ಕಾಲಿದಾಸಗಿರಾಂ ಸಾರಂ ಕಾಲಿದಾಸಃ ಸರಸ್ವತೀ |
ಚತುರ್ಮುಖೋsಥವಾ ಸಾಕ್ಷಾದ್ವಿದುರ್ನಾನ್ಯೇ ತು ಮಾದೃಶಾಃ ||
– ಮಲ್ಲಿನಾಥ
ಮಹಾಕವಿ ಕಾಳಿದಾಸನ ಕೃತಿಗಳಲ್ಲಿ ಆತನ ಪ್ರತಿಭಾಪ್ರಭೆಯೊಡನೆ ಪಾಂಡಿತ್ಯಪ್ರಖರತೆಯೂ ಹದವಾಗಿ ಬೆರೆತು ಹೃದ್ಯವಾಗಿ ಕಂಡುಬರುತ್ತದೆ. ಆತನ ಅನೇಕ ಪರಿಚಿತಶಾಸ್ತ್ರಗಳಲ್ಲಿ ಯೋಗವೂ ಒಂದು. ಈಚೆಗೆ ಯೋಗವನ್ನು ಒಂದು ದರ್ಶನಶಾಸ್ತ್ರವೆಂಬುದಾಗಿ ತಿಳಿಯದೆ ಬಹುಜನರು ದೈಹಿಕವ್ಯಾಯಾಮವಿಧಿಯೆಂಬಂತೆ ಮಾತ್ರ ಭಾವಿಸಿರುವುದು ಶೋಚನೀಯ. ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರ-ಧಾರಣ-ಧ್ಯಾನ-ಸಮಾದಿಗಳೆಂಬ ಅಷ್ಟಾಂಗಗಳಲ್ಲಿ ಕೇವಲ ಆಸನಕ್ಕೂ, ಸ್ವಲ್ಪಮಟ್ಟಿಗೆ ಲಘುಪ್ರಾಣಾಯಾಮಕ್ಕೂ ಹರಕು-ಮುರುಕಾಗಿ ವಿಕೃತಧ್ಯಾನಕ್ಕೂ ಬಂದಿರುವ ಜನಾದರಣೆ ಇತರ ಅಂಗಗಳಿಗೆ ಸಂದಿಲ್ಲ. ಆದರೆ ಪ್ರಾಚೀನ ಭಾರತೀಯರು ಯೋಗವನ್ನು ವೇದಾಂತದೊಡನೆ ಸಮನ್ವಯಗೊಳಿಸಿ ಆತ್ಮಾನುಷ್ಠಾನಕ್ಕೆ ಸಾಧನವನ್ನಾಗಿಸಿಕೊಂಡಿದ್ದಾರೆ. ವಿಶೇಷತಃ ವೈಷ್ಣವದರ್ಶನಗಳು ಸಾಂಖ್ಯದಿಂದಲೂ ಶೈವದರ್ಶನಗಳು ಯೋಗದಿಂದಲೂ ಸ್ಫೂರ್ತಿ ಪಡೆದಿವೆ. ಆಯುರ್ವೇದವಂತೂ ಸಾಂಖ್ಯ-ಯೋಗಗಳೆರಡನ್ನೂ ತನ್ನ ಸ್ವಾಸ್ಥ್ಯಸಂಹಿತೆಯ ಮೂಲದ್ರವ್ಯಗಳನ್ನಾಗಿ ಬಳಸಿಕೊಂಡಿದೆ. `ಚಿತ್ತವೃತ್ತಿನಿರೋಧವೇ ಯೋಗ’ವೆಂಬ ಭಗವಾನ್ ಪತಂಜಲಿಗಳ ಮಾತಿನಂತೆ `ಯೋಗ’ವೆಂಬ ಶಬ್ದಾರ್ಥವನ್ನು ಪಾರಿಭಾಷಿಕವಾಗಿ ತಿಳಿದ ಕಾಳಿದಾಸನಿಗೆ ಈ ದರ್ಶನವು ಪ್ರಾಯಶಃ ಸ್ವಾನುಭವಕ್ಕೂ ಬಂದ ಅಧ್ಯಯನವಾಗಿರಬೇಕು. ಇಂಥ ಅನುಭೂತಿಯನ್ನು ತನ್ನ ಕಾವ್ಯಗಳಲ್ಲಿ ಹೇಗೆ ಸಮುಚಿತವಾಗಿ ಬಳಸಿಕೊಂಡಿರುವನೆಂಬುದನ್ನು ಪ್ರಸ್ತುತ ನೋಡೋಣ.
ಮೊದಲಿಗೆ ಈತನ ಮಹಾಕಾವ್ಯ `ರಘುವಂಶ’ದಲ್ಲಿ ಯೋಗವಿಚಾರವನ್ನು ಗಮನಿಸಬಹುದು. ಈ ಉದ್ಘಕೃತಿ ಕಾಳಿದಾಸನ ಪ್ರತಿಭಾ-ಪಾಂಡಿತ್ಯ ಸರ್ವಸ್ವ ಮಾತ್ರವಲ್ಲ, ದರ್ಶನಸಮಷ್ಟಿಯೂ ಹೌದು. ಇದು ಸಮಗ್ರ ಭಾರತೀಯ ಜೀವನದ ಸಾರಸತ್ತ್ವ; ವರ್ಣಾಶ್ರಮಾದಿ ಸಕಲಧರ್ಮಗಳ, ಚತುರ್ವರ್ಗಗಳ ಸಂಜೀವನಿ. ಇಲ್ಲಿ ರಘುವಂಶದ ಮಹಾರಾಜರ ಜೀವಿತಾದರ್ಶಗಳನ್ನು ಹೇಳುವಾಗಲೇ ಕಾಳಿದಾಸನು `ಯೋಗೇನಾಂತೇ ತನುತ್ಯಜಾಂ’ (I-೮) ಎಂದು ಯೋಗಮಾರ್ಗದಿಂದ ಅವರು ದೇಹತ್ಯಾಗ ಮಾಡುತ್ತಿದ್ದುದನ್ನು ಹೇಳುತ್ತಾನೆ. ಇಲ್ಲಿ ಯೋಗವೆಂದರೆ ಪ್ರಾಣಾಪಾನಗಳ ನಿರೋಧ, ರಜಸ್ತಮೋಗುಣಗಳ ನಿಯಮನ, ಸತ್ತ್ವೋದ್ರೇಕ, ಅನಾವೃತ್ತಿ ಎಂದೆಲ್ಲ ಅರ್ಥವಿದೆ. ಆದುದರಿಂದಲೇ ಪಾತಂಜಲಶಾಸ್ತ್ರವು `ತದಾ ದ್ರಷ್ಟುಃ ಸ್ವರೂಪೇsವಸ್ಥಾನಂ’ ಎಂದು ಚಿತ್ತವೃತ್ತಿನಿರೋಧದ ಬಳಿಕ ಸ್ವಸ್ವರೂಪದರ್ಶನವಾಗುವುದು ಎಂದಿದೆ. ಈ ಸ್ವಸ್ವರೂಪದರ್ಶನಾವಸರದ ಅನುಸಂಧಾನವನ್ನೇ ಶ್ರೀ ಶಂಕರಭಗವತ್ಪಾದರು ಭಕ್ತಿಯೆಂದಿದ್ದಾರೆ (`ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೇ’ – `ವಿವೇಕಚೂಡಾಮಣಿ’). ಇದರ ಫಲವೇ ಅದ್ವೈತಾನುಭೂತಿ.
ಇಂಥ ಯೋಗಮಾರ್ಗದಿಂದ ದೇಹತ್ಯಾಗ ಮತ್ತು ತತ್ಪೂರ್ವಕ ವಾನಪ್ರಸ್ಥ-ಸಂನ್ಯಾಸ ಜೀವನವನ್ನು ಕಾಳಿದಾಸನು ರಘುಮಹಾರಾಜರಲ್ಲಿ ಅನನ್ಯವಾಗಿ ವರ್ಣಿಸಿದ್ದಾನೆ. ಒಂದು ಕಡೆ ರಘುವಿನ ಯೋಗವನ್ನೂ, ಮತ್ತೊಂದು ಕಡೆ ಅವನ ಪುತ್ರ ಅಜನ ರಾಜ್ಞಿಕಜೀವನವನ್ನು ಹೊಂದಿಸಿ ನೈಸ್ತುಲ್ಯವಾಗಿ ಕವನಿಸಿದ್ದಾನೆ (ಗಿII – ೧೭ರಿಂದ ೨೫). ಇಲ್ಲಿ ಮುಖ್ಯವಾಗಿ ಪ್ರಣಿಧಾನಯೋಗಶಕ್ತಿಯಿಂದ ದೇಹದ ಪಂಚಪ್ರಾಣಗಳನ್ನೂ ರಘುವು ಸಂಯಮ ಮಾಡಿದ ವಿಚಾರ ಬರುತ್ತದೆ. ದೇಹದ ಎಲ್ಲ (ಅನ್ನಮಯ ವ್ಯಾಪಾರಗಳಿಗೆ) ಬಾಹ್ಯಸಂಬಂಧಕ್ಕೆ ಪಂಚಪ್ರಾಣಗಳೇ ಮುಖ್ಯಕಾರಣ. ಇವುಗಳನ್ನು ಗ್ರಹಿಸುವುದು ಅತ್ಯವಶ್ಯ. (ಇದರ ಬಗೆಗೆ ಕಾಳಿದಾಸನು ತನ್ನ ನಾಟಕಗಳಲ್ಲಿಯೂ ಹೇಳಿದ್ದಾನೆ: `ಅಂತರ್ಯಶ್ಚ ಮುಮುಕ್ಷುಭಿರ್ನಿಯಮಿತೇಪ್ರಾಣಾಧಿಭಿರ್ಮೃಗ್ಯತೇ’ ಎಂದು ವಿಕ್ರಮೋರ್ವಶೀಯದ ನಾಂದಿಯಲ್ಲೂ `ಪ್ರಾಣಾನಾಮನಿಲೇನವೃತ್ತಿರುಚಿತಾ’ ಎಂದು ಶಾಕುಂತಲದಲ್ಲೂ (ಗಿII-೧೨) ತಿಳಿಸಿರುವುದು ಸ್ಮರಣೀಯ.) ಇದಲ್ಲದೆ ಇಂಥ ಕಾರ್ಯಕ್ಕಾಗಿ (ಸಮಾಧಿಪೂರ್ವದ `ಧಾರಣ’ಕ್ಕಾಗಿ) ಆಸನಶುದ್ಧಿಯನ್ನವಲಂಬಿಸಿ ದರ್ಭಾಸೀನನಾದನೆಂದೂ ಹೇಳಿದ್ದಾನೆ. `ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ ಪಂಡಿತಂ ಬುಧಾಃ’ ಎಂಬ ಗೀತಾವಾಕ್ಯದಂತೆ (Iಗಿ:೧೯) ಕರ್ಮಬೀಜವನ್ನು ದಹಿಸಿ ಅನಾವೃತ್ತಿ ಪಡೆಯಲು ರಘುವು ಜ್ಞಾನವನ್ನವಲಂಬಿಸಿದನು. ಇದರಿಂದಾಗಿ ಯೋಗವು ಅಖಂಡಾನಂದಾನುಭವದ ಅದ್ವೈತಸಾಧನೆಗೆ ಪ್ರಶಸ್ತಮಾರ್ಗವೆಂದು ಕಾಳಿದಾಸನು ಅರಿತಂತೆ ಸ್ಪಷ್ಟವಾಗುತ್ತದೆ. ಇದರೊಟ್ಟಿಗೆ ರಘುವು ಸುಖದುಃಖಗಳೆಂಬ ಗುಣತ್ರಯವನ್ನು ಮೀರಿ ನಿರ್ಗುಣೋಪಾಸನೆಯಲ್ಲಿ ತೊಡಗಲು ಪ್ರಕೃತಿವಶದ ಸ್ವಾತ್ಮದರ್ಶನದವರೆಗೂ ವಿರಮಿಸದೆ ಧ್ಯಾನಿಸಿದ. ಈ ಬಳಿಕ ರಘುವು ಸಿದ್ಧಿ ಪಡೆದು ಮಹಾಸಮಾಧಿಸ್ಥನಾದ ವರ್ಣನೆಯನ್ನು ಕವಿಯು ಮಾಡಿದ್ದಾನೆ; ಈ ಮುನ್ನವೇ ಲಭ್ಯವಾದ ಸಕಲ ಸಿದ್ಧಿಗಳನ್ನು ತೃಣೀಕರಿಸಿ ರಘುವು `ತಮಸಃ ಪರಮಾಪದವ್ಯಯಂ ಪುರುಷಂ ಯೋಗಸಮಾಧಿನಾ ರಘುಃ’ (ಪ್ರಾಪ) ಎಂದು ಮುಗಿಸಿದ್ದಾನೆ.
ಇದಲ್ಲದೆ ಕವಿಯು ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರೂ ಯೋಗಮಾರ್ಗದಿಂದ ಮುಕ್ತರಾದ ವಿಧಾನವನ್ನು ತಿಳಿಸಿದ್ದಾನೆ. ಸೀತೆಯು ಭೂಪ್ರವೇಶ ಮಾಡಿದರೆ, ಲಕ್ಷ್ಮಣನು ಸರಯೂತೀರದಲ್ಲಿ ಮುಕ್ತನಾದ. ಶ್ರೀರಾಮನು `ಮಹಾಪ್ರಸ್ಥಾನ’ ವಿಧಿಯಿಂದ ಸ್ವರ್ಗ ಸೇರಿದ. ಕಾಳಿದಾಸಮಹಾಕವಿಗೆ `ರಘುವಂಶ’ದ ಮಹಾರಾಜರ ಯೋಗಮಾರ್ಗದ ಮುಕ್ತಿವರ್ಣನೆಯು ಎಷ್ಟು ಸ್ವಾನುಭೂತಿಸಹಜವೋ `ಕುಮಾರಸಂಭವ’ ಮಹಾಕಾವ್ಯದ ನಾಯಕ ಪರಮೇಶ್ವರನ ನಿರಂತರಯೋಗಾಚರಣೆಯ ವಿಶದೀಕರಣವೂ ಅಷ್ಟೇ ಸಹಜ.
ಈಶ್ವರನು ನಿರಂತರವೂ ಸಮಾಧಿಯಲ್ಲಿದ್ದ ವಿಚಾರವನ್ನು ಆದಿಯಲ್ಲಿಯೇ ಪ್ರಸ್ತಾವಿಸಿದ್ದಾನೆ (I-೫೯). ಅಷ್ಟಾಂಗಯೋಗದ ಅಂತಿಮಾವಸ್ಥೆ ಶಿವನ ನಿರಂತರನೈಜಾವಸ್ಥೆಯಾಗಿತ್ತು. ಹೀಗಿದ್ದುದರಿಂದಲೇ ಬಾಹ್ಯವಿಚಾರಗಳು ಆತನಿಗೆ ತಟ್ಟದಾದವು. ನಿರಸ್ತಕಾಮನೂ ಆದ ಸದಾಶಿವನು ಅದೇಕೆ ತಪಸ್ಸು ಮಾಡುತ್ತಾನೆಂದು ಕವಿಗೇ ವಿಸ್ಮಯ. [`ಸ್ವಯಂ ವಿಧಾತಾ ತಪಸಃ ಫಲಾನಾಂ ಕೇನಾಪಿ ಕಾಮೇನ ತಪಶ್ಚಚಾರ’ (I-೫೭)]. ಇಂಥ ಶಿವನನ್ನು ತನ್ನ ತಪಸ್ಸಿನಿಂದಲೇ ಪಾರ್ವತಿ ಪಡೆದಳು; ಇದನ್ನು ಕಾಳಿದಾಸನೇ ಶಿವನಿಂದ ಹೇಳಿಸಿದ್ದಾನೆ! (`ಅದ್ಯಪ್ರಭೃತ್ಯವನತಾಂಗಿ ತವಾಸ್ಮಿ ದಾಸಃ ಕ್ರೀತಸ್ತಪೋಭಿಃ’ – ಇಂದಿನಿಂದ ನಿನಗೆ ನಾನು ದಾಸ; ನಿನ್ನ ತಪಸ್ಸಿನಿಂದ ಕ್ರೀತನಾಗಿದ್ದೇನೆ – ಗಿ-೮೬). ಶ್ರೀ ಶಂಕರಭಗವತ್ಪಾದರೂ ಶ್ರೀಮದಪ್ಪಯ್ಯದೀಕ್ಷಿತರೂ `ನಿಜತಪಃಫಲಾಭ್ಯಾಂ’ ಎಂದೂ `ಪರಸ್ಪರತಪಸ್ಸಂಪತ್ಫಲಾಯಿತ-ಪರಸ್ಪರೌ’ ಎಂದೂ ವರ್ಣಿಸಿದ್ದಾರೆ. ಅಂತೆಯೇ ಪಾರ್ವತಿಯ ತಪಸ್ಸಾದರೂ ಯೋಗವೇ (ನೋಡಿ: `ಯೋಗಸ್ಥಃ ಕುರು ಕರ್ಮಾಣಿ’-ಭಗವದ್ಗೀತಾ II – ೪೮). `ಸಮಾಧಿಮಾಸ್ಥಾಯ ತಪೋಭಿರಾತ್ಮನಃ’ (ಕುಮಾರಸಂಭವ ಗಿ-೧): ಸಮಾಧಿಯನ್ನವಲಂಬಿಸಿ ತನ್ನ ತಪಸ್ಸಿನಿಂದಲೇ ಪಾರ್ವತಿಯು ಶಿವನನ್ನು ಪಡೆಯಲಿಚ್ಛಿಸಿದಳು. ಅಂತೆಯೇ ಫಲೋದಯವಾಗುವವರೆಗೂ ತಪಿಸಿದಳು. [ಫಲೋದಯಾಂತಾಯ ತಪಃಸಮಾಧಯೇ (ಗಿ-೬)]. ಇದಕ್ಕೆ ಬೇಕಾದ ಯಮ-ನಿಯಮ-ಆಸನಾದಿಗಳನ್ನೆಲ್ಲ ಅಭ್ಯಸಿಸಿದಳು `ನಿಯಮಸ್ಥಾ’ (ಗಿ-೧೩).
ಇನ್ನು ಶಿವನ ತಪೋರೀತಿಯಂತೂ ಅತ್ಯಂತ ರಮಣೀಯವಾಗಿ ಶಾಸ್ತ್ರಶುದ್ಧತೆಯೊಡಗೂಡಿ ವರ್ಣಿತವಾಗಿದೆ. ಇದು ಕಾಳಿದಾಸನ ಪ್ರತಿಭಾಪಾಂಡಿತ್ಯಪರಾಕಾಷ್ಠೆ (ಕುಮಾರಸಂಭವ – III: ೪೪-೫೦). ಹುಲಿಯ ಚರ್ಮದ ಮೇಲೆ ವೀರಾಸನ (ಅಥವಾ ಮತ್ತಾವುದೇ ಸುಖಾಸನ)ದಲ್ಲಿ ಸಂಯಮಿಯಾಗಿ (ಶಮದಮಾದಿ ಷಟ್ಕವೇ ಮೊದಲಾದ ಸಾಧನಚತುಷ್ಟಯಗಳಿಂದ, ಯಮ-ನಿಯಮಾದಿಗಳಿಂದ ಕೂಡಿದವನು) ಭುಜಗಳನ್ನು ಬಾಗಿಸಿ ಕರಗಳನ್ನು ಅಂಕಮಧ್ಯದಲ್ಲಿರಿಸಿ ಕುಳಿತಿದ್ದ. ಹುಬ್ಬುಗಳನ್ನು ಕದಲಿಸದೆ, ಕಣ್ಣೆವೆಗಳನ್ನು ಮಿಟಕಿಸದೆ, ನಾಸಾಗ್ರ (ಭ್ರೂಮಧ್ಯದ ಆಜ್ಞಾಚಕ್ರಸ್ಥಾನ)ದಲ್ಲಿ ನಿಷ್ಕಂಪವಾಗಿ ಸ್ತಿಮಿತಪ್ರಕಾಶದ ತಾರಕೆಗಳನ್ನು ನೆಲೆಗೊಳಿಸಿದ್ದ. ಮಳೆಯಿಲ್ಲದ ಮೋಡದಂತೆ, ಅಲೆಗಳಿಲ್ಲದ ಸಾಗರದಂತೆ ನಿಶ್ಚಲವಾಗಿ, ಗಾಳಿಗಲ್ಲಾಡದ ಸೊಡರಂತೆ ಒಳಗಿನ ಪಂಚಪ್ರಾಣಗಳನ್ನು ನಿರೋಧಿಸಿದ್ದ. ಆತನ ಶಿರಸ್ಸಿನಲ್ಲಿದ್ದ ಚಂದ್ರನ ಕಾಂತಿಯನ್ನೂ ಬ್ರಹ್ಮರಂಧ್ರದಿಂದ ಏಳುತ್ತಿದ್ದ ಕಾಂತಿಯು
ಮೀರಿಸುತ್ತಿತ್ತು (ಈ ಅವಸ್ಥೆಯು ಜೀವಿಗಳ ವಿದೇಹಮುಕ್ತಿಗೆ ಸಮನಾದದ್ದು). ನವರಂಧ್ರಗಳನ್ನೂ ಮನಸ್ಸನ್ನೂ ನಿಗ್ರಹಿಸಿ, ಹೃದಯದಲ್ಲಿ ಪ್ರಣಿಧಾನವಶನಾದ ಅಕ್ಷರನನ್ನು ನೆಲೆಗೊಳಿಸಿಕೊಂಡಿದ್ದನು. ಈ ಪರಮಾತ್ಮತತ್ತ್ವವನ್ನು
ಕ್ಷೇತ್ರಜ್ಞರೆಲ್ಲರೂ ನಿತ್ಯನೆಂದು ತಿಳಿಯುತ್ತಾರೆ – `ಯಮಕ್ಷರಂ ಕ್ಷೇತ್ರವಿದೋ ವಿದುಸ್ತಂ’ (ಇಲ್ಲಿ `ಕ್ಷೇತ್ರವಿದಃ’ ಎಂಬ ಬಹುವಚನದಿಂದಲೇ ಭಗವದ್ಗೀತೆಯ `ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ’ (ಗೀತಾ ಘಿIII-೨) ಎಂಬ ಉಕ್ತಿಗೆ ಸಂಪ್ರದಾಯದಿಂದಲೂ ಕ್ಷೇತ್ರಜ್ಞನಾದ ಜೀವಾತ್ಮನೂ ಅಕ್ಷರನಾದ ಪರಮಾತ್ಮನೂ ಆತ್ಯಂತಿಕವಾಗಿ ಒಂದೇ ಎಂಬ ಅದ್ವೈತತ್ವವು ಬೆಳೆದು ಬಂದದ್ದು ತಿಳಿಯುತ್ತದೆ). ಇವೆಲ್ಲಕ್ಕೂ ಕಿರೀಟಪ್ರಾಯವಾಗಿ `ಆತ್ಮಾನ-ಮಾತ್ಮನ್ಯವಲೋಕಯಂತಂ’ ಎಂಬ ಮಾತಿನಿಂದ ಈ ಬಗೆಯ ಸಮಾಧಿಯೋಗವು ಸ್ವಸ್ವರೂಪದರ್ಶನದಲ್ಲಿ ಪರ್ಯವಸಿಸುತ್ತದೆ; ತ್ರಿಪುಟೀರಾಹಿತ್ಯದಿಂದಾಗಿ ಅಖಂಡಾನಂದದಲ್ಲಿ ತಾನೇ ತಾನಾಗುತ್ತದೆಂದು ತಿಳಿಯುವುದು. ಹೀಗೆ ಕವಿಯು ಯೋಗದ ಪರಮಾರ್ಥವನ್ನು ಸ್ವಾತ್ಮತತ್ತ್ವಸಾಕ್ಷಾತ್ಕಾರದಲ್ಲಿ ತೋರಿಸಿದ್ದಾನೆ.
ಪ್ರಾಣಾಪಾನಗಳ ಬೆಸೆಯುವಿಕೆ ಹಾಗೂ ಜೀವ-ಬ್ರಹ್ಮೈಕ್ಯವೇ ಯೋಗವೆಂದು `ಯೋಗ’ ಶಬ್ದದ ಯೌಗಿಕಾರ್ಥದಿಂದಲೂ ನಿರ್ವಚಿಸಬಹುದಾಗಿದೆ. ಇದೇ ಕಾಳಿದಾಸನ ಸ್ವಾನುಭೂತಿಸಾರ.
ಶ್ರೀ ಕಾಲಿದಾಸಕವಿಕೋಕಿಲವಾಗ್ವಿಭೂತಿ-
ಭೂಮಾನುಭೂತಿಮಮಲಾಂ ಪ್ರತಿಭಾಪ್ರಭಾವಾಮ್ |
ಯೋಗಪ್ರಯೋಗಭವಭಾವ್ಯಮಹಾದ್ವಯತ್ವ-
ಸ್ಪಂದಾಂ ಜಗಾದ ಕವಿರೇಷ ಮುದೇ ಸಹಾರ್ದಂ ||
ಅನಲ್ಪಾರ್ಥಸ್ಫುಟಾಂ ವಾಣೀಂ ಕಾಲಿದಾಸಸ್ಯ ಸತ್ಕವೇಃ |
ಮಿತಶಕ್ತಿರಯಂ ಬ್ರೂತೇ ಯೋಗಯುಕ್ತಾಂ ಯಥಾಮತಿ ||
Comments are closed.