ಚೀನಾ ಬ್ರಹ್ಮಪುತ್ರಾ ನದೀನೀರನ್ನು ಅಣೆಕಟ್ಟುಗಳ ಮೂಲಕ ಹಿಡಿದಿಟ್ಟುಕೊಂಡರೆ ಈಶಾನ್ಯಭಾರತದಲ್ಲಿ ಕ್ಷಾಮ ತಲೆದೋರುವುದು ಅಥವಾ ಹಿಡಿದಿಟ್ಟ ನೀರನ್ನು ಯುದ್ಧೋಪಾದಿ ಹಠದಿಂದ ಹರಿಯಬಿಟ್ಟರೆ ಅಥವಾ ಭೂಕಂಪವೇನಾದರೂ ಸಂಭವಿಸಿದರೆ ಇಡಿಯ ಈಶಾನ್ಯಭಾರತ ಕೊಚ್ಚಿಕೊಂಡೇ ಹೋಗಬಹುದು…. ಎಚ್ಚರ! ಎಚ್ಚರ!!
ಒಂದು ದೇಶದಿಂದ ಮತ್ತೊಂದು ದೇಶದೊಳಕ್ಕೆ ಅನಧಿಕೃತವಾಗಿ ಪ್ರವೇಶಿಸುವ ನುಸುಳುಕೋರರ ಸಮಸ್ಯೆ, ಒಂದು ದೇಶ ತನ್ನ ನೆರೆಯ ದೇಶಕ್ಕೆ ಮಾರಕವಾಗುವಂತಹ ಯೋಜನೆಗಳನ್ನು ಕಾರ್ಯಗತಮಾಡುವುದು, ಒಂದು ದೇಶ ಮತ್ತೊಂದರ ಪ್ರಜೆಗಳ ಹಿತಾಸಕ್ತಿಯ ವಿರುದ್ಧವಾಗಿ ನಡೆದುಕೊಳ್ಳುವುದು – ಹೀಗೆ ಹತ್ತುಹಲವು ಕಾರಣಗಳಿಂದ ಎರಡು ದೇಶಗಳ ನಡುವಿನ ಸಂಬಂಧ ಹಳಸಬಹುದು. ಹೀಗೆ ನಡೆಯುವ ಸಣ್ಣಪುಟ್ಟ ಜಗಳಗಳು ಕೊನೆಗೆ ಯುದ್ಧವಾಗಿ ಪರಿಣಮಿಸುತ್ತವೆ. ಎರಡೂ ದೇಶಗಳನ್ನು ಪ್ರತ್ಯೇಕವಾಗಿ ಬೆಂಬಲಿಸುವ ಇತರ ಮಿತ್ರದೇಶಗಳೂ ಅವುಗಳೊಂದಿಗೆ ಸೇರಿಕೊಳ್ಳುತ್ತವೆ. ಕೊನೆಗೆ ಅಲ್ಲಿಂದಲೇ ಯುದ್ಧ ಮಹಾಯುದ್ಧವಾಗಿ ಪರಿವರ್ತನೆಯಾಗುತ್ತದೆ.
ಭಾರತದಮಟ್ಟಿಗೆ ಹೇಳುವುದಾದರೆ ನೆರೆಹೊರೆಯವರೆಲ್ಲರಿಂದಲೂ ಒಂದಲ್ಲ ಒಂದು ತರಹದ ಕಾಟ ನಮಗೆ ತಪ್ಪಿದ್ದಲ್ಲ. ಪಾಕಿಸ್ತಾನದ ಉಗ್ರಗಾಮಿಗಳ ಅಟಾಟೋಪ, ಗಡಿಯಲ್ಲಿ ಚೀನೀ ಸೇನೆಯ ದುಸ್ಸಾಹಸ, ಬಾಂಗ್ಲಾದೇಶದ ನುಸುಳುಕೋರರು, ಶ್ರೀಲಂಕಾದ ತಮಿಳರ ಸಮಸ್ಯೆ – ಹೀಗೆ ಕೋಟಲೆ
ಕೊಡುವವರನ್ನು ಎದುರಿಸುತ್ತಾ, ದಿಟ್ಟಕ್ರಮಗಳನ್ನು ತೆಗೆದುಕೊಂಡರೂ ಯುದ್ಧದ ಭೀತಿಯಲ್ಲಿಯೇ ಸಾಗುತ್ತಿದ್ದೇವೆ. ಶ್ರೇಷ್ಠ ರಾಜಕೀಯ ಮುತ್ಸದ್ದಿಯಾದವನು, ರಾಷ್ಟ್ರನಾಯಕನಾದವನು ಈ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುತ್ತಾ, ಇತರ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಸೆಯುತ್ತಾ ತನ್ನ ದೇಶವನ್ನು ಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳುತ್ತಾನೆ.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಮೂರು ವರ್ಷಗಳಲ್ಲಿ ಟಿಬೆಟನ್ನು ತನ್ನ ವಶಪಡಿಸಿಕೊಳ್ಳಲು ಚೀನಾ ತನ್ನ ಸೇನೆಯನ್ನು ಸಜ್ಜುಗೊಳಿಸಿಕೊಂಡಿತು. ಆಗೆಲ್ಲ ಟಿಬೆಟ್ ತನ್ನನ್ನು ಸ್ವತಂತ್ರ ದೇಶವೆಂದು ಘೋಷಿಸಿಕೊಂಡಿತ್ತು. ಅಂದು ಚೀನಾ ಸೇನೆಯ ಬಲಕ್ಕೆ ತತ್ತರಿಸಿದ ಟಿಬೆಟ್ ಭಾರತದ ಸಹಾಯವನ್ನು ಯಾಚಿಸಿತು. `ಮುಂದೊಂದು ದಿನ ಈ ಟಿಬೆಟ್ ಚೀನಾಕ್ಕೆ ಸೇರಿದರೆ ಚೀನಾದ ಕುತಂತ್ರಗಳು ಭಾರತಕ್ಕೆ ಮಾರಕವಾಗಬಹುದು’ ಎಂದು ರಾಜಕೀಯ ವಿಶ್ಲೇಷಕರು, ಪರಿಣತರು ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಸಲಹೆಗಳನ್ನು ಕೊಟ್ಟರಾದರೂ ನೆಹರೂ ಆ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಟಿಬೆಟ್ ಸ್ವತಂತ್ರವಾಗಿಯೇ ಇದ್ದಿದ್ದರೆ ಭಾರತ ಇಂದು ಎದುರಿಸುತ್ತಿರುವ ಸಮಸ್ಯೆಗಳು ಅಷ್ಟಾಗಿ ಇರುತ್ತಿರಲಿಲ್ಲ. ಆದರೆ ಅಂದು ಚೀನಾ ಅಟ್ಟಹಾಸ ಮೆರೆಯಿತು. ಟಿಬೆಟನ್ನು ವಶಪಡಿಸಿಕೊಂಡಿತು. ಮುಂದೆ ಭಾರತದ ಭೂಭಾಗವನ್ನೂ ಬಹಳಷ್ಟು ಆಪೋಶನ ತೆಗೆದುಕೊಂಡಿತಾದರೂ ಚೀನಾ ನಮ್ಮ ನೆರೆಯ ಒಂದು ಮಿತ್ರದೇಶವೆಂಬ ತುಷ್ಟೀಕರಣದ ಮಾತುಗಳು ಅವಿರತವಾಗಿ ಸಾಗಿಬಂದವು. ಬ್ರಿಟನ್ನಿನ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ತುಷ್ಟೀಕರಣದ ಬಗ್ಗೆ ಮಾತನಾಡುತ್ತಾ, “ಮೊಸಳೆಗೆ ಆಹಾರ ಕೊಡುವಾತನು ಮೊಸಳೆ ತನ್ನನ್ನು ತಿನ್ನುವುದು ಕೊನೆಯಲ್ಲಿ ಎಂಬ ಭ್ರಮೆಯಲ್ಲಿರುತ್ತಾನೆ” ಎಂದಿದ್ದಾರೆ. ಅದೇ ರೀತಿ ಅಂದು ಪ್ರಾರಂಭವಾದ ಚೀನಾ ತುಷ್ಟೀಕರಣ ಹಾಗೂ ಓಲೈಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು ಅರವತ್ತೊಂಬತ್ತು ವರ್ಷಗಳಾದರೂ ಇನ್ನೂ ನಡೆಯುತ್ತಲೇ ಇದೆ. ನಿಲ್ಲುವ ಸೂಚನೆಗಳು ಗೋಚರವಾಗುತ್ತಿಲ್ಲ. ಆ ತುಷ್ಟೀಕರಣದಿಂದ ಉಲ್ಬಣಗೊಂಡಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವುದೇ ಈ ದಿನಗಳಲ್ಲಿ ಕ್ಲಿಷ್ಟಕರವಾಗಿ ಪರಿಣಮಿಸಿದೆ.
ಟಿಬೆಟ್ ಪ್ರಸ್ಥಭೂಮಿ ಜಗತ್ತಿನಲ್ಲೇ ಅತಿದೊಡ್ಡ ಜಲಭಂಡಾರ. ಏಷಿಯಾ ಖಂಡದ ಹತ್ತು ಜೀವನದಿಗಳ ಜೊತೆಗೆ ಹಲವಾರು ಕಿರುನದಿಗಳ ಉಗಮವೂ ಇಲ್ಲಿಯೇ ಆಗುತ್ತದೆ. ಸಿಂಧು (ಇಂಡಸ್) ಪಶ್ಚಿಮಾಭಿಮುಖವಾಗಿ ಹರಿದರೆ; ಬ್ರಹ್ಮಪುತ್ರಾ, ಇರಾವದಿ, ಸಲ್ವೀನ್, ಮೆಕಾಂಗ್, ಕರ್ನಾಲಿ ಪೂರ್ವೋತ್ತರ ದಕ್ಷಿಣಾಭಿಮುಖವಾಗಿ ಹಾಗೂ ಎಲ್ಲೊ, ಯಾಂಗ್ತ್ಸೆ ನದಿಗಳು ಪೂರ್ವಾಭಿಮುಖವಾಗಿ ಹರಿದು ಸಾಗರ ಸೇರುತ್ತವೆ. ಹೀಗೆ ಸಾಗರ ಸೇರುವ ಮುನ್ನ ತಟಗಳಲ್ಲಿ ವಾಸಿಸುವ ಕೋಟ್ಯಂತರ ಜನರ ಜೀವನವನ್ನು ಹಸನಾಗಿಸುತ್ತವೆ. ಜಗತ್ತಿನ ಶೇ. ೨೯ರಷ್ಟು, ಅಂದರೆ ಸುಮಾರು ೨೦೦ ಕೋಟಿ ಜನರಿಗೆ, ರೈತರಿಗೆ ಈ ನದಿಗಳು ಆಸರೆಯಾಗಿವೆ. ಆಫಘನಿಸ್ತಾನದಿಂದ ಆರಂಭವಾಗಿ, ಗಂಗಾ-ಮೇಘನಾ-ಬ್ರಹ್ಮಪುತ್ರಾ ಜಲಾನಯನ ಪ್ರದೇಶಗಳನ್ನೊಳಗೊಂಡು ಆಗ್ನೇಯ ಏಷಿಯಾದ ಭಾಗಗಳಿಗೆ ಈ ನದಿಗಳು ಹರಿಯುತ್ತವೆ.
ಇಂದಿನ ಸಮಸ್ಯೆಗೆ ಮೂಲ ಏನು?
ಈಗ ಭಾರತವನ್ನು, ಅದರಲ್ಲೂ ದಕ್ಷಿಣದ ಭಾರತವನ್ನು ಮೊದಲು ಗಮನಿಸಿ ಇಂದಿನ ಸಮಸ್ಯೆಯ ಪೂರ್ಣರೂಪವನ್ನು ಅರ್ಥೈಸಿಕೊಳ್ಳೋಣ. ಕಾವೇರಿ ನದಿಯು ಮಡಿಕೇರಿಯಲ್ಲಿ ಹುಟ್ಟಿ ತಮಿಳುನಾಡಿಗೆ ಹರಿದು ಕಡೆಗೆ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಮಹಾರಾಷ್ಟ್ರದ ಕೃಷ್ಣ ಕರ್ನಾಟಕ, ತೆಲಂಗಾಣ, ಆಂಧ್ರ ರಾಜ್ಯಗಳಲ್ಲಿ ಹರಿಯುತ್ತದೆ. ಹೀಗೆ ಹರಿಯುವ ನದಿಗಳು ಮಳೆಯ ಕೊರತೆಯಿಂದಾಗಿ ಕಡಮೆ ಪ್ರಮಾಣದ ನೀರು ರಾಜ್ಯಗಳಿಗೆ ಸಿಗುತ್ತದಾದರೆ ರಾಜ್ಯಗಳ ನಡುವೆ ನೀರಿಗಾಗಿ ಜಗಳ ಪ್ರಾರಂಭವಾಗುತ್ತದೆ. ಅಥವಾ ಭೌಗೋಳಿಕವಾಗಿ ಮೇಲಿನ ರಾಜ್ಯಗಳು ತಮ್ಮ ಜಲಾಶಯಗಳಿಂದ ನೀರು ಹರಿಯಬಿಡದಿದ್ದರೆ, ಒಪ್ಪಂದಕ್ಕಿಂತ ಕಡಮೆ ಪ್ರಮಾಣವನ್ನು ಪಕ್ಕದ ರಾಜ್ಯಕ್ಕೆ ಹರಿಸಿದರೆ ಕೋರ್ಟಿನ ಮೊರೆಹೊಕ್ಕು ನ್ಯಾಯಕ್ಕಾಗಿ ರಾಜ್ಯಗಳು ಆಗ್ರಹಿಸುತ್ತವೆ. ಒಂದೇ ದೇಶವಾದರೂ ರಾಜ್ಯ-ರಾಜ್ಯಗಳ ನಡುವೆ ಈ ಸಮಸ್ಯೆ ಇದ್ದುದೇ. ಇಂತಹ ಸಮಸ್ಯೆಗಳಲ್ಲಿ ರಾಜಕೀಯವೂ ಕೆಲವೊಮ್ಮೆ ಪ್ರಮುಖ ಪಾತ್ರವಹಿಸುತ್ತದೆ. ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಯಾವ ಪಕ್ಷಕ್ಕೆ ಸೇರಿದವರು ಎಂಬಲ್ಲಿಂದ ಮೊದಲುಗೊಂಡು ಸಾಕಷ್ಟು ಲೆಕ್ಕಾಚಾರಗಳು ನಡೆಯುತ್ತವೆ. ಎರಡು ರಾಜ್ಯಗಳಲ್ಲಿ ಒಂದೇ ರಾಜಕೀಯ ಪಕ್ಷದ ಮುಖ್ಯಮಂತ್ರಿಗಳು ಇದ್ದರೂ ಅವುಗಳ ನಡುವಿನ ನದೀನೀರಿನ ವ್ಯಾಜ್ಯ ರೈತರ ಹಿತಾಸಕ್ತಿ, ಆಯಾ ರಾಜ್ಯಗಳ ಯೋಜನೆಗಳ ಮೇಲೆ ಅವಲಂಬಿತವಾಗುತ್ತದೆ. ಹೀಗಿದ್ದಾಗ ಎರಡು ದೇಶಗಳಲ್ಲಿ ಹರಿಯುವ ನದಿಗಳಿಂದಾಗಿ ನೀರುಹಂಚಿಕೆ ವಿಷಯ ಬಂದರೆ ಆಗ ಎಷ್ಟೆಲ್ಲಾ ಆರೋಪ ಪ್ರತ್ಯಾರೋಪಗಳು ಬರಬಹುದೆಂದು ಊಹಿಸುವುದೂ ಕಷ್ಟದ ಕೆಲಸ. ಜಾಗತಿಕಮಟ್ಟದಲ್ಲಿ ಏನೇನೆಲ್ಲ ಕಾನೂನುಗಳನ್ನು ಪಾಲಿಸಬೇಕಾದರೂ ಪರಸ್ಪರ ದೇಶಗಳ ನಡುವಿನ ಬಾಂಧವ್ಯವನ್ನು ಕೆಡಿಸಿಕೊಳ್ಳದೆ ನಡೆಯಬೇಕಾಗುತ್ತದೆ; ಕಾರಣ ಇಂಥ ಜಗಳಗಳು ಒಂದು ಯುದ್ಧಕ್ಕೂ ನಾಂದಿಹಾಡಬಹುದು. ವಿಶ್ವದ ಎರಡು ಮಹಾಯುದ್ಧಗಳು ಆಗಲೇ ನಡೆದುಹೋಗಿವೆ. ಇನ್ನು ಮೂರನೆಯ ಮಹಾಯುದ್ಧವೇನಾದರೂ ನಡೆದರೆ ಅದು ನೀರಿನ ಕುರಿತಾಗಿಯೇ ಇರುತ್ತದೆ ಎಂದು ತಜ್ಞರು ಈಗಾಗಲೇ ಅಂದಾಜಿಸಿ ಅಭಿಪ್ರಾಯಪಟ್ಟಿದ್ದಿದೆ !
ಏಷಿಯಾದ ಜೀವನದಿಗಳು ಹರಿಯುವ ದೇಶಗಳನ್ನು ಗಮನಿಸೋಣ. ಟಿಬೆಟ್ ಭಾಗವಾದ ಚೀನಾದ ದಕ್ಷಿಣಕ್ಕೆ ಭಾರತ, ನೇಪಾಳ, ಭೂತಾನ್, ಬಂಗ್ಲಾದೇಶ, ವಿಯೆತ್ನಾಂ, ಲಾವೋಸ್, ಕಾಂಬೋಡಿಯ, ಬರ್ಮಾ, ಥಾಯ್ಲೇಂಡ್ ದೇಶಗಳು ಭೌಗೋಳಿಕವಾಗಿ ನೆಲಸಿವೆ. ಇನ್ನು ಪಶ್ಚಿಮಕ್ಕೆ ಆಫಘನಿಸ್ತಾನ, ಪಾಕಿಸ್ತಾನ, ಕಿರಗಿಸ್ತಾನಗಳು ಟಿಬೆಟ್ನಿಂದ ಹರಿದುಬರುವ ನದಿಯನ್ನೇ ತಮ್ಮ ಕೃಷಿಕಾರ್ಯಗಳಿಗೆ, ಜನಸಾಮಾನ್ಯರ ಜೀವನಕ್ಕೆ ಅವಲಂಬಿಸಿವೆ. ರಷ್ಯಾ ಕೂಡ ಉತ್ತರದಲ್ಲಿ ಚೀನಾದಿಂದ ಹರಿಯುವ ನೀರನ್ನು ಹಂಚಿಕೊಳ್ಳುತ್ತದೆ. ಇಂಥ ಸನ್ನಿವೇಶದಲ್ಲಿ ಚೀನಾದ ನಡವಳಿಕೆ ಹೇಗಿದೆಯೆಂದರೆ – ತಾನು ನಿರ್ವಹಿಸುವಂತೆ, ನಿರ್ಬಂಧಿಸುವಂತೆ ತನ್ನ ನೆಲದಲ್ಲಿ ಹುಟ್ಟಿ ಹರಿಯುವ ನದಿಗಳ ನೀರಿನ ಬಳಕೆಯಾಗಬೇಕು ಎಂದು. ಇದು ಕೋಟ್ಯಂತರ ಜನರ ಜೀವನವನ್ನು ಹಾಳುಮಾಡುವ ಸಂಕಲ್ಪ ತೆಗೆದುಕೊಂಡಂತಿದೆ. ಜಾಗತಿಕಮಟ್ಟದಲ್ಲಿ ತಾನೊಂದು ಬಲಶಾಲಿ ರಾಷ್ಟ್ರ ಎಂದು ತೋರಿಸಿಕೊಳ್ಳುವ ಹುನ್ನಾರದಲ್ಲಿ, ತನಗಿರುವ ಶಕ್ತಿಯನ್ನು ನದೀನೀರಿನ ನಿರ್ವಹಣೆಯಲ್ಲೂ ತೋರಲು ಹೊರಟಂತಿದೆ. ಇಲ್ಲಿ ನಾನು ಈ ಲೇಖನದ ವಿಷಯವನ್ನು ಬ್ರಹ್ಮಪುತ್ರಾ ನದಿಯ ಕುರಿತಾದ ಸಮಸ್ಯೆಗಷ್ಟು ಸೀಮಿತಗೊಳಿಸುತ್ತಿದ್ದೇನೆ.
ಬ್ರಹ್ಮಪುತ್ರಾ ನದಿಯು ವಿಶ್ವದ ಅತಿದೊಡ್ಡ ನದಿಗಳಲ್ಲಿ ಹತ್ತನೆಯ ಸ್ಥಾನ ಪಡೆಯುತ್ತದೆ. ಇದು ಟಿಬೆಟ್ನಲ್ಲಿ ಹುಟ್ಟಿ ಯಾರ್ಲುಂಗ್ ತ್ಸಾಂಗ್ಬೊನ ಎಂದು ಪ್ರಖ್ಯಾತವಾಗಿ ಹರಿದುಬಂದು, ಈಶಾನ್ಯಭಾರತದಲ್ಲಿ ದಕ್ಷಿಣ- ಪಶ್ಚಿಮಾಭಿಮುಖವಾಗಿ ಮುಂದುವರಿದು, ತೀಸ್ತಾ ಎಂಬ ಮತ್ತೊಂದು ನದಿಯನ್ನು ಸೇರಿಸಿಕೊಂಡು, ಮುಂದೆ ಬಂಗ್ಲಾದೇಶದಲ್ಲಿ ಗಂಗಾನದಿಯನ್ನು ಕೂಡಿಕೊಂಡು ಜಮುನೆಯಾಗಿ ಹರಿಯುತ್ತಾ, ಮೇಘನಾ ನದಿಯನ್ನೂ ಕೂಡಿಕೊಂಡು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ಬ್ರಹ್ಮಪುತ್ರಾ ನದಿಯು ಹಲವು ವಿಷಯಗಳಲ್ಲಿ ನಮಗೆ ಪ್ರಮುಖವಾಗುತ್ತದೆ. ಬ್ರಹ್ಮಪುತ್ರಾ ಯಾರ್ಲುಂಗ್ ತ್ಸಾಂಗ್ಬೊ ನದಿಯಾಗಿ ಟಿಬೆಟ್ನಲ್ಲಿ ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಸಾವಿರಾರು ಕಿ.ಮೀ. ಹರಿದು ಬಂದು ನಾಮ್ಸ್ ಬಾರ್ವ ಎಂಬಲ್ಲಿ ಮಹಾನ್ ತಿರುವು (ಉಡಿeಚಿಣ ಃeಟಿಜ) ಪಡೆದು ಅರುಣಾಚಲಪ್ರದೇಶದೊಳಗೆ ಆಗಮಿಸುತ್ತದೆ. ಮುಂದೆ ಇದೇ ನದಿ ಅಸ್ಸಾಮಿನಲ್ಲಿ ಹರಿಯುತ್ತದೆ. ಭಾರತದಲ್ಲಿ ಬ್ರಹ್ಮಪುತ್ರಾ ನದಿಯ (ಅರುಣಾಚಲದಲ್ಲಿ ಅದನ್ನು ಸಿಯಾಂಗ್ ಎಂದು ಕರೆಯುತ್ತಾರೆ) ಅಗಲ ಸುಮಾರು ೧೦ ಕಿ.ಮೀ. ಗಳಷ್ಟಿದೆ. ಅಸ್ಸಾಮಿನ ಗೌಹಾಟಿಯಲ್ಲಿ ನದಿಯ ಅಗಲ ೨೫ ಕಿ.ಮೀ.ಗಳಷ್ಟಿದೆ. ಪೂರ್ತಿಯಾಗಿ ಈಶಾನ್ಯ ಭಾರತವು ಕೃಷಿಗೆ ಅವಲಂಬಿಸಿರುವುದು ಈ ನದಿಯನ್ನೇ. ಬಂಗ್ಲಾದೇಶಕ್ಕೂ ಜೀವನದಿಯಾಗಿರುವ ಬ್ರಹ್ಮಪುತ್ರಾ ಕೊನೆಗೆ ಸಾಗರಕ್ಕೆ ಸೇರುವ ಹೊತ್ತಿಗೆ ಅದು ಸಾಗರಕ್ಕೆ ತಂದು ಸೇರಿಸುವ ನೀರಿನ ಪ್ರಮಾಣ ಅಚ್ಚರಿಗೊಳಿಸುವಂತಹದ್ದು – ಅಂದರೆ ಸುಮಾರು ೨೨,೦೦೦ ಟಿಎಂಸಿಯಷ್ಟು!
ಇಂತಹ ದೊಡ್ಡ ನದಿಯೊಂದರ ನೀರಿನ ಹರಿವನ್ನು, ಆಯಕಟ್ಟಿನ ಜಾಗಗಳಲ್ಲಿ ಅಣೆಕಟ್ಟೆಗಳನ್ನು ಕಟ್ಟುವ ಮೂಲಕ, ಚೀನಾ ತನ್ನಿಚ್ಛೆಯಂತೆ ನಿಯಂತ್ರಿಸುತ್ತ ಕುಟಿಲತಂತ್ರಗಳಿಂದ ಭಾರತದ ಭದ್ರತೆಗೆ ಒಂದು ಅಪಾಯಕರ ಸವಾಲಾಗಿ ಪರಿಣಮಿಸಿದೆ.
ಚೀನಾದ ಯೋಜನೆಗಳೇನು?
ಚೀನಾ ಎರಡು ರೀತಿಯಲ್ಲಿ ಬ್ರಹ್ಮಪುತ್ರಾ ನೀರಿನಲ್ಲಿ ಚೆಲ್ಲಾಟವಾಡುತ್ತಿದೆ. ಮೊದಲನೆಯದು ನದಿಯ ನೀರನ್ನು ಹಿಡಿದಿಟ್ಟುಕೊಳ್ಳುವುದು; ಮತ್ತೊಂದು ನದೀನೀರಿನ ದಿಕ್ಕನ್ನೇ ಬದಲಿಸಿ ಮತ್ತೊಂದು ಕಡೆಗೆ ಹರಿಸುವುದು. ನೀರನ್ನು ಹಿಡಿದಿಟ್ಟುಕೊಳ್ಳುವುದರಲ್ಲೂ ಎರಡು ವಿಧಗಳಿವೆ: ಒಂದು ಕೃತಕ ಸರೋವರಗಳನ್ನು ಕಟ್ಟಿ ನೀರನ್ನು ಶೇಖರಿಸಿಡುವುದು; ಎರಡನೆಯದು ಅಣೆಕಟ್ಟು ಕಟ್ಟಿ ನೀರಿನ ಹರಿವನ್ನು ಕಡಮೆಗೊಳಿಸುವುದು. ಕೃತಕ ಸರೋವರಗಳನ್ನು ಕಟ್ಟಿ ನೀರು ಶೇಖರಿಸುವುದು ಕೊಂಚಮಟ್ಟಿಗೆ ಸುಲಭದ ಕೆಲಸ. ಸತ್ಲೆಜ್ ಹಾಗೂ ಯಾರ್ಲುಂಗ್ ತ್ಸಾಂಗ್ಬೊ ನದಿಗಳ ಹರಿವನ್ನು ನಿಯಂತ್ರಣ ಮಾಡಿ ಕೃತಕ ಸರೋವರಗಳನ್ನು ನಿರ್ಮಿಸಿದ್ದ ಚೀನಾ ಈ ಸರೋವರಗಳನ್ನು ಸನ್ ೨೦೦೦ದಲ್ಲಿ ಒಡೆದುಹಾಕಿದ ದುಷ್ಕೃತ್ಯ ಅಂದು ಯಾರ ಅರಿವಿಗೂ ಬರಲೇ ಇಲ್ಲ. ಭಾರತದ ಹಿಮಾಚಲಪ್ರದೇಶ, ಅರುಣಾಚಲಪ್ರದೇಶಗಳಲ್ಲಿ ಈ ನದಿಗಳು ಅನುಕ್ರಮವಾಗಿ ಹರಿಯುತ್ತವೆ. ನದಿಗಳಲ್ಲಿ ಅಂದು ಒಮ್ಮೆಲೆ ಕಂಡುಬಂದ ಜಲಸ್ಫೋಟದಂಥ ನೀರಿನ ಪ್ರವಾಹ ಭಾರತದಲ್ಲಿ ತಲ್ಲಣವನ್ನೆ ಉಂಟುಮಾಡಿತ್ತು. ಜನಜೀವನ ಸ್ಥಗಿತಗೊಂಡಿತ್ತು. ನೂರಾರು ಮಂದಿ ಜಲಸಮಾಧಿಯಾಗಿದ್ದರು. ಈ ಅನಿರೀಕ್ಷಿತ ಪ್ರವಾಹಗಳಿಂದಾಗಿ ಭಾರತ ಅನುಭವಿಸಿದ ನ? ಸುಮಾರು ೩೦೦ ಕೋಟಿ ರೂ.ಗಳಷ್ಟು. ಬೇಸಿಗೆಯ ದಿನಗಳಲ್ಲಿ ಇಂತಹ ದೊಡ್ಡ ಪ್ರಮಾಣದ ಪ್ರವಾಹ ಬಂದು ಜನಜೀವನ ಅಸ್ತವ್ಯಸ್ತಗೊಳ್ಳಲು ಕಾರಣವೇನೆಂಬುದನ್ನು ಕಂಡುಹಿಡಿಯುವ ಜವಾಬ್ದಾರಿಯನ್ನು ಆಗ ಇಸ್ರೋ ಸಂಸ್ಥೆಗೆ ವಹಿಸಲಾಯ್ತು. ಇಸ್ರೋ ತನ್ನ ಉಪಗ್ರಹಗಳ ಮೂಲಕ ಚೀನಾ ಈ ಎರಡು ನದೀಗುಂಟ ವಿವಿಧ ಕಡೆಗಳಲ್ಲಿ ನಿರ್ಮಿಸಿದ್ದ ಕೃತಕ ಸರೋವರಗಳ ಚಿತ್ರಗಳನ್ನು ಸೆರೆಹಿಡಿದು ವರದಿಮಾಡಿತು. ಹೀಗೆ ತಾನೇ ನಿರ್ಮಿಸಿದ್ದ ಕೃತಕ ಸರೋವರಗಳನ್ನು ಡೈನಮೈಟ್ ಇಟ್ಟು ಉಡಾಯಿಸಿ ತನ್ಮೂಲಕ ಭಾರತಕ್ಕೆ ನ?ವನ್ನು ಉಂಟುಮಾಡುವ, ಇಂತಹ ಒಂದು ಕೃತ್ಯಕ್ಕೆ ಭಾರತ ಹೇಗೆ ಪ್ರತಿಕ್ರಿಯಿಸಬಹುದೆಂಬುದಕ್ಕೆ ಉತ್ತರ ಕಂಡುಕೊಳ್ಳುವ ಅನಾಗರಿಕ ದುರಾಲೋಚನೆ ಚೀನಾದ್ದಾಗಿತ್ತು ಎಂಬುದು ಅದರಿಂದ ಬಯಲಾಯ್ತು.
ಇನ್ನು ಅಣೆಕಟ್ಟು ವಿಚಾರಕ್ಕೆ ಬರುವುದಾದರೆ, ಚೀನಾ ತನ್ನ ದೇಶದಿಂದ ಹೊರಹೋಗುವ ಎಲ್ಲಾ ನದಿಗಳನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ದೊಣೆನಾಯಕನ ಹಾಗೆ ವರ್ತಿಸುತ್ತಿದೆ. ಚೀನಾದಿಂದ ರಷ್ಯಾ ದೇಶಕ್ಕೆ ಹರಿವ ನದಿಗೆ ಅಣೆಕಟ್ಟು ಕಟ್ಟುವ ಯೋಜನೆ ನಡೆಸಿದೆ. ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್, ಥಾಯ್ಲೇಂಡ್, ವಿಯತ್ನಾಂ ದೇಶಗಳಿಗೆ ಹರಿಯುವ ಮೆಕಾಂಗ್ ನದಿಗೆ ಹಲವು ಅಣೆಕಟ್ಟುಗಳನ್ನು ಕಟ್ಟಲಾಗುತ್ತಿವೆ. ಇತ್ತೀಚೆಗೆ ಈಶಾನ್ಯ ಏಷ್ಟು ದೇಶಗಳಲ್ಲಿ ಬರದ ಪರಿಸ್ಥಿತಿ ಎದುರಾದದ್ದು ಚೀನಾದ ಇದೇ ದುರಾಲೋಚನೆಯಿಂದಾಗಿ. ಕಡೆಗೆ ತನ್ನ ಧಾರಾಳತನವನ್ನು ಜಗತ್ತಿಗೆ ತೋರಿಸಿಕೊಳ್ಳುವ ಹಾಗೆ ಮೆಕಾಂಗ್ ನದಿಯ ನೀರನ್ನು ಸ್ವಲ್ಪ ಹೆಚ್ಚಿಗೆ ಬಿಟ್ಟಿತಾದರೂ ಇನ್ನೂ ೧೪ ಅಣೆಕಟ್ಟುಗಳು ಆ ನದಿಗೆ ಅಡ್ಡಲಾಗಿ ಕಟ್ಟುವ ಹೊತ್ತಿಗೆ ಈ ದೇಶಗಳು ನೀರಿಗಾಗಿ ಇತರ ಮಾರ್ಗಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಅರುಣ, ಇರ್ಟಿಶ್, ಸತ್ಲೆಜ್, ಇಲ್ಲಿ, ಅಮುರ್, ಸಲ್ವೀನ್ ನದಿಗಳಿಗೂ ಹೀಗೆಯೇ ಅಣೆಕಟ್ಟು ಕಟ್ಟುವ ಯೋಜನೆಗಳಿವೆ ಎಂಬುದು ತಜ್ಞರ ಅಭಿಪ್ರಾಯ. ಇದರಿಂದಾಗಿ ನೇಪಾಳ, ಕಜಕಿಸ್ತಾನ್, ರಷ್ಯಾ, ಮ್ಯಾನ್ಮಾರ್ ದೇಶಗಳು ಸಂಕಷ್ಟ ಅನುಭವಿಸಲಿವೆ.
ಬ್ರಹ್ಮಪುತ್ರಾ ಎಂಬ ನದಿಯು ಅದೆ? ದೊಡ್ಡದು ಎಂಬುದನ್ನು ಈ ಹಿಂದೆ ಅರಿತುಕೊಂಡೆವು. ಆ ನದಿಗೆ ಅಡ್ಡಲಾಗಿ ಜಲಾಶಯಗಳನ್ನು ಕಟ್ಟುವ ಯೋಜನೆ ಚೀನಾ ದೇಶದ್ದು. ಹಾಗೆಂದು ಭಾರತವೂ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣಮಾಡುವುದನ್ನು ಯೋಚಿಸುತ್ತಿದ್ದಿತಾದರೂ ನದಿಯು ಬಂಗ್ಲಾದೇಶಕ್ಕೆ ಹರಿದುಹೋಗುವುದರಿಂದ ಜಲಾಶಯವನ್ನು ನಿರ್ಮಿಸಿದರೆ ಅಲ್ಲಿಗೆ ಹರಿದು ಹೋಗುವ ನೀರಿನ ಪ್ರಮಾಣ ಕಡಮೆಯಾಗಬಹುದು ಎಂಬ ಕಾಳಜಿಯಿಂದ ತನ್ನ ಯೋಜನೆಗಳನ್ನು ಭಾರತ ಸ್ಥಗಿತಗೊಳಿಸಿದೆ. ಆದರೆ ಚೀನಾ ಮಾತ್ರ ಈಗ ಮಾಡುತ್ತಿರುವುದು ಈ ನದೀನೀರಿನ ನಿಯಂತ್ರಣವೇ ಎಂಬುದು ನಿಸ್ಸಂಶಯ. ಚೀನಾದ ಈ ಯೋಜನೆಯಿಂದಾಗಿ ಎರಡು ದೇಶಗಳಲ್ಲಿ ಜನಜೀವನ ಹದಗೆಡುವ ಸಾಧ್ಯತೆಗಳು ಇವೆ. ಜೊತೆಗೆ ಚೀನಾ ಯೋಜಿಸಿರುವುದು ಒಂದೋ ಎರಡೋ ಜಲಾಶಯಗಳಲ್ಲ; ಬರೋಬ್ಬರಿ ೨೮ ಜಲಾಶಯಗಳನ್ನು. ಟಿಬೆಟ್ ಭಾಗದ ಚೀನಾಕ್ಕೆ ಇರುವ ವಿದ್ಯುತ್ತಿನ ಸಮಸ್ಯೆಯನ್ನು ಹೋಗಲಾಡಿಸಲು ಈ ಜಲಾಶಯಗಳ ನಿರ್ಮಾಣ ಅನಿವಾರ್ಯ ಎಂಬುದು ಚೀನಾದ ವಾದ. ೧೯೭೨ರಿಂದಲೂ ಈ ಬಗ್ಗೆ ಚರ್ಚೆ ನಡೆಸುತ್ತಾ ಬಂದಿರುವ ಚೀನೀ ವೈಜ್ಞಾನಿಕ ಸಂಸ್ಥೆಗಳು ತಮ್ಮ ದೇಶದಲ್ಲಿ ಹರಿಯುವ ಯಾರ್ಲಾಂಗ್ ತ್ಸಾಂಗ್ಬೊ ನದಿಯ ಅಡ್ಡಲಾಗಿ ಜಲಾಶಯಗಳನ್ನು ನಿರ್ಮಿಸುತ್ತಾ ಹೋದರೆ ೧೧೪ ಗಿಗಾವಾಟ್ ವಿದ್ಯುತ್ತನ್ನು ಉತ್ಪತ್ತಿಮಾಡಬಹುದು ಎಂದು ಶಿಫಾರಸು ಮಾಡಿತ್ತು. ಹಲವಾರು ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಯೋಜನೆಗಳು ಇದ್ದಕ್ಕಿದ್ದ ಹಾಗೆ ಈಗ ವೇಗ ಪಡೆಯತೊಡಗಿದೆ. ಕಳೆದ ವರ್ಷ ಅಕ್ಟೋಬರ್ ೨೦೧೫ರಲ್ಲಿ ಜಾಂಗ್ಮು ಎಂಬಲ್ಲಿ ೫೧೦ ಮೆಗಾವಾಟ್ ವಿದ್ಯುತ್ ಉತ್ಪನ್ನ ಮಾಡುವ ಘಟಕ ಕಾರ್ಯನಿರ್ವಹಿಸಲು ಆರಂಭಿಸಿದೆ. ಉಳಿದ ಜಲಾಶಯಗಳಿಗೆ ದೊರಕಬೇಕಿರುವ ಸರ್ಕಾರೀ ಅನುಮೋದನೆಗಳು ಸಿಗಲಾರಂಭವಾಗಿದೆ. ದಾಗು ಎಂಬಲ್ಲಿ ೬೪೦ ಮೆಗಾವಾಟ್, ಜ಼ಕ್ಷು ಎಂಬಲ್ಲಿ ೫೬೦ ಮೆಗಾವಾಟ್, ಜಯಾಚಾ ಎಂಬಲ್ಲಿ ೩೨೦ ಮೆಗಾವಾಟ್ ವಿದ್ಯುತ್ ಉತ್ಪನ್ನಮಾಡುವ ಯೋಜನೆಗಳು ಮುಂದೆ ಆರಂಭವಾಗಲಿವೆ. ಅಂದರೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಜ಼ಾಂಗ್ಮು ವಿದ್ಯುತ್ ಘಟಕಕ್ಕಿಂತಲೂ ತುಸು ಹೆಚ್ಚಿನ ಸಾಮರ್ಥ್ಯದ ಸ್ಥಾವರಗಳು ಅಣಿಗೊಳ್ಳುತ್ತಿವೆ ಎಂದರ್ಥ.
೧೯೪೯ರಿಂದೀಚೆಗೆ, ಕಮ್ಯುನಿಸ್ಟರು ಚೀನಾದ ಆಡಳಿತ ಚುಕ್ಕಾಣಿ ಹಿಡಿದ ನಂತರ, ತನ್ನ ದೇಶದಿಂದ ಹೊರಹರಿವ ನದಿಗಳ ನೀರಿನ ಮೇಲಿನ ನಿಯಂತ್ರಣ ಹೆಚ್ಚು ಬಿಗಿಯಾಗಿದೆ. ಈ ಬಿಗಿಪಟ್ಟು ಭೌಗೋಳಿಕ ನ್ಯಾಯಗಳನ್ನು ಮೀರಿ ತನ್ನ ಬಂದೂಕಿನ ಮೊನೆಯಿಂದಲೇ ಗೆಲ್ಲಲು ಹೊರಟಂತಿದೆ. ಕಮ್ಯುನಿಸ್ಟರ ಆಡಳಿತದ ಆರಂಭದ ಮುನ್ನ ೨೨ ಅಣೆಕಟ್ಟುಗಳಿದ್ದ ಚೀನಾದಲ್ಲಿ ಇಂದು ಸಣ್ಣ, ದೊಡ್ಡ, ಅತಿದೊಡ್ಡ ಎಂದು ಅಣೆಕಟ್ಟುಗಳನ್ನು ಲೆಕ್ಕಹಾಕಹೊರಟರೆ ಅದು ೮೫,೦೦೦ಕ್ಕೂ ಮಿಕ್ಕಿದೆ ಎಂದರೆ ಆಶ್ಚರ್ಯಪಡಬೇಕಿಲ್ಲ. ವಿಶ್ವದ ಎಲ್ಲಾ ದೇಶಗಳಲ್ಲಿರುವ ಅಣೆಕಟ್ಟುಗಳನ್ನು ಕೂಡಿದರೂ ತನ್ನಲ್ಲಿರುವ ಅಣೆಕಟ್ಟುಗಳ ಸಂಖ್ಯೆಯೇ ಹೆಚ್ಚು – ಎಂದು ಜಂಭದಿಂದ ಚೀನಾ ಬೀಗುತ್ತದೆ. `ಚೇರ್ಮನ್ ಮಾವೊ’ ಎಂದೇ ಪ್ರಸಿದ್ಧನಾಗಿದ್ದ ಮಾವೊ-ತ್ಸೆ-ತುಂಗ್ನ ಮಹತ್ತ್ವಾಕಾಂಕ್ಷೆಯ ಗುರಿ ಇದ್ದದ್ದು ಅಣೆಕಟ್ಟು ನಿರ್ಮಾಣದ ಬಗ್ಗೆಯೇ. ಆ ಗುರಿಯನ್ನಿಟ್ಟುಕೊಂಡೇ ಚೀನಾ ಇಂದಿಗೂ ಅಣೆಕಟ್ಟಿನ ಗೀಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು.
ಇನ್ನು ಚೀನಾದ ಹಲವು ನದಿಗಳಲ್ಲಿ ನೀರು ಪೋಲಾಗುತ್ತಿದೆ, ಕೆಲ ನದಿಗಳು ಬತ್ತಿಹೋಗಿವೆ. ಕೆಲವು ಕಡೆ ಅಣೆಕಟ್ಟುಗಳಲ್ಲಿ ನೀರು ಇಲ್ಲವೇ ಇಲ್ಲ. ಇಂತಹ ಸ್ಥಳಗಳನ್ನು ಗುರುತಿಸಿ ಟಿಬೆಟ್ಟಿನ ನದಿಗಳ ನೀರನ್ನು ತಿರುಗಿಸಿ ತಮ್ಮ ನದಿಗಳನ್ನು ಪುನರುಜ್ಜೀವಗೊಳಿಸುವ ಕೆಲಸವೂ ಅವಿರತವಾಗಿ ಸಾಗಿದೆ. ಟಿಬೆಟ್ಟಿನ ನೀರನ್ನು ತಿರುಗಿಸುವುದು ಎಂದರೆ ಭೌಗೋಳಿಕವಾಗಿ ಕೆಳಗಿರುವ ದೇಶಗಳ ನೆಮ್ಮದಿಗೆ ಸಂಚಕಾರ ತರುವುದು ಎಂದೇ ಅರ್ಥ. ಬ್ರಹ್ಮಪುತ್ರಾ ನದೀನೀರಿಗೆ ಇರುವ ಬಹುದೊಡ್ಡ ಕಂಟಕವೇ ಈ ನದೀನೀರು ತಿರುಗಿಸುವಿಕೆ. ಚೀನಾದ ನು ನದಿ(ಸಲ್ವೀನ್ ನದಿ) ಯು ಉತ್ತರದಲ್ಲಿ ಹರಿಯುತ್ತದೆ. ಆ ನದಿಗೆ ಯಾರ್ಲುಂಗ್ ತ್ಸಾಂಗ್ಬೊ ನದಿಯನ್ನು ಜೋಡಿಸಬೇಕೆಂಬ ದುರಾಲೋಚನೆ ಚೀನಾದ ರಾಜಕೀಯ ಶಕ್ತಿಗಳಿಗಿದೆ.
ಇವಲ್ಲದೆ, ಬ್ರಹ್ಮಪುತ್ರಾ ನದೀಹರಿವಿನ ’ಗ್ರೇಟ್ ಬೆಂಡ್’ ಎಂಬಲ್ಲಿ ನಾಲ್ಕು ಸುರಂಗಗಳನ್ನು ನಿರ್ಮಿಸುವ ಕಾರ್ಯವೂ ಸಾಗಿದೆ. ೪೦೦೦ ಮೆಗಾವಾಟ್ನಷ್ಟು ವಿದ್ಯುತ್ತನ್ನು, ಅಂದರೆ – ಕರ್ನಾಟಕ ರಾಜ್ಯದ ಇಂದಿನ ವಿದ್ಯುತ್ ಬೇಡಿಕೆಯಷ್ಟು- ಇಲ್ಲಿ ಉತ್ಪಾದಿಸುವ ಯೋಜನೆ ನಡೆಯುತ್ತಿದೆ. ಅದಕ್ಕಾಗಿ ಒಂದು ಸುರಂಗದ ಕೆಲಸವೂ ಮುಗಿದಿದೆ.
ಚೀನಾದ ನೈತಿಕ ನೆಲೆ
ನದೀನೀರಿನ ವಿಷಯವಾಗಿ ಮಾಡುತ್ತಿರುವ ತಾರತಮ್ಯಕ್ಕೆ ಚೀನಾದ ಉತ್ತರವೇನಿರಬಹುದು? ಖಂಡಿತವಾಗಿಯೂ ನಾವು ನಮ್ಮ ನೆರೆಯ ರಾಷ್ಟ್ರಕ್ಕೆ ತೊಂದರೆ ಕೊಡುವ ಉದ್ದೇಶದಿಂದ ಯಾವ ಯೋಜನೆಯನ್ನೂ ಹಾಕಿಕೊಂಡಿಲ್ಲ” ಎಂಬುದು ಅದರ ಉತ್ತರ. ಹೌದು; ಇಷ್ಟೆಲ್ಲಾ ಆಗಿಯೂ ಈ ಭಂಡತನದ ಉತ್ತರವನ್ನೇ ಚೀನಾ ನೀಡುತ್ತಿರುವುದು. ತಮ್ಮ ದೇಶಕ್ಕೆ ಉಪಕಾರಿಯಾಗುವಂತೆ ಮಾಡಲಾಗುವ ಯೋಜನೆಗಳ ಹೆಸರಿನಲ್ಲಿ ಚೀನಾ ಏಷಿಯಾದಲ್ಲಿ `ಹಿರಿಯಣ್ಣ’ನಾಗಬೇಕೆಂಬುದೇ ಗುರಿ. ಇಷ್ಟೆಲ್ಲಾ ಜಲಾಶಯಗಳನ್ನು ಕಟ್ಟಿಕೊಂಡು ಅದರಿಂದ ಆ ದೇಶ ಉತ್ತಮ ಸ್ಥಿತಿಗೆ ಬರುತ್ತದೆಂಬುದು ಹೌದಾದರೂ ಕ್ರಮೇಣ ಹಲವು ಚೀನಾದಿಂದ ಹರಿದು ಬರುವ ನೀರನ್ನು ಅವಲಂಬಿಸಿದ ದೇಶಗಳು ಅದು ಹೇಳಿದ ಹಾಗೆ ಕೇಳಿಕೊಂಡು ಕೂರಬೇಕು ಎಂಬುದೇ ಚೀನಾದ ಹೆಬ್ಬಯಕೆ. ಪ್ರಾಕೃತಿಕವಾಗಿ ಹರಿಯುವ ನೀರನ್ನು ಚೀನಾ ನಿರ್ವಹಿಸುವುದನ್ನು ಯಾರೂ ಒಪ್ಪಲಾರರು. ನೈಸರ್ಗಿಕ ವಿಕೋಪಗಳಂಥ ಸಂದರ್ಭಗಳನ್ನು ಅನೈಸರ್ಗಿಕವಾಗಿ ಸೃಷ್ಟಿಸುವ ಯೋಜನೆಗಳು ಎಂದಿಗೂ ಮಾರಕ ಎಂಬುದನ್ನು ಚೀನಾ ಕಾಗದದ ಮೇಲೆ ಒಪ್ಪುತ್ತದೆಯಾದರೂ `ಹಿರಿಯಣ್ಣ’ನ ಸ್ಥಾನ ಕಳೆದುಕೊಳ್ಳಲು ಸಿದ್ಧವಿಲ್ಲವಾದ್ದರಿಂದ ಅಂತಹ ಯೋಜನೆಗಳನ್ನು ಅಷ್ಟು ಸುಲಭವಾಗಿ ಅದು ಕೈಬಿಡಲು ಮನಸ್ಸು ಮಾಡುವುದಿಲ್ಲ. ಟಿಬೆಟ್ ಜನಗಳಿಗೋಸ್ಕರವಾಗಿ ಜಲವಿದ್ಯುತ್ ಘಟಕಗಳನ್ನು ತಯಾರಿಸುವ ಈ ಯೋಜನೆಗಳಿಂದ ಟಿಬೆಟಿಗೆ ಸಹಾಯವಾಗುತ್ತದೆ ಎಂಬುದನ್ನು ಒಪ್ಪಬಹುದಾದರೂ ಟಿಬೆಟಿಗೆ ಆ ಮಟ್ಟದ ವಿದ್ಯುತ್ತಿನ ಬೇಡಿಕೆ ಇಲ್ಲ. ಚೀನಾ ಹಿಂದೊಮ್ಮೆ ಸರೋವರಗಳನ್ನು ನಿರ್ಮಿಸಿ ಭಾರತದ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡದ್ದಕ್ಕೆ ಇನ್ನೂ ಯಾವುದೇ ಉತ್ತರವನ್ನು ಕೊಟ್ಟಿಲ್ಲ. ಅಲ್ಲದೆ ೨೦೦೮, ೨೦೧೦, ೨೦೧೩ರಲ್ಲಿ ಭಾರತ ಚೀನಾದೊಂದಿಗೆ ಮೂರು ಒಪ್ಪಂದಗಳಿಗೆ ಸಹಿ ಹಾಕಿವೆ. ಅದರನ್ವಯ ಚೀನಾ ತನ್ನ ದೇಶದಲ್ಲಿ ಆಗುವ ಮಳೆಯ ಪ್ರಮಾಣದ ಬಗ್ಗೆ, ನದೀನೀರಿನ ಮಟ್ಟದ ಬಗ್ಗೆ ವಿವರಗಳನ್ನು ಭಾರತದೊಂದಿಗೆ ಹಂಚಿಕೊಳ್ಳಬೇಕು ಎಂಬುದಾಗಿದೆ. ಆದರೆ ಈ ಅಂಕಿ-ಅಂಶಗಳು ಮಾತ್ರ ಭಾರತಕ್ಕೆ ಸಿಗುತ್ತಿಲ್ಲ. ತಾನು ನಿರ್ಮಿಸುತ್ತಿರುವ ಜಲವಿದ್ಯುತ್ ಅಣೆಕಟ್ಟುಗಳು ’ಡಿuಟಿ oಜಿ ಣhe ತಿಚಿಣeಡಿ’ (ನೀರಿನ ಸಹಜಹರಿವು) – ಅಂದರೆ ನದೀನೀರಿನ ಹರಿವನ್ನು ವಿದ್ಯುತ್ ಉತ್ಪಾದನೆಗೆ ಬಳಸಿ, ನೀರನ್ನು ಮುಂದಕ್ಕೆ ಹರಿಯಬಿಡುವ ಮಾದರಿಯನ್ನು ಅವಲಂಬಿಸಿದೆ ಎಂದು ಹಲವು ಬಾರಿ ಸಾರಿಕೊಂಡಿದೆ. ಅಂದಿನ ಭಾರತದ ವಿದೇಶಾಂಗ ಸಚಿವರು ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಇದನ್ನೇ ಉತ್ತರಿಸಿದರು. `ನೀರಿನ ಸಹಜಹರಿವು ಮಾದರಿಯ ಅಣೆಕಟ್ಟಿನಲ್ಲಿ ನೀರು ಹಿಡಿಯುವ ಪ್ರಮಾಣ ತೀರಾ ಕಡಮೆ. ಆದ್ದರಿಂದ ಏನೂ ತೊಂದರೆ ಇಲ್ಲ’ ಎಂಬಂತೆ ಚೀನಾ ಮಾತನಾಡುತ್ತದಾದರೂ, ಬ್ರಹ್ಮಪುತ್ರಾನದಿಯನ್ನು ನೂ ನದಿಯ ಜೊತೆ ಜೋಡಿಸಲು ಆಯೋಜಿಸಿರುವ ಬಗ್ಗೆ ಏನೂ ಮಾತನಾಡುವುದಿಲ್ಲ.
ಅದಿರಲಿ, ಚೀನಾದಲ್ಲಿ ಹುಟ್ಟುವ ನದಿಗಳು ಅದರ ನೆರೆಯ ಅ?ಲ್ಲಾ ದೇಶಗಳ ಮೂಲಕ ಹರಿಯುತ್ತಿವೆಯಾದರೂ ಚೀನಾ ಒಂದೇ ಒಂದು ಒಪ್ಪಂದವನ್ನೂ ನದೀನೀರಿನ ಹಂಚಿಕೆಯ ವಿಷಯವಾಗಿ ಈ ದೇಶಗಳೊಡನೆ ಒಪ್ಪಂದ ಮಾಡಿಕೊಂಡಿದ್ದಿಲ್ಲ. ಈ ಕಾರಣದಿಂದಲೇ ಚೀನಾ ದೊಡ್ಡಣ್ಣನಂತೆ ಗಟ್ಟಿಯಾಗಿ ಬೆಳೆಯಲು ಸಾಧ್ಯವಾಗಿರುವುದು. ಮೀಕಾಂಗ್ ನದಿಯ ಬಗ್ಗೆ ಒಪ್ಪಂದವೊಂದು ಇದೆಯಾದರೂ ಚೀನಾ ಅದನ್ನು ಪಾಲಿಸುತ್ತಿಲ್ಲ. ತನ್ನದೇ ಮತ್ತೊಂದು ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ. ಇವಲ್ಲದೆ, ಮತ್ತೊಂದು ನಡುಕ ಹುಟ್ಟಿಸುವ ಸಂಗತಿಯೆಂದರೆ ೧೯೧೨ರ ಒಪ್ಪಂದದ ಪ್ರಕಾರ ಅರುಣಾಚಲಪ್ರದೇಶ ಭಾರತಕ್ಕೆ ಸೇರಿದೆಯಾದರೂ ಅರುಣಾಚಲಪ್ರದೇಶವನ್ನು ಚೀನಾ ದಕ್ಷಿಣ ಟಿಬೆಟ್ ಎಂದು ಪರಿಗಣಿಸಿರುವುದು ಹಾಗೂ ತನ್ನ ಹಿಡಿತ ಅರುಣಾಚಲದ ಮೇಲಿದೆ ಎಂದು ಆಗಾಗ್ಗೆ ಹೇಳಿ ಕಾಲುಕೆದರುತ್ತಿರುವುದು ಸಾಮಾನ್ಯವಾಗಿದೆ.
ಭಾರತ ಮುಂದೆ ಅನುಭವಿಸಬೇಕಾಗಬಹುದಾದ ಸಂಕ?ಗಳು
ಮಹಾನ್ ತಿರುವಿ(ಉಡಿeಚಿಣ ಃeಟಿಜ)ನಲ್ಲಿ ಚೀನಾ ನಿರ್ಮಿಸುತ್ತಿರುವ ಅಣೆಕಟ್ಟಿನ ಎತ್ತರ ಎಷ್ಟಿದೆ ಎಂದು ತಿಳಿದುಕೊಳ್ಳಲು ಭಾರತಕ್ಕೆ ಸಾಕ? ಸಮಯವೇ ಬೇಕಾಯಿತು. ಆ ವಿ?ಯವನ್ನು ನೇರವಾಗಿ ಪ್ರಸ್ತಾಪಿಸಿ ಉತ್ತರ ಪಡೆಯುವ ಪ್ರಮೇಯ ಬರಲೇ ಇಲ್ಲ. ಜ಼ಾಂಗ್ಮುನಲ್ಲಿ ನಿರ್ಮಿಸಲಾದ ಜಲಾಶಯದ ಎತ್ತರ ಸುಮಾರು ೩೯೦ ಅಡಿ ಎಂದು ತಿಳಿದುಬಂದದ್ದು ಇತ್ತೀಚೆಗೆ. ಮೊನ್ನೆಮೊನ್ನೆಯವರೆಗೂ ಅಣೆಕಟ್ಟು ಕಟ್ಟುವುದಿಲ್ಲ ಎಂದ ಚೀನಾ ಇಂದು ಅಣೆಕಟ್ಟು ಕಟ್ಟುತ್ತಿರುವುದಲ್ಲದೆ, ಹೊಸಹೊಸ ಯೋಜನೆಗಳನ್ನೂ ಕೈಗೆತ್ತಿಕೊಂಡಿದೆ.
ನೀರಿನ ಸಹಜಹರಿವು ಮಾದರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಣೆಕಟ್ಟುಗಳಿಂದ ನೇರವಾದ ಅಪಾಯಗಳು ಕಾಣದಿದ್ದರೂ, ಅದೊಂದು ಎಲ್ಲರಿಗೂ ಸಹಾಯವಾಗುವ ಉಪಯುಕ್ತ ಯೋಜನೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ನೀರಿನ ಸಹಜ ಹರಿವು ಮಾದರಿಯ ಅಣೆಕಟ್ಟು ಯೋಜನೆಗಳಿಂದ ಕ್ರಮೇಣ ನೀರನ್ನು ಬೇರೆಡೆಗೆ ಹರಿಸಲು ಸಹಾಯವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅಷ್ಟು ಎತ್ತರದ ಜಲಾಶಯದಲ್ಲಿ ಶೇಖರಿಸುವ ನೀರು ಸಾಮಾನ್ಯವಾಗಿ ಸಂಪೂರ್ಣವಾಗಿ ಹರಿಯುವ ನೀರಿನ ಶೇ. ೭೦ರಿಂದ ೯೦ರವರೆಗೂ ಇರುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಇಷ್ಟು ನೀರನ್ನು ಕಳೆದುಕೊಳ್ಳುವುದರಿಂದ ಬೇಸಿಗೆಯಲ್ಲಿ ಬ್ರಹ್ಮಪುತ್ರಾನದಿ ನಮ್ಮ ದೇಶದಲ್ಲಿ ಬತ್ತಿಹೋಗುವ ಸಾಧ್ಯತೆಗಳಿವೆ. ಸಹಜವಾಗಿ ಇದು ಈಶಾನ್ಯರಾಜ್ಯಗಳ ಕೃಷಿಕಾರ್ಯಗಳಿಗೂ ಮಾರಕವಾಗಲಿದೆ. ಜೊತೆಗೆ ಈ ರಾಜ್ಯಗಳಲ್ಲಿ ಆಂತರಿಕ ಸಮಸ್ಯೆಗಳು ಕ್ರಮೇಣ ಹೆಚ್ಚಾಗಲು ಇದು ಇಂಬು ಕೊಡುವುದರಲ್ಲಿ ಸಂದೇಹವೇ ಇಲ್ಲ.
ಭಾರತದೊಳಗೆ ಬರುವ ಬ್ರಹ್ಮಪುತ್ರಾ ನದೀನೀರಿನ ಪಾತ್ರ ಕಳೆದ ಹತ್ತು ವರ್ಷಗಳಲ್ಲಿ ಸುಮಾರು ೧೦ ಮೀ. ನಷ್ಟು ಕಡಮೆಯಾಗಿದೆ. ಈ ಬೆಳವಣಿಗೆಯೇ ತಲ್ಲಣವನ್ನು ಉಲ್ಬಣಿಸುವಂತಹದ್ದು.
ಅಣೆಕಟ್ಟು ಕಟ್ಟಲಾಗುತ್ತಿರುವ ಈ ಪ್ರದೇಶಗಳಲ್ಲಿ ಐತಿಹಾಸಿಕವಾಗಿ ಭೂಕಂಪ ಸಂಭವಿಸುವ ಸಾಧ್ಯತೆಗಳು ಹೆಚ್ಚು. ೧೯೫೦ರಲ್ಲಿ ೮.೮ ರಿಕ್ಟರ್ ಮಾಪನದ ಭೂಕಂಪ, ೧೯೮೭ರಲ್ಲಿ ೮.೭ ರಿಕ್ಟರ್ ಮಾಪನದ ಭೂಕಂಪ ವರದಿಯಾಗಿತ್ತು. ಇನ್ನು ಈ ದೊಡ್ಡ ಅಣೆಕಟ್ಟಿನ ಜಾಗದಲ್ಲಿ ಭೂಕಂಪವಾದರೆ ಪ್ರಾಯಶಃ ಈಶಾನ್ಯಭಾರತದ ಹಲವು ಹಳ್ಳಿಗಳು ಕೊಚ್ಚಿಹೋಗುತ್ತವೆ ಎಂಬ ಭೀತಿಯಲ್ಲಿ ಭಾರತ ಸದಾ ಇರಬೇಕಿದೆ.
ಚೀನಾದ ಅಣೆಕಟ್ಟುಗಳ ನಿರ್ಮಾಣದ ಗೀಳಿನಿಂದಾಗಿ ಮೆಕಾಂಗ್ ನದಿಯ ಅಡ್ಡಲಾಗಿ ಜಗತ್ತಿನ ಅತಿದೊಡ್ಡ ಅಣೆಕಟ್ಟು ಕಟ್ಟಲಾಗಿದೆ. ಈ ಅಣೆಕಟ್ಟು ಇರುವ ಜಾಗವೂ ಭೂಕಂಪ ಪೀಡಿತ ಪ್ರದೇಶವೇ. ಅಂದರೆ ಭೂಕಂಪನವಾಗಿ ಅಣೆಕಟ್ಟು ಒಡೆದರೆ ಅದರ ಮೊದಲ ಹಾನಿ ತಗಲುವುದು ಭಾರತಕ್ಕೆ.
ಈ ಅಣೆಕಟ್ಟುಗಳ ನಿರ್ಮಾಣದಿಂದಾಗಿ, ಪರಿಸರನಾಶ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಈಗಾಗಲೇ ಪರಿಸರತಜ್ಞರು ಪರಿಪರಿಯಾಗಿ ಹಲವುಬಾರಿ ಎಚ್ಚರಿಸಿದ್ದಾರಾದರೂ ಜಲಾಶಯಗಳ ಕೆಲಸಗಳು ನಡೆಯುತ್ತಲೇ ಇವೆ.
ಜಲವಿದ್ಯುತ್ ಘಟಕವಾದ್ದರಿಂದ, ವಿದ್ಯುತ್ ಘಟಕಕ್ಕೆ ಶುದ್ಧ ನೀರಿನ ಆವಶ್ಯಕತೆ ಇರುವುದರಿಂದ ನದೀನೀರಿನಿಂದ ಹೂಳನ್ನು ಬೇರ್ಪಡಿಸಲಾಗುತ್ತದೆ. ಅದೇ ನೀರನ್ನು ಹೊರಬಿಡುವುದರಿಂದ ನೀರಿನ ಗುಣಮಟ್ಟವೂ ಕುಸಿದಿರುತ್ತದೆ. ಹಿಮಾಲಯಪರ್ವತಗಳಿಂದ ಹುಟ್ಟಿಬರುವ ನದಿಗಳಲ್ಲಿ ಕೃಷಿಗೆ ಬೇಕಾಗುವ ಖನಿಜಸಂಪತ್ತು, ಮೆಕ್ಕಲುಮಣ್ಣು ಹೇರಳವಾಗಿರುವುದೆಂಬುದು ತಿಳಿದಿರುವ ವಿಷಯ. ಇನ್ನು ನೀರಿನ ಸಹಜಹರಿವು ಮಾದರಿಯಲ್ಲಿ ಅಣೆಕಟ್ಟು ಕಟ್ಟಿದ್ದರಿಂದ ನೀರು ಹೊರಗೆ ಹರಿದುಬರುವಾಗ ಮೆಕ್ಕಲುಮಣ್ಣಿನ ಗುಣಮಟ್ಟ ಕ್ಷೀಣಿಸಿರುತ್ತದೆ.
ಭಾರತದಲ್ಲಿ ಹರಿಯುವ ಬ್ರಹ್ಮಪುತ್ರಾನದಿಗೆ ಜಲಾಶಯವನ್ನು ನಿರ್ಮಿಸಿ ವಿದ್ಯುತ್ತನ್ನು ಉತ್ಪಾದಿಸುವ ಯೋಜನೆ ಇತ್ತು. ಈ ಅಣೆಕಟ್ಟುಗಳು ಚೀನಾದಲ್ಲಿ ನಿರ್ಮಾಣಗೊಳ್ಳುವಂಥ ಗಾತ್ರದ್ದಲ್ಲ. ಆದರೂ ಪರಿಸರದ ಕಾಳಜಿಯಿಂದ, ಬಂಗ್ಲಾದೇಶಕ್ಕೆ ಅನ್ಯಾಯವಾಗಬಹುದೆಂಬ ಕಾರಣಕ್ಕೆ ಈ ಯೋಜನೆಗಳು ಸಾಕಾರಗೊಳ್ಳುತ್ತಿಲ್ಲ. ಇನ್ನು ಮುಂಬರುವ ದಿನಗಳಲ್ಲಿ ಚೀನಾದಲ್ಲಿ ನಿರ್ಮಾಣವಾಗುವ ಅಣೆಕಟ್ಟುಗಳು ಹೆಚ್ಚಾದಂತೆ ನಮ್ಮ ಯೋಜನೆಗಳಿಗೆ ಸಿಗಬಹುದಾದ ಹಸಿರು ನಿಶಾನೆ ಮಸಕಾಗುತ್ತಾ ಹೋಗುತ್ತದೆ.
ಮುಗಿಸುವ ಮುನ್ನ
ಚೀನಾದೊಂದಿಗೆ ಇದುವರೆಗೂ ನಡೆದುಕೊಂಡು ಬಂದ ಭಾರತದ ಧೋರಣೆ ಬದಲಾಗಬೇಕು. ಇದರರ್ಥ ಯುದ್ಧವೇ ಆಗಬೇಕೆಂದಲ್ಲ. ನಮಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಯಾದ ವೇದಿಕೆಗಳಲ್ಲಿ ಪ್ರಶ್ನಿಸಬೇಕು. ಅಲ್ಲದೆ ಮುಂದೆ ಇಂತಹ ಸಂದರ್ಭಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಉದಾಹರಣೆಗೆ ನೆಹರೂ ಪ್ರಧಾನಿಯಾದ ಸಂದರ್ಭದಲ್ಲಿ ಚೀನಾ ಪಾಕಿಸ್ತಾನ ಜಂಟಿಯಾಗಿ ನಿರ್ಮಿಸಿದ ಕರಾಕೊರಂ ಹೆದ್ದಾರಿ ಭಾರತದ ನೆಲದಲ್ಲಿಯಾಗಿತ್ತು. ರಸ್ತೆ ಸಾರ್ವಜನಿಕರಿಗೆ ಬಿಡುಗಡೆಯಾದ ೩ ವರ್ಷಗಳ ಬಳಿಕ ಚೀನಾವನ್ನು ಈ ಹೆದ್ದಾರಿ ಕಟ್ಟಿದ್ದು ತಪ್ಪು ಎಂಬಂತೆ ನೆಹರೂ ಪ್ರಶ್ನಿಸಿದ್ದನ್ನು ಅಂದಿನ ಚೀನೀ ಪ್ರಧಾನಿ ಚೌ- ಎನ್-ಲೈ ಟೀಕಿಸಿದ್ದು ದಾಖಲಾಗಿದೆ. ಚೀನಾ ಇಂದಿಗೂ ಅರುಣಾಚಲಪ್ರದೇಶ ತನ್ನದೇ ಎಂಬ ತಕರಾರನ್ನು ಎತ್ತುತ್ತಲೇ ಇದೆ. ತನ್ನ ದೇಶದ ಗಡಿ ದಾಟಿ ಹರಿವ ನೀರನ್ನು ನಿಯಂತ್ರಿಸುವ ಯಾಜಮಾನಿಕೆ ತನಗಿದೆ ಎಂದು ಅದು ಭಾವಿಸುತ್ತಿದೆ. ನೆರೆಯ ದೇಶಗಳಿಗೆ ಹಾನಿಯಾಗದಂತೆಯೂ ತನ್ನ ದೇಶದಲ್ಲಿ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಬಹುದು ಎಂಬುದನ್ನು ಚೀನಾ ಆದಷ್ಟು ಬೇಗನೆ ಅರ್ಥಮಾಡಿಕೊಳ್ಳಬೇಕು. ಭಾರತ-ಚೀನಾ ಮಾಡಿಕೊಂಡಿರುವ ಒಪ್ಪಂದದ ಅನ್ವಯ ತನ್ನ ದೇಶದಲ್ಲಿನ ನದೀನೀರಿನ ಅಂಕಿ-ಅಂಶಗಳನ್ನು ಭಾರತ ಸರ್ಕಾರಕ್ಕೆ ಒದಗಿಸಬೇಕು. ದೇವಸೃಷ್ಟಿಯಾದ ಭೂಮಿಯ ಮೇಲೆ ಯಾವುದೇ ಪಕ್ಷಪಾತವಿಲ್ಲದೆ ಹರಿಯುವ ನೀರನ್ನು ಸ್ವಾರ್ಥಕ್ಕಾಗಿ ದಿಕ್ಕುಬದಲಿಸುವ ಕುಕೃತ್ಯಗಳಿಗೆ ವಿದಾಯ ಹೇಳಬೇಕು. ಬ್ರಹ್ಮಪುತ್ರಾನದಿಗೆ ಕಟ್ಟಲಾದ ಜಲಾಶಯಗಳಂತೆ, ಗಂಗಾನದಿ ನೀರನ್ನೂ ನಿಯಂತ್ರಿಸುವ ಕಾರ್ಯದಲ್ಲಿ ಚೀನಾ ತೊಡಗುವ ಸಾಧ್ಯತೆಗಳು ಹೆಚ್ಚು ಎಂಬುದು ತಜ್ಞರ ಅಭಿಪ್ರಾಯ. ಅಲ್ಲದೆ ಹೆಚ್ಚು ಹಣ ವ್ಯಯ ಮಾಡಿ ನಿರ್ಮಾಣವಾಗುತ್ತಿರುವ ಯೋಜನೆಗಳು ಎಷ್ಟು ಪ್ರಯೋಜನಕ್ಕೆ ಬರುತ್ತದೆ ಎಂದು ನೋಡಿದರೆ ಅದರಿಂದ ಆಗುವ ನಷ್ಟಗಳೇ ಹೆಚ್ಚು.
ಕೊನೆಯದಾಗಿ ಬ್ರಹ್ಮಪುತ್ರಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟುಗಳ ಸ್ಥಳ ಎಷ್ಟುಸೂಕ್ಷ್ಮವೆಂದು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ಚೀನಾ ಬ್ರಹ್ಮಪುತ್ರಾ ನದೀನೀರನ್ನು ಅಣೆಕಟ್ಟುಗಳ ಮೂಲಕ ಹಿಡಿದಿಟ್ಟುಕೊಂಡರೆ ಈಶಾನ್ಯಭಾರತದಲ್ಲಿ ಕ್ಷಾಮ ತಲೆದೋರುವುದು ಅಥವಾ ಹಿಡಿದಿಟ್ಟ ನೀರನ್ನು ಯುದ್ಧೋಪಾದಿ ಹಠದಿಂದ ಹರಿಯಬಿಟ್ಟರೆ ಅಥವಾ ಭೂಕಂಪವೇನಾದರೂ ಸಂಭವಿಸಿದರೆ ಇಡಿಯ ಈಶಾನ್ಯಭಾರತ ಕೊಚ್ಚಿಕೊಂಡೇ ಹೋಗಬಹುದು. ಆದ್ದರಿಂದ ಎಚ್ಚರ! ಎಚ್ಚರ!