾಕಾವ್ಯಗಳು, ಸತ್ಯಮೇವ ಜಯತೇ ಎಂಬಿತ್ಯಾದಿ ಮಂತ್ರಾಕ್ಷರಗಳಿಗೆ ಸಾಕ್ಷಿಯಾದ ಶಾಸನಗಳು, ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಬಿಂಬಿಸಿದ ದೇಶಭಕ್ತಿಗೀತೆಗಳು, ಆನಂದ ಮಠ, ಯಂಗ್ ಇಂಡಿಯಾ, ಭಾರತದ ಸ್ವಾತಂತ್ರ್ಯ ಸಂಗ್ರಾಮ – ೧೮೫೭ – ಮುಂತಾದ ಕೃತಿಗಳು ಭಾರತೀಯರನ್ನು ಜಾಗೃತಗೊಳಿಸಿದವು. ಅದಕ್ಕಾಗಿ ಬ್ರಿಟಿಷ್ ಸರ್ಕಾರ ಇವುಗಳನ್ನು ನಿಷೇಧಗೊಳಿಸಿತು! ನೀಲದರ್ಪಣದಂತಹ ನಾಟಕಗಳೂ ಸ್ವಾತಂತ್ರ್ಯ ಜಾಗೃತಿಯ ಮಾರ್ಗಗಳಾಗಿದ್ದವು. ವಂದೇ ಮಾತರಂ ಎಂಬ ಪಂಚಾಕ್ಷರಿ ಮಂತ್ರ ಇಡೀ ರಾಷ್ಟ್ರದಾದ್ಯಂತ ಘೋಷವಾಕ್ಯವಾಗಿ ಮೊಳಗಿತು.
೧೭೮೦ರಲ್ಲಿ ಜೇಮ್ಸ್ ಅಗಸ್ಟಸ್ ಹಿಕ್ಕಿಯಿಂದ ಬೆಂಗಾಲ್ ಗೆಜೆಟ್ ಪತ್ರಿಕೆಯ ಮೂಲಕ ಶುರುವಾದ ಪತ್ರಿಕಾರಂಗ ಕ್ರಮೇಣ ಬ್ರಿಟಿಷ್ ಸರ್ಕಾರದ ವಿರುದ್ಧ ಪ್ರಮುಖ ಅಸ್ತ್ರವಾಯಿತು. ಸಂವಾದ ಕೌಮುದಿ, ಹಿಂದೂ ಪೇಟ್ರಿಯಟ್, ಅಮೃತ ಬಾಜಾರ್ ಪತ್ರಿಕಾ, ಕೇಸರಿ, ಮರಾಠಾ, ಗದರ್, ಪ್ರಬುದ್ಧ ಭಾರತ, ಉದ್ಬೋಧನ, ವಂದೇ ಮಾತರಂ, ಯಂಗ್ ಇಂಡಿಯಾ, ಮೂಕನಾಯಕ, ಹಾಗೂ ಇನ್ನಿತರ ಪತ್ರಿಕೆಗಳು ನಾಡಿನ ಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ನಿರಂತರವಾಗಿ ಹೆಚ್ಚಿಸುತ್ತಿತ್ತ್ತು.
ಸಾಗರದಾಚೆಯ ಆಂದೋಲನ
ಲಾಲಾ ಹರದಯಾಳ್ ದಿ ಇಂಡಿಯಾ ಅಸೋಸಿಯೇಶನ್ ಆಫ್ ದಿ ಪೆಸಿಫಿಕ್ ಕೋಸ್ಟ್ ಎಂಬ ಸಂಸ್ಥೆಯನ್ನಾರಂಭಿಸಿ, ಗದರ್ ಎಂಬ ಪತ್ರಿಕೆಯನ್ನು ಹಲವು ಭಾಷೆಗಳಲ್ಲಿ ಪ್ರಕಟಿಸುತ್ತಿದ್ದರು. ಈ ಪತ್ರಿಕೆ ಕ್ರಾಂತಿಕಾರಿ ವಿಚಾರಧಾರೆ, ಪ್ರೇರಣಾದಾಯಿ ಬರಹಗಳ ಮೂಲಕ ಕ್ರಾಂತಿಯುಕ್ತ ವಿಚಾರಗಳನ್ನು ಭಾರತೀಯ ಸೈನಿಕರ ಶಿಬಿರಗಳನ್ನೂ ಸೇರಿದಂತೆ ಜಗತ್ತಿನಾದ್ಯಾಂತ ಭಾರತೀಯರಿಗೆ ತಲಪಿಸಿ ಅವರನ್ನು ತಮ್ಮ ಆಂದೋಲನದ ಭಾಗವಾಗಿಸಿಕೊಂಡಿತು! ರಾಸ್ ಬಿಹಾರಿ ಬೋಸ್, ಶಚೀಂದ್ರನಾಥ ಸನ್ಯಾಲ ಮತ್ತು ಜತಿನ್ ಮುಖರ್ಜಿರವರ ಮುಂದಾಳತ್ವದಲ್ಲಿ ಕ್ರಾಂತಿಕಾರಿ ತಂಡ ದೊಡ್ಡದೊಂದು ಯೋಜನೆಗೆ ಅಣಿಯಾಯಿತು. ಆದರೆ ನಮ್ಮವರೇ ನಮಗೇ ವಿಶ್ವಾಸಘಾತವನ್ನು ಮಾಡಿದ ಕಾರಣ ಯೋಜನೆ ಯಶಸ್ವಿಯಾಗಲಿಲ್ಲ.
ವಿದೇಶದಲ್ಲಿ ಸಾವರಕರರು ಇಂಡಿಯಾ ಹೌಸ್ ಮೂಲಕ ಶಿಕ್ಷಣಕ್ಕಾಗಿ ಲಂಡನ್ಗೆ ಬರುತ್ತಿದ್ದ ಭಾರತೀಯ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿಯ ಕಲ್ಪನೆಯನ್ನು ಬಿತ್ತಿ ನಮ್ಮನ್ನಾಳುತ್ತಿದ್ದವರ ನೆಲದಲ್ಲೇ ದೊಡ್ಡ ಸಂಚಲನ ಮೂಡಿಸುವುದಕ್ಕೆ ಕಾರಣರಾದರು. ಧೀಂಗ್ರಾನಂತಹ ನೂರಾರು ತರುಣರು ಸಾವರಕರರ ಮೂಲಕ ಪ್ರೇರಣೆ ಪಡೆದಿದ್ದು ಇದೇ ಭಾರತ ಭವನದಲ್ಲಿ. ಹಾಗೆಯೇ ಐಎನ್ಎ ನಮಗೆಲ್ಲಾ ತಿಳಿದಿದೆ. ಆದರೆ ಅದು ರಾಸ ಬಿಹಾರಿ ಬೋಸ್ರ ಕಾರ್ಯದ ಫಲಶ್ರುತಿಯೆಂದು ಅನೇಕರಿಗೆ ತಿಳಿದಿಲ್ಲ. ಮೊತ್ತಮೊದಲು ವಿದೇಶದ ಸೆರೆಮನೆಗಳಲ್ಲಿ ಬಂದಿಯಾಗಿರುವ ಸೈನಿಕರನ್ನು ಬಿಡಿಸಿ, ಅವರನ್ನೊಳಗೊಂಡ ಸಂಘಟನೆಯನ್ನು ಸ್ಥಾಪಿಸಿ, ವಿಶ್ವಯುದ್ಧಗಳ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಮುಗಿಬೀಳಬೇಕೆಂದು ನಿರ್ಧರಿಸಿದವರು ರಾಸ ಬಿಹಾರಿ ಬೋಸರು. ಇದರ ಜವಾಬ್ದಾರಿಯನ್ನು ನಂತರದ ದಿನಗಳಲ್ಲಿ ಸುಭಾಷ್ ಚಂದ್ರ ಬೋಸರಿಗೆ ಹಸ್ತಾಂತರಿಸಿದರು. ಹಾಗೆಯೇ ವಿದೇಶೀ ನೆಲದಲ್ಲಿ ಕೋಮಗಾತ ಮರು ಎಂಬ ಹಡಗಿನಲ್ಲಾದ ಸಂಘರ್ಷ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪುಷ್ಟಿ ನೀಡಿದ ಮತ್ತೊಂದು ಘಟನೆ.
ಸ್ಥಾನೀಯ ಹೋರಾಟ
ಸ್ಥಾನೀಯ ಹೋರಾಟಗಳು ಜಗದ್ವಿಖ್ಯಾತಿ ಪಡೆಯದಿದ್ದರೂ, ಆ ಕಾಲಘಟ್ಟದ ಹೋರಾಟದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದವು. ವಿಜಯನಗರ ಸಾಮ್ರಾಜ್ಯ, ಪೋಚುಗೀಸರ ವಿರುದ್ಧ ಹೋರಾಡಿದ ಉಳ್ಳಾಲದ ರಾಣಿ ಅಬ್ಬಕ್ಕ, ಮತಾಂಧ ಮೊಗಲರ ವಿರುದ್ಧ ಹೋರಾಡಿದ ಕೆಳದಿಯ ರಾಣಿ ಚೆನ್ನಮ್ಮ, ಆಕ್ರಮಕ ಸೈನಿಕರ ರುಂಡವನ್ನು ಚೆಂಡಾಡಿದ ಒನಕೆ ಓಬವ್ವ ಮುಂತಾದ ಪ್ರಮುಖರ ಪಾತ್ರ ಸ್ಮರಣೀಯ. ಬ್ರಿಟಿಷರ ನಂತರದಲ್ಲಿ ಕರ್ನಾಟಕದಲ್ಲಿ ಧೋಂಡೂ ವಾಘ್ ದಂಗೆಯ ಮೂಲಕ ಶುರುವಾದ ಪ್ರಥಮ ಸಶಸ್ತ್ರ ಕ್ರಾಂತಿ, ಕಿತ್ತೂರು ದಂಗೆ, ನಗರ ದಂಗೆ, ಕೊಡಗಿನ ಬಂಡು, ಅಮರ ಸುಳ್ಯ ಹೋರಾಟ ಮೊದಲಾದ ಬಂಡಾಯಗಳು ನಡೆದವು. ೧೮೫೭ರ ಸಂದರ್ಭದಲ್ಲೂ ಸುರಪುರ ಮತ್ತು ನರಗುಂದ ರಾಜರು, ಹಲಗಲಿ ಬೇಡರು, ಮುಂಡರಗಿ ಭೀಮರಾಯರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ದಂಡೆದ್ದರು. ಅಹಿಂಸಾತ್ಮಕವಾಗಿ ನಡೆದ ಅಸಹಕಾರ ಚಳವಳಿ, ಕಾನೂನುಭಂಗ ಚಳವಳಿ, ಕರ ನಿರಾಕರಣೆ, ಭಾರತ ಬಿಟ್ಟು ತೊಲಗಿ ಆಂದೋಲನ, ಮೈಸೂರು ಚಲೋ ಆಂದೋಲನಗಳೆಂಬ ಹಲವು ನಿದರ್ಶನಗಳು ಕರ್ನಾಟಕದಲ್ಲಿ ದೊರೆಯುತ್ತವೆ.
ಧಾರ್ಮಿಕ ಆಚರಣೆಗಳು, ಮಕ್ಕಳು, ತಾಯಂದಿರು ಮತ್ತು ಜನ ಬೆಂಬಲ
ಸ್ವಾತಂತ್ರ್ಯ ಹೋರಾಟದಲ್ಲಿ ಸಂಘಟನೆಗಾಗಿ ಧಾರ್ಮಿಕ ಆಚರಣೆಗಳೂ ಮಹತ್ತರದ ಪಾತ್ರ ವಹಿಸಿವೆ. ಗಣೇಶೋತ್ಸವ ಮತ್ತು ಶಿವಾಜಿ ಉತ್ಸವವನ್ನು ತಿಲಕರು ಪ್ರಾರಂಭಿಸುವುದಕ್ಕೆ ಪ್ರಮುಖ ಕಾರಣವೇ ಸಾಮೂಹಿಕತೆಗೆ ಸಾಕ್ಷಿಯಾಗುವ ನಮ್ಮ ಆಚರಣೆಗಳು. ಸ್ವಾತಂತ್ರ್ಯ ಹೋರಾಟದಲ್ಲಿ ಫತೇಸಿಂಹ ಮತ್ತು ಜೋರಾವರಸಿಂಹ ಎಂಬ ಗುರುಗೋವಿಂದ ಸಿಂಹರ ಇಬ್ಬರು ಮಕ್ಕಳು ಸದಾ ಆದರ್ಶಪ್ರಾಯರು. ಖುದಿರಾಮ್ ಬೋಸ್ ಎಂಬ ಮೊಟ್ಟಮೊದಲ ಬಾಂಬ್ ಎಸೆದ ಕ್ರಾಂತಿಕಾರಿ, ೧೬ ವರ್ಷದ ಬಾಲಕ! ಗಾಂಧಿಯವರ ಎಲ್ಲ ಹೋರಾಟಗಳಿಗೂ ಅನೇಕ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹೋರಾಟದಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದರು.
ಇನ್ನು ಪ್ರಮುಖವಾಗಿ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರನಿಗೂ ರಕ್ಷೆಯ ಕವಚದಂತಿದ್ದವರು ಸಾಮಾನ್ಯ ಜನರು. ಕ್ರಾಂತಿವೀರರಿಗೆ ಅದೆಷ್ಟು ಜನಬೆಂಬಲ ಇತ್ತೆಂಬುದನ್ನು ಬ್ರಿಟಿಷ್ ದಾಖಲೆಗಳೇ ಹೇಳುವಂತೆ ಅವರು ಆಹಾರ ಪೂರೈಕೆಗಾಗಿ ಯಾವುದೇ ವ್ಯವಸ್ಥೆ ಇಲ್ಲದೆಯೂ ಬೇಕಾದೆಡೆಗೆ ಚಲಿಸುತ್ತಿದ್ದರು. ತಮ್ಮ ವಸ್ತುಗಳನ್ನು ರಕ್ಷಕರಿಲ್ಲದೆಯೇ ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿದ್ದರು. ಅವರಿಗೆ ತಾವಿರುವ ಹಾಗೂ ಬ್ರಿಟಿಷರಿರುವ ಸ್ಥಾನಗಳ ಖಚಿತವಾದ ಮಾಹಿತಿಗಳು ಲಭ್ಯವಿರುತ್ತಿದ್ದವು. ಇವೆಲ್ಲದಕ್ಕೂ ಜನರ ಬೆಂಬಲ ಕಾರಣ. ನಾವು ಯಾವುದೇ ಯೋಜನೆಯನ್ನು ಜನರ ಕಣ್ಣುತಪ್ಪಿಸಿ ಮಾಡಲು ಸಾಧ್ಯವಿರಲಿಲ್ಲ. ನಮ್ಮವರ ಪ್ರತಿಯೊಂದು ಊಟದ ಮೇಜಿನ ಸುತ್ತಲೂ ಮತ್ತು ಪ್ರತಿಯೊಂದು ಡೇರೆಯಲ್ಲೂ ಅವರ ರಹಸ್ಯ ಸಹಕಾರಿಗಳು ಇರುತ್ತಿದ್ದು, ಅವರ ಮೇಲೆ ಆಕಸ್ಮಿಕ ದಾಳಿ ನಡೆದರೆ ಅದೊಂದು ಅದೃಷ್ಟವೇ ಸರಿ ಎಂದು ಬೌಲ್ ಎಂಬ ಅಧಿಕಾರಿ ಹೇಳಿಕೊಳ್ಳುತ್ತಾನೆ. ಇವರುಗಳ ಜೊತೆಗೆ ತಾವು ಹೆತ್ತು, ಹೊತ್ತು, ಸಾಕಿ, ಸಲಹಿದ ತಾಯಂದಿರು ತಮ್ಮ ಮಕ್ಕಳನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ರಾಷ್ಟ್ರಕ್ಕಾಗಿ ಹೋರಾಡಿದ್ದಾರೆ.
ಇದಲ್ಲದೆ ರೈತ ಚಳವಳಿ, ಆದಿವಾಸಿಗಳ ಚಳವಳಿ, ಕಾರ್ಮಿಕರ ಚಳವಳಿ, ಉದ್ಯಮಿಗಳ ಚಳವಳಿ ಮುಂತಾದ ಅನೇಕ ಮಜಲುಗಳಲ್ಲಿಯೂ ಸ್ವಾತಂತ್ರ್ಯ ಹೋರಾಟ ನಡೆದಿವೆ.
ಒಟ್ಟಿನಲ್ಲಿ ಭಾರತದಲ್ಲಿ ಹುಟ್ಟಿದ ಯಾವುದೇ ಸಂಸ್ಕೃತಿ ಭಾರತಕ್ಕೆ ವಿರುದ್ಧವಾಗಿರಲಿಲ್ಲ. ಆದರೆ ವಿದೇಶೀ ಆಕ್ರಮಣಗಳ ನಂತರದಲ್ಲಿ ಆದ ಬದಲಾವಣೆಗಳು ಸ್ವಾತಂತ್ರ್ಯದ, ಸ್ವರಾಜ್ಯದ, ಸ್ವಧರ್ಮದ ಪ್ರಾಶಸ್ತ್ಯವನ್ನು ಜನರಿಗೆ ಹೆಚ್ಚು ಮನದಟ್ಟು ಮಾಡಿವೆ. ಅಷ್ಟೇ ಅಲ್ಲದೆ ದೇಶಕ್ಕಾಗಿ ಬದುಕುವುದರ ಜೊತೆಗೆ ಸ್ವಾತಂತ್ರ್ಯ ಸಾಧನೆಗೆ ಜೀವವೆಷ್ಟು ತೃಣಪ್ರಾಯವೆಂಬುದನ್ನು ಭಾರತೀಯರು ತಮ್ಮ ಸಂಘರ್ಷದ ಇತಿಹಾಸದ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಸ್ವಾತಂತ್ರ್ಯ ಎನ್ನುವುದು ಸಾಮ್ರಾಜ್ಯವಾದಿಗಳ ಪಾಶವೀಶಕ್ತಿಗೆ ಎದೆಯೊಡ್ಡಿ ಬಲಿದಾನಗೈದವರ ಪರಿಣಾಮವಾಗಿ ದೊರಕಿದ್ದೇ ಹೊರತು, ಯಾರ ಉದಾರತನವೂ ಇಲ್ಲಿ ಕಾಣಲು ಸಿಗುವುದಿಲ್ಲ. ಇಂದಿಗೆ ಸ್ವಾತಂತ್ರ್ಯವೆಷ್ಟು ಮುಖ್ಯವೋ, ಅದನ್ನು ತಂದುಕೊಡುವಲ್ಲಿ ತಮ್ಮ ಜೀವವನ್ನು ಮುಡಿಪಾಗಿಟ್ಟ ಪ್ರತಿಯೊಬ್ಬರ ತ್ಯಾಗವನ್ನೂ ನಾವು ಗೌರವಿಸಬೇಕು. ಸ್ವಾತಂತ್ರ್ಯ ಕಾಲಘಟ್ಟದಲ್ಲಿ ತಮ್ಮ ಶಕ್ತಿಗನುಸಾರ ರಾಷ್ಟ್ರಕ್ಕಾಗಿ ದುಡಿದ ಎಲ್ಲರೂ ಪ್ರಾತಃಸ್ಮರಣೀಯರೇ. ಅವರ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬದಲು ದೊರೆತ ಕರ್ತವ್ಯವನ್ನು ಸಶಕ್ತವಾಗಿ ನಿಭಾಯಿಸಿ ಪರಮವೈಭವಯುತ ನಾಡನ್ನು ಕಟ್ಟುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲೂ ಇದೆ.
ವಂದೇ ಮಾತರಂ