೫೦೦ ವರ್ಷಗಳ ಬಳಿಕ ರಾಮಮಂದಿರ ನಿರ್ಮಾಣವಾದ ಬಳಿಕವೂ ಅಯೋಧ್ಯೆಯಲ್ಲೇ ಬಿಜೆಪಿಯನ್ನು ಸೋಲಿಸುವ, ದೇಶದಲ್ಲಿ ಅದರ ಬಲ ಕುಗ್ಗಿಸುವ ಕಾರ್ಯವನ್ನು ಹಿಂದುಗಳು ಮಾಡಿಬಿಟ್ಟರು ಎಂಬ ಭಾವನಾತ್ಮಕ ಆಕ್ರೋಶವನ್ನು ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದನ್ನು ಗಮನಿಸಬಹುದು. ಇದೊಂದು ತರ್ಕರಹಿತ ಭಾವನಾತ್ಮಕ ಉತ್ಕರ್ಷದ ವಿಚಾರಧಾಟಿ. ಏಕೆಂದರೆ, ಬಿಜೆಪಿಯು ೨೪೦ ಸ್ಥಾನಗಳನ್ನು ಪಡೆದುಕೊಂಡು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವುದಕ್ಕೆ ಕಾರಣವಾಗಿರುವುದು ಹಿಂದುಗಳ ಮತವೇ ಹೊರತು ಮತ್ತೇನಲ್ಲ. ಅಯೋಧ್ಯೆಯು ಒಂದು ಭಾಗವಷ್ಟೇ ಆಗಿರುವ ಫೈಜಾಬಾದ್ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಲುಲ್ಲು ಸಿಂಘ್ ವಿರುದ್ಧ ಇದ್ದ ಜನಾಕ್ರೋಶ ಗೊತ್ತಿದ್ದೂ ಬದಲಿಸದೆ ಹೋದ ಬಿಜೆಪಿಯ ತಪ್ಪನ್ನು ಹಿಂದುಗಳ ಮೇಲೆ ಹೊರೆಸಲಾಗುವುದಿಲ್ಲ. ಅಲ್ಲಿನ ಸಾಮಾನ್ಯವರ್ಗದ ಸ್ಥಾನದಲ್ಲಿ ದಲಿತ ಅಭ್ಯರ್ಥಿಯನ್ನು ನಿಲ್ಲಿಸಿದ ಸಮಾಜವಾದಿ ಪಕ್ಷದ ಸೋಶಿಯಲ್ ಎಂಜಿನಿಯರಿಂಗ್ ಸಹ ಪ್ರಶಂಸಾರ್ಹ. ಅಯೋಧ್ಯೆ ಒಂದು ಉದಾಹರಣೆ ಮಾತ್ರ. ಅಭ್ಯರ್ಥಿ ಹೇಗೆಯೇ ಇದ್ದರೂ ಮೋದಿಯವರ ಮುಖ ನೋಡಿ ಮತ ಹಾಕಬೇಕು ಎಂಬ ಬಿಜೆಪಿಯ ಅಹಂಕಾರಭರಿತ ನಡವಳಿಕೆಯನ್ನು ಹಲವೆಡೆ ಮತದಾರ ಒಪ್ಪಿಕೊಂಡಿಲ್ಲ ಎಂಬುದೇ ನಿಜವಾದ ವಾಸ್ತವ.
ಜೂನ್ ೪ರಂದು ಹಲವು ವಿಜಯಗಳಾದವು.
ಐತಿಹಾಸಿಕವಾಗಿ ನೆಹರು ನಂತರ ಸತತ ಮೂರನೆಯ ಬಾರಿಗೆ ಪ್ರಧಾನಿ ಪಟ್ಟ ಏರುತ್ತಿರುವ ವ್ಯಕ್ತಿ ಎಂಬ ದಾಖಲೆಯನ್ನು ನರೇಂದ್ರ ಮೋದಿಯವರು ಬರೆದರು. ಅತ್ತ, ವಿರೋಧಿ ಪಾಳೆಯವೂ ಸೋಲಿನ ನಡುವೆಯೇ ಖುಷಿಯಾಯಿತು. ಏಕೆಂದರೆ ಕಾಂಗ್ರೆಸ್ಸಿಗೆ ಕಳೆದೊಂದು ದಶಕದಿಂದ ಲೋಕಸಭೆ ಚುನಾವಣೆಯಲ್ಲಿ ಐವತ್ತರ ಗಡಿ ಮುಟ್ಟುವುದೇ ದೊಡ್ಡ ಸರ್ಕಸ್ಸು ಎಂಬಂಥಹ ವಾತಾವರಣವಿದ್ದು, ಈ ಬಾರಿ ೯೯ ಸ್ಥಾನಗಳು ಬಂದವು. ಸೋತಾಗಲೆಲ್ಲ ವಿಪಕ್ಷಗಳು ವಿದ್ಯುನ್ಮಾನ ಮತಯಂತ್ರವನ್ನು ವೃಥಾ ದೂಷಿಸುತ್ತಿದ್ದವು. ಈ ಬಾರಿ ಅದು ಬಚಾವ್! ಅಲ್ಲದೆ, ‘ನೋಡಿ, ಏನೇ ಅಂದರೂ ಪ್ರಜಾಪ್ರಭುತ್ವ ಎಂದಮೇಲೆ ಪ್ರತಿಪಕ್ಷಗಳು ಪ್ರಬಲವಾಗಿರಬೇಕ್ರೀ’ ಎನ್ನುತ್ತಿದ್ದವರ ಅಭಿಲಾಷೆಯೂ ಈಡೇರಿದೆ.
ಹೀಗಾಗಿ, ೨೦೨೪ರ ಲೋಕಸಭೆ ಚುನಾವಣೆ ಎಲ್ಲ ಅರ್ಥಗಳಲ್ಲೂ ಪ್ರಜಾಪ್ರಭುತ್ವದ ಗೆಲವು.
ಸೋತವರು ಸಂಭ್ರಮದಲ್ಲಿರುವ ಹಾಗೂ ಗೆದ್ದವರ ಬೆಂಬಲಿಗರೆಲ್ಲ ಬಿಜೆಪಿಯ ಆತ್ಮವಿಮರ್ಶೆಗೆ ಒತ್ತಾಯಿಸುತ್ತಿರುವ ಅಪೂರ್ವ ಚುನಾವಣೆಯೂ ಹೌದಿದು. ಅದಾಗಲೇ ನಾನಾ ಮಾಧ್ಯಮ ವೇದಿಕೆಗಳಲ್ಲಿ ಹಲವು ಆಯಾಮಗಳಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶದ ವಿಶ್ಲೇಷಣೆಗಳಾಗಿವೆ. ಹೆಚ್ಚಿನ ಚರ್ಚೆಗಳು ಉತ್ತರಪ್ರದೇಶದಲ್ಲಿ ಬಿಜೆಪಿಗೆ ಯಾರೂ ಊಹಿಸಿರದ ಹಿನ್ನಡೆ ಆಗಿದ್ದೇಕೆ ಎಂಬ ಬಗ್ಗೆ ಗಮನಹರಿಸಿವೆ. ಅಂಥ ಎಲ್ಲ ಗುಣಾತ್ಮಕ ಚರ್ಚೆಗಳ ಆಯಾಮಗಳನ್ನೂ ಈ ಲೇಖನಕ್ಕೆ ಬಳಸಿಕೊಳ್ಳುತ್ತ, ೨೦೨೪ರ ಲೋಕಸಭೆ ಚುನಾವಣೆಯ ಫಲಿತಾಂಶದಿಂದ ದಕ್ಕಿಸಿಕೊಳ್ಳಬಹುದಾದ ಪ್ರಮುಖ ನೋಟಗಳೇನು? ಸಂದೇಶಗಳೇನು? ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
೧. ಅಲೆಯಿಲ್ಲದ ಚುನಾವಣೆಯಲ್ಲಿ ಸ್ಥಳೀಯತೆಯ ಪೆಟ್ಟು
ಹೆದ್ದಾರಿಗಳು, ಜಾಗತಿಕ ರಾಜಕಾರಣದಲ್ಲಿ ಭಾರತದ ಛಾಪು, ಇಷ್ಟು ದೊಡ್ಡ ದೇಶವು ಕೋವಿಡ್ ಅನ್ನು ನಿಭಾಯಿಸಿದ ರೀತಿ, ಮೂಲಸೌಕರ್ಯಾಭಿವೃದ್ಧಿ, ಪಡಿತರ-ಸಿಲಿಂಡರಿನಂಥಹ ಮೂಲ ಅಗತ್ಯಗಳ ಈಡೇರಿಕೆ – ಹೀಗೆ ಪಟ್ಟಿ ಮಾಡುತ್ತಲೇ ಹೋಗಬಹುದಾದ ಹಲವು ಸಂಗತಿಗಳೆಲ್ಲ ೨೦೨೪ರ ಚುನಾವಣೆಯನ್ನೆದುರಿಸುವ ಮುಂಚೆ ಮೋದಿ ಸರ್ಕಾರದ ಕ್ರೆಡಿಟ್ಟಿಗೆ ಇದ್ದವು. ಆದರೆ, ಇವೆಲ್ಲದರ ಜೊತೆಗೆ ಕರ್ನಾಟಕವೂ, ಬಿಹಾರವೂ, ಕಾಶ್ಮೀರವೂ ಕಾಮನ್ ಆಗಿ ತೀವ್ರವಾಗಿ ತುಡಿಯುವ ವಿಷಯವೊಂದು “ಅಲೆ”ಯ ರೂಪದಲ್ಲಿ ಈ ಬಾರಿ ಇರಲಿಲ್ಲ. ರಾಮಮಂದಿರ ನಿರ್ಮಾಣ, ವಿಧಿ-೩೭೦ನ್ನು ಕಿತ್ತೊಗೆದಿರುವುದು ಇವೇ ಮುಂತಾದ ಸಂಗತಿಗಳು ಅವಶ್ಯವಾಗಿ ನಿರಾಳತೆಯನ್ನೂ, ಅಭಿಮಾನವನ್ನೂ ಕೊಟ್ಟ ವಿಷಯಗಳಾಗಿದ್ದರೂ ಅವು ಮುಗಿದ ವಿಷಯಗಳು. ಅರ್ಥಾತ್, ಇವುಗಳ ಈಡೇರಿಕೆಯಿನ್ನೂ ಬಾಕಿ ಇದ್ದು, ಅದಕ್ಕೆ ಮೋದಿ ಮತ್ತೆ ಬರಬೇಕು ಎಂಬಂಥ ಭಾವೋತ್ಕಟತೆಯನ್ನು ಹುಟ್ಟುಹಾಕಿದ ವಿಷಯಗಳಲ್ಲ. ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನವೂ ತುಂಬ ಬಲಹೀನ ಎಂಬುದು ನಮ್ಮ ತಲೆಗಿಳಿದುಬಿಟ್ಟಿರುವುದರಿಂದ ಮೋದಿಯೇ ಮುಂದೆ ನಿಂತು ರಕ್ಷಿಸಬೇಕಾಗಿರುವ “ಥ್ರೆಟ್ ಪರ್ಸೆಪ್ಶನ್” ಇಲ್ಲವೇ ಆತಂಕದ ಸವಾಲೆಂಬುದು ಜನರೆದುರು ಇರಲಿಲ್ಲ.
ಈ ಅಲೆ ಅರ್ಥವಾಗಬೇಕಿದ್ದರೆ ನಾವು ಈ ಹಿಂದಿನ ಎರಡು ಲೋಕಸಭೆಗಳ ಸಂದರ್ಭವನ್ನು ಕಣ್ಣಿಗೆ ತಂದುಕೊಳ್ಳಬೇಕು. ೨೦೧೪ರಲ್ಲಿ ಯುಪಿಎ ತೊಲಗಿಸಿ ಮೋದಿಯವರನ್ನು ತರಬೇಕೆಂಬ ಅಲೆ ದೇಶದಾದ್ಯಂತ ಇತ್ತು, ೨೦೧೯ರಲ್ಲಿ ನಿರಂತರತೆ ಕಾಪಾಡಿಕೊಳ್ಳುವ ಅಲೆಯಂಥ ಭಾವನೆಗೆ ಆಗಷ್ಟೇ ಆಗಿದ್ದ ಬಾಲಾಕೋಟ್ ದಾಳಿ ನೀರೆರೆದಿತ್ತು. ೨೦೨೪ರ ವೇಳೆಗೆ ಅದೇ ಲಾಭಾರ್ಥಿಗಳು, ಅಭಿವೃದ್ಧಿ ಕಾರ್ಯಗಳು ಎಲ್ಲವೂ ಬಿಜೆಪಿ ದಾಖಲೆಯಲ್ಲಿದ್ದರೂ ಇಡೀ ದೇಶಕ್ಕೆ ಸಮಾನವಾಗಿ ಆವರಿಸಿ ಹಿಡಿದಿಟ್ಟುಕೊಳ್ಳುವ ಅಲೆಯೊಂದು ಇರದಿದ್ದದ್ದು ಬಹುಶಃ ಯುಪಿ, ಮಹಾರಾಷ್ಟ್ರಗಳಲ್ಲಿ ಸ್ಥಳೀಯ ವಿಷಯಗಳು ಚುನಾವಣೆಯ ಗತಿಯನ್ನು ನಿರ್ಧರಿಸುವುದಕ್ಕೆ ಕಾರಣವಾದಂತಿದೆ.
೨. ಉಚಿತ ಯೋಜನೆ / ಲಾಭಾರ್ಥಿ ಮಾದರಿಗಳಿಗೂ ಮಿತಿಗಳಿವೆ!
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಸಲ್ಲಬೇಕಿರುವ ಅಂಶವೊಂದನ್ನು ಈ ಚುನಾವಣೆ ಸಾರಿರುವುದು ಈ ಬಾರಿಯ ಪಾಸಿಟಿವ್ ಅಂಶಗಳಲ್ಲಿ ಒಂದು.
ಕರ್ನಾಟಕವನ್ನೇ ತೆಗೆದುಕೊಂಡರೆ ಅದಾಗಲೇ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಹಣ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಗಳೆಲ್ಲ ಜಾರಿಯಲ್ಲಿದ್ದವು. ಅಷ್ಟಾಗಿಯೂ ಕಾಂಗ್ರೆಸ್ಸಿಗೆ ೯ ಸ್ಥಾನ ಹಾಗೂ ಬಿಜೆಪಿ ಮೈತ್ರಿಗೆ ೧೯ ಸ್ಥಾನಗಳು ಲಭಿಸಿರುವುದು ಈ ಉಚಿತಗಳು ಒಂದು ಹಂತದವರೆಗೆ ಮಾತ್ರ ಕೈಹಿಡಿಯಬಲ್ಲವು ಹಾಗೂ ಜನರೇನೂ ಇವುಗಳ ಬಗ್ಗೆ ನಿರಂತರವಾಗಿ ‘ಋಣಭಾರ’ದಲ್ಲಿರುವ ಭಾವನೆ ಇಟ್ಟುಕೊಳ್ಳುವುದಿಲ್ಲ ಎಂಬುದನ್ನು ಇದು ಸಾರುತ್ತಿದೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವಾರ್ಷಿಕ ೧ ಲಕ್ಷ ರೂಪಾಯಿಯವರೆಗೆ ಹಣ ಹಾಕುವುದಾಗಿ ಹೇಳಿದ್ದರೂ ಅದೇನೂ ಬಹುದೊಡ್ಡ ಆಕರ್ಷಣೆ ಹುಟ್ಟುಹಾಕಿ ಅಲೆಯನ್ನಾಗಿ ಪರಿವರ್ತಿಸಿಲ್ಲ. ಹಾಗೊಂದು ಉಚಿತ ಭರವಸೆಯನ್ನೇ ನೆಚ್ಚಿಕೊಂಡು ಜನ ಮತ ಹಾಕುವುದಿದ್ದರೆ ಕಾಂಗ್ರೆಸ್ಸಿಗೆ ಇನ್ನೂ ದೊಡ್ಡ ಸಂಖ್ಯೆ ಬರಬೇಕಿತ್ತು. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಒಟ್ಟಿಗೇ ಆಗಿರುವ ಆಂಧ್ರಪ್ರದೇಶದಲ್ಲಿ ಸಹ ಜಗನ್ಮೋಹನ್ ರೆಡ್ಡಿ ದೊಡ್ಡಮಟ್ಟದ ಉಚಿತಗಳನ್ನು ಘೋಷಿಸಿದ ಮೇಲೂ ಅಧಿಕಾರ ಉಳಿಸಿಕೊಳ್ಳಲಾಗಲಿಲ್ಲ.
ಬಿಜೆಪಿಯನ್ನೇ ಗಮನಿಸುವುದಾದರೂ, ೨೦೧೯ರ ಲೋಕಸಭೆ ಚುನಾವಣೆಯನ್ನು ಅದು ಗೆದ್ದ ಸಂದರ್ಭದಲ್ಲಿ ಹೆಚ್ಚಿನ ವಿಶ್ಲೇಷಣೆಗಳು ಬಿಜೆಪಿಗೆ ೩೦೩ ಸ್ಥಾನಗಳು ಬಂದಿದ್ದಕ್ಕೆ ಕೊಟ್ಟಿದ್ದ ಕಾರಣವೆಂದರೆ ಲಾಭಾರ್ಥಿಗಳದ್ದು. ಶೌಚಾಲಯ, ಸಿಲಿಂಡರ್, ಮನೆ, ಪಿಎಂ ಕಿಸಾನ್ ಯೋಜನೆ – ಹೀಗೆ ಹಲವು ಯೋಜನೆಗಳಲ್ಲಿ ಲಾಭ ಪಡೆದವರೆಲ್ಲ ತಮ್ಮ ಜಾತಿ ಮತ್ತಿತರ ಐಡೆಂಟಿಟಿಗಳನ್ನು ಮರೆತು ಕಮಲಕ್ಕೆ ಮತ ಒತ್ತಿರುವುದಾಗಿ ವಿಶ್ಲೇಷಿಸಲಾಗಿತ್ತು. ಈ ಪೈಕಿ ಎಲ್ಲ ಯೋಜನೆಗಳೂ ಇವತ್ತಿಗೂ ಮುಂದುವರಿದುಕೊಂಡಿವೆ. ಆದರೆ ಈ ಬಾರಿ ಅಂತಹದೊಂದು ಲಾಭಾರ್ಥಿ ಸೆಂಟಿಮೆಂಟ್ ಪ್ರಖರವಾಗಿ ಕಾಣಲಿಲ್ಲ.
ಈ ಎಲ್ಲ ಹಿನ್ನೆಲೆಗಳನ್ನು ಗಮನಕ್ಕೆ ತೆಗೆದುಕೊಂಡಾಗ, ಫ್ರೀಬಿಗಳನ್ನು ಕೊಟ್ಟರೆ ಸಾಕು ಚುನಾವಣೆ ಗೆದ್ದುಬಿಡಬಹುದು ಎಂಬುದಾಗಲಿ, ಜನರೆಲ್ಲರೂ ತಮ್ಮನ್ನು ತಾವು ಉಚಿತಕ್ಕೆ ಮಾರಿಕೊಳ್ಳುತ್ತಿದ್ದಾರೆ ಎಂದು ಹೇಳುವುದಾಗಲಿ ಸತ್ಯವಲ್ಲ ಎಂಬುದು ಸ್ಪಷ್ಟವಾಗುತ್ತದೆ.
೩. ಹಿಂದುಗಳು ಬಿಜೆಪಿಗೆ ಮೋಸ ಮಾಡಿದರಾ?
೫೦೦ ವರ್ಷಗಳ ಬಳಿಕ ರಾಮಮಂದಿರ ನಿರ್ಮಾಣವಾದ ಬಳಿಕವೂ ಅಯೋಧ್ಯೆಯಲ್ಲೇ ಬಿಜೆಪಿಯನ್ನು ಸೋಲಿಸುವ, ದೇಶದಲ್ಲಿ ಅದರ ಬಲ ಕುಗ್ಗಿಸುವ ಕಾರ್ಯವನ್ನು ಹಿಂದುಗಳು ಮಾಡಿಬಿಟ್ಟರು – ಎಂಬ ಭಾವನಾತ್ಮಕ ಆಕ್ರೋಶವನ್ನು ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದನ್ನು ಗಮನಿಸಬಹುದು. ಇದೊಂದು ತರ್ಕರಹಿತ ಭಾವನಾತ್ಮಕ ಉತ್ಕರ್ಷದ ವಿಚಾರಧಾಟಿ. ಏಕೆಂದರೆ, ಬಿಜೆಪಿಯು ೨೪೦ ಸ್ಥಾನಗಳನ್ನು ಪಡೆದುಕೊಂಡು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವುದಕ್ಕೆ ಕಾರಣವಾಗಿರುವುದು ಹಿಂದುಗಳ ಮತವೇ ಹೊರತು ಮತ್ತೇನಲ್ಲ. ಅಯೋಧ್ಯೆಯು ಒಂದು ಭಾಗವಷ್ಟೇ ಆಗಿರುವ ಫೈಜಾಬಾದ್ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಲುಲ್ಲು ಸಿಂಘ್ ವಿರುದ್ಧ ಇದ್ದ ಜನಾಕ್ರೋಶ ಗೊತ್ತಿದ್ದೂ ಬದಲಿಸದೆ ಹೋದ ಬಿಜೆಪಿಯ ತಪ್ಪನ್ನು ಹಿಂದುಗಳ ಮೇಲೆ ಹೊರಿಸಲಾಗುವುದಿಲ್ಲ. ಅಲ್ಲಿನ ಸಾಮಾನ್ಯವರ್ಗದ ಸ್ಥಾನದಲ್ಲಿ ದಲಿತ ಅಭ್ಯರ್ಥಿಯನ್ನು ನಿಲ್ಲಿಸಿದ ಸಮಾಜವಾದಿ ಪಕ್ಷದ ಸೋಶಿಯಲ್ ಎಂಜಿನಿಯರಿಂಗ್ ಸಹ ಪ್ರಶಂಸಾರ್ಹ. ಅಯೋಧ್ಯೆ ಒಂದು ಉದಾಹರಣೆ ಮಾತ್ರ. ಅಭ್ಯರ್ಥಿ ಹೇಗೆಯೇ ಇದ್ದರೂ ಮೋದಿಯವರ ಮುಖ ನೋಡಿ ಮತ ಹಾಕಬೇಕು ಎಂಬ ಬಿಜೆಪಿಯ ಅಹಂಕಾರಭರಿತ ನಡವಳಿಕೆಯನ್ನು ಹಲವೆಡೆ ಮತದಾರ ಒಪ್ಪಿಕೊಂಡಿಲ್ಲ ಎಂಬುದೇ ನಿಜವಾದ ವಾಸ್ತವ.
ಇದರಾಚೆಗೆ, ತಮಗೆ ಬೇಕಿದ್ದಾಗ ಮಾತ್ರ ಹಿಂದು ಧ್ರುವೀಕರಣಗೊಳ್ಳಬೇಕು, ಉಳಿದಂತೆ ‘ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್’ ಎಂದು ಜಪಿಸಬೇಕು ಎಂಬ ಬಿಜೆಪಿ ಧೋರಣೆಗಳ ವಿಮರ್ಶೆಗೆ ಸಹ ಮತದಾರ ದಾರಿ ಮಾಡಿಕೊಟ್ಟಿದ್ದಾನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಒಂದು ಪತ್ರಿಕಾ ಸಂದರ್ಶನದಲ್ಲಿ ಆರೆಸ್ಸೆಸ್ಸಿನ ವ್ಯವಸ್ಥೆ ಹೊರತಾಗಿಯೂ ಬಿಜೆಪಿ ಗೆಲ್ಲುತ್ತದೆ ಎಂಬರ್ಥದ ಮಾತುಗಳನ್ನಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಉನ್ನತ ಹಂತಗಳಲ್ಲಿರುವವರಿಗೆ ಇಂಥಹದ್ದನ್ನು ಪ್ರೌಢನೆಲೆಯಲ್ಲಿ ಗಮನಿಸುವ ಸಾಮರ್ಥ್ಯ ಇರುತ್ತದೆ. ಆದರೆ ಉತ್ತರಪ್ರದೇಶದಲ್ಲೋ-ಬಿಹಾರದಲ್ಲೋ ಚುನಾವಣೆಯ ಸಮಯಕ್ಕೆ ವೈಯಕ್ತಿಕ ಲಾಭವಿಲ್ಲದಿದ್ದರೂ ಮನೆಮನೆಗೆ ತೆರಳಿ ರಾಷ್ಟ್ರೀಯತೆಗಾಗಿ ಮತ ಕೇಳುವ ಸಾಮಾನ್ಯ ಸ್ವಯಂಸೇವಕರಲ್ಲಿ ಹಲವರಿಗಾದರೂ, “ಬಿಜೆಪಿಗೆ ನಾವು ಬೇಕಿಲ್ಲ ಎಂದಮೇಲೆ ನಾವೂ ಬೇರೆ ನೆಲೆಯಲ್ಲಿ ಸಾಮಾಜಿಕ ಕೆಲಸ ಮಾಡೋಣ, ಪಕ್ಷದ ಪ್ರಚಾರಕ್ಕೆ ಸಮಯ ವ್ಯಯಿಸುವುದೇಕೆ?” ಎಂದೆನಿಸಿರುತ್ತದೆ. ಒಂದೊಮ್ಮೆ ತಾವು ಆ ಅರ್ಥದಲ್ಲಿ ಸಂದರ್ಶನದ ಮಾತುಗಳನ್ನಾಡಿಲ್ಲ ಎಂಬುದು ಬಿಜೆಪಿ ರಾಷ್ಟ್ರಾಧ್ಯಕ್ಷರ ನಿಲವೇನಾದರೂ ಆಗಿದ್ದಲ್ಲಿ, ಅವರದಕ್ಕೆ ಸ್ಪಷ್ಟ ಸಮಜಾಯಿಷಿಯನ್ನು ಕೊಡಬೇಕಿತ್ತು. ಆದರೆ ಅಂಥ ಯಾವ ಪ್ರಯತ್ನಗಳೂ ಆಗಲಿಲ್ಲ.
ಪ್ರಧಾನಿ ಮೋದಿಯವರ ನಡಾವಳಿಯನ್ನೇ ಗಮನಿಸಿದರೂ, ಒಂದುಹಂತದಲ್ಲಿ ಅವರು ಪಶ್ಮಿಂದಾ ಮುಸ್ಲಿಮರ ಬಗ್ಗೆ, ಅವರಿಗೆ ಸವಲತ್ತುಗಳನ್ನು ನೀಡಬೇಕಿರುವ ಬಗ್ಗೆ ಪದೇಪದೇ ಮಾತನಾಡುತ್ತಿದ್ದರು. ಆದರೆ ಪ್ರಚಾರದ ಹಂತದಲ್ಲಿ ಮಾತ್ರ ಏಕಾಏಕಿ ಒಬಿಸಿ ವರ್ಗದಿಂದ ಮುಸ್ಲಿಮರನ್ನು ಹೊರಗಿಡಬೇಕಾಗಿದ್ದರ ಬಗ್ಗೆ, ವಿಪಕ್ಷಗಳು ಅಧಿಕಾರಕ್ಕೆ ಬಂದರೆ ರಾಮನನ್ನು ಮತ್ತೆ ಟೆಂಟಿನಲ್ಲಿ ಕೂರಿಸಿಬಿಡುತ್ತಾರೆ ಎಂಬ ಬಗ್ಗೆ, ಮಂಗಳಸೂತ್ರದ ಬಗ್ಗೆ ಭಾವಾವೇಶ ತುಂಬುವ ಮಾತುಗಳನ್ನಾಡಿದರು. ಈ ವಿರೋಧಾಭಾಸದಿಂದ ಮೋದಿಯವರು ತಮ್ಮ ಕೋರ್ ಮತದಾರರನ್ನೂ ಖುಷಿಪಡಿಸಲಿಲ್ಲ ಹಾಗೂ ಅದೆಷ್ಟೇ ಪಶ್ಮಿಂದಾ ಮುಸ್ಲಿಮರ ಜಪ ಮಾಡಿದರೂ ಆಕಡೆಯಿಂದ ಮತಗಳೇನೂ ಬರಲಿಲ್ಲ. ಕರಸೇವಕರ ಮೇಲೆ ಗೋಲಿಬಾರ್ ಮಾಡಿಸಿದವರಿಗೇ ಪದ್ಮ ಪ್ರಶಸ್ತಿ ಕೊಟ್ಟು, ನಂತರ ಭಾಷಣದಲ್ಲಿ ಎಸ್ಪಿ ವಿರುದ್ಧ ರಾಮಭಕ್ತರ ಭಾವನೆಯನ್ನು ಕೊನೆಕ್ಷಣದಲ್ಲಿ ಪ್ರಚೋದಿಸುವುದಕ್ಕೆ ಹೊರಟರೆ ಅಷ್ಟು ಸುಲಭಕ್ಕೆ ಫಲ ಸಿಕ್ಕೀತೇ?
೪. ತಿರುಮಂತ್ರವಾದ ‘ಚಾರ್ ಸೌ ಪಾರ್!’
“ನಾವು ೪೦೦ರ ಸಂಖ್ಯೆ ಉಲ್ಲೇಖಿಸಿದ್ದರಿಂದ ನಮ್ಮ ವಿರೋಧಿಗಳು ಉಳಿದೆಲ್ಲವನ್ನೂ ಬಿಟ್ಟು ಅಷ್ಟು ಸೀಟು ಬಿಜೆಪಿಗೆ ಬರುವುದಿಲ್ಲ ಎಂದು ಹೇಳುವುದರಲ್ಲೇ ಶಕ್ತಿ ವ್ಯಯಿಸುವಂತಾಯಿತು” ಎಂದು ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ಹಲವು ಬಿಜೆಪಿ ಮತ್ತು ಮೋದಿ ಪ್ರಶಂಸಕರು ಈ ವಿವರಣೆ ಕೇಳಿ, ‘ಅರೆರೇ ಮಾಸ್ಟರ್ ಸ್ಟ್ರೋಕ್’ ಎಂದು ಉದ್ಗರಿಸಿದರು.
ಆದರೆ ಈಗ ಅವಲೋಕಿಸಿದಾಗ ಇದು ತಿರುಮಂತ್ರವಾಗಿದ್ದು ಸ್ಪಷ್ಟವಾಗುತ್ತಿದೆ. ಹೇಗೆಂದರೂ ಬಿಜೆಪಿ ೪೦೦ ಗೆಲ್ಲುತ್ತಿದೆ ಎಂದು ಒಟ್ಟಾರೆ ಕೇಡರಿನಲ್ಲಿ ಹಾಗೂ ಬಿಜೆಪಿ ಬೆಂಬಲಿಗರಲ್ಲಿ ಒಂದು ಉದಾಸೀನ ಭಾವ ನೆಲೆಯಾಗುವುದಕ್ಕೆ ಇದು ಕಾರಣವಾಯಿತು. ಬಿಜೆಪಿಗೆ ಬಹುಮತದ ನಂಬರನ್ನು ಖುದ್ದಾಗಿ ಮುಟ್ಟುವುದಕ್ಕೆ ಕಷ್ಟವಾದರೆ ಏನೆಲ್ಲ ತೊಂದರೆಗಳಾಗಬಹುದು ಎಂಬ ಭಯ ಹೊತ್ತ ಸಂದೇಶಗಳನ್ನು ಬಿತ್ತರಿಸಿದ್ದರೆ, ಆಗ ಪಕ್ಷದ ಕುರಿತಾದ ಧ್ರುವೀಕರಣ ಇನ್ನಷ್ಟು ಹೆಚ್ಚಿ ಸ್ಥಾನಗಳು ಉತ್ತಮವಾಗಬಹುದಿತ್ತೇನೋ ಎಂಬ ಸಾಧ್ಯತೆಯೊಂದು ಈಗ ಸಿಂಹಾವಲೋಕನದಲ್ಲಿ ಲಭಿಸುತ್ತಿದೆ.
೫. ಅಧಿಕಾರದ ಅತಿ ಕೇಂದ್ರೀಕರಣ ಸಲ್ಲ ಎನ್ನುತ್ತಿದೆ ಜನಾದೇಶ!
ಹಾಗೆ ನೋಡಿದರೆ ಬಿಜೆಪಿ ಮತ್ತು ಎನ್ಡಿಎಯ ಭರ್ಜರಿ ಪುನರಾಗಮನದ ಲೆಕ್ಕಾಚಾರ-ಸಮೀಕ್ಷೆಗಳು ನಿಜವಾಗದೆ ಇರುವುದಕ್ಕೆ ದೇಶದುದ್ದಕ್ಕೂ ಎಲ್ಲರ ಲೆಕ್ಕಾಚಾರ ತಪ್ಪಿದ್ದು ಕಾರಣ ಎಂಬಂತೇನೂ ಇಲ್ಲ. ನಾಲ್ಕು ರಾಜ್ಯಗಳಲ್ಲಿ ಲೆಕ್ಕಾಚಾರ ತಪ್ಪಾಗಿದ್ದೇ ಎಲ್ಲರ ಭವಿಷ್ಯಗಳನ್ನು ಸುಳ್ಳಾಗಿಸಿತಷ್ಟೆ. ಅದರಲ್ಲೂ ಉತ್ತರಪ್ರದೇಶ ಮತ್ತು ಮಹಾರಾಷ್ಟ್ರಗಳು ದೊಡ್ಡಮಟ್ಟದಲ್ಲಿ ಬಿಜೆಪಿಯ ಲೆಕ್ಕವನ್ನು ಕೆಳಗಿಳಿಸಿದವು.
ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಯ ಕಳಪೆ ಪ್ರದರ್ಶನಕ್ಕೆ ಈಗ ಹಲವು ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ. ಅವುಗಳಲ್ಲೊಂದು ಸ್ಥಳೀಯ ನಾಯಕತ್ವವನ್ನು ಕೇಂದ್ರವು ಕಡೆಗಣಿಸಿದ ರೀತಿ. ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಸೂಚಿಸಿದ ಅಭ್ಯರ್ಥಿಗಳನ್ನು ಕೇಂದ್ರದ ಟೀಮ್ ಪರಿಗಣಿಸಲಿಲ್ಲ ಎಂಬ ವದಂತಿಗಳಲ್ಲಿ ನಿಜವೆಷ್ಟು ಎಂದು ನಿಖರವಾಗಿ ಹೇಳಲಾಗದು. ಆದರೆ, ಒಂದಂತೂ ನಿಜ. ನರೇಂದ್ರ ಮೋದಿಯವರು ಭಾರಿ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬರುತ್ತಲೇ ಮುಖ್ಯಮಂತ್ರಿ ಸ್ಥಾನದಿಂದ ಯೋಗಿ ಆದಿತ್ಯನಾಥರನ್ನು ಬದಲಿಸುತ್ತಾರೆ ಎಂಬ ಊಹಾತ್ಮಕ ಮಾತುಗಳು ಬಂದಾಗ ರಾಷ್ಟ್ರೀಯ ಬಿಜೆಪಿಯ ಪ್ರಮುಖರು ಅದನ್ನು ಸ್ಪಷ್ಟ ಶಬ್ದಗಳಲ್ಲಿ ಅಲ್ಲಗೆಳೆಯುವ ಕೆಲಸವನ್ನು ಮಾಡಲೇ ಇಲ್ಲ. ಬಿಜೆಪಿಯ ಆಡಳಿತವಿರುವ ಕೆಲವು ರಾಜ್ಯಗಳಲ್ಲಿ ಪ್ರಖರ ವರ್ಚಸ್ಸಿಲ್ಲದ ಹಾಗೂ ಕೇಂದ್ರದ ಮಾತುಗಳನ್ನು ಕೇಳಿಯೇ ಮುಂದಡಿ ಇಡುವ ಮುಖ್ಯಮಂತ್ರಿಗಳನ್ನು ನೇಮಿಸಿರುವುದು ಸುಳ್ಳೇನೂ ಅಲ್ಲವಾದ್ದರಿಂದ ಈ ಬಗೆಯ ವದಂತಿಗಳನ್ನು ಅಲ್ಲಗಳೆಯದಿದ್ದರೆ ಅದರ ಸಾಧ್ಯತೆ ಹೆಚ್ಚು ಎಂದೇ ಆಗಿಬಿಡುತ್ತದೆ. ಒಟ್ಟಿನಲ್ಲಿ, ಯೋಗಿಯಂಥ ಜನಪ್ರಿಯ ಮುಖ್ಯಮಂತ್ರಿಯ ಜೊತೆ ಸ್ಪಷ್ಟ ಸಮನ್ವಯ ಕೇಂದ್ರಕ್ಕಿರಲಿಲ್ಲ ಎಂಬುದನ್ನಂತೂ ಫಲಿತಾಂಶ ಜಾಹೀರಾಗಿಸಿದೆ.
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ದೇವೇಂದ್ರ ಫಡ್ನವೀಸರನ್ನು ಬಲವಂತವಾಗಿ ಉಪ-ಮುಖ್ಯಮಂತ್ರಿ ಸ್ಥಾನ ಹಿಡಿಸಿದಾಗಿನಿಂದ ಅವರಲ್ಲಿ ಮೊದಲಿನ ಕಳೆ ಇರಲೇ ಇಲ್ಲ. ಅದರ ಮೇಲಿನಿಂದ ಪಕ್ಷಾಂತರಿಗಳಿಗೆ ಅತಿಯಾಗಿ ಮಣೆ ಹಾಕಲಾಯಿತು. ಕೇಂದ್ರ ನಡೆದಿದ್ದೇ ದಾರಿ ಎಂಬ ಧೋರಣೆಯನ್ನು ಶಿವಾಜಿಯ ನೆಲವೂ ಒಪ್ಪಿಕೊಳ್ಳುವ ಹಂತದಲ್ಲಿರಲಿಲ್ಲ ಎಂಬುದನ್ನು ಫಲಿತಾಂಶ ತಿಳಿಸುತ್ತಿದೆ.
೬. ಬಿಜೆಪಿಯ ‘ವಾಶಿಂಗ್ ಮಶಿನ್’ ಮಾದರಿಗೆ ತಿರಸ್ಕಾರ
ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಶುದ್ಧಹಸ್ತದ ಬಗ್ಗೆ ಮತದಾರನಿಗೆ ಇವತ್ತಿಗೂ ವಿಶ್ವಾಸ ಕದಡುವ ಯಾವುದೇ ವಿದ್ಯಮಾನಗಳಾಗಿಲ್ಲ. ಸರ್ಕಾರದ ಮೇಲುಹಂತದಲ್ಲಿ ಭ್ರಷ್ಟಾಚಾರವಿಲ್ಲ ಎಂಬುದನ್ನೂ ಹಲವರು ಒಪ್ಪಿಯಾರು. ಆದರೆ ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ೨೦೧೪ರ ವೇಳೆಗೆ ಬಿಜೆಪಿಗಿದ್ದ ನೈತಿಕ ಮೇಲ್ಮಟ್ಟ ಈಗಿದೆಯಾ? ಎಂಬುದಕ್ಕೆ ನಕಾರಾತ್ಮಕ ಉತ್ತರವೇ ಬಂದೀತು. ಏಕೆಂದರೆ, ಭ್ರಷ್ಟಾಚಾರ ಪ್ರಕರಣಗಳನ್ನು ಹೊತ್ತಿರುವ ಅನೇಕರು ಬಿಜೆಪಿಗೆ ಬರುತ್ತಲೇ ಅವರ ಮೇಲಿನ ಪ್ರಕರಣಗಳೆಲ್ಲ ನಿಧಾನಗತಿ ಪಡೆಯುವ ವಿದ್ಯಮಾನಗಳು ಇವತ್ತಿನ ಡಿಜಿಟಲ್ ಮಾಧ್ಯಮದ ಯುಗದಲ್ಲಿ ಜನರ ಅರಿವಿನಿಂದೇನೂ ದೂರ ಉಳಿದಿಲ್ಲ. ಮಹಾರಾಷ್ಟçದ ಫಲಿತಾಂಶದಲ್ಲೇ ಇದರ ಝಲಕು ಕಾಣಬಹುದು. ಯಾವ ಅಜಿತ್ ಪವಾರ್ ವಿರುದ್ಧ ಮಹಾಭ್ರಷ್ಟತೆಯ ಆರೋಪ ಹೊರಿಸುತ್ತ ಬಿಜೆಪಿ ತನ್ನ ರಾಜಕೀಯ ಮಾಡಿತ್ತೋ ಅಂಥ ವ್ಯಕ್ತಿ ಒಡೆದ ಎನ್ಸಿಪಿ ಗುಂಪಿನೊಂದಿಗೆ ತನ್ನನ್ನು ಸೇರಿಕೊಳ್ಳುವಂತೆ ಮಾಡಿದ ಬಿಜೆಪಿಗೆ ಆ ಪಾಳೆಯದಿಂದ ಬಂದಿದ್ದು ಒಂದೇ ಒಂದು ಸ್ಥಾನ! ಇದೇ ಮಹಾರಾಷ್ಟçದಲ್ಲಿ ಆದರ್ಶ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಆರೋಪ ಹೊತ್ತಿದ್ದ ಅಶೋಕ್ ಚವ್ಹಾಣರನ್ನು ಬಿಜೆಪಿಗೆ ಸೇರಿಸಿಕೊಂಡು ರಾಜ್ಯಸಭೆಗೆ ಕಳುಹಿಸುವ ದರ್ದು ಅಂಥಾದ್ದೇನಿತ್ತು ಎಂಬ ಪ್ರಶ್ನೆಯೂ ಸಹಜವಾಗಿ ಉದ್ಭವವಾಗುತ್ತದೆ. ಭ್ರಷ್ಟಾಚಾರಿಗಳು ತನ್ನನ್ನು ಸೇರಿದೊಡನೆ ಶುದ್ಧವಾಗಿಬಿಡುತ್ತಾರೆಂಬ ಬಿಜೆಪಿ ಧೋರಣೆ ಅದರ ಬ್ರಾಂಡಿಗೆ ಪೆಟ್ಟು ನೀಡಿರುವುದು ವಾಸ್ತವ.
“ದೊಡ್ಡ ಸಮರ ಗೆಲ್ಲಬೇಕಾದರೆ ಇಂಥ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ” ಎಂದೇ ಇಂಥವಕ್ಕೆಲ್ಲ ಸಮಜಾಯಿಶಿ ಕೊಟ್ಟುಕೊಂಡು ಬಂದಿದೆ, ಬಿಜೆಪಿ. ಇದನ್ನು ಮತದಾರ ಒಪ್ಪುತ್ತಾನೊ ಬಿಡುತ್ತಾನೊ ಎಂಬುದು ನಂತರದ ಪ್ರಶ್ನೆ. ಆದರೆ ಯಾವ ಬಿಜೆಪಿಯ ಕೇಡರ್ ನೆಲಮಟ್ಟದಲ್ಲಿ ಇಂಥವರ ವಿರುದ್ಧ ವ್ಯಾಖ್ಯಾನಗಳನ್ನು ಕಟ್ಟುತ್ತ ಬಂತೋ, ಮತ್ಯಾವ ಕೇಡರ್ ತನ್ನಲ್ಲಿಂದ ಬಿಜೆಪಿಗೆ ನಾಯಕರು ಹುಟ್ಟಿಕೊಳ್ಳಲೆಂದು ಸಹಜವಾಗಿ ಬಯಸುತ್ತದೋ ಅದಕ್ಕೆ ಈ ನಡೆಗಳಿಂದ ಉತ್ಸಾಹ ಕುಂದುವುದಷ್ಟೇ ಅಲ್ಲ, ಪ್ರಚಾರಾಂದೋಲನದಿಂದಲೇ ವಿಮುಖವಾಗುವಂಥ ಸ್ಥಿತಿ ಬರುವುದು ಸಹಜ.
೭. ಸಂವಿಧಾನ – ಮೀಸಲು, ಬಿಜೆಪಿಗಿದೆ ಕೆಲಸ
ಬಿಜೆಪಿಯಿಂದ ಸಂವಿಧಾನಕ್ಕೆ ಅಪಚಾರವಾಗುತ್ತಿದೆ, ಸಂವಿಧಾನವನ್ನು ಬದಲಿಸುವುದೇ ಬಿಜೆಪಿಯ ಉದ್ದೇಶ ಎಂಬ ಪ್ರಚಾರವನ್ನು ರಾಹುಲ್ಗಾಂಧಿ ಮತ್ತು ಕಾಂಗ್ರೆಸ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಆದರೆ, ಈ ಬಾರಿ ಅದನ್ನು ರಾಹುಲ್ಗಾಂಧಿ ಹೋದಲ್ಲೆಲ್ಲ ಸಂವಿಧಾನದ ಪುಸ್ತಕ ಹಿಡಿದುಕೊಂಡು ಹೋಗಿ ಪರಿಣಾಮಕಾರಿಯಾಗಿ ಮಾಡಿದರು. ಬಿಜೆಪಿಯು ೪೦೦ ಸ್ಥಾನಗಳನ್ನು ಕೇಳುತ್ತಿರುವುದೇ ಈ ಬಾರಿ ಸಂವಿಧಾನ ಬದಲಿಸಿ ಮೀಸಲು ರದ್ದುಗೊಳಿಸುವುದಕ್ಕೆ ಎಂದು ಇಂಡಿ ಒಕ್ಕೂಟವು ಪ್ರಚಾರ ನಡೆಸಿತು.
ಹಾಗೆ ನೋಡಿದರೆ, ಇವಕ್ಕೆಲ್ಲ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ಪ್ರಮುಖರು ಸಹ ತೀವ್ರ ಪ್ರತಿಕ್ರಿಯೆ ನೀಡುತ್ತ ಬಂದಿದ್ದಾರೆ. ಮೀಸಲು ಕೊನೆಗೊಳಿಸುವುದಿಲ್ಲ, ಭಯ ಬೇಡ ಎಂಬ ಮಾತನ್ನು ಈ ಬಾರಿಯೂ ಪುನರುಚ್ಚರಿಸಿದ್ದಾರೆ. ಆದರೆ ಉತ್ತರಪ್ರದೇಶದಂಥ ರಾಜ್ಯಗಳಲ್ಲಿ ತಳಮಟ್ಟದಲ್ಲಿ ಈ ವಿಶ್ವಾಸವನ್ನು ಬಿಜೆಪಿ ದೃಢಗೊಳಿಸುವಲ್ಲಿ ಯಶಸ್ವಿಯಾಗಿಲ್ಲ ಎಂಬುದನ್ನು ಈ ಬಾರಿಯ ಅಂಕಿಸಂಖ್ಯೆಗಳು ಸಾರುತ್ತಿವೆ. ಲುಲ್ಲು ಸಿಂಗ್ ಸೇರಿದಂತೆ ಕೆಲವು ಸ್ಥಳೀಯ ಬಿಜೆಪಿಗರು ಸಹ ಸಂವಿಧಾನದ ವಿಚಾರದಲ್ಲಿ ಉಡಾಫೆಯಾಗಿ ಮಾತನಾಡಿರುವುದು ಬೆಳಕಿಗೆ ಬಂದಿದೆ. ಉತ್ತರಪ್ರದೇಶದ ದೊಡ್ಡ ದಲಿತ ಜನಸಂಖ್ಯೆಯು ಅಪಪ್ರಚಾರಕ್ಕೆ ಬಲಿಯಾಗಿ ಅಸುರಕ್ಷತೆಗೆ ಸಿಲುಕುವುದರಿಂದ ಕಾಪಾಡಬೇಕಾದ ಜವಾಬ್ದಾರಿ ಈಗ ಬಿಜೆಪಿ ಕೇಡರಿಗಿದೆ. ಈ ಹಿಂದಿನ ಎರಡು ಲೋಕಸಭೆ ಚುನಾವಣೆಗಳಲ್ಲಿ ಮತ್ತು ಉತ್ತರಪ್ರದೇಶದ ಎರಡು ವಿಧಾನಸಭೆ ಚುನಾವಣೆಗಳಲ್ಲಿ ಹಿಂದುಗಳ ಈ ವರ್ಗ ಜೊತೆಗಿದ್ದುದ್ದರಿಂದಲೇ ಬಿಜೆಪಿಗೆ ಪ್ರಚಂಡ ಬಹುಮತ ಬಂದಿದ್ದೆಂಬುದನ್ನು ಮರೆಯುವಂತಿಲ್ಲ.
೮. ಇದು ಕಾಂಗ್ರೆಸ್ ಪುನರುತ್ಥಾನವೇ?
ಇಂಥಹದೊಂದು ಪ್ರಶ್ನೆಗೆ ಕಾಂಗ್ರೆಸ್ಸಿನ ಟೀಕಾಕಾರರು ಗೇಲಿಯ ಉತ್ತರವನ್ನೇ ಕೊಡುತ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದಲೇ ಭಾರತವನ್ನು ದಶಕಗಳ ಆರು ದಶಕಗಳ ಕಾಲ ಆಳಿರುವ ಪಕ್ಷವೊಂದು ೯೯ ಸ್ಥಾನಗಳನ್ನು ಗಳಿಸಿದ್ದೇ ಸಾಧನೆಯೇ? ಅದಕ್ಕೇಕೆ ಗೆದ್ದಂತೆ ಸಂಭ್ರಮಿಸಬೇಕು? ಎಂಬ ಪ್ರಶ್ನೆ. ಈ ಹಿನ್ನೆಲೆಯಲ್ಲಿ ನೋಡಿದಾಗ ತನ್ನನ್ನು ಪುನರುತ್ಥಾನಗೊಳಿಸಿಕೊಳ್ಳುವಂಥ ಸಾಧನೆಯನ್ನೇನೂ ಕಾಂಗ್ರೆಸ್ ಆಗಲಿ, ರಾಹುಲ್ಗಾಂಧಿಯಾಗಲಿ ಮಾಡಿಲ್ಲ. ಈ ಹಿಂದೆ ಲೋಕಸಭೆಯಲ್ಲಿ ಬಿಜೆಪಿ ಸೋಲಿನ ದಾಖಲೆ ಇರುವುದು ೨೦೦೯ರಲ್ಲಿ. ಅವತ್ತು ಯುಪಿಎ ವಿರುದ್ಧ ಮುಗ್ಗರಿಸಿದ್ದ ಬಿಜೆಪಿಗೆ ೧೧೬ ಸ್ಥಾನಗಳು ಸಿಕ್ಕಿದ್ದವು ಎಂಬುದನ್ನು ಗಮನಿಸಿದಾಗ, ಮೋದಿ ಸರ್ಕಾರದ ವಿರುದ್ಧ ದಶಕಗಳವರೆಗೆ ಹೋರಾಟ ನಡೆಸಿದ ಮೇಲೂ ೧೦೦ ಸ್ಥಾನ ಗಳಿಸಲಾಗದ ಕಾಂಗ್ರೆಸ್ ಸ್ಥಿತಿಯಲ್ಲಿ ಬೆರಗಿನ ಅಂಶವೇನಿಲ್ಲ.
ಆದರೆ, ಕಾಂಗ್ರೆಸ್ಸಿಗೆ ಕಸುವು ತುಂಬುವ ವಿದ್ಯಮಾನ ನಿಜಕ್ಕೂ ಈ ಬಾರಿ ನಡೆದಿದೆ. ಇಂಡಿ ಮೈತ್ರಿಕೂಟದಲ್ಲಿ ನಾಯಕರಾರು ಎಂಬ ಪ್ರಶ್ನೆ ಯಾವಾಗಲೂ ಚುಚ್ಚುತ್ತಿತ್ತು. ನಾನೇ ನಾಯಕ ಎಂದು ಗಟ್ಟಿಯಾಗಿ ಹೇಳುವ ಸ್ಥಿತಿ ಕಾಂಗ್ರೆಸ್ಸಿನದ್ದಾಗಿರಲಿಲ್ಲ. ಆದರೆ ಈ ಬಾರಿ ಇಂಡಿ ಮೈತ್ರಿಯು ೨೩೦ ಸ್ಥಾನಗಳವರೆಗೆ ಹೋಗುವುದರಲ್ಲಿ ದೊಡ್ಡ ಯೋಗದಾನವಿರುವುದು ಕಾಂಗ್ರೆಸ್ಸಿನಿAದಲೇ ಆಗಿರುವುದರಿಂದ ವಿಪಕ್ಷಗಳ ನಾಯಕ ಸ್ಥಾನಕ್ಕೆ ತಾನೇ ಅರ್ಹ ಎಂದು ಅದು ಸಾಬೀತಾಗಿಸಿದೆ. ಮಹಾರಾಷ್ಟçದಲ್ಲಿ ಅದು ತನ್ನ ಮೈತ್ರಿಪಕ್ಷಗಳಾದ ಶಿವಸೇನೆ ಮತ್ತು ಎನ್ಸಿಪಿಗಳಿಗಿಂತ ಉತ್ತಮ ಸಾಧನೆಯನ್ನೇ ತೋರಿರುವುದು ಗಮನಾರ್ಹ. ಹೀಗಾಗಿ, ಈ ಬಾರಿ ಕಾಂಗ್ರೆಸ್ಪ್ರಣೀತ ವಿಪಕ್ಷದ ಅಬ್ಬರ ಜೋರಾಗಿಯೇ ಇರಲಿದೆ ಎಂಬುದಂತೂ ಸ್ಪಷ್ಟ.
೯. ಈ ಬಾರಿಯ ಜನಮತ ಮೋದಿಯವರನ್ನು ದುರ್ಬಲಗೊಳಿಸಿ ದೇಶದ ಗತಿ ಕುಗ್ಗಿಸುವಂತಿದೆಯೇ?
ಕಳೆದೆರಡು ಅವಧಿಗೆ ಮೈತ್ರಿಯ ಅಗತ್ಯವೂ ಇಲ್ಲದಂಥ ಬಹುಮತ ಬಿಜೆಪಿಗಿದ್ದ ಕಾಲಘಟ್ಟದಲ್ಲಿ ನಾವೆಲ್ಲ ಜೀವಿಸಿದ್ದೇವಾದ್ದರಿಂದ, ಈಗಿನ ಸಮ್ಮಿಶ್ರ ಸ್ಥಿತಿ ಏನೇನೋ ಆತಂಕ ಹುಟ್ಟಿಸುವಂತೆ ಮಾಡುತ್ತಿದೆ. ಆದರೆ ವಾಸ್ತವದಲ್ಲಿ ೨೦೨೪ರ ಎನ್ಡಿಎ ಬಹುಮತವನ್ನು ಈ ಹಿಂದಿನ ಇನ್ಯಾವುದೇ ಕಿಚಡಿ ಸರ್ಕಾರದೊಂದಿಗೆ ಹೋಲಿಸಿ ಗಾಬರಿಗೆ ಬೀಳುವ ಅಗತ್ಯವೇ ಇಲ್ಲ.
ಗೊತ್ತಿರಲಿ. ಕಳೆದ ೩೫ ವರ್ಷಗಳಲ್ಲಿ ಬಿಜೆಪಿ ಹೊರತುಪಡಿಸಿ ಮತ್ಯಾವ ಪಕ್ಷವೂ ೨೩೨ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದೇ ಇಲ್ಲ! ೧೯೮೯ರಲ್ಲಿ ರಾಜೀವ ಗಾಂಧಿಯವರ ಕಾಂಗ್ರೆಸ್ಸಿಗಿದ್ದದ್ದು ೧೯೭ ಸ್ಥಾನಗಳು ಮಾತ್ರ. ೧೯೯೧ರ ಪಿ.ವಿ. ನರಸಿಂಹರಾವ್ ಸರ್ಕಾರದ ವೇಳೆಯಲ್ಲಿ ಕಾಂಗ್ರೆಸ್ ೨೩೨ ಸ್ಥಾನ ಹೊಂದಿತ್ತು ಎಂಬುದೇ ಸಮ್ಮಿಶ್ರ ಯುಗದ ದೊಡ್ಡ ಸಂಖ್ಯೆ. ಯುಪಿಎ-೧ರಲ್ಲಿ ಕಾಂಗ್ರೆಸ್ಸಿಗಿದ್ದದ್ದು ೧೪೫ ಸ್ಥಾನಗಳು. ಯುಪಿಎ-೨ರಲ್ಲಿ ೨೦೬ ಸ್ಥಾನಗಳಿಗೆ ಸುಧಾರಿಸಿತ್ತು. ಇವೆಲ್ಲದರ ಹಿನ್ನೆಲೆಯಲ್ಲಿಟ್ಟು ನೋಡಿದಾಗ ಈಗ ಬಿಜೆಪಿಗೆ ಸಿಕ್ಕಿರುವ ೨೪೦ ಎಷ್ಟು ದೊಡ್ಡ ಸಂಖ್ಯೆ ಎಂಬುದು ಗೊತ್ತಾಗುತ್ತದೆ.
ಹೀಗಾಗಿ ರಕ್ಷಣೆ, ವಿದೇಶ ನೀತಿ, ಮೂಲಸೌಕರ್ಯಾಭಿವೃದ್ಧಿ ಎಲ್ಲ ವಿಷಯಗಳಲ್ಲೂ ಮೋದಿ ನೇತೃತ್ವದ ಸರ್ಕಾರದ ನಿರ್ಧಾರ ತೆಗೆದುಕೊಳ್ಳುವ ಛಾತಿಗೆ ಯಾವ ಅಡ್ಡಿಯೂ ಆಗುವುದಿಲ್ಲ. ಒಂದು ಪಕ್ಷವಾಗಿ ಇದಕ್ಕಿಂತ ಕಡಮೆ ಸಂಖ್ಯೆಯನ್ನಿಟ್ಟುಕೊಂಡು ಪಿ.ವಿ. ನರಸಿಂಹರಾವ್ ಅವರು ಆರ್ಥಿಕ ಉದಾರೀಕರಣ ನೀತಿಗಳನ್ನು ಅನುಷ್ಠಾನಕ್ಕೆ ತಂದಿದ್ದರು. ವಾಜಪೇಯಿ ಪೊಖ್ರಾನಿನಲ್ಲಿ ಅಣುಬಾಂಬ್ ಪರೀಕ್ಷಿಸಿ ಅಮೆರಿಕದಂತಹ ಶಕ್ತಿಶಾಲಿ ದೇಶವನ್ನು ಎದುರುಹಾಕಿಕೊಂಡು ಭಾರತವನ್ನು ಮುನ್ನಡೆಸಿದ್ದು ಸಮ್ಮಿಶ್ರ ಸರ್ಕಾರದ ಮೂಲಕವೇ, ೧೮೨ ಸ್ಥಾನಗಳನ್ನಿರಿಸಿಕೊಂಡು.
ಮುಂಬರುವ ದಿನಗಳಲ್ಲಿ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಉತ್ತಮ ಫಲಿತಾಂಶ ತಂದು ತನ್ನ ಮೈತ್ರಿಪಕ್ಷಗಳಿಗೆ ಇನ್ನಷ್ಟು ವಿಶ್ವಾಸ ಮೂಡಿಸಬೇಕಿರುವ ಒತ್ತಡ ಬಿಜೆಪಿಯ ಮೇಲಿರುವುದು ಹೌದು. ದೆಹಲಿಯ ಅಧಿಕಾರದ ಕಾರಿಡಾರಿಗೆ “ಹೊರಗಿನವರು” ಎನ್ನಿಸಿಕೊಂಡಿದ್ದ ನರೇಂದ್ರ ಮೋದಿಯವರಿಗೆ ಗುಜರಾತಿನಿಂದ ಬಂದು ದೇಶವನ್ನು ದಶಕಗಳವರೆಗೆ ಮುನ್ನಡೆಸುವುದು, ಜಾಗತಿಕ ನಾಯಕನಾಗಿ ಬೆಳಗುವುದು ಸಾಧ್ಯವಾಗಿದೆ ಎಂದಮೇಲೆ ಮೈತ್ರಿಯನ್ನೂ, ದೇಶವನ್ನೂ ನಿರಂತರತೆಯ ಛಾಪಿನೊಂದಿಗೆ ಮುನ್ನಡೆಸುವ ಮಾರ್ಗ ಅಷ್ಟೇನೂ ಕಷ್ಟವಾಗುವುದಿಲ್ಲ.