ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಕೊರೋನಾ ಸೋಂಕಿನ ಆತಂಕವಿರದು ಎನ್ನುವ ಸತ್ಯಾಂಶ ಹೊರಬಂದಿದೆ. ಇದರಿಂದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದೇ ಕೊರೋನಾದಂತಹ ಆಘಾತಗಳಿಗೆ ಪರಿಹಾರ ಎನ್ನುವುದು ಸ್ಪಷ್ಟವಾಗುತ್ತದೆ.
ಪ್ರಸ್ತುತ ಕೊರೋನಾ ಸೋಂಕು ಇರುವವರಿಗೆ ಚಿಕಿತ್ಸೆ ನೀಡುತ್ತಿರುವುದು ಅಲೋಪತಿ ವೈದ್ಯಪದ್ಧತಿಯಲ್ಲಿ. ಅಲೋಪತಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಉಂಟುಮಾಡಲು ಇರುವ ವಿಧಾನವೆಂದರೆ ವ್ಯಾಕ್ಸಿನೇಷನ್. ಒಂದು ನಿರ್ದಿಷ್ಟ ವೈರಾಣುವಿನ ವಿರುದ್ಧ ಮಾತ್ರ ಈ ಲಸಿಕೆಗಳು ಕೆಲಸಮಾಡುತ್ತವೆ. ಹೊಸ ಹೊಸ ವೈರಾಣು ಬಂದಂತೆ ಹೊಸ ವ್ಯಾಕ್ಸಿನೇಷನ್ ಬಗ್ಗೆ ಸಂಶೋಧನೆಯಾಗಬೇಕಾಗುತ್ತದೆ. ವೈರಸ್ ನಾಶಪಡಿಸಲು ಅಲೋಪತಿಯಲ್ಲಿ ಔಷಧಗಳಿಲ್ಲ. ಕೊರೋನಾ ಸೋಂಕು ಬಂದಿದೆ, ನಮ್ಮ ಸರ್ಕಾರವು ಕೈಗೊಂಡ ಲಾಕ್ಡೌನ್ ಮೊದಲಾದ ತುರ್ತುಕ್ರಮಗಳಿಂದ ಹತೋಟಿಗೆ ಬರುತ್ತದೆ. ಆದರೆ ಸಂಪೂರ್ಣವಾಗಿ ಹೋಗಲಾಡಿಸಲು ಪ್ರಚಲಿತ ವಿಧಾನಗಳಿಂದ ಸಾಧ್ಯವಾಗದಿರಬಹುದು. ಈಗ ಸದ್ಯಕ್ಕೆ ಹೋಗಲಾಡಿಸುವುದರಲ್ಲಿ ಯಶಸ್ವಿಯಾದರೂ ಪುನಃ ಕೊರೋನಾ ಸೋಂಕು ಬರಬಹುದು, ಈ ರೀತಿಯ ಇನ್ನಾವುದೋ ವೈರಸ್ ಬರಬಹುದು. ಪ್ರತಿಬಾರಿಯೂ ಲಾಕ್ಡೌನ್ ಮಾಡಲು ಸಾಧ್ಯವಿಲ್ಲ. ಅದು ಪರಿಹಾರವೂ ಅಲ್ಲ.
ಗುಜರಾತ್ ಸರ್ಕಾರದ ಆಯುಷ್ ಇಲಾಖೆಯು ಕ್ವಾರಂಟೈನ್ನಲ್ಲಿರುವ 7,778 ಜನರಿಗೆ ಅವರ ಒಪ್ಪಿಗೆ ಪಡೆದು ರೋಗನಿರೋಧಕ ಶಕ್ತಿ ವೃದ್ಧಿಸುವ ಆಯುರ್ವೇದ ಔಷಧಿಗಳನ್ನು ನೀಡಿತು. ಆನಂತರ ಪರೀಕ್ಷೆ ಮಾಡಿದಾಗ ಅವರಲ್ಲಿ ಕೇವಲ 21 ಜನರಲ್ಲಿ (0.26%) ಮಾತ್ರ ಕೊರೋನಾ ಪಾಸಿಟಿವ್ ಎಂದು ಇರುವುದು ದೃಢಪಟ್ಟಿದೆ ಎಂದು ಗುಜರಾತ್ ಸರ್ಕಾರದ ಆರೋಗ್ಯ ಇಲಾಖೆಯ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಡಾ. ಜಯಂತಿ ರವಿ ಅವರು ಹೇಳಿರುವುದಾಗಿ Business Line, NDTV ಮತ್ತು THE WEEK ವರದಿ ಮಾಡಿವೆ. ಇದು ರಾಷ್ಟ್ರೀಯ ಸರಾಸರಿಗಿಂತ ಅತ್ಯಂತ ಕಡಮೆ. ಈಗ ಕೊರೋನಾ ಪಾಸಿಟಿವ್ ಇರುವ 75 ಜನರಿಗೆ ಆಯುರ್ವೇದ ಚಿಕಿತ್ಸೆ ನೀಡಲು ಅಲ್ಲಿ ಒಪ್ಪಿಗೆ ನೀಡಲಾಗಿದೆ.
ಪ್ರಸ್ತುತ ನಮ್ಮ ದೇಶದಲ್ಲಿ ನಾನಾ ಕಾರಣಗಳಿಂದ ಪ್ರತಿನಿತ್ಯ ಮರಣಹೊಂದುವವರ ಸಂಖ್ಯೆ ಸರಾಸರಿ ಸುಮಾರು 25,000ಕ್ಕೂ ಹೆಚ್ಚು. ನಮ್ಮ ದೇಶದಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ 3,029ನ್ನು ದಾಟಿದೆ, ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ 37 (2020ರ ಮೇ 18ರ ವರೆಗೆ). ಸಾವನ್ನಪ್ಪಿದ ಇವರಿಗೆ ಕೊರೋನಾ ಸೋಂಕು ತಗಲುವ ಮೊದಲು ಕಿಡ್ನಿ ವೈಫಲ್ಯ, ಕ್ಯಾನ್ಸರ್, ಕ್ಷಯ, ಹೃದಯ ರೋಗ, ಮಧುಮೇಹ ಇತ್ಯಾದಿ ಕಾಯಿಲೆಗಳಿತ್ತೇ ಎನ್ನುವ ಮಾಹಿತಿ ಸಂಗ್ರಹಿಸಿದಲ್ಲಿ ಮರಣಹೊಂದಿದವರೆಲ್ಲ ಕೊರೋನಾ ಸೋಂಕಿನಿಂದ ಮರಣಹೊಂದಿದ್ದಾರೆಯೇ ಅಥವಾ ಸಾವಿಗೆ ಕೊರೋನಾ ಸೋಂಕು ಒಂದು ಹೆಚ್ಚುವರಿ ಕಾರಣವಾಯಿತೇ ಎನ್ನುವುದು ತಿಳಿಯುತ್ತದೆ. ಆ ಪ್ರಯತ್ನ ನಡೆದಂತಿಲ್ಲ.
ಕೊರೋನಾ ಸೋಂಕಿನ ಕಾಲದ, ಅಂದರೆ 2020ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಹಿಂದಿನ ವರ್ಷಕ್ಕಿಂತ ಸಾವಿನ ಪ್ರಮಾಣ ಕ್ರಮವಾಗಿ ಶೇ. 13 ಮತ್ತು ಶೇ. 31ರಷ್ಟು ಕಡಮೆಯಾಗಿದೆ ಎಂದು ‘ವಿಜಯಕರ್ನಾಟಕ’ ಪತ್ರಿಕೆ ವರದಿಮಾಡಿದೆ. ಬೆಂಗಳೂರು ಮಹಾನಗರ ವ್ಯಾಪ್ತಿಯ ಚಿತಾಗಾರ ಹಾಗೂ ಸ್ಮಶಾನಗಳಲ್ಲಿ ನಡೆದ ಅಂತ್ಯಸಂಸ್ಕಾರದ ಆಧಾರದಲ್ಲಿ ಈ ಲೆಕ್ಕಮಾಡಲಾಗಿದೆ. ಈ ಅವಧಿಯಲ್ಲಿ ಐಸಿಯುಗೆ ಒಳಗಾದವರ, ಹೃದಯದ ಸಮಸ್ಯೆಗೆ ಒಳಗಾದವರ, ಶಸ್ತ್ರಚಿಕಿತ್ಸೆಗೆ ಒಳಪಟ್ಟವರ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಕಡಮೆಯಾಗಿದೆ. ಇದು ಸಮಾಧಾನಕರ ವಿಷಯವಾದರೂ, ಇದರ ಕಾರಣದ ಬಗ್ಗೆ ಸಮಗ್ರವಾಗಿ ಅಧ್ಯಯನ ಆಗಬೇಕಿದೆ.
ಬದಲಾದ ವೈದ್ಯಕೀಯಕ್ಷೇತ್ರ
ಇಂದು ವೈದ್ಯಕೀಯಕ್ಷೇತ್ರ ಸೇವೆಯಾಗಿ ಉಳಿದಿಲ್ಲ, ಅದೊಂದು ಉದ್ಯಮವಾಗಿದೆ. ಪದ್ಮಭೂಷಣ ಡಾ. ಬಿ.ಎಂ. ಹೆಗ್ಡೆಯವರು ಹೇಳುವಂತೆ ಡಾಕ್ಟರ್ಗಳ, ಸ್ಪೆಷಲಿಸ್ಟ್ಗಳ ಸಂಖ್ಯೆ ಹೆಚ್ಚಾದಂತೆ ಕಾಯಿಲೆಗಳ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗಿದೆ. ಒಂದು ಮಾಹಿತಿಯಂತೆ ಕೆನಡಾ, ಲಾಸ್ಏಂಜಲೀಸ್, ಇಸ್ರೇಲ್ ಹೀಗೆ ಜಗತ್ತಿನ ಬೇರೆ ಬೇರೆ ಪ್ರದೇಶಗಳಲ್ಲಿ ಈ ಹಿಂದೆ ವೈದ್ಯರು ಮುಷ್ಕರ ನಡೆಸಿದಾಗ ರೋಗಗಳ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಕಡಮೆಯಾಗಿದೆ! ಹಾಗಿದ್ದಲ್ಲಿ ಮುಷ್ಕರ ರಹಿತ ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರಲು ಆಸ್ಪತ್ರೆಗಳು, ವೈದ್ಯರು ನೀಡುವ ಔಷಧಿಗಳು, ಅದರ ಅಡ್ಡಪರಿಣಾಮಗಳು, ರೋಗಿಯ ರೋಗವನ್ನು ಗುರುತಿಸುವಲ್ಲಿ ಆಗಿರುವ ದೋಷಗಳು, ರೋಗಿಯ ಮಾನಸಿಕ ಆತಂಕ ಇತ್ಯಾದಿ ಕಾರಣವಾಗಿರಬಹುದೇ? ಇದೂ ಒಂದು ಅಧ್ಯಯನದ ವಿಷಯವಾಗಿದೆ.
ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ|
ಯಮಸ್ತು ಹರತಿ ಪ್ರಾಣಾನ್ ವೈದ್ಯಃ
ಪ್ರಾಣಾನ್ ಧನಾನಿ ಚ ||
ಯಮರಾಜನ ಸಹೋದರನಾದ ವೈದ್ಯರಾಜನಿಗೆ ನಮಸ್ಕರಿಸುತ್ತೇನೆ. ಯಮನು ಪ್ರಾಣವನ್ನು ಹರಣಮಾಡಿದರೆ, ವೈದ್ಯನು ಪ್ರಾಣದ ಜೊತೆಗೆ ಹಣವನ್ನೂ ಹರಣಮಾಡುತ್ತಾನೆ – ಇದೊಂದು ಸುಭಾಷಿತ. ಟಿವಿ ಮಾಧ್ಯಮಗಳು ಕೊರೋನಾ ಬಗ್ಗೆ ವರ್ಣರಂಜಿತವಾಗಿ ಸುದ್ದಿಗಳನ್ನು ಬಿತ್ತರಿಸುತ್ತಿವೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಅವರು ಭಾವಿಸಿರಬಹುದು. ಆದರೆ ವಾಸ್ತವ ಹಾಗಿಲ್ಲ. ಆತಂಕದ ಸುದ್ದಿಗಳನ್ನು ಪದೇ ಪದೇ ಕೇಳಿದಾಗ, ನೋಡಿದಾಗ ಮನಸ್ಸಿನಲ್ಲಿ ಗಾಬರಿ ನಿರ್ಮಾಣವಾಗುತ್ತದೆ, ಮನಸ್ಸು ಸಮತೋಲವನ್ನು ಕಳೆದುಕೊಳ್ಳುತ್ತದೆ, ನಕಾರಾತ್ಮಕ ಚಿಂತನೆಗಳು ಪ್ರಾರಂಭವಾಗುತ್ತವೆ. ಇವುಗಳಿಂದ ರೋಗನಿರೋಧಕ ಶಕ್ತಿ ಕುಂದಬಹುದು. ಇದು ಸಾವಿಗೂ ಕಾರಣವಾಗಬಹುದು ಎನ್ನುವುದನ್ನು ಟಿವಿ ಮಾಧ್ಯಮಗಳಿಗೆ ಮನದಟ್ಟು ಮಾಡುವುದು ಇಂದಿನ ತುರ್ತು ಆವಶ್ಯಕತೆಯಾಗಿದೆ ಎಂದೆನಿಸುತ್ತದೆ.
ರೋಗ ವಿಶ್ಲೇಷಣೆ
ರೋಗಗಳನ್ನು ವ್ಯಕ್ತಿಗೆ ಬರುವ ರೋಗ ಹಾಗೂ ಜನಸಮುದಾಯಕ್ಕೆ ಬರುವ ರೋಗ ಎಂದು ಎರಡು ಭಾಗದಲ್ಲಿ ವಿಶ್ಲೇಷಿಸಬಹುದು. ಕಡಮೆ ಸಮಯದಲ್ಲಿ ಜನಸಮುದಾಯಕ್ಕೆ ಹರಡುವ ಸಾಂಕ್ರಾಮಿಕ ರೋಗಕ್ಕೆ (Epidemic) ಆಯುರ್ವೇದದಲ್ಲಿ ಜನಪದೋಧ್ವಂಸಕ ವ್ಯಾಧಿ ಎನ್ನಲಾಗುತ್ತದೆ. ಜನರಲ್ಲಿನ ಅಧರ್ಮವೇ ಸಾಂಕ್ರಾಮಿಕ ರೋಗಕ್ಕೆ ಕಾರಣ. ಸ್ವಂತ
ಹಾಗೂ ಸಮಾಜದ ಬೆಳವಣಿಗೆಗೆ ಪೂರಕವಾದ ಆಚಾರ-ವಿಚಾರಗಳ ಅನುಸರಣೆಯೇ ಧರ್ಮವೆಂದೂ, ಜೀವನಾಶಕ್ಕೆ ಕಾರಣವಾಗುವ ಆಚಾರ-ವಿಚಾರಗಳು ಅಧರ್ಮವೆಂದೂ ಹೇಳಲಾಗಿದೆ. ಆಹಾರ-ವಿಹಾರ-ಸದಾಚಾರಗಳ ನಿಯಮಗಳನ್ನು ಮೀರುವುದು ಅಧರ್ಮ; ಇದರಿಂದ ವ್ಯಕ್ತಿಯ ಆರೋಗ್ಯ ಕೆಡುತ್ತದೆ; ಅಧರ್ಮದ ಆಚರಣೆಯಿಂದ ಭೂಮಿ-ನೀರು-ಗಾಳಿ-ಋತುಗಳು ಕೆಡುವ ಮೂಲಕ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತದೆ – ಎಂದು ಆಯುರ್ವೇದದಲ್ಲಿ ಹೇಳಿದೆ. ಇಂದು ಆಹಾರ ಕಲುಷಿತಗೊಂಡಿದೆ. ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಬಳಕೆ, ಕ್ರಿಮಿನಾಶಕವಾಗಿ ರಾಸಾಯನಿಕಗಳ ಸಿಂಪಡಣೆಯ ಮೂಲಕ ಭೂಮಿ-ನೀರು-ಗಾಳಿ ಕಲುಷಿತಗೊಂಡಿದೆ. ಕಾರ್ಖಾನೆಗಳ ವಿಷತ್ಯಾಜ್ಯಗಳೇ ಮೊದಲಾದ ಹಲವು ಕಾರಣಗಳಿಂದ ಭೂಮಿ-ನೀರು-ಗಾಳಿ ವಿಷಮಯವಾಗಿವೆ.
ಚರಕಾಚಾರ್ಯರು ‘ವಾಯ್ವಾದೀನಾಂ ಯತ್ವೈ ಗುಣ್ಯಮುತ್ಪದ್ಯತೇ ತಸ್ಯ ಮೂಲಮಧರ್ಮಃ…… ತಯೋರ್ಯೋನಿಃ ಪ್ರಜ್ಞಾಪರಾಧಃ’ ಎಂದಿದ್ದಾರೆ. ಅಂದರೆ ಗಾಳಿ-ನೀರು-ಭೂಮಿ ಕೆಡುವುದಕ್ಕೆ ಹಾಗೂ ರೋಗಕಾರಕವಾಗುವುದಕ್ಕೆ ಜನರ ಸ್ವಾರ್ಥ, ದುರಾಸೆ, ಅಧಿಕಾರಿಗಳ ಕರ್ತವ್ಯಲೋಪವೇ ಮೊದಲಾದ ಅಧರ್ಮಾಚರಣೆ ಕಾರಣ. ಸಂಕಲ್ಪ, ಧೈರ್ಯ ಮತ್ತು ನೆನಪುಗಳ ವಿರುದ್ಧವಾಗಿ ತಪ್ಪು ಕೆಲಸಗಳನ್ನು ಮಾಡುವುದನ್ನು ‘ಪ್ರಜ್ಞಾಪರಾಧ’ ಎಂದು ಕರೆಯುತ್ತಾರೆ.
ಇವು ನಮ್ಮ ದೇಹದ ವಾತ-ಪಿತ್ತ-ಕಫಗಳೆಂಬ ತ್ರಿದೋಷಗಳನ್ನು ಮತ್ತು ಮನಸ್ಸಿನ ರಜೋಗುಣ ಮತ್ತು ತಮೋಗುಣಗಳೆಂಬ ಎರಡು ದೋಷಗಳನ್ನು ಉಲ್ಬಣಗೊಳಿಸಿ ರೋಗಗಳು ಬರಲು ಕಾರಣವಾಗುತ್ತವೆ.
ಭೀಕರವಾದ ಬಿರುಗಾಳಿ, ಸುನಾಮಿ, ಭೂಕಂಪ, ಜ್ವಾಲಾಮುಖಿ, ಅತಿವೃಷ್ಟಿ, ಅತಿಯಾದ ಬಿಸಿಲು, ಅತಿಯಾದ ಚಳಿ, ವ್ಯಾಪಕವಾಗಿ ಬೆಂಕಿ ಅನಾಹುತ, ವಾತಾವರಣದಲ್ಲಿ ಹೆಚ್ಚುತ್ತಿರುವ ಉಷ್ಣಾಂಶ, ಇವೆಲ್ಲವೂ ಪ್ರಕೃತಿಯ ಸ್ವಭಾವದಲ್ಲಿ ಉಂಟಾಗುವ ವಿಕೃತಿಯ ಲಕ್ಷಣಗಳು. ಇದರಿಂದಾಗಿ ಆಯುರ್ವೇದದಲ್ಲಿ ಹೇಳಿದಂತೆ – ‘ನ ಯಥಾವತ್ರ ಸ ವೀರ್ಯವಿಪಾಕಪ್ರಭಾವಂ ಓಷಧೀನಾಂ ಪ್ರತಿವಿಧಾಸ್ಯತಿ’ – ಔಷಧಿಗಳಲ್ಲಿ ನೈಸರ್ಗಿಕವಾಗಿ ಇರಬೇಕಾದ ಔಷಧೀಯ ಗುಣಗಳು ಕಡಮೆಯಾಗುತ್ತವೆ, ಆಹಾರವಸ್ತುಗಳಲ್ಲಿನ ಸತ್ತ್ವ ಕುಂದುತ್ತದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತವೆ.ದೇಹ ಮತ್ತು ಮನಸ್ಸನ್ನು ಸಮರ್ಥ ಹಾಗೂ ಸದೃಢಗೊಳಿಸುವ ಮೂಲಕ ಸಾಂಕ್ರಾಮಿಕ ರೋಗದ ಆತಂಕದಿಂದ ಪಾರಾಗಬಹುದು ಎನ್ನುವುದು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.
ಮನಸ್ಸೇ ಕಾರಣ
ಮಾನವನಲ್ಲಿ ಉಂಟಾಗುವ ಚಿಂತೆ-ಕ್ರೋಧ-ಭಯ-ಉದ್ವೇಗವು ಮಾರಕ ಬದಲಾವಣೆಗಳನ್ನುಂಟು ಮಾಡುತ್ತವೆ. ಇವುಗಳೇ ರೋಗಗಳಿಗೆ ಮೂಲಕಾರಣ ಎನ್ನುವುದನ್ನು ಸ್ವಾಮಿ ಜಗದಾತ್ಮಾನಂದರು ತಮ್ಮ ‘ಬದುಕಲು ಕಲಿಯಿರಿ’ ಪುಸ್ತಕದಲ್ಲಿ ಬರೆದಿದ್ದಾರೆ. ಡಾ. ಬಿ.ಎಂ. ಹೆಗ್ಡೆ ಅವರೂ ಇದನ್ನೇ ಹೇಳುತ್ತಿದ್ದಾರೆ. ಆಯುರ್ವೇದವೂ ಇದನ್ನೇ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಅವಶ್ಯ. ರೋಗನಿರೋಧಕ ಶಕ್ತಿಯು ಇದ್ದಕ್ಕಿದ್ದಂತೆ ವೃದ್ಧಿಗೊಳ್ಳುವುದಿಲ್ಲ. ಅದಕ್ಕೆ ಮನಃಸ್ಥಿತಿ ಬಹಳ ಮುಖ್ಯ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಆಹಾರ-ಔಷಧಿ-ಪ್ರಾಣಾಯಾಮದ ಜೊತೆಗೆ ಮಹತ್ತ್ವಪೂರ್ಣ ಪಾತ್ರವಹಿಸುವುದು – ಮನಸ್ಸು.
ಪ್ರಧಾನಮಂತ್ರಿಗಳು 2ನೇ ಹಂತದ ಲಾಕ್ಡೌನ್ ಘೋಷಿಸುವ ಸಂದರ್ಭದಲ್ಲಿ 7 ಸೂತ್ರಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಇದರಲ್ಲಿ ಆಯುಷ್ ಇಲಾಖೆ ಸೂಚಿಸುವ ಸೂಚನೆಯನ್ನು ಪಾಲಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಂತೆ ಸೂಚಿಸಿದ್ದಾರೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಯುರ್ವೇದದಲ್ಲಿ ತಿಳಿಸಿದಂತೆ ಚಿಕಿತ್ಸಾಮಾರ್ಗ ಮತ್ತು ಸ್ವಾಸ್ಥ್ಯಸಾಧನ ಮಾರ್ಗ – ಎರಡನ್ನೂ ಅಳವಡಿಸಿಕೊಳ್ಳಬೇಕಾದುದು ಅನಿವಾರ್ಯ. ಆಯುಷ್ ಇಲಾಖೆಯು ಚಿಕಿತ್ಸಾಮಾರ್ಗಕ್ಕೆ ಆದ್ಯತೆ ನೀಡಿ, ಅದಕ್ಕೆ ಪೂರಕವಾದ ಮಾಹಿತಿಗಳನ್ನು ನೀಡಿದೆ. ಇದು ವ್ಯಾಪಕವಾಗಿ ಜನರಿಗೆ ತಲಪುವ ಪ್ರಯತ್ನ ಆಗಿಲ್ಲ. ಇದು ತತ್ಕಾಲಕ್ಕೆ ಸರಿಯಾಗಿದೆಯಾದರೂ ಈ ರೀತಿಯ ವೈರಸ್ ಆತಂಕ ಮುಂದೆ ಮತ್ತೆ ಮತ್ತೆ ಬರಬಹುದು. ಅದಕ್ಕಾಗಿ ದೀರ್ಘಕಾಲೀನ ಯೋಜನೆಯನ್ನೂ ರೂಪಿಸಬೇಕಲ್ಲವೇ? ಅದಕ್ಕಾಗಿ ಸ್ವಾಸ್ಥ್ಯಸಾಧನ ಮಾರ್ಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ವ್ಯಾಪಕವಾಗಿ ತಿಳಿಸುವುದು ಅವಶ್ಯವಿದೆ; ಇದನ್ನು ಆಯುಷ್ ಇಲಾಖೆ ಮಾಡಬೇಕಾಗಿದೆ.
ಆರೋಗ್ಯವಂತನ ಲಕ್ಷಣಗಳು
ಪಂಚಭೂತಗಳಾದ ಆಕಾಶ-ವಾಯು-ಅಗ್ನಿ-ಜಲ-ಭೂಮಿ ಇವುಗಳಿಂದ ಮಾನವಶರೀರ ಘಟಿತವಾಗಿದೆ. ಮಾನವದೇಹದಲ್ಲಿರುವ ವಾತ-ಪಿತ್ತ-ಕಫಗಳೆಂಬ ತ್ರಿದೋಷಗಳು, ರಸ-ರಕ್ತ-ಮಾಂಸ-ಮೇದಸ್ಸು-ಅಸ್ಥಿ-ಮಜ್ಜಾ-ಶುಕ್ರಗಳೆಂಬ ಸಪ್ತಧಾತುಗಳು, ಮಲ-ಮೂತ್ರ-ಬೆವರು ಮುಂತಾದ ಮಲಗಳು, ಪಾಚಕಾಗ್ನಿ ಮತ್ತು ಧಾತ್ವಗ್ನಿ ಇವುಗಳು ಸಮತೋಲಿತವಾಗಿರಬೇಕು. ದೇಹದ ಪೋಷಣೆಗೆ ಸಕಾಲದಲ್ಲಿ, ಸರಿಯಾದ ಪ್ರಮಾಣದಲ್ಲಿ, ಋತುವಿಗೆ ಅನುಗುಣವಾಗಿ ಬೆಳೆದ, ದೇಹಕ್ಕೆ ಒಗ್ಗುವ, ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸಬೇಕು. ಸೇವಿಸುವ ಆಹಾರದಲ್ಲಿ ಕೊರತೆ ಆದಾಗ, ದೇಹಕ್ಕೆ ಹಿತಕರವಾದ (ನಾಲಿಗೆಗಲ್ಲ) ಆಹಾರವನ್ನು ಸೇವಿಸದಿದ್ದಲ್ಲಿ ತ್ರಿದೋಷಗಳಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದ ರೋಗಗಳು ಉತ್ಪತ್ತಿಯಾಗುತ್ತವೆ. ‘ಯಥಾ ಖಾದ್ಯತೇ ಅನ್ನಂ ತಥಾ ಸಂಪದ್ಯತೇ ಮನಃ.’ ಆಹಾರದಿಂದ ದೇಹ ನಿರ್ಮಾಣವಾಗುತ್ತದೆ. ಆಹಾರದ ಪ್ರಭಾವ ಶರೀರದ ಮೇಲಷ್ಟೇ ಅಲ್ಲ, ಮನಸ್ಸಿನ ಮೇಲೂ ಆಗುತ್ತದೆ.
ಆತ್ಮ, ಇಂದ್ರಿಯ, ಮನಸ್ಸುಗಳ ಉದ್ವಿಗ್ನತೆ ಹಾಗೂ ಅಶಾಂತಿ – ಇವು ಹಲವಾರು ಕಾಯಿಲೆಗಳಿಗೆ ಕಾರಣವಾಗಿವೆ. ದೇಹದಲ್ಲಿ ರೋಗಗಳಿದ್ದು ಆತ್ಮ, ಇಂದ್ರಿಯ, ಮನಸ್ಸು ಪ್ರಸನ್ನವಾಗಿದ್ದರೆ ದೈಹಿಕರೋಗವನ್ನು ಸಹಿಸಿಕೊಳ್ಳಬಹುದು. ಆತ್ಮ, ಇಂದ್ರಿಯ, ಮನಸ್ಸು ರೋಗಿಷ್ಟವಾಗಿದ್ದರೆ ದೈಹಿಕ ಆರೋಗ್ಯದ ಅನುಭವವಾಗುವುದಿಲ್ಲ. ಪರಿಪೂರ್ಣ ಆರೋಗ್ಯದ ಅನುಭವಕ್ಕೆ ಶರೀರ ಮತ್ತು ಆತ್ಮ, ಇಂದ್ರಿಯ, ಮನಸ್ಸುಗಳ ಆರೋಗ್ಯ ಅನಿವಾರ್ಯ.
ಸ್ವಾಸ್ಥ್ಯಸಾಧನ ಮಾರ್ಗದ ಬಗ್ಗೆ ಆಯುರ್ವೇದವು ಹೀಗೆ ಹೇಳಿದೆ –
ನಿತ್ಯಂ ಹಿತಾಹಾರವಿಹಾರಸೇವೀ
ಸಮೀಕ್ಷ್ಯಕಾರೀ ವಿಷಯೇಷ್ವಸಕ್ತಃ |
ದಾತಾಸಮಃ ಸತ್ಯಪರಃ ಕ್ಷಮಾವಾನ್
ಆಪ್ತೋಪಸೇವೀ ಚ ಭವತ್ಯರೋಗಃ ||
ನಿತ್ಯವೂ ಹಿತಕರವಾದ ಆಹಾರ ವಿಹಾರಗಳನ್ನು ಅನುಸರಿಸುವವನು, ಪೂರ್ವಾಪರಗಳನ್ನು ವಿವೇಚಿಸಿ ಕೆಲಸ ಮಾಡುವವನು, ಇಂದ್ರಿಯ ವಿಷಯಗಳಲ್ಲಿ ಅತ್ಯಾಸಕ್ತಿ ಹೊಂದಿರದವನು, ದಾನ ಮಾಡುವವನು, ಸಮತ್ವಬುದ್ಧಿಯುಳ್ಳವನು, ಸತ್ಯಶೀಲನು, ಕ್ಷಮಿಸುವ ಗುಣ ಉಳ್ಳವನು, ಆಪ್ತಮಿತ್ರರ ಹಿತದ ಸೇವಾಕಾರ್ಯಗಳಲ್ಲಿ ತೊಡಗಿರುವವನು ರೋಗಿಯಾಗುವುದಿಲ್ಲ.
ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸ್ವಾಸ್ಥ್ಯಸಾಧನ ಮಾರ್ಗ ಎರಡೂ ಒಂದೇ. ಪೂರ್ವಾಪರಗಳನ್ನು ವಿವೇಚಿಸಿ ಕೆಲಸ ಮಾಡುವುದು, ಇಂದ್ರಿಯವಿಷಯಗಳಲ್ಲಿ ಅತ್ಯಾಸಕ್ತಿ ಹೊಂದಿಲ್ಲದಿರುವುದು, ದಾನ ಮಾಡುವುದು, ಸತ್ಯಶೀಲನಾಗಿರುವುದು, ಕ್ಷಮಿಸುವ ಗುಣವನ್ನು ಹೊಂದಿರುವುದು, ಇತರರ ಕಷ್ಟ-ಸುಖಗಳಲ್ಲಿ ಭಾಗಿಯಾಗುವುದು ಇವೆಲ್ಲ ನಮ್ಮ ಸಂಸ್ಕೃತಿಯ ಭಾಗವಾಗಿವೆ; ಸ್ವಾಸ್ಥ್ಯಸಾಧನ ಮಾರ್ಗವೂ ಇದೇ. ನಾವಿದನ್ನು ಮರೆತಿದ್ದೇವೆ. ಮತ್ತೆ ಅದನ್ನು ನೆನಪಿಸುವ ಮೂಲಕ ಆರೋಗ್ಯಕ್ಷೇತ್ರದಲ್ಲಿ ವಿಶ್ವಕ್ಕೇ ನೇತೃತ್ವ ನೀಡುವ ಸದವಕಾಶ ನಮಗೆ ಒದಗಿಬಂದಿದೆ.
ಭಾವನೆಗಳನ್ನು ನಿಯಂತ್ರಿಸದಿರುವವರು, ಸಿಟ್ಟನ್ನು, ಉದ್ವೇಗವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದಿರುವವರು, ಅಸೂಯೆ ದುರಾಸೆಯುಳ್ಳವರು, ಮದ್ಯಪಾನ ಜೂಜಾಡುವುದು ವ್ಯಭಿಚಾರ ಹಿಂಸಾಚಾರ ಇತ್ಯಾದಿ ದುಷ್ಪ್ರವೃತ್ತಿ ಉಳ್ಳವರು ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ.
ತಾಳ್ಮೆ, ಪ್ರೀತಿ, ಕರುಣೆ, ದಾನಬುದ್ಧಿ, ನಿಃಸ್ವಾರ್ಥ ಮನೋಭಾವದಿಂದ ಸಂತೋಷ-ತೃಪ್ತಿ ಹೆಚ್ಚುತ್ತದೆ. ಮನಸ್ಸು ಸ್ವಸ್ಥವಾಗುತ್ತದೆ. ಪ್ರಸನ್ನತೆ, ಧೈರ್ಯ, ಆತ್ಮವಿಶ್ವಾಸ, ದೃಢನಿಶ್ಚಯ ಮೊದಲಾದ ಭಾವನೆಗಳು ಶರೀರದ ಆರೋಗ್ಯಕ್ಕೆ ಆವಶ್ಯಕ. ಮುಕ್ತಮನಸ್ಸಿನಿಂದಿರುವುದು, ಸಹಿಷ್ಣುಮನೋಭಾವ, ಸುಖನಿದ್ರೆ, ಸಕಾರಾತ್ಮಕ ಚಿಂತನೆ, ಹಿತ-ಮಿತ-ಮಧುರ ಮಾತುಗಳು, ನೈತಿಕ
ಮಾರ್ಗದಲ್ಲಿ ಜೀವಿಸುವುದು, ಪ್ರಾಮಾಣಿಕ ಗಳಿಕೆ, ಆಸನ-ಪ್ರಾಣಾಯಾಮ, ಇಷ್ಟದೇವರ ಜಪ-ಭಜನೆ-ಧ್ಯಾನ ಇವುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವುವು.
ಕೊರೋನಾ ವೈರಸ್ ಜೊತೆಗೆ ನಾವು ಇಂದು ಮತ್ತು ಮುಂದೆಯೂ ಬದುಕಬೇಕಾಗಿದೆ. ಇದೇ ವಾತಾವರಣದಲ್ಲಿ, ಆತಂಕದಲ್ಲಿ ನಾವು ಮುಂದುವರಿದರೆ ಕೊರೋನಾ ಆತಂಕವು ಮುಂದೆ ಜನರಲ್ಲಿ ಪರಸ್ಪರ ಅವಿಶ್ವಾಸವನ್ನು ಹೆಚ್ಚಿಸಬಹುದು. ಸಂಬಂಧಗಳನ್ನು ಕಡಿದು ಹಾಕಬಹುದು. ವಿದ್ಯಾರ್ಥಿಗಳಲ್ಲಿ ಶಾರೀರಿಕ ಚಟುವಟಿಕೆಗೆ ಅವಕಾಶವಿಲ್ಲದೆ ಸೊರಗಬಹುದು, ಮನುಷ್ಯ ಸ್ವಾರ್ಥಿಯಾಗಬಹುದು, ಖಿನ್ನತೆಗೆ ಒಳಗಾಗುವವರ ಸಂಖ್ಯೆ ಹೆಚ್ಚಬಹುದು, ಪರಸ್ಪರ ಸಂಬಂಧಗಳ ಕೊರತೆಯಿಂದ ಜೀವನ ಯಾಂತ್ರಿಕ ಎಂದೆನಿಸಬಹುದು, ಸಾಮಾಜಿಕ ಅಸ್ಪೃಶ್ಯತೆ ಹೆಚ್ಚಬಹುದು, ವೈದ್ಯಕೀಯ ಕ್ಷೇತ್ರ ಇನ್ನೂ ದುಬಾರಿಯಾಗಬಹುದು.
ಸಾಮಾಜಿಕ ಅಂತರವನ್ನು ಹೆಚ್ಚಿಸಬೇಕಾಗಿರುವುದರಿಂದ ಶಿಕ್ಷಣ ದುಬಾರಿಯಾಗಬಹುದು. ಸಾಮಾಜಿಕ ಅಂತರ ಹೆಚ್ಚಿಸುವುದರಿಂದ ಹೊಟೇಲ್, ಮಾಲ್, ಚಿತ್ರಮಂದಿರ ಇತ್ಯಾದಿ ದುಬಾರಿಯಾಗಬಹುದು. ವಾಹನಗಳಲ್ಲಿ ಅಂತರ ಕಾಪಾಡಿಕೊಳ್ಳಬೇಕಾಗಿರುವುದರಿಂದ ಆಟೋ, ಬಸ್, ಟ್ರೈನ್, ವಿಮಾನ ಪ್ರಯಾಣ ತುಟ್ಟಿಯಾಗಬಹುದು. ವಾಹನಗಳ ಸಂಖ್ಯೆ ಹೆಚ್ಚಬಹುದು. ಇದರಿಂದ ವಾಯುಮಾಲಿನ್ಯ, ತಾಪಮಾನ ಹೆಚ್ಚಾಗಬಹುದು. ಜನರ ಆದಾಯ ಕಡಮೆಯಾಗಿ ಖರ್ಚು ಹೆಚ್ಚುವುದರಿಂದ ಕಳ್ಳತನ, ದರೋಡೆ ಹೆಚ್ಚಾಗಬಹುದು.
ಮಾನವ ದೇಹದಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾಗಳಿವೆ. ಇದರಲ್ಲಿ ಆರೋಗ್ಯಕ್ಕೆ ಪೂರಕವಾದ ಬ್ಯಾಕ್ಟೀರಿಯಾಗಳೂ ಇವೆ. ಸ್ಯಾನಿಟೈಸರ್ನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಉತ್ತಮ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಆಗಬಹುದು.
ಅಪೇಕ್ಷೆ, ಪರಿಹಾರ
ಮಗುವಿಗೆ ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರುವಾಗಿದ್ದಳು. ಅಜ್ಜ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿಯರೊಡಗೂಡಿದ ಅವಿಭಕ್ತ ಕುಟುಂಬವಿತ್ತು. ಅಜ್ಜಿ ಹೇಳುತ್ತಿದ್ದ ರಾಮಾಯಣ, ಮಹಾಭಾರತ ಕಥೆಗಳಿಂದ ಸಂಸ್ಕೃತಿ-ಸಂಸ್ಕಾರದ ಪಾಠವಾಗುತ್ತಿತ್ತು. ಹರಿಕಥೆ, ಭಜನೆ, ನಾಟಕ, ಯಕ್ಷಗಾನಗಳ ಮೂಲಕ ನೀತಿಪಾಠ, ಏನು ಮಾಡಬಾರದು, ಏನು ಮಾಡಬೇಕು ಎನ್ನುವ ಅರಿವಾಗುತ್ತಿತ್ತು. ಕೂಡಿ ಬಾಳುವ, ಹಂಚಿಕೊಂಡು ತಿನ್ನುವ ಸ್ವಭಾವ ಬೆಳೆಯುತ್ತಿತ್ತು. ಇಂದು, ನಾವಿಬ್ಬರು, ನಮಗೊಬ್ಬ ಮಗ/ಮಗಳು. ಈಗ ವಿವಾಹವಿಚ್ಚೇದನ ಹೆಚ್ಚುತ್ತಿರುವುದರಿಂದ ನಾನು, ನನ್ನ ಮಗ/ಮಗಳು ಎನ್ನುವ ಮಾರ್ಗದಲ್ಲಿ ನಮ್ಮ ಸಮಾಜ ಸಾಗುತ್ತಿದೆ. ಗಂಡ-ಹೆಂಡತಿ ಒಂದು ಮನೆಯಲ್ಲಿ ವಾಸವಾಗಿದ್ದರೆ, ಹಿರಿಯರಾದ ಅಪ್ಪ-ಅಮ್ಮ ಇನ್ನೊಂದು ಮನೆಯಲ್ಲಿ ಅಥವಾ ವೃದ್ಧಾಶ್ರಮದಲ್ಲಿ ಜೀವನ ಕಳೆಯಬೇಕಾದ ಪರಿಸ್ಥಿತಿಯಲ್ಲಿ ಮನೆಯಲ್ಲಿ ಮಕ್ಕಳಿಗೆ ಸದಾಚಾರ ಕಲಿಸುವವರು ಯಾರು? ಶಾಲೆಯಲ್ಲಿ ಶಿಕ್ಷಕರಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ? ಶಾಲಾಶಿಕ್ಷಣದಲ್ಲಿ ಸದಾಚಾರವು ಪಾಠ್ಯವಿಷಯವಲ್ಲ; ತಿಳಿದು ಹೇಳುವ ಮಾನಸಿಕತೆಯೂ ಇರುವುದಿಲ್ಲ.
‘ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರಂತೆ’ ಎನ್ನುವುದು ಗಾದೆ ಮಾತು. ಆದರೆ ನಾವು ನಮ್ಮಲ್ಲಿ ಬಾಗಿಲು ಇದೆ ಎನ್ನುವುದನ್ನೇ ಮರೆತಿದ್ದೇವೆ. ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರಂತೆ’ ಎನ್ನುವ ಗಾದೆ ಮಾತಿನಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ವಿಧಾನ ನಮ್ಮಲ್ಲಿದ್ದರೂ ವ್ಯಾಕ್ಸಿನೇಷನ್ಗಾಗಿ ಕಾಯುತ್ತಿದ್ದೇವೆ. ರೋಗಕ್ಕೆ ಚಿಕಿತ್ಸೆ ನೀಡಬೇಕು, ರೋಗವೇ ಬರದಿರಬೇಕಾದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ವಿಧಾನವನ್ನು ಅನುಸರಿಸುವುದು ಜಾಣತನ.
ಆಯುರ್ವೇದದಲ್ಲಿ ಹೇಳಿದಂತೆ ಆಹಾರ-ವಿಹಾರ-ಸದಾಚಾರದ ಬಗ್ಗೆ ವ್ಯಾಪಕವಾಗಿ ಜಾಗೃತಿ ನಿರ್ಮಾಣದ ಆವಶ್ಯಕತೆಯು ಇಂದು ಹೆಚ್ಚಾಗಿದೆ. ಪೂಜ್ಯ ಸಂತರು, ಮಠಾಧೀಶರು ಸದಾಚಾರದ ಬಗ್ಗೆ ಹೇಳುವಂತಾಗಬೇಕು. ಶಾಲೆ-ಕಾಲೇಜುಗಳಲ್ಲಿ ಅದು ಪಾಠ್ಯವಿಷಯವಾಗಬೇಕು. ಜ್ಯೌತಿಷಿಗಳು, ಪುರೋಹಿತರು, ಶಿಕ್ಷಣತಜ್ಞರು, ವೈದ್ಯರು, ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಹಾಗೂ ವಿವಿಧ ಮಾಧ್ಯಮದವರು ಆಹಾರ-ವಿಹಾರ-ಸದಾಚಾರಗಳನ್ನು ಒಳಗೊಂಡ ಜೀವನಶೈಲಿಯ ರಾಯಭಾರಿಗಳಾಗಬೇಕು.
ಲೇಖಕರು ‘ರಾಷ್ಟ್ರೋತ್ಥಾನ ರಕ್ತಕೇಂದ್ರ’ದ ನಿರ್ವಾಹಕರು