ಮಹತಿ
ಹೆತ್ತ ಕುಡಿಗಳನೂ
ಕಣ್ಣೆತ್ತಿ ನೋಡದ ಕೋಗಿಲೆ
ಮಹಾ ನಿರ್ದಯಿ;
ಪರರ ಕುಡಿಗಳನು
ತನದೆಂದು ಸಲಹುವ ಕಾಗೆ
ಕರುಣಾಮಯಿ!
_ ಗಣಪತಿ ಹೆಗಡೆ
ಬಗೆ
ಈರ್ಷ್ಯೆಯ
ಮೃಷ್ಟಾನ್ನವನುಂಡ
ನಿನಗೆ
ಪ್ರೀತಿತುತ್ತಿನ ರುಚಿ
ಹೇಗೆ ಹತ್ತೀತು?
– ಗಿರಿಜ ಕೆ.ಎಂ.
ತುಳಿತ
ಇದೋ … ಬೆಳಕಾಗಿದೆ,
ಜನ ಚಪ್ಪಾಳೆ ತಟ್ಟುತ್ತಿದ್ದಾರೆ
ಕರಗುವ ಮೇಣದ ಬತ್ತಿಗೆ ಹಿಗ್ಗು,
ಸುಟ್ಟು ಕರಕಲಾದ ಬೆಂಕಿಕಡ್ಡಿ
ಕಾಲಡಿ ನರಳುತಿದೆ!
– ಪುಷ್ಪರಾಜ್ ಚೌಟ
ವ್ಯತ್ಯಾಸ
ಇರುಳ ಹೆಜ್ಜೆಯ
ಭರಿಸಲು
ಬೆಳಕೇ ಬೇಕಿಲ್ಲ.
ಅಂತರಾತ್ಮದ
ಸಣ್ಣ ಕಿಡಿಯೂ ಸಾಕು!
– ಸುಷ್ಮಾ ಮೂಡಬಿದ್ರಿ
ಚಂಚಲೆ
ಆ ಕೊಳದಿಂದ
ಈ ಕೊಳಕ್ಕೆ
ಜಿಗಿಯುವುದರಲ್ಲಿತ್ತು
ಮೀನು,
ಅಷ್ಟೊತ್ತಿಗೆ ಅವಳು
ಕಣ್ಣಿನ ಕಕ್ಷೆ
ತಪ್ಪಿಸಿದಳು!
_ ನಾಗರಾಜ್ ವೈದ್ಯ
ಬದುಕು
ಒಲವ ಘಾಸಿಗಳನು
ಸೈರಿಸಿಕೊಳ್ಳಲೇಬೇಕು
ಬದುಕು
ಒಲವಿಗಿಂತ ತೀವ್ರ!
_ ಸುಷ್ಮಾ ಮೂಡಬಿದ್ರಿ
ಏಕೆ?
ಪ್ರತಿದಿನ,
ಪ್ರತಿಕ್ಷಣವೂ
ನಿನಗೆ
ಮುಡುಪಿರುವಾಗ,
ಪ್ರೀತಿಗೆ
ಮತ್ತೇಕೆ ಬೇಕು
ವಿಶೇಷದಿನ?!
– ಅನುಪಮ ಎಸ್ ಗೌಡ
ಕರ್ತವ್ಯ
ಪಾದಗಳ ತಳದಲಿ
ನಲುಗಿದರೂ ತಾನು
ಪರಿಮಳಿಸುವುದೊಂದೇ
ಕೆಲಸ
ಮಲ್ಲಿಗೆಗೆ;
ಮುಡಿಯಾದರೇನು
ಗೋರಿಯಾದರೇನು!
– ಕಾದಂಬಿನಿ
ಸುರಕ್ಷೆ
ನೀನು,
ಪಾತಕವೆಸಗಿ
ತಲೆಮರೆಸಿಕೊಳ್ಳಬಹುದಾದ
ಒಂದೇ ಒಂದು ಜಾಗವೆಂದರೆ,
ಅದು-
ಸೆರಗು!
– ಕಾದಂಬಿನಿ
‘ಮಹತಿ ‘ ಕವಿತೆಯನ್ನು ಗಣಪತಿ ಹೆಗಡೆ ಯವರು ಬರೆದದ್ದು. ‘ಏಕೆ?’ ಕವಿತೆಯನ್ನು ಅನುಪಮ ಎಸ್ ಗೌಡ ಅವರು ಬರೆದದ್ದು. ಮೂಲ ಲೇಖಕರ ಹೆಸರಿನ ಬದಲು
ಅಕ್ಷತ ಮತ್ತು ಕಾದಂಬಿನಿ ಹೆಸರುಗಳು ಕಣ್ತಪ್ಪಿನಿಂದಾಗಿ ಪ್ರಕಟವಾಗಿವೆ. ಇದಕ್ಕಾಗಿ ವಿಷಾದಿಸುತ್ತೇವೆ. ಮುಂದಿನ ಸಂಚಿಕೆಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುತ್ತೇವೆ
-ಉತ್ಥಾನದ ಪರವಾಗಿ