ಗಣ್ಯಚಿಂತಕ ಆನಂದಕುಮಾರಸ್ವಾಮಿ ಅವರು ಆರಂಭದಶೆಯಲ್ಲಿಯೆ ನೀಡಿದ್ದ ಎಚ್ಚರಿಕೆಯು ಸ್ಮರಣೀಯ. ಪಾಶ್ಚಾತ್ಯ ರೀತಿಯ ಶಿಕ್ಷಣ ಪಡೆದ ಭಾರತೀಯನು ತನ್ನ ಸಾಂಸ್ಕೃತಿಕ ಬೇರುಗಳನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾನೆ. ಹೀಗೆ ಅವನು ಇತ್ತ ಭಾರತೀಯನಾಗಿಯೂ ಉಳಿಯದೆ ಅತ್ತ ಪಾಶ್ಚಾತ್ಯನೂ ಆಗದೆ ಎಡಬಿಡಂಗಿ ದಿಶಾಹೀನನಾಗುತ್ತಾನೆ – ಎಂದಿದ್ದರು ಆ ಧೀಮಂತರು. ಈ ನವಶಿಕ್ಷಿತನು ಗತದ ಬೇರುಗಳು, ಭವಿಷ್ಯದ ಸಾಧ್ಯತೆಗಳು – ಎರಡರಿಂದಲೂ ದೂರವಾಗಿಬಿಡುತ್ತಾನೆ. ಇದರಿಂದ ಭಾರತಕ್ಕೆ ಆಗುವ ತುಂಬಲಾರದ ಹಾನಿಯೆಂದರೆ ಆಧ್ಯಾತ್ಮಿಕ ಸುಸಂಬದ್ಧತೆಯ ಹ್ರಾಸ. ಭಾರತ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತುಂಬಾ ಗಂಭೀರವಾದ್ದೆಂದರೆ ಶಿಕ್ಷಣಕ್ಷೇತ್ರದ್ದು. ಇದು ಅತ್ಯಂತ ಶೋಚನೀಯ. ೧೯೫೦ರ ದಶಕದಿಂದ ಶಿಕ್ಷಣಕ್ಷೇತ್ರದಲ್ಲಿ ನಡೆದಿರುವ ಸೆಣಸಾಟವನ್ನು ನೋಡಿದರೆ ಈ ಸಮಸ್ಯೆ ಎಷ್ಟು ಅಗಾಧಪ್ರಮಾಣದ್ದೆಂಬುದು ಅರಿವಾಗುತ್ತದೆ.
ಭಾರತದ ಬಗೆಗೆ ಹಲವು ಪಾಶ್ಚಾತ್ಯ ದೇಶಗಳು ಬೆಳೆಸಿಕೊಂಡಿರುವ ವಿದ್ವೇಷದ ಮೂಲವನ್ನು ವಿಶ್ಲೇಷಿಸಿ ಯಥಾರ್ಥವಾಗಿ ಗ್ರಹಿಸಬೇಕಾದುದರ ಆವಶ್ಯಕತೆ ಇದೆ. ಇದನ್ನು ಶ್ರೀಕಾರದಿಂದಲೇ ಆರಂಭಿಸುವುದು ಒಳ್ಳೆಯದು. ಮಹಾಮಹೋಪಾಧ್ಯಾಯ ಪಾಂಡುರಂಗ ವಾಮನ ಕಾಣೇ ಅವರು ತಮ್ಮ ವಿಶ್ರುತ ಧರ್ಮಶಾಸ್ತ್ರೇತಿಹಾಸ ಸರಣಿಯ ಅಂತಿಮ ಸಂಪುಟದ ಉಪಸಂಹಾರ ಭಾಗದಲ್ಲಿ ಸನಾತನಧರ್ಮದ ಸಾರತತ್ತ್ವವನ್ನು ಕುರಿತು ಆಡಿರುವ ಮಾತುಗಳು ಸ್ಮರಣೀಯವಾಗಿವೆ: “[ತತ್ತ್ವಜಿಜ್ಞಾಸೆಗೂ ಸಮಾಜಸ್ವಾಸ್ಥ್ಯಕ್ಕೂ ಅಧಿಷ್ಠಾನವಾಗಿ] ನಮ್ಮ ಪ್ರಾಚೀನ ಋಷಿಗಳು ಆಗ್ರಹಪೂರ್ವಕವಾಗಿ ಹೇಳಿರುವುದೇನೆಂದರೆ ಮಾನವನ ಅಂತರಂಗದ ಧೋರಣೆಗೂ, ಬಾಹ್ಯಜಗತ್ತಿನ ರೀತಿನೀತಿಗಳಿಗೂ ನಡುವೆ ಸಾಮರಸ್ಯ ಇರಬೇಕೆಂದು ಮತ್ತು ಮಾನವನು ತನ್ನ ಎಲ್ಲ ಕ್ರಿಯೆಗಳಲ್ಲಿಯೂ ಈ ಸಾಮರಸ್ಯವನ್ನೂ ಐಕ್ಯವನ್ನೂ ಸಾಕ್ಷಾತ್ಕರಿಸಿಕೊಳ್ಳಲು ನಿರಂತರ ಪ್ರಯತ್ನಶೀಲನಾಗಿರಬೇಕೆಂದು…. ಸಮಾಜಸುಧಾರಣೆಯನ್ನೂ ರಾಜಕಾರಣವನ್ನೂ ರೂಪಿಸಬೇಕಾದುದು ನಮ್ಮ ಪ್ರಾಚೀನ ತಾತ್ತ್ವಿಕತೆಯ ಆಧಾರದ ಮೇಲೆ. ನಮ್ಮ ಧರ್ಮವನ್ನೂ ಆಧ್ಯಾತ್ಮಿಕತೆಯನ್ನೂ ನಾಯಕರೂ ಜನತೆಯೂ ಉದಾಸೀನ ಮಾಡಿದಲ್ಲಿ ನಾವು ಅಧ್ಯಾತ್ಮಸಿದ್ಧಿ, ಸಮಾಜಾಭ್ಯುದಯ – ಎರಡರಲ್ಲೂ ವೈಫಲ್ಯಕ್ಕೆ ಈಡಾಗುವ ಸಂಭವವಿದೆ.”
ಕಳೆದ ನಾಲ್ಕು ಪೀಳಿಗೆಗಳ ನಮ್ಮ ರಾಜಕೀಯ ನಾಯಕರು ಸ್ವಾತಂತ್ರ್ಯೋತ್ತರ ಕಾಲದಲ್ಲಿ ನಮ್ಮ ಆಧ್ಯಾತ್ಮಿಕ ಬೇರುಗಳನ್ನು ತಿರಸ್ಕರಿಸಿದುದಷ್ಟೆ ಅಲ್ಲ; ಸಮಾಜವಿಘಟನ ಪ್ರವರ್ತನೆಯೇ ಮತಗಳಿಕೆಗೆ ಮಾರ್ಗವೆಂದು ನಂಬಿ ನಡೆದಿದ್ದಾರೆ. ಈ ವಿಷಯವನ್ನು ಇಲ್ಲಿಗೆ ಬಿಡೋಣ.
ಭಾರತೀಯ ಜೀವನದರ್ಶನ
ಮೂಲಾಧಾರ ಸಂಗತಿಯೆಂದರೆ – ಆಂತರಂಗಿಕ ಸಂಸ್ಕೃತಿಯ ಪ್ರಜ್ಞಾಪೂರ್ವಕ ಅನುಸರಣೆ ಮಾತ್ರ ಮನಸ್ಸನ್ನು ಉದಾತ್ತಗೊಳಿಸುತ್ತದೆಯೆಂದೂ ಈ ಪ್ರಕ್ರಿಯೆ ಮಾತ್ರ ಬಾಹ್ಯಜೀವನವನ್ನೂ ಉನ್ಮುಖಗೊಳಿಸಬಲ್ಲದೆಂದೂ ನಮ್ಮ ಋಷಿಗಳು ಮನಗಂಡಿದ್ದರು. ಸಂಗ್ರಹವಾಗಿ ಹೇಳಬೇಕೆಂದರೆ – ಜೀವನವೆಂದರೆ ಏನೆಂಬುದರ ಬಗೆಗೆ ನಮ್ಮ ಗ್ರಹಿಕೆಯಲ್ಲಿ ಸ್ಪಷ್ಟತೆ ಇರಬೇಕಾಗುತ್ತದೆ.
ಇಡೀ ಜೀವನವು ಉತ್ಸವಾರ್ಹವೆಂಬ ಕಲ್ಪನೆಯ ಮೇಲೆ ಸನಾತನಧರ್ಮ-ನಾಗರಿಕತೆ ಆಧಾರಗೊಂಡಿದೆ. ಇಲ್ಲಿಯ ಸುಖದುಃಖಾದಿಗಳೆಲ್ಲ ಸೃಷ್ಟಿಕರ್ತ ಅವ್ಯಕ್ತ ಬ್ರಹ್ಮನು ಲೀಲಾವಿಲಾಸಿಯಾಗಿ ಪ್ರದರ್ಶಿಸುವ ವೈಶ್ವಿಕ ನಾಟಕದ ಭಾಗಗಳೇ. ಧರ್ಮವನ್ನು ಅತಿಕ್ರಮಿಸದೆ ಸಮೃದ್ಧಿಯನ್ನೂ ಸೌಖ್ಯಸಾಧನಗಳನ್ನೂ ಕರುಣಿಸುವಂತೆ ಪ್ರಾರ್ಥಿಸುವ ಸೂಕ್ತಗಳು ವೇದದಲ್ಲಿ ತುಂಬಿವೆ. ಉದಾಹರಣೆಗೆ: ರುದ್ರಚಮಕಪ್ರಶ್ನದಲ್ಲಿ ೧೪೩ರಷ್ಟು ಅಧಿಕಸಂಖ್ಯೆಯ ಭೌತಿಕ ಹಾಗೂ ಅನ್ಯ ಸಂಪನ್ನತೆಗಳಿಗಾಗಿ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ. ಅಂತೆಯೇ ಇನ್ನೊಂದೆಡೆ ದೇಹಪ್ರಾಕಾರದಾಚೆಯ ಅಮರತ್ವವನ್ನು ಲಕ್ಷ್ಯವಾಗಿ ಪ್ರತಿಪಾದಿಸಲಾಗಿದೆ. ಎಂಟು ವರ್ಷದ ಬಾಲಕ ನಚಿಕೇತನು ಯಮನಿಂದ ಅಮರತ್ವಪ್ರಾಪ್ತಿಯ ಮಾರ್ಗವನ್ನು ಅರಿಯಬಯಸುವ ಕಠೋಪನಿಷತ್ತಿನ ಪ್ರಸಂಗ ಅದ್ಭುತವಾಗಿದೆ. ಇದು ಜಗತ್ತಿನ ಅಧ್ಯಾತ್ಮ ಸಾಹಿತ್ಯಕ್ಕೇ ಭಾರತವರ್ಷದ ಅನುಪಮ ಕೊಡುಗೆಗಳಲ್ಲೊಂದಾಗಿದೆ.
ಅದನ್ನು ಇಲ್ಲಿ ಸ್ಮರಿಸಿದುದರ ಉದ್ದೇಶ – ಸನಾತನಧಾರೆಯ ವಾಙ್ಮಯದಲ್ಲಿ ಎಲ್ಲಿಯೂ ‘ರಾಜಮಕುಟ-ಲಾಂಛನಗಳನ್ನೆಲ್ಲ ಮೃತ್ಯುವು ಉರುಳಿಸಿಬಿಡುತ್ತದೆ’ ಎಂಬ ಧಾಟಿಯ ಭೀತ್ಯುತ್ಪಾದಕ ಘೋಷಣೆಗಳು ಕಾಣುವುದಿಲ್ಲವೆಂದು ಸೂಚಿಸಲು. ಮೃತ್ಯುವಿನ ಸರ್ವನಿಯಂತೃತ್ವದ ಪ್ರಸ್ತಾವ ಒಂದು ದೃಷ್ಟಿಯಿಂದ ಮೆಚ್ಚಬಹುದೇನೊ; ಆದರೆ ಆ ಚಿಂತನೆಯ ಜಾಡು ಪೂರ್ಣ ಸಮಾಧಾನ ನೀಡಲಾರದೆನಿಸುತ್ತದೆ. ಅದಕ್ಕೆ ಪ್ರತಿಯಾಗಿ ತನ್ನ ಅಂತ್ಯಕಾಲದಲ್ಲಿ ಭರ್ತೃಹರಿ ‘ಮಾತರ್ಮೇದಿನಿ, ತಾತ ಮಾರುತ…’ ಪದ್ಯದಲ್ಲಿ ತಾನು ಸವೆಸಿದ ಬಾಳಿನ ಬಗೆಗೆ ಸಮಾಹಿತಚಿತ್ತನಾಗಿದ್ದು, ತನ್ನನ್ನು ಇಷ್ಟು ಕಾಲ ಪೋಷಿಸಿದ ಪಂಚಭೂತಗಳಿಗೆ ಪ್ರಣಾಮಾಂಜಲಿಯನ್ನು ಅರ್ಪಿಸುತ್ತಾನೆ – ತನ್ನ ಆತ್ಮಸಾಕ್ಷಾತ್ಕಾರಕ್ಕೆ ನೆರವನ್ನಿತ್ತುದಕ್ಕಾಗಿ. ಇದು ಸನಾತನ ಜೀವನವಿಧಾನ.
ಸನಾತನಧರ್ಮದ ಊರ್ಜಿತತೆ
ಇದರಿಂದ ಹೊರಪಡುವ ಇನ್ನೊಂದು ಸನಾತನಧರ್ಮಲಕ್ಷಣವೆಂದರೆ ನೈರಾಶ್ಯವಿಲ್ಲದುದು. ಸುಖದುಃಖಾದಿಗಳು ಜೀವನಸರಿತೆಯ ಭಿನ್ನ ಹಂತಗಳು ಅಥವಾ ಆಯಾಮಗಳು. ಈ ಪ್ರಾವಾಹಿಕತೆಗೆ ಆಧಾರವೆಂದರೆ ಸನಾತನಧರ್ಮಾಂತರ್ಗತವಾದ ಕಾಲದ ಚಕ್ರಗತಿಯ ಗ್ರಹಿಕೆ. ಇಸ್ಲಾಮೀ ಭಯೋತ್ಪಾದನೆ ಮೊದಲಾದ ವಿದ್ಯಮಾನಗಳಿಂದ ತ್ರಸ್ತವಾಗಿರುವ ಜಗತ್ತಿನ ಸನ್ನಿವೇಶದಲ್ಲಿ ಒಂದು ನಾಗರಿಕತೆಯಾಗಿ ಭಾರತದ ಈಗಿನ ಪರಿಸ್ಥಿತಿ ಏನೆಂಬುದನ್ನು ವಿಶ್ಲೇಷಿಸಲು ಮೇಲೆ ನೀಡಿರುವ ಭೂಮಿಕೆ ನೆರವಾದೀತು.
ಸಹಸ್ರಾಬ್ದಗಳಷ್ಟು ಹಿಂದಿನದಾದ ಮತ್ತು ಸಾಮ್ರಾಜ್ಯಯುಗೋತ್ತರ ಕಾಲದಲ್ಲಿಯೂ ಉಳಿದಿರುವ ಅಬ್ರಹಾಮೀಮೂಲದ್ದಲ್ಲದ ಏಕೈಕ ಪ್ರಾಚೀನ ನಾಗರಿಕತೆ ಭಾರತದ್ದು ಮಾತ್ರವೇ. ಇದಕ್ಕೂ ಮಿಗಿಲಾದ ಸಂಗತಿಯೆಂದರೆ – ಭಾರತದ ನಾಗರಿಕತೆ ಅಸ್ತಿತ್ವದಲ್ಲಿರುವುದು ಮಾತ್ರವಲ್ಲದೆ, ತನ್ನ ಜೀವನಪ್ರವಾಹ ರೀತಿಯನ್ನೂ ಬಹುಮಟ್ಟಿಗೆ ಹಿಂದಿದ್ದಂತೆಯೇ ಈಗಲೂ ಉಳಿಸಿಕೊಂಡಿದೆ. ಸಾಂದರ್ಭಿಕವಾಗಿ ಕೆ.ಎಂ. ಮುನ್ಶಿ ಅವರ ಸ್ಫೂರ್ತಿಯುತ ನಿರ್ಣಯವನ್ನು ಇಲ್ಲಿ ಉಲ್ಲೇಖಿಸಬಹುದು: “ಭಾರತ ಹಿಂದಿನಿಂದ ಸಾಗಿ ಬಂದಿರುವ ರೀತಿಯನ್ನೂ ವಿಶಿಷ್ಟತೆಯನ್ನೂ ನಿರಂತರತೆಯನ್ನೂ ನಾನು ಗಮನವಿಟ್ಟು ಪರಿಶೀಲಿಸಿ ಅನುಭವಕ್ಕೆ ತಂದುಕೊಂಡಿದ್ದೇನೆ. ಆ ಆಧಾರದ ಮೇಲೆ ನನಗನಿಸುವುದೇನೆಂದರೆ – ಚರಿತ್ರೆಯೆಂಬುದನ್ನು ಭಾರತೀಯರು ಪ್ರಜ್ಞಾಪೂರ್ವಕವಾಗಿ ಬಾಳಿದ್ದಾರೆ. ಹೀಗೆ ಭಾರತೀಯರಿಗೆ ಚರಿತ್ರೆಯೆಂಬುದು ಕಥನವಲ್ಲ, ಸಾಕ್ಷಾತ್ಕರಣ. ವಿದೇಶೀ ಶಕ್ತಿಗಳಿಂದ ನಡೆದ ಆಕ್ರಮಣಗಳನ್ನು ತುಂಬಾ ಉತ್ಪ್ರೇಕ್ಷಿಸಲಾಗಿದೆ; ಅದನ್ನು ಪ್ರಮಾಣಬದ್ಧಗೊಳಿಸಬೇಕಾಗಿದೆ. ಆ ಕಾಲಖಂಡಗಳಲ್ಲಿ ಭಾರತೀಯ ಜನಾಂಗದ ನೈಜ ಸತ್ತ್ವ, ಅದಮ್ಯತೆ, ತೇಜೋವಂತ ಸಂಸ್ಕೃತಿ – ಇವೆಲ್ಲ ಪ್ರಕಟಗೊಂಡಿರುವುದೂ ಅಲ್ಲಗಳೆಯಲಾಗದ ತಥ್ಯವಾಗಿದೆ. ತಾತ್ಪರ್ಯ: ಭಾರತದ ನಿಜಚರಿತ್ರೆ ಅದು ಹೇಗೆ ವಿದೇಶೀ ಆಸುರೀ ಶಕ್ತಿಗಳಿಗೆ ಮಣಿಯಿತೆಂಬುದಲ್ಲ; ಪ್ರತಿಯಾಗಿ ಆಕ್ರಮಣಗಳಿಗೆ ಈ ಜನಾಂಗ ಹೇಗೆ ಆಗಿಂದಾಗ ಪ್ರತಿರೋಧ ತೋರುತ್ತಬಂದು ವಿದೇಶೀ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಅಂತಿಮವಾಗಿ ಸ್ವಾಯತ್ತತೆಯನ್ನು ಸ್ಥಾಪಿಸಿತು ಎಂಬುದು.”
ಧರ್ಮದ ವಿಶಿಷ್ಟ ಸಂರಚನೆ
ಅಬ್ರಹಾಮೀಮೂಲದವಲ್ಲದ ನಾಗರಿಕತೆಗಳ ಪೈಕಿ ಈಗಲೂ ಉಳಿದಿರುವ ಏಕೈಕ ಪ್ರಾಚೀನ ನಾಗರಿಕತೆ ಭಾರತವರ್ಷದ್ದು ಎಂಬುದನ್ನು ಒತ್ತಿಹೇಳಬೇಕಾಗಿದೆ. ಲೇಖನದ ಆರಂಭದಲ್ಲಿ ಹೆಸರಿಸಲಾದ ಪಿ.ವಿ. ಕಾಣೇ ಅವರ ಗ್ರಂಥಕ್ಕೆ ಬರೆದ ಪ್ರಸ್ತಾವನೆಯಲ್ಲಿ ಸರ್ವೆಪಲ್ಲಿ ರಾಧಾಕೃಷ್ಣನ್ ಹೀಗೆಂದಿದ್ದಾರೆ:
“ನಿಜಸ್ವರೂಪದ ಧರ್ಮ-ಸಂರಚನೆಗೆ ಮೂರು ಪಾರ್ಶ್ವಗಳು ಇರಬೇಕಾಗುತ್ತದೆ; (i) ಮನಃಸ್ಥಿತಿ; (ii) ಸತ್ಯದೊಡನೆ ನಿಕಟ ಸಂಬಂಧ; (iii) ಜೀವನರೀತಿ.”
ಈ ಸರಳವೂ ಸ್ವಯಂಸಿದ್ಧವೂ ಆದ ತ್ರö್ಯಂಶಘಟಿತ ಸೂತ್ರದ ಆಧಾರದ ಮೇಲೆ ವಿವೇಚಿಸಿದಲ್ಲಿ ಅಬ್ರಹಾಮೀಮೂಲದ ಇಸ್ಲಾಂ ಮತ್ತು ಕ್ರೈಸ್ತಮತಗಳಿಂದ ಹೇಗೆ ಭಾರತದ ಸನಾತನಧರ್ಮವು ಭಿನ್ನವೆಂಬುದು ಸ್ಫುಟಪಡುತ್ತದೆ.
ರಾಧಾಕೃಷ್ಣನ್ ಸೂತ್ರಿಸಿರುವವುಗಳಲ್ಲಿ ಎರಡು ಅಂಶಗಳನ್ನು ಪರಿಶೀಲಿಸೋಣ – ಸತ್ಯದೊಡನೆ ಸಂಬಂಧ ಮತ್ತು ಜೀವನರೀತಿ – ಇವನ್ನು. ಜನನವೂ ಜೀವನವೂ ಪಾಪಭೂಯಿಷ್ಠವೆಂದು ಕ್ರೈಸ್ತಮತ ಪರಿಗಣಿಸುತ್ತದೆ. ಇದಕ್ಕಿಂತ ತೀಕ್ಷ್ಣರೂಪದ್ದು ಇಸ್ಲಾಮಿನ ಸಿದ್ಧಾಂತ. ನಿರಂತರ ಜೆಹಾದ್ ಆಚರಣೆಗೆ ಪ್ರಧಾನ ಪ್ರೇರಣೆಯೆಂದರೆ ಭವ್ಯ ‘ಜನ್ನತ್’ ಪ್ರಾಪ್ತಿ. ಶ್ರದ್ಧಾಳುವಿಗೆ ಗೋಚರಿಸುವ ಏಕೈಕ ಸತ್ಯವೆಂದರೆ ಇದು ಮಾತ್ರ. ಇದಕ್ಕೆ ವ್ಯತಿರಿಕ್ತವಾಗಿ ಸನಾತನಧರ್ಮದ ದೃಷ್ಟಿಯಲ್ಲಿ ಜೀವನವೆಲ್ಲ ಪವಿತ್ರವಾದ್ದು. ಇಲ್ಲಿನ ಜೀವನಕಲ್ಪನೆಯು ಪ್ರಾಣಿಪಕ್ಷಿಸಸ್ಯಸಂಕುಲ ಸೇರಿದಂತೆ ಪ್ರಕೃತಿಯಷ್ಟನ್ನೂ ಒಳಗೊಂಡಿದೆ. ಈ ಪಾವಿತ್ರ್ಯಕಲ್ಪನೆಯ ಒಂದು ಅಭಿವ್ಯಕ್ತಿ ತೀರ್ಥಕ್ಷೇತ್ರ ಪರ್ಯಟನಪರಂಪರೆ.
ಈ ಮೂಲಭೂತ ದೃಗ್ಭೇದವನ್ನು ಗ್ರಹಿಸಿದಲ್ಲಿ ಸನಾತನಧರ್ಮವೂ ಅನ್ಯ ಅಬ್ರಹಾಮೀಮೂಲ ಮತಗಳೂ ಸಮಾನವೆಂಬಂತೆ – ಕಳೆದ ಎಂಬತ್ತು ವರ್ಷಗಳುದ್ದಕ್ಕೂ – ಅವೆಲ್ಲ ಸಮಾನವೆಂಬಂತೆ ಸಾರ್ವಜನಿಕ ಸಂವಾದ ನಡೆದಿದೆ ಮತ್ತು ಈ ‘ಸರ್ವಮತ ಸಮಾನತೆ’ ವಿವಾದಾತೀತವೆಂದು ಪ್ರತಿಪಾದಿಸಲಾಗಿದೆ. ಈ ಆಭಾಸ ಮಂಡನೆ ಅದಕ್ಕೆ ಅದೇ ತಾರ್ಕಣೆ! ಇದು ದೊಡ್ಡ ದುರಂತ. ಈ ದುಃಸ್ಥಿತಿಯ ಮೂಲವನ್ನರಿಯಲು ಸ್ವಲ್ಪ ಹಿಂದಿನ ಇತಿಹಾಸವನ್ನು ಸ್ಮರಿಸಬೇಕು.
ಸಾಂಸ್ಕೃತಿಕ ವಿಧ್ವಂಸ
“ಭಾರತದ ಒಂದು ಭಾಗ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡದ್ದು ಐನೂರು ವರ್ಷಗಳ ಹಿಂದೆ ಎಂದೂ ಆಗಿನಿಂದ ಅಧಿಪತಿಗಳಷ್ಟೆ ಬದಲಾಗುತ್ತಬಂದಿದ್ದಾರೆಂದೂ ನಿಜೇತಿಹಾಸ ತಿಳಿಸುತ್ತದೆ” ಎಂದು ವಿಖ್ಯಾತ ವಿದ್ವಾಂಸ ಆರ್.ಸಿ. ಮಜುಂದಾರ್ ೧೯೫೦ರ ದಶಕದಲ್ಲಿಯೆ ಬರೆದಿದ್ದರು. ಮುಸ್ಲಿಂ ಆಳ್ವಿಕೆಗೂ ಬ್ರಿಟಿಷ್ ಸಾಮ್ರಾಜ್ಯಶಾಹಿ ಪ್ರಭುತ್ವಕ್ಕೂ ನಡುವೆ ಒಂದು ದೊಡ್ಡ ಭಿನ್ನತೆ ಇತ್ತು. ಅದೆಂದರೆ – ಮುಸ್ಲಿಮರು ‘ನಾವಿಲ್ಲಿ ನೆಲೆಯೂರಿದ್ದಾಗಿದೆ, ಇನ್ನು ಸ್ವಸ್ಥವಾಗಿರಬಹುದು’ಎಂದು ದೃಢಚಿತ್ತರಾಗಿದ್ದರೆ, ಬ್ರಿಟಿಷರು ಹಾಗಿರಲಿಲ್ಲ; ಆರಂಭದಿಂದ ಅವರು ‘ನಾವು ಒಂದಲ್ಲ ಒಂದು ದಿನ ಗಂಟುಮೂಟೆ ಕಟ್ಟಿ ಇಲ್ಲಿಂದ ಜಾಗ ಖಾಲಿ ಮಾಡಬೇಕಾಗುತ್ತದೆ’ ಎಂಬ ಅತಂತ್ರ ಮಾನಸಿಕತೆಯಲ್ಲಿಯೆ ಕಾಲ ನೂಕಿದರು. ಹೀಗಿದ್ದರೂ ಬ್ರಿಟಿಷರೆಸಗಿದ ಸಾಂಸ್ಕೃತಿಕ ವಿಧ್ವಂಸವು ರಿಪೇರಿ ಮಾಡಲಾಗದಷ್ಟು ವ್ಯಾಪಕವಾಯಿತು. ಈ ವಿನಾಶಕ್ರಿಯೆ ಅರಂಭವಾದದ್ದು ಇಂಗ್ಲಿಷ್ ಶಿಕ್ಷಣದ ಹೇರಿಕೆಯ ಮೂಲಕ. ಇದರ ಜೊತೆಗೆ ಇಲ್ಲಿಯ ಸಾಂಪ್ರದಾಯಿಕ ಶಿಕ್ಷಣಪದ್ಧತಿಯನ್ನು ನಾಶ ಮಾಡಲಾಯಿತು. ಅದೇ ಸಮಯದಲ್ಲಿ ಕ್ರೈಸ್ತ ಮಿಶನರಿಗಳನ್ನು ಉತ್ತೇಜಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಏರ್ಪಟ್ಟ ಕ್ರೈಸ್ತ ಮಿಶನರಿ ಪ್ರಾಬಲ್ಯ ಈಗಲೂ ಮುಂದುವರಿದಿದೆ.
ಈ ಸಂದರ್ಭದಲ್ಲಿ ಗಣ್ಯ ಚಿಂತಕ ಆನಂದಕುಮಾರಸ್ವಾಮಿ ಅವರು ಆರಂಭದಶೆಯಲ್ಲಿಯೆ ನೀಡಿದ್ದ ಎಚ್ಚರಿಕೆಯು ಸ್ಮರಣೀಯ. ಪಾಶ್ಚಾತ್ಯ ರೀತಿಯ ಶಿಕ್ಷಣ ಪಡೆದ ಭಾರತೀಯನು ತನ್ನ ಸಾಂಸ್ಕೃತಿಕ ಬೇರುಗಳನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾನೆ. ಹೀಗೆ ಅವನು ಇತ್ತ ಭಾರತೀಯನಾಗಿಯೂ ಉಳಿಯದೆ ಅತ್ತ ಪಾಶ್ಚಾತ್ಯನೂ ಆಗದೆ ಎಡಬಿಡಂಗಿ ದಿಶಾಹೀನನಾಗುತ್ತಾನೆ – ಎಂದಿದ್ದರು ಆ ಧೀಮಂತರು. ಈ ನವಶಿಕ್ಷಿತನು ಗತದ ಬೇರುಗಳು, ಭವಿಷ್ಯದ ಸಾಧ್ಯತೆಗಳು – ಎರಡರಿಂದಲೂ ದೂರವಾಗಿಬಿಡುತ್ತಾನೆ. ಇದರಿಂದ ಭಾರತಕ್ಕೆ ಆಗುವ ತುಂಬಲಾರದ ಹಾನಿಯೆಂದರೆ ಆಧ್ಯಾತ್ಮಿಕ ಸುಸಂಬದ್ಧತೆಯ ಹ್ರಾಸ. ಭಾರತ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತುಂಬಾ ಗಂಭೀರವಾದ್ದೆಂದರೆ ಶಿಕ್ಷಣಕ್ಷೇತ್ರದ್ದು. ಇದು ಅತ್ಯಂತ ಶೋಚನೀಯ. ೧೯೫೦ರ ದಶಕದಿಂದ ಶಿಕ್ಷಣಕ್ಷೇತ್ರದಲ್ಲಿ ನಡೆದಿರುವ ಸೆಣಸಾಟವನ್ನು ನೋಡಿದರೆ ಈ ಸಮಸ್ಯೆ ಎಷ್ಟು ಅಗಾಧಪ್ರಮಾಣದ್ದೆಂಬುದು ಅರಿವಾಗುತ್ತದೆ.
ಒಂದು ದೈತ್ಯಪ್ರಮಾಣದ ಠಕ್ಕು
ಬ್ರಿಟಿಷ್ ಶಿಕ್ಷಣಕ್ಕೆ ಇನ್ನೊಂದು ಉಪಕರಣವೂ ಒದಗಿಬಂದಿತು. ಅದು ‘ಇಂಡಾಲಜಿ’ ಅಥವಾ ಭಾರತೇಯ-ಶಾಸ್ತ್ರದ ಬೆಳವಣಿಗೆ ಮತ್ತು ಪ್ರಸಾರ. ಅದು ಬ್ರಿಟಿಷ್ ಆಳ್ವಿಕೆಯು ಉಚ್ಛ್ರಾಯದಲ್ಲಿದ್ದ ಸಮಯದಲ್ಲಿ ಉನ್ನತಶಿಕ್ಷಣವನ್ನೂ ಆಡಳಿತಶಾಹಿಯನ್ನೂ ತೆಕ್ಕೆಗೆ ಹಾಕಿಕೊಂಡಿತು. ಈ ಪ್ರಕ್ರಿಯೆಯ ಎಲ್ಲಕಿಂತ ಗಣನಾರ್ಹ ಕೊಡುಗೆಯೆಂದರೆ ‘ಆರ್ಯ ಆಕ್ರಮಣ ವಾದ’. ಈ ವಾದವನ್ನು ಜಗತ್ತಿನ ಬೌದ್ಧಿಕ ಇತಿಹಾಸದಲ್ಲಿಯೆ ಅತಿ ದೊಡ್ಡ ಠಕ್ಕು, ಮೋಸ, ಅಬದ್ಧ ಎನ್ನಬಹುದು. ಅದನ್ನು ಬ್ರಿಟಿಷ್ ಸಾಮ್ರಾಜ್ಯವು ಉಪಸ್ತಂಭಕವಾಗಿ ಚೆನ್ನಾಗಿ ಬಳಸಿಕೊಂಡಿತು. ‘ಆರ್ಯ ಆಕ್ರಮಣ’ ವಾದವು ಪೂರ್ಣ ನಿರಾಧಾರವೆಂಬುದು ಕಳೆದ ನೂರು ವರ್ಷಗಳಲ್ಲಿ ಮತ್ತೆಮತ್ತೆ ಸಿದ್ಧಪಟ್ಟಿದೆ. ಆದರೆ ವಿದ್ವಾಂಸರ ಮತ್ತು ಸಂಶೋಧಕರ ಘಂಟಾಘೋಷ ನಿರ್ಣಯವು ಸಾಮ್ರಾಜ್ಯಶಾಹಿಯ ಅನುವರ್ತಿಗಳನ್ನು ನಿರುತ್ಸಾಹಗೊಳಿಸಿಲ್ಲ; ಆ ಹಳಸಲು ಮಿಥ್ಯೆ ಹೊಸಹೊಸ ಗವುಸನ್ನು ತೊಟ್ಟು ಪ್ರತ್ಯಕ್ಷವಾಗುತ್ತಲೇ ಇದೆ.
ಈ ಮತ್ತು ಇತರ ಮಿಥ್ಯೆಗಳ ಪ್ರವರ್ತನಕೇಂದ್ರ ಈಗ ಇಂಗ್ಲೆಂಡಿನಿಂದ ಅಮೆರಿಕಕ್ಕೆ ರವಾನೆಯಾಗಿದೆ. ಈಚಿನ ಆಕಾರದಲ್ಲಿ ಈ ಕೂಟವು ಭಾರತದ ರಾಜಕಾರಣದ ಮೇಲೆ ಪ್ರಭಾವ ಬೀರಲೆಳಸಿರುವುದಲ್ಲದೆ ವೇದ-ಪುರಾಣ-ಸಂಸ್ಕೃತ-ಜಾನಪದ ವಾಙ್ಮಯವನ್ನೆಲ್ಲ – ಎಂದರೆ ಸ್ಥಳೀಯವಾದ್ದನ್ನೆಲ್ಲ – ಅಪವ್ಯಾಖ್ಯಾನಗಳಿಗೆ ಒಳಪಡಿಸುತ್ತಿದೆ. ಈ ಸಾಮ್ರಾಜ್ಯಾನುವರ್ತಿ ಹುನ್ನಾರಗಳು ಯಾವಾವ ರೂಪ ತಳೆದಿವೆಯೆಂಬುದನ್ನು ರಾಜೀವ ಮಲ್ಹೋತ್ರಾ ಅವರ ‘ಬ್ರೇಕಿಂಗ್ ಇಂಡಿಯ’, ‘ಸ್ನೇಕ್ಸ್ ಆನ್ ದಿ ಗಂಗಾ’ ಮೊದಲಾದ ಬರಹಗಳು ಎತ್ತಿತೋರಿಸಿವೆ. ಅಮೆರಿಕದ ಅನೇಕ ವಿದ್ವಾಂಸರು ಹಿಂದೂಧರ್ಮದ ತತ್ತ್ವಶಾಸ್ತ್ರ ಸಮಾಜಶಾಸ್ತ್ರಾದಿ ಆಯಾಮಗಳನ್ನು ಅಭ್ಯಾಸ ಮಾಡುತ್ತಾರೆ – ತಮ್ಮ ವ್ಯಾಖ್ಯಾನಗಳು ಅಮೆರಿಕದ ವಿದೇಶಾಂಗನೀತಿಯ ರೂಪಣಕ್ಕೆ ನೆರವಾಗಲೆಂಬ ದೃಷ್ಟಿಯಿಂದ.
ತಸ್ಮಾಜ್ಜಾಗ್ರತ ಜಾಗ್ರತ!
ಈ ವಿಕೃತಿಗಳಿಗೆ ಭಾರತ ಪ್ರತಿಬಂಧಕಗಳನ್ನು ಏರ್ಪಡಿಸಿಕೊಳ್ಳದಿದ್ದರೆ ಏನಾಗಬಹುದೆಂಬುದಕ್ಕೆ ಎರಡು ನಿದರ್ಶನಗಳು: ಫಿಲಿಪೈನ್ಸ್ ವಾಸ್ತವವಾಗಿ ಅಮೆರಿಕದ ಒಂದು ಉಪಗ್ರಹವಷ್ಟೆ. ಫಿಲಿಪೈನ್ಸ್ ತಾನು ವಿತರಿಸುವ ರಾಮೊನ್ ಮ್ಯಾಗ್ಸೇಸೇ ಪ್ರಶಸ್ತಿಗಾಗಿ ಬಹುಮಟ್ಟಿಗೆ ಭಾರತೀಯತೆಯಿಂದ ದೂರವಾಗಿರುವಂತಹವರನ್ನು ಆಯ್ಕೆ ಮಾಡುತ್ತದೆ. ಇಂಡೋನೇಶ್ಯದ ಪೂರ್ವದಲ್ಲಿರುವ ‘ಈಸ್ಟ್ ಟೈಮರ್’ ಹಿಂದೆ ಮುಖ್ಯಧಾರೆಗೆ ಸೇರದ ಸಹಜ ದೈವಾರಾಧನೆಯ (ಪೇಗನ್) ದೇಶವಾಗಿತ್ತು. ಅಲ್ಲಿ ಕ್ರಮೇಣ ಮಿಶನರಿಗಳ ಪ್ರಭಾವ ಹೆಚ್ಚುತ್ತಹೋಗಿದೆ, ಅಂತರ್ಯುದ್ಧಗಳೂ ನಡೆದಿವೆ. ಹೀಗೆ ಈ ಎರಡೂ ದೇಶಗಳು ಈಗ ಬಲಿಷ್ಠ ದೇಶಗಳ ಅನುಬಂಧಗಳಾಗಿವೆ.
ಈ ಸಾಂಸ್ಕೃತಿಕ ಆಕ್ರಮಣಗಳಿಗೆ ಶರಣಾಗದೆ ಅಬ್ರಹಾಮೀಮೂಲದ್ದಲ್ಲದ ದೊಡ್ಡ ರಾಷ್ಟ್ರವೆಂದರೆ ಭಾರತವರ್ಷ. ಈ ಪರಿವರ್ತನೆಯನ್ನು ಪಾಶ್ಚಾತ್ಯ ಜಗತ್ತು ಸೂಕ್ಷ್ಮರೀತಿಗಳ ಮೂಲಕ ತರಲು ಯತ್ನಿಸುತ್ತದೆ. ಆದರೆ ಬಲಪ್ರಯೋಗ ಮಾಡಲೂ ಹಿಂದೆಗೆಯುವುದಿಲ್ಲವೆಂಬುದು ವಾಸ್ತವೇತಿಹಾಸ.