ಬರಡು ಭೂಮಿಯಲ್ಲಿ ಹಸಿರು ಚಿಮ್ಮಲು ಕಾರಣವಾದ ಈ ಜಲಾಶಯ ಸೊಬಗಿನ ಪ್ರವಾಸಿ ತಾಣವಾಗಿ ಮೈಸೂರು ಅರಸರ ಜನಪರ ಕಾಳಜಿಗೆ ಸಾಕ್ಷಿ; ಇಂದಿನ ಇಂಜಿನಿಯರುಗಳ ತಾಂತ್ರಿಕ ನೈಪುಣ್ಯಕ್ಕೆ ಒಂದು ಸವಾಲು. ಏಷ್ಯಾದಲ್ಲಿ ಪ್ರಪ್ರಥಮವಾಗಿ ಮಾನವರಿಂದಲೇ ನಿರ್ಮಾಣಗೊಂಡ ಅತಿದೊಡ್ಡ ಜಲಾಶಯ ಎಂಬ ಖ್ಯಾತಿಯೂ ಇದಕ್ಕೆ ಸಲ್ಲುತ್ತದೆ.
ಬೆಟ್ಟಗಳ ಸಾಲು – ನಡುವೆ ಕಣಿವೆ – ಕಣಿವೆಯ ನಡುವೆ ಕಣ್ಣುಹಾಯಿಸಿದಷ್ಟೂ ದೂರ ನೀರಿನ ಅಲೆಗಳಾಟ – ಪ್ರಕೃತಿಯ ನಡುವೆ ನಿರ್ಮಿತ ಭಾರತದ ಮಾನಚಿತ್ರ – ಇಂಪಾದ ಪ್ರತಿಧ್ವನಿ. ರಾಜ್ಯದ ಅತ್ಯಂತ ಹಳೆಯ ಜಲಾಶಯವಾದ ‘ವಾಣಿವಿಲಾಸಸಾಗರ’ ಈ ಎಲ್ಲ ವೈಶಿಷ್ಟ್ಯಗಳ ತಾಣ. ಬರಡು ಭೂಮಿಯಲ್ಲಿ ಹಸಿರು ಚಿಮ್ಮಲು ಕಾರಣವಾದ ಈ ಜಲಾಶಯ ಸೊಬಗಿನ ಪ್ರವಾಸಿ ತಾಣವಾಗಿ ಮೈಸೂರು ಅರಸರ ಜನಪರ ಕಾಳಜಿಗೆ ಸಾಕ್ಷಿಯಾಗಿ ಉಳಿದುಕೊಂಡು ಬಂದಿದೆ.
ಗಂಡುಮೆಟ್ಟಿದ ನಾಡೆನಿಸಿಕೊಂಡ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಕೇಂದ್ರದಿಂದ ೧೮ ಕಿ.ಮೀ. ದೂರದಲ್ಲಿರುವ ಪ್ರೇಕ್ಷಣೀಯ ಹಾಗೂ ಪ್ರವಾಸಿ ತಾಣವೇ `ವಾಣಿವಿಲಾಸ ಸಾಗರ’ ಜಲಾಶಯ. ಈ ಜಲಾಶಯವನ್ನು ಮಾರೀಕಣಿವೆ ಎಂಬಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
ನದಿಯ ಮೂಲ
ವೇದಾವತಿ ನದಿಯು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟ ಶ್ರೇಣಿಯಲ್ಲಿ ವೇದಾ ಎಂಬ ಹೆಸರಿನೊಂದಿಗೆ ಉಗಮಗೊಂಡು, ಸಖರಾಯಪಟ್ಟಣದ ಸಮೀಪವಿರುವ ಅಯ್ಯನಕೆರೆ ಹೊಳೆಯ ಮಾರ್ಗವಾಗಿ ಹರಿದು, ಕಡೂರಿನ ಬಳಿ ಅವತಿ ಎಂಬ ಚಿಕ್ಕ ನದಿಯನ್ನು ಸೇರಿ (ವೇದಾ+ಅವತಿ) ವೇದಾವತಿ ಎಂಬ ಹೆಸರಿನೊಂದಿಗೆ ಹೊಸದುರ್ಗ ಸಮೀಪ ಕೆಲ್ಲೋಡುತೊರೆಯ ಮಾರ್ಗವಾಗಿ ವಾಣಿವಿಲಾಸ ಸಾಗರಕ್ಕೆ ಹರಿದುಬರುತ್ತದೆ.
ಇತಿಹಾಸ
ಕೃಷ್ಣರಾಜ ಸಮುದ್ರದ ವಾಣಿವಿಲಾಸಪುರದಿಂದ ಸ್ವಲ್ಪ ದೂರದಲ್ಲಿ ಎರಡು ಗುಡ್ಡಗಳು ಹಬ್ಬಿವೆ. ಅದಕ್ಕೆ ಕಣಿವೆ ಎಂದು ಕರೆಯುತ್ತಾರೆ. ಈ ಗುಡ್ಡದ ಮೇಲಿಂದ ಸುತ್ತಲ ದೃಶ್ಯವನ್ನು ನೋಡಿದರೆ ಅತ್ಯಂತ ಸುಂದರವಾಗಿ ಕೆಳಗಿನ ಪ್ರದೇಶ ಕಾಣುತ್ತದೆ.
“ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹಾದುರ್ ಅವರು ಹಿಂದೆ ಮಹಾ ಮಾತೃಶ್ರೀಯವರಾದ ಶ್ರೀ ವಾಣಿವಿಲಾಸ ಸನ್ನಿಧಾನದವರ ಆಳ್ವಿಕೆಯಲ್ಲಿ ಅವರ ಆಜ್ಞಾನುಸಾರ ಪ್ರಜಾಕ್ಷೇಮಕ್ಕಾಗಿ ಆರಂಭಿಸಲ್ಪಟ್ಟು ಪ್ರಜಾ ಹಿತೈಷಿಯಾದ ಮಹಾಸ್ವಾಮಿಯವರ ಪ್ರೋತ್ಸಾಹಬಲದಿಂದ ವಾಸ್ತುವಿದ್ಯಾವಿಶಾರದರಾದ ರಾಜ್ಯಸಭಾ ಭೂಷಣರಾದ ಚುನ್ನಿಲಾಲ್ ತಾರಾಚಂದ್ ದಲಾಲ್ ಎಂಬವರಿಂದ ಪೂರೈಸಲ್ಪಟ್ಟ ಮಾರೀಕಣಿವೆಯ ಕೆರೆಯೆಂಬ ಈ ಮಹಾ ತಟಾಕವನ್ನು ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ೧೮೨೮ರಂದು ವರ್ತಮಾನದ ಪರಾಭವ ಸಂವತ್ಸರ ಜೇಷ್ಠ ಬಹುಳ ಷಷ್ಠಿ ಮಂಗಳವಾರ ಈ ಶುಭದಿನದಲ್ಲಿ ಸ್ವನಾಮಾಂಕಿತವಾಗಿ ಕೃಷ್ಣರಾಜಸಮುದ್ರವೆಂಬ ಅಭಿದಾನದಿಂದ ಪ್ರತಿಷ್ಠೆ ಮಾಡಿ ಪ್ರಜೆಗಳು ಕಷ್ಟಾದಿಕರ್ಮಗಳಿಗೆ ಉಪಯೋಗಿಸಿಕೊಳ್ಳಲು ಪರಮಾನುಗ್ರಹದಿಂದ ಅಪ್ಪಣೆ ಕೊಡಿಸಿರುತ್ತಾರೆ.” ಆದ್ದರಿಂದ ಮೂಲ ಹೆಸರು ಮಾರಿಕಣೆವೆಯ ಕೆರೆ ಎಂಬುದು ಅನಂತರದಲ್ಲಿ ಕೃಷ್ಣರಾಜಸಮುದ್ರವೆಂದು ನಾಮಕರಣ ಪಡೆಯಿತು.
ಕೃಷ್ಣರಾಜಸಮುದ್ರವೆಂಬ ಅಭಿದಾನವಾದರೂ ಅನಂತರದಲ್ಲಿ ಈ ಜಲಾಶಯಕ್ಕೆ ವಾಣಿವಿಲಾಸ ಸನ್ನಿಧಾನದವರ ಹೆಸರನ್ನೇ ಇಡಲಾಗಿದೆ ಎಂದು ತಿಳಿಯುತ್ತದೆ.
ಅಧಿಕೃತವಾಗಿ ವಾಣಿವಿಲಾಸಸಾಗರವೆಂಬ ಹೆಸರಿದ್ದರೂ ಇದು ಮಾರೀಕಣಿವೆ ಇಲ್ಲವೇ ಮಾರೀಕಣಿವೆ ಕೆರೆ ಎಂಬುದಾಗಿ ಪ್ರಚಲಿತವಾಗಿದೆ. ಇದಕ್ಕೆ ಕಾರಣವೇನೆಂದರೆ ಈ ಜಲಾಶಯದ ಮುಂಭಾಗದಲ್ಲಿ ಮಾರೀದೇವಿಯ ದೇವಾಲಯವಿರುವುದು.
ಜಲಾಶಯದ ನಿರ್ಮಾಣ
ಶೇಷಾದ್ರಿ ಅಯ್ಯರ್ ಅವರು ೧೮೮೩ರಲ್ಲಿ ಮೈಸೂರಿನ ದಿವಾನರಾಗಿ ಅಧಿಕಾರ ವಹಿಸಿಕೊಂಡರು. ಇವರ ಆಳ್ವಿಕೆಯಲ್ಲಿ ಹಲವಾರು ಪ್ರಗತಿಪರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಯಿತು. ಅದರಲ್ಲಿ ವಾಣಿವಿಲಾಸ ಸಾಗರ ಜಲಾಶಯ ನಿರ್ಮಾಣಕಾರ್ಯವೂ ಒಂದು. ಈ ಜಲಾಶಯ ನಿರ್ಮಾಣಕ್ಕೆ ಪ್ರಯತ್ನ ನಡೆಸಿದಾಗ ಬ್ರಿಟಿಷರ ಅಧೀನದಲ್ಲಿದ್ದ ಅಂದಿನ ಮದ್ರಾಸ್ ಸರ್ಕಾರದಿಂದ (ಈಗಿನ ತಮಿಳುನಾಡು) ೧೮೯೧ರಲ್ಲಿ ತೀವ್ರ ಆಕ್ಷೇಪಣೆ ಇತ್ತು.
ಇದಕ್ಕೆ ಮಣಿಯದ ಅಯ್ಯರ್ ಅವರು “ನನ್ನ ನೆಲದಲ್ಲಿ ಹರಿಯುವ ನೀರನ್ನು ಬಳಸಿಕೊಳ್ಳುವ ಹಕ್ಕು ನನಗಿದೆ. ನಾನು ಯಾವುದೇ ಆಕ್ಷೇಪಣೆಗೆ ಮಣಿಯುವುದಿಲ್ಲ’ ಎಂದು ಗುಡುಗಿದರು. ಆಗಿನ ಮೈಸೂರು ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಇದಕ್ಕೆ ಬೆಂಬಲವಿತ್ತರು. ಇವರು ಅಪ್ರಾಪ್ತ ವಯಸ್ಕರಾದ್ದರಿಂದ ರಾಜ್ಯದ ಆಡಳಿತವನ್ನು ಇವರ ತಾಯಿ ರಾಣಿ ಕೆಂಪನಂಜಮಣಿಯವರು ರಾಜಪ್ರತಿನಿಧಿಯಾಗಿ ವಾಣಿವಿಲಾಸ ಸನ್ನಿಧಾನ ನಾಮಾಂಕಿತದಲ್ಲಿ ಅಧಿಕಾರಾರೂಢರಾದರು. ಇವರ ಹೆಸರಿನಲ್ಲಿಯೇ ಈ ಸಾಗರದ ನಿರ್ಮಾಣ ಪ್ರಾರಂಭಗೊಂಡಿತು.
೧೮೯೮ರಲ್ಲಿ ನಿರ್ಮಾಣಗೊಂಡ ಈ ಜಲಾಶಯದ ಕಾರ್ಯ ೧೯೦೭ರಲ್ಲಿ ಮುಕ್ತಾಯವಾಯಿತು. ಇದನ್ನು ಕಟ್ಟಲು ಒಂಭತ್ತು ವರ್ಷಗಳ ಕಾಲ ಸತತವಾಗಿ ದುಡಿಯಬೇಕಾಯಿತು. ಈ ಜಲಾಶಯದ ನಕಾಶೆ ಚಿತ್ರವನ್ನು ಸಿ.ಟಿ. ದಲಾಲ್(ಚುನ್ನಿಲಾಲ್ ತಾರಚಂದ್ ದಲಾಲ್) ರಚಿಸಿದರು. ಇವರು ಈ ಜಲಾಶಯದ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಅಭಿಯಂತರರಾಗಿದ್ದರು. ಜೊತೆಗೆ ತಾಂತ್ರಿಕ ಅಭಿಯಂತರರಾಗಿ ಡಬ್ಲ್ಯೂ. ಜಿ. ಮಿಲ್ಲರ್ ಇವರ ಸೇವೆ ಗಣನೀಯವಾದದ್ದು. ಇವರ ಜೊತೆಗೆ ರಾಜ್ಯದ ಅಭಿಯಂತರರಾದ ರಾಘವೇಲುನಾಯ್ಡು, ಶೇಷಾಚಾರ್ ಇವರ ಶ್ರಮ ಮಹತ್ತರವಾದದ್ದು.
ಜಲಾಶಯದ ವಿಸ್ತೀರ್ಣ
ಈ ಜಲಾಶಯದ ಉದ್ದ ೧೩೩೦ ಅಡಿಗಳಿದ್ದು, ಎತ್ತರ ೧೪೨ ಅಡಿಯಿದೆ. ಈ ಸಾಗರದಲ್ಲಿ ಸುಮಾರು ೬೬೦ ಚದರ ಮೈಲಿ ಜಲಾನಯನ ಪ್ರದೇಶವಿದೆ. ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕಿನ ಸುಮಾರು ೧೦೦ ಚದರ ಕಿ.ಮೀ.ನಷ್ಟು ಭೂಮಿಗೆ ನೀರಾವರಿ ಒದಗಿಸುತ್ತದೆ; ಮಾತ್ರವಲ್ಲ, ಚಿತ್ರದುರ್ಗ ಹಾಗೂ ಹಿರಿಯೂರು ಪಟ್ಟಗಳಿಗೆ ಕುಡಿಯುವ ನೀರಿನ ಪೂರೈಕೆಯೂ ಇಲ್ಲಿಂದಲೇ ಆಗುತ್ತದೆ. ಈ ಜಲಾಶಯದ ತಳಪಾಯ ೧೫೦ ಅಡಿ. ಕೋಡಿಯ ಉದ್ದ ೪೭೮ ಅಡಿ. ಅಣೆಕಟ್ಟಿನ ಮೇಲ್ಭಾಗದ ಅಗಲ ೧೨ ಅಡಿಗಳು. ನೀರಿನ ಪರಮಾವಧಿ ಮಟ್ಟ ೧೩೫ ಅಡಿ. ಕನಿಷ್ಠ ಮಟ್ಟ ೬೦ ಅಡಿಗಳಷ್ಟು. ಈ ವಿಸ್ತೀರ್ಣತೆಯಲ್ಲಿ ನಿರ್ಮಾಣಗೊಂಡ ಈ ಜಲಾಶಯದ ತಾಂತ್ರಿಕ ವೆಚ್ಚ ಅಂದು ೪೫ ಲಕ್ಷ. ಈ ಜಲಾಶಯವು ಇಂದಿನ ಇಂಜಿನಿಯರುಗಳ ತಾಂತ್ರಿಕ ನೈಪುಣ್ಯಕ್ಕೆ ಸವಾಲಾಗಿ ನಿಂತಿದೆ.
ಮೀನುಗಾರಿಕೆ
ಈ ಜಲಾಶಯದಲ್ಲಿ ದೋಣಿ ವಿಹಾರಕ್ಕೂ ಅವಕಾಶವಿದೆ. ಮೀನುಗಳನ್ನು ಹಿಡಿಯಲು ತೆಪ್ಪಗಳನ್ನು ಬಳಸಲಾಗುತ್ತದೆ. ಮೀನುಗಳ ಅಭಿವೃದ್ಧಿಗಾಗಿ ಜಲಾಶಯದ ಸಮೀಪದಲ್ಲಿಯೇ ಮೀನುಗಾರಿಕಾ ಕೇಂದ್ರವಿದೆ. ಈ ಕೇಂದ್ರದಲ್ಲಿ ಹೊಸ ಮಾದರಿಯ ತಳಿಗಳನ್ನು ಬೆಳೆಸಿ ಬೇಕಾದವರಿಗೆ ಸಾಕಲು ಮಾರುತ್ತಾರೆ. ಇಲ್ಲಿನ ನಿಸರ್ಗದತ್ತ ಕೊಡುಗೆ ಎಂದರೆ ಜೇನುತುಪ್ಪ. ಜೇನುಹುಳುಗಳು ಈ ಅಣೆಕಟ್ಟಿಗೆ ಶಾಶ್ವತ ಮುತ್ತಿಗೆ ಹಾಕಿವೆ. ಪ್ರತಿ ತಿಂಗಳಿಗೊಮ್ಮೆ ಜೇನುತುಪ್ಪ ತೆಗೆದು ಮಾರಾಟ ಮಾಡಲಾಗುತ್ತದೆ. ಈ ಜೇನುಹುಳುಗಳು ಈ ಜಲಾಶಯದ ಹಕ್ಕುದಾರರೆನೋ ಎಂಬಂತೆ ಪ್ರತಿ ಋತುವಿನಲ್ಲಿ ಗೋಚರಿಸುತ್ತವೆ.
ಎರಡು ಬೆಟ್ಟಗಳ ನಡುವೆ ನಿರ್ಮಾಣವಾದ ಈ ಜಲಾಶಯ ಪೂರ್ಣತುಂಬಿದಾಗ ನೋಡಲು ಸರೋವರದಂತೆ ಭಾಸವಾಗುತ್ತದೆ. ಜಲಾಶಯದ ಉತ್ತರ ಹಾಗೂ ದಕ್ಷಿಣಕ್ಕೆ ಮನಮೋಹಕ ಮಂಟಪಗಳಿವೆ. ಈ ಮಂಟಪಗಳಲ್ಲಿ ನಿಂತು ಜಲಾಶಯದ ಸೌಂದರ್ಯವನ್ನು ಸವಿಯಬಹುದು. ಇಲ್ಲಿನ ಸೂರ್ಯಾಸ್ತ ನೋಡಲು ರಮ್ಯ. ಸುಂದರ ಜಲಾಶಯದಲ್ಲಿ ದೋಣಿವಿಹಾರ ಮನೋಹರವಾಗಿರುತ್ತದೆ. ವಿಲಾಸಮಯ ಪ್ರತಿಧ್ವನಿ ಈ ಜಲಾಶಯದ ವೈಶಿಷ್ಟ್ಯ. ಈ ಜಲಾಶಯದ ನೀರಿನ ಅಲೆಗಳಾಟ, ಸುತ್ತಲೂ ಇರುವ ಹಸಿರಿನ ವಾತಾವರಣ ಇಲ್ಲಿಗೆ ಬಂದ ಪ್ರವಾಸಿಗರಿಗೆ ಶಾಂತಿ ಅನುಭವವನ್ನು ಉಂಟುಮಾಡುತ್ತದೆ.
ಏಷ್ಯಾದ ಪ್ರಥಮ ಜಲಾಶಯ
ಪುಣೆಯಿಂದ ಬೆಂಗಳೂರಿಗೆ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿತ್ರದುರ್ಗವನ್ನು ದಾಟಿ ಹಿರಿಯೂರನ್ನು ಸಮೀಪಿಸುವಂತೆಯೇ ರಸ್ತೆಯ ಇಕ್ಕೆಲಗಳಲ್ಲಿ ರಮಣೀಯ ನೋಟವೊಂದು ಕಣ್ಮನ ಸೆಳೆಯುತ್ತದೆ. ತೆಂಗಿನ ತೋಟಗಳು ಸ್ವಾಗತಿಸುತ್ತವೆ. ಪ್ರತಿ ಹಸಿರು ಕೂಡ ವಾಣಿವಿಲಾಸ ಸಾಗರದ ಉಸಿರಾಗಿ ನಿಂತಿದೆ. ಈ ಜಲಾಶಯವು ಚಿತ್ರದುರ್ಗ ಜಿಲ್ಲಾಕೇಂದ್ರಕ್ಕೆ ನೀರೊದಗಿಸುತ್ತದೆ. ಏಷ್ಯಾದಲ್ಲಿ ಪ್ರಪ್ರಥಮವಾಗಿ ಮಾನವರಿಂದಲೇ ನಿರ್ಮಾಣಗೊಂಡ ಅತಿದೊಡ್ಡ ಜಲಾಶಯ ಎಂಬ ಖ್ಯಾತಿ ಇದಕ್ಕೆ ಸಲ್ಲುತ್ತದೆ. ಈ ಜಲಾಶಯ ನಿರ್ಮಾಣದ ಅನಂತರ ಹಲವು ಕಡೆ ಜಲಾಶಯಗಳು ನಿರ್ಮಾಣಗೊಂಡರೂ ಇಂದಿಗೂ ಇದರ ಖ್ಯಾತಿಗೆ ಚ್ಯುತಿ ಬಂದಿಲ್ಲ. ಈ ಜಲಾಶಯದ ಉತ್ತರಕ್ಕಿರುವ ಎರಡು ಬೆಟ್ಟಗಳ ನಡುವೆ ನಿಂತು ಜಲಾಶಯ ನೋಡಿದರೆ ‘ನಿಸರ್ಗದಲ್ಲೊಂದು ಭಾರತದ ಮಾನಚಿತ್ರ ಗೋಚರಿಸುತ್ತದೆ. ಇದರ ನೋಟ ಕಣ್ಮನ ಸೆಳೆಯುತ್ತದೆ.
ಜನತೆಯ ಕನಸು ನನಸಾಗುವುದೇ?
ಈ ಜಲಾಶಯವು ನಿರ್ಮಾಣವಾಗಿ ಶತಮಾನ ಕಳೆದಿದೆಯಾದರೂ ಈ ಪ್ರವಾಸೀ ತಾಣಕ್ಕೆ ಸಿಗಬೇಕಾದ ಮೂಲಸೌಲಭ್ಯಗಳು ಇನ್ನೂ ದೊರೆತಿಲ್ಲ. ಈ ಜಲಾಶಯ ನಿರ್ಮಾಣದ ನಂತರ ೧೯೧೧ರಲ್ಲಿ ಅಂದಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರು ಈ ಜಲಾಶಯ ನೋಡಿ “ಇದಕ್ಕೆ ಶಾಶ್ವತ ನೀರಾವರಿ ಯೋಜನೆ ರೂಪಿತವಾಗಬೇಕು. ಇಲ್ಲವಾದರೆ ಇನ್ನು ೨೦ ವರ್ಷಗಳಲ್ಲಿ ಈ ಜಲಾಶಯ ನಿರುಪಯುಕ್ತವಾಗುತ್ತದೆ” ಎಂದು ನುಡಿದಿದ್ದರು. ಆ ಮಾತು ಇಂದಿಗೂ ಸತ್ಯ. ನೀರು ಹರಿದುಬರುವಂತಾಗಲು ಜಲಾನಯನಪ್ರದೇಶದ ಅಭಿವೃದ್ಧಿಕಾರ್ಯ ಇದುವರೆಗೂ ನಡೆದೇ ಇಲ್ಲ. ಜಲಾಶಯ ನಿರ್ಮಾಣವಾದ ಅನಂತರ ೧೯೩೩ರಲ್ಲಿ ಮಾತ್ರ ತುಂಬಿ ಹರಿದಿದೆ. ಬರಗಾಲದ ಬಯಲುಸೀಮೆಯ ನಾಡು ಸದಾ ಹಸಿರಿನಿಂದ ಕಂಗೊಳಿಸಬೇಕಾದರೆ ಈ ಜಲಾಶಯಕ್ಕೆ ಶಾಶ್ವತ ನೀರಾವರಿ ಯೋಜನೆ ನಿರ್ಮಾಣವಾಗಬೇಕು. ಭದ್ರಾ ಮೇಲ್ದಂಡೆ ಯೋಜನೆಯು ರೂಪಿತವಾದರೆ ಬಹುದಿನಗಳ ಜನತೆಯ ಕನಸು ನನಸಾಗಬಹುದು.?
(ಈ ಲೇಖನಕ್ಕೆ ಅಪರೂಪದ ಹಳೆಯ ಚಿತ್ರಗಳನ್ನು ಒದಗಿಸಿದವರು ವಾಣಿವಿಲಾಸಪುರದ ಬಿ.ವಿ. ನಾರಾಯಣ.)