
ಕರ್ನಾಟಕದ ಪ್ರಾಚೀನ ಶಿಲ್ಪಕಲೆಗೆ ಹೊಯ್ಸಳ ಅರಸರ ಕೊಡುಗೆ ಅದ್ವಿತೀಯವಾದುದು. ಹೊಯ್ಸಳ ದೊರೆ ಬಿಟ್ಟಿದೇವನು ಜೈನಮತ ತೊರೆದು ವೈಷ್ಣವಧರ್ಮವನ್ನು ಸ್ವೀಕರಿಸಿ ವಿಷ್ಣುವರ್ಧನನಾದುದು ಶಿಲ್ಪಕಲೆಯ ಪರ್ವಕಾಲಕ್ಕೆ ನಾಂದಿಯಾಯಿತು. ಬೇಲೂರು, ಹಳೇಬೀಡು – ಮುಂತಾದ ಕಡೆ ಹೊಯ್ಸಳಶೈಲಿಯ ದೇವಾಲಯಗಳ ನಿರ್ಮಾಣವನ್ನು ದೊರೆಗಳು ಕೈಗೊಂಡರು. ಇಂತಹ ದೇವಾಲಯಗಳ ಪೈಕಿ ಕೆಲವು ಪ್ರಸಿದ್ಧಿಗೆ ಬಂದರೆ ಹಲವಾರು ದೇವಾಲಯಗಳು ಇನ್ನೂ ಅಜ್ಞಾತವಾಗೇ ಉಳಿದಿವೆ. ಬೆಳಕಿಗೆ ಬಾರದ ಹಲವಾರು ದೇವಾಲಯಗಳ ನಡುವೆ ಬೆಳವಾಡಿಯ ವೀರನಾರಾಯಣ ದೇವಾಲಯ ತನ್ನ ಅಪೂರ್ವ ಕಲಾವೈಭವದಿಂದ ಗಮನ ಸೆಳೆಯುತ್ತದೆ.
ಬೆಳವಾಡಿ ಗ್ರಾಮ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ೨೯ ಕಿಲೋಮೀಟರು ದೂರದಲ್ಲಿದೆ. ಬೆಳವಾಡಿಯ ಊರ ನಡುವೆ ಇರುವ ವೀರನಾರಾಯಣ ದೇವಾಲಯ ತ್ರಿಕೂಟಾಚಲ (ಮೂರು ಗರ್ಭಗೃಹಗಳನ್ನು ಹೊಂದಿರುವಂತದ್ದು) ಶೈಲಿಯಲ್ಲಿದೆ. ಕರ್ನಾಟಕದ ಇತರೆ ತ್ರಿಕೂಟಾಚಲಗಳು ನುಗ್ಗೇಹಳ್ಳಿ, ಹೊಸಹೊಳಲು, ಸೋಮನಾಥಪುರ, ವಿಘ್ನಸಂತೆ ಮುಂತಾದ ಸ್ಥಳಗಳಲ್ಲಿವೆ. ಇವುಗಳಲ್ಲೆಲ್ಲಾ ಬೆಳವಾಡಿಯ ದೇವಾಲಯ ದೊಡ್ಡದು, ಭವ್ಯತಮವಾದುದು. ವೀರನಾರಾಯಣ ದೇವಾಲಯವನ್ನು ಹೊಯ್ಸಳ ದೊರೆಗಳಾದ ವೀರಬಲ್ಲಾಳ (ಕ್ರಿ.ಶ. 1173 -1220) ಮತ್ತು ನರಸಿಂಹಬಲ್ಲಾಳ (ಕ್ರಿ.ಶ. 1220-1235) ನಿರ್ಮಿಸಿದರೆಂದು ಹೇಳಲಾಗುತ್ತದೆ.
ವೀರನಾರಾಯಣ ದೇವಾಲಯ ಸಮುಚ್ಚಯವನ್ನು ಪ್ರವೇಶಿಸಿದರೆ ಮೊದಲಿಗೆ ಸಿಗುವುದು ಒಂದು ಸಭಾಮಂಟಪ. ಇದರ ಮುಂದಿನ ಹಾಗೂ ಹಿಂದಿನ ದ್ವಾರಗಳಲ್ಲಿ ತಲಾ ಎರಡು ಸಾಲಂಕೃತ ಆನೆಗಳಿವೆ. ಸಭಾಮಂಟಪದ ನಂತರ ಸುಮಾರು ೬೦ ಅಡಿಗಳ ಅಂತರ ಬಿಟ್ಟು ತ್ರಿಕೂಟಾಚಲದ ರಚನೆಯಿದೆ. ಇಲ್ಲಿಯೂ ದ್ವಾರದಲ್ಲಿ ಎರಡು ಅಲಂಕೃತ ಆನೆಗಳಿವೆ. ನವರಂಗವನ್ನು ಪ್ರವೇಶಿಸಿದರೆ ಮನಮೋಹಕವಾದ ವಿವಿಧ ಶೈಲಿಯ ಹೊಳಪು- ನುಣುಪುಳ್ಳ ೪೬ ಕಂಭಗಳು ಮನಸೆಳೆಯುತ್ತವೆ. ಅಂತೆಯೇ ೯ ಆಕರ್ಷಕ ಭುವನೇಶ್ವರಿಗಳೂ ಇಲ್ಲಿವೆ. ವಿವಿಧ ಭಂಗಿಯ ಆನೆಗಳ ಸಾಲುಗಳು ಕೆಳಭಾಗದ ತಡೆಗೋಡೆಯಲ್ಲಿವೆ. ನವರಂಗದ ಎಡ ಹಾಗೂ ಬಲಭಾಗದಲ್ಲಿ ಮುರಳೀಧರ ಹಾಗೂ ಯೋಗಾನರಸಿಂಹರ ಗರ್ಭಗುಡಿಗಳಿವೆ.
ನವರಂಗವನ್ನು ದಾಟಿ ಸುಕನಾಸಿಯನ್ನು ಹಾದು ವೀರನಾರಾಯಣನ ಗರ್ಭಗುಡಿಗೆ ಹೋಗಬಹುದು. ಸುಕನಾಸಿಯಲ್ಲೂ ಒಂದು ಭುವನೇಶ್ವರಿ ಹಾಗೂ ಕುಸುರಿ ಕೆತ್ತನೆಯ ಕಂಭಗಳಿವೆ. ವೀರನಾರಾಯಣನ ಮೂರ್ತಿಯು ಪೀಠವೂ ಸೇರಿ ಎಂಟು ಅಡಿಗಳಷ್ಟು ಎತ್ತರವಿದ್ದು ಮನಮೋಹಕವಾಗಿದೆ. ಎಲ್ಲಾ ವಿಗ್ರಹಗಳೂ ಕಪ್ಪುಶಿಲೆಯಲ್ಲಿ ಅತ್ಯಂತ ಸುಂದರವಾಗಿ ಕಡೆದ ಮೂರ್ತಿಗಳಾಗಿವೆ. ಮೂರು ಗರ್ಭಗೃಹಗಳಿಗೂ ಪ್ರತ್ಯೇಕ ಗೋಪುರಗಳಿವೆ.
ವೀರನಾರಾಯಣ ದೇವಾಲಯದ ಒಳಭಾಗ ಎಷ್ಟು ಸುಂದರವಾಗಿದೆಯೋ, ಅದಕ್ಕೂ ಹೆಚ್ಚು ಆಕರ್ಷಕವಾಗಿದೆ ಹೊರಭಾಗ. ಮೂರೂ ಗರ್ಭಗುಡಿಗಳ ಹೊರಮೈನಲ್ಲಿ ಹಾಗೂ ಎಲ್ಲಾ ಗೋಪುರಗಳ ಮೇಲುಭಾಗದಲ್ಲಿ ಅಸಂಖ್ಯಾತ ಕೆತ್ತನೆಗಳು ಗಮನ ಸೆಳೆಯುತ್ತವೆ. ವಿಷ್ಣುವಿನ ಅವತಾರಗಳು, ನಾರಾಯಣನ ವಿವಿಧ ರೂಪಗಳು, ರಾಮಾಯಣ-ಮಹಾಭಾರತದ ಹತ್ತು ಹಲವು ದೃಶ್ಯಗಳು, ಶಿಲಾಬಾಲಿಕೆಯರು, ಮನ್ಮಥ, ಹಂಸ, ಗರುಡ – ಇತ್ಯಾದಿ ಶಿಲ್ಪಗಳು ಗಮನ ಸೆಳೆಯುವಂತಿವೆ. ಹೊಯ್ಸಳ ಲಾಂಛನವೂ ಹಲವು ಕಡೆ ಕೆತ್ತಲ್ಪಟ್ಟಿದೆ.

ವೀರನಾರಾಯಣ ದೇವಾಲಯದ ಅಂಗುಲ ಅಂಗುಲವೂ ನೋಡಬೇಕಾದದ್ದೇ. ಪ್ರಾಚ್ಯವಸ್ತು ಇಲಾಖೆಯ ಅಡಿಯಲ್ಲಿ ದೇವಾಲಯವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ ಪ್ರಚಾರದ ಕೊರತೆಯಿಂದಾಗಿ ಅಜ್ಞಾತವಾಗೇ ಉಳಿದಿರುವ ಕಾರಣ ಪ್ರವಾಸಿಗರು ಅಷ್ಟಾಗಿ ಕಾಣಬರುವುದಿಲ್ಲ. ಬೇಲೂರು ಹಳೇಬೀಡುಗಳ ಸನಿಹದಲ್ಲೇ ಇದ್ದು, ಅಷ್ಟು ಆಕರ್ಷಕವಾಗಿರುವ ಈ ದೇವಾಲಯ ಕಲಾಭಿಮಾನಿಗಳ ಗಮನಕ್ಕೆ ಬರುವುದು ಅತ್ಯಗತ್ಯ.