ಪ್ರವಾಸ ಕಥನ
ಮಹರ್ಷಿ ಅರವಿಂದರ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ 15ರಿಂದ ಅವರ ತಪೋನುಷ್ಠಾನದಿಂದ ಪುನೀತವಾದ ಪುಣ್ಯಭೂಮಿ ಪುದುಚೇರಿಯ ಅರವಿಂದೊ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮಗಳು ಸಪ್ತಾಹಪೂರ್ತಿ ಏರ್ಪಾಡಾಗಿದ್ದವು. ಮಹರ್ಷಿ ಅರವಿಂದರು 21 ವರ್ಷಗಳ ಕಾಲ ಕರ್ಮಸಿದ್ಧಾಂತ ಬೋಧಿಸಿದ ಮತ್ತು ಅಧ್ಯಾತ್ಮ ಸಾಧನೆಗೈದ ಶ್ರಮದÀ ಸಾಧನಾ ಕೊಠಡಿಯನ್ನು ಸಂದರ್ಶಕರಿಗಾಗಿ ತೆರೆದಿರಿಸಲಾಗಿತ್ತು. ಪ್ರಥಮ ಬಾರಿಗೆ ಪಾಂಡಿಚೇರಿಗೆ ಬಂದಾಗ ಅರವಿಂದರು 4.6 ತಿಂಗಳು ಉಳಿದುಕೊಂಡ ಶಂಕರಚೆಟ್ಟಿ ಅವರ ಮನೆ ಸೇರಿ, 40 ವರ್ಷಗಳಲ್ಲಿ 7 ನಿವಾಸಗಳನ್ನು ಬದಲಿಸುತ್ತಾರೆ. ಎಲ್ಲವೂ ಶ್ರದ್ಧಾಳುಗಳಿಗೆ ಪ್ರೇರಣಾಸ್ರೋತಗಳೇ.
ಶ್ರದ್ಧೆಯ ಜೀವಂತ ಸಶರೀರ ರೂಪವೇ ಮೈವೆತ್ತಂತೆ ನಾವು ಅನುಭವಿಸಬಹುದಾದ ಹಾಗೆ, ಮಹರ್ಷಿ ಅರವಿಂದರ ಹಾಗೂ ಶ್ರೀಮಾತೆಯ ಆಶ್ರಮ, ಪಾಂಡಿಚೇರಿ. ಭಾವಪರವಶರಾಗಬಹುದಾದ ವಾತಾವರಣ. ಸಿದ್ಧ-ಸಾಧಕರ ತಪಸ್ಸಿದ್ಧಿಯ ಸ್ಥಳ.
ಪುದುಚೇರಿ: ಮಾನನೀಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಪ್ರಸ್ತುತ ‘ಇಂಡಿಯಾ@75’, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ವರ್ಷಪೂರ್ತಿ ಅರ್ಥಪೂರ್ಣವಾಗಿ ಆಚರಿಸುವ ಮಹೋದ್ದೇಶದಿಂದ, ತ್ಯಾಗ, ಬಲಿದಾನ ಮತ್ತು ಸರ್ವಸ್ವವನ್ನೂ ಪಣಕ್ಕೊಡ್ಡಿ ನಮ್ಮ ಹಿರಿಯರು ಗಳಿಸಿದ ಸ್ವಾತಂತ್ರ್ಯದ ಸಂಸ್ಮರಣೆಯ ಪ್ರೇರಣಾದಾಯಿ ಘಳಿಗೆ ಎಂದು ಬಣ್ಣಿಸಿದ್ದು ದೇಶಭಕ್ತರಿಗೆಲ್ಲ ಪುಳಕ ತಂದಿದೆ.
ಸೂರ್ಯ ಮುಳುಗದ ಬ್ರಿಟಿಷ್ ಚಕ್ರಾಧಿಪತ್ಯದ ವಿರುದ್ಧದ ನಿರ್ಣಾಯಕ ಹೋರಾಟಕ್ಕೆ ಪ್ರೇರಣೆ ನೀಡಿದ ಯಾತ್ರಾಸ್ಥಳವೊಂದನ್ನು ದರ್ಶಿಸುವುದನ್ನು ಕುರಿತು, ಆಕಾಶವಾಣಿಯ ‘ಮನ್ ಕೀ ಬಾತ್’ನಲ್ಲಿ ಪ್ರಧಾನಮಂತ್ರಿಯವರು ವಿಶೇಷವಾಗಿ ಉಲ್ಲೇಖಿಸಿದ್ದರು. ಪ್ರತಿಯೊಬ್ಬ ಭಾರತೀಯನೂ ಸ್ವಾತಂತ್ರ್ಯ ಸೇನಾನಿಯ ಗೌರವಾರ್ಥ ಈ ಪ್ರವಾಸ ಕೈಗೊಳ್ಳಬೇಕು ಎಂದು ಆಶಿಸಿದ್ದರು.
ಮಹಾತ್ಮ ಗಾಂಧಿ ಕರೆ ನೀಡಿದ, ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಕ್ವಿಟ್ ಇಂಡಿಯಾ ಚಳವಳಿಯ 80ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಅರವಿಂದ ಘೋಷ್ ಅವರ ಕರ್ಮಭೂಮಿ ಪುದುಚೇರಿಗೆ ಭೇಟಿ ನೀಡುವ ಸಂಕಲ್ಪ ನಮ್ಮದಾಗಿತ್ತು. ಧಾರವಾಡದ ಅರವಿಂದೋ ಹಾಗೂ ಮದರ್ ಆಶ್ರಮದ ಪದಾಧಿಕಾರಿಗಳು ಈ ಸಂಕಲ್ಪಕ್ಕೆ ಪ್ರೇರಣೆ ನೀಡಿ, ಜೊತೆಯಾಗಿದ್ದು ವಿಶೇಷ.
ಮಹರ್ಷಿ ಅರವಿಂದರ 150ನೇ ಜನ್ಮದಿನ
ಮಹರ್ಷಿ ಅರವಿಂದರ 150ನೇ ಜನ್ಮದಿನದ ಹಿನ್ನೆಲೆ, ಕಳೆದ ಆಗಸ್ಟ್ 15ರಿಂದ ಅವರ ತಪೋನುಷ್ಠಾನದಿಂದ ಪುನೀತವಾದ ಪುಣ್ಯಭೂಮಿ ಪುದುಚೇರಿಯ ಅರವಿಂದೊ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮಗಳು ಸಪ್ತಾಹಪೂರ್ತಿ ಏರ್ಪಾಡಾಗಿದ್ದವು.
ಮಹರ್ಷಿ ಅರವಿಂದರು 21 ವರ್ಷಗಳ ಕಾಲ ಕರ್ಮಸಿದ್ಧಾಂತ ಬೋಧಿಸಿದ ಮತ್ತು ಅಧ್ಯಾತ್ಮ ಸಾಧನೆಗೈದ ಶ್ರಮದÀ ಸಾಧನಾ ಕೊಠಡಿಯನ್ನು ಸಂದರ್ಶಕರಿಗಾಗಿ ತೆರೆದಿರಿಸಲಾಗಿತ್ತು. ಪ್ರಥಮ ಬಾರಿಗೆ ಪಾಂಡಿಚೇರಿಗೆ ಬಂದಾಗ ಅರವಿಂದರು 4.6 ತಿಂಗಳು ಉಳಿದುಕೊಂಡ ಶಂಕರಚೆಟ್ಟಿ ಅವರ ಮನೆ ಸೇರಿ, 40 ವರ್ಷಗಳಲ್ಲಿ 7 ನಿವಾಸಗಳನ್ನು ಬದಲಿಸುತ್ತಾರೆ. ಎಲ್ಲವೂ ಶ್ರದ್ಧಾಳುಗಳಿಗೆ ಪ್ರೇರಣಾಸ್ರೋತಗಳೇ.
ಸಂಪೂರ್ಣ ಪುದುಚೇರಿ ಪುಷ್ಪ ಹಾಗೂ ದೀಪದ ಅಲಂಕಾರದಲ್ಲಿ ಪ್ರಜ್ವಲಿತಗೊಂಡಿತ್ತು. ಲಕ್ಷಾಂತರ ಭಕ್ತಾದಿಗಳು, ಅರವಿಂದರ ಹಾಗೂ ಶ್ರೀಮಾತೆಯವರ ದರ್ಶನ ಪಡೆದರು. ಪಾಂಡಿಚೇರಿಯಲ್ಲಿ ಹಬ್ಬದ ವಾತಾವರಣ. ಸಡಗರ. ಆದರೆ ನಿಶ್ಶಬ್ದ!
ಶ್ರದ್ಧೆ ಎಂದರೇನು?
ಶ್ರದ್ಧೆಯ ಜೀವಂತ ಸಶರೀರ ರೂಪವೇ ಮೈವೆತ್ತಂತೆ ನಾವು ಅನುಭವಿಸಬಹುದಾದ ಹಾಗೆ, ಮಹರ್ಷಿ ಅರವಿಂದರ ಹಾಗೂ ಶ್ರೀಮಾತೆಯ ಆಶ್ರಮ, ಪಾಂಡಿಚೇರಿ. ಭಾವಪರವಶರಾಗಬಹುದಾದ ವಾತಾವರಣ. ಸಿದ್ಧ-ಸಾಧಕರ ತಪಸ್ಸಿದ್ಧಿಯ ಸ್ಥಳ.
ಮಹರ್ಷಿ ಅರವಿಂದರು ಪ್ರಾತಃಸ್ಮರಣೀಯ ಅಗಸ್ತ್ಯ ಮಹರ್ಷಿಗಳ ಅವತಾರವೆನ್ನುತ್ತಾರೆ. ಹೀಗಾಗಿ, ಅಗಸ್ತ್ಯ ಋಷಿಗಳು ಯಜ್ಞ ಮತ್ತು ಯಾಗಾದಿಗಳನ್ನು ಕೈಗೊಂಡ ಪವಿತ್ರ ಸ್ಥಳದಲ್ಲಿ ಇಂದು, ಉಭಯ ಪೂಜ್ಯರ ಸನ್ನಿಧಿಗಳಿವೆ. ಸದೈವ ನೆರಳಾಗಿ ‘ಸರ್ವಿಸ್ ಟ್ರೀ’ ಇದೆ.
‘ಸಂಪೂರ್ಣ ಸ್ವರಾಜ್ಯ’ ಕ್ರಾಂತಿಯ ಕಿಡಿ ಅರವಿಂದರು
ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿಗಳ ಧೀರ ಪಡೆ ಕಟ್ಟಿ, ‘ಸಂಪೂರ್ಣ ಸ್ವರಾಜ್ಯ’ದ ಕರೆಕೊಟ್ಟ ಪ್ರಥಮ ಸ್ವಾತಂತ್ರ್ಯ ಸೇನಾನಿ ಅರವಿಂದೋ ಘೋಷ್ ಅವರು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ, ಕೋಲ್ಕತಾದ ಅಲಿಪುರ ಬಾಂಬ್ ವಿಸ್ಫೋಟ ಪ್ರಕರಣದ ಪ್ರಥಮ ಆರೋಪಿಯಾಗಿ ಹೆಸರಿಸಲ್ಪಟ್ಟವರು ಅರವಿಂದರು. ಖ್ಯಾತ ಬ್ಯಾರಿಸ್ಟರ್ ದೇಶಬಂಧು ಉಪಾಧಿ ಭೂಷಿತರಾದ ಚಿತ್ತರಂಜನ್ ದಾಸ್ ವಾದಿಸಿದ ಆ ಐತಿಹಾಸಿಕ ಪ್ರಕರಣದಲ್ಲಿ, ನ್ಯಾಯ ತೀರ್ಮಾನವಾಗುವ ಮೊದಲೇ ಭರ್ತಿ ಒಂದು ವರ್ಷ ಕಠಿಣ ಶಿಕ್ಷೆ ಅನುಭವಿಸಿದ್ದ ಸ್ವಾತಂತ್ರ್ಯಯೋಧ ಅರವಿಂದೋ ಘೋಷ್.
ಕೋಲ್ಕತಾದ ಅಲಿಪುರದಲ್ಲಿ ಅಂದು ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾಗಿದ್ದ ಐ.ಸಿ.ಎಸ್. ಅಧಿಕಾರಿ ಸಿ.ಪಿ. ಬೀಚ್ಕ್ರಾಫ್ಟ್ ಪ್ರಕರಣದ ವಿಚಾರಣೆ ನಡೆಸುತ್ತಾರೆ. 19 ಅಕ್ಟೋಬರ್ 1908ರಿಂದ 14 ಏಪ್ರಿಲ್ 1909ರವರೆಗೆ ಸುದೀರ್ಘ ವಿಚಾರಣೆ ನಡೆಯುತ್ತದೆ. ನ್ಯಾಯ ತೀರ್ಮಾನವಾಗಿದ್ದು 6 ಮೇ 1909. ಈ ಪ್ರಕರಣದಲ್ಲಿ ದೋಷಾರೋಪಣೆ ಹೊತ್ತವರ ಸಂಖ್ಯೆ ಒಟ್ಟು 35.
ಆರೋಪಿ ಸಂ. 18 ಬಾರೀಂದ್ರ ಕುಮಾರ್ ಘೋಷ್ ಹಾಗೂ ಆರೋಪಿ ಸಂ. 19 ಉಲ್ಲಾಸ್ಕರ್ ದತ್ತ ಗಲ್ಲುಶಿಕ್ಷೆಗೆ ಒಳಗಾದರು, ಬಳಿಕ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಯಿತು. ಆರೋಪಿ ಸಂ. 1 ಅರವಿಂದೋ ಘೋಷ್ ಹಾಗೂ 17 ಜನ ಇತರ ಕ್ರಾಂತಿಕಾರಿಗಳನ್ನು ನ್ಯಾಯಾಲಯ ಪ್ರಕರಣದಿಂದ ಖುಲಾಸೆಗೊಳಿಸಿತು. ಬಾಕಿ 18 ಜನ ದೇಶದ ವಿವಿಧ ಕಾರಾಗೃಹಗಳಲ್ಲಿ ಕಠಿಣ ಶಿಕ್ಷೆಗೆ ಗುರಿಯಾದರು.
ಇಲ್ಲಿ ಓದಿ :
ಡಾ. ಶಿಶಿರ್ಕುಮಾರ್ ಘೋಷ್ ಅನುವಾದಿಸಿದ, ಅರವಿಂದರ ‘ಟೇಲ್ಸ್ ಆಫ್ ಪ್ರಿಸನ್ ಲೈಫ್’ ನಾವೆಲ್ಲ ಓದಲೇಬೇಕಾದ ಪುಸ್ತಕ, ಪಠ್ಯವಾಗಬೇಕಾದ ಪುಸ್ತಕ. ಇದು ಅರವಿಂದರು ‘ಕಾರ-ಕಹಾನಿ’ ಎಂದು, ಬಂಗಾಳಿ ಭಾಷೆಯಲ್ಲಿ ‘ಸುಪ್ರಭಾತ’ ಪತ್ರಿಕೆಗೆ ಬರೆದ ಅಂಕಣಗಳ ಇಂಗ್ಲಿಷ್ ಅನುವಾದ. ‘ದ ಉತ್ತರಪಾರಾ ಸ್ಪೀಚ್’ ಮತ್ತು ‘ಇನ್ವಿಟೇಷನ್’ ಎಂಬ ಕವಿತೆ ಅರವಿಂದರು ಇಂಗ್ಲಿಷ್ನಲ್ಲೇ ಬರೆದದ್ದನ್ನು ಪುಸ್ತಕದಲ್ಲಿ ಯಥಾವತ್ ಬಳಸಲಾಗಿದೆ. ‘ಪ್ರಿಸನ್ ಆಂಡ್ ಲೈಫ್’ ಹಾಗೂ ಮಹತ್ತ್ವದ ಕೃತಿ ‘ಸಾವಿತ್ರಿ’ ಜನ್ಮತಳೆದದ್ದೂ ಈ ಜೈಲುವಾಸದ ಸಂದರ್ಭದಲ್ಲೇ.
‘ಮಾತಾ’; ವರಕವಿ ದ.ರಾ. ಬೇಂದ್ರೆ
ಅವಧೂತ ಪ್ರಜ್ಞೆಯ ವರಕವಿ ಧಾರವಾಡದ ದ.ರಾ. ಬೇಂದ್ರೆ ಆಶ್ರಮದ ಅನುಯಾಯಿ ಮತ್ತು ಉಭಯರ ಉಪಾಸಕರಾಗಿದ್ದರು. ವಿಶೇಷವೆಂದರೆ, ವರಕವಿಗೆ ಚಿಕ್ಕಪ್ಪ ನೀಡಿದ ಸಾಧನಕೇರಿಯ ಉಡುಗೊರೆ ಮನೆಯ ಹೆಸರು ‘ಮಾತಾ’. ‘ಅಂಬಿಕಾತನಯದತ್ತÀ’ ಕಾವ್ಯನಾಮದ ಕವಿ ಬೇಂದ್ರೆ ಅವರ ಶ್ರೀನಿವಾಸದಲ್ಲಿ ಮದರ್ ಉಟ್ಟ ಸೀರೆಯನ್ನು ದತ್ತರ ಜಗುಲಿಯ ಮೇಲಿರಿಸಿ, ಇಂದಿಗೂ ಪೂಜಿಸಲಾಗುತ್ತದೆ. ಹೀಗಾಗಿ ಧಾರವಾಡಕ್ಕೂ ಪುದುಚೇರಿಗೂ ಕರುಳ ಸಂಬಂಧವಿದೆ.
ಸ್ವತಃ ಮಹರ್ಷಿ ಅರವಿಂದರು ಬರೆದ ‘ದ ಮದರ್’ ಪುಸ್ತಕದಲ್ಲಿ, ಮಾತಾ ಅವರು ಮಹೇಶ್ವರಿ, ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ರೂಪ ಎಂದು ಉಲ್ಲೇಖಿಸಿದ್ದಾರೆ. ‘ಸಿದ್ಧಿ ದಿನ’ದ ಬಳಿಕ ಮಹರ್ಷಿ ಅರವಿಂದರು ತಮ್ಮ ಕರ್ಮಯೋಗ ಸಾಧನೆಗಾಗಿ, ಇಹದ ವ್ಯಾಪಾರಗಳಿಂದ ಸಂಪೂರ್ಣ ಮುಕ್ತಿ ಪಡೆಯುತ್ತಾರೆ. ಆಶ್ರಮದ ಸಕಲ ಜವಾಬ್ದಾರಿಗಳೂ ಶ್ರೀಮಾತೆಯ ಹೆಗಲೇರುತ್ತವೆ. ಅರವಿಂದರ ಕ್ರಾಂತಿಕಾರಿ ಅನುಯಾಯಿಗಳಲ್ಲಿ ಈ ನಡೆ ಗೊಂದಲಕ್ಕೆ ಕಾರಣವಾಗುತ್ತದೆ. ಉತ್ತರ ರೂಪದಲ್ಲಿ ಬರೆದ ಕೃತಿ ‘ದ ಮದರ್’.
ಮಹರ್ಷಿ ಅರವಿಂದರ 150ನೇ ಜನ್ಮದಿನಾಚರಣೆಯ ಪಾವನ ಪರ್ವದ ಹಿನ್ನೆಲೆ, ಈ ತೀರ್ಥಕ್ಷೇತ್ರಕ್ಕೆ ನಮ್ಮ ಭೇಟಿಯ ಸಂಕಲ್ಪ ಇಷ್ಟಾರ್ಥ ಸಿದ್ಧಿಯಂತಿತ್ತು. ಅರವಿಂದರು ಪಾಂಡಿಚೇರಿಗೆ ಆಗಮಿಸಿ 40 ವರ್ಷ ಅಧ್ಯಾತ್ಮ ಸಾಧನೆಯಲ್ಲಿ ತೊಡಗಿಕೊಂಡರು. 7 ವಾಸ್ತವ್ಯಗಳನ್ನು ಅವರು ಬದಲಿಸಿದರು. ಪ್ರಥಮ ನಿವಾಸ ಶಂಕರಚೆಟ್ಟಿ ಅವರ ಮನೆ 4.6 ವರ್ಷಗಳು, 6ನೇ ನಿವಾಸ ಫಿಲ್ಯಾಟಲಿ ಹೌಸ್ 6.6 ವರ್ಷಗಳು ಹಾಗೂ ಕೊನೆಯದಾಗಿ 21 ವರ್ಷಗಳು ಸಾಧನಾ ನಿರತರಾಗಿದ್ದ, ಆಶ್ರಮದ 7ನೇ ನಿವಾಸ ವೀಕ್ಷಿಸುವ ಸೌಭಾಗ್ಯ ನಮ್ಮದಾಗಿತ್ತು.
ಲಕ್ಷಾಂತರ ಭಕ್ತಾದಿಗಳು, ಸಹಸ್ರಾರು ಆಶ್ರಮವಾಸಿಗಳು, ಅನುಯಾಯಿಗಳು, ಪ್ರವಾಸಿಗರು. ಅಚ್ಚುಕಟ್ಟಾದ ವ್ಯವಸ್ಥೆ, ಗೌಜಿ-ಗದ್ದಲಕ್ಕೆ ಆಸ್ಪದವಿಲ್ಲ. ಶಾಂತವಾದ ಸರತಿ.
ಬೆಳಗ್ಗೆ 4 ಗಂಟೆಗೆ ಸರತಿಯಲ್ಲಿ ನಿಂತು ಪಾಸ್ ಪಡೆದಾಗ 5.30. ಮಾಸ್ ಮೆಡಿಟೇಶನ್ಗೆ ಸಿದ್ಧರಾಗಿ ಆಶ್ರಮ ತಲಪಿದಾಗ, ಸೂಜಿ ಬಿದ್ದರೂ ಸಪ್ಪಳವಾಗುವಷ್ಟು ನಿಶ್ಶಬ್ದತೆ. ಬೆಳಗ್ಗೆ 6ರಿಂದ 6.45. ನಮಗೆ ಪೂಜ್ಯರು ತಪಸ್ಸುಗೈದ ನಿವಾಸ ದರ್ಶಿಸುವ ಅವಕಾಶ ಸಿಕ್ಕಿದ್ದು, ಬೆಳಗ್ಗೆ 8.30ರಿಂದ 9ರ ಒಳಗೆ.
ಈ ಮಧ್ಯೆ ಉಪಾಹಾರ ಮುಗಿಸಿ, ಸರ್ವಿಸ್ಗೆ ಹೊರಟೆವು. ಭಕ್ತಾದಿಗಳ ಫಲಾಹಾರದ ತಾಟು, ಲೋಟ, ಚಮಚ ಮತ್ತು ದೊನ್ನೆ ಸ್ವೀಕರಿಸಿ, ತೊಳೆಯುವ ಕೆಲಸ ಮಾಡಿದೆವು. ಪ್ರೀತಿಯಿಂದ 80 ವರ್ಷದ ಮೇಲುಸ್ತುವಾರಿ ಗಂಗಾ ದೀದಿ, ಯುವ ಬಾಲು ದಾ ಅವರು ಪ್ರಸಾದವಾಗಿ ಉಂಡೆ ಮತ್ತು ಎರಡು ಚಾಕೊಲೇಟ್ ಕೊಟ್ಟು ಹರಸಿದರು.
ಅರ್ಧ ಗಂಟೆಯ ಸರತಿ ಸಾಲಿನ ಬಳಿಕ, ಪೂಜ್ಯರ ಸಾಧನೆಯ ಕೋಣೆ ದರ್ಶಿಸುವ ಅವಕಾಶ ಲಭಿಸಿತು. ಎರಡು ಕಣ್ಣುಗಳೂ ಸಾಲಲಿಲ್ಲ. ಭಾವಪರವಶರಾದೆವು. ಶಾಂತ ವಾತಾವರಣ ಮನವನ್ನರಳಿಸಿತು. ಪೂಜ್ಯರ 150ನೇ ಹುಟ್ಟುಹಬ್ಬದ ಸುಸಂದರ್ಭದಲ್ಲಿ, ಅವರ ಸ್ವ-ಹಸ್ತಾಕ್ಷರ ಮತ್ತು ಶುಭಾಶಯ ಒಳಗೊಂಡ ಸ್ಮೃತಿಚಿಹ್ನೆ ನೀಡಿ, ಸ್ವಯಂಸೇವಕರು ಆಶೀರ್ವದಿಸಿದರು.
ಇಡೀ ವ್ಯವಸ್ಥೆ 75ರಿಂದ 90 ವರ್ಷದೊಳಗಿನ ಹಿರಿಯ ಕ್ಯಾಪ್ಟನ್ಗಳು ವಹಿಸಿದ್ದು ವಿಶೇಷ! ಶ್ರೀಮಾತೆಯವರನ್ನು ನೋಡಿದ ಅನೇಕರು ಅಲ್ಲಿದ್ದರು.
ಪುದುಚೇರಿಗೆ ಭೇಟಿ ನೀಡುವವರು ಗಮನಿಸಿ
ಕರ್ನಾಟಕ ನಿಲಯಂನಲ್ಲಿ ಕೊಠಡಿ ಮೊದಲೇ ಕಾಯ್ದಿರಿಸಬೇಕಿತ್ತು. ಅರವಿಂದರ ಆಶ್ರಮದ ‘ಬ್ಯುರೋ ಸೆಂಟ್ರಲ್’ಗೆ ಭೇಟಿ ಕೊಟ್ಟು, ದರ್ಶನಾರ್ಥಿಗಳ ಉಚಿತ ಪಾಸ್ ಪಡೆದರಾಯಿತು. ಇಲ್ಲಿ ಆಶ್ರಮದ ಕುರಿತು ಪ್ರಾಥಮಿಕ ಮಾಹಿತಿ, ಪುದುಚೇರಿ ಬಗ್ಗೆ ‘ಟ್ರಾವೆಲ್ಲರ್ಸ್ ಗೈಡ್’, ಜೊತೆಗೆ ಉಭಯ ಪೂಜ್ಯರ ಕುರಿತ ಸಾಕ್ಷ್ಯಚಿತ್ರಗಳ ಪ್ರದರ್ಶಿನಿ ವೀಕ್ಷಿಸಲು, ಪುಟ್ಟ ಆಂಫಿ ಥಿಯೇಟರ್ ಇದೆ. ಅರವಿಂದರು ಹಾಗೂ ಮದರ್ ಉಕ್ತಿಗಳನ್ನು ಪ್ರದರ್ಶಿಸಲಾಗಿದೆ. ಧ್ಯಾನಕ್ಕೂ ಅವಕಾಶ ಕಲ್ಪಿಸಲಾಗಿದೆ.
‘ಬ್ಯುರೋ ಸೆಂಟ್ರಲ್’ದಿಂದ ಪಡೆದ ಉಚಿತ ಪಾಸ್ ಆಧಾರದಲ್ಲಿ, ಆಶ್ರಮದ ಎಲ್ಲ ಅಂಗಸಂಸ್ಥೆಗಳಿಗೆ ಭೇಟಿ ಮತ್ತು ಉಪಾಹಾರ, ಪ್ರಸಾದ. ಎಲ್ಲವೂ ಉಚಿತವಾಗಿಯೇ ವ್ಯವಸ್ಥೆಗೊಳಿಸಲಾಗಿತ್ತು. ಲಕ್ಷಾಂತರ ಭಕ್ತಾದಿಗಳು ಪಾಲ್ಗೊಂಡ ಈ ಉತ್ಸವದಲ್ಲಿ, ಚೂರೂ ಧಾವಂತವಿರದಂತೆ ಆಶ್ರಮದ ಸ್ವಯಂಸೇವಕರು ಸಕಲ ವ್ಯವಸ್ಥೆ ಕೈಗೊಂಡಿದ್ದರು.
ಲಕ್ಷಾಂತರ ಭsಕ್ತಾದಿಗಳಿಗೆ ಊಟೋಪಚಾರಕ್ಕೆ ಅನುವಾಗಲು, ಆಶ್ರಮದ ಸ್ವಂತದ ಕಾರ್ಖಾನೆಯಲ್ಲಿ ತಾಟು, ಲೋಟ ಮತ್ತು ದೊನ್ನೆ ತಯಾರಿಸಲಾಗುತ್ತದೆ. ರಿಪೇರಿ ಕೂಡ ಮಾಡಲಾಗುತ್ತದೆ.
ಆಶ್ರಮದ ಪ್ರಸಾದಕ್ಕೆ ಬೇಕಾಗುವ ಕಾಯಿಪಲ್ಯ, ಹಣ್ಣು ಮತ್ತು ಧಾನ್ಯ ಹೊಲ-ತೋಟಗಳಲ್ಲಿ ಸ್ವಯಂಸೇವಕರೇ ಆಸಕ್ತಿಯಿಂದ ಬೆಳೆದು ಪೂರೈಸುತ್ತಾರೆ. ಸ್ವಾವಲಂಬಿ ವ್ಯವಸ್ಥೆ ಇಲ್ಲಿ ಮೈವೆತ್ತಂತಿದೆ. ಆಶ್ರಮದ ಆಕಳುಗಳು ಮತ್ತು ಹೈನುಗಾರಿಕೆ ವೈಜ್ಞಾನಿಕವಾಗಿದೆ. ಎಲ್ಲ ಭಕ್ತಾದಿಗಳಿಗೂ ಅರ್ಧ ಲೀಟರ್ನಷ್ಟು ಹಾಲು ಅಥವಾ ಮೊಸರನ್ನು ಮೂರುಹೊತ್ತು ಪೂರೈಸುವಷ್ಟು ಸ್ವಾವಲಂಬಿ ಗೋಶಾಲೆ ಇದೆ.
ಮದರ್ ದೂರದೃಷ್ಟಿ ಹಾಗೂ ಆಶ್ರಮದ ಅನುಯಾಯಿ, ಏರೋನಾಟಿಕಲ್ ಎಂಜಿನಿಯರ್ ಉದಾರ್ ಪಿಂಟೋ ಅವರ ಕರ್ತೃತ್ವ ಶಕ್ತಿಗೆ ಸಾಕ್ಷಿಯಾಗಿ ನಿಂತ, ಪೂಜ್ಯರ ಸನ್ನಿಧಿ. ಸಮಾಧಿ ಸ್ಥಳಕ್ಕೆ ಅರ್ಪಿತವಾಗುವ ಪುಷ್ಪಗಳನ್ನು, ಉಭಯ ಪೂಜ್ಯರ ‘ಆಶೀರ್ವಾದ’ದ ರೂಪದಲ್ಲಿ, ಒಣಗಿಸಿ ಕೈಯಿಂದ ರೂಪಿಸಲಾದ ಬೀಜದ ಹಾಳೆಗಳಿಗೆ ಅಂಟಿಸಿ, ಪೇಜ್ ಮತ್ತು ಪೇಪರ್ ಮಾರ್ಕರ್ ತಯಾರಾಗುವ, ಹ್ಯಾಂಡ್ ಮೇಡ್ ಪೇಪರ್ ವರ್ಕ್ಶಾಪ್ ನೀವು ನೋಡಬೇಕು.
ಆಶ್ರಮದ ಸಾವಿರಾರು ಸ್ವಯಂಸೇವಕರು ಸಂಚಾರಕ್ಕೆ ಸೈಕಲ್ ಬಳಸುತ್ತಾರೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ, ಆಶ್ರಮದ ಶಾಲೆಯಿಂದಲೇ ತರಬೇತಿ ನೀಡಿ, ‘ಲೈಸೆನ್ಸ್’ ನೀಡುವ ವಿಶಿಷ್ಟ ಪದ್ಧತಿ ಇದೆ. ಆಶ್ರಮದ ಸ್ವಂತ ಸೈಕಲ್ ವರ್ಕ್ಶಾಪ್ನಲ್ಲಿ ವಿವಿಧ ಗಾತ್ರ ಹಾಗೂ ನಮೂನೆಯ ಸೈಕಲ್ ತಯಾರಾಗುವುದು ವಿಶೇಷ.
ಆಶ್ರಮದ ಸನ್ನಿಧಿ ಮತ್ತು ಸರ್ವಿಸ್ ಟ್ರೀ ಎದುರಿನ ಮೇಲ್ಮಾಳಿಗೆಯಲ್ಲಿ, ಕಳೆದ 75 ವರ್ಷಗಳ ಅಂಚೆಚೀಟಿ ಮತ್ತು ನಾಣ್ಯಗಳ ಸಂಗ್ರಹಾಲಯ ವಿಶಿಷ್ಟವಾಗಿದೆ. ಇಲ್ಲಿ ಅರವಿಂದರು 6.6 ವರ್ಷಗಳ ಕಾಲ ಸಾಧನೆಗೈದಿದ್ದಾರೆ. ಕ್ಯುರೇಟರ್ ಹರೇಂದ್ರ ಕುಮಾರ್ ದಾ, ತುಂಬ ಕಾಳಜಿ ಹಾಗೂ ಮುತುವರ್ಜಿಯಿಂದ ‘ಫಿಲ್ಯಾಟಲಿ’ ಆಂಡ್ ‘ಕಾಯಿನ್’ ಪ್ರದರ್ಶಿನಿ ಏರ್ಪಡಿಸುತ್ತ ಬಂದಿದ್ದಾರೆ. ಈ ಕಲೆಕ್ಷನ್ ವೀಕ್ಷಿಸಲು ಕನಿಷ್ಠ ಎರಡು ದಿನಗಳಾದರೂ ಬೇಕು. ಮದರ್ ಅಪೇಕ್ಷೆಯ ಮೇರೆಗೆ 125ಕ್ಕೂ ಹೆಚ್ಚು ರಾಷ್ಟ್ರಗಳ ಸಂಗ್ರಹ ಮಕ್ಕಳಿಗಾಗಿಯೇ ನಿರ್ವಹಿಸಲಾಗುತ್ತಿದೆ.
ಅರವಿಂದರ ‘ದ ಟೇಲ್ಸ್ ಆಫ್ ಪ್ರಿಸನ್ ಲೈಫ್’, ಉದಾರ್ ಪಿಂಟೋ ಅವರ ‘ಉದಾರ್’ ಸೇರಿದಂತೆ, ಸಾವಿರಕ್ಕೂ ಹೆಚ್ಚು ಪುಸ್ತಕಗಳ ಭಂಡಾರ ಮತ್ತು ಛಾಯಾಚಿತ್ರಗಳ ಸಂಗ್ರಹ ‘ಸಬ್ದ’. ಕೇವಲ ಕಣ್ಣಾಡಿಸಲು ಇಡೀ ದಿನ ಬೇಕಾಗುವ ಪ್ರಸಾರಾಂಗವು ಆಶ್ರಮದಿಂದ ಅನತಿ ದೂರದಲ್ಲಿದೆ.
ಪುದುಚೇರಿ ಕಡಲ ತೀರದಲ್ಲಿದೆ ಅರವಿಂದ ಗ್ರಂಥಾಲಯ. ಲಕ್ಷಾಂತರ ಪುಸ್ತಕಗಳನ್ನು ಜ್ಞಾನಪಿಪಾಸುಗಳಿಗಾಗಿ ಇಲ್ಲಿ ಸಂಗ್ರಹಿಸಿಡಲಾಗಿದೆ. ಸಾವಿರಾರು ಜನ ಕುಳಿತು ಓದಬಹುದಾದ ಅದ್ಭುತ ಹೊರಾಂಗಣ. ಬೆಳಕು, ಕುಡಿಯುವ ನೀರು ಮತ್ತು ಅಚ್ಚುಕಟ್ಟಾದ ಕ್ಯಾಟ್ಲಾಗ್ ವ್ಯವಸ್ಥೆ ಸಮ್ಮೋಹನಗೊಳಿಸುವಂಥದ್ದು.
ಆಶ್ರಮದ ಶಾಲೆ, ಕಾಲೇಜು ಮತ್ತು ಮಹಾವಿದ್ಯಾಲಯಕ್ಕೆ ಭೇಟಿ ನೀಡುವುದನ್ನು ಮರೆಯಬಾರದು. ಬೋಧನಾ ಮಾಧ್ಯಮ ‘ಫ್ರೆಂಚ್’. ಶಿಕ್ಷಕರನ್ನು ದಾದಾ ಮತ್ತು ದೀದೀ ಎಂದು ಕರೆಯಲಾಗುತ್ತದೆ. ಪಠ್ಯದಷ್ಟೇ, ಪಠ್ಯೇತರ ಚಟುವಟಿಕೆಗೂ ಇಲ್ಲಿ ಒತ್ತು ನೀಡಲಾಗಿದೆ. ಕನ್ನಡ ಭಾಷೆಯ ಶಿಕ್ಷಕರೂ ಇದ್ದಾರೆ. ಭೇಟಿಗೆ ಪೂರ್ವಾನುಮತಿ ಅಗತ್ಯ.
ಆಶ್ರಮದ ಆರ್ಥಿಕ ಚಟುವಟಿಕೆಗಳ ಉತ್ತೇಜನಕ್ಕಾಗಿ, ಇರುವ ಆಯುರ್ವೇದ ಔಷಧಿ, ಸುಗಂಧದ್ರವ್ಯಗಳ ತಯಾರಿಕೆ, ಗ್ರಾಮೋದ್ಯೋಗ ಚಟುವಟಿಕೆ ಮೂಲಕ ಕರಕುಶಲ ವಸ್ತುಗಳ ತಯಾರಿಕೆ ಮತ್ತು ಮಾರಾಟ, ವಿಶಿಷ್ಟವಾದ ಪುದುಚೇರಿ ಪಾದರಕ್ಷೆಗಳ ಚರ್ಮೋದ್ಯಮ ಸಹ ನಾವು ನೋಡಬೇಕು.
ಪುದುಚೇರಿಯಿಂದ ಕೇವಲ 15 ಕಿ.ಮೀ. ದೂರದಲ್ಲಿದೆ, ಮ್ಯಾನ್ಗ್ರೋವ್ ಅರಣ್ಯ. 5.5 ಕಿ.ಮೀ. ಉದ್ದದ ಕ್ರೀಕ್ ಬೋಟಿಂಗ್. ತಮಿಳುನಾಡಿಗೆ ಸುನಾಮಿ ಅಪ್ಪಳಿಸಿದಾಗ, ಹೆಚ್ಚಿನ ಅನಾಹುತವಾಗದಂತೆ ತಡೆದು ನಿಲ್ಲಿಸಿದ, ನೈಸರ್ಗಿಕ ತಡೆಗೋಡೆ! ಮತ್ತು ವಲಸೆ ಪಕ್ಷಿಗಳ ವೀಕ್ಷಣೆ ಇಲ್ಲಿ ಸಾಧ್ಯ.
ವಾರಾಂತ್ಯದಲ್ಲಿ ಅರವಿಂದೋ ಸೊಸಾಯಿಟಿ ಸಭಾಂಗಣದಲ್ಲಿ, ಖ್ಯಾತ ಮಾನಸಿಕಾರೋಗ್ಯ ತಜ್ಞ ಡಾ. ಅಲೋಕ್ ಪಾಂಡೆ ಸೇರಿದಂತೆ, ಆಶ್ರಮದ ಜ್ಞಾನಪಿಪಾಸುಗಳಿಂದ ವಿಶೇಷ ಚಿಂತನ-ಮಂಥನ ನಡೆಯುತ್ತದೆ. ನಿಜಕ್ಕೂ ಅದ್ಭುತವಾದ ಸತ್ಸಂಗ. ಶ್ರವಣ ಸಂಸ್ಕøತಿ ನಿಜಕ್ಕೂ ಇಲ್ಲಿ ವಿಶೇಷ ವ್ಯಾಖ್ಯಾನ ಪಡೆದಿದೆ. ಆನ್ಲೈನ್ನಲ್ಲೂ ಈ ಉಪನ್ಯಾಸಗಳು ಲಭ್ಯ.
ಐ.ಸಿ.ಎಸ್. ಓದಿದ್ದ ಅರವಿಂದರು, ದೇಶಕ್ಕಾಗಿ ಸರ್ವಸ್ವವನ್ನೂ ಪಣಕ್ಕೊಡ್ಡಿ ಹೋರಾಡಿದ ಮಹಾಮಹಿಮರು. ಅವರ ಕುರಿತಾಗಿ ನಾವು ತಿಳಿದದ್ದು, ಓದಿದ್ದು ಎಷ್ಟು ಕಡಮೆ ಎಂಬ ವ್ಯಥೆಯಾಯಿತು. ನಮ್ಮ ಮುಂದಿನ ಪೀಳಿಗೆಗೆ ಅವರ ಸಾಹಸ ಕಥನ ಪಠ್ಯವಾಗಬೇಕು.
* * *
ಪ್ರಸಾದಮ್
ಪುದುಚೇರಿಯ ಫ್ರೆಂಚ್ ಕಾಲೋನಿ ‘ರ್ಯು ಡೇ ಲಾ ಮರೈನ್’ನಲ್ಲಿದೆ ‘ಪ್ರಸಾದಮ್’. ಮಹಾರಾಷ್ಟ್ರದ ನಾಚಿದೇಡ್ದವರಾದ, ಆಶ್ರಮದ ಅನುಯಾಯಿ ಸು. ಶ್ರೀ. ಪ್ರಭಾ ದೀದೀ ಮತ್ತು ಅವರ ಸುಪುತ್ರ ಚಾರ್ಟರ್ಡ್ ಅಕೌಂಟೆಂಟ್ ಕಿರಣ್ ದಾ ಈ ಹೊಟೇಲ್ ನಡೆಸುತ್ತಾರೆ. ಕೇವಲ 35 ರೂಪಾಯಿಗೆ ಉಪಾಹಾರ. 50 ರೂಪಾಯಿಗೆ ಊಟ. ಸೇವಾಮನೋಭಾವ. ರುಚಿ-ಶುಚಿ ಮನೆ ಅಡುಗೆ. ಸ್ಥಳೀಯರು, ಆರ್ಥಿಕವಾಗಿ ಸಂಕಷ್ಟದಲ್ಲಿದ್ದ, ಬೀದಿ ಬದಿ ಕಸ ಗುಡಿಸುವ, ಮನೆಗಳಲ್ಲಿ ಪಾತ್ರೆ ತಿಕ್ಕುವ, ಬಟ್ಟೆ ಒಗೆಯುವ ಕೆಲಸದಲ್ಲಿದ್ದ 6 ಜನ ಮಹಿಳೆಯರಿಗೆ ತರಬೇತಿ ನೀಡಿ, ಸ್ವಾವಲಂಬಿಯಾಗುವಂತೆ, ಈ ಹೊಟೇಲ್ನಲ್ಲಿ ಕೆಲಸ ನೀಡಿದ್ದಾರೆ. ಅವರೀಗ ದ್ವಿಚಕ್ರ ವಾಹನ ಮತ್ತು ಸೈಕಲ್ ಮೇಲೆ ಬಂದು, ಶಿಫ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಆನ್ಲೈನ್ ಆರ್ಡರ್ ಮತ್ತು ಪಾರ್ಸಲ್ ಬುತ್ತಿ ಸಹ ತಲಪಿಸುತ್ತಾರೆ. ಪುದುಚೇರಿಯ ಬಹುತೇಕ ಉದ್ದಿಮೆಗಳ ಹಿಂದೆ ಇಂತಹ ಹತ್ತಾರು ಚೇತೋಹಾರಿ ಕಥಾನಕಗಳಿವೆ. ಮಾನವೀಯತೆ ಮೈವೆತ್ತಂತಿದೆ. ಇಲ್ಲಿ ಲಾಭ ಮತ್ತು ಹೂಡಿಕೆ ‘ಸೋಷಿಯಲ್ ಕ್ಯಾಪಿಟಲ್’ ಮತ್ತು ‘ಹ್ಯೂಮನ್ ಕ್ಯಾಪಿಟಲ್’!
* * *
ಗಮನಿಸಿ
ಬಿಸಿಲಿನ ಪ್ರಖರ ಝಳ ತಡೆದುಕೊಳ್ಳಲು, ಹತ್ತಿಯ ಸಾದಾ, ವಾತಾನುಕೂಲಿ ಪಾರದರ್ಶಕ ಉಡುಪು ಅನಿವಾರ್ಯ. ಸನ್ಸ್ಕ್ರೀನ್ ಲೋಷನ್ ಮತ್ತು ರೌಂಡ್ ಕ್ಯಾಪ್, ಜೊತೆಗೆ ಛತ್ರಿ ಇರಲಿ. ಸಂಜೆ ವೇಳೆ ಸೊಳ್ಳೆಗಳ ಕಾಟ. ಹೀಗಾಗಿ ಒಡೋಮಾಸ್ ಸೊಳ್ಳೆ ನಿರೋಧಕ ಜೊತೆಗಿರಲಿ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಇಲ್ಲಿನ ವಾತಾವರಣ ತಂಪು.
ದಾದರ್-ಪಾಂಡಿಚೇರಿ (1106/1105) ರೈಲು ವಾರದ ನಾಲ್ಕು ದಿನ ಲಭ್ಯವಿದೆ. ಪ್ರಯಾಣಕ್ಕೆ ತುಂಬಾ ಅನುಕೂಲ. ಕನಿಷ್ಠ 5 ದಿನವಾದರೂ ನಾವು ಅಲ್ಲಿ ಉಳಿಯುವಂತೆ ಪ್ರವಾಸ ಯೋಜನೆ ಇರಲಿ. ಸ್ಥಳೀಯ ಓಡಾಟಕ್ಕೆ, ದಿನವೊಂದಕ್ಕೆ ಐನೂರು ರೂಪಾಯಿ ಬಾಡಿಗೆಗೆ ದ್ವಿಚಕ್ರ ವಾಹನ ಲಭ್ಯ. ಇನ್ನೂರು ರೂಪಾಯಿ ಪೆಟ್ರೋಲ್ನಲ್ಲಿ ಇಡೀ ಊರು ಸುತ್ತಬಹುದು! ಹಿರಿಯರಿದ್ದರೆ ಟ್ಯಾಕ್ಸಿ ಬುಕ್ಕಿಂಗ್ ಸಹಕಾರಿ. ವೈದ್ಯಕೀಯ ಚಿಕಿತ್ಸೆಗೆ ಆಶ್ರಮದ ಉಚಿತ ಆಸ್ಪತ್ರೆ ಇದೆ.
(ಚಿತ್ರ ಕೃಪೆ: ಅರವಿಂದ ಅಕ್ಕಿ)
ಅರವಿಂದರ ಔನ್ನತ್ಯ
ಅರವಿಂದರ ಸೋದರ ಬಾರೀಂದ್ರರ ತಂಡದ ಕ್ರಾಂತಿಕಾರಿಗಳು ಬ್ರಿಟಿಷ್ ನ್ಯಾಯಾಧೀಶ ಕಿಂಗ್ಸ್ಫರ್ಡನ ಹತ್ಯೆಗಾಗಿ ನಡೆಸಿದ್ದ ಪ್ರಯತ್ನದ ಹಿನ್ನೆಲೆಯಲ್ಲಿ ಅರವಿಂದರನ್ನು ಸರ್ಕಾರ ಬಂಧಿಸಿತು (1908). ಅಲಿಪುರ ಬಾಂಬ್ ಪ್ರಕರಣವೆಂದೇ ಪ್ರಸಿದ್ಧವಾದ ಆ ಮೊಕದ್ದಮೆಯಲ್ಲಿ ಅರವಿಂದರ ಪರವಾಗಿ ಚಿತ್ತರಂಜನದಾಸ್ ಅವರು ಮಂಡಿಸಿದ ವಾದ ಆ ಪರ್ವಕಾಲದ ಒಂದು ಮೈಲಿಗಲ್ಲೆನಿಸಿತು. ದಾಸ್ ಅವರ ವಾದದ ಸಮಾರೋಪಕ್ಕೆ ಒಂಬತ್ತು ದಿನಗಳು ಹಿಡಿದವು. ದಾಸ್ ಅವರು ಆ ವಾದದ ಸಂದರ್ಭದಲ್ಲಿ ಆಡಿದ ಮಾತುಗಳು ಪರೋಕ್ಷವಾಗಿ ಅರವಿಂದರ ಔನ್ನತ್ಯಕ್ಕೂ ವ್ಯಾಖ್ಯಾನವೆನ್ನಬಹುದು: “ನನ್ನ ವಿನಂತಿ ಇದು: ಯಾವ ವ್ಯಕ್ತಿಯ ಮೇಲೆ ಆಪಾದನೆ ಹೊರಿಸಲಾಗಿದೆಯೋ ಅವರ ಬಗೆಗೆ ವಿಚಾರಣೆ ನಡೆಸಲರ್ಹವಾದದ್ದು ಇಲ್ಲಿರುವ ನ್ಯಾಯಾಲಯ ಮಾತ್ರವಲ್ಲ; ಇತಿಹಾಸದ ಉನ್ನತ ನ್ಯಾಯಾಲಯದ ಮುಂದೆ ಅವರು ನಿಂತಿದ್ದಾರೆ. ನಾನು ಹೇಳುವುದು ಇದು: ಈಗಿನ ವಿವಾದಗಳೆಲ್ಲ ಶಮನಗೊಂಡ ಮೇಲೆ, ಈಗಿನ ಅಶಾಂತಿಯೂ ಆಂದೋಲನವೂ ಮುಗಿದ ಎಷ್ಟೋ ವರ್ಷಗಳ ಆಚೆಗೂ, ಈ ಆಪಾದಿತ ವ್ಯಕ್ತಿ ನಿಧನರಾದ ಮೇಲೂ ಅವರನ್ನು ದೇಶಭಕ್ತಿಯ ಕಾವ್ಯರ್ಷಿ ಎಂದೂ ರಾಷ್ಟ್ರೀಯತೆಯ ಪ್ರವಾದಿ ಎಂದೂ ಮಾನವಪ್ರೇಮಿ ಎಂದೂ ಈ ಲೋಕವು ಗೌರವಿಸಲಿದೆ. ಅವರು ಈ ಭೌತಜಗತ್ತಿನಿಂದ ನಿರ್ಗಮಿಸಿದ ಮೇಲೆ ವರ್ಷಗಳು ಕಳೆದ ಮೇಲೂ ಅವರ ಮಾತುಗಳ ಪ್ರತಿಧ್ವನಿಯು ಭಾರತದಲ್ಲಿ ಮಾತ್ರವಲ್ಲದೆ ಸಮುದ್ರಗಳಾಚೆಯ ದೂರದೇಶಗಳಲ್ಲಿಯೂ ಮೊಳಗುತ್ತಿರುತ್ತದೆ. ಆದ್ದರಿಂದಲೇ ನಾನು ವಿನಂತಿ ಮಾಡುತ್ತಿರುವುದು – ಅವರು ಈ ನ್ಯಾಯಾಲಯದ ಮುಂದೆಯಷ್ಟೆ ನಿಂತಿಲ್ಲ, ಇತಿಹಾಸದ ನ್ಯಾಯಾಲಯದ ಮುಂದೆ ನಿಂತಿದ್ದಾರೆ – ಎಂಬುದನ್ನು ಮನಗಂಡು ನೀವು ತೀರ್ಪನ್ನು ನೀಡಬೇಕಾಗಿದೆ.”