ಇತ್ತು ಬಸ್ಸು ಕಾರು ರೈಲು ಇಲ್ಲದೆ ಒಂದು ಕಾಲ |
ಎಲ್ಲಾ ಇದ್ದರೂ ಆರೋಗ್ಯ ಇಲ್ಲ, ಇದು ಎಂಥ ಕಲಿಗಾಲ ||
ದೂರದ ಉರಿನ ನೆಂಟರು ಬಂದರೆ ಕಾಯುತಲಿದ್ದರು ಆಗ |
ಪತ್ರ ಬರೆದು ಉತ್ತರ ಪಡೆದು ಆಗಮಿಸುವರು ಬೇಗ ||
ಅಜ್ಜಿ-ತಾತ, ಅತ್ತೆ-ಮಾವ, ಅಕ್ಕ-ಭಾವ ಬಂದರೆ |
ಉಳಿದುಕೊಂಡರೆ ವಾರಗಟ್ಟಲೆ ಯಾರಿಗೂ ಇಲ್ಲ ತೊಂದರೆ ||
ಚಿಣ್ಣರ ದಂಡು ಓಡಿ ಬರುತ್ತಿತ್ತು ಮಾತನಾಡಿಸಲು ಆಗ |
ಒಡನೆಯೇ ದೃಷ್ಟಿ ಬೀಳುತಲಿತ್ತು ನೋಡಿ ಕೈಯಲಿ ಬ್ಯಾಗ ||
ವಾರಗಟ್ಟಲೆ ಮಾಡಿದ ತಿನಿಸು ತುಂಬಿರುತಿತ್ತು ಚೀಲ |
ತೋಟದಿ ಬೆಳೆದ ತಾಜಾ ತರಕಾರಿ ಕಡುರುಚಿ ಹಣ್ಣು ಹಂಪಲ ||
ಒಂದೇ ಎರಡೇ ಹತ್ತಾರು ತರಹ ಚೀಲದಲ್ಲಿರುವವು ಹಣ್ಣು |
ಚೀಲವ ಬಿಚ್ಚಿ ಕೊಡಲು ಕುಳಿತಾಗ ಅರಳಿತು ಚಿಣ್ಣರ ಕಣ್ಣು ||
ಚೀಲದ ಸುತ್ತ ಸುತ್ತಿದ ಮಕ್ಕಳ ಸೆಳೆಯುವ ಮಾಯಾಚೀಲ |
ಎಲ್ಲಾ ವಿಟಮಿನ್ ಅಲ್ಲಿಯೇ ಇತ್ತು ಅದುವೇ ಒಳ್ಳೆಯ ಕಾಲ ||
ಜಂಕ್ಫಡ್, ಫಾಸ್ಟ್ಫಡ್ ಬೇಡವೇ ಬೇಡ ಅನ್ನುವ ಮಾತ ಹೇಳು |
ಹಿಮ್ಮಡಿ ತೊಳ್ಕ, ಹಿಂದಿನದ್ದು ನೆನ್ಕ ಅನ್ನುವ ಮಾತು ಕೇಳು ||
– ಬಿ. ಪರಮೇಶ್