ರಾಣಕ್ಪುರ ಜೈನ ದೇವಾಲಯ ಸಂಕೀರ್ಣ
ರಾಜಸ್ಥಾನದ ಪ್ರವಾಸದಲ್ಲಿ ಜೋಧ್ಪುರದಿಂದ ಉದಯಪುರಕ್ಕೆ ಹೋಗುವ ಯೋಜನೆ ಹಾಕಿಕೊಂಡಿದ್ದೆವು. ನಮ್ಮ ಡ್ರೈವರ್ ರಾಜೇಂದ್ರ ಸಿಂಗ್ ಹೇಳಿದರು, ಬೆಳಗ್ಗೆ ಒಂಭತ್ತೂವರೆಗೆ ಹೊರಡೋಣ. ಹನ್ನೆರಡು ಘಂಟೆಗೆ ದೇವಸ್ಥಾನದ ಬಾಗಿಲು ತೆಗೆಯುವ ಹೊತ್ತಿಗೆ ನಾವು ರಾಣಕ್ಪುರ ತಲಪಬಹುದು. ಅಲ್ಲಿ ಪ್ರಸಿದ್ಧವಾದ ಜೈನ ದೇವಾಲಯ ಇದೆ. ಉದಯಪುರಕ್ಕೆ ಹೋಗುವ ದಾರಿ….
ನಮ್ಮ ಅಭ್ಯಂತರವೇನಿರಲಿಲ್ಲ. ದೇವಾಲಯ ಅಂದುಕೊಂಡರೆ ಹೀಗಿರಬಹುದು ಎನ್ನುವ ನಮ್ಮ ಕಲ್ಪನೆಯನ್ನು ಬುಡಮೇಲುಮಾಡುವಷ್ಟು ಭವ್ಯ, ದಿವ್ಯವಾಗಿತ್ತು; ವಿಶಾಲ ತಳಹದಿಯ ಮೇಲೆ ಎತ್ತರದಲ್ಲಿ ನಿರ್ಮಿಸಿದ ಅಮೃತಶಿಲೆಯ ಬೃಹತ್ ದೇವಾಲಯ ಸಂಕೀರ್ಣ ಅದು.
ಅರಾವಳಿ ಬೆಟ್ಟಸಾಲಿನ ಕಣಿವೆ ಪ್ರದೇಶದಲ್ಲಿನ ಈ ದೇವಾಲಯ ಜೈನ ಸಮುದಾಯದವರ ಐದು ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದು ಎಂದು ಗುರ್ತಿಸಲ್ಪಟ್ಟಿದೆ. ಸೇಠ್ ಧರ್ನ ಶಾ ಎನ್ನುವ ಹೆಸರಿನ ಜೈನ ವ್ಯಾಪಾರಿಯೊಬ್ಬರು ಮೇವಾರದ ದೊರೆ ರಾಣಾ ಕುಂಭನ ಸಹಾಯದಿಂದ ಕಟ್ಟಿಸಿದ ದೇವಾಲಯ ಸಂಕೀರ್ಣ ಹದಿನೈದನೇ ಶತಮಾನದಲ್ಲಿ ಕಟ್ಟಲ್ಪಟ್ಟಿದ್ದು ಕೆಲಸ ಪೂರ್ಣಗೊಳ್ಳಲು ಅರವತ್ತೈದು ವರ್ಷಗಳಷ್ಟು ದೀರ್ಘಕಾಲ ತೆಗೆದುಕೊಂಡಿದೆ ಎನ್ನುವ ಮಾಹಿತಿ ಇದೆ. ಎಕರೆಗಟ್ಟಲೆ ಜಾಗದಿಂದ ಸುತ್ತುವರಿದ ಸಂಕೀರ್ಣದ ಹೊರಾವರಣದಲ್ಲಿ ಸಣ್ಣಸಣ್ಣ ದೇಗುಲಗಳಿವೆ. ಈಗಲೂ ಅಲ್ಲಲ್ಲಿ ಕೆಲಸ ನಡೆಯುತ್ತಿದ್ದ ದೇವಾಲಯ ಸಂಕೀರ್ಣದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಕುಸುರಿ ಕೆಲಸಗಳಿಂದ ಕೂಡಿದ ಅಮೃತಶಿಲೆಯ ಬೃಹತ್ ಕಂಬಗಳು ಎಷ್ಟಿವೆ ಎಂದು ಲೆಕ್ಕ ಹಾಕಲು ಹೋದರೆ ಲೆಕ್ಕ ತಪ್ಪುತ್ತದೆ. ೧೪೦೦ಕ್ಕೂ ಹೆಚ್ಚು ಕಂಬಗಳು ಈ ಸಂಕೀರ್ಣದಲ್ಲಿವೆಯಂತೆ. ಮೇಲ್ಭಾಗದ ಕಮಾನುಗಳಲ್ಲಿ ದೇವಾನುದೇವತೆಗಳ ಚಿತ್ರಗಳು, ಎತ್ತರದ ಮೇಲ್ಛಾವಣಿಯಲ್ಲೂ ಕಲೆಗಾರಿಕೆಯ ಅದ್ಭುತ ಲೋಕ. ‘ಮನುಷ್ಯಮಾತ್ರರಿಂದ ಇಷ್ಟೆಲ್ಲಾ ನಯನಾಜೂಕಿನ ಕುಸುರಿಗಾರಿಕೆ ಸಾಧ್ಯವೇ?’ ಎನಿಸುವಂಥ ದಿಗ್ಭ್ರಮೆ! ಇದರ ಹಿಂದೆ ಇರುವ ಜನಬಲ, ಧನಬಲ, ತಾಳ್ಮೆ, ಶ್ರಮ, ಸಿದ್ಧತೆಯ ಕುರಿತು ಯೋಚಿಸಿದರೆ ಮೂಕವಿಸ್ಮಿತರಾಗಬೇಕಾದ ಪರಿಸ್ಥಿತಿ. ಸುತ್ತ ನಾಲ್ಕು ಕಡೆಗಳಿಂದ ಪ್ರವೇಶವಿರುವ ದೇವಾಲಯ ಸಂಕೀರ್ಣದಲ್ಲಿ ೨೪ ತೀರ್ಥಂಕರರಲ್ಲಿ ಪ್ರಥಮನಾದ ಆದಿನಾಥನ ಚೌಮುಖ ದೇವಾಲಯ ಪ್ರಮುಖವಾಗಿದೆ. ಉಳಿದಂತೆ ಪಾರ್ಶ್ವನಾಥ ದೇವಾಲಯ, ಅಂಬಾಮಠ ದೇವಾಲಯ, ಸೂರ್ಯ ದೇವಾಲಯ, ಜೊತೆಗೆ ಹಲವು ತೀರ್ಥಂಕರರ ದೇವಾಲಯಗಳಿವೆ. ಪದಗಳಲ್ಲಿ ಹಿಡಿದಿಡಲು ಅಸಾಧ್ಯವಾದ, ೪೫ ಅಡಿ ಎತ್ತರದ ದೇವಾಲಯ ಸಂಕೀರ್ಣದ ಕಲಾವಂತಿಕೆಯನ್ನು, ಕುಸುರಿಗಾರಿಕೆಯನ್ನು ಅಭ್ಯಸಿಸಬೇಕೆಂದರೆ ವಾರಗಟ್ಟಲೆಯಲ್ಲ, ತಿಂಗಳುಗಟ್ಟಲೆ ಹಿಡಿದರೂ ಆಶ್ಚರ್ಯವಿಲ್ಲ.
ಜೋಧ್ಪುರದಿಂದ ಉದಯಪುರಕ್ಕೆ ಸಾಗುವ ಹೆದ್ದಾರಿ ಬದಿಯಲ್ಲಿ ಪಾಲಿ ಜಿಲ್ಲೆಯಲ್ಲಿರುವ ಹಳ್ಳಿ ರಾಣಕ್ಪುರ ಈ ದೇವಾಲಯ ಸಂಕೀರ್ಣದಿಂದ ವಿಶ್ವಪ್ರಸಿದ್ಧ. ನೋಡಲೇಬೇಕಾದ ಪ್ರಪಂಚದ ಅದ್ಭುತಗಳಲ್ಲಿ ಒಂದು ಎಂದರೆ ಉತ್ಪ್ರೇಕ್ಷೆಯಲ್ಲ. ಪ್ರಸ್ತುತ `ಸೇಠ್ ಆನಂದ್ ಜೀ, ಕಲ್ಯಾಣ್ ಜೀ ಟ್ರಸ್ಟ್’ನ ಹೆಸರಿನಲ್ಲಿ ಸಂಕೀರ್ಣದ ಆಡಳಿತ ವ್ಯವಹಾರ ನಡೆಯುತ್ತಿದೆ.?
(ಫೋಟೋಗಳು – ರಾಘವೇಂದ್ರ ಉಡುಪ)