
ದೇವರೇ ರೋಗಿಯ ರೂಪದಲ್ಲಿ ನನ್ನನ್ನು ಪರೀಕ್ಷೆ ಮಾಡಲು ಇಲ್ಲಿಗೆ ಬಂದಿರಬಹುದೆಂದು ನನಗೆ ಅನ್ನಿಸುತ್ತಿದೆ. ಆತನಿಗೆ ಆಶ್ರಮದಲ್ಲಿ ಪ್ರವೇಶ ಕೊಡುವುದಿಲ್ಲವೆಂದರೆ ದೇವರಿಗೆ ಪ್ರವೇಶ ಕೊಡುವುದಿಲ್ಲವೆಂದಂತೆ ಆಗುತ್ತದೆ….. ಗಾಂಧಿಯವರು ೧೯೩೯ರ ಡಿಸೆಂಬರ್ನಲ್ಲಿ ವಾರ್ಧಾ(ಸೇವಾಗ್ರಾಮ)ದ ಆಶ್ರಮದಲ್ಲಿದ್ದಾಗ ವಾಡಿಕೆಯಂತೆ ಎಂಟು-ಹತ್ತು ಸಂಗಡಿಗರೊಂದಿಗೆ ಒಂದು ದಿವಸ ಸಂಜೆ ತಿರುಗಾಡಲಿಕ್ಕೆ ಹೊರಬಿದ್ದರು. ಅಷ್ಟರಲ್ಲಿ ಎದುರಿಗೆ ಬಡಕಲು ದೇಹದ ಅತಿಥಿಯೊಬ್ಬರು ಬಂದರು. ಸ್ವಲ್ಪ ವಯಸ್ಸಾಗಿದ್ದ ಅವರ ಕಂಕುಳಲ್ಲೊಂದು ಬಟ್ಟೆಗಂಟಿತ್ತು. ಹರಿದ್ವಾರದಿಂದ ಬಂದಿದ್ದ ಅವರು ಗಂಟನ್ನು ನೆಲದ ಮೇಲಿಟ್ಟು ಗಾಂಧಿಗೆ ವಂದಿಸಿ ಭಕ್ತಿಪೂರ್ವಕವಾಗಿ ದೂರ ಸರಿದು ನಿಂತರು.