ಭಾರತಕ್ಕೆ ೧೯೪೭ರ ಆಗಸ್ಟ್ ೧೫ರಂದು ಸ್ವಾತಂತ್ರ್ಯ ಲಭಿಸಿತೆನ್ನುವ ವಿಚಾರ ಎಲ್ಲರಿಗೂ ತಿಳಿದಿರುವಂತಹುದೇ. ಆದರೆ, ಆನಂತರವೂ ಭಾರತದ ಕೆಲವು ಪ್ರದೇಶಗಳು ಮುಂದಿನ ಒಂದು ದಶಕಕ್ಕೂ ಹೆಚ್ಚು ಕಾಲ ಪರಾಧೀನವಾಗಿಯೇ ಇತ್ತೆನ್ನುವುದಾಗಲಿ ಮತ್ತು ಅವನ್ನು ಸ್ವತಂತ್ರಗೊಳಿಸಲು ಬಲಪ್ರಯೋಗ ಮಾಡಬೇಕಾಯಿತೆನ್ನುವ ವಿಷಯವಾಗಲಿ ಹೆಚ್ಚು ಜನರಿಗೆ ತಿಳಿದಿರಲಾರದು. ಇದಕ್ಕೆ ಕಾರಣವನ್ನು ಹುಡುಕಲು ಬಹುದೂರವೇನೂ ಹೋಗಬೇಕಾಗಿಲ್ಲ. ನಮ್ಮ ಶಾಲಾ-ಕಾಲೇಜುಗಳ ಇತಿಹಾಸದ ಪಠ್ಯಗಳಲ್ಲಿ ಈ ಪ್ರದೇಶಗಳಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಳ ವಿಚಾರವಾಗಿ ಪ್ರಸ್ತಾವಿಸಲಾಗಿಲ್ಲ. “ಕಾಂಗ್ರೆಸ್ ನಡೆಸಿದ ಸತ್ಯಾಗ್ರಹಗಳ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು’’ ಮತ್ತು “ಅಹಿಂಸಾತ್ಮಕ ಹೋರಾಟಗಳೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದವು’’ ಎಂಬ ಕಾಂಗ್ರೆಸ್ಸಿನ ಪ್ರಚಾರಕ್ಕೆ ಗೋವಾದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಕಥೆ ಪೂರಕವಾಗಿರಲಿಲ್ಲ. ಗೋವಾದಲ್ಲಿ ಅಹಿಂಸಾತ್ಮಕ ಹೋರಾಟ ವಿಫಲವಾಯಿತು, ಅಲ್ಲಿಂದ ವಿದೇಶೀಯರನ್ನು ಓಡಿಸಲು ಸೈನಿಕ ಕಾರ್ಯಾಚರಣೆ ನಡೆಸಬೇಕಾಯಿತು ಎಂಬ ವಾಸ್ತವ “ಕಾಂಗ್ರೆಸ್ಸಿನ ಅಹಿಂಸಾತ್ಮಕ ಹೋರಾಟ’’ದ ಕಥೆಯ ಹಿಂದಿರುವ ‘ಸತ್ಯ’ವನ್ನು ಬಯಲಿಗೆಳೆಯುತ್ತವೆ ಎನ್ನುವ ಭಯ ಆಳುಗರಲ್ಲಿ ಇದ್ದಿರಬಹುದು.
೧೯೪೭ರ ಆಗಸ್ಟ್ ೧೫ರಂದು ಸ್ವಾತಂತ್ರ್ಯ ಲಭಿಸಿದ್ದು ಬ್ರಿಟಿಷರು ಆಳುತ್ತಿದ್ದ ಭಾಗಗಳಿಗೆ ಮಾತ್ರ. ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಕೆಲವು ಪ್ರದೇಶಗಳನ್ನು ಬ್ರಿಟಿಷರು ಆಳುತ್ತಿರಲಿಲ್ಲ. ಹೀಗಾಗಿ ಆ ಪ್ರದೇಶಗಳು ಆಗಸ್ಟ್ ೧೫ರಂದು ಸ್ವತಂತ್ರಗೊಳ್ಳಲಿಲ್ಲ. ಪೂರ್ವ ಕರಾವಳಿಯ ಪುದುಚೆರಿಯು ಫ್ರೆಂಚರ ವಸಾಹತು ಆಗಿದ್ದಿತು. ಅದೇ ರೀತಿ, ಪಶ್ಚಿಮ ಕರಾವಳಿಯ ಗೋವಾ ಪ್ರಾಂತವು ಪೋರ್ಚುಗೀಸರ ವಶದಲ್ಲಿತ್ತು. ಈ ಎರಡೂ ಪ್ರದೇಶಗಳು ದೇಶದ ಉಳಿದ ಭಾಗಗಳಿಗೆ ಸ್ವಾತಂತ್ರ್ಯ ಲಭಿಸಿದ ಬಹಳ ಸಮಯದ ನಂತರ ಸ್ವತಂತ್ರಗೊಂಡವು.