ಅಂತಾರಾಷ್ಟ್ರೀಯ ರಾಜನೀತಿಯಲ್ಲಿ ಎಲ್ಲ ಸಂದರ್ಭಗಳಲ್ಲೂ ನಿಯಮಗಳಿಗೆ ಅಂಟಿಕೊಂಡು ಅಥವಾ ಶೇಕಡಾ ನೂರರಷ್ಟು ಪಾರದರ್ಶಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವುದು ಒಂದು ಅನುಭವದ ಮಾತು ಅಷ್ಟೇ ಅಲ್ಲ. ಅದು ಮಹಾಭಾರತದಂತಹ ದಾರ್ಶನಿಕ ಪಠ್ಯಗಳು ಕಲಿಸಿದ ಪಾಠವೂ ಹೌದು. ಗದಾಯುದ್ಧದಲ್ಲಿ ಸೊಂಟದ ಕೆಳಭಾಗಕ್ಕೆ ಗದಾಪ್ರಹಾರ ಮಾಡಿ ದುರ್ಯೋಧನನನ್ನು ಕೊಲ್ಲುವುದು ಭೀಮನಿಗೆ ಅನಿವಾರ್ಯವಾಯಿತು. ಯಾವುದು ಧರ್ಮರಕ್ಷಣೆಯ ಕಾರ್ಯ ಎಂದು ಕೃಷ್ಣ ಪರಿಗಣಿಸಿದ್ದನೋ ಅಂತಹ ಉನ್ನತ ಉದ್ದೇಶಕ್ಕಾಗಿ ನಿಯಮವೊಂದನ್ನು ಮೀರುವುದು ಕೂಡ ಕಾರ್ಯತಂತ್ರದ ಭಾಗವೆಂದೇ ಕೃಷ್ಣನೂ ಪರಿಗಣಿಸಿದ. ಹೀಗೆ ನಿಯಮ ಉಲ್ಲಂಘಿಸುವುದರಿಂದ ತನಗೆ ಎಲ್ಲಿ ಅಪಕೀರ್ತಿ ಬರುವುದೋ ಎಂದು ಚಿಂತಿಸುತ್ತ ಕೂರುವುದು ದೇಶದ ಹಿತ ಕಾಯಬೇಕಾದ ನಿಜವಾದ ನಾಯಕನ ಲಕ್ಷಣವಲ್ಲ.
ಪ್ರಸ್ತುತ ಭಾರತದ ವಿದೇಶಾಂಗ ಸಚಿವರಾಗಿರುವ ಎಸ್. ಜೈಶಂಕರ್ ಅವರು ಹಿಂದೆ ನಾಲ್ಕು ದಶಕಗಳ ಕಾಲ ವಿದೇಶಾಂಗ ಇಲಾಖೆಯ ಅಧಿಕಾರಿಯಾಗಿ ಬೇರೆಬೇರೆ ಹುದ್ದೆಗಳಲ್ಲಿ ಕೆಲಸ ಮಾಡಿದವರು. ಅವರು ಭಾರತದ ರಾಯಭಾರಿಯಾಗಿ ಅಮೆರಿಕ ಮತ್ತು ಚೀನಾದಂತಹ ಸವಾಲಿನ ದೇಶಗಳೂ ಸೇರಿದಂತೆ ಹಲವು ದೇಶಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ ಕೂಡ ಹೌದು. ತಮ್ಮ ಸೇವಾವಧಿಯಲ್ಲಿ ಬೇರೆಬೇರೆ ಪಕ್ಷಗಳಿಗೆ ಸೇರಿದ ಬೇರೆಬೇರೆ ವಿದೇಶಾಂಗ ಸಚಿವರ ಅಡಿಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಅದೇ ರೀತಿ ಅವರು ಕೆಲಸ ಮಾಡಿರುವ ಇತರ ದೇಶಗಳಲ್ಲಿ ಕೂಡ ಅಧಿಕಾರ ಕೈಬದಲಾವಣೆ ಆದಾಗ ನೀತಿನಿರೂಪಣೆಗಳಲ್ಲಿ ವ್ಯತ್ಯಾಸಗಳಾದುದನ್ನು ಅಥವಾ ವ್ಯತ್ಯಾಸವಾಗದಿರುವುದನ್ನು ಗಮನಿಸಿದವರು ಕೂಡ ಹೌದು. ಆದ್ದರಿಂದ ವಿದೇಶ ವ್ಯವಹಾರಗಳ ಮಟ್ಟಿಗೆ ಅವರ ಅನುಭವದ ವ್ಯಾಪ್ತಿ ಬಹಳ ವಿಸ್ತಾರವಾದುದು. ಹೀಗಾಗಿಯೇ ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ, ಅಂತಾರಾಷ್ಟ್ರೀಯ ಒತ್ತಡಗಳ ನಡುವೆ ದೇಶದ ಹಿತವನ್ನು ಕಾಯುವ ಬಗೆ ಹೇಗೆ? – ಇಂತಹ ವಿಚಾರಗಳ ಬಗ್ಗೆ ಜೈಶಂಕರ್ ಅವರು ಹೇಳುವ ಮಾತುಗಳಿಗೆ ಸಹಜವಾಗಿಯೇ ಬೆಲೆಯಿದೆ.
ಜೈಶಂಕರ್ ಅವರ ‘ದ ಇಂಡಿಯಾ ವೇ’ಎಂಬ ಇಂಗ್ಲಿಷ್ ಕೃತಿಯನ್ನು ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಅನುವಾದಿಸಿ ‘ಭಾರತ ಪಥ’ ಎಂಬ ಶೀರ್ಷಿಕೆಯಲ್ಲಿ ಹೊರತಂದಿದ್ದಾರೆ. ಹಲವು ಜೀವನ ಚರಿತ್ರೆಗಳು ಮತ್ತು ಆತ್ಮಕತೆಗಳೂ ಸೇರಿದಂತೆ ಹತ್ತಾರು ಇಂಗ್ಲಿಷ್ ಪುಸ್ತಕಗಳನ್ನು ಕನ್ನಡಕ್ಕೆ ತಂದುಕೊಟ್ಟಿರುವ ಜಯಪ್ರಕಾಶ ನಾರಾಯಣ ಅವರು ಸದ್ಯ ಕನ್ನಡದ ಅತಿ ಬೇಡಿಕೆಯಿರುವ ಹಾಗೂ ಬಿಡುವಿಲ್ಲದ ಅನುವಾದಕರೆನ್ನಬಹುದು. ಪತ್ರಕರ್ತನಾಗಿ ಅವರಿಗಿರುವ ಸುದೀರ್ಘ ಅನುಭವ ಕೂಡ ಅವರ ಭಾಷಾಂತರದ ಮೇಲೆ ಧನಾತ್ಮಕ ಪರಿಣಾಮವನ್ನು ಉಂಟುಮಾಡಿದೆ. ಬಹಳ ಉತ್ತಮವಾಗಿ ಅನುವಾದಗೊಂಡು ಕನ್ನಡಕ್ಕೆ ಬಂದಿರುವ ‘ಭಾರತ ಪಥ’ ಕೃತಿಯನ್ನು ಅರವಿಂದ್ ಇಂಡಿಯಾ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.
ಇಂಗ್ಲಿಷಿನಿಂದ ಅಥವಾ ಬೇರಾವುದೇ ಭಾಷೆಯಿಂದ ಕನ್ನಡಕ್ಕೆ ಬರುವ ಸಾಹಿತ್ಯ ಪ್ರಕಾರಗಳಲ್ಲಿ ನಮಗೆ ಹೆಚ್ಚಾಗಿ ಕಾಣುವುದು ಜೀವನಚರಿತ್ರೆ/ಆತ್ಮಕತೆಗಳು, ಕಾದಂಬರಿಗಳು ಅಥವಾ ಕಥೆಗಳು. ವೈಚಾರಿಕ ಸಾಹಿತ್ಯ ರಚನೆಗಳೂ ಬರುವುದುಂಟು. ನಾಟಕ, ಕವನ ಮುಂತಾದ ಪ್ರಕಾರಗಳೂ ತುಸು ಕಡಮೆಯಾದರೂ ಬರುವುದುಂಟು. ಅಂತಾರಾಷ್ಟ್ರೀಯ ಸಂಬಂಧ, ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದ ಮುಂತಾದ ವಿಷಯಗಳ ಕುರಿತ ಕೃತಿಗಳು ಭಾಷಾಂತರಗೊಂಡು ಬರುವುದು ಬಹಳ ಕಡಮೆ. ಇಂತಹ ವಿಷಯಗಳಿಗೆ ಸಂಬಂಧಿಸಿದ ಸ್ವತಂತ್ರ ಬರಹಗಳು ಕನ್ನಡದಲ್ಲಿ ಹೇಗೂ ಕಡಮೆಯೇ. ಈಚಿನ ವರ್ಷಗಳಲ್ಲಿ ಪ್ರೇಮಶೇಖರ, ಸುಧೀಂದ್ರ ಬುಧ್ಯ ಮುಂತಾದ ಕೆಲವೇ ಕೆಲವರ ಅಂಕಣಗಳ ಮೂಲಕ ಅಂತಾರಾಷ್ಟ್ರೀಯ ಸಂಬಂಧ ಅಥವಾ ಸಂಘರ್ಷಗಳ ಸಂಕೀರ್ಣತೆ ಹೇಗಿರುತ್ತದೆ ಎನ್ನುವ ಮಾಹಿತಿ ಸ್ವಲ್ಪಮಟ್ಟಿಗೆ ಕನ್ನಡದಲ್ಲಿ ಓದುಗರಿಗೆ ದೊರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜೈಶಂಕರ್ ಅವರ ಕೃತಿ ಭಾಷಾಂತರಗೊಂಡು ಕನ್ನಡದಲ್ಲಿ ಲಭ್ಯವಾಗಿರುವುದಕ್ಕೆ ಬಹಳ ಮಹತ್ತ್ವವಿದೆ.
ಜೈಶಂಕರ್ ಅವರು ಬೇರೆಬೇರೆ ಸಂಸ್ಥೆಗಳ ಆಶ್ರಯದಲ್ಲಿ ಮಾಡಿದ ಭಾಷಣಗಳು ಅಥವಾ ನೀಡಿದ ಉಪನ್ಯಾಸಗಳ ಬರಹರೂಪ ಈ ಸಂಕಲನದಲ್ಲಿದೆ. ಈ ಕೃತಿಗೆ ಕನ್ನಡದ ಪ್ರಸಿದ್ಧ ಅಂಕಣಕಾರರೂ ಕತೆಗಾರರೂ ಆದ ಪ್ರೇಮಶೇಖರ ಅವರು ಒಳ್ಳೆಯ ಮುನ್ನುಡಿಯನ್ನು ಬರೆದಿದ್ದಾರೆ. ಅವಧ್ ಸಂಸ್ಥಾನ ಕಲಿಸಿದ ಪಾಠಗಳು, ಪಲ್ಲಟಗಳನ್ನು ಸೃಷ್ಟಿಸುವ ಕಲೆ, ರಾಜನೀತಿಯಲ್ಲಿ ಕೃಷ್ಣಮಾರ್ಗ, ಭಾರತದ ಹೆಗಲ ಮೇಲಿರುವ ಭಾರ, ಅಧಿಕಾರಿಗಳು ಮತ್ತು ಜನಸಾಮಾನ್ಯರು, ಚೀನಾದ ನಾಗಾಲೋಟಕ್ಕೆ ಭಾರತದ ಲಗಾಮು, ತಡವಾಗಿ ಅರಿವಾದ ಸದವಕಾಶ, ಭಾರತ ಮತ್ತು ಫೆಸಿಫಿಕ್: ಶಕ್ತಿಯ ಹೊಸ ಸಮೀಕರಣ ಎನ್ನುವ ಎಂಟು ಅಧ್ಯಾಯಗಳು ಅಥವಾ ಲೇಖನಗಳಲ್ಲದೆ ಕೊನೆಗೆ ಉಪಸಂಹಾರವಿದೆ. ಅಂದರೆ, ಇವುಗಳು ಬಿಡಿಬಿಡಿಯಾಗಿ ನೀಡಿರುವ ಉಪನ್ಯಾಸಗಳಾದರೂ ಅವುಗಳಲ್ಲಿ ಏಕಸೂತ್ರತೆಯಿದೆ. ಅಂತಾರಾಷ್ಟ್ರೀಯ ಆಗುಹೋಗುಗಳ ಹಿನ್ನೆಲೆಯಲ್ಲಿ ದೇಶಹಿತವನ್ನು ಕಾಯ್ದುಕೊಳ್ಳುವ ಬಗೆ ಹೇಗೆ ಎಂಬ ಚಿಂತನೆಯಿದೆ. ಎಲ್ಲ ಅಧ್ಯಾಯ/ಲೇಖನಗಳೂ ಭಾರತದ ವಿದೇಶನೀತಿ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಸುತ್ತಮುತ್ತಲೇ ಇರುವುದರಿಂದ ಅವುಗಳನ್ನು ಬಿಡಿಬಿಡಿಯಾಗಿ ನೋಡುವ ಬದಲು ಇಡೀ ಕೃತಿಯ ಮೂಲಕ ಜೈಶಂಕರ್ ಅವರು ವ್ಯಕ್ತಪಡಿಸುವ ಚಿಂತನೆ ಮತ್ತು ಆಶಯವನ್ನು ಸಮೀಕ್ಷಿಸುವುದು ಹೆಚ್ಚು ಉಪಯುಕ್ತವಾದ ಕ್ರಮವಾದೀತು.
ಆಧುನಿಕ ಜಗತ್ತಿನಲ್ಲಿ ಪ್ರತಿಯೊಂದು ದೇಶವೂ ತನ್ನ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯವಹರಿಸುತ್ತಿರುವಾಗ ಭಾರತ ಏನು ಮಾಡಬೇಕು ಎನ್ನುವುದನ್ನು ಹೇಳುವುದು ಮುಖ್ಯವಾಗಿ ಈ ಕೃತಿಯಲ್ಲಿ ಜೈಶಂಕರ್ ಅವರ ಉದ್ದೇಶವಾಗಿ ಕಾಣುತ್ತದೆ.
೧೯೪೭ರಿಂದ ಮೊದಲುಗೊಂಡು ಮುಖ್ಯವಾಗಿ ಆರು ಹಂತಗಳಲ್ಲಿ ನಮ್ಮ ದೇಶದ ವಿದೇಶಾಂಗ ನೀತಿ ಬೆಳೆದು ಬಂತು ಎಂದು ಜೈಶಂಕರ್ ಗುರುತಿಸುತ್ತಾರೆ (ಪು. ೧೨೨). ಮೊದಲನೆಯದು ೧೯೪೭ರಿಂದ ೧೯೬೨ರ ವರೆಗಿನ ‘ಅಲಿಪ್ತ ಯುಗ’. ಎರಡನೆಯದು ೧೯೬೨ರಿಂದ ೧೯೭೧ರ ವರೆಗಿನ ‘ವಾಸ್ತವಿಕತೆ ಮತ್ತು ಪುನಶ್ಚೇತನ’ದ ಅವಧಿ. ಮೂರನೆಯದು ೧೯೭೧ರಿಂದ ೧೯೯೧ರ ವರೆಗಿನದು. ಈ ಅವಧಿಯು ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶವನ್ನು ರಚಿಸಿದಲ್ಲಿಂದ ಆರಂಭವಾಗಿ ಶ್ರೀಲಂಕಾದಲ್ಲಿ ಶಾಂತಿಪಾಲನಾ ಪಡೆಯನ್ನು ನಿಯೋಜಿಸುವ ದುಸ್ಸಾಹಸದಲ್ಲಿ ಕೊನೆಗೊಂಡಿತು ಎಂದು ಜೈಶಂಕರ್ ಹೇಳುತ್ತಾರೆ. ಅನಂತರದ ನಾಲ್ಕನೆಯದು ಭಾರತವು ತನ್ನ ಒಲವು ನಿಲವುಗಳನ್ನು ಕ್ರಾಂತಿಕಾರಿಯಾಗಿ ಬದಲಿಸಿಕೊಳ್ಳಲು ಇಂಬು ನೀಡಿದ ಹಂತ. ಇಪ್ಪತ್ತನೆಯ ಶತಮಾನದ ಕೊನೆಯ ಹೊತ್ತಿಗೆ ಅಥವಾ ಹೊಸ ಸಹಸ್ರಮಾನದ ಉದಯದ ಹೊತ್ತಿಗೆ ನಮ್ಮ ವಿದೇಶಾಂಗ ನೀತಿಯ ಐದನೆಯ ಹಂತ ಆರಂಭವಾಯಿತು. ಈ ಹಂತದಲ್ಲಿ ಜಗತ್ತಿನಲ್ಲಿ ಭಾರತವು ಸಮತೋಲಿತ ಶಕ್ತಿಯ ಸ್ಥಾನಮಾನವನ್ನು ಮತ್ತು ಹೆಚ್ಚಿನ ಪ್ರಸ್ತುತತೆಯನ್ನು ಪಡೆಯಲಾರಂಭಿಸಿತು. ಸುಮಾರು ೨೦೧೪ರ ನಂತರದ ಆರನೆಯ ಹಂತದಲ್ಲಿ ಭಾರತವು ಜಾಗತಿಕಮಟ್ಟದಲ್ಲಿ ಗುರುತರ ಹೊಣೆಗಾರಿಕೆಗಳಿಗೆ ಹೆಗಲು ಕೊಡುವ ಸಾಮರ್ಥ್ಯವನ್ನು ಹೊಂದಿರುವುದನ್ನು ಜೈಶಂಕರ್ ಹೇಳುತ್ತಾರೆ.
ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯಾಗಿ ಮತ್ತು ನಂತರ ರಾಯಭಾರಿಯಾಗಿದ್ದುದರಿಂದ ಜೈಶಂಕರ್ ಅವರು ಮೂರನೆಯ ಹಂತದಿಂದ ತೊಡಗಿ ನಂತರದ ಹಂತಗಳ ಬಗ್ಗೆ ನೇರ ಅನುಭವವನ್ನು ಹೊಂದಿದವರು. ಹೀಗಾಗಿ ಈ ಎಲ್ಲ ಹಂತಗಳಲ್ಲಿ ಒಟ್ಟಾರೆ ಜಾಗತಿಕವಾಗಿ ಮತ್ತು ನಿರ್ದಿಷ್ಟವಾಗಿ ಭಾರತದ ಹಿತದೃಷ್ಟಿಯಿಂದ ಆದ ಒಳಿತುಕೆಡುಕುಗಳ ಬಗ್ಗೆಯೂ ಅವರಿಗೆ ಅರಿವಿದೆ. ಸದ್ಯ ಅವರು ಭಾರತೀಯ ಜನತಾ ಪಕ್ಷದಿಂದ ಸಚಿವರಾಗಿದ್ದರೂ ಪಕ್ಷಪಾತರಹಿತ ದೃಷ್ಟಿಯಿಂದಲೇ ಅವರ ವಿವೇಚನೆ ಸಾಗಿರುವುದು ಈ ಕೃತಿಯಲ್ಲಿ ಕಾಣುತ್ತದೆ.
ವಿದೇಶಾಂಗ ನೀತಿಯಲ್ಲಿ ಅಷ್ಟೇ ಅಲ್ಲ ಒಟ್ಟಾರೆಯಾಗಿ ಭಾರತದ ದೃಷ್ಟಿಧೋರಣೆಗಳಲ್ಲಿ ಇದ್ದ ಕೊರತೆಗಳೇನು; ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರೂ ಈ ದೇಶವು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲದಿರುವುದು ಯಾಕೆ? – ಇಂತಹ ಪ್ರಶ್ನೆಗಳನ್ನು ಕೇಳಿಕೊಂಡು ಲೇಖಕರು ಆತ್ಮಾವಲೋಕನ ಮಾಡುತ್ತಾರೆ. ಬಹಳ ಸಲ ನಾವು ೧೯೪೭ರಲ್ಲಿ ದೇಶ ಹೇಗೆ ಬಡತನದಲ್ಲಿತ್ತು, ಅನಂತರದ ವರ್ಷಗಳಲ್ಲಿ ನೆಹರೂ ಅವರು ಹೇಗೆ ದೇಶವನ್ನು ಬೆಳೆಸಿದರು ಎಂದೆಲ್ಲ ಉತ್ಸಾಹದಿಂದ ಹೊಗಳುವುದನ್ನು ಕಾಣುತ್ತೇವೆ. ನಾವು ನಮ್ಮ ಈಗಿನ ಸ್ಥಿತಿಯನ್ನು ೧೯೪೭ರ ಸ್ಥಿತಿಯ ಜೊತೆಗೆ ಹೋಲಿಸಬೇಕಾದುದಲ್ಲ; ಬದಲಾಗಿ ಆ ಕಾಲದಲ್ಲಿ ನಮ್ಮಷ್ಟೇ ಕಷ್ಟದಲ್ಲಿ ಇದ್ದ ದೇಶಗಳು ಈಗ ಹೇಗಾಗಿವೆ ಎಂಬುದನ್ನು ನೋಡಿ ಅಂತಹ ದೇಶಗಳ ಜೊತೆಗೆ ಹೋಲಿಸಿಕೊಂಡರೆ ನಿಜವಾದ ಮೌಲ್ಯಮಾಪನ ಆದಂತಾಗುತ್ತದೆ. ದೇಶಕ್ಕಾಗಿ ಸ್ವಂತ ಸಂಪತ್ತನ್ನು ತ್ಯಾಗ ಮಾಡುವವರು, ಜೈಲಿಗೆ ಹೋಗುವವರೇ ಹೆಚ್ಚಿದ್ದ ಸ್ವಾತಂತ್ರ್ಯಪೂರ್ವದ ವಾತಾವರಣ ತೊಲಗಿ ರಾಜಕಾರಣವೆಂದರೆ ಭ್ರಷ್ಟತೆ ಎಂದಾದುದರ ಹೊಣೆಯನ್ನು ಯಾರು ಹೊರಬೇಕು ಎನ್ನುವ ಪ್ರಶ್ನೆಯನ್ನೂ ಕೇಳಿಕೊಂಡಾಗ ಮೌಲ್ಯಮಾಪನ ಮತ್ತಷ್ಟು ನ್ಯಾಯಯುತವಾದೀತು. ಪ್ರಗತಿಯನ್ನು ಮೌಲ್ಯಮಾಪನ ಮಾಡಬೇಕಾದುದು ಹೇಗೆಂಬ ಸ್ಪಷ್ಟ ಕಲ್ಪನೆ ಜೈಶಂಕರ್ ಅವರಿಗಿದೆ. ಹೀಗಾಗಿಯೇ ಚೀನಾದೊಂದಿಗೋ ಆಗ್ನೇಯ ಏಷ್ಯಾದೊಂದಿಗೋ ಇಟ್ಟು ನೋಡಿದರೆ ನಾವು ಹಿಂದಿರುವುದು ಗೊತ್ತಾಗುತ್ತದೆ ಎಂದು ಅವರು ಹೇಳುತ್ತಾರೆ (ಪು. ೧೨೯).
ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ಭಾರತವು ತಾನು ಹೊಂದಿರಬೇಕಾಗಿದ್ದ ಸ್ಥಾನವನ್ನು ಹೊಂದಲು ಸಾಧ್ಯವಾಗದೆ ಇರಲು ಕೆಲವು ಐತಿಹಾಸಿಕ ಕಾರಣಗಳನ್ನು ಜೈಶಂಕರ್ ಗುರುತಿಸುತ್ತಾರೆ. ಈ ಬಗ್ಗೆ ‘ಡಿಪ್ಲೊಮ್ಯಾಟ್’ ಆಗಿದ್ದ ವ್ಯಕ್ತಿಗೆ ಸಹಜವಾದ ಮೆದುವಾದ ಮತ್ತು ‘ಡಿಪ್ಲೊಮ್ಯಾಟಿಕ್’ ಆದ ಮಾತುಗಳಲ್ಲೇ ಜೈಶಂಕರ್ ಹೇಳುತ್ತಾರಾದರೂ ಅವುಗಳು ಐತಿಹಾಸಿಕ ಪ್ರಮಾದಗಳೇ ಹೌದು. ಪ್ರೇಮಶೇಖರ ಅವರು ಈ ಕೃತಿಯ ಮುನ್ನುಡಿಯಲ್ಲಿ ಜೈಶಂಕರ್ ಗುರುತಿಸಿರುವ ಅಂತಹ ಮೂರು ಮುಖ್ಯವಾದ ಐತಿಹಾಸಿಕ ಹೊರೆಗಳನ್ನು ಒತ್ತು ಕೊಟ್ಟು ಉಲ್ಲೇಖಿಸಿದ್ದಾರೆ. ಇಂತಹ ವಿಷಯಗಳ ಬಗ್ಗೆ ಪ್ರೇಮಶೇಖರರು ಕನ್ನಡದಲ್ಲಿ ಆಗೀಗ ಬರೆದವರೂ ಹೌದು. ಐತಿಹಾಸಿಕ ಹೊರೆ ಅಥವಾ ಪ್ರಮಾದಗಳಲ್ಲಿ ಮೊದಲನೆಯದು, ಸ್ವತಂತ್ರಗೊಂಡ ಮೊದಮೊದಲ ದಶಕಗಳಲ್ಲಿ ಚೀನಾವನ್ನು ಮತ್ತು ಪಾಕಿಸ್ತಾನದ ಜೊತೆಗಿನ ಅದರ ಸಂಬಂಧದ ಸಾಧ್ಯತೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಹೋದುದು. ಯಾವುದೇ ದೇಶದ ಜೊತೆಗೆ ಸಂಘರ್ಷವಿದ್ದಾಗ ಅಥವಾ ಸಂಬಂಧ ಬೆಳೆಸುವಾಗ ಆ ದೇಶವನ್ನು ಸರಿಯಾಗಿ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಪಾಕಿಸ್ತಾನ ಮತ್ತು ಚೀನಾದ ವಿಚಾರದಲ್ಲಿ ಅದಾಗಲಿಲ್ಲ. ಎರಡನೆಯದು ಅಣ್ವಸ್ತ್ರ ಸಾಮರ್ಥ್ಯವನ್ನು ಪಡೆದು ಅದನ್ನು ಹೇಳಿಕೊಳ್ಳಲು ಹಿಂಜರಿದುದು. ಮೂರನೆಯದು, ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳುವಲ್ಲಿ ಸಮಾಜವಾದಿ ಆರ್ಥಿಕತೆಯ ನೆಪದಲ್ಲಿ ತುಂಬಾ ತಡ ಮಾಡಿದುದು. ಮಿಲಿಟರಿ ಶಕ್ತಿ ಮತ್ತು ಆರ್ಥಿಕತೆ – ಇವು ಒಂದರೊಡನೊಂದು ಸೇರಿ ಅಂತಾರಾಷ್ಟ್ರೀಯ ಪ್ರಭಾವ ನಿರ್ಧಾರವಾಗುವ ಇಂದಿನ ಸಂಕೀರ್ಣ ಜಗತ್ತಿನಲ್ಲಿ ಈ ಮೇಲಿನ ಪ್ರಮಾದಗಳು ಉಂಟುಮಾಡಿದ ಹಾನಿ ಎಷ್ಟು ಎಂದು ಊಹಿಸಬಹುದು.
ಇಸ್ಲಾಂ ಆಡಳಿತವಿರುವಲ್ಲಿ ಕಮ್ಯೂನಿಸಂ ಇಲ್ಲ; ಕಮ್ಯೂನಿಸ್ಟ್ ಚೀನಾದಲ್ಲಿ ಇಸ್ಲಾಮನ್ನು ತಲೆಯೆತ್ತಲು ಬಿಡುವುದಿಲ್ಲ. ಹೀಗಿದ್ದರೂ ಪಾಕಿಸ್ತಾನ ಮತ್ತು ಚೀನಾ ನಡುವೆ ಸ್ನೇಹವಿದೆ. ಈ ಸ್ನೇಹದ ಮೂಲ ಭಾರತವಿರೋಧಿ ಮನೋಭಾವವೇ ಆಗಿದೆ. ಜೈಶಂಕರ್ ಹೇಳುವಂತೆ, ಚೀನಾದ ಬೆಳವಣಿಗೆ ಮತ್ತು ಇಸ್ಲಾಂ ಒಂದು ರಾಜಕೀಯ ಶಕ್ತಿಯಾಗಿ ಬೆಳೆದುದ್ದನ್ನು ಅರ್ಥ ಮಾಡಿಕೊಳ್ಳುವಲ್ಲಿ ಪಶ್ಚಿಮ ಜಗತ್ತು ಕೂಡ ಎಡವಿತು ಮತ್ತು ಅದರಿಂದ ಪಶ್ಚಿಮದ ದೇಶಗಳಿಗೂ ಹಿನ್ನಡೆಯಾಯಿತು (ಪು. ೧೮೪). ಚೀನಾ ಪಾಕಿಸ್ತಾನಗಳ ಅಸಹಜ ದಾಂಪತ್ಯದ ಬಗ್ಗೆ ಅವರು ಚೆನ್ನಾಗಿಯೇ ಬರೆದಿದ್ದಾರೆ (ಪು. ೨೦೬ ೨೦೭). ಹಾಗೆ ನೋಡಿದರೆ ಇಂಥ ಬೆಳವಣಿಗೆಗಳನ್ನು ಸರಿಯಾದ ರೀತಿಯಲ್ಲಿ ಗ್ರಹಿಸುವಲ್ಲಿ ಭಾರತ ವಿಫಲವಾಗಲು ಒಂದು ಕಾರಣ ಅದು ಪಶ್ಚಿಮಮುಖಿಯಾಗಿದ್ದುದಾದರೆ ಇನ್ನೊಂದು ಕಾರಣ ಭಾರತದ ಪ್ರಭಾವೀ ಬುದ್ಧಿಜೀವಿಗಳ ವಲಯ ಕೂಡ ಏಕಕಾಲದಲ್ಲಿಯೇ ಎಡಪಂಥೀಯ ಮತ್ತು ಇಸ್ಲಾಂಪರ ಎಂಬಂತೆ ಇದ್ದುದು. ದೇಶದೊಳಗೇ ಇರುವ ದೇಶವಿರೋಧಿ ಚಿಂತನೆ ನಿಜವಾದ ಸವಾಲು. ಹೀಗಾಗಿ ನಮ್ಮ ದೇಶದಲ್ಲಿಯೇ ಇರುವ ಭಾರತವಿರೋಧೀ ಶಕ್ತಿಗಳು ತಲೆಯೆತ್ತದಂತೆ ನೋಡಿಕೊಳ್ಳಬೇಕಾದ ಅಗತ್ಯವನ್ನೂ ಲೇಖಕರು ಹೇಳುತ್ತಾರೆ (ಪು. ೨೨೧).
ಮೇಲಿನ ತರ್ಕಕ್ಕೆ ಪೂರಕವಾದ ಒಂದಂಶವನ್ನು ಗಮನಿಸಿ: ಜೈಶಂಕರ್ ಸರಿಯಾಗಿಯೇ ಹೇಳುವಂತೆ, “ಭಾರತದಲ್ಲಿ ಯಾವ ಪಕ್ಷದ ಸರಕಾರವೇ ಅಧಿಕಾರಕ್ಕೆ ಬರಲಿ, ನಮ್ಮ ಎಲ್ಲ ಸರಕಾರಗಳೂ ಜಪಾನಿನೊಂದಿಗೆ ಹೆಜ್ಜೆಹಾಕಲು ಭಾರೀ ಆಸಕ್ತಿ ತೋರಿಸುತ್ತವೆ. ನಮ್ಮಲ್ಲಿನ ರಾಜ್ಯ ಸರಕಾರಗಳ ಪಾಲಿಗೂ ಈ ಮಾತು ಒಪ್ಪುತ್ತದೆ…” (ಪು. ೨೩೭). ಬಹುಶಃ ಇದಕ್ಕೆ ಒಂದು ಕಾರಣವೇನೆಂದರೆ ಜಪಾನಿನಲ್ಲಿ ಇಸ್ಲಾಂ ಮತ್ತು ಕಮ್ಯೂನಿಸ್ಟ್ ಹಿತಾಸಕ್ತಿ ಇಲ್ಲದೆ ಇರುವುದು. ಅಂದರೆ ಭಾರತದ ಬುದ್ಧಿಜೀವಿ ವಲಯಕ್ಕೆ ಅಲ್ಲಿ ತನ್ನದೇ ಆದ ಹಿತಾಸಕ್ತಿಯಿಲ್ಲ. ಮತ್ತೊಂದು ಕಾರಣವೇನೆಂದರೆ ಜಪಾನಿನೊಂದಿಗೆ ನಾವು ಗಡಿ ಹಂಚಿಕೊಳ್ಳುತ್ತಿಲ್ಲ.
ರಾಜನೀತಿ ಅಥವಾ ತನ್ನ ದೇಶದ ಪ್ರಜೆಗಳ ಹಿತದೃಷ್ಟಿಯಿಂದ ಆಡಳಿತಗಾರರು ಹೇಗೆ ಅಗತ್ಯವಿರುವಲ್ಲಿ ತಂತ್ರಗಾರಿಕೆಯನ್ನು ಮಾಡಬೇಕಾಗುತ್ತದೆ ಎಂಬುದನ್ನು ಲೇಖಕರು ಈ ಕೃತಿಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ. “ಇಂದಿನ ಜಗತ್ತು ಸ್ವಹಿತಾಸಕ್ತಿಗಳ ನಿರ್ಲಜ್ಜ ಆಡುಂಬೊಲವಾಗಿದ್ದು, ಇಲ್ಲಿ ಎಲ್ಲ ದೇಶಗಳೂ ತಮ್ಮ ಸ್ವಾರ್ಥಕ್ಕಾಗಿ ಏನು ಬೇಕೋ ಅದನ್ನು ಮಾಡುತ್ತಿವೆ” (ಪು. ೬೧). ಇಂತಹ ಜಗತ್ತಿನಲ್ಲಿ ನಾವು ವಿದೇಶಾಂಗ ವ್ಯವಹಾರಗಳ ವಿಚಾರದಲ್ಲಿ ಕೇವಲ ಚರ್ಚೆಯನ್ನು ಮಾಡುತ್ತ ಕೂರುವುದು ಸಾಧ್ಯವಿಲ್ಲ; ಬದಲಿಗೆ, ನಮ್ಮ ಆಯ್ಕೆಗಳೇನೆಂದು ತೀರ್ಮಾನಿಸಲೇಬೇಕಾಗುತ್ತದೆ ಎಂದು ಜೈಶಂಕರ್ ಹೇಳುತ್ತಾರೆ (ಪು. ೪೮). ಪುಕ್ಕಲುತನವನ್ನೇ ಕಾರ್ಯನೀತಿಯೆಂದೂ ಯಾವುದೇ ನಿರ್ಧಾರವನ್ನೂ ತೆಗೆದುಕೊಳ್ಳದೆ ಕಾಲಹರಣ ಮಾಡುವುದನ್ನೇ ವಿವೇಕವೆಂದೂ ಭಾವಿಸಿಕೊಳ್ಳುವ ಅಪಾಯಕಾರೀ ಪ್ರವೃತ್ತಿಯಿಂದ ಹೊರಬರುವ ಅಗತ್ಯವನ್ನೂ ಅವರು ಹೇಳುತ್ತಾರೆ (ಪು. ೪೬). ಈ ಮಾತು ಅಲಿಪ್ತ ನೀತಿಯಲ್ಲಿರುವ ಸಮಸ್ಯೆಯನ್ನೂ ಸೂಕ್ಷö್ಮವಾಗಿ ತಿಳಿಸುತ್ತದೆ.
ವಿದೇಶಾಂಗ ನೀತಿಯನ್ನು ರೂಪಿಸಿಕೊಳ್ಳುವಾಗ ಬೇರೆ ದೇಶಗಳನ್ನು ತಿಳಿದುಕೊಳ್ಳುವಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಮುಖ್ಯವಾಗಿ ನಮ್ಮನ್ನು ನಾವು ತಿಳಿದುಕೊಳ್ಳುವುದು ಅಗತ್ಯ. ಹೀಗಿರುವಲ್ಲಿ ನಮ್ಮ ದೇಶದ ನೀತಿನಿರೂಪಣೆಯನ್ನು ಪ್ರಭಾವಿಸುವ ಸ್ಥಾನದಲ್ಲಿರುವವರು ಭಾರತೀಯ ಪರಂಪರೆಯನ್ನು ಅಥವಾ ಭಾರತೀಯ ಸ್ವತ್ವವನ್ನು ಎಷ್ಟು ತಿಳಿದುಕೊಂಡಿದ್ದಾರೆ ಎಂಬ ಪ್ರಶ್ನೆಯೂ ಬರುತ್ತದೆ. ಎಷ್ಟೋ ವಿಷಯಗಳನ್ನು ಮೊದಲೇ ಗ್ರಹಿಸುವಲ್ಲಿ ‘ಲ್ಯೂಟಿನ್ ಡೆಲ್ಲಿ’ಯಲ್ಲಿ ಕೂತಿರುವ ಅಧಿಕಾರಿಗಳಿಗಿಂತ ಜನಸಾಮಾನ್ಯರೇ ಉತ್ತಮ ಎಂದು ಜೈಶಂಕರ್ ಹೇಳುವ ಮಾತುಗಳು (ಪು. ೧೬೫) ಈ ಹಿನ್ನೆಲೆಯಲ್ಲಿಯೂ ಪ್ರಸ್ತುತವೇ ಆಗುತ್ತವೆ. ನೀತಿನಿರೂಪಕರು ಈಗ ಸಾಮಾನ್ಯ ಜನರ ಅಭಿಪ್ರಾಯಗಳನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂಬುದನ್ನು ಅವರು ಗುರುತಿಸುತ್ತಾರೆ. ಹಿಂದೆ ಈಗಿನಂತೆ ಮುಕ್ತ ಮಾಧ್ಯಮಗಳು ಇರಲಿಲ್ಲ. ಕೆಲವು ನಿರ್ದಿಷ್ಟ ಪತ್ರಿಕೆೆಗಳ ಮತ್ತು ನಿರ್ದಿಷ್ಟ ವಿಚಾರಧಾರೆಗಳ ಏಕಸ್ವಾಮ್ಯ ಇದ್ದ ಕಾಲದಲ್ಲಿ ಜನಸಾಮಾನ್ಯರಿಗೆ ಪೂರ್ತಿ ಸತ್ಯ ಗೊತ್ತಾಗುತ್ತಿರಲಿಲ್ಲ; ಗೊತ್ತಿದ್ದುದನ್ನೂ ಹೇಳಲು ಮಾಧ್ಯಮಗಳಿರಲಿಲ್ಲ.
ಈಗೀಗ ಸಾಂಸ್ಕೃತಿಕ ಅಸ್ಮಿತೆ ಮತ್ತು ರಾಷ್ಟ್ರೀಯವಾದವು ಜಗತ್ತಿನ ಅನೇಕ ದೇಶಗಳಲ್ಲಿ ಮುನ್ನೆಲೆಗೆ ಬರುತ್ತಿರುವುದನ್ನು ಲೇಖಕರು ಗುರುತಿಸುತ್ತಾರೆ. ಭಾರತದಲ್ಲಿ ಸ್ವಾತಂತ್ರ್ಯ ಬಂದ ಹೊತ್ತಿನಲ್ಲಿಯೇ ರಾಷ್ಟ್ರೀಯ ಪ್ರಜ್ಞೆಗೆ ಮಹತ್ತ್ವ ಸಿಗಬೇಕಿತ್ತು; ಆದರೆ ರಾಷ್ಟ್ರೀಯ ಭಾವವನ್ನು ಮತ್ತು ಭಾರತೀಯ ಸಾಂಸ್ಕೃತಿಕ ಅಸ್ಮಿತೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ನಿರಸನಗೊಳಿಸುವ ಕಥನಗಳನ್ನು ಸ್ವಾತಂತ್ರ್ಯೋತ್ತರ ಕಾಲದ ಬುದ್ಧಿಜೀವಿಗಳು ಕಟ್ಟಿದರು. ಆಗಿನ ಪ್ರಭುತ್ವ ಮತ್ತು ಬುದ್ಧಿಜೀವಿವರ್ಗ ಅಥವಾ ಜ್ಞಾನಾಧಿಕಾರಕೇಂದ್ರಗಳು ಪರಸ್ಪರ ಒಂದನ್ನೊಂದು ಪ್ರಭಾವಿಸುತ್ತಿದ್ದುದು ಕೂಡ ನಿಜ. ನೆಹರೂವಿಯನ್ ಸೆಕ್ಯುಲರಿಸಂನಿಂದ ಪ್ರಭಾವಿತವಾದ ದೃಷ್ಟಿಕೋನ ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಭಾರತದ ಸ್ವಂತಿಕೆ, ಸ್ವಾಭಿಮಾನ ಮತ್ತು ಸ್ವಪ್ರಜ್ಞೆಗೆ ಧಕ್ಕೆಯುಂಟುಮಾಡಿತ್ತು. ಭಾರತೀಯ ಇತಿಹಾಸದ ನಿರೂಪಣೆಯಲ್ಲಿರುವ ದಾಸ್ಯ ಮನೋಭಾವವನ್ನೂ ಜೈಶಂಕರ್ ಗುರುತಿಸಿ ಹೇಳಿದ್ದಾರೆ (ಪು. ೧೭೬ ೧೭೭). ಇಂತಹ ನಿರೂಪಣೆಯು ದೇಶವೊಂದು ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳುವಲ್ಲಿ ದೊಡ್ಡ ತೊಡಕನ್ನು ಉಂಟುಮಾಡುತ್ತದೆ.
ಒಂದು ದೇಶವು ಅಂತಾರಾಷ್ಟ್ರೀಯವಾದಿಯಾಗಿ ವಿಶ್ವಹಿತವನ್ನು ಸಾಧಿಸಬೇಕಾದರೆ ಅದಕ್ಕಿಂತ ಮೊದಲು ರಾಷ್ಟçವಾದದ ಮೂಲಕ ಬಲಸಂಚಯನ ಮಾಡಿಕೊಳ್ಳುವುದು ಅನಿವಾರ್ಯ. ಜೈಶಂಕರ್ ಹೇಳುವಂತೆ, “ರಾಷ್ಟ್ರೀಯವಾದಿ ದೃಷ್ಟಿಕೋನವುಳ್ಳ ವಿದೇಶಾಂಗ ನೀತಿಯು ನಮ್ಮದಾಗಿದ್ದರೆ, ನಾವು ಉಳಿದ ಜಗತ್ತನ್ನು ಹೆಚ್ಚು ವಿಶ್ವಾಸದಿಂದಲೂ ವಾಸ್ತವತೆಯ ಅರಿವಿನೊಂದಿಗೆ ಮುಖಾಮುಖಿಯಾಗುವ ಸಾಮರ್ಥ್ಯ ಬರಲಿದೆ.” (ಪು. ೧೭೩).
ಯಾವುದೇ ದೇಶದ ವಿದೇಶಾಂಗ ನೀತಿಯು ನಿರ್ವಾತದಲ್ಲಿ ರೂಪಗೊಳ್ಳುವುದಿಲ್ಲ. ಅದು ನಿರ್ದಿಷ್ಟ ಸಂದರ್ಭಗಳಿಂದ ರೂಪಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿಯೇ “ಅಮೆರಿಕ ಮತ್ತು ಚೀನಾ ಮಾತ್ರವಲ್ಲದೆ ಮುಂಚೂಣಿಯಲ್ಲಿರುವ ರಾಷ್ಟçಗಳೆಲ್ಲವೂ ಮುಂಬರುವ ದಿನಗಳಲ್ಲಿ ಹೆಚ್ಚುಹೆಚ್ಚು ರಾಷ್ಟ್ರೀಯವಾದಿಗಳಾಗಲಿವೆ” ಎಂದು ಜೈಶಂಕರ್ ಹೇಳುತ್ತಾರೆ. ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ವಿವಿಧ ದೇಶಗಳು ಸಾಮೂಹಿಕ ಹಿತ ಮತ್ತು ಸ್ವಹಿತದ ನಡುವೆ ತೂಗುಯ್ಯಾಲೆಯಾಡಿದ ಬಗೆಯನ್ನು ಲೇಖಕರು ನೆನಪು ಮಾಡುತ್ತಾರೆ (ಪು. ೨೯೦ ೨೯೧).
ಯಾವುದೇ ದೇಶ ನಿರ್ವಾತದಲ್ಲಿರುವುದಿಲ್ಲ ಎಂದು ಈಗಾಗಲೇ ಸೂಚಿಸಿದೆಯಷ್ಟೆ. ಅಂದರೆ ಅಂತಾರಾಷ್ಟ್ರೀಯ ವಿದ್ಯಮಾನಗಳು ನಮ್ಮ ಮೇಲೆ ಪ್ರಭಾವ ಬೀರಿಯೇ ಬೀರುತ್ತವೆ. ಕುರುಕ್ಷೇತ್ರ ಯುದ್ಧವು ಒಂದು ಕುಟುಂಬದೊಳಗಿನ ಕಲಹ, ಅಂದರೆ ಕೌರವ ಪಾಂಡವರ ಮಧ್ಯೆ ನಡೆದುದು ಹೌದಾದರೂ ಭರತವರ್ಷದ ಎಲ್ಲ ದೇಶಗಳೂ ಅದರಲ್ಲಿ ಒಂದಲ್ಲ ಒಂದು ಪಕ್ಷವನ್ನು ವಹಿಸಬೇಕಾಯಿತಲ್ಲವೆ? ಯುದ್ಧ, ಮೇಲಾಟ, ಸ್ಪರ್ಧೆ – ಇವೆಲ್ಲ ನಾಗರಿಕ ಜಗತ್ತಿನ ಭಾಗವೇ ಆಗಿರುವಾಗ ನಾಗರಿಕರಾಗಿ ನಾವು ತೆರಬೇಕಾದ ಅನಿವಾರ್ಯ ಬೆಲೆ ಅದು.
ನಾವು ನಮ್ಮ ದೇಶದ ಹಿತಾಸಕ್ತಿಯನ್ನು ನೋಡಿಕೊಳ್ಳಬೇಕಾದರೆ ನಮ್ಮದೇ ಆದ ಭಾಷೆಯನ್ನು, ನಮಗೆ ಅನುಕೂಲಕರವಾದ ನುಡಿಗಟ್ಟುಗಳನ್ನು ಬಳಸುವುದು ಕೂಡ ಅಗತ್ಯ ಎನ್ನುವ ಕಡೆ ಜೈಶಂಕರ್ ನಮ್ಮ ಗಮನವನ್ನು ಸೆಳೆಯುತ್ತಾರೆ. ಅಂತೆಯೇ ಭಾರತೀಯ ಪರಂಪರೆಯ ಜ್ಞಾನವನ್ನು ಕೂಡ ನಾವು ನೀತಿನಿರೂಪಣೆಯಲ್ಲಿ ಬಳಸಿಕೊಳ್ಳಬೇಕು ಎನ್ನುವ ದೃಷ್ಟಿಕೋನವನ್ನು ಸತರ್ಕವಾಗಿಯೇ ಮಂಡಿಸಿದ್ದಾರೆ. ಅವರು ಹೇಳುವಂತೆ, “ಈ ಸಂದರ್ಭದಲ್ಲಿ ನಾವು ಅಲ್ಲೋಲಕಲ್ಲೋಲದಿಂದ ಕೂಡಿರುವ ಈ ಜಗತ್ತನ್ನು ಎದುರಿಸಲು ನಮ್ಮದೇ ಆದ ಸಂಪ್ರದಾಯ ಅಥವಾ ಪದ್ಧತಿಗಳನ್ನು ನೆಚ್ಚಿಕೊಳ್ಳಬೇಕು. ಈಗ ಹೆಚ್ಚಾಗಿ ‘ಭಾರತ’ವಾಗಿರುವ ಇಂಡಿಯಾದಲ್ಲಿ ಇದು ಖಂಡಿತವಾಗಿಯೂ ಸಾಧ್ಯ.” (ಪು. ೧೧೩).
ನಾವು ಕ್ಷಾತ್ರಶಕ್ತಿಯನ್ನು ಮರೆಯಬಾರದು ಎಂಬ ಎಚ್ಚರವನ್ನು ನೀಡುವ ಜೈಶಂಕರ್ ಕೌಟಿಲ್ಯನ ರಾಜಕೀಯ ಪರಂಪರೆಯ ಬಲವಿದ್ದೂ ಅಂಥದ್ದಕ್ಕೆಲ್ಲ ಕೊಡಬೇಕಾದಷ್ಟು ಬೆಲೆ ಕೊಡದೆ ಇದ್ದುದನ್ನು ಗುರುತಿಸಿ ಹೇಳುತ್ತಾರೆ. ನಾವು ನಮ್ಮ ಕ್ಷಾತ್ರಶಕ್ತಿಯನ್ನು ಉದಾಸೀನ ಮಾಡಿದರೆ ಕೊನೆಗೆ ದಂಡ ತೆರಬೇಕಾಗುತ್ತದೆ ಎನ್ನುವುದನ್ನು ನೆನಪಿಸುತ್ತಾರೆ (ಪು. ೩೭).
ಈ ಹಿನ್ನೆಲೆಯಲ್ಲಿ ಮಹಾಭಾರತವನ್ನು ಅವರು ತಮ್ಮ ವಿಶ್ಲೇಷಣೆಗೆ ಬಳಸಿಕೊಳ್ಳುವುದನ್ನು ಕಾಣುತ್ತೇವೆ. ಅವರ ಪ್ರಕಾರ, “ಮಹಾಭಾರತವು ರಾಜನೀತಿಯ ಬಗ್ಗೆ ಇರುವ ಭಾರತೀಯ ಚಿಂತನೆಗಳನ್ನು ಅತ್ಯಂತ ಸಮರ್ಥವಾಗಿ ಹಿಡಿದಿಟ್ಟಿರುವ ಕೃತಿ ಎನ್ನುವುದು ಸಂಶಯಾತೀತ” (ಪು. ೮೭). ಇದು ಸತ್ಯವಾದ ಮಾತು; ಯಾಕೆಂದರೆ ಮಹಾಭಾರತವು ಕೇವಲ ‘ಧರ್ಮಶಾಸ್ತ್ರ’ದ ಪ್ರಕಾರ ಇರುವ ನಿಯಮಗಳನ್ನು ಪಾಲಿಸುವ ಬಗ್ಗೆ ಹೇಳುವುದಿಲ್ಲ. ಬದಲಾಗಿ ವ್ಯಾವಹಾರಿಕ ಜಗತ್ತಿನಲ್ಲಿ, ಸಂದಿಗ್ಧ ಸನ್ನಿವೇಶಗಳಲ್ಲಿ ಸ್ವಧರ್ಮಪಾಲನೆಗಾಗಿ ಅಥವಾ ಬಹುಜನರ ಹಿತದ ದೃಷ್ಟಿಯಿಂದ ಯಾವೆಲ್ಲ ರೀತಿಯಲ್ಲಿ ನಿಯಮಗಳನ್ನು ಮುರಿಯಬೇಕಾಗುತ್ತದೆ ಎನ್ನುವುದನ್ನೂ ಹೇಳುತ್ತದೆ. ಯಾಕೆಂದರೆ ರಾಜನಾದವನು ಅಥವಾ ಆಧುನಿಕ ಕಾಲದಲ್ಲಿ ಆಳುವ ನಾಯಕರು ನೇರ ನಡೆಯಲ್ಲಿ ನಡೆದು ವೈಯಕ್ತಿಕ ಅಧ್ಯಾತ್ಮಸಾಧನೆಯನ್ನು ಮಾಡಬೇಕಾದವರಲ್ಲ; ಬದಲಾಗಿ ತಮ್ಮ ಪ್ರಜೆಗಳ ಹಿತ ಕಾಯುವ ಗುರುತರ ಜವಾಬ್ದಾರಿ ಅವರಿಗಿದೆ. ರಾಜನೀತಿಯಲ್ಲಿ, ಅದರಲ್ಲೂ ವಿದೇಶಾಂಗ ನೀತಿಯಲ್ಲಿ ಕಾರ್ಯತಂತ್ರಗಳು ಎಷ್ಟು ಅನಿವಾರ್ಯ ಎನ್ನುವುದನ್ನು ಇಲ್ಲಿರುವ ‘ರಾಜನೀತಿಯಲ್ಲಿ ಕೃಷ್ಣಮಾರ್ಗ’ ಎನ್ನುವ ಬಹುಮುಖ್ಯವಾದ ಲೇಖನ ತೋರಿಸಿಕೊಡುತ್ತದೆ. ಹಾಗೆ ನೋಡಿದರೆ ಈ ಸಂಕಲನದ ಇತರ ಲೇಖನಗಳ ಸಾರವೆಲ್ಲ ಈ ಲೇಖನದಲ್ಲಿದೆ. ಇದು ಧರ್ಮರಾಯನ ಕಾಲವಲ್ಲ! ಈ ಕಾಲವೆಂದೇನು, ಧರ್ಮರಾಯನಿದ್ದ ಕಾಲವೂ ನೇರ ಮಾರ್ಗದಲ್ಲಿ ಧರ್ಮವು ಗೆಲ್ಲುವ ಕಾಲವಾಗಿರಲಿಲ್ಲ! ಹೀಗಾಗಿ ಕೃಷ್ಣನ ರಾಜನೀತಿ ಹೇಗೆ ಇಂದಿಗೂ ಪ್ರಸ್ತುತವಾಗಿದೆ ಎನ್ನುವುದನ್ನು ಲೇಖಕರು ಇಲ್ಲಿ ಮಹಾಭಾರತದ ಅನೇಕ ಘಟನೆಗಳನ್ನು ಉದಾಹರಣೆಯಾಗಿಟ್ಟುಕೊಂಡು ತೋರಿಸಿದ್ದಾರೆ.
ತನ್ನ ಹಿತದ ದೃಷ್ಟಿಯಿಂದ ಅಗತ್ಯವಾಗಿ ಮಾಡಬೇಕಾದುದನ್ನು ಕೂಡ ಮಾಡಲು ಹಿಂದೇಟು ಹಾಕುವ ದೇಶವನ್ನು ಸಮಕಾಲೀನ ನುಡಿಗಟ್ಟಿನಲ್ಲಿ ‘ಸಾಫ್ಟ್ ಸ್ಟೇಟ್’ ಎಂದು ಕರೆಯುತ್ತಾರೆ ಎಂದು ಹೇಳುವ ಮೂಲಕ ಭಾರತ ಅಂತಹ ದೇಶವಾಗಿದ್ದುದನ್ನು ಲೇಖಕರು ಸೂಚಿಸುತ್ತಾರೆ. ಇದಕ್ಕೆ ಉದಾಹರಣೆಯಾಗಿ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಾವು ಸರಿಯಾದ ಕಲ್ಪನೆ ಇಲ್ಲದೆ ಮತ್ತು ಸವಾಲುಗಳಿಗೆ ಹೆದರಿ, ಹಿನ್ನಡೆ ಅನುಭವಿಸಿದ ಬಗ್ಗೆ ಹೇಳುತ್ತಾರೆ (ಪು. ೮೯). ತನ್ನ ಕರ್ತವ್ಯ ಏನೆಂದು ಮನದಟ್ಟಾದ ಬಳಿಕ ಅರ್ಜುನ ನಿಜವಾದ ವೀರನಂತೆ ಹೋರಾಡಿದ ರೀತಿಯಲ್ಲಿ ಸ್ವಸಮರ್ಥನೆಯ ಪ್ರಜ್ಞೆ ದೇಶಕ್ಕೂ ತುಂಬಾ ಮುಖ್ಯ ಎನ್ನುತ್ತಾರೆ. ಭಯೋತ್ಪಾದನೆಯ ವಿಚಾರದಲ್ಲಿ ಚರ್ಚೆ/ಸಂವಾದ ಎಂಬ ಛದ್ಮವೇಷದಲ್ಲಿ ದೌರ್ಬಲ್ಯವನ್ನು ಮುಚ್ಚುವ ಯತ್ನ ಮಾಡುವುದನ್ನು ಜೈಶಂಕರ್ ಟೀಕಿಸುತ್ತಾರೆ.
ಸುದೀರ್ಘ ಅವಧಿಯ ಪರಕೀಯ ಆಳ್ವಿಕೆಯ ಕಾರಣದಿಂದಲೋ ಏನೋ, ಜಗತ್ತಿನ ಇತರ ಅನೇಕ ದೇಶಗಳಿಗೆ ಹೋಲಿಸಿದರೆ ಭಾರತ ಹಿಂಜರಿಕೆಯ ಸ್ವಭಾವವನ್ನು ಹೊಂದಿದ್ದುದರಿAದ ಹಾನಿಯಾಗಿರುವುದನ್ನು ಜೈಶಂಕರ್ ಗುರುತಿಸುತ್ತಾರೆ. ಅವರು ನೆನಪಿಸುವಂತೆ, ತೀರ ಇತ್ತೀಚಿನವರೆಗೂ ಪಶ್ಚಿಮದ ದೇಶಗಳೇ ಜಗತ್ತಿನ ನೀತಿ ನಿಯಮಗಳನ್ನೂ ಮೌಲ್ಯಗಳನ್ನೂ ನಿರ್ದೇಶಿಸುತ್ತಿದ್ದವು (ಪು. ೮೫). ಅಷ್ಟೇಕೆ ಇಂದಿಗೂ ಜಗತ್ತು ಬಹುತೇಕ ಒಪ್ಪಿರುವುದು ಅಬ್ರಹಾಮಿಕ್ ರಿಲಿಜನ್ನುಗಳ ಮೌಲ್ಯಗಳನ್ನೇ! ಹೀಗಾಗಿಯೇ ಸಹಜವಾದ ಬಹುತ್ವವನ್ನು ಹೊಂದಿದ ಭಾರತ ಅಂತಹ ರಿಲಿಜನ್ನುಗಳಿಗೆ ಕೊಡಬೇಕಾದಷ್ಟು ಪ್ರಾಧಾನ್ಯ ಕೊಡುತ್ತಿಲ್ಲ ಮತ್ತು ಏಕರೂಪೀಕರಣಗೊಳ್ಳುತ್ತಿದೆ ಎನ್ನುವ ಸುಳ್ಳುಸುಳ್ಳಾದ ಆತಂಕ ಪಶ್ಚಿಮ ದೇಶಗಳಲ್ಲಿದೆ! ಭಾರತವು ಬಹುದೀರ್ಘವಾದ ವೈವಿಧ್ಯ(ಬಹುತ್ವ) ಮತ್ತು ಸಹಬಾಳ್ವೆಯ ಇತಿಹಾಸ ಹೊಂದಿರುವುದನ್ನು ಜೈಶಂಕರ್ ಕೂಡ ನೆನಪಿಸುತ್ತಾರೆ. ರಿಲಿಜನ್ನುಗಳಿಗೆ ಮತ್ತು ರಿಲಿಜಿಯಸ್ ಮೂಲದ ಚಿಂತನೆಗೆ ಸಹಜವಾದ ಪ್ರತ್ಯೇಕತಾದೃಷ್ಟಿ (ಎಕ್ಸ್ಕ್ಲೂಸಿವ್) ಭಾರತದ್ದಲ್ಲ. ಆಧುನಿಕ ಪಶ್ಚಿಮ ದೇಶಗಳಿಗೆ ಪರಸ್ಪರ ವಿರುದ್ಧವೆಂದು ಕಾಣಬಹುದಾದ ಸಂಗತಿಗಳು ಭಾರತೀಯ ದೃಷ್ಟಿಯಲ್ಲಿ ವಿರುದ್ಧವೆನಿಸಬೇಕಾಗಿಲ್ಲ. ಈ ಸೂಕ್ಷö್ಮವನ್ನು ಜೈಶಂಕರ್ ಅಭಿವ್ಯಕ್ತಿಸುವುದು ಹೀಗೆ – “ಬೇರೆ ದೇಶಗಳು ಯಾವ ಕಲ್ಪನೆಗಳನ್ನೆಲ್ಲ ವಿರೋಧಾತ್ಮಕವೆಂದು ಭಾವಿಸಿವೆಯೋ ಅವುಗಳ ನಡುವೆ ಸಮನ್ವಯ ಮೂಡಿಸಲು ಬಾರತವು ಏಕಾಂಗಿಯಾಗಿ ಪ್ರಯತ್ನಿಸಬೇಕಾಗಿದೆ. ಒಟ್ಟಿನಲ್ಲಿ, ರಾಷ್ಟ್ರೀಯವಾದಿ ಭಾರತವು ಜಗತ್ತಿಗೆ ಹೆಚ್ಚಿನ ಕೊಡುಗೆಯನ್ನು ಕೊಡಲು ಬಯಸಿದೆ” (ಪು. ೮೬ ೮೭).
ಅಂತಾರಾಷ್ಟ್ರೀಯ ರಾಜನೀತಿಯಲ್ಲಿ ಎಲ್ಲ ಸಂದರ್ಭಗಳಲ್ಲೂ ನಿಯಮಗಳಿಗೆ ಅಂಟಿಕೊಂಡು ಅಥವಾ ಶೇಕಡಾ ನೂರರಷ್ಟು ಪಾರದರ್ಶಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವುದು ಲೇಖಕರ ಅನುಭವದ ಮಾತು ಅಷ್ಟೇ ಅಲ್ಲ. ಅದು ಮಹಾಭಾರತದಂತಹ ದಾರ್ಶನಿಕ ಪಠ್ಯಗಳು ಕಲಿಸಿದ ಪಾಠವೂ ಹೌದು. ಗದಾಯುದ್ಧದಲ್ಲಿ ಸೊಂಟದ ಕೆಳಭಾಗಕ್ಕೆ ಗದಾಪ್ರಹಾರ ಮಾಡಿ ದುರ್ಯೋಧನನನ್ನು ಕೊಲ್ಲುವುದು ಭೀಮನಿಗೆ ಅನಿವಾರ್ಯವಾಯಿತು. ಯಾವುದು ಧರ್ಮರಕ್ಷಣೆಯ ಕಾರ್ಯ ಎಂದು ಕೃಷ್ಣ ಪರಿಗಣಿಸಿದ್ದನೋ ಅಂತಹ ಉನ್ನತ ಉದ್ದೇಶಕ್ಕಾಗಿ ನಿಯಮವೊಂದನ್ನು ಮೀರುವುದು ಕೂಡ ಕಾರ್ಯತಂತ್ರದ ಭಾಗವೆಂದೇ ಕೃಷ್ಣನೂ ಪರಿಗಣಿಸಿದ. ಹೀಗೆ ನಿಯಮ ಉಲ್ಲಂಘಿಸುವುದರಿಂದ ತನಗೆ ಎಲ್ಲಿ ಅಪಕೀರ್ತಿ ಬರುವುದೋ ಎಂದು ಚಿಂತಿಸುತ್ತ ಕೂರುವುದು ದೇಶದ ಹಿತ ಕಾಯಬೇಕಾದ ನಿಜವಾದ ನಾಯಕನ ಲಕ್ಷಣವಲ್ಲ. ಭಯೋತ್ಪಾದಕ ಸಂಘಟನೆಗಳ ಬಗ್ಗೆ ಮತ್ತು ಅವುಗಳ ವಿಧ್ವಂಸಕ ಕೃತ್ಯಗಳನ್ನು ಬೆಂಬಲಿಸುವ ಪಾಕಿಸ್ತಾನದಂತಹ ಶಕ್ತಿಗಳ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸುತ್ತ ಲೇಖಕರು ಹೀಗೆ ಹೇಳುತ್ತಾರೆ – “ಸ್ವತಃ ಸಂಯಮವಿಲ್ಲದೆ ನಡೆದುಕೊಳ್ಳುವ ಶಕ್ತಿಗಳು ಇಂತಹ ಸಂದರ್ಭಗಳಲ್ಲಿ ಎದುರಾಳಿಗಳು ಮಾತ್ರ ನೀತಿನಿಯಮಗಳನ್ನು ಪಾಲಿಸಬೇಕು ಎನ್ನುವ ತಂತ್ರಗಾರಿಕೆಯನ್ನು ಅನುಸರಿಸುತ್ತವೆ” (ಪು. ೯೫ ೯೬).
ಭಾರತದ ಪಾಲಿಗೆ ಅನಾಹುತಕಾರಿಯಾದ, ಭಯೋತ್ಪಾದಕರ ಮೇಲೆ ಪ್ರತಿದಾಳಿ ಮಾಡಬಾರದು ಎನ್ನುವ ವಾದವನ್ನು ನಮ್ಮಲ್ಲೇ ಎಷ್ಟೋ ಜನರು ಮುಂದಿಡುವ ಬಗ್ಗೆ ಲೇಖಕರಿಗೆ ವಿಷಾದವಿದೆ (ಪು. ೯೮). ಅಂದರೆ, ಬಾರತದ ದುರದೃಷ್ಟವೆಂದರೆ ಕಾಶ್ಮೀರದ ಪ್ರತ್ಯೇಕತಾವಾದಿ ಭಯೋತ್ಪಾದಕರಿಗೆ ನೈತಿಕ ಬೆಂಬಲ ನೀಡುವ ಲೇಖಕರು ಭಾರತದಲ್ಲಿಯೇ ಇದ್ದಾರೆ; ಪಾಕಿಸ್ತಾನವನ್ನು ದೋಷಮುಕ್ತಗೊಳಿಸುವ ಬುದ್ಧಿಜೀವಿಗಳಿದ್ದಾರೆ. ಹೀಗಾಗಿ ಭಯೋತ್ಪಾದನೆಯನ್ನು ಎದುರಿಸುವಲ್ಲಿ ಸರಕಾರದ ಮುಂದಿರುವ ಸವಾಲು ಮತ್ತಷ್ಟು ಕಠಿಣವಾಗುತ್ತದೆ. ಅಂತಾರಾಷ್ಟ್ರೀಯ ಬಾಂಧವ್ಯಗಳ ಕ್ಷೇತ್ರದಲ್ಲಿ ನೀತಿ ನಿಯಮಗಳ ಉಲ್ಲಂಘನೆ ಅಪರೂಪವೇನೂ ಅಲ್ಲ. ಅಂತಿಮವಾಗಿ ‘ಬಲಶಾಲಿಯೇ ಸರಿ’ ಎನ್ನುವುದು ಸದ್ಯದ ಜಗತ್ತಿನಲ್ಲಿ ಕಾಣುವ ಸತ್ಯ. ರಷ್ಯಾ ಉಕ್ರೇನ್ ಯುದ್ಧ ಸುದೀರ್ಘವಾಗಿ ನಡೆಯುತ್ತಿದೆ. ಅದನ್ನು ನಿಲ್ಲಿಸುವಲ್ಲಿ ಯಶಸ್ವಿಯಾಯಿತೇ? ಇರಾಕ್, ಅಫಘಾನಿಸ್ತಾನಗಳ ಮೇಲೆ ಆಕ್ರಮಣ ಮಾಡಿದ ಅಮೆರಿಕದ ವಿರುದ್ಧ ಮಾನವ ಹಕ್ಕುಗಳ ಸಂಘಟನೆಗಳು ಏನು ಮಾಡಲು ಸಾಧ್ಯವಾಯಿತು? ಹೀಗಿರುವಲ್ಲಿ ಸ್ವಭಾವತಃ ಸಮನ್ವಯ, ಸಾಮರಸ್ಯದ ಪ್ರತಿಪಾದನೆ ಮಾಡುವ ನಮ್ಮ ದೇಶವು ತನ್ನ ಸದುದ್ದೇಶವನ್ನು ಈಡೇರಿಸಿಕೊಳ್ಳಬೇಕಾದರೂ ದೃಢತೆಯನ್ನು ತೋರಿಸುವ ಅಗತ್ಯ ಇದೆ. ಇದನ್ನು ಕೃಷ್ಣನ ತಂತ್ರಗಾರಿಕೆಯ ಹಿನ್ನೆಲೆಯಲ್ಲಿ ಜೈಶಂಕರ್ ಓದುಗರಿಗೆ ಮನದಟ್ಟು ಮಾಡುತ್ತಾರೆ.
ಹಿಂದೆಲ್ಲ ಭಾರತವು ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿತ್ತು; ಸ್ಪಷ್ಟ ನಿಲವನ್ನು ಹೊಂದಲು ಹಿಂಜರಿಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಭಾರತವು ತನ್ನ ನಿಲವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತಪಡಿಸುವಾಗ ಹೆಚ್ಚಿನ ದೃಢತೆಯನ್ನು ತೋರಿಸುತ್ತಿದೆ. ಅದನ್ನು ಜೈಶಂಕರ್ ಹೀಗೆ ದಾಖಲಿಸುತ್ತಾರೆ. “ಇಂದು ಅಗತ್ಯಬಿದ್ದರೆ ನಾವು ಪಶ್ಚಿಮದ ರಾಷ್ಟçಗಳ ಜೊತೆ ಕೂತು ವಿಶ್ವಾಸದಿಂದ ಮಾತುಕತೆಯನ್ನೂ ನಡೆಸಬಲ್ಲೆವು; ಹಾಗೆಯೆ ಭಾರತದ ಹಿತಾಸಕ್ತಿಯನ್ನು ಕಾಪಾಡಲು ಇವುಗಳೊಂದಿಗೆ ನಾವು ಭಿನ್ನಾಭಿಪ್ರಾಯವನ್ನೂ ತಾಳಬಲ್ಲೆವು…. ಅಷ್ಟೇ ಅಲ್ಲ; ಪರಿಸ್ಥಿತಿಯನ್ನು ಆಧರಿಸಿ ನಾವು ನಮ್ಮದೇ ಆದ ಹಾದಿಯನ್ನು ತುಳಿಯಲು ಹಿಂಜರಿಯುತ್ತಿಲ್ಲ.” (ಪು. ೧೯೧). ಆಫ್ರಿಕಾದತ್ತ ಗಮನಹರಿಸಿದುದು, ದಕ್ಷಿಣ ರಾಷ್ಟ್ರಗಳ ನಡುವೆ ಬಾಂಧವ್ಯ ಹೆಚ್ಚಿಸುವ ಯತ್ನ ಇವೆಲ್ಲ ಭಾರತವು ಹೊಸ ಆತ್ಮವಿಶ್ವಾಸವನ್ನು ಕ್ರೋಢೀಕರಿಸಿಕೊಂಡುದರ ಫಲ.
ಹಿಂದೆಯೇ ಸೂಚಿಸಿದಂತೆ ‘ಭಾರತ ಪಥ’ ಕೃತಿಯಲ್ಲಿರುವ ಲೇಖನಗಳಲ್ಲಿ ದೇಶದ ವಿದೇಶಾಂಗ ನೀತಿಯ ಬಗ್ಗೆ ಸ್ವವಿಮರ್ಶೆ ಕೂಡ ಇದೆ. ನಮ್ಮ ಸಾಧನೆಯನ್ನು ಉತ್ಪ್ರೇಕ್ಷೆ ಮಾಡಿ ಹೇಳಿಕೊಳ್ಳಬಾರದು ಎನ್ನುವ ಎಚ್ಚರ ಕೂಡ ಇದೆ. ಚೀನಾದೊಂದಿಗೆ ಯುದ್ಧದಲ್ಲಷ್ಟೇ ಅಲ್ಲ, ಅನಂತರದ ದಶಕಗಳಲ್ಲಿ ಅಂತಾರಾಷ್ಟ್ರೀಯ ವ್ಯಾಪಾರ, ವಾಣಿಜ್ಯದಲ್ಲಿ ಚೀನಾಕ್ಕೆ ಸ್ಪರ್ಧೆ ಕೊಡಲಾಗದೆ ಹೋದುದನ್ನೂ ಲೇಖಕರು ದಾಖಲಿಸಿದ್ದಾರೆ. ಹಾಗೆಯೇ ಉದಾರೀಕರಣದ ಹೊಸ್ತಿಲಲ್ಲಿ ಭಾರತ ಎಡವಿದ ಬಗ್ಗೆ ವಿವರಗಳಿವೆ (ಪು. ೨೧೪ ೨೧೫).
ವಿದೇಶಾಂಗ ನೀತಿಯಲ್ಲಿ ಗಡಿಯಾರವನ್ನು ಹಿಂದಕ್ಕೆ ತಿರುಗಿಸಲು ಸಾಧ್ಯವಿಲ್ಲ. ಹೀಗಾಗಿ ಮುಂದೆ ನಾವು ಏನು ಮಾಡಬೇಕು ಎನ್ನುವುದೇ ಮುಖ್ಯ. ಈ ಬಗ್ಗೆಯೂ ಜೈಶಂಕರ್ ಅವರ ಸಲಹೆಗಳಿವೆ. ಲೆಕ್ಕಾಚಾರದೊಂದಿಗೆ ಸವಾಲುಗಳನ್ನು ಎದುರುಹಾಕಿಕೊಳ್ಳಲು ಹಿಂಜರಿಯದಿರುವುದು, ಯಾವುದೋ ಆದರ್ಶದ ಹಿಂದೆ ಹೋಗದೆ ವ್ಯಾವಹಾರಿಕತೆ ಮತ್ತು ವಾಸ್ತವದ ನೆಲೆಯಿಂದ ಕಾರ್ಯತಂತ್ರವನ್ನು ರೂಪಿಸುವುದು ಇಂತಹ ಕ್ರಮಗಳನ್ನು ಅವರು ಶಿಫಾರಸು ಮಾಡುತ್ತಾರೆ. ಅವರ ಪ್ರಕಾರ ಭಾರತ ದೇಶ ಈಗ ಏನು ಮಾಡಬೇಕೆಂದರೆ, “ಅಮೆರಿಕದ ಜೊತೆ ಸಕ್ರಿಯವಾಗಿರಬೇಕು; ಚೀನಾವನ್ನು ನಿಭಾಯಿಸಬೇಕು….” (ಪು. ೩೯). ಅದೇರೀತಿ ಯೂರೋಪ್, ರಷ್ಯಾ, ಜಪಾನ್ ಇವುಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಿ ನಮ್ಮ ವಿದೇಶಾಂಗ ನೀತಿಯಲ್ಲಿ ಸೂಕ್ತ ರೀತಿಯಲ್ಲಿ ಒಳಗೊಳಿಸಿಕೊಳ್ಳಬೇಕು ಎನ್ನುತ್ತಾರೆ. ಅಲ್ಲದೆ, “ನಮ್ಮ ತೆಕ್ಕೆಗೆ ಮತ್ತಷ್ಟು ಅಕ್ಕಪಕ್ಕದ ರಾಷ್ಟçಗಳನ್ನು ತರಬೇಕು; ಮತ್ತು ನಮ್ಮನ್ನು ಲಾಗಾಯ್ತಿನಿಂದಲೂ ಬೆಂಬಲಿಸುತ್ತ ಬಂದಿರುವ ಸಾಂಪ್ರದಾಯಿಕ ಕ್ಷೇತ್ರಗಳನ್ನು ವಿಸ್ತರಿಸಿಕೊಳ್ಳಬೇಕು.” (ಪು. ೩೯).
* * *
ಅನುವಾದಿತ ಕೃತಿಯನ್ನು ಪರಿಚಯಿಸುವಾಗ ಎದುರಾಗುವ ದೊಡ್ಡ ಪ್ರಶ್ನೆ ಏನೆಂದರೆ ಮೂಲಕೃತಿಯ ಬಗ್ಗೆ ಒತ್ತುಕೊಡಬೇಕೆ ಅಥವಾ ಅನುವಾದದ ಬಗ್ಗೆ ಒತ್ತುಕೊಟ್ಟು ಹೇಳಬೇಕೆ ಎನ್ನುವುದು. ಯೋಚಿಸಿದಾಗ ಇದಕ್ಕೊಂದು ಪರಿಹಾರವೂ ಹೊಳೆಯುತ್ತದೆ. ಕಾವ್ಯ, ಕತೆ, ಕಾದಂಬರಿ, ನಾಟಕ ಇಂತಹ ಕಲ್ಪನಾಪ್ರಧಾನ ಸಾಹಿತ್ಯವಾದರೆ ಅನುವಾದವು ಮೂಲದಷ್ಟೇ ಅಥವಾ ಕೆಲವೊಮ್ಮೆ ಮೂಲಕ್ಕಿಂತಲೂ ಸೊಗಸಾಗಿ ಬರಬಹುದು. ಆದ್ದರಿಂದ ಅಂತಹ ಕಲ್ಪನಾಪ್ರಧಾನ ರಚನೆಗಳ ಬಗ್ಗೆ ಬರೆಯುವಾಗ ಅನುವಾದಕ್ಕೆ ಹೆಚ್ಚು ಒತ್ತು ನೀಡಬಹುದು. ವೈಚಾರಿಕ ಕೃತಿಗಳು ಅಥವಾ ‘ಭಾರತ ಪಥ’ದಂತಹ ಕೃತಿಯನ್ನು ಭಾಷಾಂತರ ಮಾಡುವಾಗ ಭಾಷಾಂತರಕಾರರಿಗೆ ಹೆಚ್ಚು ಸ್ವಾತಂತ್ರ್ಯ’ ಇರುವುದಿಲ್ಲ; ಅಥವಾ ತಮ್ಮ ಭಾಷೆಯ ಕಲ್ಪನೆಯ ಮೂಲಕ ಅದನ್ನು ಇನ್ನಷ್ಟು ಉತ್ತಮಗೊಳಿಸುವ ಅವಕಾಶವೂ ಇರುವುದಿಲ್ಲ. ಹೀಗಾಗಿ ಅನುವಾದ ಚೆನ್ನಾಗಿದೆ ಎಂದಷ್ಟೇ ಹೇಳಿ ಮೂಲ ಕೃತಿಯ ವಿಶ್ಲೇಷಣೆಯತ್ತ ಹೋಗಬೇಕಾಗುತ್ತದೆ. ಹಾಗಲ್ಲದೆ ಅನುವಾದದ ಬಗ್ಗೆ ಹೇಳಬೇಕೆಂದರೆ ಮೂಲದಲ್ಲಿ ಹೀಗಿದೆ, ಅನುವಾದದಲ್ಲಿ ಹೀಗೆ ಬಂದಿದೆ ಎಂದು ಪಟ್ಟಿ ಮಾಡಿ ಹೇಳುವ ಕೆಲಸವಾಗುತ್ತದೆ ಅಷ್ಟೆ.
ಒಂದು ಅನುವಾದಿತ ಕೃತಿಯಾಗಿ ‘ಭಾರತ ಪಥ’ದ ಬಗ್ಗೆ ಎರಡು ಅಂಶಗಳನ್ನು ಹೇಳಬೇಕು. ಮೊದಲನೆಯದಾಗಿ, ಆರಂಭದಲ್ಲಿಯೇ ಹೇಳಿದಂತೆ ಕನ್ನಡದಲ್ಲಿ ಹೆಚ್ಚು ಸಾಹಿತ್ಯವಿಲ್ಲದ ವಿದೇಶಾಂಗ ನೀತಿಗೆ ಸಂಬಂಧಿಸಿದ ಕೃತಿಯನ್ನು ಅನುವಾದಕರು ಕನ್ನಡಕ್ಕೆ ತಂದಿದ್ದಾರೆ. ಎರಡನೆಯದಾಗಿ, ಓದುಗರ ಅನುಕೂಲಕ್ಕಾಗಿ ಹಲವು ಕಡೆಗಳಲ್ಲಿ ಅನುವಾದಕರು ಅಡಿಟಿಪ್ಪಣಿಗಳನ್ನು ನೀಡಿದ್ದಾರೆ. ಅಂದರೆ, ಕೇವಲ ಇಂಗ್ಲಿಷ್ ಕೃತಿಯನ್ನು ಎದುರಿಟ್ಟುಕೊಂಡು ವಾಕ್ಯವಾಕ್ಯಗಳನ್ನು ಅನುವಾದಿಸುವ ಕೆಲಸವಷ್ಟೇ ಇಲ್ಲಿ ನಡೆದಿಲ್ಲ; ಈ ಅನುವಾದದ ಹಿನ್ನೆಲೆಯಲ್ಲಿ ಅಧ್ಯಯನ ಕೂಡ ಇದೆ. ಮುಖ್ಯವಾಗಿ ಈ ಎರಡು ಕಾರಣಗಳಿಗಾಗಿ ಕನ್ನಡದ ಓದುಗರು ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣರಿಗೆ ಕೃತಜ್ಞರಾಗಿರಬೇಕು.