ರಾಹುಲ್ ದ್ರಾವಿಡ್ ಮೇಲ್ಪಂಕ್ತಿ
ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ, `ವಾಲ್’ ಎಂದೇ ಪ್ರಖ್ಯಾತರಾಗಿರುವ ರಾಹುಲ್ ದ್ರಾವಿಡ್ ನಿವೃತ್ತಿಗೆ ಮುನ್ನ ಹೇಗೋ ಹಾಗೆ ಈಗಲೂ ಕ್ರೀಡಾಪ್ರೇಮಿಗಳಿಗೆ ರೋಲ್ ಮಾಡೆಲ್ ಆಗಿಯೇ ಉಳಿದಿದ್ದಾರೆ. ಭಾರತ ತಂಡ ಸೋಲಿನ ಸುಳಿಯಲ್ಲಿದ್ದಾಗ ಅವರು ಆಪದ್ಬಾಂಧವನಂತೆ ಬಂದು ಬ್ಯಾಟ್ ಬೀಸಿ ತಂಡವನ್ನು ಗೆಲವಿನ ದಡ ಸೇರಿಸಿದ ನಿದರ್ಶನಗಳು ಸಾಕಷ್ಟಿವೆ. ತಲೆಯನ್ನು ತಂಪಾಗಿಟ್ಟುಕೊಂಡು ಹೃದಯ ಬೆಚ್ಚಗಿಟ್ಟುಕೊಂಡು ತಂಡದ ಗೆಲವಿಗಾಗಿಯೇ ಶ್ರಮಿಸುತ್ತಿದ್ದ ಅಪರೂಪದ ಕ್ರಿಕೆಟಿಗ ರಾಹುಲ್ ದ್ರಾವಿಡ್. ಆತ ನಮ್ಮ ಕರ್ನಾಟಕದವರೆಂದು ಹೇಳಿಕೊಳ್ಳಲು ಕನ್ನಡಿಗರಿಗೆ ಮತ್ತಷ್ಟು ಹೆಮ್ಮೆ.
ಇಂತಿಪ್ಪ ದ್ರಾವಿಡ್ ಕ್ರಿಕೆಟ್ ಆಟದಿಂದ ನಿವೃತ್ತಿ ಹೇಳಿದ ಮೇಲೂ ತನ್ನ ಅಭಿಮಾನಿಗಳ ಪಾಲಿಗೆ ಮೇಲ್ಪಂಕ್ತಿಯಾಗಿಯೇ ಉಳಿದಿರುವುದು ಆತನ ಬಗ್ಗೆ ಮತ್ತಷ್ಟು ಹೆಮ್ಮೆ, ಗೌರವ ಮೂಡಿಸಿದೆ. ಕಳೆದ ಜನವರಿ 27ರಂದು ಜರಗಿದ ಬೆಂಗಳೂರು ವಿಶ್ವವಿದ್ಯಾಲಯದ 52ನೇ ಘಟಿಕೋತ್ಸವದಲ್ಲಿ ರಾಹುಲ್ಗೆ ಗೌರವ ಡಾಕ್ಟೊರೇಟ್ ಪದವಿ ಪ್ರದಾನ ಮಾಡಲು ವಿ.ವಿ. ಆಡಳಿತ ಮಂಡಳಿ ನಿರ್ಧರಿಸಿತ್ತು. ಆದರೆ ರಾಹುಲ್ ಅದನ್ನು ನಯವಾಗಿಯೇ ತಿರಸ್ಕರಿಸಿದರು. ’ನೀವು ನನಗೆ ಗೌರವ ಡಾಕ್ಟರೇಟ್ ಪದವಿ ನೀಡಲು ನಿರ್ಧರಿಸಿದ್ದಕ್ಕೆ ಥ್ಯಾಂಕ್ಸ್. ಆದರೆ ನಾನದನ್ನು ಸ್ವೀಕರಿಸಲಾರೆ. ಅಂತಹ ಗೌರವ ಡಾಕ್ಟೊರೇಟ್ ಪಡೆಯುವ ಬದಲಿಗೆ ಕ್ರೀಡಾಕ್ಷೇತ್ರದ ಕುರಿತು ಶೈಕ್ಷಣಿಕವಾಗಿ ಸಂಶೋಧನೆ ಮಾಡಿ ನಿಜವಾದ ಪಿಎಚ್.ಡಿ. ಪಡೆಯಲು ಯತ್ನಿಸುವೆ’ ಎಂದು ಹೇಳಿದ್ದರು. ಇದೇನೂ ದುರಹಂಕಾರದಿಂದ ದ್ರಾವಿಡ್ ಹೇಳಿದ ಮಾತಲ್ಲ. ಸಹಜವಾಗಿಯೇ ನೀಡಿದ ಹೇಳಿಕೆ ಅದಾಗಿತ್ತು. ದ್ರಾವಿಡ್ ಈ ಹಿಂದೆ ಗುಲ್ಬರ್ಗ ವಿಶ್ವವಿದ್ಯಾಲಯ ಗೌರವ ಡಾಕ್ಟೊರೇಟ್ ಪದವಿ ನೀಡಲು ಬಯಸಿದ್ದಾಗಲೂ ಅದನ್ನು ನಯವಾಗಿಯೇ ನಿರಾಕರಿಸಿದ್ದರು.
ಪ್ರಶಸ್ತಿಗಳು ಬಂದರೆ ಸಾಕೆಂದು ಹಪಹಪಿಸುವವರೇ ಹೆಚ್ಚು. ಕೆಲವರಂತೂ ಪ್ರಶಸ್ತಿಗಳಿಗಾಗಿ ಇನ್ನಿಲ್ಲದ ಪ್ರಭಾವ ಬೀರಿ ವಶೀಲಿಬಾಜಿ ನಡೆಸುವ ನಿದರ್ಶನಗಳು ನಮಗೆ ಗೊತ್ತೇ ಇದೆ. ಬಿಸಿಸಿಐ ಮತ್ತು ಅನಂತರ ಐಸಿಸಿ ಅಧ್ಯಕ್ಷರಾಗಿದ್ದ ರಾಜಕಾರಣಿ ಶರದ್ ಪವಾರ್, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಪ್ರಭಾವ ಬೀರಿ, ಪದ್ಮಶ್ರೀ ಪ್ರಶಸ್ತಿಯನ್ನು ಎರಡೂ ಕೈಗಳಿಂದ ಬಾಜಿಕೊಂಡಿದ್ದರು. ಆ ಪ್ರಶಸ್ತಿಗೆ ಅವರು ಕಿಂಚಿತ್ತೂ ಅರ್ಹರಾಗಿರಲಿಲ್ಲ. ದ್ರಾವಿಡ್ ಗೌರವ ಡಾಕ್ಟೊರೇಟ್ ಪದವಿಗೆ ಅರ್ಹರಾಗಿದ್ದರೂ ಅದನ್ನವರು ಸ್ವೀಕರಿಸಲಿಲ್ಲ. ಪದ್ಮಶ್ರೀ ಪ್ರಶಸ್ತಿ ಗಿಟ್ಟಿಸಿ ಶರದ್ ಪವಾರ್ ಕುಬ್ಜರಾಗಿದ್ದರು; ಗೌರವ ಡಾಕ್ಟೊರೇಟ್ ಪದವಿ ನಿರಾಕರಿಸಿ ದ್ರಾವಿಡ್ ಎತ್ತರಕ್ಕೇರಿದ್ದಾರೆ; ಕ್ರೀಡಾಭಿಮಾನಿಗಳ ರೋಲ್ ಮಾಡೆಲ್ ಆಗಿಯೇ ಉಳಿದಿದ್ದಾರೆ.
ಅಂದ ಹಾಗೆ, ರಾಹುಲ್ ದ್ರಾವಿಡ್ ಕ್ರಿಕೆಟ್ ರಂಗದಲ್ಲಿ ಮಾಡಿರುವ ಸಾಧನೆಯೇನೂ ಕಡಮೆಯದಲ್ಲ. ೧೬೪ ಟೆಸ್ಟ್ಗಳು ಹಾಗೂ ೩೪೪ ಏಕದಿನ ಪಂದ್ಯಗಳಲ್ಲಿ ಬ್ಯಾಟ್ ಬೀಸಿ ಕ್ರಮವಾಗಿ ಅವರು ಕಲೆಹಾಕಿದ ರನ್ಗಳು ೧೩,೨೮೮ ಮತ್ತು ೧೦,೮೮೯. ಇದೀಗ ೧೯ರ ವಯೋಮಾನದ ಕೆಳಗಿನ ಕ್ರಿಕೆಟ್ ಕಲಿಗಳಿಗೆ ತರಬೇತುದಾರರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಅದರ ಫಲವಾಗಿ ಇನ್ನ? ’ರಾಹುಲ್ ದ್ರಾವಿಡ್’ಗಳು ಉದಯಿಸಿ ಬರುವುದು ಖಚಿತ.
ಸಾಟಿಯಿಲ್ಲದ ಧೋನಿಯ ಹಿರಿತನ
ಭಾರತ ಕ್ರಿಕೆಟ್ ತಂಡ ಕಂಡ ವಿಶಿಷ್ಟ ನಾಯಕ ಧೋನಿ ಎಂಬುದರಲ್ಲಿ ಎರಡು ಮಾತೇ ಇಲ್ಲ. ಯಾರೂ ಒತ್ತಾಯಿಸದಿದ್ದರೂ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವಕ್ಕೆ ತಾನಾಗಿಯೇ ರಾಜೀನಾಮೆ ನೀಡಿದ ಅಪರೂಪದ ಆಟಗಾರ ಆತ. ಅದಾದ ಬಳಿಕ ಧೋನಿ ಏಕದಿನ ಹಾಗೂ ಟಿ-20 ತಂಡದ ನಾಯಕತ್ವಕ್ಕೂ ವಿದಾಯ ಹೇಳಿ ಬಿಸಿಸಿಐಯನ್ನು ವಿಸ್ಮಿತರಾಗುವಂತೆ ಮಾಡಿದ್ದರು. ಅದಕ್ಕಿಂತಲೂ ವಿಸ್ಮಯಕಾರಿ ಪ್ರಸಂಗವೆಂದರೆ ಏಕದಿನ ಹಾಗೂ ಟಿ-೨೦ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದರೂ, ಆ ಎರಡೂ ಬಗೆಯ ಕ್ರಿಕೆಟ್ನಲ್ಲಿ ಸಾಮಾನ್ಯ ಆಟಗಾರನಾಗಿ ಮುಂದುವರಿಯಲು ಧೋನಿ ನಿರ್ಧರಿಸಿದ್ದು.
ಹೌದು, ತನಗಿಂತಲೂ ಕಿರಿಯನಾದ ವಿರಾಟ್ ಕೊಹ್ಲಿ ಸಾರಥ್ಯದ ಕ್ರಿಕೆಟ್ ತಂಡದಲ್ಲಿ ಸಾಮಾನ್ಯ ಆಟಗಾರನಾಗಿ ಮುಂದುವರಿಯಲು ಧೋನಿ ತಳೆದ ನಿರ್ಧಾರ ಮಾತ್ರ ಅಸಾಮಾನ್ಯವಾದ್ದೇ ಸರಿ. ತಂಡದ ನಾಯಕನಾದವನು ಅನಂತರ ಅದೇ ತಂಡದ ಸಾಮಾನ್ಯ ಆಟಗಾರನಾಗುವ ಉದಾಹರಣೆಗಳು ವಿರಳ. ಧೋನಿ ಮಾತ್ರ ಅದಕ್ಕೆ ಅಪವಾದ. ಇಂಗ್ಲೆಂಡ್ ವಿರುದ್ಧ ನಡೆದ ಟಿ-೨೦ ಸರಣಿಯಲ್ಲಿ ಧೋನಿ ಬ್ಯಾಟ್ಸ್ಮನ್ ಹಾಗೂ ವಿಕೆಟ್ಕೀಪರ್ ಆಗಿ ತೋರಿದ ಸಾಧನೆ ಅನನ್ಯ. ಅರ್ಧಶತಕ ಬಾರಿಸದೆ ಸಾಕಷ್ಟು ದಿನಗಳೇ ಆಗಿತ್ತು. ಆದರೆ ಇತ್ತೀಚೆಗೆ ನಡೆದ ಟಿ-೨೦ ಪಂದ್ಯದಲ್ಲಿ ಧೋನಿ ಅರ್ಧಶತಕ ಬಾರಿಸಿ, ಕೊಹ್ಲಿ ನೇತೃತ್ವದಲ್ಲಿ ಭಾರತ ಸರಣಿ ಗೆಲವು ಪಡೆಯುವಂತೆ ಮಾಡಿದರು.
ಅಸಲಿಗೆ ಕೊಹ್ಲಿಗೆ ಈ ಟಿ-೨೦ ಸರಣಿಯಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸಾಧನೆ ಮಾಡುವುದು ಸುಲಭವಾಗಿರಲಿಲ್ಲ. ಧೋನಿ ಮಾತ್ರ ತನ್ನ ಸಾಮರ್ಥ್ಯವನ್ನು ಧಾರೆಯೆರೆದು ಕೊಹ್ಲಿ ಸಾರಥ್ಯಕ್ಕೆ ಕೀರ್ತಿ ತಂದರು. ಪತ್ರಿಕೆಗಳು ಹೊಗಳಿದ್ದು ಮಾತ್ರ ಕೊಹ್ಲಿಯನ್ನೆ. ’ಮೊಟ್ಟಮೊದಲ ಟಿ-೨೦ ಸರಣಿ ಜಯಿಸಿದ ವಿರಾಟ್ ನಾಯಕತ್ವ’ ಎಂದೇ ಅವು ಬಣ್ಣಿಸಿದವು. ಕೊಹ್ಲಿ ನಾಯಕತ್ವ ಇಂಥದ್ದೊಂದು ಸ್ಮರಣೀಯ ಗೆಲವು ಪಡೆಯಲು ಮುಖ್ಯ ಕಾರಣವಾಗಿದ್ದುದು ಮಾತ್ರ ಧೋನಿಯ ಅದ್ಭುತ ಆಟ.
ಧೋನಿಯಂತಹ ಕ್ರೀಡಾಪಟುಗಳು ಕ್ರಿಕೆಟ್ರಂಗದಲ್ಲಿದ್ದರೆ ಎಂತಹ ನಾಯಕನೂ ಅಧೀರನಾಗಬೇಕಾದ ಅಗತ್ಯವಿರುವುದಿಲ್ಲ. ಹಾಗೆಂದೇ ಕೊಹ್ಲಿ ಹೇಳಿದ್ದು: ’ಧೋನಿ ಈಗಲೂ ನನ್ನ ನಾಯಕ ಹಾಗೂ ಮಾರ್ಗದರ್ಶಕ.’
ಟಿ-20 ತ್ರಿವಿಕ್ರಮ – ಮೋಹಿತ್
ಇಪ್ಪತ್ತು ಓವರ್ಗಳ ಹೊಡಿಬಡಿ ಕ್ರಿಕೆಟ್ನಲ್ಲಿ ತಂಡವೊಂದು ೨೦೦ ಅಥವಾ ೨೫೦ಕ್ಕೂ ಹೆಚ್ಚು ರನ್ ಗಳಿಸುವುದೇ ಬಹುದೊಡ್ಡ ಸಾಧನೆ. ಆದರೆ ದೆಹಲಿಯ ಯುವ ಕ್ರಿಕೆಟಿಗನೊಬ್ಬ ತಾನೊಬ್ಬನೇ ೩೦೦ ರನ್ ಗಳಿಸಿ ಅಜೇಯವಾಗುಳಿದ ಅಪರೂಪದ, ಅವಿಚ್ಛಿನ್ನ ವಿಶ್ವದಾಖಲೆಯೊಂದು ಟಿ-೨೦ ಕ್ರಿಕೆಟ್ನಲ್ಲಿ ನಿರ್ಮಾಣವಾಗಿದೆ.
ಇಂಥದ್ದೊಂದು ಅಸಾಮಾನ್ಯ ಇನ್ನಿಂಗ್ಸ್ನ ಇತಿಹಾಸ ಬರೆದಾತ ೨೧ರ ಹರೆಯದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೋಹಿತ್ ಅಹ್ಲವಾತ್ ಎಂಬ ದೆಹಲಿಯ ಯುವ ಕ್ರಿಕೆಟಿಗ. ದೆಹಲಿಯ ಲಲಿತಾ ಪಾರ್ಕ್ ಮೈದಾನದಲ್ಲಿ ನಡೆದ ಫ್ರೆಂಡ್ಸ್ ಪ್ರೀಮಿಯರ್ ಲೀಗ್ (ಎಫ್.ಪಿ.ಎಲ್.) ಟೂರ್ನಿಯಲ್ಲಿ ಮೂವಿ ಇಲೆವೆನ್ ತಂಡವನ್ನು ಪ್ರತಿನಿಧಿಸಿದ್ದ ಮೋಹಿತ್ ಫ್ರೆಂಡ್ಸ್ ಇಲೆವೆನ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿ ವಿಶ್ವದಾಖಲೆ ಬರೆದಿದ್ದಾನೆ.
72 ಎಸೆತಗಳನ್ನು ಎದುರಿಸಿದ ಮೋಹಿತ್ ಬ್ಯಾಟಿನಿಂದ ಸಿಡಿದದ್ದು ೧೪ ಬೌಂಡರಿ ಹಾಗೂ ೩೯ ಸಿಕ್ಸರ್ಗಳು. ಮೋಹಿತ್ನ ಸಿಡಿಲಬ್ಬರದ ಬ್ಯಾಟಿಂಗ್ನಿಂದಾಗಿ ಮೂವಿ ಇಲೆವೆನ್ ತಂಡ ೨೦ ಓವರ್ಗಳಲ್ಲಿ ಕಲೆಹಾಕಿದ್ದು ಬರೊಬ್ಬರೀ ೪೧೬ ರನ್ಗಳು! ಮೊದಲ ೧೮ ಓವರ್ಗಳಲ್ಲಿ ೨೫೦ ರನ್ ಪೂರೈಸಿದ ಮೋಹಿತ್, ಕೊನೆಯ ಎರಡು ಓವರ್ಗಳಲ್ಲಿ ಚಚ್ಚಿದ್ದು ೫೦ ರನ್ಗಳು. ಅದರಲ್ಲೂ ಕೊನೆಯ ಓವರ್ನ ೫ ಎಸೆತಗಳನ್ನು ಸಿಕ್ಸರ್ಗೆ ಎತ್ತಿದ ಮೋಹಿತ್ ೩೪ ರನ್ ಕಲೆಹಾಕಿದ್ದ.
ಅಧಿಕೃತ ಚುಟುಕು ಕ್ರಿಕೆಟ್ನಲ್ಲಿನ ವೈಯಕ್ತಿಕ ಗರಿ? ಸ್ಕೋರ್ ದಾಖಲಾಗಿರುವುದು ವಿಂಡೀಸ್ನ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಹೆಸರಿನಲ್ಲಿ. ೨೦೧೩ರ ಐಪಿಎಲ್ನಲ್ಲಿ ಪುಣೆ ವಾರಿಯರ್ಸ್ ವಿರುದ್ಧದ ಬೆಂಗಳೂರಿನ ಪಂದ್ಯದಲ್ಲಿ ಗೇಲ್ ಅಜೇಯ ೧೭೫ ರನ್ ಮಾಡಿದ್ದರು. ಇನ್ನು ಅಂತಾರಾಷ್ಟ್ರೀಯ ಟಿ-೨೦ ಟೂರ್ನಿಯಲ್ಲಿ ಗರಿಷ್ಟ ಸ್ಕೋರ್ ೧೫೬ ರನ್ಗಳಾಗಿವೆ. ೨೦೧೩ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಏರಾನ್ ಪಿಂಚ್ ಈ ಸಾಧನೆ ಮಾಡಿದ್ದರು.
೨೦೧೫ರ ರಣಜಿ ಋತುವಿನಲ್ಲಿ ರಾಜಸ್ಥಾನ ವಿರುದ್ಧ ದೆಹಲಿ ಪರ ದೇಶೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಮೋಹಿತ್ ಮೊದಲು ಆಡಿದ ಮೂರು ಪಂದ್ಯಗಳಲ್ಲಿ ಗಳಿಸಿದ್ದು ಮಾತ್ರ ಕೇವಲ ೫ ರನ್ಗಳು! ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದ ಈತ, ಅಲ್ಲಿಂದಾಚೆಗೆ ರಣಜಿಯಲ್ಲಿ ಆಡಿಲ್ಲ. ಆದರೀಗ ತನ್ನ ವಿಸ್ಮಯಕಾರಿ ಬ್ಯಾಟಿಂಗ್ನಿಂದ ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.
ಕ್ರಿಕೆಟ್ ಲೋಕದ ವಿಸ್ಮಯಗಳಲ್ಲಿ ಇದೂ ಒಂದು!
ಒಲಿಂಪಿಕ್ಸ್ ಕನಸು ನನಸಿಗಾಗಿ ಪೋಷಕರನ್ನೇ ನೋಡದ ಡೆಬೋರಾ
ಒಲಿಂಪಿಕ್ ಕೂಟದಲ್ಲಿ ಪದಕ ಗೆಲ್ಲುವ ಆಕಾಂಕ್ಷೆಯೂ, ಕನಸೂ ಯಾರಿಗಿರುವುದಿಲ್ಲ, ಹೇಳಿ. ಪದಕದ ಗೆಲವಿಗಾಗಿ ಕ್ರೀಡಾಪಟುಗಳು ಪಡುವ ಪರಿಶ್ರಮ ಅಂಥಿಂಥದ್ದಲ್ಲ. ಭಾರತದ ಅಗ್ರಮಾನ್ಯ ಮಹಿಳಾ ಸೈಕ್ಲಿಸ್ಟ್ ಡೆಬೋರಾ ಹೆರಾಲ್ಡ್ ತನ್ನ ಒಲಿಂಪಿಕ್ ಪದಕದ ಕನಸನ್ನು ನನಸಾಗಿಸಿಕೊಳ್ಳಲು ಕಳೆದ ನಾಲ್ಕು ವರ್ಷಗಳಿಂದ ತನ್ನ ಪೋಷಕರನ್ನೇ ನೋಡಿಲ್ಲವೆಂದರೆ ನೀವು ನಂಬಲೇಬೇಕು.
೨೦೧೩ರ ಜನವರಿಯಲ್ಲಿ ಮನೆಬಿಟ್ಟು ದೆಹಲಿಯ ಇಂಡಿಯನ್ ಒಳಾಂಗಣ ಕ್ರೀಡಾಂಗಣಕ್ಕೆ ಡೆಬೋರಾ ಸೈಕ್ಲಿಂಗ್ ಅಭ್ಯಾಸಕ್ಕೆ ಬಂದಳು. ಅಂದಿನಿಂದ ಇಂದಿನವರೆಗೂ ಆಕೆಯ ಗಮನವೆಲ್ಲ ಕೇವಲ ಸೈಕ್ಲಿಂಗ್ ಅಭ್ಯಾಸದತ್ತಲೇ ಕೇಂದ್ರೀಕೃತ. ದೂರವಾಣಿಯ ಮೂಲಕ ಮಾತ್ರ ಪೋಷಕರೊಡನೆ ಆಗಾಗ ಮಾತುಕತೆ. ಮನೆಗೆ ಹೋಗಿಲ್ಲ. ೨೦೨೦ರ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸುವುದಕ್ಕಾಗಿ ಇಷ್ಟೆಲ್ಲ ಕಸರತ್ತು. ಇನ್ನು ೨-೩ ವರ್ಷಗಳ ಕಾಲ ತನ್ನ ಪೋಷಕರನ್ನು ತಾನು ಭೇಟಿ ಮಾಡುವುದಿಲ್ಲ ಎಂಬುದು ಡೆಬೋರಾಳ ನಿರ್ಧಾರ.
ಡೆಬೋರಾ ಮೂಲತಃ ಅಂಡಮಾನ್ನ ನಿವಾಸಿ. ೨೦೦೪ರಲ್ಲಿ ಸಂಭವಿಸಿದ ಸುನಾಮಿ ದುರಂತದಲ್ಲಿ ಆಕೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಳು. ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ್ದ ಡೆಬೋರಾ ಮರವೊಂದನ್ನೇರಿ ಐದು ದಿನಗಳ ಕಾಲ ಬರೀ ಎಲೆಗಳನ್ನೇ ತಿಂದು ಬದುಕಿದ್ದಳು. ಅಲೆಗಳ ಹೊಡೆತದ ತೀವ್ರತೆ ಇಳಿದ ಮೇಲೆಯೇ ಡೆಬೋರಾ ಮರದಿಂದ ಕೆಳಗಿಳಿದದ್ದು.
ಇಂತಹ ಸಾಹಸಿ ಡೆಬೋರಾಗೆ ನಿಮ್ಮೆಲ್ಲರ ಶುಭಾಶಯ, ಶುಭ ಹಾರೈಕೆ ಇರಲಿ.