ಒಂದು ನುಡಿಗಟ್ಟು ಕಳೆದ ಕೆಲವು ಸಮಯದಿಂದ ಬಹಳಷ್ಟು ಸುತ್ತುಹೊಡೆಯುತ್ತಿದೆ; ಕಾಂಗ್ರೆಸ್ನ ಲೋಕಸಭಾಸದಸ್ಯ ಶಶಿ ತರೂರ್ ಅದನ್ನು ರೀಟ್ವೀಟ್ ಮಾಡಿದ್ದಾರೆ; ಅದು ಹೀಗಿದೆ: ‘ಹಿಂದೂಧರ್ಮದ (Hinduism) ವಿರುದ್ಧಪದವೇ ಹಿಂದುತ್ವ’. ಇದು ಕಾಂಗ್ರೆಸ್ ಪಕ್ಷದ ಒಂದು ರಾಜಕೀಯ ಹುನ್ನಾರದ ಭಾಗವಾಗಿದೆ. ಈ ಕಪೋಲಕಲ್ಪಿತ ವ್ಯತ್ಯಾಸಕ್ಕೆ ಒತ್ತುನೀಡುವುದಕ್ಕಾಗಿ ಹಿಂದೂಯಿಸಂ ಕುರಿತ ತರೂರ್ ಅವರ ಪುಸ್ತಕದಲ್ಲಿ ಕೂಡ ಅದು ಬಂದಿದೆ. ಅದು ರಾಜಕೀಯ ಹೇಗೆ?
ಕಾಂಗ್ರೆಸ್ ಹಿಂದೂವಿರೋಧಿ ಎಂಬ ಕಲ್ಪನೆ ಈಗಾಗಲೇ ಜನರಲ್ಲಿ ಬಂದಿದೆ; ಕಳೆದ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಸ್ವಲ್ಪಮಟ್ಟಿಗಾದರೂ ಅದು ಕಾರಣವೆನ್ನುವುದು ಪಕ್ಷಕ್ಕೆ ಅರ್ಥವಾದಂತಿದೆ. ಅದೇ ವೇಳೆಗೆ ಬಿಜೆಪಿ ಹಿಂದೂ ಹಿತಾಸಕ್ತಿಗಳ ಬಗ್ಗೆ ಸಹಾನುಭೂತಿಯನ್ನು ಹೊಂದಿದೆ ಎನ್ನುವ ಅಭಿಪ್ರಾಯ ಜನರಲ್ಲಿ ಉಂಟಾಗಿದೆ ಎನ್ನುವುದೂ ಕಾಂಗ್ರೆಸಿಗೆ ಗೊತ್ತಾಗಿರಬೇಕು. ಜನರಲ್ಲಿ ಉಂಟಾಗಿರುವ ಈ ಭಾವನೆಯನ್ನು ಎದುರಿಸುವ ಸಲುವಾಗಿ ಕಾಂಗ್ರೆಸ್ ಬಿಜೆಪಿಯದ್ದು ‘ಹಿಂದುತ್ವ’ವೇ ಹೊರತು, ಹಿಂದೂಧರ್ಮ ಅಥವಾ ಹಿಂದೂಯಿಸಂ ಅಲ್ಲ; ಹಿಂದುತ್ವಕ್ಕೂ ಹಿಂದೂಯಿಸಂಗೂ ವ್ಯತ್ಯಾಸವಿದೆ ಎಂದು ಸಾಧಿಸಲು ಮುಂದಾಗಿದೆ. ತನ್ಮೂಲಕ ಕಾಂಗ್ರೆಸ್ ‘ಹಿಂದುತ್ವ’ದ ವಿರೋಧಿಯೇ ಹೊರತು ‘ಹಿಂದೂಯಿಸಂ’ನ ವಿರೋಧಿಯಲ್ಲ ಎಂದು ಹೇಳಲು ಅದು ಪ್ರಯತ್ನಿಸುತ್ತಿದೆ. ಈ ಚಿಂತನೆಯ ಬಗೆಗೆ ಸವಿವರವಾದ ಸೈದ್ಧಾಂತಿಕ ಚರ್ಚೆಯನ್ನು ಸದ್ಯಕ್ಕೆ ಬದಿಗಿಟ್ಟು ‘ಹಿಂದೂಯಿಸಂನ ವಿರುದ್ಧಪದವೇ ಹಿಂದುತ್ವ’ ಎನ್ನುವ ನುಡಿಗಟ್ಟು ಯಾವ ರೀತಿಯಲ್ಲಿ ಸುಳ್ಳು ಮತ್ತು ಒಂದು ಕೃತಕವಾದ ‘ಪದಗಳ ಆಟ’ ಎಂಬುದನ್ನಿಲ್ಲಿ ಗಮನಿಸೋಣ.
ಈ ನಕಲಿ ನುಡಿಗಟ್ಟಿನ ಮೊದಲ ಪ್ರಮುಖ ಅಂಶವೆಂದರೆ, ಹಿಂದೂಧರ್ಮವು ಸಾವಿರಾರು ವರ್ಷ ಪ್ರಾಚೀನವಾದದ್ದು ಹಾಗೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳ ‘ಮಹಾನ್ ಸಂಯೋಜನೆ’ಯಾದರೆ (great union), ಹಿಂದುತ್ವವು ಸಾವರ್ಕರ್ 1923ರಲ್ಲಿ ಮೊದಲಬಾರಿಗೆ ಮಂಡಿಸಿದ ಜನಾಂಗೀಯ-ಪ್ರಾದೇಶಿಕ ವರ್ಗಕ್ಕೆ ಸಂಬಂಧಿಸಿದ್ದು. ಈ ವಾದಕ್ಕೆ ಹಲವಾರು ಸಮಸ್ಯೆಗಳಿವೆ. ಮೊದಲನೆಯದಾಗಿ, ನಾವು ಕೇವಲ ಈ ಶಬ್ದಗಳು ಹೇಗೆ ಹುಟ್ಟಿಕೊಂಡವು ಅಥವಾ ಅಸ್ತಿತ್ವಕ್ಕೆ ಬಂದವೆಂದು ಗಮನಿಸುವುದಾದರೂ ‘ಹಿಂದೂಯಿಸಂ’ ಎನ್ನುವ ಪದ ಸಾವಿರಾರು ವರ್ಷ ಹಳೆಯದಲ್ಲ; 19ನೇ ಶತಮಾನದಲ್ಲಿ ವಸಾಹತುಶಾಹಿ ಅಥವಾ ಮಿಷನರಿ ಕಾರ್ಯತಂತ್ರದ ಭಾಗವಾಗಿ ಇದನ್ನು ಮೊದಲಬಾರಿಗೆ ಬಳಸಲಾಯಿತು. ‘ಹಿಂದುತ್ವ’ ಎನ್ನುವ ಪದ ಕೂಡ ಬಹುತೇಕ 19ನೇ ಶತಮಾನದಲ್ಲಿ ಕಾಣಿಸಿಕೊಂಡದ್ದು. ಅದನ್ನು ಮೊದಲಾಗಿ ಬಳಸಿದವರು ಚಂದ್ರನಾಥ ಬಸು ಅವರು (ಸಾವರ್ಕರ್ ಅಲ್ಲ); ತಮ್ಮ ಪುಸ್ತಕದ ಶೀರ್ಷಿಕೆಯಾಗಿ ಅವರು ಆ ಪದವನ್ನು ಬಳಸಿದರು. ‘Hindutva: An Authentic History of Hindus’ ಎನ್ನುವುದು ಆ ಪುಸ್ತಕದ ಶೀರ್ಷಿಕೆ. ನಾವು ಕೇವಲ ಈ ಪದಗಳನ್ನು ಹಿಡಿದುಕೊಂಡು ಹೋಗುವುದಾದರೆ ಎರಡರಲ್ಲಿ ಯಾವುದು ಕೂಡ ಹಳೆಯದಲ್ಲ. ಆದ್ದರಿಂದ ನಾವು ಹಿಂದೂಯಿಸಂ ಮತ್ತು ಹಿಂದುತ್ವ ಎನ್ನುವ ಈ ಶಬ್ದಗಳನ್ನು ಬದಿಗಿಟ್ಟು, ಅವುಗಳ ಹಿಂದಿರುವ ಪರಿಕಲ್ಪನೆಗಳ ಕಡೆಗೆ ಹೋಗಬೇಕಾಗುತ್ತದೆ.
ಅರ್ಥಹೀನ ವಾದ
ಒಂದು ಪರಿಕಲ್ಪನೆಯಾಗಿ ನೋಡುವುದಾದರೆ, ಹಿಂದುತ್ವ ಎನ್ನುವುದು ನೇರವಾದ ಅರ್ಥವನ್ನೇ ಹೊಂದಿದೆ; ಹಿಂದುತ್ವ ಎಂದರೆ ‘ಹಿಂದೂತನ’ (Hindune) ಅಥವಾ ಹಿಂದೂ ಆಗಿರುವವನ ಗುಣಲಕ್ಷಣಗಳು. ಅಂದರೆ ಆ ಪದವನ್ನು ಹಿಂದೂಯಿಸಂ ಅಥವಾ ಹಿಂದೂತನದಿಂದ (ಹಿಂದು ಆಗಿರುವುದರಿಂದ) ಪ್ರತ್ಯೇಕಿಸಲು ಅಸಾಧ್ಯ. ಚಂದ್ರನಾಥ ಬಸು ಅವರು ತಾವು ಹೇಳುತ್ತಿರುವುದು ಹಿಂದುಗಳ ಅಧಿಕೃತ (ಅಥೆಂಟಿಕ್) ಇತಿಹಾಸ ಎನ್ನುತ್ತಾರೆ; ಅಲ್ಲಿಗೆ ‘ಹಿಂದು’, ‘ಹಿಂದೂಯಿಸಂ’ ಮತ್ತು ‘ಹಿಂದುತ್ವ’ಗಳು ಪ್ರತ್ಯೇಕ ಎನ್ನುವುದು ಅರ್ಥಹೀನ ಎಂದಾಯಿತು. ಅವು ಒಂದು ಪದಗಳ ಸಮೂಹವಾಗಿದ್ದು ಎಲ್ಲದರ ಅರ್ಥ ಒಂದೇ.
ಆ ನುಡಿಗಟ್ಟಿನಲ್ಲಿರುವ (ಅದಕ್ಕೆ ಸಂಬಂಧಿಸಿದ) ಇತರ ಅಂಶಗಳು ಬಾಲಿಶ ಮತ್ತು ಪೂರ್ತಿ ಕಾಲ್ಪನಿಕ ಹಾಗೂ ಹೊಸೆದಂಥವು ಎನ್ನದೆ ವಿಧಿಯಿಲ್ಲ. ಉದಾಹರಣೆಗೆ, “ಹಿಂದುತ್ವವು ಒಂದು ಪ್ರಧಾನ ಪಥ್ಯವನ್ನು ಹೊಂದಿದೆ; ಅದೆಂದರೆ 1928ರಲ್ಲಿ ಪ್ರಕಟಣೆಗೊಂಡ ‘ಹಿಂದುತ್ವ: ಹೂ ಈಸ್ ಎ ಹಿಂದು?’ ಎನ್ನುವ ರಾಜಕೀಯ ಕರಪತ್ರ” ಎನ್ನುವ ವಾದ. ನಿಜಸಂಗತಿಯೆಂದರೆ, ಹಿಂದುತ್ವದ ಪ್ರತಿಪಾದಕರಾದ ಹಲವು ಪ್ರಮುಖ ವ್ಯಕ್ತಿಗಳಿದ್ದಾರೆ. ಅವರು ಬೇರೆ ಜನಾಂಗ (race) ಮತ್ತು ರಾಷ್ಟ್ರೀಯತೆಗಳಿಗೆ ಸೇರಿದವರು. ಅವರಲ್ಲಿ ಅಮೆರಿಕನ್ ಡೇವಿಡ್ ಫ್ರಾಲಿ, ಫ್ರಾನ್ಸ್ ಪ್ರಜೆ ಫ್ರಾನ್ಸ್ವಾ ಗೋತಿಯೋ ಮತ್ತು ಜರ್ಮನ್ಪ್ರಜೆ ಮರಿಯಾ ವರ್ತ್ ಮುಖ್ಯರು; ಅವರನ್ನೆಲ್ಲ ಮುಕ್ತವಾಗಿ ಸ್ವಾಗತಿಸಲಾಗಿದೆ.
ಅವರು ಎತ್ತುವ ಎರಡನೇ ಅಂಶವೆಂದರೆ, ಹಿಂದೂಯಿಸಂ ಬಹುಮುಖಿಯಾದರೆ (pluralistic), ಹಿಂದುತ್ವ ಏಕಮುಖಿಯಾಗಿದೆ (monolithic) – ಎಂಬುದು. ಆ ವಿಷಯದಲ್ಲಿ ಅದು ಹಿಂದೂಧರ್ಮಕ್ಕಿಂತ ಇಸ್ಲಾಂ ಅಥವಾ ಕ್ರೈಸ್ತಮತಕ್ಕೆ ಸಮೀಪವಾದದ್ದು ಎಂದು ಅವರು ಹೇಳುತ್ತಾರೆ. ಇದರಿಂದ ಎರಡು ಕುತೂಹಲಕಾರಿ ಪ್ರಶ್ನೆಗಳು ಮೇಲೇಳುತ್ತವೆ. ಮೊದಲನೆಯದಾಗಿ, ಹಿಂದೂ ಪರಂಪರೆಯ ವೈವಿಧ್ಯವು ಇಂದಿನವರೆಗೂ ಉಳಿದುಕೊಂಡು ಬಂದಿದೆ; ಸ್ವಾಮಿ ನಾರಾಯಣ ಪಂಥದಿಂದ ಹರೇಕೃಷ್ಣ ಚಳವಳಿಯ ವರೆಗೆ, ಯೋಗಿಗಳು ಅಘೋರಿಗಳು ಮತ್ತು ನಾಥಪರಂಪರೆಯ ವರೆಗೆ ಎಲ್ಲವೂ ಇದರಲ್ಲಿ ಸೇರುತ್ತವೆ. ಹಿಂದುತ್ವವು ಏಕಮುಖಿ ಎಂದಾದರೆ
ಈ ವೈವಿಧ್ಯಮಯ ಹಿಂದೂ ಪರಂಪರೆಗಳನ್ನು ನಿರಾಕರಿಸಬೇಕು ಅಥವಾ ತಿರಸ್ಕರಿಸಬೇಕಲ್ಲವೆ? ಹಾಗೇನೂ ಆಗಿಲ್ಲ. ವಾಸ್ತವವೆಂದರೆ, ಮಹಾರಾಷ್ಟ್ರದ ಒಂದು ಕಾಂಗ್ರೆಸ್ ಸರ್ಕಾರ ‘ಮೂಢನಂಬಿಕೆ-ವಿರೋಧಿ’ ಶಾಸನವೊಂದನ್ನು ಜಾರಿಗೊಳಿಸುವ ಮೂಲಕ ಅಘೋರಿಗಳನ್ನು ನಿಷೇಧಿಸಿತ್ತು; ಮತ್ತು ‘ಜಾತ್ಯತೀತ’ ಸುಪ್ರೀಂಕೋರ್ಟ್ ಏಬ್ರಹಾಮಿಕ್ ಏಕರೂಪ ತತ್ತ್ವಗಳ ಆಧಾರದಲ್ಲಿ ರೂಪುಗೊಂಡ ‘ಪ್ರಮುಖ ಆಚರಣೆ’ಗಳ ಆಧಾರದಲ್ಲಿ ಹಿಂದೂ ಪರಂಪರೆಗಳ ಬಗ್ಗೆ ತೀರ್ಪು ನೀಡಲು ಪ್ರಯತ್ನಿಸುತ್ತಿದೆ.
ಒಂದು ವೇಳೆ ಭಾ. ಜ. ಪ. ಮತ್ತು ರಾ. ಸ್ವ. ಸಂಘಗಳ ಹಿಂದೂಧರ್ಮದ ಬಗೆಗಿನ ನಿಲವೇ ಹಿಂದುತ್ವ (ಈ ವಾದ ಹೇಗೆ ಸಮಸ್ಯಾತ್ಮಕ ಎಂಬುದನ್ನು ಮುಂದೆ ನೋಡೋಣ) ಎಂದು ಸಂಕುಚಿತಗೊಳಿಸಲೂ ಅವಕಾಶವಿಲ್ಲ; ಏಕೆಂದರೆ ಈ ಎರಡೂ ಪಕ್ಷ-ಸಂಸ್ಥೆಗಳು ತಮ್ಮ ನಿಷ್ಠೆ ಬಹುತ್ವ ಅಥವಾ ಬಹುಮುಖತ್ವಕ್ಕೆ ಎಂಬುದನ್ನು ಸ್ಪಷ್ಟವಾಗಿ ಮತ್ತು ಶಕ್ತಿಶಾಲಿಯಾಗಿ ವರ್ಷಗಳುದ್ದಕ್ಕೂ ಹೇಳುತ್ತಾ ಬಂದಿವೆ. ರಾ. ಸ್ವ. ಸಂಘದ ಮುಖ್ಯಸ್ಥ ಮೋಹನ್ಜೀ ಭಾಗವತ್ ಅವರು ತಮ್ಮ ಇತ್ತೀಚಿನ ಒಂದು ಹೇಳಿಕೆಯಲ್ಲಿ ಹೀಗೆ ಹೇಳಿದ್ದಾರೆ: “ಈ ಹಿಂದುಸ್ತಾನದಲ್ಲಿ ವಾಸಿಸುವ ಎಲ್ಲರೂ ಹಿಂದುಗಳು. ನಮ್ಮ ಪೂಜಾವಿಧಾನಗಳು ಬೇರೆ ಬೇರೆ ಇರಬಹುದು; ಕೆಲವರು ಪೂಜೆ(ಆರಾಧನೆ)ಯನ್ನೇ ಮಾಡದಿರಲೂಬಹುದು; ನಾವು ಬೇರೆ ಬೇರೆ ಭಾಷೆಗಳನ್ನು ಮಾತನಾಡಬಹುದು; ನಾವು ದೇಶದ ಬೇರೆ ಬೇರೆ ಭಾಗಗಳಿಗೆ ಸೇರಿದವರಾಗಿರಬಹುದು; ನಮ್ಮ ಆಹಾರಕ್ರಮಗಳು ಕೂಡ ವಿಭಿನ್ನವಾಗಿರಬಹುದು; ಆದರೂ ನಾವೆಲ್ಲರೂ ಒಂದೇ.”
ಇಲ್ಲಿ ಭಾಗವತ್ ಅವರು ಹಿಂದು ಪದವನ್ನು ಅದರ ಐತಿಹಾಸಿಕ ಅರ್ಥದಲ್ಲಿ ಬಳಸಿದ್ದಾರೆ; ಏಕೆಂದರೆ ಹೊರಗಿನವರು ಭಾರತದ ನಿವಾಸಿಗಳನ್ನು ಆ ರೀತಿಯಲ್ಲಿ ಗುರುತಿಸುತ್ತಿದ್ದರು; ಇಲ್ಲಿ ಅದನ್ನು ಇನ್ನೂ ವಿಶಾಲವಾದ ಅರ್ಥದಲ್ಲಿ ಬಳಸುವ ಮೂಲಕ ಮುಸ್ಲಿಮರು ಮತ್ತು ಕ್ರೈಸ್ತರನ್ನು ಕೂಡ ಅದರಲ್ಲಿ ಸೇರಿಸಿದಂತೆ ಆಗಿದೆ; ಆದರೆ ಅವರು ತಮ್ಮ ವಿಭಿನ್ನವಾದ ಆರಾಧನಾ ವಿಧಾನಗಳನ್ನು ಕೈಬಿಡಬೇಕಿಲ್ಲ.
ಪ್ರಖರ ಸವಾಲು
ಇನ್ನು ಆ ಮಾತಿನ ಎರಡನೇ ವಿಭಾಗಕ್ಕೆ ಬರೋಣ. “ಹಿಂದುತ್ವವು ಏಕಮುಖದ್ದು; ಆ ಮಟ್ಟಿಗೆ ಅದು ಹಿಂದುಯಿಸಂಗಿಂತ ಇಸ್ಲಾಂ ಅಥವಾ ಕ್ರೈಸ್ತಮತವನ್ನು ಹೋಲುವಂಥದ್ದು” ಎಂಬುದು. ಮೊದಲನೆಯದಾಗಿ ಇಸ್ಲಾಂ ಆಗಲಿ ಅಥವಾ ಕ್ರೈಸ್ತಮತವಾಗಲಿ ನಿಜವಾಗಿ ಏಕಮುಖವಲ್ಲ; ಅವೆರಡರಲ್ಲೂ ವಿಭಿನ್ನವಾದ ಅನೇಕ ಪಂಥಗಳು, ಆಚರಣೆಗಳು ಇವೆ. ನಿಜವಾದ ಸಮಸ್ಯೆಯೆಂದರೆ, ಅವು ಇತರರನ್ನು ಹೊರಗಿಡುವಂಥವು (exclusionary); ಅವೆರಡೂ ಮತಗಳಲ್ಲಿ ಕೆಲವು ಪ್ರಮುಖ ನಂಬಿಕೆಗಳಿದ್ದು ಅದರ ಹೊರಗಿನವರಿಗೆ ‘ಮೋಕ್ಷವಿಲ್ಲ’; ಮತ್ತು ಅವರಿಗೆ ‘ನರಕ ನಿಶ್ಚಿತ’. ಹಿಂದುತ್ವದ ಮೇಲೆ ಅಂತಹ ಯಾವುದೇ ಆರೋಪವನ್ನು ಮಾಡಲಾಗಿಲ್ಲ; ಆದರೆ ಇದೊಂದು ಸವಾಲಾಗಿ ಪರಿಣಮಿಸಿದೆ.
ಸವಾಲು ಏನೆಂದರೆ, ಇಸ್ಲಾಂ ಮತ್ತು ಕ್ರೈಸ್ತಮತಗಳೆರಡೂ ಬಹುಮುಖತ್ವ ಅಥವಾ ಬಹುತ್ವವನ್ನು, ಅಂದರೆ, ವಿಭಿನ್ನವಾದ ಹಲವು ಮಾರ್ಗಗಳ ಮೂಲಕ ದೇವರ ಕಡೆಗೆ ಹೋಗಬಹುದೆಂಬುದನ್ನು ನಿರಾಕರಿಸುತ್ತವೆ. ತನ್ಮೂಲಕ ಅವು ‘ಒಂದು ಸತ್ಯದ ಮಾರ್ಗಕ್ಕೆ’ ಇತರರನ್ನು ಆಕ್ರಮಣಕಾರಿಯಾಗಿ ಮತಾಂತರಿಸುತ್ತವೆ; ಮತಾಂತರಗೊಳ್ಳದವರು ಪೂರ್ತಿಯಾಗಿ ಹೊರಗಿನವರಾಗಿ ಉಳಿಯುತ್ತಾರೆ.
ಹಾಗಾಗಿ ನಿಜವಾಗಿ ಪ್ರತ್ಯೇಕ ಎಂದರೆ ಯಾವುದು? ನನಗೆ ಸ್ವತಃ ಅಂತಹ ಅನುಭವವಿದೆ. ಯಾರಾದರೂ ಹಿಂದೂಧರ್ಮದ ಪರವಾಗಿ ಮಾತನಾಡಿದರೆ, ಅಥವಾ ಕ್ರೈಸ್ತರು, ಇಸ್ಲಾಮೀವಾದಿಗಳು ಅಥವಾ ಕಮ್ಯೂನಿಸ್ಟ್ ಪ್ರತಿಪಾದಕರು ನಡೆಸಿದ ದಾಳಿಯನ್ನು ಪ್ರಶ್ನಿಸಿದರೆ ಅಥವಾ ವಿರೋಧಿಸಿದರೆ ಅವರಿಗೆ ಕೂಡಲೇ ಹಿಂದುತ್ವದ ಹಣೆಪಟ್ಟಿ ಬರುತ್ತದೆ. ಇಷ್ಟಿದ್ದರೆ ಸಾಕು; ಸಾವರ್ಕರ್, ಭಾ.ಜ.ಪ. ಅಥವಾ ಬೇರೆ ಯಾರಾದರೂ ಏನು ಹೇಳಿದ್ದಾರೆ ಎಂಬುದಕ್ಕೂ ಈ ಹಣೆಪಟ್ಟಿ ಅಂಟಿಸುವುದಕ್ಕೂ ಯಾವ ಸಂಬಂಧವೂ ಇಲ್ಲ.
ಸುಮಾರು ಒಂದು ದಶಕದ ಹಿಂದೆ ಅಮೆರಿಕದಲ್ಲಿ ನಾನೊಂದು ಲೇಖನವನ್ನು ಬರೆದೆ. ಅದರಲ್ಲಿ ಶಾಲಾ ಮಕ್ಕಳು ಬಳಸುವ ಜನಪ್ರಿಯ ವಿಶ್ವಕೋಶವಾದ ಎನ್ಕಾರ್ಟಾ(Encarta)ದಲ್ಲಿ ಹಿಂದೂಧರ್ಮದ ಬಗ್ಗೆ ತಪ್ಪು ಚಿತ್ರಣವನ್ನು ನೀಡಿದ್ದನ್ನು ಪ್ರಶ್ನಿಸಿದ್ದೆ. ಮುಂದೆ ಕ್ಯಾಲಿಫೋರ್ನಿಯಾದ ಪುಸ್ತಕಗಳಲ್ಲಿ ಹಿಂದೂಯಿಸಂ ಬಗ್ಗೆ ಕಳಪೆ ಚಿತ್ರಣ ನೀಡಿದ್ದನ್ನು ವಿವಿಧ ಹಿಂದೂಗುಂಪುಗಳು ಪ್ರಶ್ನಿಸಿ ಸವಾಲೆಸೆದವು. ಆಗ ಅಮೆರಿಕದಲ್ಲಿ ಅಲ್ಪಸಂಖ್ಯಾತರಾಗಿರುವ ಅಮೆರಿಕನ್ ಹಿಂದುಗಳು ಒಂದು ವಿಚಿತ್ರವಾದ ವಿರೋಧವನ್ನು ಎದುರಿಸಬೇಕಾಯಿತು: ಅಮೆರಿಕದಲ್ಲಿರುವ ಭಾರತೀಯ ಎಡಪಂಥೀಯ ಬುದ್ಧಿಜೀವಿಗಳು ಆ ಹಿಂದೂಗುಂಪುಗಳಿಗೆ ‘ಹಿಂದುತ್ವ’ದ ಹಣೆಪಟ್ಟಿ ಅಂಟಿಸಿದರು. ನಿಜವೆಂದರೆ, ಎಡಪಂಥೀಯರ ಪರಿಭಾಷೆಯಲ್ಲಿ ಸಾವರ್ಕರ್ ಮತ್ತು ‘ಹಿಂದೂ ರಾಷ್ಟ್ರೀಯತೆ’ಯ ಬಗ್ಗೆ ಹೇಳುವ ರೀತಿಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. 150ಕ್ಕೂ ಅಧಿಕ ದೇಶಗಳಲ್ಲಿ ಕ್ರೈಸ್ತರು ಬಹುಸಂಖ್ಯಾತರಾದರೆ, 49 ದೇಶಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರು; ಶೇ. 20ರಷ್ಟು ದೇಶಗಳು ದೇಶಕ್ಕೊಂದು (ಸರ್ಕಾರಿ) ಅಧಿಕೃತ ಮತವನ್ನು ಹೊಂದಿವೆ; ಈ ಪಟ್ಟಿಯಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದೂ ಎಡಪಂಥೀಯರು ‘ಹಿಂದುತ್ವ’ದ ಮೇಲೆ ದಾಳಿ ನಡೆಸುತ್ತಾರೆಂದರೆ, ಅವರಿಗೆ ಅಲ್ಪಸಂಖ್ಯಾತರ ಬಗೆಗೆ ಯಾವ ಕಾಳಜಿಯೂ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ವಿರೋಧಿಸುವವರಿಗೆ ಹಣೆಪಟ್ಟಿ
ಆದ್ದರಿಂದ ನಾವೀಗ ನಿಜವಾದ ವ್ಯಾಖ್ಯೆ ಏನೆಂದು ಗಮನಿಸೋಣ. ಯಾವುದು ಪ್ರತಿರೋಧವನ್ನು ಒಡ್ಡುತ್ತದೆಯೋ (resist) ಆ ಹಿಂದೂಧರ್ಮವೇ (ಹಿಂದೂಯಿಸಂ) ಹಿಂದುತ್ವ ಎನ್ನಬಹುದು. ಇಸ್ಲಾಂ ಅಥವಾ ಕ್ರೈಸ್ತಮತಗಳು ನಡೆಸುವ, ಬಹುತ್ವವನ್ನು ಉಲ್ಲಂಘಿಸುವ ಆಕ್ರಮಣಕಾರಿ ಮತಾಂತರವನ್ನು ವಿರೋಧಿಸಿದೊಡನೆ ‘ಹಿಂದುತ್ವ’ ಎನ್ನುವ ಹಣೆಪಟ್ಟಿಯನ್ನು ಅಂಟಿಸಲಾಗುತ್ತದೆ. ಈ ರೀತಿಯಲ್ಲಿ ಹಿಂದೂಯಿಸಂ ಎಂದರೆ ಧನಾತ್ಮಕವಾದದ್ದು ಮತ್ತು ಹಿಂದುತ್ವ ಎಂದರೆ ನಕಾರಾತ್ಮಕವಾದದ್ದು ಎಂದು ಹೇಳುವ ಒಂದು ಸುಳ್ಳು ತಾರತಮ್ಯವನ್ನು ಹುಟ್ಟುಹಾಕುವ ಉದ್ದೇಶ ಒಂದೇ; ಅದು – ಹಿಂದೂ ಪರಂಪರೆಯ ಎಲ್ಲ ರಕ್ಷಣಾತ್ಮಕ ಕೆಲಸಗಳನ್ನು ಕೆಟ್ಟದು ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿ ನಿಷ್ಕ್ರಿಯಗೊಳಿಸುವುದು; ಹಾಗೂ ಅದನ್ನು ಪೂರ್ತಿ ಸ್ಥಗಿತಗೊಳಿಸುವುದು.
ದಕ್ಷಿಣ ಅಮೆರಿಕದಿಂದ ಆಸ್ಟ್ರೇಲಿಯದ ವರೆಗೆ, ಸ್ಕ್ಯಾಂಡಿನೇವಿಯದಿಂದ ಪರ್ಶಿಯದ ವರೆಗೆ – ಹೀಗೆ ಜಗತ್ತಿನಾದ್ಯಂತ ಸ್ಥಳೀಯ ಮತಪರಂಪರೆಗಳು ಈ ಎರಡು ಆಕ್ರಮಣಕಾರಿ ಮತಗಳ ಮತಾಂತರದ ದಾಳಿಗೆ ಗುರಿಯಾಗಿ ಅಸ್ತಿತ್ವವನ್ನೇ ಕಳೆದುಕೊಂಡವು; ಮತ್ತು ಈ ಮತಗಳು ಜಗತ್ತಿನಲ್ಲಿ ಪ್ರಾಬಲ್ಯವನ್ನು ಸಾಧಿಸಿದವು. ಆದರೆ ಹಿಂದೂಧರ್ಮ ಆ ರೀತಿಯಲ್ಲಿ ಸೋಲೊಪ್ಪಿಕೊಳ್ಳಲಿಲ್ಲ; ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಮುಂದುವರಿಯಿತು. ಸೇನಾಬಲದ ಮೂಲಕ ಮತ್ತು ಬೌದ್ಧಿಕವಾಗಿ – ಈ ಎರಡೂ ರೀತಿಯಲ್ಲಿ ಹಿಂದುಗಳು ಇತರರಿಗಿಂತ ಹೆಚ್ಚಿನ ಪ್ರತಿರೋಧವನ್ನು ಒಡ್ಡುವ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡರು.
ಪ್ರತಿರೋಧ ಒಡ್ಡಿದವರಿಗೆಲ್ಲ ಹಿಂದುತ್ವದ ಹಣೆಪಟ್ಟಿಯನ್ನು ಹಚ್ಚುವುದಾದರೆ, ಗುರು ಗೋವಿಂದಸಿಂಗ್ ಅವರಿಂದ ಶಿವಾಜಿಯ ತನಕ ಎಲ್ಲರೂ ‘ಹಿಂದುತ್ವ’ದ ಅಡಿಯಲ್ಲೇ ಬರುತ್ತಾರೆ. ನಿಜವೆಂದರೆ ‘ದಶಮ್ ಗ್ರಂಥ್’ನಲ್ಲಿ ಗುರು ಗೋವಿಂದಸಿಂಗ್ ಅವರು ನೀಡಿದ ‘ಜಾಗೇ ಧರಮ್ ಹಿಂದುಕ್, ತುರಕನ್ ಧುಂಧ್ ಭಾಜೈ’ (ಹಿಂದೂಧರ್ಮ ಗೆಲ್ಲುತ್ತದೆ, ತುರುಕರು ತೂರಿಹೋಗುತ್ತಾರೆ) ಎನ್ನುವ ಕರೆ ಹಿಂದುತ್ವದ ಬಹಳ ಹಿಂದಿನ ಉಲ್ಲೇಖ ಎನ್ನಿಸಿಕೊಳ್ಳಲು ಅರ್ಹವಾಗಿದೆ; ಅದೇ ರೀತಿ ಪ್ರತಿರೋಧದ ಒಂದು ಮಾದರಿಯಾದ ಶಿವಾಜಿಯ ಹಿಂದವೀ ಸ್ವರಾಜ್ಯ ಕೂಡ ಹಿಂದುತ್ವ ಎನಿಸಿಕೊಳ್ಳದೆ ಇರಲಾರದು.
ಪ್ರತಿರೋಧ ಒಡ್ಡಿದವರನ್ನು ರಾಕ್ಷಸರೆಂಬಂತೆ ಚಿತ್ರಿಸುವ ಕೆಲಸವನ್ನು ಸಾಮ್ರಾಜ್ಯಶಾಹಿಗಳು ಬಹಳ ಹಿಂದಿನಿಂದಲೇ ಮಾಡುತ್ತ ಬಂದಿದ್ದಾರೆ; ಅದು ಅವರ ಕಾರ್ಯತಂತ್ರವೇ ಆಗಿದೆ. ಬಿಳಿಯ ಕ್ರೈಸ್ತರು ಅಮೆರಿಕದಲ್ಲಿ ವಸಾಹತು ನಿರ್ಮಿಸಲು ಹೊರಟಾಗ ಸ್ಥಳೀಯ ಮೂಲನಿವಾಸಿಗಳ ಜನಾಂಗ ಹತ್ಯೆಯನ್ನು ನಡೆಸಿದರು; ಮತ್ತು ಅವರ ಭೂಮಿಯನ್ನು ಕಸಿದುಕೊಂಡರು. ಆಗ ಪ್ರತಿರೋಧ ಒಡ್ಡಿದ ಮೂಲನಿವಾಸಿಗಳನ್ನು ‘ಅನಾಗರಿಕರು’ (avage) ಎಂದು ಬಣ್ಣಿಸಲಾಯಿತು. ಆಗ ಜನಪ್ರಿಯವಾದ ಒಂದು ಮಾತು ಹೀಗಿತ್ತು: “ಏಕೈಕ ಒಳ್ಳೆಯ ಇಂಜುನ್ (ಇಂಡಿಯನ್) ಎಂದರೆ ಸತ್ತ ಇಂಜುನ್.” ಈವತ್ತಿಗೆ ಅನ್ವಯವಾಗುವಂತೆ ಅದನ್ನು ಹೀಗೆ ಬದಲಿಸಬಹುದು: “ಏಕೈಕ ಒಳ್ಳೆಯ ಹಿಂದು ಅಂದರೆ ಸತ್ತ ಹಿಂದು.” ಅಂದರೆ, ಆತನ ಅಥವಾ ಆಕೆಯ ಧರ್ಮದ ಮೇಲೆ ದಾಳಿ ನಡೆಸಿದಾಗಲೂ, ಹಾಸ್ಯಾಸ್ಪದ ಸ್ಥಿತಿಗೆ ಒಯ್ದಾಗಲೂ, ಅಥವಾ ವ್ಯವಸ್ಥಿತವಾದ ಮತಾಂತರ ಮತ್ತು ಜನಾಂಗೀಯ ನಿರ್ಮೂಲನಕ್ಕೆ ಗುರಿಪಡಿಸಿದಾಗಲೂ ಯಾರು ಪ್ರತಿಭಟಿಸುವುದಿಲ್ಲವೋ ಅವರೇ ಒಳ್ಳೆಯ ಹಿಂದುಗಳು. ಹಿಂದೂಧರ್ಮ ಮತ್ತು ಹಿಂದುತ್ವಗಳು ಪರಸ್ಪರ ವಿರುದ್ಧ ಎಂದು ಹೇಳುವವರ ಉದ್ದೇಶ ಅಥವಾ ಗುರಿ ಅದೇ. ಅದೇ ಉದ್ದೇಶಕ್ಕಾಗಿ ಅವರು ಪ್ರತಿರೋಧ ಒಡ್ಡುವವರನ್ನು ‘ಕೆಟ್ಟ ಹಿಂದುಗಳು’ ಮತ್ತು ‘ಅನಾಗರಿಕರು’ ಎನ್ನುತ್ತಾರೆ. ಅವರ ಬಾಯಲ್ಲಿ ‘ಒಳ್ಳೆಯ ಹಿಂದು’ ಎನ್ನುವ ಹೊಗಳಿಕೆ ಸಿಗಬೇಕಿದ್ದರೆ ಹಿಂದೂ ಪರಂಪರೆಯನ್ನು ಟೀಕಿಸಬೇಕು ಮತ್ತು ಯಾವುದೇ ಕಾರಣಕ್ಕಾಗಿ ಇತರರನ್ನು (ಮತಾಂತರ ಮಾಡುವವರನ್ನು) ಟೀಕಿಸಬಾರದು.
ಪ್ರಶ್ನೆಗಳಿಗೆ ಉತ್ತರಿಸಿ
ತಾವು ಹಿಂದೂಯಿಸಂನ ಪರವಾಗಿದ್ದೇವೆ ಎಂದು ಹೇಳುತ್ತಾ, ಈ ನಕಲಿ ಚರ್ಚೆಯನ್ನು ಮುಂದೊಡ್ಡುವವರು ಮೊದಲು ಈ ಕೆಳಗಿನ ನೈಜ ಪ್ರಶ್ನೆಗಳಿಗೆ ಉತ್ತರಿಸಬೇಕು:
1. ವೈವಿಧ್ಯಮಯವಾದ ಹಿಂದೂಪರಂಪರೆ ಜಗತ್ತಿಗೆ ಏನನ್ನಾದರೂ ನೀಡಲು ಸಾಧ್ಯವೆಂದು ನೀವು ಭಾವಿಸುತ್ತೀರಾ? ಆ ಮೌಲ್ಯ ಏನು ಮತ್ತು ಎತ್ತಿಹಿಡಿಯಲಿಕ್ಕೆ ಅದು ಅರ್ಹವೆಂದು ನೀವು ಭಾವಿಸುತ್ತೀರಾ?
2. ಕ್ರೈಸ್ತಮತ ಮತ್ತು ಇಸ್ಲಾಂಗಳು ನಡೆಸುವ ಆಕ್ರಮಣಕಾರಿ ಮತಾಂತರಕ್ಕೆ ಹಿಂದೂಧರ್ಮವು ಹೇಗೆ ಪ್ರತಿಕ್ರಿಯಿಸಬೇಕು? ಏನೂ ಮಾಡದೆ ಸುಮ್ಮನಿರುವುದು ಅಥವಾ “ತಪ್ಪೆಲ್ಲ ಜಾತಿ ಪದ್ಧತಿಯದ್ದು; ಅದನ್ನು ಬಲಿಹಾಕಿ” ಎಂದು ಹೇಳುವುದು ಸೂಕ್ತ ಪ್ರತಿಕ್ರಿಯೆ ಅನ್ನಿಸುವುದಿಲ್ಲ. ಕ್ರೈಸ್ತಮತ ಮತ್ತು ಇಸ್ಲಾಂಗಳು ಜಗತ್ತಿನಾದ್ಯಂತ ಯಾವ ಭೂಭಾಗಗಳು ಮತ್ತು ದೇಶವನ್ನು ಬಗಲಿಗೆ ಹಾಕಿಕೊಂಡವೋ ಅಲ್ಲೆಲ್ಲ ಜಾತಿ (caste) ಇದ್ದಿರಲಿಲ್ಲ. ನಿಜವೆಂದರೆ, ಕ್ರೈಸ್ತಮತಕ್ಕೆ ಆಫ್ರಿಕದ ಬಹುಭಾಗದ ಮತಾಂತರವು ಕಳೆದ 50 ವರ್ಷಗಳಲ್ಲಿ ನಡೆಯಿತು. ಇತರ ಹಲವರು ಈ ಮತಾಂತರಿಗಳಿಗೆ ಶರಣಾಗಿರುವಾಗ ಹಿಂದುಗಳು ಮತಾಂತರಗೊಳ್ಳದೆ ಉಳಿದದ್ದು ಹೇಗೆ ಎನ್ನುವುದು ಅತ್ಯಂತ ಮೌಲಿಕವಾದ ಪ್ರಶ್ನೆ ಎನಿಸುತ್ತದೆ. ನಮ್ಮ ಪೂರ್ವಿಕರು ಯಾವ ರೀತಿಯಲ್ಲಿ ಪ್ರತಿರೋಧ ಒಡ್ಡಿದರು? ಹಿಂದುತ್ವದ ಯಾವ ಗುಣದಿಂದಾಗಿ ಅವರಿಗೆ ಪ್ರತಿರೋಧಿಸಲು ಸಾಧ್ಯವಾಯಿತು? ಇಂದಿನ ಈ ಕಾಲಘಟ್ಟದಲ್ಲಿ ಹಿಂದುಗಳು ಹೇಗೆ ಪ್ರತಿರೋಧ ಒಡ್ಡಬಹುದು?
3. ವಸಾಹತುಶಾಹಿ ಇತಿಹಾಸ ಬರವಣಿಗೆಯಲ್ಲಿ ಐರೋಪ್ಯ ಜನತೆಗೆ ಹೊರತಾದವರ ಬಹಳಷ್ಟು ಸಾಧನೆಗಳನ್ನು ಅಳಿಸಿಹಾಕಲಾಗಿದೆ. ಭಾರತದಲ್ಲಿ ಶ್ರೀಮಂತವಾದ ಜ್ಞಾನಪರಂಪರೆಯಿದ್ದು, ಗಣಿತ, ವೈದ್ಯಕೀಯ ಮತ್ತು ಖಗೋಳಶಾಸ್ತ್ರಗಳಲ್ಲಿ ನಮ್ಮ ಪೂರ್ವಿಕರು ಮಹತ್ತ್ವದ ಸಾಧನೆಗಳನ್ನು ಮಾಡಿದ್ದರು; ನಮ್ಮ ತತ್ತ್ವಶಾಸ್ತ್ರದ ಚಿಂತನೆಗಳ ಬಗ್ಗೆಯಂತೂ ಹೇಳುವುದೇ ಬೇಡ; ಆ ನಿಟ್ಟಿನಲ್ಲಿ ನಮ್ಮ ಪೂರ್ವಿಕರು ಜಗತ್ತಿನ ಮೇಲೆ ವಿಶೇಷ ಪ್ರಭಾವವನ್ನು ಬೀರಿದ್ದರು. ಐರೋಪ್ಯ ಜನತೆಗೆ ಹೊರತಾದವರ ಬಹಳಷ್ಟು ಸಾಧನೆಗಳನ್ನು ಅಳಿಸಿಹಾಕುವ ತಪ್ಪು ಇತಿಹಾಸ ಬರವಣಿಗೆಗಳನ್ನು ನಾವು ಪ್ರಶ್ನಿಸಬೇಡವೆ? ಮತ್ತು ನಮ್ಮ ಮಕ್ಕಳು ತಮ್ಮದಾದ ನೆಲೆ, ಇತಿಹಾಸ, ಭಾಷೆ ಮತ್ತು ಚಿಂತನೆಗಳ ಮೇಲೆ ಕಾಲೂರಿ ನಿಲ್ಲುವಂತೆ ಮಾಡುವುದು ಬೇಡವೆ?
4. ಭಾರತ ಸರ್ಕಾರವು ತನ್ನ ನಾಗರಿಕರ ನಡುವೆ ಮತೀಯ (ಧಾರ್ಮಿಕ) ನೆಲೆಯಲ್ಲಿ ವ್ಯವಸ್ಥಿತವಾದ ತಾರತಮ್ಯವನ್ನು ನಡೆಸುತ್ತಾ ಬಂದಿದೆ – ತಮ್ಮ ಆರಾಧನಾ ಸ್ಥಳಗಳನ್ನು ನಿರ್ವಹಿಸುವುದರಲ್ಲಿ ಹಿಂದುಗಳಿಗೆ ಇತರರಿಗೆ ಇರುವಂತಹ ಹಕ್ಕುಗಳು ಇಲ್ಲ; ಹಿಂದೂ ದೇವಾಲಯಗಳಿಗೆ ತೆರಿಗೆ ಹೇರಲಾಗುತ್ತಿದೆ. ಉದಾಹರಣೆಗೆ, ಕ್ರೂರ ಸ್ವರೂಪದ ಆರ್ಟಿಇ (ಶಿಕ್ಷಣ ಹಕ್ಕು ಕಾಯಿದೆ) ಕೇವಲ ಹಿಂದುಗಳು ನಡೆಸುವ ಶಾಲೆಗಳಿಗೆ ಅನ್ವಯವಾಗುತ್ತದೆ. ಹಿಂದುತ್ವದ ಆರೋಪ ಮಾಡುವ ರಾಜಕೀಯ ಪಕ್ಷಗಳು ಈ ಕುರಿತು ಏನನ್ನೂ ಮಾಡುತ್ತಿಲ್ಲ. ಈ ತಾರತಮ್ಯದ ವಿರುದ್ಧ ಹಿಂದುಗಳು ಮಾತನಾಡಬೇಕಲ್ಲವೆ?
ಬಯಲಾಗುವ ಹೂರಣ
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಾವು ಹೊರಟಾಗ ಹಿಂದೂಧರ್ಮ ಮತ್ತು ಹಿಂದುತ್ವಗಳು ಪರಸ್ಪರ ವಿರುದ್ಧ ಎನ್ನುವ ನಕಲಿ ವಾದದ ಹೂರಣ ಬಯಲಾಗುತ್ತದೆ.
1. ಡಾ| ಗೋಪಾಲ್ ನಾರಾಯಣ್ ಸೇನ್ಗುಪ್ತ ಅವರು ವಾರಾಣಸಿಯ ಭಾರತ ಧರ್ಮ ಮಹಾಮಂಡಲಕ್ಕೆ ‘Hinduism is the only Dharm; Why?’ (ಹಿಂದೂಯಿಸಂ ಏಕೈಕ ಧರ್ಮ; ಏಕೆ?) ಎನ್ನವ ಮಹಾಪ್ರಬಂಧವನ್ನು ಸಲ್ಲಿಸಿದ್ದು, ಮಹಾಮಂಡಲ ಅವರಿಗೆ ‘ಡಾಕ್ಟರ್ ಆಫ್ ಓರಿಯೆಂಟಲ್ ಕಲ್ಚರ್’ (ಡಿ.ಓ.ಸಿ.) ಪದವಿಯನ್ನು ನೀಡಿದೆ. ಹಿಂದೂಧರ್ಮದಲ್ಲಿ ಸೇರಿರುವ 35 ಅಪೂರ್ವ ಗುಣಲಕ್ಷಣಗಳ ಬಗ್ಗೆ ಆ ಮಹಾಪ್ರಬಂಧದಲ್ಲಿ ಚರ್ಚಿಸಿದ್ದು, ಅದನ್ನು ಗುರುತಿಸಿ ಈ ಪದವಿಯನ್ನು ನೀಡಲಾಗಿದೆ. ‘ಧರ್ಮೇಣ ಹೀನಾಃ ಪಶುಭಿಃ ಸಮಾನಾಃ’ – ಎಂದರೆ, ಧರ್ಮಮಾರ್ಗವನ್ನು ಅನುಸರಿಸದೆ ಇರುವವರು ಪಶುಗಳಿಗೆ ಸಮಾನರು.
2. ಸತ್ಯದಲ್ಲಿ ನಿಷ್ಠೆ ಮತ್ತು ಚಿಂತನೆ, ಮಾತು ಹಾಗೂ ಆಚರಣೆಯ ಮೂಲಕ ಅದರ ಪಾಲನೆಯು ಒಬ್ಬಾತ ಸುಸಂಸ್ಕೃತನೇ ಅಲ್ಲವೇ ಎಂದು ತೀರ್ಮಾನಿಸುವಲ್ಲಿ ಪ್ರಮುಖ ಅಂಶವಾಗಿರುತ್ತದೆ.
ಮನಸ್ಯನ್ಯತ್ ವಚಸ್ಯನ್ಯತ್ ಕರ್ಮಣ್ಯನ್ಯತ್ ದುರಾತ್ಮನಾಮ್ |
ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಾಮ್ ||
ದುರಾತ್ಮರ ಮನಸ್ಸು, ಮಾತು ಮತ್ತು ಕೃತಿಗಳು ಬೇರೆ ಬೇರೆ ಇರುತ್ತವೆ; ಮತ್ತು ಮಹಾತ್ಮರ ಮನಸ್ಸು (ಚಿಂತನೆ), ಮಾತು ಮತ್ತು ಕೃತಿಗಳು ಒಂದೇ ಇರುತ್ತದೆ.
ಶಾಸ್ತ್ರಗಳು ಮುಂದುವರಿದು ಹೀಗೆ ಹೇಳುತ್ತವೆ:
ಪುಣ್ಯೋಪದೇಶೀ ಸದಯಃ ಯಃ ಕೈತವವಿವರ್ಜಿತಃ |
ಪಾಪಾಯನ ವಿರೋಧೀ ಚ ಚತ್ವಾರಃ ಕೇಶವೋಪಮಃ ||
ಮಾತು ಮತ್ತು ಕೃತಿಗಳಲ್ಲಿ ಸದ್ಗುಣಗಳು, ಎಲ್ಲ ಜೀವಿಗಳ ಬಗೆಗೆ ಕರುಣೆ, ಮೋಸ-ವಂಚನೆ ಇಲ್ಲದಿರುವಿಕೆ, ಹಾಗೂ ಅನೈತಿಕತೆ ಮತ್ತು ಪಾಪಕಾರ್ಯಗಳ ವಿರುದ್ಧ ನಿರಂತರ ಹೋರಾಟ – ಇವು ನಾಲ್ಕು ಅಪೂರ್ವ ಗುಣಗಳಾಗಿದ್ದು, ಇವುಗಳಲ್ಲಿ ಒಂದನ್ನು ಪ್ರಾಮಾಣಿಕವಾಗಿ ಆಚರಿಸಿದರೂ ಕೂಡ ಒಬ್ಬ ವ್ಯಕ್ತಿ ಶ್ರೀಹರಿಗೆ ಸಮಾನನೆನಿಸುತ್ತಾನೆ.
3. ವರ್ಣವ್ಯವಸ್ಥೆ ಅಥವಾ ಸಮಾಜವನ್ನು ಗುಣ ಮತ್ತು ಕರ್ಮಗಳ ಆಧಾರದಲ್ಲಿ ವಿಭಜಿಸುವುದು (ಹಿಂದಿನ ಜನ್ಮಗಳಲ್ಲಿ ಮಾಡಿದ ಒಳ್ಳೆಯ ಮತ್ತು ಕೆಟ್ಟ ಕೆಲಸಗಳ ಫಲ ಹಾಗೂ ಸತ್ತ್ವ, ರಜಸ್ ಮತ್ತು ತಮೋ ಗುಣಗಳಿಗೆ ಅನುಗುಣವಾದ ಸೃಷ್ಟಿ) – ಇದರಿಂದ ತಿಳಿಯಬಹುದಾದ ಅಂಶವೆಂದರೆ, ಪ್ರತಿಯೊಂದು ಜೀವಿಯ ಹೃದಯದಲ್ಲಿ ಪರಮಾತ್ಮನಿದ್ದಾನೆ; ಸಜೀವ ಮತ್ತು ನಿರ್ಜೀವ ಎಲ್ಲ ವಸ್ತುಗಳಲ್ಲೂ ಆತ ಇದ್ದಾನೆ. ‘ವಿವಿಧತೆಯಲ್ಲಿ ಏಕತೆ’ ಮತ್ತು ‘ಏಕತೆಯಲ್ಲಿ ವಿವಿಧತೆ’ ಎನ್ನುವ ಪ್ರಾಥಮಿಕ ಜ್ಞಾನಕ್ಕೆ ಇದು ಅತ್ಯಂತ ಮೂಲಭೂತವಾದದ್ದು. ಪರಸ್ಪರ ಸಂಬಂಧವನ್ನು ಒಳಗೊಂಡಿರುವ ಈ ವರ್ಗೀಕರಣ ಅಥವಾ ವರ್ಣವ್ಯವಸ್ಥೆಯಿಂದಾಗಿ ಹಿಂದೂಧರ್ಮವು ಮತಾಂತರವೇ ಮುಖ್ಯವಾದ ಸೆಮೆಟಿಕ್ ದಾಳಿಕೋರರಿಂದ ಸುರಕ್ಷಿತವಾಗಿ ಉಳಿದುಕೊಂಡಿದೆ. ಮತ್ತು ಸಮಾಜವನ್ನು ಸುಭದ್ರವಾಗಿ ಉಳಿಸಿದೆ. ವರ್ಣವ್ಯವಸ್ಥೆಯಲ್ಲಿ ಅಡಕವಾದ ಈ ಮೂರು ಮೂಲಭೂತ ಗುಣಗಳಿಗೆ ಹೊರತಾದ ಯಾವುದೇ ವಿಭಜನೆ ಈ ಪ್ರಪಂಚದಲ್ಲಿ ಇಲ್ಲ; ಇಡೀ ಸೃಷ್ಟಿಯನ್ನು ಇದು ವಿಭಜಿಸುತ್ತಿದ್ದು, ಎಲ್ಲ ಪ್ರಾಣಿ ಮತ್ತು ಜಂತುಗಳಲ್ಲದೆ ಲೋಹ, ಆಭರಣ, ವಿಷ, ಮಣ್ಣು ಮುಂತಾದವು ಕೂಡ ಇದರಲ್ಲಿ ಸೇರುತ್ತವೆ.
ಅದ್ವಿತೀಯವಾದ ನಮ್ಮ ಧರ್ಮಶಾಸ್ತ್ರಗಳು ಹೇಳುವಂತಹ ಸದಾಚಾರ ಅಥವಾ ಸಂಬಂಧದ (ಸಂಗ) ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದಲ್ಲಿ ಹಿಂದೂಧರ್ಮ ಮತ್ತು ತತ್ತ್ವಶಾಸ್ತ್ರದ ಬಗೆಗಿನ ಮಾತು, ವಾದ-ವಿವಾದಗಳು ನಿಷ್ಫಲವೇ ಸರಿ. ಹಿಂದೂ ಸದಾಚಾರದ ಆಚರಣೆಯು ಹಿಂದುತ್ವದ ಸಾರವಾಗಿದೆ. ಕ್ರೈಸ್ತ ಮತ್ತು ಮುಸ್ಲಿಂ ಧಾರ್ಮಿಕ ಮುಂದಾಳುಗಳು ಭಾರತ ಸೇರಿದಂತೆ ಜಗತ್ತಿನ ವಿವಿಧ ಕಡೆ ನಡೆಸಿದರೆನ್ನಲಾದ ಅತ್ಯಾಚಾರ ಮತ್ತು ಅನೈತಿಕ ಚಟುವಟಿಕೆಗಳು ಮಾನವಜನಾಂಗದ ಸಾಕ್ಷಿಪ್ರಜ್ಞೆಯನ್ನೇ ಕಲಕಿವೆ.
ಶಾಸ್ತ್ರಗಳು ಹೀಗೆ ಹೇಳುತ್ತವೆ:
ಯಃ ಸ್ವಾಚಾರಪರಿಭ್ರಷ್ಟಃ ಸಾಂಗವೇದಾಂತಗೋsಪಿ ಚೇತ್ |
ಸ ಏವ ಪತಿತೋ ಜ್ಞೇಯೋ ಸರ್ವಕರ್ಮಬಹಿಷ್ಕೃತಃ ||
ಒಬ್ಬ ವ್ಯಕ್ತಿ ವೇದ ಮತ್ತು ವೇದಾಂತಗಳನ್ನು ಬಹಳ ಚೆನ್ನಾಗಿ ಅಧ್ಯಯನ ಮಾಡಿರಬಹುದು; ಆದರೆ ಆಚಾರವಂತನಾಗಿಲ್ಲದಿದ್ದರೆ ಆತ ಪತಿತನೆಂದೇ ತಿಳಿಯಬೇಕು; ಎಲ್ಲ ಸತ್ಕರ್ಮಗಳಿಂದ ಆತ ಬಹಿಷ್ಕೃತನಾಗಿರುತ್ತಾನೆ.
ಕೇವಲ ದೇವಸ್ಥಾನಕ್ಕೆ ಭೇಟಿ ನೀಡಿದರೆ ಅಥವಾ ಅಲ್ಲಿ ಪೂಜೆ ಮಾಡಿದರೆ (ಮಾಡಿಸಿದರೆ) ಹಿಂದುತ್ವವು ಸಿದ್ಧಿಸುವುದಿಲ್ಲ; ಬದಲಾಗಿ ಶುದ್ಧಾಹಾರ (ಶುದ್ಧ ಸಾತ್ತ್ವಿಕ ಆಹಾರದ ಸೇವನೆ), ಸದಾಚಾರ (ಒಳ್ಳೆಯ ಆಚಾರ, ಸತ್ಸಂಗ) ಮತ್ತು ವಿಧಿ-ನಿಷೇಧಗಳೊಂದಿಗೆ ಉಪಾಸನೆಯ ನಿಯಮಗಳ ಪಾಲನೆ – ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವಶ್ಯ. ಇದರಿಂದಾಗಿ ಧರ್ಮದ ಲಕ್ಷಣವಾದ ಹತ್ತು ವಿಶೇಷ ಗುಣಗಳು ಸಿದ್ಧಿಸುತ್ತವೆ; ಅವು ಹಿಂದೂಧರ್ಮದ ಲಕ್ಷಣಗಳು ಕೂಡ ಆಗಿವೆ:
ಧೃತಿ ಕ್ಷಮಾಃ ದಮೋsಸ್ತೇಯಂ ಶೌಚಮಿಂದ್ರಿಯನಿಗ್ರಹಃ |
ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಮ್ ||
ಎಲ್ಲ ಮಾನವರು ಹತ್ತು ಸದ್ಗುಣಗಳನ್ನು ಅನುಸರಿಸಬೇಕು. ಅವುಗಳೆಂದರೆ, ಧೃತಿ (ದೃಢತೆ, ತೃಪ್ತಿ), ಕ್ಷಮಾ (ಕ್ಷಮೆ), ದಮ (ಸಂಯಮ, ಸ್ವನಿಯಂತ್ರಣ), ಅಸ್ತೇಯ (ಕಳ್ಳತನ ಮಾಡದಿರುವುದು), ಶೌಚ (ದೇಹ ಮತ್ತು ಮನಸ್ಸುಗಳ ಶುಚಿತ್ವ), ಇಂದ್ರಿಯನಿಗ್ರಹ (ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು), ಧೀಃ (ಬುದ್ಧಿಶಕ್ತಿಯನ್ನು ಜಾಗೃತವಾಗಿ ಇಟ್ಟುಕೊಳ್ಳುವುದು), ವಿದ್ಯಾ (ಅಧ್ಯಯನ), ಸತ್ಯ (ಸತ್ಯವನ್ನೇ ಆಡುವುದು), ಅಕ್ರೋಧ (ಸಿಟ್ಟು ಮಾಡದಿರುವುದು). ಇವುಗಳನ್ನು ಧರ್ಮದ ಲಕ್ಷಣಗಳೆಂದು ವಿಧಿಸಲಾಗಿದೆ.
ಒಬ್ಬಾತನ ಜೀವನದಲ್ಲಿ ಹಿಂದುತ್ವವನ್ನು ಅನುಸರಿಸಿದಾಗ ಮೇಲಿನ ಹತ್ತು ಲಕ್ಷಣಗಳು ಸೇರಿಕೊಳ್ಳುತ್ತವೆ; ಅವು ಹಿಂದೂಧರ್ಮದ ಹತ್ತು ಲಕ್ಷಣಗಳಾಗಿವೆ. ಅದರಿಂದ ಲೌಕಿಕದ ಜಂಜಡಗಳಿಂದ ಪಾರಾಗಬಹುದು; ಮಾನವೀಯತೆಯ ಆದರ್ಶಗಳು ಜಾಗೃತವಾಗಿ ಮೋಕ್ಷವನ್ನು ಸಾಧಿಸಬಹುದು.
ಹಿಂದೂಧರ್ಮ ಅಥವಾ ಸನಾತನ (ಶಾಶ್ವತ) ಧರ್ಮದಲ್ಲಿ ಕರ್ಮಬಂಧನವು ಸೇರಿದಂತೆ 35 ವಿಶೇಷ ಲಕ್ಷಣಗಳಿವೆ: ಆತ್ಮದ ಮುಂದುವರಿಕೆ ಮತ್ತು ಪುನರ್ಜನ್ಮ, ಮಾಯೆ, ಭೇದಾಭೇದ (ವಿವಿಧತೆಯಲ್ಲಿ ಏಕತೆ), ಭಗವತ್ ಶರಣಾಗತಿ, ಮೋಕ್ಷ ಇತ್ಯಾದಿ. ಇದರಿಂದಾಗಿ ಹಿಂದೂಧರ್ಮವು ವಿವಿಧ ಮತಗಳು, ಅಭಿಪ್ರಾಯಗಳು ಮತ್ತು ಸಿದ್ಧಾಂತಗಳ ನಡುವೆ ಅದ್ವಿತೀಯವೆನಿಸಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸನಾತನ ಧರ್ಮವೆಂದರೆ ಸತ್ಯವಲ್ಲದೆ ಬೇರೇನೂ ಅಲ್ಲ. ಮತ್ತು ಅದು ಬದಲಾಗದೇ ಇರುವಂತಹ ಶಾಶ್ವತ ಪ್ರಜ್ಞೆಯೇ ಆಗಿದೆ:
ಸಮಾನಂ ತ್ರಿಷು ಕಾಲೇಷು ಸರ್ವಾವಸ್ಥಾಸು ಶಾಶ್ವತಮ್ |
ಸನಾತನಂ ಮತಂ ಸತ್ಯಂ ಚೀಯತೇ ನಾಪಚೀಯತೇ ||
ಭೂತ, ವರ್ತಮಾನ, ಭವಿಷ್ಯ – ಹೀಗೆ ಮೂರೂ ಕಾಲಗಳಲ್ಲಿ ಒಂದೇ ಆಗಿ ಇರುವಂಥದ್ದು, ಎಲ್ಲ ಸನ್ನಿವೇಶಗಳಲ್ಲಿ ಶಾಶ್ವತವಾಗಿದ್ದು ಬದಲಾಗದೆ ಇರುವಂಥದ್ದೇ ಸತ್ಯ; ಅದು ಹಿಗ್ಗುವುದೂ ಇಲ್ಲ ಕುಗ್ಗುವುದೂ ಇಲ್ಲ.
ಹಿಂದೂಯಿಸಂ ಮತ್ತು ಹಿಂದುತ್ವದ ನಡುವೆ ವ್ಯತ್ಯಾಸ ಇದೆಯೆಂದು ಬಿಂಬಿಸಲು ಹೊರಟಿರುವ ಹುಸಿಜಾತ್ಯತೀತವಾದಿಗಳ ದುರುದ್ದೇಶಪೂರಿತ ತಂತ್ರವು ಸಕ್ಕರೆ ಮತ್ತು ಸಿಹಿಯ ನಡುವೆ ವ್ಯತ್ಯಾಸವಿದೆಯೆಂದು ತೋರಿಸಲು ಹೊರಟಂತೆಯೇ ಇದೆ. ಶಾಶ್ವತವಾದ ಸತ್ಯದ ಮೇಲೆ ನಿಂತಿರುವ ಹಿಂದುತ್ವವು ಪರಿಶುದ್ಧತೆ ಮತ್ತು ದೈವಭಕ್ತಿಗಳ ಪ್ರತಿಬಿಂಬದಂತಿದೆ; ಮತ್ತು ಅಧರ್ಮ, ನಾಸ್ತಿಕತೆ, ಹೇಡಿತನ ಹಾಗೂ ಸ್ವೇಚ್ಛಾಚಾರಗಳ ವಿರುದ್ಧ ದಣಿವರಿಯದ ಸಮರ ನಡೆಸಲು ಕಟಿಬದ್ಧವಾದಂತಿದೆ. ಪಾಪ ಮತ್ತು ಪಾಪಕೃತ್ಯಗಳ ನಡುವೆ ಸಂಬಂಧ ಹೆಚ್ಚುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹಿಂದೂಧರ್ಮವು ಪಾಪಿಗಳ ಪಾಲಿಗೆ ಭಯಕಾರಕವಾಗಿದೆ. ಅದೇ ಕಾರಣದಿಂದ ಧರ್ಮವಿರೋಧಿಗಳು, ಹುಸಿಜಾತ್ಯತೀತತೆ ಮತ್ತು ಸೋಗಲಾಡಿತನಗಳ ಭಕ್ತರು ಹಿಂದುತ್ವ ಮತ್ತು ಹಿಂದೂ ಪ್ರತಿರೋಧಗಳಿಗೆ ಕಳಂಕಹಚ್ಚಲು ಅತ್ಯಂತ ಉತ್ಸುಕರಾಗಿದ್ದಾರೆ; ಅದೂ ಹಿಂದೂಧರ್ಮದ ಬಗೆಗಿನ ತೀವ್ರವಾದ ವಿರೋಧ ಮತ್ತು ದಣಿವರಿಯದ ದಾಳಿಯಲ್ಲದೆ ಬೇರೇನೂ ಅಲ್ಲ.
ಅನುವಾದ: ಎಚ್. ಮಂಜುನಾಥ ಭಟ್