ಈ ವರ್ಷ ೨೦೨೪ರಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಒಂದೂ ಚಿನ್ನ ಬಂದಿರಲಿಲ್ಲ. ಕೇವಲ ಆರು ಪದಕಗಳು ಮಾತ್ರ ಲಭಿಸಿದ್ದವು. ಆ ನಿರಾಶೆಯನ್ನು ಪ್ಯಾರಾ ಅಥ್ಲೀಟ್ಗಳು ಮರೆಸಿದರು. ತಮ್ಮ ಛಲ, ಬಲ ಮತ್ತು ಬದ್ಧತೆಗಳ ಮೂಲಕ ಪದಕಗಳನ್ನಷ್ಟೇ ಅಲ್ಲ. ಎಲ್ಲರ ಮನಗೆದ್ದರು. ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಸ್ಫೂರ್ತಿಯಾದರು. ಅಂತಹ ಸಾಧನೆಗಳ ಕುರಿತ ಇಣುಕು ನೋಟ ಇಲ್ಲಿದೆ.
೨೯ ಪದಕಗಳು
ಹತೋ ವಾ ಪ್ರಾಪ್ಯಸಿ ಸ್ವರ್ಗಂ,
ಜಿತ್ವಾ ವಾ ಭೋಕ್ಷ್ಯಸೇ ಮಹಿಮ |
ತಸ್ಮಾತ್ ಉತ್ತಿಷ್ಠ ಕೌಂತೇಯ
ಯುದ್ಧಾಯ ಕೃತ ನಿಶ್ಚಯಃ ||
ಇದು ಭಗವದ್ಗೀತೆಯಲ್ಲಿ ಬರುವ ಶ್ಲೋಕ. ಯುದ್ಧಕ್ಕೆ ಇಳಿದ ಮೇಲೆ ಸೋಲು ಗೆಲವುಗಳ ಬಗ್ಗೆ ಆತಂಕಪಡಬಾರದು, ಮುನ್ನುಗ್ಗುತ್ತಿರಬೇಕು. ಯಶಸ್ವಿಯಾಗಲು ಭಯವನ್ನು ತೊಡೆದುಹಾಕುವುದು ಆವಶ್ಯಕ. ಸಫಲ ಬದುಕಿಗಾಗಿ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು. ಆದರೆ ನಾವು ಸಮಸ್ಯೆಯ ಸುಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತೇವೆ. ಆದರೆ ವಿಧಿಯೇ ಎಸಗಿದ ಅನ್ಯಾಯಕ್ಕೆ ಸವಾಲೋಡ್ಡಿ ನ್ಯೂನತೆಗಳನ್ನು ಮೆಟ್ಟಿನಿಂತು ಜಯಿಸಿ ದೇವರನ್ನೇ ಮೆಚ್ಚಿಸಿ ವ್ಹಾ! ಎಂದು ಚಪ್ಪಾಳೆ ತಟ್ಟಿಸಿಕೊಳ್ಳುವುದಿದೆಯಲ್ಲಾ ಅದೇ ಅಸಾಧಾರಣ ಸಾಧನೆ.
ಹೌದು ಈ ಬಾರಿಯ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಭಾರತದ ೮೪ ಕ್ರೀಡಾಪಟುಗಳೂ ಮಹಾನ್ ಸಾಧಕರೇ ಆಗಿದ್ದಾರೆ. ಯಾಕೆಂದರೆ ಇವರೆಲ್ಲರೂ ತಮ್ಮ ಅಂಗವೈಕಲ್ಯವನ್ನು ಮೀರಿ ತೋರಿದ ಸಾಹಸದಿಂದಾಗಿ ಭಾರತೀಯ ಕ್ರೀಡಾಭಿಮಾನಿಗಳ ಮನ ಗೆದ್ದಿದ್ದಾರೆ. ಪೋಲಿಯೋ, ಯುದ್ಧ, ಅಪಘಾತ ಮತ್ತು ಅವಘಡಗಳಿಂದಾಗಿ ಅಂಗವಿಕಲರಾದವರು ಆಟೋಟಗಳಲ್ಲಿ ತೋರಿದ ಸಾಮರ್ಥ್ಯ ವರ್ಣಿಸಲಸದಳ. ಈ ಅಸಾಮಾನ್ಯ ಸಾಧನೆಗೆ ವೇದಿಕೆಯಾಗಿದ್ದು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ.
ಒಟ್ಟು ಹನ್ನೊಂದು ದಿನಗಳ ಕಾಲ ನಡೆದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ೧೬೯ ದೇಶದ ಒಟ್ಟು ೪,೪೦೦ ಕ್ರೀಡಾಪಟುಗಳು ಭಾಗವಹಿಸಿದ್ದರು. ಇದರಲ್ಲಿ ಹನ್ನೆರಡು ಕ್ರೀಡೆಗಳಲ್ಲಿ ಒಟ್ಟು ೮೪ ಭಾರತೀಯ ಕ್ರೀಡಾಪಟುಗಳು ಪದಕಗಳ ಕನಸಿನೊಂದಿಗೆ ಸ್ಪರ್ಧಾಕಣದಲ್ಲಿದ್ದರು. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಹಿಂದೆಂದೂ ಭಾರತದ ಇಷ್ಟೊಂದು ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಿರಲಿಲ್ಲ. ಅದರಲ್ಲಿ ತಮ್ಮ ವಿಶೇಷ ದೈಹಿಕ ಸಾಮರ್ಥ್ಯವನ್ನು ಕ್ರೀಡಾಪಟುಗಳು ಪಣಕ್ಕೊಡ್ಡಿ ಒಟ್ಟು ಇಪ್ಪತ್ತೊಂಬತ್ತು ಪದಕಗಳನ್ನು ಗೆದ್ದು ಸಾರ್ವಕಾಲಿಕ ದಾಖಲೆ ನಿರ್ಮಿಸಿದರು. ಇದರಲ್ಲಿ ಏಳು ಚಿನ್ನ, ೯ ಬೆಳ್ಳಿ ಹಾಗೂ ೧೩ ಕಂಚು ಸೇರಿವೆ. ಈ ಪೈಕಿ ೧೭ ಪದಕಗಳು ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪರ್ಧೆಗಳಲ್ಲಿ ಒಲಿದಿರುವುದು ವಿಶೇಷ. ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ೧೮ನೇ ಸ್ಥಾನ ಪಡೆದಿದೆ. ೨೦೨೦ರ
ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ತಂಡವು ಐದು ಚಿನ್ನ ಸೇರಿದಂತೆ ೧೯ ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ೨೪ನೇ ಸ್ಥಾನ ಪಡೆದಿತ್ತು. ೧೯೬೮ರ ಟೆಲ್ ಅವಿವ್ ಕೂಟದಿಂದ ಅಭಿಯಾನ ಆರಂಭಿಸಿದ್ದ ಭಾರತದ ಪ್ಯಾರಾ ಆಟಗಾರರು ೫೬ ವರ್ಷಗಳಲ್ಲಿ ಒಟ್ಟು ೩೧ ಪದಕಗಳನ್ನು ಗೆದ್ದಿದ್ದರು. ಆದರೆ ೨೦೨೪ರ ಪ್ಯಾರಿಸ್ ಕೂಟದ ಒಂದೇ ಆವೃತ್ತಿಯಲ್ಲಿ ೨೯ ಪದಕಗಳನ್ನು ಗೆದ್ದು ಪ್ಯಾರಾಲಿಂಪಿಕ್ಸ್ ಅಥ್ಲೀಟ್‌ಗಳು ದೇಶದ ಗಮನ ಸೆಳೆದಿದ್ದಾರೆ. ಭಾರತದ ಈ ಅಭೂತಪೂರ್ವ ಯಶಸ್ಸಿಗೆ ಮುಖ್ಯ ಕಾರಣ ಕೇಂದ್ರ ಸರ್ಕಾರದ ಬೆಂಬಲ. ವಿವಿಧ ಯೋಜನೆಗಳ ಮೂಲಕ ಕ್ರೀಡಾಪಟುಗಳಿಗೆ ಅರ್ಥಿಕ ಬೆಂಬಲ ನೀಡಿ, ಅಂತರರಾಷ್ಟ್ರೀಯ ತಜ್ಞರಿಂದ ಮಾರ್ಗದರ್ಶನ ಕೊಡಿಸಿತ್ತು. ಅಲ್ಲದೇ ಇದೇ ಮೊದಲ ಬಾರಿ ಕ್ರೀಡಾಗ್ರಾಮವನ್ನು ನಿರ್ಮಿಸಿ ಕ್ರೀಡಾಪಟುಗಳ ಆತ್ಮಸ್ಥೈರ್ಯವನ್ನು ಇಮ್ಮಡಿಗೊಳಿಸಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಯಾರಾ ಕ್ರೀಡಾಕೂಟಗಳ ಸಂಖ್ಯೆ ಹೆಚ್ಚಿದೆ, ಅದಕ್ಕೆ ತಕ್ಕಂತೆ ಭಾರತದಲ್ಲಿಯೂ ಪ್ಯಾರಾ ಅಥ್ಲೀಟ್‌ಗಳಿಗೆ ವೈದ್ಯಕೀಯ ನೆರವು ಮತ್ತು ತರಬೇತಿಗಾಗಿ ಗುಣಮಟ್ಟದ ಸೌಲಭ್ಯಗಳು ಲಭ್ಯವಾಗುತ್ತಿರುವುದು ಆಶಾದಾಯಕ ಬೆಳವಣಿಗೆ.
ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಒಂದೂ ಚಿನ್ನ ಬಂದಿರಲಿಲ್ಲ. ಕೇವಲ ಆರು ಪದಕಗಳು ಮಾತ್ರ ಲಭಿಸಿದ್ದವು. ಆ ನಿರಾಶೆಯನ್ನು ಪ್ಯಾರಾ ಅಥ್ಲೀಟ್‌ಗಳು ದೂರಮಾಡಿದರು. ತಮ್ಮ ಛಲ, ಬಲ ಮತ್ತು ಬದ್ಧತೆಗಳ ಮೂಲಕ ಪದಕಗಳನ್ನಷ್ಟೇ ಅಲ್ಲ, ಎಲ್ಲರ ಮನಸ್ಸನ್ನೂ ಗೆದ್ದರು. ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಸ್ಫೂರ್ತಿಯಾದರು. ಅಂತಹ ಸಾಧನೆಗಳ ಕುರಿತ ಇಣುಕು ನೋಟ ಇಲ್ಲಿದೆ.
ಪ್ರೀತಿ ಪಾಲ್ ಎಂಬ ವಿಸ್ಮಯ
ಪ್ರೀತಿಪಾಲ್, ರೈತನ ಮಗಳು. ಹುಟ್ಟಿನಿಂದಲೇ ದೈಹಿಕ ಸವಾಲುಗಳು ಸಾಲು ಸಾಲಾಗಿ ಕಾಡಿದವು. ಹೈಪರ್ಟೊನಿಯಾ, ಅಟಾಕ್ಸಿಯಾ ಮತ್ತು ಅಥೆಟೊಸಿಸ್ ಕಾಯಿಲೆಗಳಿಂದಾಗಿ ಪ್ರೀತಿ ಅವರ ಕಾಲುಗಳಲ್ಲಿ ನರಗಳು ದುರ್ಬಲವಾಗಿವೆ. ಸವಾಲುಗಳನ್ನು ಧೈರ್ಯದಿಂದ ಸ್ವೀಕರಿಸಿ ಕ್ಯಾಲಿಪರ್(ಕೃತಕ ಕಾಲು) ಅಳವಡಿಸಿಕೊಂಡು ಮುನ್ನುಗ್ಗಿದರೂ ಬದುಕು ಅಸ್ಥಿರವೆನಿಸಿತು. ೧೭ನೆಯ ವಯಸ್ಸಿನಲ್ಲಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಪ್ಯಾರಾಲಿಂಪಿಕ್ಸ್ ಕೂಟದ ವಿಡಿಯೋ ನೋಡಿ ಸ್ಫೂರ್ತಿ ಪಡೆದು, ಪ್ಯಾರಾ ಅಥ್ಲೀಟ್ ಫಾತಿಮಾ ಖತೂನ್ ಅವರನ್ನು ಸಂಪರ್ಕಿಸಿದರು. ೨೦೧೮ರಲ್ಲಿ ಮೊದಲ ಬಾರಿಗೆ ರಾಜ್ಯ ಪ್ಯಾರಾ ಅಥ್ಲೆಟಿಕ್ ಕೂಟದಲ್ಲಿ ಮಿಂಚಿನ ವೇಗದಲ್ಲಿ ಕ್ರಮಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡರು. ೨೦೨೨ರ ಏಷ್ಯನ್ ಪ್ಯಾರಾಗೇಮ್ಸ್ಗೆ ಅರ್ಹತೆ ಪಡೆದ ಮೇಲಂತೂ ಅವರು ಹಿಂತಿರುಗಿ ನೋಡಲಿಲ್ಲ. ಈಗ ಪ್ಯಾರಿಸ್ ಕೂಟದಲ್ಲಿ ಪ್ರೀತಿ ಪಾಲ್ ಟ್ರ್ಯಾಕ್ ಸ್ಪರ್ಧೆಯಲ್ಲಿ ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮಹಿಳೆಯರ ೧೦೦ ಮತ್ತು ೨೦೦ ಮೀಟರ್ ಟಿ೩೫ ವಿಭಾಗದಲ್ಲಿ ಎರಡು ಕಂಚಿನ ಪದಕ ಗೆದ್ದ ಅವರು ಒಂದೇ ಆವೃತ್ತಿಯಲ್ಲಿ ೨ ಪದಕ ಪಡೆದು ದಾಖಲೆ ಬರೆದಿದ್ದಾರೆ.
ಜುಡೋ ಕಾ ಕಪಿಲ್ ಛಲ
ಜೂಡೊ ಕ್ರೀಡೆಯಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಪ್ಯಾರಾಲಿಂಪಿಕ್ಸ್ ಪದಕ ಒಲಿಯಿತು. ಪುರುಷರ ೬೦ ಕೆ.ಜಿ. ವಿಭಾಗದ ಜೆ೧ ಕ್ಲಾಸ್‌ನಲ್ಲಿ ೨೪ ವರ್ಷದ ಕಪಿಲ್ ಪರಮಾರ್ ಕಂಚು ಜಯಿಸಿದರು. ಕಪಿಲ್ ಅವರು ಬಾಲ್ಯದಲ್ಲಿ ಹೊಲದಲ್ಲಿ ನೀರಿನ ಪಂಪ್ ಬಳಿ ಇದ್ದಾಗ ವಿದ್ಯುತ್ ಆಘಾತದಲ್ಲಿ ಕಣ್ಣುಗಳಿಗೆ ತೀವ್ರ ಹಾನಿಯಾಗಿ ದೃಷ್ಟಿ ಕಳೆದುಕೊಂಡರು. ನಂತರ ಅವರು ಪಟ್ಟ ಕಷ್ಟಗಳು ಒಂದೆರಡಲ್ಲ. ಆದರೆ ಅಮ್ಮನ ಬೆಂಬಲ ಅವರ ಬೆನ್ನಿಗಿತ್ತು. ಆದ್ದರಿಂದ ಎದೆಗುಂದಲಿಲ್ಲ. ತಮ್ಮ ಉಪಜೀವನಕ್ಕಾಗಿ ಚಹಾ ಮಾರಾಟ ಕೂಡ ಮಾಡಿದ್ದರು. ಕೋಚ್ ಭಗವಾನ್ ದಾಸ್ ಮತ್ತು ಮನೋಜ್ ಪ್ರೋತ್ಸಾಹದಿಂದ ಅಂಧರ ಜೂಡೊ ಪಯಣ ಪ್ರಾರಂಭಿಸಿದರು. ಹಂತಹಂತವಾಗಿ ಸಾಧನೆಯ ಮೆಟ್ಟಿಲುಗಳನ್ನು ಏರಿದ ಅವರು ಪ್ಯಾರಿಸ್‌ನಲ್ಲಿ ಬ್ರೆಜಿಲಿಯನ್ ಎಲಿಯೆಲ್ಟನ್ ಡಿ ಒಲಿವೇರಾ ಅವರನ್ನು ಕೇವಲ ೩೩ ಸೆಕೆಂಡುಗಳಲ್ಲಿ ಹಿಮ್ಮೆಟ್ಟಿಸಿ ಗಮನ ಸೆಳೆದರು.
ಅಚ್ಚರಿಯ ಹುಡುಗಿ ಶೀತಲ್ ದೇವಿ
‘ಆರ್ಮ್ಲೆಸ್ ಆರ್ಚರ್’ ಎಂದೇ ಖ್ಯಾತರಾಗಿದ್ದಾರೆ ೧೭ ವರ್ಷದ ಹುಡುಗಿ ಶೀತಲ್ ದೇವಿ. ಅವರು ಪ್ಯಾರಾ ಕ್ರೀಡೆಗೆ ಒಂದು ಹೊಸ ಭಾಷ್ಯವನ್ನೇ ಬರೆದರು. ಎರಡೂ ತೋಳುಗಳಿಲ್ಲ. ಆದರೆ ಎರಡು ಕಾಲುಗಳಿಂದಲೇ ಬಿಲ್ಲಿಗೆ ಬಾಣ ಹೂಡಿ ನಿಖರ ಗುರಿ ಹಿಡಿಯುವ ಈ ಬಾಲೆಯನ್ನು ನೋಡಿದವರ ಕಂಗಳೆರಡೂ ಅರಳುತ್ತವೆ. ಗಂಟಲು ಕಟ್ಟಿ, ಮಾತುಗಳನ್ನೇ ಮರೆತಂತಾಗುತ್ತದೆ. ಎಲ್ಲ ಅವಯವಗಳು ಚೆನ್ನಾಗಿರುವವರು ಒಂದು ಕೆಲಸ ಮಾಡಲು ಹತ್ತಾರು ಬಾರಿ ಯೋಚಿಸುತ್ತಾರೆ. ಆದರೆ ಈ ಹುಡುಗಿಯನ್ನು ನೋಡುತ್ತ ನಿಂತರೆ ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂಬ ಭಾವ ಮೂಡುತ್ತದೆ. ಮನಸ್ಸಿದ್ದರೆ ಮಾರ್ಗ ಎಂಬುದನ್ನು ಈಕೆಯನ್ನು ನೋಡಿಯೇ ಕಲಿಯಬೇಕು.
ಕಾಲಿನಿಂದ ಬಿಲ್ಲನ್ನು ಎತ್ತಿಕೊಂಡು, ಬಾಯಿಯಿಂದ ಬಾಣವನ್ನು ಬಿಗಿ ಮಾಡಿಕೊಂಡು, ಗುರಿ ಇಡುವ ಶೀತಲ್ ಅಪ್ರತಿಮ ಸಾಧಕಿ. ೨೦೦೭ರಲ್ಲಿ ಕಾಶ್ಮೀರದ ಲೋಯಿಧರ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಈ ಕಂದಮ್ಮನಿಗೆ ಕೈಗಳೇ ಇರಲಿಲ್ಲ. ಪೋಕೋಮೆಲಿಯಾ ಪೀಡಿತ ಮಗುವನ್ನು ಪೋಷಕರು ಹೆಚ್ಚು ಮುತುವರ್ಜಿಯಿಂದ ಬೆಳೆಸಿದರು. ಬಾಲ್ಯದಲ್ಲಿ ಶೀತಲ್ ಮನೆಯ ಸುತ್ತಮುತ್ತ ಬೆಳೆದ ಮರಗಳ ಮೇಲೆಕ್ಕೇರಿ ಕುಳಿತುಕೊಳ್ಳುತ್ತಿದ್ದಳು. ಈ ಅಭ್ಯಾಸವೇ ಆಕೆಯ ಶರೀರದ ಮೇಲ್ಭಾಗಕ್ಕೆ ಬಲ ತುಂಬಿತು. ೨೦೨೧ರ ರಾಷ್ಟ್ರೀಯ ರೈಫಲ್ಸ್ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಕರ್ನಲ್ ಶಿಶುಪಾಲ್ ಸಿಂಗ್ ಅವರು ಶೀತಲ್ ಆತ್ಮವಿಶ್ವಾಸವನ್ನು ಗಮನಿಸಿ ಪ್ರೋತ್ಸಾಹಿಸಿದರು.
ನಂತರ ಆರ್ಚರಿ ಕೋಚ್ ಕುಲ್ದೀಪ್ ವೇದವಾನ್ ಅಕಾಡೆಮಿಯಲ್ಲಿ ಸೇರ್ಪಡೆಯಾಗಿ ಪ್ರತಿಭೆ ಜಗದೆದುರು ಅನಾವರಣಗೊಳ್ಳಲು ವೇದಿಕೆ ಸಜ್ಜಾಯಿತು. ಪರಿಣಾಮ ೨೦೨೩ರ ವಿಶ್ವ ಆರ್ಚರಿ ಪ್ಯಾರಾ ಚಾಂಪಿಯನ್‌ಶಿಪ್‌ನ ಮುಕ್ತ ಮಹಿಳಾ ಕಾಂಪೌಂಡ್ ವಿಭಾಗದಲ್ಲಿ ಬೆಳ್ಳಿ ಗೆಲ್ಲುವುದರೊಂದಿಗೆ ಶುಭಾರಂಭ ಮಾಡಿದರು. ಹಾಗಾಗಿ ಈ ಬಾರಿ ೧೭ ವರ್ಷದ ಆರ್ಚರಿಪಟು ಶೀತಲ್ ದೇವಿ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಮಿಶ್ರ ತಂಡ ವಿಭಾಗದಲ್ಲಿ ಕಂಚು ಗೆದ್ದರು. ಪ್ಯಾರಿಸ್‌ನಲ್ಲಿ ಶೀತಲ್ ಅವರ ಬಿಲ್ಲುಗಾರಿಕೆಯನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು.
ಈ ವಿಭಾಗದಲ್ಲಿ ಅವರೊಂದಿಗೆ ಜೊತೆಗಾರನಾಗಿದ್ದ ರಾಕೇಶ್ ಕುಮಾರ್ ಅವರದ್ದೂ ದುರಂತ ಕತೆ. ಕೆಲ ವರ್ಷಗಳ ಹಿಂದೆ ಅಪಘಾತಕ್ಕೊಳಗಾಗಿ ಬದುಕು ಬರಡಾಗಿ ಆತ್ಮಹತ್ಯೆಗೆ ಯತ್ನಿಸಿದ್ದರು ರಾಕೇಶ್. ಜಮ್ಮು ಮತ್ತು ಕಾಶ್ಮೀರದ ಕಟ್ರಾ ನಿವಾಸಿಯಾಗಿರುವ ಇವರು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ೨೦೦೯ರಲ್ಲಿ ಭೀಕರ ಅಪಘಾತದಲ್ಲಿ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು ಗಾಲಿಕುರ್ಚಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಆರ್ಚರಿಯಲ್ಲಿ ಅಚ್ಚರಿಯ ಸಾಧನೆ ಮಾಡಿದ್ದಾರೆ. ೨೦೨೩ರ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ರಾಕೇಶ್ ಡಬಲ್ ಸ್ವರ್ಣ ಗೆದ್ದಿದ್ದರು. ಏಷ್ಯನ್ ಕ್ರೀಡಾಕೂಟದಲ್ಲಿ ಮೂರು ಪದಕ ಜಯಿಸಿದ ಇವರಿಗೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಆರ್ಚರಿ ಕಾಂಪೌಂಡ್ ಮಿಶ್ರ ತಂಡದಲ್ಲಿ ಕಂಚಿನ ಪದಕ ಒಲಿಯಿತು.
ಆರ್ಚರಿಯ ಪುರುಷರ ವಿಭಾಗದಲ್ಲಿ ಹರವಿಂದರ್ ಚಿನ್ನಕ್ಕೆ ಗುರಿ ಇಟ್ಟರು. ಟೋಕಿಯೊದಲ್ಲಿ ಕಂಚು ಜಯಿಸಿದ್ದ ಅವರು ಇಲ್ಲಿ ಬಂಗಾರದ ಮನುಷ್ಯನಾದರು. ಆರ್ಚರಿಯಲ್ಲಿ ಭಾರತಕ್ಕೆ ಚಿನ್ನ ಒಲಿದಿದ್ದು ಇದೇ ಮೊದಲು.
ಧರಮ್ವೀರ್ ಕ್ಲಬ್ ಥ್ರೋ
ಕ್ಲಬ್ ಥ್ರೋದಲ್ಲಿ ಭಾರತದ ಇಬ್ಬರು ಅಥ್ಲೀಟ್‌ಗಳಾದ ಧರಮ್‌ವೀರ್ ಮತ್ತು ಪ್ರಣವ್ ಸೂರ್ಮಾ ಅವರು ಪದಕಗಳನ್ನು ಜಯಿಸಿದರು. ಎಫ್ ೫೧ ಕ್ಲಾಸ್‌ನಲ್ಲಿ ಧರಮ್‌ವೀರ್ ಚಿನ್ನ ಜಯಿಸಿದರೆ, ಪ್ರಣವ್ ಬೆಳ್ಳಿಗೆ ಕೊರಳೊಡ್ಡಿದರು. ಧರಮ್‌ವೀರ್ ಅವರು ಸೋನಿಪತ್‌ನವರು. ಡೈವಿಂಗ್ ಮಾಡುವಾಗ ಅಪಘಾತಕ್ಕೊಳಗಾಗಿದ್ದರು. ಅದರಲ್ಲಿ ಅವರ ಸೊಂಟದ ಕೆಳಭಾಗವು ಪಾರ್ಶ್ವವಾಯುವಿಗೆ ಒಳಗಾಯಿತು. ಧರಮ್ ಅವರು ತಮ್ಮ ಸ್ನೇಹಿತ ಪ್ಯಾರಾ ಅಥ್ಲೀಟ್ ಅಮಿತ್ ಕುಮಾರ್ ಸರೋಹಾ ಅವರ ಮಾರ್ಗದರ್ಶನದಲ್ಲಿ ಕ್ಲಬ್ ಥ್ರೋ ಪದಕ ಸಾಧನೆ ಮಾಡಿದ್ದಾರೆ.
ಸುಮಿತ್, ಅವನಿ ಸಾಧನೆ ‘ನಿರಂತರ’
ಜಾವೆಲಿನ್ ಥ್ರೋ ಅಥ್ಲೀಟ್ ಸುಮಿತ್ ಅಂಟಿಲ್ ಮತ್ತು ಶೂಟರ್ ಅವನಿ ಲೇಖರಾ ಅವರು ಸತತ ಎರಡನೇ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದರು. ಅದರೊಂದಿಗೆ ತಮ್ಮ ಮೇಲಿದ್ದ ಅಪಾರ ನಿರೀಕ್ಷೆಯನ್ನು ಉಳಿಸಿಕೊಂಡರು.
ಸುಮಿತ್ ಪುರುಷರ ಜಾವೆಲಿನ್ ಥ್ರೋ ಎಫ್೬೪ ವಿಭಾಗದಲ್ಲಿ ೭೦.೫೯ ಮೀಟರ್ ಎಸೆದು ಪ್ಯಾರಾಲಿಂಪಿಕ್ಸ್ ದಾಖಲೆಯೊಂದಿಗೆ ಸ್ವರ್ಣ ಗೆದ್ದರು. ಇದೇ ವೇಳೆ ಮೂರನೇ ಬಾರಿ ತಮ್ಮದೇ ದಾಖಲೆಯನ್ನು ಮೀರಿದ್ದು ವಿಶೇಷ. ಹರಿಯಾಣದ ಸೋನಿಪತ್‌ನಲ್ಲಿ ೧೯೮೮ ಜೂನ್ ೭ರಂದು ಜನಿಸಿದ ಅವರು ಯೋಗೇಶ್ವರ ದತ್ತ ಅವರಿಂದ ಪ್ರೇರಣೆ ಪಡೆದು ಕುಸ್ತಿಪಟು ಆಗಿದ್ದರು. ಟ್ಯೂಷನ್ ಮುಗಿಸಿ ಮನೆಗೆ ಮರಳುವಾಗ ದುರದೃಷ್ಟವಶಾತ್ ಬೈಕ್ ಅಪಘಾತಕ್ಕಿಡಾಗಿ ಎಡಗಾಲಿನ ಮೊಣಕಾಲಿನವರೆಗಿನ ಭಾಗವನ್ನು ಕಳೆದುಕೊಳ್ಳಬೇಕಾಯಿತು. ಇದರಿಂದಾಗಿ ಕುಸ್ತಿಪಟುವಾಗುವ ಬಯಕೆ ಛಿದ್ರವಾಯಿತು. ಆದರೆ ಸುಮಿತ್ ಒಳಗಿದ್ದ ಕ್ರೀಡಾಪಟು ಕುಗ್ಗಲಿಲ್ಲ. ಊರಿನ ಪ್ಯಾರಾ ಆಥ್ಲೀಟ್ ರಾಜಕುಮಾರ ಅವರಿಂದ ಪ್ಯಾರಾಲಿಂಪಿಕ್ಸ್ ಕುರಿತು ಮಾಹಿತಿ ಪಡೆದು ಭರ್ಜಿಯನ್ನು ಕೈಯಲ್ಲಿ ಹಿಡಿದುಕೊಂಡರು. ಇವರ ಕನಸು ನನಸಾಗಲು ಸಹಕರಿಸಿದವರು ಜಾವೆಲಿನ್ ಥ್ರೋ ಕೊಚ್ ನವಲ್ ಸಿಂಗ್ ಅವರು. ಸುಮಿತ್ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಜಯಿಸಿದ್ದರು. ಪ್ಯಾರಿಸ್‌ನಲ್ಲಿಯೂ ಕೂಡ ಸ್ವರ್ಣ ಸಂಭ್ರಮ ಆಚರಿಸಿದರು.
ಮಹಿಳೆಯರ ಶೂಟಿಂಗ್‌ನಲ್ಲಿ ಅವನಿ ಲೇಖರಾ ಅವರದ್ದು ಕೂಡ ಅಮೋಘ ಸಾಧನೆ. ಗಾಲಿಕುರ್ಚಿಯಲ್ಲಿರುವ ಅವರು ಟೋಕಿಯೊ ಮತ್ತು ಪ್ಯಾರಿಸ್‌ನಲ್ಲಿ ಚಿನ್ನದ ಪದಕಕ್ಕೆ ಗುರಿ ಇಡುವಲ್ಲಿ ಯಶಸ್ವಿಯಾದರು. ೨೦೧೨ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಬದುಕು ಕಮರಿದರೂ ಗಾಲಿ ಕುರ್ಚಿಯಲ್ಲೇ ಕುಳಿತು ಸಾಧನೆಯ ಶಿಖರವೇರಿದರು.
ಬಹು ಎತ್ತರದ ಸಾಧಕ ನವದೀಪ್ ಸಿಂಗ್
ಪ್ಯಾರಾಲಿಂಪಿಕ್ಸ್ ಮುಗಿಸಿ ಭಾರತಕ್ಕೆ ಮರಳಿದ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನೆಯಲ್ಲಿ ಔತಣಕೂಟ ಏರ್ಪಡಿಸಿದ್ದರು. ಎಲ್ಲರೊಂದಿಗೂ ಆತ್ಮೀಯ ಸಂವಾದ ನಡೆಸಿದರು. ಈ ಸಂವಾದದ ಸಂದರ್ಭದಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.
ಜಾವೆಲಿನ್ ಥ್ರೋ ಪಟು ನವದೀಪ್ ಸಿಂಗ್ ಅವರು ಪ್ರಧಾನಿ ಮೋದಿಯವರಿಗೆ ಕ್ಯಾಪ್ ಕಾಣಿಕೆ ನೀಡಿದರು. ಅದಕ್ಕೆ ಪ್ರತಿಯಾಗಿ ಮೋದಿಯವರು, ‘ಇದನ್ನು ನೀನೇ ನನ್ನ ತಲೆಗೆ ಹಾಕು’ ಎಂದು ನೆಲದ ಮೇಲೆ ಕುಳಿತರು. ನಾಲ್ಕೂವರೆ ಅಡಿಯ ವಾಮನಮೂರ್ತಿ ನವದೀಪ್ ಪ್ರಧಾನಿಯವರ ತಲೆಗೆ ಕ್ಯಾಪ್ ಹಾಕಿ ನಲಿದರು. ಅವರ ಪಾಲಿಗೆ ಇದು ಜೀವಮಾನದ ಅವಿಸ್ಮರಣೀಯ ನೆನಪು.
ಕುಬ್ಜ ಅಥ್ಲೀಟ್ ನವದೀಪ್ ಸಾಧನೆ ಸಣ್ಣದೇನಲ್ಲ. ಇವರ ಸ್ವರ್ಣದ ಪಯಣವೇ ಬಲು ರೋಚಕ. ಹರಿಯಾಣದ ಮಧ್ಯಮ ವರ್ಗದ ಕೃಷಿ ಕುಟುಂಬದಲ್ಲಿ ಜನಿಸಿದ ನವದೀಪ್ ಜೀವನದಲ್ಲಿ ಸಾಕಷ್ಟು ನೋವುಗಳನ್ನುಂಡವರು. ನವದೀಪ್ ಎರಡು ವರ್ಷದವರಿದ್ದಾಗ ಕುಬ್ಜತೆ ಇರುವುದು ಪತ್ತೆಯಾಯಿತು. ರಾಷ್ಟçಮಟ್ಟದ ಕುಸ್ತಿಪಟುವಾಗಿದ್ದ ತಂದೆ ದಲ್ಬೀರ್ ಸಿಂಗ್ ವಾಸ್ತವ ಅರಿತು ಮಗನಿಗೆ ಕ್ರೀಡಾಪಟುವಾಗಲು ಬೆಂಬಲಿಸಿದರು. ೨೦೧೭ರಲ್ಲಿ ಏಷ್ಯನ್ ಯೂತ್ ಪ್ಯಾರಾ ಗೇಮ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಮೊದಲ ಹೆಜ್ಜೆಯಿಟ್ಟರು.
ಪ್ಯಾರಿಸ್‌ನಲ್ಲಿ ನಡೆದ ಫೈನಲ್‌ನಲ್ಲಿ ೪೭.೩೨ ಮೀಟರ್ ಸಾಧನೆಯೊಂದಿಗೆ ನವದೀಪ್ ರಜತ ಪದಕ ಜಯಿಸಿದ್ದರು. ಆದರೆ ಇವರಿಗಿಂತ ಕೊಂಚ ದೂರ ಎಸೆದಿದ್ದ ಇರಾನ್ ಅಥ್ಲೀಟ್ ವಿವಾದಾತ್ಮಕ ಬಾವುಟ ತೋರಿಸಿ ಅನರ್ಹಗೊಂಡರು. ಹೀಗಾಗಿ ರಜತದಿಂದ ಸ್ವರ್ಣದೆಡೆಗೆ ಪದಕದ ಬಣ್ಣ ಬದಲಾಯಿತು. ಆದಾಯ ತೆರಿಗೆ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್ ಆಗಿರುವ ಅವರು ಸದ್ಯ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಯಶಸ್ಸಿನ ಹಳಿಗೆ ಮರಳಿದ ನಿತೇಶ್ ಕುಮಾರ್ ಬದುಕು
೨೦೦೯ರಲ್ಲಿ ವಿಶಾಖಪಟ್ಟಣದಲ್ಲಿ ರೈಲು ಅಪಘಾತಕ್ಕೀಡಾಗಿತ್ತು. ಅದರೊಳಗಿದ್ದ ೧೫ ವರ್ಷದ ನಿತೇಶ್ ಕುಮಾರ್‌ನ ಎಡಗಾಲಿಗೆ ಗಂಭೀರ ಪೆಟ್ಟಾಗಿ, ಸುಮಾರು ೬ ತಿಂಗಳು ಹಾಸಿಗೆ ಹಿಡಿಯಬೇಕಾಯಿತು. ಹೈಸ್ಕೂಲ್ ಗ್ರೌಂಡಿನಲ್ಲಿ ಪುಟ್ಬಾಲ್ ಹಿಂದೆ ಓಡುತ್ತಿದ್ದ ಹುಡುಗ ಒಮ್ಮೆಲೇ ನಿಶ್ಚಲನಾಗಿ ಮಲಗಿದ್ದು ಮನೆಯವರಿಗೆ ನೋಡಲಾಗಲಿಲ್ಲ. ಕೊನೆಗೆ ತನ್ನ ವೈಕಲ್ಯವನ್ನು ಮರೆಯಲು ನಿತೀಶ್ ಆಯ್ದುಕೊಂಡಿದ್ದು ಬ್ಯಾಡ್ಮಿಂಟನ್ ಆಟವನ್ನು. ಹಲವಾರು ರಾಜ್ಯ ಮತ್ತು ರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಂಡು ಸೋಲುಂಡಾಗಲೂ ಆತ್ಮಸ್ಥೈರ್ಯದಿಂದ ಮುನ್ನುಗಿದರು. ಟೋಕಿಯೊ ಪ್ಯಾರಾಲಿಂಪಿಕ್ಸ್ ವಿಜೇತರಾದ ಪ್ರಮೋದ್ ಮತ್ತು ಮನೋಜ್ ಅವರನ್ನು ಸೋಲಿಸಿದ್ದು ಪ್ಯಾರಾಲಿಂಪಿಕ್ಸ್ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ದೊರಕಿಸಿತು. ಪರಿಣಾಮ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಎಸ್‌ಎಲ್೩ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬ್ರಿಟನ್‌ನ ಡೇನೀಲ್‌ಬೆತೆಲಾ ವಿರುದ್ದ ಸ್ವರ್ಣ ಗೆದ್ದು ಚೊಚ್ಚಲ ಸ್ಪರ್ಧೆಯಲ್ಲೇ ವಿಜಯ ಪತಾಕೆ ಹಾರಿಸಿದರು.
ಹೈಜಂಪ್ ಪಟು ಮರಿಯಪ್ಪನ್ ತಂಗವೇಲು
ಪುರುಷರ ಹೈಜಂಪ್ ಟಿ೬೩ ವಿಭಾಗದಲ್ಲಿ ೩ನೇ ಸ್ಥಾನ ಪಡೆದ ಮರಿಯಪ್ಪನ್ ತಂಗವೇಲು ಸತತ ೩ ಪ್ಯಾರಾಲಿಂಪಿಕ್ಸ್ (ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚು) ಕೂಟದಲ್ಲಿ ಪದಕ ವಿಜೇತ ಮೊದಲ ಭಾರತೀಯ. ತಮಿಳುನಾಡಿನ ಸೇಲಂನ ಕುಗ್ರಾಮದ ಬಡ ಕುಟುಂಬವೊಂದರಲ್ಲಿ ೬ ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. ಮರಿಯಪ್ಪನ್ ಚಿಕ್ಕವರಿದ್ದಾಗ ತಂದೆ ಕುಟುಂಬವನ್ನು ತೊರೆದರು. ಹೀಗಾಗಿ ಎಂಬತ್ತು ನೂರು ರೂಪಾಯಿ ದಿನಗೂಲಿಯಿಂದಲೇ ಮಕ್ಕಳನ್ನು ಪೊರೆಯುವ ಜವಾಬ್ದಾರಿಯನ್ನು ತಾಯಿ ಹೊತ್ತರು. ತಂಗವೇಲು ಐದು ವರ್ಷದವರಿದ್ದಾಗಲೇ ಬಸ್ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಪಾನಮತ್ತ ಚಾಲಕ ಮಾಡಿದ್ದ ಅವಘಡಕ್ಕೆ ತಂಗವೇಲು ಅಂಗವಿಕಲರಾಗಬೇಕಾಯಿತು. ಆದರೆ ಜೀವನೋತ್ಸಾಹ ಬತ್ತದೇ ಕ್ರೀಡೆಯೆಡೆಗೆ ಒಲವು ಮೂಡಿತು. ಸ್ಥಳೀಯ ಕ್ರೀಡಾಕೂಟಗಳಲ್ಲಿನ ಗೆಲವು ಒಲಿಂಪಿಕ್ಸ್ ನಂತಹ ದೊಡ್ಡ ಗುರಿಯಡೆಗೆ ಪ್ರೇರೇಪಿಸಿತು. ಕೋಚ್ ಸತ್ಯ ಅವರ ಮಾರ್ಗದರ್ಶನ ಹೈಜಂಪ್‌ನಲ್ಲಿ ಪಳಗುವಂತೆ ಮಾಡಿತು.
ದೀಪ್ತಿ ಜೀವಾಂಜಿ ಎಂಬ ಜೀವಸೆಲೆ
ತೆಲಂಗಾಣದ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದ ದೀಪ್ತಿ ಜೀವಾಂಜಿ ಬಾಲ್ಯದಿಂದ ಕೇಳಿದ್ದು ಬರೀ ಮೂದಲಿಕೆಯ ಮಾತುಗಳನ್ನು. ಮಗಳ ಕಾರಣದಿಂದ ಎಷ್ಟೇ ಟೀಕೆಗಳನ್ನು ಎದುರಿಸಿದರೂ ಪಾಲಕರು ಆಕೆಯನ್ನು ಬಿಟ್ಟುಕೊಡಲಿಲ್ಲ. ದೀಪ್ತಿಯಲ್ಲಿ ಅಡಗಿದ ಕ್ರೀಡಾ ಪ್ರತಿಭೆಗೆ ಬೆಳಕು ಚೆಲ್ಲಿದ್ದು ಕೋಚ್ ಎನ್. ರಮೇಶ್. ಅಪಮಾನಿಸಿದವರ ಎದುರು ತನ್ನ ಮಗಳು ತಲೆಯೆತ್ತಿ ಹೆಮ್ಮೆಯಿಂದ ನಡೆಯಬೇಕೆಂದು ತಂದೆ ತಮ್ಮ ಬಳಿಯಿದ್ದ ತುಂಡುಭೂಮಿಯನ್ನು ಮಾರಿ ತರಬೇತಿ ಕೊಡಿಸಿದರು.
ಈಗ ದೀಪ್ತಿ ೪೦೦ ಮೀಟರ್ ಟಿ೨ ವಿಭಾಗದಲ್ಲಿ ಕಂಚಿನ ಪದಕ ಗಳಿಸಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಈ ವಿಭಾಗದಲ್ಲಿ ಸ್ಪರ್ಧಿಸಿದ ಮೊದಲ ಅಥ್ಲೀಟ್. ತಿರಸ್ಕರಿಸಿದ್ದ ಊರಿನವರೇ ಈಗ ದೀಪ್ತಿಯವರನ್ನು ಸನ್ಮಾನಿಸುತ್ತಿದ್ದಾರೆ. ಇದೇ ನಿಜವಾದ ಸಾಧನೆ.
ಕನ್ನಡಿಗ ಸುಹಾಸ್ ಬದ್ಧತೆ
ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಅವರು ಸತತ ಎರಡನೇ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ಹಾಸನ ಜಿಲ್ಲೆಯವರಾಗಿರುವ ಸುಹಾಸ್ ಅವರು ಅಂಗವೈಕಲ್ಯವನ್ನು ಮೀರಿ ನಿಂತು ಐಎಎಸ್ ಅಧಿಕಾರಿಯಾಗಿದ್ದಾರೆ. ಅವರು ಉತ್ತರಪ್ರದೇಶ, ದೆಹಲಿ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಆಸಕ್ತಿ ಹೊಂದಿದ್ದ ಅವರು ಅದರಲ್ಲಿಯೂ ಮಿಂಚಿದರು. ಸತತ ಎರಡು ಪ್ಯಾರಾಲಿಂಪಿಕ್ಸ್ಗಳಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ. ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಮಿಂಚುತ್ತಿರುವ ಹೆಮ್ಮೆಯ ಕನ್ನಡಿಗ ಅವರಾಗಿದ್ದಾರೆ.
ಕರಾಳ ವಿರಳ ಕಾಯಿಲೆಗೆ ಅಂಜದ ಮಹಾನ್ ಸಾಧಕ ಯೋಗೇಶ್ ಕಥುನಿಯಾ
ಹರಿಯಾಣದ ಬಹದ್ದೂರ್‌ಗಢದ ಯೋಗೇಶ್ ವೈದ್ಯರಾಗಬೇಕೆಂದು ಕನಸು ಕಂಡವರು. ಯೋಧ ಜ್ಞಾನಚಂದ್ ಕಥುನಿಯಾ ಮತ್ತು ಗ್ರಹಿಣಿ ಮೀನಾದೇವಿ ದಂಪತಿ ಮಗನ ಭವಿಷ್ಯದ ಕುರಿತು ಸುಂದರ ಕನಸು ಕಂಡಿದ್ದರು. ಆದರೆ ಒಂಬತ್ತನೇ ವಯಸ್ಸಿನಲ್ಲಿ ಪಾರ್ಕ್ನಲ್ಲಿ ಬಿದ್ದ ಬಳಿಕ ಅವರು ನಿಲ್ಲಲಾಗದ ಸ್ಥಿತಿ ತಲಪಿದರು. ವೈದ್ಯರು ಪರೀಕ್ಷಿಸಿದಾಗ ಗ್ಯುಲಿಯನ್ ಬೇರ್ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆ ಇರುವುದು ಪತ್ತೆಯಾಯಿತು. ಇದರಿಂದ ಭಾಗಶಃ ಪಾಶ್ವವಾಯುವಿಗೆ ತುತ್ತಾಗಿ ಗಾಲಿಕುರ್ಚಿಯನ್ನು ಅವಲಂಬಿಸುವಂತಾಯಿತು.
ತಾಯಿ ಮೀನಾದೇವಿಯವರೇ ಫಿಸಿಯೋಥೆರಪಿ ಕಲಿತು ಆರೈಕೆ ಮಾಡಿದರು. ಮೂರೇ ವರ್ಷದಲ್ಲಿ ಚೇತರಿಸಿಕೊಂಡ ಯೋಗೇಶ್ ಊರುಗೋಲಿನ ಸಹಾಯದಿಂದ ನಡೆಯಲು ಆರಂಭಿಸಿದರು. ಚಂಡೀಗಢದ ಆರ್ಮಿ ಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸಿದ ಅವರು ಪ್ಯಾರಾ ಕ್ರೀಡೆಯತ್ತ ಗಮನ ಕೇಂದ್ರೀಕರಿಸಿದರು. ಬರ್ಲಿನ್‌ನಲ್ಲಿ ನಡೆದ ೨೦೧೮ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ೪೫.೧೮ ಮೀಟರ್ ಡಿಸ್ಕಸ್ ಎಸೆತದೊಂದಿಗೆ ವಿಶ್ವ ದಾಖಲೆ ನಿರ್ಮಿಸಿದರು. ಈಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಪುರುಷರ ಡಿಸ್ಕಸ್ ಥ್ರೋ ಎಫ್೫೬ ವಿಭಾಗದಲ್ಲಿ ರಜತ ಪದಕ ಪಡೆದು ದೇಶ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.
ಒಬ್ಬೊಬ್ಬ ಪ್ಯಾರಾ ಕ್ರೀಡಾಪಟುಗಳ ಬದುಕು ಸಾಮಾನ್ಯರಿಗೆ ಮಾದರಿ. ಡ್ರಗ್ಸ್, ಡ್ರಿಂಕ್ಸ್, ಸಿಗರೇಟುಗಳೆಂಬ ಮಾದಕವಸ್ತುಗಳ ಮಾಯಾಜಾಲದಲ್ಲಿ ಸಿಲುಕಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವ ಇಂದಿನ ಯುವಸಮೂಹಕ್ಕೆ ಪ್ಯಾರಾಲಿಂಪಿಯನ್ ಹೀರೊಗಳು ಸ್ಪೂರ್ತಿಯ ಸೆಲೆಯಾಗಬಹುದು. ಇವರ ಸಾಹಸಗಾಥೆಯನ್ನು ಚಲನಚಿತ್ರ, ಧಾರಾವಾಹಿ ಮತ್ತು ಪುಸ್ತಕಗಳ ರೂಪದಲ್ಲಿ ಹೊರತಂದರೆ ಯುವಜನರಿಗೆ ದಾರಿದೀಪವಾಗಬಹುದು. ಪಠ್ಯಪುಸ್ತಕದಲ್ಲಿ ಇವರ ಬದುಕಿನ ಕಥೆಯನ್ನು ಅಳವಡಿಸಿದರೆ ಮಕ್ಕಳು ಸನ್ಮಾರ್ಗದಲ್ಲಿ ನಡೆಯಲು ಹಾಗೂ ಯಶಸ್ವೀ ಬದುಕಿಗೆ ಪ್ರೇರಣೆಯಾಗುತ್ತದೆ.
ಭಾರತದ ಪದಕಗಳ ಪಟ್ಟಿ
೧. ಮಹಿಳೆಯರ ೧೦ ಮೀ. ಏರ್‌ರೈಫಲ್ ಸ್ಟಾಂಡಿಂಗ್ ಎಸ್‌ಎಚ್೧ (ಶೂಟಿಂಗ್): ಅವನಿ ಲೆಖರಾ ಚಿನ್ನ
೨. ಮಹಿಳೆಯರ ೧೦ ಮೀ. ಏರ್‌ರೈಫಲ್ ಸ್ಟಾಂಡಿಂಗ್ ಎಸ್‌ಎಚ್೧ (ಶೂಟಿಂಗ್): ಮೋನಾ ಅಗರ್ವಾಲ್ ಕಂಚು
೩. ಮಹಿಳೆಯರ ೧೦೦ ಮೀ ಟಿ೩೫ (ಅಥ್ಲೆಟಿಕ್ಸ್): ಪ್ರೀತಿ ಪಾಲ್ – ಕಂಚು
೪. ಪುರುಷರ ೧೦ ಮೀ. ಏರ್‌ಪಿಸ್ತೂಲ್ ಎಸ್‌ಹೆಚ್೧ (ಶೂಟಿಂಗ್): ಮನೀಶ್ ನರ್ವಾಲ್ – ಬೆಳ್ಳಿ
೫. ಮಹಿಳೆಯರ ೧೦ಮೀ ಏರ್‌ಪಿಸ್ತೂಲ್ ಎಸ್‌ಹೆಚ್೧ (ಶೂಟಿಂಗ್): ರುಬಿನಾ ಫ್ರಾನ್ಸಿಸ್ – ಕಂಚು
೬. ಮಹಿಳೆಯರ ೨೦೦ ಮೀ ಟಿ೩೫ (ಅಥ್ಲೆಟಿಕ್ಸ್):ಪ್ರೀತಿ ಪಾಲ್ – ಕಂಚು
೭. ಪುರುಷರ ಹೈಜಂಪ್ ಟಿ೪೭ (ಅಥ್ಲೆಟಿಕ್ಸ್): ನಿಶಾದ್ ಕುಮಾರ್ – ಬೆಳ್ಳಿ
೮. ಪುರುಷರ ಡಿಸ್ಕಸ್ ಥ್ರೋ ಎಫ್೫೬ (ಅಥ್ಲೆಟಿಕ್ಸ್) : ಯೋಗೇಶ್ ಕಥುನಿಯಾ – ಬೆಳ್ಳಿ
೯. ಪುರುಷರ ಸಿಂಗಲ್ಸ್ ಎಸ್‌ಎಲ್೩ (ಬ್ಯಾಡ್ಮಿಂಟನ್): ನಿತೇಶ್ ಕುಮಾರ್ – ಚಿನ್ನ
೧೦. ಮಹಿಳೆಯರ ಸಿಂಗಲ್ಸ್ ಎಸ್‌ಯು೫ (ಬ್ಯಾಡ್ಮಿಂಟನ್): ತುಳಸಿಮತಿ ಮುರುಗೇಶನ್ – ಬೆಳ್ಳಿ
೧೧. ಮಹಿಳೆಯರ ಸಿಂಗಲ್ಸ್ ಎಸ್‌ಯು೫ (ಬ್ಯಾಡ್ಮಿಂಟನ್): ಮನೀಶಾ ರಾಮದಾಸ್ – ಕಂಚು
೧೨. ಪುರುಷರ ಸಿಂಗಲ್ಸ್ ಎಸ್‌ಎಲ್೪ (ಬ್ಯಾಡ್ಮಿಂಟನ್): ಸುಹಾಸ್ ಯತಿರಾಜ್ – ಬೆಳ್ಳಿ
೧೩. ಮಿಶ್ರ ತಂಡ ಕಾಂಪೌAಡ್ ಓಪನ್ (ಆರ್ಚರಿ): ರಾಕೇಶ್ ಕುಮಾರ್& ಶೀತಲ್ ದೇವಿ – ಕಂಚು
೧೪. ಪುರುಷರ ಜಾವೆಲಿನ್ ಎಫ್೬೪ (ಅಥ್ಲೆಟಿಕ್ಸ್): ಸುಮಿತ್ ಆಂಟಿಲ್ – ಚಿನ್ನ
೧೫. ಮಹಿಳೆಯರ ಸಿಂಗಲ್ಸ್ ಎಸ್‌ಹೆಚ್೬ (ಬ್ಯಾಡ್ಮಿಂಟನ್): ನಿತ್ಯಶ್ರೀ ಶಿವನ್ – ಕಂಚು
೧೬. ಮಹಿಳೆಯರ ೪೦೦ ಮೀ ಟಿ೨೦ (ಅಥ್ಲೆಟಿಕ್ಸ್): ದೀಪ್ತಿ ಜೀವನ್ಜಿ – ಕಂಚು
೧೭. ಪುರುಷರ ಜಾವೆಲಿನ್ ಎಫ್೪೬ (ಅಥ್ಲೆಟಿಕ್ಸ್): ಸುಂದರ್ ಸಿಂಗ್ ಗುರ್ಜರ್ – ಕಂಚು
೧೮. ಪುರುಷರ ಜಾವೆಲಿನ್ ಎಫ್೪೬ (ಅಥ್ಲೆಟಿಕ್ಸ್): ಅಜೀತ್ ಸಿಂಗ್ – ಬೆಳ್ಳಿ
೧೯. ಪುರುಷರ ಹೈಜಂಪ್ ಟಿ೬೩ (ಅಥ್ಲೆಟಿಕ್ಸ್): ಮರಿಯಪ್ಪನ್ ತಂಗವೇಲು- ಕಂಚು
೨೦. ಪುರುಷರ ಹೈ ಜಂಪ್ ಟಿ೬೩ (ಅಥ್ಲೆಟಿಕ್ಸ್): ಶರದ್ ಕುಮಾರ್ – ಬೆಳ್ಳಿ
೨೧. ಪುರುಷರ ಶಾಟ್ ಪುಟ್ ಎಫ್೪೬ (ಅಥ್ಲೆಟಿಕ್ಸ್): ಸಚಿನ್ ಖಿಲಾರಿ – ಬೆಳ್ಳಿ
೨೨. ಪುರುಷರ ವೈಯಕ್ತಿಕ ರಿಕರ್ವ್ (ಆರ್ಚರಿ): ಹರ್ವಿಂದರ್ ಸಿಂಗ್ – ಚಿನ್ನ
೨೩. ಪುರುಷರ ಕ್ಲಬ್ ಥ್ರೋ ೫೧ (ಅಥ್ಲೆಟಿಕ್ಸ್): ಧರಂಬೀರ್ – ಚಿನ್ನ
೨೪. ಪುರುಷರ ಕ್ಲಬ್ ಥ್ರೋ ೫೧ (ಅಥ್ಲೆಟಿಕ್ಸ್) : ಪ್ರಣವ್ ಸೂರ್ಮಾ – ಬೆಳ್ಳಿ
೨೫. ಜೂಡೋ ಪುರುಷರ ೬೦ ಕೆ.ಜಿ. ವಿಭಾಗದಲ್ಲಿ: ಕಪಿಲ್ ಪರ್ಮಾರ್ – ಕಂಚು
೨೬. ಟಿ೬೪ ಹೈಜಂಪ್ (ಅಥ್ಲೆಟಿಕ್ಸ್): ಪ್ರವೀಣ್ ಕುಮಾರ್ – ಚಿನ್ನ
೨೭. ಪುರುಷರ ಶಾಟ್‌ಪುಟ್ ಎಫ್೫೭ (ಅಥ್ಲೆಟಿಕ್ಸ್): ಹೊಕಾಟೊ ಸೆಮಾ – ಕಂಚು
೨೮. ಮಹಿಳೆಯರ ೨೦೦ ಮೀ ಟಿ೧೨ (ಅಥ್ಲೆಟಿಕ್ಸ್): ಸಿಮ್ರಾನ್ ಸಿಂಗ್ – ಕಂಚು
೨೯. ಪುರುಷರ ಜಾವೆಲಿನ್ ಎಫ್೪೧ (ಅಥ್ಲೆಟಿಕ್ಸ್): ನವದೀಪ್ ಸಿಂಗ್ – ಚಿನ್ನ