ಚೀನಾದ ಶಕ್ತಿ ಬಹಳ ಹೆಚ್ಚಿನದು. ನಮ್ಮ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿ ನಮ್ಮನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಅದು ಈಗಾಗಲೆ ಸಾಕಷ್ಟು ಮುಂದುವರಿದಿದೆ. ಅದಕ್ಕೆ ಪ್ರತಿಯಾಗಿ ಭಾರತಕ್ಕೀಗ ಎಚ್ಚರದ ಸುದೀರ್ಘ ನಡೆಯೇ ಬೇಕು.
‘ಬಲವೇ ನ್ಯಾಯ’ (ಮೈಟ್ ಈಸ್ ರೈಟ್) ಎಂಬುದೊಂದು ನ್ಯಾಯ. ಅದನ್ನು `ಕಾಡಿನ ನ್ಯಾಯ’ (ಜಂಗಲ್ ಲಾ) ಎಂದೂ ಹೇಳುತ್ತಾರೆ. ಯಾರಿಗೆ ಬಲ ಅಥವಾ ಶಕ್ತಿ ಇದೆಯೋ ಅವನು ಮಾಡಿದ್ದೆಲ್ಲ ಸರಿ ಎಂಬಂತಹ ವಾತಾವರಣಕ್ಕೆ ಅಥವಾ ಬಲವುಳ್ಳವರು ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುವುದಕ್ಕೆ ಹಾಗೆ ಹೇಳಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ವಿಶ್ವಸಂಸ್ಥೆಯ ಸ್ಥಾಪನೆ (೧೯೪೫) ಒಂದು ಮಹತ್ತ್ವದ ಘಟ್ಟ. ಅದರ ಸಾಧನೆ ಬಹಳಷ್ಟಿದ್ದರೂ `ಬಲವೇ ನ್ಯಾಯ’ ಎಂಬ ತತ್ತ್ವ ಅಲ್ಲೂ ಕೆಲಸ ಮಾಡದೆ ಇಲ್ಲ. ಈಚಿನ ವರ್ಷಗಳಲ್ಲಿ ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆ ಕ್ರಮೇಣ ಹೆಚ್ಚುತ್ತಿದೆ. ಶೀತಲಸಮರದ ಅನಂತರದ ಕಾಲದಲ್ಲಿ ಅದು ಬೇರೆಯಾದ ವಿನ್ಯಾಸವನ್ನು ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಅಮೆರಿಕದ ವಿಶೇಷವೆಂದರೆ, ಹಾಗೆ ಮಾಡುವಾಗ ಅದು ತನ್ನ ಹಿಂದೆ ಬ್ರಿಟನ್, ಫ್ರಾನ್ಸ್ ಮುಂತಾದ ಕೆಲವು ದೇಶಗಳನ್ನು ಇರಿಸಿಕೊಂಡು ತಾನು ಎಲ್ಲ ದೇಶಗಳ ಪರವಾಗಿ ಮಾಡುತ್ತಿದ್ದೇನೆ ಎಂಬ ಭಾವನೆಯನ್ನು ಮೂಡಿಸುತ್ತದೆ. ಮುಖ್ಯವಾಗಿ ಬೇಕಿಲ್ಲ ಎಂಬ ಉಡಾಫೆಯೊಂದಿಗೆ ನಿಯಮಗಳನ್ನು ಗಾಳಿಗೆ ತೂರಿ ಮುಂದುವರಿಯುತ್ತಿದೆ. ಕಳೆದೆರಡು ದಶಕಗಳ ಜಾಗತೀಕರಣವನ್ನು ಚೆನ್ನಾಗಿ ಬಳಸಿಕೊಂಡ ಚೀನಾ ಆರ್ಥಿಕವಾಗಿಯೂ ಬಲಶಾಲಿಯಾಗಿದೆ. ಆದ್ದರಿಂದ ಅದರ ನಡೆ ಹೆಚ್ಚಿನ ಪರಿಣಾಮವನ್ನು ಬೀರುತ್ತಿದೆ.
ಇನ್ನು ಪ್ರಾದೇಶಿಕವಾಗಿ ಹೇಳುವುದಾದರೆ, ಏಷ್ಯಾದಲ್ಲಿ ಚೀನಾ ಮತ್ತು ಭಾರತಗಳ ನಡುವೆ ಒಂದು ಬಗೆಯ ಮುಸುಕಿನಯುದ್ಧ ನಡೆಯುತ್ತಿದೆ. ಭಾರತ ’ಗ್ರೇಟ್ ಪವರ್’ (ಮಹಾನ್ ರಾಷ್ಟ್ರ) ಆಗಲು ಬಯಸಿದರೆ ಚೀನಾ `ಸೂಪರ್ ಪವರ್’ (ಬಲಿಷ್ಠ ರಾಷ್ಟ್ರ) ಆಗಲು ಹೊರಟಿದೆ. `ಆಕ್ರಮಣವೇ (ಅಫೆನ್ಸ್) ಶ್ರೇಷ್ಠ ರಕ್ಷಣವಿಧಾನ (ಡಿಫೆನ್ಸ್)’ ಎಂಬ ನಿಯಮದಂತೆ ಚೀನಾ ಸಾಧ್ಯವಾದಲ್ಲೆಲ್ಲ ತನ್ನ ಆಕ್ರಮಣನೀತಿಯ ಬಿಸಿ ಮುಟ್ಟಿಸದೆ ಬಿಡುವುದಿಲ್ಲ. ಏಷ್ಯಾದಲ್ಲಿ ಬೆಳೆಯಲು ಉದ್ಯುಕ್ತವಾದ ಚೀನಾ ಮತ್ತು ಭಾರತಗಳು ವಿಭಿನ್ನ ತಂತ್ರಗಾರಿಕೆಯನ್ನು ಅನುಸರಿಸುತ್ತಿವೆ. ಚೀನಾದ್ದು ಕ್ರಮಬದ್ಧ ಹಾಗೂ ಲೆಕ್ಕಾಚಾರದ ದೂರದೃಷ್ಟಿಯ ಕಾರ್ಯತಂತ್ರ. ಆ ಮೂಲಕ ಅದು ಏ?ದ ನಾಯಕತ್ವದ ಸನಿಹ ಬಂದಿದೆ. ಅದರ ದೀರ್ಘಾವಧಿ ಕಾರ್ಯತಂತ್ರದ ಪ್ರಮುಖ ಭಾಗವೆಂದರೆ, ಭಾರತವನ್ನು ವ್ಯವಸ್ಥಿತವಾಗಿ ಸುತ್ತುವರಿದು, ಭಾರತವನ್ನು ಪ್ರಾದೇಶಿಕ ವ್ಯವಹಾರದಲ್ಲಿ ಕಟ್ಟಿಹಾಕಿ ಏಷ್ಯಾಮಟ್ಟದ ದೊಡ್ಡ ಮಹತ್ತ್ವಾಕಾಂಕ್ಷೆ ಸಾಧ್ಯವಿಲ್ಲದಂತೆ ಮಾಡುವುದು. ಅದಕ್ಕಾಗಿ ಚೀನಾ ದಕ್ಷಿಣ ಏಷ್ಯಾ ದೇಶಗಳಾದ ಪಾಕಿಸ್ತಾನ, ಮ್ಯಾನ್ಮಾರ್, ಬಂಗ್ಲಾದೇಶ, ಶ್ರೀಲಂಕಾ, ನೇಪಾಳ, ಭೂತಾನಗಳಿಗೆ ಶಸ್ತ್ರಾಸ್ತ್ರ ನೀಡಿದೆ. ಅದರ `ರೇಶ್ಮೆ ಮಾರ್ಗ’(ಸಿಲ್ಕ್ ರೂಟ್)ದಲ್ಲಿ ಭಾಗಿಯಾದ ದೇಶಗಳಲ್ಲಿ ೩೦ ಅಣುವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ೨೦೩೦ರ ಹೊತ್ತಿಗೆ ಪಾಕಿಸ್ತಾನದಲ್ಲಿ ೧,೦೦೦ ಮೆಗಾವಾಟ್ನ ಅಣುಶಕ್ತಿ ರಿಯಾಕ್ಟರಿಗೆ ಹಣ ಹೂಡಲಿದೆ. ೬೫೦ ಕೋಟಿ ಡಾಲರ್ ವೆಚ್ಚದಲ್ಲಿ ಕರಾಚಿಯಲ್ಲಿ ಎರಡು ಅಣುಶಕ್ತಿ ಸ್ಥಾವರಗಳ ಕಾಮಗಾರಿ ಚೀನಾದಿಂದ ಪ್ರಗತಿಯಲ್ಲಿದೆ.
ತುಷ್ಟೀಕರಣ ನೀತಿ
ಅದೇ ವೇಳೆ ಭಾರತ ಚೀನಾದ ವಿಷಯದಲ್ಲಿ ಹಲವು ವರ್ಷಗಳಿಂದ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿದೆ; ಅದರಿಂದ ಲಾಭವೇನೂ ಆಗಿಲ್ಲ. ೧೯೪೯ರಲ್ಲಿ ಚೀನಾದಲ್ಲಿ ಮಾವೋ ಕಮ್ಯೂನಿಸ್ಟ್ ಆಳ್ವಿಕೆಯನ್ನು ತಂದಾಗ ಅವರ ಸರ್ಕಾರಕ್ಕೆ ಮೊದಲಾಗಿ ಮಾನ್ಯತೆ ನೀಡಿದ್ದುದು ಭಾರತ. ಚೀನಾ ಟಿಬೆಟ್ ಮೇಲೆ ಆಕ್ರಮಣ ನಡೆಸಿದಾಗ ನೆಹರು ಟಿಬೆಟ್ಗೆ ನೆರವು ನೀಡಲಿಲ್ಲ. ೧೯೫೪ರಲ್ಲಿ ನೆಹರು ಯಾವುದೇ ಆಕ್ಷೇಪ ಅಥವಾ ಪ್ರತಿಭಟನೆಯಿಲ್ಲದೆ ಟಿಬೆಟ್ ಚೀನಾದ ಭಾಗವೆಂದು ಒಪ್ಪಿಕೊಂಡರು. ೧೯೫೦ರಲ್ಲಿ ಚೀನಾದ ಬದಲಿಗೆ ಭಾರತವು ವಿಶ್ವಸಂಸ್ಥೆ ಭದ್ರತಾಮಂಡಳಿಯ ಸ್ಥಾನವನ್ನು ಪಡೆಯಬಹುದಿತ್ತು; ಅಮೆರಿಕ ಮತ್ತು ರಷ್ಯಾಗಳು ಆ ಬಗ್ಗೆ ಪ್ರಸ್ತಾವವನ್ನೂ ಮಾಡಿದ್ದವು. ಆದರೆ ನಮ್ಮ ನಾಯಕರು ಆಲಸ್ಯ ತೋರಿಸಿದರು. ಅದರ ಫಲವನ್ನು ನಾವು ಈಗಲೂ ಉಣ್ಣುತ್ತಿದ್ದೇವೆ. ಪಾಕಿಸ್ತಾನದ ಭಯೋತ್ಪಾದಕ ಅಜರ್ ಮಸೂದ್ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಬೇಕೆಂದು ಭಾರತ ಸೂಚಿಸಿದಾಗ ಚೀನಾ ವೀಟೋ ಪ್ರಯೋಗಿಸಿ ಅದನ್ನು ತಡೆಯಿತು.
ಚೀನಾ ನಮ್ಮ ಗಡಿಯೊಳಗೆ ಆಗಾಗ ನುಗ್ಗುತ್ತಾ ಇರುತ್ತದೆ. ಕಾಂಗ್ರೆಸ್ ಸರ್ಕಾರಗಳು ಅದನ್ನು ತಡೆಯಲಿಲ್ಲವೆಂದು ಪ್ರತಿಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ಟೀಕಿಸುತ್ತಿತ್ತು. ಆದರೆ ಈಗ ಬಿಜೆಪಿ ಸರ್ಕಾರ ಇರುವಾಗಲೂ ಚೀನಾದ ಪ್ರವೃತ್ತಿ ಮುಂದುವರಿದಂತೆ ತೋರುತ್ತಿದೆ. `ಕಳವಳಕಾರಿ ದೇಶಗಳ ಪಟ್ಟಿ(ಕಂಟ್ರೀಸ್ ಆಫ್ ಕನ್ಸರ್ನ್)’ಯಿಂದ ಮೋದಿ ಸರ್ಕಾರ ಚೀನಾವನ್ನು ತೆಗೆದುಹಾಕಿದೆ. ಭಾರತಕ್ಕೆ ಬರುವ ಚೀನೀ ಪ್ರವಾಸಿಗರಿಗೆ ಇ-ವೀಸಾ ಸವಲತ್ತು ನೀಡಿದೆ. ಜಾಗತಿಕರಂಗದಲ್ಲಿ ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿ ಕೊಳ್ಳಲು ಮೋದಿಯವರು ಹಾಗೆ ಮಾಡಿರಬಹುದು. ಅದಕ್ಕೆ ಇನ್ನೊಂದು ಕಾರಣ ಚೀನೀ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದು ಇರಬಹುದು.
ಆದರೆ ಈ ಮೃದುಧೋರಣೆಯಿಂದ ಹೆಚ್ಚು ಪ್ರಯೋಜನ ಆದದ್ದು ಚೀನಾಕ್ಕೆ. ಈ ಸಂದರ್ಭವನ್ನು ಅದು ತನ್ನ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಬಳಸಿಕೊಂಡಿತು. ಭಾರತವನ್ನು ಅದು ತನ್ನ ಕೈಗಾರಿಕೆಗಳ ಕಚ್ಚಾವಸ್ತುವಿನ ಮೂಲವಾಗಿ ಉಪಯೋಗಿಸಿಕೊಳ್ಳುತ್ತಿದೆ; ಮತ್ತು ಚೀನಾದ ಸರಕಿಗೆ ಭಾರತ ಮಾರುಕಟ್ಟೆಯಾಗುತ್ತಿದೆ. ಒಂದು ರೀತಿಯಲ್ಲಿ ಇದು ಕೇಂದ್ರ ಸರ್ಕಾರದ `ಮೇಕ್ ಇನ್ ಇಂಡಿಯಾ’ ನೀತಿಗೆ ಹಿನ್ನಡೆ ಎಂದರೆ ತಪ್ಪಲ್ಲ. ಚೀನಾದ ಅಗ್ಗದ ಸರಕುಗಳ ಜೊತೆ ಸ್ಪರ್ಧಿಸಲು ಭಾರತದ ಉತ್ಪಾದಕರಿಗೆ ಸಾಧ್ಯವಾಗುತ್ತಿಲ್ಲ. ಮೋದಿ ಸರ್ಕಾರ ನಿರೀಕ್ಷಿಸುವ ರೀತಿಯಲ್ಲಿ ಚೀನಾ ನಮ್ಮ ಮೂಲಸವಲತ್ತು ಕ್ಷೇತ್ರದಲ್ಲೂ ಹೆಚ್ಚೇನೂ ಹೂಡಿಕೆ ಮಾಡುತ್ತಿಲ್ಲ.
ಬದಿಗೆ ಸರಿಸುವ ಯತ್ನ
ಗಡಿಯ ವಿಷಯದಲ್ಲಿ ಚೀನಾ ಬಹಳಷ್ಟು ಬಿಗಿಧೋರಣೆಯನ್ನು ಅನುಸರಿಸುತ್ತಿದೆ. ನೆರೆರಾಷ್ಟ್ರಗಳೊಂದಿಗೆ ಸೇರಿಕೊಂಡು ಭಾರತವನ್ನು ಬದಿಗೆ ಸರಿಸುತ್ತಿದೆ. ಇದರಲ್ಲಿ ಭಾರತದ ಗಡಿದೇಶಗಳು ಯಾವುವೆಂದು ನೋಡಬೇಕು. ನಕಾಶೆಯ ಎಡಗಡೆಯಿಂದ ಪ್ರಾರಂಭಿಸಿದರೆ ಪಾಕಿಸ್ತಾನ, ಬಳಿಕ ಬಲದಲ್ಲಿ ನೇಪಾಳ, ಅದರಾಚೆಗೆ ಭೂತಾನ್, ಭೂತಾನಿನ ಬಳಿ ಕೆಳಕ್ಕಿಳಿದರೆ ಮ್ಯಾನ್ಮಾರ್ (ಬರ್ಮಾ), ಅಲ್ಲೇ ಸ್ವಲ್ಪ ಮೇಲೆ ಎಡಕ್ಕೆ ಬಂಗ್ಲಾದೇಶ, ಸೀದಾ ಕೆಳಕ್ಕಿಳಿದರೆ ದಕ್ಷಿಣದಲ್ಲಿ ಶ್ರೀಲಂಕಾ, ಭಾರತದ ಮತ್ತೊಂದು ಮಗ್ಗುಲಲ್ಲಿ ಮಾಲ್ದೀವ್ಸ್ – ಹೀಗೆ ಏಳು ದೇಶಗಳಾದವು. ಇನ್ನು ಎಂಟನೆಯದನ್ನು ಚೀನಾ ಈಗಾಗಲೇ ನುಂಗಿಹಾಕಿದೆ; ಅದು ಟಿಬೆಟ್. ನಮ್ಮ ಎಲ್ಲ ನೆರೆರಾಷ್ಟ್ರಗಳೊಂದಿಗೆ ಚೀನಾ ಬಗೆಬಗೆಯ ಆಟವಾಡುತ್ತಿದೆ; ತನ್ನ ಸಮೀಪಕ್ಕೆ ಸೆಳೆದುಕೊಳ್ಳುತ್ತಿದೆ.
ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಒಂದೆಡೆ ನಡೆಸಿದ ವಿಶ್ಲೇಷಣೆಯಲ್ಲಿ, ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಚೀನಾ ಏನು ಮಾಡುತ್ತಿದೆ ಎಂದರೆ, ಅದಕ್ಕೆ ಭಾರತ ಸಾಯಬಾರದು; ಬದುಕಿರಬೇಕು. ಆದರೆ ಭಾರತವನ್ನು ಆಳುವವರು ಚೀನಾ ಹೇಳಿದಂತೆ ಕೇಳುವವರಾಗಿರಬೇಕು. ಹೆದರಿಕೊಂಡಿರುವ ಭಾರತ ಅವರಿಗೆ ಬೇಕು. ಇಲ್ಲಿ ಸಮೃದ್ಧ ಸಂಪನ್ಮೂಲಗಳಿರುವುದರಿಂದ ಹೇಳಿದಂತೆ ಕೇಳುವವರಿದ್ದರೆ ಅವರಿಗೆ ಬಹಳ ಲಾಭ. ಅದಕ್ಕಾಗಿ ಚೀನಾ ನೆರೆರಾಷ್ಟ್ರಗಳನ್ನು ಬಳಸಿಕೊಳ್ಳುತ್ತಿದೆ. ನೇಪಾಳದ ಬಹುದೊಡ್ಡ ಪಕ್ಷ ಅವರು ಹೇಳಿದಂತೆ ಕೇಳುತ್ತದೆ; ನಾಯಕರು ಚೀನಾದ ಪರ ಇದ್ದಾರೆ. ಮಾಲ್ದೀವ್ಸ್ ಚೀನಾದ ಮಾತನ್ನು ಮೀರುವುದಿಲ್ಲ. ಪಾಕಿಸ್ತಾನದ ಬಗ್ಗೆ ಹೇಳುವುದೇ ಬೇಡ. ದೇಶದ ಒಳಗಲ್ಲದೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಚೀನಾ ಪಾಕಿಸ್ತಾನಕ್ಕೆ ರಕ್ಷಣೆ ನೀಡುತ್ತಿದೆ. ಬಂಗ್ಲಾ ಸರ್ಕಾರ ಚೀನಾಕ್ಕೆ ಪರವಾಗಿಯೇ ಇದೆ. ಮ್ಯಾನ್ಮಾರ್ ಮಿಲಿಟರಿ ಆಡಳಿತ ಬಹಳಷ್ಟುಸಂದರ್ಭಗಳಲ್ಲಿ ಚೀನಾ ಹೇಳಿದಂತೆಯೇ ನಡೆದುಕೊಳ್ಳುತ್ತಿತ್ತು. ಒಟ್ಟಿನಲ್ಲಿ ಆ ದೇಶಗಳನ್ನು ಸೇರಿಸಿಕೊಂಡು ಚೀನಾ ಭಾರತದ ವಿರುದ್ಧ ವೀಚಿ ಆಟ (ರಾಜನನ್ನು ಬಗ್ಗುಬಡಿದು ಶರಣಾಗತಿ ಮಾಡಿಸುವ ಒಂದು ಬಗೆಯ ಆಟ)ವನ್ನು ಆಡುತ್ತಿದೆ ಎಂದಿದ್ದಾರೆ.
ನೇಪಾಳದಿಂದ ಆರಂಭಿಸುವುದಾದರೆ ಹಿಂದೆ ಅದು ಪ್ರಜಾಪ್ರಭುತ್ವವಿದ್ದ ದೇಶ. ದಶಕದ ಹಿಂದೆ ಅರಮನೆಯಲ್ಲಿ ಒಬ್ಬ ರಾಜಕುಮಾರ ಸಿಟ್ಟಿಗೆದ್ದು, ರಾಜಮನೆತನದ ಆರು ಮಂದಿಯನ್ನು ಕೊಂದುಬಿಟ್ಟ. ಮೊದಲಿಗೆ ಅದು ಪ್ರೇಮ ಪ್ರಕರಣ, ಅಧಿಕಾರದ ಲಾಲಸೆ ಎನ್ನುವ ಮಾತುಗಳಿದ್ದರೂ ಕೊನೆಗೆ ಅದೊಂದು ರಾಜಕೀಯ ಕೊಲೆ ಎಂಬುದು ಸಾಬೀತಾಯಿತು. ಅದಾಗಿ ಒಂದೂವರೆ ವರ್ಷದ ಬಳಿಕ ಪ್ರಜಾಪ್ರಭುತ್ವ ಬಂದಾಗ ಅತಿದೊಡ್ಡ ಫಲಾನುಭವಿಯಾದದ್ದು ನೇಪಾಳದ ನಕ್ಸಲ್(ಮಾವೋವಾದಿ) ಚಳವಳಿಯ ನಾಯಕ ಪುಷ ಕಮಾಲ್ ದಹಾಲ್ ಅಥವಾ ಪ್ರಚಂಡ. ನೇಪಾಳ ಕಮ್ಯೂನಿಸ್ಟ್ ಪಕ್ಷ ದೊಡ್ಡಮಟ್ಟಕ್ಕೆ ಬೆಳೆದಿದೆ; ಪ್ರಚಂಡ ಹಿಂದೊಮ್ಮೆ ಪ್ರಧಾನಿಯಾಗಿ ಅಧಿಕಾರ ಕಳೆದುಕೊಂಡರೂ ಈಗ ಮತ್ತೆ ಪ್ರಧಾನಿಯಾಗಿದ್ದಾರೆ. ಪ್ರಚಂಡ ಸುಮಾರು ೨೭ ವರ್ಷ ಚೀನಾದಲ್ಲಿದ್ದು ವಿವಿಧ ತರಬೇತಿಗಳನ್ನು ಪಡೆದು ನೇಪಾಳಕ್ಕೆ ಮರಳಿ ಮಾವೋವಾದಿ ಚಳವಳಿಯನ್ನು ಆರಂಭಿಸಿದ ವ್ಯಕ್ತಿ. ಒಂದು ಕಾಲದಲ್ಲಿ ಆತನ ಕೆಳಗೆ ೩೭ ಸಾವಿರ ಸದಸ್ಯರ ನಕ್ಸಲ್ ಸೇನೆ ಇತ್ತು. ಮುಖ್ಯವಾಹಿನಿಗೆ ಬಂದ ಆತ ಸಂವಿಧಾನ ರಚನೆಯ ಮೇಲೆ ಪ್ರಭಾವ ಬೀರಿದ್ದಾನೆ. ದೇಶದ ಮೊದಲ ಚುನಾಯಿತ ಪ್ರಧಾನಿಯೂ ಆದ.
ವ್ಯೂಹಾತ್ಮಕವಾಗಿ ನೇಪಾಳ ಭಾರತಕ್ಕೆ ಬಹಳ ಮುಖ್ಯವಾದ ದೇಶ. ಎರಡು ದೇಶಗಳ ನಡುವೆ ೫೧ ಚೆಕ್ಪೋಸ್ಟ್ಗಳಿವೆ. ಅವುಗಳಲ್ಲಿರುವ ತಪಾಸಣೆ ಹೆಸರಿಗೆ ಮಾತ್ರ; ಅಲ್ಲಿ ಬಹಳ ಮುಕ್ತವಾದ ವ್ಯವಹಾರ ನಡೆಯುತ್ತದೆ ಎಂದರೆ ತಪ್ಪಲ್ಲ. ಪ್ರಚಂಡ ಮೊದಲ ಅವಧಿಯಲ್ಲಿ ಅಧಿಕಾರಕ್ಕೆ ಬರುತ್ತಲೇ ಭಾರತದವರನ್ನು ಹೊರಹಾಕುವ ಕೆಲಸ ಮಾಡಿದ್ದಿದೆ; ಉದಾಹರಣೆ ಎಂದರೆ ಪಶುಪತಿನಾಥ ವಾಲಯದ ಕನ್ನಡಿಗ ಅರ್ಚಕರನ್ನು ಹೊರಗೆ ಹಾಕಿದ್ದು.
ಈಚೆಗೆ ನೇಪಾಳದ ಅಧ್ಯಕ್ಷ ವಿದ್ಯಾದೇವಿ ಭಂಡಾರಿ ಅವರ ಭಾರತ ಭೇಟಿಯನ್ನು ರದ್ದುಗೊಳಿಸಲಾಯಿತು. ಭಾರತದಲ್ಲಿದ್ದ ನೇಪಾಳದ ರಾಯಭಾರಿಯನ್ನು ವಾಪಸು ಕರೆದರು ಮತ್ತು ನೇಪಾಳದಲ್ಲಿದ್ದ ಭಾರತದ ರಾಯಭಾರಿ ರಂಜಿತ್ ರಾಯ್ ಅನಪೇಕ್ಷಿತ ವ್ಯಕ್ತಿ ಎಂದರು. ಅಂದಿನ ಪ್ರಧಾನಿ ಕೆ.ಪಿ. ಶರ್ಮ ಓಲಿ ಅವರು ಮಾವೋವಾದಿಗಳ ನೆರವಿನಿಂದ ತನ್ನ ಸರ್ಕಾರವನ್ನು ಉಳಿಸಿಕೊಂಡ ಮರುದಿನವೇ ಈ ಬೆಳವಣಿಗೆ ಆಗಿತ್ತು; ಬಹುಮತ ಸಾಧಿಸಲು ಸಾಧ್ಯವಾಗದ ಕಾರಣ ಪ್ರಚಂಡ ಹೊರಗುಳಿದು ಶರ್ಮ ನೇತೃತ್ವದ ಸರ್ಕಾರ ರಚನೆಯಾಗಿತ್ತು. ಶರ್ಮ ಸರ್ಕಾರವನ್ನು ಉರುಳಿಸುವ ಪಿತೂರಿ ದೆಹಲಿಯಲ್ಲಾಗಿದೆ ಎಂಬ ಗುಮಾನಿ ಅವರದ್ದು.
ನೇಪಾಳದಲ್ಲಿ ಕಮ್ಯೂನಿಸಂ
ಈ ಹಿಂದೆ ೨೦೧೪ರಲ್ಲಿ ಪ್ರಧಾನಿ ಮೋದಿ ಅವರ ನೇಪಾಳ ಭೇಟಿ ಯಶಸ್ವಿಯಾಗಿತ್ತು. ೨೦೧೫ರಲ್ಲಿ ನೇಪಾಳದಲ್ಲಿ ಭಾರೀ ಭೂಕಂಪ ಸಂಭವಿಸಿದಾಗ ಭಾರತ ಸಕ್ರಿಯವಾಗಿ ನೆರವು ನೀಡಿತ್ತು. ಆಗ ಸಂಬಂಧವೂ ಉತ್ತಮವಾಗಿತ್ತು. ಆದರೆ ಕಳೆದ ನವೆಂಬರ್(೨೦೧೫)ನಲ್ಲಿ ಜಾರಿಗೆ ಬಂದ ಸಂವಿಧಾನ ಭಾರತದ ಜೊತೆಗಿನ ಮೈತ್ರಿಗೆ ಬಲವಾದ ಪೆಟ್ಟು ನೀಡಿತು. ನೇಪಾಳದ ದಕ್ಷಿಣ ಜಿಲ್ಲೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಭಾರತೀಯ ಮೂಲದ ಮಾಧೇಸಿಗಳು ಸಂವಿಧಾನವನ್ನು ವಿರೋಧಿಸಿದ ಕಾರಣ ತೊಂದರೆ ಆರಂಭವಾಯಿತು. ಭಾರತ-ನೇಪಾಳ ಗಡಿಯಲ್ಲಿ ತಡೆ ಉಂಟಾದಾಗ ಭಾರತ ಅದನ್ನು ಸರಿಪಡಿಸಲು ಅವಸರ ಮಾಡಲಿಲ್ಲ. ಪರಿಣಾಮವಾಗಿ ನೇಪಾಳದಲ್ಲಿ ಆವಶ್ಯಕ ವಸ್ತುಗಳ ಕೊರತೆ ಉಂಟಾಯಿತು. ಚೀನಾ ತಡಮಾಡದೆ ಆ ಸಂದರ್ಭವನ್ನು ಬಳಸಿಕೊಂಡಿತು.
ನೇಪಾಳದ ಚೀನಾ ಬೆಂಬಲಿಗರು ದೇಶದಲ್ಲಿ ಭಾರತವಿರೋಧಿ ವಾತಾವರಣವನ್ನು ನಿರ್ಮಿಸಿದರು. ಆವಶ್ಯಕ ವಸ್ತುಗಳನ್ನು ಪೂರೈಸುವ ಮೂಲಕ ಚೀನೀ ನಾಯಕರು ನೇಪಾಳದ ವಿಶ್ವಾಸ ಗಳಿಸಿದರು. ಪ್ರಧಾನಿ ಶರ್ಮ ಭಾರತಕ್ಕೆ ಭೇಟಿನೀಡಿದರಾದರೂ ಅದಕ್ಕಿಂತ ಮೊದಲು ಚೀನಾಕ್ಕೆ ಏಳು ದಿನಗಳ ಪ್ರವಾಸ ಮಾಡಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದರು. ಅದರಲ್ಲಿ ಸರಕು ಸಾಗಾಟ ಸೇರಿದ್ದು, ಚೀನಾ ನೇಪಾಳಕ್ಕೆ ತನ್ನ ಬಂದರುಗಳನ್ನು ಒದಗಿಸಲಿದೆ. ಚೀನಾದಿಂದ ನೇಪಾಳಕ್ಕೆ ರೈಲು ಸಂಪರ್ಕ ಆಗಲಿದ್ದು ಇದು ಆತಂಕಕಾರಿ ಬೆಳವಣಿಗೆ ಎನಿಸಿದೆ. ಈವರೆಗೆ ನೇಪಾಳದ ಶೇ. ೬೦ರಷ್ಟು ಆಮದು ಭಾರತದ ಬಂದರುಗಳ ಮೂಲಕ ಆಗುತ್ತಿತ್ತು; ಹೊಸ ಒಪ್ಪಂದದ ಪರಿಣಾಮವಾಗಿ ಭಾರತದ ಮೇಲೆ ನೇಪಾಳದ ಅವಲಂಬನೆ ಕಡಮೆ ಆಗಲಿದೆ.
ಅದಲ್ಲದೆ ಚೀನಾ ಮತ್ತು ಭಾರತದ ನಡುವೆ ಭೌಗೋಳಿಕವಾಗಿ ತಡೆ ಎನಿಸಿದ್ದ ಹಿಮಾಲಯ ಇನ್ನು ಹೆಚ್ಚು ಕಾಲ ಹಾಗೆ ಉಳಿಯಲಾರದು; ಸಂಪರ್ಕವ್ಯವಸ್ಥೆಗೆ ಅದು ದಾರಿಮಾಡಿಕೊಡಲಿದೆ. ಚೀನಾ ನೇಪಾಳದಲ್ಲಿ ಮೂಲಸವಲತ್ತುಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ನೇಪಾಳದೊಂದಿಗೆ ಚೀನಾದ ಸಂಪರ್ಕ ಕುದುರಿತೆಂದರೆ ಚೀನೀ ಸೇನೆ ಭಾರತದ ಗಡಿಗೇ ಬಂದಂತಾಗುತ್ತದೆ. ಆಗ ಸಿಲಿಗುರಿ ಕಾರಿಡಾರ್ ಇನ್ನಷ್ಟು ಅಪಾಯಕ್ಕೆ ಸಿಲುಕಲಿದೆ. ಕೋಳಿ ಕತ್ತಿನಂತಿರುವ ಸಿಲಿಗುರಿ `ಜಗಲಿ’ ಭಾರತದ ಮುಖ್ಯ ಭೂಭಾಗ ಮತ್ತು ಈಶಾನ್ಯಭಾರತದ ನಡುವಣ ಸಂಪರ್ಕದ ಏಕೈಕ ಮಾರ್ಗವಾಗಿದೆ. ಅಲ್ಲಿ ನೇಪಾಳ-ಬಂಗ್ಲಾ ಗಡಿಗಳ ನಡುವಣ ಅಂತರ ಕೇವಲ ೮೭ ಕಿ.ಮೀ.
ನೇಪಾಳಕ್ಕೆ ಚೀನೀ ಸೈನಿಕರು ಪ್ರವೇಶಪಡೆದರೆ ಉತ್ತರಭಾರತದ ಹಲವು ರಾಜ್ಯಗಳಲ್ಲಿ ದಾಂಧಲೆ ನಡೆಸುತ್ತಿರುವ ಮಾವೋವಾದಿಗಳಿಗೆ ತುಂಬ ಅನುಕೂಲವಾಗುತ್ತದೆ. ಇವೆಲ್ಲ ಗಾಬರಿ ಉಂಟುಮಾಡುವ ಬೆಳವಣಿಗೆಗಳು. ಇನ್ನು ಭಾರತಕ್ಕಿರುವ ಆಶಾಕಿರಣವೆಂದರೆ, ನೇಪಾಳ-ಚೀನಾಗಳ ನಡುವೆ ಇರುವುದು ಪರ್ವತಮಯ ಪ್ರದೇಶವಾಗಿದ್ದು, ಅಲ್ಲಿ ರೈಲುಮಾರ್ಗ ನಿರ್ಮಿಸಲು ಚೀನಾಕ್ಕೆ ಸಾಕಷ್ಟುಕಾಲ ಬೇಕು. ಮೂಲಸವಲತ್ತು ಕೂಡ ಶೀಘ್ರ ಪ್ರಯೋಜನಕ್ಕೆ ಬಾರದು; ಅಷ್ಟರೊಳಗೆ ಭಾರತ ತನ್ನ ಸಂಬಂಧವನ್ನು ಉತ್ತಮಪಡಿಸಿಕೊಳ್ಳಬೇಕು. ಶತಮಾನಗಳ ಐತಿಹಾಸಿಕ ಸಂಬಂಧವನ್ನು ಬಲಪಡಿಸಿಕೊಳ್ಳಬೇಕು; ಆದರೆ ಅದಕ್ಕೆ ಪ್ರಚಂಡ ಮತ್ತೆ ಪ್ರಧಾನಿ ಆಗಿರುವುದು ಕಾಲ್ತೊಡಕಾಗದೆ ಇರಲಾರದು.
‘ಮುತ್ತಿನ ಮಾಲೆ’-ವ್ಯೂಹ
ಹಿಂದೂ ಮಹಾಸಾಗರದಲ್ಲಿ ಭಾರತವನ್ನು ಸುತ್ತುವರಿಯಲು ಚೀನಾ `ಮುತ್ತಿನ ಮಾಲೆ’ಯ ವ್ಯೂಹವನ್ನೇ ರಚಿಸುತ್ತಿದೆ. ಅದಕ್ಕೊಂದು ಉದಾಹರಣೆ ಶ್ರೀಲಂಕಾದ ಕೊಲಂಬೋ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಬಂದರುನಗರ. ಶ್ರೀಲಂಕಾದಲ್ಲಿ ಚೀನಾ ಯೋಚಿಸಿದಂತೆ ನಡೆದುಬಿಟ್ಟಿದ್ದರೆ ಇಷ್ಟರಲ್ಲೇ ನಮ್ಮ ಕಾಲಬುಡದಲ್ಲೇ ಬೆಂಕಿಬಿದ್ದಂತಾಗುತ್ತಿತ್ತು. ಎಲ್ಟಿಟಿಇ ಜೊತೆ ಸಂಭವಿಸಿದ ಯುದ್ಧದ ವೇಳೆ ಪ್ರಮುಖ ಪಾತ್ರವಹಿಸಿದ್ದ ಜ| ಫೋನ್ಸೆಕಾ ಯುದ್ಧ ಮುಗಿಯುತ್ತಲೇ ಸೇನೆಯ ಹುದ್ದೆಗೆ ರಾಜೀನಾಮೆ ನೀಡಿ, ಚುನಾವಣೆಗೆ ಸ್ಪರ್ಧಿಸಿದರು. ಆತನಿಗೆ ಅಷ್ಟೊಂದು ರಾಜಕೀಯ ಮಹತ್ತ್ವಾಕಾಂಕ್ಷೆ ಏಕೆಂಬುದು ೨-೩ ವರ್ಷಗಳ ಬಳಿಕ ಗೊತ್ತಾಯಿತು. ಸುಮಾರು ೧೫ ವರ್ಷಗಳ ಕಾಲ ಶ್ರೀಲಂಕಾದಲ್ಲಿ ಸರ್ಕಾರಗಳು ಬದಲಾದರೂ ತಮಿಳರ ವಿರುದ್ಧದ ಯುದ್ಧಕ್ಕೆ ಬೇಕಾದ ಶಸ್ತ್ರಾಸ್ತ್ರ, ಸಲಕರಣೆಗಳನ್ನು ಚೀನಾ ಶ್ರೀಲಂಕಾಗೆ ನೇರವಾಗಿ ಕೊಡುತ್ತಿತ್ತು. ಜೊತೆಗೆ ಜ| ಫೋನ್ಸೆಕಾನ ರಾಜಕೀಯ ಮಹತ್ತ್ವಾಕಾಂಕ್ಷೆಗೆ ನೀರೆರೆದು ಪೋಷಿಸುವ ಕೆಲಸವನ್ನೂ ಮಾಡುತ್ತಿತ್ತು. ಅದೇ ಬೆಂಬಲದಿಂದ ಆತ ಚುನಾವಣೆಯಲ್ಲಿ ಸ್ಪರ್ಧಿಸಿದ್ದು; ಆತ ಗೆದ್ದಿದ್ದರೆ ಶ್ರೀಲಂಕಾದಲ್ಲಿ ಭಾರತವಿರೋಧಿ ಸರ್ಕಾರ ರಚನೆಯಾಗುತ್ತಿತ್ತು. ಮುಂದೆ ೨೦೧೪ರಲ್ಲಿ ಕೂಡ ತನಗೆ ಅನುಕೂಲರಾದವರನ್ನು ಶ್ರೀಲಂಕಾದಲ್ಲಿ ಅಧಿಕಾರಕ್ಕೆ ತರಲು ಚೀನಾ ಪ್ರಯತ್ನಿಸಿದ್ದು ಅದು ಸಾಧ್ಯವಾಗಲಿಲ್ಲ. ಮೋದಿ ಸರ್ಕಾರದ ರಾಜತಂತ್ರ ಅಲ್ಲಿ ಸಫಲವಾಯಿತು; ಚೀನಾಸ್ನೇಹಿಯಾದ ಮಾಜಿ ಅಧ್ಯಕ್ಷ ಕಳೆದ ಚುನಾವಣೆಯಲ್ಲಿ ಸೋತರಾದರೂ ವರ್ಷದ ಅನಂತರ ಹೊಸ ಅಧ್ಯಕ್ಷ ಕೂಡ ಅದೇ ಹಾದಿ ಹಿಡಿದರು.
ಕೊಲಂಬೋ ಸಮೀಪ ಬಂದರು ನಿರ್ಮಿಸುವ ಈ ಯೋಜನೆಯ ವೆಚ್ಚ ೧೪೦ ಕೋಟಿ ಡಾಲರ್. ಶ್ರೀಲಂಕಾದ ಅಧ್ಯಕ್ಷ ಮೈತ್ರೀಪಾಲ ಸಿರಿಸೇನರು ಈ ಯೋಜನೆಗೆ ಈಗ ಮುಂದಾಗಿದ್ದಾರೆ. ಚೀನೀ ಅಧ್ಯಕ್ಷ ಕ್ಸಿ ಜಿನ್ಪಿಂಗ್ ೨೦೧೪ರ ಸೆಪ್ಟೆಂಬರ್ನಲ್ಲಿ ಅದರ ಪ್ರಸ್ತಾವ ಮಾಡಿದ್ದರು. ಷರತ್ತುಗಳು ಏನೆಂದು ತಿಳಿದಿಲ್ಲ. ಆದರೆ ಅಧಿಕೃತ ಮೂಲಗಳ ಪ್ರಕಾರ ಹೆಚ್ಚಿನ ತಿದ್ದುಪಡಿ ಮಾಡದೆ ಯೋಜನೆಯನ್ನು ಮುಂದುವರಿಸಲು ಅನುಮತಿಯನ್ನು ನೀಡಲಾಗಿದೆ. ೨೦೧೦ರಲ್ಲಿ ಶ್ರೀಲಂಕಾದ ಇನ್ನೊಂದು ಆಳಸಮುದ್ರ ಬಂದರಿಗೆ ಚೀನಾ ಹಣ ನೀಡಿತ್ತು. ಇಂಧನದ ಭಾರೀ ಬೇಡಿಕೆ ಇರುವ ಚೀನಾದ ತೈಲ ಆಮದಿನಲ್ಲಿ ಸೇ. ೭೦ರಷ್ಟು ಮಧ್ಯಪೂರ್ವ ಮತ್ತು ಆಫ್ರಿಕದಿಂದ ಬರುತ್ತಿದೆ. ಆದ್ದರಿಂದ ಸಮುದ್ರಮಾರ್ಗದ ಸಂಪರ್ಕ ಅದಕ್ಕೆ ನಿರ್ಣಾಯಕ. ಅದರ ’ಮುತ್ತಿನ ಮಾಲೆ’ ವ್ಯೂಹ ಚೀನಾದ ದಕ್ಷಿಣ ತುದಿಯ ಹೈನಾನ್ ದ್ವೀಪದಿಂದ ಆರಂಭವಾದರೆ ಪಾಕಿಸ್ತಾನದ ಗ್ವಾದಾರ್ ತನಕವೂ ಇದೆ. ಅದಕ್ಕಾಗಿ ಚೀನಾ ವ್ಯೂಹಾತ್ಮಕ ಸ್ಥಳಗಳಲ್ಲಿ ಪ್ರಾಬಲ್ಯ ಹೊಂದಲು ಯತ್ನಿಸಿ ತನ್ನ ಸಮುದ್ರಶಕ್ತಿಯನ್ನು ಬೆಳೆಸಿಕೊಳ್ಳುತ್ತಿದೆ. ಚೀನೀ ನೌಕಾಪಡೆಯು ತನ್ನ `ಸಂಪರ್ಕದ ಸಮುದ್ರಮಾರ್ಗ’(ಎಸ್ಎಲ್ಓಸಿ)ವನ್ನು ವಿಸ್ತರಿಸುತ್ತಿದೆ. ಚೀನಾದ ದೋಣಿಗಳು `ಮೀನುಗಾರಿಕೆ ದೋಣಿಗಳು’ ಎನ್ನುವ ಹೆಸರಿನಲ್ಲಿ ಸಬ್ಮೆರಿನ್ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸಮುದ್ರದಲ್ಲಿ ಸಮೀಕ್ಷೆ ನಡೆಸಿವೆ. ಈ ನಿಟ್ಟಿನಲ್ಲಿ ಚೀನಾ ಎಂತಹ ಮನೋಭಾವ ಹೊಂದಿದೆ ಎಂಬುದು ಈಚೆಗೆ ಅದು ತನ್ನ ದಕ್ಷಿಣಭಾಗದ ಸಮುದ್ರಕ್ಕೆ ಸಂಬಂಧಿಸಿ ಬಂದ ಜಾಗತಿಕ ತೀರ್ಪಿಗೆ ಪ್ರತಿಕ್ರಿಯಿಸಿದುದರಲ್ಲಿ ವ್ಯಕ್ತವಾಗಿತ್ತು; ಅಂತಾರಾಷ್ಟ್ರೀಯ ಅಧಿಕೃತ ಸಂಸ್ಥೆಯ ತೀರ್ಪನ್ನೇ ಲೇವಡಿ ಮಾಡಿದ ಚೀನಾ ತನ್ನ ದುಂಡಾವೃತ್ತಿಯನ್ನು ಮುಂದುವರಿಸುವುದಾಗಿ ಹೇಳಿದೆ.
ದ್ವೀಪರಾ? ಶ್ರೀಲಂಕಾ ಭೌಗೋಲಿಕವಾಗಿ ಭಾರತಕ್ಕೆ ಸಮೀಪವಿದ್ದರೂ ವ್ಯೂಹಾತ್ಮಕವಾಗಿ ಈಗ ಚೀನಾಕ್ಕೆ ಸಮೀಪವಾಗುತ್ತಿದೆ. ಚೀನಾ ಶ್ರೀಲಂಕೆಯ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರನಾಗಿದೆ. ಆಂತರಿಕ ಯುದ್ಧವಿದ್ದ ಕಾರಣ ೧೯೯೦ರ ದಶಕದಿಂದ ಪಾಶ್ಚಾತ್ಯ ದೇಶಗಳು ಶ್ರೀಲಂಕೆಗೆ ಶಸ್ತ್ರಾಸ್ತ್ರ ಪೂರೈಸಲು ನಿರಾಕರಿಸಿದ್ದು, ಚೀನಾ ಆ ಸಂದರ್ಭವನ್ನು ಚಾಣಕ್ಯಬುದ್ಧಿಯಿಂದ ಸರಿಯಾಗಿಯೆ ಬಳಸಿಕೊಂಡಿತು. ಮಾನವಹಕ್ಕು ಕಾರಣಕ್ಕಾಗಿ ಅಮೆರಿಕ ೨೦೦೭ರಿಂದ ಶ್ರೀಲಂಕೆಗೆ ಸೇನಾ ನೆರವು ನೀಡಲು ನಿರಾಕರಿಸಿತು; ಅದರ ಲಾಭ ಪಡೆದ ಚೀನಾ ಶ್ರೀಲಂಕೆಗೆ ಶಸ್ತ್ರಾಸ್ತ್ರ ಮಾರಲು ಪಾಕಿಸ್ತಾನವನ್ನು ಪ್ರೋತ್ಸಾಹಿಸಿದ್ದಲ್ಲದೆ ಚೀನೀ ಫೈಟರ್ವಿಮಾನಗಳ ಚಾಲನೆ ಬಗ್ಗೆ ಪೈಲಟ್ಗಳಿಗೆ ತರಬೇತಿಯನ್ನು ಕೂಡ ಕೊಡಿಸಿತು. ಅದಲ್ಲದೆ ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶ್ರೀಲಂಕೆಗೆ ರಾಜತಾಂತ್ರಿಕ ಬೆಂಬಲವನ್ನು ನೀಡುತ್ತಿದೆ; ಕಾರ್ಯಸೂಚಿಯಲ್ಲಿ ಶ್ರೀಲಂಕಾ ಹೆಸರು ಬಾರದಂತೆ ನೋಡಿಕೊಂಡಿದೆ.
ಶ್ರೀಲಂಕಾದಲ್ಲಿ ಬಂದರು
ಶ್ರೀಲಂಕಾ ದಕ್ಷಿಣ ಕರಾವಳಿಯ ಹಂಬನ್ತೋಟದಲ್ಲಿ ಚೀನಾ ನಿರ್ಮಿಸುತ್ತಿರುವ ಬಂದರು ಜಗತ್ತಿನ ಪ್ರಮುಖ ನೌಕಾಮಾರ್ಗದಿಂದ ಕೇವಲ ೧೦ ಮೈಲು ದೂರದಲ್ಲಿದೆ. ಅಲ್ಲಿ ಹಡಗುಗಳಿಗೆ ಇಂಧನ ತುಂಬುವುದಲ್ಲದೆ ಅದು ನೌಕಾಪಡೆಯ ಡಾಕಿಂಗ್ ಸ್ಟೇಷನ್ ಕೂಡ ಆಗಿದೆ. ಅದರ ಮೂಲಕ ಚೀನಾದ ಹಡಗುಗಳು ಹಿಂದೂ ಮಹಾಸಾಗರದಲ್ಲಿ ಗಸ್ತು ತಿರುಗುತ್ತಿವೆ ಮತ್ತು ಮಧ್ಯಪೂರ್ವದ ಕಡೆಯಿಂದ ಬರುವ ತೈಲಸಾಗಾಟಕ್ಕೆ ರಕ್ಷಣೆ ನೀಡುತ್ತವೆ. ಆ ಬಂದರು ಪೂರ್ತಿಯಾಗಿ ಒಂದು ವಾಣಿಜ್ಯ ಉಪಕ್ರಮವೆಂದು ಚೀನಾ ಹೇಳಿಕೊಳ್ಳುತ್ತಿದೆಯಾದರೂ ಅದಿರುವ ಆಯಕಟ್ಟಿನ (ವ್ಯೂಹಾತ್ಮಕ) ಜಾಗ ಸಂಶಯ ಹುಟ್ಟಿಸುವಂತಿದೆ.
ಭಾರತದ ಈಶಾನ್ಯಭಾಗದಲ್ಲಿರುವ ಮ್ಯಾನ್ಮಾರ್ (ಬರ್ಮಾ) ಒಂದು ಕಾಲದಲ್ಲಿ ಭಾರತದ ಭಾಗವಾಗಿತ್ತು. ಅದರ ಪರ್ವತಶ್ರೇಣಿಗಳು ಮತ್ತು ಪ್ರಮುಖ ನದಿಗಳು ಉತ್ತರ-ದಕ್ಷಿಣವಾಗಿ ಇರುವ ಕಾರಣ ಚೀನಾದ ಗಡಿಯಿಂದ ಮ್ಯಾನ್ಮಾರ್ಗೆ ಬರುವುದು ಸುಲಭ. ದಟ್ಟ ಕಾಡಿರುವ ಭಾರತದ ಕಡೆಯಿಂದ ಹೋಗುವುದು ಕಷಟ. ಚೀನಾ ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರಕ್ಕೆ ಮ್ಯಾನ್ಮಾರ್ ಮಾರ್ಗವಾಗಿ ನೇರ ಪ್ರವೇಶದ ಉದ್ದೇಶವನ್ನು ಹೊಂದಿದೆ; ಅದರಿಂದ ಆಯಕಟ್ಟಿನ ಮಲಕ್ಕಾ ಜಲಸಂಧಿಯನ್ನು ತಪ್ಪಿಸಬಹುದು.
ಕೈಚೆಲ್ಲಿದ ಸಂಬಂಧ
ನಾವು ಮೂರ್ಖತನದಿಂದ ಒಂದು ದೇಶದ ಸಂಬಂಧವನ್ನು ಕಳೆದುಕೊಳ್ಳುವುದು ಹೇಗೆ ಎಂಬುದನ್ನು ನೋಡಬೇಕಿದ್ದರೆ ಮ್ಯಾನ್ಮಾರ್ನ ವಿಷಯಕ್ಕೆ ಬರಬೇಕು. ಎಲ್ಲ ದೇಶಗಳಲ್ಲಿ ಪ್ರಜಾಪ್ರಭುತ್ವ ಬೇಕು ನಿಜ. ಆದರೆ ಅದಕ್ಕಿಂತ ಮುನ್ನ ಆ ರಾಷ್ಟ್ರದ ಜೊತೆಗೆ ಸಂಬಂಧ ಇರಬೇಕು ಅಲ್ಲವೆ? ಅಲ್ಲಿ ಪ್ರಜಾಪ್ರಭುತ್ವ ಇಲ್ಲ, ಸೇನಾಡಳಿತವಿದೆ ಎಂಬ ಕಾರಣಕ್ಕೆ ಸುದೀರ್ಘ ೨೮ ವರ್ಷಗಳ ಕಾಲ ನಾವು ಯಾವುದೇ ರಾಜತಾಂತ್ರಿಕ, ಆರ್ಥಿಕ ಹಾಗೂ ಸೇನಾ ಸಂಬಂಧಗಳನ್ನು ಮ್ಯಾನ್ಮಾರ್ ಜೊತೆ ಇಟ್ಟುಕೊಳ್ಳಲೇ ಇಲ್ಲ. ಅಲ್ಲಿ ಸೇನಾಡಳಿತವಿದ್ದರೂ ನಮ್ಮ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ಸಂಬಂಧ ಇಟ್ಟುಕೊಳ್ಳುವುದಕ್ಕೆ ನಮಗೇನು ತೊಂದರೆ? ಸಂಬಂಧ ಇಟ್ಟುಕೊಂಡರೆ ತಾನೆ ಏನಾದರೂ ಬದಲಾವಣೆ ತರಲು ಸಾಧ್ಯವಾಗುವುದು? ಎಂದು ಪ್ರಶ್ನಿಸುತ್ತಾರೆ ಬಿ.ಎಲ್. ಸಂತೋಷ್.
ಮ್ಯಾನ್ಮಾರ್ಗೆ ಸಹಜವಾದ ಮಿತ್ರರಾಷ್ಟ್ರ ಭಾರತ, ಪಕ್ಕದಲ್ಲೇ ಇರುವ ದೇಶ. ಆದರೂ ಸುಮಾರು ಮೂರು ದಶಕಗಳ ಕಾಲ ಸಂಬಂಧವೇ ಇರಲಿಲ್ಲ. ಪರಿಣಾಮವಾಗಿ ಬರ್ಮಾ ಚೀನಾವನ್ನು ಸ್ನೇಹದಿಂದ ಕಾಣುವಂತಾಯಿತು. ಬದಲಾಗಿ ಭಾರತ ಅದರ ಜೊತೆಗೆ ವಿವಿಧ ಸಂಬಂಧಗಳನ್ನು ಇಟ್ಟುಕೊಂಡಿದ್ದರೆ ಚೀನಾದಿಂದ ದೂರ ಇರುವಂತೆ ಮಾಡಬಹುದಿತ್ತು.
ಮ್ಯಾನ್ಮಾರ್ ಮಾರ್ಗವಾಗಿ ಬಂಗಾಳಕೊಲ್ಲಿಯನ್ನು ಸಂಪರ್ಕಿಸುವ ಗುರಿಯೊಂದಿಗೆ ಚೀನಾ ತನ್ನ ಗಡಿಯಿಂದ ರಸ್ತೆಗಳನ್ನು ದಕ್ಷಿಣದತ್ತ ವಿಸ್ತರಿಸಲು ಒತ್ತುನೀಡುತ್ತಿದೆ. ಮ್ಯಾನ್ಮಾರ್ಗೆ ಚೀನಾ ಅತಿದೊಡ್ಡ ಶಸ್ತ್ರಾಸ್ತ್ರಪೂರೈಕೆದಾರ ಕೂಡ ಆಗಿದೆ. ವಿಶ್ವಸಂಸ್ಥೆಯ ಭದ್ರತಾಮಂಡಳಿಯ ಮುಂದೆ ಪಾಶ್ಚಾತ್ಯ ದೇಶಗಳು ಮ್ಯಾನ್ಮಾರ್ ವಿಷಯವನ್ನು ತಾರದಂತೆ ಚೀನಾ ತಡೆಯುತ್ತಾ ಬಂದಿದೆ.
ಇದೀಗ ಮೋದಿ ಸರ್ಕಾರ ಹಿಂದಿನ ಧೋರಣೆಗಳನ್ನು ತ್ಯಜಿಸಿ ಮ್ಯಾನ್ಮಾರ್ ಜೊತೆಗೆ ವಿಶಾಲ ತಳಹದಿಯ ಸಂಬಂಧವನ್ನು ಸ್ಥಾಪಿಸಲು ಉದ್ಯುಕ್ತವಾಗಿದೆ. ರಕ್ಷಣೆ, ವ್ಯಾಪಾರ, ವಿದ್ಯುತ್ (ಇಂಧನ) ಅಭಿವೃದ್ಧಿಗೆ ನೆರವು ನೀಡುವ ಮೂಲಕ ವಿಶ್ವಾಸವೃದ್ಧಿಗೆ ತೊಡಗಿದೆ. ಆಯ್ದ ಶಸ್ತ್ರಾಸ್ತ್ರಗಳನ್ನೂ ನೀಡಲಿದೆ; ಬಂದರು ಅಭಿವೃದ್ಧಿಗೆ ಸಹಕಾರ ಕೊಡಲಿದೆ. ಮಿಜೋರಾಂ ಮತ್ತು ನಾಗಾಲ್ಯಾಂಡ್ಗಳಲ್ಲಿ ಎರಡು ಗಡಿ ವ್ಯಾಪಾರ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದೆ. ಏನಿದ್ದರೂ ಅಲ್ಲಿ ಚೀನಾ ಭಾರತಕ್ಕಿಂತ ಹೆಚ್ಚಿನ ಆರ್ಥಿಕ, ರಾಜಕೀಯ ಮತ್ತು ಸೇನಾ ಪ್ರಭಾವವನ್ನು ಹೊಂದಿದೆ. `ಅತ್ಯಂತ ಪ್ರಭಾವೀ ದೇಶ’ ಎಂಬುದರಿಂದ ಚೀನಾವನ್ನು ದೂರಗೊಳಿಸುವುದು ಕಷ್ಟ. ಈ ಮಾತು ಸೇನಾಡಳಿತ ಹೋಗಿ ನಾಗರಿಕ ಆಡಳಿತ ಬಂದ ಅನಂತರದ ವಾತಾವರಣಕ್ಕೂ ಅನ್ವಯಿಸುತ್ತದೆ.
ಬಂಗ್ಲಾ-ಬಂಗಾಳಕೊಲ್ಲಿ
ಬಂಗ್ಲಾದೇಶದ ಮೂರು ಕಡೆ ಭಾರತವಿದೆ. ಭಾರತದಿಂದ ಬೆದರಿಕೆಯಿದೆ ಎಂಬ ಭಾವನೆಯನ್ನು ಬಂಗ್ಲಾ ಹೊಂದಿದ್ದು, ಚೀನಾದ ನಿಕಟ ಸಂಬಂಧದಿಂದ ಭದ್ರತೆಯ ಭಾವನೆಯನ್ನು ಪಡೆದುಕೊಂಡಿತು. ೨೦೦೨ರಲ್ಲಿ ಬಂಗ್ಲಾ ಪ್ರಧಾನಿ ಖಲೀದಾ ಜಿಯಾ ಅವರು ಚೀನಾ ಪ್ರವಾಸ ಮಾಡಿದ್ದು, ಅದು ದ್ವಿಪಕ್ಷೀಯ ಒಪ್ಪಂದದಲ್ಲಿ ಮೈಲಿಗಲ್ಲೆನಿಸಿತು. ಸೇನೆ, ಆರ್ಥಿಕ ಮತ್ತು ತಾಂತ್ರಿಕ ಸಹಕಾರದ ಬಗ್ಗೆ ಮೂರು ಒಪ್ಪಂದಗಳು ಮತ್ತು ರಕ್ಷಣೆಗೆ ಸಂಬಂಧಿಸಿ ಒಂದು ಒಡಂಬಡಿಕೆ(ಎಂಓಯು) ಯನ್ನು ಮಾಡಿಕೊಳ್ಳಲಾಯಿತು. ರಕ್ಷಣಾ ಒಡಂಬಡಿಕೆಗೆ ವ್ಯಾಪಕ ಚೌಕಟ್ಟಿದ್ದು ತರಬೇತಿ, ನಿರ್ವಹಣೆ, ರಕ್ಷಣಾ ಉತ್ಪಾದನೆಯ ಕೆಲವು ಕ್ಷೇತ್ರಗಳು ಅದಕ್ಕೆ ಒಳಪಟ್ಟಿವೆ.
ಬಂಗ್ಲಾದೇಶ ಭಾರೀ ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪವನ್ನು ಹೊಂದಿದ್ದು, ಚೀನಾದ ಕಣ್ಣು ಅದರ ಮೇಲಿದೆ. ಪೈಪ್ಲೈನ್ ಮೂಲಕ ಅದನ್ನು ಸಾಗಿಸಲು ಉದ್ದೇಶಿಸಿದೆ. ಇದರಿಂದ ಚೀನಾಕ್ಕೆ ಆ ಭಾಗದಲ್ಲಿ ಆಯಕಟ್ಟಿನ ನೆಲೆ ಕೂಡ ಸಿಗಬಹುದು. ಅನಿಲವನ್ನು ಎತ್ತುವ ಬಗ್ಗೆ ಬಂಗ್ಲಾ ಚೀನಾಕ್ಕೆ ಹಕ್ಕು ನೀಡಿದೆ. ಬಂಗ್ಲಾದ ಪ್ರತಿಷ್ಠೆಯ ಚಿತ್ತಗಾಂಗ್ ಬಂದರಿನಲ್ಲಿ ಚೀನೀ ನೌಕಾಪಡೆಗೆ ಪ್ರವೇಶಾವಕಾಶವಿದೆ; ಭಾರತ ಅದನ್ನು ಕೇಳಿದರೂ ನೀಡಿರಲಿಲ್ಲ. ಚೀನಾ-ಬಂಗ್ಲಾ ನಡುವೆ (ಕುನ್ಮಿಂಗ್ನಿಂದ ಚಿತ್ತಗಾಂಗ್ ವರೆಗೆ) ಮ್ಯಾನ್ಮಾರ್ ಮೂಲಕ ರಸ್ತೆ ಸಂಪರ್ಕವನ್ನು ಕಲ್ಪಿಸಲಾಗುತ್ತಿದೆ. ಕುನ್ಮಿಂಗ್-ಢಾಕಾ ನಡುವೆ ಈಗಾಗಲೇ ವಿಮಾನ ಹಾರಾಟವಿದೆ. ಇದರಿಂದ ಎರಡು ದೇಶಗಳ ವ್ಯಾಪಾರ, ಪ್ರವಾಸೋದ್ಯಮಕ್ಕೂ ಪ್ರಯೋಜನವಿದೆ.
ಭಾರತದ ಜೊತೆಗಿನ ಉಪಖಂಡ ಮಟ್ಟದ ಸೇನಾ ಸಹಕಾರ, ಭದ್ರತೆಗಳು ಬಂಗ್ಲಾಕ್ಕೆ ಹೆಚ್ಚು ಫಲ ನೀಡದಿದ್ದ ಕಾರಣ ಅದು ಚೀನಾದತ್ತ ತಿರುಗಿತೆಂದು ಹೇಳಲಾಗುತ್ತದೆ. ವ್ಯೂಹಾತ್ಮಕ ಸೇರಿದಂತೆ ಚೀನಾ ಅದರ ಲಾಭ ಪಡೆಯುವುದು ನಿಶ್ಚಿತ.
ಚೀನಾದ ದಕ್ಷಿಣ ಏಷ್ಯಾ ಮಿತ್ರರಲ್ಲಿ ಬಹುಶಃ ಭಾರತದ ವಿರುದ್ಧ ಅತ್ಯಂತ ದ್ವೇಷಹೊಂದಿರುವ ದೇಶವೆಂದರೆ ಪಾಕಿಸ್ತಾನ. ಭಾರತದ ಶಕ್ತಿಗೆ ಪ್ರತಿರೋಧ ತೋರುವುದು ಮತ್ತು ಭಾರತದ ಸೇನೆಯ ಗಮನವನ್ನು ಬೇರೆ ಕಡೆಗೆ ಸೆಳೆಯುವ ಕಾರ್ಯವನ್ನು ಕೂಡ ಪಾಕಿಸ್ತಾನ ಮಾಡುತ್ತಿದೆ; ಆ ಮೂಲಕ ಅದು ಚೀನಾಕ್ಕೆ ಸಹಕರಿಸುತ್ತಿದೆ ಎನ್ನಬಹುದು. ಇನ್ನು ಮುಸ್ಲಿಂ ಜಗತ್ತಿನ ಸೇತುವೆಯಾಗಿ ಭಾರತದ ವಿರುದ್ಧ ದ್ವೇಷವನ್ನು ಬಿತ್ತುವುದು, ಭಯೋತ್ಪಾದಕರನ್ನು ಭಾರತಕ್ಕೆ ಕಳಿಸುವುದು – ಇವೆಲ್ಲ ಪಾಕಿಸ್ತಾನ ಸಂತೋಷದಿಂದ ಮಾಡುತ್ತಿರುವ ಕೆಲಸಗಳು. ಅದು ಚೀನಾಕ್ಕೆ ತುಂಬ ಇಷ್ಟವೆಂದು ಪ್ರತ್ಯೇಕ ಹೇಳಬೇಕಿಲ್ಲ.
ಪಾಕಿಸ್ತಾನದ ಸಮೀಪ ಅರಬ್ಬಿ ಸಮುದ್ರದಲ್ಲಿ ಚೀನಾ ಗ್ವಾದಾರ್ ಬಂದರನ್ನು ನಿರ್ಮಿಸುತ್ತಿದೆ; ಅದರ ಮೊದಲ ಹಂತಕ್ಕೆ ೨೫ ಕೋಟಿ ಡಾಲರ್ ವೆಚ್ಚವಾಗಿದ್ದು, ಅದರ ಶೇ. ೮೦ ಭಾಗವನ್ನು ಚೀನಾ ನೀಡಿದೆ. ಬಂದರಿನ ಎರಡನೇ ಹಂತದ ಕಾಮಗಾರಿಗೂ ಚೀನಾ ಹಣ ಒದಗಿಸಲಿದೆ. ಭಾರತದ ಉತ್ತರದಲ್ಲಿ ಚೀನಾ ನಿರ್ಮಿಸಿದ ಕಾರಕೋರಂ ಹೆದ್ದಾರಿ ಪಾಕಿಸ್ತಾನ-ಚೀನಾವನ್ನು ಸಂಪರ್ಕಿಸುತ್ತದೆ. ಮುಸ್ಲಿಮರು ಅಧಿಕವಿರುವ ಚೀನಾದ ಸ್ವಾಯತ್ತ ಪ್ರದೇಶಕ್ಕೆ ಅದು ತಾಗಿಕೊಂಡಿದೆ.
ಪಾಕ್-ಆಕ್ರಮಿತ ಕಾಶ್ಮೀರದಲ್ಲಿ
ನಮ್ಮ ಪವಿತ್ರ ಕಾಶ್ಮೀರವನ್ನು ಛಿದ್ರಮಾಡಿದ್ದು ಮತ್ತು ಮಾಡುತ್ತಿರುವುದರಲ್ಲಿ ಚೀನಾದ ಪಾಲು ಕೂಡ ಇದೆ. ೧೯೪೮ರಲ್ಲಿ ಪಾಕಿಸ್ತಾನ ನಮ್ಮಿಂದ ಕಸಿದುಕೊಂಡ ಪಾಕ್- ಆಕ್ರಮಿತ ಕಾಶ್ಮೀರ(ಪಿಓಜೆಕೆ)ದ ಒಂದು ಭಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ. ವ್ಯೂಹಾತ್ಮಕ ಮತ್ತು ಸೇನಾಸಂಬಂಧಿ ಕಾರಣಕ್ಕೆ ಹಾಗೂ ಭಾರತದ ಉತ್ತರದಲ್ಲಿ ತನಗೊಂದು ನೆಲೆ ಬೇಕೆಂಬ ಉದ್ದೇಶಕ್ಕಾಗಿ ಚೀನಾ ಅದನ್ನು ತನ್ನದಾಗಿಸಿಕೊಂಡಿದೆ. ಪಾಕಿಸ್ತಾನ ಅದನ್ನು ದಾನವಾಗಿ ಬಿಟ್ಟುಕೊಟ್ಟಿದೆ. ರಸ್ತೆ ಮತ್ತು ರೈಲುಮಾರ್ಗದ ಮೂಲಸವಲತ್ತು ನಿರ್ಮಾಣದ ಕೆಲಸವನ್ನು ಚೀನಾ ಅಲ್ಲಿ ಮಾಡಿದೆ. ಅದರಿಂದ ಪಾಕಿಸ್ತಾನಕ್ಕೂ ಅನುಕೂಲವಿದೆ. ಅಲ್ಲದೆ ಸೈನ್ಯದ ಚಲನೆಗೆ ಅಗತ್ಯವಾದ ಮೂಲಸವಲತ್ತು ಕೂಡ ಚೀನಾ ಆ ಭಾಗದಲ್ಲಿ ನಿರ್ಮಿಸುತ್ತಿದೆ. ಚೀನಾದ ವಶವಾದ ಆ ಜಾಗ ಈಗ ಸಿಓಜೆಕೆ-೧ ಎನಿಸಿದೆ; ಇನ್ನು ಅಕ್ಸಾಯ್ ಚಿನ್ನ ಭಾಗ ಸಿಓಜೆಕೆ-೨ ಚೀನಾ ೧೯೬೨ರ ಯುದ್ಧದ ವೇಳೆ ವಶಪಡಿಸಿಕೊಂಡದ್ದು.
ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳನ್ನು ಚೀನಾ ನೇರವಾಗಿಯೇ ಬೆಂಬಲಿಸುತ್ತಿದೆ. ಪಾಕ್-ಮೂಲದ ಲಷ್ಕರ್- ಎ-ತಯ್ಯಬಾ ಜನಿತ ಜಮಾತ್-ಉದ್-ದಾವಾ (ಜೆಯುಡಿ) ೨೦೦೮ರ (೨೬/೧೧) ಮುಂಬಯಿ ದಾಳಿಗೆ ಕಾರಣವಾಗಿದ್ದು, ಅದನ್ನು ನಿ?ಧಿಸಬೇಕೆಂಬ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಕ್ಕೆ ಚೀನಾ ಈಗಾಗಲೇ ತಡೆಹಾಕಿದೆ. ಭಾರತದ ಭೌಗೋಳಿಕ-ಆಧಾರಿತ ಆಕಾಂಕ್ಷೆಗಳಿಗೆ ತಡೆಯಾಗಿ ಚೀನಾ ಯಾವಾಗಲೂ ಪಾಕಿಸ್ತಾನವನ್ನು ಬಳಸಿಕೊಳ್ಳುತ್ತದೆ.
ಭಾರತ ಮತ್ತು ಚೀನಾ ನಡುವೆ ನೌಕಾಯಾನದಲ್ಲೂ ಸ್ಪರ್ಧೆ ನಡೆಯುತ್ತಿದೆ. ಭಾರತ ಮಲಕ್ಕಾ ಜಲಸಂಧಿಯಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಿರುವಾಗ ಚೀನಾ ಹಿಂದೂ ಮಹಾಸಾಗರದ ಹಲವೆಡೆ ತನ್ನ ಸುರಕ್ಷಿತ ವಲಯವನ್ನು ಮಾಡಿಕೊಳ್ಳುತ್ತಿದೆ. ಭಾರತ ಮತ್ತು ಚೀನಾಗಳ ನಡುವಣ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿವೆಯಾದರೂ `ಚೀನಾದ ಬೆದರಿಕೆ’ ಎಂಬುದು ಒಳಗೊಳಗೇ ಇದೆ. ಅದಕ್ಕಾಗಿ ಭಾರತ ಒಂದೆಡೆ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ ಇನ್ನೊಂದೆಡೆ ಆಂತರಿಕ ಸಮತೋಲನವನ್ನು ಕಾಪಾಡಿಕೊಳ್ಳುತ್ತಿದೆ; ಸೇನೆಯ ಆಧುನಿಕೀಕರಣ ಅದರಲ್ಲಿ ಸೇರಿದೆ.
ಇನ್ನು ಚೀನಾ ಜೊತೆಗಿನ ವಿವಾದಿತ ಗಡಿಪ್ರದೇಶದಲ್ಲಿ ಸೇನೆಯನ್ನು ಬಲಪಡಿಸಲಾಗುತ್ತಿದೆ. ೨೦೧೧ರಲ್ಲಿ ನೈಜ ನಿಯಂತ್ರಣ ರೇಖೆ – ಎಲ್ಓಸಿ ಉದ್ದಕ್ಕೂ ಒಂದು ಲಕ್ಷ ಸೈನಿಕರನ್ನು ಹೆಚ್ಚುವರಿಯಾಗಿ ನೇಮಿಸಲಾಯಿತು. ಪೂರ್ವದ ಗಡಿಯುದ್ದಕ್ಕೂ ೩೦೦ ಕಿ.ಮೀ. ವ್ಯಾಪ್ತಿಯ ಬ್ರಹ್ಮೋಸ್ ಕ್ಷಿಪಣಿಯನ್ನು ಸನ್ನದ್ಧಗೊಳಿಸಲಾಗಿದೆ. ಹೊಸ ರಸ್ತೆ, ವೈಮಾನಿಕ ನೆಲೆಗಳ ನಿರ್ಮಾಣ ಆಗುತ್ತಿದೆ. ೫,೦೦೦ ಕಿ.ಮೀ. ವ್ಯಾಪ್ತಿಯ ಅಗ್ನಿ-೫ ಕ್ಷಿಪಣಿ ಚೀನಾದ ಎದುರು ನಮ್ಮ ಘನತೆಯನ್ನು ಹೆಚ್ಚಿಸಿದೆ. ನೌಕಾಪಡೆಯಲ್ಲಿ ಕೂಡ ಸಬಲೀಕರಣ, ಆಧುನಿಕೀಕರಣಗಳು ನಡೆಯುತ್ತಿವೆ. ಜೊತೆಗೆ ವ್ಯೂಹಾತ್ಮಕವಾಗಿ ಮುಖ್ಯವೆನಿಸುವ ಆಫಘನಿಸ್ತಾನ, ತಾಜಿಕಿಸ್ತಾನ, ಮಂಗೋಲಿಯಗಳೊಂದಿಗೆ ವಿವಿಧ ಸಹಕಾರಗಳನ್ನು ಹೆಚ್ಚಿಸಿಕೊಳ್ಳಲಾಗಿದೆ; ಆಫಘನಿಸ್ತಾನದಲ್ಲಿನ ನಮ್ಮ ಉಪಸ್ಥಿತಿ ಪರ್ಯಾಯವಾಗಿ ಪಾಕಿಸ್ತಾನಕ್ಕೆ ಹೊಡೆತವೇ ಆಗಿದೆ.
ಅಧಿಕಾರಕ್ಕೆ ಬಂದಂದಿನಿಂದ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಾಂಗ ವ್ಯವಹಾರಕ್ಕೆ ವಿಶೇಷ ಮಹತ್ತ್ವವನ್ನು ನೀಡುತ್ತಿದ್ದಾರೆ. ಭಾರತದ ಪ್ರಾಮಾಣಿಕ, ನೇರ ವ್ಯವಹಾರದಿಂದಾಗಿ ಜಾಗತಿಕ ಮಟ್ಟದಲ್ಲಿ ನಮ್ಮ ಘನತೆ- ಗೌರವಗಳು ಹೆಚ್ಚುತ್ತಲೂ ಇವೆ. ಇದು ಸಹಜವಾಗಿ ಚೀನಾ ಮತ್ತು ಪಾಕಿಸ್ತಾನಗಳ ಭಾರತವಿರೋಧಿ ಷಡ್ಯಂತ್ರಗಳನ್ನು ದುರ್ಬಲಗೊಳಿಸದೆ ಇರುವುದಿಲ್ಲ. ಆದರೆ ಚೀನಾದ ಶಕ್ತಿ ಬಹಳ ಹೆಚ್ಚಿನದು. ನಮ್ಮ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿ ನಮ್ಮನ್ನು
ದುರ್ಬಲಗೊಳಿಸುವ ನಿಟ್ಟಿನಲ್ಲಿ ಅದು ಈಗಾಗಲೆ ಸಾಕಷ್ಟು ಮುಂದುವರಿದಿದೆ. ಅದಕ್ಕೆ ಪ್ರತಿಯಾಗಿ ಭಾರತಕ್ಕೀಗ ಎಚ್ಚರದ ಸುದೀರ್ಘ ನಡೆಯೇ ಬೇಕು.