ಕ್ರಿಪ್ಟೋಕರೆನ್ಸಿಗಳು ಎಲೆಕ್ಟ್ರಾನಿಕ್ ರೂಪದ ‘ಡಿಜಿಟಲ್’ ನಾಣ್ಯ. ಹಾಗಾಗಿ ಹ್ಯಾಕಿಂಗ್, ಪಾಸ್ವರ್ಡ್ ಕಳೆಯುವಿಕೆ ಇತ್ಯಾದಿಗಳಿಂದ ಉಂಟಾಗುವ ನಷ್ಟ ಮತ್ತು ಅಪಾಯಗಳಿಗೆ ಗುರಿಯಾಗುತ್ತಿವೆ. ಇದರ ವ್ಯವಹಾರವು ಮನಿಲಾಂಡರಿಂಗ್ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಇಂಬು ಕೊಡಬಹುದಾಗಿದೆ. ಮಾದಕದ್ರವ್ಯಗಳ ವ್ಯವಹಾರಗಳಲ್ಲಿ ಕ್ರಿಪ್ಟೋವನ್ನು ವಿನಿಮಯದ ರೂಪದಲ್ಲಿ ಬಳಸಲಾಗುತ್ತಿದೆ. ಬಂಡವಾಳ ಹೂಡಿಕೆ ವ್ಯವಹಾರಗಳು ಹಿಂಬಾಗಿಲ ಮೂಲಕ ನಡೆಯುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಇವುಗಳ ಹಿನ್ನೆಲೆಯಲ್ಲಿ ವಂಚಕರ ತಂಡಗಳು ಕ್ರಿಪ್ಟೋದ ವಿವಿಧ ಕರೆನ್ಸಿಗಳ ಮೇಲೆ ಗಮನಹರಿಸತೊಡಗಿದ್ದಾರೆ. ಅನೇಕ ರೀತಿಯ ಆಮಿಷಗಳನ್ನೊಡ್ಡಿ ಕ್ರಿಪ್ಟೋವನ್ನು ಹೂಡಿಕೆದಾರರಿಂದ ಕದಿಯುವುದು ಒಂದು ಮಾರ್ಗವಾದರೆ, ಹೊಸ ಹೆಸರಿನಲ್ಲಿ ಕ್ರಿಪ್ಟೋ ನಾಣ್ಯವೆಂದು ನಂಬಿಸಿ, ವಿನಿಮಯಕೇಂದ್ರಗಳನ್ನು ಸ್ಥಾಪಿಸಿ, ಹಣಮಾಡಿ ಕಣ್ಮರೆಯಾಗುವುದು ಇನ್ನೊಂದು ಮಾರ್ಗ. ವಿಶ್ವದಾದ್ಯಂತ ಅನೇಕ ಹಗರಣಗಳು ನಡೆದುಹೋಗಿವೆ ಮತ್ತು ನಡೆಯುತ್ತಲೇ ಇವೆ.
ದೀರ್ಘ ಇತಿಹಾಸವಿಲ್ಲದ ‘ಕ್ರಿಪ್ಟೋಕರೆನ್ಸಿ’ ಸರಿಸುಮಾರು ಹದಿನಾಲ್ಕು ವರ್ಷಗಳ ಹಿಂದಷ್ಟೇ ಜನ್ಮತಾಳಿತು. ಇದು ಸರಕು ಮತ್ತು ಸೇವೆಗಳಿಗಾಗಿ ಅಂತರ್ಜಾಲದ (ಆನ್ಲೈನ್) ಮೂಲಕ ಪಾವತಿ ಮಾಡಬಹುದಾದ ಡಿಜಿಟಲ್ ವಿನಿಮಯ ರೂಪವಾಗಿದೆ. ಕಂಪ್ಯೂಟರುಗಳಲ್ಲಿ ಹರಡಿರುವ ವಿಕೇಂದ್ರೀಕೃತ ತಂತ್ರಜ್ಞಾನದಿಂದ ಗೌಪ್ಯಲಿಪಿ (ಎನ್ಸ್ಕ್ರಿಪ್ಟ್)ಯಲ್ಲಿ ಕ್ರಿಪ್ಟೋ ರೂಪಗೊಳ್ಳುತ್ತದೆ. ನಿಜವಾದ ಹಣವನ್ನು ವಿನಿಮಯ ಮಾಡಿ ಕ್ರಿಪ್ಟೋ ಎನ್ನುವ ‘ಮೌಲ್ಯಯುಕ್ತ ಟೋಕನ್’ ಕೊಳ್ಳುವ ಕ್ರಿಯೆ ಇದಾಗಿದೆ. ಇದನ್ನು ‘ಡಿಜಿಟಲ್ ಆಸ್ತಿ’ ಎಂದೂ ಪರಿಭಾವಿಸಬಹುದಾಗಿದೆ. ‘ಕ್ರಿಪ್ಟೋ’ ಹುಟ್ಟು ಯಾವುದೇ ಒಂದು ನಿರ್ದಿಷ್ಟ ದೇಶ, ಸಂಸ್ಥೆ ಅಥವಾ ಗುಂಪಿನಿಂದ ಆಗಿರುವುದಿಲ್ಲ. ಕ್ರಿಪ್ಟೋದ ಮೌಲ್ಯವನ್ನು ನಿರ್ವಹಿಸುವ ಯಾವುದೇ ಕೇಂದ್ರೀಕೃತ ವ್ಯವಸ್ಥೆ ಇಲ್ಲದ ಕಾರಣ ಅದರ ಮೌಲ್ಯ ನಿರ್ಧಾರವು ಅಂತರ್ಜಾಲದ ಕ್ರಿಪ್ಟೋ ಬಳಕೆದಾರರಲ್ಲಿ ವ್ಯಾಪಕವಾಗಿ ಹರಡಿದೆ/ವಿತರಿಸಲಾಗಿದೆ.
ಇಂದಿನ ದಿನಗಳಲ್ಲಿ ‘ಕ್ರಿಪ್ಟೋ’ ಹೂಡಿಕೆಗಳು ಯುವಪೀಳಿಗೆಯ ಆಕರ್ಷಣೆಗಳಲ್ಲಿ ಒಂದಾಗಿದೆ. ವಿಶ್ವದಾದ್ಯಂತ ಜನರು ಕ್ರಿಪ್ಟೋ ವ್ಯವಹಾರಗಳಲ್ಲಿ ಆಸಕ್ತಿ ತೋರುತ್ತಿದ್ದಾರೆ. ವಹಿವಾಟಿಗೆ ಸಂಬಂಧಿಸಿದ ಪಾವತಿ ತ್ವರಿತವಾಗಿ ಮಾಡುವುದಕ್ಕಾಗಿ, ಬ್ಯಾಂಕುಗಳ ವಹಿವಾಟು ಶುಲ್ಕದ ಉಳಿತಾಯ ಮಾಡುವ ಉದ್ದೇಶಕ್ಕಾಗಿ ಅಥವಾ ವ್ಯವಹಾರ ಮಾಡುವವರು ತಮ್ಮ ಗೌಪ್ಯತೆ ಕಾಪಾಡಿಕೊಳ್ಳಲು ಕ್ರಿಪ್ಟೋಕರೆನ್ಸಿ ಬಳಸತೊಡಗಿರುವುದನ್ನು ಕಾಣಬಹುದು. ಅಧಿಕ ಲಾಭದ ದೃಷ್ಟಿಯಿಂದಲೂ ಕ್ರಿಪ್ಟೋದಲ್ಲಿ ಹೆಚ್ಚಿನ ಹೂಡಿಕೆಗಳಾಗುತ್ತಿವೆ.
ಕ್ರಿಪ್ಟೋ ಹೂಡಿಕೆಯ ಪ್ರಮಾಣ ಹೆಚ್ಚುತ್ತಿರುವಂತೆಯೆ, ವಂಚಕರ ಜಾಲಗಳು ಸಕ್ರಿಯವಾಗತೊಡಗಿದ್ದು ವಿಶ್ವದಾದ್ಯಂತ ಒಂದಲ್ಲ ಒಂದು ವಂಚನೆಯ ಪ್ರಕರಣಗಳು ಬೆಳಕಿಗೆ ಬರತೊಡಗಿವೆ.
‘ಕ್ರಿಪ್ಟೋ’ ಒಳನೋಟ
ಕ್ರಿಪ್ಟೋಕರೆನ್ಸಿಗಳು ‘ಬ್ಲಾಕ್ ಚೈನ್’ ಎಂಬ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತವೆ. ‘ಬ್ಲಾಕ್ ಚೈನ್’ ಎನ್ನುವುದು ವಿಕೇಂದ್ರೀಕೃತ ತಂತ್ರಜ್ಞಾನವಾಗಿದ್ದು, ವಹಿವಾಟುಗಳನ್ನು ನಿರ್ವಹಿಸುವ ಮತ್ತು ದಾಖಲಿಸುವ ಕ್ರಿಯೆಗಳು ಅನೇಕ ಕಂಪ್ಯೂಟರುಗಳಲ್ಲಿ ಹರಡಿರುತ್ತದೆ. ಈ ತಂತ್ರಜ್ಞಾನದ ವಿಕೇಂದ್ರೀಕರಣವೇ ಕ್ರಿಪ್ಟೋಕರೆನ್ಸಿಯ ಸುರಕ್ಷತೆ ಎಂದು ಭಾವಿಸಬಹುದು. ವಹಿವಾಟುಗಳು ‘ಬ್ಲಾಕ್ ಚೈನ್’ನಲ್ಲಿ ಪರಿಶೀಲಿಸಲ್ಪಟ್ಟು, ‘ಸಾರ್ವಜನಿಕ ಲೆಡ್ಜರ್’ನಲ್ಲಿ ನಮೂದಿಸಲ್ಪಡುತ್ತವೆ. ಇಲ್ಲಿ ವ್ಯಕ್ತಿಗಳ ಗುರುತನ್ನು ಗೌಪ್ಯವಾಗಿಡಲಾಗುತ್ತದೆ. ‘ಕೀ’ ಮತ್ತು ‘ಪಾಸ್ವರ್ಡ್’ಗಳಿಂದ ಖಾತೆದಾರರು ತಮ್ಮ ಖಾತೆಯನ್ನು ನಿರ್ವಹಿಸುತ್ತಾರೆ. ಕ್ರಿಪ್ಟೋಕರೆನ್ಸಿ ವಿಕೇಂದ್ರೀಕೃತವಾಗಿರುವುದರಿಂದ, ವಹಿವಾಟುಗಳನ್ನು ನಿಯಂತ್ರಿಸುವ, ನಿಯಮಗಳನ್ನು ಬದಲಾಯಿಸುವ ಮತ್ತು ‘ನೆಟ್ವರ್ಕ್’ಅನ್ನು ಮುಚ್ಚುವ ಯಾವುದೇ ಕೇಂದ್ರೀಯ ಸಂಸ್ಥೆ ಇರುವುದಿಲ್ಲ. ಕ್ರಿಪ್ಟೋಕರೆನ್ಸಿಯ ಮೌಲ್ಯೀಕರಣ, ವಿನಿಮಯ ಮತ್ತು ಅದರ ಸಂಬಂಧ ತೆರಬೇಕಾದ ಸಂಭಾವನೆ ಇತ್ಯಾದಿ ಚಟುವಟಿಕೆಗಳ ಸಂಸ್ಕರಣೆಗೆ ‘ಮೈನಿಂಗ್’ (ಗಣಿಗಾರಿಕೆ) ಎಂದು ಹೆಸರಿಸಲಾಗಿದೆ.
೨೦೦೯ರಲ್ಲಿ ಬಿಡುಗಡೆಯಾದ ‘ಬಿಟ್ಕಾಯಿನ್’ ಮೊದಲ ವಿಕೇಂದ್ರೀಕೃತ ಕ್ರಿಪ್ಟೋಕರೆನ್ಸಿಯೆನಿಸಿದೆ. ಇದು ಒಮ್ಮತದ ನೆಟ್ವರ್ಕ್ ಆಗಿದ್ದು ಪಾವತಿಗಳು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿರುತ್ತದೆ. ಬಿಟ್ಕಾಯಿನ್ ನಂತರ ಅನೇಕ ಹೆಸರಿನ ಕ್ರಿಪ್ಟೋಕರೆನ್ಸಿಗಳು ಚಾಲ್ತಿಗೆ ಬಂದಿವೆ. ಎಂಟು ಸಾವಿರಕ್ಕೂ ಹೆಚ್ಚು ಕ್ರಿಪ್ಟೋಕರೆನ್ಸಿಗಳು ಸಕ್ರಿಯವಾಗಿದ್ದು, ಅವುಗಳಲ್ಲಿ ಇಥರಿಯಮ್, ಎಕ್ಸ್ಆರ್ಪಿ, ಕಾರ್ಡಾನೊ, ಪೊಲ್ಕಾಡಾಟ್, ಪಾಲಿಗಾನ್, ಲೈಟ್ ಕಾಯಿನ್, ಸೊಲಾನ, ಟ್ರಾನ್ ಇತ್ಯಾದಿ ಪ್ರಮುಖವೆನಿಸಿವೆ.
ಸಾಮಾನ್ಯ ಹಣದಿಂದ ಮಾಡಲಾಗುವ ಎಲ್ಲ ವ್ಯವಹಾರಗಳಿಗೆ ಕ್ರಿಪ್ಟೋಕರೆನ್ಸಿಯನ್ನು ಬಳಸಬಹುದಾಗಿದೆ.
ಹೆಚ್ಚುತ್ತಿರುವ ಹೂಡಿಕೆದಾರರು
ಅಮೆರಿಕದಲ್ಲಿ ಅತಿ ಹೆಚ್ಚಿನ ಮೊತ್ತದ ಕ್ರಿಪ್ಟೋ ಹೂಡಿಕೆ ಇದ್ದು, ಮಾರ್ಚ್ ೨೦೨೪ರಲ್ಲಿ ಅಂದಾಜು ಏಳು ಕೋಟಿಗೂ ಹೆಚ್ಚು ಹೂಡಿಕೆದಾರರಿದ್ದಾರೆ ಎಂದು ಅಂದಾಜಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕ್ರಿಪ್ಟೋಕರೆನ್ಸಿಯ ಮೇಲೆ ಈ ಹಿಂದೆ ನಿಷೇಧ ಹೇರಿತ್ತು. ೨೦೨೦ರಲ್ಲಿ ಸುಪ್ರೀಂಕೋರ್ಟ್ ಅದನ್ನು ತೆರವು ಮಾಡಿದ ನಂತರ ದೇಶದಲ್ಲಿ ಕ್ರಿಪ್ಟೋ ಜನಪ್ರಿಯತೆ ಹೆಚ್ಚಾಗತೊಡಗಿತು. ಕೆಲವು ಸಂಸ್ಥೆಗಳ ವರದಿಗಳ ಪ್ರಕಾರ ಭಾರತದಲ್ಲಿ ೯.೫ ಕೋಟಿಗೂ ಅಧಿಕ ಮಂದಿ ‘ಕ್ರಿಪ್ಟೋ’ದಲ್ಲಿ ಹೂಡಿಕೆ ಮಾಡಿದ್ದಾರೆ.
ಕ್ರಿಪ್ಟೋ ಹಗರಣಗಳು
ಕ್ರಿಪ್ಟೋಕರೆನ್ಸಿಗಳು ಎಲೆಕ್ಟ್ರಾನಿಕ್ ರೂಪದ ‘ಡಿಜಿಟಲ್’ ನಾಣ್ಯ. ಹಾಗಾಗಿ ಹ್ಯಾಕಿಂಗ್, ಪಾಸ್ವರ್ಡ್ ಕಳೆಯುವಿಕೆ ಇತ್ಯಾದಿಗಳಿಂದ ಉಂಟಾಗುವ ನಷ್ಟ ಮತ್ತು ಅಪಾಯಗಳಿಗೆ ಗುರಿಯಾಗುತ್ತಿವೆ. ಇದರ ವ್ಯವಹಾರವು ಮನಿಲಾಂಡರಿಂಗ್ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಇಂಬು ಕೊಡಬಹುದಾಗಿದೆ. ಮಾದಕದ್ರವ್ಯಗಳ ವ್ಯವಹಾರಗಳಲ್ಲಿ ಕ್ರಿಪ್ಟೋವನ್ನು ವಿನಿಮಯದ ರೂಪದಲ್ಲಿ ಬಳಸಲಾಗುತ್ತಿದೆ. ಬಂಡವಾಳ ಹೂಡಿಕೆ ವ್ಯವಹಾರಗಳು ಹಿಂಬಾಗಿಲ ಮೂಲಕ ನಡೆಯುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಇವುಗಳ ಹಿನ್ನೆಲೆಯಲ್ಲಿ ವಂಚಕರ ತಂಡಗಳು ಕ್ರಿಪ್ಟೋದ ವಿವಿಧ ಕರೆನ್ಸಿಗಳ ಮೇಲೆ ಗಮನಹರಿಸತೊಡಗಿದ್ದಾರೆ. ಅನೇಕ ರೀತಿಯ ಆಮಿಷಗಳನ್ನೊಡ್ಡಿ ಕ್ರಿಪ್ಟೋವನ್ನು ಹೂಡಿಕೆದಾರರಿಂದ ಕದಿಯುವುದು ಒಂದು ಮಾರ್ಗವಾದರೆ, ಹೊಸ ಹೆಸರಿನಲ್ಲಿ ಕ್ರಿಪ್ಟೋ ನಾಣ್ಯವೆಂದು ನಂಬಿಸಿ, ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿ, ಹಣಮಾಡಿ ಕಣ್ಮರೆಯಾಗುವುದು ಇನ್ನೊಂದು ಮಾರ್ಗ. ವಿಶ್ವದಾದ್ಯಂತ ಅನೇಕ ಹಗರಣಗಳು ನಡೆದುಹೋಗಿವೆ ಮತ್ತು ನಡೆಯುತ್ತಲೇ ಇವೆ.
ಕ್ರಿಪ್ಟೋ ವಂಚನೆಗಳು ಇತರ ಯಾವುದೇ ಹಣಕಾಸಿನ ಹಗರಣಗಳಂತೆಯೇ ನಡೆಯುತ್ತವೆ. ಈ ಹಗರಣಗಳಲ್ಲಿ ವಂಚಕರು ನಗದಿಗಿಂತ ಕ್ರಿಪ್ಟೋ ಸ್ವತ್ತುಗಳ ಮೇಲೆ ಕಣ್ಣಿರಿಸಿ ವ್ಯಕ್ತಿಯ ಕ್ರಿಪ್ಟೋ ಖಾತೆ(ವ್ಯಾಲೆಟ್)ಯನ್ನು ಅಪಹರಿಸುವ ಯತ್ನ ಮಾಡುತ್ತಾರೆ. ಹೂಡಿಕೆದಾರರ ವೈಯಕ್ತಿಕ ಖಾತೆಯ ಮೊತ್ತವನ್ನು ತಿಳಿದುಕೊಳ್ಳಲು ಅಥವಾ ಫಂಗಬಲ್ ಅಲ್ಲದ ಟೋಕನ್(NFT)ಗಳ ಡಿಜಿಟಲ್ ಸ್ವತ್ತುಗಳ ಮೌಲ್ಯವನ್ನು ವಂಚಕರು ತಮ್ಮ ಖಾತೆಗೆ ಉಪಾಯವಾಗಿ ವರ್ಗಾಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ನಕಲಿ ಕ್ರಿಪ್ಟೋ ಕರೆನ್ಸಿ ಹೂಡಿಕೆ ವೇದಿಕೆಗಳು ದೊಡ್ಡಮಟ್ಟದಲ್ಲಿ ವಂಚನೆ ನಡೆಸುತ್ತಿವೆ. ಅಧಿಕೃತ ‘ಕ್ರಿಪ್ಟೋ’ ವ್ಯವಹಾಗಳ ವೇದಿಕೆ(Platform)ಗಳನ್ನೇ ಹೋಲುವ ನಕಲಿ ‘ವೆಬ್ಸೈಟ್’ಗಳನ್ನು ವಂಚಕರು ಸೃಷ್ಟಿಸಿ, ಅಸಲಿ ವೆಬ್ಸೈಟ್ ರೀತಿಯಲ್ಲೇ ಕೆಲವು ದಿನ/ತಿಂಗಳು ವ್ಯವಹರಿಸಿ ಹೂಡಿಕೆದಾರರನ್ನು ನಂಬಿಸಿ ವಂಚಿಸುತ್ತಿದ್ದಾರೆ.
ಕ್ರಿಪ್ಟೋ ಸಂಬಂಧಿತ ಅಪರಾಧಗಳಲ್ಲಿ ‘ಡಾರ್ಕ್ ವೆಬ್’
ಉಪಯೋಗವೂ ಕಂಡುಬರುತ್ತಿದೆ. ‘ಡಾರ್ಕ್ ವೆಬ್’ ಅಂತರ್ಜಾಲದಲ್ಲಿ ಗೌಪ್ಯಲಿಪಿ(Encrypt) ಮೂಲಕ ಮಾಡಲಾಗಿದ್ದು, ವ್ಯಕ್ತಿಗಳು ತಮ್ಮ ಗುರುತು ಮತ್ತು ಸ್ಥಳವನ್ನು ಇತರರಿಂದ ಮರೆಮಾಚಿ ವ್ಯವಹರಿಸಲು ದಾರಿಮಾಡಿಕೊಡುತ್ತದೆ. ಇದು ಕ್ರಿಪ್ಟೋಗಳ ಅಕ್ರಮ ಚಟುವಟಿಕೆಗಳಿಗೆ ಸಹಕಾರಿಯೂ ಹೌದು.
‘ಟ್ವಿಟರ್’(X) ಮುಂತಾದ ವೇದಿಕೆಗಳಲ್ಲಿ ಪ್ರಸಿದ್ಧ ವ್ಯಕ್ತಿಗಳು ಕೆಲವು ಕ್ರಿಪ್ಟೋಗಳ ಪರವಾಗಿ ಪ್ರಚಾರ ಮಾಡುತ್ತಿರುವ ರೀತಿಯಲ್ಲಿ ಅವರ ಖಾತೆಗಳನ್ನು ‘ಹ್ಯಾಕ್’ ಮಾಡಿ ಮೋಸಗೊಳಿಸತೊಡಗಿರುವುದು ಕಂಡುಬರುತ್ತಿದೆ. ಈ ಹಿಂದೆ ಪ್ರಧಾನಿ ಮೋದಿಯವರ ಟ್ಟಿಟರ್ ಖಾತೆಯನ್ನು ‘ಹ್ಯಾಕ್’ ಮಾಡಿ ‘ಬಿಟ್ ಕಾಯಿನ್’ಗಳಲ್ಲಿ ಭಾರತ ಸರ್ಕಾರವು ಹೂಡಿಕೆ ಮಾಡಿದೆ ಎಂಬ ಸುಳ್ಳನ್ನು ಹರಡಲಾಯಿತು. ಅದೇ ರೀತಿಯಲ್ಲಿ ಜೋ ಬೈಡೆನ್, ಎಲಾನ್ ಮಸ್ಕ್, ಬಿಲ್ ಗೇಟ್ಸ್ ಮುಂತಾದವರ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿ ಕೆಲವು ಕ್ರಿಪ್ಟೋಗಳ ಬೆಲೆ ಏರಿಸುವ ಹುನ್ನಾರವೂ ನಡೆದಿತ್ತು.
ಕ್ರಿಪ್ಟೋ ಅಪರಾಧ ಪ್ರಕರಣಗಳು ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ವ್ಯಾಪಕವಾಗಿದ್ದು, ಅವುಗಳ ನಿಯಂತ್ರಣವೂ ಸವಾಲೆನಿಸಿದೆ.
‘ಎಫ್ಟಿಎಕ್ಸ್’ (FTX) ಹಗರಣ
೨೦೨೩ರಲ್ಲಿ ಅಮೆರಿಕದಲ್ಲಿ ಬೆಳಕಿಗೆ ಬಂದ ಬಹುದೊಡ್ಡ ಕ್ರಿಪ್ಟೋ ಹಗರಣ ಇದಾಗಿದೆ. ಸ್ಯಾಮ್ಯುಯೆಲ್ ಬೆಂಜಮಿನ್ ಬ್ಯಾಂಕ್ಮನ್ ಫ್ರೈಡ್ ಒಬ್ಬ ಅಮೆರಿಕನ್ ವಾಣಿಜ್ಯೋದ್ಯಮಿಯಾಗಿದ್ದು, ‘ಎಫ್ಟಿಎಕ್ಸ್’ ಎನ್ನುವ ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆಯನ್ನು ಸ್ಥಾಪಿಸಿ ಜನಪ್ರಿಯನಾದವನು. ತನ್ನ ೨೯ನೇ ವಯಸ್ಸಿನಲ್ಲೇ ಆತ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ೪೧ನೇ ಶ್ರೇಯಾಂಕ ಪಡೆದು ಸುದ್ದಿಯಾದವನು!
‘ಎಫ್ಟಿಎಕ್ಸ್’ ವಿನಿಮಯದ ಹೆಸರಿನಲ್ಲಿ ಬ್ಯಾಂಕ್ಮನ್ ಫ್ರೈಡ್ ಹೂಡಿಕೆದಾರರಿಂದ ಮತ್ತು ಸಾಲದಾತರಿಂದ ಅತಿ ಹೆಚ್ಚು ಕ್ರಿಪ್ಟೋ ಸಂಗ್ರಹಿಸಿ ಅದನ್ನು ಕದ್ದ ಆಪಾದನೆಗೆ ಒಳಗಾದನು. ಈ ವಂಚನೆಯ ಸುದ್ದಿಯಿಂದ ಹೂಡಿಕೆದಾರರು ಕಂಗಾಲಾಗಿ, ತಮ್ಮ ಠೇವಣಿಗಳನ್ನು ಹಿಂತೆಗೆದುಕೊAಡ ಕಾರಣ ಕಂಪೆನಿಯು ದಿವಾಳಿಯಾಯಿತು. ೨೦೨೨ರಲ್ಲಿ ಬ್ಯಾಂಕ್ಮನ್ ಫ್ರೈಡ್ ಅನೇಕ ಕ್ರಿಮಿನಲ್ ಆರೋಪಗಳ ಅಡಿಯಲ್ಲಿ ಬಂಧನಕ್ಕೊಳಗಾಗಬೇಕಾಯಿತು. ನ್ಯಾಯಾಲಯವು ಅವನಿಗೆ ವಂಚನೆ, ಪಿತೂರಿ ಮತ್ತು ಮನಿ ಲಾಂಡರಿಂಗ್ ಮುಂತಾದ ಅಪರಾಧಗಳನ್ನು ಮಾಡಿರುವ ತಪ್ಪಿತಸ್ಥನೆಂದು ತೀರ್ಪು ನೀಡಿ, ೨೫ ವರ್ಷಗಳ ಜೈಲು ಶಿಕ್ಷೆ ವಿಧಿಸಿ ೧೧ ಶತಕೋಟಿ ಡಾಲರನ್ನು ಮುಟ್ಟುಗೋಲು ಹಾಕಿಕೊಂಡಿತು.
‘ಒನ್ ಕಾಯಿನ್’ ಹಗರಣ
ಇದೂ ಸಹ ದೊಡ್ಡ ಕ್ರಿಪ್ಟೋ ಹಗರಣವಾಗಿದೆ. ‘ಆಲ್ಟ್ ಕಾಯಿನ್’ ಅನ್ನು ೨೦೧೪ರಲ್ಲಿ ಡಾ. ರುಜಾ ಇಗ್ನಾಟೋವಾ ಮತ್ತು ಅವಳ ಪತಿ ಡೇನಿಯಲ್ ಡಬೆಕ್ ಸ್ಥಾಪಿಸಿದರು. ದುಬೈಯಲ್ಲಿ ‘ಒನ್ಕಾಯಿನ್ ಲಿಮಿಟೆಡ್’ ಎಂದು ಪ್ರಾರಂಭವಾಗಿ ಬಲ್ಗೇರಿಯಾದಲ್ಲಿ ತನ್ನ ಕಚೇರಿಗಳನ್ನು ತೆರೆದು ಕ್ರಿಪ್ಟೋಕರೆನ್ಸಿಯೆಂದು ಪ್ರಚಾರ ಮಾಡಲಾಯಿತು. ‘ಒನ್ ಕಾಯಿನ್’ ಕ್ರಿಪ್ಟೋ ಗಣಿಗಾರಿಕೆಯ ಶಿಕ್ಷಣದ ನೆಪದಲ್ಲಿ ‘ಪ್ಯಾಕೇಜ್’ಗಳನ್ನು ಸೃಷ್ಟಿಸಿ ಹೆಚ್ಚಿನ ಮೊತ್ತಕ್ಕೆ ನೋಂದಾಯಿತ ಸದಸ್ಯರಿಗೆ ಮಾರಲಾಯಿತು. ರುಜಾ ಇಗ್ನಟೋವಾ ‘ಕ್ರಿಪ್ಟೋಕ್ವೀನ್’ ಎಂದು ಜನಪ್ರಿಯಳಾದಳು. ಇಂಗ್ಲೆಂಡಿನಲ್ಲಿ ಅತಿ ಹೆಚ್ಚು ಜನರು ಈ ‘ಪಿರಮಿಡ್’ ಯೋಜನೆಯಲ್ಲಿ ಹೂಡಿಕೆ ಮಾಡಿ ಮೋಸಹೋದರು. ೨೦೧೭ರಲ್ಲಿ ಹಗರಣಕ್ಕೆ ಸಂಬಂಧಪಟ್ಟ ಅನೇಕ ಅಪರಾಧಿಗಳು ಬಂಧನಕ್ಕೊಳಗಾದರು. ಈ ಹಗರಣದಲ್ಲಿ ಹೂಡಿಕೆದಾರರು ಸುಮಾರು ೨೫ ಶತಕೋಟಿ ಡಾಲರ್ ಕಳೆದುಕೊಳ್ಳಬೇಕಾಯಿತು.
‘ತೊಡೆಕ್ಸ್’ ಹಗರಣ
ಫಾರುಕ್ ಫತೀಹ್ ಒಜರ್ ಎನ್ನುವಾತ ತನ್ನ ೨೨ನೇ ವಯಸ್ಸಿನಲ್ಲೇ ‘ತೊಡೆಕ್ಸ್’ ಹೆಸರಿನ ಕ್ರಿಪ್ಟೋವನ್ನು ೨೦೧೭ರಲ್ಲಿ ಟರ್ಕಿಯಲ್ಲಿ ಪ್ರಾರಂಭಿಸಿದನು. ಒಂದು ಲಕ್ಷಕ್ಕಿಂತ ಹೆಚ್ಚಿನ ಹೂಡಿಕೆದಾರರನ್ನು ನೋಂದಾಯಿಸಿ ಎರಡು ಶತಕೋಟಿ ಡಾಲರ್ ಹಣ ಸಂಗ್ರಹಿಸಿ ಟರ್ಕಿಯಿಂದ ತಲೆಮರೆಸಿಕೊಂಡನು. ಒಜರ್ ಮಾಡಿದ ವಂಚನೆಯ ಮೊತ್ತ ಸುಮಾರು ೪೩ ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ೨೦೨೩ರಲ್ಲಿ ಒಜರ್ ಬಂಧನವಾಗಿ ಶಿಕ್ಷೆಗೊಳಗಾದನು.
‘ಬಿಟ್ ಕನೆಕ್ಟ್’ ಹಗರಣ
ಇದೊಂದು ಹೂಡಿಕೆದಾರರನ್ನು ಮೋಸಗೊಳಿಸಿದ ‘ಪೋಂಜಿ’ಯೋಜನೆಯಾಗಿದ್ದು, ೨೦೧೬ರಲ್ಲಿ ಸತೀಶ್ ಕುಂಭಾನಿ ಎನ್ನುವ ವ್ಯಕ್ತಿ ಬಿಟ್ ಕಾಯಿನ್ ಬದಲಿಗೆ ಬಳಕೆದಾರರಿಗೆ ‘ಬಿಟ್ ಕನೆಕ್ಟ್’ ಎನ್ನುವ ನಾಣ್ಯಗಳನ್ನು ವಿನಿಮಯ ಮಾಡಿ, ಮೌಲ್ಯವರ್ಧನೆಯ ಆಮಿಷವನ್ನೊಡ್ಡಿದ. ಕೆಲವು ಸಮಯದ ನಂತರ ಈ ಕ್ರಿಪ್ಟೋನಾಣ್ಯಗಳು ಮಾರುಕಟ್ಟೆಯಿಂದ ಇದ್ದಕ್ಕಿದ್ದಂತೆ ಕಣ್ಮರೆಯಾದವು. ಹೂಡಿಕೆದಾರರು ಸುಮಾರು ನಾಲ್ಕು ಶತಕೋಟಿ ಡಾಲರ್ ಕಳೆದುಕೊಳ್ಳಬೇಕಾಯಿತು.
‘ಡಾಲರ್ ಸ್ಕ್ವಿಡ್’ ಹಗರಣ
ದಕ್ಷಿಣ ಕೊರಿಯಾದ ‘ನೆಟ್ಫ್ಲಿಕ್ಸ್’ ಮೂಲಕ ಪ್ರಸಾರವಾದ ‘ಸ್ಕ್ವಿಡ್ಗೇಮ್’ ಸರಣಿ ಕಥೆಯು ೨೦೨೧ರಲ್ಲಿ ವಿಶ್ವದಾದ್ಯಂತ ಅತಿ ಜನಪ್ರಿಯವಾಯಿತು. ಇದರ ಪ್ರೇರಣೆಯಿಂದ ‘ಡಾಲರ್ ಸ್ಕ್ವಿಡ್’ ಕ್ರಿಪ್ಟೋವನ್ನು ವಂಚಕರು ಸೃಷ್ಟಿಸಿದರು. ‘ಡಾಲರ್ ಸ್ಕ್ವಿಡ್’ನ್ನು ಭವಿಷ್ಯದ ಸ್ಕ್ವಿವಡ್ ಗೇಮ್ ಪ್ರೇರಿತ ವಿಡಿಯೋ ಗೇಮ್ನಲ್ಲಿ ಬಳಸಲು ‘ಪ್ಲೇ ಟು ಅರ್ನ್’ ಕ್ರಿಪ್ಟೋಕರೆನ್ಸಿಯಾಗಿ ಮಾರಾಟ ಮಾಡುವ ಜಾಲ ಅದಾಗಿತ್ತು. ಆ ಹೊಸ ಕ್ರಿಪ್ಟೋಗೆ ಹೂಡಿಕೆದಾರರು ಆಕರ್ಷಿತರಾದರು. ಒಂದು ‘ಡಾಲರ್ ಸ್ಕ್ವಿಡ್’ ಬೆಲೆಯು ೨೮೬೧ ಡಾಲರ್ವರೆಗೂ ಏರಿತು. ವಂಚಕರು ‘ಡಾಲರ್ ಸ್ಕ್ವಿಡ್’ ಕ್ರಿಪ್ಟೋವನ್ನು ನಗದಾಗಿ ವಿನಿಮಯ ಮಾಡಿಕೊಂಡು ೩.೩ ಮಿಲಿಯನ್ ಡಾಲರ್ ವಂಚಿಸಿ ಪಲಾಯನ ಮಾಡಿದರು. ಈ ರೀತಿಯ ವಂಚನೆಯನ್ನು “ರಗ್ ಪುಲ್” ಎಂದು ಕರೆಯುತ್ತಾರೆ. ಇದುವರೆಗೆ ಈ ಕ್ರಿಪ್ಟೋ ಸೃಷ್ಟಿಸಿ ವಂಚಿಸಿದವರು ಯಾರೆಂದು ಪತ್ತೆಹಚ್ಚಲಾಗಿಲ್ಲ ಎನ್ನುವುದು ಅಚ್ಚರಿಯೇ ಸರಿ.
‘ಗೇನ್ ಬಿಟ್ಕಾಯಿನ್’ ಹಗರಣ
‘ಗೇನ್ ಬಿಟ್ಕಾಯಿನ್’ ಮತ್ತು ‘ಎಂ ಕ್ಯಾಪ್’ ಟೋಕನ್ ಎರಡೂ ‘ಪೋಂಜಿ’ ಯೋಜನೆಗಳಾಗಿದ್ದು, ಈ ಹಗರಣವು ೨೦೧೮ರಲ್ಲಿ ನಡೆಯಿತು. ಉದ್ಯಮಿ ಅಮಿತ್ ಭಾರದ್ವಾಜ್ ಎಂಬ ವ್ಯಕ್ತಿ ಸಾವಿರಾರು ಜನರಿಗೆ ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತ ವಂಚಿಸಿದ್ದಾನೆ ಎಂಬ ವರದಿ ಇದೆ. ಆತ ಕ್ರಿಪ್ಟೋ ಸಂಬಂಧದ ಹಲವಾರು ಕಂಪೆನಿಗಳನ್ನು ಸ್ಥಾಪಿಸಿದ್ದಲ್ಲದೆ, ಅನೇಕ ವ್ಯಾಪಾರೋದ್ಯಮಗಳ ವಹಿವಾಟುಗಳ ಮೂಲಕ ಹೆಚ್ಚಿನ ಆದಾಯದ ಭರವಸೆ ನೀಡಿ ಹೂಡಿಕೆದಾರರನ್ನು ವಂಚಿಸಿದ್ದಾನೆ. ಬಿಟ್ಕಾಯಿನ್ಗಳಿಗೆ ‘ಗೇನ್ ಬಿಟ್ಕಾಯಿನ್’ ವಿನಿಮಯದ ಆಮಿಷವನ್ನೊಡ್ಡಿ ಹೂಡಿಕೆದಾರರಿಗೆ ಮೋಸಗೊಳಿಸಿದ್ದಾನೆ.
‘ಮೋರಿಸ್ ಕಾಯಿನ್’ ಹಗರಣ
ಕೇರಳದ ನಿಶಾದ್ ಮತ್ತು ಅವನ ಸಹಚರರು ‘ಮೊರಿಸ್ ಕಾಯಿನ್’ ಹೆಸರಿನ ಕ್ರಿಪ್ಟೋಕರೆನ್ಸಿ ಬಿಡುಗಡೆಗಾಗಿ ಆರಂಭದ ಕೊಡುಗೆ ಎನ್ನುವ (ICO) ನೆಪದಲ್ಲಿ ಹೂಡಿಕೆದಾರರಿಂದ ಠೇವಣಿ ಸಂಗ್ರಹಿಸಿದರು. ಮೋರಿಸ್ ಕಾಯಿನ್ ಹಗರಣವು ೨೦೨೨ರಲ್ಲಿ ಸುದ್ದಿಮಾಡಿತು. ಇದು ಭಾರತದಲ್ಲಿನ ಕ್ರಿಪ್ಟೋ ಹಗರಣಗಳಲ್ಲಿ ಹೊಸ ವಂಚನೆಯಾಗಿದೆ. ಮೋರಿಸ್ ನಾಣ್ಯ ಎಂಬ ನಕಲಿ ಕ್ರಿಪ್ಟೋವನ್ನು ಪ್ರಚಾರ ಮಾಡುವ ಅಂತರ್ಜಾಲ (ವೆಬ್ಸೈಟ್) ರಚಿಸಿ ೯೦೦ಕ್ಕೂ ಹೆಚ್ಚಿನ ಹೂಡಿಕೆದಾರರನ್ನು ವಂಚಿಸಿದ ಈ ಹಗರಣದಲ್ಲಿ ೧೨೦೦ ಕೋಟಿ ರೂಪಾಯಿಗಳನ್ನು ಹೂಡಿಕೆದಾರರು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕದ ಬಿಟ್ಕಾಯಿನ್ ಹಗರಣ
ಕರ್ನಾಟಕದಲ್ಲಿ ‘ಬಿಟ್ಕಾಯಿನ್’ ಹಗರಣವು ೨೦೨೧ರಲ್ಲಿ ಬೆಂಗಳೂರು ಮೂಲದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ‘ಶ್ರೀಕಿ’ ಎಂಬ ಯುವಕನಿಂದ ನಡೆಯಿತು. ಸುದ್ದಿಯೊಂದರ ಪ್ರಕಾರ ೯ ಕೋಟಿ ಮೌಲ್ಯದ ೩೧ ‘ಬಿಟ್ಕಾಯಿನ್’ಗಳನ್ನು ಕರ್ನಾಟಕ ಪೊಲೀಸ್ ವಿಶೇಷ ತನಿಖಾ ಘಟಕವಾದ ಕೇಂದ್ರ ಅಪರಾಧ ವಿಭಾಗವು ಮುಟ್ಟುಗೋಲು ಹಾಕಿಕೊಂಡಿದೆ. ‘ಶ್ರೀಕಿ’ ಈಗ ಬಂಧನದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾನೆ. ಈತ ಅನೇಕ ‘ಪೋಕರ್ ಗೇಮಿಂಗ್ ಪೋರ್ಟಲ್’ಗಳನ್ನು ಹ್ಯಾಕ್ ಮಾಡಿ ಅಕ್ರಮವಾಗಿ ನಗದು ಬಹುಮಾನಗಳನ್ನು ಗೆದ್ದಿದ್ದಾನೆ ಎನ್ನುವ ಆರೋಪವಿದೆ. ಇದಲ್ಲದೆ, ಕೆಲವು ‘ಗೇಮಿಂಗ್ ಪೋರ್ಟಲ್’ಗಳಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಹಲವಾರು ಕೋಟಿಗಳನ್ನು ವಂಚನೆ ಮಾಡಿದ ಆರೋಪವೂ ಈತನ ಮೇಲಿದೆ. ಮಾರುಕಟ್ಟೆ ದರದಲ್ಲಿ ೩೨.೪೮ ಕೋಟಿ ರೂಪಾಯಿ ಮೌಲ್ಯದ ೬೦.೬ ಬಿಟ್ಕಾಯಿನ್ ಕಳವು ಪ್ರಕರಣ ಸಂಬಂಧ ಈತನನ್ನು ಬಂಧಿಸಲಾಗಿದೆ. ಶ್ರೀಕಿ ಇತರರ ಖಾತೆಗಳ ಮೇಲಿನ ದಾಳಿ, ಬಿಟ್ಕಾಯಿನ್ ವಿನಿಮಯಕ್ಕೆ ಹ್ಯಾಕ್ ಮಾಡುವುದು, ಕ್ರಿಪ್ಟೋಕರೆನ್ಸಿ ಲೂಟಿ, ಮನಿಲಾಂಡರಿಂಗ್ ಮತ್ತು ಸೈಬರ್ ವಂಚನೆಗಳಂತಹ ಅಪರಾಧಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿ ಎಂಬ ದೂರಿದೆ.
ಎಸ್ಟಿಎ (STA) ಟೋಕನ್
‘ಎಸ್ಟಿಎ ಟೋಕನ್’ ಎಂಬ ಪೋಂಜಿ ಕ್ರಿಪ್ಟೋವನ್ನು ಹಂಗೇರಿಯ ಡೇವಿಡ್ ಗೆಜ್ ಎಂಬಾತನ ಮೂಲಕ ಭಾರತದಲ್ಲಿ ಚಲಾವಣೆಗೆ ತರಲಾಯಿತು. ಗುರುತೇಜಸಿಂಗ್ ಸಿಧು ಮತ್ತು ನಿರೋದ್ದಾಸ್ ಎಂಬ ವ್ಯಕ್ತಿಗಳು ರಿಸರ್ವ್ ಬ್ಯಾಂಕಿನ ಅನುಮತಿ ಇಲ್ಲದೆಯೇ ಜನರಿಂದ ಹೂಡಿಕೆಯನ್ನು ಸೆಳೆಯಲು ವ್ಯಾಪಕ ಪ್ರಚಾರ ಮಾಡಿದರು. ‘ಸೋಲಾರ್ ಟೆಕ್ನೊ ಅಲಯನ್ಸ್’ ಎನ್ನುವ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ‘ಬ್ಲ್ಯಾಕ್ಚೈನ್’ ಅನ್ನು ಬಳಸಿ ಕಡಮೆ ಸಮಯದಲ್ಲಿ ರೈತರಿಗೆ ಸೌರಶಕ್ತಿ, ಹಸಿರುಶಕ್ತಿ ಮುಂತಾದ ಹೆಸರನ್ನು ಬಳಸಿ ಭಾರತದ ಅನೇಕ ರಾಜ್ಯಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ಯೋಜನೆಯ ಸದಸ್ಯರನ್ನಾಗಿಸಿ ವಂಚಿಸಲಾಯಿತು. ಇದರ ಹೂಡಿಕೆದಾರರು ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಕಳೆದುಕೊಂಡಿರುವ ವರದಿ ಇದೆ.
‘ಕೊರ್ವಿಯೋ ಕಾಯಿನ್’ ಹಗರಣ
ಇದು ಸುಮಾರು ಒಂದು ಲಕ್ಷ ಜನರನ್ನು ವಂಚಿಸಿದ ೨೫೦೦ ಕೋಟಿ ರೂಪಾಯಿ ಕ್ರಿಪ್ಟೋ ಹಗರಣವಾಗಿದೆ. ವಿಶೇಷ ತನಿಖಾ ತಂಡದ (SIT) ಪ್ರಕಾರ ಹಿಮಾಚಲ ಪ್ರದೇಶದ ಈ ಹಗರಣದಲ್ಲಿ ಐದು ಸಾವಿರ ಸರ್ಕಾರೀ ಅಧಿಕಾರಿಗಳು ಮತ್ತು ಸುಮಾರು ಒಂದು ಸಾವಿರ ಪೊಲೀಸ್ ಸಿಬ್ಬಂದಿ ವಂಚನೆಗೆ ಒಳಗಾಗಿದ್ದಾರೆ. ಈ ಹಗರಣವು ೨೦೧೮ರಲ್ಲಿ ಪ್ರಾರಂಭವಾಗಿ ೨೦೨೩ರ ಕೊನೆಯಲ್ಲಿ ಬೆಳಕಿಗೆ ಬಂದಿತು. ಕೊರ್ವಿಯೋ ಕಾಯಿನ್ (KRO ನಾಣ್ಯಗಳು) ಎಂಬ ಸ್ಥಳೀಯ ಕ್ರಿಪ್ಟೋಕರೆನ್ಸಿಯನ್ನು ನಕಲಿ ವೆಬ್ಸೈಟ್ ಮೂಲಕ ಚಲಾವಣೆಗೆ ತರಲಾಯಿತು. ಈವರೆಗೆ ೧೮ ಮಂದಿಯನ್ನು ವಂಚನೆಯ ಆಪಾದನೆಯಲ್ಲಿ ಬಂಧಿಸಲಾಗಿದೆ. ಆದರೆ ಪ್ರಮುಖ ಆರೋಪಿ ಸುಭಾಷ್ ಶರ್ಮಾ ತಲೆಮರೆಸಿಕೊಂಡಿದ್ದಾನೆ.
ವಂಚನೆಯ ಜಾಲಗಳು
ಹೂಡಿಕೆದಾರರನ್ನು ವಂಚಿಸಿ ಕ್ರಿಪ್ಟೋಗಳನ್ನು ದೋಚುವ ಅನೇಕ ಮಾರ್ಗಗಳನ್ನು ‘ಸೈಬರ್’ ಕಳ್ಳರು ಈಗಾಗಲೇ ಪ್ರಯೋಗಿಸಿ ಯಶಸ್ವಿಯಾದ ಘಟನೆಗಳು ಸಾಕಷ್ಟು ನಡೆದಿವೆ ಮತ್ತು ನಡೆಯುತ್ತಲೂ ಇವೆ. ಜನರನ್ನು ಮೋಸಗೊಳಿಸುವ ತಂತ್ರಗಳಲ್ಲಿ ಕೆಲವನ್ನು ಈ ಕೆಳಗಿನಂತೆ ವಿಂಗಡಿಸಿ ಹೆಸರಿಸಬಹುದಾಗಿದೆ.
ಬೆದರಿಕೆ ಮತ್ತು ಸುಲಿಗೆ
ಕೆಲವು ವಂಚಕರು ಹೂಡಿಕೆದಾರರನ್ನು ಬಲೆಗೆ ಬೀಳಿಸಲು ಅವರ ಫೋಟೋ ಅಥವಾ ವಿಡಿಯೋಗಳ ವೈಯಕ್ತಿಕ ಮಾಹಿತಿಯನ್ನು ಇಟ್ಟುಕೊಂಡಿದ್ದು ಅವುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಮುಜುಗರಗೊಳಿಸುವ ಬೆದರಿಕೆಯೊಡ್ಡುತ್ತಾರೆ. ಆದರೆ ಅವರ ಬೇಡಿಕೆಯ ಕ್ರಿಪ್ಟೋ ಕೊಟ್ಟಲ್ಲಿ ಅಂಥ ಮಾಹಿತಿಯನ್ನು ಗೌಪ್ಯವಾಗಿಡುವ ಭರವಸೆ ನೀಡುತ್ತಾರೆ. ಇಂಥಹ ಸುಲಿಗೆಯ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ವರದಿಗಳು ಬರುತ್ತಿವೆ.
ವ್ಯಾಪಾರ ಅವಕಾಶ ವಂಚನೆಗಳು
ಜನರನ್ನು ಶೀಘ್ರವಾಗಿ ಶ್ರೀಮಂತರನ್ನಾಗಿ ಮಾಡುವ ಭರವಸೆ ಕೊಟ್ಟು, ಯಶಸ್ವೀ ವ್ಯಾಪಾರದ ಅವಕಾಶಗಳು ತಮ್ಮ ಯೋಜನೆಗಳಲ್ಲಿವೆ ಎಂದು ನಂಬಿಸಿ, ಕ್ರಿಪ್ಟೋ ಸ್ವತ್ತುಗಳನ್ನು ದ್ವಿಗುಣಗೊಳಿಸುವ ಅಥವಾ ಮೂರುಪಟ್ಟು ಹೆಚ್ಚಿಸುವ ಭರವಸೆಯನ್ನು ಕೊಡುತ್ತಾರೆ. ಅದನ್ನು ನಂಬಿಸಲು ಕೆಲವು ನಕಲಿ ವಿಡಿಯೋ / ಜಾಹಿರಾತುಗಳನ್ನು ತೋರಿಸಿ ವಿಶ್ವಾಸ ಬೆಳೆಸಿ ಕ್ರಿಪ್ಟೋಗಳನ್ನು ಲಪಟಾಯಿಸುತ್ತಾರೆ.
ನಕಲಿ ಉದ್ಯೋಗಗಳು
ಅನೇಕ ಸನ್ನಿವೇಶಗಳಲ್ಲಿ, ವಂಚಕರು ಹೂಡಿಕೆದಾರರನ್ನು ಆಕರ್ಷಿಸಲು ನಕಲಿ ಉದ್ಯೋಗಗಳನ್ನು ಸೃಷ್ಟಿಸಿ ಕೆಲಸದ ಆಮಿಷವೊಡ್ಡುತ್ತಾರೆ. ಕ್ರಿಪ್ಟೋ ಗಣಿಗಾರಿಕೆ ಮತ್ತು ಕ್ರಿಪ್ಟೋ ಹೂಡಿಕೆದಾರರನ್ನು ನೇಮಿಸಿಕೊಳ್ಳುವ ಭರವಸೆ ನೀಡುತ್ತಾರೆ. ಉದ್ಯೋಗಗಳಿಗೆ ಸೇರಲು ಕ್ರಿಪ್ಟೋದಲ್ಲಿ ಪಾವತಿ ಪಡೆದು ‘ಗಿವ್ಅವೇ’ ವಂಚನೆಗಳು – ಜನರಿಗೆ ಉಚಿತ ಹಣ ಅಥವಾ ಬಹುಮಾನಗಳಿಂದ ಆಕರ್ಷಿಸಲು ಸುಪ್ರಸಿದ್ಧ ಸಿನೆಮಾ ನಟನಟಿಯರು ಅಥವಾ ಸಮಾಜದ ಪ್ರಭಾವಶಾಲಿಗಳ ಹೆಸರನ್ನು ಬಳಸಿಕೊಳ್ಳುತ್ತಾರೆ. ಡಿಜಿಟಲ್ ಸ್ವತ್ತುಗಳನ್ನು ಸೆಳೆಯಲು ಪ್ರಸಿದ್ಧ ವಾಣಿಜ್ಯೋದಮಿಗಳ ಹೆಸರನ್ನು ‘ಟ್ವಿಟರ್’ (X), ಫೇಸ್ಬುಕ್ ಮುಂತಾದ ಸಾಮಾಜಿಕ ತಾಣಗಳಲ್ಲಿ ಉಚಿತ ಕ್ರಿಪ್ಟೋ ಅಥವಾ ಕಡಿತದ ಬೆಲೆ ಇತ್ಯಾದಿ ಭರವಸೆ ನೀಡಿ ವಂಚಿಸುವ ಘಟನೆಗಳು ನಡೆಯುತ್ತಿವೆ.
ಸೋಗು ಹಾಕುವಿಕೆ
ಕ್ರಿಪ್ಟೋ ವಂಚನೆಯ ಮತ್ತೊಂದು ಜಾಲವೆಂದರೆ ಸರ್ಕಾರದಿಂದ ಅಥವಾ ಕಾನೂನು ಜಾರಿಮಾಡುವ ಇಲಾಖೆಯಿಂದ ಬಂದ ತನಿಖಾಧಿಕಾರಿಗಳಂತೆ ಸೋಗುಹಾಕಿ, ತನಿಖೆಯ ಭಾಗವಾಗಿ ಹೂಡಿಕೆದಾರರ ಖಾತೆ ಅಥವಾ ಸ್ವತ್ತುಗಳನ್ನು ಮುಟ್ಟುಗೋಲು ಮಾಡಲಾಗುವುದೆಂದೂ ಮತ್ತು ಅಂಥ ಸಮಸ್ಯೆಯ ಪರಿಹಾರಕ್ಕೆ ದಂಡದ ಹಣವನ್ನು ಕ್ರಿಪ್ಟೋದಲ್ಲಿ ಪಾವತಿಸಬಹುದು ಎಂದು ಮನವರಿಕೆ ಮಾಡಿ ವಂಚಿಸುತ್ತಾರೆ ಅಥವಾ ಇಮೇಲ್ ಮೂಲಕ ಗೌಪ್ಯ ಮಾಹಿತಿಯನ್ನು ಹೂಡಿಕೆದಾರಿಂದ ಸಂಗ್ರಹಿಸಿ ಮೋಸಗೊಳಿಸುತ್ತಾರೆ. ಹೂಡಿಕೆದಾರರಿಗೆ ನೆರವು ನೀಡುವ ಸೋಗಿನಲ್ಲೂ ವಂಚನೆ ನಡೆಯುತ್ತದೆ.
‘ಫಿಶಿಂಗ್’ ವಂಚನೆ
ಕ್ರಿಪ್ಟೋಕರೆನ್ಸಿ ಖಾತೆಯ (ವ್ಯಾಲೆಟ್) ಮಾಹಿತಿ ಮುಂತಾದ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಲು ವಂಚಕರು ನಕಲಿ ಜಾಲತಾಣ(ವೆಬ್ಸೈಟ್)ದಿಂದ ಇಮೇಲ್ ಕಳುಹಿಸಿ ನಂಬಿಕೆ ಬರುವ ಕೊಂಡಿ(Link)ಯನ್ನು ನೀಡುತ್ತಾರೆ. ಖಾಸಗಿ ಮಾಹಿತಿಯನ್ನು ಸ್ವಇಚ್ಛೆಯಿಂದ ಹಂಚಿಕೊಳ್ಳುವಂತೆ ಪ್ರೇರೇಪಿಸುವ ಹುನ್ನಾರಕ್ಕೆ ‘ಫಿಶಿಂಗ್’ ಎಂದು ಕರೆಯಬಹುದು.
ಪಂಪ್ ಮತ್ತು ಡಂಪ್ ಯೋಜನೆಗಳು
ಒಂದು ನಿರ್ದಿಷ್ಟ ಕ್ರಿಪ್ಟೋನಾಣ್ಯದಲ್ಲಿ ಹೂಡಿಕೆ ಮಾಡಲು ಪ್ರಲೋಭಿಸುವ ಗುಂಪೊಂದು ಒಟ್ಟುಗೂಡಿ ಜನರನ್ನು ದಾರಿ ತಪ್ಪಿಸುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಗುಂಪು ಒಟ್ಟಾಗಿ ಆ ನಿರ್ದಿಷ್ಟ ಕ್ರಿಪ್ಟೋ ಬೆಲೆಯನ್ನು ಹೆಚ್ಚಿಸಿ ನಂತರ ಹೂಡಿಕೆದಾರರ ಕ್ರಿಪ್ಟೋಗಳನ್ನು ಒಮ್ಮೆಲೇ ದೋಚುತ್ತಾರೆ.
‘ರಗ್ ಪುಲ್’ ವಂಚನೆಗಳ ಮೂಲಕ ‘ನಾನ್ ಫಂಗಬಲ್ ಟೋಕನ್’ (NFT ಬದಲಾಯಿಸಲಾಗದ ವಿಶಿಷ್ಟ ಡಿಜಿಟಲ್ ಸ್ವತ್ತು)ಗಳನ್ನು ಕಬಳಿಸುವ ಪ್ರಕರಣಗಳು ಹೆಚ್ಚುತ್ತಿವೆ. ‘ರಗ್ ಪುಲ್’ ವಂಚನೆಗಳಲ್ಲಿ ಹೂಡಿಕೆದಾರರನ್ನು ನಂಬಿಸಿ ಕ್ರಿಪ್ಟೋಗಳನ್ನು ಹೆಚ್ಚುಹೆಚ್ಚು ಮಾರಾಟ ಮಾಡುತ್ತಾರೆ. ಈ ಕಾರ್ಯಕ್ಕೆ ಹಣ ಸಂಗ್ರಹಿಸುವ ತಂಡವನ್ನು ನಿಯೋಜಿಸಿ ಕೆಲವು ಸಮಯದ ನಂತರ ಹಠಾತ್ ಯೋಜನೆಯನ್ನು ಮುಚ್ಚಿ ಇದ್ದಕ್ಕಿದ್ದಂತೆ ಮಾಯವಾಗುತ್ತಾರೆ.
‘ಪೋಂಜಿ’ ಯೋಜನೆಗಳು
‘ಪೋಂಜಿ’ ಯೋಜನೆಯು ಮೋಸದಿಂದ ಕ್ರಿಪ್ಟೋ ಹೂಡಿಕೆಯನ್ನು ಸೆಳೆಯುವ, ಹೂಡಿಕೆದಾರರಿಗೆ ಹೆಚ್ಚಿನ ಲಾಭದ ಭರವಸೆ ನೀಡುವ ಜಾಲವಾಗಿದೆ. ಪೋಂಜಿ ಯೋಜನೆಗಳಲ್ಲಿ ಹಳೆಯ ಹೂಡಿಕೆದಾರರಿಗೆ ಹೊಸ ಹೂಡಿಕೆಯಿಂದ ಬರುವ ಆದಾಯದಿಂದ ಪಾವತಿ ಮಾಡಿ ತಮ್ಮ ಯೋಜನೆಯ ಬಗೆಗೆ ಭರವಸೆ ಮೂಡಿಸುತ್ತಾರೆ. ಕೆಲವು ಸಮಯದಲ್ಲೇ ಯೋಜನೆಯು ಜನಪ್ರಿಯವಾಗಿ, ಹೆಚ್ಚು ಹೂಡಿಕೆಯ ಹಣ ಸಂಗ್ರಹವಾಗುತ್ತದೆ. ಹಣ ಹಿಂತಿರುಗಿಸುವ ಸಮಯದಲ್ಲಿ ಹೂಡಿಕೆಯ ಹಣದೊಂದಿಗೆ ವಂಚಕರು ಪಲಾಯನ ಮಾಡುತ್ತಾರೆ.
ನಕಲಿ ಕ್ರಿಪ್ಟೋಕರೆನ್ಸಿ ವಿನಿಮಯ
ಹೆಚ್ಚಿನ ಕ್ರಿಪ್ಟೋಕರೆನ್ಸಿ ವಿನಿಮಯದ ಭರವಸೆ ನೀಡಿ ಹೂಡಿಕೆದಾರರನ್ನು ಆಕರ್ಷಿಸಿ, ಹೆಚ್ಚುವರಿ ಬಿಟ್ಕಾಯಿನ್ ಕೊಡುಗೆಗಳನ್ನು ಕೊಡುವುದಾಗಿ ನಂಬಿಸಿ ಹಣ ಸಂಗ್ರಹ ಮಾಡುತ್ತಾರೆ. ವಾಸ್ತವದಲ್ಲಿ, ಯಾವುದೇ ವಿನಿಮಯ ನಡೆಯದೆ, ಹೂಡಿಕೆದಾರರು ತಮ್ಮ ಠೇವಣಿಯನ್ನು ಕಳೆದುಕೊಳ್ಳಬೇಕಾಗುತ್ತದೆ.
ಅತ್ಯಲ್ಪಾವಧಿ ಸಾಲಗಳ ಜಾಲ (Flash Loan)
ಅಲ್ಪಾವಧಿಯ ಸಾಲಗಳು ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿವೆ. ಕಡಮೆ ಬೆಲೆಯಲ್ಲಿ ಹಣಕಾಸು ವೇದಿಕೆಯಿಂದ ಸಾಲ ಪಡೆದು ಟೋಕನ್ನುಗಳನ್ನು ಖರೀದಿಸಿ ಹೊಸ ಸ್ವತ್ತನ್ನು ಮಾಡಿ ಬೇರೆ ವೇದಿಕೆಯಲ್ಲಿ ಅದನ್ನು ತಕ್ಷಣವೇ ಲಾಭಕ್ಕೆ ಮಾರಾಟ ಮಾಡುತ್ತಾರೆ. ಈ ವ್ಯವಹಾರವನ್ನು ಒಂದೇ ವಹಿವಾಟಿನಲ್ಲಿ ಮಾಡಿ ಅಲ್ಪಾವಧಿ ಸಾಲವನ್ನು ಮರುಪಾವತಿ ಮಾಡಲಾಗುತ್ತದೆ. ಇಲ್ಲಿಯೂ ವಂಚಕರು ತಮ್ಮದೇ ಜಾಲದ ವ್ಯಕ್ತಿಗಳ ಸಹಾಯದಿಂದ ಬೇಡಿಕೆ ಹೆಚ್ಚುವಂತೆ ಖರೀದಿ/ಮಾರಾಟ ಆಗುವಂತೆ ಮಾಡಿ, ಬೆಲೆಗಳು ಹೆಚ್ಚಾದ ನಂತರ ವ್ಯವಹಾರವನ್ನು ರದ್ದುಗೊಳಿಸುತ್ತಾರೆ. ಇದರಿಂದಾಗಿ ಬೆಲೆಗಳು ತಕ್ಷಣವೇ ಕುಸಿಯುತ್ತವೆ. ಫೆಬ್ರುವರಿ ೨೦೨೩ರಲ್ಲಿ ‘ಪ್ಲಾಟಿಪಸ್ ಫೈನಾನ್ಸ್ ಫ್ಲಾö್ಯಶ್ ಲೋನ್’ ಸಂಸ್ಥೆ ಇಂಥ ದಾಳಿಗೆ ಬಲಿಯಾಯಿತು. ಅದರ ಪರಿಣಾಮವಾಗಿ ೮.೫ ಮಿಲಿಯನ್ ಡಾಲರ್ ನಷ್ಟವಾಯಿತು.
ಕೃತಕ ಬುದ್ಧಿಮತ್ತೆ (AI) ಹಗರಣಗಳು
ಕೃತಕ ಬುದ್ಧಿಮತ್ತೆಯ (Artificial Intelligence) ಆವಿಷ್ಕಾರವಾದ ಮೇಲೆ ವಂಚಕರು ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯನ್ನು ಮೋಸಗೊಳಿಸುವ ಹೊಸ ತಂತ್ರಗಳನ್ನು ಪ್ರಯೋಗಿಸಿತೊಡಗಿದ್ದಾರೆ. ಬಳಕೆದಾರರಿಗೆ ಸಲಹೆ ನೀಡುವ ಮುಖವಾಡದೊಂದಿಗೆ ನಕಲಿ ಕ್ರಿಪ್ಟೋಗಳನ್ನು ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ‘ಚಾಟ್’ಗಳ ಸಹಾಯದಿಂದ ಹೆಚ್ಚಿನ ಲಾಭದ ಹೂಡಿಕೆಯ ಅವಕಾಶಗಳನ್ನು ತಿಳಿಸಿ ನಂಬಿಸುತ್ತಾರೆ. ತಮ್ಮ ಕ್ರಿಪ್ಟೋ ಯೋಜನೆಗಳು ಅನುಮೋದನೆಗೊಂಡಿವೆಯೆಂದು ನಕಲಿ ಪ್ರಚಾರದಲ್ಲಿ ತೊಡಗುತ್ತಾರೆ. ‘ಡೀಪ್ ಫೇಕ್’ ತಂತ್ರಜ್ಞಾನ ಬಳಸಿ ಪ್ರಸಿದ್ಧ ವ್ಯಕ್ತಿಗಳ ಮುಖಚಹರೆಗಳನ್ನು ಹೊಸ ಯೋಜನೆಯ ಸಲಹೆಗಾರರನ್ನಾಗಿ ತೋರಿಸಿ ಹೂಡಿಕೆಯನ್ನು ಸೆಳೆಯುವ ತಂತ್ರ ರೂಪಿಸುತ್ತಾರೆ.
ನಕಲಿ ವಿನಿಮಯ ವೇದಿಕೆ ಮತ್ತು ‘ವ್ಯಾಲೆಟ್’ಗಳು
ಸಾಮಾಜಿಕ ಮಾಧ್ಯಮಗಳಲ್ಲಿ ಅಗ್ಗದ ಬಿಟ್ಕಾಯಿನ್ (BTC) ಜಾಹೀರಾತು ‘ಸೈಟ್’ಗಳನ್ನು ಕಾಣಬಹುದು. ಕ್ರಿಪ್ಟೋಗಳನ್ನು ಮಾರುಕಟ್ಟೆಯ ಮೌಲ್ಯಕ್ಕಿಂತ ಶೇಕಡ ೫ರಿಂದ ೧೦ ಕಡಮೆ ದರದಲ್ಲಿ ಖರೀದಿಸಬಹುದೆಂದು ಜಾಹೀರಾತು ಕೊಡುತ್ತಾರೆ. ಅಂಥಹ ವೇದಿಕೆಗಳ ಮೂಲಕ ಖರೀದಿಸಿದಾಗ ದೊಡ್ಡ ಉಳಿತಾಯದ ಭರವಸೆ ನೀಡಿ ನಕಲಿ ಕ್ರಿಪ್ಟೋಗಳನ್ನು ಕೊಳ್ಳುವಂತೆ ಮಾಡುತ್ತಾರೆ. ಹೂಡಿಕೆದಾರರಿಂದ ಹೆಚ್ಚಿನ ಆರಂಭಿಕ ಶುಲ್ಕವನ್ನು ಪಡೆಯುತ್ತಾರೆ. ನಂತರ ಹೆಚ್ಚುಹೆಚ್ಚು ಹೂಡಿಕೆ ಮಾಡಲು ಒತ್ತಾಯಿಸಲಾಗುತ್ತದೆ. ಕೆಲವು ಸಮಯದ ನಂತರ ಹೂಡಿಕೆ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಅದುವರೆಗೆ ವ್ಯವಹರಿಸುತ್ತಿದ್ದ ‘ಸೈಟ್’ ಕಣ್ಮರೆಯಾಗುತ್ತದೆ.
ಪ್ರೇಮ/ಸ್ನೇಹದ ನಟನೆ
ವಂಚನೆಯ ಜಾಲಗಳಲ್ಲಿ ಮತ್ತೊಂದು ರೀತಿಯೆಂದರೆ ‘ಡೇಟಿಂಗ್ ಸೈಟ್’ಗಳು. ಅಲ್ಲಿ ಭೇಟಿಯಾದ ವ್ಯಕ್ತಿಗಳು ಹೂಡಿಕೆದಾರರ ನಂಬಿಕೆಯನ್ನು ಗಳಿಸಿ ಕ್ರಿಪ್ಟೋ ಹೂಡಿಕೆಗಳ ಬಗೆಗೆ ಸಲಹೆ ನೀಡುವ ಸೋಗು ಹಾಕುತ್ತಾರೆ. ಮಹಿಳೆಯರ ನಕಲಿ ‘ಪ್ರೊಫೈಲ್’ಗಳ ಮೂಲಕ ಹೂಡಿಕೆದಾರರನ್ನು ಸಂಪರ್ಕಿಸಿ, ಸ್ನೇಹವನ್ನು ಸಾಧಿಸಿ, ಕ್ರಿಪ್ಟೋ ಕರೆನ್ಸಿಗಳಲ್ಲಿ ಹಣ ಹೂಡಿ ಕೆಲವು ದಿನ ಲಾಭವಾಗುವಂತೆ ವ್ಯವಹರಿಸುತ್ತಾರೆ. ವಿಶ್ವಾಸವೃದ್ಧಿಯ ಸಲುವಾಗಿ ಉಡುಗೊರೆಗಳನ್ನೂ ನೀಡಲಾಗುತ್ತದೆ. ಒಮ್ಮೆ ನಂಬಿಕೆ ಬೆಳೆಸಿ ಮತ್ತಷ್ಟು ಹಣದ ಹೂಡಿಕೆ ಮಾಡಿದಾಗ ಅವರ ಖಾತೆಯಲ್ಲಿರುವ ಹಣವನ್ನು ಒಮ್ಮೆಲೇ ಕಸಿಯುತ್ತಾರೆ.
‘ಕ್ರಿಪ್ಟೋಜ್ಯಾಕಿಂಗ್’
ಇದು ಸೈಬರ್ ಅಪರಾಧದ ಮತ್ತೊಂದು ವಿಧವಾಗಿದ್ದು, ವಂಚಕರು ಕ್ರಿಪ್ಟೋಗಾಗಿ ಗಣಿಗಾರಿಕೆಯನ್ನು ರಹಸ್ಯವಾಗಿ ಮಾಡುವ ಸಲುವಾಗಿ ಅನಧಿಕೃತವಾಗಿ ಹೂಡಿಕೆದಾರರ ಖಾತೆಯನ್ನು ‘ಮೇಲ್’ (Mail) ಮೂಲಕ ‘ಲಿಂಕ್’ಗಳನ್ನು ಕಳುಹಿಸಿ ಕದಿಯುವ (ಹ್ಯಾಕ್) ಪ್ರಯತ್ನವಾಗಿದೆ.
ವಂಚನೆಯ ಸುಳುಹುಗಳು ಮತ್ತು ತಡೆಗಟ್ಟುವಿಕೆ
- ದೊಡ್ಡ ಲಾಭಗಳ ಭರವಸೆ ಅಥವಾ ಹೂಡಿಕೆಯನ್ನು ದ್ವಿಗುಣಗೊಳಿಸುವಿಕೆಯ ಆಮಿಷಗಳು.
- ಕ್ರಿಪ್ಟೋಕರೆನ್ಸಿಯನ್ನು ಮಾತ್ರ ಪಾವತಿಯಾಗಿ ಸ್ವೀಕರಿಸಲಾಗುತ್ತದೆ ಎಂದು ತಿಳಿಸುವುದು.
- ಇಮೇಲ್ ಅಥವಾ ಸಾಮಾಜಿಕ ಮಾಧ್ಯಮಗಳ ಬರೆಹಗಳಲ್ಲಿ ತಪ್ಪು ಕಾಗುಣಿತ ಅಥವಾ ವ್ಯಾಕರಣ ದೋಷಗಳನ್ನು ಕಾಣುವುದು.
- ಉಚಿತ ಹಣದ ಭರವಸೆ ಕೊಡುವುದು.
- ಪ್ರಭಾವಿಗಳು ಅಥವಾ ಸೆಲೆಬ್ರಿಟಿಗಳು ಅನುಮೋದಿಸಿದ ನಕಲಿ ಚಿತ್ರ ಅಥವಾ ಹೇಳಿಕೆಗಳನ್ನು ಪ್ರಕಟಿಸುವುದು.
- ಹಣದ ಹೂಡಿಕೆಯ ಬಗೆಗೆ ಕನಿಷ್ಠ ವಿವರಗಳನ್ನು ಕೊಡುವುದು.
- ಒಂದೇ ದಿನದಲ್ಲಿ ಹಲವಾರು ವಹಿವಾಟುಗಳನ್ನು ಮಾಡುವುದು.
ಇವೆಲ್ಲವೂ ವಂಚನೆಯ ಜಾಡನ್ನು ತಿಳಿಸುವ ಅಂಶಗಳಾಗಿವೆ.
ವಂಚನೆಗಳಿಂದ ತಪ್ಪಿಸಿಕೊಳ್ಳಲು ದೀರ್ಘಕಾಲದ ಪ್ರತಿಷ್ಠಿತ ವಿನಿಮಯ ವೇದಿಕೆಗಳೊಂದಿಗೆ ಸಂಬಂಧ ಇಟ್ಟುಕೊಳ್ಳಬೇಕು. ಪರಿಚಯವಿಲ್ಲದ ವಿನಿಮಯ ವೇದಿಕೆಗಳಿಂದ ದೂರವಿರಬೇಕು. ಸರಕಾರಗಳಿಂದ ಅಧಿಕೃತ ಪರವಾನಗಿ ಪಡೆದ ಸುಪರಿಚಿತ ಕ್ರಿಪ್ಟೋ ವ್ಯಾಲೆಟ್ ಮತ್ತು ವಿನಿಮಯಕೇಂದ್ರಗಳಲ್ಲಿ ವ್ಯವಹರಿಸಬೇಕು. ಯಾವುದೇ ವೈಯಕ್ತಿಕ ಮಾಹಿತಿಯನ್ನು ನಮೂದಿಸುವ ಮೊದಲು ವಿನಿಮಯಕೇಂದ್ರದ ಖ್ಯಾತಿ ಮತ್ತು ವಿಧಿಬದ್ಧತೆಯ ಬಗೆಗೆ ವಿವರಗಳಿಗಾಗಿ ಕೆಲವು ಸಂಶೋಧನೆ/ಪರಿಶೀಲನೆ ಮಾಡುವುದು ಉತ್ತಮ.
ಗುಪ್ತ ಮತ್ತು ಕ್ಲಿಷ್ಟಕರ ಪಾಸ್ವರ್ಡ್ಗಳನ್ನು ಉಪಯೋಗಿಸಬೇಕು. ಉತ್ತಮ ಡಿಜಿಟಲ್ ಭದ್ರತೆಗಳ ಬಗೆಗೆ ಅಭ್ಯಾಸ ಮಾಡಬೇಕು. ಸುರಕ್ಷಿತ ಸಂಪರ್ಕಗಳು ಅಥವಾ ವಿಪಿಎನ್(VPN)ಗಳನ್ನು ಬಳಸಿಕೊಳ್ಳುವುದು ಕ್ಷೇಮ. ಯಾರಿಗೂ ವ್ಯಾಲೆಟ್ ಕೀಗಳನ್ನು ಅಥವಾ ‘ಪ್ರವೇಶ ಕೋಡ್’ಗಳನ್ನು ನೀಡಬಾರದು.
ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವ ಮೊದಲು, ಸಂಸ್ಥೆಯ ಅಥವಾ ವ್ಯಕ್ತಿಯ ಹೆಸರು ಮತ್ತು ಕ್ರಿಪ್ಟೋ ಹೆಸರನ್ನು ಅಂತರ್ಜಾಲದಲ್ಲಿ ನಮೂದಿಸಿ, ಅವುಗಳ ಬಗೆಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಶೀಲಿಸುವುದು ಅಗತ್ಯ. ಹಗರಣಗಳ ವರದಿಗಳನ್ನು ಆಗಾಗ ಓದಿ ತಿಳಿದುಕೊಳ್ಳಬೇಕು.
ಪರಿಚಯವಿಲ್ಲದ ಮತ್ತು ಅಪೇಕ್ಷಿಸದ ಸಂಪರ್ಕಗಳು ಬಂದರೆ ಪ್ರತಿಕ್ರಿಯಿಸಬಾರದು. ಕ್ರಿಪ್ಟೋ ಬ್ರೋಕರೇಜ್ ಅಥವಾ ಯಾವುದೇ ಹಣಕಾಸು ಸಂಸ್ಥೆ ಸಂಪರ್ಕಿಸಿದಾಗಲೂ ಪ್ರತಿಕ್ರಿಯಿಸದಿರುವುದು ಉತ್ತಮ.
ಯಾವುದೇ ಕೊಂಡಿ(Link) ಕ್ಲಿಕ್ ಮಾಡುವ ಮೊದಲು ಪರಿಶೀಲಿಸಬೇಕು. ಅಪರಿಚಿತರಿಂದ ಬರುವ ‘ಹೈಪರ್ಲಿಂಕ್’(Hyperlink)ಗಳನ್ನು ತೆರೆಯಬಾರದು.
ಖಾತೆಗಳನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳುವುದು ಉತ್ತಮ. ಕ್ರಿಪ್ಟೋಗೆ ಸಂಬಂಧಿಸಿದ ಖಾತೆಗಳನ್ನು ಮತ್ತು ಇತರ ಬ್ಯಾಂಕ್ ಖಾತೆಗಳನ್ನು ಯಾವುದೇ ಕಾರಣಕ್ಕೂ ಜೋಡಿಸಬಾರದು (ಲಿಂಕ್ ಮಾಡಬಾರದು). ಲಾಗಿನ್ ವಿವರಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಮತ್ತು ‘ಎರಡಂಶ’ (2FA) ತಪಾಸಣೆಯ ದೃಢೀಕರಣವನ್ನು ಸಕ್ರಿಯವಾಗಿಟ್ಟುಕೊಳ್ಳುವುದು ಸಹ ಮುಖ್ಯ.
ಕ್ರಿಪ್ಟೋದಲ್ಲಿ ವಂಚನೆಗೊಳಗಾದರೆ, ಕಳೆದುಕೊಂಡ ಹಣ ಮರಳಿ ಪಡೆಯುವ ಸಾಧ್ಯತೆಗಳು ಕಡಿಮೆ. ಆದರೆ ಸಂಬಂಧಿಸಿದ ಅಧಿಕಾರಿಗಳಿಗೆ ವಂಚನೆಯ ವಿವರಗಳನ್ನು ವರದಿ ಮಾಡುವುದು ಉತ್ತಮ ನಡೆಯಾಗಿದೆ. ಹಗರಣವನ್ನು ವರದಿ ಮಾಡಿದಾಗ, ದಕ್ಷ ಅಧಿಕಾರಿಗಳು ಅಪರಾಧಿಗಳನ್ನು ಪತ್ತೆಹಚ್ಚಿ ಕಳೆದುಕೊಂಡ ಹಣವನ್ನು ಮರಳಿಸುವ ಸಾಧ್ಯತೆಗಳೂ ಇವೆ. ಇಂದಿಗೂ ಕ್ರಿಪ್ಟೋ ಬಗೆಗೆ ಅನಿಶ್ಚಿತತೆಯ ವಾತಾವರಣ ಅನೇಕ ದೇಶಗಳಲ್ಲಿ ಮುಂದುವರಿದಿದೆ. ಈ ಕಾರಣದಿಂದಾಗಿ ವ್ಯವಹಾರಗಳಲ್ಲಿ ವಿವೇಚನೆ ಮತ್ತು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಕ್ಷೇಮಕರ.