ವಿಶ್ವಕಪ್ ಸೆಮಿಫೈನಲ್ ಸೋಲಿನಿಂದ ಭಾರತ ತಂಡದ ಹೋರಾಟದ ಕೆಚ್ಚು ಕಡಮೆಯಾಗಿದೆ ಎಂದು ಯಾರೂ ಭಾವಿಸಬೇಕಿಲ್ಲ. ಕಡಮೆಯಾಗಬಾರದು. ಆಟಗಾರರ ನೈತಿಕಶಕ್ತಿ ಯಾವುದೇ ಕಾರಣಕ್ಕೂ ಉಡುಗಬಾರದು.
ಅಪಾರ ಪರಿಶ್ರಮದಿಂದ ಆಗ್ರ ಪಟ್ಟಕ್ಕೇರಿದ ಸೈನಾ ನೆಹ್ವಾಲ್ ದೇಶದ ಯುವಪೀಳಿಗೆಗೆ ಮಾದರಿಯಾಗಲಿ. ಇನ್ನಷ್ಟು ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ಇದು ಪ್ರೇರಣೆಯಾಗಲಿ.
ಸೈನಾ ನೆಹ್ವಾಲ್ ಎಂಬ ೨೫ರ ಹರೆಯದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಇದೀಗ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಸಾಧನೆ ಮಾಡಿದ್ದಾರೆ. ಚೈನಾ, ಥಾಯ್ಲಾಂಡ್, ದಕ್ಷಿಣ ಕೊರಿಯ, ಜರ್ಮನಿ, ಮಲೇಷಿಯಾ ಮುಂತಾದ ದೇಶಗಳ ಪ್ರಬಲ ಎದುರಾಳಿಗಳನ್ನು ಸದೆಬಡಿದು ನಂಬರ್ ಒನ್ ಆಟಗಾರ್ತಿಯಾಗಿ ಮೆರೆದಿರುವುದು ಕಡಮೆ ಸಾಧನೆಯೇನಲ್ಲ. ಬ್ಯಾಡ್ಮಿಂಟನ್ ರ್ಯಾಂಕಿಂಗ್ನಲ್ಲಿ ಈ ಹಿಂದೆ ಭಾರತದ ಪ್ರಕಾಶ್ ಪಡುಕೋಣೆ ನಂ. ೧ ಸ್ಥಾನಕ್ಕೇರಿದ್ದರು. ಆದರೆ ಮಹಿಳಾ ವಿಭಾಗದಲ್ಲಿ ಈ ಸಾಧನೆ ಮಾಡಿದ ಮೊದಲಿಗರು ಎಂಬ ಶ್ರೇಯಸ್ಸು ಸೈನಾರದ್ದು.
ಸೈನಾ ಈ ಉನ್ನತ ಹಂತಕ್ಕೆ ತಲಪಿದ ಹಾದಿ ಅಷ್ಟೇನೂ ಸುಗಮವಾಗಿರಲಿಲ್ಲ. ಹರ್ವೀರ್ಸಿಂಗ್ ಹಾಗೂ ಉಷಾರಾಣಿ ದಂಪತಿಯ ಎರಡನೇ ಪುತ್ರಿಯಾಗಿ ೧೯೯೦ರ ಮಾರ್ಚ್ ೧೭ರಂದು ಹರಿಯಾಣದ ಹಿಸ್ಸಾರ್ನಲ್ಲಿ ಜನಿಸಿದ ಸೈನಾ ಬ್ಯಾಡ್ಮಿಂಟನ್ ಆಡಲು ಶುರುಮಾಡಿದ್ದು ೯ನೇ ವರ್ಷದಲ್ಲಿ. ತಂದೆ-ತಾಯಿ ಇಬ್ಬರೂ ರಾಜ್ಯ ಬ್ಯಾಡ್ಮಿಂಟನ್ ಮಾಜಿ ಚಾಂಪಿಯನ್ ಆಗಿದ್ದು ಇದಕ್ಕೊಂದು ಹಿನ್ನೆಲೆ. ತಂದೆ ಡಾ. ಹರ್ವೀರ್ಸಿಂಗ್ ಒಬ್ಬ ವಿಜ್ಞಾನಿ. ಉದ್ಯೋಗದ ನಿಮಿತ್ತ ಅವರು ಹೈದ್ರಾಬಾದ್ಗೆ ಅನಂತರ ತಮ್ಮ ವಾಸ್ತವ್ಯ ಬದಲಿಸಿದ್ದರು. ಸೋಜಿಗವೆಂದರೆ ಸೈನಾಳ ಮೊದಲ ಪ್ರೀತಿ ಬ್ಯಾಡ್ಮಿಂಟನ್ ಆಗಿರಲಿಲ್ಲ. ಕರಾಟೆಯಲ್ಲಿ ಬ್ರೌನ್ಬೆಲ್ಟ್ ಗೆದ್ದಿದ್ದ ಸೈನಾ ಶಟಲ್ ಆಟದತ್ತ ಹೊರಳಿದ್ದಕ್ಕೆ ಒಂದು ರೋಚಕ ಹಿನ್ನೆಲೆ ಇದೆ. ಹೈದ್ರಾಬಾದ್ನಲ್ಲಿ ಆಕೆ ಇಂದ್ರಸೇನಾ ರೆಡ್ಡಿ ಕೋಚಿಂಗ್ನಲ್ಲಿ ಮಾರ್ಷಲ್ ಆರ್ಟ್ಸ್ ಅಭ್ಯಾಸ ಮಾಡುತ್ತಿದ್ದಳು. ತಿಂಗಳಿಗೆ ೧೦೦ ರೂ. ಶುಲ್ಕ. ಆದರೆ ೧೯೯೮ರ ಡಿಸೆಂಬರ್ನಲ್ಲಿ ಆಕೆ ಇದಕ್ಕೆ ವಿದಾಯ ಹೇಳಬೇಕಾಯಿತು. ಒಂದು ಪ್ರದರ್ಶನದಲ್ಲಿ ಸೈನಾಳ ಜೊತೆ ಕಲಿಯುತ್ತಿದ್ದ ಇತರ ವಿದ್ಯಾರ್ಥಿಗಳ ಕೈಗಳ ಮೇಲೆ ಮೋಟಾರ್ಬೈಕ್ ಹಾದು ಹೋಗುವ ಸನ್ನಿವೇಶವಿತ್ತು. ಇದಕ್ಕೆ ಹೆದರಿದ್ದ ಸೈನಾ ಪಾಲಕರ ಸಮ್ಮತಿಯಿಲ್ಲದೆಯೇ ಕರಾಟೆ ಕೈಬಿಟ್ಟಿದ್ದಳು. ಅನಂತರ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದಳು. ಈ ಪ್ರಸಂಗವನ್ನು ಆಕೆಯೇ ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾಳೆ.
ಹೈದ್ರಾಬಾದ್ನಲ್ಲಿ ಬ್ಯಾಡ್ಮಿಂಟನ್ ಆಟದ ಅಭ್ಯಾಸಕ್ಕೆ ಸೈನಾ ಪ್ರತಿನಿತ್ಯ ೨೫ ಕಿ.ಮೀ. ದೂರ ಪ್ರಯಾಣಿಸಬೇಕಾಗಿತ್ತು. ಬೆಳಗ್ಗೆ ೪ ಗಂಟೆಗೆ ಏಳುತ್ತಿದ್ದ ಸೈನಾ ತನ್ನ ಅಪ್ಪನ ಸ್ಕೂಟರ್ ಹಿಂದೆ ಕುಳಿತು, ಮಣಭಾರದ ಕಿಟ್ ಬೆನ್ನ ಮೇಲೆ ಹೊತ್ತು, ಬ್ಯಾಡ್ಮಿಂಟನ್ ಆಟದ ಬಳಿಕ ಮತ್ತೆ ಶಾಲೆಗೆ ತೆರಳಬೇಕಾಗಿತ್ತು. ಈಕೆಯ ಕಷ್ಟವನ್ನು ನೋಡಲಾಗದ ತಂದೆ ಹರ್ವೀರ್ಸಿಂಗ್ ೨೦೦೦ದಲ್ಲಿ ಮಾರುತಿ ೮೦೦ ಕಾರು ಖರೀದಿಸಿದ್ದರು.
೧೯೯೯ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ೭೦೦ ರೂ. ಫೆಲೋಶಿಪ್ ಪಡೆದಿದ್ದ ಸೈನಾ, ಒಂದು ಕಿಟ್ ಹಾಗೂ ಟೂರ್ನಿಗಳಿಗೆ ತೆರಳಲು ರೈಲಿನಲ್ಲಿ ದ್ವಿತೀಯ ದರ್ಜೆ ಟಿಕೆಟ್ ಹಣ ಪಡೆಯುತ್ತಿದ್ದರು. ಮಗಳ ಆಟಕ್ಕೆ ಬೆಂಬಲ ನೀಡಲು ತಂದೆ ಹರ್ವೀರ್ಸಿಂಗ್ ತಮ್ಮ ಪಿಎಫ್ ಅಕೌಂಟ್ನಿಂದ ಆರು ಬಾರಿ ಹಣ ತೆಗೆದಿದ್ದರು. ಪ್ರತಿ ಬಾರಿ ಹಣ ಪಡೆಯುವಾಗ ಅವರು ನೀಡುತ್ತಿದ್ದ ಕಾರಣ – ತನ್ನ ಪತ್ನಿಗೆ ಆರೋಗ್ಯ ಸರಿಯಿಲ್ಲ ಎಂದು! ೧೯೯೯ರಲ್ಲಿ ಚೆನ್ನೈಗೆ ಟೂರ್ನಮೆಂಟ್ ಒಂದಕ್ಕೆ ತೆರಳಿದ್ದ ಸೈನಾ ೨೭೦೦ ರೂ. ಬೆಲೆಬಾಳುವ ರ್ಯಾಕೆಟ್ ಅನ್ನು ಕಳೆದುಕೊಂಡಿದ್ದರು. ಆ ದಿನವಿಡೀ ಸೈನಾ ಅತ್ತುಅತ್ತು ಬಳಲಿದ್ದರು. ಹೀಗೆ ಆರಂಭದ ದಿನಗಳಲ್ಲಿ ಸೈನಾ ಎದುರಿಸಿದ ಕಷ್ಟಕೋಟಲೆಗಳು, ಕಿರಿಕಿರಿಗಳು ಅದೆಷ್ಟೋ.
ಆದರೆ ೨೦೦೩ರಲ್ಲಿ ಪೆಟ್ರೊಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ ಸೈನಾಗೆ ೨,೫೦೦ ರೂ. ಫೆಲೋಶಿಪ್ ನೀಡಿತ್ತು. ಹರ್ವೀರ್ಸಿಂಗ್ ಹಾಗೂ ಉಷಾರಾಣಿಗೆ ಅಚ್ಚರಿಯಾಗುವ ಘಟನೆ ನಡೆದಿದ್ದು ಸೈನಾ ೧೪ನೇ ವರ್ಷದಲ್ಲಿದ್ದಾಗ. ಇನ್ನೂ ಎಸ್ಸೆಸ್ಸೆಲ್ಸಿ ಪಾಸಾಗದ ಹುಡುಗಿಗೆ ಭಾರತ್ ಪೆಟ್ರೊಲಿಯಂ ಕಂಪೆನಿ ಕೆಲಸ ನೀಡಿತ್ತು!
ಇವೆಲ್ಲ ಆಕೆಯ ಬಾಲ್ಯಜೀವನದ ಕೆಲವು ಘಟನೆಗಳು. ಈಗ ಮಾತ್ರ ಆಕೆ ಕೋಟಿ ಕೋಟಿ ಹಣಕ್ಕೆ ಒಡತಿ. ಇದುವರೆಗೆ ಆಕೆ ಪಡೆದ ಒಟ್ಟು ಬಹುಮಾನದ ಮೊತ್ತವೇ ೩.೧೬ ಕೋಟಿ ರೂ. ಬ್ಯಾಡ್ಮಿಂಟನ್ನಲ್ಲಿ ಪ್ರಸಿದ್ಧಿಯೊಂದಿಗೆ ಹಣವನ್ನೂ ಸಂಪಾದಿಸಿದ್ದಾರೆ. ೨೦೧೦ರಲ್ಲಿ ಆಕೆ ಪಾವತಿಸಿದ ಆದಾಯ ತೆರಿಗೆಯೇ ೬೦ ಲಕ್ಷ ರೂ. ೨೦೧೧ರಲ್ಲಿ ಪಾವತಿಸಿದ್ದು ಒಂದೂವರೆ ಕೋಟಿ ತೆರಿಗೆ! ಒಂದು ಜಾಹೀರಾತಿಗೆ ಆಕೆ ಈಗ ಪಡೆಯುವ ಸಂಭಾವನೆಯೇ ಅಂದಾಜು ೧ ಕೋಟಿ ರೂ.
ಶ್ರಮವರಿಯದ ಸಾಧನೆ
ಸೈನಾ ೯ ವರ್ಷಗಳ ಹಿಂದೆ ೧೯ ವರ್ಷದೊಳಗಿನ ಬಾಲಕಿಯರ ವಿಭಾಗದ ಸಿಂಗಲ್ಸ್ನಲ್ಲಿ ರಾಷ್ಟ್ರೀಯ ಚಾಂಪಿಯನ್ ಪಟ್ಟಕ್ಕೇರಿದರು. ಅದರನಂತರ ಆಕೆ ಹಿಂತಿರುಗಿ ನೋಡಲಿಲ್ಲ. ಪುಣೆಯಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್ಶಿಪ್, ಯುವ ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಸಿಂಗಲ್ಸ್ನಲ್ಲಿ ಪ್ರಶಸ್ತಿ. ದೆಹಲಿಯಲ್ಲೇ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ. ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ. ಚೀನಾ ತೈಪೆ (೨೦೦೮), ಇಂಡಿಯಾ ಓಪನ್ (೨೦೧೦, ೨೦೧೪, ೨೦೧೫) ಹಾಗೂ ಸ್ವಿಸ್ ಓಪನ್ (೨೦೧೧ – ೨೦೧೨) – ಇವುಗಳಲ್ಲಿ ಬ್ಯಾಡ್ಮಿಂಟನ್ ಗ್ರ್ಯಾನ್ಪ್ರೀ ಗೋಲ್ಡ್ ಪ್ರಶಸ್ತಿಗಳು. ೨೦೧೨ರ ಇಂಡೋನೇಶ್ಯಾ, ಡೆನ್ಮಾರ್ಕ್ ಹಾಗೂ ೨೦೧೪ರ ಚೀನಾ ಓಪನ್ ಸೇರಿದಂತೆ ಮೂರು ಬಿಡಬ್ಲ್ಯೂಎಫ್ನ ಪ್ರತಿಷ್ಠಿತ ಸೂಪರ್ಸೀರೀಸ್ ಪ್ರೀಮಿಯರ್ ಪ್ರಶಸ್ತಿಗಳು… ಹೀಗೆ ಆಕೆ ಗಳಿಸಿದ ಪ್ರಶಸ್ತಿಗಳು ಹಲವಾರು. ಇದೀಗ ಹಾಲಿ ವಿಶ್ವ ಚಾಂಪಿಯನ್ ಥಾಯ್ಲಾಂಡ್ನ ಇಂಥೋನಾನ್ ರಚನಾಕ್ ಅವರನ್ನು ಸೋಲಿಸಿ ನಂ. ೧ ಪಟ್ಟಕ್ಕೇರಿರುವುದು ಆಕೆಯ ಶ್ರಮವರಿಯದ ಅದ್ಭುತ ಸಾಧನೆಗೆ ಸಾಕ್ಷಿ.
ಆದರೆ ಕಳೆದ ವರ್ಷ ವಿಶ್ವ ಚಾಂಪಿಯನ್ಶಿಪ್ನಲ್ಲಿ ಸೋತಾಗ ಸೈನಾ ಬ್ಯಾಡ್ಮಿಂಟನ್ ಆಟಕ್ಕೇ ವಿದಾಯ ಹೇಳುವ ಅಲೋಚನೆ ಮಾಡಿದ್ದರು. ಅಗ್ರ ಆಟಗಾರ್ತಿಯರೆದುರು ಪದೇ ಪದೇ ಸೋಲುತ್ತಿದ್ದುದರಿಂದ ಆಕೆಗೆ ಹತಾಶೆ ಉಂಟಾಗಿತ್ತು. ಅದು ಆಕೆಯ ವೃತ್ತಿ ಬದುಕಿನ ಕಠಿಣ ದಿನಗಳಾಗಿದ್ದವು. ಮಾಧ್ಯಮಗಳು ಹಾಗೂ ಅಭಿಮಾನಿಗಳು ಸೈನಾಳ ಕ್ರೀಡಾ ಬದುಕು ಮುಗಿಯಿತು ಎಂದು ಟೀಕಿಸಿದ್ದರು. ಸೈನಾ ಇದನ್ನೆಲ್ಲ ಗಂಭೀರವಾಗಿ ತೆಗೆದುಕೊಂಡಿದ್ದು ಆವಾಗಲೇ. ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಆಕೆ ತನ್ನ ಚಿಂತನೆಯಲ್ಲೂ ಅದೇ ಕ್ರಮ ಅನುಸರಿಸಿದರು. ಹೈದ್ರಾಬಾದ್ನ ಗೋಪಿಚಂದ್ ಅಕಾಡೆಮಿ ತೊರೆದು ಬೆಂಗಳೂರಿನ ಕೋಚ್ ವಿಮಲ್ಕುಮಾರ್ ಬಳಿ ತರಬೇತು ಪಡೆಯುವ ದಿಟ್ಟ ನಿರ್ಧಾರಕ್ಕೆ ಬಂದರು. ಈ ವರ್ಷದ ಮೇ ತಿಂಗಳೊಳಗೆ ನಿನ್ನನ್ನು ನಂ. ೧ ರ್ಯಾಂಕ್ಗೆ ಏರಿಸುವ ಹೊಣೆ ನನ್ನದು ಎಂದು ವಿಮಲ್ಕುಮಾರ್ ಹೇಳಿದ್ದರಂತೆ. ಅವರ ಮಾತು ನಿಜವಾಗಿದೆ. ಮಾರ್ಚ್ ತಿಂಗಳಲ್ಲೇ ಸೈನಾ ವಿಶ್ವದ ನಂ. ೧ ಪಟ್ಟಕ್ಕೆ ಏರಿದ್ದಾರೆ.
ನಂ. ೧ ಪಟ್ಟಕ್ಕೇರಿದ್ದರೂ ಆಕೆಯ ತಲೆ ತಿರುಗಿಲ್ಲ. ಗೆಲ್ಲಬೇಕಾದ ಪದಕ ಅಥವಾ ಗಳಿಸಬೇಕಾದ ಕ್ರಮಾಂಕದ ಬಗ್ಗೆ ನಾನು ಹೆಚ್ಚು ಕನಸು ಕಾಣುವುದಿಲ್ಲ. ಕ್ರೀಡಾಂಗಣದಲ್ಲಿ ನಿರಂತರ ಬೆವರು ಹರಿಸುವುದಷ್ಟೇ ನನ್ನ ಕಾಯಕ. ಪದಕ, ಕ್ರಮಾಂಕಗಳು ಅದರಷ್ಟಕ್ಕೇ ಬರುತ್ತವೆ’ ಎಂದು ಹಿಂದೊಮ್ಮೆ ಸೈನಾ ಹೇಳಿದ್ದರು. ಈಗಲೂ ಅದನ್ನೇ ಹೇಳುತ್ತಾರೆ. ನಾನೀಗ ವಿಶ್ವದ ನಂ. ೧ ಆಟಗಾರ್ತಿಯೆನ್ನುವುದನ್ನು ನಂಬಲಾಗುತ್ತಿಲ್ಲ ಎಂದು ವಿನಯದಿಂದಲೇ ಹೇಳುತ್ತಾರೆ.
ಅಪಾರ ಪರಿಶ್ರಮದಿಂದ ಆಗ್ರ ಪಟ್ಟಕ್ಕೇರಿದ ಸೈನಾ ನೆಹ್ವಾಲ್ ದೇಶದ ಯುವಪೀಳಿಗೆಗೆ ಮಾದರಿಯಾಗಲಿ. ಇನ್ನಷ್ಟು ಬ್ಯಾಡ್ಮಿಂಟನ್ ಪ್ರತಿಭೆಗಳಿಗೆ ಇದು ಪ್ರೇರಣೆಯಾಗಲಿ. ಈ ಅಗ್ರಪಟ್ಟವನ್ನು ಸೈನಾ ದೀರ್ಘಕಾಲ ಉಳಿಸಿಕೊಳ್ಳುವಂತಾಗಲಿ. ಇದು ಅಭಿಮಾನಿಗಳೆಲ್ಲರ ಹಾರೈಕೆ.
ಕೈತಪ್ಪಿದ ವಿಶ್ವಕಪ್
ಕ್ರಿಕೆಟ್ ವಿಶ್ವಕಪ್ ಅನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಭಾರತ ತಂಡ ಈ ಬಾರಿ ಸೋತಿದೆ. ಆದರೆ ಅದೊಂದು ಗೌರವಯುತ ಸೋಲು. ಏಕೆಂದರೆ ಸೆಮಿಫೈನಲ್ ಪಂದ್ಯದವರೆಗೂ ಧೋನಿ ತಂಡ ನಿರಂತರ ಜಯದ ದಾಖಲೆ ಬರೆದಿತ್ತು. ಸೆಮಿಫೈನಲ್ ಹಂತದವರೆಗೆ ಪ್ರಬಲ ಪಾಕಿಸ್ತಾನ, ದಕ್ಷಿಣ ಆಫ್ರಿಕ, ವೆಸ್ಟ್ಇಂಡೀಸ್, ಬಂಗ್ಲಾದೇಶ ಮೊದಲಾದ ತಂಡಗಳನ್ನು ಅಧಿಕಾರಯುತವಾಗಿ ಅದು ಸೋಲಿಸಿತ್ತು. ಆಸ್ಟ್ರೇಲಿಯ ತಂಡ ನಿಜವಾದ ಅರ್ಹ ಎದುರಾಳಿಯಾಗಿತ್ತು. ಈ ತಂಡದ ಎದುರು ಮಾತ್ರ ಭಾರತ ಸೋಲಬೇಕಾಯಿತು.
ಈ ಬಾರಿಯ ವಿಶ್ವಕಪ್ನ ಮೊದಲ ಪಂದ್ಯದಿಂದ ಆರಂಭಿಸಿ ಕ್ವಾರ್ಟರ್ಫೈನಲ್ನಲ್ಲಿ ಬಾಂಗ್ಲಾದೇಶವನ್ನು ಮನೆಗಟ್ಟುವ ತನಕ ನಮ್ಮ ಆಟಗಾರರು ಪ್ರತಿ ಪಂದ್ಯದಲ್ಲೂ ಪ್ರಬುದ್ಧ ಪ್ರದರ್ಶನ ನೀಡುತ್ತಲೇ ಬಂದಿದ್ದರು. ನಾಯಕ ಧೋನಿಯ ಅನುಭವದ ನೆರಳಿನಲ್ಲಿ ಯುವಪಡೆ ಕಪ್ ಉಳಿಸಿಕೊಳ್ಳುವ ನಿರೀಕ್ಷೆ ಹೊಂದಿತ್ತು. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ – ಎಲ್ಲದರಲ್ಲೂ ಉತ್ತಮ, ಸಂಘಟಿತ ಆಟ ಆಡಿ ಎದುರಾಳಿಗಳನ್ನು ಧೂಳೀಪಟ ಮಾಡಿತ್ತು. ಆಡಿದ ೭ ಪಂದ್ಯಗಳಲ್ಲಿ ಎಲ್ಲ ೭೦ ವಿಕೆಟ್ಗಳನ್ನು ಉರುಳಿಸಿತ್ತು. ಹಾಗಾಗಿ ಅಭಿಮಾನಿಗಳಿಗೆ ಈ ಬಾರಿಯೂ ಭಾರತ ತಂಡಕ್ಕೆ ವಿಶ್ವಕಪ್ ಒಲಿಯಬಹುದೆಂಬ ಭಾರೀ ನಿರೀಕ್ಷೆಯಿದ್ದಿದ್ದು ನಿಜ. ಆದರೆ ಆ ನಿರೀಕ್ಷೆ ನಿಜವಾಗಲಿಲ್ಲ.
ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿದ್ದು ಆಸ್ಟ್ರೇಲಿಯ. ಭಾರತಕ್ಕೆ ಮುಳುವಾಗಿದ್ದು ಕೂಡ ಅದೇ. ಇಡೀ ಟೂರ್ನಿಯಲ್ಲಿ ಉತ್ತಮವಾಗಿ ಆಡಿ ೧೭ ವಿಕೆಟ್ ಉರುಳಿಸಿದ ಮಹಮ್ಮದ್ ಶಮಿ ಈ ಪಂದ್ಯದಲ್ಲಿ ಒಂದೂ ವಿಕೆಟ್ ಪಡೆಯಲಾಗಲಿಲ್ಲ. ದೊಡ್ಡ ಮೊತ್ತವನ್ನು ಬೆನ್ನತ್ತುವಲ್ಲಿ ಎತ್ತಿದ ಕೈ ಎನ್ನಿಸಿದ್ದ ವಿರಾಟ್ಕೊಹ್ಲಿ ಸಂಪೂರ್ಣ ವಿಫಲರಾಗಿದ್ದು ಇನ್ನೊಂದು ದೊಡ್ಡ ಹೊಡೆತ. ಆದರೆ ಆಸ್ಟ್ರೇಲಿಯಕ್ಕೆ ತವರಿನ ಪ್ರೇಕ್ಷಕರ ಬೆಂಬಲ, ಚಿರಪರಿಚಿತವಾದ ಪಿಚ್, ಜೊತೆಗೆ ಬಲಿಷ್ಠ ತಂಡ ಇವೆಲ್ಲ ಪ್ಲ್ಲಸ್ಪಾಯಿಂಟ್ಗಳು. ಜೊತೆಗೆ ನಾಲ್ಕು ಬಾರಿ ವಿಶ್ವಕಪ್ ಗೆದ್ದಿರುವ ಹಿನ್ನೆಲೆ. ಮಿಷಲ್ಜಾನ್ಸನ್, ಜೇಮ್ಸ್ ಫಾಕ್ನರ್ ಅವರು ಆಸ್ಟ್ರೇಲಿಯಾ ಇನ್ನಿಂಗ್ಸ್ನ ಕೊನೆಯ ಐದು ಓವರ್ಗಳಲ್ಲಿ ವೇಗವಾಗಿ ಪೇರಿಸಿದ ರನ್ಗಳು ಆ ತಂಡದ ಗೆಲವಿನ ಹಾದಿಯನ್ನು ಸುಗಮಗೊಳಿಸಿದವು. ಭಾರತ ತಂಡವೆಸಗಿದ ಸಣ್ಣಪುಟ್ಟ ತಪ್ಪುಗಳನ್ನೇ ಆಸೀಸ್ ತಂಡ ತನ್ನ ಗೆಲವಿನ ಸೋಪಾನವಾಗಿಸಿಕೊಂಡಿತು. ಭಾರತದ ಸೋಲಿಗೆ ಇವೆಲ್ಲ ನಿಜವಾದ ಕಾರಣಗಳು.
ಅಪ್ರಬುದ್ಧ ನಡವಳಿಕೆ
ಸೆಮಿಫೈನಲ್ನಲ್ಲಿ ಭಾರತ ಸೋತಾಗ ಅಭಿಮಾನಿಗಳು ಭಾರತ ತಂಡವನ್ನು ಹೀನಾಮಾನವಾಗಿ ಜರೆದರು. ‘ಟೈಮ್ಸ್ ನೌ’ ಚಾನೆಲ್ನ ಅರ್ನಾಬ್ ಗೋಸ್ವಾಮಿಯಂತೂ ‘ಭಾರತಕ್ಕೆ ಇದೊಂದು ಘೋರ ಅವಮಾನ’ ಎಂದು ಬೊಬ್ಬಿಟ್ಟರು. ಕೆಲವು ಮತಿಹೀನ ಅಭಿಮಾನಿಗಳಂತೂ ತಮ್ಮ ಮನೆಯ ಟಿವಿ ಸೆಟ್ಗಳನ್ನೇ ಒಡೆದುಹಾಕಿದರು. ಇವೆಲ್ಲ ಅಪ್ರಬುದ್ಧ ನಡವಳಿಕೆ. ಈ ಸೋಲು ಅವಮಾನಕರವಾದುದೇನೂ ಅಲ್ಲ. ಅದಕ್ಕಾಗಿ ಧೋನಿ ಪಡೆಯನ್ನು ಹಳಿಯುವುದು ಸರಿಯಲ್ಲ. ಆಟದಲ್ಲಿ ಸೋಲು-ಗೆಲವುಗಳನ್ನು ಸಮಾನವಾಗಿ ಸ್ವೀಕರಿಸುವುದು ಸಭ್ಯತೆಯ ಕ್ರೀಡಾ ಮನೋಭಾವ. ಗೆದ್ದಾಗ ಹಿಗ್ಗಿ ಆಟಗಾರರನ್ನು ಅಟ್ಟಕ್ಕೇರಿಸುವುದು, ಸೋತಾಗ ಕುಗ್ಗಿ ಕನಲುವುದು ಸಭ್ಯ ನಡವಳಿಕೆಯಲ್ಲ. ಭಾರತ ವಿಶ್ವಕಪ್ ಬಿಟ್ಟುಕೊಟ್ಟಿದ್ದಲ್ಲ; ಅದನ್ನು ಉಳಿಸಿಕೊಳ್ಳುವ ಅವಕಾಶವನ್ನು ಆಸ್ಟ್ರೇಲಿಯಾ ತಂಡ ಕಸಿದುಕೊಂಡಿದೆ ಎಂದು ಬಣ್ಣಿಸುವುದೇ ಸರಿಯಾದ ವ್ಯಾಖ್ಯಾನ. ದಾಖಲೆ, ಅಂಕಿ-ಅಂಶಗಳ ದೃಷ್ಟಿಯಿಂದಲೂ ಗೆಲವು ಭಾರತದ ಪರವಾಗಿರಲಿಲ್ಲ. ಸಿಡ್ನಿಯ ಎಸ್ಸಿಜಿ ಮೈದಾನದಲ್ಲಿ ಭಾರತ-ಆಸ್ಟ್ರೇಲಿಯ ವಿರುದ್ಧ ಇದುವರೆಗೆ ನಡೆದಿರುವ ಆರು ಏಕದಿನ ಪಂದ್ಯಗಳಲ್ಲಿ ಭಾರತ ಗೆದ್ದಿರುವುದು ಕೇವಲ ಒಂದನ್ನು ಮಾತ್ರ. ವಿದೇಶೀ ನೆಲಗಳಲ್ಲಿ ಸಾಮಾನ್ಯವಾಗಿ ಭಾರತದ್ದು ಕಳಪೆ ಪ್ರದರ್ಶನ. ಭಾರತ ತಂಡ ಆಸ್ಟ್ರೇಲಿಯದಲ್ಲಿ ಆ ತಂಡದ ವಿರುದ್ಧ ಆಡಿರುವ ೩೦ ಏಕದಿನ ಪಂದ್ಯಗಳಲ್ಲಿ ಗೆದ್ದಿರುವುದು ೧೦ ಮಾತ್ರ. ವಿಶ್ವಕಪ್ ಅಭಿಯಾನದ ಸೆಮಿಫೈನಲ್ ಹೋರಾಟದಲ್ಲಿ ಆಸ್ಟ್ರೇಲಿಯ ಇದುವರೆಗೆ ಅಜೇಯವಾಗಿಯೇ ಉಳಿದಿದೆ. ಆಡಿರುವ ಆರು ವಿಶ್ವಕಪ್ ಸೆಮಿಫೈನಲ್ ಪಂದ್ಯಗಳಲ್ಲಿ ಒಂದನ್ನೂ ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿಲ್ಲ. ಅದು ಆಸ್ಟ್ರೇಲಿಯ ತಂಡದ ತಾಕತ್ತು. ಆ ತಂಡ ಆಡುವ ರೀತಿಯೇ ಮನಮೋಹಕ. ಆ ತಂಡದ್ದು ಗುಣಮಟ್ಟದ ಆಟ. ಆದ್ದರಿಂದಲೇ ಆ ತಂಡ ವಿಶ್ವಕಪ್ ಗೆಲ್ಲಲು ಎಲ್ಲ ರೀತಿಯಲ್ಲೂ ಅರ್ಹವಾಗಿದೆ.
ವಿಶ್ವಕಪ್ ಸೆಮಿಫೈನಲ್ ಸೋಲಿನಿಂದ ಭಾರತ ತಂಡದ ಹೋರಾಟದ ಕೆಚ್ಚು ಕಡಮೆಯಾಗಿದೆ ಎಂದು ಯಾರೂ ಭಾವಿಸಬೇಕಿಲ್ಲ. ಕಡಮೆಯಾಗಬಾರದು. ಆಟಗಾರರ ನೈತಿಕಶಕ್ತಿ ಯಾವುದೇ ಕಾರಣಕ್ಕೂ ಉಡುಗಬಾರದು. ಆಗಿರುವ ತಪ್ಪುಗಳಿಂದ ತಂಡ ಪಾಠಕಲಿಯಬೇಕು. ವಿದೇಶೀ ನೆಲದಲ್ಲಿ ಗೆಲ್ಲುವ ಬಗೆ ಹೇಗೆ ಎಂಬ ಬಗ್ಗೆ ಗಂಭೀರವಾಗಿ ಅಲೋಚಿಸಿ, ಸೂಕ್ತ ಹಾಗೂ ಕಠಿಣ ತರಬೇತಿ ಪಡೆಯಬೇಕು. ಮುಂದಿನ ವರ್ಷ ಟಿ-೨೦ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಭಾರತ ಅದರಲ್ಲಿ ಜಯಗಳಿಸಿದರೆ ಈಗಿನ ಕಹಿ ಸೋಲು ಯಾರಿಗೂ ನೆನಪಿರುವುದಿಲ್ಲ.