ಏನಿದ್ದರೂ ಹೊಸ ಸರ್ಕಾರದ ಸದಾಶಯವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಮೈತ್ರಿಯ ಉದ್ದೇಶ ಒಳ್ಳೆಯ ಆಡಳಿತ ನೀಡುವುದೆಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸ್ಪಷ್ಟಮಾತುಗಳಲ್ಲಿ ಹೇಳಿದೆ :
“ಈ ಮೈತ್ರಿಯು ಆಡಳಿತ ಮೈತ್ರಿ. ರಾಜ್ಯ ಮತ್ತು ಅದರ ಜನತೆಯ ಸರ್ವತೋಮುಖ ಆರ್ಥಿಕ ಅಭಿವೃದ್ಧಿಗೆ ಬೇಕಾದ ವಾತಾವರಣ ನಿರ್ಮಿಸುವುದು ಇದರ ಪ್ರಾಥಮಿಕ ಗುರಿ. ಕ್ರಿಯಾಶೀಲ, ಪಾರದರ್ಶಕ ಮತ್ತು ಉತ್ತರದಾಯಿ ಸರ್ಕಾರದ ಮೂಲಕ ಅದನ್ನು ಸಾಧಿಸಬಹುದು……. ಹಿಂದಿನ ನೆಹರು-ಅಬ್ದುಲ್ಲಾ ಕಾಲದ ಬಿಕ್ಕಟ್ಟಿಗೆ ಕಾರಣವಾದ ಹಳೆಯ ನಿಯಮ, ವಿಧಾನ ಸರಿಪಡಿಸಬೇಕು. ರಾಜ್ಯದ ಪರಿಪೂರ್ಣ ಅಭಿವೃದ್ಧಿಗೆ ಸರ್ಕಾರ ಹೊಸಮಾರ್ಗವನ್ನು ಹುಡುಕಲಿದೆ. ಮೂಲಸವಲತ್ತು, ಇಂಧನ, ಮಾಹಿತಿತಂತ್ರಜ್ಞಾನ, ಪ್ರವಾಸೋದ್ಯಮ, ಕುಶಲಕಲೆಗಳಿಗೆ ಪ್ರೋತ್ಸಾಹ ನೀಡಲಿದೆ. ಈಗಾಗಲೆ ಇರುವ ಪಶ್ಮಿನಾ ಶಾಲು, ಕೇಸರಿ, ಗಿಡಮೂಲಿಕೆಗಳ ಉತ್ಪಾದನೆ-ಮಾರಾಟವನ್ನು ಕ್ರಮಬದ್ಧಗೊಳಿಸಿ ಅದಕ್ಕೆ ಜಾಗತಿಕ ಮಾರುಕಟ್ಟೆ ರೂಪಿಸಲಿದೆ…..”
ಹಿಂದುಗಳು ಬಹುಸಂಖ್ಯಾತರಾಗಿರುವ ಮಹಾರಾಷ್ಟ್ರ, ಬಿಹಾರ, ಕೇರಳ, ಪಾಂಡಿಚೇರಿ ಮೊದಲಾದ ರಾಜ್ಯಗಳಲ್ಲಿ ಮುಸ್ಲಿಂ ಪ್ರಜೆಯೊಬ್ಬ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಉದಾಹರಣೆಗಳಿವೆ; ಆದರೆ, ಜಮ್ಮು-ಕಾಶ್ಮೀರದಲ್ಲಾಗಲಿ ಅಥವಾ ನಾಗಾಲ್ಯಾಂಡ್ / ಮಿಜೋರಾಮ್ನಲ್ಲಾಗಲಿ ಹಿಂದುವೊಬ್ಬ ಮುಖ್ಯಮಂತ್ರಿಯಾಗುವುದನ್ನು ಊಹಿಸಲು ಸಾಧ್ಯವೇ?
ಕಾಶ್ಮೀರ ಅಥವಾ ಜಮ್ಮು-ಕಾಶ್ಮೀರದ ಹೆಸರು ಬಂದೊಡನೆ ನೆನಪಿಗೆ ಬರುವ ವ್ಯಕ್ತಿ ಡಾ| ಶ್ಯಾಮಪ್ರಸಾದ್ ಮುಖರ್ಜಿ. ಇಂದಿನ ಭಾರತೀಯ ಜನತಾ ಪಕ್ಷದ ಹಿಂದಿನ ಅವತರಣಿಕೆ ಎನ್ನಬಹುದಾದ ಭಾರತೀಯ ಜನಸಂಘದ ಅಧ್ಯಕ್ಷರಾದ ಅವರು ಕಾಶ್ಮೀರವು ದೇಶದ ಇತರ ರಾಜ್ಯಗಳ ರೀತಿಯಲ್ಲೇ ಭಾರತದ ಒಕ್ಕೂಟದಲ್ಲಿ ಸೇರಿಕೊಳ್ಳಬೇಕೆಂದು ಹೋರಾಟ ನಡೆಸಿ ಅದಕ್ಕಾಗಿಯೇ ಪ್ರಾಣಾರ್ಪಣೆಗೈದವರು.
“ಭಾರತದ ಸಂವಿಧಾನ ದೇಶದ ಇತರ ಭಾಗಗಳಿಗೆ ಒಳ್ಳೆಯದು ಎಂದಾದರೆ ಜಮ್ಮು-ಕಾಶ್ಮೀರಕ್ಕೆ ಅದೇಕೆ ಸ್ವೀಕಾರಾರ್ಹ ಅಲ್ಲ?” ಎಂದು ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಪ್ರಶ್ನಿಸಿದವರು ಅವರು. ಆ ಸಂಬಂಧ ಅವರು ಫೆಬ್ರುವರಿ ೮, ೧೯೫೩ರಂದು ನೆಹರು ಅವರಿಗೆ ಪತ್ರ ಬರೆದಿದ್ದರು. ಒಂದು ದೇಶದಲ್ಲಿ ಎರಡು ಸಂವಿಧಾನ, ಇಬ್ಬರು ಪ್ರಧಾನಿ, ಎರಡು ರಾಷ್ಟ್ರಧ್ವಜ ಇರಲು ಅಸಾಧ್ಯ ಎಂದವರು ಆಗ್ರಹಿಸಿದ್ದರು. ರಹದಾರಿ (ಪರ್ಮಿಟ್) ಇಲ್ಲದೆ ಭಾರತದ ಪ್ರಜೆಗಳು ಕಾಶ್ಮೀರವನ್ನು ಪ್ರವೇಶಿಸುವಂತಿಲ್ಲ; ರಾಷ್ಟ್ರಪತಿಗೆ ಮಾತ್ರ ಅದರಿಂದ ವಿನಾಯಿತಿ – ಎಂಬುದು ಆಗಿನ ಒಂದು ನಿರ್ಬಂಧ. ೧೯೫೨ರಲ್ಲಿ ಪ್ರಧಾನಿ ನೆಹರು ಮತ್ತು ಕಾಶ್ಮೀರದ ನಾಯಕ ಶೇಕ್ ಅಬ್ದುಲ್ಲಾ ಅವರ ನಡುವೆ ಆದ ಒಪ್ಪಂದದಲ್ಲಿ ಆ ಅಂಶವಿತ್ತು; ರಕ್ಷಣೆ, ವಿದೇಶಾಂಗ ವ್ಯವಹಾರ ಮತ್ತು ದೂರಸಂಪರ್ಕ ಇಲಾಖೆಗಳು ಕೇಂದ್ರಸರ್ಕಾರದ ಹೊಣೆ; ಉಳಿದಂತೆ ರಾಜ್ಯಕ್ಕೆ ಸ್ವಾಯತ್ತತೆ ಎಂಬುದು ಕೂಡ ಆ ಒಪ್ಪಂದದಲ್ಲಿತ್ತು.
ಡಾ| ಮುಖರ್ಜಿ ಬಲಿದಾನ
ಪರ್ಮಿಟ್ ಇಲ್ಲದೆ ಕಾಶ್ಮೀರವನ್ನು ಪ್ರವೇಶಿಸುವಂತಿಲ್ಲ ಎಂಬ ನಿರ್ಬಂಧದ ವಿರುದ್ಧ ಪ್ರತಿಭಟಿಸಿ ಡಾ| ಮುಖರ್ಜಿ ರಾಜ್ಯದೊಳಗೆ ಪ್ರವೇಶಿಸಿದರು. ಶೇಕ್ ಅಬ್ದು ಸರ್ಕಾರ ಅವರನ್ನು ಬಂಧಿಸಿ ಸೆರೆಮನೆಯಲ್ಲಿಟ್ಟಿತು. ಅಲ್ಲಿ ಅವರು ಅನಾರೋಗ್ಯಕ್ಕೆ ಗುರಿಯಾದರು. ಆಗ ಸರ್ಕಾರ ಸರಿಯಾದ ಚಿಕಿತ್ಸೆಯನ್ನು ಕೂಡ ಕೊಡಿಸಲಿಲ್ಲ ಎನ್ನುವ ಆರೋಪವಿದೆ. ಅಂತೂ ತಿಂಗಳೊಳಗೆ ಅಪ್ರತಿಮ ದೇಶಭಕ್ತ, ಮಹಾನ್ ನಾಯಕ ಮುಖರ್ಜಿ ಅವರು ಕಾರಾಗೃಹದಲ್ಲೇ ನಿಗೂಢವಾಗಿ ಸಾವನ್ನಪ್ಪಿದರು; ಇದು ಮರೆಯುವ ಘಟನೆಯಲ್ಲ.
ಜಮ್ಮು-ಕಾಶ್ಮೀರಕ್ಕೆ ಇತರ ರಾಜ್ಯಗಳಿಗಿಂತ ಭಿನ್ನವಾದ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೦ನೇ ವಿಧಿಯ ವಿರುದ್ಧ ಡಾ| ಶ್ಯಾಮಪ್ರಸಾದ್ ಮುಖರ್ಜಿ ಪ್ರತಿಭಟಿಸಿದ್ದರು. ಅಂತಹ ವಿಧಿ ಸಂವಿಧಾನದಲ್ಲಿ ಸೇರಿಕೊಂಡ ರೀತಿಯೇ ವಿಚಿತ್ರವೂ ಕುತೂಹಲಕರವೂ ಆಗಿದೆ. ಸಂವಿಧಾನದ ನಿರ್ಮಾತೃಗಳಲ್ಲಿ ಒಬ್ಬರೂ, ದೇಶದ ಪ್ರಥಮ ಕಾನೂನುಮಂತ್ರಿಯೂ ಆದ ಡಾ| ಬಾಬಾಸಾಹೇಬ್ ಅಂಬೇಡ್ಕರ್ ಅದಕ್ಕೆ ವಿರುದ್ಧವಾಗಿದ್ದರು. “ನಿಮಗೆ ಭಾರತ ನಿಮ್ಮ ಗಡಿಯನ್ನು ರಕ್ಷಿಸಬೇಕು. ರಸ್ತೆ ನಿರ್ಮಿಸಬೇಕು; ಆಹಾರಧಾನ್ಯಗಳನ್ನು ಒದಗಿಸಬೇಕು. ಸಮಾನ ಸ್ಥಾನಮಾನ ನೀಡಬೇಕು. ಆದರೆ ಭಾರತ ಸರ್ಕಾರಕ್ಕೆ ನಿಮ್ಮ ರಾಜ್ಯದ ಮೇಲೆ ಸೀಮಿತ ಅಧಿಕಾರ. ಭಾರತದ ಜನತೆಗೆ ನಿಮ್ಮ ರಾಜ್ಯದ ಮೇಲೆ ಏನೂ ಅಧಿಕಾರವಿಲ್ಲ. ಇದಕ್ಕೆ ಒಪ್ಪಿಗೆ ಕೊಡುವುದೆಂದರೆ ದೇಶದ ಹಿತಾಸಕ್ತಿಗೆ ವಿರುದ್ಧವಾದದ್ದು; ಮತ್ತು ದೇಶದ್ರೋಹಕ್ಕೆ ಸಮನಾದದ್ದು. ದೇಶದ ಕಾನೂನುಮಂತ್ರಿಯಾಗಿ ನಾನಿದನ್ನು ಮಾಡುವುದಿಲ್ಲ ಎಂದು ಅಂಬೇಡ್ಕರ್ ತಮ್ಮನ್ನು ಭೇಟಿಮಾಡಿದ ಶೇಕ್ ಅಬ್ದುಲ್ಲಾ ಅವರಲ್ಲಿ ನೇರವಾಗಿಯೇ ಹೇಳಿದ್ದರು.
ಬಳಿಕ ಅಬ್ದುಲ್ಲಾ ನೆಹರು ಅವರ ಬಳಿಗೆ ಹೋದರು. ನೆಹರು ಅಬ್ದುಲ್ಲಾರನ್ನು ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಅವರ ಬಳಿ ಕಳುಹಿಸಿದರು. ಅಯ್ಯಂಗಾರ್ ಗೃಹಮಂತ್ರಿ ಸರ್ದಾರ್ ಪಟೇಲರ ಬಳಿಗೆ ಹೋಗಿ, ‘ಇದು ನೆಹರು ಅವರ ಪ್ರತಿಷ್ಠೆಯ ವಿಷಯವಾಗಿರುವುದರಿಂದ ಏನಾದರೂ ಮಾಡಿ’ ಎಂದು ಗೋಗರೆದರು. ನೆಹರು ಅವರು ಶೇಕ್ ಅಬ್ದುಲ್ಲಾರಿಗೆ ಭರವಸೆ ನೀಡಿಯಾಗಿತ್ತು. ಅದರಂತೆ ಪಟೇಲ್ ೩೭೦ನೇ ವಿಧಿಯನ್ನು ಸಿದ್ಧಪಡಿಸಿ, ಸಂವಿಧಾನಕ್ಕೆ ಸೇರಿಸುವ ವ್ಯವಸ್ಥೆ ಮಾಡಿದರು. ಅದರಂತೆ ಕಾಶ್ಮೀರ ಕಣಿವೆಯವರ ತುಷ್ಟೀಕರಣಕ್ಕಾಗಿ ಭಾರತ ಸರ್ಕಾರ ನೀಡಿದ ರಿಯಾಯಿತಿಗಳಷ್ಟೋ! ಆದರೆ ಅದು ಹಾವಿಗೆ ಹಾಲೆರೆದಂತಾಗಿ ಕಾಶ್ಮೀರ ತನ್ನ ಪ್ರತ್ಯೇಕತಾ ಭಾವನೆಯನ್ನಷ್ಟೇ ಪೋಷಿಸಿಕೊಂಡು ಬಂದಿದೆ. ಕಣಿವೆ ಭಾಗದ ಹಿಂದುಗಳು ಮತ್ತು ಸಿಖ್ಖರನ್ನು ಮುಸ್ಲಿಮರಲ್ಲವೆಂಬ ಒಂದೇ ಕಾರಣಕ್ಕಾಗಿ ೩.೭೦ ಲಕ್ಷ ಜನರನ್ನು ರಾಜ್ಯದಿಂದ ಹೊರಗಟ್ಟಿದರೂ ನಂತರದ ಕೇಂದ್ರಸರ್ಕಾರಗಳು ಮೂಕಪ್ರೇಕ್ಷಕರಾಗಿ ಕುಳಿತುದಲ್ಲದೆ ಬೇರೇನೂ ಮಾಡಲಿಲ್ಲ.
ಭಾ.ಜ.ಪ. ಸ್ಥಾನ ಏರಿಕೆ
ಈಚಿನ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷ ರಾಜ್ಯದ ಒಟ್ಟು ೮೭ ಸ್ಥಾನಗಳಲ್ಲಿ ೨೫ ಸ್ಥಾನಗಳನ್ನು ಗೆದ್ದುಕೊಂಡಿತು. ಜಮ್ಮು-ಕಾಶ್ಮೀರದ ಮಟ್ಟಿಗೆ ಇದು ಸಣ್ಣ ಸಾಧನೆಯಲ್ಲ. ೨೦೦೨ರ ವಿಧಾನಸಭಾ ಚುನಾವಣೆಯಲ್ಲಿ ಭಾ.ಜ.ಪ. ಒಂದು ಸ್ಥಾನ ಮಾತ್ರ ಗೆದ್ದಿತ್ತು. ಆಗ ಕೇಂದ್ರದಲ್ಲಿ ಭಾ.ಜ.ಪ. ಸರ್ಕಾರ ಇತ್ತೆಂಬುದು ಗಮನಾರ್ಹ. ೨೦೦೮ರ ಚುನಾವಣೆಯಲ್ಲಿ ೧೧ ಸ್ಥಾನಗಳನ್ನು ಗೆಲ್ಲಲು ಭಾ.ಜ.ಪ.ಕ್ಕೆ ಸಾಧ್ಯವಾಯಿತು. ಅದಕ್ಕೆ ಕಾರಣ ಮತೀಯ ಧ್ರುವೀಕರಣದಿಂದ ಜಮ್ಮು ಭಾಗದಲ್ಲಿ ಭಾ.ಜ.ಪ. ತನ್ನ ಬಲವನ್ನು ಹೆಚ್ಚಿಸಿಕೊಂಡದ್ದು ಎನ್ನಬಹುದು. ರಾಜ್ಯದ ಹೊರಗಿನವರು ಕಾಶ್ಮೀರದಲ್ಲಿ ಆಸ್ತಿ ಹೊಂದುವಂತಿಲ್ಲ. ತೀರ್ಥಕ್ಷೇತ್ರ ಅಮರನಾಥದಲ್ಲಿ ಬಹಳಷ್ಟು ಹಿಂದುಗಳ ಆಸ್ತಿ ಮುಸ್ಲಿಮರ ಪಾಲಾದುದನ್ನು ಭಾ.ಜ.ಪ. ವಿರೋಧಿಸಿ ಚಳವಳಿ ನಡೆಸಿತ್ತು. ೨೦೦೮ರ ಚುನಾವಣೆಯಲ್ಲಿ ಪಕ್ಷದ ಬಲ ೧೧ಕ್ಕೇರಲು ಅದೇ ಕಾರಣವೆಂದು ಭಾವಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಕಣಿವೆ ಎರಡೂಕಡೆ ಧ್ರುವೀಕರಣ ನಡೆಯಿತು. ಆ ನಿಟ್ಟಿನಲ್ಲಿ ಭಾ.ಜ.ಪ.ಕ್ಕೆ ಎದುರಾದ ಪಕ್ಷ ಪೀಪಲ್ಸ್ ಡೆಮೊಕ್ರ್ಯಾಟಿಕ್ ಪಾರ್ಟಿ (ಪಿ.ಡಿ.ಪಿ.); ಆ ರೀತಿಯಲ್ಲಿ ಪಿ.ಡಿ.ಪಿ. ಕ್ರಮೇಣ ಪ್ರತ್ಯೇಕತಾವಾದಿ ಉಗ್ರಗಾಮಿಗಳು ಮತ್ತು ಪ್ರತ್ಯೇಕತಾವಾದಿಗಳ ಕೂಟ ಹುರಿಯತ್ ಕಾನ್ಫರೆನ್ಸನ್ನು ಬೆಂಬಲಿಸಿತು; ಹಾಗೂ ಮೃದು ಧೋರಣೆಯ ಒಂದು ಬಗೆಯ ಪ್ರತ್ಯೇಕತಾವಾದವನ್ನು ತನ್ನದಾಗಿಸಿಕೊಂಡಿತೆಂದರೆ ತಪ್ಪಲ್ಲ. ಈಚಿನ ಚುನಾವಣೆಯ ಫಲಿತಾಂಶವನ್ನೂ ಕೂಡ ಆ ಧ್ರುವೀಕರಣದ ಹಿನ್ನೆಲೆಯಲ್ಲೇ ಗಮನಿಸಬಹುದು. ಜೊತೆಗೆ ರಾಷ್ಟ್ರಮಟ್ಟದಲ್ಲಿ ಭಾ.ಜ.ಪ. ಸ್ವಂತ ಬಹುಮತ ಗಳಿಸುವ ಮಟ್ಟಕ್ಕೆ ಬೆಳೆದದ್ದು ಮತ್ತು ಪ್ರಧಾನಿ ನರೇಂದ್ರ ಮೋದಿ – ಪಕ್ಷದ ಅಧ್ಯಕ್ಷ ಅಮಿತ್ ಶಾ ರೂಪಿಸಿದ ಕಾರ್ಯತಂತ್ರ ಯಶಸ್ವಿಯಾದದ್ದು ಮುಂತಾದವು ರಾಜ್ಯದಲ್ಲಿ ಪಕ್ಷ ೨೫ ಸ್ಥಾನಗಳ ಮಟ್ಟಕ್ಕೆ ಬೆಳೆಯಲು ಕಾರಣವಾಯಿತೆನ್ನಬಹುದು.
ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರೆಯದಿದ್ದಾಗ ಸರ್ಕಾರ ರಚನೆ ಯಾವಾಗಲೂ ಕಷ್ಟವೇ. ಶಾಸಕರ ‘ಕುದುರೆ ವ್ಯಾಪಾರ’ದ ಮಾರ್ಗ ಸಲೀಸಾಗಿದ್ದರೆ ಅದಕ್ಕೊಂದು ಬಗೆಯ ಪರಿಹಾರ ಸಿಗುತ್ತದೆ. ಅದಿಲ್ಲವಾದರೆ ಯಾರು ಯಾರ ಜೊತೆ ಸೇರುತ್ತಾರೆ, ಸೇರಬಹುದು ಎಂಬುದಕ್ಕೆ ವಿಪುಲ ಸಾಧ್ಯತೆಗಳಿರುತ್ತವೆ. ಜಮ್ಮು-ಕಾಶ್ಮೀರದಲ್ಲಿ ಅದೇ ಆಯಿತು. ಈವರೆಗೆ ಸರ್ಕಾರ ನಡೆಸಿದ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಕೂಟದ ಗಳಿಕೆ ಬಹಳಷ್ಟು ಹಿನ್ನಡೆ ಕಂಡ ಕಾರಣ (ಅನುಕ್ರಮವಾಗಿ ೧೫ ಮತ್ತು ೧೨ ಸ್ಥಾನಗಳು) ಅನ್ಯರ ಪ್ರವೇಶ ಅನಿವಾರ್ಯವಾಗಿತ್ತು. ದೊಡ್ಡ ಎರಡು ಪಕ್ಷಗಳೆಂದರೆ ೨೮ ಸ್ಥಾನಗಳ ಪಿ.ಡಿ.ಪಿ. ಮತ್ತು ೨೫ ಸ್ಥಾನಗಳ ಭಾ.ಜ.ಪ. ಚುನಾವಣೆವರೆಗೆ ಇಬ್ಬರೂ ಬದ್ಧ ವಿರೋಧಿಗಳೇ. ಆದರೆ ಕೂಡಲೇ ಚುನಾವಣೆ ಯಾರಿಗೂ ಬೇಕಾಗಿರುವುದಿಲ್ಲ; ಆದ್ದರಿಂದ ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಶಾಶ್ವತ ಮಿತ್ರರೂ ಅಲ್ಲ ಎಂಬ ಮಾತಿಗೆ ಶರಣಾಗುವುದು ಅನಿವಾರ್ಯ. ಆದರೆ ಉತ್ತರಧ್ರುವ ಮತ್ತು ದಕ್ಷಿಣಧ್ರುವವನ್ನು ಒಂದೆಡೆ ಸೇರಿಸುವುದು ಸುಲಭವೇ? ಭರ್ತಿ ೫೦ ದಿನಗಳ ಮಾತುಕತೆ ನಡೆದು ಅಂತೂ ಪಿ.ಡಿ.ಪಿ.-ಭಾ.ಜ.ಪ. ಸರ್ಕಾರ ರಚನೆಯ ತೀರ್ಮಾನ ಹೊರಗೆ ಬಂತು. ಅದಕ್ಕಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (Common Minimum Programme – ಸಿ.ಎಂ.ಪಿ.) ವನ್ನು ರೂಪಿಸಿಕೊಂಡರು. ಇದು ಸಾಮಾನ್ಯ ಕನಿಷ್ಠ ಕಾರ್ಯಕ್ರಮವಲ್ಲ; ‘ಮೈತ್ರಿಯ ಕಾರ್ಯಸೂಚಿ’ – ಎನ್ನಲಾಯಿತು.
ಅಸಂಭವವೆಂದು ಭಾವಿಸಲಾದ ಪಕ್ಷಗಳು ಒಟ್ಟುಸೇರಿ ಸರ್ಕಾರ ರಚಿಸಿದುದಕ್ಕೆ ಬಂದ ಪ್ರತಿಕ್ರಿಯೆಗಳು ತೀವ್ರವಾಗಿಯೇ ಇದ್ದವು. ಆದರೆ ಪಿ.ಡಿ.ಪಿ. ನಾಯಕ ಮುಫ್ತಿ ಮಹಮ್ಮದ್ ಸಯೀದ್ ಅವರು ಈಗ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ನ ಆಪ್ತವಲಯದಲ್ಲಿರುವಂತೆ ಕಂಡುಬಂದರೂ ಕೂಡ ೭೯ ವರ್ಷ ವಯಸ್ಸಿನ ಈ ನಾಯಕ ಜೀವಮಾನವೆಲ್ಲ ಅದೇ ಬಗೆಯ ರಾಜಕಾರಣ ಮಾಡಿಕೊಂಡುಬಂದವರಲ್ಲ; ೧೯೮೯ರ ಹೊತ್ತಿಗೆ ಕೇಂದ್ರದ ವಿ.ಪಿ. ಸಿಂಗ್ ಸರ್ಕಾರದಲ್ಲಿ ಅವರು ಗೃಹಮಂತ್ರಿಯಾಗಿದ್ದರು; ಆ ರೀತಿಯಲ್ಲಿ ಪ್ರಧಾನಧಾರೆ ರಾಜಕೀಯದಲ್ಲಿ ಇದ್ದವರೇ. ಮುಂದೆ ೨೦೦೩-೦೪ರ ಹೊತ್ತಿಗೆ ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಅವರು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಭಯೋತ್ಪಾದಕರ ವಿರುದ್ಧ ಬಿಗಿ ಕ್ರಮ ಕೈಗೊಂಡಿದ್ದರು; ಒಮ್ಮೆಗೇ ಮೂರು ಭಯೋತ್ಪಾದಕ ಸಂಘಟನೆಗಳ ಕಮಾಂಡರ್ಗಳನ್ನು ಕಾರ್ಯಾಚರಣೆಯಲ್ಲಿ ಕೊಲ್ಲಿಸಿದ್ದರು.
ಮೃದು ಪ್ರತ್ಯೇಕತಾವಾದ
ಏನಿದ್ದರೂ ಈಗ ಅವರ ಪಕ್ಷ ಪಿ.ಡಿ.ಪಿ. ತನ್ನ ‘ಮೃದು ಪ್ರತ್ಯೇಕತಾವಾದಿ ಉಗ್ರ ಕಾರ್ಯಸೂಚಿ’ಯ ಜಾರಿಯಲ್ಲಿ ಆಸಕ್ತವಾಗಿರುವುದು ಸತ್ಯ. ಆದ್ದರಿಂದ ಹೊಸ ಸರ್ಕಾರ ರಚನೆಯಾಗುತ್ತದೆ ಎನ್ನುವಾಗ ಅದಕ್ಕನುಗುಣವಾದ ಪ್ರತಿಕ್ರಿಯೆಗಳು ಬಂದವು. ಮುಫ್ತಿಯವರ ನಿಷ್ಠೆ ಪಾಕಿಸ್ತಾನಕ್ಕಾ ಅಥವಾ ಭಾರತಕ್ಕಾ ಎಂದು ಕೇಳಿದಾಗ ಅವರ ಪಕ್ಷದ ವಕ್ತಾರ “ಮುಫ್ತಿ ಸಾಹೇಬ್ ತಾನು ಭಾರತೀಯ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾರೆ; ಕಾಶ್ಮೀರವು ಭಾರತದಲ್ಲಿ ವಿಲೀನವಾಗುವುದಕ್ಕೆ ಅವರು ಪರವಾಗಿದ್ದಾರೆ” ಎಂದು ಹೇಳಿದರು. ಈ ಮೈತ್ರಿಯಿಂದ ಜಮ್ಮು-ಕಾಶ್ಮೀರದಲ್ಲಿ ಕೋಮುವಾದ ಕಡಮೆ ಆಗಬಹುದೆಂದು ಕೆಲವರು ಅಭಿಪ್ರಾಯಪಟ್ಟರೆ ಇತರ ಹಲವರು ಅದನ್ನು ತಳ್ಳಿಹಾಕಿದರು. “ಈ ಸಂದರ್ಭವನ್ನು ಬಳಸಿಕೊಂಡು ಪಿ.ಡಿ.ಪಿ. ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತದೆ. ನಾವು ಎಚ್ಚರವಾಗಿದ್ದು ಅದನ್ನು ತಡೆಯಲೇಬೇಕು; ಇಲ್ಲವಾದರೆ ಪಕ್ಷಕ್ಕೆ (ಭಾ.ಜ.ಪ.ಕ್ಕೆ) ತುಂಬ ಹಾನಿಯಾಗುತ್ತದೆ. ಉತ್ತರ ಪ್ರದೇಶದಲ್ಲಿ ೧೯೯೫ರಲ್ಲಿ ಮತ್ತು ೨೦೦೨ರಲ್ಲಿ ಮಾಯಾವತಿ ಅವರ ಸರ್ಕಾರದಲ್ಲಿ ಸೇರಿಕೊಂಡಂತೆ ಆಗುತ್ತದೆ. ಎರಡೂ ಸಲ ಬಹುಜನ ಸಮಾಜವಾದಿ ಪಕ್ಷ ತನ್ನ ಕಾರ್ಯಸೂಚಿ(ಅಜೆಂಡಾ)ಯನ್ನು ಜಾರಿಮಾಡಿಕೊಂಡು ತನ್ನ ಬಲವನ್ನು ಹೆಚ್ಚಿಸಿಕೊಂಡಿತು; ಭಾ.ಜ.ಪ.ಕ್ಕಿದ್ದ ಜನಬೆಂಬಲ ಕುಸಿಯಿತು” ಎಂದು ಪಕ್ಷದ ಅಭಿಮಾನಿಗಳು ಹೇಳಿದ್ದಾರೆ.
“ಸಂವಿಧಾನದ ವಿಧಿ ೩೭೦ರ ಬಗೆಗಿನ ಭಾ.ಜ.ಪ. ನಿಲವಿಗಾಗಿ ನಾನು ಅದಕ್ಕೆ ಮತಹಾಕಿದೆ. ಈಗ ಅವರು ಅಧಿಕಾರಕ್ಕಾಗಿ ರಾಜಿಮಾಡಿಕೊಂಡರು” ಎಂದು ಜಮ್ಮುವಿನ ಓರ್ವ ಮತದಾರ ಬೇಸರದಿಂದ ಹೇಳಿದರೆ, ಇನ್ನೊಬ್ಬ “ಹಿಂದೂ ಮುಖ್ಯಮಂತ್ರಿ ಬೇಕೆಂದು ನಾನು ಮತ ಹಾಕಿಲ್ಲ; ಶಾಂತಿ-ಅಭಿವೃದ್ಧಿ ಬೇಕೆಂದು ಮತ ಹಾಕಿದೆ. ಕಾಶ್ಮೀರದಂತೆಯೇ ಜಮ್ಮುವಿನಲ್ಲೂ ಅಭಿವೃದ್ಧಿ ಆಗಬೇಕು” ಎಂದು ಹೇಳಿದ್ದಿದೆ. ಇದು ಸದ್ಯದ ಸಿ.ಎಂ.ಪಿ.ಗೆ ಹೊಂದುತ್ತದೆ ಎನ್ನಬಹುದು. ಈವರೆಗೆ ತಾರತಮ್ಯಕ್ಕೆ ಗುರಿಯಾದ ಜಮ್ಮು ಮತ್ತು ಲಡಾಖ್ನ ಅಭಿವೃದ್ಧಿಗೆ ಒತ್ತುನೀಡಲು ಭಾ.ಜ.ಪ. ಉದ್ದೇಶಿಸಿದ್ದು, ಮಿತ್ರಪಕ್ಷ ಪಿ.ಡಿ.ಪಿ. ಅದಕ್ಕೆ ಸಮ್ಮತಿಸಿದೆ.
ಮುಸ್ಲಿಮರು ಬಹುಸಂಖ್ಯಾತರಾಗಿರುವ ಕಾಶ್ಮೀರ ಕಣಿವೆ ಪ್ರದೇಶದಲ್ಲೂ ಪಿ.ಡಿ.ಪಿ.-ಭಾ.ಜ.ಪ. ಮೈತ್ರಿಗೆ ವಿರೋಧ ವ್ಯಕ್ತವಾದದ್ದಿದೆ. “ಕಾಶ್ಮೀರದಲ್ಲಿ ಕಳೆದ ವರ್ಷ ಉಂಟಾದ ಭಾರೀ ಪ್ರವಾಹದ ವೇಳೆ ಸಕಾಲಿಕ ನೆರವು ನೀಡಲಿಲ್ಲವೆಂದು ನ್ಯಾಷನಲ್ ಕಾನ್ಫರೆನ್ಸ್ ಬಿಟ್ಟು ಪಿ.ಡಿ.ಪಿ.ಗೆ ಮತ ಹಾಕಿದೆವು; ಆದರೆ ಅದು ಭಾ.ಜ.ಪ. ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ನಮ್ಮ ವೋಟು ವ್ಯರ್ಥವಾಯಿತು” ಎಂದು ಭಾವಿಸಿದವರಿದ್ದಾರೆ. ಭಾ.ಜ.ಪ. ಬದಲು ಮುಫ್ತಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಬೇಕಿತ್ತು ಎಂದವರಿದ್ದಾರೆ. ಪಿ.ಡಿ.ಪಿ. ಪಕ್ಷಕ್ಕೆ ತನ್ನ ಈ ತಪ್ಪಿನ ಅರಿವಾಗಿದೆ. ಅದೇ ಕಾರಣದಿಂದ ಮುಖ್ಯಮಂತ್ರಿ ಸೇರಿದಂತೆ ೧೩ ಸಚಿವಸ್ಥಾನಗಳನ್ನು (ಒಟ್ಟು ೨೪) ಗಿಟ್ಟಿಸಿಕೊಂಡಿದೆ; ಅಭಿವೃದ್ಧಿಯನ್ನು ಸಾಧಿಸಿ ಜನರನ್ನು ಸಮಾಧಾನಮಾಡಲು ಉದ್ದೇಶಿಸಿದೆ – ಎಂದು ತಮಗೆ ಸಮಾಧಾನ ಹೇಳಿಕೊಂಡವರಿದ್ದಾರೆ.
ಪಾಕಿಸ್ತಾನದ ವಿರೋಧ
ಪಿ.ಡಿ.ಪಿ.-ಭಾ.ಜ.ಪ. ಮೈತ್ರಿ ಸರ್ಕಾರ ಸ್ಥಾಪನೆಯ ಬಗ್ಗೆ ಇನ್ನಷ್ಟು ಮಹತ್ತ್ವದ ಪ್ರತಿಕ್ರಿಯೆಗಳು ವ್ಯಕ್ತವಾದದ್ದು ಪಾಕಿಸ್ತಾನದಲ್ಲಿ. ಪಾಕಿಸ್ತಾನ ಪ್ರತಿವರ್ಷ ಫೆಬ್ರುವರಿ ೫ರಂದು ‘ಕಾಶ್ಮೀರದಿನ’ವನ್ನು ಆಚರಿಸುತ್ತದೆ. ಈ ವರ್ಷವೂ ಉಗ್ರ ಸಂಘಟನೆಗಳು ಅದನ್ನು ಆಚರಿಸಿ ಮಾಮೂಲಿಯಾದ ತಮ್ಮ ಹೇಳಿಕೆಗಳನ್ನು ಬಿಡುಗಡೆಗೊಳಿಸಿದವು. “ಕಾಶ್ಮೀರದ ಒಂದಿಂಚು ನೆಲವನ್ನು ಕೂಡ (ಭಾರತಕ್ಕೆ) ಪಾಕಿಸ್ತಾನ ಬಿಟ್ಟುಕೊಡಬಾರದು”, “ನಾವು ಕಾಶ್ಮೀರದಿನವನ್ನು ಯಾವ ರೀತಿ ಆಚರಿಸಬೇಕೆಂದರೆ ಲಕ್ಷಾಂತರ ಕಾಶ್ಮೀರಿಗಳ ಕನಸು ನನಸಾಗಬೇಕು” – ಎಂದೆಲ್ಲ ಅವು ಹೇಳಿದವು.
ಹೊಸ ಸರ್ಕಾರದ ಪ್ರಮಾಣವಚನದ ಬಗ್ಗೆ ಪಾಕಿಸ್ತಾನದ ಪತ್ರಿಕೆಗಳು ಮತ್ತು ಚಾನೆಲ್ಗಳಲ್ಲಿ ಬಂದ ವರದಿಗಳಲ್ಲಿ ಬೇಸರ ಕಾಣಿಸುತ್ತಿತ್ತು. “ಭಾರತದ ಏಕೈಕ ಮುಸ್ಲಿಂ ಬಹುಸಂಖ್ಯಾತ ರಾಜ್ಯದಲ್ಲಿ ಹಿಂದೂ ರಾಷ್ಟ್ರೀಯವಾದಿಗಳು ಸರ್ಕಾರ ರಚಿಸುತ್ತಿದ್ದಾರೆ” ಎಂಬ ಆತಂಕ ಆ ವರದಿ, ಲೇಖನ, ಚರ್ಚೆಗಳ ಕೇಂದ್ರಬಿಂದುವಾಗಿತ್ತು. ಕಾಶ್ಮೀರದ ಮುಸ್ಲಿಮರನ್ನು ಎತ್ತಿಕಟ್ಟುವ ಪ್ರಯತ್ನ ಅದರಲ್ಲಿತ್ತು. “ಸೈದ್ಧಾಂತಿಕವಾಗಿ ವಿಭಿನ್ನ ಪಕ್ಷಗಳು ಒಂದಾದ್ದರಿಂದ ಕಾಶ್ಮೀರದಲ್ಲಿ ಮುಸ್ಲಿಮರು ಮತ್ತು ಜಮ್ಮುವಿನಲ್ಲಿ ಹಿಂದುಗಳು ಅಸಮಾಧಾನಗೊಂಡು ಅನಾಹುತ ಆಗಬಹುದು” ಎಂದು ಉದಾರ ಎಚ್ಚರಿಕೆ ನೀಡಿದವರಿದ್ದಾರೆ; ಪಾಕಿಸ್ತಾನದ ಲೇಖಕರು, ಪತ್ರಕರ್ತರು ಮುಫ್ತಿ ಮಹಮ್ಮದ್ ಸಯೀದ್ ಅವರನ್ನು ಅಣಕಿಸಿದ್ದಿದೆ.
ಈ ರೀತಿ ಕೆರಳಿಸುವಲ್ಲಿ ಅಥವಾ ಅಸಮ್ಮತಿ ಸೂಚಿಸುವಲ್ಲಿ ಪಾಕಿಸ್ತಾನದ ಸೇನೆ ಹಿಂದೆಬಿದ್ದಿಲ್ಲ. ಉತ್ತರ ವಜಿರಿಸ್ತಾನದ ಕಾದಾಟದಿಂದಾಗಿ ಸಮಯ ಇಲ್ಲದಿದ್ದರೂ ಮೈತ್ರಿಗೆ ಸ್ವಲ್ಪ ಮುನ್ನ ಪಾಕ್ ಸೇನಾ ಮುಖ್ಯಸ್ಥರು ನಿಯಂತ್ರಣರೇಖೆ(ಎಲ್.ಓ.ಸಿ.)ಯ ಬಳಿಗೆ ಬಂದು, ‘ಭಾರತೀಯ ಗುಂಡುಹಾರಾಟದಿಂದ ಸಂತ್ರಸ್ತರಾದ’ ನಾಗರಿಕರನ್ನು ಭೇಟಿಮಾಡಿದರು. ಏನಾದರೂ ಪ್ರಚೋದನೆ ಮಾಡಿದರೆ ‘ಸೂಕ್ತ ಪ್ರತಿಕ್ರಿಯೆ’ ಕೊಡುವುದಾಗಿ ಭಾರತಕ್ಕೆ ಬಿಗಿ ಎಚ್ಚರಿಕೆ ನೀಡಿದರು. ಆತನ ಭೇಟಿಯ ನಿಜವಾದ ಉದ್ದೇಶ ಕಾಶ್ಮೀರ ಕಣಿವೆಯಲ್ಲಿ ಜನರ ಭಾವನೆ ಕೆರಳಿಸಿ, ಭಾ.ಜ.ಪ. ಜತೆ ಮೈತ್ರಿ ಒಪ್ಪಂದ ಮಾಡಿಕೊಳ್ಳುವ ಪಿ.ಡಿ.ಪಿ. ಮೇಲೆ ಒತ್ತಡ ತರುವುದಾಗಿತ್ತು. ಹೀಗೆ ಪಾಕಿಸ್ತಾನ ಇಸ್ಲಾಂ ಕಾರ್ಡನ್ನು ನೇರವಾಗಿ ಬಳಸಿದೆ. ಕೆಲವು ತಿಂಗಳುಗಳಿಂದ ಪಾಕಿಸ್ತಾನ ಆ ಭಾಗದಲ್ಲಿ ಯುದ್ಧೋನ್ಮಾದದ ಸ್ಥಿತಿಯನ್ನು ಸೃಷ್ಟಿಸಿದೆ. ಅದು ಕಾಶ್ಮೀರದ ದುರ್ಬಲ ಪರಿಸ್ಥಿತಿಯನ್ನು ಬಳಸಿಕೊಳ್ಳುವ ದೊಡ್ಡ ಯೋಜನೆಯ ಭಾಗ. ಈಗ ಸರ್ಕಾರ ಬಂದಿರುವ ಕಾರಣ ಅಲ್ಲಿ ಬುಡಮೇಲುಕೃತ್ಯ ನಡೆಸಲು, ಪ್ರದೇಶವನ್ನು ಒಡೆಯಲು, ಉಧ್ವಸ್ತಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.
ಈ ನಡುವೆ ತಮಾಷೆಯ ಒಂದು ಪ್ರಸಂಗವೆಂದರೆ, ಭಾ.ಜ.ಪ. ಜೊತೆ ಮೈತ್ರಿಮಾಡಿಕೊಂಡ ಕಾರಣಕ್ಕಾಗಿ ಪಾಕಿಸ್ತಾನವು ಪಿ.ಡಿ.ಪಿ. ವಕ್ತಾರ ನಯೀಂ ಅಖ್ತರ್ಗೆ ತನ್ನ ವೀಸಾವನ್ನು ನಿರಾಕರಿಸಿದ್ದು. ಏನಿದ್ದರೂ ಪಾಕಿಸ್ತಾನದ ಈ ಒತ್ತಡತಂತ್ರಗಳ ಫಲವಾಗಿ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಪಾಕಿಸ್ತಾನದಿಂದ ರಾಜ್ಯದ ಭದ್ರತೆಗೆ ಅಪಾಯ ಎದುರಾದೀತೆಂದು ಹೆದರಿದ್ದಾರೇನೋ ಅನಿಸುತ್ತದೆ; ಅದರಿಂದಾಗಿ ತುಷ್ಟೀಕರಣದ ಪ್ರಯತ್ನವಾಗಿ ಮುಖ್ಯಮಂತ್ರಿಯಾದ ಬಳಿಕ ಒಂದೆರಡು ಹೆಜ್ಜೆ ಇಟ್ಟರೇನೋ ಅನಿಸುತ್ತದೆ.
ಸಾಮಾನ್ಯ ಕನಿಷ್ಠ ಕಾರ್ಯಕ್ರಮ
ಏನಿದ್ದರೂ ಹೊಸ ಸರ್ಕಾರದ ಸದಾಶಯವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಮೈತ್ರಿಯ ಉದ್ದೇಶ ಒಳ್ಳೆಯ ಆಡಳಿತ ನೀಡುವುದೆಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸ್ಪಷ್ಟಮಾತುಗಳಲ್ಲಿ ಹೇಳಿದೆ. “ಈ ಮೈತ್ರಿಯು ಆಡಳಿತ ಮೈತ್ರಿ. ರಾಜ್ಯ ಮತ್ತು ಅದರ ಜನತೆಯ ಸರ್ವತೋಮುಖ ಆರ್ಥಿಕ ಅಭಿವೃದ್ಧಿಗೆ ಬೇಕಾದ ವಾತಾವರಣ ನಿರ್ಮಿಸುವುದು ಇದರ ಪ್ರಾಥಮಿಕ ಗುರಿ. ಕ್ರಿಯಾಶೀಲ, ಪಾರದರ್ಶಕ ಮತ್ತು ಉತ್ತರದಾಯಿ ಸರ್ಕಾರದ ಮೂಲಕ ಅದನ್ನು ಸಾಧಿಸಬಹುದು; ವ್ಯಾಪಾರಕ್ಕೆ ಅನುಕೂಲ ಕಲ್ಪಿಸಬೇಕು; ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಬೇಕು. ಹಿಂದಿನ ನೆಹರು-ಅಬ್ದುಲ್ಲಾ ಕಾಲದ ಬಿಕ್ಕಟ್ಟಿಗೆ ಕಾರಣವಾದ ಹಳೆಯ ನಿಯಮ, ವಿಧಾನ ಸರಿಪಡಿಸಬೇಕು. ರಾಜ್ಯದ ಪರಿಪೂರ್ಣ ಅಭಿವೃದ್ಧಿಗೆ ಸರ್ಕಾರ ಹೊಸಮಾರ್ಗವನ್ನು ಹುಡುಕಲಿದೆ. ಮೂಲಸವಲತ್ತು, ಇಂಧನ, ಮಾಹಿತಿತಂತ್ರಜ್ಞಾನ, ಪ್ರವಾಸೋದ್ಯಮ, ಕುಶಲಕಲೆಗಳಿಗೆ ಪ್ರೋತ್ಸಾಹ ನೀಡಲಿದೆ. ಈಗಾಗಲೆ ಇರುವ ಪಶ್ಮಿನಾ ಶಾಲು, ಕೇಸರಿ, ಗಿಡಮೂಲಿಕೆಗಳ ಉತ್ಪಾದನೆ-ಮಾರಾಟವನ್ನು ಕ್ರಮಬದ್ಧಗೊಳಿಸಿ ಅದಕ್ಕೆ ಜಾಗತಿಕ ಮಾರುಕಟ್ಟೆ ರೂಪಿಸಲಿದೆ” ಎಂದು ತಿಳಿಸಲಾಗಿದೆ.
ಸಿ.ಎಂ.ಪಿ.ಯ ಶಕ್ತಿ ಎಂದರೆ ಸಮತೋಲನದ ಗುರಿ ಮತ್ತು ಪಕ್ಷಪಾತವಿಲ್ಲದ ದೃಷ್ಟಿಕೋನ. ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ಇದು ಸ್ಪಷ್ಟ ಮತ್ತು ಶ್ಲಾಘನೀಯ ರೀತಿಯಲ್ಲಿ ವಿಭಿನ್ನವಾಗಿದೆ. ಅದರ ಒಂದು ಉದ್ದೇಶ ರಾಜ್ಯದ ಎಲ್ಲ ಮೂರು ಪ್ರದೇಶಗಳಲ್ಲಿ ಸಮತೂಕದ ಅಭಿವೃದ್ಧಿ. ಈ ಭಾವನೆ ಸಿ.ಎಂ.ಪಿ.ಯ ಎಲ್ಲ ನಿಯಮ, ಉಪಕ್ರಮಗಳ ಸಮಾನ ಸೂತ್ರ. ಸಮಾನ ಹಂಚಿಕೆಯ ಮೂಲಕ ಜಮ್ಮು-ಕಾಶ್ಮೀರವನ್ನು ಕೇವಲ ಕಾಶ್ಮೀರ ಕಣಿವೆ ಮತ್ತದರ ಆವಶ್ಯಕತೆಗಳಿಗೆ ಸೀಮಿತಗೊಳಿಸುವುದನ್ನು ತಡೆಯಲಾಗುವುದು. ಇದು ಜಮ್ಮು, ಲಡಾಖ್ಗೆ ಈವರೆಗಾದ ಅನ್ಯಾಯವನ್ನು ಸರಿಪಡಿಸಬಹುದು. ಜೊತೆಗೆ ಈವರೆಗಿನ ಅಲಕ್ಷಿತ ಸಮುದಾಯ, ಪರಂಪರೆ, ಸಂಸ್ಕೃತಿಗಳನ್ನು ಪ್ರಧಾನಧಾರೆಗೆ ತರಲು ಉದ್ದೇಶಿಸಲಾಗಿದೆ.
ಇದಲ್ಲದೆ ಸಿ.ಎಂ.ಪಿ. ಜಾರಿಯಾದರೆ ಕೆಲವು ನೈತಿಕ ಸುಧಾರಣೆಗಳು ಕೂಡ ಆಗಬಹುದೆಂದು ನಿರೀಕ್ಷಿಸಲಾಗಿದೆ. ‘ಅತ್ಯಂತ ಭ್ರಷ್ಟರಾಜ್ಯ ಎನ್ನುವ ಅಪಖ್ಯಾತಿ ದೂರವಾಗಬಹುದು. ಒಟ್ಟಿನಲ್ಲಿ ಮುಂದಿನ ಆರು ವರ್ಷಗಳಲ್ಲಿ ಜಮ್ಮು-ಕಾಶ್ಮೀರವು ತಾರತಮ್ಯರಹಿತ, ಎಲ್ಲರನ್ನೂ ಒಳಗೊಂಡ, ಜನಪರ, ಶಾಂತಿ-ಸಮೃದ್ಧಿಯ ರಾಜ್ಯವಾಗಬಹುದೆಂದು ನಿರೀಕ್ಷಿಸಲಾಗಿದೆ. ಪರಸ್ಪರ ಒಪ್ಪಿಗೆ ಸಾಧ್ಯವಾಗದ ವಿವಾದಿತ ವಿಷಯಗಳನ್ನು ಹಾಗೆಯೇ ಬಿಡಬೇಕು (ಚಿgಡಿee ಣo ಜisಚಿgಡಿee); ಇತಿಹಾಸಕ್ಕೆ ಸಂಬಂಧಿಸಿದ ವಿಷಯಗಳನ್ನು (ಚರ್ಚೆ, ವಿಶ್ಲೇಷಣೆ, ವಿವರಣೆ) ಇತಿಹಾಸ ಮತ್ತು ಇತಿಹಾಸಕಾರರಿಗೆ ಬಿಡಬೇಕು ಎಂಬ ಎಚ್ಚರ ಕೂಡ ಸಿ.ಎಂ.ಪಿ.ಯಲ್ಲಿದೆ. ಪ್ರಾಯಶಃ ಇದು ಪೂರ್ತಿ ಅನುಷ್ಠಾನಕ್ಕೆ ಬರುವ ಮುನ್ನವೇ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ಒಂದೆರಡು ಎಡವಟ್ಟುಗಳನ್ನು ಮಾಡಿಕೊಂಡರೆನಿಸುತ್ತದೆ.
ಜಮ್ಮು-ಕಾಶ್ಮೀರದಲ್ಲಿ ೨ ಲಕ್ಷ ಪ್ರೌಢಮತದಾರರು ಪಾರ್ಲಿಮೆಂಟಿಗೆ ನಡೆಯುವ ಚುನಾವಣೆಗಳಲ್ಲಿ ತಮ್ಮ ಮತವನ್ನು ಚಲಾಯಿಸಲು ಅರ್ಹರು; ಆದರೆ ಅಸೆಂಬ್ಲಿಗೆ ನಡೆಯುವ ಚುನಾವಣೆಗಳಲ್ಲಿ ಅವರಿಗೆ ಆ ಹಕ್ಕು ಇರುವುದಿಲ್ಲ! ಯಾಕೆ?
ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ
ಉಭಯಪಕ್ಷಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದಾದ ಒಂದು ಅಂಶ – ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (ಂಡಿmeಜ ಈoಡಿಛಿes Sಠಿeಛಿiಚಿಟ Poತಿeಡಿs ಂಛಿಣ – ಎ.ಎಫ್.ಎಸ್.ಪಿ.ಎ.) ಎನ್ನಬಹುದು. ಎ.ಎಫ್.ಎಸ್.ಪಿ.ಎ. ಅಡಿಯಲ್ಲಿ ಸೇನೆ ಜಮ್ಮು-ಕಾಶ್ಮೀರ, ಪಂಜಾಬ್ ಮತ್ತು ಈಶಾನ್ಯ ಭಾರತದಲ್ಲಿ ಕೆಲಸಮಾಡುವ ರೀತಿ ಮುಫ್ತಿಯವರಿಗೆ ತಿಳಿಯದ್ದಲ್ಲ. ೧೯೮೯ರಲ್ಲಿ ಅವರು ಕೇಂದ್ರ ಗೃಹಸಚಿವರಾಗಿದ್ದಾಗ ಅವರ ಪುತ್ರಿ ದುಬೈಯಾ ಸಯೀದ್ರನ್ನು ಉಗ್ರರು ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡರು; ಆಗ ಗೃಹಸಚಿವರಾದ ಅವರು ಆರುಮಂದಿ ಕಟ್ಟಾ ಉಗ್ರರನ್ನು ಬಿಡುಗಡೆಗೊಳಿಸಬೇಕಾಯಿತು. ಒಟ್ಟಿನಲ್ಲಿ ಕಾಶ್ಮೀರದಲ್ಲಿ ಸೇನೆ ಮತ್ತು ಎ.ಎಫ್.ಪಿ.ಎಸ್.ಎ.ಯ ಅಗತ್ಯ ಮುಫ್ತಿಯವರಿಗೆ ಗೊತ್ತಿದೆ; ಆದರೆ ರಾಜಕಾರಣಿಯಾಗಿ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಅವರು ಈ ಕಾಯ್ದೆ ಬೇಡ ಎನ್ನುತ್ತಾರೇನೋ. ಆ ಬಗ್ಗೆ ಭಾ.ಜ.ಪ.ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮೈತ್ರಿ ಸರ್ಕಾರದ ರೂವಾರಿಗಳಲ್ಲಿ ಒಬ್ಬರಾದ ರಾಂಮಾಧವ್ “ಎ.ಎಫ್.ಎಸ್.ಪಿ.ಎ. ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಕೇಂದ್ರಸರ್ಕಾರಕ್ಕೆ ನೀಡಲಾಗಿದೆ. ಯಾವ ಪ್ರದೇಶದಲ್ಲಿ ಆ ಕಾಯ್ದೆ ಬೇಡ ಅಥವಾ ಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರ ಶಿಫಾರಸು ಮಾಡಬಹುದಷ್ಟೆ” ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಎ.ಎಫ್.ಎಸ್.ಪಿ.ಎ. ವಿವಾದಿತ ಆದುದಕ್ಕೆ ಅನೇಕ ಕಾರಣಗಳನ್ನು ಗುರುತಿಸಬಹುದು. ಪಾಕಿಸ್ತಾನದ ಕುಮ್ಮಕ್ಕಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಛಾಯಾಸಮರದ ಬಹಳಷ್ಟು ಪಾತ್ರಧಾರಿಗಳು ಸೇನಾ ಕಾರ್ಯಾಚರಣೆಯಲ್ಲಿ ಸತ್ತಿದ್ದಾರೆ. ಅದರಿಂದ ಭಯೋತ್ಪಾದಕ ಚಟುವಟಿಕೆ ಇಳಿಯುತ್ತದೆ; ರಾಜ್ಯಕ್ಕೆ ಶಾಂತಿ ಮರಳುತ್ತದೆ. ಅದು ಇಷ್ಟವಿಲ್ಲದ ಪಾಕ್ ಸೇನೆ, ಐ.ಎಸ್.ಐ., ಪ್ರತ್ಯೇಕತಾವಾದಿಗಳು ಸೇನಾಕಾರ್ಯಾಚರಣೆ ಬೇಡವೆನ್ನುತ್ತಾರೆ.
ಆದರೆ ಒಂದು ಬೇಸರದ ಸಂಗತಿಯೆಂದರೆ, ಈ ಕಾರ್ಯಾಚರಣೆಯಲ್ಲಿ ಅನಿವಾರ್ಯವಾಗಿ ನಿರಪರಾಧಿಗಳು ಸಾಯುವುದಿದೆ. ಮಾಹಿತಿದಾರರು ಅಡಗುತಾಣದ ಬಗ್ಗೆ ಸೇನೆ ಮತ್ತು ಗಸ್ತು ತಂಡಗಳಿಗೆ ತಪ್ಪು ಮಾಹಿತಿ ನೀಡಿದಾಗ ಅಂತಹ ಪ್ರಮಾದ ಘಟಿಸುವುದಿದೆ. ಅದು ಅಪರೂಪವಾದರೂ ಛಾಯಾಸಮರ ನಡೆಸುವವರು ಅದನ್ನೇ ದೊಡ್ಡದುಮಾಡಿ ತೋರಿಸುತ್ತಾರೆ. ಅವರ ಸಹಾನುಭೂತಿಪರರು, ಮಾಧ್ಯಮ ಮತ್ತು ನಾಗರಿಕ ಹಕ್ಕು ಹೋರಾಟಗಾರರು ಅದನ್ನು ಎತ್ತಿಕೊಂಡು ಸೇನೆ ವಿರುದ್ಧ ಭಾರೀ ಗದ್ದಲ ಎಬ್ಬಿಸುತ್ತಾರೆ. ಸೇನೆಯ ಕಾರ್ಯಾಚರಣೆ ಅಗತ್ಯವಿದ್ದರೂ ಕೂಡ ಪ್ರತ್ಯೇಕತಾವಾದಿ ಉಗ್ರರನ್ನು ಹುತಾತ್ಮರನ್ನಾಗಿ ಚಿತ್ರಿಸುವ ಪ್ರಯತ್ನ ವ್ಯಾಪಕವಾಗಿದೆ; ಅದನ್ನು ಸೇನೆಯ ಕಿರುಕುಳ ಎಂಬಂತೆ ಚಿತ್ರಿಸುತ್ತಾರೆ; ಪಾಕಿಸ್ತಾನದ ಆಟಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಾರೆ; ರಾಜಕಾರಣಿಗಳು ಅದಕ್ಕೆ ನೀರೆರೆಯುತ್ತಾರೆ.
ಎರಡನೆಯದಾಗಿ, ಕಾಶ್ಮೀರದಲ್ಲಿ ಶಾಂತಿಯಿರುವುದು ಪಾಕಿಸ್ತಾನಕ್ಕೆ ಬೇಕಾಗಿಲ್ಲ. ಸರ್ಕಾರಿ ಅಲಕ್ಷ್ಯ, ಭ್ರಷ್ಟಾಚಾರ, ಗ್ರಾಮೀಣ ಹಿಂದುಳಿಕೆಗಳಿಂದಾಗಿ ಜನ ಸರ್ಕಾರದಿಂದ ದೂರವಾಗಿ, ದುರಾಶೆಗಳ ಕಾರಣದಿಂದ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಾರೆ; ಹೀಗೆ ದೂರದ ಗ್ರಾಮೀಣ ಪ್ರದೇಶ ಉಗ್ರರ ಅಡಗುತಾಣವಾಗುತ್ತದೆ.
ಕಾಶ್ಮೀರದಲ್ಲಿ ಚೀನಾ
ಮೂರನೆಯದಾಗಿ, ಕಾಶ್ಮೀರದಲ್ಲೀಗ ಪಾಕಿಸ್ತಾನಕ್ಕಿಂತ ಅಪಾಯಕಾರಿ ಶತ್ರುವಾದ ಚೀನಾದ ಉಪಸ್ಥಿತಿ ಕಂಡುಬಂದಿದೆ. ಹಿಂದೆ ಶಕ್ಸ್ಗಾಂವ್ ಕಣಿವೆಯನ್ನು ಚೀನಾಕ್ಕೆ ನೀಡಿದ ಪಾಕಿಸ್ತಾನ ಈಗ ಗಿಲ್ಗಿಟ್-ಬಾಲ್ಟಿಸ್ತಾನಗಳ ಆಕ್ರಮಿತ ಪ್ರದೇಶಗಳನ್ನು ೫೦ ವರ್ಷಗಳ ಭೋಗ್ಯ(ಲೀಸ್)ಕ್ಕೆ ಚೀನಾಗೆ ನೀಡುವ ಬಗ್ಗೆ ಪರಿಶೀಲಿಸುತ್ತಿದೆ ಎಂಬ ವರದಿಗಳಿವೆ. ಪೂರ್ವ ಲಡಾಖ್ನ ಅಕ್ಸಾಯ್ ಚಿನ್ ಈಗಾಗಲೇ ಚೀನಾದ ವಶದಲ್ಲಿದೆ. ಇನ್ನು ಗಿಲ್ಗಿಟ್-ಬಾಲ್ಟಿಸ್ತಾನಗಳು ದೊರೆತರೆ ಭಾರತವನ್ನು ಸುತ್ತುವರಿಯಲು ಚೀನಾಕ್ಕೆ ಅನುಕೂಲವಾಗುತ್ತದೆ; ಆ ಭಾಗದಲ್ಲಿ ಪಾಕ್-ಚೀನಾ ಜಂಟಿ-ವ್ಯೂಹಾತ್ಮಕ ಚಟುವಟಿಕೆಗೆ ಪೂರಕವಾಗುತ್ತದೆ.
ನಾಲ್ಕನೆಯದಾಗಿ, ಕಾಶ್ಮೀರದಿಂದ ಕಾರಕೋರಂ ಕಣಿವೆ ಮೂಲಕ ಪ್ರಾಚೀನ ಸಿಲ್ಕ್ರೂಟ್ ಮಾರ್ಗವಾಗಿ ಮಧ್ಯ ಏಶ್ಯಾಕ್ಕೆ ಹೋಗಬಹುದು. ಈಗ ಕಾರಕೋರಂ ಕಣಿವೆ ಚೀನಾವನ್ನು ಬಲೂಚಿಸ್ತಾನದ ಮೂಲಕ ಗ್ವದಾರ್ ಬಂದರಿಗೆ ಜೋಡಿಸುತ್ತದೆ; ಅಲ್ಲಿಂದ ಕೊಲ್ಲಿ ದೇಶಗಳ ಉತ್ತಮ ಸಮುದ್ರತೀರ ಸಿಗುತ್ತದೆ. ಒಟ್ಟಿನಲ್ಲಿ ಕಾಶ್ಮೀರಕ್ಕೆ ವಿಶೇಷಸ್ಥಾನ ನೀಡುವ ಸಂವಿಧಾನದ ವಿಧಿ ೩೭೦, ರಾಜ್ಯದ ದೊಡ್ಡ ಭಾಗ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರ (ಪಿಓಜೆಕೆ) ಆಗಿರುವುದು, ಗಡಿರೇಖೆ ಬದಲು ಅಷ್ಟೊಂದು ಸ್ಥಿರವಲ್ಲದ ನಿಯಂತ್ರಣರೇಖೆ ಇರುವುದು, ಆ ಭಾಗದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿರುವುದು ಪಾಕಿಸ್ತಾನಕ್ಕೆ ತುಂಬ ಅನುಕೂಲಕರ ಅಂಶಗಳಾಗಿವೆ; ಇನ್ನು ೧೯೭೧ರ ಹೀನಾಯ ಸೋಲು, ಪೂರ್ವ ಪಾಕಿಸ್ತಾನ (ಬಂಗ್ಲಾದೇಶ) ಕೈತಪ್ಪಿದ್ದು ಪಾಕಿಸ್ತಾನಕ್ಕೆ ಈಗಲೂ ನುಂಗಲಾರದ ತುತ್ತಾಗಿ ಉಳಿದಿವೆ. ಸೇಡುತೀರಿಸಲು ಅದಕ್ಕೆ ಕಾಶ್ಮೀರವೇ ವಸ್ತು. ಆದ್ದರಿಂದ ಆ ರಾಜ್ಯದ ಭದ್ರತೆಯನ್ನು ಅಲಕ್ಷಿಸುವಂತೆಯೇ ಇಲ್ಲ. ಎ.ಎಫ್.ಎಸ್.ಪಿ.ಎ.ಯಲ್ಲಿ ಏನಾದರೂ ದೋಷವಿದ್ದರೆ ಅದನ್ನು ಸರಿಪಡಿಸಬಹುದೇ ಹೊರತು ದುರ್ಬಲಗೊಳಿಸುವುದು ಅಸಂಭವ; ಅದನ್ನು ತೆಗೆದರೆ ಅನುಕೂಲವಾಗುವುದು ಭಯೋತ್ಪಾದಕರಿಗೇ ಹೊರತು ಜನರಿಗಲ್ಲ.
ಉಳಿದಂತೆ ವಿಧಿ ೩೭೦ರ ವಿಷಯದಲ್ಲಿ ಎರಡೂ ಪಕ್ಷಗಳ ನಿಲವನ್ನು ಗಮನಿಸಿ ಯಥಾಸ್ಥಿತಿಯನ್ನು ಕಾಪಾಡಲು ನಿರ್ಧರಿಸಲಾಗಿದೆ. ಹುರಿಯತ್ ಕಾನ್ಫರೆನ್ಸ್ ಜತೆ ಮಾತುಕತೆಗೆ ಸಂಬಂಧಿಸಿ, ಆಂತರಿಕ ಹಕ್ಕುದಾರರೆಂಬ ನೆಲೆಯಲ್ಲಿ ಅವರ ಜೊತೆಯಲ್ಲಿ ಮಾತುಕತೆ ನಡೆಸಬಹುದೆಂದು ತೀರ್ಮಾನಿಸಲಾಗಿದೆ. ೧೯೪೭, ೧೯೬೫ ಮತ್ತು ೧೯೭೧ರ ಯುದ್ಧಗಳ ವೇಳೆ ಜಮ್ಮು-ಕಾಶ್ಮೀರಕ್ಕೆ ಬಂದ ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರಿಗೆ ಪೌರತ್ವ ನೀಡಿ, ಪುನರ್ವಸತಿ ಕಲ್ಪಿಸಬೇಕೆಂಬುದು ಭಾ.ಜ.ಪ.ದ ನಿಲವಾಗಿತ್ತು. ಆದರೆ ಮೈತ್ರಿ ಸರ್ಕಾರ ಅವರಿಗೆ ಧನಸಹಾಯ-ಪರಿಹಾರ ನೀಡಲಷ್ಟೆ ಸಾಧ್ಯ ಎಂಬ ಅಭಿಪ್ರಾಯಕ್ಕೆ ಬಂದಿದೆ.
ಆರಂಭದ ಆಘಾತ
ಮೈತ್ರಿ ಎಂಬುದೊಂದು ದೊಡ್ಡ ತತ್ತ್ವ. ಮುಫ್ತಿ ಅವರಲ್ಲಿ ಅದಕ್ಕಿಂತ ಅವರೊಳಗಿರುವ ರಾಜಕಾರಣಿಯೇ ಮೇಲುಗೈ ಸಾಧಿಸಿದನೇನೋ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಅವರು ಹುಟ್ಟುಹಾಕಿದ ವಿವಾದಗಳು ಅದಕ್ಕೆ ಪುರಾವೆಯಾಗಿವೆ. ಹುರಿಯತ್ ಕಾನ್ಫರೆನ್ಸ್, ಉಗ್ರಗಾಮಿಗಳು ಹಾಗೂ ಪಾಕಿಸ್ತಾನದ ಸಹಕಾರದಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಶಾಂತಿಯುತ ಚುನಾವಣೆ ನಡೆಯಲು ಸಾಧ್ಯವಾಯಿತು ಎಂದು ಹೊಸ ಮುಖ್ಯಮಂತ್ರಿ ಕೃತಜ್ಞತೆ ವ್ಯಕ್ತಪಡಿಸಿದ್ದು ಭಾರೀ ವಿವಾದಕ್ಕೆ ಕಾರಣವಾಯಿತು. ಅವರು ಯಾರನ್ನೋ ಖುಷಿಪಡಿಸಲು ಹಾಗೆ ಹೇಳಿದ್ದರು ಎಂಬುದು ಸತ್ಯ.
ಆದರೆ ಆ ಮಾತು ಮಿತ್ರಪಕ್ಷ ಭಾ.ಜ.ಪ. ಮಾತ್ರವಲ್ಲ; ಇಡೀ ದೇಶಕ್ಕೆ ಅಪಚಾರವೆಸಗಿತ್ತು; ಸುಳ್ಳು ಕೂಡ ಆಗಿತ್ತು. ಪಾಕಿಸ್ತಾನ ಮತ್ತು ಅದರ ಬೆಂಬಲಿತ ಉಗ್ರರು ಈ ಚುನಾವಣೆ ತಡೆಯಲು ಎಲ್ಲ ಪ್ರಯತ್ನ ಮಾಡಿದ್ದರು. ನವೆಂಬರ್ ೨೧ರಂದು ಪುಲ್ವಾಮದಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರರು ದಾಳಿ ನಡೆಸಿದಾಗ ಮೂವರು ಉಗ್ರರು ಮೃತರಾದರು. ನವೆಂಬರ್ ೨೭ರಂದು ಜಮ್ಮುವಿನಲ್ಲಿ ನಾಲ್ವರು ಉಗ್ರರು, ಐವರು ನಾಗರಿಕರು ಹಾಗೂ ಮೂವರು ಸೇನಾಸಿಬ್ಬಂದಿ ಮೃತಪಟ್ಟರು. ಡಿಸೆಂಬರ್ ೨ರಂದು ಕುಪ್ವಾರಾದಲ್ಲಿ ನಡೆದ ಕಾಳಗದಲ್ಲಿ ಏಳು ಉಗ್ರರು ಸತ್ತಿದ್ದರು. ಉರಿಯಲ್ಲಿ ನಡೆದ ಛಾಯಾಸಮರದಲ್ಲಿ ಲೆಫ್ಟಿನೆಂಟ್ ಕರ್ನಲ್ ಸಹಿತ ಕೆಲವು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಇದನ್ನೆಲ್ಲ ನೂತನ ಮುಖ್ಯಮಂತ್ರಿ ಮರೆಯಬಾರದಿತ್ತು; ಕರಪತ್ರ ಹಂಚಿಕೆ, ಮತಹಾಕದಂತೆ ಬೆದರಿಕೆ, ಬಾಂಬೆಸೆತ ತುಂಬ ನಡೆದಿದ್ದವು. ಆದರೂ ಸೇನೆಯ ಎಚ್ಚರ, ಚುನಾವಣಾ ಆಯೋಗದ ಸಿದ್ಧತೆ ಮತ್ತು ಜನತೆಯ ದೃಢನಿರ್ಧಾರದಿಂದಾಗಿ ದೊಡ್ಡಪ್ರಮಾಣದ ಮತದಾನವಾಗಿ ಚುನಾವಣೆ ಯಶಸ್ವಿಯಾಗಿತ್ತು. ಕೇಂದ್ರ ಸರ್ಕಾರ, ಗೃಹಸಚಿವ ರಾಜನಾಥ್ ಸಿಂಗ್ ಮುಫ್ತಿ ಹೇಳಿಕೆಯನ್ನು ತೀವ್ರವಾಗಿ ಆಕ್ಷೇಪಿಸಿ ಹೇಳಿಕೆ ನೀಡಿದರು.
ಮುಂದಿನ ವಿವಾದವನ್ನು ಕೆದಕಿದವರು ಪಿ.ಡಿ.ಪಿ.ಯ ಎಂಟುಮಂದಿ ಶಾಸಕರು. ಸಂಸತ್ ಮೇಲಿನ ಸಶಸ್ತ್ರ ದಾಳಿಯ ಆರೋಪಿಯಾಗಿ ಗಲ್ಲು ಶಿಕ್ಷೆಗೆ ಗುರಿಯಾದ ಅಫ್ಜಲ್ಗುರುವಿನ ಅವಶೇಷಗಳನ್ನು ಒಪ್ಪಿಸಬೇಕೆನ್ನುವ ಬೇಡಿಕೆಯನ್ನು ಆ ಶಾಸಕರು ಮಂಡಿಸಿದರು. ಮತ್ತೆ ವಿವಾದ, ಗಲಭೆಗಳನ್ನು ಹುಟ್ಟುಹಾಕಿ, ಪ್ರತ್ಯೇಕತಾವಾದಿಗಳನ್ನು ಪೋಷಿಸಬೇಕೆನ್ನುವುದು ಇದರ ಹಿಂದಿರುವ ಹುನ್ನಾರ ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ಕೇಂದ್ರ ಸರ್ಕಾರ ಅಷ್ಟೇ ನೇರವಾಗಿ ತಳ್ಳಿಹಾಕಿತು. ಆದರೂ ಅದರಲ್ಲಿ ಮುಫ್ತಿ ಮತ್ತವರ ಪಕ್ಷೀಯರು ಯಾರನ್ನೋ ಖುಷಿಪಡಿಸಲು ಯತ್ನಿಸಿದ್ದು ಸತ್ಯ. ಇದು ‘ಆದರೆ ಲಾಭ, ನಷ್ಟವಂತೂ ಇಲ್ಲ ಎಂಬಂತಹ ವ್ಯವಹಾರ.
ವಾರದೊಳಗೆ ಮುಫ್ತಿಯವರು ಹುಟ್ಟುಹಾಕಿದ ಅತಿದೊಡ್ಡ ವಿವಾದ ಸೆರೆಯಲ್ಲಿದ್ದ ಕಟ್ಟಾ ಉಗ್ರ ಆಲಂನನ್ನು ಮಿತ್ರಪಕ್ಷ ಭಾ.ಜ.ಪ.ಕ್ಕೆ ಮಾಹಿತಿಯನ್ನು ಕೂಡ ನೀಡದೆ ಬಿಡುಗಡೆಗೊಳಿಸಿದ್ದು. ಆತನ ವಿರುದ್ಧ ಹಲವು ಪ್ರಕರಣಗಳಿದ್ದವು; ಆದರೆ ಮುಫ್ತಿ ಆತ ಕೇವಲ ರಾಜಕೀಯ ಕೈದಿ ಎಂಬ ವಿವರಣೆ ನೀಡಿದರು. ಆ ಹೊತ್ತಿಗೆ ಸಂಸತ್ ಅಧಿವೇಶನ ನಡೆಯುತ್ತಿದ್ದು, ಕಾಶ್ಮೀರ ಸರ್ಕಾರದ ಕ್ರಮದ ಬಗ್ಗೆ ಪಕ್ಷಭೇದ ಮರೆತು ಎಲ್ಲರಿಂದ ಕಟುಟೀಕೆಗಳು ಬಂದವು. “ರಾಷ್ಟ್ರದ ಭದ್ರತೆಯ ವಿಷಯದಲ್ಲಿ ನಮ್ಮ ಸರ್ಕಾರ ರಾಜಿಮಾಡಿಕೊಳ್ಳುವುದಿಲ್ಲ. ನಮಗೆ ಯಾವುದೇ ಸರ್ಕಾರ ಆದ್ಯತೆಯಲ್ಲ ಎಂದು ರಾಜನಾಥ್ ಸಿಂಗ್ ಎಚ್ಚರಿಸಿದರೆ, ಅಮಿತ್ ಶಾ ಮುಫ್ತಿ ಅವರಿಗೆ ಫೋನ್ ಕರೆ ಮಾಡಿ ಅಂಥದೇ ಎಚ್ಚರಿಕೆ ನೀಡಿದರೆನ್ನಲಾಗಿದೆ. ರಾಜ್ಯದ ಉಪಮುಖ್ಯಮಂತ್ರಿ ನಿರ್ಮಲ್ ಕುಮಾರ್ ಸಿಂಗ್ ಸ್ವತಃ ದೆಹಲಿಗೆ ಹೋಗಿ ಘಟನೆಯ ಪೂರ್ವಾಪರ ತಿಳಿಸಿದರು. ಮುಖ್ಯಮಂತ್ರಿ ಮೇಲೆ ಇಂತಹ ವಿಷಯಗಳ ಬಗೆಗೆ ಕಣ್ಣಿಡುವಂತೆ ಅಮಿತ್ ಶಾ ಉಪಮುಖ್ಯಮಂತ್ರಿ ಮತ್ತು ರಾಜ್ಯ ಭಾ.ಜ.ಪ. ಅಧ್ಯಕ್ಷ ಜುಗಲ್ ಕಿಶೋರ್ ಶರ್ಮಾ ಅವರಿಗೆ ಸೂಚಿಸಿದ್ದಾರೆ ಎಂದು ಕೂಡ ವರದಿಯಾಗಿದೆ.
ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಡಾ. ಫರೂಕ್ ಅಬ್ದುಲ್ಲಾ ಇತ್ತೀಚೆಗೆ ಒಂದು ಹೇಳಿಕೆ ನೀಡಿ, “ನನ್ನ ತಂದೆ ಶೇಕ್ ಅಬ್ದುಲ್ಲಾ ಅವರ ನೇತೃತ್ವದಲ್ಲಿ ಕಾಶ್ಮೀರವು ಭಾರತದೊಂದಿಗೆ ವಿಲೀನವಾಯಿತು; ಆದರೆ ಇದೊಂದು ತಪ್ಪು ನಿರ್ಧಾರವಾಗಿತ್ತು” ಎಂದಿದ್ದಾರೆ. ವಾಸ್ತವದಲ್ಲಿ ಜಮ್ಮು ಮತ್ತು ಕಾಶ್ಮೀರವು ಭಾರತದೊಂದಿಗೆ ವಿಲೀನವಾಗಲು ಕಾರಣರಾದವರು ಮಹಾರಾಜ ಹರಿ ಸಿಂಗ್. ಇದು ಡಾ. ಫರೂಕ್ ಅಬ್ದುಲ್ಲಾ ಅವರ ಸಮಯಸಾಧಕತನವಲ್ಲದೆ ಮತ್ತೇನು? ಅಥವಾ ಅವರೇನಾದರೂ ಉಗ್ರಗಾಮಿಗಳನ್ನು ತುಷ್ಟೀಕರಿಸಲು ಯತ್ನಿಸುತ್ತಿದ್ದಾರೆಯೇ?
ನಿಷ್ಠೆಯಲ್ಲಿ ದ್ವಂದ್ವ
ಒಂದು ವಿಷಯವಂತೂ ಸತ್ಯ. ಮುಖ್ಯಮಂತ್ರಿ ಮುಫ್ತಿ ಅವರ ಮೇಲೆ ಕಣ್ಣಿಡುವಂತೆ ಅಮಿತ್ ಶಾ ಅಥವಾ ಭಾ.ಜ.ಪ. ಇತರ ವರಿಷ್ಠರು ಯಾರಿಗೆ ಯಾವುದೇ ಸೂಚನೆ ನೀಡಿದರೂ ಆತ ಮುಂದೆಯೂ ಇಂತಹ ಕಳ್ಳಬೆಕ್ಕಿನ ಹೆಜ್ಜೆ ಇಡುವುದಿಲ್ಲವೆಂದು ಯಾವ ರಾಜಕೀಯ ವಿಶ್ಲೇಷಕರೂ ಹೇಳಲಾರರು. ಅವರ ಮಾತುಗಳನ್ನು ಗಮನಿಸಿದರೆ ಅವರ ನಿಷ್ಠೆಯಲ್ಲೇನೋ ದ್ವಂದ್ವವಿದೆ ಎಂದು ಅನಿಸಿದರೆ ಆಶ್ಚರ್ಯವಿಲ್ಲ. ಸಂದರ್ಶನವೊಂದರಲ್ಲಿ ಮುಫ್ತಿ ಅವರಾಡಿದ ಕೆಲವು ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಏನಾದರೂ ಸುಳಿವು ಸಿಗಬಹುದೇನೋ! (‘ಇಂಡಿಯಾ ಟುಡೇ’, ಮಾರ್ಚ್ ೧೬ರ ಸಂಚಿಕೆ)
“ಭಾ.ಜ.ಪ. ರಾಜ್ಯದಲ್ಲಿ ೨೫ ಸ್ಥಾನಗಳನ್ನು ಗೆದ್ದಿದೆ. ಜನಮತವನ್ನು ಬೆಂಬಲಿಸಬೇಕು. ರಾಜ್ಯದ ಎಲ್ಲ ಮೂರು ಪ್ರದೇಶಗಳ ಹಿತಾಸಕ್ತಿಯುಳ್ಳ ಸರ್ಕಾರವನ್ನು ನಡೆಸಬೇಕು” ಎನ್ನುವ ಅವರು, ವಿವಾದದ ಅಂಶಗಳು ಯಾವುವು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, “ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ಕೆಡಿಸಬಾರದೆಂದು ಲಿಖಿತ ಭರವಸೆಯನ್ನು ಕೇಳಿದೆವು. ಎರಡನೇ ವಿಷಯ ಎ.ಎಫ್.ಪಿ.ಎಸ್.ಎ. ಈ ಕೆಟ್ಟ ಕಾನೂನು ದೇಶಕ್ಕೇ ಕೆಟ್ಟ ಹೆಸರು ತರುತ್ತದೆ” ಎಂದು ಹೇಳಿದರು. ಅಂದರೆ ದೇಶದ ಭದ್ರತೆ ವಿಷಯ ಇಲ್ಲಿ ಮರೆತಿದೆ. ‘ಇದು ಅಪವಿತ್ರಮೈತ್ರಿ ಎಂಬ ಆರೋಪವನ್ನು ಹೇಗೆ ನಿವಾರಿಸುತ್ತೀರಿ?’ ಎಂದು ಕೇಳಿದಾಗ, “ಮೋದಿಯವರು ದೇಶದ ಜನ ಆರಿಸಿದ ಪ್ರಧಾನಿಯಾಗಿದ್ದಾರೆ. ಭಾ.ಜ.ಪ.ಕ್ಕೆ ಇಡೀ ದೇಶದ ಜನಮತ ಸಿಕ್ಕಿದೆ; ಅವರು ದೇಶದ ವಿವಿಧತೆಯನ್ನು ಗೌರವಿಸಬೇಕು” ಎಂದು ಉತ್ತರಿಸಿದ್ದಾರೆ.
‘ವಾಜಪೇಯಿ, ಮೋದಿ ಸಮವಾ? ೨೦೦೨ರ ಗುಜರಾತ್ ಗಲಭೆಯ ಹಿನ್ನೆಲೆಯಲ್ಲಿ ಮೋದಿ ಬಗ್ಗೆ ಏನನ್ನಿಸುತ್ತದೆ’ ಎಂದು ಕೇಳಿದಾಗ ಮುಫ್ತಿ ಆ ವಿಷಯ ಮುಟ್ಟುವುದಿಲ್ಲ. ಬದಲಾಗಿ, “ಪ್ರಧಾನಿಯಾಗಿ ಮೋದಿ ರಾಜ್ಯದ ಎಲ್ಲ ಹಕ್ಕುದಾರ(stakeholders)ರ ಜೊತೆ ಮಾತನಾಡಬೇಕು. ನಮ್ಮದು ದೇಶದ ಏಕೈಕ ಮುಸ್ಲಿಂ ಬಹುಮತದ ರಾಜ್ಯ; ಭಾ.ಜ.ಪ. ಕಾಶ್ಮೀರಿಗಳ ಮೆಚ್ಚುಗೆ ಗಳಿಸಬೇಕು” ಎಂದಷ್ಟೆ ಹೇಳಿದರು. ಎ.ಎಫ್.ಪಿ.ಎಸ್.ಎ. ಬಗ್ಗೆ ಮತ್ತೆ ಕೇಳಿದಾಗ, “ಸಂಯುಕ್ತ ಕಮಾಂಡ್ಗೆ ಮುಖ್ಯಮಂತ್ರಿಯೇ ಮುಖ್ಯಸ್ಥ; ನಾನು ಎಲ್ಲರನ್ನೂ ಉತ್ತರದಾಯಿಗಳನ್ನಾಗಿ ಮಾಡಬೇಕಾಗಿದೆ” ಎಂದು ಅಧಿಕಾರ ಸ್ಥಾಪಿಸಿದ್ದಾರೆ.
‘ನಿಮ್ಮ ಪಕ್ಷ – ಕಾಶ್ಮೀರಿಗಳಿಗೆ ಸ್ವಯಮಾಡಳಿತ ಎಂಬ ಕನಸನ್ನು ಮಾರಿತು; ಈಗ ಭಾ.ಜ.ಪ. ಜೊತೆ ಮೈತ್ರಿ ಮಾಡಿಕೊಂಡಿತು’ ಎಂಬ ಪ್ರಶ್ನೆಗೆ, “ನನ್ನ ಪ್ರಕಾರ (ಭಾರತ-ಪಾಕ್) ಗಡಿ ಮೃದು (ಸಡಿಲ) ಆಗಬೇಕು. ಟ್ರಾನ್ಸ್-ಕಾಶ್ಮೀರ ವ್ಯಾಪಾರ, ಪ್ರವಾಸ, ಸಮಾನ ಮಾರುಕಟ್ಟೆ ಆಗಬೇಕು. ಎರಡು ಕಾಶ್ಮೀರಗಳ ಮಧ್ಯೆ (ಇನ್ನೊಂದು ಪಿಓಜೆಕೆ) ಪಾಸ್ಪೋರ್ಟ್ ಇರಬಾರದು; ಇವೆಲ್ಲ ಸ್ವಯಮಾಡಳಿತಕ್ಕೆ ಪೂರಕ. ಹುರಿಯತ್ಗೊಂದು ದೃಷ್ಟಿಕೋನ ಇದೆ; ನಾವು ಅವರೊಂದಿಗೆ ಏಕೆ ವ್ಯವಹಾರ ಇರಿಸಿಕೊಳ್ಳಬಾರದು?” ಮುಂತಾಗಿ ಮುಫ್ತಿ ಉತ್ತರಿಸಿದ್ದಾರೆ.
ಒಟ್ಟಿನಲ್ಲಿ ಮುಫ್ತಿ ಅವರ ಮೇಲೆ ರಾಜ್ಯದ ಉಪಮುಖ್ಯಮಂತ್ರಿ ಮತ್ತು ರಾಜ್ಯ ಭಾ.ಜ.ಪ. ಅಧ್ಯಕ್ಷರು ಮಾತ್ರ ಕಣ್ಣಿಟ್ಟರೆ ಸಾಲದೇನೋ! ಏಕೆಂದರೆ ಕಾಶ್ಮೀರ ಭಾರತದ ಕಿರೀಟ; ಅದು ಈಗಾಗಲೇ ಸಾಕಷ್ಟು ಮುಕ್ಕಾಗಿದೆ.?