ಭಾರತದ ಚೆಸ್ ಅಂಗಳದಲ್ಲಿ ಕಳೆದ ಒಂದು ದಶಕದಿಂದ ಅದ್ಭುತವಾದ ಪ್ರತಿಭೆಗಳು ಹೊರಹೊಮ್ಮಿವೆ. ಜೊತೆಜೊತೆಗೆ ದೇಶದಾದ್ಯಂತ ಹಿಂದೆಂದೂ ಕಾಣದ ಅತ್ಯುನ್ನತ ಚೆಸ್ ಪರಿಸರ ನಿರ್ಮಾಣಗೊಂಡಿದೆ. ಇದರ ಕಾರಣಗಳ ಕುರಿತು ಮಾತನಾಡಿದ ವಿಶ್ವನಾಥನ್ ಆನಂದ್ ಅವರು ಬೊಟ್ಟು ಮಾಡುವುದು ಹಿರಿಯ ಆಟಗಾರರನ್ನು. “ನನ್ನ ನಂತರದ ಮೊದಲ ತಲೆಮಾರಿನ ಆಟಗಾರರು ತಮ್ಮದೇ ಆದ ಯಶಸ್ವಿ ವೃತ್ತಿಜೀವನವನ್ನು ಮುಂದುವರಿಸಿದರು – ಅವರು ಸಾರ್ವಜನಿಕ ವಲಯದ ಉದ್ಯೋಗಗಳನ್ನು ಪಡೆದರು ಮತ್ತು ತಮ್ಮವೇ ಆದ ತರಬೇತಿ ಕೇಂದ್ರಗಳನ್ನೂ, ಅಕಾಡೆಮಿಗಳನ್ನೂ ಪ್ರಾರಂಭಿಸಿದರು. ಇದರಿಂದಾಗಿ ಮುಂದೆ ಬರುವ ಪೀಳಿಗೆಯವರಿಗೆ ಈಗಾಗಲೇ ಇರುವ ಚೆಸ್ನ ಅನೇಕ ವಿಷಯಗಳಿಗೆ ನೇರಪ್ರವೇಶ ಲಭಿಸುವಂತಾಯಿತು. ಗುಕೇಶ್ ಅವರು ಗ್ರ್ಯಾಂಡ್ಮಾಸ್ಟರ್ ವಿಷ್ಣುಪ್ರಸನ್ನ ಅವರ ಅಕಾಡೆಮಿಯಲ್ಲಿ, ಪ್ರಜ್ಞಾನಂದ ಆರ್.ಬಿ. ರಮೇಶ್ ಅವರಲ್ಲಿ ತರಬೇತಿ ಪಡೆದವರು.
ಚೆಸ್ ಅಂಗಳದಲ್ಲಿ ಭಾರತವು ಕಂಪನವನ್ನು ಸೃಷ್ಟಿಸಿದೆ. ಇದೀಗ ಜಾಗತಿಕ ಚೆಸ್ ಶಕ್ತಿಕೇಂದ್ರ ಪಲ್ಲಟಗೊಳ್ಳುತ್ತಿದೆ.”
– ಇದು ಇತ್ತೀಚೆಗೆ ಭಾರತದ ಡಿ. ಗುಕೇಶ್ ಕ್ಯಾಂಡಿಡೇಟ್ ಟೂರ್ನಿಯಲ್ಲಿ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ವಿಶ್ವ ಚೆಸ್ನ ದಂತಕಥೆ ಗ್ಯಾರಿ ಕ್ಯಾಸ್ಪರೋಮ್ ಅವರು ಹೇಳಿದ ಮಾತು.
ಜಾಗತಿಕ ಚೆಸ್ ಕ್ರೀಡಾಲೋಕದಲ್ಲಿ ಆರಂಭದಿಂದಲೂ ರಷ್ಯಾ ಜಾಗತಿಕ ಶಕ್ತಿಕೇಂದ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದೀಗ ಭಾರತ ಚೆಸ್ ಶಕ್ತಿಕೇಂದ್ರವಾಗುವತ್ತ ದಿಟ್ಟ ಹೆಜ್ಜೆಯಿಡುತ್ತಿದೆ ಎಂದು ಸ್ವತಃ ರಷ್ಯಾದವರೇ ಆದ ಕ್ಯಾಸ್ಪರೋಮ್ ಬಣ್ಣಿಸಿದ್ದಾರೆ. ಇದಕ್ಕೆ ಚೆಸ್ ಕ್ರೀಡಾಜಗತ್ತು ಸಾಕ್ಷಿಯಾಗಿ ನಿಂತಿದೆ. ಪ್ರಸ್ತುತ ಜಾಗತಿಕ ಚೆಸ್ ರ್ಯಾಂಕಿಂಗ್ ಪಟ್ಟಿಯ ಮೊದಲ ೧೦ ಮಂದಿಯಲ್ಲಿ ಮೂವರು ಭಾರತೀಯರಿದ್ದಾರೆ. ಇನ್ನು ಈ ಮೂವರೂ ೨೦ ವರ್ಷದ ಒಳಗಿನವರು!
ಗ್ರಾಂಡ್ಮಾಸ್ಟರ್
ಇಂಟರ್ನ್ಯಾಷನಲ್ ಚೆಸ್ ಫೆಡರೇಶನ್ (FIDE) ನೀಡುವ ಅತ್ಯುನ್ನತ ಗೌರವ ಗ್ರಾಂಡ್ಮಾಸ್ಟರ್. ಪ್ರಸ್ತುತ ಭಾರತದಲ್ಲಿ ೮೪ ಗ್ರಾಂಡ್ಮಾಸ್ಟರ್ಗಳಿದ್ದಾರೆ. ವಿಶ್ವ ಚೆಸ್ ಫೆಡರೇಷನ್ ೧೯೫೦ರಿಂದ ಈ ಪ್ರಶಸ್ತಿ ನೀಡುತ್ತ ಬಂದಿದ್ದರೂ ಭಾರತೀಯ ಆಟಗಾರನೊಬ್ಬ ಈ ಪ್ರಶಸ್ತಿ ಪಡೆದದ್ದು ೧೯೮೭ರಲ್ಲಿ. ಮೊತ್ತಮೊದಲ ಭಾರತೀಯ ಗ್ರಾಂಡ್ಮಾಸ್ಟರ್ ವಿಶ್ವನಾಥನ್ ಆನಂದ್. ವಿಶ್ವನಾಥನ್ ಆನಂದ ಈವರೆಗೆ ೫ ಬಾರಿ ಚೆಸ್ ವಿಶ್ವ ಚಾಂಪಿಯನ್ ಆಗಿದ್ದಾರೆ. ೫೩ರ ಹೆರೆಯದ ಅವರು ಇಂದಿಗೂ ಸ್ವತಃ ಅಂತರರಾಷ್ಟ್ರೀಯ ಚೆಸ್ ಚಾಂಪಿಯನ್ಶಿಪ್ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮಾತ್ರವಲ್ಲ ಯುವಪ್ರತಿಭೆಗಳನ್ನು ತರಬೇತಿಗೊಳಿಸುತ್ತ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರು ಭಾರತೀಯ ಚೆಸ್ ಇತಿಹಾಸದ ನಿಜಾರ್ಥದ ಗ್ರಾಂಡ್ಮಾಸ್ಟರ್.
ರಷ್ಯಾ ದಾಖಲೆಯ ೩೬೪ ಗ್ರಾಂಡ್ಮಾಸ್ಟರ್ಗಳೊಂದಿಗೆ ಚೆಸ್ನಲ್ಲಿ ಪ್ರಬಲ ಶಕ್ತಿಯಾಗಿ ನಿಂತಿದೆ. ಜರ್ಮನಿ (೧೧೮ ಗ್ರಾಂಡ್ಮಾಸ್ಟರ್) ಮತ್ತು ಉಕ್ರೇನ್ (೧೦೮) ಮಾತ್ರ ನೂರರ ಗಡಿದಾಟಿರುವ ಇತರೆರಡು ದೇಶಗಳು ಮತ್ತು ಕ್ರಮವಾಗಿ ಎರಡು ಮತ್ತು ಮೂರನೆಯ ಸ್ಥಾನದಲ್ಲಿವೆ. ಅಮೆರಿಕ (೮೯) ಅನಂತರದ ಐದನೇ ಸ್ಥಾನದಲ್ಲಿ ಭಾರತವಿದೆ.
ಭಾರತದಲ್ಲಿದೆ ಪ್ರಬಲ ಯುವಪ್ರತಿಭೆಗಳು
ಕೇವಲ ೨೦ ವರ್ಷದ ಅರ್ಜುನ್ ಇರಿಗೇಶಿ ಫಿಡೆ ರ್ಯಾಂಕಿಂಗ್ನಲ್ಲಿ ಜಾಗತಿಕ ಐದನೇ ಸ್ಥಾನವನ್ನು ಪಡೆದರೆ, ಇನ್ನೊಂದೆಡೆ ೧೭ ವರ್ಷದ ಡಿ. ಗುಕೇಶ್ ಚದುರಂಗದಲ್ಲಿ ಜಾಗತಿಕ ಶ್ರೇಷ್ಠರ ಪಂಕ್ತಿಯಲ್ಲಿರುವ ಹಿಕರು ನಕಮುರಾ, ನೆಪೊಮ್ನಿಯಾಚಿ, ಫ್ಯಾಬಿಯಾನೊ – ಮೂವರನ್ನೂ ಹಿಂದಿಕ್ಕಿ ವಿಶ್ವ ಮುಕುಟಕ್ಕೆ ಉಪಾಂತ್ಯದ ಕ್ಯಾಂಡಿಡೇಟ್ ಪ್ರಶಸ್ತಿ ಗಳಿಸಿದ್ದಾರೆ, ಮಾತ್ರವಲ್ಲ ಜಾಗತಿಕ ರ್ಯಾಂಕಿಂಗ್ನಲ್ಲಿ ೭ನೇ ಸ್ಥಾನದಲ್ಲಿದ್ದಾರೆ. (ವಿಶ್ವನಾಥನ್ ಆನಂದ್ ನಂತರ ಕ್ಯಾಂಡಿಡೇಟ್ ಟೂರ್ನಿಯಲ್ಲಿ ಪ್ರಶಸ್ತಿ ಪಡೆದ ಎರಡನೆಯ ಭಾರತೀಯ ಡಿ. ಗುಕೇಶ್.) ಜಾಗತಿಕ ರ್ಯಾಂಕಿಂಗ್ನಲ್ಲಿ ೯ನೇ ಸ್ಥಾನದಲ್ಲಿರುವ ಆರ್. ಪ್ರಜ್ಞಾನಂದ (೧೮) ಅವರು ಸಮಕಾಲೀನ ಚೆಸ್ನ ವಿಶ್ವದ ಅಗ್ರಗಣ್ಯ ಆಟಗಾರರೂ ಐದು ಬಾರಿ ವಿಶ್ವಚಾಂಪಿಯನ್ ಮಾಗ್ನಸ್ ಕಾರ್ಲ್ಸೆನ್ನಂತಹ ದಿಗ್ಗಜರನ್ನು ಚೆಸ್ನ ಮೂರೂ ವಿಭಾಗಗಳಲ್ಲಿ (ಸೂಪರ್ಬೆಟ್ ರಾಪಿಡ್, ಬ್ಲಿಟ್ಜ್ ಮತ್ತು ಕ್ಲಾಸಿಕ್) ಸೋಲಿಸುತ್ತಾ ಚೆಸ್ ಲೋಕದ ಭರವಸೆಯಾಗಿ ಮಿನುಗುತ್ತಿದ್ದಾರೆ. ಜೊತೆಗೆ ಭಾರತದ ಚೆಸ್ ದಂತಕತೆ ವಿಶ್ವನಾಥನ್ ಆನಂದ ೧೧ನೇ ರ್ಯಾಂಕಿಂಗ್ನಲ್ಲಿದ್ದರೆ ವಿದಿತ್ ಗುಜರಾತಿ ಹಾಗೂ ಪೆಂಟಾಲ ಹರಿಕೃಷ್ಣ ಅವರು ರ್ಯಾಂಕಿಂಗ್ನಲ್ಲಿ ಕ್ರಮವಾಗಿ ೨೪ ಮತ್ತು ೩೪ನೇ ಸ್ಥಾನದಲ್ಲಿದ್ದಾರೆ. ರ್ಯಾಂಕಿಂಗ್ ಪಟ್ಟಿಯಲ್ಲಿ ಇನ್ನಷ್ಟು ಭಾರತೀಯ ಯುವಪ್ರತಿಭೆಗಳಿರುವುದನ್ನು ನಾವು ಕಾಣಬಹುದು. ಚೆಸ್ನ ಮಹಿಳಾವಿಭಾಗದಲ್ಲಿಯೂ ಭಾರತ ಅಷ್ಟೇನೂ ಹಿಂದೆ ಬಿದ್ದಿಲ್ಲ. ಮೂವರು ಭರವಸೆಯ ಗ್ರಾಂಡ್ಮಾಸ್ಟರ್ಗಳು ಭಾರತದಲ್ಲಿದ್ದಾರೆ – ಕೊನೇರು ಹಂಪಿ, ಹರಿಕಾ ದ್ರೋಣವಲ್ಲಿ ಮತ್ತು ಆರ್. ವೈಶಾಲಿ. ಅವರು ಜಾಗತಿಕ ಮಹಿಳಾ ರ್ಯಾಂಕಿಂಗ್ ಪಟ್ಟಿಯಲ್ಲಿ ಕ್ರಮವಾಗಿ ೪, ೧೨ ಮತ್ತು ೧೩ನೇ ಸ್ಥಾನದಲ್ಲಿದ್ದಾರೆ. ಜೊತೆಗೆ ೧೮ ವರ್ಷದ ದಿವ್ಯಾ ದೇಶಮುಖ್ ಕೂಡಾ ಪಟ್ಟಿಯಲ್ಲಿ ೨೪ನೇ ಸ್ಥಾನದಲ್ಲಿದ್ದಾರೆ. ಅಕ್ಕ ವೈಶಾಲಿ ಹಾಗೂ ಪ್ರಜ್ಞಾನಂದ ಇಬ್ಬರೂ ಗ್ರಾಂಡ್ಮಾಸ್ಟರ್ಗಳಾಗುವ ಮೂಲಕ ಮೊದಲ ಒಡಹುಟ್ಟಿದ ಚೆಸ್ ಗ್ರಾಂಡ್ಮಾಸ್ಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಹೀಗೆ ಭಾರತದ ಯುವಪ್ರತಿಭೆಗಳು ಭಾರತಕ್ಕೆ ಮಾತ್ರವಲ್ಲದೇ ಜಾಗತಿಕ ಚೆಸ್ಲೋಕದಲ್ಲಿ ಭವಿಷ್ಯದ ಭರವಸೆಯ ಗುರುತುಗಳಾಗಿ ಪ್ರಜ್ವಲಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬಹುದು.
‘ವಿಶಿ ಮಕ್ಕಳು’!
ಭಾರತಕ್ಕೆ ಮೊತ್ತಮೊದಲ ಗ್ರ್ಯಾಂಡ್ಮಾಸ್ಟರ್ ಪದವಿ ಗೆದ್ದುತಂದ ವಿಶ್ವನಾಥನ್ ಆನಂದ್ ಇಂದಿಗೂ ಚೆಸ್ ಅಂಗಳಲ್ಲಿ ಸಕ್ರಿಯರಾಗಿದ್ದಾರೆ, ಮಾತ್ರವಲ್ಲ ವಿಶ್ವ ರ್ಯಾಂಕಿಂಗ್ನಲ್ಲಿ ೧೫ರೊಳಗಿನ ಸ್ಥಾನದಲ್ಲಿ ಅವರು ಭದ್ರರಾಗಿದ್ದಾರೆ. ಅವರು ವೆಸ್ಟ್ಬ್ರಿಡ್ಜ್ ಕ್ಯಾಪಿಟಲ್ ಎಂಬ ಸಂಸ್ಥೆಯ ಸಹಕಾರದೊಂದಿಗೆ ಚೆನ್ನೈನಲ್ಲಿ ೨೦೨೦ರಲ್ಲಿ ‘ವೆಸ್ಟ್ಬ್ರಿಡ್ಜ್ ಆನಂದ್ ಚೆಸ್ ಅಕಾಡೆಮಿ, WACA’ಯನ್ನು ಆರಂಭಿಸಿದ್ದಾರೆ. ಯುವಪ್ರತಿಭೆಗಳಿಗೆ ಉತ್ಕೃಷ್ಟ ತರಬೇತಿ ಲಭ್ಯವಾಗಿಸುವುದಕ್ಕಾಗಿ ವಿಶ್ವದ ನುರಿತ ಚೆಸ್ ಆಟಗಾರರು, ಗ್ರಾಂಡ್ಮಾಸ್ಟರ್ಗಳನ್ನು – ಪೊಲೆಂಡ್ನ ಗ್ರೆಜೆಗೋರ್ಜ್ ಗಜೆವಿಸ್ಕಿ & ಗ್ರಾಂಡ್ಮಾಸ್ಟರ್ ಸಂದೀಪನ್ ಚಂದಾ, ರಷ್ಯಾದ ಗ್ರಾಂಡ್ಮಾಸ್ಟರ್ ಅರ್ತುರ್ ಯೂಸುಪೋವ್ & ಬೆಲರೂಸಿಯನ್, ಇಸ್ರೇಲಿನ ಗ್ರಾಂಡ್ಮಾಸ್ಟರ್ ಬೋರಿಸ್ ಗೆಲ್ಫಾಂಡ್ ಸೇರಿದಂತೆ ಕೋಚ್ಗಳ ಪ್ರಬಲ ಗುಂಪನ್ನು ಜೋಡಿಸಿಕೊಂಡಿದ್ದಾರೆ.
ಆನಂದ ಕೊಡುಗೆಯನ್ನು ಸ್ಮರಿಸಿದ ಗ್ಯಾರಿ ಕ್ಯಾಸ್ಪರೋಮ್ ಇತ್ತೀಚೆಗೆ “ವಿಶಿ ಆನಂದ್ ಅವರಿಂದ ಬೆಳೆದ ಮಕ್ಕಳು ಇಂದು ಜಗತ್ತಿನೆಲ್ಲೆಡೆ ದೊಡ್ಡಮಟ್ಟದ ಸಾಧನೆ ಮಾಡತೊಡಗಿದ್ದಾರೆ” ಎಂದು ಬಣ್ಣಿಸಿದ್ದರು. ಭಾರತದ ಚೆಸ್ ಸಾಧನೆಗೆ ಆನಂದ್ ಜೊತೆಗೆ ಆರ್.ಬಿ. ರಮೇಶ್ ಮುಂತಾದ ತರಬೇತುದಾರರ ಕೊಡುಗೆಯೂ ಮಹತ್ತ್ವಪೂರ್ಣವಾದುದು. ಚೆಸ್ನ್ನು ಜನಪ್ರಿಯಗೊಳಿಸುವಲ್ಲಿ ಶಾಲೆಗಳು ವಹಿಸುತ್ತಿರುವ ಪಾತ್ರವನ್ನೂ ನಿರ್ಲಕ್ಷಿಸಲಾಗದು. ತಮಿಳುನಾಡಿನ ೩೦ ಗ್ರಾಂಡ್ಮಾಸ್ಟರ್ಗಳಲ್ಲಿ ೧೫ ಮಂದಿ ಶಿಕ್ಷಣ ಪಡೆದದ್ದು ಚೆನ್ನೈನ ವೇಲಮ್ಮಾಳ್ ವಿದ್ಯಾಲಯದಲ್ಲಿ.
ಹೊಸ ಹರಿವಿಗೆ ಕಾರಣವೇನು?
ಬೆಂಗಳೂರಿನ ಹತ್ತು ವರ್ಷದ ಚಾರ್ವಿ ೧,೯೦೦ ಅಥವಾ ಅದಕ್ಕಿಂತ ಹೆಚ್ಚಿನ ELO ರೇಟಿಂಗ್ ಹೊಂದಿರುವ ೧೧ ವರ್ಷದ ಒಳಗಿನ ಏಕೈಕ ಮಹಿಳಾ ಆಟಗಾರ್ತಿ ಎನಿಸಿ ೧೧ ವರ್ಷದೊಳಗಿನವರ ವಿಭಾಗದಲ್ಲಿ ೨ ಸ್ಥಾನದಲ್ಲಿದ್ದಾರೆ. ಆಕೆ ತನ್ನ ೮ನೇ ವರ್ಷದಲ್ಲಿಯೇ ೮ ವರ್ಷದೊಳಗಿನ ಬಾಲಕಿಯರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ (೨೦೨೨ರಲ್ಲಿ) ಗೆದ್ದಿದ್ದಾರೆ. ‘ಭಾರತದ ಮುಂದಿನ ಗ್ರಾಂಡ್ಮಾಸ್ಟರ್’ ಎಂಬ ಭರವಸೆ ಎಳವೆಯಲ್ಲಿಯೇ ಮೂಡಿಸಿದ್ದಾರೆ. ಹೀಗೆ ಭಾರತೀಯ ಚೆಸ್ ಅಂಗಳದಲ್ಲಿ ಹತ್ತಾರು ಯುವಪ್ರತಿಭೆಗಳನ್ನು ಗುರುತಿಸಬಹುದು.
ಭಾರತದ ಚೆಸ್ ಅಂಗಳದಲ್ಲಿ ಕಳೆದ ಒಂದು ದಶಕದಿಂದ ಅದ್ಭುತವಾದ ಪ್ರತಿಭೆಗಳು ಹೊರಹೊಮ್ಮಿವೆ. ಜೊತೆಜೊತೆಗೆ ದೇಶದಾದ್ಯಂತ ಹಿಂದೆಂದೂ ಕಾಣದ ಅತ್ಯುನ್ನತ ಚೆಸ್ ಪರಿಸರ ನಿರ್ಮಾಣಗೊಂಡಿದೆ. ಇದರ ಕಾರಣಗಳ ಕುರಿತು ಮಾತನಾಡಿದ ವಿಶ್ವನಾಥನ್ ಆನಂದ್ ಅವರು ಬೊಟ್ಟು ಮಾಡುವುದು ಹಿರಿಯ ಆಟಗಾರರನ್ನು. “ನನ್ನ ನಂತರದ ಮೊದಲ ತಲೆಮಾರಿನ ಆಟಗಾರರು ತಮ್ಮದೇ ಆದ ಯಶಸ್ವೀ ವೃತ್ತಿಜೀವನವನ್ನು ಮುಂದುವರಿಸಿದರು – ಅವರು ಸಾರ್ವಜನಿಕ ವಲಯದ ಉದ್ಯೋಗಗಳನ್ನು ಪಡೆದರು ಮತ್ತು ತಮ್ಮವೇ ಆದ ತರಬೇತಿ ಕೇಂದ್ರಗಳನ್ನೂ, ಅಕಾಡೆಮಿಗಳನ್ನೂ ಪ್ರಾರಂಭಿಸಿದರು. ಇದರಿಂದಾಗಿ ಮುಂದೆಬರುವ ಪೀಳಿಗೆಯವರಿಗೆ ಈಗಾಗಲೇ ಇರುವ ಚೆಸ್ನ ಅನೇಕ ವಿಷಯಗಳಿಗೆ ನೇರಪ್ರವೇಶ ಲಭಿಸುವಂತಾಯಿತು. ಗುಕೇಶ್ ಅವರು ಗ್ರ್ಯಾಂಡ್ಮಾಸ್ಟರ್ ವಿಷ್ಣುಪ್ರಸನ್ನ ಅವರ ಅಕಾಡೆಮಿಯಲ್ಲಿ, ಪ್ರಜ್ಞಾನಂದ ಆರ್.ಬಿ. ರಮೇಶ್ ಅವರಲ್ಲಿ ತರಬೇತಿ ಪಡೆದವರು. ಭಾರತದಲ್ಲಿ ಬಲಿಷ್ಠ ಆಟಗಾರರ ಸಂಖ್ಯೆ ತುಂಬಾ ಹೆಚ್ಚಿರುವುದರಿಂದ ಉನ್ನತ ಮಟ್ಟದ ತರಬೇತಿಗಾಗಿ ಹತ್ತಾರು ತರಬೇತಿ ಕೇಂದ್ರಗಳು-ಅಕಾಡೆಮಿಗಳು ಸಿದ್ಧವಾದವು. ಇದರಿಂದಾಗಿ ಇಂದು ಭಾರತದಲ್ಲಿನ ದೇಸೀ ಚೆಸ್ ಸ್ಪರ್ಧೆಯು ಉನ್ನತಮಟ್ಟದಲ್ಲಿದೆ. ದೇಶೀಯ ಸ್ಪರ್ಧೆಗಳಲ್ಲಿಯೇ ಅತ್ಯುತ್ತಮ ಎದುರಾಳಿಯ ವಿರುದ್ಧ ಸ್ಪರ್ಧಿಸಬೇಕಾಗಿರುವುದರಿಂದ ಪ್ರತಿಯೊಬ್ಬರೂ ಕಾಲ್ಬೆರಳುಗಳ ಮೇಲೆ ನಿಲ್ಲಬೇಕಾದ ಪರಿಸ್ಥಿತಿಯಿದೆ. ಹೀಗಾಗಿ ಚೆಸ್ ಕ್ರೀಡಾ ಅಕಾಡೆಮಿ ಪ್ರವೇಶವೂ ಇಂದು ಹೆಚ್ಚುಕಡಮೆ ಐಐಟಿ ಪ್ರವೇಶ ಪರೀಕ್ಷೆಗಳಂತೆ, ನಾಗರಿಕ ಸೇವಾ ಪರೀಕ್ಷೆಗಳಂತೆ ಸ್ಪರ್ಧೆಯಿಂದ ಕೂಡಿರುತ್ತದೆ. ಈ ಹಿಂದೆ ಇಂತಹ ವಾತಾವರಣ ಇರಲಿಲ್ಲ. ಹೀಗಾಗಿ ಇಂದು ದೇಶೀಯ ಸ್ಪರ್ಧೆಗಳಲ್ಲಿ ಉನ್ನತ ಸ್ಥಾನ ಪಡೆದಲ್ಲಿ ಸಹಜವಾಗಿಯೇ ಅವರು ಪ್ರಪಂಚದ ಅಗ್ರಸ್ಥಾನಕ್ಕೆ ತುಂಬಾ ಹತ್ತಿರವಾಗಿರುತ್ತಾರೆ!” – ಎನ್ನುತ್ತಾರೆ ಅವರು.
ಮುಂದುವರಿದು, “ಇವೆಲ್ಲವುಗಳಿಂದಾಗಿ ಇಂದು ಭಾರತದಲ್ಲಿ ಚೆಸ್ ಆಟದ ಜನಪ್ರಿಯತೆ ಹೆಚ್ಚಾಗಿದೆ. ಇದರಿಂದಾಗಿ ಪೋಷಕರು ಚೆಸ್ನಲ್ಲಿ ಮಕ್ಕಳ ಉಜ್ಜ್ವಲ ಭವಿಷ್ಯವನ್ನು ಕಾಣುತ್ತಿದ್ದಾರೆ. ಚೆಸ್ನ್ನು ‘ಪ್ರತಿಷ್ಠಿತ ವೃತ್ತಿ’ಯ ಆಯ್ಕೆ ಎಂದು ಭಾವಿಸುತ್ತಿದ್ದಾರೆ. ಬಹುಶಃ ಇನ್ನು ಮುಂದೆ, ಪ್ರತಿಷ್ಠಿತ ವೃತ್ತಿಗಳಿಗಿಂತ ಚೆಸ್ ಬೇರೆ – ಎಂದು ಯಾರೂ ಪರಿಗಣಿಸಲಾರರು. ನೀವು ಉನ್ನತ ಇಂಜಿನಿಯರ್ ಆಗಬೇಕೆಂದು ಕನಸು ಕಾಣುವಂತೆಯೇ ಉತ್ಕೃಷ್ಟ ಚೆಸ್ ಆಟಗಾರರಾಗುವ ಕನಸು ಕಾಣುವ ದಿನಗಳು ಹತ್ತಿರದಲ್ಲಿದೆ” – ಎನ್ನುತ್ತಾರೆ, ವಿಶ್ವನಾಥನ್ಆನಂದ್.
ಪೋಷಕರ ತ್ಯಾಗ
ಕ್ರೀಡೆಯನ್ನು ವೃತ್ತಿಯಾಗಿ ಪರಿಗಣಿಸುವ ಭಾರತೀಯ ಕುಟುಂಬಗಳಲ್ಲಿನ ಮನೋಭಾವವು ಇಂದು ತುಂಬಾ ಬದಲಾವಣೆಗೆ ಒಳಗಾಗಿದೆ. ಇಂದು ಕ್ರೀಡಾ ಪ್ರತಿಭೆಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ವೃತ್ತಿಯಲ್ಲಿ ಟೆಕ್ಕಿಯಾಗಿರುವ ಚಾರ್ವಿಯ ತಾಯಿ, ತನ್ನ ಪ್ರತಿಭಾವಂತ ಮಗಳಿಗಾಗಿ ಕೆಲಸವನ್ನು ತ್ಯಜಿಸಿದರು. “ಕೆಲಸ ಬಿಡುವುದು ನನ್ನ ಸುಲಭದ ನಿರ್ಧಾರವಾಗಿರಲಿಲ್ಲ. ನಾವು ಮಧ್ಯಮವರ್ಗದ ಹಿನ್ನೆಲೆಯಿಂದ ಬಂದವರು. ಆದರೆ ಚಾರ್ವಿ ಒಂದರ ಹಿಂದೆ ಒಂದರಂತೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಗೆ ಹಾಜರಾಗುತ್ತಿದ್ದಳು. ಇದರ ಜೊತೆಗೆ ನನ್ನ ಕೆಲಸವನ್ನು ನಿರ್ವಹಿಸುವುದು ನನಗೆ ತುಂಬಾ ಕಷ್ಟಕರವಾಗಿತ್ತು. ನಾನು ಅವಳನ್ನು ಬೆಂಬಲಿಸಲು ಮತ್ತು ಅವಳ ಅಧ್ಯಯನಕ್ಕೆ ಸಹಾಯ ಮಾಡಬೇಕಾಗಿದೆ. ಹೀಗಾಗಿ ನಾನು ನನ್ನ ಕೆಲಸವನ್ನು ತ್ಯಜಿಸಿದೆ” ಎಂದು ಚಾರ್ವಿಯ ತಾಯಿ ಅಖಿಲಾ ಅವರು ಹೇಳುತ್ತಾರೆ.
ಭಾರತೀಯ ಕುಟುಂಬಗಳು ಮತ್ತು ತರಬೇತುದಾರರು ತ್ಯಾಗ ಮಾಡಲು ಸಿದ್ಧರಿರುವುದರಿಂದ ಮುಂಬರುವ ವರ್ಷಗಳಲ್ಲಿ ಭಾರತವು ಚೆಸ್ನಲ್ಲಿ ಉಜ್ಜ್ವಲ ಭವಿಷ್ಯವನ್ನು ಹೊಂದಿರುವುದು ಕಾಣುತ್ತಿದೆ.
ಆನಂದ್ ಅವರ ಅಭಿಮತವೂ ಇದೇ ಆಗಿದೆ. “ಭಾರತದ ಚೆಸ್ಕ್ರಾಂತಿಗೆ ಪ್ರಮುಖ ಕಾರಣಗಳಲ್ಲೊಂದು ಪೋಷಕರ ತ್ಯಾಗ. ನನ್ನ ಸುಮಾರು ಹದಿನೈದು-ಹದಿನಾರು ವರ್ಷ ವಯಸ್ಸಿನವರೆಗೆ ಅಂದರೆ ನಾನು ಒಬ್ಬಂಟಿಯಾಗಿ ಪ್ರಯಾಣಿಸಲು ಪ್ರಾರಂಭಿಸುವವರೆಗೆ ನನ್ನ ತಾಯಿ ವರ್ಷಾನುಗಟ್ಟಲೆ ಪಂದ್ಯಾವಳಿಗಳಿಗಾಗಿ ನನ್ನೊಂದಿಗೆ ಬರುತ್ತಿದ್ದರು. ಅನಂತರವೂ ಅವರು ನನ್ನೊಂದಿಗೆ ಒಂದೆರಡು ಸ್ಥಳಗಳಿಗೆ ಬರುತ್ತಿದ್ದರು; ತಂದೆಯವರೂ ಹಲವಾರು ಸಂದರ್ಭಗಳಲ್ಲಿ ಜೊತೆಯಾಗುತ್ತಿದ್ದರು. ನನ್ನ ಹೆತ್ತವರು ನನಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಹೀಗೆ ಪ್ರತಿಯೊಬ್ಬ ಆಟಗಾರರ ಬೆಳವಣಿಗೆಯ ಹಿಂದೆ ಈ ಶಕ್ತಿ ಕೆಲಸ ಮಾಡಿರುತ್ತದೆ. ಅದು ಗುಕೇಶ್, ಪ್ರಜ್ಞಾನಂದ, ವಿದಿತ್ ಗುಜರಾತಿ – ಹೀಗೆ ಯಾರೇ ಆಗಿರಲಿ, ಅವರ ಪೋಷಕರು ಅವರ ಹಿಂದೆ ಗೋಡೆಯಂತೆ ನಿಂತಿದ್ದಾರೆ. ಅವರ ಆಟಕ್ಕೆ ವೈಯಕ್ತಿಕವಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ” – ಎನ್ನುತ್ತಾರೆ. ಭಾರತದ ಪ್ರತಿಯೊಬ್ಬ ಚೆಸ್ ಗ್ರಾಂಡ್ಮಾಸ್ಟರ್ನ ಯಶೋಗಾಥೆಯನ್ನು ಗಮನಿಸಿದಲ್ಲಿ ಇದು ನೇರವಾಗಿ ನಮ್ಮ ಕಣ್ಣಿಗೆ ಕಟ್ಟುತ್ತದೆ.
ಚೆಸ್ನ ಸುವರ್ಣಯುಗ
ಸಮಕಾಲೀನ ಚೆಸ್ಜಗತ್ತಿನ ಅತ್ಯಂತ ಪ್ರಬಲ ಆಟಗಾರ ಎಂದೇ ಜನಪ್ರಿಯರಾಗಿರುವ ಮ್ಯಾಗ್ನಸ್ ಕಾರ್ಲ್ಸೆನ್ ಹೀಗೆ ಹೇಳುತ್ತಾರೆ: “ನಾನು ಕಳೆದ ಕೆಲವು ವರ್ಷಗಳಿಂದ ಪ್ರತಿ ಸೂಪರ್ಟೂರ್ನಮೆಂಟ್ಗಳಲ್ಲಿಯೂ ಭಾರತೀಯರನ್ನು ಎದುರಿಸುತ್ತಿದ್ದೇನೆ. ಯುವಪ್ರತಿಭೆಗಳನ್ನು ಗಮನಿಸಿದರೆ ಅದರಲ್ಲಿ ಭಾರತೀಯರು ಸಂಪೂರ್ಣವಾಗಿ ಪ್ರಾಬಲ್ಯ ಹೊಂದಿದ್ದಾರೆ. ಕೇವಲ ಸಂಖ್ಯೆಯನ್ನು ತೆಗೆದುಕೊಂಡರೂ ಅದರಲ್ಲಿ ಭಾರತೀಯರಿಗೆ ಯಾವುದೇ ಹೊಲಿಕೆಯ ಜಗತ್ತಿನ ಇನ್ನೊಂದು ದೇಶ ಸಿಗುವುದಿಲ್ಲ. ಭಾರತದಲ್ಲಿ ನಡೆಯುತ್ತಿರುವ ಚೆಸ್ ಕ್ರಾಂತಿಯಿಂದ ನಾನು ಸಂಪೂರ್ಣವಾಗಿ ಪ್ರಭಾವಿತನಾಗಿದ್ದೇನೆ. ನಾನು ಈವರೆಗೆ ಎದುರಿಸಿದ ಭಾರತದ ಎಲ್ಲ ಯುವಕರೂ ಬಹಳ ಪ್ರತಿಭಾವಂತರು” – ಎಂದು ಭಾರತೀಯರ ಪ್ರಾಬಲ್ಯ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ವಿಶ್ವನಾಥನ್ ಆನಂದ್ ಇದನ್ನು ಗುರುತಿಸಿದ್ದಾರೆ: “೧೪ನೇ ವಯಸ್ಸಿಗೆ ಗ್ರಾಂಡ್ಮಾಸ್ಟರ್ಗಳಾಗಿರುವ ಸಂಪತ್ತು ನಮ್ಮಲ್ಲಿದೆ. ಪ್ರಸ್ತುತ ಭಾರತದ ಯುವ ಪ್ರತಿಭೆಗಳು ಪ್ರಪಂಚದಲ್ಲೇ ಅತ್ಯುತ್ತಮ ಆಟಗಾರರು. ಅವರಲ್ಲಿ ಹೆಚ್ಚಿನವರು ಟಾಪ್ ೨೦ರಲ್ಲಿದ್ದಾರೆ. ಬಹುಶಃ ಕೆಟ್ಟ ದಿನಗಳಲ್ಲಿಯೂ ಕೂಡಾ ಅವರು ಅಗ್ರ ೩೦ಕ್ಕೆ ಇಳಿಯಬಹುದಷ್ಟೇ. ಅವರು ಈ ಎಳವೆಯಲ್ಲಿಯೇ ಆ ಕ್ಷೇತ್ರದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಇದು ಭಾರತೀಯ ಚೆಸ್ಗೆ ಸುವರ್ಣ ಪೀಳಿಗೆಯಾಗಿದೆ” ಎಂದಿದ್ದಾರೆ.
ಇನ್ನೊಂದೆಡೆ ಭಾರತದಲ್ಲಿ ಚೆಸ್ನ ಮೇಲೆ ಹಲವಾರು ಓಟಿಟಿ ಸರಣಿಗಳೂ ನಿರ್ಮಾಣವಾಗುತ್ತಿವೆ, ಮಾತ್ರವಲ್ಲ ಅವುಗಳು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುತ್ತಿವೆ. ತಮ್ಮ ಮೊಬೈಲ್ ಫೋನ್ಗಳಲ್ಲಿ ಜನಸಾಮಾನ್ಯರೂ ಚೆಸ್ನ್ನು ಅನುಸರಿಸುತ್ತಿದ್ದಾರೆ. ಚೆಸ್ ಪಂದ್ಯಾವಳಿಗಳೂ ವ್ಯಾಪಕ ವೀಕ್ಷಕರನ್ನು ಪಡೆಯುತ್ತಿವೆ. ನೇರಪ್ರಸಾರ, ಕಾಮೆಂಟರಿ ಹಾಗೂ ವೀಕ್ಷಣೆಯ ಮೂಲಕ ದೊಟ್ಟಮಟ್ಟದ ಪ್ರಾಯೋಜಕರನ್ನು ಚೆಸ್ ಸೆಳೆಯುತ್ತಿದೆ. ಈ ಹಿಂದೆ ಕೇವಲ ಸಾರ್ವಜನಿಕ ವಲಯದ ಕಂಪೆನಿಗಳು ಚೆಸ್ ಆಟಗಾರರನ್ನು ಪ್ರಾಯೋಜಿಸುತ್ತಿದ್ದರೆ ಇಂದು ಅನೇಕ ಖಾಸಗಿ ಪ್ರಾಯೋಜಕರೂ ಮುಂದೆಬರುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಆನ್ಲೈನ್ ಮತ್ತು ಇ-ಸ್ಪೋರ್ಟ್ಸ್ ಪ್ರಪಂಚದಲ್ಲಿ ಚೆಸ್ ‘ತಂಪಾಗಿ’ ಸಮರಸಗೊಂಡಿದೆ.
ಭಾರತೀಯ ಚೆಸ್ ಆಟಗಾರರು ಎಷ್ಟು ಭಿನ್ನ?
ಐದು ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ತಮ್ಮ ಶ್ರೇಷ್ಠ ಆಟಗಳಿಂದ ತಮ್ಮ ಹದಿಹರೆಯದ ವಯಸ್ಸಿಗೂ ಮುನ್ನ ಚೆಸ್ ಲೋಕದಲ್ಲಿ ಗುರುತಿಸಲ್ಪಟ್ಟವರು. ೨೦೧೩ರಲ್ಲಿ ವಿಶ್ವನಾಥನ್ ಆನಂದ್ ಅವರನ್ನು ಸೋಲಿಸುವ ಮೂಲಕ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಗಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ ವಿಶ್ವನಾಥನ್ ಆನಂದ್ನಿಂದ ಇಂದಿನ ಹದಿಹರೆಯದ ಗುಕೇಶ್, ಪ್ರಜ್ಞಾನಂದರವರೆಗೆ ಹಲವು ತಲೆಮಾರುಗಳ ಭಾರತೀಯ ಆಟಗಾರರೊಂದಿಗೆ ಸೆಣಸಾಟ ನಡೆಸಿದ್ದಾರೆ. ಮಾತ್ರವಲ್ಲ ಗ್ಲೋಬಲ್ ಚೆಸ್ ಲೀಗ್ನಲ್ಲಿ ಒಂದೇ ತಂಡದಲ್ಲಿ ಆಟವಾಡಿದ ಅನುಭವವನ್ನೂ ಹೊಂದಿದ್ದಾರೆ. ಭಾರತೀಯ ಆಟಗಾರರ ಬಗ್ಗೆ ಮಾತನಾಡಿದ ಅವರು, “ಆರ್. ಪ್ರಜ್ಞಾನಂದ ಮತ್ತು ಗುಕೇಶ್ ಅವರು ಸ್ವಲ್ಪ ವಿಭಿನ್ನ ರೀತಿಯ ಆಟಗಾರರು. ಗುಕೇಶ್ ತುಂಬಾ ಲೆಕ್ಕಾಚಾರ ಆಧಾರಿತ ಆಟಗಾರ. ಪ್ರಜ್ಞಾನಂದ ಕೂಡ ಚೆನ್ನಾಗಿ ಲೆಕ್ಕಾಚಾರ ಮಾಡುತ್ತಾನೆ; ಆದರೆ ಆತನ ಆಟ ಹೆಚ್ಚು ಅರ್ಥಗರ್ಭಿತ ಮತ್ತು ಹೆಚ್ಚು ವಿಭಿನ್ನ. ಇದರಿಂದಾಗಿ ಆತ ಹುಟ್ಟು ಆಟಗಾರನಂತೆ ಕಾಣುತ್ತಾನೆ. ಇನ್ನು ಅರ್ಜುನ್ ಬೋರ್ಡ್ನ ಮೇಲೆ ಸಂಪೂರ್ಣ ಹುಚ್ಚು ಆಟಗಾರನಂತೆ ಕಾಣುತ್ತಾನೆ. ಅವನು ತನ್ನ ಪ್ರತಿ ನಡೆಯಲ್ಲಿಯೂ ಎದುರಾಳಿಯನ್ನು ಮುಗಿಸಲು ಬಯಸುತ್ತಾನೆ. ಆತ ಪ್ರತಿ ಪಂದ್ಯವನ್ನೂ ಅತ್ಯುತ್ಸಾಹದ ತಯಾರಿಯೊಂದಿಗೆ ಎದುರಿಸುತ್ತಾನೆ ಮತ್ತು ಅತ್ಯಂತ ಮಹತ್ತ್ವಾಕಾಂಕ್ಷೆಯಿಂದ ಆಟವಾಡುತ್ತಾನೆ. ಅದು ಅವನನ್ನು ತೀಕ್ಷ್ಣ ಸ್ಪರ್ಧಿಯನ್ನಾಗಿಸಿದೆ. ಅತ್ಯುನ್ನತ ಮಟ್ಟದ ಲೆಕ್ಕಾಚಾರದ ನಡೆ – ಇದು ಆನಂದ್ರಿಂದ ಗುಕೇಶ್ವರೆಗೆ ನಾನು ಆಡಿದ ಎಲ್ಲ ಭಾರತೀಯ ಆಟಗಾರರ ತಲೆಮಾರುಗಳನ್ನು ಸಂಯೋಜಿಸುವ ಪ್ರಮುಖ ಲಕ್ಷಣ. ವೆಂದು ನಾನು ಭಾವಿಸುತ್ತೇನೆ. ಈಗಿನ ಪೀಳಿಗೆಯ ಭಾರತೀಯ ಆಟಗಾರರು ನಿಸ್ಸಂಶಯವಾಗಿ ಬಲಿಷ್ಠರು – ಎನ್ನುತ್ತಾರೆ.