ಆಂಗ್ಲರಿಂದ ಪಡೆದ ಬಿಡುಗಡೆಯನ್ನು ಸ್ವಾತಂತ್ರ್ಯವೆಂದು ಪರಿಗಣಿಸಿ ಆಗಸ್ಟ್ ೧೫ರಂದು ಒಂದಷ್ಟು ಸಂಭ್ರಮಿಸುತ್ತೇವಷ್ಟೆ. ಇದು ಪ್ರಸ್ತುತ ಕಂಡುಬರುವ ಚಿತ್ರಣ. ಇದೀಗ ಈ ನೆಲೆಯಿಂದಲೇ ತೊಡಗೋಣವಂತೆ.
ಕೈಯಲ್ಲಿಲ್ಲದ ಹೃದಯ
ವ್ಯಾಪಾರಕ್ಕಾಗಿ ಬಂದ ಆಂಗ್ಲರು ತಕ್ಕಡಿಯ ಜತೆಗೆ ವ್ಯಾಪಾರದ ರಕ್ಷಣೆಗೆಂದು ಸೈನ್ಯವನ್ನೂ ತಂದಿರಿಸಿಕೊಂಡರು. ಇದಕ್ಕೆ ನಮ್ಮಲ್ಲಿಯ ರಾಜರು ’ಉದಾರ’ವಾಗಿ ಒಪ್ಪಿಗೆಯನ್ನೂ ಸೂಚಿಸಿದರು. ಸೈನ್ಯವನ್ನು ವಿಸ್ತರಿಸಿಕೊಳ್ಳುತ್ತ, ಅದಕ್ಕೆ ಒಪ್ಪಿಗೆ ನೀಡದ ರಾಜರುಗಳನ್ನು ಮಟ್ಟಹಾಕಲು ಅದೇ ಸೈನ್ಯವನ್ನು ಬಳಸಿಕೊಂಡರು. ಕೊನೆಯಲ್ಲಿ ಆದುದೇನೆಂದರೆ ಇಲ್ಲಿಯ ಸಮಗ್ರ ಶಾಸನವು ಅನಾಯಾಸವಾಗಿ ಆಂಗ್ಲರ ಕೈಗೆ ಹೋದುದು.
ಆಂಗ್ಲರು ಮತ್ತವರ ಓರಗೆಯ ಇತರ ಐರೋಪ್ಯಮಂದಿ ಇಲ್ಲಿಗೆ ಬರುವಾಗ ಈ ದೇಶವು ಏಕಶಾಸನವ್ಯವಸ್ಥೆಯನ್ನು ಹೊಂದಿರಲಿಲ್ಲ. ಹಲವು ರಾಜರುಗಳು ತಮ್ಮ ತಮ್ಮ ರಾಜ್ಯವನ್ನು ಆಳಿಕೊಂಡಿದ್ದರು. ಹಲವರು ರಾಜ್ಯ ಕಳಕೊಂಡಿದ್ದರು. ಈಗ ದೇಶದ ರಾಜಧಾನಿಯಾಗಿರುವ, ಆಗಲೂ ದೇಶದ ಹೃದಯಸ್ಥಾನಿಯೆನಿಸಿದ್ದ ದೆಹಲಿ ಇಲ್ಲಿಯ ರಾಜರ ಕೈತಪ್ಪಿ ಐನೂರು ವರ್ಷಗಳೇ ಕಳೆದಿದ್ದವು. ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕಾಶ್ಮೀರ, ಪಂಜಾಬ್ ಮುಂತಾದ ಕೆಲವು ಪ್ರದೇಶಗಳಲ್ಲಿ ಸ್ವಕೀಯರ ಆಡಳಿತ ಇತ್ತೆನ್ನುವುದನ್ನು ಬಿಟ್ಟರೆ ಬಂಗಾಳ, ಗುಜರಾತ್, ಭಾಗ್ಯನಗರ, ವಿಜಯಪುರ ಇತ್ಯಾದಿ ಮಿಕ್ಕುಳಿದ ಹಲವು ಪ್ರದೇಶಗಳಲ್ಲಿ ಪರಕೀಯ ಆಡಳಿತವೇ ವಿಜೃಂಭಿಸಿತ್ತು. ಅಂದರೆ ನಮ್ಮ ಶಾಸನ ಇದ್ದುದು ದೇಶದ ಕೆಲವೇ ಭಾಗಗಳಲ್ಲಿ; ಹೆಚ್ಚಿನೆಡೆಗಳಲ್ಲಿ ಮತ್ತು ಹೃದಯಸ್ಥಾನದಲ್ಲಿ ಇದ್ದುದು ಪರಕೀಯ ಶಾಸನವೇ.
ಕಸಿಯುವವರು ಒಂದುಮಾಡುತ್ತಾರೆ!
ಆಂಗ್ಲರು ಇಲ್ಲಿಯ ಶಾಸನದ ಮೇಲೆ ಹಿಡಿತವನ್ನು ಸಾಧಿಸುತ್ತ ಸಾಧಿಸುತ್ತ ಸಮಗ್ರ ದೇಶವನ್ನು ಆವರಿಸಿಕೊಳ್ಳುವ ತಂತ್ರದಲ್ಲಿ ಭಾಗಶಃ ಯಶಪಡೆದರು. ತಗ್ಗಿ ಬಗ್ಗಿ ನಡೆದ ರಾಜರ ಕಡೆಗೆ ‘ಕೃಪಾ’ದೃಷ್ಟಿ ಬೀರಿದರು. ಅಂಥಲ್ಲಿ ಆಂಗ್ಲರ ಪ್ರತ್ಯಕ್ಷ ಶಾಸನವಿರಲಿಲ್ಲ, ಆದರೆ ಆಂಗ್ಲಾಧೀನ ಸ್ವಕೀಯ ರಾಜರ ಆಡಳಿತ ಇತ್ತು. ಗೋವಾ, ಪಾಂಡಿಚೇರಿಯಂಥ ಕೆಲವೆಡೆ ಅನಿವಾರ್ಯವಾಗಿ ಐರೋಪ್ಯಮಂದಿಗೇ ’ಮೇಯಲು’ ಬಿಟ್ಟರು ಆಂಗ್ಲರು. ಹಾಗಾಗಿ ಅಲ್ಲಿಯಂತೂ ಪೂರಾ ಇದ್ದುದು ಪರಕೀಯ ಶಾಸನವೇ.
ಒಟ್ಟಿನಲ್ಲಿ ದೇಶದ ಹೆಚ್ಚಿನ ಭಾಗದಲ್ಲಿ ತಮ್ಮ ಆಧಿಪತ್ಯವನ್ನು ಸ್ಥಾಪಿಸಿದರೆಂಬ ಕಾರಣಕ್ಕಾಗಿ ಆಂಗ್ಲರು ದೇಶವನ್ನು ಹೀಗೆ ಒಂದುಮಾಡಿದವರೆಂಬ ಬಿರುದನ್ನು ಒಂದು ಬಗೆಯ ಬುದ್ಧಿಜೀವಿ ವಲಯದಿಂದ ಇದೀಗಲೂ ಪಡೆಯುತ್ತಲೇ ಇದ್ದಾರೆ. ಹೌದಲ್ಲ! ಹಲವು ರಾಜರ ವಶದಲ್ಲಿದ್ದ, ಏಕಶಾಸನವ್ಯವಸ್ಥೆಯೇ ಇಲ್ಲದಿದ್ದ ಈ ದೇಶ ಒಂದು ದೇಶ ಅಂತನ್ನಿಸಿಕೊಂಡದ್ದೇ ಆಂಗ್ಲರಿಂದ ಎಂದು ಗೋಣಾಡಿಸುವ ಮಂದಿಯೂ ವಿಶ್ವವಿದ್ಯಾಲಯಗಳಿಂದ ದೊಡ್ಡ ಪ್ರಮಾಣದಲ್ಲೇ ಹೊರಬೀಳುತ್ತಲೇ ಇದ್ದಾರೆ. ಹಾಗಾದರೆ, ನಮ್ಮ ವಿರುದ್ಧ ನೀವೆಲ್ಲ ಒಂದಾಗಿ ಹೋರಾಡಿ, ಒಂದು ದೇಶವಾಗಿ ಹೋರಾಡಿ, ಎಂದೂ ಒಂದು ದೇಶವಾಗಿ ಇರದಿದ್ದ ನೀವು ಒಂದು ದೇಶದ ಹೆಸರಿನಲ್ಲಿ ಹೋರಾಡಿ ಎಂದು ಆಂಗ್ಲರೇ ಸೂಚಿಸಿ ಭಾರತ ಎನ್ನುವ ಹೊಸ ಹೆಸರನ್ನೂ ’ಭಾರತ ಮಾತಾ ಕೀ ಜಯ್’ ಎನ್ನುವ ಒಂದು ಹೊಸ ಘೋಷಣೆಯನ್ನೂ ದಯಪಾಲಿಸಿದರೇ? ನಮ್ಮ ಮೇಲೆ ಕ್ರೌರ್ಯದಿಂದ ದಾಸ್ಯವನ್ನು ಹೇರಿದವರ ಕುರಿತು ದ್ವೇಷವಲ್ಲವಾದರೂ ಮೋಹದಂಥ ಭಾವವನ್ನು ಹೊಂದಿರಕೂಡದೆಂಬ ಪ್ರಾಥಮಿಕಪ್ರಜ್ಞೆಯೇ ಇಲ್ಲದವರಂತೆ ಪರದೇಶೀಮೋಹವನ್ನು ಬೀಗುತ್ತಿದ್ದೇವೆ.
ಪರಶಾಸನಕ್ಕೆ ವಿರೋಧ
ಹಿಂಸಾತ್ಮಕ ದಾಸ್ಯವನ್ನು ಹೇರಿದ ಆಂಗ್ಲರಿಂದ ಪಡೆದ ಬಿಡುಗಡೆಯನ್ನೇ ಸ್ವಾತಂತ್ರ್ಯ ಎಂದುಕೊಳ್ಳುವುದಾದರೆ, ಆಗ ಕೆಲವು ಪ್ರಶ್ನೆಗಳಿಗೆ ಉತ್ತರಿಸಿಕೊಳ್ಳಬೇಕಾಗುತ್ತದೆ. ಆಂಗ್ಲರು ಇದ್ದ ಪ್ರದೇಶದಿಂದ ಪಡೆದ ಬಿಡುಗಡೆಯಂತೆಯೇ ಅವರಂತೆಯೇ ಇದ್ದ ಪೋರ್ಚುಗೀಸ್, ಫ್ರೆಂಚ್ ಮತ್ತಿತರ ಐರೋಪ್ಯರಿಂದ ಪಡೆದ ಬಿಡುಗಡೆಯೂ ಸ್ವಾತಂತ್ರ್ಯವೇ ಅಲ್ಲವೇ? ಅದೇ ರೀತಿ ಅವರಿಗಿಂತ ಹೆಚ್ಚು ಕ್ರೌರ್ಯವನ್ನು ನಮ್ಮ ಮೇಲೆ ಮೆರೆದ ಹೈದರಾಬಾದಿನ ನಿಜಾಮನಿಂದ, ಗುಜರಾತಿನ ನವಾಬನಿಂದ ಪಡೆದ ಬಿಡುಗಡೆಯೂ ಸ್ವಾತಂತ್ರ್ಯವೇ ಆಗುತ್ತದೆಯಲ್ಲವೇ?
ನವಾಬ, ನಿಜಾಮರಿಂದ ಪಡೆದದ್ದು ಸ್ವಾತಂತ್ರ್ಯ ಹೌದಾದರೆ, ಅದನ್ನು ಪಡೆಯಲು ನಡೆಸಿದ ಹೋರಾಟ ಸ್ವಾತಂತ್ರ್ಯ ಸಮರ ಹೌದಾದರೆ, ಅವರ ಹಾಗೆಯೇ ಬಂದು ಆದರೆ ಅವರೆಲ್ಲರಿಗಿಂತ ಅಧಿಕತರವಾಗಿ ಕ್ರೂರಶಾಸನ ನಡೆಸಿದ ಮೊಗಲರಾದಿಯಾಗಿ ಎಲ್ಲ ಪರಕೀಯರ ವಿರುದ್ಧ ನಡೆಸಿದ ಹೋರಾಟವೂ ಸ್ವಾತಂತ್ರ್ಯ ಸಮರವೇ ಆಗುವುದಿಲ್ಲವೇ?
ಆಂಗ್ಲರ ವಿರುದ್ಧದ ಸಮರವನ್ನಷ್ಟೆ ಸ್ವಾತಂತ್ರ್ಯಸಮರವೆನ್ನುವ, ಮಿಕ್ಕುಳಿದುವನ್ನು ಅಲ್ಲವೆನ್ನುವ ಇಲ್ಲವೇ ಅಲಕ್ಷಿಸುವ ಜಾಯಮಾನದ ಹಿಂದೆ ಬೇರೇನೋ ಹೇಳಿಕೊಳ್ಳಲಾಗದ ಕಾರಣ ಇರಲಿಕ್ಕೇ ಬೇಕು. ಅದರ ಜಾಡನ್ನು ಹಿಡಿದು ಹೊರಟರೆ ಅದು ಮತ್ತೆ ಆಕ್ರಮಕರ ವಾರಸಿಕೆಯನ್ನು ಹೊತ್ತವರ ಬುಡಕ್ಕೆ ಬಂದು ನಿಲ್ಲುತ್ತದೆ. ಅದಿರಲಿ.
ಗುಲಾಮರಾಗಿಸಿದವರಿಂದ ಮುಕ್ತಿ
ಈಗ, ಯಾರಾರ ವಿರುದ್ಧದ ಹೋರಾಟಗಳನ್ನು ಸ್ವಾತಂತ್ರ್ಯಹೋರಾಟಗಳೆಂದು ಪರಿಗಣಿಸಬೇಕು ಎಂಬ ಪ್ರಶ್ನೆ ಮುಖ್ಯವಾಗಿ ಎದುರಾಗುತ್ತದೆ. ಎಲ್ಲ ಪರಕೀಯರನ್ನೂ ದುಷ್ಮನ್ನುಗಳೆಂದು ಭಾವಿಸಬೇಕಿಲ್ಲ. ಪರಕೀಯರ ಜತೆಗೆ ಕೆಲವರು ಭಾರತಪ್ರೇಮಿಗಳಾಗಿಯೂ ಮಾನವಪ್ರೇಮಿಗಳಾಗಿಯೂ ಬಂದವರಿದ್ದಾರೆ. ಇವೆರಡು ಬೇರೆಬೇರೆಯೇ ಎಂಬ ಪ್ರಶ್ನೆಯೂ ಇದೆ. ಕೇವಲ ಮನುಷ್ಯ-ಅಸ್ತಿತ್ವಕ್ಕೆ ಒತ್ತುಕೊಡುವವ ಮನುಷ್ಯಪ್ರೇಮಿಯೆನಿಸಿಕೊಂಡರೆ ಭಾರತಪ್ರೇಮಿಯಾಗಲು ಅದರ ಜತೆಗೆ ಸಂಸ್ಕೃತಿ ಪರಂಪರೆ ಧರ್ಮ ಇತ್ಯಾದಿಗಳನ್ನೂ ಮುಖ್ಯವೆಂದು ಭಾವಿಸಬೇಕಾಗುತ್ತದೆ. ಎರಡೂ ಬಗೆಯ ವಿದೇಶೀಯರು ಇಲ್ಲಿಗೆ ಬಂದವರಿದ್ದಾರೆ. ಮನುಷ್ಯಪ್ರೇಮಿಗಳು ಕರುಣೆಯಿಂದಲೂ ಭಾರತಪ್ರೇಮಿಗಳು ತಮ್ಮವರ/ಇನ್ನಾರೇ ಪರಕೀಯರ ಅನ್ಯಾಯದ ವಿರುದ್ಧ ಭಿನ್ನ ಭಿನ್ನ ರೀತಿಯ ಹೋರಾಟದಿಂದಲೂ ತಮ್ಮನ್ನಿಲ್ಲಿ ತೊಡಗಿಕೊಂಡವರು. ಹಾಗಾಗಿ ಅವರ ವಿರುದ್ಧ ಹೋರಾಡುವ, ಅಂಥವರಿಂದ ಬಿಡುಗಡೆ ಹೊಂದುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಅತಿಥಿ, ವ್ಯಾಪಾರಿ, ರಿಲಿಜನ್ ಪ್ರಚಾರ ಇತ್ಯಾದಿ ಮಾರುವೇಷಗಳಲ್ಲಿ ಬಂದು ಕ್ರಮೇಣ ಇಲ್ಲಿಯ ಶಾಸನವನ್ನೇ ಕೈಗೆತ್ತಿಕೊಂಡು ನಮ್ಮನ್ನು ತಮ್ಮ ಗುಲಾಮದೇಶವಾಗಿಸಿದ ಪರಕೀಯರ ವಿರುದ್ಧದ ಯಾವುದೇ ಹೋರಾಟವನ್ನು ಸ್ವಾತಂತ್ರ್ಯಸಮರ ಎಂದು ಪರಿಗಣಿಸಲಡ್ಡಿಯಿಲ್ಲವೆನಿಸುತ್ತದೆ.
ಚೆನ್ನಮ್ಮ-ಬೋಸ್ ಹೋರಾಟಗಳು
ಈಗ ಒಂದು ಉದಾಹರಣೆಯಿಂದ ತೊಡಗಿ ಮುಂದುವರಿಸುವುದಾದರೆ; ಕಿತ್ತೂರು ಚೆನ್ನಮ್ಮ ಆಂಗ್ಲರ ವಿರುದ್ಧ ನಡೆಸಿದ ಹೋರಾಟವನ್ನು ಒಂದು ಆವೇಶದಿಂದಲೋ ಪ್ರದೇಶಾಭಿಮಾನದಿಂದಲೋ ಸ್ವಾತಂತ್ರ್ಯಹೋರಾಟವೆನ್ನುವುದಿದೆ. ಬರಿಯ ಆವೇಶಾಭಿಮಾನಗಳಿಂದ ಹಾಗೆಂದಾಗ ಸ್ವಾತಂತ್ರ್ಯಹೋರಾಟದ ಕುರಿತ ಧ್ವನಿ ಕುಸಿಯುವ ಅಪಾಯವಿದೆ. ತನ್ನ ರಾಜ್ಯಕ್ಕೆ ಸಂಬಂಧಪಡದ ಯಾವುದೇ ವ್ಯಕ್ತಿ ಆ ಪ್ರದೇಶದ ದೃಷ್ಟಿಯಿಂದ ಪರಕೀಯನೇ ಆಗುತ್ತಾನೆ. ಆಗ ಆ ರಾಜ್ಯ ಆತನ ಆಕ್ರಮಣಕ್ಕುತ್ತರಿಸುವುದು ಆ ಪ್ರದೇಶದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಹೋರಾಟವೆನಿಸಿಕೊಳ್ಳುತ್ತದೆ. ಒಂದು ರಾಜ್ಯದಲ್ಲಿ ಒಳಗೊಳಗೇ ವಿದ್ರೋಹಗಳೂ ನಡೆಯುತ್ತವೆ. ರಾಜನಾದವ ತನ್ನ ವಿರುದ್ಧದ ವಿದ್ರೋಹವನ್ನು ಹತ್ತಿಕ್ಕಿದರೆ ಅದು, ಅಂಥದ್ದು ಬರಿಯ ಯುದ್ಧವೋ ದಂಗೆಯೋ ಮತ್ತೊಂದೋ ಆದೀತೇ ಹೊರತು ಸ್ವಾತಂತ್ರ್ಯಸಮರವೆನಿಸಿಕೊಳ್ಳದು. ಅದೇ ವಿದ್ರೋಹಿಗಳು ತಮ್ಮ ರಾಜನನ್ನು ಪದಚ್ಯುತಗೊಳಿಸಲೆಂದು ಪರಕೀಯರ ಜತೆ ಸೇರಿಕೊಂಡೋ ಇಲ್ಲವೇ ಪರಕೀಯರ ಸಹಕಾರ ಪಡಕೊಂಡೋ ತಮ್ಮದೇ ರಾಜ್ಯದ ಮೇಲೆ ದಾಳಿಯಿಟ್ಟರೆ ಆಗ ಅದನ್ನು ಹತ್ತಿಕ್ಕುವ ಕ್ರಮವು ಬರಿಯ ಯುದ್ಧವಷ್ಟೇ ಆಗಿಬಿಡುವುದಿಲ್ಲ, ಅದು ಸ್ವಾತಂತ್ರ್ಯಸಮರದ ವ್ಯಾಪ್ತಿಯನ್ನು ಪಡೆದುಬಿಡುತ್ತದೆ. ಪರಕೀಯರ ಆಳ್ವಿಕೆಯಲ್ಲಿರುವ ದೇಶವೊಂದನ್ನು ಸ್ವತಂತ್ರಗೊಳಿಸಲು ಸಹಕಾರ ನೀಡಬಲ್ಲ ಇನ್ನ್ಯಾರೋ ಪರಕೀಯರ ಮೂಲಕ ನಡೆಸುವ ಹೋರಾಟವೂ ಸ್ವಾತಂತ್ರ್ಯಸಮರದ ವ್ಯಾಪ್ತಿಯನ್ನೇ ಪಡೆಯುತ್ತದೆ. ಇಂಥ ಪರಿಪ್ರೇಕ್ಷ್ಯದಲ್ಲಿಟ್ಟುಕೊಂಡು ಒಂದೊಂದು ಹೋರಾಟವನ್ನೂ ನೋಡಲು ಬರುತ್ತದೆ.
ಆಗ; ಚೆನ್ನಮ್ಮ ತನ್ನ ವಿರುದ್ಧ ವಿದ್ರೋಹಗೈದ ತನ್ನವರದೇ ವಿರುದ್ಧದ ಹೋರಾಟವೂ ಸ್ವಾತಂತ್ರ್ಯಹೋರಾಟವಾಗುತ್ತದೆ, ಇನ್ನು ಆಕೆ ಥ್ಯಾಕರೆ ವಿರುದ್ಧ ನಡೆಸಿದ್ದಂತೂ ಅಪ್ಪಟ ಸ್ವಾತಂತ್ರ್ಯಸಮರವೇ. ಹಾಗೆಯೇ; ಪರದೇಶಗಳ ಸಹಕಾರದೊಂದಿಗೆ ಆಂಗ್ಲರ ವಿರುದ್ಧ ಸುಭಾಷ್ ಚಂದ್ರ ಬೋಸರು ಗೈದುದೂ ಮಹಾನ್ ಸ್ವಾತಂತ್ರ್ಯ ಸಮರವೇ. ಇವೆರಡರ ನಡುವೆ ಇನ್ನೂ ಹತ್ತುಹಲವು ಬಗೆಯ ಸ್ವಾತಂತ್ರ್ಯಹೋರಾಟಗಳ ಮಾದರಿ ನಮ್ಮ ದೇಶದಲ್ಲಿ ಸಿಕ್ಕೇಸಿಗುತ್ತದೆ.
ಸ್ವಾತಂತ್ರ್ಯಸಮರದ ವಿವಿಧ ಮುಖ
ರಾಜ್ಯವೊಂದರ ಶಾಸಕನಿಗೆ ತನ್ನ ರಾಜ್ಯ ತನ್ನ ಕೈಯಲ್ಲಿರಬೇಕೆಂಬ ಏಕೈಕ ಲೆಕ್ಕಾಚಾರವಷ್ಟೆ ಸಾಮಾನ್ಯವಾಗಿ ಇರುವುದು. ರಾಜ್ಯವು ತನ್ನ ಕೈತಪ್ಪಿಹೋಗುವ ಯಾವುದೇ ಸಂದರ್ಭದಲ್ಲೂ ಆತ ಗೈಯುವ ಹೋರಾಟವು ಸ್ವಕೇಂದ್ರಿತ ನೆಲೆಯನ್ನಷ್ಟೇ ಹೊಂದಿರುತ್ತದೆ. ಇದು ಸಾಮಾನ್ಯ ಕೂಡ. ಅಸಾಮಾನ್ಯವಾಗಿ ಯೋಚನೆ ಮಾಡಬಲ್ಲವ ಸಮಷ್ಟಿಕೇಂದ್ರಿತವಾಗಿ ತೊಡಗಿ ತನ್ನ ಯಾವುದೇ ತಂತ್ರವನ್ನು ಉನ್ನತಸ್ಥಿತಿಗೇರಿಸಬಲ್ಲ. ಆತ ಹೂಡುವ ಸಣ್ಣ ತಂತ್ರವೂ ಸ್ವಾತಂತ್ರ್ಯಹೋರಾಟದ ವಿಶಾಲವ್ಯಾಪ್ತಿಯನ್ನು ಹೊಂದಬಲ್ಲದು. ಸ್ವಕೇಂದ್ರಿತನ ಅತಿದೊಡ್ಡ ಹೋರಾಟವೂ ದಂಗೆಯ ವ್ಯಾಪ್ತಿಗೂ ಬಾರದೆ ಹೋಗಿಬಿಡಬಲ್ಲ ಸಾಧ್ಯತೆಯಿರುತ್ತದೆ. ಆದರೆ ಸನ್ನಿವೇಶದ ಕಾರಣಕ್ಕಾಗಿ ಸಾಮಾನ್ಯನ ಸ್ವಕೇಂದ್ರಿತ ಹೋರಾಟವೂ ಸ್ವಾತಂತ್ರ್ಯಸಮರದ ವ್ಯಾಪ್ತಿಗೆ ಸಂದುಹೋದೀತು.
ಪರಕೀಯರ ಆಕ್ರಮಣವು ಅಂಥ ಒಂದು ಸನ್ನಿವೇಶ. ತನ್ನೆಲ್ಲ ವೈರಿಗಳ ಜತೆಗೆಂತೋ ಅಂತೆಯೇ ಪರಕೀಯರ ವಿರುದ್ಧವೂ ಆತ ಹೋರಾಡಿದನಲ್ಲ ಎಂಬ ಏಕೈಕ ಗುಣಾಂಶದಿಂದ ಇಂಥ ಸನ್ನಿವೇಶವನ್ನು ಉದಾರವಾಗಿ ಅವಲೋಕಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಕೆಲವೊಮ್ಮೆ ಸನ್ನಿವೇಶ ಹೀಗೂ ಬಂದೊದಗುತ್ತದೆ ನೋಡಿ: ಪರಕೀಯನೊಬ್ಬ ಸ್ವಕೀಯ ರಾಜನನ್ನು ಕೆಳಗಿಳಿಸಿ ರಾಜ್ಯಭಾರ ನಡೆಸಿದ್ದಾನೆ. ಸ್ವಕೀಯ ರಾಜ ಮತ್ತೊಬ್ಬ ಪರಕೀಯನ ಸಹಕಾರ ಕೇಳಿದ್ದಾನೆ. ಆ ಇಬ್ಬರು ಪರಕೀಯರ ನಡುವೆ ಸಮರವೇರ್ಪಟ್ಟಿದೆ. ಇಲ್ಲಿ ಯಾರ ವಿರುದ್ಧದ ಯಾರ ಸಮರ ಸ್ವಾತಂತ್ರ್ಯಸಮರ? ಇದನ್ನು ಹೇಳಲು ಯಾವುದೇ ಶಾಸ್ತ್ರದ ಅಗತ್ಯವಿಲ್ಲ, ಉನ್ನತ ಅಧ್ಯಯನದ ಅಗತ್ಯವೂ ಇಲ್ಲ. ಸಾಮಾನ್ಯಪ್ರಜ್ಞೆಗೆ ಹೊಳೆಯುವ ಸಂಗತಿಯಿದು.
ಟಿಪ್ಪುವಿನ ವಿರುದ್ಧದ ಆಂಗ್ಲರ ಹೋರಾಟವನ್ನು ಈ ಹಿನ್ನೆಲೆಯಿಂದ ನೋಡಬೇಕೆನಿಸುತ್ತದೆ. ಇದು ವಿಚಿತ್ರವೂ ವಿಪರ್ಯಾಸಕರವೂ ಆಗಿರುವ ಸನ್ನಿವೇಶ! ಆಂಗ್ಲರ ವಿರುದ್ಧದ ಹೋರಾಟವೆಲ್ಲವನ್ನು ಸ್ವಾತಂತ್ರ್ಯಹೋರಾಟವೆಂದು ಪರಿಗಣಿಸಬೇಕಾದ ಸಂದರ್ಭದಲ್ಲಿ ಆಂಗ್ಲರು ಇಲ್ಲಿ ತಮಗಿಂತ ಮುಂಚೆ ಬಂದವನೊಡನೆ ಗೈದ ಹೋರಾಟವನ್ನು ಸ್ವಾತಂತ್ರ್ಯ ಹೋರಾಟವೆಂದು ಗ್ರಹಿಸಬೇಕಾಗಿದೆ. ಇಲ್ಲಿ ಟಿಪ್ಪು ಮುಂಚೆ ಬಂದ, ಪರಕೀಯ. ಆಂಗ್ಲರು ನಂತರ ಬಂದವರು. ಮುಂಚೆ ಬಂದವರು ನಂತರ ಬಂದವರ ಜತೆ ಹೋರಾಡಿದರೆ ಅದು ಸ್ವಾತಂತ್ರ್ಯ ಹೋರಾಟವಾಗುತ್ತದೆಯೇ? ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರನೆನ್ನುವವರಿದ್ದಾರೆ. ಈ ನೆಲೆಯಲ್ಲಿ ಹೇಳುವುದಿದ್ದರೆ ಆಗ ವಿಜಾಪುರದ ಸುಲ್ತಾನರು ದಿಲ್ಲಿಯ ಸುಲ್ತಾನರ ವಿರುದ್ಧ ಮಾಡಿದ ಯುದ್ಧಗಳನ್ನೂ ಸ್ವಾತಂತ್ರ್ಯಹೋರಾಟ ಎಂದೇ ಕರೆಯಬೇಕಾಗುತ್ತದೆ. ಆದರೆ ಹಾಗೆ ಯಾರೂ ಕರೆದದ್ದು ದಾಖಲಾದ ಹಾಗಿಲ್ಲ!
ಮೊದಲ ಸಾಮೂಹಿಕ ಸಮರ
ಸ್ವಾತಂತ್ರ್ಯವೀರ ಸಾವರಕರ್ ಅವರು ೧೮೫೭ರ ಸಮರವನ್ನು ಮೊದಲ ಸ್ವಾತಂತ್ರ್ಯಸಮರವೆಂದು ಗುರುತಿಸಿದ್ದಾರೆ. ಈ ಗುರುತಿಸುವಿಕೆಯಲ್ಲಿ ಪರಕೀಯರ ವಿರುದ್ಧದ ಹೋರಾಟ ಎಂಬ ಧ್ವನಿಯ ಜತೆಗೆ ಒಂದು ದೇಶವಾಗಿ ಸಾಮೂಹಿಕವಾಗಿ ಸಂಘಟಿತವಾಗಿ ಗೈದ ಪ್ರಯತ್ನದ ಹಿನ್ನೆಲೆಯನ್ನೂ ಅವರು ಸ್ವೀಕರಿಸಿರಬೇಕು. ಸ್ವಾತಂತ್ರ್ಯಹೋರಾಟವನ್ನು ಓರ್ವ ರಾಜನಾಗಿಯೋ ಸೇನಾನಿಯಾಗಿಯೋ ವ್ಯಕ್ತಿಗತ ನೆಲೆಯಲ್ಲಿ ಮಾಡಲೂ ಬರುತ್ತದೆ, ರಾಜರೂ ಸೇನಾನಿಗಳೂ ಜನಸಾಮಾನ್ಯರೂ ಎಲ್ಲರೂ ಸೇರಿಕೊಂಡು ಒಂದು ಸಮಷ್ಟಿಯಾದ ನೆಲೆಯಲ್ಲಿ ಮಾಡಲೂ ಬರುತ್ತದೆ. ೧೮೫೭ರ ಹೋರಾಟ ಎರಡನೆಯ ಬಗೆಯದು. ಆ ನೆಲೆಯಲ್ಲಿ ಅದು ಮೊದಲ ಸ್ವಾತಂತ್ರ್ಯ ಹೋರಾಟವೇ ಸರಿ.
ಬಹುಶಃ ಯಾರು ಮಾಡಿದ ಹೋರಾಟ, ಯಾರ ವಿರುದ್ಧದ ಹೋರಾಟ, ಯಾವ ರೀತಿಯ ಹೋರಾಟ ಇತ್ಯಾದಿ ಹೋರಾಟದ ನೆಲೆಯಲ್ಲಿ ಸ್ವಾತಂತ್ರ್ಯದ ಸ್ವರೂಪವನ್ನು ಒಂದಷ್ಟು ನೋಡಿದೆವೆನಿಸುತ್ತದೆ.
ಉದಾತ್ತೀಕೃತ ದಾಸ್ಯ
ನಮ್ಮ ಪರಂಪರೆಯು ಲೌಕಿಕ ದಾಸ್ಯವನ್ನೆಂದಿಗೂ ಒಪ್ಪಿಲ್ಲ. ಎಲ್ಲರಲ್ಲಿ ಅಷ್ಟೇ ಅಲ್ಲ, ಎಲ್ಲದರಲ್ಲೂ ಆತ್ಮವಸ್ತುವನ್ನು ಕಂಡರಿಸಿದ ಪರಂಪರೆಗೆ ಅದು ಸಾಧ್ಯವಾದೀತಾದರೂ ಹೇಗೆ? ಆದರೆ ಒಳಗಿನ ಜಾಡ್ಯ ಮತ್ತಿತರ ದೋಷಗಳಿಂದ ಇಲ್ಲವೇ ಹೊರಗಿನ ಪ್ರಭಾವದಿಂದ ನಾವು ನಾವೇ ದಾಸ್ಯವನ್ನು ಹೇರುವುದೋ ಅನುಭವಿಸುವುದೋ ಮಾಡಿಕೊಂಡೆವು. ಇದು ಮನುಕುಲಕ್ಕೆ ಎಸಗಿದ ಅಪಚಾರವೆಂತೋ ಅದಕ್ಕಿಂತ ಘೋರವಾಗಿ ನಮ್ಮ ತತ್ತ್ವಜ್ಞಾನದ ಪರಂಪರೆಗೆ ಎಸಗಿದ ಅಪಚಾರ. ಎಲ್ಲದರಲ್ಲೂ ಒಂದೇ ಆದ ಆತ್ಮವಸ್ತುವನ್ನು ಅನುಭಾವಿಸಿದ ಪರಂಪರೆಗೆ ಇದು ಸಾಧ್ಯವಾಯಿತು ಹೇಗೆ ಎನ್ನುವುದೇ ಅಚ್ಚರಿದಾಯಕ ಸಂಗತಿ. ಇರಲಿ.
ಇದನ್ನು ಇಲ್ಲಿ ಉಲ್ಲೇಖಿಸಿದ್ದು ಇಷ್ಟಕ್ಕಾಗಿ: ಲೌಕಿಕವಾಗಿ ದಾಸ್ಯವನ್ನೊಲ್ಲದ ನಾವು ಅಲೌಕಿಕ ನೆಲೆಯಲ್ಲಿ ಅದನ್ನು ಉದಾತ್ತೀಕರಿಸಿಕೊಂಡೆವು. ದಾಸ್ಯವನ್ನಷ್ಟೆ ಅಲ್ಲ, ಇಹದ ಆಕರ್ಷಕವಾದ ಎಲ್ಲವನ್ನೂ ಬಂಧನವೆಂದೇ ಗಣಿಸಿ ಅದರಿಂದ ಬಿಡುಗಡೆ ಹೊಂದುವುದೇ ಜೀವನದ ಆತ್ಯಂತಿಕ ಲಕ್ಷ್ಯವೆಂದು ಭಾವಿಸಿದೆವು. ಹಾಗೆ ಹೊಂದುವ ಬಿಡುಗಡೆಯನ್ನು ಮೋಕ್ಷವೆಂದೆವು. ಉಳಿದ ಸಭ್ಯತೆಯ ಮಂದಿ ಇಹದ ಸುಖಲೋಲುಪತೆಯನ್ನೇ ಹೋಲುವ ಸ್ವರ್ಗದ ಕಲ್ಪನೆಗೆ ಬದುಕಿನ ಗಂತವ್ಯವನ್ನು ಸೀಮಿತಗೊಳಿಸಿಕೊಂಡರೆ ನಾವು ಅದನ್ನು ಇನ್ನಿಲ್ಲದ ಎತ್ತರಕ್ಕೇರಿಸಿಕೊಂಡು ಯಾವುದೇ ಕಾಂಕ್ಷೆಗಳಿಲ್ಲದೆ ನಮ್ಮ ಮೂಲಸ್ವರೂಪವನ್ನನುಭವಿಸುವ ನೆಲೆಯಲ್ಲಿ ಉದಾತ್ತಗೊಳಿಸಿದೆವು.
ನಿರ್ದಾಸ್ಯದಿಂದ ಮೋಕ್ಷದೆಡೆಗೆ
ದ್ವಂದ್ವಮಯವಾಗಿರುವ ಜಗತ್ತಿನಲ್ಲಿ ಒಡೆಯ-ದಾಸ್ಯ ಎಂಬ ಭಾವ ಇದ್ದೇ ಇದೆ. ಇಂಥ ದ್ವಂದ್ವಗಳನ್ನು ಅನುದಾತ್ತೀಕರಿಸಿಕೊಂಡು ಪತನದಂಚಿಗೂ ಸಾಗಬಹುದು, ಉದಾತ್ತೀಕರಿಸಿಕೊಂಡು ಔನ್ನತ್ಯವನ್ನೂ ಸಾಧಿಸಬಹುದು. ಇಹದಲ್ಲಿಯ ದಾಸ್ಯದ ಉದಾತ್ತೀಕರಣವೆಂದರೆ ಪರವಸ್ತುವಿನೊಂದಿಗಿನ ದಾಸ್ಯಭಾವ. ಇಲ್ಲಿ ಭಗವಂತ ಒಡೆಯನಾದರೆ ಭಕ್ತ ದಾಸನಾಗುತ್ತಾನೆ. ಭಗವಂತನಿಗೆ ದಾಸನಾದವ ಮತ್ತಾರಿಗೂ ದಾಸನಾಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಭಗವಂತನನ್ನು ಯಜಮಾನನೆಂದು ಸ್ವೀಕರಿಸಿದ ಬಳಿಕ ಮತ್ತಾರನ್ನೂ ಯಜಮಾನರ ಜಾಗದಲ್ಲಿಡುವ ಪರಿಸ್ಥಿತಿ ಬರುವುದಿಲ್ಲ. ಇಹದ ದಾಸ್ಯವನ್ನು ಮೀರುವ ಬಗೆಯೆಂದರೆ ಹೀಗೆ.
ಇಲ್ಲಿಯ ದಾಸ್ಯವನ್ನು ಹೀಗೆ ಮೀರುವಲ್ಲಿಂದ ತೊಡಗಿ ಪರದ ಮೋಕ್ಷವನ್ನು ಅರಸುವಲ್ಲಿಯವರೆಗೆ ನಡುವೆ ಇರುವ ಬಿಡುಗಡೆಯ ಎಲ್ಲ ಬಗೆಗಳಲ್ಲಿ ನಮ್ಮ ಸ್ವಾತಂತ್ರ್ಯದ ಎಲ್ಲ ರೀತಿಯ ಪರಿಕಲ್ಪನೆಗಳೂ ಒಳಗೊಳ್ಳುತ್ತವೆ ಎನ್ನಬಹುದು.
ಪೂರ್ಣ ಸ್ವಾಭಿವ್ಯಕ್ತಿ
ಬಿಡುಗಡೆ ಮತ್ತು ಸ್ವಾತಂತ್ರ್ಯ – ಇವು ಪರ್ಯಾಯ ಪದಗಳಾಗಿ ಇಲ್ಲಿ ಬಳಕೆಯಾಗಿವೆ. ಅವುಗಳನ್ನು ಎರಡು ಹಂತಗಳಾಗಿಯೂ ನೋಡಬಹುದು. ಸ್ವಾತಂತ್ರ್ಯದ ಮೊದಲ ಹಂತ ಬಿಡುಗಡೆ. ನಮಗೆ ಬೇಡದ ಬಂಧನದಿಂದ, ನಮ್ಮ ವಿಕಾಸಕ್ಕೆ ಸಾಧನೆಗೆ ನಮ್ಮತನದ ಪ್ರಕಟೀಕರಣಕ್ಕೆ ಅಡ್ಡಿಯಾಗಬಲ್ಲ ಎಲ್ಲದರಿಂದ ಮೊದಲು ಬಿಡುಗಡೆಯಾಗಬೇಕು. ಬಿಡುಗಡೆಯ ಮುಂದಿನ ಹಂತ ಸ್ವಾತಂತ್ರ್ಯ. ನಮ್ಮತನದ ಅಭಿವ್ಯಕ್ತಿ ಆಗಬೇಕೆಂದೇ ನಾವಿದ್ದೇವೆ. ಈ ಅಭಿವ್ಯಕ್ತಿ ನಾವೊಂದು ಸಮಾಜವಾಗಿಯೂ ಆಗಬೇಕಾಗಿದೆ. ನಮ್ಮವರಲ್ಲದ, ನಮ್ಮತನಕ್ಕೆ ಅಡ್ಡಿಯಾಗಿದ್ದ ಆಂಗ್ಲರಿಂದಲೋ ಮೊಗಲರಿಂದಲೋ ಬಿಡುಗಡೆ ಪಡೆದೆವು, ಆದರೆ ನಮ್ಮತನದ ಪ್ರಕಟೀಕರಣವಾಗುವ ಬದಲು ಅವರ ಪಡಿಯಚ್ಚಾಗಲು ಪ್ರಯತ್ನಿಸಿದೆವು ಎಂದಾದರೆ ಅವರಿಂದ ಬಿಡುಗಡೆಗೊಳ್ಳಲು ಮಾಡಿದ ಹೋರಾಟವು ಸ್ವಾತಂತ್ರ್ಯಹೋರಾಟವೆನಿಸದೇನೊ. ಅವರು ಮಾಡುತ್ತಿದ್ದುದನ್ನು ನಾವು ಮಾಡುವುದಕ್ಕಾಗಿ ಅವರ ವಿರುದ್ಧ ಸಮರಗೈದೆವು ಎಂಬಂತೆ ತೊಡಗಿದೆವು ಎಂದಾದರೆ ಎಲ್ಲರೂ ಕೀರ್ತಿಸಿದ ಸ್ವಾತಂತ್ರ್ಯಸಮರವನ್ನು ಒಂದು ದೊಂಬಿ ಎಂದಷ್ಟೆ ಪರಿಗಣಿಸಬೇಕಾದೀತಲ್ಲವೆ?
ನಮ್ಮತನದ ಅಭಿವ್ಯಕ್ತಿ ಪೂರ್ಣವಾಗಿ ಸಾಧಿತವಾದಾಗಲೇ ಸ್ವಾತಂತ್ರ್ಯಸಮರವೂ ಪೂರ್ಣಗೊಂಡೀತು. ಇದಕ್ಕೆ ಅಡ್ಡಿಯಾಗಿರುವ ಪರಕೀಯ ಶಾಸನವೆಂಬ ಒಂದು ಅಡ್ಡಿಯನ್ನಷ್ಟೇ ೧೯೪೭ರಲ್ಲಿ ಇಲ್ಲವಾಗಿಸಿಕೊಂಡೆವು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಮತೀಯವಾಗಿ ಹೀಗೆ ಇನ್ನೂ ಹತ್ತುಹಲವು ಆಯಾಮಗಳಲ್ಲಿ ನಮ್ಮತನದ ಅಭಿವ್ಯಕ್ತಿಗಾಗಿ ಯಾವ ಯಾವ ರೀತಿಯಲ್ಲಿ ಅಡ್ಡಿಗಳನ್ನು ಎದುರಿಸುತ್ತಿದ್ದೇವೋ ಅವೆಲ್ಲವನ್ನೂ ಇಲ್ಲವಾಗಿಸಿಕೊಳ್ಳುವ ಹೋರಾಟವಿನ್ನೂ ಜಾರಿಯಲ್ಲಿದೆ.
ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ೧೯೪೭ರಲ್ಲಿ ಸಿಕ್ಕಿದ್ದು ಒಂದು ಹಂತ. ಅದಕ್ಕಾಗಿ ಮಾಡಿದ ಹೋರಾಟವು; ಸ್ವಾತಂತ್ರ್ಯದ ಸಮಗ್ರಗ್ರಹಿಕೆಯ ನೆಲೆಯಲ್ಲಿ ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ.