ಕ್ರೀಡೆ
ಎಂ.ಬಿ. ಹಾರ್ಯಾಡಿ
ಈಗ ನಾವು ಟೆನ್ನಿಸ್ ಪುರುಷರ ಸಿಂಗಲ್ಸ್ ಸುವರ್ಣ ಯುಗದಲ್ಲಿ ಇದ್ದೇವೆಂದು ಹೇಳಲಾಗುತ್ತದೆ. ಏಕೆಂದರೆ ಈ ಆಟದಲ್ಲಿ ತಲಾ ಇಪ್ಪತ್ತು ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗಳಿಸಿದ ಮೂವರು ಈಗ ಜಾಗತಿಕ ರಂಗದಲ್ಲಿ ಆಡುತ್ತಿದ್ದಾರೆ. ಇದೇನೂ ಸಣ್ಣ ಸಾಧನೆಯಲ್ಲ. ಇತಿಹಾಸದತ್ತ ಕಣ್ಣು ಹೊರಳಿಸಿದರೆ ಕಳೆದ ಸುಮಾರು ಇಪ್ಪತ್ತು ವರ್ಷಗಳಲ್ಲಿ ನಡೆದ ಎಲ್ಲ ಗ್ರ್ಯಾಂಡ್ ಸ್ಲ್ಯಾಮ್ಗಳ ಶೇಕಡಾ ೮೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಈ ಮೂವರೇ ಗಿಟ್ಟಿಸಿಕೊಂಡಿದ್ದಾರೆ. ಇಪ್ಪತ್ತು ಗ್ರ್ಯಾಂಡ್ ಸ್ಲ್ಯಾಮ್ಗಳ ಆನಂತರ ಈ ಮೂವರ ನಡೆ ಹೇಗಿರುತ್ತದೆ? ಇನ್ನು ಎಷ್ಟು ಮುಂದುವರಿಯುತ್ತಾರೆ? ಇವರಲ್ಲಿ ಮೊದಲು ಮುಂದುವರಿಯುವವರು ಯಾರು? – ಎಂದೆಲ್ಲ ಯೋಚಿಸುತ್ತಿದ್ದಾಗ ಸ್ಪೈನ್ನ ಆಟಗಾರ ರಾಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ ೨೧ನೇ ಗ್ರ್ಯಾಂಡ್ ಸ್ಲ್ಯಾಮ್ ಪಡೆದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ; ಆ ಮೂಲಕ ಸ್ವಿಜರ್ಲೆಂಡ್ನ ರೋಜರ್ ಫೆಡರರ್ ಮತ್ತು ಸರ್ಬಿಯದ ಆಟಗಾರ ನೊವಾಕ್ ಜೊಕೋವಿಚ್ ಅವರನ್ನು ಹಿಂದಿಕ್ಕಿದ್ದಾರೆ.
ಮೊದಲಿಗೆ ಮುಂದುವರಿಯುವವರು ಜೊಕೋವಿಚ್ ಅವರೇನೋ ಎನ್ನುವ ಭಾವನೆ ಇತ್ತು. ಆದರೆ ಟೋಕಿಯೋ ಒಲಿಂಪಿಕ್ಸ್ನಲ್ಲಿ ಮಾತ್ರವಲ್ಲ; ಈಚಿನ ಯು.ಎಸ್. ಓಪನ್ನಲ್ಲಿ ಕೂಡ ರಷ್ಯಾದ ೨೫ರ ಯುವ ಆಟಗಾರ ಡೇನಿಲ್ ಮೆಡ್ವೆಡೆವ್ ಜೊಕೋವಿಚ್ರನ್ನು ಮಣಿಸಿ ಟ್ರೋಫಿಗೆ ಮುತ್ತಿಕ್ಕಿದರು. ಕೊರೋನಾ ಲಸಿಕೆಯನ್ನು ಹಾಕಿಸಿಕೊಳ್ಳದ ಕಾರಣ ಜೊಕೋವಿಚ್ಗೆ ಆಸ್ಟ್ರೇಲಿಯನ್ ಓಪನ್ ಆಡಲು ಸಾಧ್ಯವಾಗಲಿಲ್ಲ. ಮೆಡ್ವೆಡೆವ್ ಅವರನ್ನು ಸೋಲಿಸುವ ಮೂಲಕ ನಡಾಲ್ ೨೧ನೇ ಗ್ರ್ಯಾಂಡ್ ಸ್ಲ್ಯಾಮ್ ಪಡೆದು ದಾಖಲೆ ನಿರ್ಮಿಸಿದರು.
ಆದರೂ ಈ ವಿನಯದ ಮೂರ್ತಿ ಟೂರ್ನಿಯ ಅನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ತನ್ನ ಹಿಂದಿನ ಸೌಜನ್ಯ, ಸಮತೋಲನದ ಸ್ಥಿತಿಯಲ್ಲೇ ಇದ್ದರು. “ನನ್ನ ವೃತ್ತಿಜೀವನದ ಈ ಹೊತ್ತಿನಲ್ಲಿ ಇನ್ನೊಂದು ಗ್ರ್ಯಾಂಡ್ ಸ್ಲ್ಯಾಮ್ ಪಡೆದಿರುವುದು ಅದ್ಭುತವೇ ಸರಿ. ಇದು ವಿಶೇಷ ಸಂಖ್ಯೆ ೨೧ ಎಂಬುದು ನನಗೆ ಗೊತ್ತು. ಹೀಗಿರುವಾಗ ನನ್ನ ಮಟ್ಟಿಗೆ ಇದು ಮರೆಯಲಾಗದ ದಿನವಾಗಿದೆ. ನನ್ನ ಟೆನ್ನಿಸ್ ವೃತ್ತಿಜೀವನದಲ್ಲಿ ಮತ್ತೊಂದು ವಿಶೇಷ ಸಾಧನೆ ಮಾಡಿದ ಬಗ್ಗೆ ನಾನು ಅದೃಷ್ಟಶಾಲಿ ಎನಿಸುತ್ತದೆ” ಎಂದು ಆತ ಹೇಳಿದರು.
“ಕೊನೆಯಲ್ಲಿ ಇತಿಹಾಸವೆಂದರೆ ವಿಜಯವೇ. ಆದರೆ ವೈಯಕ್ತಿಕ ಭಾವನೆಗಳ ಮಟ್ಟದಲ್ಲಿ ವಿಜಯವೆಂದರೆ ವಿಭಿನ್ನವಾಗಿರುತ್ತದೆ. ಇಂದು ನಾನು ಈ ಟ್ರೋಫಿಯನ್ನು ಗಳಿಸಿದ ರೀತಿ ಮರೆಯಲಾಗದ್ದು. ಇದು ನನ್ನ ವೃತ್ತಿಜೀವನದ ಅತ್ಯಂತ ಭಾವನಾತ್ಮಕ ಆಟವಾಗಿ ನಿಲ್ಲುತ್ತದೆ; ನನಗಂತೂ ಇದು ತುಂಬ ಅಮೂಲ್ಯ” ಎಂದು ಈ ಆಟಗಾರ ತನ್ನ ಆ ಕ್ಷಣದ ಭಾವನೆಗಳನ್ನು ಹಂಚಿಕೊಂಡರು. ತೀವ್ರವಾದ ಪಾದದ ನೋವಿನಿಂದ ಬಳಲುತ್ತಿದ್ದ ಆತ ಆಡಿದ್ದೇ ವಿಶೇಷ; ಒಂದೂವರೆ ತಿಂಗಳ ಹಿಂದೆ ಆಡುವುದು ನಿಶ್ಚಯವಿರಲಿಲ್ಲ. ಎದುರಾಳಿ ಅವರಿಗಿಂತ ಹತ್ತು ವರ್ಷ ಚಿಕ್ಕವರು; ಮತ್ತು ಐದು ಸೆಟ್ಗಳ ತೀವ್ರ ಹಣಾಹಣಿಯ ಈ ಆಟವನ್ನು ಸುಮಾರು ಐದೂವರೆ ಗಂಟೆ ಅವರು ಆಡಿದ್ದರು. ಅದೂ ಅಲ್ಲದೆ ಮೊದಲ ಎರಡರಲ್ಲಿ ಸೋತ ಬಳಿಕ ನಡಾಲ್ ಪುಟಿದೆದ್ದು ನಿರಂತರ ಮೂರು ಸೆಟ್ ಗೆದ್ದು ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರು.
ಉಲ್ಟಾ ತಿರುಗಿದ ಆಟ
ಮೂರನೇ ಸೆಟ್ನಲ್ಲಿ ಮೆಡ್ವೆಡೆವ್ ೩-೨ ಮತ್ತು ೪೦-ಲವ್ ಆಗಿದ್ದಾಗ ಸಾಮಾಜಿಕ ಮಾಧ್ಯಮದಲ್ಲಿ ಶೇ. ೯೬ ವಿಶ್ಲೇಷಕರು ಆತನೇ ಈ ಸೆಟ್ ಗೆದ್ದು ಪ್ರಶಸ್ತಿಯನ್ನು ಮಡಿಲಿಗೆ ಹಾಕಿಕೊಳ್ಳುತ್ತಾರೆಂದು ಭವಿಷ್ಯ ನುಡಿದಿದ್ದರು. ಆದರೆ ಆಟದ ಮುಂದಿನ ದಿಕ್ಕೇ ಬದಲಾಯಿತು.
ಒಂದು ಬದಿಯಲ್ಲಿ ಚಾಂಪಿಯನ್ಗಳು ಇರುವಾಗ ತಮ್ಮ ದಾರಿಯನ್ನು ಅವರು ನಿರ್ಧರಿಸುವ ಎಲ್ಲ ಸಾಧ್ಯತೆಯೂ ಇರುತ್ತದೆ ಎಂಬುದನ್ನು ಈ ವಿಶ್ಲೇಷಕರು ಮರೆಯಬಾರದಿತ್ತು. ಆ ಹಂತದಲ್ಲಿ ಮೆಡ್ವೆಡೆವ್ ಆಟದ ಒಂದು ಪ್ರಮುಖ ದೋಷವನ್ನು ನಡಾಲ್ ಗುರುತಿಸಿದರು. ಅಂಗಣದ ಮುಂಭಾಗದಲ್ಲಿ ರಷ್ಯಾದ ಆಟಗಾರನ ಕೌಶಲವು ಸೀಮಿತ ಎಂಬುದೇ ಆ ದೋಷ. ಜೊತೆಗೆ ಅದಾಗಲೇ ನಡಾಲ್ಗೆ ಅಂಗಣದ ಹಿಡಿತ ಚೆನ್ನಾಗಿ ಸಿಕ್ಕಿತ್ತು. ಅಷ್ಟಾಗುವಾಗ ಗ್ಯಾಲರಿಯಲ್ಲಿ ತುಂಬಿದ್ದ ಪ್ರೇಕ್ಷಕರು ‘ರಾಫಾ, ರಾಫಾ’ ಎಂದು ಕೂಗಲಾರಂಭಿಸಿದರು. ಮೆಡ್ವೆಡೆವ್ಗೆ ಮತ್ತಷ್ಟು ಕಿರಿಕಿರಿಯಾಗಿ ಗುಂಪನ್ನು ನಿಯಂತ್ರಿಸುವಂತೆ ಅಂಪಾಯರ್ಗೆ (ನಿರ್ಣಾಯಕರಿಗೆ) ಮನವಿ ಸಲ್ಲಿಸಿದರು. ನಡಾಲ್ ಗೆಲ್ಲುವ ಸಾಧ್ಯತೆ ಕಾಣುತ್ತಲೇ ಪ್ರೇಕ್ಷಕರ ದೊಡ್ಡ ವಿಭಾಗ ತಮ್ಮ ನೆಚ್ಚಿನ ಆಟಗಾರನಿಗೆ ಈ ಬಾರಿ ೨೧ನೇ ಗ್ರ್ಯಾಂಡ್ ಸ್ಲ್ಯಾಮ್ ಸಿಗಲೇಬೇಕು ಎಂದು ತೀರ್ಮಾನಿಸಿದಂತಿತ್ತು.
ಕ್ರೀಡಾಳುಗಳ ಮನೆತನ
ಸ್ಪೈನ್ನ ಮೆಲ್ಲೋರ್ಕಾದ ಮನಾಕೋರ್ನಲ್ಲಿ ಜೂನ್ ೩, ೧೯೮೬ರಂದು ರಾಫೆಲ್ ನಡಾಲ್ ಪರೇರಾ ಜನನವಾಯಿತು. ಅವರದ್ದು ಕ್ರೀಡಾಪ್ರೇಮಿಗಳ ಮನೆತನ. ಚಿಕ್ಕಪ್ಪ ಮಿಗುವೆಲ್ ಏಂಜೆಲ್ ನಡಾಲ್ರ ವೃತ್ತಿಪರ ಎಸೋಸಿಯೇಷನ್ನ ಫುಟ್ಬಾಲ್ ಆಟಗಾರ. ಆತ ೨೦೦೨ರ ವಿಶ್ವಕಪ್ನಲ್ಲಿ ಆಟವಾಡಿದ್ದರು. ಇನ್ನೊಬ್ಬ ಚಿಕ್ಕಪ್ಪ ಟೋನಿ ನಡಾಲ್ ರಾಫೆಲ್ಗೆ ಮಾರ್ಗದರ್ಶಕ. ನಡಾಲ್ ವೃತ್ತಿಪರ ಕ್ರೀಡಾ ಪ್ರವಾಸದಲ್ಲಿ ಆತನೇ ಕೋಚ್ ಆಗಿದ್ದರು. ನಾಲ್ಕನೇ ವರ್ಷದ ಪುಟ್ಟ ಬಾಲಕನಾಗಿದ್ದಾಗಲೇ ನಡಾಲ್ ಟೆನ್ನಿಸ್ ಆಡಲು ಆರಂಭಿಸಿದ್ದ. ಬಲಗೈಯಲ್ಲಿ ಬರೆಯುತ್ತಿದ್ದ ನಡಾಲ್ ಟೆನ್ನಿಸ್ ಬ್ಯಾಟ್ ಹಿಡಿದದ್ದು ಎಡಗೈಯಲ್ಲಿ. ಎಡಗೈ ಜೊತೆಗೆ ಎರಡೂ ಕೈಗಳ ಮುಂಗೈ ಮತ್ತು ಹಿಂಗೈ (ಬ್ಯಾಕ್ಹ್ಯಾಂಡ್) ಎರಡೂ ಸೇರಿಸಿ ಆಡುತ್ತಿದ್ದರು. ೧೨ ವರ್ಷ ಆಗುವಾಗ ಕೋಚ್ ಚಿಕ್ಕಪ್ಪ ಹೆಚ್ಚು ಸಾಂಪ್ರದಾಯಿಕ ಎಡಗೈ ಆಟದ ಶೈಲಿಯನ್ನು ಅನುಸರಿಸುವಂತೆ ಪ್ರೋತ್ಸಾಹಿಸಿದರು. ರಾಫೆಲ್ ಎರಡೂ ಕೈಗಳ ಹಿಂಗೈ ಆಟವನ್ನು ಬಿಡಲಿಲ್ಲ. ಆದರೆ ತನ್ನದೇ ಸ್ವಂತದ್ದಾದ ಒಂದು ಕೈ ಮುಂಗೈ ಆಟಕ್ಕೆ ಬದಲಾಯಿಸಿಕೊಂಡರು; ಮತ್ತು ಈ ಹೊಡೆತದಿಂದ ಆತ ಟೆನ್ನಿಸ್ ಕ್ರೀಡಾ ಜಗತ್ತಿನಲ್ಲಿ ಮೇಲ್ಮಟ್ಟಕ್ಕೆ ಬಡ್ತಿ ಪಡೆದರು.
ನಡಾಲ್ ಅಧಿಕೃತವಾಗಿ ವೃತ್ತಿಪರ ಆಟಗಾರನಾದದ್ದು ೨೦೦೧ರಲ್ಲಿ, ಕೇವಲ ೧೬ನೇ ವರ್ಷದಲ್ಲಿ. ಆ ವರ್ಷ ಕಿರಿಯ ಸ್ಪರ್ಧಾಳಾಗಿ ಒಂದೇ ಒಂದು ಗ್ರ್ಯಾಂಡ್ ಸ್ಲ್ಯಾಮ್ನಲ್ಲಿ ಭಾಗವಹಿಸಿದರು. ೨೦೦೨ರ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ವರೆಗೆ ಹೋದರು. ಮರುವರ್ಷ ಪಕ್ಕಾ ವೃತ್ತಿಪರ ಆಟಗಾರನಾದರು ಮತ್ತು ವಿಶ್ವದ ೫೦ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದರು. ೨೦೦೪ರಲ್ಲಿ ಅಮೆರಿಕದ ಡೇವಿಸ್ ಕಪ್ ಫೈನಲ್ನಲ್ಲಿ ಸ್ಪೈನ್ ಪರವಾಗಿ ಆತನದ್ದು ನಿರ್ಣಾಯಕ ಪಾತ್ರವಾಗಿತ್ತು. ಜಗತ್ತಿನ ಶ್ರೇಯಾಂಕ ಎರಡರಲ್ಲಿದ್ದ ಆಂಡಿ ರಾಡಿಕ್ ಅವರನ್ನು ನಡಾಲ್ ನಾಲ್ಕು ಸೆಟ್ಗಳ ಆಟದಲ್ಲಿ ಸೋಲಿಸಿದರು. ಆ ಮೂಲಕ ಟೆನ್ನಿಸ್ ಇತಿಹಾಸದಲ್ಲಿ ಅತಿ ಕಿರಿಯನೊಬ್ಬ (ಹದಿನೆಂಟೂವರೆ ವರ್ಷ) ಟೆನ್ನಿಸ್ ಸಿಂಗಲ್ಸ್ ಪಂದ್ಯ ಗೆದ್ದ ದಾಖಲೆ ಅವರದಾಯಿತು.
ಫೆಡರರ್ಗೆ ಎದುರಾಳಿ
ಮುಂಗೈಯನ್ನು ಅತ್ಯಂತ ಜೋರಿನ ಟಾಪ್ಸ್ಪಿನ್ಗೆ ಬಳಸುವುದು ಮತ್ತು ಅಂಗಣವನ್ನು ಅತ್ಯಂತ ವೇಗವಾಗಿ ತುಂಬುವ ಮೂಲಕ ನಡಾಲ್ ಬಹುಬೇಗ ಟೆನ್ನಿಸ್ ವೃತ್ತಿಪರ ಸಂಘ(ಎಟಿಪಿ)ದಲ್ಲಿ ಒಬ್ಬ ಉನ್ನತ (ಟಾಪ್) ಆಟಗಾರನಾದರು. ಆಗ ಜಗತ್ತಿನ ನಂಬರ್ ಒನ್ ಆಗಿದ್ದ ಫೆಡರರ್ ಜೊತೆ ಸ್ಪರ್ಧೆಗೂ ಶುರು ಮಾಡಿದರು. ೨೦೦೫ರಲ್ಲಿ ಹನ್ನೊಂದು ಟೂರ್ನಮೆಂಟ್ಗಳಲ್ಲಿ ಜಯಗಳಿಸುವ ಮೂಲಕ ನಡಾಲ್ ಓರ್ವ ಹದಿಹರೆಯದ ಪುರುಷ ಆಟಗಾರನೆಂಬ ನೆಲೆಯಲ್ಲಿ ದಾಖಲೆ ನಿರ್ಮಿಸಿದರು. ಅದರಲ್ಲಿ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯದ ವಿಜಯವೂ ಸೇರಿತ್ತು; ಸೆಮಿಫೈನಲ್ನಲ್ಲಿ ಆತ ತನಗಿಂತ ಐದು ವರ್ಷ ಹಿರಿಯರಾದ ಫೆಡರರ್ ಅವರನ್ನೇ ಸೋಲಿಸಿದರು. ಅದು ಈ ಅದ್ವಿತೀಯ ಆಟಗಾರನ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಕೂಡ ಆಗಿತ್ತು; ಅದು ಆವೆಮಣ್ಣಿನ ಅಂಗಣ.
ಮುಂದಿನ ವರ್ಷ ಎಟಿಪಿ ಪ್ರವಾಸದಲ್ಲಿ ನಡಾಲ್ ಮತ್ತೆ ಐದು ಟೈಟಲ್ಗಳನ್ನು ಪಡೆದರು. ಅದರಲ್ಲಿ ಎರಡನೇ ನೇರ ಫ್ರೆಂಚ್ ಓಪನ್ ವಿಜಯವೂ ಸೇರಿತ್ತು. ಈ ಬಾರಿ ರೋಜರ್ ಫೆಡರರ್ ಫೈನಲ್ನಲ್ಲಿ ಎದುರಾಗಿದ್ದರು. ಅದಲ್ಲದೆ ಆ ವರ್ಷ ವಿಂಬಲ್ಡನ್ ಗ್ರಾಸ್ ಕೋರ್ಟ್ನಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಫೆಡರರ್ ಎದುರು ಸೋತದ್ದಾಯಿತು. ೨೦೦೭ರಲ್ಲಿ ನಡಾಲ್ ಫ್ರೆಂಚ್ ಓಪನ್ ಆವೆಮಣ್ಣಿನ ಅಂಗಳದಲ್ಲಿ ತನ್ನ ವಿಜಯವನ್ನು ಮುಂದುವರಿಸಿದರು. ಅದು ದಾಖಲೆಯ ನಿರಂತರ ೮೧ನೇ ಪಂದ್ಯವಾಗಿತ್ತು. ಆದರೆ ಮೇ ೨೦ರಂದು ಜರ್ಮನಿಯ ಹ್ಯಾಂಬುರ್ಗ್ನಲ್ಲಿ ನಡೆದ ಎಟಿಪಿ ಮಾಸ್ಟರ್ಸ್ ಫೈನಲ್ನಲ್ಲಿ ನಡಾಲ್ ಫೆಡರರ್ಗೆ ಸೋತರು. ಆ ವರ್ಷ ಫ್ರೆಂಚ್ ಓಪನ್ನಲ್ಲಿ ಮೂರನೇ ವಿಜಯವಾದರೆ, ವಿಂಬಲ್ಡನ್ನಲ್ಲಿ ಫೆಡರರ್ ವಿಜಯ ಮುಂದುವರಿಯಿತು; ಫೈನಲ್ನ ಐದು ಸೆಟ್ಗಳ ೩ ಗಂಟೆ ೪೫ ನಿಮಿಷಗಳ ಆಟದಲ್ಲಿ ಫೆಡರರ್ ಈತನನ್ನು ಮಣಿಸಿದರು.
೨೦೦೮ರ ಫ್ರೆಂಚ್ ಓಪನ್ ಫೈನಲ್ನಲ್ಲಿ ಮತ್ತೆ ಇಬ್ಬರೂ ಮುಖಾಮುಖಿಯಾದರು; ಜಯ ನಡಾಲ್ಗೇ ಲಭಿಸಿತು. ನಿರಂತರ ನಾಲ್ಕು ಫ್ರೆಂಚ್ ಓಪನ್ ಗೆಲ್ಲುವ ಮೂಲಕ ನಡಾಲ್ ಬೈಜಾಮ್ ಬೋರ್ಗ್ ದಾಖಲೆಯನ್ನು ಸರಿಗಟ್ಟಿದ್ದಾಯಿತು. ಈ ಬಾರಿ ಆತ ೪ ಗಂಟೆ ೪೮ ನಿಮಿಷಗಳ ಐದು ಸೆಟ್ಗಳ ಆಟ ಆಡಿ ಐದನೇ ಗ್ರ್ಯಾಂಡ್ ಸ್ಲ್ಯಾಮ್ ತನ್ನದಾಗಿಸಿಕೊಂಡರು. ಆ ವರ್ಷ ಕೂಡ ವಿಂಬಲ್ಡನ್ ಫೈನಲ್ನಲ್ಲಿ ಫೆಡರರ್ ಮತ್ತು ನಡಾಲ್ ಎದುರಾದರು; ಅದು ಪುರುಷರ ಸಿಂಗಲ್ಸ್ನ ಅದುವರೆಗಿನ ಅತಿ ದೀರ್ಘ ಆಟವಾಗಿತ್ತು. ಅಲ್ಲಿ ನಡಾಲ್ಗೆ ಜಯ ಲಭಿಸುವುದರೊಂದಿಗೆ ಬೋರ್ಗ್ (೧೯೮೦) ನಂತರ ಒಂದು ವರ್ಷ ಫ್ರೆಂಚ್ ಓಪನ್, ವಿಂಬಲ್ಡನ್ ಎರಡನ್ನೂ ಗೆದ್ದ ಆಟಗಾರನೆಂಬ ಹೆಸರು ನಡಾಲ್ಗೆ ಬಂತು. ಅದೇ ವರ್ಷ (೨೦೦೮) ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಪುರುಷರ ಸಿಂಗಲ್ಸ್ ಗೆದ್ದ ನಡಾಲ್ಗೆ ಚಿನ್ನದ ಪದಕವೂ ಬಂತು, ಮತ್ತು ಅದೇ ತಿಂಗಳು ಪುರುಷರ ಟೆನ್ನಿಸ್ ನಂಬರ್ ಒನ್ ಪಟ್ಟವನ್ನು ಫೆಡರರ್ ನಡಾಲ್ಗೆ ಬಿಟ್ಟುಕೊಡಬೇಕಾಯಿತು.
೨೦೦೯ರಲ್ಲಿ ನಡಾಲ್ಗೆ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಶಿಪ್ನ ಮೊದಲ ವಿಜಯ ಲಭಿಸಿತು. ಅಲ್ಲಿ ಐದು ಸೆಟ್ಗಳ ನಾಟಕೀಯ ಫೈನಲ್ ಪಂದ್ಯದಲ್ಲಿ ಸೋಲಿಸಿದ್ದು ಮತ್ತೆ ಅದೇ ಫೆಡರರನ್ನು. ಅದೇ ಮೇ ತಿಂಗಳಿನಲ್ಲಿ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ನಡಾಲ್ ಆ ಪಂದ್ಯದಲ್ಲಿ ನಿರಂತರ ಗೆಲವಿನ ದಾಖಲೆ ನಿರ್ಮಿಸಿದರು. ೨೦೦೯ರ ಟೆನ್ನಿಸ್ ಋತುವಿನ ಕೊನೆಯಲ್ಲಿ ನಡೆದ ಡೇವಿಸ್ ಕಪ್ ಫೈನಲ್ನಲ್ಲಿ ನಡಾಲ್ ಸ್ಪೈನ್ನ ಪೂರ್ಣ ಗೆಲವಿಗೆ ನೆರವಾದರು.
೨೦೧೦ರಲ್ಲಿ ನಡಾಲ್ ಫ್ರೆಂಚ್ ಓಪನ್ನ ಐದನೇ ಗೆಲವು ಸಾಧಿಸುವುದರೊಂದಿಗೆ ತನ್ನ ಪ್ರಾಬಲ್ಯವನ್ನು ಮುಂದುವರಿಸಿದರು; ಅದೊಂದು ಸುಲಭ ಜಯವಾಗಿತ್ತು. ಬಳಿಕ ಜುಲೈನಲ್ಲಿ ಅತ ಎರಡನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ಕೂಡ ಬಾಚಿಕೊಂಡರು. ಸೆಪ್ಟೆಂಬರ್ನಲ್ಲಿ ಯು.ಎಸ್. ಓಪನ್ ಚಾಂಪಿಯನ್ಶಿಪ್ನ್ನು ಮೊದಲ ಬಾರಿಗೆ ಗೆಲ್ಲುವುದರೊಂದಿಗೆ ಆ ಸಾಲಿನ ಎಲ್ಲ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ತನ್ನದಾಗಿಸಿಕೊಂಡರು.
ಜೊಕೋವಿಚ್ ಆಗಮನ
೨೦೧೧ರಲ್ಲಿ ನಡಾಲ್ಗೆ ಅವರ ವೃತ್ತಿಜೀವನದ ಆರನೇ ಫ್ರೆಂಚ್ ಓಪನ್ ಪ್ರಶಸ್ತಿ ಬಂತು; ಆಗಲೂ ಫೈನಲ್ನಲ್ಲಿ ಎದುರಾಗಿದ್ದವರು ರೋಜರ್ ಫೆಡರರ್. ಮುಂದಿನ ಮೂರು ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ಗಳಲ್ಲಿ ಇನ್ನೊಬ್ಬ ಮಹಾನ್ ಆಟಗಾರ ನೊವಾಕ್ ಜೊಕೋವಿಚ್ ಎದುರಾಗಿ ವಿಜಯವನ್ನು ತಮ್ಮದಾಗಿಸಿಕೊಂಡರು. ಆದರೆ ೨೦೧೨ರ ಫ್ರೆಂಚ್ ಓಪನ್ನಲ್ಲಿ ನಡಾಲ್ ಮೇಲುಗೈಗೆ ಭಂಗಬರಲಿಲ್ಲ. ಅಲ್ಲಿ ಜೊಕೋವಿಚ್ ಸೋತಾಗ ಫ್ರೆಂಚ್ ಓಪನ್ನಲ್ಲಿ ಬೋರ್ಗ್ ಹೆಸರಿನಲ್ಲಿದ್ದ ದಾಖಲೆ ಕೂಡ ಮುರಿಯಿತು. ೨೦೧೩ರಲ್ಲಿ ಮತ್ತೆ ಫ್ರೆಂಚ್ ಓಪನ್ ಗೆದ್ದಾಗ ನಡಾಲ್ ಆ ಪ್ರಶಸ್ತಿಯನ್ನು ಎಂಟು ಬಾರಿ ಗೆದ್ದ ಮೊದಲಿಗನಾದರು. ಮುಂದೆ ಅದೇ ವರ್ಷ ಯು.ಎಸ್. ಓಪನ್ ಸಿಂಗಲ್ಸ್ ಪ್ರಶಸ್ತಿಯನ್ನು ಎರಡನೇ ಸಲ ಗೆದ್ದದ್ದಾಯಿತು.
೨೦೧೪ರಲ್ಲಿ ಫ್ರೆಂಚ್ ಓಪನ್ನಲ್ಲಿ ಆತನಿಗೆ ಒಂಬತ್ತನೇ ಗ್ರ್ಯಾಂಡ್ ಸ್ಲ್ಯಾಮ್ ಲಭಿಸಿತಾದರೂ ಮುಂದೆ ಆ ವರ್ಷ ಇಡೀ ಗಾಯ-ನೋವುಗಳಲ್ಲೇ ಕಳೆಯಿತು. ಮತ್ತೆ ದೈಹಿಕ ಕ್ಷಮತೆಯನ್ನು ಗಳಿಸಿಕೊಳ್ಳುವ ಪ್ರಯತ್ನ ೨೦೧೫ರಲ್ಲೂ ಮುಂದುವರಿಯಿತು; ಮತ್ತು ಆ ವರ್ಷ ಯಾವುದೇ ಗ್ರ್ಯಾಂಡ್ ಸ್ಲ್ಯಾಮ್ ಸಿಗಲಿಲ್ಲ. ಹತ್ತು ವರ್ಷಗಳ ಅನಂತರ ಒಂದೇ ಒಂದು ಗ್ರ್ಯಾಂಡ್ ಸ್ಲ್ಯಾಮ್ ಸಿಗದೇ ಇದ್ದ ವರ್ಷವೆಂದರೆ ಇದು. ೨೦೧೬ರಲ್ಲಿ ಕೂಡ ಆ ಸ್ಥಿತಿ ಮುಂದುವರಿಯಿತು; ಯು.ಎಸ್. ಓಪನ್ನಲ್ಲಿ ಭಾಗವಹಿಸಿದಾಗ ನಾಲ್ಕನೇ ಸುತ್ತಿನಲ್ಲಿ ಸೋತು ಹೊರಬಂದದ್ದಾಯಿತು. ಆ ವರ್ಷದ ಒಂದೇ ಒಂದು ಸಮಾಧಾನಕರ ಸಂಗತಿಯೆಂದರೆ ರಿಯೊ ಡಿ ಜೆನೀರೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾದದ್ದು.
ಮೂರನೇ ವರ್ಷ ಎನ್ನುವಾಗ ೨೦೧೭ರಲ್ಲಿ ನಡಾಲ್ ಆಸ್ಟ್ರೇಲಿಯನ್ ಓಪನ್ನಲ್ಲಿ ಭಾಗವಹಿಸಿದರು; ಆದರೆ ಐದು ಸೆಟ್ಗಳ ರೋಮಾಂಚಕಾರಿ ಪಂದ್ಯದಲ್ಲಿ ಫೆಡರರ್ ಎದುರು ಸೋಲಬೇಕಾಯಿತು. ಆದರೆ ಅದೇ ವರ್ಷ ಜೂನ್ನಲ್ಲಿ ಅವರ ಹತ್ತನೇ ಫ್ರೆಂಚ್ ಓಪನ್ ಪ್ರಶಸ್ತಿ ಕೈಸೇರಿತು; ಗ್ರ್ಯಾಂಡ್ ಸ್ಲ್ಯಾಮ್ ಬೇಟೆಗೆ ಮರಳಿದಂತಾಯಿತು. ಮೂರು ತಿಂಗಳ ಅನಂತರ ಯು.ಎಸ್. ಓಪನ್ ಮೂರನೇ ಪ್ರಶಸ್ತಿ ಬಂತು. ೨೦೧೮ರ ಆಸ್ಟ್ರೇಲಿಯನ್ ಓಪನ್ನಲ್ಲಿ ಮತ್ತೆ ನೋವಿನ ಸಮಸ್ಯೆ ಬಾಧಿಸಿತು; ಅದರಿಂದಾಗಿ ಕ್ವಾರ್ಟರ್ ಫೈನಲ್ನಲ್ಲಿ ಹೊರಗೆ ಬರಬೇಕಾಯಿತು. ಆದರೆ ಬಹುಬೇಗ ಸುಧಾರಿಸಿಕೊಂಡು ವೃತ್ತಿಜೀವನದ ಇನ್ನೊಂದು ಫ್ರೆಂಚ್ ಓಪನ್ ಚಾಂಪಿಯನ್ಶಿಪ್ ಗೆದ್ದುಕೊಂಡರು; ಅಲ್ಲಿಗೆ ಅವರ ಗ್ರ್ಯಾಂಡ್ ಸ್ಲ್ಯಾಮ್ ೧೭ಕ್ಕೆ ಬಂದಿತ್ತು.
೨೦೧೯ರಲ್ಲಿ ಆಸ್ಟ್ರೇಲಿಯನ್ ಓಪನ್ನಲ್ಲಿ (ಫೈನಲ್) ಸೋಲಾದರೂ ಫ್ರೆಂಚ್ ಓಪನ್ನಲ್ಲಿ ಗೆಲವನ್ನು ಬಿಟ್ಟುಕೊಡಲಿಲ್ಲ; ಅದು ಅಲ್ಲಿ ೧೨ನೇ ಗಳಿಕೆಯಾಗಿತ್ತು. ಆ ವರ್ಷ ಯು.ಎಸ್. ಓಪನ್ ಸಿಂಗಲ್ಸ್ ಪ್ರಶಸ್ತಿಯೂ ಬಂತು; ಅಲ್ಲಿಗೆ ಗ್ರ್ಯಾಂಡ್ ಸ್ಲ್ಯಾಮ್ ಗಳಿಕೆ ೧೯ಕ್ಕೇರಿತು. ಆಗ ಫೆಡರರ್ ೨೦ರಲ್ಲಿದ್ದರು. ಮುಂದಿನ (೨೦೨೦) ವರ್ಷ ೧೩ನೇ ಫ್ರೆಂಚ್ ಓಪನ್ ಗೆಲ್ಲುವುದರೊಂದಿಗೆ ಫೆಡರರ್ಗೆ ಸಮಾನವಾಯಿತು. ಜುಲೈ ೨೦೨೧ರ ಜೊಕೋವಿಚ್ ಅದೇ ಮಟ್ಟಕ್ಕೆ ಬಂದರು.
ಗಾಯ–ನೋವು
೨೦೨೧ರ ಫ್ರೆಂಚ್ ಓಪನ್ ಸೆಮಿಫೈನಲ್ನಲ್ಲಿ ಸೋತು ಹೊರಬಂದ ನಡಾಲ್ ವರ್ಷದ ಬಹುತೇಕ ಎಲ್ಲ ಟೂರ್ನಮೆಂಟ್ಗಳಿಂದ ವಂಚಿತರಾದರು. ವಿಂಬಲ್ಡನ್, ಯು.ಎಸ್. ಓಪನ್ ಯಾವುದನ್ನೂ ಆಡಲಿಲ್ಲ; ಪಾದದ ನೋವೇ ಅದಕ್ಕೆ ಕಾರಣ. ೨೦೨೨ನ್ನು ಪ್ರವೇಶಿಸುವಾಗ ಆತನಿಗೆ ಹೆಚ್ಚಿನ ನಿರೀಕ್ಷೆಯೇನೂ ಇರಲಿಲ್ಲ. ಆದರೆ ವರ್ಷಾರಂಭದಲ್ಲೇ ಬಂದ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಶಿಪ್ ಈ ಆಟಗಾರನ ತಾಕತ್ತು ಏನೆಂಬುದನ್ನು ಮತ್ತೊಮ್ಮೆ ತೋರಿಸಿತು. ಅದು ಎರಡು ಸೆಟ್ ಸೋತ ಬಳಿಕ ನಿರಂತರ ಮೂರು ಸೆಟ್ಗಳಲ್ಲಿ ವಿಶ್ವ ನಂಬರ್ ೨ ಯುವ ಆಟಗಾರನನ್ನು ಮಣಿಸಿ ಪ್ರಶಸ್ತಿಗೆ ಕೈಯೊಡ್ಡಿದ್ದು. ಈಗ ಆತ ಎಲ್ಲ ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಕನಿಷ್ಠ ಎರಡು ಬಾರಿ ಗೆದ್ದಂತಾಗಿದೆ. ಅಗತ್ಯಕ್ಕೆ ತಕ್ಕಂತೆ ಆಟದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ನಡಾಲ್ ಇಡೀ ಜೀವನದಲ್ಲಿ ನನ್ನ ಸರ್ವ್ಗಳನ್ನು ಉತ್ತಮಪಡಿಸಲು ಪ್ರಯತ್ನಿಸುತ್ತಾ ಬಂದಿದ್ದೇನೆ ಎಂದೊಮ್ಮೆ ಹೇಳಿದ್ದರು.
ಇದು ಹಾರ್ಡ್ಕೋರ್ಟ್ನಲ್ಲಿ ಅವರ ೫೦೧ನೇ ಜಯ. ಫೆಡರರ್, ಜೊಕೋವಿಚ್, ಅಗಾಸ್ಸಿ ನಂತರದ ನಾಲ್ಕನೆಯ ಮತ್ತು ಕೊನೆಯವರಾಗಿ ಆ ಸಾಲಿಗೆ ಸೇರಿದ್ದಾರೆ; ಆವೆಮಣ್ಣಿನ ಅಂಗಳದಲ್ಲೇ ಅವರದ್ದು ಶೇಕಡವಾರು ಹೆಚ್ಚಿನ ಗೆಲವು. ಆಸ್ಟ್ರೇಲಿಯನ್ ಓಪನ್ ಫೈನಲ್ನಲ್ಲಿ ಎರಡು ಸೆಟ್ ಸೋತ ಅನಂತರ ಪುಟಿದೆದ್ದು ಟೂರ್ನಿಯನ್ನು ಗೆದ್ದುಕೊಂಡವರು (ಓಪನ್ ಇರಾದಲ್ಲಿ) ಯಾರೂ ಇಲ್ಲ. ಟ್ರೋಫಿ ಕೊಡುವ ಸಮಾರಂಭದಲ್ಲಿ ಕೂಡ ನಡಾಲ್ ನಾನು ಇದರಲ್ಲಿ ಭಾಗವಹಿಸುವ ಖಾತ್ರಿಯಿರಲಿಲ್ಲ; ಬರುವುದೇ ಅನಿಶ್ಚಿತವಾದ ಮೇಲೆ ದೊಡ್ಡ ಸಾಧನೆ ಮಾಡುವುದು ದೂರವೇ ಉಳಿಯಿತು ಎಂದು ಹೇಳಿದರು. ಅವರ ಮಾತಿನ ಅರ್ಥ ಸ್ಪಷ್ಟ. ಎಡ್ರಿನಲೈನ್ (ಸಂದರ್ಭಕ್ಕೆ ಅಣಿಗೊಳಿಸುವ ದೇಹದ ಶಕ್ತಿ) ಮತ್ತು ಇಚ್ಛಾಶಕ್ತಿ (ವಿಲ್ ಪವರ್)ಗಳೇ ಅವರನ್ನು ಪ್ರಶಸ್ತಿಯ ಪೀಠಕ್ಕೆ ತಂದು ನಿಲ್ಲಿಸಿದ್ದವು.
ಟೂರ್ನಿಗೆ ಮೊದಲು ಮಾತನಾಡುವಾಗ ಆತ ದೊಡ್ಡ ಪಂದ್ಯಗಳು ಯಾವುದೇ ಆಟಗಾರನಿಗಿಂತ ದೊಡ್ಡದಾದವು. ಆಟಗಾರರ ತಲೆಮಾರುಗಳು ಬರುತ್ತವೆ, ಹೋಗುತ್ತವೆ. ಆದರೆ ಆಟ ಹಾಗೆಯೇ ಇರುತ್ತದೆ, ಮುಂದುವರಿಯುತ್ತದೆ. ಅದೂ ಅಲ್ಲದೆ, ಈಗ ಜಗತ್ತನ್ನು ಬಾಧಿಸುತ್ತಿರುವ ಮಹಾಮಾರಿಗೆ (Pandemic)ಹೋಲಿಸಿದರೆ ಟೆನ್ನಿಸ್ಗೆ ಕೂಡ ಶೂನ್ಯ ಮಹತ್ತ್ವ ಎಂದು ಈ ಮಹಾನ್ ಆಟಗಾರ ಉದ್ಗರಿಸಿದರು. ಆ ಮೂಲಕ ಆತ ಜೊಕೋವಿಚ್ ಲಸಿಕೆ ಹಾಕಿಸಿಕೊಳ್ಳದೆ ಆಸ್ಟ್ರೇಲಿಯಕ್ಕೆ ಬಂದದ್ದು, ಅಲ್ಲಿ ವಿವಾದ ಉಂಟಾಗಿ ಆಡಲಾಗದೆ ಮರಳಿದ್ದರ ಬಗ್ಗೆ ಕೂಡ ಹೇಳಿದ್ದರೇನೋ!
ವಿನಯದ ಮೂರ್ತಿ
ಬೆನ್ನ ಹಿಂದೆ ಇಷ್ಟೆಲ್ಲ ಸಾಧನೆ ಇದ್ದರೂ, ಟೆನ್ನಿಸ್ನಲ್ಲಿ ಆತ ಜಗತ್ತು ಕಂಡ ಒಬ್ಬ ಅಸಾಮಾನ್ಯ ಜೀನಿಯಸ್ ಆಗಿದ್ದರೂ, ಅದರ ಭಾರವಿಲ್ಲದೆ ಸಾಮಾನ್ಯನಂತೆ ಮತ್ತು ವಿನಯದ ಮೂರ್ತಿಯಾಗಿ ಬದುಕಬಲ್ಲವರಾಗಿದ್ದಾರೆ. ೨೫ರ ಬಿಸಿರಕ್ತದ ತರುಣನಾಗಿದ್ದಾಗಲೂ ಅಷ್ಟೆ. ಆಟದ ಅಂಗಳದಲ್ಲಿ ಕಠಿಣ ಸ್ಪರ್ಧಾಳು ಇರಬಹುದು; ಆದರೆ ಹೊರಗೆ ಯಾವುದೇ ಬ್ಯಾಟ್ ಮುರಿದದ್ದಾಗಲಿ, ಲೈನ್ ಬಳಿ ನಿಂತ ಸಿಬ್ಬಂದಿ ಅಥವಾ ಅಂಪಾಯರ್ಗಳಿಗೆ ಬೈದದ್ದಾಗಲಿ, ಜಗಳ ತೆಗೆದದ್ದಾಗಲಿ ಇಲ್ಲ. ಅಂಗಳದ ಆಚೆಗೆ ಒಬ್ಬ ನಾಚಿಕೆಯ ವಿನಯಶೀಲ ಯುವಕ. ಸ್ಪೈನ್ನ ಮಲ್ಲೋರ್ಕಾದಲ್ಲಿ (೨೦೧೧) ಹೆತ್ತವರೊಂದಿಗೆ ವಾಸಿಸುತ್ತಿದ್ದ ಆತ ನಿಮಗೆ ಯಾರು ಇಷ್ಟ? ಎಂದು ಕೇಳಿದಾಗ, ನನ್ನ ಅಮ್ಮ, ಸಹೋದರಿ ಮತ್ತು ಗರ್ಲ್ಫ್ರೆಂಡ್ ಎಂದು ಉತ್ತರಿಸಿದ್ದರು.
“ಆವೆಮಣ್ಣಿನ ಅಂಗಳದ ಅತಿಶ್ರೇಷ್ಠ ಆಟಗಾರ ನೀವಲ್ಲವೆ? ಎಂದು ಮಾಧ್ಯಮದವರು ಕೇಳಿದಾಗ ಈತ ನೀವು ಅದೇಕೆ ಬೋರ್ಗ್ರನ್ನು ಮರೆಯುತ್ತೀರಿ?” ಎಂದು ಮರುಪ್ರಶ್ನೆ ಹಾಕಿದ್ದಿದೆ. “೨೪ ವರ್ಷದೊಳಗೇ ಇಷ್ಟೆಲ್ಲ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿದ್ದೀರಿ. ಫೆಡರರ್ ವಿರುದ್ಧ ಆ ಬಗೆಯ ದಾಖಲೆಯ ಜಯ ಗಳಿಸಿದ ನೀವು ಅತಿಶ್ರೇಷ್ಠರೇ” ಎಂದು ವಾದಿಸಿದರೆ “ಹಾಗೆಲ್ಲ ಮಾತನಾಡಬಾರದು” ಎಂದು ಪ್ರತಿಭಟಿಸಿದಾತ ನಡಾಲ್. ಮುಂದುವರಿದು, “ಅತಿಶ್ರೇಷ್ಠರು ಫೆಡರರ್ ಅವರೇ. ನಿಮಗೆ ಟೆನ್ನಿಸ್ ಏನೂ ಗೊತ್ತಿಲ್ಲ. ಅವರಿಗೆ ದೊರೆತ ಪ್ರಶಸ್ತಿಗಳು ಮತ್ತು ನನಗೆ ದೊರೆತ ಪ್ರಶಸ್ತಿಗಳನ್ನು ಹೋಲಿಸಿ ನೋಡಿ” ಎಂದು ಹೇಳಿದ್ದಿದೆ. ಒಂದು ದಿನ ನೀವು ಫೆಡರರ್ ಅವರನ್ನು ಮೀರಿಸುತ್ತೀರಿ ಎಂದಾಗ “ಮುಂದಿನ ಕಥೆ ಬೇಡ. ಅವರ ಬಳಿ ಇರುವ ಪ್ರಶಸ್ತಿಗಳನ್ನು ನೋಡಿ ಮಾತನಾಡಿ; ಅದೇ ಸತ್ಯ” ಎಂದು ಚರ್ಚೆಗೆ ತೆರೆ ಎಳೆದಿದ್ದರು! ಇಂತಹ ಮಾತನ್ನು ಎಷ್ಟು ಆಟಗಾರರು ಆಡಬಹುದು? ಶ್ರೇಷ್ಠ ಸಾಧನೆ ಇನ್ನು ಮುಂದೆ ಇದೆ ಎಂದು ಹೇಳುತ್ತಲೇ ಇದ್ದ ಆತ ತನ್ನ ಸಾಧನಾ ಪರ್ವವನ್ನು ಮುಂದುವರಿಸುತ್ತಲೇ ಹೋದರು. ವಿನಯ ಮತ್ತು ಉತ್ತಮಪಡಿಸುತ್ತಲೇ ಹೋಗುವುದು ನಡಾಲ್ ಧ್ಯೇಯವಾಕ್ಯ ಎನ್ನಬಹುದು. ಒಮ್ಮೆ ಆತ ಹೇಳಿದ್ದರು: “ನಾನು ಪ್ರತಿದಿನ ಪ್ರಾಕ್ಟೀಸಿಗೆ ಹೋಗುವುದು ಪ್ರಾಕ್ಟೀಸ್ ಮಾಡುವುದಕ್ಕಲ್ಲ; ಏನಾದರೂ ಕಲಿಯುವುದಕ್ಕೆ ಮತ್ತು ನನ್ನ ಮಟ್ಟವನ್ನು ಉತ್ತಮಪಡಿಸುವ ಸಲುವಾಗಿ ಪ್ರಾಕ್ಟೀಸಿಗೆ ಹೋಗುತ್ತೇನೆ.” ಹೊಸತು ಕಲಿಯುವುದು ಮತ್ತು ಗೆಲ್ಲುವುದು – ಇದೇ ಆತನ ಮುಂದಿರುವುದು; ಉಳಿದುದಕ್ಕೆ ಆತ ಕಿವುಡ. ಅನುಭವವೇ ಅಮೃತ ಅಲ್ಲವೆ?
ಅಭಿಮಾನಿಗಳ ಹರಕೆ
೨೦೧೫ರಿಂದ ಸುಮಾರು ಮೂರು ವರ್ಷ ಗಾಯ-ನೋವುಗಳು ಆತನನ್ನು ಬಾಧಿಸಿದವು. ೩೧ ವರ್ಷ ಆಗುವಾಗಲೇ ಈತ ತನ್ನ ಆಟದ ಕೊನೆಯ ಹಂತವನ್ನು ತಲಪಿದನಲ್ಲಾ ಎಂದು ಅಭಿಮಾನಿಗಳನ್ನು ನೋವು ಬಾಧಿಸುತ್ತಿತ್ತು. ಆಗ ಮೇಲೆದ್ದ ನಡಾಲ್ ೨೦೧೭ರ ಯು.ಎಸ್. ಓಪನ್ ಗೆದ್ದುದಲ್ಲದೆ ನಂಬರ್ ಒನ್ ಕೂಡ ಆದರು. ೨೦೨೨ರಲ್ಲಿ ಅದರ ಪುನರಾವರ್ತನೆ ಆಯಿತೆನ್ನಬಹುದು.
೨೦೧೭ರಲ್ಲಿ ಸಂದರ್ಶಕರೊಬ್ಬರು, ‘ನಂಬರ್ ೨ ಆಗಿದ್ದಾಗ ನಂಬರ್ ಒನ್ ಆಗಿರುವುದಕ್ಕಿಂತ ಆಡುವ ಹೊತ್ತಿನಲ್ಲಿ ಹೆಚ್ಚಿನ ಆತಂಕ ಇರುತ್ತದೆಯೆ? ಮುಖ್ಯವಾಗಿ ಬಹುತೇಕ ನಿಮಗಿಂತ ಮೇಲಿದ್ದ ಫೆಡರರ್ ಜೊತೆ ಆಡುವಾಗ ಹಾಗೆ ಅನ್ನಿಸುತ್ತದೆಯೆ?’ ಎನ್ನುವ ಪ್ರಶ್ನೆಗೆ ನಡಾಲ್ ‘ನಂಬರ್ ಒಂದು ಅಥವಾ ಎರಡು ಎಂಬುದರಲ್ಲಿ ಹೆಚ್ಚಿನ ವ್ಯತ್ಯಾಸ ಬರುವುದಿಲ್ಲ. ನಂಬರ್ ಒಂದರ ಸ್ಥಾನ ಉಳಿಸಿಕೊಳ್ಳುವುದು ಕಷ್ಟ ನಿಜ. ಫೆಡರರ್ ಯಾವಾಗಲೂ ನನ್ನ ಮುಖ್ಯ ಎದುರಾಳಿ ಆಗಿದ್ದರೂ ಕೂಡ ಈಗ ಜೊಕೋವಿಚ್ ಮತ್ತು ಆಂಡಿ ಮರ್ರೆ ಕೂಡ ಮುಂದೆ ಬಂದಿದ್ದಾರೆ’ ಎಂದು ಉತ್ತರಿಸಿದ್ದರು.
ಪ್ರಾಕ್ಟೀಸ್ ಇತ್ಯಾದಿ
ಪ್ರಾಕ್ಟೀಸ್ ವಿಧಾನದ ಬಗ್ಗೆ ಕೇಳಿದಾಗ, ‘ಆಟದ ಋತುವಿಗಿಂತ ಮೊದಲಾದರೆ ದೈಹಿಕ ಕಸರತ್ತು (ಜಿಮ್) ಜಾಸ್ತಿ ಇರುತ್ತದೆ; ಋತುವಿನ ಹೊತ್ತಿಗೆ ಅದನ್ನು ಹೆಚ್ಚು ಮಾಡದೆ ಆಟಕ್ಕೆ (ಟೆನ್ನಿಸ್) ಮಹತ್ತ್ವ ಕೊಡುತ್ತೇನೆ. ಟೂರ್ನಮೆಂಟ್ ಇರುವಾಗ ಏರೋಬಿಕ್ ರೀತಿಯ ಫಿಟ್ನೆಸ್ ಕೆಲಸ ಹೆಚ್ಚು ಮಾಡುತ್ತೇನೆ ಮತ್ತು ಅಂಗಳದಲ್ಲಿ ಆಡುತ್ತೇನೆ’ ಎಂದಿದ್ದರು. ಇನ್ನು ‘ಫ್ಲೆಕ್ಸಿಬಿಲಿಟಿ ತುಂಬ ಮುಖ್ಯ; ನಾನದನ್ನು ಪ್ರತಿದಿನ ಮಾಡುತ್ತೇನೆ; ಅದಕ್ಕೆ ನನಗೆ ನನ್ನ ಫಿಸಿಯೊ ಇದ್ದಾರೆ. ದೈಹಿಕ ತರಬೇತಿಗೆ ನಾನು ವರ್ಷ ಕಳೆದಂತೆ ತರಬೇತಿದಾರರನ್ನು ಬದಲಿಸುತ್ತಾ ಹೋಗಿಲ್ಲ; ಇದರಲ್ಲಿ ಪ್ರಾಯ ಏನೂ ವ್ಯತ್ಯಾಸ ತರುವುದಿಲ್ಲ ಎಂಬುದು ನನ್ನ ಅಭಿಪ್ರಾಯ’ ಎನ್ನುತ್ತಾರೆ, ನಡಾಲ್. “ನಿಮ್ಮ ಕೈಗಳು ಜನರನ್ನು ಅಷ್ಟೇಕೆ ಸೆಳೆಯುತ್ತವೆ?” ಎಂದು ಕೇಳಿದಾಗ, ‘ಇದು ತಮಾಷೆಯೇ ಸರಿ. ಇತರ ಹಲವು ಆಟಗಾರರನ್ನು ನೋಡಿದರೆ ಅವರು ನನಗಿಂತ ಫಿಟ್ ಆಗಿರುವುದನ್ನು ಗಮನಿಸಬಹುದು. ಬಹುಶಃ ನಾನು ಆಟವಾಡುವಾಗ ಸ್ಲೀವ್ಲೆಸ್ (ತೋಳಿಲ್ಲದ್ದು) ಧರಿಸುತ್ತಿದ್ದುದರಿಂದ ಹಾಗಾಯಿತೋ ಏನೋ. ಈಗ ನಾನು ತೋಳಿರುವ ಶರ್ಟ್ ಧರಿಸುತ್ತೇನೆ. ಇನ್ನೊಂದು ವಿಷಯವೆಂದರೆ ನನ್ನ ಎಡಗೈ ಬಲಗೈಗಿಂತ ಬಲಶಾಲಿಯಾಗಿದೆ; ಏಕೆಂದರೆ ನಾನು ಎಡಗೈ ಆಟಗಾರ; ಇದರಲ್ಲಿ ಟೆನ್ನಿಸ್ ಅಂಗಳವೇ ನನ್ನ ಜಿಮ್. ಕೈಗೆ ವಿಶೇಷವಾದ ವ್ಯಾಯಾಮವೇನೂ ಇಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಒಂದು ಬಲವಾದ ಹೊಡೆತದ ನಂತರ ಕೈ ತೋರಿಸಿ ಯಾರ ಮೇಲೂ ಯಾವುದೇ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ. ಇಲ್ಲಿ ಇರುವುದು ಓಟ (ರನ್ನಿಂಗ್), ವೇಗ ಮತ್ತು ಹೊಡೆತಗಳು; ನಾವು ಗಮನ ಕೊಡುವುದು ಅದಕ್ಕೆ -ಎಂದಿದ್ದರು.
ಒಂದು ಪಂದ್ಯದ ಬಳಿಕ ಮತ್ತೆ ಮೊದಲಿನಂತಾಗಲು ಏನು ಮಾಡುತ್ತೀರ? – ಎಂದು ಕೇಳಿದಾಗ, ‘ಅದಕ್ಕೆ ನಮ್ಮದೇ ಯಾವುದೋ ಒಂದು ವಿಧಾನ ಅನುಸರಿಸಬೇಕು. ಉತ್ತಮ ವಿಶ್ರಾಂತಿ ತುಂಬ ಮುಖ್ಯ. ಕೆಲವು ಸಲ ಎರಡು ಟೂರ್ನಿಗಳ ನಡುವೆ ಸಾಕಷ್ಟು ಸಮಯ ಇರುವುದಿಲ್ಲ. ಆದರೆ ಇದು ಎಲ್ಲರಿಗೂ ಇರುವ ಸಮಸ್ಯೆ’ ಎಂದು ನಡಾಲ್ ಉತ್ತರಿಸಿದರು. ಇನ್ನಷ್ಟು ಕಾಲ ಅಂಗಳದಲ್ಲಿ ಉಳಿಯುವ ಬಗ್ಗೆ ವಿಶೇಷ ಪ್ರಯತ್ನವೇನಾದರೂ ಇದೆಯೆ – ಎನ್ನುವ ಪ್ರಶ್ನೆಗೆ ಉತ್ತರಿಸಿ, ‘ಆ ನಿಟ್ಟಿನಲ್ಲಿ ಕೂಡ ಆಟವನ್ನು ಸುಧಾರಿಸಬೇಕು. ಮುಖ್ಯವಾಗಿ ಆದಷ್ಟು ಕೋರ್ಟ್ನ ಒಳಗೇ ಓಡಾಡುವ ಮೂಲಕ ಒಂದಷ್ಟು ಕಿಲೋಮೀಟರ್ ಓಟವನ್ನು ಉಳಿಸಬಹುದು; ಆ ಬಗ್ಗೆ ಪ್ರಯತ್ನಿಸುತ್ತೇನೆ’ ಎಂದರು. ಬಿಗಿಯಾದ ಡಯಟ್ ಅನುಸರಿಸುತ್ತೀರಾ? ಆಟದ ವೇಳೆ ಹೇಗೆ ಎಂದು ಕೇಳಿದಾಗ ಅವರ ಉತ್ತರ: “ಮುಂದಿನ ದಿನ ಆಟ ಇದೆಯಾ ಎಂಬುದನ್ನು ನೋಡಿಕೊಳ್ಳುತ್ತೇನೆ. ಸಾಮಾನ್ಯವಾಗಿ ಡಯಟ್ನ ಕಾಳಜಿ ಮಾಡುವುದಿಲ್ಲ; ಆಟದ ಹಿಂದಿನ ದಿನ ಮಾಂಸಾಹಾರ ಅಥವಾ ಹೊಟ್ಟೆಗೆ ಭಾರ ಎನಿಸುವಂಥದನ್ನು ತಿನ್ನುವುದಿಲ್ಲ. ಕೆಲವು ಸಲ ತುಂಬ ಚಾಕಲೇಟ್ ಅಥವಾ ಅಂತಹ ಬೇರೆ ಪದಾರ್ಥಗಳನ್ನು ತಿನ್ನುತ್ತೇನೆ. ಕ್ಯಾಲರಿಗಳನ್ನು ಸುಡುವುದಂತೂ ಇದ್ದೇ ಇದೆ.”
ಮೆಲ್ಬೊರ್ನ್ನಲ್ಲಿ ನಡಾಲ್ ೨೧ನೇ ಗ್ರ್ಯಾಂಡ್ ಸ್ಲ್ಯಾಮ್ ಜಯಿಸಬೇಕೆಂದು ಭಾರೀ ಬೆಂಬಲ ವ್ಯಕ್ತವಾದುದಕ್ಕೆ ಆಟಕ್ಕಿಂತ ಹೆಚ್ಚಿನ ಕಾರಣವೇನೋ ಇರಬಹುದಲ್ಲವೆ? ಇದ್ದರೆ ಅದು ಆತನ ವ್ಯಕ್ತಿತ್ವದಲ್ಲಿರಬಹುದು.