ಅವರು ತಮ್ಮ ಮಾತಿಗೆ ಚಾಚೂ ತಪ್ಪದೆ ನಡೆದುಕೊಂಡರು.
ಈ ನನ್ನ ಅನುಭವವು ಸೆಪ್ಟೆಂಬರ್ ೧೧, ೨೦೦೧ರಂದು ನಡೆದಿದ್ದು. ಅಂದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ ಉಗ್ರಗಾಮಿ ದಾಳಿಗೆ ಸಂಬಂಧಪಟ್ಟ ಸತ್ಯಘಟನೆಯಿದು. ಜಗತ್ತಿನ ಬಹುತೇಕ ಕಡೆ ಇಂದಿಗೂ ಮಾನವೀಯತೆಯಿದೆ, ಅದರ ಬಗ್ಗೆ ನಾವು ಹೆಮ್ಮೆಪಡಬೇಕಿದೆ ಎನ್ನುವ ಒಂದೇ ಒಂದು ಉದ್ದೇಶದಿಂದ ನಿಮ್ಮೊಡನೆ ಈ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ.
ಸೆಪ್ಟೆಂಬರ್ ೧೧, ೨೦೦೧ನೇ ತಾರೀಖಿನ ಮಂಗಳವಾರ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ, ನಮಗೆ ಮುಂದಾಗುವ ಘಟನೆಗಳ ಬಗ್ಗೆ ಯಾವುದೇ ಸುಳಿವಿರಲಿಲ್ಲ, ನಮ್ಮ ವಿಮಾನವು ಜರ್ಮನಿಯ ಫ್ರಾಂಕ್ಫರ್ಟ್ ವಿಮಾನನಿಲ್ದಾಣವನ್ನು ಬಿಟ್ಟು ಅದಾಗಲೇ ೫ ಗಂಟೆಗಳಾಗಿತ್ತು. ಉತ್ತರ ಅಟ್ಲಾಂಟಿಕ್ ಸಾಗರದ ಮೇಲೆ ಹಾರುವಾಗ, ಒಮ್ಮೆಗೇ ಶೌಚಾಲಯದ ಬಳಿ ಹಾಕಿದ್ದ ಪರದೆಗಳನ್ನು ತೆರೆಯಲಾಯಿತು. ನನಗೆ ಕೂಡಲೇ ಕಾಕ್ಪಿಟ್ಟಿಗೆ ಹೋಗಿ ಕ್ಯಾಪ್ಟನ್ನನ್ನು ಕಾಣುವಂತೆ ಸೂಚನೆ ಬಂದಿತು. ನಾನು ಅಲ್ಲಿ ಹೋಗಿ ನೋಡಲು, ಉಳಿದ ವಿಮಾನ ಸಿಬ್ಬಂದಿಯು ಗಂಭೀರ ಮುಖಚಹರೆಯುಳ್ಳವರಾಗಿದ್ದಂತೆ ಭಾಸವಾಯಿತು. ನಮ್ಮ ಕ್ಯಾಪ್ಟನ್ ಅಟ್ಲಾಂಟಾ ನಗರದ (ಅಮೆರಿಕ), ಡೆಲ್ಟಾ ಏರ್ಲೈನ್ಸ್ ಮುಖ್ಯ ಕಚೇರಿಯಿಂದ ಬಂದ ಸೂಚನೆಯ ಚೀಟಿಯನ್ನು ನನ್ನ ಕೈಗಿತ್ತರು. ಅದರಲ್ಲಿ “ಅಮೆರಿಕದ ಎಲ್ಲ ನಿಲ್ದಾಣಗಳನ್ನು ಮುಚ್ಚಲಾಗಿದೆ. ನಿಮಗೆ ಸಮೀಪದಲ್ಲಿರುವ ನಿಲ್ದಾಣವೊಂದರಲ್ಲಿ ತ್ವರಿತವಾಗಿ ವಿಮಾನವನ್ನು ಇಳಿಸಿ” ಎಂದಿತ್ತು. ಇದರರ್ಥವೇನೆಂದು ಯಾರೊಬ್ಬರೂ ಪ್ರಶ್ನಿಸುವ ಧೈರ್ಯವನ್ನು ಮಾಡಲಿಲ್ಲ. ನಮಗೆ ಇದು ಬಹಳ ಗಂಭೀರವಾದ ಪರಿಸ್ಥಿತಿಯೆಂದು ಅರ್ಥವಾಗಿತ್ತು. ಸಮಯವನ್ನು ವ್ಯರ್ಥಗೊಳಿಸದೆ ತಕ್ಷಣವೇ ಒಣ ಭೂ ಪ್ರದೇಶವನ್ನು ನಾವು ಹುಡುಕಬೇಕಿತ್ತು. ಆಗ ನಮಗೆ ತಿಳಿದಿದ್ದು ನಾವಾಗಲೇ ಸಮೀಪವಿದ್ದ ವಿಮಾನನಿಲ್ದಾಣವಾದ `ಗ್ಯಾಂಡರ್’ನ್ನು ದಾಟಿ ೪೦೦ ಮೈಲಿ ಪಯಣಿಸಿದ್ದೆವು. ನಮ್ಮ ಕ್ಯಾಪ್ಟನ್ ಕೆನಡಾದ ವಿಮಾನಸಂಚಾರ ಸಂಪರ್ಕಾಧಿಕಾರಿಯಿಂದ ಮಾರ್ಗ ಬದಲಾವಣೆಗೆ ಪರವಾನಿಗೆ ಕೇಳಲು, ಆತ ಮತ್ತೇನೂ ಪ್ರಶ್ನಿಸದೆ ಒಪ್ಪಿಗೆಯಿತ್ತರು. ಸಂಪರ್ಕಾಧಿಕಾರಿ ಯಾವುದೇ ತಕರಾರಿಲ್ಲದೆ ಏಕೆ ಪರವಾನಿಗೆಯಿತ್ತರು ಎಂಬುದಕ್ಕೆ ಕಾರಣವು ನಂತರವೇ ತಿಳಿದದ್ದು!
ತುರ್ತು ಭೂಸ್ಪರ್ಶ
ಸಿಬ್ಬಂದಿಯು ವಿಮಾನವನ್ನು ಇಳಿಸಲು ಸಿದ್ಧತೆಯನ್ನು ಮಾಡುತ್ತಿರುವಾಗಲೇ, ಅಟ್ಲಾಂಟಾದಿಂದ ನಮಗೆ ನ್ಯೂಯಾರ್ಕ್ ನಗರದ ಮೇಲೆ ಉಗ್ರಗಾಮಿ ದಾಳಿಯಾಗಿದೆ ಎಂಬ ಮಾಹಿತಿ ಸಿಕ್ಕಿತು. ಐದು ನಿಮಿಷಗಳ ಬಳಿಕ `ಕೆಲ ವಿಮಾನಗಳು ಅಪಹರಿಸಲ್ಪಟ್ಟಿವೆ’ ಎಂದು ಮತ್ತೊಂದು ಸಂದೇಶ ಬಂದಿತು. ನಾವು ಪ್ರಯಾಣಿಕರಿಗೆ ಗಾಬರಿಯನ್ನುಂಟು ಮಾಡಲಿಚ್ಛಿಸದೆ ವಿಷಯವನ್ನು ಮರೆಮಾಚಿದೆವು. “ತಾಂತ್ರಿಕ ದೋಷದಿಂದಾಗಿ ವಿಮಾನವನ್ನು ತುರ್ತಾಗಿ ಗ್ಯಾಂಡರ್ (ನ್ಯೂ ಫೌಂಡ್ಲ್ಯಾಂಡ್)ನಲ್ಲಿ ಇಳಿಸಲಾಗುತ್ತಿದೆ” ಎಂದು ಸೂಚನೆಯನ್ನು ನೀಡಿದೆವು. ಪ್ರಯಾಣಿಕರು ಗೊಣಗಾಡುವುದು, ಬೇಸರದಿಂದ ಲೊಚಗುಟ್ಟುವುದು ಕೇಳಿಸಿತು. ಆದರೆ ನಮಗದೇನು ಹೊಸದಲ್ಲ ಬಿಡಿ! ನಲವತ್ತು ನಿಮಿಷಗಳ ಬಳಿಕ ಗ್ಯಾಂಡರ್ನಲ್ಲಿ ವಿಮಾನವನ್ನು ಇಳಿಸಲಾಯಿತು. ಆಗ ಅಲ್ಲಿ ಮಧ್ಯಾಹ್ನದ ೧೨.೩೦ರ ಸಮಯ.
ಆ ಹೊತ್ತಿಗಾಗಲೇ ಅಲ್ಲಿ ಸುಮಾರು ಇಪ್ಪತ್ತು ವಿಮಾನಗಳಿದ್ದವು. ಅವೂ ಸಹ ನಮ್ಮಂತೆಯೇ ಜಗತ್ತಿನ ವಿವಿಧ ಭಾಗಗಳಿಂದ ಅಮೆರಿಕದತ್ತ ಹೊರಟು, ಪರ್ಯಾಯ ಮಾರ್ಗವಾಗಿ ಗ್ಯಾಂಡರ್ನಲ್ಲಿ ತುರ್ತಾಗಿ ಬಂದಿಳಿದಿದ್ದವು. ಭೂಸ್ಪರ್ಶವಾಗುತ್ತಿದ್ದಂತೆಯೇ ನಮ್ಮ ಕ್ಯಾಪ್ಟನ್ ಈ ರೀತಿಯಾಗಿ ನಿಜಸುದ್ದಿಯನ್ನು ಘೋಷಿಸಿದರು – “ಪ್ರಿಯ ಪ್ರಯಾಣಿಕರೇ, ನಿಮ್ಮ ಸುತ್ತಲೂ ಇರುವ ಹತ್ತಾರು ವಿಮಾನಗಳನ್ನು ನೋಡಿ, ಅವೂ ನಮ್ಮ ವಿಮಾನದಂತೆಯೇ ತಾಂತ್ರಿಕ ದೋಷಕ್ಕೆ ಒಳಪಟ್ಟಿರಬಹುದು ಎಂದುಕೊಳ್ಳುತ್ತಿದ್ದೀರೇನೋ! ಆದರೆ ನಿಜಸಂಗತಿಯೆಂದರೆ, ನಾವಿಲ್ಲಿರುವುದು ಬೇರೆ ಕಾರಣಕ್ಕಾಗಿ…” ಎಲ್ಲರಿಗೂ ನ್ಯೂಯಾರ್ಕ್ ಪಟ್ಟಣದ ಮೇಲಾದ ಉಗ್ರಗಾಮಿ ದಾಳಿಯ ಬಗ್ಗೆ ನಮಗೆ ತಿಳಿದಷ್ಟನ್ನು ವಿವರಿಸಿದೆವು.
ಗ್ಯಾಂಡರ್ ನಗರದ ಪಕ್ಷಿನೋಟ
ನಮಗೆ ಅವರಿಂದ ದೀರ್ಘವಾದ ನಿಟ್ಟುಸಿರು, ಅಪನಂಬಿಕೆಯ ನೋಟವೊಂದು ಎದುರಾಯಿತು.
ಕೆನಡಾದ ಸರಕಾರ ಅನಿರೀಕ್ಷಿತವಾಗಿ ಎದುರಾದ ಪರಿಸ್ಥಿತಿಗೆ ಸಜ್ಜಾಗತೊಡಗಿತು. ಯಾರೂ ವಿಮಾನದಿಂದ ಇಳಿಯುವಂತಿರಲಿಲ್ಲ. ಹಾಗೆಯೇ ಅಲ್ಲಿನ ಪೊಲೀಸರ ವಿನಾ ಒಂದು ನರಪಿಳ್ಳೆಯೂ ಯಾವುದೇ ವಿಮಾನದ ಬಳಿಯೂ ಸುಳಿಯುವಂತಿರಲಿಲ್ಲ. ಆಗಾಗ ಅವರು ಬಂದು ನೋಡಿಕೊಂಡು ಹೋಗುತ್ತಿದ್ದರಷ್ಟೇ. ನೋಡುತ್ತಾ ನೋಡುತ್ತಾ ಒಂದೆರಡು ಗಂಟೆಗಳಲ್ಲಿ ಸುಮಾರು ೫೩ ವಿಮಾನಗಳು ಗ್ಯಾಂಡರ್ನಲ್ಲಿ ಬಂದಿಳಿದಿದ್ದವು! ಅದರಲ್ಲಿ ೨೭ ವಿಮಾನಗಳು ಅಮೆರಿಕಕ್ಕೆ ತೆರಳಬೇಕಿತ್ತು.
ಆತಂಕದ ಕ್ಷಣಗಳು
ಈ ಹೊತ್ತಿಗೆ ರೇಡಿಯೋದಿಂದ ಕೇಳಿಬರುತ್ತಿದ್ದ ಸುದ್ದಿಯಿಂದ ನಿಜವಾದ ಚಿತ್ರಣ ನಮಗಾಗಿತ್ತು. ಉಗ್ರಗಾಮಿಗಳು ವಿಮಾನಗಳನ್ನು ಅಪಹರಿಸಿ ನ್ಯೂಯಾರ್ಕ್ನ `ವರ್ಲ್ಡ್ ಟ್ರೇಡ್ ಸೆಂಟರ್’ ಅವಳಿ ಕಟ್ಟಡಗಳು ಹಾಗೂ ವಾಷಿಂಗ್ಟನ್-ಡಿ.ಸಿ.ಯ ಪೆಂಟಗನ್ ಕಟ್ಟಡದ ಮೇಲೂ ದಾಳಿ ಮಾಡಿದ್ದರು. ಹೆಚ್ಚಿನ ಮಾಹಿತಿಗಾಗಿ ಜನರು ತಮ್ಮ ಮೊಬೈಲ್ ಫೋನ್ಗಳನ್ನು ಬಳಸಲು ಯತ್ನಿಸಿದರು. ಆದರೆ ಕೆನಡಾದಲ್ಲಿ ಬೇರೆ ಮೊಬೈಲ್ ಸಂಪರ್ಕ ವ್ಯವಸ್ಥೆ ಹಾಗೂ ಅಮೆರಿಕದ ಬಹುತೇಕ ಮೊಬೈಲ್ ನೆಟ್ವರ್ಕ್ಗಳ ಅಡಚಣೆಯಿಂದಾಗಿ ಫೋನ್ ಬಳಸುವುದು ದುಸ್ತರವಾಯಿತು.
ಸಂಜೆಯ ಹೊತ್ತಿಗೆ ನಮಗೆ ನ್ಯೂಯಾರ್ಕ್ನ ಎರಡೂ ಕಟ್ಟಡಗಳು ನೆಲಕ್ಕುರುಳಿರುವುದಾಗಿಯೂ, ನಾಲ್ಕನೆಯ ಅಪಹರಣವು ವಿಫಲವಾಗಿ ಅಪಘಾತಕ್ಕೆ ಒಳಗಾಗಿದ್ದೂ ತಿಳಿಯಿತು. ಈ ಸಮಯಕ್ಕೆ ಪ್ರಯಾಣಿಕರು ಮಾನಸಿಕವಾಗಿ, ದೈಹಿಕವಾಗಿ ಬಳಲಿದ್ದರು. ಜೊತೆಗೆ ಭಯಭೀತರಾಗಿದ್ದರೆಂದು ಬೇರೆ ಹೇಳಬೇಕಿಲ್ಲ. ಸಂಜೆ ಆರು ಗಂಟೆಯ ಸುಮಾರಿಗೆ, ಗ್ಯಾಂಡರ್ ವಿಮಾನನಿಲ್ದಾಣದ ಅಧಿಕಾರಿಗಳು ಮಾರನೆಯ ದಿನ ೧೧ ಗಂಟೆಗೆ ನಾವು ವಿಮಾನದಿಂದ ಇಳಿಯಬಹುದು ಎಂದು ತಿಳಿಸಿದರು. ಇದೆಲ್ಲದರ ಹೊರತಾಗಿಯೂ ಪ್ರಯಾಣಿಕರು ಬಹಳ ಶಾಂತಿಯಿಂದ ಇರಲು ಪ್ರಯತ್ನಿಸುತ್ತಿದ್ದರು. ನಾವು ಕಿಟಕಿಯಿಂದ ಹೊರಗೆ ನೋಡಿದಾಗ, ಅಲ್ಲಿ ಕಾಣುತ್ತಿದ್ದ ೫೨ ವಿಮಾನಗಳಲ್ಲಿನ ಜನರೂ ನಮ್ಮಂತೆಯೇ ತೊಂದರೆಗೀಡಾಗಿದ್ದಾರೆ, ನಾವೊಬ್ಬರೇ ಅಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬೇಕಿತ್ತು. ಎಲ್ಲರೂ ಅಂದಿನ ರಾತ್ರಿಯನ್ನು ವಿಮಾನದಲ್ಲಿಯೇ ಕಳೆಯಲು ಸಿದ್ಧರಾದೆವು.
ಗ್ಯಾಂಡರ್ ನಮಗೆ ವೈದ್ಯಕೀಯ ಸೌಲಭ್ಯ, ನೀರು, ಶೌಚಾಲಯದ ವ್ಯವಸ್ಥೆಯನ್ನು ಕೊಡಲು ಒಪ್ಪಿಕೊಂಡಿತ್ತು. ಅವರು ತಮ್ಮ ಮಾತಿಗೆ ಚಾಚೂ ತಪ್ಪದೆ ನಡೆದುಕೊಂಡರು. ದೇವರ ದಯೆಯಿಂದ ನಮ್ಮಲ್ಲಿ ಯಾರಿಗೂ ಅಂತಹ ವೈದ್ಯಕೀಯ ನಿಗಾ ಬೇಕಿರಲಿಲ್ಲ. ನಮ್ಮಲ್ಲಿ ೫ ತಿಂಗಳ ಯುವ ಗರ್ಭಿಣಿ ಮಹಿಳೆಯೊಬ್ಬಳಿದ್ದರು. ನಾವು ಆಕೆಯನ್ನು ಅಕ್ಷರಶಃ ಬಹಳ ಅಕ್ಕರೆಯಿಂದ ನೋಡಿಕೊಂಡೆವು. ಅಂದು ನಮಗೆ ಸೂಕ್ತವಾದ ಮಲಗುವ ವ್ಯವಸ್ಥೆ ಇಲ್ಲದಿದ್ದರೂ, ರಾತ್ರಿಯು ಶಾಂತಿಯಿಂದಲೇ ಕಳೆಯಿತು.
ಮಾರನೆಯ ದಿನ ಬೆಳಗ್ಗೆ ೧೦.೩೦ರ ಸುಮಾರಿಗೆ ಶಾಲೆಯ ಬಸ್ಗಳು ಗೋಚರಿಸಿದವು. ಕೊನೆಗೂ ನಾವು ವಿಮಾನದಿಂದ ಇಳಿದು, ಅಲ್ಲಿನ ಸೀಮಾಸುಂಕ ಹಾಗೂ ವಲಸೆ ವಿಭಾಗದ ಪ್ರಕ್ರಿಯೆಗಳನ್ನು ಮುಗಿಸಿದೆವು. ನಂತರ ರೆಡ್ಕ್ರಾಸ್ ಬಳಿ ನೋಂದಣಿಯನ್ನೂ ಮಾಡಿಕೊಳ್ಳಬೇಕಾಯಿತು. ಆ ಬಳಿಕ ನಾವು (ವಿಮಾನ ಸಿಬ್ಬಂದಿ) ಪ್ರಯಾಣಿಕರಿಂದ ಪ್ರತ್ಯೇಕಗೊಂಡೆವು. ನಮ್ಮನ್ನು ಚಿಕ್ಕ ವ್ಯಾನೊಂದರಲ್ಲಿ ಹೋಟೆಲ್ಗೆ ಕರೆದೊಯ್ಯಲಾಯಿತು. ನಮ್ಮ ಜೊತೆಗಿದ್ದ ಪ್ರಯಾಣಿಕರು ಎಲ್ಲಿಗೆ ಹೋಗುತ್ತಾರೆಂದು ನಮಗೆ ತಿಳಿಯಲಿಲ್ಲ. ರೆಡ್ಕ್ರಾಸ್ನಿಂದ ನಮಗೆ ತಡವಾಗಿ ತಿಳಿದಿದ್ದು: ಗ್ಯಾಂಡರ್ ಪಟ್ಟಣದ ಒಟ್ಟು ಜನಸಂಖ್ಯೆ ೧೦,೪೦೦. ಈಗ ಅಲ್ಲಿನ ಜನರಿಗೆ ವಿವಿಧ ವಿಮಾನಗಳಲ್ಲಿ ಗ್ಯಾಂಡರ್ಗೆ ಬಂದಿಳಿದ ೧೦,೫೦೦ ಜನರನ್ನು ನೋಡಿಕೊಳ್ಳುವ ಜವಾಬ್ದಾರಿ ಧುತ್ತೆಂದು ಎದುರಾಗಿತ್ತು! ನಾವು ಗಾಬರಿಗೊಳ್ಳುವ ಅಗತ್ಯವಿಲ್ಲವೆಂದೂ, ಹೋಟೆಲ್ನಲ್ಲಿ ವಿಶ್ರಮಿಸಿಕೊಳ್ಳಬೇಕೆಂದೂ, ಅಮೆರಿಕದ ವಿಮಾನನಿಲ್ದಾಣಗಳು ತೆರೆದ ಕೂಡಲೇ ನಮ್ಮನ್ನು ಸಂಪರ್ಕಿಸುವುದಾಗಿಯೂ ತಿಳಿಸಿದರು. ಆದರೆ ಅದು ತಕ್ಷಣಕ್ಕೆ ಆಗುವ ಕೆಲಸವಲ್ಲವೆಂದು ಕೂಡ ನಮ್ಮನ್ನು ಎಚ್ಚರಿಸಿದರು.
ನಾವು ಹೋಟೆಲ್ಗೆ ತೆರಳಿ ಟಿ.ವಿಯಲ್ಲಿ ಸಮಾಚಾರವನ್ನು ನೋಡಿದಾಗಲೇ, ನಮ್ಮ ದೇಶದಲ್ಲಾದ (ಅಮೆರಿಕ) ಉಗ್ರಗಾಮಿ ದಾಳಿಯ ತೀವ್ರತೆಯು ಅರಿವಾಯಿತು. ಅದೂ ಆ ವಿಷಮ ಘಟನೆಯು ನಡೆದ ೨೪ ಗಂಟೆಗಳ ತರುವಾಯ! ಈ ಹೊತ್ತಿಗೆ ಹೆಚ್ಚಿನ ಕೆಲಸವೇನೂ ಇಲ್ಲದಿರಲು, ನಮ್ಮ ಬಳಿ ಸಾಕಷ್ಟು ಸಮಯವಿದ್ದಿತು. ಜೊತೆಗೆ ಗ್ಯಾಂಡರ್ ಪಟ್ಟಣದ ನಿವಾಸಿಗಳು ಬಹಳ ಸ್ನೇಹಮಯಿಗಳಾಗಿದ್ದರು. ಅವರು ನಮ್ಮನ್ನು `Pಟಚಿಟಿe Peoಠಿಟe’ ಎಂದು ಕರೆಯತೊಡಗಿದರು. ನಮಗೆ ಅವರ ಆತಿಥ್ಯ ನಿಜಕ್ಕೂ ಬಹಳ ಖುಷಿ ತಂದಿತು. ಗ್ಯಾಂಡರ್ ಪಟ್ಟಣವನ್ನು ಸುತ್ತಾಡಿಕೊಂಡು ಬಂದೆವು.
ಅತಿಥಿ ಸತ್ಕಾರ
ಎರಡು ದಿನಗಳ ಬಳಿಕ ನಮಗೆ ಕರೆ ಬಂದು, ನಮ್ಮ ವಿಮಾನದ ಪ್ರಯಾಣಿಕರೊಟ್ಟಿಗೆ ಕೂಡಿಕೊಂಡೆವು. ಹೀಗೆಯೇ ಎಲ್ಲರೂ ಎರಡು ದಿನಗಳನ್ನು ಹೇಗೆ ಕಳೆದೆವೆಂದು ಮಾತನಾಡಿಕೊಂಡಾಗ, ನಂಬುವುದಕ್ಕೆ ಕಷ್ಟವಾದ ವಿಷಯಗಳು ತಿಳಿದವು. ಗ್ಯಾಂಡರ್ ಹಾಗೂ ಅದರ ೭೫ ಕಿ.ಮೀ. ಅಂತರದಲ್ಲಿನ ಹೊರವಲಯದ ಎಲ್ಲಾ ಪ್ರೌಢಶಾಲೆ, ಲಾಡ್ಜ್ಗಳು, ಸಮಾರಂಭ ಭವನಗಳನ್ನು ಜನರ ಸಲುವಾಗಿ ಯಾತ್ರಾನಿವಾಸಗಳಂತೆ ಮಾರ್ಪಡಿಸಲಾಗಿತ್ತು. ಕೆಲವು ಜನರು ಮಂಚಗಳನ್ನು ತಂದುಹಾಕಿದರೆ, ಇನ್ನು ಕೆಲವರು ಜಮಖಾನ, ಹಾಸಿಗೆ, ದಿಂಬು…ಇತರ ಅಗತ್ಯಗಳ ವ್ಯವಸ್ಥೆಯನ್ನು ಮಾಡುತ್ತಿದ್ದರು.
ಊರಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಮ್ಮ ಸಮಯವನ್ನು ಸ್ವಯಂಸೇವಕರಾಗಿ `ಅತಿಥಿ ಸತ್ಕಾರ’ಕ್ಕೆ ವಿನಿಯೋಗಿಸುವಂತೆ ಆದೇಶಿಸಲಾಗಿತ್ತು. ನಮ್ಮ ವಿಮಾನದ ೨೧೮ ಪ್ರಯಾಣಿಕರಿಗೆ `ಲೂಯಿಸ್ಪೋರ್ಟ್’ ಎಂಬ ಪಟ್ಟಣದಲ್ಲಿ ಉಳಿಯುವ ವ್ಯವಸ್ಥೆ ಮಾಡಲಾಗಿತ್ತು. ಅದು ಗ್ಯಾಂಡರ್ನಿಂದ ಸುಮಾರು ೪೫ ಕಿ.ಮೀ. ದೂರದಲ್ಲಿತ್ತು. ಅವರೆಲ್ಲರೂ ಶಾಲೆಯೊಂದರಲ್ಲಿ ಇದ್ದರು. ಮಹಿಳೆಯರಿಗೆ, ಮಹಿಳೆಯರ ಜೊತೆಯೇ ಬೇಕೆಂದಿದ್ದರೆ ಅದಕ್ಕೂ ಅವಕಾಶವನ್ನು ಕಲ್ಪಿಸಲಾಗಿತ್ತು. ಒಂದೇ ಕುಟುಂಬದ ಸದಸ್ಯರನ್ನು ಒಟ್ಟಿಗೇ ಇರಿಸಲಾಗಿತ್ತು. ವಯಸ್ಸಾದ ಹಿರಿಯರಿಗೆ, ಅಲ್ಲಿನ ಜನರ ಮನೆಗಳಲ್ಲಿ ತಂಗುವಂತೆ ಮಾಡಿದ್ದರು. ನೆನಪಿದೆಯೇ ಯುವ ಗರ್ಭಿಣಿ ಮಹಿಳೆಯೊಬ್ಬರು ನಮ್ಮೊಟ್ಟಿಗಿದ್ದರು ಎಂದಿದ್ದೆ? ಆಕೆಗೆ ೨೪ ಗಂಟೆ ವೈದ್ಯಕೀಯ ಸೌಲಭ್ಯವು ದೊರೆಯುವಂತಹ ಆಸ್ಪತ್ರೆಯ ಪಕ್ಕದಲ್ಲಿಯೇ ವಸತಿ ಕಲ್ಪಿಸಿದ್ದರು. ಒಬ್ಬ ದಂತವೈದ್ಯೆ, ಮಹಿಳಾ ಹಾಗೂ ಪುರುಷ ನರ್ಸ್ಗಳನ್ನೂ ಸೇವೆಗಾಗಿ ಆಯೋಜಿಸಿದ್ದರಂತೆ!
ಪ್ರತಿಯೊಬ್ಬರಿಗೂ ಇ-ಮೇಲ್ ಹಾಗೂ ಫೋನಿನ ಸೌಲಭ್ಯವನ್ನು ದಿನಕ್ಕೊಮ್ಮೆ ಬಳಸುವ ಅವಕಾಶವಿತ್ತು. ಬೆಳಗಿನ ಸಮಯದಲ್ಲಿ ಪ್ರಯಾಣಿಕರಿಗೆ ಪುಟ್ಟ ಪುಟ್ಟ ಪ್ರವಾಸಗಳನ್ನು ಕೈಗೊಳ್ಳುವಂತೆ ಅನುವು ಮಾಡಿಕೊಟ್ಟಿದ್ದರು. ಕೆಲವರು ಹತ್ತಿರದ ಸರೋವರ, ನದಿಗಳಲ್ಲಿ ದೋಣಿವಿಹಾರಕ್ಕೆ ಹೋದರೆ, ಇನ್ನು ಕೆಲವರು ಕಾಡಿನಲ್ಲಿ ಚಾರಣಕ್ಕೆ ಹೊರಟರು. ಅಲ್ಲಿನ ಬೇಕರಿಗಳು ಜನರಿಗಾಗಿ ಹೆಚ್ಚಿನ ಬ್ರೆಡ್ ತಯಾರಿಸಲು ತೆರೆದೇ ಇದ್ದವು. ಅಲ್ಲಿನ ಸ್ಥಳೀಯ ಜನರು ಸ್ವತಃ ಅಡುಗೆ ಮಾಡಿಕೊಂಡು, ಶಾಲೆಗೆ ಹೊತ್ತು ತಂದಿದ್ದರು. ಅಲ್ಲದೆ ಜನರನ್ನು ಅಲ್ಲಿನ ಹೋಟೆಲ್/ರೆಸ್ಟೋರೆಂಟ್ಗಳಿಗೆ ಕರೆದೊಯ್ದು ಅವರ ಮೆಚ್ಚಿನ ಊಟವನ್ನು ಕೊಡಿಸಲಾಗಿತ್ತು. ಪ್ರಯಾಣಿಕರ ಲಗ್ಗೇಜ್ ವಿಮಾನದಲ್ಲಿಯೇ ಉಳಿದಿದ್ದುದರಿಂದ ಅವರ ಬಟ್ಟೆ-ಬರೆಗಳನ್ನು ಒಗೆದುಕೊಳ್ಳಲು ಲಾಂಡ್ರಿಯ ವ್ಯವಸ್ಥೆಯನ್ನೂ ಮಾಡಿದ್ದರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಪ್ರಯಾಣಿಕರ ಎಲ್ಲ ಅಗತ್ಯಗಳನ್ನೂ ನೋಡಿಕೊಳ್ಳಲಾಗಿತ್ತು. ಅನೇಕರು ತಮ್ಮ ಅನುಭವಗಳನ್ನು ಅಳುತ್ತಲೇ ಹೇಳಿಕೊಳ್ಳುತ್ತಿದ್ದರು. ಕೊನೆಗೆ ಅಮೆರಿಕದ ವಿಮಾನನಿಲ್ದಾಣಗಳು ತೆರೆದಾಗ, ಒಬ್ಬನೇ ಒಬ್ಬ ಪ್ರಯಾಣಿಕನಿಗೂ ವಿಮಾನ ತಪ್ಪಿಹೋಗದಂತೆ ಎಲ್ಲರನ್ನೂ ಅವರವರ ವಿಮಾನಗಳಿಗೆ ತಲಪಿಸಲಾಗಿತ್ತು. ಒಟ್ಟಿನಲ್ಲಿ ಅಲ್ಲಿ ಆಕಸ್ಮಿಕವಾಗಿ ಬಂದಿಳಿದ ಅಪರಿಚಿತರಿಗೆ ಕಲ್ಪನೆಗೂ ಮೀರಿದ ಆತಿಥ್ಯ ಸಿಕ್ಕಿತ್ತು.
ನಮ್ಮ ವಿಮಾನದಲ್ಲಿ ಬಂದು ಕುಳಿತ ಪ್ರಯಾಣಿಕರು ಯಾವುದೋ ಸುಂದರ ಪ್ರವಾಸವನ್ನು ಮುಗಿಸಿಕೊಂಡು ಬಂದಂತ್ತಿತ್ತು. `ನನಗಾದ ಅನುಭವ/ಆತಿಥ್ಯ ಚಂದವೋ, ನಿನ್ನದು ಚಂದವೋ’ ಎಂದು ಹೋಲಿಸಿಕೊಳ್ಳುತ್ತಿದ್ದರು. ಅಟ್ಲಾಂಟಾ ನಗರಕ್ಕೆ ವಿಮಾನದಲ್ಲಿ ಒಂದು ದೊಡ್ಡ ಕುಟುಂಬದೊಡನೆ ಸೇರಿಕೊಂಡು ಹೋದಂತಿತ್ತು. ಈ ಹೊತ್ತಿಗೆ ನಮ್ಮಲ್ಲಿ ಪರಸ್ಪರ ಹೆಸರಿನಿಂದ ಕರೆಯುವಷ್ಟು ಸಲಿಗೆಯೂ ಬೆಳೆದಿತ್ತು. ಜೊತೆಗೆ ಇ-ಮೇಲ್, ದೂರವಾಣಿ ಸಂಖ್ಯೆಗಳ ವಿನಿಮಯವೂ ಆಯಿತು.
ದತ್ತಿನಿಧಿ ಸ್ಥಾಪನೆ
ಈ ಹೊತ್ತಿಗೆ ಅಪರೂಪದ ಘಟನೆಯೊಂದು ನಡೆಯಿತು. ಪ್ರಯಾಣಿಕರಲ್ಲೊಬ್ಬರು ಬಂದು, ಎಲ್ಲರನ್ನೂ ಉದ್ದೇಶಿಸಿ ಪ್ರಕಟಣೆಯೊಂದನ್ನು ನೀಡಲು ಅನುಮತಿಯನ್ನು ನನಗೆ ಕೇಳಿದರು. ನಾವೆಂದೂ ಇಂತಹ ಉದ್ಘೋಷಣೆಗಳಿಗೆ ಅವಕಾಶವನ್ನು ಕೊಡುವುದಿಲ್ಲ. ಆದರೆ ಅಂದಿನ ಸಮಾಚಾರವೇ ಬೇರೆಯಾಗಿತ್ತು. ನಾನು ಖಂಡಿತವಾಗಿಯೂ ಎನ್ನುತ್ತಾ ಅವರ ಕೈಗೆ ಮೈಕನ್ನು ಇತ್ತೆ. ಆ ಶ್ರೀಯುತರು ಕಳೆದ ಕೆಲವು ದಿನಗಳಲ್ಲಿ ನಮಗಾದ ಅನುಭವವನ್ನು ಎಲ್ಲರಿಗೂ ನೆನಪಿಸುತ್ತಾ, ಎಂದೂ ಕೇಳರಿಯದ ಅಪರಿಚಿತರಿಂದ ನಮಗೆ ದೊರೆತ ಆತಿಥ್ಯದ ಬಗ್ಗೆ ಹೇಳಿದರು. ಇದರ ಜ್ಞಾಪಕಾರ್ಥವಾಗಿ ನಾವೆಲ್ಲರೂ ಸೇರಿ ಲೂಯಿಸ್ಪೋರ್ಟ್ನ ಸಹೃದಯ ಜನರಿಗೆ ಏನಾದರೂ ಮಾಡಬೇಕೆಂದು ಹೇಳಿದರು. ತಾವು ಶೀಘ್ರದಲ್ಲಿಯೇ `ಡೆಲ್ಟಾ ೧೫’ (ನಮ್ಮ ವಿಮಾನ ಸಂಖ್ಯೆ) ಎಂಬ ಹೆಸರಿನಲ್ಲಿ ಒಂದು ದತ್ತಿ-ನಿಧಿಯೊಂದನ್ನು(ಟ್ರಸ್ಟ್) ಸ್ಥಾಪಿಸುವುದಾಗಿ ತಿಳಿಸಿದರು. ಅದರ ಉದ್ದೇಶವೆಂದರೆ ಲೂಯಿಸ್ಪೋರ್ಟ್ನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮುಂದೆ ಕಾಲೇಜಿನ ಶಿಕ್ಷಣಕ್ಕೆ ಸಹಾಯವಾಗಲು ಸಹಾಯಧನವನ್ನು ಕೊಡುವುದು. ಸಹ-ಪ್ರಯಾಣಿಕರು ತಮ್ಮ ಅನುಕೂಲದಂತೆ ಈ ನಿಧಿಗೆ ದೇಣಿಗೆ ಕೊಡಬಹುದು ಎಂದರು. ಸ್ವಲ್ಪ ಸಮಯದಲ್ಲಿಯೇ ಹೆಸರು, ವಿಳಾಸ, ದೂರವಾಣಿ ಹಾಗೂ ದೇಣಿಗೆ ಮೊತ್ತದ ಮಾಹಿತಿಯುಳ್ಳ ಕಾಗದವು ನಮ್ಮ ವಿಮಾನ ಸಿಬ್ಬಂದಿ ವರ್ಗಕ್ಕೆ ಬಂದು ತಲಪಿತು. ಒಟ್ಟು ೧೪,೦೦೦ ಡಾಲರ್ನಷ್ಟು ದೇಣಿಗೆ ಸಂಗ್ರಹವಾಗಿತ್ತು.
ವರ್ಜೀನಿಯಾ ರಾಜ್ಯದಲ್ಲಿರುವ ವೈದ್ಯರೊಬ್ಬರು, ಒಟ್ಟು ಮೊತ್ತಕ್ಕೆ ಸಮನಾದ ಹಣವನ್ನು ತಾವು ಕೊಡುವುದಾಗಿಯೂ, ಕೂಡಲೇ ಈ ದತ್ತಿ-ನಿಧಿಗೆ ಸಂಬಂಧಪಟ್ಟ ಕೆಲಸವನ್ನು ಪ್ರಾರಂಭಿಸುವುದಾಗಿಯೂ ತಿಳಿಸಿದರು. ನಾನು ಈ ಲೇಖನವನ್ನು ಬರೆಯುವ ಹೊತ್ತಿಗೆ ಸುಮಾರು ೧೫ ಲಕ್ಷ ಡಾಲರಿನಷ್ಟು ಹಣ ಆ ದತ್ತಿಯಲ್ಲಿ ಸಂಗ್ರಹವಾಗಿದೆ. ಸುಮಾರು ೧೩೪ ಜನ ವಿದ್ಯಾರ್ಥಿಗಳ ಕಾಲೇಜು ಶಿಕ್ಷಣಕ್ಕೆ ಈ ಹಣ ನೆರವಾಗಿದೆ!
(ಕೃಪೆ – ಇಂಟರ್ನೆಟ್)
ದತ್ತಿನಿಧಿ ಸ್ಥಾಪನೆ ಪ್ರಶಂಸನೀಯ ಕೆಲಸ. ಲೇಖನ ಸೊಗಸಾಗಿದೆ.