ಜೂನ್ 21, 2015ನ್ನು ಮೊದಲ ಅಂತಾರಾಷ್ಟ್ರೀಯ ಯೋಗದಿನವಾಗಿ ಆಚರಿಸಲಾಯಿತು ಮತ್ತು ಅಲ್ಲಿಂದೀಚೆಗೆ ಯೋಗವು ವಿಶ್ವದೆಲ್ಲೆಡೆ ಮತ್ತಷ್ಟು ಜನಪ್ರಿಯವಾಗುತ್ತ ಬಂದಿದೆ. ಭಾರತೀಯರ ಹೆಮ್ಮೆಯಾಗಿರುವ ಯೋಗದ ತತ್ತ್ವ, ಆಚರಣೆಗಳು ಮತ್ತು ಪ್ರಸಕ್ತ ದಿನಗಳಲ್ಲಿ ಅದರ ಸ್ವರೂಪದ ಕುರಿತು ವಿವರಿಸುವ ಕಿರುಪ್ರಯತ್ನ ಇಲ್ಲಿಯದು.
ಯೋಗ ಎಂದರೇನು?
ಯೋಗ ಎಂಬುದು ‘ಯುಜ್’ ಎಂಬ ಸಂಸ್ಕೃತ ಧಾತುವಿನಿಂದ ಹುಟ್ಟಿಕೊಂಡಿದೆ. ಇದರ ಅರ್ಥ ಸಂಯೋಗ, ಸೇರುವುದು ಎಂದಾಗಿದೆ; ಜೀವಾತ್ಮವು ಪರಮಾತ್ಮನೊಂದಿಗೆ ಸೇರುವುದೇ ಯೋಗ.
ಯೋಗವೆಂದರೆ ಒಂದು ಸ್ವಶಿಸ್ತು. ಯೋಗದ ಉದ್ದೇಶ ದೇಹ, ಮನಸ್ಸು ಮತ್ತು ಆತ್ಮದ ನಡುವಿನ ಸಮತೋಲ ಮತ್ತು ಪರಿಶುದ್ಧತೆಯನ್ನು ಸಾಧಿಸುವುದು. ಪರಿಪೂರ್ಣ ಆರೋಗ್ಯ, ಮನೋನಿಗ್ರಹ, ಹೊರಜಗತ್ತು ಮತ್ತು ಒಳಜಗತ್ತಿನ ನಡುವಿನ ಸಾಮರಸ್ಯವನ್ನು ಸಾಧಿಸುವಲ್ಲಿ ಯೋಗದ ಪಾತ್ರ ಮಹತ್ತರವಾದದ್ದು.
ಯೋಗದ ಇತಿಹಾಸವನ್ನು ಅವಲೋಕಿಸಿದರೆ ಅದು ಸಿಂಧೂ ನಾಗರಿಕತೆಯಷ್ಟು ಹಿಂದೆ ಸಾಗುತ್ತದೆಯಾದರೂ ಯೋಗದ ಪರಿಕಲ್ಪನೆ ಅನಂತರದ ಕಾಲದಲ್ಲಿ ಬದಲಾಗಿದೆ. ಮತ್ತದು ನಿಂತನೀರಾಗದೆ ಅನೇಕ ತತ್ತ್ವಗಳನ್ನು, ಅಭ್ಯಾಸಗಳನ್ನು ಒಳಗೊಳ್ಳುತ್ತಾ ಸಾಗುತ್ತಲಿದೆ. ಷಟ್ದರ್ಶನಗಳಲ್ಲಿ ಒಂದಾದ ಯೋಗ, ಸಂಹಿತೆಗಳ ಭಾಗವಾಗಿ, ಸೂತ್ರವಾಗಿ, ಅಷ್ಟಾಂಗವಾಗಿ ಜನಸಾಮಾನ್ಯರ ಮನೆಮನೆಗೆ ತಲಪಿರುವುದರ ಹಿಂದೆ ನಮ್ಮ ತಪಸ್ವಿಗಳು ಮತ್ತು ಸಾಧಕರ ಕೊಡುಗೆಯಿದೆ.
ಯೋಗದಲ್ಲಿ ಅಂತರ್ಗತವಾದ ತಂತ್ರಗಳು
ಪತಂಜಲಿಯ ಸೂತ್ರಗಳಿಂದ ರೂಪುಗೊಂಡ ಅಷ್ಟಾಂಗಯೋಗದ ಪ್ರಕಾರ ಗುರಿಸಾಧನೆಗಾಗಿ 8 ತಂತ್ರಗಳ ಸಮೂಹವಿದೆ. ಅವುಗಳು:
1. ಯಮ (ಐದು ಪಾಲನೆಗಳು): ಅಹಿಂಸೆ, ಸತ್ಯಪಾಲನೆ, ಅತ್ಯಾಸೆಪಡದಿರುವುದು, ಇಂದ್ರಿಯನಿಗ್ರಹ ಮತ್ತು ಸ್ವಾಧೀನತೆಯ ನಿಗ್ರಹ.
2. ನಿಯಮ (ಐದು ಅನುಷ್ಠಾನಗಳು): ಶುದ್ಧತೆ, ಸಂತುಷ್ಟಿ, ಸಂಯಮ, ಅಧ್ಯಯನ ಮತ್ತು ದೇವರಲ್ಲಿ ಶರಣಾಗತಿ.
3. ಆಸನ: ಕುಳಿತುಕೊಳ್ಳುವ ಭಂಗಿ ಎಂದು ಅರ್ಥ. ಪತಂಜಲಿಮಹರ್ಷಿಗಳ ಸೂತ್ರಗಳಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುವ ಭಂಗಿಗಳಿಗೆ ಈ ಪದವನ್ನು ಉಲ್ಲೇಖಿಸಲಾಗಿದೆ.
4. ಪ್ರಾಣಾಯಾಮ (ಉಸಿರನ್ನು ನಿಯಂತ್ರಿಸುವುದು): ಪ್ರಾಣ -ಉಸಿರು, ಆಯಾಮ – ನಿಯಂತ್ರಣ ಅಥವಾ ನಿಲ್ಲಿಸುವಿಕೆ. ಜೀವಶಕ್ತಿಯ ನಿಯಂತ್ರಣವೆಂದೂ ಅರ್ಥೈಸಲಾಗುತ್ತದೆ.
5. ಪ್ರತ್ಯಾಹಾರ (ಅಮೂರ್ತವಾಗಿರುವಿಕೆ): ಬಾಹ್ಯವಸ್ತುಗಳಿಂದ ಇಂದ್ರಿಯಗಳನ್ನು ದೂರವಿಡುವಿಕೆ.
6. ಧಾರಣ (ಏಕಾಗ್ರತೆ): ಗಮನವನ್ನು ಒಂದು ವಸ್ತುವಿನ ಮೇಲೆಯೇ ಕೇಂದ್ರೀಕರಿಸುವುದು.
7. ಧ್ಯಾನ (ಧ್ಯಾನ): ಧ್ಯಾನದ ವಸ್ತುವಿನ ಸ್ವರೂಪದತ್ತ ಅತೀವ ಚಿಂತನೆ.
8. ಸಮಾಧಿ (ಬಿಡುಗಡೆ): ಧ್ಯಾನವಸ್ತುವಿನಲ್ಲಿ ತನ್ನ ಪ್ರಜ್ಞೆಯನ್ನು ಲೀನವಾಗಿಸಿಕೊಳ್ಳುವುದು.
ಯೋಗದ ಕವಲುಗಳು/ಕ್ರಮಗಳು
ಯೋಗದ ಇತಿಹಾಸವನ್ನು ಹುಡುಕಲು ಹೋದರೆ ಅದು ಪ್ರಾಚೀನ ಭಾರತದತ್ತ ಬೆಟ್ಟುಮಾಡುತ್ತದೆ. ಅನುಭವ ಮತ್ತು ಅನುಭಾವಗಳಿಂದ ಅನೇಕಬಾರಿ ಕವಲೊಡೆಯುತ್ತ, ಹೊಸ ಹೊಸ ತಂತ್ರಗಳನ್ನು ಒಳಗೊಳ್ಳುತ್ತ, ಯೋಗಾಕಾಂಕ್ಷಿಗಳ ಸಾಧನೆಗೆ ತಕ್ಕಂತೆ ಬದಲಾಗುತ್ತಾ ಬಂದ ಯೋಗವು ಇಂದು ಅನೇಕ ಕವಲುಗಳಲ್ಲಿ, ಸಂಪ್ರದಾಯಗಳಲ್ಲಿ ಆಚರಿಸಲ್ಪಡುತ್ತಿದೆ.
ಅವುಗಳಲ್ಲಿ ಮುಖ್ಯವಾದವು ಕೆಳಗಿನವು –
1. ಹಠಯೋಗ
ಹಠಯೋಗ ಎನ್ನುವುದು ದೈಹಿಕ ಭಂಗಿಗಳೊಂದಿಗೆ ಉಸಿರಾಟವನ್ನು ಸಂಯೋಜಿಸುವ ವಿಧಾನವಾಗಿದೆ. ಹಠ ಎನ್ನುವ ಪದವನ್ನು ಬಹಳ ವಿಶಾಲವಾಗಿ ಬಳಸಲಾಗುತ್ತದೆ. ಆದರೆ ಸಾಮಾನ್ಯವಾಗಿ ಆರಂಭಿಕರಿಗಾಗಿ ಅಥವಾ ಹೆಚ್ಚು ಶಾಂತ ಶೈಲಿಯನ್ನು ಇಷ್ಟಪಡುವವರಿಗೆ ಇದು ಹೊಂದುತ್ತದೆ. ಇದು ಮೂಲ ಯೋಗಭಂಗಿಗಳ ಬಗ್ಗೆ ಸೌಮ್ಯವಾದ ಪರಿಚಯವನ್ನು ಒಳಗೊಂಡಿರುತ್ತದೆ. ಬೆವರುವುದು, ದಣಿವು ಇತ್ಯಾದಿಗಳು ಹಠಯೋಗ ತರಗತಿಯಲ್ಲಿ ಇರುವುದಿಲ್ಲ. ಹೆಚ್ಚು ಆರಾಮ ಮತ್ತು ನಿರಾಳತೆಯನ್ನು ಇದು ನೀಡುತ್ತದೆ. ಪಶ್ಚಿಮದ ರಾಷ್ಟ್ರಗಳಲ್ಲಿ ಹಠಯೋಗವನ್ನು ಸಾಮಾನ್ಯವಾಗಿ ಯೋಗಾಸನಗಳು ಎಂದು ಅರ್ಥೈಸಲಾಗುತ್ತಿದೆ. ಭಾರತೀಯ ಮತ್ತು ಟಿಬೆಟಿಯನ್ ಸಂಪ್ರದಾಯಗಳಲ್ಲಿ ಹಠಯೋಗಕ್ಕೆ ಹೆಚ್ಚಿನ ಆಯಾಮವಿದೆ. ಇದು ದೈಹಿಕ ವ್ಯಾಯಾಮ ವ್ಯವಸ್ಥೆಯನ್ನು ಮೀರಿ ನೈತಿಕತೆ, ಆಹಾರ ಪದ್ಧತಿ, ಶುದ್ಧೀಕರಣ, ಪ್ರಾಣಾಯಾಮ, ಧ್ಯಾನ ಮತ್ತು ಯೋಗಿಯ ಆಧ್ಯಾತ್ಮಿಕ ಬೆಳವಣಿಗೆಯನ್ನು ಒಳಗೊಂಡಿದೆ.
2. ವಿನ್ಯಾಸಯೋಗ
ವಿನ್ಯಾಸ ಎಂದರೆ ಯೋಗದ ಭಂಗಿಗಳ ವಿಶೇಷ ರೀತಿಯ ಸಂಯೋಜನೆ. ವಿನ್ಯಾಸದ ತರಗತಿಗಳಲ್ಲಿ, ಒಂದು ಭಂಗಿಯಿಂದ ಇನ್ನೊಂದಕ್ಕೆ ಸಾಗುವಾಗ ಅಭ್ಯಾಸಿಯ ಉಸಿರಾಟ ಮತ್ತು ಚಲನೆಯನ್ನು ಸಮನ್ವಯಗೊಳಿಸಲಾಗುತ್ತದೆ. ವಿನ್ಯಾಸ ಅತ್ಯಂತ ಅಥ್ಲೆಟಿಕ್ ಯೋಗ ಶೈಲಿಯಾಗಿದೆ. ವಿನ್ಯಾಸವನ್ನು 1980ರ ದಶಕದಲ್ಲಿ ಅಷ್ಟಾಂಗಯೋಗದಿಂದ ಅಳವಡಿಸಿಕೊಳ್ಳಲಾಯಿತು. ‘ಪವರ್ಯೋಗ’ ಮುಂತಾದ ಅನೇಕ ರೀತಿಯ ನವೀನ ಯೋಗಪ್ರಕಾರಗಳನ್ನು ವಿನ್ಯಾಸಯೋಗದ ಹರಿವುಗಳೆಂದು ಪರಿಗಣಿಸಬಹುದು.
ವಿನ್ಯಾಸಶೈಲಿಯ ಯೋಗವು ಮನಸ್ಸಿನ-ದೇಹದ ತಾಲೀಮಿಗಾಗಿ, ಭಂಗಿಗಳ ಸರಣಿಯೊಂದಿಗೆ ಲಯಬದ್ಧ ಉಸಿರಾಟವನ್ನು ಒಳಗೊಂಡಿದೆ. ಇದು ಉಸಿರಾಟವನ್ನು ದೈಹಿಕ ಚಲನೆಗೆ ಜೋಡಿಸುವುದರಿಂದ ಅಥ್ಲೆಟಿಕ್ ಮತ್ತು ಕ್ರಿಯಾತ್ಮಕ ಚಲನೆಯನ್ನು ಬಯಸುವವರಿಗೆ ಸೂಕ್ತವಾಗಿದೆ. ಜಿಮ್ ಅಥವಾ ಸ್ಟುಡಿಯೊಗೆ ಅನುಗುಣವಾಗಿ ವಿನ್ಯಾಸಯೋಗವನ್ನು ಪವರ್ಯೋಗ ಎಂದೂ ಕರೆಯಬಹುದು. ಈ ರೀತಿಯ ಯೋಗದಲ್ಲಿ ಲವಲವಿಕೆಯ ಸಂಗೀತ, ಬೆವರಿಳಿಸುವುದು ಮತ್ತು ತೂಕ ಇಳಿಕೆಯ ಉದ್ದೇಶಗಳು ಅಡಕವಾಗಿರುತ್ತವೆ.
3. ‘ಪಟ್ಟಾಭಿ ಶೈಲಿ’
ಮೈಸೂರಿನ ಕೆ. ಪಟ್ಟಾಭಿ ಜೋಯಿಸರಿಂದ ಖ್ಯಾತವಾದ ‘ಪಟ್ಟಾಭಿ ಶೈಲಿ’ ಯೋಗವು ಶ್ರಮ ಮತ್ತು ಶೈಲಿಯಲ್ಲಿ ವಿನ್ಯಾಸಯೋಗವನ್ನು ಹೋಲುತ್ತದೆ. ಇವೆರಡರಲ್ಲೂ ಚಲನೆಯು ಉಸಿರಾಟಕ್ಕೆ ಹೊಂದಿಕೊಂಡಂತೆ ಇರುತ್ತದೆ. ವ್ಯತ್ಯಾಸವೆಂದರೆ ಪಟ್ಟಾಭಿ ಶೈಲಿಯಲ್ಲಿ ಯಾವಾಗಲೂ ಒಂದೇ ರೀತಿಯ ಭಂಗಿಗಳನ್ನು ನಿಖರವಾದ ಕ್ರಮದಲ್ಲಿ ಮಾಡಲಾಗುತ್ತದೆ. ಇದರಲ್ಲಿ ಮೈಯ ಉಷ್ಣತೆ ಏರಿ, ಬೆವೆತು, ದೈಹಿಕ ವ್ಯಾಯಾಮವಾಗುತ್ತದೆ. ಪಟ್ಟಾಭಿ ಶೈಲಿಯ ಯೋಗವು ದೈಹಿಕವಾಗಿ ಪರಿಶ್ರಮ ಬೇಡುವ ಭಂಗಿಗಳ ಅನುಕ್ರಮವನ್ನು ಒಳಗೊಂಡಿರುವ ಕಾರಣ ಈ ಶೈಲಿಯ ಯೋಗವು ಖಂಡಿತವಾಗಿಯೂ ಆರಂಭಿಕರಿಗೆ ಅಲ್ಲ. ನೀವು ತೀವ್ರವಾದ ವ್ಯಾಯಾಮವನ್ನು ಇಷ್ಟಪಡುವವರಾದರೆ ಇದು ಸೂಕ್ತ.
4. ‘ಅಯ್ಯಂಗಾರ್ಯೋಗ’
ಅಯ್ಯಂಗಾರ್ಯೋಗವನ್ನು ಬಿ.ಕೆ.ಎಸ್. ಅಯ್ಯಂಗಾರ್ ಅವರು ಜನಪ್ರಿಯಗೊಳಿಸಿದರು. ಇದು ವಿವರವಾದ ಮತ್ತು ನಿಖರವಾದ ಚಲನೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಸಾಮಾನ್ಯವಾಗಿ, ಭಂಗಿಗಳ ಸೂಕ್ಷ್ಮತೆಯನ್ನು ಸಾಧಿಸುವಾಗ ಭಂಗಿಗಳನ್ನು ದೀರ್ಘಕಾಲದವರೆಗೆ ನಡೆಸಲಾಗುತ್ತದೆ. ಅಯ್ಯಂಗಾರ್ಯೋಗದಲ್ಲಿ ಭಂಗಿಯನ್ನು ಪರಿಪೂರ್ಣಗೊಳಿಸಲು ಮತ್ತು ಸುರಕ್ಷಿತ ರೀತಿಯಲ್ಲಿ ಯೋಗಭಂಗಿಗಳನ್ನು ಸಿದ್ಧಿಸಿಕೊಳ್ಳಲು ನೆರವಾಗುವುದಕ್ಕೆ ಅನೇಕ ಯೋಗಪರಿಕರಗಳು ಇರುತ್ತವೆ. ಹೆಚ್ಚು ಚಲನೆ ಇರುವುದಿಲ್ಲವಾದರೂ ಖಂಡಿತವಾಗಿಯೂ ವ್ಯಾಯಾಮ ಒದಗುತ್ತದೆ. ಅಯ್ಯಂಗಾರ್ ತರಗತಿಯ ನಂತರ ಬಹಳವೇ ಆರಾಮ ಮತ್ತು ವಿಶ್ರಾಂತಿ ದೊರೆಯುತ್ತದೆ. ದೈಹಿಕ ತೊಂದರೆಗಳಿಗೆ ಹಾಗೂ ಆರೋಗ್ಯದ ಸಮಸ್ಯೆಗಳಿಗೆ ಒಳಗಾಗಿರುವವರು ನಿಧಾನವಾಗಿ ಮತ್ತು ಕ್ರಮಬದ್ಧವಾಗಿ ಅಭ್ಯಾಸ ಮಾಡಬೇಕಾದ ಅಗತ್ಯವಿರುವುದರಿಂದ ಅಂಥವರಿಗೆ ಇದು ಮತ್ತಷ್ಟು ಉಪಯುಕ್ತವಾಗಿದೆ.
5. ಕುಂಡಲಿನೀ ಯೋಗ
ಕುಂಡಲಿನೀ ಯೋಗಾಭ್ಯಾಸವು ಆಧ್ಯಾತ್ಮಿಕ ಮತ್ತು ದೈಹಿಕ ಅಭ್ಯಾಸಗಳೆರಡನ್ನೂ ಒಳಗೊಂಡಿವೆ. ಈ ಶೈಲಿಯು ದೇಹದಲ್ಲಿನ ಕುಂಡಲಿನೀ ಶಕ್ತಿಯನ್ನು ಜಾಗೃತಗೊಳಿಸುವತ್ತ ಗಮನಹರಿಸುತ್ತದೆ.
ಕುಂಡಲಿನೀ ಯೋಗವು ಮಂತ್ರಪಠಣ ಮತ್ತು ಧ್ಯಾನದ ಜೊತೆಗೆ, ಉಸಿರಾಟದೊಂದಿಗಿನ ಪುನರಾವರ್ತಿತ ಚಲನೆಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈ ತರಗತಿಗಳು ಬಹಳ ತೀವ್ರವಾಗಿರುತ್ತವೆ. ಅಭ್ಯಾಸವು ಬೆನ್ನುಮೂಳೆಯ ತಳದಲ್ಲಿರುವ ಶಕ್ತಿಯನ್ನು ಜಾಗೃತಗೊಳಿಸುವತ್ತ ಕೇಂದ್ರೀಕರಿಸುತ್ತದೆ. ಈ ಕ್ರಮದ ಯೋಗವನ್ನು ಯಾವತ್ತೂ ಗುರುವಿನ ಮಾರ್ಗದರ್ಶನದಲ್ಲಿ ಮಾಡುವುದು ಒಳಿತು.
6. ‘ವಿನಿಯೋಗ’
ವಿನಿಯೋಗವು ಗುರು-ಶಿಷ್ಯ ಮಾದರಿಯನ್ನು ಆಧರಿಸಿದೆ. ಇದರಲ್ಲಿ ಒಬ್ಬ ಅನುಭವಿ ಶಿಕ್ಷಕರು ಪ್ರತಿ ವಿದ್ಯಾರ್ಥಿಯೊಂದಿಗೆ ಪ್ರತ್ಯೇಕವಾಗಿ ವ್ಯವಹರಿಸುತ್ತಾರೆ. ಆರೋಗ್ಯ, ವಯಸ್ಸು ಮತ್ತು ದೈಹಿಕ ಸ್ಥಿತಿಯಂತಹ ಅಂಶಗಳನ್ನು ಆಧರಿಸಿ ಶಿಕ್ಷಕರು ವಿದ್ಯಾರ್ಥಿಗಳಿಗೆ ತಕ್ಕುದಾದ ಯೋಗ ಕಾರ್ಯಕ್ರಮವನ್ನು ರಚಿಸುತ್ತಾರೆ. ವಿನಿಯೋಗವು ಹಿಂದಿನ ಅಥವಾ ಪ್ರಸ್ತುತ ದೈಹಿಕ ತೊಂದರೆಗಳು ಅಥವಾ ಕಾಯಿಲೆಗಳನ್ನು ಸಹ ಗಣನೆಗೆ ತೆಗೆದುಕೊಳ್ಳುತ್ತದೆ. ಇದನ್ನು ಗುಂಪು-ತರಗತಿಗಳಾಗಿಯೂ ನಡೆಸಲಾಗುತ್ತದೆಯಾದರೂ ಶಿಕ್ಷಕರಿಗೂ ವಿದ್ಯಾರ್ಥಿಗೂ ನಡುವಿನ ಸಂವಹನ ಇದರ ಬಹುಮುಖ್ಯ ಲಕ್ಷಣ.
ಯೋಗಕ್ಕೂ ಇತರ ಅಂಗಸಾಧನೆಗಳಿಗೂ ಇರುವ ವ್ಯತ್ಯಾಸ
1. ಯೋಗವನ್ನು ನೆಲಹಾಸಿನ ಮೇಲೆ ಮಾಡುವುದು ಕ್ರಮ. ಅಂಗಸಾಧನೆಗಳನ್ನು ನೆಲಹಾಸಿಲ್ಲದೆ ಮಾಡಬಹುದು.
2. ಯೋಗಾಭ್ಯಾಸಕ್ಕೆ ದೇಹವೇ ಸಾಧನ; ಇತರ ಪರಿಕರಗಳ ಅಗತ್ಯವಿಲ್ಲ. ಅಂಗಸಾಧನೆಗಳಲ್ಲಿ ಭಾರವೆತ್ತುವ, ಕಸರತ್ತಿಗೆ ಸಹಕರಿಸುವ ಉಪಕರಣಗಳ ಅಗತ್ಯವಿರುತ್ತದೆ.
3. ಯೋಗಾಭ್ಯಾಸಗಳು ನಿಧಾನಗತಿಯ ಚಲನೆಗಳನ್ನು ಒಳಗೊಂಡಿದ್ದರೆ, ಅಂಗಸಾಧನೆಗಳು ತ್ವರಿತ, ಶಕ್ತಿಯುತ ಚಲನೆಯನ್ನು ಒಳಗೊಂಡಿರುತ್ತದೆ.
4. ಯೋಗಾಭ್ಯಾಸವು ಸ್ನಾಯುಗಳ ಒತ್ತಡವನ್ನು ಕಡಮೆ ಮಾಡುತ್ತದೆ; ಅಂಗಸಾಧನೆಗಳು ಸ್ನಾಯುಗಳ ಒತ್ತಡವನ್ನು ಹೆಚ್ಚಿಸುತ್ತದೆ.
5. ಯೋಗಾಭ್ಯಾಸದಲ್ಲಿ ಮೂಳೆಗಳು, ಕೀಲುಗಳು, ಸ್ನಾಯು ಮತ್ತು ಅಸ್ಥಿರಜ್ಜುಗಳು ಗಾಯಗೊಳ್ಳುವ ಅಪಾಯ ಕಡಮೆ. ಕ್ಷಿಪ್ರಚಲನೆಗಳಿಂದಾಗಿ ಅಂಗಸಾಧನೆಗಳಲ್ಲಿ ಆ ಸಂಭವ ಅಧಿಕ.
6. ಯೋಗವು ಸ್ನಾಯುಗಳ ಜೊತೆಗೆ ಅಂಗಗಳ ಮೇಲೂ ಗಮನ ಹರಿಸುತ್ತದೆ; ಅಂಗಸಾಧನೆಗಳು ಸ್ನಾಯುವನ್ನು ಬಲಪಡಿಸುವತ್ತ ಮಾತ್ರ ಗಮನಹರಿಸುತ್ತದೆ.
7. ಯೋಗವು ಕ್ಯಾಲರಿ/ತೂಕ ನಿಯಂತ್ರಣಕ್ಕೆ ಹೆಚ್ಚು ಒತ್ತು ಕೊಡುವುದಿಲ್ಲ. ಅನೇಕ ಅಂಗಸಾಧನೆಗಳು ತೂಕ ಇಳಿಕೆಯ ಸುತ್ತ ಕೇಂದ್ರೀಕರಿಸಿರುತ್ತವೆ.
8. ಯೋಗವು ಸ್ಪರ್ಧಾತ್ಮಕವಲ್ಲ; ಪ್ರಕ್ರಿಯೆ-ಆಧಾರಿತವಾಗಿದೆ. ಅಂಗಸಾಧನೆಗಳು ಸಾಮಾನ್ಯವಾಗಿ ಸ್ಪರ್ಧಾತ್ಮಕವಾಗಿದ್ದು ಗುರಿ-ಆಧಾರಿತವಾಗಿದೆ.
9. ಯೋಗದಲ್ಲಿ ಅರಿವು ಆಂತರಿಕವಾಗಿದೆ (ಗಮನವು ಉಸಿರಾಟ ಮತ್ತು ಅನಂತದ ಮೇಲೆ ಕೇಂದ್ರೀಕರಿಸುತ್ತದೆ). ಅಂಗಸಾಧನೆಗಳಲ್ಲಿ ಅರಿವು ಬಾಹ್ಯವಾಗಿರುತ್ತದೆ (ಗಮನವು ಕಾಲ್ಬೆರಳುಗಳನ್ನು ತಲಪುವುದು, ಅಂತಿಮ ಗೆರೆಯನ್ನು ತಲಪುವುದು ಇತ್ಯಾದಿ).
10. ಯೋಗದಲ್ಲಿ ಸ್ವಯಂ-ಅರಿವಿನ ಬೆಳವಣಿಗೆಗೆ ಅಪಾರ ಸಾಧ್ಯತೆಗಳಿವೆ. ಅಂಗಸಾಧನೆಗಳಲ್ಲಿ ಸಾಮಾನ್ಯವಾಗಿ ಸ್ವಯಂ ಅರಿವಿನ ಯಾವುದೇ ಅಂಶಗಳಿಲ್ಲ.
11. ಆಸನಗಳ ಅಭ್ಯಾಸವು ಅಂತರಿಕ ಸಮನ್ವಯಕ್ಕೆ, ಭಾವನೆಗಳನ್ನು ಸಮತೋಲಗೊಳಿಸಲು ಸಹಾಯ ಮಾಡುತ್ತದೆ. ಇದು ಇತರ ರೀತಿಯ ಅಂಗಸಾಧನೆಗಳಲ್ಲಿ ಸಂಭವಿಸುವುದಿಲ್ಲ. ಅವು ಕೇವಲ ದೈಹಿಕ ಶಕ್ತಿಯತ್ತ ಗಮನಹರಿಸುತ್ತವೆ.
12. ಯೋಗದಲ್ಲಿ ಉಸಿರಾಟ ಮತ್ತು ಚಯಾಪಚಯ ದರ ನಿಧಾನವಾಗುತ್ತದೆ. ಅಂಗಸಾಧನೆಗಳಲ್ಲಿ ಇದು ಹೆಚ್ಚಾಗುತ್ತದೆ.
13. ಸಾಮಾನ್ಯವಾಗಿ, ಯೋಗವು ಸ್ವಾವಲಂಬಿಯಾಗಿದ್ದು, ಅದನ್ನು ಎಲ್ಲಿ ಬೇಕಾದರೂ ಅಭ್ಯಾಸ ಮಾಡಬಹುದು. ಅಂಗಸಾಧನೆಗಳಿಗೆ ಸಾಮಾನ್ಯವಾಗಿ ಉಪಕರಣಗಳು ಬೇಕಾಗುವ ಕಾರಣದಿಂದ ಒಂದು ನಿರ್ದಿಷ್ಟ ಪರಿಸರದಲ್ಲಿ (ಉದಾ. ಜಿಮ್, ಸ್ಪೋಟ್ರ್ಸ್ ಕ್ಲಬ್) ಅಭ್ಯಾಸ ಮಾಡಲು ನಿರ್ಬಂಧಿಸಲಾಗುತ್ತದೆ.
ಒಟ್ಟಾರೆಯಾಗಿ, ಯೋಗ ಮತ್ತು ಅಂಗಸಾಧನೆ ಎರಡನ್ನೂ ದೈಹಿಕ (ಮತ್ತು ಸ್ವಲ್ಪಮಟ್ಟಿಗೆ ಮಾನಸಿಕ) ಪ್ರಯೋಜನಗಳ ದೃಷ್ಟಿಯಿಂದ ಹೋಲಿಸಬಹುದಾದರೂ ಅಂಗಸಾಧನೆಯು ಭೌತಿಕ ದೇಹದ ನಿರ್ವಹಣೆ ಮತ್ತು ಸುಧಾರಣೆಯ ಮೇಲೆ ಕೇಂದ್ರೀಕರಿಸುವುದಕ್ಕೆ ಸೀಮಿತವಾಗಿದೆ. ಆದರೆ ಯೋಗವು ಪ್ರಾಚೀನ ಹಿಂದೂ ಸಂಪ್ರದಾಯ ಆಧಾರಿತವಾಗಿದ್ದು ಪ್ರಜ್ಞೆಯ ಉನ್ನತ ಸ್ಥಿತಿಯನ್ನು ಸಾಧಿಸಲು ಸಮತೋಲಿತ ಭೌತಿಕ ದೇಹವನ್ನು ಬಳಸುವ ಗುರಿ ಹೊಂದಿದೆ.
ವಿದೇಶಗಳಲ್ಲಿ ಯೋಗ
ಪತಂಜಲಿಮಹರ್ಷಿಗಳ ಯೋಗಸೂತ್ರವು ಕ್ರಿ.ಪೂ. 2ನೇ ಶತಮಾನದಷ್ಟು ಹಿಂದೆಯೇ ಪ್ರಚಲಿತವಿದ್ದರೂ ಯೋಗಕ್ರಮವು ವಿದೇಶಗಳಲ್ಲಿ ಮೊತ್ತಮೊದಲಿಗೆ ಪರಿಚಿತವಾದದ್ದು ಸುಮಾರು 19ನೇ ಶತಮಾನದ ಅಂತ್ಯದಲ್ಲಿ. ಅದನ್ನು ಸಾಧಿಸಿದವರು ಭಾರತದ ಹೆಮ್ಮೆಯ ಸಂನ್ಯಾಸಿ ಸ್ವಾಮಿ ವಿವೇಕಾನಂದರು.
ಆನಂತರ 1920ರಲ್ಲಿ, ಪರಮಹಂಸ ಯೋಗಾನಂದರು ಬೋಸ್ಟನ್ನಲ್ಲಿ ನಡೆದ ಧಾರ್ಮಿಕ ಉದಾರವಾದಿಗಳ ಸಮಾವೇಶವನ್ನುದ್ದೇಶಿಸಿ ಯೋಗದ ಕುರಿತು ಮಾತನಾಡಿದರು. 1920ರ ನಂತರ ಅನೇಕ ಪಾಶ್ಚಾತ್ಯ ಜನರು ಯೋಗಬೋಧನೆಗಳನ್ನು ಬಯಸಿ ಪೂರ್ವಕ್ಕೆ ಪಯಣಿಸಿ ಬಂದರು. ಅವರಲ್ಲಿ ಪ್ರಮುಖರಾದ ಥಿಯೋಸ್ ಬರ್ನಾರ್ಡ್ 1943ರಲ್ಲಿ ಹಠಯೋಗದ ಕುರಿತ ತಮ್ಮ ಅನುಭವವನ್ನು ಬರೆದು ಪ್ರಕಟಿಸಿದರು. ಇದು 1950ರ ದಶಕದಲ್ಲಿ ಯೋಗದ ಪ್ರಮುಖ ಪುಸ್ತಕವಾಗಿತ್ತು ಮತ್ತು ಇಂದಿಗೂ ವ್ಯಾಪಕವಾಗಿ ಓದಲ್ಪಡುತ್ತದೆ.
ಸರಿಸುಮಾರು ಅದೇ ಸಮಯಕ್ಕೆ ಇಂದ್ರಾ ದೇವಿಯವರು (Eugenie Peterson, 12-5-1899 – 25-4-2002) ಹಾಲಿವುಡ್ನಲ್ಲಿ ಯೋಗ ಸ್ಟುಡಿಯೋವನ್ನು ತೆರೆದರು. ಅವರು ಮೈಸೂರಿನ ವಿದ್ವಾನ್ ಟಿ. ಕೃಷ್ಣಮಾಚಾರ್ಯರ ಬಳಿಯಲ್ಲಿ ಅಧ್ಯಯನ ಮಾಡಿದ ಮತ್ತು ಅವರ ಅಭ್ಯಾಸವನ್ನು ಪಶ್ಚಿಮಕ್ಕೆ ತಂದ ಮೊದಲ ಪಾಶ್ಚಿಮಾತ್ಯ ಮಹಿಳೆ. ಆಕೆ ಚೀನಾದಲ್ಲೂ ಯೋಗತರಗತಿಗಳನ್ನು ಆರಂಭಿಸಿದ್ದ ಸಾಹಸಿ.
ಭಾರತದ ಯೋಗಕ್ಕೆ ಬಹುಮುಖ್ಯ ಕೊಡುಗೆ ನೀಡಿದ ಕೃಷ್ಣಮಾಚಾರ್ಯರು ತಮ್ಮ ಶಿಷ್ಯರ ಮೂಲಕ ಪಶ್ಚಿಮದಲ್ಲಿ ಯೋಗದ ಪಿತಾಮಹರೆನಿಸಿದರು. ಅವರ ವಿದ್ಯಾರ್ಥಿಗಳಲ್ಲಿ ಪ್ರಮುಖರು ಇಂದ್ರಾದೇವಿ, ಬಿ.ಕೆ.ಎಸ್. ಅಯ್ಯಂಗಾರ್, ಪಟ್ಟಾಭಿ ಜೋಯಿಸ್ ಮತ್ತು ಟಿ.ಕೆ.ವಿ. ದೇಶಿಕಾಚಾರ್.
1960ರ ದಶಕದಲ್ಲಿ ಸ್ವಾಮಿ ವಿಷ್ಣುದೇವಾನಂದರು ಯೋಗ ಶಾಲೆಗಳ ಅತಿದೊಡ್ಡ ಜಾಲವೊಂದನ್ನು ಅಮೆರಿಕದಲ್ಲಿ ತೆರೆದರು.
1966ರಲ್ಲಿ ಬಿ.ಕೆ.ಎಸ್. ಅಯ್ಯಂಗಾರ್ ಅವರ “ಲೈಟ್ ಆನ್ ಯೋಗ” ಗ್ರಂಥವನ್ನು ಅಮೆರಿಕದಲ್ಲಿ ಪ್ರಕಟಿಸಲಾಯಿತು. ಇದನ್ನು ಆಸನಗಳ ಅಭ್ಯಾಸದ ಭಗವದ್ಗೀತೆ ಎಂದು ಪರಿಗಣಿಸಲಾಗಿದೆ. 1970ರ ದಶಕದಲ್ಲಿ ಪಟ್ಟಾಭಿ ಜೋಯಿಸ್ ಅವರು ಅಮೆರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ಅಷ್ಟಾಂಗಯೋಗದ ವ್ಯಾಪಕ ಪ್ರಚಾರಸರಣಿಯನ್ನು ಪ್ರಾರಂಭಿಸಿದರು. ಸರಿಸುಮಾರು ಅದೇ ಸಮಯದಲ್ಲಿ ಕೃಷ್ಣಮಾಚಾರ್ಯರ ಮಗ ದೇಶಿಕಾಚಾರ್ ತಮ್ಮ ತಂದೆಯ ‘ವಿನಿಯೋಗ’ವನ್ನು ಪಶ್ಚಿಮಕ್ಕೆ ಪರಿಚಯಿಸಿದರು.
ಆನಂತರವೂ ದೇಶ-ವಿದೇಶದ ಅನೇಕ ಮಹನೀಯರು ಯೋಗದ ವ್ಯಾಪಕ ಪ್ರಚಾರದಲ್ಲಿ ತೊಡಗಿಸಿಕೊಂಡು ಅದನ್ನು ಮನೆಮಾತಾಗಿಸಿದರು.
ಇಂದು ಅನೇಕ ಯೋಗ ಯೂನಿವರ್ಸಿಟಿಗಳು ದೇಶ-ವಿದೇಶಗಳಲ್ಲಿ ತಲೆಯೆತ್ತಿವೆ. ಯೋಗ ಸ್ಟುಡಿಯೋಗಳು ಹುಟ್ಟಿಕೊಂಡಿವೆ. ಹೆಚ್ಚು ಹೆಚ್ಚು ವಿದೇಶೀಯರು ಭಾರತಕ್ಕೆ ಬಂದು ಯೋಗವನ್ನು ಕಲಿಯುತ್ತಿದ್ದಾರೆ ಮತ್ತು ಪರಿಣಾಮಕಾರಿಯಾಗಿ ಕಲಿಸುತ್ತಿದ್ದಾರೆ. ವಿದೇಶೀಯರಲ್ಲಿ ಅಂತರ್ಗತವಾದ ಸ್ಪಷ್ಟತೆ ಮತ್ತು ಸಂವಹನಕೌಶಲ ಅವರನ್ನು ಉತ್ತಮ ಶಿಕ್ಷಕರನ್ನಾಗಿಸುತ್ತಿದೆ.
ಆದರೂ ವಿದೇಶಗಳಲ್ಲಿ – ಬಹುಮಟ್ಟಿಗೆ ಭಾರತದಲ್ಲೂ – ಯೋಗವೆಂದರೆ ಆಸನಗಳಿಗೆ ಸೀಮಿತವಾಗಿ ದೈಹಿಕ ವ್ಯಾಯಾಮಕ್ಕೆ ಸಮೀಕರಿಸಲಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಆಸನಗಳು ನಮ್ಯತೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತವೆ ಎಂಬುದು ಪ್ರಚಲಿತವಾಗಿದೆ. ಕೆಲವು ಪಾಶ್ಚಿಮಾತ್ಯ ಸಮೀಕ್ಷೆಗಳ ಪ್ರಕಾರ ವ್ಯಾಯಾಮಗಳಲ್ಲಿ ವಾಕಿಂಗ್ ಮತ್ತು ಈಜಿನ ನಂತರ ಮೂರನೇ ಸ್ಥಾನದಲ್ಲಿ ಯೋಗವಿದೆ. ಆಧುನಿಕದಲ್ಲಿ ಯೋಗತರಗತಿಗಳನ್ನು ಹಂತಗಳನ್ನಾಗಿ ವಿಂಗಡಿಸಲಾಗಿದೆ. ಈ ಹಂತಗಳು ಯೋಗದ ಆಧ್ಯಾತ್ಮಿಕ ಅಭ್ಯಾಸಗಳಿಗೆ ಅನ್ವಯವಾಗದೆ, ದೈಹಿಕಕ್ಷಮತೆಗಷ್ಟೆ ತಕ್ಕುದಾಗಿವೆ. ಅವು ಧ್ಯಾನ ಅಥವಾ ಯೋಗದ ತತ್ತ್ವಶಾಸ್ತ್ರದ ಆಳವಾದ ಜ್ಞಾನದೊಂದಿಗಿನ ಹೆಚ್ಚಿನ ಅನುಭವವನ್ನು ಒಳಗೊಂಡಿರದೆ, ವಿದ್ಯಾರ್ಥಿಗಳ ಆಸನದ ಭಂಗಿ, ಕಠಿಣವಾದ ಅಭ್ಯಾಸ ಮಾಡಬಲ್ಲ ಶಕ್ತಿ ಇತ್ಯಾದಿಗಳನ್ನು ಪ್ರಮುಖವಾಗಿ ಆಧರಿಸಿದೆ.
ಯೋಗಾಭ್ಯಾಸ ಆರಂಭಿಸುವುದು ಹೇಗೆ?
ಗುರುವಿಲ್ಲದೆ ಯೋಗವನ್ನು ಸ್ವಯಂ ಅಭ್ಯಾಸ ಮಾಡುವ ಬಗೆಗೆ ವಿಭಿನ್ನ ಅಭಿಪ್ರಾಯಗಳಿವೆ. ಯೋಗವನ್ನು ತಾವಾಗಿಯೇ ಆಭ್ಯಸಿಸಿ ಯಶಸ್ವಿಯಾದ ಅನೇಕರಿದ್ದಾರೆ. ಆದರೆ ಅದಕ್ಕೆ ಅಗತ್ಯವಿರುವ ಅಂತಃಶಕ್ತಿ ನಮ್ಮಲ್ಲಿ ಇದೆಯೇ ಇಲ್ಲವೇ ಎನ್ನುವ ಅನುಮಾನಗಳಿರುತ್ತವೆ. ಹಾಗೆಯೇ ಇಂಟರ್ನೆಟ್ ಅಥವಾ ಪುಸ್ತಕವನ್ನು ನೋಡಿಕೊಂಡು ಅಭ್ಯಾಸಮಾಡಿದರೆ ಭಂಗಿಯಲ್ಲಿ ತಪ್ಪಾಗಿ ದೈಹಿಕ ತೊಂದರೆಗಳಾಗುವ ಸಂಭವವೂ ಇದೆ. ಆದ್ದರಿಂದ ಗುರುಮುಖೇನ ಅಭ್ಯಾಸ ಮಾಡುವುದೇ ಸುರಕ್ಷಿತ ವಿಧಾನ.
ಇತ್ತೀಚೆಗೆ ಪ್ರತಿಯೊಂದು ಊರಲ್ಲೂ ಸುವ್ಯವಸ್ಥಿತವಾಗಿ ಯೋಗಾಭ್ಯಾಸವನ್ನು ಹೇಳಿಕೊಡುವ ಸಂಘ-ಸಂಸ್ಥೆಗಳಿವೆ. ಅವುಗಳನ್ನು ಸಂಪರ್ಕಿಸಬಹುದು. ಆದರೆ ಇದರ ಜೊತೆಗೆ ಉದ್ಭವಿಸಿರುವ ಸಮಸ್ಯೆಯೆಂದರೆ ಅರೆಬರೆ ಕಲಿತವರೂ ಯೋಗಶಿಕ್ಷಕರಾಗಿರುವುದು. ಈ ರೀತಿಯ ಶಿಕ್ಷಕರಿಂದಾಗಿ ಪ್ರಯೋಜನಕ್ಕಿಂತ ಹೆಚ್ಚು ಕೆಡುಕುಂಟಾಗುವ ಸಾಧ್ಯತೆ ಇರುತ್ತದೆ ಎಂಬುದೂ ನಿಜ.
ಆಧುನಿಕ ಯುಗದಲ್ಲಿ ಯೋಗ
ಪ್ರಸಕ್ತ ಆಧುನಿಕ ಜಗತ್ತು ವೇಗದಿಂದ ಕೂಡಿದ ಸ್ಪರ್ಧಾತ್ಮಕ ವಿಶ್ವವಾಗಿದೆ. ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುವುದು ಮನುಷ್ಯನ ವಿಕಾಸದ ಗುರಿಯಾಗಿ, ಉದ್ದೇಶವಾಗಿ ಕಂಡುಬಂದಿದೆ, ಮತ್ತದು ಸಹಜವೇ. ಇಲ್ಲದಿದ್ದರೆ ಶಿಲಾಯುಗದಿಂದ ಕಂಪ್ಯೂಟರ್ ಯುಗದವರೆಗಿನ ಪ್ರಯಾಣ ಮನುಷ್ಯನಿಗೆ ಸಾಧ್ಯವಾಗುತ್ತಿರಲಿಲ್ಲ. ಮನುಷ್ಯನ ಮಾನಸಿಕ ಮೂಲಭೂತತೆಯಲ್ಲಿ ಬೆಳವಣಿಗೆ ಎನ್ನುವುದು ಹಾಸುಹೊಕ್ಕಾಗಿದೆ. ಮತ್ತದು ಮನುಕುಲದ ಜೀವನಮಟ್ಟವನ್ನು ಏರಿಸಿರುವುದರಲ್ಲಿ ಅನುಮಾನವೇ ಇಲ್ಲ. ಆದರೆ ಈ ಹೆಮ್ಮೆಯ ಜೊತೆಜೊತೆಗೆ ಆ ವಿಕಾಸ ಮತ್ತು ಬೆಳವಣಿಗೆಗಳು ಇರಬೇಕಾದಷ್ಟು ಪ್ರಜ್ಞಾಪೂರ್ವಕ ಚಟುವಟಿಕೆಗಳಾಗಿ ಬೆಳೆದು ಬಂದಿವೆಯೇ ಎಂಬುದನ್ನು ಅವಲೋಕಿಸಿದರೆ ಸ್ವಲ್ಪಮಟ್ಟಿನ ನಿರಾಸೆ ಕಾಡುವುದಂತೂ ನಿಶ್ಚಿತ.
ಹೊರಜಗತ್ತಿನ ಮಟ್ಟಿಗೆ ಗಮನಿಸಿದರೆ ಪ್ರಗತಿಯ ಜೊತೆಗೆ ಪರಿಸರಮಾಲಿನ್ಯ, ಜಾಗತಿಕ ತಾಪಮಾನ ಏರಿಕೆ, ಅಂತರ್ಜಲ ಕುಸಿತದಂತಹ ಆತಂಕಕಾರಿ ವಿದ್ಯಮಾನಗಳು ಜೀವಲೋಕದ ಅಸ್ತಿತ್ವಕ್ಕೇ ಸವಾಲಾಗುವಂತಿದ್ದರೆ, ಮನುಷ್ಯನು ವೈಯಕ್ತಿಕವಾಗಿ ಎದುರಿಸಬೇಕಾದ ಸವಾಲುಗಳೂ ಕಡಮೆಯದಲ್ಲ.
ಮನುಷ್ಯನ ದೇಹ ಸಾವಿರಾರು ವರ್ಷಗಳಿಂದ ಚಲನೆಗಾಗಿ ರೂಪುಗೊಂಡಿದೆ. 20ನೇ ಶತಮಾನದವರೆಗೂ ನಾವೆಲ್ಲರೂ ಚಲನೆಯೇ ಬದುಕಿನ ರೀತಿಯಾಗಿ ಬದುಕುತ್ತಿದ್ದೆವು. ಮೊದಲಿಗೆ ಬೇಟೆಯಾಡುತ್ತ, ಅನಂತರ ಗದ್ದೆಗಳಲ್ಲಿ ಕೆಲಸ ಮಾಡುತ್ತ, ಆನಂತರ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತ ಬೆವರಿಳಿಸುತ್ತಿದ್ದೆವು. ಆದರೆ ಅದರ ನಂತರದ ಉದ್ಯೋಗಗಳಲ್ಲಿ ತಂತ್ರಜ್ಞಾನದ ಬಳಕೆಯಿಂದಾಗಿ ಕುಳಿತೇ ಕೆಲಸ ಮಾಡುವುದು ಹೆಚ್ಚಾಗಿದೆ. ದೈಹಿಕ ದುಡಿಮೆ ಕಡಮೆಯಾಗಿ ಮಾನವನ ಬುದ್ಧಿಮತ್ತೆಯನ್ನು ಆಧರಿಸಿದ ಉದ್ಯೋಗಗಳು ಅಧಿಕ ಸಂಪಾದನೆಯ ಮಾರ್ಗಗಳಾಗಿ ಹೊಮ್ಮುತ್ತಿವೆ. ಪ್ರತಿಯೊಬ್ಬ ತಂದೆತಾಯಿಯ ಕನಸೂ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಅವರಿಗೆ ಒಳ್ಳೆಯ ಉದ್ಯೋಗ ದೊರಕಿಸುವುದೇ ಆಗಿದೆ ಮತ್ತು ಈವತ್ತಿನ ಕಾಲದಲ್ಲಿ ಅದನ್ನು ತಪ್ಪೆನ್ನಲೂ ಆಗದು. ಆದರೆ ಈ ರೀತಿಯ ಬುದ್ಧಿಮತ್ತೆಯನ್ನು ಬೇಡುವ ಉದ್ಯೋಗಗಳು ನಮ್ಮನ್ನು ಆಲಸಿಗಳನ್ನಾಗಿ ಮಾಡಿ, ರೋಗದ ಗೂಡುಗಳನ್ನಾಗಿ ಪರಿವರ್ತಿಸುತ್ತಿವೆ. ಬುದ್ಧಿಮತ್ತೆ ಉನ್ನತ ಜ್ಞಾನವನ್ನು ಆಧರಿಸದೆ ಶಿಕ್ಷಣವನ್ನು ಮಾತ್ರವೇ ಆಧರಿಸಿರುವ ಕಾರಣ ಮನಸ್ಸಿಗೆ ಸಂಬಂಧಿಸಿದ ವ್ಯಾಧಿಗಳೂ ಹೆಚ್ಚಾಗುತ್ತಿವೆ.
ಇಂದಿನ ಯುಗದಲ್ಲಿ ನಾವು ಸುಮಾರು 8-10 ಗಂಟೆಗಳ ಕಾಲ ಕುಳಿತೇ ಇರುತ್ತೇವೆ. ಅನೇಕ ಸಂಶೋಧನೆಗಳ ಪ್ರಕಾರ ಇದು ಅತ್ಯಂತ ಅಪಾಯಕಾರಿ ಜೀವನಶೈಲಿ. ಮಧುಮೇಹ, ಹೃದಯಸಂಬಂಧಿ ಕಾಯಿಲೆಗಳು, ರಕ್ತದೊತ್ತಡ ಇವೆಲ್ಲದಕ್ಕೂ ಇದು ಮುಕ್ತ ಆಹ್ವಾನ.
ದುಡಿಯುವ ದಂಪತಿ, ಅವಸರದ ಜೀವನಶೈಲಿ, ಒತ್ತಡದ ಔದ್ಯೋಗಿಕ ವಾತಾವರಣ, ವಿಭಕ್ತಕುಟುಂಬಗಳು ಇವೆಲ್ಲ ಸೇರಿ ಮನುಷ್ಯನನ್ನು ಆಳದಲ್ಲಿ ಒಂಟಿಯಾಗಿಸಿಬಿಟ್ಟಿವೆ. ನಗರಗಳ ಆಧುನಿಕ ಸಮಾಜದಲ್ಲಿನ ಜೀವನವು ಹೆಚ್ಚು ಸಂಕೀರ್ಣವಾಗಿದೆ ಮತ್ತು ಅನೇಕಬಾರಿ ಉದ್ವಿಗ್ನತೆಯಿಂದ ತುಂಬಿರುತ್ತದೆ. ನಮ್ಮಲ್ಲಿ ಹೈಟೆಕ್ ವೈದ್ಯಕೀಯ ಸೌಲಭ್ಯಗಳಿದ್ದರೂ, ನಾವು ಇನ್ನೂ ಒತ್ತಡದ, ಅನಾರೋಗ್ಯಕರ ಮತ್ತು ಅಸ್ಥಿರ ಜೀವನವನ್ನು ನಡೆಸುತ್ತಿದ್ದೇವೆ. ಈ ಪರಿಸ್ಥಿತಿಯಲ್ಲಿ, ಯೋಗವು ನಮ್ಮ ದೇಹ, ಮನಸ್ಸು ಮತ್ತು ಆತ್ಮಕ್ಕೆ
ಶಾಂತಿಯನ್ನು ತರುತ್ತದೆ ಮತ್ತು ನಮ್ಮ ಜೀವನಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ. ಆಧುನಿಕ ಜೀವನದಲ್ಲಿ ಯೋಗದ ಮಹತ್ತ್ವ ಅತಿಶಯದ್ದಾಗಿದೆ.
ಯೋಗವೆಂದರೆ ಅದು ವರ್ಜನೆಗಳು, ಅನುಷ್ಠಾನಗಳು, ಆಸನಗಳು, ಪ್ರಾಣಾಯಾಮ, ಧ್ಯಾನ, ಆಹಾರ – ಇವೆಲ್ಲವನ್ನೂ ಒಳಗೊಂಡ ಜೀವನಶೈಲಿ.
ಆಸನಗಳು ದೇಹದ ಶಕ್ತಿಯನ್ನು ಹೆಚ್ಚಿಸಿದರೆ, ಪ್ರಾಣಾಯಾಮವು ಸರಳ ಉಸಿರಾಟದ ಮೂಲಕ ಮನೋದೈಹಿಕ ಸಬಲತೆಗೆ ಸಹಾಯಕವಾಗಿದೆ. ಇದು ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ದೇಹದ ಎಲ್ಲ ಭಾಗಗಳ ಆಮ್ಲಜನಕದ ಪೂರೈಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತಪ್ಪಿಹೋದ ಮನೋವೈಜ್ಞಾನಿಕ ಸಮತೋಲವನ್ನು ಪುನಃಸ್ಥಾಪಿಸಲು ಧ್ಯಾನವು ಸಹಾಯಕ. ಯೋಗಾಹಾರವು ಸಾತ್ತ್ವಿಕತೆಯನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗಿದೆ.
ಯೋಗವು ದೇಹದ ಭಂಗಿಯನ್ನು ಸುಧಾರಿಸುತ್ತದೆ, ಆಮ್ಲಜನಕದ ಸೇವನೆಯನ್ನು ಹೆಚ್ಚಿಸುತ್ತದೆ. ದೈಹಿಕವಾಗಿ ಉಸಿರಾಟ, ಜೀರ್ಣಾಂಗ, ಅಂತಃಸ್ರಾವಕ, ಸಂತಾನೋತ್ಪತ್ತಿ, ವಿಸರ್ಜನಾ ವ್ಯವಸ್ಥೆ, ರಕ್ತಪರಿಚಲನೆ ಮೊದಲಾದ ಜೀವಾಧಾರಕ ವ್ಯವಸ್ಥೆಗಳ ಕಾರ್ಯವಂತಿಕೆಯನ್ನು ಹೆಚ್ಚಿಸುತ್ತದೆ. ಮನಸ್ಸನ್ನು ಶಾಂತಗೊಳಿಸುವ ಮೂಲಕ, ನಮ್ಮನ್ನು ಪರಿಸರಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುವ ಮೂಲಕ ಮತ್ತು ಮಾನಸಿಕ ಚಡಪಡಿಕೆಯಿಂದ ಉಂಟಾಗುವ ನಿದ್ರಾಹೀನತೆಯನ್ನು ಕಡಮೆ ಮಾಡುವುದರ ಮೂಲಕ ಮನಸ್ಸಿನ ಮೇಲೆ ಅತ್ಯಂತ ಗುಣಾತ್ಮಕ ಪರಿಣಾಮವನ್ನು ಬೀರುತ್ತದೆ. ಸ್ಪರ್ಧಾತ್ಮಕ, ಒತ್ತಡದ ಕೆಲಸದ ವಾತಾವರಣದಲ್ಲಿರುವ ಮಂದಿಗೆ, ತಲೆನೋವು, ಬೆನ್ನು ಮತ್ತು ಭುಜದ ನೋವು, ಅಲರ್ಜಿ ಮತ್ತು ಆಸ್ತಮಾದಿಂದ ಬಳಲುತ್ತಿರುವವರಿಗೆ ಯೋಗವನ್ನು ಹೆಚ್ಚು ಶಿಫಾರಸು ಮಾಡಲಾಗಿದೆ. ವರ್ತನೆಯಲ್ಲಿನ ಅಸ್ವಸ್ಥತೆ, ನರಗಳ ಬಿಗಿತ ಮತ್ತು ಉನ್ಮಾದದ ಖಿನ್ನತೆಯನ್ನು ಯೋಗವು ಗುಣಪಡಿಸುತ್ತದೆ. ಯೋಗದ ನಿಯಮಿತ ಅಭ್ಯಾಸವು ನಮ್ಮ ಯೋಗಕ್ಷೇಮ, ಏಕಾಗ್ರತೆ ಮತ್ತು ಶಾಂತತೆಯನ್ನು ಹೆಚ್ಚಿಸುವ ಮೂಲಕ ನಾವು ಬಳಲುತ್ತಿರುವ ಯಾವುದೇ ದೈಹಿಕ ಅಥವಾ ಮಾನಸಿಕ ಸ್ಥಿತಿಗಳನ್ನು ಒಪ್ಪಿಕೊಂಡು ಅದರಿಂದ ಬಿಡುಗಡೆ ಪಡೆಯಲು ಸಹಾಯ ಮಾಡುತ್ತದೆ.
ಯೋಗವು ನಮಗೆ ಕಲಿಸುವ ಅತ್ಯುತ್ತಮ ಪಾಠವೆಂದರೆ ವರ್ತಮಾನದ ಮೇಲೆ ಗಮನ ಕೇಂದ್ರೀಕರಿಸುವುದು. ಇತ್ತೀಚಿನ ಅಧ್ಯಯನಗಳಲ್ಲಿ, ಪ್ರತಿದಿನ ಯೋಗವನ್ನು ಅಭ್ಯಾಸ ಮಾಡುವುದರಿಂದ ನಮ್ಮ ಬುದ್ಧಿಶಕ್ತಿ ಮತ್ತು ಸ್ಮರಣಶಕ್ತಿ ಸುಧಾರಿಸುತ್ತದೆ ಎಂದು ಕಂಡುಬಂದಿದೆ. ಮೊಬೈಲ್, ಲ್ಯಾಪ್ಟಾಪ್, ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಂತಹ ಚಿತ್ತಭ್ರಂಶಕಗಳಿಂದ ತುಂಬಿದ ನಮ್ಮ ದಿನದಲ್ಲಿ ಯೋಗವು ನಮ್ಮ ಅರಿವನ್ನು ಪ್ರಸ್ತುತ ಕ್ಷಣಕ್ಕೆ ತರುತ್ತದೆ ಮತ್ತು ಗಮನವನ್ನು ಕೇಂದ್ರೀಕರಿಸಲು ಹಾಗೂ ನಮ್ಮ ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇತ್ತೀಚೆಗೆ ಆಸ್ಪತ್ರೆಗಳಲ್ಲೂ ಯೋಗವನ್ನು ರೋಗಿಗಳಿಗೆ ಸಲಹೆ ಮಾಡಲಾಗುತ್ತಿದೆ. ಯೋಗದ ಸಹಾಯದಿಂದ ಕಾಯಿಲೆಯ ಗುಣಪಡಿಸುವಿಕೆಯ ವೇಗವನ್ನು ವೃದ್ಧಿಸಬಹುದೆಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಪ್ರಸವಪೂರ್ವ ಮತ್ತು ಪ್ರಸವೋತ್ತರ ಯೋಗವೂ ಜನಪ್ರಿಯವಾಗುತ್ತಿದೆ.
ಆಧುನಿಕರಾದ ನಮಗೆ ಜೀವನದಲ್ಲಿ ತಾಳಮೇಳ ತಪ್ಪಿದಾಗ ಯೋಗ ಎಚ್ಚರಿಸುವ ಅಚ್ಚುಮೆಚ್ಚಿನ ಸ್ನೇಹಿತ. ಒಟ್ಟಾರೆಯಾಗಿ ಇಂದಿನ ಜಗತ್ತಿಗೆ ಅತ್ಯಗತ್ಯವಾದ ಯೋಗವು ಸಮತೋಲಿತ ಮತ್ತು ಸಮಗ್ರ ವ್ಯಕ್ತಿತ್ವವನ್ನು ಉತ್ತೇಜಿಸುತ್ತದೆ ಎಂದು ಹೇಳಬಹುದು.
ಮಕ್ಕಳಿಗೆ ಯೋಗ
ಹಿಂದಿನ ಕಾಲದ ಮಕ್ಕಳ ಜಗತ್ತಿಗಿಂತ ಇಂದಿನ ಮಕ್ಕಳ ಜಗತ್ತು ಬಹಳವೇ ಭಿನ್ನವಾಗಿದೆ. ಅವರ ಸವಾಲುಗಳೂ ಭಿನ್ನವಾಗಿವೆ. ಹಿಂದಿನ ಮಕ್ಕಳಿಗೆ ಅವಿಭಕ್ತಕುಟುಂಬಗಳ ಆಸರೆಯಿತ್ತು. ಏಕಾಂಗಿತನದ ಅನುಭವವಾಗುತ್ತಿರಲಿಲ್ಲ. ಜೊತೆಗೆ ಬೆಳೆಯುವ ಅನೇಕ ಜೀವಗಳು ಸೋಲು-ಗೆಲವುಗಳನ್ನು ಸಮಾನವಾಗಿ ಸ್ವೀಕರಿಸುವ ಛಾತಿಯನ್ನು ಅವರಲ್ಲಿ ತುಂಬುತ್ತಿದ್ದವು.
ಇಂದಿನ ಮಕ್ಕಳು ಮಾಲ್ಗಳು ಮತ್ತು ಸ್ಪರ್ಧಾತ್ಮಕ ಕ್ರೀಡೆಗಳ ಜಗತ್ತಿನಲ್ಲಿ ಬೆಳೆಯುತ್ತಿದ್ದಾರೆ. ಟಿವಿ ಅಥವಾ ಕಂಪ್ಯೂಟರ್ ಮುಂದೆ ಸಾಕಷ್ಟು ಸಮಯವನ್ನು ಕಳೆಯುತ್ತಾರೆ. ಅನೇಕ ಶಾಲೆಗಳೂ ಐ-ಪ್ಯಾಡ್ಗಳನ್ನು ಅಥವಾ ಸ್ಮಾರ್ಟ್-ಕಲಿಕೆಯನ್ನು ಉತ್ತೇಜಿಸುತ್ತವೆ. ವೇಗವಾಗಿ ಬದಲಾಗುತ್ತಿರುವ ಕಾಲಕ್ಕೆ ತಕ್ಕುದಾಗಿರುವ ಇವೆಲ್ಲವನ್ನು ನಿರಾಕರಿಸುವುದೂ ಕಷ್ಟದ ಕೆಲಸ. ಎಲ್ಲ ಮಕ್ಕಳೂ ಹೀಗೇ ಇರುವಾಗ ತಮ್ಮ ಮಕ್ಕಳು ಮಾತ್ರ ಕೂಪಮಂಡೂಕರಾಗುವರೆಂಬ ಭಯಕ್ಕೆ ಅನೇಕ ಜಾಗೃತ ತಂದೆತಾಯಿಯರೂ ಇವನ್ನು ದೂರವಿಡುವುದಿಲ್ಲ. ಹಾಗೆ ಮಾಡಿದರೂ ಓರಗೆಯವರನ್ನು ನೋಡಿ ಮಕ್ಕಳು ಇವೆಲ್ಲವನ್ನು ಕೇಳಿಯೇ ಕೇಳುತ್ತಾರೆ. ಕೊಡದಿದ್ದರೆ ಕೀಳರಿಮೆಯಿಂದ ನರಳುತ್ತಾರೆ. ದುಡಿಯುವ ತಂದೆತಾಯಿಗೆ ಎಲ್ಲ ಕೆಲಸ ಬಿಟ್ಟು ಬರೇ ಮಕ್ಕಳನ್ನು ಮನರಂಜಿಸುತ್ತ ಕೂರುವುದು ಸಾಧ್ಯವಿಲ್ಲ, ಸಾಧುವೂ ಅಲ್ಲ. ಅಲ್ಲದೆ ಇಂದಿನ ಜಗತ್ತಿನಲ್ಲಿ ಗ್ಯಾಜೆಟ್ಗಳು ಕಲಿಕೆಯ ಸಾಧನಗಳೂ ಹೌದು. ಆದರೆ ಇವೆಲ್ಲವುಗಳ ಪರಿಣಾಮವಾಗಿ ಮಕ್ಕಳು ದೈಹಿಕ ಚಟುವಟಿಕೆಯಲ್ಲಿ ಕಡಮೆ ಸಮಯವನ್ನು ಕಳೆಯುವಂತಾಗಿದೆ.
ಜೊತೆಗೆ ಅವರು ಸೇವಿಸುವ ಕ್ಯಾಲರಿಯುಕ್ತ, ಸಂಸ್ಕರಿಸಿದ ಆಹಾರ ಮತ್ತು ಶಾಲಾ ಪರೀಕ್ಷೆಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಅಗತ್ಯ ಇವೆಲ್ಲ ಸೇರಿ ಅನೇಕ ಮಕ್ಕಳು ಒತ್ತಡಕ್ಕೆ ಒಳಗಾಗುವುದರಲ್ಲಿ ಆಶ್ಚರ್ಯವಿಲ್ಲ. ನಿದ್ರಾಹೀನತೆ, ತಿನ್ನುವುದಕ್ಕೆ ಸಂಬಂಧಿಸಿದ ಅಸ್ವಸ್ಥತೆಗಳು, ಎಡಿಎಚ್ಡಿ (ಅಟೆನ್ಷನ್ ಡಿಫಿಸಿಟ್ ಹೈಪರ್-ಆಕ್ಟಿವಿಟಿ ಡಿಸಾರ್ಡರ್) ಮತ್ತು ಕೆಲವೊಮ್ಮೆ ಆಕ್ರಮಣಶೀಲತೆ ಇವೆಲ್ಲ ಇಂದಿನ ಮಕ್ಕಳನ್ನು ಕಾಡುತ್ತಿವೆ.
ಯೋಗವು ಪ್ರಸ್ತುತ ದಿನಗಳಲ್ಲಿ ಕಂಡುಬರುತ್ತಿರುವ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಅಥವಾ ಸಹಾಯ ಮಾಡುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಯೋಗವು ಮಕ್ಕಳ ಜೀವನದಲ್ಲಿ ಹಾಸುಹೊಕ್ಕಾದರೆ, ಸ್ಪರ್ಧಾತ್ಮಕವಲ್ಲದ ದೈಹಿಕ ಚಟುವಟಿಕೆಯೊಂದಿಗೆ ಸ್ವಾಭಿಮಾನ ಮತ್ತು ದೇಹದ ಅರಿವನ್ನು ಪ್ರೋತ್ಸಾಹಿಸುತ್ತದೆ. ಸಹಕಾರ ಮತ್ತು ಸಹಾನುಭೂತಿಯನ್ನು ಉತ್ತೇಜಿಸುತ್ತದೆ.
ದೈಹಿಕವಾಗಿ ಇದು ಅವರ ನಮ್ಯತೆ (flexibility), ಶಕ್ತಿ, ಸಮನ್ವಯ ಮತ್ತು ದೇಹದ ಅರಿವನ್ನು ಹೆಚ್ಚಿಸುತ್ತದೆ. ಇದರ ಜೊತೆಯಲ್ಲಿ, ಅವರ ಏಕಾಗ್ರತೆ, ಶಾಂತತೆ ಮತ್ತು ವಿಶ್ರಾಂತಿಯ ಪ್ರಜ್ಞೆ ಸುಧಾರಿಸುತ್ತದೆ. ಯೋಗದ ಅಭ್ಯಾಸದಿಂದ ಮಕ್ಕಳು ವ್ಯಾಯಾಮ ಮಾಡುತ್ತಾರೆ, ಆಡುತ್ತಾರೆ, ಆಂತರಿಕ ಆತ್ಮದೊಂದಿಗೆ ಹೆಚ್ಚು ಆಳವಾಗಿ ಸಂಪರ್ಕ ಹೊಂದುತ್ತಾರೆ ಮತ್ತು ಅವರನ್ನು ಸುತ್ತುವರಿದಿರುವ ನೈಸರ್ಗಿಕ ಪ್ರಪಂಚದೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ.
ಯೋಗವನ್ನು ಸ್ವೀಕರಿಸಿದ ಮಕ್ಕಳು ಹೆಚ್ಚು ಶಾಂತರು, ಹೆಚ್ಚು ಜಾಗೃತರು ಮತ್ತು ಉತ್ತಮ ಕೇಳುಗರೂ ಹೆಚ್ಚು ಸೃಜನಶೀಲರೂ ಆಗಿರುವುದು ಕಂಡುಬಂದಿದೆ. ತಾವು ಆರಿಸಿಕೊಂಡ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಲು, ಹಾಗೊಂದು ವೇಳೆ ಯಶಸ್ಸು ಕೈತಪ್ಪಿದರೂ ಅದನ್ನು ನಿಭಾಯಿಸಿಕೊಂಡು ಹೋಗಲು ಅವರಿಗೆ ಸಾಧ್ಯವಿದೆ.
ಮಗುವಿಗೆ ಯೋಗದ ಪ್ರಯೋಜನಗಳು
ಯೋಗದ ಪ್ರಯೋಜನಗಳನ್ನು ಸ್ಥೂಲವಾಗಿ ಹೇಳುವುದಾದರೆ ಈ ಕೆಳಗಿನವಾಗಿ ವರ್ಗೀಕರಿಸಬಹುದು.
ದೈಹಿಕಶಕ್ತಿ: ಯೋಗವು ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಈಜು, ಫುಟ್ಬಾಲ್, ಬ್ಯಾಡ್ಮಿಂಟನ್ ಅಂತಹ ಕ್ರೀಡೆ-ಹವ್ಯಾಸಗಳನ್ನು ಬೆಳೆಸಿಕೊಂಡು ಅದರಲ್ಲಿ ಸಾಧನೆಮಾಡಲು ಬಯಸುವ ಮಕ್ಕಳಿಗೆ ದೈಹಿಕವಾಗಿ ಯೋಗ ಅತಿ ಅಗತ್ಯವಾದುದು. ಯೋಗ ಕಲಿಯುವ ಮಕ್ಕಳು ತಮ್ಮ ಎಲ್ಲ ಸ್ನಾಯುಗಳನ್ನು ಹೊಸ ರೀತಿಯಲ್ಲಿ ಬಳಸಲು ಕಲಿಯುತ್ತಾರೆ. ಇದು ಮಗುವಿಗೆ ತನ್ನ ದೇಹದ ಬಗ್ಗೆ ಅರಿವು ಮೂಡಿಸುತ್ತದೆ ಮತ್ತು ಸ್ನಾಯುಗಳು ಹೇಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಯುತ್ತದೆ.
ಏಕಾಗ್ರತೆ: ಅಭ್ಯಾಸದ ಕಾರ್ಯವು ಮಕ್ಕಳ ಮನಸ್ಸನ್ನು ಆಸನದ ಅಭ್ಯಾಸದ ಮೇಲೆ ಕೇಂದ್ರೀಕರಿಸಲು ಪ್ರೋತ್ಸಾಹಿಸುತ್ತದೆ. ನಿರ್ದಿಷ್ಟ ಭಂಗಿಯನ್ನು ಸಾಧಿಸಲು ಅಥವಾ ಸಮತೋಲನದಲ್ಲಿರಲು ಸಾಧಿಸುವ ಏಕಾಗ್ರತೆಯ ಫಲವಾಗಿ, ಶಾಲೆಯಲ್ಲಿಯೂ ಗಮನ ಕೇಂದ್ರೀಕರಿಸಲು ಯೋಗವು ಮಕ್ಕಳಿಗೆ ಸಹಾಯ ಮಾಡುತ್ತದೆ.
ಸಮತೋಲನ ಮತ್ತು ಸಮನ್ವಯ: ಸಮತೋಲವು ಯೋಗದ ಪ್ರಮುಖ ಅಂಶವಾಗಿದೆ. ಇದು ಮಾನಸಿಕ ಮತ್ತು ದೈಹಿಕ ಸಮತೋಲವನ್ನು ಉತ್ತೇಜಿಸಲು ಅನೇಕ ಭಂಗಿಗಳನ್ನು ಒಳಗೊಂಡಿದೆ. ದೈಹಿಕ ಸಮತೋಲನ ಸಾಧಿಸುವುದಕ್ಕೆ ಮಾನಸಿಕ ಸ್ಥಿರತೆ ಅತ್ಯಾವಶ್ಯಕವಾದ ಕಾರಣ ಮಾನಸಿಕ ಸ್ಪಷ್ಟತೆ ಮತ್ತು ಸ್ಥಿರತೆ ಹೊರಹೊಮ್ಮುತ್ತದೆ. ಮಗುವಿಗೆ ಒಂದು ಪಾದದ ಮೇಲೆ ನಿಲ್ಲಲು ಕಷ್ಟವಾಗಿ ಅದು ಬಿದ್ದಾಗ ಮತ್ತು ಮತ್ತೆ ಪ್ರಯತ್ನಿಸಲು ಎದ್ದಾಗ ಶಾಂತವಾಗಿರುವುದು ಅತಿ ಅಗತ್ಯವಾಗಿರುವ ಕಾರಣ ಮಗು ಮಾನಸಿಕ ಮತ್ತು ದೈಹಿಕ ಸಮತೋಲನವನ್ನು ಕಲಿಯುತ್ತದೆ. ಮಕ್ಕಳು ತಮ್ಮ ದೈಹಿಕ ಸಮತೋಲನವನ್ನು ಸುಧಾರಿಸಲು ಕಲಿಯುತ್ತಿದ್ದಂತೆ, ಅವರು ಸಾಧನೆಯ ಪ್ರಜ್ಞೆಯಿಂದ ತುಂಬುತ್ತಾರೆ. ಸಮನ್ವಯವು ಸಮತೋಲನಕ್ಕೆ ನಿಕಟ ಸಂಬಂಧ ಹೊಂದಿದೆ ಮತ್ತು ಒಟ್ಟಾರೆ ಕೌಶಲವನ್ನು ಉತ್ತೇಜಿಸುತ್ತದೆ.
ಆತ್ಮಗೌರವ ಮತ್ತು ಆತ್ಮವಿಶ್ವಾಸ: ಯೋಗವು ಆತ್ಮವಿಶ್ವಾಸವನ್ನು ತುಂಬಲು ಮತ್ತು ಮಕ್ಕಳಿಗೆ ಕಲಿಕೆಯನ್ನು ಪ್ರಾಯೋಗಿಕ ಮಟ್ಟದಲ್ಲಿ ತರಲು ಸಹಾಯ ಮಾಡುತ್ತದೆ. ಯೋಗ ಯಾವತ್ತಿಗೂ ಸ್ಪರ್ಧೆಯಲ್ಲ. ವೈಫಲ್ಯದ ಭಯದಿಂದ ದೈಹಿಕ ಚಟುವಟಿಕೆ ಅಥವಾ ಗುಂಪು ಚಟುವಟಿಕೆಗಳಿಂದ ದೂರ ಸರಿಯುವ ಮಕ್ಕಳಿಗೆ ಯೋಗವು ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಯೋಗವು ಅವರಿಗೆ ಸತತ ಪರಿಶ್ರಮ, ತಾಳ್ಮೆ ಮತ್ತು ಗುರಿಸಾಧನೆಗೆ ಬೇಕಿರುವ ಶ್ರದ್ಧೆಯನ್ನು ಕಲಿಸುತ್ತದೆ. ಸಹಾನುಭೂತಿ, ಸಾವಧಾನತೆ, ಔದಾರ್ಯ, ಏಕಾಗ್ರತೆ, ಶಕ್ತಿಸಂಚಯನಗಳನ್ನು ಅಭ್ಯಾಸ ಮಾಡುವ ಸಾಧನಗಳನ್ನು ಯೋಗ ಒದಗಿಸುತ್ತದೆ.
ದೇಹ-ಮನಸ್ಸಿನ ಸಮನ್ವಯ: ಯೋಗವು ದೇಹವನ್ನು ವ್ಯಾಯಾಮ ಮಾಡುವ ಮೂಲಕ ಮತ್ತು ಮಾನಸಿಕ ಮನೋಭಾವವನ್ನು ಶಾಂತಗೊಳಿಸುವ ಮೂಲಕ ‘ಉತ್ತಮ ದೇಹದಲ್ಲಿ ಉತ್ತಮ ಮನಸ್ಸ’ನ್ನು ಸಾಧಿಸಲು ಮಕ್ಕಳಿಗೆ ಸಹಾಯ ಮಾಡುತ್ತದೆ.
ಯೋಗವು ಎಲ್ಲ ವಯಸ್ಸಿನ ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ, ಜೊತೆಗೆ ಇದು ವಿಶೇಷ ಅಗತ್ಯವಿರುವ ಮಕ್ಕಳಿಗೆ ಬಹಳ ಉಪಯುಕ್ತವಾಗಿ ಕಂಡುಬರುತ್ತದೆ. ಆಟಿಸಂ ಮತ್ತು ಎಡಿಎಚ್ಡಿ ಹೊಂದಿರುವ ಮಕ್ಕಳಿಗೆ ಯೋಗವು ದೊಡ್ಡ ಮಟ್ಟಿನ ಪ್ರಯೋಜನವನ್ನು ನೀಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
ಉಸಿರಾಟ, ಏಕಾಗ್ರತೆ, ಭಂಗಿಗಳು ಮತ್ತು ಮಕ್ಕಳು ಸನ್ನಿವೇಶಗಳಿಗೆ ವರ್ತಿಸಲು ಅಥವಾ ಪ್ರತಿಕ್ರಿಯಿಸಲು ಕಲಿಯುವ ವಿಧಾನವು ನಿರಂತರ ಸ್ವಯಂ-ಅನ್ವೇಷಣೆ ಮತ್ತು ಜಿಜ್ಞಾಸೆಗೆ ಕಾರಣವಾಗುತ್ತದೆ.
ಶಿಕ್ಷಣವಾಗಿ, ಉದ್ಯೋಗವಾಗಿ ಯೋಗ
ಪುಣೆಯಲ್ಲಿನ ರಮಾಮಣಿ ಅಯ್ಯಂಗಾರ್ ಸ್ಮಾರಕ ಯೋಗ ಸಂಸ್ಥೆ, ಮೈಸೂರಿನ ಅಷ್ಟಾಂಗಯೋಗ ಮಂದಿರಂ, ಚೆನ್ನೈನ ಕೃಷ್ಣಮಾಚಾರ್ಯ ಯೋಗ ಮಂದಿರಂ, ತಿರುವನಂತಪುರ ಮತ್ತು ಹೃಷಿಕೇಶಗಳಲ್ಲಿ ಇರುವ ಶಿವಾನಂದ ವೇದಾಂತ ಕೇಂದ್ರ, ಬೆಂಗಳೂರಿನ ಬಳಿ ಜಿಗಣಿಯಲ್ಲಿರುವ ಎಸ್-ವ್ಯಾಸ ಯೋಗ ಯೂನಿವರ್ಸಿಟಿ – ಹೀಗೆ ಯೋಗವನ್ನು ಶಾಸ್ತ್ರೋಕ್ತವಾಗಿ ಹೇಳಿಕೊಡುವ ಅನೇಕ ಸಂಘಸಂಸ್ಥೆಗಳು ಭಾರತದಲ್ಲಿವೆ. ಇವಲ್ಲದೆ ನೂರಾರು ಯೋಗಸಂಸ್ಥೆಗಳು ಪರಿಣಾಮಕಾರಿಯಾಗಿ ಯೋಗವನ್ನು ಕಲಿಸುತ್ತಿವೆ. ಕೆಲವು ಸಂಘಸಂಸ್ಥೆಗಳು ಯೋಗದಲ್ಲಿ ಸ್ನಾತಕ, ಸ್ನಾತಕೋತ್ತರ, ಪಿ.ಜಿ. ಡಿಪ್ಲೊಮಾ, ಪಿಎಚ್.ಡಿ. ಪದವಿಗಳನ್ನೂ ನೀಡುತ್ತಿವೆ.
ಇತ್ತೀಚೆಗೆ ಶಾಲಾಕಾಲೇಜುಗಳ ಪಾಠ್ಯಕ್ರಮದಲ್ಲಿ ಯೋಗವನ್ನು ಅಗತ್ಯವಿಷಯವಾಗಿ ಸೇರಿಸಿಕೊಳ್ಳಲಾಗಿದೆ.
“ಮಕ್ಕಳ ಭಾವನಾತ್ಮಕ ಬೆಳವಣಿಗೆಯಲ್ಲಿ ಯೋಗದ ಪಾತ್ರ ಹಿರಿದು. ಇಂದು ಅನೇಕ ಪ್ರಯೋಗಾತ್ಮಕ ಶಾಲೆಗಳಲ್ಲಿ ಮಂತ್ರಪಠಣವನ್ನು ಪಾಠ್ಯಕ್ರಮದ ಭಾಗವಾಗಿಸಿದ್ದಾರೆ, ಇದು ಉಸಿರಾಟವನ್ನು ನಿಯಂತ್ರಿಸುತ್ತದೆ ಮತ್ತು ಮನಸ್ಸಿನ ಆಂದೋಲನವನ್ನು ಶಾಂತಗೊಳಿಸುತ್ತದೆ. ಹಾಗೆಯೇ ಅನೇಕ ಮಕ್ಕಳು ಬಾಯಿಯ ಮೂಲಕವೇ ಉಸಿರಾಡುವುದನ್ನು ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ. ಶಾಲೆಗಳಲ್ಲಿ ನಾಡಿಶುದ್ಧಿಯಂತಹ ಪ್ರಾಣಾಯಾಮವನ್ನು ಅಳವಡಿಸಿಕೊಂಡರೆ ಇದನ್ನು ಗಮನಿಸಿ ಸರಿಪಡಿಸುವ ಪ್ರಯತ್ನ ನಡೆಸಬಹುದು. ಇದರಿಂದ ಮಗುವಿನ ಒಟ್ಟಾರೆ ಅಭಿವೃದ್ಧಿಗೆ ಸಹಾಯಕವಾಗುತ್ತದೆ.
ಇನ್ನು ಕೆಲವು ಶಾಲೆಗಳಲ್ಲಿ ಯೋಗವನ್ನು ಸ್ಪರ್ಧಾತ್ಮಕವಾದ ಕ್ರೀಡೆಯಾಗಿ ಬೋಧಿಸಲಾಗುತ್ತಿದೆ. ಇದು ನಿಲ್ಲಬೇಕು. ಯೋಗ ಎಂದರೆ ಸ್ಪರ್ಧೆಯಲ್ಲ. ಅದು ದೇಹ ಮತ್ತು ಮನಸ್ಸಿನ ಸಮತೋಲನದತ್ತ ನಡೆಸುವ ವೈಯಕ್ತಿಕ ಪ್ರಯಾಣ. ಅದನ್ನು ಬಾಲ್ಯದಿಂದಲೇ ಆರಂಭಿಸುವುದು ಉತ್ತಮ” ಎನ್ನುತ್ತಾರೆ ಬೆಂಗಳೂರಿನ ‘ಯೋಗಕೌಶಲಂ’ ಸಂಸ್ಥೆಯ ದಿವ್ಯಾ ಶಾಜಿ ನವೀನ್.
ಯೋಗದ ಮಹತ್ತ್ವ ಪ್ರಚುರವಾಗಿ ಅದರ ಪ್ರಾಮುಖ್ಯ ಅರಿವಾದಂತೆಲ್ಲ, ಅದನ್ನು ಶಿಕ್ಷಣವಾಗಿ, ಉದ್ಯೋಗವಾಗಿ ಸ್ವೀಕರಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ನಗರಗಳಲ್ಲಿನ ಅನೇಕ ವಸತಿಸಂಕೀರ್ಣಗಳಲ್ಲಿ ಸಾಮೂಹಿಕವಾಗಿ ಯೋಗಾಭ್ಯಾಸಮಾಡುವ ರೂಢಿ ಶುರುವಾಗಿದೆ. ಅನೇಕ ಮೊಬೈಲ್ ಅಪ್ಲಿಕೇಷನ್ಗಳು ವೈಯುಕ್ತಿಕ ತರಬೇತುದಾರರನ್ನು ಮನೆಬಾಗಿಲಿಗೆ ಒದಗಿಸುವ ವ್ಯವಸ್ಥೆ ಮಾಡುತ್ತಿವೆ. ಯೋಗ ಸ್ಟುಡಿಯೋಗಳು ಎಲ್ಲೆಡೆ ತಲೆಯೆತ್ತುತ್ತಿವೆ. ಹವ್ಯಾಸಿ ತರಬೇತುದಾರರೂ, ವೃತ್ತಿಪರ ಶಿಕ್ಷಕರೂ ಯೋಗವನ್ನು ಹೇಳಿಕೊಡಲು ತೊಡಗಿದ್ದಾರೆ.
ಬಹಳ ಮಂದಿ ಯೋಗದ ವಿಡಿಯೋಗಳನ್ನು ಅಂತರ್ಜಾಲದಲ್ಲಿ ತೇಲಿಬಿಡುವ ಮೂಲಕ ಖ್ಯಾತಿಯನ್ನೂ, ಹಿಂಬಾಲಕರನ್ನೂ, ಉದ್ಯೋಗವನ್ನೂ ಕಂಡುಕೊಳ್ಳುತ್ತಿದ್ದಾರೆ. ಪ್ರಸಕ್ತ ಜಗತ್ತಿನ ವೇಗಕ್ಕೆ ಸರಿಯಾಗಿ ಯೋಗವೂ ಮಾರ್ಪಾಡುಗಳನ್ನು ಮಾಡಿಕೊಂಡು ಹೆಚ್ಚು ಹೆಚ್ಚು ಮಂದಿಗೆ ತಲಪಲು ಸಿದ್ಧವಾಗುತ್ತಿದೆ.
ವೈದ್ಯರು ದೊಡ್ಡಮಟ್ಟಿನ ಶಸ್ತ್ರಚಿಕಿತ್ಸೆಯೆಂದು ಘೋಷಿಸಿರುವ, ಅಥವಾ ಕೈಚೆಲ್ಲಿಯೇಬಿಟ್ಟಿರುವ ಅದೆಷ್ಟೋ ರೋಗಿಗಳು ಮೂರರಿಂದ ಆರು ತಿಂಗಳುಗಳ ನಿಯಮಿತ ಯೋಗಾಭ್ಯಾಸದಿಂದ ಗುಣಮುಖರಾಗಿರುವ ಉದಾಹರಣೆಗಳಿವೆ. ಕ್ಯಾನ್ಸರ್ನಂತಹ ಮರಣಾಂತಿಕ ಕಾಯಿಲೆಗಳು ಯೋಗದ ಪರಿಣಾಮವಾಗಿ ಹತೋಟಿಗೆ ಬಂದಿರುವ ದೃಷ್ಟಾಂತಗಳಿವೆ.
ಇವೆಲ್ಲವುಗಳ ಹಿಂದೆ ಯೋಗದ ಸಮಗ್ರತೆಯ ದೃಷ್ಟಿಯಿದೆ. ಅದನ್ನು ಸರಿಯಾದ ರೀತಿಯಲ್ಲಿ ನಮ್ಮದಾಗಿಸಿಕೊಳ್ಳುವುದು ನಮ್ಮನ್ನು ನಾವು ಉನ್ನತೀಕರಿಸಿಕೊಳ್ಳುವ ಸುಲಭ ಮಾರ್ಗ.