ದಾಖಲೆ
ಗುಂಡ: ಸಾರ್, ಎರಡು ಹೊತ್ತು ಊಟ ಕೊಡಿ ಸಾಕು. ನಿಮ್ಮ ಮನೆ ಕೆಲಸ ಮಾಡಿಕೊಂಡಿರ್ತೀನಿ.
ಯಜಮಾನ: ನಾಲ್ಕು ದಿನ ಇದ್ದು ಓಡಿಹೋಗ್ತೀಯ! ಬೇಡ.
ಗುಂಡ: ಇಲ್ಲಾ ಸಾರ್! ಈ ಮೊದಲು ಒಂದೇ ಕಡೆ ಏಳುವರ್ಷ ಕೆಲಸ ಮಾಡಿದ್ದಕ್ಕೆ ದಾಖಲೆ ಇದೆ.
ಯಜಮಾನ : ಎಲ್ಲಿ?
ಗುಂಡ: ಬಳ್ಳಾರಿ ಜೈಲಲ್ಲಿ.
– ಎಂ.ಕೆ. ಮಂಜುನಾಥ್
ಅಭ್ಯಾಸಬಲ
ರೈತ: ನನ್ನ ಮಗನಿಗೆ ಒಂದು ಪತ್ರ ಬರೆಯಬೇಕು. ಬರೆದು ಕೊಡುವಿರಾ?
ಬಸ್ ಕಂಡಕ್ಟರ್: ಬರೆದು ಕೊಡುವೆ, ಆದರೆ……
ಪತ್ರ ಬರೆದು ಮುಗಿಸುವತನಕ ನೀವು ನನ್ನನ್ನು ಅಲುಗಾಡಿಸುತ್ತಿರಬೇಕು.
– ಗುರುನಾಥ ಬೋರಗಿ
ಅಸಂಬದ್ಧ ಲೆಕ್ಕ
ಗುಂಡ : ಈ ಗಣಿತ ಮೇಷ್ಟರದು ಅತೀ ಆಯಿತು ಕಣೋ.
ತಿಂಮ: ಏಕೆ ಏನಾಯಿತು?
ಗುಂಡ : ನನಗೆ ಇವತ್ತು ಒಂದು ಅಸಂಬದ್ಧ ಲೆಕ್ಕ ಕೇಳಿದರು.
ತಿಂಮ: ಏನದು?
ಗುಂಡ : ಒಬ್ಬ ತಾಯಿ ಒಂದು ಮಗುವನ್ನು ಹೆರಲು ಒಂಭತ್ತು ತಿಂಗಳು ಬೇಕಾದರೆ, ಒಂಭತ್ತು ಅಮ್ಮಂದಿರು ಒಂದು ಮಗುವನ್ನು ಹೆರಲು ಎಷ್ಟು ತಿಂಗಳು ಬೇಕು?
– ಗುರುನಾಥ ಬೋರಗಿ
ಕಾರಣ
ಯಜಮಾನ: ಏನಯ್ಯ… ಒಂದು ತಿಂಗಳಿನಿಂದ ಭಿಕ್ಷೆಗೆ ಬಂದಿಲ್ವಲ್ಲ…ಯಾಕೆ?
ಭಿಕ್ಷುಕ: ಏನ್ ಮಾಡ್ಲಿ ಸ್ವಾಮಿ..ಇಲ್ಲೆಲ್ಲೂ ಕಾರ್ ಪಾರ್ಕಿಂಗ್‌ಗೆ ಜಾಗವೇ ಇಲ್ವಲ್ಲ !
– ಎಂ.ಕೆ. ಮಂಜುನಾಥ್
ಮುಂದಿನ ಬಾರಿ…
ನಟ: ನಿಮ್ಮ ಮದುವೆಗೆ ನನಗೆ ಕರೆಯಲೇ ಇಲ್ವಲ್ಲ?
ನಟಿ: ಕ್ಷಮಿಸಿ, ಮರೆತೆ. ಮುಂದಿನ ಬಾರಿ ಖಂಡಿತಾ ಕರೆಯುವೆ.
– ಗುರುನಾಥ ಬೋರಗಿ
ವ್ಯತ್ಯಾಸ
ಒಬ್ಬ; ನಾನು ಮಾಡದೇ ಇರೋ ಕರೆಗಳಿಗೆಲ್ಲ ಫೋನ್ ಬಿಲ್ ಬಂದಿದೆಯಲ್ಲ?
ಇನ್ನೊಬ್ಬ: ನಿನ್ನದೆಷ್ಟೋ ವಾಸಿ. ನಮ್ಮ ಮನೇಲಿ ಟೆಲಿಫೋನೇ ಇಲ್ಲ. ಆದರೂ ಬಿಲ್ ಬಂದಿದೆ.
– ಗುರುನಾಥ ಬೋರಗಿ
ಪರಿಣಾಮ
ಉಪನ್ಯಾಸಕ: ಸುಲಭವಾಗಿ ನಿದ್ದೆ ಮಾಡೋಕೆ ಏನು ಮಾಡ್ತೀರಾ?
ಗುಂಡ: ಮೊದಲು ಕಾಂಪೋಸ್ ನುಂಗುತ್ತಿದ್ದೆ. ಆದರೆ ಈಗ ಅದು ಕೆಲಸ ಮಾಡುತ್ತಿಲ್ಲ. ಅದಕ್ಕೆ ನಿಮ್ಮ ಉಪನ್ಯಾಸದ ಕ್ಯಾಸೆಟ್ ಹಾಕಿಕೊಂಡು ಕೇಳುತ್ತೇನೆ. ಸೊಗಸಾಗಿ ನಿದ್ದೆ ಬರುತ್ತದೆ.
– ಎಂ.ಕೆ. ಮಂಜುನಾಥ್
ಕಾರಣ
ಜಡ್ಜ್ : ಕಳ್ಳತನ ಮಾಡಲು ಹೆಂಚು ತೆಗೆದು ಮನೆಯೊಳಕ್ಕೆ ಯಾಕೆ ಹೋದೆ?
ಕಳ್ಳ : ಕಿಟಕಿ, ಬಾಗಿಲು ಮುರಿದರೆ ಪಾಪ ಮನೆಯಾತನಿಗೆ ನಷ್ಟ ಆಗುತ್ತೇಂತ ಮಹಾಸ್ವಾಮಿ.
– ಎಂ.ಕೆ. ಮಂಜುನಾಥ್
ಕಪ್ಪೆಕಾಲು
ಚೀನಾದಲ್ಲಿ ಏನೇನೋ ತಿನ್ನುತ್ತಾರಂತೆ. ತಾಯಿ-ಮಗಳು ಇಬ್ಬರು ಅಲ್ಲಿಗೆ ಹೋಗಿದ್ದರು. ಆಕರ್ಷಕವಾಗಿ ಪ್ರದರ್ಶನಕ್ಕೆ ಜೋಡಿಸಿಟ್ಟಿದ್ದ ತಿಂಡಿಪದಾರ್ಥಗಳನ್ನು ಕಂಡು ಮಗಳಿಗೆ ಆಸೆಯಾಯಿತು.
“ಅಮ್ಮ, ಕಪ್ಪೆಕಾಲು ಕೊಡಿಸೆ” ಎಂದು ತಾಯಿಯನ್ನು ಕೇಳಿದಳು.
“ಯಾಕೇ, ನಿನ್ನ ಕಾಲಿಗೆ ಏನಾಗಿದೆಯೇ?” ತಾಯಿ ರೇಗಿದಳು.
– ಪಾಂಚಜನ್ಯ
ಧಾರಾಳ
ಗ್ರಾಹಕ: ಪ್ಯಾಂಟ್ ಹೊಲಿದು ಕೊಡ್ತೀರಾ?
ಟೇಲರ್: ಓಹೋ…ಧಾರಾಳವಾಗಿ.
ಗ್ರಾಹಕ: ಧಾರಾಳ ಬೇಡ, ಸ್ವಲ್ಪ ಬಿಗಿಯಾಗಿಯೇ ಹೊಲಿದು ಕೊಡಿ !
– ಗುರುನಾಥ ಬೋರಗಿ
ವ್ಯತ್ಯಾಸ
ತಿಮ್ಮಿ: ನೀ ಬುದ್ಧಿವಂತ ಆದ್ರೆ `ಕಂಡಕ್ಟರ್’ ಮತ್ತು `ಡ್ರೈವರ್’ಗೆ ಏನು ವ್ಯತ್ಯಾಸ ಹೇಳು ನೋಡುವಾ?
ತಿಂಮ: ಕಂಡಕ್ಟರ್ ನಿದ್ದೆ ಮಾಡಿದರೆ ಯಾರೂ ಟಿಕೆಟ್ ತೆಗೆದುಕೊಳ್ಳುವ ಅಗತ್ಯವಿಲ್ಲ; ಆದರೆ ಡ್ರೈವರ್ ನಿದ್ದೆಮಾಡಿದರೆ ಖಂಡಿತ ಎಲ್ಲರೂ ಟಿಕೆಟ್ ತೆಗೆದುಕೊಳ್ಳಬೇಕಾಗುತ್ತದೆ.
– ಎಂ.ಕೆ. ಮಂಜುನಾಥ್
ಅಕಾಲ
ಒಬ್ಬ: ‘ಐ ವಿಲ್ ಕ್ಯಾಚ್ ಯು ಲೇಟರ್ ಈ ಮಾತನ್ನು ಯಾರು, ಯಾವಾಗ ಬಳಸಬಾರದು?
ಇನ್ನೊಬ್ಬ: ಕ್ರಿಕೆಟ್ ಆಟಗಾರ; ಎದುರಾಳಿ ಬ್ಯಾಟ್ಸ್‌ಮನ್ ಬೀಸಿದ ಚೆಂಡು ಎದುರಿಗೆ ಬಂದಾಗ.
– ಗುರುನಾಥ ಬೋರಗಿ
ಸಲಹೆ
ರೋಗಿ: ಈ ಎರಡು ಮಾತ್ರೆಗಳನ್ನು ಯಾವಾಗ ತೆಗೆದುಕೊಳ್ಳಬೇಕು?
ವೈದ್ಯ: ರಾತ್ರಿ ಮಲಗುವಾಗ ಒಂದು. ಬೆಳಗ್ಗೆ ಎಚ್ಚರವಾದರೆ ಇನ್ನೊಂದು !
– ಎಂ.ಕೆ. ಮಂಜುನಾಥ್
ಶವದ ಪೆಟ್ಟಿಗೆ
ಲಕ್ಷಾಧೀಶನೊಬ್ಬ ಸಾಯುವುದಕ್ಕೆ ಮುಂಚೆ ಒಂದು ಉಯಿಲನ್ನು ಬರೆಸಿದ. ಅದರಲ್ಲಿ ತನ್ನ ಆಸ್ತಿಯನ್ನೆಲ್ಲಾ ಮೂವರು ಆಪ್ತ ಸ್ನೇಹಿತರಿಗೆ ಸಮವಾಗಿ ಹಂಚುವಂತೆ ಸೂಚಿಸಿದ್ದ. ಹಾಗೆಯೇ
ಮೂವರು ಸ್ನೇಹಿತರು ತನ್ನ ಶವದ ಪೆಟ್ಟಿಗೆಯಲ್ಲಿ ತಲಾ ೫೦ರೂ.ಗಳನ್ನು ಇಡಬೇಕೆಂದು ಶರತ್ತು ಹಾಕಿದ್ದ.
ಮೊದಲನೆಯ ಸ್ನೇಹಿತ ೫೦ರೂ. ಇಟ್ಟ. ಎರಡನೆಯವನು ೫ ರೂಪಾಯಿಯ ಹತ್ತು ನೋಟುಗಳನ್ನಿಟ್ಟ. ಮೂರನೆಯವನು ೧೫೦ರೂ.ಗೆ ಒಂದು ಚೆಕ್ಕನ್ನು ಬರೆದು ಅದನ್ನು ಶವದ ಪೆಟ್ಟಿಗೆಯಲ್ಲಿಟ್ಟು ೧೦೦ರೂ ಚಿಲ್ಲರೆಯನ್ನು ತೆಗೆದುಕೊಂಡ!
– ಎಂ.ಕೆ. ಮಂಜುನಾಥ್
ಚುಟುಕುಗಳು ಚೆನ್ನಾಗಿವೆ