ಗಾಂಧೀಯ ಅರ್ಥಶಾಸ್ತ್ರ
ಭಾರತದಲ್ಲಿ ಆಹಾರಸಮಸ್ಯೆ ಇದೆ ಎನ್ನುವುದನ್ನು ಗಾಂಧಿಯವರು ಮನಗಂಡಿದ್ದರು. ದೇಶದ ಅನೇಕ ಭಾಗಗಳಲ್ಲಿರುವ ಅದರಲ್ಲೂ ಬಡತನ ಮತ್ತು ನಿರುದ್ಯೋಗದಿಂದ ನರಳುತ್ತಿರುವ ಬಹಳಷ್ಟು ಭಾರತೀಯರಿಗೆ ಅಗತ್ಯ ಪ್ರಮಾಣದಲ್ಲಿ ಆಹಾರ ಸಿಗುತ್ತಿಲ್ಲ ಎನ್ನುವುದರ ಅರಿವು ಅವರಿಗಿತ್ತು. ಹಸಿವಿನಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದುದನ್ನು ಅವರು ಗಮನಿಸಿದ್ದರು. ಆದಕಾರಣ ಭಾರತವು ಆಹಾರ ಉತ್ಪಾದನೆಯಲ್ಲಿ ‘ಸ್ವಾವಲಂಬಿ’ ಆಗಬೇಕು, ಹಸಿವಿನಿಂದ ಯಾರೂ ನರಳಬಾರದು ಎಂಬುದು ಅವರ ಆಶಯವಾಗಿತ್ತು. ಆದರೆ ಆಹಾರಸಮಸ್ಯೆಗೆ ಅವರ ವಿಶ್ಲೇಷಣೆ ಇತರರಿಗಿಂತ ವಿಭಿನ್ನವಾಗಿತ್ತು. ಭಾರತದಲ್ಲಿ ಆಹಾರಸಮಸ್ಯೆ ಜನಸಂಖ್ಯಾ ಹೆಚ್ಚಳದಿಂದ ಉಂಟಾದುದಲ್ಲ ಎಂಬ ಸ್ಪಷ್ಟ ಅಭಿಪ್ರಾಯವನ್ನು ಅವರು ಹೊಂದಿದ್ದರು. ಭಾರತದ ಜನಸಂಖ್ಯಾ ಸಮಸ್ಯೆಯನ್ನು ಪರಿಹರಿಸಲು ಜನನನಿಯಂತ್ರಣ ಅನಿವಾರ್ಯ ಮತ್ತು ಜನನನಿಯಂತ್ರಣದಿಂದ ಆಹಾರಸಮಸ್ಯೆಯನ್ನು ಬಗೆಹರಿಸಬಹುದು ಎಂದು ವಾದಮಾಡುವವರಿಗೆ ಗಾಂಧಿಯವರು ಹೇಳಿದ ಸ್ಪಷ್ಟ ಉತ್ತರ ಇದಾಗಿತ್ತು –
“ಜನನನಿಯಂತ್ರಣದಿಂದ ಆಹಾರಸಮಸ್ಯೆಯ ಪರಿಹಾರಕ್ಕೆ ಇಲ್ಲಿಯವರೆಗೆ ಎಲ್ಲೂ ಉತ್ತರ ಸಿಕ್ಕಿಲ್ಲ. ನನ್ನ ಪ್ರಕಾರ ಸರಿಯಾದ ಭೂಮಿ ವ್ಯವಸ್ಥೆ, ಉತ್ತಮ ಕೃಷಿ ಮತ್ತು ಪೂರಕ ಕೈಗಾರಿಕೆಗಳ ಸ್ಥಾಪನೆಯಿಂದ ಭಾರತ ದೇಶ ಈಗಿರುವುದರ ಎರಡುಪಟ್ಟು ಜನಸಂಖ್ಯೆಗೆ ಅನ್ನವನ್ನು ನೀಡಲು ಸಮರ್ಥವಾಗಿದೆ” (ಯಂಗ್ ಇಂಡಿಯಾ, 2-4-1925).
ಅವರ ಈ ಹೇಳಿಕೆಯನ್ನು ಸ್ವಲ್ಪ ವಿಶ್ಲೇಷಣೆ ಮಾಡಿದರೆ ನಮಗೆ ತಿಳಿಯುವುದೇನೆಂದರೆ ನಮ್ಮ ಆಹಾರಸಮಸ್ಯೆಗೆ ಜನಸಂಖ್ಯೆಯ ಹೆಚ್ಚಳವೇ ಕಾರಣವೆನ್ನಲಾಗದು. ಬದಲಿಗೆ ಕೃಷಿಕ್ಷೇತ್ರದ ಅಸಮರ್ಪಕ ನಿರ್ವಹಣೆಯೂ ಕಾರಣ. ಭಾರತದ ಆಹಾರಸಮಸ್ಯೆಯ ನಿವಾರಣೆಗಾಗಿ ಗಾಂಧಿಯವರು ಈ ಕೆಳಗಿನ ಕ್ರಮಗಳನ್ನು ಸೂಚಿಸಿದ್ದಾರೆ –
1. ಜನರು ಆಹಾರಸೇವನೆಯ ಪ್ರಮಾಣವನ್ನು ಆದಷ್ಟೂ ಕನಿಷ್ಠಗೊಳಿಸಬೇಕು. ಮತ್ತು ಅಗತ್ಯವಿರುವಷ್ಟು ಆಹಾರವನ್ನು ಮಾತ್ರ ಬಳಸಬೇಕು. ಆಹಾರಧಾನ್ಯ ಮತ್ತು ಬೇಳೆಕಾಳುಗಳ ಅನುಭೋಗವನ್ನು ಕಡಮೆ ಮಾಡಿ ಹಾಲು, ಹಣ್ಣು, ತರಕಾರಿಗಳ ಅನುಭೋಗವನ್ನು ಹೆಚ್ಚಿಸಬೇಕು.
2. ಕುಡಿಯುವ ನೀರಿನ ಮತ್ತು ನೀರಾವರಿ ಸೌಲಭ್ಯವನ್ನು ಒದಗಿಸಲು ಸರಕಾರ ಆಳವಾದ ಬಾವಿಗಳನ್ನು ಸೈನಿಕರ ಸಹಾಯದಿಂದ ತೋಡಿಸಬೇಕು.
3. ಅಂತರ್ಜಲದ ಸಂಪೂರ್ಣ ಉಪಯೋಗವಾಗಬೇಕು.
4. ಎಲ್ಲ ಪುಷ್ಪೋದ್ಯಾನಗಳನ್ನು ಬೇಸಾಯಕ್ಕಾಗಿ ಬಳಸಬೇಕು.
5. ಪಾಳುಬಿದ್ದ ಭೂಮಿಯನ್ನು ಉಳುಮೆಗೆ ಸಿದ್ಧಗೊಳಿಸಬೇಕು.
6. ಎಣ್ಣೆಬೀಜ ಮತ್ತು ಹಿಂಡಿಯ ರಫ್ತನ್ನು ನಿಲ್ಲಿಸಬೇಕು.
7. ಸೈನಿಕರೂ ಕೂಡಾ ಅನುಭೋಗದಲ್ಲಿ ಮಿತವ್ಯಯ ಮಾಡಬೇಕು.
8. ಕಾಳಸಂತೆ ವ್ಯಾಪಾರವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
9. ಸರ್ಕಾರಿ ನೌಕರರ ಮತ್ತು ಸಾರ್ವಜನಿಕರ ಸಹಕಾರ ಪಡೆಯಬೇಕು.
10. ನೀರಿನ ಬಳಕೆಯ ಅವಕಾಶ ಇರುವವರೆಲ್ಲ ಒಂದಲ್ಲ ಒಂದು ಬೆಳೆಯನ್ನು ಬೆಳೆಯಬೇಕು.
11. ಸೋಯಾಬೀನ್ ಬೆಳೆಯ ಪ್ರಮಾಣವನ್ನು ಹೆಚ್ಚುಮಾಡಬೇಕು.
12. ರಾಸಾಯನಿಕ ಗೊಬ್ಬರದ ಬದಲು ಜೈವಿಕ ಗೊಬ್ಬರದ ಬಳಕೆಯನ್ನು ಅಧಿಕಗೊಳಿಸಬೇಕು.
13. ಸುಧಾರಿತ ಬೀಜಗಳ ಉಪಯೋಗ ಮಾಡಬೇಕು.
14. ‘ಸಹಕಾರಿ ಬೇಸಾಯ ಪದ್ಧತಿ’ಯನ್ನು ಜನಪ್ರಿಯಗೊಳಿಸಬೇಕು.
15. ಕಾಡುಪ್ರಾಣಿಗಳಿಂದ ಬೆಳೆಗಳಿಗೆ ಆಗುತ್ತಿರುವ ಹಾನಿಯನ್ನು ತಪ್ಪಿಸಬೇಕು.
16. ಅಕ್ಕಿ, ಗೋಧಿ, ರಾಗಿ ಇತ್ಯಾದಿಗಳ ಜೊತೆಗೆ ಇತರ ಆಹಾರಧಾನ್ಯ ಹಾಗೂ ಮೀನನ್ನು ಹೆಚ್ಚಾಗಿ ಬಳಕೆ ಮಾಡಬೇಕು.
17. ಆಹಾರದ ಕೇಂದ್ರೀಕರಣ ಮಾಡಬಾರದು… ಇತ್ಯಾದಿ.
ಗಾಂಧಿಯವರು ಮೇಲ್ಕಂಡ ಸಲಹೆಗಳನ್ನು ಹರಿಜನ ಪತ್ರಿಕೆಯ ವಿವಿಧ ಆವೃತ್ತಿಗಳಲ್ಲಿ (17-3-1946, 24-2-1946, 9-11-1935, 19-10-1947, 24-3-1946) ನೀಡಿದ್ದಾರೆ. ಜೊತೆಗೆ 20, 21 ಮತ್ತು 57ರ ಕೆಲವು ಆವೃತ್ತಿಗಳಲ್ಲೂ ಕಾಣಬಹುದು.
ನೀರಾವರಿಯ ಮಹತ್ತ್ವ
ಆಹಾರಸಮಸ್ಯೆಯ ಪರಿಹಾರಕ್ಕಾಗಿ ಗಾಂಧಿಯವರು ನೀರಾವರಿ ಸೌಲಭ್ಯಗಳ ಮಹತ್ತ್ವವನ್ನು ಒತ್ತಿಹೇಳಿದ್ದಾರೆ – “ನೀರಾವರಿಯ ಮಹತ್ತ್ವವನ್ನು ಎಲ್ಲ ಹಳ್ಳಿಗಳಿಗೂ ವಿಸ್ತರಿಸುವ ಆವಶ್ಯಕತೆ ಇದೆ. ಇದರ ಆಧಾರದ ಮೇಲೆ ಇಡೀ ಕೃಷಿಕಾರ್ಯದ ಪ್ರಗತಿ ನಿಂತಿದೆ. ಇದರ ಅನುಪಸ್ಥಿತಿಯಲ್ಲಿ ಭಾರತದ ಕೃಷಿ ಹವಾಮಾನದ ಜೊತೆಗೆ
ಜೂಜಾಡುವಂತಾಗುತ್ತದೆ. ಬಾವಿಗಳನ್ನು ತೋಡುವ ಕಾರ್ಯ, ಕೆರೆಗಳಲ್ಲಿ ಹೂಳೆತ್ತಿ ಅವನ್ನು ವಿಸ್ತರಿಸುವ ಕಾರ್ಯ ಮತ್ತು ಕಾಲುವೆಗಳ ನಿರ್ಮಾಣ ಇತ್ಯಾದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಸಾಕಷ್ಟು ಪ್ರಮಾಣದ ನೀರಿನ
ಪೂರೈಕೆ ಇಲ್ಲದೆ ಗೊಬ್ಬರದ ಉಪಯೋಗ ಸಂಪೂರ್ಣವಾಗಿ ಮಾಡುವಂತಿಲ್ಲ. ಕಾರಣ ನೀರಿಲ್ಲದೆ ಗೊಬ್ಬರದ ಉಪಯೋಗ ಹಾನಿಕಾರಕವಾಗುತ್ತದೆ” (ಹರಿಜನ, 12-5-1946).
ಜೈವಿಕ ಗೊಬ್ಬರದ ಉಪಯೋಗ
ಗಾಂಧಿಯವರು ರಾಸಾಯನಿಕ ಗೊಬ್ಬರಗಳ ಬದಲು ಜೈವಿಕ ಗೊಬ್ಬರಗಳ ಉಪಯೋಗಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿದರು. ಅವರು ಈ ರೀತಿ ಹೇಳುತ್ತಾರೆ – “ಕೃಷಿಯ ಉತ್ಪಾದನಾಮಟ್ಟವನ್ನು ಹೆಚ್ಚಿಸುವ ನೆಪದಲ್ಲಿ ರಾಸಾಯನಿಕ ಗೊಬ್ಬರಗಳ ಉಪಯೋಗ ಹೆಚ್ಚಬೇಕೆಂಬ ಪ್ರಚಾರ ನಡೆಯುತ್ತಿದೆ. ಆದರೆ ಪ್ರಪಂಚದ ಬಹಳ ದೇಶಗಳ ಅನುಭವ ನಮಗೆ ತಿಳಿಸುವುದೇನೆಂದರೆ ರಾಸಾಯನಿಕ ಗೊಬ್ಬರ ಬಳಕೆಯಿಂದ ಅಧಿಕ ಆಹಾರ ಉತ್ಪಾದನೆ ಆಗುತ್ತಿಲ್ಲ. ಅವು ನಿಜವಾಗಿ ಭೂಮಿಯ ಉತ್ಪಾದಕಶಕ್ತಿಯನ್ನು ಹೆಚ್ಚಿಸುತ್ತಿಲ್ಲ. ಆದರೆ ಅವು ಅತಿ ಶೀಘ್ರ ಸಮಯದಲ್ಲಿ ಬೆಳೆಯನ್ನು ಬೆಳೆಯಲು ಪ್ರಚೋದಕ ಶಕ್ತಿಯಾಗಿ ಕೆಲಸಮಾಡಿ ಹೆಚ್ಚಿನ ಪ್ರಮಾಣದ ಉತ್ಪಾದನೆಗೆ ಸಹಕಾರಿಯಾಗುತ್ತಿವೆ ನಿಜ. ಆದರೆ ಅದು ಭೂಮಿಯ ಫಲವತ್ತತೆಯನ್ನು ದೀರ್ಘಾವಧಿಯಲ್ಲಿ ಕಡಮೆ ಮಾಡುತ್ತಿರುವ ಅನುಭವ ಎಲ್ಲ ಕಡೆ ಕಂಡುಬರುತ್ತಿದೆ. ಅದು ಭೂಮಿಯಲ್ಲಿ ಬೆಳೆ ಬೆಳೆಯಲು ಸಹಕಾರಿಯಾದ ಎರೆಹುಳುವಿನ ನಾಶಕ್ಕೂ ಕಾರಣವಾಗುತ್ತಿದೆ. ಆದ್ದರಿಂದ ಅದರ ಉಪಯೋಗದಿಂದ ಭೂಮಿಗೆ ಲಾಭಕ್ಕಿಂತ ಹಾನಿಯೇ ಹೆಚ್ಚು” (Mahatma Gandhi in ‘India’s Food Problem’, p. 56).
ಸಹಕಾರ ಕೃಷಿ
ಆಹಾರ ಉತ್ಪಾದನೆ ಹೆಚ್ಚಿಸಲು ಗಾಂಧಿಯವರು ಕೊಡುವ ಇನ್ನೊಂದು ಪ್ರಮುಖ ಸಲಹೆ ಎಂದರೆ ‘ಸಹಕಾರ ಕೃಷಿ’ ಪದ್ಧತಿಯ ಅನುಸರಣೆ ಮಾಡುವುದು. ಅವರು ಹೇಳುತ್ತಾರೆ – “ಸಹಕಾರ ತತ್ತ್ವದ ಆಧಾರದ ಮೇಲೆ ನಿಂತಿರುವ ಸಹಕಾರ ಕೃಷಿಯನ್ನು ಅನುಸರಣೆ ಮಾಡದಿದ್ದರೆ ಕೃಷಿಯಿಂದ ನಮಗೆ ಸಂಪೂರ್ಣ ಲಾಭ ಸಿಗುವುದಿಲ್ಲ. ಕೇವಲ ಕೃಷಿಉತ್ಪಾದನೆ ಹೆಚ್ಚಿಸಲು ಅಲ್ಲದೆ ಇನ್ನಿತರ ಆರ್ಥಿಕ-ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬೇಕಾದರೆ ನಮಗಿರುವುದು ಇದೊಂದೇ ದಾರಿ” (Mahatma Gandhi in ‘India’s Food Problem’, p. 157).
ಸುಧಾರಿತ ಬೀಜಗಳ ಉಪಯೋಗ
ಕೃಷಿಯ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಸುಧಾರಿತ ಬೀಜಗಳನ್ನು ವ್ಯಾಪಕ ಪ್ರಮಾಣದಲ್ಲಿ ಬಳಸಬೇಕೆಂದು ಅವರು ಆಗ್ರಹಿಸಿದರು. ಅವರು ಹೇಳುತ್ತಾರೆ – “ಆರಿಸಿದ ಮತ್ತು ಸುಧಾರಿತ ಬೀಜಗಳ ಉಪಯೋಗ ಕೃಷಿಉತ್ಪಾದನೆ ಹೆಚ್ಚಿಸಲು ಅಗತ್ಯ. ಈ ದಿಕ್ಕಿನಲ್ಲಿ ಅದರ ಪರಿಣಾಮಕಾರಿಯಾದ ವಿತರಣೆಯ ಆವಶ್ಯಕತೆ ಇದೆ. ಸಹಕಾರ ಸಂಘಗಳು ಈ ಕೆಲಸವನ್ನು ಅತ್ಯಂತ ಉತ್ಕೃಷ್ಟಮಟ್ಟದಲ್ಲಿ ಮಾಡಲು ಸಹಕರಿಸುತ್ತವೆ” (Mahatma Gandhi in ‘India’s Food Problem’, p. 57).
ಒಂದು ಕಡೆ ಕೃಷಿ ಉತ್ಪಾದನೆ ಹೆಚ್ಚಿಸುವುದಾದರೆ ಇನ್ನೊಂದು ಕಡೆ ಉತ್ಪಾದನೆ ಆದ ಕೃಷಿಬೆಳೆಗಳನ್ನು ಪಶು, ಪಕ್ಷಿ, ವಿವಿಧ ರೀತಿಯ ಕೀಟಗಳಿಂದ ರಕ್ಷಿಸುವ ಅಗತ್ಯವೂ ಇದೆ. ನಮ್ಮೆಲ್ಲರಿಗೂ ತಿಳಿದಿರುವಂತೆ ಪ್ರತಿವರ್ಷ ಭಾರತದಲ್ಲಿ ಕೋಟ್ಯಂತರ ಮೌಲ್ಯದ ಬೆಳೆನಾಶ ಪಶು, ಪಕ್ಷಿ, ಕ್ರಿಮಿಕೀಟಗಳಿಂದ ಆಗುತ್ತಿದೆ. ಗಾಂಧಿಯವರು ಈ ರೀತಿ ಹೇಳುತ್ತಾರೆ – “ಜೀವ ತೆಗೆಯುವುದು ನನ್ನ ಚಿಂತನೆಗೆ ವಿರುದ್ಧವಾದುದು. ಆದರೆ ಮನುಷ್ಯನ ಮತ್ತು ಇತರ ಜೀವಜಂತುಗಳ ಜೀವರಕ್ಷಣೆಯ ಪ್ರಶ್ನೆ ಬಂದಾಗ ಮೊದಲನೆಯದಕ್ಕೇ ನಾನು ಆದ್ಯತೆ ಕೊಡಬೇಕಾಗುತ್ತದೆ.” ಆದರೆ ಈ ಜೀವಜಂತುಗಳು ಸಂಪೂರ್ಣ ನಾಶವಾದರೆ ಬೆಳೆಯೂ ನಾಶವಾಗುತ್ತದೆ ಎನ್ನುವ ಎಚ್ಚರಿಕೆಯ ಮಾತನ್ನೂ ಸಹ ಆಡಿದ್ದಾರೆ.
ಆಹಾರ ಮತ್ತು ಬೆಲೆನಿಯಂತ್ರಣ
ಗಾಂಧಿಯವರು ತಮ್ಮ ಜೀವಿತಾವಧಿಯಲ್ಲಿ ಭೀಕರ ಬರಗಾಲವನ್ನು ಕಂಡಿದ್ದರು. 1946ರಲ್ಲಿ ಬಂಗಾಳ, ಅಸ್ಸಾಂ ಮತ್ತು ಮದ್ರಾಸ್ ಪ್ರಾಂತಗಳಲ್ಲಿ ಆಹಾರದ ಕೊರತೆಯ ಕಾರಣ ಜನ ನರಳುತ್ತಿದ್ದುದನ್ನು ನೋಡಿ ನೊಂದರು. ಆ ಸಂದರ್ಭದಲ್ಲಿ ಸರ್ಕಾರವು ಹೊರಡಿಸಿದ ಆಹಾರಕೊರತೆಯ ಸುದ್ದಿ ಮಾರುಕಟ್ಟೆಯಲ್ಲಿ ಆಹಾರಪದಾರ್ಥಗಳ ಬೆಲೆ ಎರಡರಷ್ಟಾಗಲು ಕಾರಣವಾಯಿತು. ಆಗ ಗಾಂಧಿಯವರು – “ವ್ಯಾಪಾರೀ ಸಮುದಾಯದವರು ತಮಗೆ ಬರುವಂತಹ ಲಾಭದ ಮೋಹವನ್ನು ಬಿಡಬೇಕು. ಅವರು ಸರ್ಕಾರದ ತಪ್ಪುಗಳು ಮತ್ತು ಅಸಮರ್ಥತೆಯ ಕಾರಣದಿಂದ ಉದ್ಭವವಾದ ಈ ಸಂಕಟದ ಪರಿಸ್ಥಿತಿಗೆ ಇನ್ನಾವುದೇ ಹೊಸ ತಪ್ಪುಗಳನ್ನು ಸೇರಿಸಬಾರದು” ಎಂದು ಕಳಕಳಿಯ ಮನವಿಯನ್ನು ಮಾಡಿದರು (ಹರಿಜನ, 17-2-1946). “ನನ್ನ ಜೀವಿತಾವಧಿಯಲ್ಲಿ ಎರಡು ತಲೆಮಾರುಗಳಿಂದ ಅನೇಕ ದೇವನಿರ್ಮಿತ ಕ್ಷಾಮಗಳನ್ನು ನೋಡಿದ್ದೇನೆ. ಆದರೆ ಯಾವ ಸಂದರ್ಭದಲ್ಲೂ ಪಡಿತರಪದ್ಧತಿಯನ್ನು ಜಾರಿಗೆ ತಂದ ನೆನಪು ನನಗಿಲ್ಲ” (Ibid 17-2-1947).
ಈ ಆಹಾರನಿಯಂತ್ರಣ ಎರಡನೆ ಮಹಾಯುದ್ಧದ ಕ್ರೂರ ಪರಿಣಾಮದ ಪ್ರತೀಕ. ಯುದ್ಧದ ಸಂದರ್ಭದಲ್ಲಿ ಅನಿವಾರ್ಯವಾಗಿ ಭಾರತ ಆಹಾರವನ್ನು ರಫ್ತು ಮಾಡಬೇಕಾಯಿತು. ಬರ್ಮಾ ಮತ್ತಿತರ ದೇಶಗಳಿಂದ ಬರಬೇಕಾದ ಆಮದು ನಿಂತು ಪಡಿತರಪದ್ಧತಿ ಜಾರಿಗೆ ಬಂದಿತು. ಯುದ್ಧ ಮುಗಿಯುವ ಸಂದರ್ಭದಲ್ಲಿ ಉತ್ತಮ ಮಳೆಯಾದ ಕಾರಣ ದೇಶದಲ್ಲಿ ನಿಜವಾಗಿಯೂ ಆಹಾರದ ಕೊರತೆ ಇರಲಿಲ್ಲ. ಈ ಪರಿಸ್ಥಿತಿಯಲ್ಲಿ ದೇಶದ ಒಳಗೆ ಸಾಕಷ್ಟು ಪ್ರಮಾಣದಲ್ಲಿ ಬೇಳೆಕಾಳುಗಳು ಹಾಗೂ ಇನ್ನಿತರ ಆಹಾರಪದಾರ್ಥಗಳು ನಮ್ಮ ಹಳ್ಳಿಗಳಲ್ಲಿವೆ. ಈ ಕೃತಕ ಬೆಲೆನಿಯಂತ್ರಣದ ಕಾರಣಗಳನ್ನು ನಮ್ಮ ರೈತರು ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಆದಕಾರಣ ಅವರು ಮಾರುಕಟ್ಟೆಯ ಬೆಲೆಗಿಂತ ಕಡಮೆ ಬೆಲೆಗೆ ಆಹಾರಪದಾರ್ಥಗಳನ್ನು ಮಾರಲು ಸಿದ್ಧರಾಗಿಲ್ಲ. ಇಂತಹ ನಗ್ನ ಪರಿಸ್ಥಿತಿಯ ವಿವರ ಯಾರೂ ನೀಡಬೇಕಾಗಿಲ್ಲ. ದೇಶದಲ್ಲಿ ಆಹಾರದ ಕೊರತೆ ಇಲ್ಲ ಎಂದು ಸರ್ಕಾರಿ ಕಡತಗಳು ತೋರಿಸಬೇಕಾದುದಲ್ಲ. ಇಂತಹ ಸಂದರ್ಭದಲ್ಲಿ ಮಿತಿಮೀರಿದ ಜನಸಂಖ್ಯೆಯಿಂದ ಆಹಾರಸಮಸ್ಯೆಯ ಉದ್ಭವ ಆಗಿದೆ ಎಂದು ಹೇಳುವ ವಾದವನ್ನು ಯಾರೂ ಒಪ್ಪಲು ಸಿದ್ಧರಾಗಿಲ್ಲ” (Ibid).
ಸ್ವಾತಂತ್ರ್ಯ ಬಂದ ನಂತರ ಗಾಂಧಿಯವರು ಕೇಂದ್ರಸರ್ಕಾರಕ್ಕೆ ಆಹಾರನಿಯಂತ್ರಣವನ್ನು ಸಂಪೂರ್ಣವಾಗಿ ತೆಗೆದುಹಾಕಬೇಕೆಂದು ಮನವಿ ಮಾಡಿಕೊಂಡರು. ಅವರು ಅದಕ್ಕೆ ಕೊಡುವ ಕಾರಣವೆಂದರೆ “ಆಹಾರನಿಯಂತ್ರಣದಿಂದ ಮೋಸ, ವಂಚನೆ, ಆಹಾರವನ್ನು ಕೂಡಿಡುವ ಪ್ರವೃತ್ತಿ, ಕಾಳಸಂತೆ, ಕೃತಕ ಅಭಾವ ಸೃಷ್ಟಿ, ಭ್ರಷ್ಟಾಚಾರ ಮತ್ತು ಬೆಲೆಏರಿಕೆಗೆ ಅವಕಾಶವಾಗುತ್ತದೆ” (ಹರಿಜನ, 16-11-1947).
ಆಹಾರ ಪಡಿತರದ ಪ್ರಮಾಣವನ್ನು ಕಡಮೆ ಮಾಡುವುದರ ಮೂಲಕ ಈ ವಿಷವರ್ತುಲದ ಪರಿಧಿ ಇನ್ನೂ ವಿಸ್ತಾರವಾಯಿತು. ಪಡಿತರದ ಪ್ರಮಾಣ ಕಡಮೆ ಮಾಡಿದಷ್ಟೂ ರೈತರು ಕಾಳಸಂತೆಯಲ್ಲಿ ಬಚ್ಚಿಡುವುದು ಹೆಚ್ಚಾಯಿತು. ಈ ಕಾರಣದಿಂದಾಗಿ ಕಾಳಸಂತೆಯಲ್ಲಿ ಬೇಡಿಕೆ ಹೆಚ್ಚಿ, ಬೆಲೆಗಳು ಏರಿಕೆಯಾಗಿ ಅವರ ಲಾಭದ ಪ್ರಮಾಣ ಹೆಚ್ಚಾಗತೊಡಗಿತು. ಲಾಭದ ಆಸೆಗಾಗಿ ಇನ್ನೂ ಹೆಚ್ಚು ಕೂಡಿಡುವುದರಿಂದ ಸರ್ಕಾರಕ್ಕೆ ನಿಜವಾದ ಉತ್ಪಾದನೆಯ ಲೆಖ್ಖ ಸಿಗುತ್ತಿಲ್ಲ. ಕಡಮೆ ಆಹಾರ ಉತ್ಪಾದನೆಯ ಸಂಖ್ಯೆಯಿಂದ ಪಡಿತರದ ಪ್ರಮಾಣ ಇನ್ನೂ ಕಡಮೆ ಮಾಡಲು ದಾರಿಯಾಗುವುದು (Ibid. 23-11-1947).
1947ರ ಡಿಸೆಂಬರ್ನಲ್ಲಿ ಆಹಾರನಿಯಂತ್ರಣ ಮತ್ತು ಪಡಿತರಪದ್ಧತಿಯನ್ನು ಸರ್ಕಾರ ರದ್ದುಮಾಡಿತು. ಸರ್ಕಾರದ ಈ ಕ್ರಮದಿಂದ ಆಹಾರದ ಬೆಲೆಯಲ್ಲಿನ ಏರಿಳಿತಗಳು ಕಡಮೆಯಾಗಿ ಬೆಲೆಗಳು ಸ್ಥಿರವಾಗತೊಡಗಿದವು. ಈ ರೀತಿ ಆಹಾರದ ಬೆಲೆ ಕಡಮೆ ಆಗುವುದರಿಂದ ಉತ್ಪಾದನೆ ಕಡಮೆ ಆಗುವುದಿಲ್ಲವೆ? – ಎಂಬ ಪ್ರಶ್ನೆಗೆ ಗಾಂಧಿಯವರು ಈ ರೀತಿ ಉತ್ತರ ನೀಡುತ್ತಾರೆ – “ನನ್ನ ದೃಷ್ಟಿಯಲ್ಲಿ ಈಗಿರುವ ಬೆಲೆಗಿಂತ ಆಹಾರವಸ್ತುಗಳ ಬೆಲೆ ಇನ್ನೂ ಕಡಮೆ ಆಗಬೇಕು. ನಾನೂ ಒಬ್ಬ ರೈತ. ಆದಕಾರಣ ಅನುಭೋಗಿಯು ಮಾರುಕಟ್ಟೆಯಲ್ಲಿ ಕೊಡುವ ಒಂದು ಸಣ್ಣಭಾಗ ಮಾತ್ರ ಆಹಾರವನ್ನು ಬೆಳೆದ ರೈತನ ಕೈಸೇರುತ್ತದೆ ಎಂದು ನನಗೆ ತಿಳಿದಿದೆ. ಇದು ಆಹಾರ ಬೆಳೆಯುವ ರೈತನ ಸಮಸ್ಯೆಯಲ್ಲ. ಬದಲಿಗೆ ರೈತ ಮತ್ತು ಅನುಭೋಗಿಗಳ ನಡುವೆ ಇರುವ ದಳ್ಳಾಳಿಗಳಿಂದ ಉದ್ಭವವಾದ ಸಮಸ್ಯೆ” (Ibid. 6-10-1946).
ಆಹಾರ ಆಮದಿಗೆ ವಿರೋಧ
ಆಹಾರಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಬೇರೆ ದೇಶಗಳಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕೆನ್ನುವ ವಾದವನ್ನು ಅವರು ವಿರೋಧಿಸಿದರು. ಆಹಾರ ಆಮದಿನ ವಿರೋಧಕ್ಕೆ ಈ ಕೆಳಕಂಡ ಕಾರಣಗಳನ್ನು ಅವರು ಕೊಟ್ಟಿದ್ದಾರೆ –
1. ಹೊರದೇಶಗಳಿಂದ ಆಹಾರ ಆಮದು ಮಾಡಿಕೊಳ್ಳುವುದರಿಂದ ನಾವು ಅವರನ್ನು ಹೆಚ್ಚು ಅವಲಂಬಿಸಬೇಕಾಗುತ್ತದೆ. ಇದು ಅಪಾಯಕಾರಿ ಪರಿಸ್ಥಿತಿಯನ್ನು ನಿರ್ಮಿಸುತ್ತದೆ.
2. ಆಹಾರದ ಭಿಕ್ಷೆ ಬೇಡುವುದರಿಂದ ನಮ್ಮ ಆತ್ಮಸ್ಥೈರ್ಯ ಕುಸಿಯುತ್ತದೆ.
3. ಆಹಾರದ ಸ್ವಾವಲಂಬನೆಯ ಕಡೆಗೆ ನಮ್ಮ ಗಮನ ಕಡಮೆಯಾಗುತ್ತದೆ.
4. ಬೇರೆ ದೇಶಗಳಿಂದ ಆಹಾರವನ್ನು ಆಮದುಮಾಡಿಕೊಂಡರೂ ಅದರ ವಿತರಣೆಗಾಗಿ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಸಮಸ್ಯೆ ಬಗೆಹರಿಯುವುದಿಲ್ಲ.
5. ಆಹಾರಪದಾರ್ಥಗಳ ಸಾಗಣೆಯ ವ್ಯವಸ್ಥೆಯಲ್ಲಿ ಯಾವ ರೀತಿಯ ಸುಧಾರಣೆಗಳೂ ಆಗದಿದ್ದರೆ ಆಹಾರಸಮಸ್ಯೆ ಬಗೆಹರಿಯುವುದಿಲ್ಲ.
6. ಈ ಮೇಲ್ಕಂಡ ವಿವರಗಳನ್ನು ನಾವು ‘ಹರಿಜನ’ ಪತ್ರಿಕೆಯ 24-2-1946, 19-10-1947, 7-4-1946 ಮತ್ತು 3-3-1946ರ ಸಂಚಿಕೆಗಳಲ್ಲಿ ಪಡೆಯಬಹುದು.
ಭಾರತದ ಜನಸಂಖ್ಯಾ ಸಮಸ್ಯೆ
ಜನಸಂಖ್ಯೆಯ ಹೆಚ್ಚಳವೂ ಒಂದು ಸಮಸ್ಯೆ ಎನ್ನುವುದನ್ನು ಗಾಂಧಿಯವರು ಒಪ್ಪಿಕೊಂಡಿದ್ದರು. ಜನಸಂಖ್ಯೆಯ ಕಾರಣದಿಂದಾಗಿ ಭಾರತ ಬಡತನ, ನಿರುದ್ಯೋಗ, ಆಹಾರ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಅವರು ಮನಗಂಡಿದ್ದರು. ಸಮೃದ್ಧ ಭಾರತಕ್ಕಾಗಿ ಒಂದು ಕಡೆ ನಾವು ರಾಷ್ಟ್ರೀಯ ಉತ್ಪಾದನೆಯನ್ನು ಹೆಚ್ಚಿಸಬೇಕು ಮತ್ತು ಇನ್ನೊಂದು ಕಡೆ ಜನಸಂಖ್ಯೆಯ ಬೆಳವಣಿಗೆಯ ಮೇಲೂ ಕಡಿವಾಣ ಹಾಕಬೇಕು ಎಂದು ಅವರು ಹೇಳುತ್ತಿದ್ದರು.
ಆಹಾರಪೂರೈಕೆ ಮತ್ತು ಜನಸಂಖ್ಯಾ ಬೆಳವಣಿಗೆಯ ನಡುವಣ ಸಮತೋಲನ
ಇಂಗ್ಲೆಂಡಿನ ಅರ್ಥಶಾಸ್ತ್ರಜ್ಞ ಥಾಮಸ್ ರಾಬರ್ಟ್ ಮಾಲ್ಥಸ್ (T.R. Malthus 1766-1834) 1798ರಲ್ಲಿ ‘ಜನಸಂಖ್ಯಾ ತತ್ತ್ವಗಳು’ ಎಂಬ ಪ್ರಸಿದ್ಧ ಪ್ರಬಂಧವನ್ನು ಮಂಡಿಸಿದ್ದನು. ಮಾಲ್ಥಸ್ನ ಜನಸಂಖ್ಯಾ ಸಿದ್ಧಾಂತವನ್ನು ಜನಸಂಖ್ಯೆ ಅಧ್ಯಯನದ ಪ್ರಮುಖ, ಜನಪ್ರಿಯ ಹಾಗೂ ಆದ್ಯ ಸಿದ್ಧಾಂತ ಎಂದು ಪರಿಗಣಿಸಲಾಗಿದೆ. ಈ ಸಿದ್ಧಾಂತವು ಆಹಾರಪೂರೈಕೆ ಮತ್ತು ಜನಸಂಖ್ಯೆಯ ಬೆಳವಣಿಗೆಯ ನಡುವಣ ಸಂಬಂಧವನ್ನು ವಿವರಿಸಲು ಯತ್ನಿಸುತ್ತದೆ. ಅವನ ಪ್ರಕಾರ ಆಹಾರಪೂರೈಕೆ ಅಂಕಗಣಿತೀಯ ಶ್ರೇಣಿಯಲ್ಲಿ (Arithmetical progession) ಹೆಚ್ಚಾಗುತ್ತದೆ. ಅಂದರೆ 1,2,3,4,5,6 ಇತ್ಯಾದಿ. ಆಹಾರದ ಪೂರೈಕೆ ಬಹಳ ನಿಧಾನವಾಗಿ ಹೆಚ್ಚುತ್ತದೆ. ಕಾರಣ ಹಲವಾರು. ಭೂಮಿಯ ಪೂರೈಕೆ
ಮಿತವಾಗಿದೆ. ಆಹಾರದ ಉತ್ಪನ್ನದ ಭೂಮಿಯ ಶಕ್ತಿ ಮಿತವಾಗಿದೆ. ಇಳಿಮುಖ ಸೀಮಾಂತ ಪ್ರತಿಫಲ ನಿಯಮದಿಂದ ಉತ್ಪನ್ನ ಕಡಮೆಯಾಗುತ್ತದೆ. ಆದರೆ ಜನಸಂಖ್ಯೆ ರೇಖಾಗಣಿತೀಯ ಶ್ರೇಣಿಯಲ್ಲಿ (Geometrical progession) ಹೆಚ್ಚುತ್ತದೆ. ಅಂದರೆ 1,2,4,8,16,32 ಇತ್ಯಾದಿ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಅವನ ಅಭಿಪ್ರಾಯದಲ್ಲಿ ಮಾನವನ ಸಂತಾನಶಕ್ತಿಗೆ ಮಿತಿ ಇಲ್ಲ. ಮಾನವನ ಪ್ರತ್ಯುತ್ಪಾದನಾಶಕ್ತಿ ಅಪಾರವಾದುದು. ಆದರೆ ಭೂಮಿಯ ಆಹಾರಉತ್ಪಾದನಾ ಶಕ್ತಿ ಮಿತವಾದುದು. ಜನಸಂಖ್ಯೆ ಮೇಲೆ ಹೇಳಿದ ಪ್ರಮಾಣದಲ್ಲಿ ಹೆಚ್ಚಿದರೆ ದೇಶದ ಜನಸಂಖ್ಯೆಯೂ ಪ್ರತಿ 25 ವರ್ಷಗಳಲ್ಲಿ ದ್ವಿಗುಣವಾಗುತ್ತದೆ ಎಂದನು. ಇದು ಜನಸಂಖ್ಯೆ ಮತ್ತು ಆಹಾರಪೂರೈಕೆಗಳ ನಡುವೆ ಅಸಮತೋಲನವನ್ನು ಉಂಟುಮಾಡುತ್ತದೆ.
ಇದರ ಜೊತೆಗೆ ಅವನು ಒಂದು ಎಚ್ಚರಿಕೆಯನ್ನು ನೀಡಿದ್ದಾನೆ. ಅದೆಂದರೆ “ಪ್ರಕೃತಿಯ ಮೇಜು ಸೀಮಿತ ಅತಿಥಿಗಳಿಗೆ ಮಾತ್ರ ಮೀಸಲಾಗಿರುತ್ತದೆ. ಯಾರು ಆಹ್ವಾನವಿಲ್ಲದೆ ಬರುವರೋ ಅವರು ಉಪವಾಸವಿರಬೇಕಾಗುತ್ತದೆ.” ಇವೆರಡರ ನಡುವಿನ ಅಸಮತೋಲನವನ್ನು ಸರಿಪಡಿಸಲು ಮಾಲ್ಥಸ್ ಬ್ರಹ್ಮಚರ್ಯವನ್ನು ಪಾಲಿಸುವುದು, ವಿಳಂಬವಾಗಿ ಮದುವೆ ಆಗುವುದು, ಲೈಂಗಿಕ ಸ್ವನಿಯಂತ್ರಣ ಮಾಡುವುದು ಇತ್ಯಾದಿ ನೈತಿಕ ಮುಂಜಾಗರೂಕತೆಯ ಕ್ರಮಗಳನ್ನು (Preventive checks) ಕೈಗೊಳ್ಳಬೇಕು ಎಂದು ಹೇಳುತ್ತಾನೆ. (ಅವನು ಆಧುನಿಕ ಕುಟುಂಬಯೋಜನಾ ಕ್ರಮಗಳ ಬಗ್ಗೆ ಯಾವ ಪ್ರಸ್ತಾವವನ್ನೂ ಮಾಡಿಲ್ಲ.) ಈ ರೀತಿಯ ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಳ್ಳದೆಹೋದರೆ ಆಗ ನೈಸರ್ಗಿಕ ಪ್ರತಿಬಂಧಕಗಳಾದ (Natural checks) ಸಾಂಕ್ರಾಮಿಕ ರೋಗಗಳು, ಕ್ಷಾಮಗಳು, ಪ್ರವಾಹಗಳು, ಚಂಡಮಾರುತಗಳು, ಯುದ್ಧಗಳು ಇತ್ಯಾದಿಗಳು ಸ್ವತಂತ್ರವಾಗಿ ಕಾರ್ಯರೂಪಕ್ಕೆ ಬರುತ್ತವೆ. ಈ ನೈಸರ್ಗಿಕ ಹಾಗೂ ಮಾನವನಿರ್ಮಿತ ವಿಪತ್ತುಗಳು ಸಾಕಷ್ಟು ಸಂಕಷ್ಟಗಳನ್ನು ಒಡ್ಡುತ್ತವೆ. ಅಲ್ಲದೆ ಅಪಾರ ಪ್ರಾಣಹಾನಿ ಮಾಡುತ್ತವೆ. ಇದು ಆಹಾರದ ಉತ್ಪಾದನೆ ಮತ್ತು ಜನಸಂಖ್ಯೆಯ ನಡುವೆ ಮತ್ತೆ ಸಮತೋಲನ ಉಂಟುಮಾಡುತ್ತದೆ ಎಂದು ಮಾಲ್ಥಸ್ ಹೇಳುತ್ತಾನೆ.
ಮಾಲ್ಥಸ್ ಪ್ರತಿಪಾದಿಸಿದ ಜನಸಂಖ್ಯಾ ತತ್ತ್ವ ಪ್ರಪಂಚದ ಇತರ ದೇಶಗಳಿಗೆ ಅನ್ವಯ ಆಗದಿದ್ದರೂ ಭಾರತದ ಮಟ್ಟಿಗಂತೂ ನಿಶ್ಚಿತವಾಗಿ ಅನ್ವಯವಾಗುತ್ತದೆ. ಜೊತೆಗೆ ಆಹಾರದ ಉತ್ಪಾದನೆ ಜನಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಆಗಿಲ್ಲ ಎನ್ನುವುದು ನಿಜ. ಹಾಗಾಗಿ ಜನಸಂಖ್ಯಾ ಬೆಳವಣಿಗೆ ಒಂದು ಬಹಳ ಪ್ರಮುಖ ಸಮಸ್ಯೆಯಾಗಿ ಭಾರತವನ್ನು ಕಾಡುತ್ತಿದೆ. ಆದರೆ ಕೆಲವು ತಜ್ಞರು ಭಾರತದಲ್ಲಿ ಇನ್ನೂ ಮಿತಿಮೀರಿ ಜನಸಂಖ್ಯೆ ಉಲ್ಬಣಿಸಿಲ್ಲ ಎನ್ನುತ್ತಾರೆ.
ಆಹಾರ ಮತ್ತು ಜನಸಂಖ್ಯೆಯ ಸಮಸ್ಯೆಗಳ ಬಗೆಗೆ ಗಾಂಧಿಯವರ ದೃಷ್ಟಿಕೋನ
ನಮ್ಮ ಆಹಾರ ಮತ್ತು ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಗಾಂಧಿಯವರ ದೃಷ್ಟಿಕೋನವೇ ಬೇರೆ. ಅದನ್ನು ತಿಳಿಯುವ ಪ್ರಯತ್ನ ಮಾಡೋಣ. ಪ್ರಕೃತಿಯ ಮೂಲಭೂತ ನಿಯಮದ ಪ್ರಕಾರ ಪ್ರಕೃತಿಯು ಪ್ರತಿಯೊಬ್ಬ ಮನುಷ್ಯನಿಗೂ ತನ್ನ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಬೇಕಾದಷ್ಟು ಆಹಾರವನ್ನು ಒದಗಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿ ತನಗೆ ಅಗತ್ಯವಾಗಿ ಬೇಕಾದಷ್ಟನ್ನು ಮಾತ್ರ (ಹೆಚ್ಚಿನ ಪ್ರಮಾಣದಲ್ಲಿ ಕೂಡಿಡದೆ) ಸ್ವೀಕರಿಸಿದರೆ ಆಗ ಈ ಪ್ರಪಂಚದಲ್ಲಿ ಯಾವ ವ್ಯಕ್ತಿಯೂ ಹಸಿವಿನಿಂದ ಸಾಯುವುದಿಲ್ಲ. ಯಾರು ತನ್ನ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪಡೆಯುವ ಪ್ರಯತ್ನ ಪಡುತ್ತಾನೋ ಅವನು ಕಳ್ಳತನ ಮಾಡಿದ ಹಾಗೆ ಆಗುತ್ತದೆ. ಅಗತ್ಯಕ್ಕಿಂತ ಹೆಚ್ಚಿನದನ್ನು ಪಡೆದುಕೊಳ್ಳುವ ಪ್ರಯತ್ನ ಮಾಡಿದರೆ ಅದು ಪ್ರಕೃತಿಯ ನಿಯಮದ ವಿರುದ್ಧ ಹೋದಹಾಗೆ. ಪಶುಪಕ್ಷಿಗಳ ಹಾಗೆ ನಾಳೆಯ ಬಗ್ಗೆ ಯೋಚಿಸದೆ ಪ್ರತಿಯೊಬ್ಬನೂ ಇಂದಿನ ಆವಶ್ಯಕತೆಯ ಬಗೆಗಷ್ಟೆ ಚಿಂತನೆ ಮಾಡುವುದು ಅಗತ್ಯ. ನಾನು ದೇವರ ರಾಜ್ಯದಲ್ಲಿ ಬದುಕುತ್ತಿದ್ದೇನೆ ಎಂಬ ನಂಬಿಕೆ ಇದ್ದರೆ ಅವನಿಗೆ ಎಲ್ಲವೂ ಸಿಗುವುದು.
ಪ್ರತಿಯೊಬ್ಬ ಮನುಷ್ಯನು ತಾನು ದಿನಪೂರ್ತಿ ಸಂಪೂರ್ಣವಾಗಿ ಉಪಯೋಗ ಮಾಡುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಸಂಪತ್ತನ್ನು ಸಂಗ್ರಹಿಸಬಾರದು. ಸಾಕಷ್ಟು ಪ್ರಮಾಣದ ಸಂಪತ್ತು ಎಂದರೆ ಅವನಿಗೆ ಅಗತ್ಯವಿರುವಷ್ಟು ಆಹಾರ, ಪಾನೀಯ, ವಸ್ತ್ರ ಇತ್ಯಾದಿಗಳನ್ನು ಕೊಂಡು ಉಪಯೋಗ ಮಾಡುವಂತಿರಬೇಕು. ಸಾಕಷ್ಟು ಶಿಕ್ಷಣ, ತರಬೇತಿ ಪಡೆದು ಶರೀರ, ಮನಸ್ಸು, ಬುದ್ಧಿಯನ್ನು ಸ್ವಸ್ಥವಾಗಿ ಇಟ್ಟುಕೊಳ್ಳುವ ಹಾಗೆ ಇರಬೇಕು. ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತು ಗಳಿಸುತ್ತಿದ್ದರೆ ‘ಹೆಚ್ಚುವರಿ’ ಸಂಪತ್ತನ್ನು ತನ್ನ ಸ್ವಂತಕ್ಕೆ ಉಪಯೋಗಿಸದೆ ಅದನ್ನು ಧರ್ಮದರ್ಶಿಯಾಗಿ ಬಡವರ ಕಲ್ಯಾಣಕ್ಕಾಗಿ ಉಪಯೋಗಿಸಬೇಕು ಎಂದು ಗಾಂಧಿ ಹೇಳಿದರು.
ಇದಕ್ಕೆ ತದ್ವಿರುದ್ಧವಾಗಿ ಅನೇಕ ತಜ್ಞರ ವಾದ ಹೀಗಿದೆ: ಜಗತ್ತಿನ ಅನೇಕ ದೇಶಗಳಲ್ಲಿ ಜನಸಂಖ್ಯೆ ಅತ್ಯಂತ ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಹೆಚ್ಚಿನ ಪ್ರಮಾಣದ ಸುಖ-ಸಾಧನಗಳನ್ನು ಒದಗಿಸುವ ಸಲುವಾಗಿ ‘ಕುಟುಂಬಯೋಜನೆ’ಯನ್ನು ಅನುಸರಿಸಬೇಕು. ಕೃತಕಮಾರ್ಗಗಳ ಮೂಲಕವಾಗಿ ಜನನನಿಯಂತ್ರಣ ಮಾಡಬೇಕು. ಆಧುನಿಕ ತಂತ್ರಜ್ಞಾನದ ವಿಸ್ತೃತ ಬಳಕೆಯಿಂದ ಆಹಾರದ ಉತ್ಪಾದನೆಯನ್ನು ಹೆಚ್ಚಿಸಬೇಕು. ಆಗ ಜನಸಂಖ್ಯೆ ಮತ್ತು ಆಹಾರಉತ್ಪಾದನೆಯಲ್ಲಿ ಸಮತೋಲನ ಸಾಧಿಸಬಹುದು.
ಗಾಂಧಿಯವರು ಈ ವಾದವನ್ನು ಒಪ್ಪದೆ ಈ ರೀತಿ ಹೇಳುತ್ತಾರೆ – “ನಾವು ಕಣ್ಣುಮುಚ್ಚಿಕೊಂಡು ಪಾಶ್ಚಾತ್ಯರನ್ನು ಅನುಕರಣೆ ಮಾಡಲಾಗುವುದಿಲ್ಲ. ಪಾಶ್ಚಾತ್ಯರು ಒಂದು ಕಾರ್ಯಕ್ಕೆ ಪರಿಹಾರವಾಗಿ ಇನ್ನೊಂದು ಪರ್ಯಾಯವನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ.
ಆದರೆ ನಮ್ಮ ಬಳಿ ಆ ರೀತಿಯ ಪರ್ಯಾಯ ಪರಿಹಾರಗಳಿಲ್ಲ. ಉದಾಹರಣೆಗೆ ಜನನನಿಯಂತ್ರಣವನ್ನೇ ತೆಗೆದುಕೊಳ್ಳಿ. ಅದು ಅಲ್ಲಿ ಸಫಲವಾಗಬಹುದು. ಆದರೆ ಪಾಶ್ಚಾತ್ಯರು ಅನುಸರಿಸುತ್ತಿರುವ ಕ್ರಮಗಳನ್ನು ನಾವು ಅನುಸರಿಸಲು ಪ್ರಾರಂಭಿಸಿದರೆ ಬರುವ 10 ವರ್ಷಗಳಲ್ಲಿ ನಮ್ಮ ದೇಶದಲ್ಲಿ ನಪುಂಸಕರ ನಡುವೆ ಪಂದ್ಯವೇ ನಡೆಯುತ್ತದೆ” ಎಂದರು (M.K. Gandhi to Students, p.231).
ಗಾಂಧಿಯವರ ಕಲ್ಪನೆಯಂತೆ ಸರಳ ಹಾಗೂ ಸಂತೃಪ್ತ ಜೀವನ ನಡೆಸಲು ಜನರು ತಮ್ಮ ಶಾರೀರಿಕ ಶ್ರಮವನ್ನು ಕೇವಲ ದಿನನಿತ್ಯದ ಅನ್ನಸಂಪಾದನೆಗೆ ಉಪಯೋಗಿಸಿದ್ದೇ ಆದರೆ ಆಗ ಭಾರತದಲ್ಲಿ ಮಿತಿಮೀರಿದ ಜನಸಂಖ್ಯೆಯ ಸಮಸ್ಯೆಯೇ ಇರುವುದಿಲ್ಲ. ಜನಗಳಿಗೆ ಅನ್ನಕಾಯಕವು ಜೀವನದ ನಿಯಮವಾಗಬೇಕು. ಇದರ ಅರ್ಥವೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅನ್ನ ವಸ್ತ್ರವನ್ನು ಗಳಿಸಲು ಶಾರೀರಿಕವಾಗಿ ಶ್ರಮಪಡಬೇಕು. ಅವನು ಈ ಮೌಲ್ಯವನ್ನು ಇತರರಿಗೆ ಮನವರಿಕೆಮಾಡಲು ಶಕ್ತನಾದರೆ ಆಗ ದೇಶದಲ್ಲಿ ಅನ್ನ ವಸ್ತ್ರದ ಸಮಸ್ಯೆಯೇ ಇರುವುದಿಲ್ಲ.
ಗಾಂಧಿಯವರು ಈ ಆದರ್ಶವನ್ನು ಕಾರ್ಯಗತಮಾಡಲು ತಮ್ಮ ಜೀವನವಿಡೀ ಶ್ರಮಿಸಿದರು. ಅವರು ಹೇಳುತ್ತಾರೆ – “ನನಗೆ ತಿಳಿದಿದೆ: ಇದು ಕಾರ್ಯಗತವಾಗುವ ಆದರ್ಶವಲ್ಲ. ಹಾಗೆಂದು ನಾವು ಕೈಕಟ್ಟಿ ಸುಮ್ಮನೆ ಕುಳಿತಿರಲೂ ಸಾಧ್ಯವಿಲ್ಲ. ಅನ್ನಕಾಯಕನಿಯಮದ ಸಂಪೂರ್ಣ ಉದ್ದೇಶವನ್ನು ಪೂರ್ತಿಮಾಡಲು ಸಾಧ್ಯವಾಗದಿದ್ದರೂ ನಮ್ಮ ದಿನನಿತ್ಯದ ಅನ್ನಸಂಪಾದನೆಗೆ ಸಾಕಷ್ಟು ಶಾರೀರಿಕಶ್ರಮವನ್ನು ಹಾಕಿದರೆ ಆ ಗುರಿಯನ್ನು ಮುಟ್ಟುವ ದಾರಿಯಲ್ಲಿ ಬಹಳ ದೂರ ಪ್ರಯಾಣ ಮಾಡಿದ ಹಾಗೆ ಆಗುತ್ತದೆ” ಎಂದರು (N.K. Bose , Seletions from Gandhi, Sec. 199).
ಗಾಂಧಿಯವರು ಸ್ತ್ರೀ-ಪುರುಷರ ಲೈಂಗಿಕಕ್ರಿಯೆ ಕೇವಲ ಸಂತಾನ ಅಭಿವೃದ್ಧಿಗೆ ಸೀಮಿತವಾಗಿದೆ ಎಂದು ನಂಬಿರಲಿಲ್ಲ. ಬದಲಿಗೆ ಲೈಂಗಿಕಸುಖದ ಆಸೆಯೇ ಬಹಳ ದಂಪತಿಗಳಲ್ಲಿ ಇದೆ ಎಂಬುದರ ಅರಿವು ಅವರಿಗಿತ್ತು. ಅವರ ಅಭಿಪ್ರಾಯದಲ್ಲಿ ವಿವಾಹದ ಉದ್ದೇಶ ಕೇವಲ ಸಂತಾನ ಪಡೆಯಲು ಮಾತ್ರವಲ್ಲ ಎಂಬ ಅರಿವು ಮತ್ತು ಉದ್ದೇಶವನ್ನು ಪ್ರತಿ ದಂಪತಿಗಳೂ ಅರ್ಥಮಾಡಿಕೊಂಡಾಗ ಮಾತ್ರ ಜನಸಂಖ್ಯಾ ಸಮಸ್ಯೆಯನ್ನು ಬಗೆಹರಿಸಬಹುದು ಎಂಬುದಾಗಿತ್ತು. ಆದಕಾರಣ ಅವರು ಜನನನಿಯಂತ್ರಣಕ್ಕಾಗಿ ಮಾತ್ರ ಗರ್ಭನಿರೋಧಕಗಳನ್ನು ಉಪಯೋಗಿಸುವುದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಸಾಲ ತೆಗೆದುಕೊಂಡವನು ಅದನ್ನು ಹಿಂದಿರುಗಿಸಿ ತನ್ನ ಉಪಕಾರದ ಹಂಗನ್ನು ತೀರಿಸುವಂತೆ ಸ್ತ್ರೀ ಪುರುಷರು ವಿವಾಹದಿಂದ ತಮ್ಮ ಲೈಂಗಿಕ ಆಸಕ್ತಿಯನ್ನು ತೀರಿಸಿಕೊಳ್ಳುವುದು ಸರಿಯಲ್ಲ ಎಂದರು.
ಕುಟುಂಬಯೋಜನೆಯನ್ನು ಸಮರ್ಥನೆ ಮಾಡುವವರ ವಾದ ಹೀಗಿದೆ: ಇಂದು ಸ್ತ್ರೀ ಪುರುಷರ ಲೈಂಗಿಕಕ್ರಿಯೆ ಸಂತಾನಾಭಿವೃದ್ಧಿಯ ಉದ್ದೇಶದಿಂದ ಬೇರ್ಪಟ್ಟಿದೆ. ವಿವಾಹದ ನಂತರ ಸಹಜ ಲೈಂಗಿಕ ಸಂತೋಷ ಪಡೆಯದಿದ್ದರೆ ಅವರು ದಡ್ಡರಾಗುತ್ತಾರೆ. ಸಂತಾನನಿಯಂತ್ರಣಕ್ಕೆ ಅವರು ಗರ್ಭನಿರೋಧಕಗಳನ್ನು ಬಳಕೆ ಮಾಡುವುದರಲ್ಲಿ ತಪ್ಪೇನಿಲ್ಲ. ಗರ್ಭಧಾರಣೆ ಒಂದು ಆಕಸ್ಮಿಕ; ಅದನ್ನು ಸಂಬಂಧಪಟ್ಟ ದಂಪತಿಗಳು ತಮಗೆ ಇಷ್ಟವಿಲ್ಲದಿದ್ದರೆ ತಡೆಹಿಡಿಯಬಹುದು. ಗಾಂಧಿಯವರು ಈ ವಾದವನ್ನು ಅತ್ಯಂತ ‘ಅನರ್ಥಕಾರಿ’ ಸಿದ್ಧಾಂತ ಎಂದು ಎಚ್ಚರಿಸುತ್ತಾರೆ. ಭಾರತದ ಮಧ್ಯಮವರ್ಗದ ಪುರುಷರು ಪ್ರತ್ಯುತ್ಪಾದನಾ ಕ್ರಿಯೆಯ ದುರುಪಯೋಗದಿಂದ ಬಲಹೀನರಾಗುತ್ತಿದ್ದಾರೆ ಎಂದು ಹೇಳಿದರು (R.K. Prabhu and U.R. Rao, The Mind of Mahatma Gandhi, p.126).
ಇಂದು ವಿವಾಹದ ಪಾವಿತ್ರ್ಯ ಹೊರಟುಹೋಗುತ್ತಿದೆ. ದಂಪತಿಗಳು ಲೈಂಗಿಕಕ್ರಿಯೆಯ ಸಂತೋಷದ ಪರಿಣಾಮವನ್ನು ಅರಿಯದೆ ಕೇವಲ ಲೈಂಗಿಕಸುಖವನ್ನು ಪಶುಗಳಂತೆ ಪಡೆಯುವುದಾದರೆ ವಿವಾಹ ತನ್ನ ಪಾವಿತ್ರ್ಯವನ್ನು ಕಳೆದುಕೊಳ್ಳುತ್ತದೆ ಎಂದು ಮನನೊಂದು ಗಾಂಧಿಯವರು ನುಡಿಯುತ್ತಾರೆ (Ibid. p. 239).
ಗಾಂಧಿಯವರು ಜನನನಿಯಂತ್ರಣವು ಕೃತಕ ಗರ್ಭನಿರೋಧಕಗಳಿಂದ ಅಲ್ಲದೆ ಸ್ವನಿಯಂತ್ರಣ ಅಂದರೆ ಬ್ರಹ್ಮಚರ್ಯೆಯ ಪಾಲನೆಯ ಮೂಲಕ ಆಗಬೇಕೆಂದು ಆಶಿಸಿದ್ದರು. “ಜನನನಿಯಂತ್ರಣದ ಬಗ್ಗೆ ಎರಡು ಮಾತಿಲ್ಲ. ನಮಗೆ ತಿಳಿದಂತೆ ಅದು ಅನೇಕ ಶತಮಾನಗಳಿಂದ ಬ್ರಹ್ಮಚರ್ಯೆಯ ಮೂಲಕವೇ ಆಗುತ್ತಿತ್ತು. ಇದನ್ನು ‘ಋಜುಮಾರ್ಗ ಬಿಟ್ಟು ಹೋಗದಂತಹ ಕ್ರಮ’ ಎಂದು ಪರಿಗಣಿಸಲಾಗಿದೆ. ಜನನ ನಿಯಂತ್ರಣಕ್ಕೆ ಕೃತಕ ಮಾರ್ಗಗಳ ಅನುಸರಣೆ ಮಾಡುವುದನ್ನು ಬಿಟ್ಟು, ಬ್ರಹ್ಮಚರ್ಯೆಯನ್ನು ಹೇಗೆ, ಯಾವ ರೀತಿಯಲ್ಲಿ ಅನುಸರಿಸಿದರೆ ಜನನ ನಿಯಂತ್ರಣ ಮಾಡಬಹುದು ಎಂಬುದನ್ನು ವೈದ್ಯಕೀಯ ವೃತ್ತಿಯಲ್ಲಿ ಶ್ರಮಿಸುತ್ತಿರುವವರು ಕಂಡುಹಿಡಿದರೆ ಆಗ ಮನುಕುಲ ಅವರಿಗೆ ಕೃತಜ್ಞವಾಗಿರುತ್ತದೆ” ಎಂದು ಸ್ಪಷ್ಟವಾಗಿ ನುಡಿಯುತ್ತಾರೆ
“ಗಾಂಧಿಯವರು ವಿವಾಹವನ್ನು ಜೀವನದಲ್ಲಿ ಒಂದು ಪವಿತ್ರವಾದ ನಂಬಿಕೆ ಎಂದು ಪರಿಗಣಿಸಿದ್ದಾರೆ (R.K. Prabhu and U.R. Rao, The Mind of Mahatma Gandhi, p.126 and Y.I. 12-3-1925). ಗಂಡ-ಹೆಂಡತಿಯರ ನಡುವಿನ ಸಂಬಂಧ ಮನುಕುಲದ ಮುಂದುವರಿಕೆಯ ಉದ್ದೇಶವನ್ನು ಹೊಂದಿದೆ. ಕೇವಲ ಲೈಂಗಿಕಸುಖ ಮಾತ್ರ ವಿವಾಹದ ಉದ್ದೇಶವಲ್ಲ” (ಯಂಗ್ ಇಂಡಿಯಾ, 12-3-1925).
ಜನನನಿಯಂತ್ರಣದಲ್ಲಿ ಗಾಂಧಿಯವರು ನೈತಿಕ ಸಂಯಮದ ಬಳಕೆಗೆ ಒತ್ತುನೀಡಿದ್ದರು. “ನೈತಿಕ ನಿಯಮಗಳ ಪಾಲನೆ ಮಾಡಿದಾಗ ನಮಗೆ ನೈತಿಕ ಪರಿಣಾಮಗಳು ದೊರೆಯುವವು; ಬೇರೆ ಎಲ್ಲ ರೀತಿಯ ಸಂಯಮಗಳು ಈ ಉದ್ದೇಶವನ್ನು ಪೂರೈಸಲು ವಿಫಲವಾಗುತ್ತವೆ (Ibid).
ನೈತಿಕ ಸಂಯಮದ ಮಹತ್ತ್ವವನ್ನು ಜನರಿಗೆ ಮನವರಿಕೆ ಮಾಡಲು ಲೈಂಗಿಕಶಿಕ್ಷಣದ ಅಗತ್ಯವಿದೆ ಎಂದು ಗಾಂಧಿಯವರು ಹೇಳುತ್ತಾರೆ. “ಪ್ರಾಣಿಗಳ ರೀತಿಯಲ್ಲಿ ಕೇಡಿಲ್ಲದ, ಪಾಪವಲ್ಲದ ವಿಷಯಲೋಲುಪತೆಯೇ ಮನುಷ್ಯನ ಉದ್ದೇಶವಾಗುವುದಾದರೆ ಅದನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ. ಬದಲಿಗೆ ಅಂತಹ ವಿಷಯಲೋಲುಪತೆ ನಿಜವಾಗಿಯೂ ಹಿಂಸಾತ್ಮಕ, ಪಾಪಕರ ಮತ್ತು ಅನಾವಶ್ಯಕ. ಅದನ್ನು ನಾವು ಮನಸ್ಸುಮಾಡಿದರೆ ನಿಯಂತ್ರಿಸಬಹುದು ಎಂಬುದನ್ನು ಶಿಕ್ಷಣದ ಮೂಲಕ ಜನರಿಗೆ ಮನವರಿಕೆ ಮಾಡಿಕೊಟ್ಟರೆ ಆಗ ಸ್ವನಿಯಂತ್ರಣವನ್ನು ಪರಿಪೂರ್ಣವಾಗಿ ಅನುಸರಿಸಲು ಸಾಧ್ಯ” (R.K. Prabhu and U.R. Rao, The Mind of Mahatma Gandhi, p.128).
“ನಾನು ಎಂತಹ ರೀತಿಯ ಲೈಂಗಿಕ ಶಿಕ್ಷಣದ ಆವಶ್ಯಕತೆ ಇದೆ ಎಂದು ಹೇಳುತ್ತೇನೆ ಎಂದರೆ, ಅದು ಲೈಂಗಿಕ ಆಸಕ್ತಿಯ ಮೇಲೆ ಘನತೆ, ಗೌರವದಿಂದ ತನ್ನ ವಿಜಯವನ್ನು ಸಾಧಿಸುವ ಹಾಗೆ ಮಾಡಬೇಕು. ಅಂತಹ ಲೈಂಗಿಕ ಶಿಕ್ಷಣದ ಮೂಲಕ ಮಕ್ಕಳಿಗೆ ಮಾನವ ಮತ್ತು ಮೃಗದ ನಡುವಿನ ವ್ಯತ್ಯಾಸ ತಿಳಿಸಬೇಕು. ಪರಮಾತ್ಮನು ಮನುಷ್ಯನಿಗೆ ಪ್ರಾಣಿಗಳಿಗಿಂತ ಉನ್ನತಮಟ್ಟದಲ್ಲಿ ಚಿಂತಿಸಲು ಬುದ್ಧಿ ಮತ್ತು ಅರ್ಥಮಾಡಿಕೊಳ್ಳಲು ಹೃದಯವನ್ನು ಕೊಟ್ಟಿದ್ದಾನೆ. ಆದ್ದರಿಂದ ಕುರುಡು ಪ್ರವೃತ್ತಿಯನ್ನು ಬಿಟ್ಟು ಸಕಾರಣಗಳಿಂದ ಲೈಂಗಿಕ ಆಸಕ್ತಿಯನ್ನು ಮಾನವರು ತ್ಯಜಿಸಬೇಕು” ಎಂದರು (Ibid. p. 129).
ಪುರುಷನು ಸಹಜವಾಗಿ ಆಕ್ರಮಣಕಾರಿ. ಆದಕಾರಣ ಅವನು ಸಂತಾನಹರಣ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ಮಹಿಳೆಯರು ಸಂತಾನಹರಣ ಮಾಡಿಸಿಕೊಳ್ಳುವುದನ್ನು ನಾನು ಒಪ್ಪುವುದಿಲ್ಲ. ಪುರುಷ ಮತ್ತು ಮಹಿಳೆಯರು ಜೊತೆ ಜೊತೆಯಾಗಿಯೇ ಬಾಳಬೇಕು. ನನ್ನ ದೃಷ್ಟಿಯಲ್ಲಿ ಸಂತಾನಹರಣ ನಿಯಮವನ್ನು ಮಾನವರ ಮೇಲೆ ಹೇರುವುದು ಅಮಾನವೀಯ ಕೃತ್ಯ. ಆದರೆ ಗುಣಪಡಿಸಲಾಗದಂತಹ ಕಾಯಿಲೆಗಳಿಂದ ನರಳುವ ಪುರುಷರು ತಮ್ಮ ಸ್ವಇಚ್ಛೆಯಿಂದ ಸಂತಾನಹರಣ ಮಾಡಿಸಿಕೊಳ್ಳಬಹುದು. ಸಂತಾನಹರಣ ಒಂದು ರೀತಿಯ ಗರ್ಭನಿರೋಧಕ, ಅದನ್ನು ಮಹಿಳೆಯರು ಪಾಲಿಸಬೇಕೆಂಬುದನ್ನು ನಾನು ಒಪ್ಪುವುದಿಲ್ಲ. ಆದರೆ ಪುರುಷನು ಲೈಂಗಿಕಕ್ರಿಯೆಯಲ್ಲಿ ಆಕ್ರಮಣಕಾರಿಯಾದ ಕಾರಣ ಅವನು ಸ್ವಇಚ್ಛೆಯಿಂದ ಸಂತಾನಹರಣ ಮಾಡಿಸಿಕೊಳ್ಳಲು ನನ್ನ ಅಭ್ಯಂತರವಿಲ್ಲ ಎಂದರು ಗಾಂಧಿ. (R.K. Prabhu and U.R. Rao, The Mind of Mahatma Gandhi, p.166).
ಕ್ರಮೇಣ ಗಾಂಧಿಯವರು ತಮ್ಮ ಮೂಲಭೂತ ಚಿಂತನೆಯಲ್ಲಿ ಸ್ವಲ್ಪಮಟ್ಟಿಗೆ ಪರಿವರ್ತನೆ ಮಾಡಿಕೊಂಡರು. ತಮ್ಮ ಸೊಸೆಯಂದಿರು ಮುಂದೆ ಹೆಚ್ಚು ಮಕ್ಕಳನ್ನು ಪಡೆಯದಿರುವಂತಹ ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಅನುಮತಿ ನೀಡಿದರು. ಹೀಗೆ ಗಾಂಧಿಯವರು ತಮ್ಮ ಮೂಲಚಿಂತನೆಯಿಂದ ಹೊರಬಂದು ವಾಸ್ತವಿಕ ಕ್ರಮಗಳ ಅನುಸರಣೆಗೆ ಸಮ್ಮತಿ ನೀಡಿದರು.
ಜನಸಂಖ್ಯಾ ಸಮಸ್ಯೆಯ ಬಗ್ಗೆ ಗಾಂಧಿಯವರ ಅಭಿಪ್ರಾಯವನ್ನು ಹೀಗೆ ಕ್ರೋಡೀಕರಿಸಬಹುದು:
1. ಜನಸಂಖ್ಯಾ ನಿಯಂತ್ರಣಕ್ಕಾಗಿ ಗರ್ಭನಿರೋಧಕಗಳನ್ನು ಬಳಸುವುದರ ಬದಲು ಲೈಂಗಿಕ ನಿಯಂತ್ರಣವನ್ನು ಪಾಲಿಸಬೇಕು.
2. ಸ್ತ್ರೀ ಪುರುಷರಲ್ಲಿ ಲೈಂಗಿಕ ಆಕಾಂಕ್ಷೆಗಳನ್ನು ಜಯಿಸಲು ಲೈಂಗಿಕಶಿಕ್ಷಣವನ್ನು ನೀಡಬೇಕು. 3. ಸರಿಯಾದ ಭೂವಿತರಣೆ, ವೈಜ್ಞಾನಿಕ ಕೃಷಿನಿರ್ವಹಣೆ ಮತ್ತು ಪೂರಕ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ಜನಸಂಖ್ಯಾ ಹೆಚ್ಚಳವು ಆಹಾರಸಮಸ್ಯೆಯನ್ನು ಉಂಟುಮಾಡುವುದಿಲ್ಲ.