ಮಗುವಿನ ಚೇಷ್ಟೆ, ನಗು, ಮಾತು.. ಇವೆಲ್ಲವುಗಳ ಹಿಂದೆ ಇದ್ದುದು ಮುಗ್ಧತೆ. ಇನ್ನಿಲ್ಲದ ಮುಗ್ಧತೆ. ಇನ್ನಾರಲ್ಲೂ ಕಾಣದ ಮುಗ್ಧತೆ. ಇವೆಲ್ಲವೂ ಆಕೆಯ ಅಕ್ಕನಲ್ಲಿಯೂ ಇತ್ತು. ಅವೆಲ್ಲಕ್ಕಿಂತ ಹೆಚ್ಚಾಗಿ ಆಕೆ ಒಡಹುಟ್ಟಿದವಳು, ಪ್ರೀತಿಸುವವಳು, ಕಳಕಳಿಯಿರುವವಳು, ಎಲ್ಲವನ್ನೂ ಹೇಳಿಕೊಳ್ಳುವವಳು, ಹೇಳಿದ್ದನ್ನು ಕೇಳಿಸಿಕೊಳ್ಳುವವಳು.. ಇವ್ಯಾವ ಗುಣವೂ ಆ ಮಗುವಿನಲ್ಲಿಲ್ಲ. ಆದರೆ ಅದರಲ್ಲಿರುವ ಮುಗ್ಧತೆಯೊಂದೇ ಸಾಕು; ಇವೆಲ್ಲವನ್ನೂ ಸರಿದೂಗಿಸಲು, ಇವೆಲ್ಲಕ್ಕಿಂತ ಹೆಚ್ಚೆನಿಸಲು!
ಒಮ್ಮೆ ಒಂದು ರೈಲು ಪ್ರಯಾಣದಲ್ಲಿ ಸಂಚರಿಸುವಾಗ ಎದುರಿನ ಆಸನಗಳಲ್ಲಿ ಮೂರು ಮಂದಿ ಮಹಿಳೆಯರು ಬಂದು ಕುಳಿತುಕೊಂಡರು. ಎಲ್ಲ ನಿಲ್ದಾಣಗಳಲ್ಲಿ ನಿಲ್ಲುವ ಪ್ರಯಾಣಿಕ ರೈಲು ಅದು. ವಿಚಾರಿಸಿದಾಗ ಗೊತ್ತಾಯಿತು, ಆ ಮಹಿಳೆಯರಲ್ಲಿ ಒಬ್ಬಳು ತಾಯಿ ಮತ್ತು ಉಳಿದಿಬ್ಬರು ಮಕ್ಕಳು. ಕಿಟಕಿ ಬಳಿ ಕುಳಿತಿದ್ದ ತಂಗಿಯದು ತುಸು ಗಂಭೀರ ಮತ್ತು ಅಷ್ಟೇ ಕೋಪಿಷ್ಠ ಮುಖ. ಮಾತೂ ಕನಿಷ್ಠಾತಿಕನಿಷ್ಠ. ಪಕ್ಕದಲ್ಲೇ ಕುಳಿತ ಅಕ್ಕನದು ಮಾತೇ ಮಾತು. ಪ್ರಕೃತಿಯು ತಂಗಿಯ ಮಾತನ್ನೂ ಅಕ್ಕನಿಗೇ ದಾನಮಾಡಿರಬೇಕೆಂಬಂತೆ.
ಅಮ್ಮ ಪಕ್ಕದವರೊಂದಿಗೆ ಮಾತಾಡುತ್ತ ಕುಳಿತಿರಲು ಅಕ್ಕನ ಮಾತುಕತೆ ತಂಗಿಯ ಜೊತೆ ಸಾಗಿತು. ಅಕ್ಕ-ತಂಗಿ ಬೇರೆ. ಹಾಗಾಗಿ ಆ ಮಾತುಕತೆಯಲ್ಲಿ ಆಪ್ತತೆ, ಕಳಕಳಿ ಇತ್ಯಾದಿ ಈ ಸಾಲಿನಲ್ಲಿ ಬರುವ ಎಲ್ಲ ಭಾವಗಳೂ ತುಂಬಿತುಳುಕುತ್ತಿದ್ದವು. ಆದರೆ ಮಾತೆಲ್ಲವೂ ಅಕ್ಕನದೇ. ಆಕೆ ಹತ್ತು ಮಾತಾಡಿದಾಗ ತಂಗಿಯದು ಒಂದು ಹೂಂಕಾರ ಇಲ್ಲವೇ ಒಂದು ಪದದ ಸ್ಪಂದನ ವ್ಯಕ್ತವಾಗುತ್ತಿತ್ತು. ಅಕ್ಕನ ಮುಖದಲ್ಲಿ ಅದೆಷ್ಟು ನಗು ವಿಧವಿಧವಾಗಿ ಚಿಮ್ಮುತ್ತಿತ್ತೋ ತಂಗಿಯ ಮುಖದಲ್ಲಿ ಅದಕ್ಕೆ ಅಷ್ಟೇ ಬಡತನವಿತ್ತು. ಅಕ್ಕ-ತಂಗಿಯರ ಸಲ್ಲಾಪ ಹೀಗೆ ಸಾಗುತ್ತಿರಲು…
ನಿಲ್ದಾಣವೊಂದರಲ್ಲಿ ರೈಲು ನಿಂತಿತು. ಕೆಲವರು ಇಳಿದರು. ಕೆಲವರು ಹತ್ತಿದರು. ಈ ಮೂವರ ಪಕ್ಕ ಮಗುವನ್ನು ಹಿಡಿದುಕೊಂಡಿದ್ದ ತಾಯಿಯೊಬ್ಬಳು ಬಂದು ಕುಳಿತಳು.
ಆ ಮಗುವಿಗೆ ಒಂದು ವರ್ಷ ಇರಬಹುದು. ಮಾತು ಬರುತ್ತಿರಲಿಲ್ಲ. ಅದರ ಮುಖದಲ್ಲಿ ಸದಾ ಮೊಗೆಮೊಗೆದು ಅಭಿವ್ಯಕ್ತಿಯಾಗುತ್ತಿದ್ದ ಮುಗ್ಧತೆಯ ಜೊತೆಗೆ ನಗುವೂ ಸಮೃದ್ಧವಾಗಿತ್ತು. ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದ್ದ ಅದು ಎಲ್ಲರ ಬಳಿ ಹೋಗಲು ಅಂಥ ಹಿಂದೇಟನ್ನೇನೂ ಹಾಕುತ್ತಿರಲಿಲ್ಲ.
ಈಗ ಎಲ್ಲರ ಗಮನ ಅದರ ಮೇಲೆಯೇ. ತಂಗಿಯದೂ!
ಮಾತು ಬರದ ಅದನ್ನು ಎಲ್ಲರೂ ಮಾತಾಡಿಸುವವರೆ. ತಂಗಿಯೂ!
ಒಂದು ಹಂತಕ್ಕೆ ಅದು ತಂಗಿಯದೇ ಸ್ವತ್ತಾಯಿತು. ಅದನ್ನು ತಾನು ಎತ್ತಿಕೊಂಡದ್ದಷ್ಟೆ ಅಲ್ಲ, ವಿಧವಿಧವಾಗಿ ಅದರೊಂದಿಗೆ ಚೇಷ್ಟೆಯಾಡಿದಳು, ಮಾತಾಡಿದಳು, ನಗಾಡಿಸಿದಳು. ಎಲ್ಲರಿಗೂ ಅಚ್ಚರಿಯೆನಿಸುವಷ್ಟು. ಆ ಕೋಪಿಷ್ಠ ಮುಖದಲ್ಲಿ ಅಂಥದ್ದೊಂದು ನಗು ಇತ್ತೇ? ಎಲ್ಲಿತ್ತದು? ಮಾತೇ ಬರದಂತಿರುವವಳಲ್ಲಿ ಅದೆಲ್ಲಿಂದ ಬಂತು ಮಾತು? ಹಾಸ್ಯವೇನೆಂದೇ ಗೊತ್ತಿರದವಳಲ್ಲಿ ಅದೆಲ್ಲಿತ್ತು ಹಾಸ್ಯಪ್ರಜ್ಞೆ?
ಅದು ಅವಳಲ್ಲಿತ್ತೇ, ಮಗುವಿನಲ್ಲೇ?
ಕೈಕಾಲುಮುಖಗಳ ಮೂಲಕ ಮಗು ಏನೋ ಚೇಷ್ಟೆ ಮಾಡುತ್ತಿತ್ತೆಂಬುದು ಸರಿ. ತಾನು ಚೇಷ್ಟೆ ಮಾಡುತ್ತಿದ್ದೇನೆಂಬ ಅರಿವೂ ಇಲ್ಲದೆ ಆ ತಂಗಿಯ ಚೇಷ್ಟೆಯೂ ಅದೇ ಪರಿಯದಾಯಿತಲ್ಲ! ಮಗುವಿಗೆ ಮಾತಂತೂ ಬರುತ್ತಿರಲಿಲ್ಲ. ಅಥವಾ ಅದು ಏನೋ ಆ ಈ ಎಂದೆಲ್ಲ್ಲ ಅನ್ನುತ್ತಿದ್ದ ಮಾತು ಸ್ವತಃ ಅದರಮ್ಮನಿಗೇ ಅರ್ಥವಾಗುವುದು ಕಷ್ಟವಿರಲಾಗಿ, ಉಳಿದವರು ತಿಳಿಯುವುದು ದೂರವೇ ಉಳಿಯಿತು. ಆದರೂ ಮಾತೇ ಆಡದವಳು ಅದರ ಅಂಥ ಒಂದೊಂದು ಮಾತಿಗೂ ಹತ್ತುಪಟ್ಟು ಮಾತಾಡಿದಳಲ್ಲ!
ತೋರುನೋಟಕ್ಕೆ ಕಾಣುವುದೇನು? ಮಾತೇ ಬಾರದ ಮಗುವಿಗೆ ಮಾತಾಡದವಳನ್ನು ಮಾತಾಡಿಸುವ ಶಕ್ತಿ ಇದೆ. ಕನಿಷ್ಠ ಮಂದಹಾಸವನ್ನೂ ಬೀರದಿರುವವಳನ್ನು ನಕ್ಕುನಗಿಸುವ ಶಕ್ತಿ ಇದೆ.
ಚೇಷ್ಟೆ ಮಗುವಿನಲ್ಲಿತ್ತು, ಅದಕ್ಕೆ ಗೊತ್ತಿಲ್ಲದಂತೆ! ಆಕೆಯಲ್ಲಿಯೂ ಇತ್ತು ಆಕೆಗೇ ಅರಿವಿಲ್ಲದಂತೆ! ಆಕೆಯಲ್ಲಿದ್ದ ಚೇಷ್ಟೆಯ ಉದ್ದೀಪನಕ್ಕೆ ಮಗುವಿನ ಚೇಷ್ಟೆ ಬೇಕಾಯಿತು. ಆಕೆಯಲ್ಲಿ ನಗುವೂ ಸುಸಂಪನ್ನವಾಗಿತ್ತು. ಆದರೆ ಅದು ಸುಪ್ತವಾಗಿತ್ತು. ಹೊರಬರಲು ಮಗುವಿನ ನಗು ಅವಶ್ಯವಾಯಿತು. ಆಕೆಯಲ್ಲಿ ಮಾತೂ ಯಥೇಚ್ಛವಾಗಿ ಇತ್ತು. ಅದು ಅಭಿವ್ಯಕ್ತಿಯಾಗಲು ಮಗುವಿನ ಮಾತು ಅನಿವಾರ್ಯವಾಯಿತು.
ಮಗುವಿನ ಚೇಷ್ಟೆ, ನಗು, ಮಾತು – ಇವೆಲ್ಲವುಗಳ ಹಿಂದೆ ಇದ್ದುದು ಮುಗ್ಧತೆ. ಇನ್ನಿಲ್ಲದ ಮುಗ್ಧತೆ. ಇನ್ನಾರಲ್ಲೂ ಕಾಣದ ಮುಗ್ಧತೆ. ಇವೆಲ್ಲವೂ ಆಕೆಯ ಅಕ್ಕನಲ್ಲಿಯೂ ಇತ್ತು. ಅವೆಲ್ಲಕ್ಕಿಂತ ಹೆಚ್ಚಾಗಿ ಆಕೆ ಒಡಹುಟ್ಟಿದವಳು, ಪ್ರೀತಿಸುವವಳು, ಕಳಕಳಿಯಿರುವವಳು, ಎಲ್ಲವನ್ನೂ ಹೇಳಿಕೊಳ್ಳುವವಳು, ಹೇಳಿದ್ದನ್ನು ಕೇಳಿಸಿಕೊಳ್ಳುವವಳು.. ಇವಾವ ಗುಣವೂ ಆ ಮಗುವಿನಲ್ಲಿಲ್ಲ. ಆದರೆ ಅದರಲ್ಲಿರುವ ಮುಗ್ಧತೆಯೊಂದೇ ಸಾಕು; ಇವೆಲ್ಲವನ್ನೂ ಸರಿದೂಗಿಸಲು, ಇವೆಲ್ಲಕ್ಕಿಂತ ಹೆಚ್ಚೆನಿಸಲು.
ಮಗುವಿನ ಮುಗ್ಧತೆಗೆ ಮಾತೇ ಆಡದವನನ್ನು ವಾಚಾಳಿಯಾಗಿಸುವ, ಕೋಪಿಷ್ಠನನ್ನು ನಕ್ಕುನಗಿಸುವ ಶಕ್ತಿ ಇದೆ, ಅಷ್ಟೇ ಅಲ್ಲ; ಎಲ್ಲ ವಿಧದಲ್ಲಿಯೂ ನಕಾರಾತ್ಮಕವಾಗಿ ಇರಬಲ್ಲವನನ್ನು ಸಕಾರಾತ್ಮಕವಾಗಿಸುವ ಶಕ್ತಿ ಇದೆ.
ಈ ಮುಗ್ಧತೆ ಮಗುವಿನಲ್ಲಿದೆ ಸರಿ, ಉಳಿದವರಲ್ಲಿ? ಯಾರನ್ನೂ ದ್ವೇಷಿಸದ, ಯಾರ ಬಗೆಗೂ ಕೇಡೆಣಿಸದ, ಎಲ್ಲರ ಬಗೆಗೂ ಸಮಾನಭಾವವಿರುವ, ಎಲ್ಲರಿಗೂ ಒಳಿತನ್ನೇ ಹಾರೈಸುವ ಎಷ್ಟೇ ಹಿರಿಯ ವ್ಯಕ್ತಿತ್ವದಲ್ಲಿ ಕೂಡಾ ಇಂಥ ಮುಗ್ಧತೆ ಮನೆಮಾಡೀತು. ಅಂಥ ವ್ಯಕ್ತಿತ್ವಕ್ಕೆ; ಎದುರು ಬಂದವರನ್ನೆಲ್ಲ ಕೊಂದುಕಳೆವ ಅಂಗುಲಿಮಾಲನನ್ನೂ ಅಹಿಂಸಾವ್ರತಿ ಸಾಧಕನನ್ನಾಗಿಸುವ ಶಕ್ತಿ ಸಿದ್ಧಿಸುತ್ತದೆ, ರಾಜ್ಯವನ್ನೇ ರಾಮರಾಜ್ಯವನ್ನಾಗಿಸುವ ಸಾಮರ್ಥ್ಯ ಒದಗುತ್ತದೆ.
ಆದರೆ,
ಇಂಥ ಅಚ್ಚರಿಯ ಮುಗ್ಧತೆಗೂ ತಲೆಬಾಗದವರಿದ್ದಾರೆ. ಅಂಥ ಮುಗ್ಧತೆಯನ್ನೇ ಬರ್ಬರವಾಗಿ ಕೊಂದುಬಿಡುವ ಭಯೋತ್ಪಾದಕರಿದ್ದಾರೆ. ಅವರು ಗರ್ಭಸ್ಥಶಿಶುವನ್ನೇ ಚಿತ್ರಹಿಂಸೆನೀಡಿ ಕೊಲ್ಲಬಲ್ಲರು. ಪ್ರತಿದಿನವೆಂಬಂತೆ ಲಕ್ಷಾಂತರ ಜನರನ್ನು ರಿಲಿಜನ್ ಆವೇಶದಲ್ಲಿ ಹತ್ಯೆಗೈದು ಆ ಕೃತ್ಯವನ್ನು ಹೆಮ್ಮೆಯಿಂದ ದಾಖಲಿಸಬಲ್ಲರು. ಅಂಥವರನ್ನು ನಿರ್ವಹಿಸಲು ಮುಗ್ಧತೆಯೊಂದೇ ಸಾಕಾಗದು, ಮುಗ್ಧತೆಯನ್ನೊಳಗೊಂಡೂ ಅದನ್ನು ಮೀರಿದ ಕೃಷ್ಣಬಲವೇ ಬೇಕು.
ಮುಗ್ಧತೆಯ ಶಕ್ತಿಗೆ ನಮೋ ನಮಃ. ಮುಗ್ಧತೆಯನ್ನು ಮೀರಿದ ಶಕ್ತಿಗೂ ನಮೋ ನಮಃ