ಚುನಾವಣೆಗಳು ಎಷ್ಟು ದೀರ್ಘ ಸಮಯ ಹರಡಿಕೊಳ್ಳುತ್ತವೆಯೋ ಅಷ್ಟಷ್ಟೂ ಖರ್ಚು ಬಗೆಬಗೆಯ ರೀತಿಗಳಲ್ಲಿ ಏರುತ್ತಹೋಗುತ್ತದೆ. ಇದಕ್ಕೆ ಸಿಂಹಪಾಲಿನ ಕೊಡುಗೆ ವಿವಿಧ ಪಕ್ಷಗಳ ಜನಾಕರ್ಷಕ ಚಿತ್ರವಿಚಿತ್ರ ಹೆಚ್ಚುವರಿ ಸವಲತ್ತುಗಳ ಘೋಷಣೆಗಳದು. ೨೫ ಹೊಸ ‘ನ್ಯಾಯ’ ಗ್ಯಾರಂಟಿಗಳನ್ನು ಕಾಂಗ್ರೆಸ್ ಮಾರ್ಚ್ ೧೯ರಂದು ಪ್ರಕಟಿಸಿತು. ವಿದ್ಯುತ್ತಾಗಲಿ ಸಾರಿಗೆಯಾಗಲಿ ರೈತರಿಂದ ಸರ್ಕಾರ ಬೆಳೆಯನ್ನು ಖರೀದಿಸುವ ದರವಾಗಲಿ – ಇವೆಲ್ಲ ವಾಸ್ತವಾಂಶಗಳ ಅವಧಾನಪೂರ್ವಕ ವಿಶ್ಲೇಷಣೆಯ ಆಧಾರದ ಮೇಲೆ ನಿರ್ಣಯಗೊಳ್ಳಬೇಕಾದ ಸಂಗತಿಗಳಲ್ಲವೆ? ಯಾರೋ ತಲೆಮಾಸಿದ ಗದ್ದಿಗೆ–ಆಕಾಂಕ್ಷಿಗಳು ನಿಂತ ಕಾಲಲ್ಲಿ ತೋಚಿದಂತೆಲ್ಲ ಘೋಷಿಸಿಬಿಡುವುದೆ? ಆಯಾ ದಿನಕ್ಕೆ ಕರತಾಡನಾಭಿಮುಖ ಯೋಜನೆಗಳನ್ನು ಘೋಷಿಸುತ್ತಹೋದರೆ ಯಾವುದೇ ಸರ್ಕಾರ ಉಳಿಸಿಕೊಳ್ಳಲೇಬೇಕಾದ ನೈರಂತರ್ಯದ ಗತಿಯೇನು?
ವಿವಿಧ ಹಂತಗಳಲ್ಲಿ ಪೂರಾ ಐದು ವಾರ ಸಾಗಿದ ಸಾರ್ವತ್ರಿಕ ಚುನಾವಣೆ ಇದೀಗ ಮುಗಿದಿದೆ. ಮೊದಲ ಹಂತದ ಮತದಾನಕ್ಕೂ ಫಲಿತಾಂಶ ಘೋಷಣೆಗೂ ನಡುವೆ ನಲವತ್ತು ದಿನಗಳಷ್ಟು ದೀರ್ಘ ಅಂತರವಿರುವುದು ಒತ್ತಟ್ಟಿಗಿರಲಿ. ಮತದಾರರನ್ನು ಒಲಿಸಿಕೊಳ್ಳಹೊರಟು ಬಗೆಬಗೆಯ ಅವ್ಯವಹರ್ಯ ಪ್ರಲೋಭನೆಗಳ ಪ್ರಸರಣದಲ್ಲಿ ಪಕ್ಷಪಕ್ಷಗಳ ನಡುವಣ ತ್ವಂಚಾಹಂಚ ಮೇಲಾಟಗಳ ಭರಾಟೆಗಳಿಗೆ ಇನ್ನಷ್ಟು ಅವಧಿ ದೊರೆತಂತಾಗಿತ್ತು. ಸರ್ವೋಚ್ಚ ನ್ಯಾಯಾಲಯವೂ ಇದರ ಬಗ್ಗೆ ಟಿಪ್ಪಣಿ ಮಾಡಿತ್ತು. ಇನ್ನು ಚುನಾವಣೆ ನಿರ್ವಹಣೆಯ ವೆಚ್ಚದ ಹೆಚ್ಚಳ ಕುರಿತು ಹೇಳುವುದೇ ಬೇಡ. ಪ್ರಜಾಪ್ರಭುತ್ವ ತುಂಬಾ ದುಬಾರಿಯಾಗುತ್ತಿದೆ. ಖರ್ಚುವೆಚ್ಚಗಳ ಊರ್ಧ್ವಗಾಮಿತ್ವ ಕುರಿತು ಮಾರ್ಚ್ ತಿಂಗಳಲ್ಲಿ ಹೊರಬಿದ್ದ ಶೃಂಗಸಮಿತಿಯು (ಹೈ ಲೆವೆಲ್ ಕಮಿಟಿ) ನೀಡಿರುವ ಮಾಹಿತಿ ಗಾಬರಿ ಹುಟ್ಟಿಸುವಂತಿದೆ. ಈ ಗೊಂದಲಗಳಿಗೆ ಏಕೈಕ ಪರಿಹಾರವೆಂದರೆ ಸ್ಥಳೀಯ ಸ್ಥಾನಿಕ ಸಂಸ್ಥೆಗಳಿಂದ ಹಿಡಿದು ಸಂಸತ್ತಿನವರೆಗಿನ ಅಷ್ಟೂ ಚುನಾವಣೆಗಳು ಏಕಕಾಲದಲ್ಲಿ ನಡೆಯುವುದು. ಇದರ ತಾರ್ಕಿಕತೆ ಸ್ಪಷ್ಟವಿದೆ.
ಆಮಿಷಗಳ ದರ್ಬಾರು
ಚುನಾವಣೆಗಳು ಎಷ್ಟು ದೀರ್ಘ ಸಮಯ ಹರಡಿಕೊಳ್ಳುತ್ತವೆಯೋ ಅಷ್ಟಷ್ಟೂ ಖರ್ಚು ಬಗೆಬಗೆಯ ರೀತಿಗಳಲ್ಲಿ ಏರುತ್ತಹೋಗುತ್ತದೆ. ಇದಕ್ಕೆ ಸಿಂಹಪಾಲಿನ ಕೊಡುಗೆ ವಿವಿಧ ಪಕ್ಷಗಳ ಜನಾಕರ್ಷಕ ಚಿತ್ರವಿಚಿತ್ರ ಹೆಚ್ಚುವರಿ ಸವಲತ್ತುಗಳ ಘೋಷಣೆಗಳದು. ೨೫ ಹೊಸ ‘ನ್ಯಾಯ’ ಗ್ಯಾರಂಟಿಗಳನ್ನು ಕಾಂಗ್ರೆಸ್ ಮಾರ್ಚ್ ೧೯ರಂದು ಪ್ರಕಟಿಸಿತು. ವಿದ್ಯುತ್ತಾಗಲಿ ಸಾರಿಗೆಯಾಗಲಿ ರೈತರಿಂದ ಸರ್ಕಾರ ಬೆಳೆಯನ್ನು ಖರೀದಿಸುವ ದರವಾಗಲಿ – ಇವೆಲ್ಲ ವಾಸ್ತವಾಂಶಗಳ ಅವಧಾನಪೂರ್ವಕ ವಿಶ್ಲೇಷಣೆಯ ಆಧಾರದ ಮೇಲೆ ನಿರ್ಣಯಗೊಳ್ಳಬೇಕಾದ ಸಂಗತಿಗಳಲ್ಲವೆ? ಯಾರೋ ತಲೆಮಾಸಿದ ಗದ್ದಿಗೆ-ಆಕಾಂಕ್ಷಿಗಳು ನಿಂತ ಕಾಲಲ್ಲಿ ತೋಚಿದಂತೆಲ್ಲ ಘೋಷಿಸಿಬಿಡುವುದೆ? ಆಯಾ ದಿನಕ್ಕೆ ಕರತಾಡನಾಭಿಮುಖ ಯೋಜನೆಗಳನ್ನು ಘೋಷಿಸುತ್ತಹೋದರೆ ಯಾವುದೇ ಸರ್ಕಾರ ಉಳಿಸಿಕೊಳ್ಳಲೇಬೇಕಾದ ನೈರಂತರ್ಯದ ಗತಿಯೇನು? ಸಿದ್ದರಾಮಯ್ಯ ಸರ್ಕಾರದ ಐದು ‘ಗ್ಯಾರಂಟಿ’ಗಳ ಭಾರ ಪ್ರತಿವರ್ಷ ರೂ. ೫೦,೦೦೦ ಕೋಟಿ ದಾಟುತ್ತದೆ. ತರ್ಕಹೀನ ಯೋಜನೆಗಳು ಒಮ್ಮೆ ಸಂಚಾಲಿತಗೊಂಡರೆ ಅವನ್ನು ಅನಂತರ ಪ್ರತಿಬಂಧಿಸುವುದು ಹೆಚ್ಚುಕಡಮೆ ಅಸಾಧ್ಯವೇ.
ಏಕಕಾಲದಲ್ಲಿ ಎಲ್ಲ ಚುನಾವಣೆಗಳೂ ನಡೆಯುವುದು ಒಳ್ಳೆಯದೆಂಬುದು ಹೊಸ ಕಲ್ಪನೆಯೇನಲ್ಲ. ವಾಸ್ತವವಾಗಿ ೧೯೮೯ಕ್ಕೆ ಹಿಂದೆ ಸಂಸತ್ತಿಗೂ ರಾಜ್ಯವಿಧಾನಸಭೆಗಳಿಗೂ ಚುನಾವಣೆ ನಡೆಯುತ್ತಿದ್ದುದು ಒಮ್ಮೆಗೇ. ಈಚಿನ ಮೂರು ದಶಕಗಳಲ್ಲಷ್ಟೆ ಬೇರೆಬೇರೆ ಸಮಯಗಳಲ್ಲಿ ಸಂಸತ್ತಿಗೂ ವಿವಿಧ ರಾಜ್ಯಗಳಿಗೂ ಚುನಾವಣೆ ನಡೆಸುವ ಪರಿಪಾಟಿ ಬಂದದ್ದು. ಚುನಾವಣೆಯ ನಿರ್ವಹಣೆಯ ವೆಚ್ಚದ ಹತ್ತಿಪ್ಪತ್ತುಪಟ್ಟಿಗಿಂತ ಹೆಚ್ಚು ಹಣವನ್ನು ವಿವಿಧ ಪಕ್ಷಗಳು ಪ್ರಚಾರಕ್ಕೂ ಪ್ರಲೋಭನೆಗಳಿಗೂ ವ್ಯಯ ಮಾಡುತ್ತವೆ.
ವೆಚ್ಚ ಹೆಚ್ಚಳ – ವ್ರಣೋಪಮ
ಚುನಾವಣೆಗಳ ನಿರ್ವಹಣೆಯ ವೆಚ್ಚವನ್ನಷ್ಟೆ ಲೆಕ್ಕ ಹಾಕಿದರೂ ಹೆಚ್ಚಳ ದಿಗ್ಭ್ರಮೆ ತರಿಸುತ್ತದೆ. ೧೯೫೨ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಗೆ ದೇಶಾದ್ಯಂತ ಒಟ್ಟು ಖರ್ಚಾಗಿದ್ದುದು ರೂ. ೧೦ ಕೋಟಿ ೫೦ ಲಕ್ಷ ಎಂದರೆ ನಂಬುತ್ತೀರಾ? ಪ್ರತಿಯಾಗಿ ೨೦೧೯ರ ಚುನಾವಣೆಗೆ ಖರ್ಚಾದದ್ದು ರೂ. ೧೨,೦೦೦ ಕೋಟಿ. (ಇದರಲ್ಲಿ ನಿರ್ವಹಣೆಯ ವೆಚ್ಚ ಶೇ. ೧೦.೫ರಷ್ಟು ಮಾತ್ರ.) ಅದರ ದುಪ್ಪಟ್ಟಿಗಿಂತ ಹೆಚ್ಚು ರೂ. ೨೫,೦೦೦ ಕೋಟಿಯಷ್ಟು ಖರ್ಚಾದದ್ದು ಪ್ರಚಾರಾದಿಗಳಿಗೆ. (ಮಾಹಿತಿ: ‘ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್’ ವರದಿ.)
ಇದೇ ವರದಿ ನೀಡುವ ಇನ್ನೊಂದು ವಿಶ್ಲೇಷಣೆ ಚಿಂತನಯೋಗ್ಯವಾಗಿದೆ. ಒಟ್ಟೂ ಲೆಕ್ಕ ಹಾಕಿದರೆ ಈಗ (೨೦೨೪) ವಿವಿಧ ಹಂತಗಳ ಚುನಾವಣೆಗಳ ವೆಚ್ಚ ರೂ. ೪.೫ ಲಕ್ಷ ಕೋಟಿಯಷ್ಟು; ಎಂದರೆ ದೇಶದಲ್ಲಿ ಆರೋಗ್ಯ ಸೇವೆಗೆ ನಿಗದಿಯಾಗಿರುವುದರ ಅರ್ಧದಷ್ಟು; ಶಿಕ್ಷಣ ಕ್ಷೇತ್ರಕ್ಕೆ ನಿಗದಿಯಾಗಿರುವುದರ ಮೂರರಲ್ಲೊಂದು ಭಾಗದಷ್ಟು. ಈ ನಿವಾರಣೀಯ ವೆಚ್ಚವನ್ನು ತಪ್ಪಿಸಬಹುದಾದ ದಾರಿಯೆಂದರೆ ಸಂಸತ್ತಿಗೂ ವಿವಿಧ ರಾಜ್ಯ ವಿಧಾನಸಭೆಗಳಿಗೂ ಏಕಕಾಲದಲ್ಲಿ ಚುನಾವಣೆಯನ್ನು ನಡೆಸುವುದು.
ವ್ಯಾಪಕ ಪರಿಣಾಮ
ಒಂದೊಂದು ರಾಜ್ಯದಲ್ಲಿ ಪ್ರತ್ಯೇಕವಾಗಿ ಚುನಾವಣೆ ನಡೆಸುವುದರಿಂದ ಮೇಲೆ ಸೂಚಿಸಿದ ಸರಾಸರಿಗಿಂತ ಹೆಚ್ಚಿನ ಖರ್ಚು ಸಹಜವಾಗಿ ಆಗುತ್ತದೆ. ಚುನಾವಣೆ ವೆಚ್ಚದ ಅತಿ ಹೆಚ್ಚಳವು ಹಣದುಬ್ಬರ (ಇನ್ಫ್ಲೇಷನ್), ಗ್ರಾಹಕ ಬೆಲೆ ಸೂಚ್ಯಂಕ (ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್) ಮೊದಲಾದ ಆರ್ಥಿಕ ಮಾನದಂಡಗಳ ಮೇಲೂ ಪ್ರಭಾವ ಬೀರುತ್ತದೆ ಎಂದು ಅನುಭವವಿದೆ. (ಯಾವುದೇ ಕಾರಣದಿಂದ ಅತ್ಯಲ್ಪ ಕಾಲದಲ್ಲಿ ಅತಿ ಹೆಚ್ಚು ಹಣ ಸಂಚಾಲಿತವಾದರೆ ಆರ್ಥಿಕತೆಯಲ್ಲಿ ಇಂತಹ ವ್ಯತ್ಯಯಗಳು ಆಗುವುದು ಪ್ರಕೃತಿನಿಯಮ.)
ಚುನಾವಣೆಗೆ ಸಂಬಂಧಿಸಿದ ಹಣದ ವಹಿವಾಟು ಉದ್ಯಮ ಹಣಹೂಡಿಕೆಯ ಮೇಲೂ ಷೇರು ಮಾರುಕಟ್ಟೆಯ ಮೇಲೂ ಅಡ್ಡಪರಿಣಾಮ ಬೀರುವುದು ಸದಾ ಅನುಭವಕ್ಕೆ ಬರುತ್ತದಷ್ಟೆ.
ಹೀಗೆ ಹಲವಾರು ಹಂತಗಳ ಚುನಾವಣೆಗಳು ನೇರವಾಗಿಯೂ ಪರೋಕ್ಷವಾಗಿಯೂ ದೇಶದ ಆರ್ಥಿಕ ಸಮತೋಲಿತತೆಯನ್ನು ಉಧ್ವಸ್ತಗೊಳಿಸುತ್ತದೆನ್ನಲು ಸಾಕ್ಷ್ಯಗಳ ಕೊರತೆಯಿಲ್ಲ.
ಏಕೈಕ ಪರ್ಯಾಯ
ಹಲವು ಹಂತಗಳಲ್ಲಿ ಹರಡಿಕೊಂಡ ಚುನಾವಣೆಗಳಿಂದ ಎಷ್ಟು ದೂರಗಾಮಿ ಪರಿಣಾಮಗಳು ಆಗುತ್ತವೆಂದು ಸೂಚಿಸುವುದಕ್ಕಾಗಿ ಮೇಲಣ ವಿವರಗಳನ್ನು ಪ್ರಸ್ತಾವಿಸಿದ್ದಾಯಿತು.
ವ್ಯವಸ್ಥೆಯ ಪುನರ್ವಿನ್ಯಾಸ ಚಿಂತನೆಗೆ ಆಧಾರವಾಗಿ ಖಚಿತ ಮಾಹಿತಿ ಸಂಗ್ರಹಕ್ಕೆ ಚುನಾವಣಾ ಆಯೋಗ ಉಜ್ಜುಗಿಸಿದಾಗ ರಾಜಕೀಯ ಪಕ್ಷಗಳು ಪ್ರಳಯವೇ ಆದಂತೆ ಪ್ರತಿಭಟಿಸಿದವು. ಆದರೆ ಇಂದಲ್ಲ ನಾಳೆ ಚುನಾವಣೆಯ ಪ್ರಕ್ರಿಯೆಯನ್ನು ಸತರ್ಕಗೊಳಿಸಲೇಬೇಕಾಗುತ್ತದೆ. ಇದಕ್ಕೆ ಗತ್ಯಂತರವಿರದು.