ಕೊರೋನಾದಿಂದ ಆರ್ಥಿಕತೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಹೊರಬರಲು ಮತ್ತು ಅನಂತರ ಅಭಿವೃದ್ಧಿಯ ಒಂದು ಪಥವನ್ನು ಹಿಡಿಯುವ ಸಲುವಾಗಿ ಅನುಸರಿಸಬಹುದಾದ ನಮ್ಮದಾದ ಸ್ವದೇಶೀ ಮಾದರಿಗಳ ಬಗ್ಗೆ ವಿವರಿಸುವುದು ಈಗ ಅಗತ್ಯವೆನಿಸಿದೆ. ಈ ನಿಟ್ಟಿನಲ್ಲಿ ನನ್ನ ಚಿಂತನೆಯನ್ನು ಇಲ್ಲಿ ವಿವರಿಸಬಯಸುತ್ತೇನೆ.
1. ಕೋವಿಡ್-19ನ್ನು ಒಂದು ತಲೆಮಾರಿಗೊಮ್ಮೆ ಬರಬಹುದಾದ Black Swan Event ಎಂದು ಬಣ್ಣಿಸಲಾಗಿದ್ದು, ಕಳೆದ ನಾಲ್ಕು ತಿಂಗಳುಗಳಲ್ಲಿ ಇದು ಇಡೀ ಜಗತ್ತನ್ನು ತನ್ನ ಹಿಡಿತದಲ್ಲಿ ಇರಿಸಿಕೊಂಡಿದೆ; ಮತ್ತು ಇದರಿಂದ ನಮ್ಮ ದೇಶ ಕೂಡ ಬಚಾವಾಗಿಲ್ಲ. ಆದರೆ ದೊಡ್ಡ ಸಮಾಧಾನ ಕೊಡುವ ಒಂದು ಸಂಗತಿಯೆಂದರೆ,
ಜಗತ್ತಿನ ಹಲವು ದೇಶಗಳಲ್ಲಿ ಕೊರೋನಾ ಸೋಂಕು ತಗುಲಿದವರು ಮತ್ತು ಅದರಿಂದ ಮೃತರಾದವರ ಸಂಖ್ಯೆ ಅನುಕ್ರಮವಾಗಿ ಲಕ್ಷ ಮತ್ತು ಸಾವಿರಗಳಲ್ಲಿದ್ದರೆ ಭಾರತದಲ್ಲಿ ಆ ಸಂಖ್ಯೆ ಅನುಕ್ರಮವಾಗಿ ಸಾವಿರ ಮತ್ತು ನೂರುಗಳಲ್ಲಿದೆ. (ಕ್ರಮೇಣ ಇದು ವೇಗ ಪಡೆದುಕೊಂಡಿದ್ದು, ಮೇ 4ರಂದು 44,451 ಮತ್ತು 1,458 ಆಗಿತ್ತು) ಇದಕ್ಕೆ ಕಾರಣ ನಮ್ಮ ಸರ್ಕಾರ ಕೈಗೊಂಡ ಕ್ರಮ, ನಮ್ಮ ಜನತೆಯಲ್ಲಿ ಸಹಜವಾಗಿ ಇರುವ ಉತ್ತಮ ಮಟ್ಟದ ರೋಗನಿರೋಧಕ ಶಕ್ತಿ ಮತ್ತು ಅನುಶಾಸನಪ್ರವೃತ್ತಿ ಎನ್ನಬಹುದು. ಇನ್ನು ಒಂದು ಅಥವಾ ಎರಡು ತಿಂಗಳೊಳಗೆ ನಮ್ಮ ದೇಶ ಸಹಜಸ್ಥಿತಿಗೆ ಮರಳಬಹುದೆಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ.
2. ದೇಶದ ಆರ್ಥಿಕ ವ್ಯವಸ್ಥೆಯ ಕೊನೆಯಲ್ಲಿರುವ ಓರ್ವ ದಿನಗೂಲಿ ಕಾರ್ಮಿಕನಿಂದ ಆರಂಭಿಸಿ ಅತ್ಯಂತ ಮೇಲ್ಮಟ್ಟದಲ್ಲಿರುವ ವಾಣಿಜ್ಯೋದ್ಯಮಿಯವರೆಗೆ ಎಲ್ಲರಿಗೂ ಕೊರೋನಾ ವೈರಾಣು ತಂದ ಆಪತ್ತಿನಿಂದಾಗಿ ನಷ್ಟವಾಗಿದೆ; ನಷ್ಟದ ಪ್ರಮಾಣದಲ್ಲಿ ಮಾತ್ರ ವ್ಯತ್ಯಾಸ ಇರಬಹುದಷ್ಟೆ. ಪ್ರತಿಯೊಬ್ಬರೂ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ, ಆದರೆ ಹೆಚ್ಚಿನವರಿಗೆ ಇದುವರೆಗೆ ಅಂತಹ ಭಾವನೆ ಉಂಟಾಗಿಲ್ಲ. ಅವರು ಅತ್ಯುನ್ನತ ಮಟ್ಟದ ರಾಷ್ಟ್ರೀಯ ಮನೋಭಾವವನ್ನು ವ್ಯಕ್ತಪಡಿಸಿದ್ದಾರೆ. ಆರ್ಥಿಕತೆಯನ್ನು ಮತ್ತೆ ಹಳಿಯ ಮೇಲೆ ತರಬೇಕಿದ್ದರೆ ನಾವು ಈ ಮನೋಭಾವವನ್ನು ಉಳಿಸಿಕೊಳ್ಳಬೇಕು.
3. ಅಂತಾರಾಷ್ಟ್ರೀಯ ವ್ಯಾಪಾರದ ಗಾತ್ರ ಮತ್ತು ಬಂಡವಾಳದ ಹರಿಯುವಿಕೆಗಳು ಕೊರೋನಾಗಿಂತ ಮೊದಲೇ ಕುಗ್ಗುತ್ತಿದ್ದವು. ಅಂತಾರಾಷ್ಟ್ರೀಯ ವ್ಯಾಪಾರದ ಏರಿಕೆಯ ಪ್ರಮಾಣ ಶೇ. 5ರಷ್ಟಿದ್ದರೆ ಜಾಗತಿಕ ಜಿಡಿಪಿ ಶೇ. 2.5ರಿಂದ ಶೇ. 3ರಷ್ಟಿತ್ತು; ಈಗ ಎರಡೂ ಸುಮಾರು ಶೇ. 3ರಷ್ಟಿವೆ. 1980ರ ದಶಕದ ಆರಂಭದಲ್ಲಿ 2.2 ಟ್ರಿಲಿಯನ್ ಡಾಲರ್‍ನಷ್ಟಿದ್ದ ಅಂತಾರಾಷ್ಟ್ರೀಯ ಬಂಡವಾಳ ಹರಿಯುವಿಕೆಯು 2013ರಲ್ಲಿ 15 ಟ್ರಿಲಿಯನ್ ಡಾಲರ್ ಆಗಿತ್ತು; ಅದು ಮತ್ತೆ ಕೆಳಗಿಳಿದು 2.5 ಟ್ರಿಲಿಯನ್ ಡಾಲರ್ ಆಗಿತ್ತು. ಇದು ಏನನ್ನು ತೋರಿಸುತ್ತದೆ ಎಂದರೆ ಉಗ್ರಸ್ವರೂಪದ ಜಾಗತೀಕರಣದ ಪ್ರಯೋಗದ ಕಾಲ ಈಗ ಮುಗಿದಿದೆ; ಮತ್ತು ದೇಶಗಳು ಈಗ ಮುಖ್ಯವಾಗಿ ತಮ್ಮ ಹಿತಾಸಕ್ತಿಯನ್ನಷ್ಟೇ ನೋಡುತ್ತಿವೆ ಎಂಬುದು. ಕೋವಿಡ್-19ರಿಂದಾಗಿ ಈ ಪ್ರವೃತ್ತಿ ಇನ್ನಷ್ಟು ಹೆಚ್ಚಾಗುವುದು ಮತ್ತು ಅದಕ್ಕನುಗುಣವಾದ ಜಾಗತಿಕ ವ್ಯವಹಾರವು ರೂಪುಗೊಳ್ಳಲಿದೆ. ಇದು ಅಂತಾರಾಷ್ಟ್ರೀಯ ವ್ಯಾಪಾರದ ಸ್ವದೇಶೀ ದೃಷ್ಟಿಕೋನಕ್ಕೆ ಸಂಬಂಧಿಸಿ ದೀನದಯಾಳ್‍ಜೀ ಮತ್ತು ದತ್ತೋಪಂತ ಠೇಂಗಡಿಜೀ ಅವರ ಮುನ್ನೋಟವಾಗಿದೆ.
4. ಆರ್ಥಿಕ ಚಟುವಟಿಕೆಯ ವಿಕೇಂದ್ರೀಕರಣವು ಭವಿಷ್ಯದ ಪ್ರಧಾನ ವಿಷಯವಾಗಬೇಕಾಗಿದೆ. ರಾಜ್ಯಮಟ್ಟದ ಯೋಜನೆಯನ್ನು ಬಲಪಡಿಸಬೇಕಾಗಿದೆ. ಭಾರತದ ರಾಜ್ಯಗಳು ಸ್ವಭಾವತಃ ವಿಭಿನ್ನವಾಗಿದ್ದು, ಅವುಗಳಿಗೆ ಪ್ರತ್ಯೇಕವಾದ ಒಂದು ರಾಷ್ಟ್ರವೆಂದು ಪರಿಗಣಿಸಿದಲ್ಲಿ ಜನಸಂಖ್ಯೆಯ ಪ್ರಕಾರ ಅದು ಜಗತ್ತಿನ ಐದನೇ ಅತಿ ದೊಡ್ಡ ರಾಷ್ಟ್ರವೆನಿಸುತ್ತದೆ. ಪ್ರತಿಯೊಂದು ರಾಜ್ಯಕ್ಕೆ ಅದರದ್ದೇ ಆದ ಆಯಾಮವಿದೆ. ಕೇರಳಕ್ಕೆ ಹೊರಗಿನಿಂದ ಹಣ ಬರುವುದು ಜಾಸ್ತಿ ಮತ್ತು ಅಲ್ಲಿ ಪ್ರವಾಸೋದ್ಯಮವು ಪ್ರಧಾನವಾಗಿದೆ. ಒಡಿಶಾ, ಜಾರ್ಖಂಡ್ ಮುಂತಾದವು ಗಣಿಗಾರಿಕೆ ರಾಜ್ಯಗಳಾದರೆ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ಕೈಗಾರಿಕೆ ಪ್ರಮುಖವಾಗಿದೆ. ಪ್ರತಿಯೊಂದು ರಾಜ್ಯಕ್ಕೆ ಅದರದ್ದಾದ ವಿಶೇಷ ಆರ್ಥಿಕ ಮಾದರಿಯ ಅಗತ್ಯವಿದೆ. ರಾಜ್ಯಮಟ್ಟದ ವಿಶೇಷ ಆರ್ಥಿಕ ನಾಯಕತ್ವವು ಮೂಡಿಬರಬೇಕಾಗಿದೆ.
5. ಭಾರತದ ಜನಶಕ್ತಿಯ (Demographic Strength) ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಒಟ್ಟು ಜನಸಂಖ್ಯೆಯ ಶೇ. 60ರಷ್ಟು ಭಾಗ ಉತ್ಪಾದಕತಾ ವಯಸ್ಸಿನವರು. ಆದ್ದರಿಂದ ಮಾನವ ಸಂಪನ್ಮೂಲದ ಗರಿಷ್ಠ ಬಳಕೆಯು ನಮ್ಮ ಗುರಿಯಾಗಬೇಕು. ದೇಶದ ಒಳಗೆ ಕೂಡ ‘ಬಿಮಾರು’ ಎನ್ನುವ ಹಣೆಪಟ್ಟಿಯನ್ನು ಹೊಂದಿರುವ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶದಂತಹ ರಾಜ್ಯಗಳು ‘ಯುವರಾಜ್ಯ’ಗಳೆನಿಸಿದರೆ ತಮಿಳುನಾಡು ಮತ್ತು ಕೇರಳಗಳು ‘ವೃದ್ಧರಾಜ್ಯ’ಗಳೆನಿಸಿವೆ. (ಅನುಕ್ರಮವಾಗಿ ಯುವಕರು ಅಧಿಕ ಮತ್ತು ವೃದ್ಧರು ಅಧಿಕ ಇರುವ ರಾಜ್ಯಗಳು). ಈ ರಾಜ್ಯಗಳಲ್ಲಿ ಉತ್ಪಾದನೆಯನ್ನು ಅಧಿಕಗೊಳಿಸಿದಲ್ಲಿ ದುಡಿಯುವ ಜನ ಊರಿನಲ್ಲೇ ಉಳಿಯುತ್ತಾರೆ; ಪರಿಣಾಮವಾಗಿ ವಲಸೆ ಕಡಮೆಯಾಗುತ್ತದೆ. ಇತ್ತೀಚಿನ ಕೋವಿಡ್ ಪ್ರಕರಣವು ವಲಸಿಗ ಕಾರ್ಮಿಕರ ವಿಷಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದು, ಇದರ ಪರಿಹಾರಕ್ಕೆ ಗಮನಹರಿಸುವುದು ಅವಶ್ಯವೆನಿಸಿದೆ.
6. ಕೋವಿಡ್-19ರ ವೇಳೆ ಕೆಲವೇ ದಿನಗಳಲ್ಲಿ ದೇಶದ ಸಂಶೋಧನೆ ಮತ್ತು ಸೃಷ್ಟಿಶೀಲತೆಯ ಪ್ರತಿಭೆಗಳು ಎಲ್ಲರ ಗಮನ ಸೆಳೆದವು. ಕಡಮೆ ವೆಚ್ಚದ ಹೊಸ ವೆಂಟಿಲೇಟರ್‍ಗಳನ್ನು ಕಂಡುಹಿಡಿಯಲಾಯಿತು. ಪಿಪಿಇ ಯುನಿಟ್‍ಗಳನ್ನು ಹಲವರು ಉತ್ಪಾದಿಸಿದರು; ಸ್ಯಾಂಪಲ್ ಸಂಗ್ರಹದ ಹೊಸ ಕಿಯೋಸ್ಕ್‍ಗಳನ್ನು (ಘಟಕ) ತೆರೆದರು; ಡಿಆರ್‍ಡಿಓದವರು ಪರೀಕ್ಷಾ ಕಿಟ್‍ಗಳನ್ನು ಕಂಡುಹಿಡಿದರು. ಕೊರೋನಾ ರೋಗಿಗಳ ಸೇವೆಗೆ ಹೊಸ್ಪಾಟ್ (Hospot) ಎನ್ನುವ ರೊಬೋಟನ್ನು ಕೂಡ ಕಂಡುಹಿಡಿಯಲಾಯಿತು. ಈ ಪಟ್ಟಿಗೆ ಕೊನೆ ಎಂಬುದಿಲ್ಲ. ಇದು ಸ್ವದೇಶೀ ಭಾವನೆಯಲ್ಲದೆ ಬೇರೇನೂ ಅಲ್ಲ; ಇದನ್ನು ಈಗ ಪ್ರೋತ್ಸಾಹಿಸಬೇಕಾಗಿದೆ. ಇದಕ್ಕೆ ಮೊದಲು ಕೂಡ ನೂರಾರು ಸಂಶೋಧನೆಗಳು ನಡೆಯುತ್ತಲೇ ಇವೆ; ನಗರಗಳಲ್ಲಿನ ತಂತ್ರಜ್ಞಾನ-ಆಧಾರಿತ ಸಂಶೋಧನೆಗಳಷ್ಟೇ ಅಲ್ಲ, ಗ್ರಾಮೀಣ ಭಾಗಗಳಲ್ಲೂ ಹಲವು ಸಂಶೋಧನೆಗಳು ಬೆಳಕಿಗೆ ಬರುತ್ತಲೇ ಇವೆ.
ಅಹಮದಾಬಾದಿನ ಓರ್ವ ಐಐಎಂ (ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್) ಪ್ರಕಲ್ಪವೊಂದು ‘ಹನಿಬೀ’ (ಜೇನುನೊಣ) ಎನ್ನುವ ಹೆಸರಿನಲ್ಲಿ ಗ್ರಾಮೀಣ ಭಾರತದ ನೂರಾರು ಸಂಶೋಧನೆಗಳನ್ನು ದಾಖಲಿಸಿದೆ. ತಂತ್ರಜ್ಞಾನದ ಪರಿಭಾಷೆಯಲ್ಲಿ ಇದನ್ನು Knowledge Economy (ಕಡಮೆ ವೆಚ್ಚದ ಜ್ಞಾನ) ಎನ್ನುತ್ತಾರೆ ಮತ್ತು ಇದು ನಮ್ಮ ದೇಶದಲ್ಲಿ ಧಾರಾಳವಾಗಿದೆ; ಈಗ ಇದರ ಬಗ್ಗೆ ವಿಶೇಷ ಗಮನ ಕೊಡುವಂತಹ ಕಾಲ ಬಂದಿದೆ.
7. ಕೋವಿಡ್‍ನಿಂದಾಗಿ ಉಳಿತಾಯದ ಮಹತ್ತ್ವವು ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ. ದುಂದುವೆಚ್ಚವನ್ನು ತಡೆಯುವ ಬಗ್ಗೆ ಜನರಿಗೆ ಪ್ರೇರಣೆ ನೀಡಬೇಕು ಮತ್ತು ಉಳಿತಾಯದ ಮಹತ್ತ್ವವನ್ನು ಅವರಿಗೆ ಕಲಿಸಬೇಕು. ಸಂಯಮ ಮತ್ತು ಆವಶ್ಯಕತೆ ಆಧಾರಿತ ಬಳಕೆಯ ಸಂದೇಶವನ್ನು ಎಲ್ಲೆಡೆ ಪಸರಿಸಬೇಕು.
8. ಕ್ಯಾನ್ಸರ್‍ನಂತಹ ಮಾರಕ ರೋಗಗಳಿಗೆ ಜನ ದೊಡ್ಡ ಸಂಖ್ಯೆಯಲ್ಲಿ ಗುರಿಯಾಗುವುದು ರಾಸಾಯನಿಕ – ಆಧಾರಿತ ಕೈಗಾರಿಕೀಕರಣದ ಅಪಾಯಗಳನ್ನು ತೆರೆದು ತೋರಿಸಿದೆ. ಸಹಜ ಮತ್ತು ಸಾವಯವ ಕೃಷಿಗಳ ನಮ್ಮ ಮೂಲಕ್ಕೆ ಮರಳಲು ಇದು ಸಕಾಲವೆನಿಸಿದೆ. ಸಾವಯವ ಕೃಷಿಯ ಉತ್ಪನ್ನಗಳು ದೇಶದ ಒಳಗಷ್ಟೇ ಅಲ್ಲ; ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಮೇಲುಗೈ ಸಾಧಿಸುತ್ತವೆ. ಭಾರತೀಯ ಕೃಷಿಕರು ಈ ಕ್ರಾಂತಿಗೆ ಸಿದ್ಧವಾಗಿಯೇ ಇದ್ದಾರೆ.
9. ಆರ್ಥಿಕ ಚಟುವಟಿಕೆಯು ಪರಿಸರದ (ವಾತಾವರಣ) ಮೇಲೆ ಬೀರುವ ಪ್ರಭಾವವು ಇದುವರೆಗೆ ತೀರಾ ಕಡಮೆ ಇತ್ತು; ಈಗ ಅದು ಪ್ರಮುಖ ವಿಷಯವಾಗಿದೆ.
10. ನಮ್ಮ ಕಿರಾಣಿ ಅಂಗಡಿಗಳು ಮತ್ತಿತರ ಸಣ್ಣ ಪ್ರಮಾಣದ ಸೇವೆಗಳು ಕೋವಿಡ್-19ರ ವೇಳೆ ಜನರಿಗೆ ಆವಶ್ಯಕ ವಸ್ತುಗಳು ಸರಿಯಾಗಿ ದೊರಕುವ ಬಗ್ಗೆ ಅಪಾರ ಶ್ರಮ ವಹಿಸಿ ಅದರಲ್ಲಿ ಯಶಸ್ವಿಯಾದವು; ಆ ಮೂಲಕ ಇಡೀ ದೇಶ ‘ನೆರೆಕರೆಯ ಅರ್ಥಶಾಸ್ತ್ರ’ದ (Neighbourhood Economics) ಮಹತ್ತ್ವವನ್ನು ಅರ್ಥೈಸಿಕೊಂಡಿದೆ; ಇದನ್ನು ಇನ್ನಷ್ಟು ಪ್ರೋತ್ಸಾಹಿಸಬೇಕು ಮತ್ತು ಆಚರಣೆಗೆ ತರಬೇಕು.
11. ಕೋವಿಡ್-19ರ ವೇಳೆ ನಾಗರಿಕ ಸಮಾಜವು ಪರಿಸ್ಥಿತಿಯನ್ನು ಎದುರಿಸಲು ತಕ್ಷಣ ಬದ್ಧವಾಗಿ ಎಲ್ಲ ಬಗೆಯಲ್ಲಿ ಹಿಮಾಲಯಸದೃಶ ಸೇವೆಯನ್ನೇ ಸಲ್ಲಿಸಿತು. ಇದು ಭಾರತೀಯ ಸಮಾಜದ ವಿಶೇಷ ಮತ್ತು ಅಸಾಮಾನ್ಯ ಲಕ್ಷಣವಾಗಿದ್ದು, ಸರ್ಕಾರ ಮಾಡುವ ಕೆಲಸಕ್ಕೆ ಇದು ಬಹಳಷ್ಟು ಪೂರಕವಾಗಿತ್ತು.
12. ಕೊನೆಯದಾಗಿ, ಯಾವುದೇ ಅನಾಹುತ ಸಂಭವಿಸಲಿ; ಅದರಿಂದ ಬಹುಬೇಗ ಚೇತರಿಸಿಕೊಳ್ಳುವುದಕ್ಕೆ ಭಾರತ ಹೆಸರಾಗಿದೆ. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಮೊದಮೊದಲೇ ಹೊರಗೆ ಬಂದ ದೇಶಗಳಲ್ಲಿ ಭಾರತವೂ ಒಂದು. ಈಗ ಗಮನಿಸುವುದಾದರೆ, ಕಾರ್ಖಾನೆ, ಯಂತ್ರಗಳು, ಅಂಗಡಿಗಳು ಎಲ್ಲವೂ ಸುಸ್ಥಿತಿಯಲ್ಲಿದ್ದು, ತಮ್ಮ ಕೆಲಸವನ್ನು ನಿಭಾಯಿಸಲು ಸಿದ್ಧವಾಗಿವೆ. ಜನ ಸೋಮಾರಿಗಳಾಗಿರಲಿಲ್ಲ; ಬದಲಾಗಿ ಯೋಜನೆ, ಕಾರ್ಯತಂತ್ರಗಳನ್ನು ಸಿದ್ಧಗೊಳಿಸಿಕೊಂಡುದಲ್ಲದೆ ತಮ್ಮ ಕೌಶಲವನ್ನು ಕೂಡ ಸಾಧ್ಯವಾದಷ್ಟು ಉತ್ತಮಪಡಿಸಿಕೊಂಡಿದ್ದಾರೆ. ಲಾಕ್‍ಡೌನ್ ತೆಗೆದರೆಂದರೆ ಯಾವುದೇ ತಡವಿಲ್ಲದೆ ತಮ್ಮ ಪಾಲಿನ ಕೆಲಸವನ್ನು ನಿರ್ವಹಿಸಿ ಆರ್ಥಿಕತೆಗೆ ಶಕ್ತಿ ತುಂಬಲು ಅವರು ಅಣಿಯಾಗಿದ್ದಾರೆ; ಇದರಿಂದ ದೇಶ ಬಹುಬೇಗ ಅಭಿವೃದ್ಧಿಯ ಪಥಕ್ಕೆ ಮರಳಲಿದೆ.
13. ಆಮದಿಗೆ ಪರ್ಯಾಯವನ್ನು ಕಂಡುಕೊಳ್ಳುವುದು, ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಜಿಡಿಪಿಯ ವರ್ಧನೆಗಳು ನಮ್ಮ ನಿರಂತರ ಕಾರ್ಯಕ್ರಮವಾಗಬೇಕು. ಮಕ್ಕಳ ಆಟದ ಸಾಮಗ್ರಿಯಿಂದ ಆರಂಭಿಸಿ ಮೊಬೈಲ್ ಫೋನ್‍ಗಳವರೆಗೆ ಆಮದಿನಿಂದಾಗಿ ದೇಶದ ಉತ್ಪಾದನಾ ಸಾಮಥ್ರ್ಯವು ಸಾಕಷ್ಟು ಕುಗ್ಗಿದೆಯೆಂದೇ ಹೇಳಬೇಕು; ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಸರಕುಗಳು, ಸೋಲಾರ್ ಪವರ್ ಮಾಡ್ಯೂಲ್ ಹೀಗೆ ಎಲ್ಲವನ್ನೂ ಮುಖ್ಯವಾಗಿ ಚೀನಾದಿಂದ ಆಮದು ಮಾಡಲಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ನಿರುದ್ಯೋಗವು ಹೆಚ್ಚಿದೆ. ಇವುಗಳಲ್ಲಿ ಹೆಚ್ಚಿನ ವಸ್ತುಗಳನ್ನು ನಾವೇ ಉತ್ಪಾದಿಸಬಲ್ಲೆವಾದ ಕಾರಣ ಈ ಎಲ್ಲವನ್ನೂ ಆಮದು ಮಾಡುವ ಈ ಪ್ರವೃತ್ತಿಗೆ ತಡೆಹಾಕಲೇಬೇಕು. ಇದು ಎರಡು ಹಂತಗಳ ಪ್ರಕ್ರಿಯೆಯಾಗಿದೆ. ಮೊದಲನೆಯದಾಗಿ, ದೇಶೀಯ ವಸ್ತುಗಳನ್ನೇ ಬಳಸುವಂತೆ ಬಳಕೆದಾರರ ಮನವೊಲಿಸುವುದು; ಮತ್ತು ಎರಡನೆಯದಾಗಿ, ಉತ್ತಮಗುಣಮಟ್ಟದ ವಸ್ತುಗಳನ್ನು ಉತ್ಪಾದಿಸಿ ನ್ಯಾಯಬೆಲೆಯಲ್ಲಿ ಗ್ರಾಹಕರಿಗೆ ಪೂರೈಸುವಂತೆ ಉತ್ಪಾದಕರು ಅಣಿಗೊಳಿಸುವುದು. ಈ ನಿಟ್ಟಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚು ಹಣವನ್ನು ಹೂಡಬೇಕಾಗುತ್ತದೆ.
14. ಇದುವರೆಗೆ ನಮ್ಮ ದೇಶದ ಆರ್ಥಿಕತೆಗೆ ದೇಶದ ಬಂಡವಾಳ ಆಧಾರ ಮತ್ತು ದೇಶದ ಮಾರುಕಟ್ಟೆಯೇ ನಮಗೆ ಪ್ರಧಾನವಾದದ್ದು; ಸದ್ಯೋಭವಿಷ್ಯದಲ್ಲಿ ಇದು ಹೀಗೆಯೇ ಮುಂದುವರಿಯುವಂತೆ ಬೆಂಬಲಿಸುವುದಕ್ಕೆ ಅನುಕೂಲಕರವಾದ ಸೂಕ್ತ ವಾತಾವರಣವನ್ನು ನಾವೀಗ ರೂಪಿಸಬೇಕಾಗಿದೆ.
ಸಿ.ಎ.ಆರ್. ಸುಂದರಮ್, ರಾಷ್ಟ್ರೀಯ ಸಂಯೋಜಕರು, ಸ್ವದೇಶಿ ಜಾಗರಣ ಮಂಚ್
(ಅನು: ಎಚ್. ಮಂಜುನಾಥ ಭಟ್)