ಮುಖಪುಟ ಲೇಖನ
-1-
908ರ ಅಲಿಪುರ ಬಾಂಬ್ ಪ್ರಕರಣದಲ್ಲಿ (ಅದನ್ನು ಮಾಣಿಕತಲಾ ಬಾಂಬ್ ಪ್ರಕರಣವೆಂದೂ ಕರೆಯುತ್ತಾರೆ) ಅರವಿಂದ ಘೋಷರೂ ಆರೋಪಿಗಳಾಗಿದ್ದರು. ಅವರ ಮೇಲೆ ರಾಜದ್ರೋಹ ಮತ್ತು ಒಳಸಂಚಿನ ಆರೋಪವಿದ್ದಿತು. ಆ ಪ್ರಕರಣದಲ್ಲಿ ಅರವಿಂದರ ಪರವಾಗಿ ವಾದಿಸಿದವರು ಬಂಗಾಳದ ಜನನಾಯಕರೆಂದು ಹೆಸರಾದ ಚಿತ್ತರಂಜನ್ ದಾಸ್ ಅವರು. ಅವರು ತಮ್ಮ ವಾದದ ಸಾರಾಂಶವೆಂಬಂತೆ ನ್ಯಾಯಾಧೀಶರಿಗೆ ಮಾಡಿದ ಕೊನೆಯ ಮನವಿಯು ಹೃದಯಸ್ಪರ್ಶಿಯಾಗಿದ್ದಿತು.
ಆರೋಪಿಯಾದ ಅರವಿಂದರ ಬಗ್ಗೆ ವಿವರಿಸುತ್ತ ಅವರು “ಈವರೆಗೆ ಎದ್ದ ಎಲ್ಲ ವಾದ-ವಿವಾದಗಳೂ ಕೊನೆಗೊಂಡು ಹಲವು ವರ್ಷಗಳೇ ಕಳೆದಮೇಲೆ ನಡೆಯುತ್ತಿರುವ ಪ್ರದರ್ಶನಗಳೂ, ಆಗ್ರಹಗಳೂ ಶಾಂತವಾಗಿ ಸಂವತ್ಸರಗಳೇ ದಾಟಿದ ಮೇಲೂ, ಅಶಾಂತಿಯ ಕಾಲವು ಗತಿಸಿಹೋದ ನಂತರ ಈ ಆರೋಪಿಯೇ ಏನಾದರೂ ಮೃತ್ಯುವಶನಾಗಿ ಮರೆತುಹೋದನೆನಿಸಿದರೂ, ಆತನೊಬ್ಬ ದೇಶಭಕ್ತನೂ ಮಹಾಕವಿಯೂ ಎಂದೆನಿಸಿ ಸ್ಮರಣೆಗೆ ಪಾತ್ರನಾಗುವನು; ರಾಪ್ಟ್ರೀಯತೆಯ ಪ್ರವಾದಿಯೆನಿಸುವನು; ಮಾನವಜನಾಂಗವನ್ನು ಪ್ರೀತಿಸಿದ ವಿಭೂತಿಯಾಗುವನು. ಕಾಲಗತನಾಗಿಹೋದ ಅವನೂ ಅವನ ಮಾತುಗಳೂ ಮಾನವಪ್ರಜ್ಞೆಯಲ್ಲಿ ಸದಾ ಅನುರಣಿಸುತ್ತಿರುತ್ತವೆ. ಭಾರತವಷ್ಟೇ ಅಲ್ಲ. ಸಾಗರಗಳಾಚೆಗಿನ ಭೂಖಂಡಗಳಲ್ಲಿ ಅವು ಪ್ರತಿಧ್ವನಿಸುತ್ತಿರುತ್ತವೆ” – ಎಂದಿದ್ದರು.
ಇಲ್ಲಿ ಓದಿ: https://utthana.in/?p=10806
ನೊಬೆಲ್ ಪ್ರಶಸ್ತಿ ವಿಜೇತ ಫ್ರೆಂಚ್ ಸಾಹಿತಿ ರೊಮಾ ರೋಲಾ, ‘ಪೂರ್ವ ಮತ್ತು ಪಶ್ವಿಮದ ಪ್ರತಿಭೆಗಳ ಸಂಗಮವನ್ನು ಅರವಿಂದರಲ್ಲಿ ಕಾಣಬಹುದು. ಅವರು ಪ್ರಾಚೀನ ತ್ರಿಕಾಲದರ್ಶಿಗಳ ಸಾಧನೆ-ಸಿದ್ಧಿಯನ್ನು ಕರಗತ ಮಾಡಿಕೊಂಡ ಕೊನೆಯ ಋಷಿ’ ಎಂದು ಯೋಗಿ ಅರವಿಂದರ ಬಗ್ಗೆ ಬರೆದರು. ಈ ವರ್ಷ ಭಾರತವು ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸುತ್ತಿದ್ದರೆ, ‘ಸ್ವರಾಜ್ಯವೇ ಜೀವನ, ಅದು ಜೀವನದ ಅಮೃತ. ಜೀವನದ ಅಂತಿಮ ಗುರಿ, ಸ್ವರಾಜ್ಯವಿಲ್ಲದ ರಾಷ್ಟ್ರದ ಅಳಿವು ಶತಃಸಿದ್ಧ’ ಎಂದ ಅರವಿಂದರು ಮುಂದುವರಿದು ‘ನಾವೊಂದು ರಾಷ್ಟ್ರವಾಗಿ ಬದುಕಿ ಬೆಳಗಲು ಬಂದವರು’ ಎನ್ನುವ ಜೀವಿತಾದರ್ಶವನ್ನು ನೀಡಿದರು. ಅವರ 150ರ ಜಯಂತಿಯೂ ಜೊತೆಗೂಡಿದುದೂ ಒಂದು ಯೋಗಾಯೋಗವೇ.
1817ರಲ್ಲಿ ರಾಜಾ ರಾಮಮೋಹನ ರಾಯ್ ಸ್ಥಾಪಿಸಿದ್ದ ಹಿಂದು ಕಾಲೇಜು 1855ರಲ್ಲಿ ಪ್ರೆಸಿಡೆನ್ಸಿ ಕಾಲೇಜು ಎಂದು ಹೆಸರಾಯಿತು. ಇದು ಭಾರತದ ನವೋದಯ ಕಾಲದ ಏಳುಬೀಳುಗಳ ಮೊದಲು ಗೋಚರಿಸುವ ಶಕುನದಂತೆ ಎನ್ನಬೇಕು. ಇದಕ್ಕೆ ಸಂವಾದಿ ಎನ್ನುವಂತೆಯೇ ಬಂಗಾಳದ ಭದ್ರಲೋಕದ ವರ್ತನೆಯೂ ಇದ್ದಿತು. ವಿದೇಶೀ ಮದ್ಯದೊಂದಿಗೆ ಕರಿದ ‘ಬೀಫ್’ ತಿನ್ನುತ್ತ ಶೇಕ್ಸ್ಪಿಯರ್ ನಾಟಕಗಳ ಬಗ್ಗೆ ಮಾತನಾಡುವುದು ವ್ಯಕ್ತಿಯ ಸಾಮಾಜಿಕ ಪ್ರತಿಷ್ಠೆಯನ್ನು ಅಳೆಯುವ ಪ್ರಮಾಣವೆನಿಸಿತ್ತು. ಕ್ರೈಸ್ತನಾಗಿ ಮತಾಂತರಗೊಂಡ ಮೊದಲ ಪ್ರತಿಷ್ಠಿತ ವ್ಯಕ್ತಿಯೆನಿಸಿದ ಮೈಕೆಲ್ ಮಧುಸೂದನ ದತ್ತನನ್ನು ನವಬಂಗಾಳದ ಆದ್ಯಕವಿಯೆಂದು ಕ್ರೈಸ್ತಮಿಷನರಿಗಳು ಹೆಸರಿಸಿದರು. ಇಂಗ್ಲೆಂಡ್ ದೇಶವನ್ನು ಮೈಮರೆತು ಮೆಚ್ವುವ ಲೇಖಕ ನೀರಜ್ ಚೌಧುರಿ ಬರೆಯುವಂತೆ ಮಧುಸೂದನ ದತ್ ಬರೆದ ‘ಮೇಘನಾದ ವಧ’ ಕಾವ್ಯವನ್ನು ಓದದೇ ಇದ್ದವರು ‘ಕಲ್ಚರ್ಡ್’ ಅಲ್ಲವೆನ್ನುವ ಪ್ರತೀತಿಯನ್ನು ಈ ಮಿಷನರಿಗಳೇ ಹಬ್ಬಿಸಿದರು. ಮದುವೆ ಸಮಾರಂಭಗಳಲ್ಲಿ ವಧುವಿನ ಸಹೋದರಿಯರು ವರನನ್ನು ಮೇಘನಾದ ವಧ ಕಾವ್ಯಭಾಗಗಳನ್ನು ವಾಚಿಸುವಂತೆ ಬಾಜಿಕಟ್ಟಿ ಚುಡಾಯಿಸುತ್ತಿದ್ದರು.
ಆವರೆಗೆ ಗುರುಮುಖೇನ ಕಲಿಯುತ್ತಿದ್ದ ಸಂಸ್ಕøತವನ್ನು ಪಾಶ್ವಾತ್ಯ ಉಪನ್ಯಾಸಕರು ಆಂಗ್ಲ ಮಾಧ್ಯಮದಲ್ಲಿ ಬೋಧಿಸುವುದೂ ಆಗ ಪ್ರಾರಂಭವಾಯಿತು. ಇದು ಮುಂದುವರಿದು ವೇದ-ವೇದಾಂಗಗಳನ್ನೂ ಸಂಸ್ಕøತ ಕಾವ್ಯ ನಾಟಕಗಳನ್ನೂ ಪಾಶ್ವಾತ್ಯರ ಮನೋಭೂಮಿಕೆಯಲ್ಲಿ ವ್ಯಾಖ್ಯಾನಿಸಿದ ಇಂಗ್ಲಿಷ್ ಅನುವಾದದಿಂದ ಅರ್ಥೈಸುವ ಅನಿವಾರ್ಯತೆಯೂ ಪ್ರಾರಂಭವಾಯಿತು. ಭಾರತವನ್ನು ಹೀಗಳೆಯಲೆಂದು ಹೊರಟ ಮ್ಯಾಕ್ಸ್ ಮುಲ್ಲರನನ್ನು ಹಿಂದಕ್ಕೆ ಸರಿಸಿ, ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಂಸ್ಕøತ ಪ್ರಾಧ್ಯಾಪಕನಾಗಿ ನಿಯುಕ್ತಿಗೊಂಡ ಮೋನಿಯರ್ ವಿಲಿಯಮ್ಸ್ ಸಂಸ್ಕøತ ನಿಘಂಟಿನ ರಚನೆಗೆ ಮೊದಲಿಟ್ಟನು. 1872ರಲ್ಲಿ ಅದನ್ನು ಪೂರೈಸಿ ‘ನೇಟಿವ್’ ಜನರನ್ನು ಮತಾಂತರಿಸಲು ಅವನ ಆ ನಿಘಂಟನ ವiಹಾಕಾರ್ಯವು ನೆರವಾಗುತ್ತದೆ ಎಂದು ಘೋಷಿಸಿದನು.
ಇಂತಹ ಹಿನ್ನೆಲೆಯಲ್ಲಿ ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಮೊದಲ ಬಂಗಾಳಿಯಾಗಿದ್ದವರು ಡಾ|| ಕೃಷ್ಣಧನ ಘೋಷ್. ಅವರು 1879ರಲ್ಲಿ ತಮ್ಮ ಮೂರನೆ ಮಗ ಅರಬಿಂದೋನನ್ನು ಅವನ ಏಳನೇ ವಯಸ್ಸಿನಲ್ಲಿ ಆಂಗ್ಲ ಶಿಕ್ಷಣದಲ್ಲೇ ಮುಂದುವರಿದು ಐ.ಸಿ.ಎಸ್. ಆಗಿ ಬರಲೆಂದು ಮೊದಲೇ ಅಲ್ಲಿದ್ದ ಅವನ ಇಬ್ಬರು ಸಹೋದರರೊಂದಿಗೆ ಶಿಕ್ಷಣ ಪಡೆಯಲು ಲಂಡನ್ನಿಗೆ ಕಳುಹಿಸಿದರು. ಅಲ್ಲಿಯವರೆಗೂ ಅರಬಿಂದೋ ಆಂಗ್ಲ ದಾದಿಯರ ಉಸ್ತುವಾರಿಯಲ್ಲಿ ಡೆಹ್ರಾಡೂನಿನ ಲೊರೆಟೊ ಇಂಗ್ಲಿಷ್ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದನು. ಮುಂದೆ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತ ಐ.ಸಿ.ಎಸ್. ಪರೀಕ್ಷೆಯನ್ನು ಬರೆಯುವಾಗ ಅವನಿಗೆ ಹದಿನೆಂಟು ವರ್ಷವೂ ಪೂರ್ಣವಾಗಿರಲಿಲ್ಲ. ಅರ್ಹತಾ ಪರೀಕ್ಷೆಯಲ್ಲಿ ಹನ್ನೊಂದನೇ ರ್ಯಾಂಕ್ ಪಡೆದ ಅರಬಿಂದೊ ಮುಂದೆ ಮುಖ್ಯ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯನ್ನು ಗಳಿಸಿಯೂ ಕುದುರೆ ಸವಾರಿಯ ಪರೀಕ್ಷೆಗೆ ಹಾಜರಾಗದೆ ಐ.ಸಿ.ಎಸ್.ಗೆ ಅನರ್ಹರಾದುದೇಕೆ ಎಂಬುದು ಮಾತ್ರ ಇಂದಿಗೂ ಒಗಟಿನಂತಿದೆ.
– 2 –
ನವಭಾರತ ನಿರ್ಮಾಣದಲ್ಲಿ ಆಧ್ಯಾತ್ಮಿಕ ನೆಲೆಯ ಸೈದ್ಧಾಂತಿಕ ಬುನಾದಿಯು ಸಿದ್ಧವಾದುದು ಮುಖ್ಯವಾಗಿ ಯೋಗಿ ಅರವಿಂದರೊಂದಿಗೆ, ಅವರಿಗೆ ಭೂಮಿಕೆಯನ್ನು ನಿರ್ಮಿಸಿದ ಮಹರ್ಷಿ ದಯಾನಂದ ಸರಸ್ವತಿ ಮತ್ತು ಸ್ವಾಮಿ ವಿವೇಕಾನಂದರಿಂದ. ಗುಲಾಮೀ ಮನಃಸ್ಥಿತಿಯಲ್ಲಿ ಹುಟ್ಟುವ ಅಸಹಾಯಕತೆಯ ಕೀಳರಿಮೆಯಿಂದ ಭಾರತವು ಮೈಕೊಡವಿ ಹೊರಬರುವಲ್ಲಿ ಈ ತ್ರಿಮೂರ್ತಿಗಳು ಮಹತ್ತ್ವದ ಪಾತ್ರವನ್ನು ವಹಿಸಿದರು.
ಪ್ರಾಚೀನ ವೇದಗಳ ಋಕ್ಕುಗಳಲ್ಲಿ ವರ್ತಮಾನದ ಒತ್ತಡಗಳಿಗೂ ಉತ್ತರವನ್ನು ಕಂಡುಕೊಂಡ ಮಹರ್ಷಿ ದಯಾನಂದರು ಅವನ್ನು ನೀರಸ ನಿರೂಪಣೆಯ ‘ರೆಟರಿಕ್’ ಆಗಿಸದೇ ನಿರ್ದಿಷ್ಟ ಸಾಮಾಜಿಕ ಪರಿಣಾಮವನ್ನು ಉಂಟುಮಾಡುವ ಪ್ರಾಯೋಗಿಕ ವಿಚಾರಧಾರೆಯನ್ನಾಗಿಸಿದರು. ಕೌಟುಂಬಿಕ ಹೊಣೆಯ ನಿರ್ವಹಣೆಗಳೊಂದಿಗೆ ಸಾಮಾಜಿಕ ಕ್ಷೇತ್ರದ ಅಧಿಕಾರಿಗಳು, ವೈಯಕ್ತಿಕ ಆಸೆ, ಆಕಾಂಕ್ಷೆ, ಅವಕಾಶ ಸಾಧನೆಗಳಿಗೆ ಸ್ತ್ರೀಯರೂ ಸೇರಿದಂತೆ ಎಲ್ಲ ವಂಚಿತರು ಸಮಾನ ಹಕ್ಕುದಾರರು ಎನ್ನುವ ಆಶಯಗಳಿಗೆ ಆಧ್ಯಾತ್ಮಿಕ ಚೌಕಟ್ಟನ್ನು ಒದಗಿಸಿದರು, ಮಹರ್ಷಿ ದಯಾನಂದರು. ವಾಸ್ತವವಾಗಿ ಅವರೊಬ್ಬ ಸಮಾಜಸುಧಾರಕನ ಕಾಳಜಿಯಿಂದ ಅದನ್ನು ಪ್ರತಿಪಾದಿಸಿದರು. ‘ಮಾತಾ ಭೂಮಿಃ ಪುತ್ರೋýಹಂ ಪೃಥಿವ್ಯಾಃ’ ಎಂದುಕೊಳ್ಳುವ ಸಾಮೂಹಿಕ ಅಂತಃಕರಣವನ್ನು ಮೂಡಿಸಿದರು. ಅವರು 1857ರ ಕ್ರಾಂತಿಯನ್ನು ಕಂಡು ಆ ಮಹಾಸಂಘರ್ಷವನ್ನು ಸಮ್ಮತಿಸಿದವರು ಕೂಡ ಹೌದು. ‘ಜ್ಯೋತಿರ್ಮಯನೇ! ದೀರ್ಘವಾದ ಅಂಧಕಾರಗಳು ನಮ್ಮನ್ನು ಆವರಿಸದಿರಲಿ’ ಎನ್ನುವ ಪ್ರಾರ್ಥನಾ ಸಂದೇಶಕ್ಕೆ ಸಮಕಾಲೀನ ಸಾಮಾಜಿಕ ಆಯಾಮವನ್ನು ಕಲ್ಪಿಸಿದ ಮಹರ್ಷಿಗಳು ಪರಾಧೀನತೆಯನ್ನು ಹೋಗಲಾಡಿಸುವೆಡೆಗೆ ಬೊಟ್ಟು ತೋರಿಸಿದರು. “ಪರಮಾತ್ಮನೆಂದರೆ ಬುದ್ಧಿಕರ್ಮಗಳನ್ನು ನಿರ್ದೇಶಿಸುವ ‘ಧೀಯ’ವಲ್ಲದೆ ಬೇರೆಯಲ್ಲ” – ಎನ್ನುವ ಸಾಮೀಪ್ಯವನ್ನು ದೊರಕಿಸಿಕೊಟ್ಟರು. ‘ಅಹಂ ಸೂರ್ಯ ಇವಾಜನಿ’ – ನಾನೂ ಸೂರ್ಯನಂತೆ ಪ್ರಕಾಶಿಸುವವನು ಎಂದು ದೇಶವನ್ನು ಆವರಿಸಿದ ಗುಲಾಮೀ ಕತ್ತಲನ್ನು ಹೋಗಲಾಡಿಸುವ ಕರೆ ಕೊಟ್ಟರು.
ಮಹರ್ಷಿ ದಯಾನಂದರ ಪ್ರಖರ ವೈಚಾರಿಕತೆಯನ್ನು ಮುಂದುವರಿಸಿದ ಯೋಗಿ ಅರವಿಂದರು “ಸದಾ ಕಾಲಕ್ಕೂ ವಿಕಾಸಶೀಲವಾದ ಆಧ್ಯಾತ್ಮಿಕ ಭಾರತದ ಉದಯವಾಗಲಿದೆ. ಅದು ನಾಳೆ ಮೂಡುವ ಮುಂಜಾವಿನಂತೆ ಸತ್ಯವಿಶಿಷ್ಟ ಜೀವನಧರ್ಮದ, ವಿಶೇಷ ಪರಂಪರೆಯ ಮರು ಅನ್ವೇಷಣೆಯೊಂದಿಗೆ ಅಲೌಕಿಕ ಜ್ಞಾನಶಕ್ತಿಯಿಂದ ಒಡಗೂಡಿದ ಭಾರತದ ಪುನರುತ್ಥಾನವು ಇತಿಹಾಸದಲ್ಲಿ ಅಸಾಧಾರಣ ವಿದ್ಯಮಾನವಾಗುತ್ತದೆ. ಇದು ಸಾಂಘಿಕ ಪ್ರಯತ್ನದ ಫಲವಾಗಬೇಕು. ಭಾರತವು ತನ್ನ ಅಸ್ತಿತ್ವಕ್ಕಾಗಿಯಲ್ಲ, ಪೂರ್ಣ ಗೆಲುವಿಗಾಗಿ ಕಾಯುತ್ತಿದೆ. ಜಗತ್ತಿಗೆ ಮಾರ್ಗದರ್ಶಿಯಾಗುವ ಸಾಮಥ್ರ್ಯವು ಭಾರತಕ್ಕಿದೆ” – ಎನ್ನುವ ಆನುಭಾವಿಕ ಅಧ್ಯಾತ್ಮದ ಸ್ಥೂಲ ತಾತ್ತ್ವಿಕತೆಯನ್ನು ಪ್ರಸ್ಥಾಪಿಸಿದರು.
‘ಅಭೀಃ’ – ‘ನಿರ್ಭಯತೆಯ ಸಂದೇಶವನ್ನು ನೀಡಿದ ಅನನ್ಯ ಧರ್ಮವು ಮೂಡಿದುದು ಭಾರತದ ನೆಲದಿಂದ’ ಎಂದು ಅಭಿಮಾನದಿಂದ ಸಾರಿದವರು ವೀರಸಂನ್ಯಾಸಿ ಸ್ವಾಮಿ ವಿವೇಕಾನಂದರು. ಪಾರತಂತ್ರ್ಯದ ವಾತಾವರಣದ ನಡುವೆ ಶಕ್ತಿ ಮತ್ತು ಪುರುಷತ್ವಗಳೇ ಜೀವನ, ನಿಶ್ಶಕ್ತಿ ಮತ್ತು ಹೇಡಿತನವೇ ಪಾಪ’ ಎನ್ನುವ ನಿರ್ಭೀತ ಸಾಮೂಹಿಕ ಮನಸ್ಸನ್ನು ಅವರು ನಿರ್ಮಿಸಿದರು. “ನನ್ನನ್ನು ಖಡ್ಗವು ಕತ್ತರಿಸದು, ಶಸ್ತ್ರವು ಬಾಧಿಸದು, ಬೆಂಕಿಯು ಸುಡದು. ಅಂತಹ ಸರ್ವಶಕ್ತ ಆತ್ಮರು ನಾವು” – ಎಂದು ಅಜೇಯತೆಯ ಹುಮ್ಮಸ್ಸನ್ನು ಹಿಂದು ವೈಚಾರಿಕತೆಯ ಲಕ್ಷಣವನ್ನಾಗಿಸಿದರು. ಸ್ವಾತಂತ್ರ್ಯದ ತವಕವನ್ನು ಪೂರ್ಣರೂಪಗೊಳ್ಳದ ಕಾಲಖಂಡದಲ್ಲಿ ಅದಕ್ಕೆ ಒಡ್ಡಿಕೊಳ್ಳುವ ಸನ್ನಿವೇಶವನ್ನು ದೇಶಾದ್ಯಂತ ಒಡಮೂಡಿಸಿದರು.
– 3 –
1892, ಭಾರತದ ಪಾಲಿಗೆ ಮಹತ್ತ್ವದ ಎರಡು ಪ್ರಸಂಗಗಳು ಘಟಿಸಿದ ಐತಿಹಾಸಿಕ ಸಂದರ್ಭ. ಆ ವರ್ಷ ಸ್ವಾಮಿ ವಿವೇಕಾನಂದರು ಪೂರ್ವದ ಜ್ಞಾನವೈರಾಗ್ಯವನ್ನು ಪಶ್ಚಿಮಕ್ಕೆ ಸಾರಲು ಭಾರತದಿಂದ ಅಮೆರಿಕಕ್ಕೆ ಹೊರಟರು. ಇತ್ತ ಅರವಿಂದರು ಭಾರತದ ಹೊಸ ಮನ್ವಂತರವನ್ನು ಸ್ಥಾಪಿಸಲು ಬೇಕಾದ ರಾಜಕೀಯ ಕ್ಷೇತ್ರವನ್ನು ಅಣಿಗೊಳಿಸಲು, ಅದಕ್ಕೆ ಆಧ್ಯಾತ್ಮಿಕತೆಯ ಸ್ವರೂಪವನ್ನು ಒದಗಿಸಲು ಇಂಗ್ಲೆಂಡಿನಿಂದ ಭಾರತಕ್ಕೆ ಬಂದರು.
ಅರವಿಂದರು ಸ್ವಾಮಿ ವಿವೇಕಾನಂದರ ಸಾಧನೆಯನ್ನು ಮುಂದುವರಿಸಿದರು. ಕುಸಿದ ನನ್ನ ದೇಶವನ್ನು ಮೇಲೆತ್ತುವ ಶಕ್ತಿಯು ನನ್ನಲ್ಲಿದೆ. ಅದು ನನ್ನ ಶಾರೀರಿಕ ಶಕ್ತಿಯಿಂದಲ್ಲ. ನಾನು ಖಡ್ಗದಿಂದಲೋ ಅಥವಾ ಕೋವಿಯಿಂದಲೋ ಹೋರಾಡುವವನಲ್ಲ. ನಾನು ನಿರಂಕುಶತೆಯನ್ನು ಎದುರಿಸುವುದು ಜ್ಞಾನಬಲದಿಂದ. ಇದೇನೂ ನನಗೆ ಹೊಸದಲ್ಲ. ಅದು ಇಂದು-ನಿನ್ನೆಯದೂ ಅಲ್ಲ. ನಾನು ಅಂತಹ ಹೋರಾಟದಿಂದ ಸನ್ನದ್ಧನಾದವನು. ಭಗವಂತನು ನನ್ನನ್ನು ಇದಕ್ಕಾಗಿಯೇ ಈ ಭೂಮಿಗೆ ಕಳುಹಿಸಿರುವನು.
“ಶಕ್ತಿಯನ್ನು ಕಳೆದುಕೊಂಡ ಭಾರತವು ಅದೆಷ್ಟನ್ನೋ ಕಳೆದುಕೊಂಡಿದೆ. ಭಾರತವು ಶಕ್ತಿಯನ್ನುಳಿದು ಮತ್ತೆಲ್ಲವುಗಳನ್ನು ಹೊಂದಿದೆ. ಜ್ಞಾನಶಕ್ತಿಯು ಭೌತಿಕ ಬಲವನ್ನೂ ಹೊಂದಿರಬೇಕು. ಅಜ್ಞಾನದ ತಮದಲ್ಲಿ ಸಿಲುಕಿರುವ, ನಿಷ್ಕ್ರಿಯತೆಯ ಶಾಪದಿಂದ ನಲುಗುವ ನಪುಂಸಕತೆಯ ನಿಃಶಕ್ತಿಯಿಂದ ಬಳಲುವ ಭಾರತವು ಸ್ವರಾಜ್ಯವನ್ನು ಕಾಣದು. ಶಕ್ತಿಯಿಲ್ಲದ ಭಕ್ತಿಯಲ್ಲಿ ಏಕಾಗ್ರತೆಯು ಇರಲು ಅಸಾಧ್ಯ. ಅಂತಹ ಶಕ್ತಿಯನ್ನು ಪಡೆಯುವುದೇ ಭಾರತದ ಪುನರ್ಜನ್ಮವೆನಿಸುತ್ತದೆ” – ಇದು ವಂಗಭಂಗದ ಕಾಲದ ತಮ್ಮ ವiಹಾರಾಷ್ಟ್ರದ ಪ್ರವಾಸದಲ್ಲಿ ಅರವಿಂದರು ಪದೇ ಪದೇ ಎಚ್ಚರಿಸುತ್ತಿದ್ದ ಮಾತುಗಳು.
ಸ್ವಾತಂತ್ರ್ಯ ಹೋರಾಟದಲ್ಲಿ ಒಳಗೊಂಡು ಕ್ರಾಂತಿಕಾರಿ ದೇಶಭಕ್ತನಾಗುವುದೂ, ಯೋಗಜೀವನದ ಸಂತನಾಗುವುದೂ ವ್ಯತಿರಿಕ್ತ ಅಂಶಗಳಲ್ಲ; ಅವೆರಡೂ ಒಂದಕ್ಕೆ ಇನ್ನೊಂದು ಪೂರಕ ಎನ್ನುವುದನ್ನು ಯೋಗಿ ಅರವಿಂದರು ತಮ್ಮ ಸಾಧನೆಯಿಂದ ಜೀವಿಸಿ ತೋರಿಸಿದರು. ಮನುಷ್ಯನ ಪ್ರಜ್ಞಾಶಕ್ತಿಯನ್ನು ಉತ್ಕøಷ್ಟತೆಯ ಉತ್ತುಂಗಕ್ಕೆ ಏರಿಸುವಂತೆ ತಮ್ಮ ಜೀವನವನ್ನು ಬದುಕಿದ ಅವರು ಎಲ್ಲೆಲ್ಲೂ ಅದನ್ನೆ ಸಾಧಿಸಬೇಕೆಂದುಕೊಂಡರು. ಸ್ವಾತಂತ್ರ್ಯ ಯುದ್ಧದಲ್ಲೂ ಇಂತಹ ಅನನ್ಯತೆಯನ್ನೇ ನಿರೀಕ್ಷಿಸಿ ಕ್ರಾಂತಿಕಾರಿ ಚಟುವಟಿಕೆಯಲ್ಲೂ ಭಾಗವಹಿಸಿದರು. ಕಾಂಗ್ರೆಸ್ನಲ್ಲಿ ತೀವ್ರಗಾಮಿ ನಾಯಕರಾದರು. 1929ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ‘ಪೂರ್ಣ ಸ್ವಾತಂತ್ರ್ಯ’ದ ಕರೆ ಕೊಡುವುದಕ್ಕಿಂತ ಬಹಳ ಮೊದಲೇ 1909ರಲ್ಲಿ ‘ತನ್ನ ಅಶಕ್ತಿಯಿಂದ ಕಳೆದುಕೊಂಡ ಸ್ವಾತಂತ್ರ್ಯಕ್ಕೆ ಉತ್ತರವಾಗಿ ಅಖಂಡವಾದ ಪೂರ್ಣ ಸ್ವರಾಜ್ಯವನ್ನು ಪಡೆಯುವುದೊಂದೇ ಪರಿಹಾರ’ – ಎಂದರು. “ನವಮನ್ವಂತರವನ್ನು ಕಾಣಬಯಸುವ ನಾವು ನಮ್ಮ ಆದರ್ಶವಾಗಿರುವ ಪೂರ್ಣ ಸ್ವರಾಜ್ಯದ ಆಗ್ರಹದಿಂದ ಒಂದಿಂಚೂ ಕದಲಲಾರೆವು. ನಮಗೆ ಸ್ವಾಯತ್ತ ಸರ್ಕಾರವೆಂದರೆ ಅದು ಯುನೈಟೆಡ್ ಕಿಂಗ್ಡಮ್ನಲ್ಲಿರುವ ಈಗಿನ ಸರ್ಕಾರಕ್ಕೆ ಸರಿಸಮನಾಗಿರುವ ಸರ್ಕಾರ. ಇದಕ್ಕೂ ಕನಿಷ್ಠವನ್ನು ಒಪ್ಪುವುದೆಂದರೆ ಭಾರತೀಯರ ಕÀಠಿಣ ಸಂಘರ್ಷದಿಂದಲೇ ರಾಷ್ಟ್ರವನ್ನು ಕಟ್ಟುವೆವೆನ್ನುವ ಛಲವನ್ನು ಅವಮಾನಿಸಿದಂತೆ. ನವಜಾಗೃತ ಭಾರತ ಜನತೆಯು ತಮ್ಮ ಶಕ್ತಿ ಸಾಮಥ್ರ್ಯಗಳನ್ನು ಒಂದಾಗಿಸಿದಾಗ ಅದು ಇಂಗ್ಲೆಂಡಿಗೆ ಸರಿಗಟ್ಟುವುದಕ್ಕಿಂತ ಕಡಮೆಯನ್ನು ಸ್ವೀಕರಿಸದು” ಎಂದು ಅಗ್ರಹಿಸುತ್ತಿದ್ದರು. ತಾವು ಸಂಪಾದಿಸುತ್ತಿದ್ದ ‘ಆರ್ಯ’ ಮತ್ತು ‘ಧರ್ಮ’ ಪತ್ರಿಕೆಗಳಲ್ಲಿ ಅವರು ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ವಿಚಾರಗಳನ್ನು ವಿಶ್ಲೇಷಿಸುತ್ತಿದ್ದರೆ, ‘ಯುಗಾಂತರ’ ಮತ್ತು ‘ವಂದೇ ಮಾತರಂ’ಗಳಲ್ಲಿ ನಿರ್ಭಿಡೆಯ ಆಂಗ್ಲವಿರೋಧಿ ರಾಜಕೀಯ ವಿಶ್ಲೇಷಣೆಗಳೂ ಇರುತ್ತಿದ್ದವು.
– 4 –
ಅರವಿಂದರ ಜೀವನದಲ್ಲಿ ಅವರು ಇಂಗ್ಲೆಂಡಿನಿಂದ ಮರಳಿ ಬಂದು ಬರೋಡಾದಲ್ಲಿ ಕಳೆದ ಹದಿಮೂರು ವರ್ಷಗಳಷ್ಟೇ ಅವರ ಶಾಂತ ವಿಧಾಯಕ ಜೀವನವೆನ್ನಬೇಕು. 1892ರಲ್ಲಿ ಭಾರತಕ್ಕೆ ಬಂದ ಅರವಿಂದರು ಮಹಾರಾಜ ಸಯ್ಯಾಜಿರಾವ್ ಗಾಯಕವಾಡರ ಕಾರ್ಯದರ್ಶಿಗಳಾದರು. ಅವರ ಆಸಕ್ತಿಯಿದ್ದುದು ರಾಜ್ಯಾಡಳಿತದ ಅಂಗವಾಗಿರುವುದಕ್ಕಿಂತ ಹೆಚ್ಚಾಗಿ ಶಿಕ್ಷಣ ಕ್ಷೇತ್ರದಲ್ಲಿ. ಮುಂದೆ ಬರೋಡ ಕಾಲೇಜಿನ ಪ್ರಿನ್ಸಿಪಾಲರಾಗಿರುವಾಗಲೂ ಮಹಾರಾಜರ ಪತ್ರವ್ಯವಹಾರಗಳನ್ನು ಅವರು ನಿಭಾಯಿಸುತ್ತಿದ್ದರು. 1904ರ ಮುಂಬೈ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗವಹಿಸಿದುದು ಅವರ ರಾಜಕೀಯ ಪ್ರವೇಶದ ಮೊದಲ ಹೆಜ್ಜೆ. ಬರೋಡಾದ ವಾಸ್ತವ್ಯದ ಕಾಲದಲ್ಲಿ ಅವರು ತಮಗೆ ಪೂರ್ಣ ಅಪರಿಚಿತವಾದ ಬಂಗಾಳಿ ಮತ್ತು ಸಂಸ್ಕøತವನ್ನು ಕಲಿತು ಅನತಿಕಾಲದಲ್ಲೇ ಅವುಗಳಲ್ಲಿ ಪ್ರಾವೀಣ್ಯವನ್ನು ಪಡೆದರು. ಹಾಗೂ ಉಪನಿಷತ್ತಿನ ಭಾಷಾಂತರಕ್ಕೂ ತೊಡಗಿದರು.
ಅವರ ಸಕ್ರಿಯ ರಾಜಕೀಯದ ಕಾಲಾವಧಿಯು 1905ರಿಂದ 1910ರ ವರೆಗಿನ ಐದು ವರ್ಷಗಳೆನಿಸುತ್ತದೆ. ಹಾಗೆಂದು ಅವರು ಬರೋಡಾ ಕಾಲೇಜಿನಲ್ಲಿದ್ದಾಗಲೇ ಬರೋಡಾ ಸೈನ್ಯದಲ್ಲಿ ಅಧಿಕಾರಿಯಾಗಿದ್ದು ನಿವೃತ್ತರಾದ ಜತಿನ್ ಬ್ಯಾನರ್ಜಿಯವರಲ್ಲಿ ಬಂಗಾಳದ ರಾಜಕೀಯ ಹವೆಯ ಹದವನ್ನು ಕಂಡು ಅದನ್ನು ತಮಗೆ ವರದಿ ಮಾಡುವಂತೆ ನಿಯೋಜಿಸಿದ್ದರು. 1905ರಲ್ಲಿ ವಂಗಭಂಗವು ಶಾಸನವಾಗಿ ಕಾರ್ಯರೂಪಕ್ಕೆ ಬಂದಾಗ ಅರವಿಂದರು ಬಂಗಾಲದ ರಾಜಕೀಯ ನಾಯಕರಲ್ಲಿ ಒಬ್ಬರಾಗಿ ರೂಪಗೊಂಡರು. ಬಾಲಗಂಗಾಧರ ತಿಲಕರೂ, ಬಿಪಿನ್ ಚಂದ್ರ ಪಾಲರೂ ತೀವ್ರಗಾಮಿ ಕಾಂಗ್ರೆಸ್ಸಿಗರ ನಾಯಕರಾದಾಗ ಅರವಿಂದರು ಬಿಪಿನಚಂದ್ರ ಪಾಲರು ಸ್ಥಾಪಿಸಿದ ತೀವ್ರಗಾಮಿ ಗುಂಪಿನ ವೈಚಾರಿಕ ನಿರೂಪಣೆಯ ಪತ್ರಿಕೆ ವಂದೇ ಮಾತರಂ ಸಂಪಾದಕರಾದರು. ತೀವ್ರಗಾಮಿಗಳು ಸ್ವರಾಜ್ಯ, ಸ್ವದೇಶೀ, ಬಹಿಷ್ಕಾರ ಮತ್ತು ರಾಷ್ಷ್ರೀಯ ಶಿಕ್ಷಣಗಳೆಂಬ ‘ಚತುಃಸೂತ್ರ’ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಅದು ತಮ್ಮ ಪೂರ್ಣ ಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸುವುದು ಎನ್ನುವ ನಂಬಿಕೆಯಿಂದ ಮುಂದುವರಿದರು. ಆ ಕಾಲದಲ್ಲಿ ಅರವಿಂದರು ಬಂಗಾಳ ಮತ್ತು ಮಹಾರಾಷ್ಟ್ರಗಳಲ್ಲಿ ಹಲವು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಆಗಲೇ ಪೂನಾದಲ್ಲಿ ಅವರು ಯೋಗಗುರು ಲೇತಿಯವರ ಸಂಪರ್ಕಕ್ಕೆ ಬಂದುದು. ಬಂಗಾಳದ ಕ್ರಾಂತಿಕಾರಿಗಳಿಗೆ ಒದಗಿದ ಆಧ್ಯಾತ್ಮಿಕ ಪ್ರೇರಣೆ ಮತ್ತು ಅದರ ಸಾರ್ವತ್ರಿಕ ಅನುಸಂಧಾನದ ಕುರಿತು ಅವರ ತೀವ್ರ ಕುತೂಹಲವು ಆಗಿನ ಅವರ ಬೌದ್ಧಿಕ ಚಟುವಟಿಕೆಯಾಗಿದ್ದಿತು.
– 5 –
ಕಾಂಗ್ರೆಸ್ಸಿನ 1907ರ ಸೂರತ್ ಅಧಿವೇಶನವು ಮಂದಗಾಮಿ ಮತ್ತು ತೀವ್ರಗಾಮಿಗಳ ಭಿನ್ನಾಭಿಪ್ರಾಯಕ್ಕೆ ಬಹಿರಂಗ ಪ್ರದರ್ಶನ ಕೇಂದ್ರವಾಗಿಬಿಟ್ಟಿತು. ಲಾಲಾ ಲಜಪತರಾಯ್ ಅಥವಾ ಬಾಲಗಂಗಾಧರ ತಿಲಕರು ಮುಂದಿನ ಅಧ್ಯಕ್ಷರಾಗಬೇಕೆಂದು ತೀವ್ರಗಾಮಿಗಳು ಬಯಸಿದರೆ ಕೊನೆಗೂ ಮಂದಗಾಮಿ ಗುಂಪಿನ ರಾಸಬಿಹಾರಿ ಬೋಸರನ್ನು ಅಧ್ಯಕ್ಷಗಾದಿಗೆ ಏರಿಸಿದರು.
1906ರಲ್ಲಿ ತೀವ್ರಗಾಮಿಗಳ ನಿಲವಿನಂತೆ ಸ್ಥಾಪನೆಗೊಂಡ ರಾಷ್ಟ್ರೀಯ ಶಾಲೆಗಳಲ್ಲಿ ಅರವಿಂದರು ಕೊಲ್ಕತಾ ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲರಾಗಿ ಹೊಣೆಯನ್ನು ಹೊತ್ತರು. ಹಳೆಯ ಜಾಡಿನಲ್ಲಿ ನಡೆದ ರೀತಿಯಿಂದ ಹೊಸ ನಡೆಗೆ ಒಗ್ಗಿಸುವುದು ಅಪಾರ ತಾಳ್ಮೆಯನ್ನು ನಿರೀಕ್ಷಿಸುತ್ತಿತ್ತು. ಅರವಿಂದರು ಅಂದುಕೊಂಡಂತೆ ವಿದ್ಯಾರ್ಥಿಗಳಿಗೆ ನೀಡುವ ಭರಪೂರ ಮಾಹಿತಿಗಳು ಮತ್ತು ಅಂಕಿಸಂಖ್ಯೆಗಳೇ ಜ್ಞಾನವೆಂದುಕೊಳ್ಳುವ ಕಾಲದಲ್ಲಿ ಅವನ್ನು ಅರ್ಥಮಾಡಿಕೊಳ್ಳುವ ಕ್ಷಮತೆಯನ್ನು ವಿದ್ಯಾರ್ಥಿಗಳಲ್ಲಿ ಅನುವಾಗಿಸಬೇಕಾಗಿದ್ದಿತ್ತು. ಅದಕ್ಕೆ ಬೇಕಾದ ವ್ಯವಧಾನವನ್ನು ಒದಗಿಸುವ ವ್ಯವಸ್ಥೆಯು ಅಗತ್ಯವಾಗಿದ್ದಿತು. ಅದಕ್ಕಾಗಿ ವಿದ್ಯಾರ್ಥಿಗಳ ಶರೀರವನ್ನೂ ಮನಸ್ಸನ್ನೂ ಬಲಪಡಿಸುವ ಕಾರ್ಯದಲ್ಲಿ ಅರವಿಂದರು ಮಗ್ನರಾಗಿದ್ದರು.
ರಾಷ್ಟ್ರೀಯ ಕಾಂಗ್ರೆಸ್ಸಿನ ನೀತಿ-ನಿಲವುಗಳಿಂದ ಅರವಿಂದರು ಭ್ರಮನಿರಸನಗೊಂಡರು. “ರಾಷ್ಟ್ರೀಯ ಕಾಂಗ್ರೆಸ್ ತನ್ನ ಹೆಸರಿನಿಂದ ಮಾತ್ರ ರಾಷ್ಟ್ರೀಯವೆನಿಸಿದೆ. ಆದರೆ ಅದು ರಾಷ್ಟ್ರೀಯವಲ್ಲ. ಅಷ್ಟಲ್ಲದೆ ಹಾಗೆ ಬೆಳೆಯಲು ಪ್ರಯತ್ನವನ್ನೂ ಮಾಡುತ್ತಿಲ್ಲ. ಕೆಲವೇ ಕೆಲವು ಮಧ್ಯಮವರ್ಗದ ಜನರನ್ನು ಸೇರಿಸಿಕೊಂಡು ಅದು ರಾಷ್ಟ್ರೀಯವೆಂದು ಕರೆಸಿಕೊಳ್ಳಲು ಇಚ್ಛಿಸುತ್ತದೆ. ಅಳುಮೋರೆಯ, ದುರ್ಬಲ ಹೇಡಿತನದ, ಭಾವುಕ ಮನಸ್ಸಿನ ಜನರಿಂದ ಕಾಂಗ್ರೆಸ್ ಮೊದಲು ಬಿಡುಗಡೆಗೊಳ್ಳಬೇಕು – ಎಂದು ಇಂದುಪ್ರಕಾಶ ಪತ್ರಿಕೆಯಲ್ಲಿ ಅವರು ತಮ್ಮ ನೋವನ್ನು ಪ್ರಕಟಿಸಿದರು.
ಇದರೊಂದಿಗೆ ಅರವಿಂದರಿಗೆ ಕಾಂಗ್ರೆಸ್ಸಿಗೂ ತಮ್ಮ ವೈಚಾರಿಕ ಅಧಿಷ್ಠಾನದ ಪ್ರಖರ ನಿಲವಿಗೂ ತಾಳಮೇಳಗಳೇ ಇಲ್ಲವೆನಿಸಿತು. ಅರವಿಂದರ ಪಾಲಿಗೆ ಆಧ್ಯಾತ್ಮಿಕತೆಯೇ ಭಾರತದ ಪ್ರಾಣವೆನಿಸಿತ್ತು. ಭಾರತವು ಅವರಿಗೆ ಜಡಭೂಮಿಯಾಗಿರಲಿಲ್ಲ. ದೇವಾಂಶಸಂಭೂತೆಯಾದ ತಾಯಿಯೆನಿಸಿದ್ದಳು.
-6-
ಅಲಿಪುರ ಬಾಂಬ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ನಿರಪರಾಧಿಯೆಂದು ಬಿಡುಗಡೆಗೊಂಡ ಅರವಿಂದರು ಉತ್ತರಪಾಡಾದಲ್ಲಿ ತಮ್ಮ ಮೊದಲ ಭಾಷಣವನ್ನು ಮಾಡಿದರು. “ರಾಷ್ಟ್ರೀಯತೆಯು ಒಂದು ಮತವಲ್ಲ. ನಂಬಿಕೆಯಂತೂ ಅಲ್ಲವೇ ಅಲ್ಲ. ಸನಾತನಧರ್ಮವೇ ಭಾರತೀಯರ ರಾಷ್ಟ್ರೀಯತೆ. ಸನಾತನ ಧರ್ಮದೊಂದಿಗೆ ಈ ರಾಷ್ಟ್ರವು ಜನಿಸಿದೆ” ಎಂದರು. ಆಧ್ಯಾತ್ಮಿಕ ಶಕ್ತಿಯಿಂದ ಭೌತಿಕ ಶಕ್ತಿಯೂ ವಿಕಾಸಗೊಳ್ಳುತ್ತದೆ. ಪೂರ್ಣಜೀವನವನ್ನು ಒಳಗೊಂಡು ಬೆಳೆಯುವುದೇ ಸ್ವಾತಂತ್ರ್ಯ. ಅದನ್ನು ಪಡೆಯುವ ಚಿತ್ಶಕ್ತಿಯು ಸನಾತನ ಧರ್ಮದಲ್ಲಿದೆ. ಧಾರ್ಮಿಕ ಚೈತನ್ಯದ ಜಾಗರಣದಿಂದ ಅಸ್ಮಿತೆಯ ಅರಿವು ಉಂಟಾಗುತ್ತದೆ. ಅದರಿಂದಲೇ ಪೂರ್ಣ ಪರಿವರ್ತನೆಯ ಹೊಸಜಾಡು ನಿರ್ಮಾಣವಾಗುತ್ತದೆ. ಭಾರತೀಯ ಮನಸ್ಸುಗಳನ್ನು ಸಾಂದರ್ಭಿಕತೆಗೆ ಮಾತ್ರ ಪ್ರತಿಕ್ರಿಯಿಸುವ ಹಂತದಿಂದ ಸಾರ್ವತ್ರೀಕರಿಸುವ ಎತ್ತರಕ್ಕೆ ಏರಿಸಬೇಕು. ಆಗಲೇ ಭಾರತದ ಅಂತಃಸತ್ವದ ಪೂರ್ಣ ಪ್ರಕಟೀಕರಣವು ಸಾಧ್ಯ. ಆಗ ಮಾತ್ರ ಭಾರತವು ಜಗತ್ತಿಗೆ ಮಾರ್ಗದರ್ಶನವನ್ನು ನೀಡುವ ಸಾಮಥ್ರ್ಯವನ್ನು ಸಿದ್ಧಗೊಳಿಸುತ್ತದೆ.
1905ರಲ್ಲಿ ಅರವಿಂದರು ತಮ್ಮ ಪತ್ನಿ ಮೃಣಾಲಿನಿಯವರಿಗೆ ಬರೆದಿದ್ದು ಆ ಪತ್ರದಲ್ಲಿ ಅವರು ಭಾರತದ ಕುರಿತು ಬರೆದ ಪತ್ರವು ಇಲ್ಲಿ ಉಲ್ಲೇಖನೀಯ. “ದೇಶದ ಸ್ವಾತಂತ್ರ್ಯಕ್ಕಾಗಿ ಕಾತರಿಸುವ ಬಹುಮಂದಿಗೂ ಕೂಡಾ ದೇಶವೆಂದರೆ ನಿಷ್ಕ್ರಿಯ ಭೂಭಾಗವೆನಿಸಬಹುದು. ಅದು ಬರೇ ಕೃಷಿಭೂಮಿ, ಅರಣ್ಯಪ್ರದೇಶ ಮತ್ತು ನದಿಗಳೆನಿಸಬಹುದು. ಆದರೆ ನಾನು ಮಾತ್ರ ದೇಶವನ್ನು ತಾಯಿಯೆಂದು ಭಾವಿಸುವೆ. ರಾಕ್ಷಸನೊಬ್ಬನು ತಾಯಿಯ ರಕ್ತವನ್ನು ಹೀರುತ್ತಿದ್ದರೆ, ಮಗನೊಬ್ಬನು ಹೇಗೆ ಪ್ರತಿಕ್ರಿಯಿಸಬಹುದು? ಅವನು ನಿರ್ಭಾವುಕನಾಗಿ ಮಕ್ಕಳೊಡನೆ ಆಡಬಲ್ಲನೇ? ಮೌನವಾಗಿ ಉಣಬಲ್ಲನೇ? ತಾಯಿಯ ರಕ್ಷಣೆಗೆ ಧಾವಿಸದೆ ಇರಬಲ್ಲನೇ?” ಎಂದು ಅವರು ಕೇಳಿದ್ದರು.
ಸ್ವಾತಂತ್ರ್ಯದ ಕುರಿತು ಕೂಡಾ ಅವರ ಪರಿಕಲ್ಪನೆಯು ಅನನ್ಯ ಒಳನೋಟದ ಫಲಿತಾಂಶವಾಗಿದ್ದಿತು. “ನಮ್ಮದು ಆಧ್ಯಾತ್ಮಿಕ ಸ್ವಾತಂತ್ರ್ಯದ ಆನಂದವನ್ನು ಉಂಡ ಪರಂಪರೆಯಾಗಿದೆ. ನಮ್ಮ ಋಷಿಗಳೆಲ್ಲರೂ ಅದರ ಪ್ರಾಯೋಗಿಕ ಫಲವನ್ನು ಕಂಡವರು. ಅದುವೇ ಈಗ ಕಾಣಬೇಕಾದ ಸ್ವರಾಜ್ಯ. ರಾಜಕೀಯ ಸ್ವಾತಂತ್ರ್ಯವೆನ್ನುವುದು ಅದರ ಒಂದು ಭಾಗ ಮಾತ್ರ. ಸ್ವರಾಜ್ಯವು ಭೌತಿಕ ಸ್ವಾತಂತ್ರ್ಯ ಮಾತ್ರವೇ ಅಲ್ಲ; ಅದು ಆತ್ಮಿಕ ಸ್ವಾತಂತ್ರ್ಯ. ಅಂತಹ ಸ್ವಾತಂತ್ರ್ಯವು ಜೀವನದ ರಕ್ಷಕ, ಪ್ರಗತಿಯ ಸಾಧಕ.”
-7-
ಸ್ವಾತಂತ್ರ್ಯದ ಕಾರ್ಯರೂಪೀ ನಕ್ಷೆಯನ್ನು 1947, ಆಗಸ್ಟ್ 15ರ ತಮ್ಮ ಸಂದೇಶದಲ್ಲಿ ಅವರು ವಿಶದಪಡಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂತಸದೊಂದಿಗೆ ದೇಶವಿಭಜನೆಯ ನೋವು ಮತ್ತು ಎದುರಾದ ಅಸಹನೀಯ ಕಷ್ಟಕಾರ್ಪಣ್ಯಗಳ ಸರಮಾಲೆಗಳು ಎಂಥವರನ್ನೂ ನಡುಗಿಸುವಂಥವುಗಳಾಗಿದ್ದವು. ಅಂದು ಅವರು “ಭಾರತವು ದಾಸ್ಯಮುಕ್ತವಾಗಿದ್ದರೂ ಸಂಘಟಿತವಾಗಿಲ್ಲದ ಪರಿಸ್ಥಿತಿಯು ಅಭ್ಯುದಯಕ್ಕೆ ಪೋಷಕವಾದ ಸ್ಥಿತಿಯಲ್ಲ. ದೇಶದ ವಿಭಜನೆಯಾಗಿರಬಹುದು; ಆದರೆ ಅದು ಶಾಶ್ವತಸ್ಥಿತಿಯೇನಲ್ಲ. ಆಂತರಿಕ ಮತ್ತು ಬಾಹ್ಯ ಚೈತನ್ಯಗಳ ಸುಸಂಬದ್ಧತೆಯು ಏರ್ಪಟ್ಟರೆ ಭಾರತದ ಆಧ್ಯಾತ್ಮಿಕಶಕ್ತಿಯು ಯುರೋಪಿನ ಭೌತಿಕವಾದಕ್ಕೆ ಉತ್ತರವಾಗಬಲ್ಲುದು. ಅದಕ್ಕಾಗಿ ವೇದಮೂಲದ ಆಧ್ಯಾತ್ಮಿಕತೆಯು ಪ್ರಸಾರವಾಗಬೇಕು” ಎನ್ನುವ ಭರವಸೆಯ ಸಾಂತ್ವನವನ್ನು ಕೊಟ್ಟರು. “ಭಾರತವು ಪೂರ್ವಜರ ಬಳುವಳಿಯನ್ನು ಮತ್ತೆ ಪಡೆಯಬೇಕು. ಆರ್ಯಜ್ಞಾನ, ಆರ್ಯ ಅನುಶಾಸನ, ಆರ್ಯ ಧೀಮಂತಿಕೆ ಮತ್ತು ಆರ್ಯಜೀವನವನ್ನು ಮತ್ತೆ ಪಡೆದು ಅನುಭವಿಸಬೇಕು. ಅದು ಭಾವನೆ ಮತ್ತು ಮನಸ್ಸುಗಳಲ್ಲಿದ್ದರೆ ಸಾಲದು, ಅದುವೇ ಜೀವನವಾಗಬೇಕು.”
ಋಷಿಪ್ರಣೀತ ಶಕ್ತಿಯ ಆವಾಹನೆಗಾಗಿ ಅವರು ನೀಡಿದ ಕರೆಯು ಬರೇ ಬೀಸು ತೀರ್ಮಾನವಾಗಿರಲಿಲ್ಲ. ಜಾಗತಿಕ ಇತಿಹಾಸವನ್ನು ತಮ್ಮ ವಿಮರ್ಶಾಪ್ರಜ್ಞೆಯಿಂದ ಮಥಿಸಿ ಕಂಡುಕೊಂಡ ದರ್ಶನವೇ ಆಗಿದ್ದಿತು.
ಭಾರತದ ನವೋತ್ಥಾನವು ಒಂದು ಪ್ರತಿಕ್ರಿಯೆಯಾಗಿ 15ನೆ ಶತಮಾನದಲ್ಲಿ ಯುರೋಪಿನಲ್ಲಿ ನಡೆದಂತೆ ನಡೆದುದು. ಕ್ರೈಸ್ತಮತದ ಪ್ರಭಾವ ಮತ್ತು ರಾಜಸತ್ತೆಯ ಸಂಘರ್ಷದ ಪರಿಣಾಮದಿಂದ ಆದ ಪರ್ಯಾಯ ವ್ಯವಸ್ಥೆ. ಉದಾಹರಣೆಗೆ ಐರ್ಲ್ಯಾಂಡಿನಲ್ಲಿ ಆದ ಬದಲಾವಣೆಗೆ ಅಲ್ಲಿ ಆಂಗ್ಲರ ಹತೋಟಿಯಿಂದ ಹೊರಬರುವ ಚಡಪಡಿಕೆಯು ಕಾರಣವಾಯಿತು. ಭಾರತದಲ್ಲಿ ಹಾಗಲ್ಲ, ಭಾರತಕ್ಕೆ ತನ್ನ ಪೂರ್ವ ಪರಂಪರೆಯ ಜೀವಂತ ಅನುಭವವಿದೆ. ಪಾಶ್ಚಾತ್ಯ ಆಕ್ರಮಣಕಾರಿ ನಾಗರಿಕತೆ ಮತ್ತು ಪ್ರಾಚೀನ ಜೀವನ ತತ್ತ್ವಗಳ ತಾಕಲಾಟದ ಕಾಲಖಂಡದಲ್ಲಿ ಆಗಬೇಕಿರುವುದು ಬೇರೆಡೆ ಆದಂತೆ ಸಾಮೂಹಿಕ ವಿಷಾದ ಮತ್ತು ಆಕ್ರೋಶಗಳ ಮರುವ್ಯಾಖ್ಯಾನವಲ್ಲ. ಅದರ ಬದಲು ಮುಕ್ತ ಮನೋಧರ್ಮದಿಂದ ನಡೆಯುವ ಮರುಮಾಪನಕ್ರಿಯೆ. ಕೇಂದ್ರಬಿಂದುವಾಗಬೇಕಿರುವ ಈ ಪುನರ್ಮಾಪನದ ಮೂಲಕ ಆರ್ಯಪುರುಷತ್ವದ ಚೈತನ್ಯವು ಎದ್ದು ಕಾಣಬೇಕು. ಪೂರ್ವ ಆರ್ಯತ್ವದ ರಾಷ್ಟ್ರೀಯ ಗುಣಸ್ವಭಾವಗಳೀಗ ಮರುಮಂಡನೆಯಾಗಬೇಕು. ರಾಷ್ಟ್ರೀಯತೆಯೆಂದರೆ ಯಥಾಸ್ಥಿತಿವಾದವಲ್ಲ. ನಿಷ್ಕ್ರಿಯೆಯಂತೂ ಅಲ್ಲವೇ ಅಲ್ಲ. ಇತಿಹಾಸದ ಪ್ರಭಾವೀ ಘಟ್ಟಗಳನ್ನು ಬುನಾದಿಯನ್ನಾಗಿಸಿ ಈ ದಿನಗಳಿಗೆ ಅದನ್ನು ಅನ್ವಯಿಸುವುದೇ ರಾಷ್ಟ್ರೀಯತೆಯ ಪುನಃಪ್ರತಿಷ್ಠಾಪನೆ ಎನಿಸುವುದು. ಭಾರತವಿಂದು ಅಸ್ತಿತ್ವಕ್ಕಾಗಿಯಲ್ಲ, ಗೆಲವಿನ ಮುಂಬೆಳಕಿಗಾಗಿ ಹಾತೊರೆಯಬೇಕು. ಅರವಿಂದರು ಕೆಲವೊಂದು ಪ್ರಮುಖ ಪ್ರಸಂಗಗಳಲ್ಲಿ ನೀಡಿದ ಸಂದೇಶಗಳಿವು.
ಹಿಂದೂ ಧರ್ಮದ ಪ್ರಾತಿನಿಧಿಕ ಸ್ವರೂಪದ ಸ್ಪಷ್ಟಗೋಚರವೂ ಅವರಲ್ಲಿದ್ದಿತು. ಹಿಂದೂ ಧರ್ಮವೊಂದೇ ಸನಾತನಧರ್ಮವಾದುದು. ವೈಶ್ವಿಕ ಧರ್ಮವಾಗಿರುವುದೂ ಅದೊಂದೇ. ವೈಶ್ವಿಕವಾಗಿರದ ಧರ್ಮವು ಅದೆಂತು ಸನಾತನವಾಗಬಲ್ಲುದು? ಹಿಂದೂ ಧರ್ಮವೊಂದೇ ಎಲ್ಲವನ್ನೂ ಎಲ್ಲರನ್ನೂ ಒಳಗೊಳ್ಳಬಲ್ಲುದು. ಚಿರಂತನವಾಗಿರದ ಯಾವುದೂ ಧರ್ಮವಾಗಲಾರದು. ಧರ್ಮವು ಲೌಕಿಕವಾದುದನ್ನು ಮೀರಿ ನಿಲ್ಲುವ ಶಕ್ತಿ. ಅದು ವಿಜ್ಞಾನ ಅನ್ವೇಷಣೆಗಳನ್ನು ಒಳಗೊಳ್ಳಬಲ್ಲುದು. ತತ್ತ್ವಜ್ಞಾನವು ಊಹಿಸುವುದನ್ನೂ ತನ್ನದಾಗಿಸಬಲ್ಲುದು. ಇಂತಹ ಅನಂತ ವ್ಯಾಪ್ತಿಯನ್ನು ಅಂದು ಧರ್ಮವು ಪಡೆಯಬಲ್ಲುದು.
ಯೋಗಿ ಅರವಿಂದರು ತಮ್ಮ ಉಚ್ಚಪ್ರಜ್ಞೆಯಿಂದ ಕಂಡ ದರ್ಶನದ ಪರಿಣಾಮವು ಭಾರತದ ಆಧ್ಯಾತ್ಮಿಕ ಉಜ್ಜೀವನಕ್ಕೆ ಕಾರಣವಾಯಿತು. ಭಾರತದ್ದೇ ತತ್ತ್ವಶಾಸ್ತ್ರ, ಸಾಹಿತ್ಯ, ವಿಜ್ಞಾನವೇ ಮೊದಲಾದ ಜ್ಞಾನಕವಲುಗಳು ಹೊಸ ಸಮೀಕರಣಕ್ಕೆ ಒಡ್ಡಿಕೊಂಡವು. ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಗಳಿಗೆ ಭಾರತೀಯ ಮೂಲದ ಹೊಸ ಅರಿವಿನ ಉತ್ತರಗಳು ಕಂಡುಬಂದವು. ಶ್ರೀಮಾತೆಯವರೊಮ್ಮೆ ಉಲ್ಲೇಖಿಸಿದಂತೆ “ಮಾನವನ ಪ್ರಜ್ಞೆಯ ಪೂರ್ಣ ಪಲ್ಲಟವೇ ಎಲ್ಲಕ್ಕೂ ಮೂಲವಾಗುತ್ತದೆ. ಮಾನವಜಗತ್ತು ಶತಮಾನಗಳಿಂದ ನಿರೀಕ್ಷಿಸುತ್ತಿದ್ದ ಕ್ಷಣವು ಆಗ ಉದಯಿಸುತ್ತದೆ.” ಮನುಷ್ಯನು ವಿಕಾಸಪ್ರಕ್ರಿಯೆಯ ಅಂತಿಮ ಬಿಂದುವಲ್ಲ. ನಮ್ಮ ಗುರಿಯಿರುವುದು ಉತ್ತುಂಗಪ್ರಜ್ಞೆಯ ಎತ್ತರಕ್ಕೂ ವಿಕಸಿಸುವುದು; ಜೀವನವನ್ನು ದೈವಿಕ ಪ್ರಜ್ಞೆಯ ಅವತಾರವೆನಿಸುವುದು. ಇದುವೆ ಅರವಿಂದ ಪ್ರಜ್ಞೆ.