ದೇವರೇ ರೋಗಿಯ ರೂಪದಲ್ಲಿ ನನ್ನನ್ನು ಪರೀಕ್ಷೆ ಮಾಡಲು ಇಲ್ಲಿಗೆ ಬಂದಿರಬಹುದೆಂದು ನನಗೆ ಅನ್ನಿಸುತ್ತಿದೆ. ಆತನಿಗೆ ಆಶ್ರಮದಲ್ಲಿ ಪ್ರವೇಶ ಕೊಡುವುದಿಲ್ಲವೆಂದರೆ ದೇವರಿಗೆ ಪ್ರವೇಶ ಕೊಡುವುದಿಲ್ಲವೆಂದಂತೆ ಆಗುತ್ತದೆ…..
ಗಾಂಧಿಯವರು ೧೯೩೯ರ ಡಿಸೆಂಬರ್‌ನಲ್ಲಿ ವಾರ್ಧಾ(ಸೇವಾಗ್ರಾಮ)ದ ಆಶ್ರಮದಲ್ಲಿದ್ದಾಗ ವಾಡಿಕೆಯಂತೆ ಎಂಟು-ಹತ್ತು ಸಂಗಡಿಗರೊಂದಿಗೆ ಒಂದು ದಿವಸ ಸಂಜೆ ತಿರುಗಾಡಲಿಕ್ಕೆ ಹೊರಬಿದ್ದರು. ಅಷ್ಟರಲ್ಲಿ ಎದುರಿಗೆ ಬಡಕಲು ದೇಹದ ಅತಿಥಿಯೊಬ್ಬರು ಬಂದರು. ಸ್ವಲ್ಪ ವಯಸ್ಸಾಗಿದ್ದ ಅವರ ಕಂಕುಳಲ್ಲೊಂದು ಬಟ್ಟೆಗಂಟಿತ್ತು. ಹರಿದ್ವಾರದಿಂದ ಬಂದಿದ್ದ ಅವರು ಗಂಟನ್ನು ನೆಲದ ಮೇಲಿಟ್ಟು ಗಾಂಧಿಗೆ ವಂದಿಸಿ ಭಕ್ತಿಪೂರ್ವಕವಾಗಿ ದೂರ ಸರಿದು ನಿಂತರು.
ಗಾಂಧಿಯವರು ಪ್ರತಿವಂದನೆ ಮಾಡಿದರು. ಕುಷ್ಠರೋಗಿಯಾಗಿದ್ದ ಆತ ನನಗೆ ನಿಮ್ಮ ಆಶ್ರಮದಲ್ಲಿ ನೆರಳಿದೆಯೆಂದು ಬಲ್ಲೆ, ನನ್ನ ಅಸ್ಥಿಪಂಜರವನ್ನು ಇಲ್ಲಿಯೇ ತ್ಯಜಿಸಬೇಕೆಂದಿದ್ದೇನೆ, ನನ್ನನ್ನು ತಳ್ಳಿದರೂ ಹೋಗುವುದಿಲ್ಲ ಎಂದನು. ಗಾಂಧಿಜೀ ಬೆರಗಾಗಿ ಸ್ನೇಹದ ದೃಷ್ಟಿಯಿಂದ ಆತನ ಇಡೀ ಶರೀರವನ್ನು ಅವಲೋಕಿಸಿ ಹೀಗೆಂದರು: ನೀವು ಬರೆದಿದ್ದ ಪತ್ರ ತಲಪಿದೆ, ಆದರೆ ನನ್ನ ಉತ್ತರದ ದಾರಿ ಸಹ ಕಾಯದೆ ಹೀಗೆ ಒಮ್ಮಿಂದೊಮ್ಮೆ ಬಂದುಬಿಡಬಹುದು ಎಂದು ನಾನು ಕಲ್ಪಿಸಿರಲಿಲ್ಲ. ಆ ಮಾತನ್ನು ಕೇಳಿದ ರೋಗಿಗೆ ನಾಚಿಕೆಯಾಯಿತು. ಮೋರೆ ಬಾಡಿತು. ಆತ ಗಂಟಿನಲ್ಲಿ ಸ್ವತಃ ಕೈಯಿಂದ ನೂತಿದ್ದ ಲಡಿಯನ್ನು ತೆಗೆದು ಗಾಂಧಿಜೀಗೆ ಅರ್ಪಿಸಿದ. ಒಂದಿಲ್ಲೊಂದು ದಿನ ಈ ಲಡಿಯನ್ನು ತಮಗೆ ಅರ್ಪಿಸಬೇಕೆಂದು ನನ್ನ ಬಯಕೆಯಾಗಿತ್ತು. ಆ ನನ್ನ ಇಚ್ಛೆ ಇಂದು ಪೂರ್ಣವಾಯಿತು, ತಮ್ಮ ದರ್ಶನದಿಂದ ಪಾವನನಾದೆ! ಎಂದ.
ಇಷ್ಟು ಹೇಳುತ್ತಲೇ ಆತನ ದೃಷ್ಟಿಯು ಆಶ್ರಮದ ಗುಡಿಸಲುಗಳ ಕಡೆಗೆ ಹೋಯಿತು. ಅವು ಸುಂದರವಾಗಿದ್ದವು. ಆದರೆ ಅವು ಕುಷ್ಠರೋಗಿಯಾದ ನನಗೆ ಹೇಗೆ ದೊರೆತಾವು? – ಎಂದು ಅಲ್ಲಿಯೇ ಇದ್ದ ಒಂದು ಮರದ ಕಡೆಗೆ ಬೊಟ್ಟುಮಾಡಿ ನಿಟ್ಟುಸಿರುಬಿಡುತ್ತಾ ಇಂದು ರಾತ್ರಿ ಮಟ್ಟಿಗೆ ಆ ಮರದ ಬುಡದಲ್ಲೇ ಮಲಗಿಕೊಳ್ಳುತ್ತೇನೆ ಎಂದು ತಿಳಿಸಿದ. ಅಷ್ಟು ಹೊತ್ತಿಗೆ ಗಾಂಧಿಯವರು ತಿರುಗಾಡಲಿಕ್ಕೆ ಹೊರಡುವ ಸಮಯ ಮೀರಿಹೋಗಿತ್ತು. ಪ್ರಾರ್ಥನೆಯ ಸಮಯಕ್ಕೆ ಸರಿಯಾಗಿ ಬರಬೇಕಾದzರಿಂದ ಹೆಚ್ಚುಹೊತ್ತು ಕಳೆಯದೆ ನಾನು ಆಶ್ರಮದಲ್ಲಿರುವ ಎಲ್ಲರನ್ನು ವಿಚಾರಿಸಬೇಕಲ್ಲವೆ? ಎಂದು ಹೇಳಿ ಆತನ ಊಟದ ವ್ಯವಸ್ಥೆ ಮಾಡಬೇಕೆಂದು ಅಲ್ಲಿಯೇ ಇದ್ದ ಕನುಗಾಂಧಿಗೆ ಹೇಳಿ ಮುನ್ನಡೆದರು.
ಆ ರೋಗಿಯನ್ನು ಸಂಪೂರ್ಣ ಆಕರ್ಷಿಸಿದ್ದ ಗಾಂಧಿಯವರ ಚಿತ್ತವು ಚಂಚಲವಾಗಿ ಹಿಂದಿನ ನೆನಪಾಯಿತು. ಅವರು ಘನ ವಿದ್ವಾಂಸರಾಗಿದ್ದ ಶ್ರೀ ದತ್ತಾತ್ರೇಯ ವಾಸುದೇವ ಪರಚುರೆ ಶಾಸ್ತ್ರಿಗಳು. ಮಹಾರಾಷ್ಟ್ರದಲ್ಲಿ ಸಂಸ್ಕೃತ ಅಧ್ಯಾಪನ ನಡೆಸುತ್ತಿದ್ದವರು. ಗಾಂಧಿಯವರು ೧೯೩೨ರಲ್ಲಿ ಹರಿಜನರ ಏಳ್ಗೆಗಾಗಿ ಹೋರಾಡುತ್ತಿದ್ದ ಸಮಯದಲ್ಲಿ ಬಂದಿಯಾಗಿ, ಗಾಂಧಿಯವರ ಜೊತೆಯಲ್ಲಿ ಕುಷ್ಠರೋಗಿಗಳಿಗಾಗಿಯೇ ಇದ್ದ ಪ್ರತ್ಯೇಕ ವಾರ್ಡಿನಲ್ಲಿದ್ದರು. ಗಾಂಧಿ ಸೆರೆಮನೆ ಯಲ್ಲಿ ಒಂದು ವಾರ ನಡೆಸಿದ ಉಪವಾಸದ ಕೊನೆಯ ದಿನ ಅಂದರೆ ೧೯೩೨ರ ಸೆಪ್ಟೆಂಬರ್ ೨೬ರಂದು ಸೆರೆಮನೆಯಲ್ಲಿಯೇ ನಡೆದ ಸರಳ ಸಮಾರಂಭದಂದು ಪರಚುರೆ ಶಾಸ್ತ್ರಿಗಳು ಸಂಸ್ಕೃತದಲ್ಲಿ ವೇದಘೋಷಗಳನ್ನು ಪಠಿಸುತ್ತಾ ಹಾಜರಿದ್ದುದು ಗಾಂಧಿಯವರಿಗೆ ಸಂತೋಷವಾಗಿತ್ತು. ಅಂದು ರವೀಂದ್ರನಾಥ ಠಾಕೂರರು, ಮಾಳವೀಯರು ಮುಂತಾದವರು ಹಾಜರಿದ್ದರು. ಅನಂತರದಲ್ಲಿ ಸೆರೆಮನೆಯಿಂದ ಬಿಡುಗಡೆಯಾದ ಆತ ತನ್ನ ಕುಷ್ಠರೋಗದ ಮೇಲೆ ಎಲ್ಲಾ ತರಹದ ಉಪಚಾರ ಮಾಡಿಸಿದ್ದ. ಎಲ್ಲಾ ಆಸ್ಪತ್ರೆಗಳನ್ನು ಸುತ್ತಾಡಿದ್ದ. ಇಷ್ಟಾದರೂ ಸ್ವಲ್ಪವೂ ಗುಣ ಕಂಡುಬರದೆ ಎಲ್ಲಾ ಕಡೆ ತಿರಸ್ಕೃತನಾಗಿ ಕೊನೆಗೆ ಬೇಸತ್ತು ಹರಿದ್ವಾರಕ್ಕೆ ಹೊರಟುಹೋಗಿದ್ದ. ಗಾಂಧಿಯವರ ಪ್ರತ್ಯುತ್ತರ ಕಾಣದೆ ಅಲ್ಲಿಂದ ವಾರ್ಧಾ ಆಶ್ರಮಕ್ಕೆ ಧಾವಿಸಿ ಬಂದಿದ್ದ.೧೯೪೦ರಲ್ಲಿ, ಸೇವಾಗ್ರಾಮದಲ್ಲಿ ಹರಿಜನ ಕಾರ್ಯಕರ್ತರಾದ ವೇಲಾಯುಧನ್ ಮತ್ತು ದಾಕ್ಷಾಯಿಣಿ ಅವರ ವಿವಾಹವನ್ನು ಕುಷ್ಠರೋಗ ಪೀಡಿತರಾಗಿದ್ದ ಪರಚುರೆ ಶಾಸ್ತ್ರಿ ಗಾಂಧಿಯವರ ನೇತೃತ್ವದಲ್ಲಿ ನೆರವೇರಿಸಿದರು.
ಪ್ರತಿನಿತ್ಯ ಸಂಜೆ ವಾಯುವಿಹಾರಕ್ಕೆಂದು ಹೊರಟಾಗ ಆನಂದ ಭರಿತರಾಗಿರುತ್ತಿದ್ದ ಗಾಂಧಿಯವರ ಮುಖ ಅಂದು ಬಾಡಿಹೋಗಿತ್ತು. ಮೂಕರಂತೆ ತಿರುಗಿದರು. ಆಶ್ರಮದಲ್ಲಿದ್ದ ಅಸ್ಪೃಶ್ಯರೂ ಸಹ ಮುಟ್ಟಲು ಅಂಜುತ್ತಿರುವಂಥ ರೋಗಿಗೆ ಅಲ್ಲಿ ಪ್ರವೇಶ ನೀಡುವುದು ಅತ್ಯಂತ ತೊಡಕಿನ ವಿಷಯವಾಗಿತ್ತು. ಮನಸ್ಸಿಗೆ ಶಾಂತಿ ಇರಲಿಲ್ಲ. ‘ಅಂಗಳದಲ್ಲಿ ಕಾಲಿರಿಸಿದ ಭಗವಂತನನ್ನು ಹಿಂದಕ್ಕೆ ಕಳುಹಿಸುವಿರಾ? ಕುಷ್ಠರೋಗಿಯ ರೂಪದಲ್ಲಿ ಬಂದವನು ನಾನೇ’ ಎಂದು ಹೃದಯದ್ವಾರವನ್ನು ಯಾರೋ ತಟ್ಟಿ ಹೇಳುತ್ತಿರುವಂತೆ ಅಂದು ರಾತ್ರಿ ಕನಸುಬಿತ್ತು. ಮುಂಜಾನೆ ಗಾಂಧಿ ಕಣ್ಣು ತೆರೆದಾಗ ಎದೆಯ ಮೇಲಿನ ಭಾರ ಇಳಿದಂತೆ ಹಗುರವೆನಿಸಿತು.
ಬೆಳಗಿನ ಪ್ರಾರ್ಥನಾಸಭೆಯಲ್ಲಿ ಗಾಂಧಿ ತಮ್ಮ ಹೃದಯವನ್ನು ಹೀಗೆ ತೋಡಿಕೊಂಡರು: ನಿನ್ನೆ ಸಂಜೆ ಹರಿದ್ವಾರದಿಂದ ನಮ್ಮಲ್ಲೊಬ್ಬ ಅತಿಥಿ ಬಂದಿದ್ದಾನೆ. ಆತನಿಗೆ ಕುಷ್ಠವಾಗಿದೆ. ಹರಿದ್ವಾರದಲ್ಲಿಯೇ ಜಲಸಮಾಧಿ ಹೊಂದಬೇಕೆಂದು ಆತನ ಆಲೋಚನೆಯಾಗಿತ್ತು. ಅದೊಂದು ಸ್ಪರ್ಶರೋಗ. ದೇವರೇ ರೋಗಿಯ ರೂಪದಲ್ಲಿ ನನ್ನನ್ನು ಪರೀಕ್ಷೆ ಮಾಡಲು ಇಲ್ಲಿಗೆ ಬಂದಿರಬಹುದೆಂದು ನನಗೆ ಅನ್ನಿಸುತ್ತಿದೆ. ಆತನಿಗೆ ಆಶ್ರಮದಲ್ಲಿ ಪ್ರವೇಶ ಕೊಡುವುದಿಲ್ಲವೆಂದರೆ ದೇವರಿಗೆ ಪ್ರವೇಶ ಕೊಡುವುದಿಲ್ಲವೆಂದಂತೆ ಆಗುತ್ತದೆ. ದೇವರ ಹೆಸರಿನಲ್ಲಿ ನಿಮ್ಮೆಲ್ಲರ ಕ್ಷೇಮಸಮಾಚಾರದ ಜವಾಬ್ದಾರಿಯನ್ನು ನಾನು ವಹಿಸಿದ್ದಿರುತ್ತದೆ. ಆದಕಾರಣ ನಿಮ್ಮ ಸಮ್ಮತಿ ಸಿಕ್ಕಿದ ಹೊರತು ಆತನನ್ನು ಇಲ್ಲಿ ಇರಿಸಿಕೊಳ್ಳುವ ಸಾಹಸಕ್ಕೆ ಕೈಹಾಕಲಾರೆ.
ಅತಿಥಿಯು ಆಶ್ರಮದಲ್ಲೇ ಇರಲಿ ಎಂದು ಇಡೀ ಪ್ರಾರ್ಥನಾಸಭೆಯವರ ಕಂಠ ಒಡನುಡಿಯಿತು. ಆ ಸಮಯದಲ್ಲಾಗಲೇ ಕ್ಷಯ ರೋಗಪೀಡಿತನಾದವನೊಬ್ಬನನ್ನು ಕಸ್ತೂರಿಬಾ ವಾರ್ಧಾ ಆಶ್ರಮದಲ್ಲಿ ನೋಡಿಕೊಳ್ಳುತ್ತಿದ್ದರು. ಗಾಂಧಿಯವರ ಕುಟೀರದ ಹತ್ತಿರದಲ್ಲೇ ಶಾಸ್ತ್ರಿಯವರಿಗಾಗಿ ಪ್ರತ್ಯೇಕ ಗುಡಿಸಲನ್ನು ನಿರ್ಮಿಸಲಾಯಿತು. ಆಶ್ರಮದಲ್ಲಿದ್ದ ವಾಲ್ಜೀ ದೇಸಾಯಿ ಅಲ್ಲಿದ್ದವರೆಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅಲ್ಲಿ ಗಾಂಧಿಯವರೇ ಸ್ವತಃ ಶಾಸ್ತ್ರಿಯವರಿಗೆ ಪ್ರತಿದಿನ ಶುಶ್ರೂಷೆ ಮಾಡುತ್ತಿದ್ದರು. ಮೈ ಮಾಲಿಷ್ ಮಾಡುತ್ತಿದ್ದರು. ಗಾಂಧಿ ಅವರಿಗೆ ‘ಸಾಯುವುದಕ್ಕೆ ಅನುಮತಿಯಿಲ್ಲ’ ಎಂದು ಹೇಳಿದ್ದರು. (ಶಾಸ್ತ್ರಿಯವರು ಆಶ್ರಮಕ್ಕೆ ಬಂದಮೇಲೆ ಅಲ್ಲಿದ್ದವರಲ್ಲಿ ಕೆಲವರು ಕುಷ್ಠರೋಗದ ಭಯದಿಂದ ಆಶ್ರಮವನ್ನೇ ತೊರೆದು ಹೋದರೆಂದು ಕಂಡವರೊಬ್ಬರು ನನಗೆ ತಿಳಿಸಿದರು.
೧೯೩೨ರಲ್ಲಿ, ಕುಷ್ಠರೋಗಪೀಡಿತ ಪರಚುರೆ ಶಾಸ್ತ್ರಿಯವರನ್ನು ಗಾಂಧಿಯವರು ತಾವು ಬಂಧಿತರಾಗಿದ್ದ ಪುಣೆಯ ಯೆರವಾಡ ಜೈಲಿಗೇ ಕರೆಯಿಸಿಕೊಂಡು ಭೇಟಿಮಾಡಿದರು.
೧೯೪೦ರಲ್ಲಿ ದಕ್ಷಿಣ ಭಾರತದ ಮಲಬಾರ್‌ನಿಂದ ಆಶ್ರಮಕ್ಕೆ ಆಗಮಿಸಿದ ಹರಿಜನ ಕಾರ್ಯಕರ್ತರಾದ ವೇಲಾಯುಧನ್ ಮತ್ತು ದಾಕ್ಷಾಯಿಣಿ ಅವರ ವಿವಾಹವು ಗಾಂಧಿಯವರ ನೇತೃತ್ವದಲ್ಲಿ ೧೯೪೦ರ ಸೆಪ್ಟೆಂಬರ್ ೬ ಶುಕ್ರವಾರದಂದು ನಡೆಯಿತು. ಬೆಳಗ್ಗೆ ೬ ಗಂಟೆಗೆ ಪರಚುರೆ ಶಾಸ್ತ್ರಿ ವಿವಾಹದ ಸಂಸ್ಕೃತ ಶ್ಲೋಕಗಳನ್ನು ಶಾಸ್ತ್ರೀಯವಾಗಿ ಪಠಿಸುತ್ತಾ ಯಜ್ಞ-ಹೋಮದೊಂದಿಗೆ ಒಂದು ಗಂಟೆ ಕಾಲ ಕಲಾಪವನ್ನು ನಡೆಸಿಕೊಟ್ಟರು. ಬಹು ಸರಳವಾಗಿ ನಡೆದ ಮದುವೆ ‘ನಾಲ್ಕಾಣೆ ಮದುವೆ’ ಎಂದು ಹೆಸರು ಪಡೆಯಿತು.
೧೯೩೪ರ ವೇಳೆಗೆ ಬೇನೆ ಉದ್ಭವಿಸಿದ್ದರಿಂದ ಪರಚುರೆ ಶಾಸ್ತ್ರಿಗಳು ಆಶ್ರಮದ ಹತ್ತಿರದಲ್ಲೇ ಇದ್ದ ದತ್ತಾಪುರ ಕುಷ್ಠರೋಗಿಗಳ ಕಾಲೋನಿಗೆ ತೆರಳಿ ೧೯೪೫ರ ಜುಲೈನಲ್ಲಿ ಕೊನೆಯುಸಿರೆಳೆದರು. ಆ ಸಮಯದಲ್ಲಿ ಗಾಂಧಿ ವೈಸ್‌ರಾಯ್ ಲಾರ್ಡ್ ವೇವಲ್‌ರನ್ನು ಭೇಟಿಯಾಗಲು ಸಿಮ್ಲಾಗೆ ಹೋಗಿದ್ದರು. ಈ ಸುದ್ದಿ ಅವರಿಗೆ ಮುಟ್ಟಿದಾಗ ಯರವಾಡ ಸೆರೆಮನೆಯಲ್ಲಿ ೧೯೩೨ರಲ್ಲಿ ಉಪವಾಸ ನಿಲ್ಲಿಸಿದಾಗ ಅಲ್ಲೇ ಶಿಕ್ಷೆ ಅನುಭವಿಸುತ್ತಿದ್ದುದು ಮತ್ತು ಉಪವಾಸದ ಕೊನೆಯ ದಿವಸ ಸೆರೆಮನೆಯಲ್ಲೇ ನಡೆದ ಸಮಾರಂಭದಂದು ಸಂಸ್ಕೃತ ವೇದಘೋಷಗಳನ್ನು ಪಠಿಸಿದ್ದ ಪರಚುರೆ ಶಾಸ್ತ್ರಿಯವರನ್ನು ಗಾಂಧಿ ಸ್ಮರಿಸಿದರು.
ವಾರ್ಧಾ ಆಶ್ರಮದಲ್ಲಿ ಪರಚುರೆ ಶಾಸ್ತ್ರಿ ಇದ್ದುದು, ಅವರಿಗೆ ಗಾಂಧಿ ಉಪಚಾರ ಮಾಡಿದ್ದು, ವಾರ್ಧಾ ಸಮೀಪದಲ್ಲಿ ಅನಂತರದಲ್ಲಿ ಕುಷ್ಠರೋಗಿಗಳ ಆಸ್ಪತ್ರೆ ಮತ್ತು ಅವರಿಗಾಗಿಯೇ ಕಾಲೊನಿಯೊಂದನ್ನು ತೆರೆಯಲು ಗಾಂಧಿಯವರ ಸಂಗಡಿಗರಿಗೆ ಸ್ಫೂರ್ತಿ ನೀಡಿತು. ?
ಆಧಾರ:
೧. ‘ಗಾಂಧಿ ಮತ್ತು ಕರ್ನಾಟಕ,’ ಸಂಪಾದಕರು; ಸಿದ್ದವನಹಳ್ಳಿ ಕೃಷ್ಣಶರ್ಮ, ೧೯೬೯, ಪುಟ-೪೨೭.
೨. ಆರ್.ಕೆ. ಪ್ರಭು, ‘ಇವರು ಬಾಪು’, ೧೯೫೬, ಪುಟ-೮೩.
೩. RAJ MOHAN GANDHI, ‘MOHANDAS – A TRUE STORY of a man, his People and Empire..’ ಕನ್ನಡ ಅನುವಾದ: ಜಿ.ಎನ್. ರಂಗನಾಥರಾವ್, ‘ಮೋಹನ್‌ದಾಸ್-ಒಂದು ಸತ್ಯಕಥೆ’, ೨೦೧೨, ಪುಟ – ೫೨೮, ೬೩೫.
೪. ”GANDHI, 1915-1948′, A detailed chronology, compiled by C.B. DALAL, ೧೯೭೧.
೫. M.S. MAHENDALE, ‘Gandhi looks at Leprosy,’ 1971, Page No. 12 to 17.
ಮತ್ತು ಅಂತರ್ಜಾಲದ ಮಾಹಿತಿಯಿಂದ.