“ಭಾರತದಲ್ಲಿ ಹಿಂದೂಧರ್ಮವನ್ನು ಹೊರಗಿನ ಅತಿಕ್ರಮಣಗಳು ಹಾಗೂ ಒಳಗಿನ ಏರುಪೇರುಗಳಿಂದ ಉಳಿಸಿ ಬೆಳೆಸಲು ಮುಖ್ಯಕಾರಣಸ್ಥರು ಭಕ್ತಿಪಂಥದಲ್ಲಿ ತೊಳಗಿ ಬೆಳಗಿದ ತಾರಾಗಣಗಳು ಎಂದರೆ ನಾವು ಸತ್ಯವನ್ನೇ ಹೇಳುತ್ತಿರುವೆವು ಎಂದರ್ಥ” ಎನ್ನುತ್ತಾರೆ ವರೇಣ್ಯರು.
ಈ ತಾರಾಸಮೂಹದಲ್ಲಿ ಅತ್ಯಂತ ಪ್ರಜ್ವಲವಾಗಿ ಬೆಳಗುತ್ತಿರುವ ನಕ್ಷತ್ರ ಮಹಾರಾಷ್ಟ್ರದ ಸಂತವರೇಣ್ಯ ಶ್ರೀ ಜ್ಞಾನದೇವರು (1275-1296). ಜ್ಞಾನದೇವರು ಚಿಕ್ಕವಯಸ್ಸಿನಲ್ಲೇ ಭಗವದ್ಗೀತೆಯ 700 ಶ್ಲೋಕಗಳಿಗೆ 9000ಕ್ಕೂ ಮೇಲ್ಪಟ್ಟು ಓವಿಗಳನ್ನು ಹಾಡಿದ ‘ಭಾವಾರ್ಥದೀಪಿಕಾ’ ಅಥವಾ ‘ಜ್ಞಾನೇಶ್ವರೀ’ ಎಂಬ ಬೃಹದ್ ಗ್ರಂಥವನ್ನು ರಚಿಸಿದ್ದಾರೆ.
ಇದಲ್ಲದೆ, ಅವರು ವಾರಕರೀ ಸಂಪ್ರದಾಯಕ್ಕೆ ನವಚೇತನ ತುಂಬಿದುದು, ಮರಾಠಿಭಾಷೆಯ ಭಕ್ತಿಭರಿತ ಚಿಕ್ಕ ಚಿಕ್ಕ ಗೀತೆಗಳಾದ ಅಭಂಗಗಳನ್ನು ರಚಿಸಿ ಹಾಡಿದುದು, ಅಮೃತಾನುಭವ, ಹರಿಪಾಠ ಮುಂತಾದ ಗ್ರಂಥಗಳ ರಚನೆ ಮಾಡಿದುದು – ಇವೆಲ್ಲಾ ಮರಾಠಿ ಸಾಹಿತ್ಯಕ್ಕೆ ಅವರು ಮಾಡಿದ ಅದ್ಭುತ ಸೇವೆಗಳು.
ಸರ್ವಶಾಸ್ತ್ರಮಯೀ ಗೀತಾ – ‘ಜ್ಞಾನೇಶ್ವರೀ’
ಭಾರತೀಯ ತತ್ತ್ವಶಾಸ್ತ್ರಗಳಲ್ಲಿ ಭಗವದ್ಗೀತೆಯ ಸ್ಥಾನ ಪರಮೋಚ್ಚವಾದುದು. ಪ್ರಸ್ಥಾನತ್ರಯದಲ್ಲೂ ಇದಕ್ಕೆ ಮೊದಲ ಸ್ಥಾನ. ಇದು ಭಗವಂತನ ವಾಙ್ಮಯಮೂರ್ತಿಯಾಗಿದೆ. ಶ್ರೀಕೃಷ್ಣಪರಮಾತ್ಮನು ಉತ್ತಮಾಧಿಕಾರಿಯಾಗಿದ್ದ ಅರ್ಜುನನಿಗೆ ಉಪದೇಶಿಸಿ ತನ್ಮೂಲಕ ಇಡೀ ಜಗತ್ತಿಗೇ ಧಾರೆಯೆರೆದ ಗೀತೆ ಭಕ್ತರ ಕಲ್ಪತರು, ಭಾಗ್ಯದ ಸುರಧೇನು. ಅವರವರ ಅಭಿರುಚಿಗಳಿಗನುಸಾರವಾಗಿ ಈ ಗೀತಾರತ್ನಾಕರನಲ್ಲಿ ಆಳವಾಗಿ ಮುಳುಗಿ ಆಯ್ದುಕೊಳ್ಳುವ ಜೀವನಿಗೆ ದಿವ್ಯರತ್ನಗಳು ದೊರೆಯುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ಗೀತೆಯ ಅನುರಣನ ಪಂಡಿತನಿಗೂ, ಪಾಮರನಿಗೂ ಆದರಣೀಯ ಹಾಗೂ ಅನುಕರಣೀಯ.
ಇಂತಹ ಭಗವದ್ಗೀತೆಗೆ ‘ಜ್ಞಾನೇಶೋ ಭಗವಾನ್ ವಿಷ್ಣುಃ’ ಎಂದು ಸಂತಮಹಾತ್ಮರಿಂದ ಕೀರ್ತಿಸಲ್ಪಟ್ಟ ಮಹಾಸಂತ ಜ್ಞಾನೇಶ್ವರರು ಮರಾಠಿ ಭಾಷೆಯಲ್ಲಿ ಬರೆದ ಶಾಂತರಸಮಯ ಆಧ್ಯಾತ್ಮಿಕ ಕಾವ್ಯ – ಜ್ಞಾನೇಶ್ವರೀ. ಇದು ಸುಂದರ ದೃಷ್ಟಾಂತಗಳಿಂದಲೂ, ರೂಪಕಗಳಿಂದಲೂ ಕಂಗೊಳಿಸುತ್ತಾ, 9033 ಓವಿಗಳಿಂದ (ಛಂದಸ್ಸು) ಕೂಡಿದ ವಿಸ್ತಾರವಾದ ಭಾಷ್ಯ. ಭಗವಾನ್ ಶ್ರೀಕೃಷ್ಣನ ಮರ್ಮವನ್ನು ಅರಿತ ಭಗವದ್ವಿಭೂತಿ ಜ್ಞಾನದೇವರಿಂದ ರಚಿಸಲ್ಪಟ್ಟದ್ದರಿಂದ ಇದು ಪ್ರಸಾದವಾಯಿತು. ಅರ್ಥವನ್ನು ತಿಳಿಯದೆ ಪಾರಾಯಣ ಮಾಡಿದವರಿಗೂ ಭಗವಂತನ ಅನುಗ್ರಹವಾಗುವುದು ಎಂದ ಮೇಲೆ ಅರ್ಥವರಿತು ಪಾರಾಯಣ ಮಾಡಿದರೆ ಇನ್ನೆಷ್ಟು ಫಲವಿರಬಹುದು?
ಮಹಾರಾಷ್ಟ್ರದಲ್ಲಿ ಜ್ಞಾನೇಶ್ವರೀಯ ಅನೇಕ ವ್ಯಾಖ್ಯಾನಗಳಿವೆ. ಅವುಗಳಲ್ಲಿ ನಾನಾ ಮಹಾರಾಜ ಸಾಖರೆಯವರ ವ್ಯಾಖ್ಯಾನ ಸುಪ್ರಸಿದ್ಧ. ಮರಾಠಿ ಭಾಷಿಕರಾದ ಕೀರ್ತನಾಚಾರ್ಯ ಶ್ರೀ ಲಕ್ಷ್ಮಣದಾಸ ವೇಲಣ್ಕರ್ರವರು ಸರಳ ಸುಂದರ ಕನ್ನಡ ಭಾಷೆಯಲ್ಲಿ ಇದನ್ನು ಅನುವಾದಿಸಿದ್ದಾರೆ (ಗೀತಾ ಪ್ರೆಸ್ ಪ್ರಕಟಣೆ).
ಜ್ಞಾನದೇವರ ಗೀತೆ ‘ಜ್ಞಾನೇಶ್ವರೀ’ಯ ಉಗಮ
ಜ್ಞಾನದೇವರು ತೀರ್ಥಕ್ಷೇತ್ರಗಳಲ್ಲಿ ಸಂಚರಿಸುತ್ತಿರುವಾಗ ಅವರು ಹೋದೆಡೆಯೆಲ್ಲಾ ಭಕ್ತರ ಗುಂಪು ಕಿಕ್ಕಿರಿದು ನೆರೆದು, ಅವರ ಸಂಕೀರ್ತನಗಳನ್ನೂ, ವೇದಾಂತದ ಸದ್ವಾರ್ತಾಲಾಪಗಳನ್ನೂ ಅತೀವ ಶ್ರದ್ಧೆಯಿಂದ ಆಲಿಸುತ್ತಿದ್ದರು. ಹೀಗೆಯೇ ಸಂಚರಿಸುತ್ತಾ ನೇವಾಶೆ ಎಂಬ ಕ್ಷೇತ್ರಕ್ಕೆ ಬಂದಾಗ ಅಲ್ಲಿ ಸಚ್ಚಿದಾನಂದ ಬಾಬಾ ಎಂಬವರು ತೀರಿಹೋಗಿದ್ದರು. ಜ್ಞಾನೇಶ್ವರರು “ಸಚ್ಚಿದಾನಂದನಿಗೆ ಸಾವೆಲ್ಲಿಯದು?” ಎಂದು ಹೇಳುತ್ತಾ ತಮ್ಮ ಯೋಗಶಕ್ತಿಯಿಂದ ಅವರನ್ನು ಬದುಕಿಸಿದ ಸಂಗತಿ ಜನಜನಿತ. ಈ ಸಚ್ಚಿದಾನಂದರೇ ಮುಂದೆ ‘ಜ್ಞಾನೇಶ್ವರೀ’ ಪ್ರವಚನಗಳ ಲೇಖಕರಾದರು. ಈ ಕ್ಷೇತ್ರದಲ್ಲೇ ‘ಜ್ಞಾನೇಶ್ವರಿ’ಯ ಉಗಮವಾದುದು. ಸಂಸ್ಕೃತಭಾಷೆ ಅರಿಯದ ಜನಸಾಮಾನ್ಯರಿಗೂ ಭಗವದ್ಗೀತೆಯು ತಲಪಬೇಕೆಂಬ ಮಹದುದ್ದೇಶದಿಂದ ಜ್ಞಾನದೇವರು ಗೀತೆಗೆ ‘ಭಾವಾರ್ಥದೀಪಿಕಾ’ ಎಂಬ ಮರಾಠಿ ವ್ಯಾಖ್ಯಾನವನ್ನು ‘ಓವಿ’ ಎಂಬ ಛಂದಸ್ಸಿನಲ್ಲಿ ಅತಿ ಸುಂದರವಾಗಿ ರಚಿಸಿದರು. ಮೂಲಗೀತೆಯ 700 ಶ್ಲೋಕಗಳಿಗೆ 9033 ಓವಿಗಳ ಮೂಲಕ ಪಂಡಿತ ಪಾಮರರನ್ನೂ ರಂಜಿಸುವ ಶೈಲಿಯಲ್ಲಿ ಬರೆದರು. ಇದೇ ಮುಂದೆ ‘ಜ್ಞಾನೇಶ್ವರೀ’ ಎಂದು ಪ್ರಸಿದ್ಧವಾಯಿತು.
‘ಜ್ಞಾನೇಶ್ವರೀ’ – ಪಾರಾಯಣ ವಿಧಿ
‘ಜ್ಞಾನೇಶ್ವರೀ’ಗೆ ಸರಳವಾದ ಪಾರಾಯಣ ಕ್ರಮವಿದೆ. ಪ್ರತಿದಿನವೂ ಮೊದಲು ಶ್ರೀಕೃಷ್ಣನ ಪೂಜೆಯನ್ನು ಭಕ್ತಿಯಿಂದ ಮಾಡಿ, ಶ್ರೀಜ್ಞಾನೇಶ್ವರರನ್ನು ಪೂಜಿಸಿ, ಪೆÇೀಥೀ (ಪುಸ್ತಕದ) ಪೂಜೆ ಮಾಡಬೇಕು. ಆನಂತರ ಸಂತರನ್ನು ಸ್ಮರಿಸಿ, ಶ್ರೋತೃಗಳನ್ನು ವಂದಿಸಿ, ಗೀತಾಧ್ಯಾನವನ್ನು ಮಾಡಿ, ಪಠನಕ್ಕೆ ತೊಡಗಬೇಕು. (ಪೂರ್ವಖಂಡ ಅಧ್ಯಾಯ – 1-9 ಹಾಗೂ ಉತ್ತರಖಂಡ ಅಧ್ಯಾಯ – 10-18)
‘ಜ್ಞಾನೇಶ್ವರೀ’ಯ ಶೈಲಿ
‘ಜ್ಞಾನೇಶ್ವರಿ’ಯ ಪ್ರಥಮ ಅಧ್ಯಾಯ ಹೀಗೆ ಪ್ರಾರಂಭವಾಗುವುದು:
ಓಂ ನಮೋ ಜಿ ಆದ್ಯಾ| ವೇದ ಪ್ರತಿಪಾದ್ಯಾ|
ಜಯ ಜಯ ಸ್ವಸಂವೇದ್ಯಾ| ಆತ್ಮರೂಪಾ|| (1-1)
ಓಂಕಾರರೂಪನಾದ ಪರಮಾತ್ಮನೇ, ನಿನಗೆ ನಮಸ್ಕಾರವು. ಚರಾಚರ ಜಗತ್ತಿಗೆ ಮೂಲಕಾರಣನೂ, ವೇದಗಳಿಂದ ಪ್ರತಿಪಾದಿತನೂ, ಆತ್ಮರೂಪದಿಂದ ಅನುಭವಕ್ಕೆ ಬರುವವನೂ, ಸರ್ವಾತ್ಮಕನೂ ಆದ ಓಂಕಾರರೂಪೀ ಪರಬ್ರಹ್ಮನೇ, ನಿನಗೆ ವಂದನೆ ಹಾಗೂ ಜಯ ಜಯಕಾರವಿರಲಿ.
ದೇವಾ ತೂಚೀ ಗಣೇಶು| ಸಕಲಾರ್ಥ ಮತಿ ಪ್ರಕಾಶು|
ಮ್ಹಣೇ ನಿವೃತ್ತಿದಾಸು| ಅವಧಾರಿಜೋಜೀ|| (1-2)
ಶ್ರೀ ನಿವೃತ್ತಿದಾಸರಾದ ಜ್ಞಾನೇಶ್ವರ ಮಹಾರಾಜರು ಹೇಳುತ್ತಾರೆ, ಮೇಲಿನ ಎಲ್ಲ ವಿಶೇಷಣಗಳಿಂದ ಕೂಡಿದ ದೇವನೇ, ನಿಖಿಲ ಜಗತ್ತಿನ ಬುದ್ಧಿಗೆ ಪ್ರಕಾಶನಾದ ಗಣಪತಿಯೂ ನೀನೇ ಆಗಿರುವೆ.
ಅಕಾರ ಚರಣಯುಗಲ | ಉಕಾರ ಉದರ ವಿಶಾಲ |
ಮಕಾರ ಮಹಾಮಂಡಲ | ಮಸ್ತಕಾಕಾರೇ || (1-19)
ಓಂಕಾರದ ಅಕಾರವೇ ನಿನ್ನ ಚರಣಗಳು, ಉಕಾರವೇ ವಿಶಾಲವಾದ ಉದರ, ಮಕಾರವೇ ಮಹಾಮಂಡಲಾಕಾರ ಮಸ್ತಕವಾಗಿದೆ.
ಹೇ ತೀನ್ಹೀ ಏಕವಟಲೇ | ತೇಥ ಶಬ್ದಬ್ರಹ್ಮ ಕವಳಲೇ |
ತೇ ಮಿಯಾ ಶ್ರೀ ಗುರುಕೃಪಾ ನಮಿಲೇ | ಆದಿಬೀಜ || (1-20)
ಅಕಾರ, ಉಕಾರ, ಮಕಾರ ಇವುಗಳು ಸಮಾವೇಶವಾದಾಗ ಶಬ್ದಬ್ರಹ್ಮನ (ವೇದಗಳ) ಆದಿಬೀಜರೂಪವಾದ ಓಂಕಾರ ರೂಪವಾಯಿತು. ಅಂತಹ ಓಂಕಾರರೂಪವಾದ ಪರಬ್ರಹ್ಮನಿಗೆ ಶ್ರೀ ಗುರು ನಿವೃತ್ತಿನಾಥರ ಕೃಪೆಯಿಂದ ವಂದಿಸುತ್ತೇನೆ.
ಆತಾ ಅಭಿನವ ವಾಗ್ವಿಲಾಸಿನೀ | ಜೇ ಚಾತುರ್ಯಾರ್ಥ ಕಲಾಕಾಮಿನಿ|
ತೇ ಶ್ರೀ ಶಾರದಾ ವಿಶ್ವಮೋಹಿನೀ | ನಮಿಲಿ ಮಿಯಾ || (1-21)
ಇನ್ನು ಅಪೂರ್ವವಾದ ವಾಣಿಯಲ್ಲಿ ವಿಲಾಸರೂಪದಿಂದ ಇರುವ ಚಾತುರ್ಯ ಅರ್ಥ ಮತ್ತು ಕಲೆ ಇವುಗಳ ಒಡತಿಯಾದ, ವಿಶ್ವವನ್ನೇ ಮೋಹಿಸುವ ಶ್ರೀ ಸರಸ್ವತೀ ದೇವಿಗೆ ನಾನು ನಮಸ್ಕರಿಸುತ್ತೇನೆ.
ಹೀಗೆ ಗಣಪತಿ, ಸರಸ್ವತಿ ಮತ್ತು ಗುರುವನ್ನು ವಂದಿಸಿ, ಗೀತಾಕಥನವನ್ನು ಪ್ರಾರಂಭಿಸುತ್ತಾ,
ಆತಾ ಅವಧಾರಾ ಕಥಾಗಹನ | ಜೇ ಸಕಳಾ ಕೌತುಕಾ ಜನ್ಮಸ್ಥಾನ|
ಕೀ ಅಭಿನವ ಉದ್ಯಾನ | ವಿವೇಕ ತರೂಚೇ || (1-28)
‘ಇನ್ನು ಮುಂದೆ ಸಮಸ್ತ ಕುತೂಹಲವನ್ನು ಉಂಟುಮಾಡುವಂತಹ ಅಥವಾ ವಿಚಾರರೂಪೀ ವೃಕ್ಷಗಳ ಅಪೂರ್ವ ಉದ್ಯಾನವನವೇ ಆದ ಗಹನವಾದ ಕಥೆಯನ್ನು ಕೇಳಿರಿ’ – ಎಂದು ಹೇಳುತ್ತಾ ಮಹಾಭಾರತದ ಭೀಷ್ಮಪರ್ವದಲ್ಲಿ ಬರುವ ಶ್ರೀಕೃಷ್ಣಾರ್ಜುನ ಸಂವಾದ ರೂಪದ ಮಹಾಗ್ರಂಥ ಶ್ರೀಮದ್ಭಗವದ್ಗೀತೆಯ ವ್ಯಾಖ್ಯಾನವನ್ನು ಸರಳವಾದ ಮರಾಠಿಯ ಆಡುಭಾಷೆಯಲ್ಲೇ ಸುಂದರವಾದ ಉಪಮಾನಗಳನ್ನು ಕೊಡುತ್ತಾ ಪಂಡಿತರಿಗೂ, ಪಾಮರರಿಗೂ ರಂಜಕವಾಗುವಂತೆ ಹೇಳುತ್ತಾ ಸಾಗುತ್ತಾರೆ ಶ್ರೀಜ್ಞಾನದೇವ ಮಹಾರಾಜರು.
ಶ್ರೀವ್ಯಾಸಮಹರ್ಷಿಗಳು ವೇದರೂಪವಾದ ಕ್ಷೀರಸಮುದ್ರವನ್ನು ತಮ್ಮ ಬುದ್ಧಿರೂಪೀ ಕಡಗೋಲಿನಿಂದ ಕಡೆದು, ಗೀತಾರೂಪವಾದ ಅನುಪಮ ನವನೀತವನ್ನು ತೆಗೆದರು. ಅದನ್ನು ಜ್ಞಾನರೂಪವಾದ ಅಗ್ನಿಯ ಸಂಸರ್ಗದಿಂದ ವಿವೇಕವೆಂಬ ಕುದಿ ಬರಿಸಿ, ಅತಿ ಸುವಾಸಿತ ‘ಗೀತೆ’ ಎಂಬ ತುಪ್ಪವನ್ನು ತಯಾರಿಸಿದರು. ಅದನ್ನು ವೈರಾಗ್ಯವುಳ್ಳ ಸಂತರು ಬಯಸಿ ಸತತವಾಗಿ ಅನುಭವಿಸುತ್ತಾ ಆನಂದಿಸುತ್ತಾರೆ.
ಅತ್ಯಂತ ವಿನಯಶೀಲರಾದ ಜ್ಞಾನದೇವ ಮಹಾರಾಜರು, “ಈ ಗೀತಾರ್ಥವನ್ನು ಬೋಧಿಸುವುದು ಅತ್ಯಂತ ಕಠಿಣವಾದ ವಿಷಯವೇ ಆಗಿದೆ. ಆಗಸವನ್ನು ಆಲಿಂಗಿಸಿಕೊಳ್ಳಬೇಕಿದ್ದರೆ ತಾನು ಅದಕ್ಕಿಂತ ದೊಡ್ಡವನಾಗಬೇಕಾಗುತ್ತದೆ. ಈ ಮಹತ್ಕಾರ್ಯದಲ್ಲಿ ಶ್ರೀಗುರು ನಿವೃತ್ತಿನಾಥರ ಅಪಾರ ಕರುಣೆ ನನ್ನ ಮೇಲಿದೆ. ಕಾಮಧೇನುವೇ ತಾಯಿಯಾಗಿರುವವನಿಗೆ ದುರ್ಲಭವಾದುದು ಏನಿದೆ? ಇಂತಹ ಒಂದು ಅಭಯದ ಹಿನ್ನೆಲೆಯಲ್ಲಿ ಈ ಗೀತಾ ಭಾವಾರ್ಥಕ್ಕೆ ಪ್ರವೃತ್ತನಾಗಿದ್ದೇನೆ” ಎಂದು ತಾವೇ ಮಹಾಜ್ಞಾನಿಯಾಗಿದ್ದರೂ ಲೋಕಶಿಕ್ಷಣಾರ್ಥವಾಗಿ ಈ ರೀತಿ ಹೇಳುತ್ತಾ, ಗುರುವಿನ ಬಗ್ಗೆ, ಸತ್ಪುರುಷರ ಬಗ್ಗೆ ಅತ್ಯಂತ ವಿನಯವನ್ನು ತೋರಿಸಿದ್ದಾರೆ. ವಿದ್ಯೆಗೆ ವಿನಯವೇ ಭೂಷಣವಲ್ಲವೇ ?
ಮುಂದೆ ಜ್ಞಾನದೇವರು ಪ್ರತಿ ಅಧ್ಯಾಯದಲ್ಲೂ ವಿವರಣೆ ನೀಡುವಾಗ ಅತ್ಯಂತ ಸರಳವೂ ಸುಂದರವೂ ಆದ ಉಪಮಾನಗಳನ್ನೂ, ರೂಪಕಗಳನ್ನೂ, ದೃಷ್ಟಾಂತಗಳನ್ನೂ ಕೊಡುತ್ತಾ ಸಾಗುತ್ತಾರೆ. ಇದರ ಸ್ವಾರಸ್ಯವನ್ನು ಆಸ್ತಿಕ ಜನರು ಮೂಲ ‘ಜ್ಞಾನೇಶ್ವರಿ’ಯನ್ನು ಅಥವಾ ಅದರ ಕನ್ನಡ ಭಾವಾರ್ಥವನ್ನಾದರೂ ಓದಿ ಆಸ್ವಾದಿಸಿ ಆನಂದಿಸಬೇಕು. ಇಲ್ಲಿ ಕೆಲವು ಪ್ರಸಂಗಗಳನ್ನು ಮಾತ್ರ ತೆಗೆದುಕೊಂಡು ಮೂಲ ಪಾಠದ ಓವಿಗಳ ಸೌಂದರ್ಯವನ್ನು ಸವಿಯೋಣ:
ತಿಯೇ ವೇಳೀ ತೋ ಸಂಜಯ ಬೋಲೆ | ಮ್ಹಣೇ ಪಾಂಡವ ಸೈನ್ಯ ಉಚಲಲೇ |
ಜೈಸೇ ಮಹಾಪ್ರಳಯೀ ಪಸರಲೇ | ಕೃತಾಂತ ಮುಖ || (ಅ.1-ಓವಿ.88)
ಆಗ ಸಂಜಯನು ಹೇಳಿದನು – ಮಹಾಪ್ರಳಯದಲ್ಲಿ ಕಾಲನ ಮುಖವು ತೆರೆದುಕೊಳ್ಳುವಂತೆ ಆ ಸಮಯದಲ್ಲಿ ಪಾಂಡವರ ಸೈನ್ಯವು ಕೆರಳಿತು.
ಮುಂದುವರಿಸುತ್ತಾ ಜ್ಞಾನದೇವರು “ಕಾಲಕೂಟ ವಿಷವು ಉಕ್ಕಿಬಂದಾಗ ಅದನ್ನು ಯಾರಿಂದಲೂ ಶಮನ ಮಾಡಲಾಗುವುದಿಲ್ಲ. ಹಾಗೆಯೇ ಪಾಂಡವರ ಸೈನ್ಯವೆಲ್ಲವೂ ಏಕಮುಖವಾಗಿ ಸಜ್ಜಾದಾಗ ಅದನ್ನು ಯಾರು ನಿಯಂತ್ರಿಸಬಲ್ಲರು?” – ಎಂದು ಕೇಳುತ್ತಾರೆ.
ಭಗವದ್ಗೀತೆ: ಮೂಲ: ಅಧ್ಯಾಯ 1 – ಶ್ಲೋಕ 14-16:
ಅನಂತರ, ವಿಜಯದ ತವರಾಗಿದ್ದ, ತೇಜಸ್ಸಿನ ಭಂಡಾರವೇ ಆಗಿದ್ದ ಆ ಅರ್ಜುನನ ರಥಕ್ಕೆ ಗರುಡನಂತೆ ವೇಗವುಳ್ಳ ನಾಲ್ಕು ಕುದುರೆಗಳನ್ನು ಹೂಡಿದರು. ರೆಕ್ಕೆಗಳುಳ್ಳ ಮೇರುಪರ್ವತದಂತೆ ಇರುವ ಆ ಶ್ರೇಷ್ಠ ರಥದ ತೇಜಸ್ಸಿನಿಂದ ಹತ್ತು ದಿಕ್ಕುಗಳು ತುಂಬಿಹೋದವು. ಸಾಕ್ಷಾತ್ ವೈಕುಂಠಾಧಿಪತಿ ಶ್ರೀಕೃಷ್ಣನೇ ಸಾರಥಿಯಾಗಿ ಕುಳಿತಿದ್ದ ಆ ರಥವನ್ನು ಎಷ್ಟೆಂದು ವರ್ಣಿಸಲಿ? ಸಾಕ್ಷಾತ್ ಪರಶಿವನ ಅವತಾರವಾದ ಮಾರುತಿಯು ಆ ರಥದ ಧ್ವಜಸ್ತಂಭದಲ್ಲಿ ವಿರಾಜಮಾನನಾಗಿದ್ದನು. ಶಾಙ್ರ್ಗ ಧನುಸ್ಸನ್ನು ಧರಿಸುವ ಭಗವಾನ್ ಕೃಷ್ಣನು ಅರ್ಜುನನ ಸಾರಥಿ. ಆ ಪ್ರಭುವಿಗೆ ಭಕ್ತರ ಮೇಲೆ ಅದ್ಭುತ ಪ್ರೀತಿ ಇರುವುದರಿಂದಲೇ ಅರ್ಜುನನ ಸಾರಥ್ಯವನ್ನು ಮಾಡುತ್ತಿರುವನು, ಇದೆಂತಹ ಆಶ್ಚರ್ಯ! (ಓವಿ 138-142)
ಕೃಷ್ಣಾರ್ಜುನರ ಶಂಖಗಳ ಅದ್ಭುತ ನಾದಗಳು ಒಂದಾಗಿ ಸೇರಿದಾಗ ಇಡೀ ಬ್ರಹ್ಮಾಂಡವೇ ನೂರಾರು ಹೋಳುಗಳಾದವೋ ಎಂದೆನಿಸಿತು (ಓವಿ-147). ಇದರೊಡನೆ ಇತರ ವೀರನಾಯಕರ ಶಂಖನಾದಗಳೂ ಸೇರಿದಾಗ ಆ ಮಹಾಧ್ವನಿಗಳ ಆಘಾತದಿಂದ ಶೇಷ-ಕೂರ್ಮರು ಒಮ್ಮೆಲೇ ಬೆಚ್ಚಿಬಿದ್ದು ತಾವು ಧರಿಸಿಕೊಂಡಿದ್ದ ಪೃಥ್ವಿಯ ಹೊರೆಯನ್ನು ಎಸೆದುಬಿಡಲು ಸಿದ್ಧರಾದರು. ಮೇರು ಮಂದರ ಪರ್ವತಗಳು ತೂಗಾಡಿದವು. ಸಮುದ್ರದ ನೀರು ಕೈಲಾಸಪರ್ವತದವರೆಗೆ ಚಿಮ್ಮಿತು. ಭೂಮಿಯು ತಲೆಕೆಳಗಾಗುವುದೋ ಆಕಾಶವೇ ಕುಸಿದು ಬೀಳುವುದೋ ಎಂದೆನಿಸಿ, ನಕ್ಷತ್ರಗಳು ಉದುರಿ ರಂಗವಲ್ಲಿ ಇಟ್ಟಂತಾಯಿತು. ಹಗಲಿನಲ್ಲೇ ಸೂರ್ಯನು ಮರೆಯಾದನು. ಮೂರು ಲೋಕಗಳಲ್ಲೂ ಹಾಹಾಕಾರ ಉಂಟಾಯಿತು. ಇದನ್ನು ನೋಡಿದ ಭಗವಾನ್ ಶ್ರೀಕೃಷ್ಣನು ವಿಸ್ಮಿತನಾಗಿ, ಸೃಷ್ಟಿಯ ಅಂತ್ಯವೇ ಆಗಿಬಿಡಬಹುದೆಂದು ಯೋಚಿಸಿ ಆ ಅದ್ಭುತ ಶಂಖನಾದವನ್ನು ನಿಲ್ಲಿಸಿಬಿಟ್ಟನು. ಜಗತ್ತೂ ಉಳಿಯಿತು (ಓವಿ-154-160). ಶಂಖನಾದವು ನಿಂತಮೇಲೂ ಅದರ ಪ್ರತಿಧ್ವನಿ ಹರಡುತ್ತಲೇ ಇತ್ತು ಮತ್ತು ಕೌರವರನ್ನು ನಡುಗಿಸುತ್ತಲೇ ಇತ್ತು.
ರಣರಂಗದಲ್ಲಿನ ಶಂಖನಾದದ ಪ್ರಭಾವದ ಈ ಸುಂದರ ಚಿತ್ರಣ ಸಹಜವಾಗಿಯೂ, ಮನೋಹರವಾಗಿಯೂ ಜ್ಞಾನದೇವರಿಂದ ಚಿತ್ರಿತವಾಗಿದೆ.
ಈ ಮರಾಠಿ ಗೀತೆಯ ಪ್ರತಿಯೊಂದು ಅಧ್ಯಾಯವೂ ಅನೇಕ ಸುಂದರ ಉಪಮಾನಗಳು, ರೂಪಕಗಳು, ಹಾಗೂ ದೃಷ್ಟಾಂತಗಳಿಂದ ತುಂಬಿ ತುಳುಕುತ್ತಿದೆ. ಅವುಗಳನ್ನು ಪೂರ್ಣವಾಗಿ ಓದಿಯೇ ಆಸ್ವಾದಿಸಬೇಕು. ಆದರೂ ಅವುಗಳಲ್ಲಿ ಕೆಲವನ್ನಾದರೂ ಸವಿಯೋಣ:
ಭಗವದ್ಗೀತೆ: ಮೂಲ: ಅಧ್ಯಾಯ 2 – ಶ್ಲೋಕ 2 ಮತ್ತು 8:
ರಾಜಹಂಸವು ಕೆಸರಿನಲ್ಲಿ ಹೂತುಹೋದಾಗ ಮ್ಲಾನವಾಗಿ ಕಾಣುವಂತೆ ಮೋಹದಿಂದ ಖಿನ್ನವದನನಾಗಿ ಕುಳಿತಿದ್ದ ಅರ್ಜುನನನ್ನು ಕುರಿತು ಶ್ರೀಕೃಷ್ಣ, “ಕತ್ತಲೆಯು ಎಂದಾದರೂ ಸೂರ್ಯನನ್ನು ನುಂಗಿದ್ದುದು
ಇದೆಯೇ? ವಾಯುವಿಗೆ ಮೇಘಗಳ ಭಯವಾಗಿದೆಯೇ? ಅಮೃತಕ್ಕೆ ಮರಣ ಬಂದಿದೆಯೇ? ಕಟ್ಟಿಗೆಯೇ ಬೆಂಕಿಯನ್ನು ನುಂಗಿದ್ದುದು ಇದೆಯೇ? ಉಪ್ಪೇ ನೀರನ್ನು ಕರಗಿಸಿದುದು ಇದೆಯೇ? ಬೇರೆಯ ಸಂಸರ್ಗದಿಂದ ಕಾಲಕೂಟ ವಿಷವು ಸತ್ತುಹೋಗಿದೆಯೇ? ದೊಡ್ಡ ಹಾವನ್ನು ಒಂದು ಕಪ್ಪೆ ನುಂಗಿದ್ದುದು ಇದೆಯೇ? ನರಿ ಸಿಂಹದೊಡನೆ ಜಗಳ ಕಾದಿದ್ದಿದೆಯೇ? ಇಂತಹ ವಿಲಕ್ಷಣ ಘಟನೆಗಳು ಎಂದಾದರೂ ಘಟಿಸಿವೆಯೇ? ಆದರೆ ಅರ್ಜುನಾ, ನೀನು ಅವನ್ನು ನಿಜವಾಗಿಸುತ್ತಿರುವೆ. ಏಳು, ಎಚ್ಚತ್ತುಕೋ, ಯುದ್ಧದ ವಿಷಯದಲ್ಲಿ ದಯೆ ಇರುವುದು ಯೋಗ್ಯವಿದೆಯೇ? ನಿನ್ನ ಈ ವರ್ತನೆಯು ಇಂದಿನವರೆಗೆ ಸಂಪಾದಿಸಿದ ಕೀರ್ತಿಯನ್ನು ನಾಶಮಾಡುವಂಥದ್ದು ಹಾಗೂ ಪರಲೋಕದ ಪ್ರಾಪ್ತಿಗೆ ಅಡ್ಡಿಯಾಗಿದೆ” ಎಂದು ಎಚ್ಚರಿಸುತ್ತಾನೆ (ಓವಿ-13-20).
ಯುದ್ಧರಂಗದಲ್ಲಿ ಸ್ವಜನರನ್ನೂ, ಗುರುಜನರನ್ನೂ ಎದುರಿಸಿ ಯುದ್ಧಮಾಡಬೇಕಲ್ಲ ಎಂಬ ಮೋಹ ಅರ್ಜುನನ ಮನಸ್ಸಿನಲ್ಲಿ ಆವರಿಸಿದಾಗ, ಭ್ರಾಂತಿಯಿಂದ ಆಚ್ಛಾದಿತನಾದ ಅರ್ಜುನನು ಬೇಸಿಗೆಯಲ್ಲಿ ಪರ್ವತಕ್ಕೆ ಕಾಡ್ಗಿಚ್ಚು ಹತ್ತಿಕೊಳ್ಳುವಂತೆ ದುಃಖದಿಂದ ಜರ್ಜರಿತನಾಗಿದ್ದಾಗ, ಇಂತಹ ಉರಿಯುವ ಪರ್ವತದ ಮೇಲೆ ಮಳೆ ಸುರಿಸಿ ಶಾಂತಗೊಳಿಸಲು ನೀಲಮೇಘಶ್ಯಾಮನಾದ ಗೋಪಾಲನು ಕರುಣಾಮೃತವೆಂಬ ಜಲವನ್ನು ತುಂಬಿಕೊಂಡು ಅರ್ಜುನನ ಕಡೆ ತಿರುಗಿದನು. ಶ್ರೀಕೃಷ್ಣರೂಪೀ ಮೇಘದಲ್ಲಿ ಅವನ ದಂತಪಂಕ್ತಿಯು ಕೋಲ್ಮಿಂಚಿನಂತೆ ಹೊಳೆಯುತ್ತಿತ್ತು. ಅವನ ಗಂಭೀರ ನುಡಿಗಳೇ ಮೇಘಗರ್ಜನೆ. ಈ ಭಗವದ್ ರೂಪವಾದ ಮೇಘಗಳು ಮಳೆಗರೆದು ಅರ್ಜುನನನ್ನು ಶಾಂತನನ್ನಾಗಿಸಿ ಅವನಲ್ಲಿ ಜ್ಞಾನವೆಂಬ ನವಪಲ್ಲವಗಳು ಅಂಕುರಿಸುವಂತೆ ಮಾಡಿದುದೇ ಗೀತಾಧಾರೆ (ಓವಿ-75-80).
ಭಗವದ್ಗೀತೆ: ಮೂಲ: ಅಧ್ಯಾಯ 3 – ಶ್ಲೋಕ 32:
ದೇಹದ ಪಾಶದಲ್ಲಿ ಬಿದ್ದು, ಇಂದ್ರಿಯಗಳಿಗೆ ವಶರಾಗಿ ಯಾರು ನನ್ನ ಮತವನ್ನು ತಿರಸ್ಕರಿಸಿಬಿಡುತ್ತಾರೋ ಅವರು ಮೋಹರೂಪೀ ಮದಿರೆಯನ್ನು ಕುಡಿದು ಉನ್ಮತ್ತರಾದವರು, ವಿಷಯರೂಪೀ ವಿಷದಿಂದ ವ್ಯಾಪಿಸಿರುವವರು ಮತ್ತು ಅಜ್ಞಾನವೆಂಬ ಕೆಸರಿನಲ್ಲಿ ಹೂತುಹೋದವರೆಂದು ನಿಸ್ಸಂಶಯವಾಗಿ ತಿಳಿ. ನೋಡು, ಪ್ರೇತದ ಕೈಯಲ್ಲಿಟ್ಟ ರತ್ನವು ವ್ಯರ್ಥವಾಗುವಂತೆ, ಹುಟ್ಟು ಕುರುಡನಿಗೆ ಬೆಳಗಾದರೂ ಬೆಳಕಿನ ಪ್ರಕಾಶ ಉಪಯೋಗಕ್ಕೆ ಬಾರದಿರುವಂತೆ, ಚಂದ್ರನ ಪ್ರಕಾಶವು ಕಾಗೆಗೆ ಉಪಯೋಗವಾಗದಂತೆ ಮೂರ್ಖರಾದವರಿಗೆ ಈ ವಿಚಾರವು ರುಚಿಸುವುದಿಲ್ಲ (ಓವಿ-194-198).
ಭಗವದ್ಗೀತೆ: ಮೂಲ: ಅಧ್ಯಾಯ 4 – ಶ್ಲೋಕ 8:
ಭಕ್ತರ ಸಹಾಯಕ್ಕಾಗಿ ನಾನು ದೇಹ ಧರಿಸಿ ಅವತರಿಸುವೆನು ಮತ್ತು ಅಜ್ಞಾನಾಂಧಕಾರವನ್ನು ನುಂಗಿಬಿಡುವೆನು. ಅಧರ್ಮದ ಮೇರೆಯನ್ನು ಮುರಿದುಹಾಕುವೆನು. ದೋಷಗಳು ತುಂಬಿರುವ ಅಧಾರ್ಮಿಕ ಮತಗಳನ್ನು ಹರಿದುಹಾಕುವೆನು. ಸಾಧುಗಳ ಕೈಗಳಿಂದ ಸುಖಧ್ವಜವನ್ನು ನಿಲ್ಲಿಸುವೆನು. ದೈತ್ಯರ ಕುಲವನ್ನು ನಾಶಮಾಡುವೆನು. ಸಾಧುಗಳಿಗೆ ಯೋಗ್ಯವಾದ ಸಂಮಾನವನ್ನು ತಂದುಕೊಡುವೆನು. ಧರ್ಮ-ನೀತಿಗಳ ಮಡಿಲುತುಂಬುವೆನು. ಅವಿವೇಕವೆಂಬ ಕತ್ತಲೆಯನ್ನು ಓಡಿಸಿ, ವಿವೇಕರೂಪವಾದ ದೀಪವನ್ನು ಬೆಳಗಿಸುವೆನು. ಆಗ ಯೋಗಿಗಳಿಗೆ ನಿರಂತರ ದೀಪಾವಳಿಯೇ ಉಂಟಾಗುತ್ತದೆ. ಆಗ ವಿಶ್ವದಲ್ಲೆಲ್ಲ ಸುಖವೇ ತುಂಬಿಹೋಗುತ್ತದೆ. ಎಲ್ಲೆಡೆಗಳಲ್ಲಿ ಜನರು ಧರ್ಮವನ್ನೇ ಆಚರಿಸುವರು. ಭಕ್ತಜನರು ಸಾತ್ತ್ವಿಕಗುಣಗಳಿಂದ ಪೂರ್ಣರಾಗುವರು. ಅರ್ಜುನಾ, ನನ್ನ ಅವತಾರವು ಪ್ರಕಟವಾದಾಗ ಪಾಪಗಳ ಪರ್ವತಗಳು ಇಲ್ಲವಾಗುತ್ತವೆ. ಪುಣ್ಯದ ಉದಯವಾಗುತ್ತದೆ, ಇಂತಹ ಕಾರ್ಯಕ್ಕಾಗಿ ನಾನು ಯುಗಯುಗಗಳಲ್ಲಿ ಅವತರಿಸುತ್ತೇನೆ (ಓವಿ-51-57).
ಭಗವದ್ಗೀತೆ: ಮೂಲ: ಅಧ್ಯಾಯ 5 – ಶ್ಲೋಕ 22:
ಆತ್ಮಸ್ವರೂಪದ ಅನುಭವ ಪಡೆಯದವರು ಇಂದ್ರಿಯಗಳಿಂದಾಗುವ ವಿಷಯಸುಖಗಳಲ್ಲಿ ರಮಿಸುತ್ತಾರೆ. ಬಾಯಾರಿಕೆಯಿಂದ ತ್ರಸ್ತವಾದ ಜಿಂಕೆಯು ನಿಜವಾದ ನೀರನ್ನು ಮರೆತು ಮರಳುಗಾಡಿನಲ್ಲಿ ಕಾಣುವ ಬಿಸಿಲ್ಗುದುರೆಯನ್ನು ನೀರೆಂದು ಭ್ರಮಿಸಿ ಓಡುತ್ತಾ ಇರುತ್ತದೆ. ಹಾಗೆಯೇ ಆತ್ಮಸುಖದ ಅನುಭವವನ್ನು ಪಡೆಯದವರಿಗೆ ಸ್ವರೂಪಾನಂದದ ಅಭಾವ ಸದಾಕಾಲವಿರುತ್ತದೆ. ವಿಷಯಸುಖದಲ್ಲಿ ಸುಖವಿದೆ ಎಂದು ಹೇಳುವುದು ವ್ಯರ್ಥಾಲಾಪ. ಹಾಗೆಂದು ತಿಳಿಯುವುದಾದರೆ ಮಿಂಚಿನ ಬೆಳಕಿನಲ್ಲಿ ಜಗತ್ತಿನ ವ್ಯಾಪಾರಗಳು ಏಕಾಗಬಾರದು? ಮಳೆ, ಬಿಸಿಲು, ಗಾಳಿ ಇವುಗಳ ನಿವಾರಣೆ ಮೋಡಗಳ ನೆರಳಿನಿಂದ ಆಗುವುದಾದರೆ ಮೂರು ಮಹಡಿಗಳ ಮನೆಯನ್ನು ಏಕೆ ಕಟ್ಟಬೇಕು? ಹಾವಿನ ಹೆಡೆಯ ನೆರಳು ಇಲಿಗೆ ಎಷ್ಟು ಸುಖಕರವಾಗಬಹುದು ಹೇಳು ನೋಡುವಾ! ಆದ್ದರಿಂದ ಭೋಗದಿಂದ ಉಂಟಾಗುವ ಸುಖವು ಕೇವಲ ದುಃಖಪ್ರದವು. ಮೂರ್ಖಜನರಿಗೆ ವಿಷಯಗಳನ್ನು ಭೋಗಿಸದೆ ಇರಲು ಆಗುವುದಿಲ್ಲ. ಏಕೆಂದರೆ ಅವರು ವಿಷಯರೂಪೀ ಕೆಸರಿನಲ್ಲಿರುವ ಕಪ್ಪೆಯಂತೆ, ವಿಷಯೋಪಭೋಗರೂಪವಾದ ನೀರಿನಲ್ಲಿರುವ ಮೀನಿನಂತೆ ಇರುವುದರಿಂದ ವಿಷಯಸೇವನೆ ಹೇಗೆ ಬಿಟ್ಟಾರು?
ಭಗವದ್ಗೀತೆ: ಮೂಲ: ಅಧ್ಯಾಯ 6 – ಶ್ಲೋಕ 3:
ಆರನೆಯ ಅಧ್ಯಾಯ ಅಷ್ಟಾಂಗಯೋಗ ಐಶ್ವರ್ಯದ ತೆರೆದ ಭಂಡಾರವೇ ಆಗಿದೆ. ಯೋಗರೂಪೀ ಪರ್ವತದ ತುದಿಗೇರಬೇಕಾದರೆ ಕರ್ಮಮಾರ್ಗರೂಪವಾದ ಮೆಟ್ಟಲುಗಳನ್ನು ಬಿಡಬಾರದು. ಈ ಕರ್ಮಮಾರ್ಗದಿಂದ ಹೋಗುವಾಗ ಮೊದಲು ಪರ್ವತದ ಬುಡದಲ್ಲಿ ‘ಯಮನಿಯಮ’ ಗಳನ್ನು ದಾಟಿ, ಮುಂದೆ ‘ಆಸನ’ವೆಂಬ ಕಾಲುದಾರಿಯಲ್ಲಿ ನಡೆದು, ‘ಪ್ರಾಣಾಯಾಮ’ ರೂಪವಾದ ಊರುಗೋಲಿನ ಸಹಾಯದಿಂದ ಮೇಲೇರಬೇಕು. ಬಳಿಕ ‘ಪ್ರತ್ಯಾಹಾರ’ವೆಂಬ ಜಾರಿಕೆಯ ಕಡಿದಾದ ದಾರಿ ಸಿಗುವುದು. ಅದರಲ್ಲಿ ಬುದ್ಧಿಯ ಕಾಲುಗಳೂ ಜಾರುತ್ತವೆ. ಆದರೂ ಅಭ್ಯಾಸದ ಬಲದಿಂದ ಪ್ರತ್ಯಾಹಾರರೂಪೀ ಆಲಂಬನವಿಲ್ಲದ ಕಷ್ಟಕರ ಮಾರ್ಗದಲ್ಲಿ ವೈರಾಗ್ಯರೂಪನಾದ ಉಡವು (ಪ್ರಾಣಿ) ದೊರಕಿ ಮೆಲ್ಲಮೆಲ್ಲನೆ ಮೇಲೇರಬಹುದು. ಹೀಗೆ ವಾಯು (ಪ್ರಾಣಾಪಾನ) ರೂಪವಾದ ಕುದುರೆಯ ಮೇಲೆ ಕುಳಿತು ದಾರಿ ಸಾಗುತ್ತಿರುವಾಗ ಚಿತ್ತವನ್ನು ಸ್ಥಿರಗೊಳಿಸುವ ‘ಧಾರಣಾ’ ಜಾಗಕ್ಕೆ ಬಂದಾಗ ‘ಧ್ಯಾನ’ದ ಕೊನೆ ಸ್ವಾಧೀನವಾಗುವವರೆಗೆ ಮಾರ್ಗವನ್ನು ಕ್ರಮಿಸಬೇಕು. ಮತ್ತೆ ಸಾಧ್ಯ- ಸಾಧನಗಳು ಒಂದಾದ ಬ್ರಹ್ಮೈಕ್ಯ ಜಾಗದಲ್ಲಿ ಮಾರ್ಗದ ನಡಿಗೆ ನಿಂತುಹೋಗಿ ಪ್ರವೃತ್ತಿಯ ಇಚ್ಛೆ ಮುಗಿದುಹೋಗುತ್ತದೆ. ಮುಂದಿನ ಹೆಜ್ಜೆ ಇಡಲು ಮುಗಿದು ಹೋದಾಗ ಹಿಂದಿನದ್ದು ನೆನೆಪು ಇರುವುದಿಲ್ಲ. ಇಂತಹ ಸಮತಟ್ಟಾದ ಭೂಮಿಕಾರೂಪ ‘ಸಮಾಧಿ’ಯಲ್ಲಿ ಸ್ಥಿರನಾಗುತ್ತಾನೆ. ಈ ಉಪಾಯದಿಂದ ಯೋಗಾರೂಢನಾದವನು ನಿಃಸಂಶಯವಾಗಿ ಪರಿಪೂರ್ಣನಾಗುವನು (ಓವಿ-54-60).
ಭಗವದ್ಗೀತೆ: ಮೂಲ: ಅಧ್ಯಾಯ 7 – ಶ್ಲೋಕ 18:
ತನ್ನ ಹಿತವನ್ನು ಮಾಡಿಕೊಳ್ಳಲು ಯಾರು ಬೇಕಾದರೂ ನನ್ನ ಭಕ್ತಿಯನ್ನು ಮಾಡಬಲ್ಲರು. ಆದರೆ ನಾನು ಯಾರನ್ನು ಪ್ರೀತಿಸುವೆನೋ ಅವನೊಬ್ಬನೇ ಜ್ಞಾನಿಭಕ್ತನಾಗಿದ್ದಾನೆ. ನೋಡು, ಹಾಲಿನ ಆಸೆಯಿಂದ ಜನರು ಹಸುವಿಗೆ ದಳಿ ಹಾಕಿ ತೊರೆ ಬಿಡಿಸಿಕೊಳ್ಳುವರು. ಆದರೆ ಹಸು ತನ್ನ ಕರುವಿಗೆ ದಳಿ ಇಲ್ಲದೆಯೇ ಹಾಲು ಕುಡಿಸುವುದಿಲ್ಲವೇ ? ಏಕೆಂದರೆ ಆ ಕರು ಬೇರೆ ಏನೂ ಅರಿಯದೆ ತನು-ಮನ-ಪ್ರಾಣಗಳಿಂದ ತನ್ನ ತಾಯಿಯನ್ನೇ ಬಯಸುತ್ತಿರುತ್ತದೆ. ಆಕೆಯು ಎಲ್ಲೇ ಇರಲಿ ಅವಳು ತನ್ನ ತಾಯಿ ಎಂದು ಗುರುತಿಸುತ್ತದೆ. ಅನನ್ಯ ಭಕ್ತನಾದ ಈ ಕರುವನ್ನು ತಾಯಿಯೂ ಅಷ್ಟೇ ಪ್ರೀತಿಸುತ್ತದೆ. ಇದರಂತೆಯೇ ಜ್ಞಾನಿಭಕ್ತನು ನಿಜವಾಗಿ ನೋಡಿದರೆ ನನ್ನ ಪ್ರಾಣನೇ ಆಗಿರುವನು. ಇಂತಹ ಜ್ಞಾನಿಭಕ್ತರ ಅಂತಃಕರಣರೂಪವಾದ ಕಂದರದಿಂದ ಅನುಭವಗಂಗೆಯು ಹೊರಟು ನನ್ನನ್ನು ಸೇರಿಕೊಂಡು ಅವರು ಮದ್ರೂಪರೇ ಆಗುವರು. ನದಿಯು ಸಮುದ್ರವನ್ನು ಸೇರಿದ ಬಳಿಕ ಹಿಂದಕ್ಕೆ ಬರುವುದಿಲ್ಲ. ಇದರಂತೆಯೇ ಅವರಿಗೆ ನನ್ನ ಜ್ಞಾನವಾದ ಬಳಿಕ ಅವರು ಪುನಃ ಸಂಸಾರದ ಕಡೆಗೆ ನೋಡುವುದೇ ಇಲ್ಲ (ಓವಿ-119-126).
ಭಗವದ್ಗೀತೆ: ಮೂಲ: ಅಧ್ಯಾಯ 8 – ಶ್ಲೋಕ 15:
ನಿರಂತರವಾಗಿ ನನ್ನ ಐಕ್ಯರೂಪವನ್ನು ಹೊಂದಿದವರಿಗೆ, ತಮ್ಮ ಅಂತಃಕರಣದಲ್ಲಿ ನನ್ನಲ್ಲಿ ತನ್ಮಯರಾಗಿ ಮದ್ರೂಪರಾಗಿ ನನ್ನ ಸೇವೆಯನ್ನು ಮಾಡುವವರಿಗೆ ‘ಅಂತ್ಯಕಾಲ ಸಮೀಪಿಸಬೇಕು, ಅವರು ನನ್ನನ್ನು ಸ್ಮರಿಸಬೇಕು ಮತ್ತೆ ಅವರಿಗೆ ನಾನು ಸಿಗಬೇಕು’ ಎಂಬ ನಿಬಂಧನೆಯಾದರೆ ಅವರು ಹಿಂದೆ ಮಾಡಿದ ನನ್ನ ಉಪಾಸನೆಯ ಉಪಯೋಗವೇನು? ನೋಡು, ಸಂಕಟಕಾಲದಲ್ಲಿ ನನ್ನ ಭಕ್ತನೊಬ್ಬನು ‘ದೇವಾ, ಓಡಿ ಬಾ’ ಎಂದು ನನ್ನನ್ನು ಕೂಗಿ ಕರೆದರೆ ಅವನ ದುಃಖದ ನಿವಾರಣೆಗಾಗಿ ನಾನು ಧಾವಿಸದಿದ್ದರೆ ಅವನು ಭಕ್ತಿಯ ಅಭಿಲಾಷೆಯನ್ನಾದರೂ ಏಕೆ ಮಾಡಬೇಕು? ಆದ್ದರಿಂದ ಇಂತಹ ಸಂಶಯದ ಮಾತೇ ಬೇಡ. ನನ್ನಲ್ಲಿ ಭಕ್ತಿಯಿಟ್ಟವರು ಸ್ಮರಿಸಿದಾಗಲೇ ಅವರ ಸ್ಮರಣೆಯೊಂದಿಗೇ ನಾನು ಅವರಿಗೆ ದೊರೆಯುತ್ತೇನೆ. ಈ ಪ್ರಕಾರ ನಾನು ಅವರ ಋಣಿಯಾಗಿರುವೆನೆಂದು ಅರಿತು ಆ ಋಣದಿಂದ ಮುಕ್ತನಾಗಲು ನಾನೇ ಅಂತ್ಯಕಾಲದಲ್ಲಿ ನನ್ನ ಭಕ್ತರ ಸೇವೆ ಮಾಡುವೆನು. ದೇಹದುಃಖದ ಸಂಬಂಧವು ನನ್ನ ಭಕ್ತನಿಗೆ ತಟ್ಟಬಾರದೆಂದು ನಾನು ಆತ್ಮಬೋಧೆಯ ಪಂಜರದಲ್ಲಿ ಅವನನ್ನು ಇರಿಸುವೆನು. ಆ ಪಂಜರದ ಮೇಲೆ ನನ್ನ ಸ್ಮರಣೆಯೆಂಬ ಆಹ್ಲಾದಕರ ಶೀತಲ ನೆರಳನ್ನು ಉಂಟುಮಾಡುವೆನು. ಹೀಗೆ ಅವರ ಬುದ್ಧಿಯು ಸದಾಕಾಲ ನನ್ನೆಡೆಗೇ ಇರುವಾಗ ಅವರನ್ನು ನಾನು ನನ್ನ ಸ್ವರೂಪದಲ್ಲಿ ಒಂದಾಗಿಸುವೆನು. ಆದ್ದರಿಂದ ದೇಹದ ಅಂತ್ಯಕಾಲದ ದುಃಖವು ನನ್ನ ಭಕ್ತನಿಗೆ ಎಂದೂ ಉಂಟಾಗುವುದಿಲ್ಲ. ನನ್ನ ಭಕ್ತನನ್ನು ನಾನು ಸುಖವಾಗಿ ನನ್ನ ಬಳಿಗೆ ಕರೆದುಕೊಳ್ಳುವೆನು. ಆತ್ಮದ ಮೇಲಿನ ದೇಹವೆಂಬ ಗವಸಣಿ(ಹೊದಿಗೆ)ಯನ್ನು ತೆಗೆದು ಮಿಥ್ಯಾ ಅಹಂಕಾರದ ಧೂಳನ್ನು ಝಾಡಿಸಿ, ಕೇವಲ ಭಗವತ್ಪ್ರಾಪ್ತಿಯ ವಾಸನೆಯಿಂದ ಅವನನ್ನು ಮದ್ರೂಪನಾಗಿಸಿದಾಗ, ದೇಹಾಸಕ್ತಿ ತಾನಾಗಿ ಕಳೆದುಹೋಗಿ, ತನ್ನ ಮತ್ತು ತನ್ನ ದೇಹದ ವಿಯೋಗವಾಗುವುದೆಂದು ಅನಿಸುವುದಿಲ್ಲ. ಕ್ಲೇಶಭರಿತ ಶರೀರವನ್ನು ಮದ್ರೂಪರಾದ ನನ್ನ ಭಕ್ತರು ಪುನಃ ಪಡೆಯುವುದಿಲ್ಲ. ಏಕೆಂದರೆ ಅವರು ನನ್ನ ಅಗಾಧವಾದ ಸ್ವರೂಪವನ್ನು ಹೊಂದಿರುತ್ತಾರೆ (ಓವಿ-126-151).
ಭಗವದ್ಗೀತೆ: ಮೂಲ: ಅಧ್ಯಾಯ 9 – ಶ್ಲೋಕ 26:
ಭಕ್ತನಾದವನು ದೃಢಭಕ್ತಿಯಿಂದ ಯಾವುದೇ ಗಿಡದ ಯಾವುದೇ ಫಲವನ್ನು ತಂದು ನನ್ನ ಮುಂದೆ ಇರಿಸಿದಾಕ್ಷಣ ನಾನಾಗಿಯೇ ಅದನ್ನು ಎರಡೂ ಕೈಗಳಿಂದ ಎತ್ತಿಕೊಂಡು ಅದರ ತೊಟ್ಟನ್ನೂ ಮುರಿಯದೆ ಅದನ್ನು ಆದರದಿಂದ ಸೇವಿಸುವೆನು. ಭಕ್ತಿಭಾವದಿಂದ ನನಗೆ ಒಂದು ಹೂವನ್ನು ಕೊಟ್ಟರೆ ಅದನ್ನು ಆಘ್ರಾಣಿಸದೆಯೇ ಪ್ರೇಮದ ಭರದಲ್ಲಿ ನಾನು ಅದನ್ನು ಬಾಯಿಗೆ ಹಾಕಿಕೊಂಡು ಸೇವಿಸಿಬಿಡುವೆನು. ಪುಷ್ಪ ಮಾತ್ರವಲ್ಲ ಒಂದು ಪತ್ರವನ್ನು ಅರ್ಪಿಸಿದರೂ ಅದು ಯಾವುದೇ ಗಿಡದ್ದಾಗಿರಲಿ, ಹಸಿ ಇರಲಿ ಅಥವಾ ಒಣಗಿಹೋಗಿರಲಿ ಅದನ್ನು ಅಮೃತತುಲ್ಯವೆಂದು ಭಾವಿಸಿ ತಿನ್ನತೊಡಗುವೆನು. ಪತ್ರ ಮಾತ್ರವಲ್ಲ, ಭಕ್ತಿಯಿಂದ ಕೇವಲ ಜಲವನ್ನು ಸಮರ್ಪಿಸಿದಾಗಲೂ ನನಗೆ ವೈಕುಂಠಕ್ಕಿಂತಲೂ ಹಿರಿದಾದ ಮಂದಿರವನ್ನು ಕಟ್ಟಿಸಿಕೊಟ್ಟಂತೆ, ಕ್ಷೀರಸಮುದ್ರದಂತೆ ಮನೋಹರವಾದ ಶಯ್ಯೆಯನ್ನು ನಿರ್ಮಿಸಿಕೊಟ್ಟಂತೆ, ಕರ್ಪೂರ ಚಂದನ ಅಗರುಗಳ ಮೇರುಪರ್ವತವನ್ನೇ ಅರ್ಪಿಸಿದಂತೆ, ಅನೇಕ ಸೂರ್ಯರ ದೀಪಮಾಲೆಯನ್ನೇ ಬೆಳಗಿದಂತೆ; ಗರುಡನಂತಹ ವಾಹನಗಳನ್ನು, ಕಲ್ಪತರುವಿನ ಉದ್ಯಾನವನ್ನು, ಕಾಮಧೇನುಗಳ ಹಿಂಡನ್ನೇ ಅರ್ಪಿಸಿದಂತೆ, ಅಮೃತಕ್ಕಿಂತಲೂ ಮಧುರವಾದ ಪಕ್ವಾನ್ನಗಳನ್ನು ಬಡಿಸಿದಂತೆ ಅದನ್ನು ಪರಮಪ್ರೀತಿಯಿಂದ ಸ್ವೀಕರಿಸುವೆನು (ಎನ್ನುತ್ತಾನೆ ಶ್ರೀಕೃಷ್ಣ).
ಭಗವದ್ಗೀತೆ: ಮೂಲ: ಅಧ್ಯಾಯ 10 – ಶ್ಲೋಕ 1:
ಭಗವಂತನು ಹೇಳುತ್ತಾನೆ: ‘ಅರ್ಜುನಾ, ಇದುವರೆಗೂ ನಾನು ನಿರೂಪಣೆ ಮಾಡಿರುವುದನ್ನು ಕೇಳಿರುವುದರಲ್ಲಿ ನಿನ್ನ ಲಕ್ಷ್ಯ ಎಷ್ಟಿದೆ ಎಂದು ನೋಡಿದೆ. ಅದು ಪೂರ್ಣವಾಗಿರುವುದು ಎಂದು ನನಗೆ ನಿಶ್ಚಯವಾಯಿತು. ಮಡಕೆಯಲ್ಲಿ ಸ್ವಲ್ಪ ನೀರು ಹಾಕಿ ಅದು ಸೋರುವುದಿಲ್ಲವೆಂದು ಖಾತರಿಪಡಿಸಿಕೊಂಡು ಅದನ್ನು ತುಂಬಿಸುತ್ತಾರೆ. ಹಾಗೆಯೇ ನಿನಗೆ ಸ್ವಲ್ಪ ಹೇಳಿ ನೋಡಿದೆ. ಅದು ನಿನ್ನ ಅಂತಃಕರಣದಲ್ಲಿ ಸ್ಥಿರವಾಗಿದೆ ಎಂದು ತಿಳಿದು ನಿನಗೆ ಇನ್ನೂ ಹೆಚ್ಚು ಹೇಳಬೇಕೆಂದು ನನಗೆ ಅನಿಸತೊಡಗಿದೆ. ಹೊಸದಾಗಿ ಬಂದ ಆಳಿನ ಪ್ರಾಮಾಣಿಕತೆಯನ್ನು ತಿಳಿಯಲು ಅವನು ಅಡ್ಡಾಡುವ ಕಡೆಗಳಲ್ಲೆಲ್ಲಾ ಅಮೂಲ್ಯ ವಸ್ತುಗಳನ್ನು ಚೆಲ್ಲಿ ಇಡಬೇಕು. ಅವನು ಅದನ್ನು ಮುಟ್ಟದೆ ಪ್ರಾಮಾಣಿಕತೆ ಮೆರೆದರೆ ಅವನನ್ನು ಕೋಶಾಗಾರದ ಕೆಲಸಕ್ಕೆ ನೇಮಿಸಬೇಕು. ಹಾಗೆಯೇ ಅರ್ಜುನಾ, ನೀನು ಈಗ ನನ್ನ ತತ್ತ್ವಜ್ಞಾನಕ್ಕೆ ಅಧಿಕಾರಿಯಾಗಿರುವೆ’ ಎಂದು ಹೇಳಿ ಕೃಪಾಸಾಗರ ಶ್ರೀಕೃಷ್ಣನು ಪುನಃ ‘ಅರ್ಜುನಾ, ಹಿಂದೆ ಹೇಳಿದ ಅಭಿಪ್ರಾಯವನ್ನೆ ನಿನಗೆ ಪುನಃ ಹೇಳುತ್ತೇನೆ. ಇಲ್ಲಿ ನೋಡು, ಪ್ರತಿವರ್ಷ ಹೊಲ ಬಿತ್ತುತ್ತಿರುವಾಗ ಬೆಳೆಯು ಹೆಚ್ಚು ಹೆಚ್ಚು ಬರತೊಡಗಿದರೆ ಪುನಃ ಪುನಃ ಸಾಗುವಳಿಗಾಗಿ ಖರ್ಚು ಮಾಡಲು ಬೇಸರ ಬರುವುದಿಲ್ಲ. ಮೇಲಿಂದ ಮೇಲೆ ಪುಟಕೊಟ್ಟಂತೆ ಚಿನ್ನದ ಹೊಳಪು ಹೆಚ್ಚಾಗುವುದು. ಪಾರ್ಥ, ಮಗುವಿಗೆ ಆಭರಣಗಳಿಂದ ಅಲಂಕಾರ ಮಾಡಿದಾಗ ಅದರ ಸುಖವು ಮಗುವಿಗೆ ಆಗುವುದಿಲ್ಲ. ಆದರೆ ಆ ಸುಖವನ್ನು ತಾಯಿ ಮಾತ್ರ ಬಲ್ಲಳು. ಹಾಗೆಯೇ ನಿನ್ನ ಹಿತವು ಪ್ರಾಪ್ತವಾಗುತ್ತಿರುವಂತೆ ನನ್ನ ಸುಖವು ಇಮ್ಮಡಿಸುವುದು’ (ಓವಿ-50-59).
ಭಗವದ್ಗೀತೆ: ಮೂಲ: ಅಧ್ಯಾಯ 11 – ಶ್ಲೋಕ 8:
ಕೃಷ್ಣನು ನಗುತ್ತಾ ಅರ್ಜುನನಿಗೆ, ‘ನಿನಗೆ ನಾನು ವಿಶ್ವರೂಪವನ್ನು ತೋರಿಸಿದರೂ ನೀನು ನೋಡಿಯೇ ಇಲ್ಲ’ ಎಂದಾಗ ಬುದ್ಧಿವಂತನಾದ ಅರ್ಜುನನು, ‘ಸ್ವಾಮಿ, ಈ ದೋಷವು ಯಾರದು? ನೀನು ಬಕಪಕ್ಷಿಗೆ ಚಂದ್ರಾಮೃತವನ್ನು ಕುಡಿಸಲು ಪ್ರಯತ್ನಿಸುತ್ತಿರುವೆ. ಕನ್ನಡಿಯನ್ನು ಸ್ವಚ್ಛವಾಗಿ ಒರೆಸಿ ಕುರುಡನಿಗೆ ತೋರಿಸುವ ಶ್ರಮ ಪಡುತ್ತಿರುವೆ. ಕಿವುಡನ ಮುಂದೆ ಸಂಗೀತ ಹಾಡುತ್ತಿರುವೆ. ಶಾಙ್ರ್ಗಧರನೆ, ನೀನು ತಿಳಿದೂ ತಿಳಿದೂ ಪುಷ್ಪಪರಾಗವನ್ನು ಭ್ರಮರಗಳಿಗೆ ನೀಡದೆ ಕಪ್ಪೆಗಳಿಗೆ ತಿನ್ನಿಸುತ್ತಿರುವೆ. ಈ ವಿಶ್ವರೂಪವು ಇಂದ್ರಿಯಗಳಿಗೆ ಅಗೋಚರವೆಂದು ಶಾಸ್ತ್ರಗಳು ವರ್ಣಿಸುತ್ತಿವೆ. ಇದನ್ನು ಕೇವಲ ಜ್ಞಾನದೃಷ್ಟಿಯಿಂದ ಮಾತ್ರ ನೋಡಲು ಸಾಧ್ಯ. ಅದನ್ನು ನೀನು ನನ್ನ ಚರ್ಮಚಕ್ಷುಗಳ ಮುಂದೆ ಇರಿಸಿದರೆ ನಾನು ಹೇಗೆ ನೋಡಬಲ್ಲೆನು?’ ಅರ್ಜುನನ ಈ ಮಾತನ್ನು ಕೇಳಿ ಭಗವಂತನು, ‘ಅಯ್ಯಾ ಅರ್ಜುನಾ, ನಿನ್ನ ಮಾತು ನನಗೆ ಮಾನ್ಯವಿದೆ. ವಿಶ್ವರೂಪವನ್ನು ತೋರಿಸುವ ಮೊದಲು ನಿನಗೆ ಅದನ್ನು ನೋಡುವ ಸಾಮಥ್ರ್ಯವನ್ನು ಕೊಡಬೇಕಾಗಿತ್ತು. ಪ್ರೇಮದ ಭರದಲ್ಲಿ ಮಾತನಾಡುತ್ತಿರುವಾಗ ನಿನಗೆ ದಿವ್ಯದೃಷ್ಟಿಯನ್ನು ಕೊಡುವುದೇ ಮರೆತುಹೋಗಿತ್ತು. ಈಗ ಕೊಡುವೆನು. ಈ ದಿವ್ಯದೃಷ್ಟಿಯಿಂದ ನನ್ನ ಅಘಟಿತಘಟನಾರೂಪೀ ಯೋಗೈಶ್ವರ್ಯವೆಲ್ಲವನ್ನು ಅನುಭವಕ್ಕೆ ತಂದುಕೋ’
ಎಂದು ಹೇಳಿ, ವೇದಗಳಿಂದಲೇ ತಿಳಿಯಲು ಯೋಗ್ಯನೂ, ಆದಿಪುರುಷನೂ, ಸರ್ವಜಗತ್ತಿಗೇ ಪರಮಪೂಜ್ಯನೂ ಆದ ಶ್ರೀಕೃಷ್ಣಪರಮಾತ್ಮನು ಅರ್ಜುನನಿಗೆ ದಿವ್ಯಚಕ್ಷುಗಳನ್ನು ಕರುಣಿಸಿದನು (ಓವಿ 154-164).
ಭಗವದ್ಗೀತೆ: ಮೂಲ: ಅಧ್ಯಾಯ 12 – ಶ್ಲೋಕ 7:
‘ಅರ್ಜುನಾ, ಹೆಚ್ಚೇನು ಹೇಳಲಿ? ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವನು ಹೆತ್ತ ತಾಯಿಗೆ ಎಷ್ಟು ಪ್ರೀತಿಪಾತ್ರನು ಎಂಬುದನ್ನು ಹೇಳಬೇಕಾಗಿಯೇ ಇಲ್ಲ. ಹಾಗೆಯೇ ನನ್ನ ಭಕ್ತರಾದವರು ಹೇಗೇ ಇರಲಿ ಅವರಿಗೆ ತೊಂದರೆಕೊಡುವ ಕಲಿಗಾಲವನ್ನು ಪರಾಭವಗೊಳಿಸಲು ನಾನು ನಿಶ್ಚಯಿಸಿಬಿಟ್ಟಿರುವೆನು. ಹಾಗಿರುವಾಗ ನನ್ನ ಭಕ್ತರಿಗೆ ಸಂಸಾರದ ಚಿಂತೆಯು ಹೇಗೆ ಇರಬಲ್ಲದು? ಶ್ರೀಮಂತನ ಹೆಂಡತಿಗೆ ಭಿಕ್ಷೆಬೇಡುವ ಪ್ರಸಂಗ ಬಂದೀತೇ? ನನ್ನ ಭಕ್ತರು ನನ್ನ ಕುಟುಂಬದವರೇ ಎಂದು ತಿಳಿಯುತ್ತೇನೆ. ಅವರಿಗೆ ಯಾವುದಾದರೂ ಸಂಕಟ ಒದಗಿದರೆ ನನಗೆ ನಾಚಿಕೆಯಾಗುವುದಿಲ್ಲವೇ? ನನ್ನ ಭಕ್ತರು ಈ ಸೃಷ್ಟಿಸಾಗರದ ಹುಟ್ಟು-ಸಾವುಗಳ ಅಲೆಗಳಲ್ಲಿ ಮುಳುಗುತ್ತಿರುವುದನ್ನು ಕಂಡು ನನಗೆ ಹೊಟ್ಟೆಯಲ್ಲಿ ಸಂಕಟವಾಗುತ್ತದೆ. ಭವಸಾಗರದ ಅಲೆಗಳ ಭಯವು ಯಾರಿಗಿರುವುದಿಲ್ಲ? ಅದರ ಭಯವು ನನ್ನ ಭಕ್ತರಿಗೂ ಇದ್ದೇ ಇದೆ. ಆದ್ದರಿಂದ ಅರ್ಜುನನೇ, ರಾಮಕೃಷ್ಣಾದಿ ಅವತಾರವನ್ನೆತ್ತಿ ನಾನು ನನ್ನ ಭಕ್ತರು ಇರುವಲ್ಲಿಗೆ ಓಡಿಬಂದಿರುವೆನು. ನನ್ನ ಸಹಸ್ರನಾಮರೂಪವಾದ ಹಡಗನ್ನು ಸಿದ್ಧಗೊಳಿಸಿ ಈ ಸಂಸಾರಸಾಗರದಲ್ಲಿ ಅವರಿಗೆ ತಾರಕನಾಗಿರುವೆನೆಂದು ತಿಳಿ. ಉಪಾಧಿರಹಿತರಾದವರಿಗೆ ನನ್ನ ಧ್ಯಾನವನ್ನು ಮಾಡಲು ಹೇಳಿದೆ. ಭಕ್ತರಾದವರಿಗೆ ಅವರ ಉದರಕ್ಕೆ ಸೋರೇಕಾಯಿಗಳನ್ನು ಕಟ್ಟಿ ಅವರನ್ನು ಮುಕ್ತಿರೂಪವಾದ ದಡಕ್ಕೆ ಮುಟ್ಟಿಸಿದೆ’ (ಓವಿ – 83-92).
ಭಗವದ್ಗೀತೆ: ಮೂಲ: ಅಧ್ಯಾಯ 13 – ಶ್ಲೋಕ 32:
‘ಅರ್ಜುನನೇ, ಆಕಾಶವು ಎಲ್ಲಿ ಇಲ್ಲ? ಅದು ಎಲ್ಲೆಲ್ಲಿಯೂ ಇದೆ. ಆದರೂ ಅದಕ್ಕೆ ಯಾವುದರಿಂದಲೂ ವಿಕಾರವುಂಟಾಗುವುದಿಲ್ಲ. ಹಾಗೆಯೇ ಸಮಸ್ತ ಶರೀರಗಳಲ್ಲಿ ಆತ್ಮನು ಇದ್ದರೂ, ದೇಹದ ಯಾವುದೇ ಉಪಾಧಿಗಳಿಂದ ಅವನು ಲಿಪ್ತನಾಗುವುದಿಲ್ಲ.
ಆದ್ದರಿಂದ ಕ್ಷೇತ್ರವೆಂದರೆ ಶರೀರ ಅಥವಾ ಅದರ ಧರ್ಮ. ಇದರಿಂದ ಕ್ಷೇತ್ರಜ್ಞನಾದ ಆತ್ಮನು ಪೂರ್ಣವಾಗಿ ಭಿನ್ನನಾಗಿರುವನೆಂಬ ಈ ಶುದ್ಧ ತತ್ತ್ವದ ಲಕ್ಷಣವನ್ನು ನೀನು ಮೇಲಿಂದ ಮೇಲೆ ಗಮನದಲ್ಲಿಡು. ಆತ್ಮನ ಸಂಬಂಧದಿಂದ ಶರೀರಾದಿಗಳಲ್ಲಿ ಚೇಷ್ಟೆಗಳು ಕಂಡುಬಂದರೂ ಶರೀರವು ಆತ್ಮನಲ್ಲ. ಅಯಸ್ಕಾಂತದ ಸಂಸರ್ಗದಿಂದ ಕಬ್ಬಿಣವು ಚಲಿಸುವುದು. ಆದರೆ ಕಬ್ಬಿಣವು ಅಯಸ್ಕಾಂತವಲ್ಲ. ದೀಪದ ಬೆಳಕಿನಲ್ಲಿ ಮನೆಯ ಎಲ್ಲ ವ್ಯವಹಾರಗಳು ನಡೆಯುತ್ತವೆ. ಆದರೆ ದೀಪ ಮತ್ತು ಮನೆ ಇವುಗಳಲ್ಲಿ ಕೋಟಿಶಃ ಅಂತರವಿರುವುದು. ಎಲೈ ಕಿರೀಟಿಯೇ, ಕಟ್ಟಿಗೆಯ ಗರ್ಭದಲ್ಲಿ ಅಗ್ನಿ ಇದೆ. ಆದರೆ ಅಗ್ನಿಯು ಕಟ್ಟಿಗೆಯಲ್ಲ. ಈ ದೃಷ್ಟಿಯಿಂದ ಆತ್ಮನನ್ನು ನೋಡಬೇಕು’ (ಓವಿ – 1120-1125).
ಭಗವದ್ಗೀತೆ: ಮೂಲ: ಅಧ್ಯಾಯ 14 – ಶ್ಲೋಕ 5:
ಸತ್ತ್ವ, ರಜ, ತಮ ಇವು ಮೂರು ಗುಣಗಳ ಹೆಸರುಗಳು ಮತ್ತು ಅವು ಮಾಯೆಯಿಂದ ಉತ್ಪನ್ನವಾಗಿರುವುವು. ಅವುಗಳಲ್ಲಿ ಸತ್ತ್ವಗುಣವು ಉತ್ತಮ, ರಜೋಗುಣವು ಮಧ್ಯಮ ಮತ್ತು ತಮೋಗುಣವು ಕನಿಷ್ಠವಾಗಿದೆ. ಈ ತ್ರಿಗುಣಗಳು ಅಂತಃಕರಣದ ವೃತ್ತಿಯಲ್ಲಿ ಉತ್ಪನ್ನವಾಗುತ್ತವೆ. ಅದರಿಂದ ಅಂತಃಕರಣವು ತ್ರಿಗುಣಮಯವೆಂದು ತೋರುವುದು. ಉತ್ತಮ ಬಂಗಾರದಲ್ಲಿ ಇತರ ಧಾತುಗಳ ಮಿಶ್ರಣ ಮಾಡಿದರೆ ಅದರ ತೂಕ ಹೆಚ್ಚುವುದು. ಆದರೆ ಬಂಗಾರವು ನಿಸ್ತೇಜವಾಗಿ ಒರೆಗೆ ಕಡಮೆ ಹತ್ತುವುದು. ಹಾಗೆಯೇ ಅಜ್ಞಾನವನ್ನು ಸ್ವೀಕರಿಸಿದಾಗ ಬೆಳೆಯುವ ವೃತ್ತಿಯನ್ನೇ ಸತ್ತ್ವ, ರಜ, ತಮ ಎಂದು ಹೇಳುವರು. ಈ ಬೇರೆಬೇರೆ ಗುಣಗಳು ಆತ್ಮನನ್ನು ಹೇಗೆ ಬಂಧಿಸುವುದು ಎಂಬುದನ್ನು ಕೇಳು. ಜೀವಾತ್ಮನು ಈ ದೇಹವು ನನ್ನದಾಗಿದೆ ಎಂದು ಅಭಿಮಾನಪಟ್ಟಾಗ ಹುಟ್ಟಿದಂದಿನಿಂದ ಸಾಯುವವರೆಗಿನ ಎಲ್ಲ ದೇಹಧರ್ಮದ ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಗಾಳದ ತುದಿಗೆ ಕಟ್ಟಿದ ಮಾಂಸದ ತುಂಡಿಗೆ ಮೀನು ತನ್ನ ಬಾಯಿ ಹಾಕುತ್ತಲೇ ಮೀನು ಹಿಡಿಯುವವನು ಗಾಳವನ್ನು ಎಳೆದು ಮೀನನ್ನು ಕೊಂದುಬಿಡುವನು (ಓವಿ-138-147).
ಭಗವದ್ಗೀತೆ: ಮೂಲ: ಅಧ್ಯಾಯ 15 – ಶ್ಲೋಕ 6:
ದೀಪದ ಜ್ಯೋತಿ, ಚಂದ್ರನ ಬೆಳಕು, ಸೂರ್ಯನ ಪ್ರಕಾಶ – ಇವು ಬೆಳಗುವುದು ಆ ಪರಬ್ರಹ್ಮನ ಪ್ರಕಾಶದಿಂದಲೇ. ಈ ಮೂರು ಪ್ರಕಾಶಗಳಿಂದ ಜಗತ್ತಿನ ಎಲ್ಲ ವಸ್ತುಗಳನ್ನು ನೋಡುವುದೆಂದರೆ ಆತ್ಮಸ್ವರೂಪವನ್ನು ನೋಡದಿರುವುದೇ ಆಗಿದೆ. ಆತ್ಮಸ್ವರೂಪವು
ಕಣ್ಮರೆಯಾದಾಗ ವಿಶ್ವವು ಭಾಸವಾಗುತ್ತದೆ. ಕಪ್ಪೆಚಿಪ್ಪಿನ ಸ್ವರೂಪವು ಲೋಪವಾದಂತೆ ಬೆಳ್ಳಿಯ ಭಾಸವು ಬೆಳೆಯುವುದು. ಹಗ್ಗದ ಸ್ವರೂಪವು ಲೋಪವಾದಂತೆ ಸರ್ಪದ ಪ್ರತೀತಿ ಬಲವಾಗುವುದು. ಹಾಗೆಯೇ ಸೂರ್ಯ ಚಂದ್ರಾದಿಗಳ ಪ್ರಖರ ತೇಜವು ಆ ಸ್ವರೂಪದ ಅಂಧಕಾರದಲ್ಲಿ ಪ್ರಕಾಶಿಸುತ್ತದೆ. ಆ ಆತ್ಮವಸ್ತುವು ಕೇವಲ ತೇಜದ ರಾಶಿಯಾಗಿದೆ ಮತ್ತು ಅದು ಸಮಸ್ತ ಪ್ರಾಣಿಗಳಲ್ಲಿ ವ್ಯಾಪಿಸಿದ್ದು ಸೂರ್ಯ ಚಂದ್ರರನ್ನೂ ಪ್ರಕಾಶಿಸುತ್ತದೆ. ಸೂರ್ಯನು ಉದಯಿಸಿದಾಗ ನಕ್ಷತ್ರಗಳೊಂದಿಗೆ ಚಂದ್ರನು ನಿಸ್ತೇಜನಾಗುವಂತೆ ಈ ಆತ್ಮವಸ್ತುವಿನ ಪ್ರಕಾಶವಾಯಿತೆಂದರೆ ಸೂರ್ಯ ಚಂದ್ರರ ಸಹಿತ ಜಗತ್ತೆಲ್ಲ ಲೋಪವಾಗುವುದು. ಜೀವಿಗೆ ನಿದ್ರೆಯಿಂದ ಎಚ್ಚರವಾದಾಗ ಸ್ವಪ್ನದಲ್ಲಿ ಭಾಸವಾದ ವ್ಯವಹಾರಗಳೆಲ್ಲ್ಲ ಇಲ್ಲವಾಗುವವು. ಹಾಗೆಯೇ ಆತ್ಮವಸ್ತುವಿನಲ್ಲಿ ಯಾವುದೇ ಭಾಸವಿರುವುದಿಲ್ಲ. ಅದು ನನ್ನ ಸ್ಥಾನವಾಗಿದೆ. ಅಲ್ಲಿಗೆ ಹೋದವರೆಲ್ಲರೂ ಸಮುದ್ರದಲ್ಲಿ ಸೇರಿಕೊಂಡ ಪ್ರವಾಹವು ಮರಳಿ ಬಾರದಂತೆ ಸಂಸಾರದತ್ತ ಹೊರಳಿ ಬರುವುದಿಲ್ಲ. ಹಾಗೆಯೇ ಶುದ್ಧಜ್ಞಾನ ಉಂಟಾಗಿ ನನ್ನಲ್ಲಿ ಐಕ್ಯರಾದವರು ಪುನರ್ಜನ್ಮದಿಂದ ಮುಕ್ತರಾಗುವರು (ಓವಿ-308-320).
ಭಗವದ್ಗೀತೆ: ಮೂಲ: ಅಧ್ಯಾಯ 16 – ಶ್ಲೋಕ 21:
ಕಾಮ ಕ್ರೋಧ ಲೋಭ ಈ ಮೂರರ ಬೇರು ಗಟ್ಟಿಯಾದಾಗ ಅಶುಭಗಳೇ ಬೆಳೆಯುವವು ಎಂದು ತಿಳಿ. ಧನಂಜಯನೇ, ನಮಗೆ ಎಲ್ಲ ದುಃಖಗಳ ಅನುಭವಗಳು ಬರಲು ಇವರು ದಾರಿಯ ಸಂಗಡಿಗರಾಗುವರು. ಅಂತಃಕರಣದಿಂದ ಈ ಮೂರು ದೋಷಗಳು ಹೊರಟುಹೋಗುವವರೆಗೆ ರೌರವ ನರಕದ ಪ್ರತಿಷ್ಠೆ ಇರುತ್ತದೆ. ಅವುಗಳಿಂದ ಅಪಾಯಗಳು ಬಹು ಬೇಗನೆ ಇದಿರಾಗುವವು. ಇವುಗಳ ಅತಿ ನಿಕೃಷ್ಟವಾದ ಅವಸ್ಥೆಗಳನ್ನು ಹೇಳಿರುವೆ. ಇದಕ್ಕಿಂತ ಹೆಚ್ಚು ಏನೆಂದು ವರ್ಣಿಸಲಿ? ಈ ಮೂರು ದೋಷಗಳ ಸಮುದಾಯವು ನರಕದ ಬಾಗಿಲಿನ ಹೊಸ್ತಿಲು ಆಗಿದೆ. ಕಾಮ ಕ್ರೋಧ ಲೋಭ ಇವುಗಳಿಗೆ ಮನಃಪೂರ್ವಕವಾಗಿ ಅನುಕೂಲನಾದವನು ನರಕಪುರಿಯ ಸಭೆಯಲ್ಲಿ ಸಂಮಾನಕ್ಕೆ ಪಾತ್ರನಾಗುವನು. ಆದುದರಿಂದ ಕಾಮಾದಿ ದೋಷ-ತ್ರಿಪುಟಿಯು ಸರ್ವ ವಿಷಯಗಳಲ್ಲಿ ಅತಿ ಕೆಟ್ಟದಾಗಿದೆ. ಆದ್ದರಿಂದಲೇ ಅದನ್ನು ತ್ಯಾಗ ಮಾಡು ಎಂದು ನಿನಗೆ ಪುನಃ ಪುನಃ ಹೇಳುತ್ತಿರುವೆನು (ಓವಿ-425-432).
ಭಗವದ್ಗೀತೆ: ಮೂಲ: ಅಧ್ಯಾಯ 17 – ಶ್ಲೋಕ 28:
ಶ್ರದ್ಧೆಯನ್ನು ತೊರೆದು, ದುರಾಗ್ರಹದಿಂದ ಬಲವನ್ನು ಬೆಳೆಸಿಕೊಂಡು ಮತ್ತೆ ಕೋಟಿಗಟ್ಟಲೆ ಅಶ್ವಮೇಧ ಯಜ್ಞಗಳನ್ನು ಮಾಡಿದರೂ, ಇಡೀ ಪೃಥ್ವಿಯನ್ನು ರತ್ನಗಳಿಂದ ತುಂಬಿ ದಾನ ಮಾಡಿದರೂ, ಹೆಬ್ಬೆಟ್ಟಿನ ಮೇಲೆ ನಿಂತು ಸಾವಿರಾರು ವರ್ಷ ತಪಸ್ಸು ಮಾಡಿದರೂ, ಜಲಾಶಯದಂತೆ ಸಿಹಿನೀರಿನ ಸಮುದ್ರವನ್ನೇ ನಿರ್ಮಿಸಿದರೂ ಇವೆಲ್ಲ ವ್ಯರ್ಥವಾದವುಗಳು. ಬಂಡೆಯ
ಮೇಲೆ ಮಳೆಗರೆದರೂ, ಬೂದಿಯಲ್ಲಿ ಆಹುತಿ ಕೊಟ್ಟರೂ, ನೆರಳನ್ನು ಆಲಿಂಗಿಸಿದರೂ, ಆಕಾಶವನ್ನು ಕೈಯಿಂದ ಹೊಡೆದರೂ ಇವೆಲ್ಲ ಸಮಾರಂಭಗಳೂ ವ್ಯರ್ಥವಾಗಿ ಹೋಗುವವು. ಗಾಣದಲ್ಲಿ ಕಲ್ಲುಗಳನ್ನು ಹಾಕಿ ತಿರುವಿದರೆ ಅದರಿಂದ ಎಣ್ಣೆಯಾಗಲೀ ಹಿಂಡಿಯಾಗಲೀ ಸಿಗುವುದಿಲ್ಲ. ಇಂತಹ ಕರ್ಮಗಳಿಂದ ಇಹಲೋಕವೇ ಸಿಗದಿರುವಾಗ ಪರಲೋಕದ ಸುಖವನ್ನು ಏಕೆ ಬಯಸಬೇಕು? ಆದ್ದರಿಂದ ಬ್ರಹ್ಮನಲ್ಲಿ ಶ್ರದ್ಧೆಯನ್ನಿಡದೆ ಮಾಡಿದ ಕರ್ಮಗಳಲ್ಲಿ ಯಾವುದೇ ಅರ್ಥವಿಲ್ಲ. ಅವು ಇಹಲೋಕದಲ್ಲಿ ಕೇವಲ ಶ್ರಮವೇ ಆಗಿದೆ (ಓವಿ-414-422).
ಭಗವದ್ಗೀತೆ: ಮೂಲ: ಅಧ್ಯಾಯ 18 – ಶ್ಲೋಕ 73:
ಅರ್ಜುನನು ಹೇಳುತ್ತಾನೆ: “ಅಚ್ಯುತನೇ, ‘ನಿನಗೆ ಮೋಹದ ಮೇಲೆ ಪ್ರೀತಿ ಇದೆಯೇ?’ ಎಂದು ಕೇಳಿದೆಯಲ್ಲ, ಆದರೆ ಅದು ತನ್ನ ಕುಟುಂಬ ಸಮೇತ ಹೇಳ ಹೆಸರಿಲ್ಲದಂತೆ ಹೊರಟುಹೋಯಿತು. ಸೂರ್ಯನು ಸಮೀಪಕ್ಕೆ ಬಂದಾಗ ಕತ್ತಲೆಯು ಕಾಣಿಸುವುದೇ? ಕಾಣಿಸುತ್ತದೆ ಎಂದು ಹೇಳಿದರೆ ಅದು ಯಾವ ಊರಿನಲ್ಲಿ ಶೋಭಿಸೀತು? ಹಾಗೆಯೇ ಕೃಷ್ಣರಾಯ, ನೀನು ನಮ್ಮ ಕಣ್ಣಿಗೆ ಪ್ರತ್ಯಕ್ಷವಾಗಿ ದರ್ಶನ ಕೊಟ್ಟಮೇಲೆ ಆ ಮೋಹ ನಾಶವಾದಂತೆಯೇ ಅಲ್ಲವೇ? ಅದರಲ್ಲಿಯೂ ನೀನು ತಾಯಿಗಿಂತಲೂ ಹೆಚ್ಚು ಪ್ರೇಮದಿಂದ ಯಾರಿಂದಲೂ ಸುಲಭವಾಗಿ ತಿಳಿಯಲಾಗದ ಜ್ಞಾನವನ್ನು ವಿಸ್ತಾರವಾಗಿ ಹೇಳಿರುವೆ. ನಾನು ಅರ್ಜುನನೆಂಬ ಅಭಿಮಾನದಿಂದ ಮೋಹದಲ್ಲಿ ಸಿಲುಕಿಕೊಂಡಿದ್ದೆ. ನಿನ್ನ ಸ್ವರೂಪದಲ್ಲಿ ಐಕ್ಯನಾದ್ದರಿಂದ ಈಗ ಮುಕ್ತನಾದೆ. ನಿನ್ನ ಪ್ರಸಾದದಿಂದ ಆತ್ಮಬೋಧದ ಪ್ರಾಪ್ತಿಯಾಗಿದ್ದರಿಂದ ನನ್ನ ಮೋಹವು ಸಮೂಲವಾಗಿ ಇಲ್ಲವಾಯಿತು. ನಿಜವಾಗಿಯೂ ಕರ್ಮವು ಉಳಿಯದಿರುವ ಬ್ರಾಹ್ಮೀಸ್ಥಿತಿಯನ್ನು ನಾನು ಹೊಂದಿದೆನು. ನನ್ನ ಸ್ವರೂಪವು ಪ್ರಾಪ್ತವಾಗಿ ನನ್ನ ಕರ್ಮಗಳು ಸಮೂಲವಾಗಿ ನಾಶವಾದವು. ಆದರೆ
ಪ್ರಭುವೇ, ನಿನ್ನ ಆಜ್ಞೆಯ ಹೊರತಾಗಿ ನನಗೆ ಏನೂ ಉಳಿದಿಲ್ಲ. ನಿನ್ನ ಮತ್ತು ನನ್ನ ನಡುವೆ ಏಕರೂಪತೆಗೆ ಅಡ್ಡವಾದ ಭೇದವೆಂಬ ಬಾಗಿಲು ಇತ್ತು. ಅದನ್ನು ನೀನು ಮುರಿದು ಸವಿಯಾದ ಸೇವಾಸುಖವನ್ನು ಕರುಣಿಸಿರುವೆ. ದೇವಾಧಿದೇವಾ, ನೀನು ನನಗೆ ಯಾವ ಆಜ್ಞೆಯನ್ನು ಕೊಡುವೆಯೋ ಅದನ್ನು ಪಾಲಿಸುವೆನು.” ಅರ್ಜುನನ ಈ ಮಾತುಗಳನ್ನು ಕೇಳಿ ಭಗವಂತನು ಹರ್ಷಿತನಾಗಿ ಕುಣಿಯತೊಡಗಿದನು! ಪೂರ್ಣ ಕಲೆಗಳಿಂದ ಕೂಡಿದ ತನ್ನ ಮಗನಾದ ಚಂದ್ರನನ್ನು ನೋಡಿ ಕ್ಷೀರಸಾಗರವು ಮೇರೆ ಮೀರುವುದಿಲ್ಲವೇ! (ಓವಿ-1558-1577).
ಜ್ಞಾನೇಶ್ವರಿಯ ಉಪಸಂಹಾರ
ತಮ್ಮ ಭಾವಾರ್ಥದೀಪಿಕೆಯನ್ನು ಉಪಸಂಹಾರ ಮಾಡುವಾಗ ಶ್ರೀ ಜ್ಞಾನೇಶ್ವರರು ಹೀಗೆ ಹೇಳುತ್ತಾರೆ:
ತೋ ಸರ್ವೋಪಕಾರಿ ಸಮರ್ಥು |
ಸದ್ಗುರು ಶ್ರೀ ನಿವೃತ್ತಿನಾಥು |
ರಾಹಾಟತ ಅಸೆಮಜಹೀ ಆಂತು | ರಿಘೋನಿಯಾ ||
ಆತಾ ಆಯತೀ ಗೀತಾ ಜಗೀ |
ಮೀ ಸಾಂಗೇ ಮರಾಠಿಯಾ ಭಂಗೀ |
ಯೇಥಕೇ ವಿಸ್ಮಯಾ ಲಾಗಿ | ಠಾವೋ ಆಹೇ ||
ಸರ್ವರಿಗೂ ಉಪಕಾರಿಯಾದ ಸಮರ್ಥ ಸದ್ಗುರು ನಿವೃತ್ತಿನಾಥರು ನನ್ನ ಅಂತಃಕರಣದಲ್ಲಿ ನೆಲಸಿರುವರು. ಅಂದಮೇಲೆ ಸಿದ್ಧವಾದ ಗೀತೆಯನ್ನು ಮರಾಠಿ ಭಾಷೆಯಲ್ಲಿ ಹೇಳಲು ನಾನು ಸಮರ್ಥನಾದುದರಲ್ಲಿ ಆಶ್ಚರ್ಯವೇನಿದೆ?
ನಾನು ರಚಿಸಿದ ಓವಿ ಪ್ರಬಂಧವಾದ ಈ ಗ್ರಂಥವನ್ನು ಹಾಡಿದರೂ ಅದಕ್ಕೆ ಶೋಭೆಯನ್ನು ತರುವುದು. ಹಾಡುವವನಿಲ್ಲದಿದ್ದರೂ ಸುಮ್ಮನೆ ಓದಿದರೂ ರಸವು ಕೆಡುವುದಿಲ್ಲ. ಈ ಓವಿಗಳಲ್ಲಿ ಎಲ್ಲವೂ ಬ್ರಹ್ಮರಸದಿಂದ ತುಂಬಿರುವಂತೆ ಅಕ್ಷರಗಳ ಯೋಜನೆ ಮಾಡಿರುವೆನು. ಚಂದನದ ಮರದ ಹತ್ತಿರ ಅದರ ಸರ್ವಾಂಗವೂ ಸುಗಂಧಮಯವಾಗಿ ಇರುವಂತೆ ಈ ಗ್ರಂಥವು ಕಿವಿಗೆ ಬೀಳುತ್ತಲೇ ಸಮಾಧಿಯನ್ನು ತರುವುದು. ಇನ್ನು ವ್ಯಾಖ್ಯಾನವನ್ನು ಕೇಳಿದರೆ ಪುನಃ ಕೇಳಬೇಕೆಂಬ ಬಯಕೆ
ಉಂಟಾಗಲಾರದೆ? ಈ ಗ್ರಂಥದ ಪಾರಾಯಣ ಮಾಡುವವನಿಗೆ ಎಲ್ಲ ಪಾಂಡಿತ್ಯವು ಪ್ರಕಾಶಕ್ಕೆ ಬರುವುದು. ಅಮೃತಕ್ಕಿಂತಲೂ ರಸಮಯವಾದ ಸಿದ್ಧ ಕವಿತ್ವವು ಶ್ರೀ ಗುರುಗಳ ಪ್ರಸಾದದಿಂದ ಉತ್ಪನ್ನವಾಗಿದೆ. ಇದರ ಶ್ರವಣವು ಮನನ ನಿದಿಧ್ಯಾಸನಗಳನ್ನೂ ಜಯಿಸುವುದು. ಅಧ್ಯಾತ್ಮಶಾಸ್ತ್ರದ ಅಧಿಕಾರಿಗಳಾದ ಜಿತೇಂದ್ರಿಯರಿಗೆ ಆತ್ಮಸ್ವರೂಪದ ಆನಂದದ ಭಾಗಿಗಳನ್ನಾಗಿ ಮಾಡುವುವು.
ಗುರು ನಿವೃತ್ತಿನಾಥರು ನನ್ನನ್ನು ನಿಮಿತ್ತನನ್ನಾಗಿಸಿ ರಚಿಸಿದ ಈ ಜ್ಞಾನೇಶ್ವರೀ ಗ್ರಂಥದಿಂದ ಸಮಸ್ತ ಜಗತ್ತಿನ ಸಂರಕ್ಷಣೆಯಾಯಿತು. ನನ್ನ ಗುರುಗಳು ನನ್ನ ಅಂತಃಕರಣದಲ್ಲಿ ಪ್ರಕಾಶಪಡಿಸಿದುದನ್ನೇ ನಿಮಗೆ ಹೇಳಿರುವುದರಿಂದ ಇದರೊಳಗಿನ ಗುಣದೋಷಗಳಿಗೆ ಕ್ಷಮೆ ಕೇಳುವ ಪರಿಸ್ಥಿತಿ ನನಗೆ ಬರಲು ಸಾಧ್ಯವೇ ಇಲ್ಲ. ಇಡೀ ಭೂಮಿಯನ್ನು ಬಂಗಾರ ಮಾಡಬಹುದು, ಎಲ್ಲ ಪರ್ವತಗಳನ್ನು ಚಿಂತಾಮಣಿಗಳನ್ನಾಗಿ ಮಾಡಬಹುದು, ಏಳು ಸಮುದ್ರಗಳನ್ನು ಅಮೃತದಿಂದ ತುಂಬಬಹುದು, ನಕ್ಷತ್ರಗಳನ್ನು ಚಂದ್ರನನ್ನಾಗಿಸಬಹುದು, ಕಲ್ಪವೃಕ್ಷಗಳ ತೋಟವನ್ನೇ ಮಾಡಬಹುದು, ಆದರೆ ಗೀತೆಯ ಅರ್ಥದ ಮರ್ಮವನ್ನು ಗುರುಕೃಪೆ ಇಲ್ಲದೆ ತಿಳಿಯಲು ಸಾಧ್ಯವಿಲ್ಲ.
ಗೀತೆಯು ನಿಷ್ಕಪಟ ತಾಯಿ. ಚಿಕ್ಕ ಮಕ್ಕಳಾದ ಮುಮುಕ್ಷುಗಳು ಆಕೆಯನ್ನು ಅಗಲಿ ಕಂಡಕಂಡಲ್ಲಿ ಅಲೆಯುತ್ತಿರುವರು. ಈ ತಾಯಿ-ಮಕ್ಕಳನ್ನು ಒಂದುಗೂಡಿಸುವುದೇ ಸಂತರ ಧರ್ಮ.
ಪಸಾಯದಾನ
ಜ್ಞಾನದೇವರು ತಮ್ಮ ಜ್ಞಾನೇಶ್ವರೀ ಗ್ರಂಥಕ್ಕೆ ಮಂಗಳ ಹಾಡುವಾಗ ಪಸಾಯದಾನ ಎಂಬ ಪ್ರಸಿದ್ಧವಾದ ಪ್ರಾರ್ಥನೆಯ ಮೂಲಕ ಪರಮಾತ್ಮನಲ್ಲಿ ಪ್ರಸಾದದಾನವನ್ನು ಬೇಡುತ್ತಾ,
ಆತಾ ವಿಶ್ವಾತ್ಮಕೇ ದೇವೇ | ಯೇಣೇ ವಾಗ್ಯಜ್ಞೇ ತೋಷಾವೇ |
ತೋಷೋನಿ ಮಜ ಧ್ಯಾವೇ | ಪಸಾಯದಾನ ||
– ಎಂದು ಪ್ರಾರಂಭಿಸಿ, ದುಷ್ಟರ ಕುಟಿಲತೆಯು ದೂರವಾಗಿ ಅವರಿಗೆ ಸತ್ಕರ್ಮಗಳಲ್ಲಿ ಪ್ರೀತಿಯುಂಟಾಗಲಿ, ಸಮಸ್ತ ಜೀವಿಗಳಲ್ಲಿ ಪರಸ್ಪರ ಮಿತ್ರತ್ವ ಬೆಳೆಯಲಿ, ವಿಶ್ವದ ಪಾಪರೂಪೀ ಅಂಧಕಾರವು ತೊಲಗಿ ಸ್ವಧರ್ಮರೂಪೀ ಸೂರ್ಯನ ಉದಯವಾಗಲಿ, ನಡೆದಾಡುವ ಕಲ್ಪತರುಗಳಾದ ಭಗವದ್ಭಕ್ತರು ಈ ಭೂಮಿಯ ಮೇಲೆ ಅಖಿಲ ಮಂಗಲ ವೃಷ್ಟಿ ಮಾಡಿ ಎಲ್ಲರಿಗೂ ಪ್ರಿಯರಾಗಲಿ, ಮೂರು ಲೋಕಗಳೂ ಸುಖದಿಂದ ಪರಿಪೂರ್ಣವಾಗಲಿ, ಸರ್ವಪ್ರಾಣಿಗಳಿಗೆ ಶ್ರೀಹರಿಯ ಅಖಂಡ ಭಜನೆ ಮಾಡುವ ಇಚ್ಛೆ ಉಂಟಾಗಲಿ – ಎಂದು ಪ್ರಾರ್ಥಿಸಿ ಜ್ಞಾನೇಶ್ವರರು ಅಂತಃಕರಣದಲ್ಲಿ ಅತ್ಯಂತ ಸಂತುಷ್ಟರಾದರು.
ಹೀಗೆ ರಚಿತವಾದ ಮರಾಠಿ ಗೀತೆಗೆ,
ಏವಂ ಭಾರತಾಚ್ಯಾ ಗಾಂವೀ | ಭೀಷ್ಮನಾಮ ಪ್ರಸಿದ್ಧ
ಪರ್ವೀ | ಶ್ರೀಕೃಷ್ಣಾರ್ಜುನೀ ಬರವೀ |
ಗೋಠೀ ಜೇ ಕೇಲೀ | ಜೇ ಉಪನಿಷದಾಂಚೇ ಸಾರ |
ಸರ್ವಶಾಸ್ತ್ರಾಂಚೇ ಮಾಹೇರ |
ಪರಮಹಂಸೀ ಸರೋವರ | ಸೇವಿಜೇಜೆ ||
(ಮಹಾಭಾರತದಲ್ಲಿನ ಪ್ರಸಿದ್ಧ ಭೀಷ್ಮಪರ್ವದಲ್ಲಿ ಶ್ರೀಕೃಷ್ಣಾರ್ಜುನರ ಉತ್ತಮವಾದ ಸಂವಾದವು ನಡೆಯಿತು. ಅದು ಉಪನಿಷತ್ತುಗಳ ಸಾರವಾಗಿದ್ದು ಎಲ್ಲ ಶಾಸ್ತ್ರಗಳ ತವರುಮನೆಯಾಗಿದೆ, ಪರಮಹಂಸ ಸಾಧುಗಳು ಕ್ರೀಡಿಸುವ ಸರೋವರವಾಗಿದೆ) – ಎಂದು ಮಂಗಳವನ್ನು ಹಾಡುತ್ತಾರೆ.
ಇಂತಹ ಮಹಾಸಂತ ಜ್ಞಾನೇಶ್ವರ ಮಹಾರಾಜರು ಆಳಂದಿಯಲ್ಲಿ ತಮ್ಮ 21ನೇ ವಯಸ್ಸಿನಲ್ಲಿ ಆಳವಾದ ಸಮಾಧಿಸ್ಥಿತಿಯಲ್ಲಿ 1296ರಲ್ಲಿ ದೇಹವನ್ನು ತ್ಯಜಿಸಿದರು. ಈ ಜ್ಞಾನೋಬಾರ ಸಮಾಧಿಸ್ಥಳ ಈಗ ಪ್ರಸಿದ್ಧ ತೀರ್ಥಕ್ಷೇತ್ರವಾಗಿದೆ.
ಗ್ರಂಥಋಣ:
- ಸಾರ್ಥ ಜ್ಞಾನೇಶ್ವರೀ – ಕೀರ್ತನಾಚಾರ್ಯ ಶ್ರೀ ಲಕ್ಷ್ಮಣದಾಸ್ ವೇಲಣಕರ್ (ಗೀತಾಪ್ರೆಸ್, ಗೋರಖಪುರ್)
- Bhavarthadipika – Jnaneshvari. Tr. Marathi to English by Ramachandra Keshava Bhagwat
- Sant Dnyandeva Hari Path – Ajit Padmakar Pradhan, Pune
- Concise Encyclopaedia on Hinduism – Swami Harshananda, Ramakrishna Math, Bangalore.