ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮಾರ್ಚ್ 2022 > ದ್ರೌಪದೀ  ಪಟ್ಟಾಭಿಷೇಕ ಪ್ರಸಂಗವು

ದ್ರೌಪದೀ  ಪಟ್ಟಾಭಿಷೇಕ ಪ್ರಸಂಗವು

ನಾನು ಮಣಿಪುಷ್ಪಕ, ಭಗವಾನ್ ವೇದವ್ಯಾಸರ ಸಾವಿರಾರು ಶಿಷ್ಯರಲ್ಲಿ ನಾನೂ ಒಬ್ಬ. ನಾನೀಗ ಬರೆಯಲು ಹೊರಟಿರುವ ಕಥೆ ಗುರುಗಳಿಗೆ ತಿಳಿಯಬಾರದು. ತಿಳಿದರೆ ಅವರೇನೂ ನನ್ನ ಮೇಲೆ ಕೋಪಿಸಿಕೊಳ್ಳುವುದಿಲ್ಲ, ಬೇಸರವನ್ನೂ ತೋರ್ಪಡಿಸುವುದಿಲ್ಲ. ಅವರ ವ್ಯಕ್ತಿತ್ವವೇ ಅಂತಹದು, ಅವರ ಕೃತಿಯಂತೆಯೇ ಅಗಾಧವಾದುದು. ಸುಮ್ಮನೆ ಭಗವಾನ್ ಎಂದು ಕರೆಸಿಕೊಂಡವರಲ್ಲ ಅವರು. ನಿಜಕ್ಕೂ ಅವರು ಮನುಷ್ಯರೂಪದ ಭಗವಾನ್. ಅಲ್ಲದೆ ಹೋದರೆ ಜೀವಮಾನವಿಡೀ ಕುಳಿತರೂ ನಮ್ಮಂತಹ ಸಾಮಾನ್ಯರು ಒಂದು ಭಾಗವನ್ನೂ ಓದಿ ಜೀರ್ಣಿಸಿಕೊಳ್ಳಲಾಗದ ಅಪೌರುಷೇಯವಾದ ವೇದಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಅವುಗಳನ್ನು ವಿಭಜಿಸುವುದೆಂದರೆ ಮನುಷ್ಯಮಾತ್ರದವರು ಮಾಡಬಲ್ಲ ಕೆಲಸವೇ? ಅವರನ್ನು ಮೊದಲ ಸಲ ನೋಡಿದಾಗಲೇ ಎಂತಹ ದೈವಿಕವಾದ ಕಂಪನಗಳ ಅನುಭೂತಿಯಾಗಿತ್ತು. ಅವರ ಆಶ್ರಮ ಸೇರಿ ಪಶುಪಾಲನೆ, ವ್ಯವಸಾಯದಲ್ಲಿ ನಿರತನಾಗಿ ಮೂರು ತಿಂಗಳಾದ ನಂತರ ನನಗೆ ಕರೆ ಕಳುಹಿಸಿದ್ದರು. ಅಂಜುತ್ತಲೇ ಆಶ್ರಮದ ಕೇಂದ್ರಭಾಗದಲ್ಲಿದ್ದ ಅಶ್ವತ್ಥವೃಕ್ಷದ ಬುಡದಲ್ಲಿ ಕೃಷ್ಣಾಜಿನದ ಮೇಲೆ ಕುಳಿತಿದ್ದ ಅವರ ಮುಂದೆ ಕೈ ಮುಗಿದು ತಲೆತಗ್ಗಿಸಿ ನಿಂತೆ. “ಮಗೂ, ನಿನ್ನ ಹೆಸರೇನು?”, ಸಿಡಿಲಿನಂತೆ ಗಂಭೀರವಾದ ಆದರೆ ಕಾಠಿಣ್ಯವಿಲ್ಲದ ಕರುಣಾಪೂರ್ಣವಾದ ಧ್ವನಿ. ತಲೆಯೆತ್ತಿ ನೋಡಿದೆ. ಗಾಢವಾದ ಕೃಷ್ಣವರ್ಣ, ಎದೆಯ ಮೇಲೆ ಇಳಿಬಿದ್ದ ಶ್ವೇತ ದುಕೂಲದಂತಹ ಗಡ್ಡ, ಪದ್ಮಾಸನದ ಮೇಲೆ ಸ್ಥಿತವಾದ ಪರ್ವತಶಿಖರದಂತಹ ನೀಳ ಕಾಯ, ಮುಖದ ಮೇಲೆ ನೆಲೆ ನಿಂತ ದೈವೀ ತೇಜಸ್ಸು, ಅಗಾಧವಾದ ಜ್ಞಾನಸಂಪತ್ತನ್ನು ಕುಡಿದಿದ್ದ ಕಣ್ಣುಗಳಲ್ಲಿ ಇನ್ನೂ ಇಂಗದ ಬಾಯಾರಿಕೆ, ನಿರ್ಲಕ್ಷ್ಯಕ್ಕೆ ತುತ್ತಾಗಿ ಕೃಶವಾಗಿದ್ದರೂ ಆರೋಗ್ಯಪೂರ್ಣವಾದ ಶರೀರ, ಯಾವ ಭಾವವಿಕಾರಕ್ಕೂ ಒಳಗಾಗದ ನಿರ್ಲಿಪ್ತ ಮುಖಭಾವ. ಇಂತಹ ಅಲೌಕಿಕ ತೇಜಸ್ಸನ್ನು ನೋಡಿ ಕೃತಕೃತ್ಯಾರ್ಥರಾಗುವ ಬದಲು ಅದೇಕೆ ಬೆದರಿದರೋ ಅಂಬಿಕೆ, ಅಂಬಾಲಿಕೆಯರು! ಉಗುಳು ನುಂಗುತ್ತ “ನಾನು ಮಣಿಪುಷ್ಪಕ, ನಿಮ್ಮ ಶಿಷ್ಯ ಸುಘೋಷ ಮುನಿಗಳ ಜ್ಯೇಷ್ಠ ಪುತ್ರ” ಎಂದು ಉತ್ತರಿಸಿ ಸಂತೋಷ, ಅಚ್ಚರಿ ಅಥವಾ ಮಮತೆಯ ಭಾವವನ್ನು ಅವರ ಮುಖದಲ್ಲಿ ಹುಡುಕಲು ಪ್ರಯತ್ನಿಸಿದೆ. ಉಹೂಂ, ಯಾವ ಭಾವವೂ ಇಲ್ಲ, ಅದೇ ನಿರ್ಲಿಪ್ತತೆ, ಐದು ಕ್ಷಣಗಳ ಮೌನ. “ಮಗೂ, ನಿನಗೇನು ಗೊತ್ತು?” ಮತ್ತೊಂದು ಸಿಡಿಲು! ನಾನು ತಂದೆಯ ಮುಖಾಂತರ ಋಗ್ವೇದ ಮತ್ತು ಉಪನಿಷತ್ತುಗಳನ್ನು ಅಧ್ಯಯನ ಮಾಡಿದ್ದೇನೆ ಎಂದು ಉತ್ತರಿಸಿದೆ.

“ಹಾಗಾದರೆ ನನ್ನ ಪ್ರಶ್ನೆಗೆ ಉತ್ತರಿಸುವೆಯಾ?”

“ಅವಶ್ಯ ಗುರುದೇವ.”

“ಕಣ್ಣು ಎಂದರೇನು?”

“ಯಾವ ಇಂದ್ರಿಯದ ಮುಖಾಂತರ ಲೌಕಿಕವಾದ ಭಾವಲೋಕದ ಪರಿಧಿಯೊಳಗೆ ಬಂದ ಅನುಭವಗಳನ್ನು ದೃಶ್ಯ ರೂಪದಲ್ಲಿ ಗ್ರಹಿಸುತ್ತೇವೆಯೋ ಆ ಇಂದ್ರಿಯವೇ ಕಣ್ಣು.”

“ಕಿವಿ ಎಂದರೇನು?”

“ಕೇವಲ ದೃಶ್ಯರೂಪದಲ್ಲಿ ಗ್ರಹಿಸಿದ ಅನುಭವ ಅಪೂರ್ಣವಾಗುವುದರಿಂದ ದೃಶ್ಯದೊಂದಿಗೆ ಮಿಳಿತವಾದ ಶಬ್ದಗಳನ್ನು ಗ್ರಹಿಸಿ ತನ್ಮೂಲಕ ಆ ಅನುಭವವನ್ನು ಪೂರ್ಣಗೊಳಿಸುವ ಇಂದ್ರಿಯವೇ ಕಿವಿ.”

“ನಾಲಗೆ ಎಂದರೇನು?”

“ಕಣ್ಣು ಮತ್ತು ಕಿವಿಗಳ ಮೂಲಕ ದೊರಕಿದ ಅನುಭವವನ್ನು ಅಭಿವ್ಯಕ್ತಿಸುವ ಮಾಧ್ಯಮ ನಾಲಗೆ.”

“ಮಗೂ, ಇನ್ನೂ ಮೂರು ತಿಂಗಳು ಪಶುಪಾಲನೆ ಮಾಡು, ಜೊತೆಗೆ ಇನ್ನಷ್ಟು ಅಧ್ಯಯನದಲ್ಲಿ ನಿರತನಾಗು. ಮೂರು ತಿಂಗಳ ನಂತರ ನಾನು ನಿನ್ನನ್ನು ಸಂದರ್ಶಿಸುತ್ತೇನೆ.”

“ಅಪ್ಪಣೆ ಗುರುದೇವ.”

ನನ್ನ ಅಭಿಮಾನಕ್ಕೆ ಮೊದಲ ಪೆಟ್ಟು ಬಿತ್ತು. ಮತ್ತೆ ಮೂರು ತಿಂಗಳು ಹಗಲಿನಲ್ಲಿ ಪಶುಪಾಲನೆ, ಇರುಳಿನಲ್ಲಿ ಅಧ್ಯಯನ. ಮೂರು ತಿಂಗಳ ನಂತರ ಗುರುಗಳಿಂದ ಕರೆ ಬಂತು.

“ಮಗೂ, ಈಗ ಹೇಳು, ಕಣ್ಣು ಎಂದರೇನು?”

“ಗೊತ್ತಿಲ್ಲ, ನೀವೇ ತಿಳಿಸಿ ಗುರುದೇವ.”

“ಕಣ್ಣು ಎಂದರೆ ಕಣ್ಣಿನ ಕಣ್ಣು, ಕಿವಿ ಎಂದರೆ ಕಿವಿಯ ಕಿವಿ, ನಾಲಗೆ ಎಂದರೆ ನಾಲಗೆಯ ನಾಲಗೆ. ಜ್ಞಾನಿಯಾದವನಿಗೆ ಕಣ್ಣುಗಳಿದ್ದರೆ ಸಾಲದು, ಕಣ್ಣುಗಳಿಗೂ ಕಣ್ಣುಗಳು ಇರಬೇಕು. ಅರ್ಥವಾಯಿತೇನು?”

“ಇಲ್ಲ.”

“ಈಗ ಹೇಳು, ನಿನಗೇನು ಗೊತ್ತಿದೆ?”

“ನನಗೇನೂ ಗೊತ್ತಿಲ್ಲ, ಗುರುದೇವ.”

“ನನಗೂ ಏನೂ ಗೊತ್ತಿಲ್ಲ. ನಾವೆಲ್ಲರೂ ಸೇರಿ ತಪಸ್ಸಿನ ಮೂಲಕ ಬ್ರಹ್ಮವಸ್ತುವನ್ನು ಅರಿಯುವ ಪ್ರಯತ್ನ ಮಾಡೋಣವೆ?”

ನನ್ನ ಅಹಂಕಾರವೆಲ್ಲ ಇಳಿದುಹೋಯಿತು, ಲಜ್ಜೆಯಿಂದ ತಲೆ ತಗ್ಗಿಸಿ ನಿಂತೆ.

“ಇವತ್ತಿನಿಂದ ನೀನು ಈ ಆಶ್ರಮದ ವಿದ್ಯಾರ್ಥಿ.”

ಅವತ್ತಿನಿಂದ ಆರಂಭವಾಯಿತು ನನ್ನ ನಿಜವಾದ ಆಶ್ರಮವಾಸಿಕ ವಿದ್ಯಾಭ್ಯಾಸ. ವೇದಾಂಗ-ಪುರಾಣ-ಮಹಾಕಾವ್ಯಗಳ ಅಧ್ಯಯನ, ಅವುಗಳ ಸಾರವನ್ನು ತಿಳಿಸುವ ಉಪನ್ಯಾಸಗಳು, ಧರ್ಮ ಅಧರ್ಮಗಳ ಜಿಜ್ಞಾಸೆಗಳನ್ನು ಅವಲೋಕಿಸುವ ಗೋಷ್ಠಿಗಳಲ್ಲಿ ನನ್ನ ದಿನಗಳು ಕಳೆದುಹೋಗುತ್ತಿದ್ದವು. ವಾರಕ್ಕೊಮ್ಮೆ ಭಗವಾನ್ ವೇದವ್ಯಾಸರು ಪ್ರವಚನ ನೀಡುತ್ತಿದ್ದರು. ಅವರ ಉಳಿದ ಸಮಯವೆಲ್ಲ ಭರತ ವಂಶದ ಚರಿತ್ರೆಯನ್ನು ತಿಳಿಸುವ ಜಯ ಎನ್ನುವ ಕೃತಿಯ ರಚನೆಗೆ ಮೀಸಲು. ಬ್ರಹ್ಮನಿಂದ ಮೊದಲ್ಗೊಂಡು, ಬ್ರಹ್ಮನ ಮಾನಸಪುತ್ರ ಅತ್ರಿ, ಅತ್ರಿ ಅನಸೂಯರಿಗೆ ಜನಿಸಿದ ಚಂದ್ರ, ಚಂದ್ರ ರೋಹಿಣಿಯರ ಮಗ ಬುಧ, ಬುಧ ಮತ್ತು ಇಳಾದೇವಿಗೆ ಜನಿಸಿದ ಪುರೂರವ, ಪುರೂರವನ ನಂತರ ಸಿಂಹಾಸನವೇರಿದ ಅನೇಕರಾದ ಆಯುಃ, ನಹುಷ, ಯಯಾತಿ, ಪುರು, ದುಷ್ಯಂತ, ಭರತ, ಪ್ರತೀಪ, ಶಂತನು, ಚಿತ್ರಾಂಗದ, ವಿಚಿತ್ರವೀರ್ಯ, ಪಾಂಡು, ಧೃತರಾಷ್ಟ್ರರವರೆಗಿನ ಚಂದ್ರವಂಶದ ದೊರೆಗಳ ಇತಿಹಾಸವೇ ಒಂದು ತೂಕವಾದರೆ, ಸಿಂಹಾಸನಕ್ಕಾಗಿ ಪಾಂಡುಪುತ್ರರು ಮತ್ತು ಧೃತರಾಷ್ಟ್ರಪುತ್ರರ ನಡುವೆ ನಡೆಯುತ್ತಿರುವ ಘರ್ಷಣೆ ಅದರ ಸಮತೂಕಕ್ಕೆ ನಿಲ್ಲುತ್ತದೆ. ತಮ್ಮ ಕಾಲದಲ್ಲೇ ನಡೆಯುತ್ತಿರುವ ಈ ಘಟನೆಗಳನ್ನು ವೇದವ್ಯಾಸರು ಸ್ಥೂಲವಾಗಿ ಮತ್ತು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಯಾವ ಪೂರ್ವಗ್ರಹಕ್ಕೂ ಸಿಲುಕದೆ ಎಲ್ಲವನ್ನೂ ಯಥಾವತ್ ದಾಖಲಿಸುತ್ತಿದ್ದಾರೆ, ತಾವೇ ರಚಿಸುತ್ತಿರುವ ಕೃತಿಯಲ್ಲಿನ ಪಾತ್ರಗಳೊಂದಿಗೆ ಮುಖಾಮುಖಿಯಾಗಿದ್ದಾರೆ, ಹಲವು ಮಹತ್ತರ ಘಟನೆಗಳಲ್ಲಿ ತಾವೇ ಪಾತ್ರವಾಗಿ ಭಾಗವಹಿಸಿದ್ದಾರೆ.

* * *

ಅವತ್ತು ಆಶ್ರಮಕ್ಕೆ ಯುಧಿಷ್ಠಿರ ಬಂದಿದ್ದ. ಯುದ್ಧಾರಂಭಗೊಳ್ಳಲು ಇನ್ನು ಕೇವಲ ಒಂದು ದಿನವಿತ್ತು. ಹನ್ನೆರಡು ವರ್ಷ ಅರಣ್ಯದಲ್ಲಿ ಕಳೆದು ಬಂದು, ಒಂದು ವರ್ಷದಲ್ಲಿನ ಅಜ್ಞಾತವಾಸದಲ್ಲಿ ದಾಸ್ಯಜೀವನ ನಡೆಸಿದ್ದರೂ ಮುಖದ ಮೇಲಿನ ರಾಜಕಳೆ ಒಂದಿನಿತೂ ಮಾಸಿರಲಿಲ್ಲ. ಬಂದವನೇ ತನ್ನೊಂದಿಗೆ ತಂದಿದ್ದ ಅಪಾರವಾದ ಗೋಸಂಪತ್ತನ್ನು ಅರ್ಪಿಸಿ ಗುರುದೇವರ ಪಾದಗಳ ಮೇಲೆರಗಿದ. ಗುರುಗಳು ಅದೇ ನಿರ್ಲಿಪ್ತ ಮುಖಭಾವದಿಂದ ಆತನ ತಲೆಯ ಮೇಲೆ ಕೈಯಿರಿಸಿದರು.

ಆತಂಕದ ಭಾವದಲ್ಲಿಯೇ ಮಾತಿಗಾರಂಭಿಸಿದ:

“ಪೂಜ್ಯರೇ, ಈ ಯುದ್ಧದ ಫಲಿತಾಂಶ?”

“ನಿಶ್ಚಿಂತೆಯಿಂದಿರು, ಧರ್ಮಜ! ಎಲ್ಲಿ ಧರ್ಮವಿದೆಯೋ ಅಲ್ಲಿ ವಿಜಯ ನಿಶ್ಚಿತ. ಮತ್ತು ನೀನು ಸಾಕ್ಷಾತ್ ಧರ್ಮದ ಪ್ರತಿರೂಪವೇ ಇದ್ದೀಯೆ!”

ಮುಖದಲ್ಲಿ ದಟ್ಟೈಸಿದ್ದ ಆತಂಕದ ಮೋಡಗಳು ಮೆಲ್ಲನೆ ಚದುರತೊಡಗಿದವು. ನಿರಾಳನಾದ ಯುಧಿಷ್ಠಿರ ಮತ್ತೊಮ್ಮೆ ಗುರುಗಳ ಪಾದಗಳಿಗೆ ವಂದಿಸಿ ತನ್ನ ಪರಿವಾರದೊಂದಿಗೆ ನಿರ್ಗಮಿಸಿದ. ಗುರುಗಳ ಮಾತಿನಿಂದ ಯುಧಿಷ್ಠಿರನ ಗೊಂದಲಗಳು ಬಗೆಹರಿದರೂ ನನ್ನಲ್ಲಿಯೇ ಗೊಂದಲಗಳು ಆರಂಭವಾದವು. ಶಿಷ್ಯರ ಅಪಾರ ಸಂದಣಿಯ ನಡುವೆಯೂ ನನ್ನ ಮನಃಸ್ಥಿತಿಯನ್ನು ನಿಚ್ಚಳವಾಗಿ ಗುರುತಿಸಿದ ಗುರುಗಳು ಸನ್ನೆಯಿಂದಲೇ ಬಳಿಗೆ ಕರೆದು “ಮಗೂ ಮಣಿಪುಷ್ಪಕ, ಸಂದೇಹದಿಂದ ತೊಳಲಾಡಬೇಡ. ಯಾವುದೋ ಪ್ರಶ್ನೆ ನಿನ್ನ ಒಳಮನಸ್ಸನ್ನು ತಿನ್ನುತ್ತಿದೆ, ನಿಸ್ಸಂಕೋಚವಾಗಿ ಕೇಳು” ಎಂದರು.

“ಗುರುದೇವ, ಕೌರವರ ಬಳಿ ಹನ್ನೊಂದು ಅಕ್ಷೌಹಿಣಿ ಸೈನ್ಯವಿದೆ, ಪಾಂಡವರ ಬಳಿಯಾದರೋ ಕೇವಲ ಏಳು ಅಕ್ಷೌಹಿಣಿ ಸೈನ್ಯ. ಅದೂ ಅಲ್ಲದೆ ಕುರುಸೇನೆಯಲ್ಲಿ ಅಜೇಯರಾದ ಭೀಷ್ಮ ಪಿತಾಮಹ, ಮಹಾನ್ ಧನುರ್ಧರರಾದ ದ್ರೋಣಾಚಾರ್ಯರು, ಮಹಾರಥಿ ಕರ್ಣ, ಮಹಾಬಲ ಶಲ್ಯ, ಪರಾಕ್ರಮಿಗಳಾದ ಶತಕೌರವರು, ಅಶ್ವತ್ಥಾಮ, ಸಂಶಪ್ತಕರಿದ್ದಾರೆ. ಸುರನದೀಸುತನು ಇಚ್ಛಾಮರಣಿಯಾಗಿದ್ದಾನೆ, ವಸುಷೇಣನು ಎದೆಯಲ್ಲಿಯೇ ಅಮೃತಕಲಶವುಳ್ಳವನು, ಅಶ್ವತ್ಥಾಮನಾದರೋ ಚಿರಂಜೀವಿ. ಯುದ್ಧದ ಕುರಿತು ಕನಿಷ್ಠ ಜ್ಞಾನವಿರುವವರನ್ನು ಕೇಳಿದರೂ ಕೌರವರ ವಿಜಯ ನಿಶ್ಚಿತ ಎಂದೇ ಹೇಳುತ್ತಾರೆ. ಇದೆಲ್ಲವೂ ನಿಮಗೆ ತಿಳಿದಿರುವ ವಿಷಯಗಳಲ್ಲವೇ ಗುರುದೇವ? ಹೀಗಿದ್ದರೂ ನೀವೇಕೆ ಯುಧಿಷ್ಠಿರನಿಗೆ ಅತಾರ್ಕಿಕವಾದ ಭರವಸೆಯನ್ನು ನೀಡಿದಿರಿ?”

“ಮಗೂ, ನೀನು ಎತ್ತಿರುವ ಪ್ರಶ್ನೆ ಸಕಾರಣವಾದದ್ದೇ. ಆದರೆ ಮಹಾಭಾರತಯುದ್ಧ ಎಂದೋ ಮುಗಿದುಹೋಗಿ ಜಯಾಪಜಯಗಳು ನಿಶ್ಚಯವಾಗಿವೆ. ಮುಂದೆ ಕುರುಕ್ಷೇತ್ರದಲ್ಲಿ ನಡೆಯುವ ಸಮರದ ವಿಜಯಿಯನ್ನು ಔಪಚಾರಿಕವಾಗಿ ಲೌಕಿಕ ಜಗತ್ತಿಗೆ ಉದ್ಘೋಷ ಮಾಡುವ ಕೆಲಸವಷ್ಟೇ.”

“ಏನು, ಕುರುಕ್ಷೇತ್ರ ಯುದ್ಧ ಮುಗಿದುಹೋಗಿದೆಯೆ?”

“ಮಗೂ, ಜಗತ್ತಿನ ಪ್ರತಿಯೊಂದು ಚರಾಚರ ವಸ್ತುವೂ ದ್ವಂದ್ವಾತ್ಮಕವಾದ ಶಕ್ತಿಗಳಿಂದ ನಿರ್ಮಿತವಾಗಿದೆ. ದ್ವಂದ್ವವಿಲ್ಲದಿರುತ್ತಿದ್ದರೆ ಜಗತ್ತೇ ಸೃಷ್ಠಿಯಾಗುತ್ತಿರಲಿಲ್ಲ. ಉದಾಹರಣೆಗೆ ಪುರುಷ-ಪ್ರಕೃತಿ, ಗಂಡು-ಹೆಣ್ಣು, ಸುಖ-ದುಃಖ, ಹುಟ್ಟು-ಸಾವು, ಜ್ಯೋತಿ-ತಮಸ್ಸು, ಹಗಲು-ರಾತ್ರಿ ಇತ್ಯಾದಿ. ಪರಸ್ಪರ ವಿರುದ್ಧ ಧ್ರುವಗಳಲ್ಲಿ ನಿಂತ ಎರಡು ಭಿನ್ನ ಶಕ್ತಿಗಳ ಸೆಳೆತಗಳು ಎಲ್ಲಿಯವರೆಗೆ ಸಕ್ರಿಯವಾಗಿರುತ್ತವೆಯೋ, ಅಲ್ಲಿಯವರೆಗೆ ಜಗತ್ತಿನಲ್ಲಿ ಜೀವಂತಿಕೆಯಿರುತ್ತದೆ. ಅದ್ವೈತವಾಗಿದ್ದ ಪರಬ್ರಹ್ಮ ಎಂಬ ಮೂಲತತ್ತ್ವವೇ ಪುರುಷ ಎಂಬ ಚೈತನ್ಯವೂ, ಪ್ರಕೃತಿ ಎನ್ನುವ ಜಡವೂ ಆಗಿ ಒಡೆಯಿತು. ಪುರುಷ ಮತ್ತು ಪ್ರಕೃತಿಯರ ಅಲೌಕಿಕ ಸಂಯೋಗದಿಂದ ಜಗತ್ತು ಉತ್ಪತ್ತಿಯಾಗಿದೆ. ಸುಖ ದುಃಖಗಳೆಂಬ ವಿರೋಧಭಾವಗಳ ಅನುಭವಗಳ ಸಂಘಟನೆಯಿಂದಾಗಿಯೇ ಮನುಷ್ಯನು ಪ್ರಬುದ್ಧನಾಗುತ್ತಾನೆ. ಹುಟ್ಟಿದವನಿಗೆ ನಿಶ್ಚಿತವಾದುದು ಸಾವು. ಹಗಲನ್ನು ರಾತ್ರಿ ಹಿಂಬಾಲಿಸುತ್ತದೆ. ಹಾಗೆಯೇ ಪ್ರತಿ ಮನುಷ್ಯನ ಎದೆಯೊಳಗೂ ಧರ್ಮಾಧರ್ಮಗಳ ಸಂಘರ್ಷ ನಡೆಯುತ್ತಿರುತ್ತದೆ. ವ್ಯಕ್ತಿಯ ಅಂತಃಸಾಕ್ಷಿಯೇ ಕುರುಕ್ಷೇತ್ರ ಯುದ್ಧಭೂಮಿ. ಅಲ್ಲಿ ಧರ್ಮ ಒಂದು ಪಕ್ಷವಾದರೆ ಅಧರ್ಮ ಇನ್ನೊಂದು ಪಕ್ಷ. ಲೌಕಿಕವಾದ ವ್ಯಾಮೋಹಗಳು ಮನಸ್ಸನ್ನು ಅಧರ್ಮದೆಡೆಗೆ ಸೆಳೆದರೆ, ಅಲೌಕಿಕವಾದ ಔನ್ನತ್ಯದ ಬಯಕೆ ಅದೇ ಮನಸ್ಸನ್ನು ಧರ್ಮದೆಡೆಗೆ ಆಕರ್ಷಿಸುತ್ತದೆ. ಧಾರ್ಮಿಕನ ಮನಸ್ಸನ್ನು ಕೂಡಾ ಕ್ಷಣಮಾತ್ರವಾದರೂ ಅಧಾರ್ಮಿಕ ವಿಕೃತಿಗಳು ಆಕ್ರಮಿಸಿರುತ್ತವೆ, ಅಂತೆಯೇ ಪರಮ ದುಷ್ಟನ ಎದೆಯ ಆಳದಲ್ಲೆಲ್ಲೋ ಧರ್ಮ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿರುತ್ತದೆ. ಕತ್ತಲೆಯನ್ನು ಬೆಳಕು ಬೆಳಗುತ್ತದೆ, ಕತ್ತಲೆಯೇ ಇರದಿದ್ದರೆ ಬೆಳಕು ಯಾವುದನ್ನು ಬೆಳಗುತ್ತಿತ್ತು ಮತ್ತು ಅದನ್ನು ಬೆಳಕು ಎಂದೇಕೆ ಕರೆಯುತ್ತಿದ್ದೆವು? ಹಾಗೆಯೇ ನಮ್ಮೆಲ್ಲರೊಳಗೂ ಅಧರ್ಮ ಇರುವುದರಿಂದಲೇ ಧರ್ಮವನ್ನು ಗುರುತಿಸಬಲ್ಲೆವು, ಅಧರ್ಮದ ವಜ್ರಶೃಂಖಲೆಯಲ್ಲಿ ಬಂಧಿಸಲ್ಪಟ್ಟ ಆತ್ಮವು ಧರ್ಮವನ್ನು ಆಚರಿಸುವ ಮೂಲಕ ಬಿಡುಗಡೆಯ ಆನಂದವನ್ನು ಅನುಭವಿಸಬಲ್ಲದು. ನಾಳೆ ಕುರುಕ್ಷೇತ್ರದಲ್ಲಿ ಆರಂಭವಾಗಲಿರುವ ಬಾಹ್ಯ ಸಂಘರ್ಷಕ್ಕಿಂತಲೂ ನಿರ್ಣಾಯಕವಾದುದು ಮಹಾಭಾರತದ ಪಾತ್ರಗಳ ಒಳಗೆ ನಡೆದುಹೋಗಿರುವ, ಈಗಲೂ ನಡೆಯುತ್ತಿರುವ, ಮುಂದೆಯೂ ನಡೆಯಲಿರುವ ಧರ್ಮಾಧರ್ಮಗಳ ನಡುವಿನದು ಆ ಆಂತರಿಕ ಸಂಘರ್ಷ. ದ್ರೌಪದಿಯ ವಸ್ತ್ರಾಪಹರಣವಾದಾಗ ಭೀಷ್ಮರ ಎದೆಯೊಳಗೆ ನಡೆದಿದ್ದು ಇದೇ ಸಂಘರ್ಷ. ಏಕಲವ್ಯನ ಹೆಬ್ಬೆರಳು ಪಡೆಯುವಾಗ ದ್ರೋಣರ ಮನಸ್ಸಿನೊಳಗೂ ನಡೆದಿದ್ದು ಇದೇ ಸಂಘರ್ಷ, ಕೃಷ್ಣನಿಂದ ಜನ್ಮರಹಸ್ಯ ತಿಳಿದಾಗ ಕರ್ಣನೊಳಗೆ ನಡೆದಿದ್ದ ಸಂಘರ್ಷವೂ ಇದುವೇ. ಮಹಾಭಾರತದ ಯಾವ ಪಾತ್ರವೂ ಈ ಸಂಘರ್ಷದಿಂದ ತಪ್ಪಿಸಿಕೊಂಡಿಲ್ಲ. ಈ ಭಿನ್ನ ಸೆಳೆತಗಳ ಆಕರ್ಷಣೆಯಲ್ಲಿ ಧರ್ಮದೆಡೆಗೆ ಆಕರ್ಷಿತರಾದವರು ವಿಜಯಿಗಳಾಗಿದ್ದಾರೆ, ಅಧರ್ಮದೆಡೆಗೆ ಸೆಳೆಯಲ್ಪಟ್ಟವರು ತಮ್ಮ ಚರಮಗೀತೆಯನ್ನು ತಾವೇ ಬರೆದುಕೊಂಡಿದ್ದಾರೆ. ನಾಳೆಯಿಂದ ಆರಂಭವಾಗುವ ಯುದ್ಧ ಯಾರು ಯಾರು ವಿಜಯಯಾಗಿದ್ದಾರೆ ಮತ್ತು ಯಾರು ವಿನಾಶ ಹೊಂದಿದ್ದಾರೆ ಎನ್ನುವುದನ್ನು ಲೌಕಿಕ ಜಗತ್ತಿಗೆ ತಿಳಿಸುವ ಒಂದು ಸಾಂಕೇತಿಕ ಪ್ರಕ್ರಿಯೆ ಅಷ್ಟೇ. ನಾನು ಕುರುಕ್ಷೇತ್ರಯುದ್ಧ ಪರ್ಯಾವಸಾನವಾಗಿ ಯುಧಿಷ್ಠಿರನು ಸಿಂಹಾಸನಾರೋಹಣ ಮಾಡುವ ದಿವ್ಯ ಮುಹೂರ್ತವನ್ನೇ ಎದುರುನೋಡುತ್ತಿದ್ದೇನೆ. ಧರ್ಮರಾಯ ಪಟ್ಟಾಭಿಷಿಕ್ತನಾಗುವ ಕ್ಷಣ ಭರತಖಂಡದ ಇತಿಹಾಸದಲ್ಲಿಯೇ ಸುವರ್ಣಕ್ಷಣ. ಯುಧಿಷ್ಠಿರನ ಸಿಂಹಾಸನಾರೋಹಣ ಕೇವಲ ಪಾಂಡವರ ಆಳ್ವಿಕೆಯ ಪ್ರತಿಷ್ಠಾಪನೆ ಅಲ್ಲ. ಅದು ಧರ್ಮದ ಪ್ರತಿಷ್ಠಾಪನೆ, ಸನಾತನವಾದ ಆರ್ಯಧರ್ಮ ಬೋಧಿಸಿದ ಅತ್ಯುನ್ನತವಾದ ಆದರ್ಶಗಳ ಪ್ರತಿಷ್ಠಾಪನೆ, ಅಪೌರುಷೇಯವಾದ ವೇದಗಳ ಅಂತಃಸತ್ತ್ವದ ಪ್ರತಿಷ್ಠಾಪನೆ, ಸಹಸ್ರಾರು ವರ್ಷಗಳಿಂದ ನನ್ನಂತಹ ತಪಸ್ವಿಗಳು ನಂಬಿ ಆಚರಿಸುತ್ತಿರುವ ತತ್ತ್ವ, ಸಿದ್ಧಾಂತಗಳ ಪ್ರತಿಷ್ಠಾಪನೆ. ಯುಧಿಷ್ಠಿರನ ವಿಜಯ ಭರತವರ್ಷದ ಮುಂದಿನ ಸಹಸ್ರಾರು ತಲೆಮಾರುಗಳಿಗೆ ಧರ್ಮವನ್ನು ಆಚರಿಸಲು ನೈತಿಕ ಸ್ಥೈರ್ಯವನ್ನು ತುಂಬಲಿದೆ ಎಂಬ ಭರವಸೆಯಿಂದಲೇ ನನ್ನೀ ಮಹಾಕಾವ್ಯವನ್ನು ಜಯ ಎಂದು ಕರೆದಿದ್ದೇನೆ.”

* * *

ಮಹಾಭಾರತಯುದ್ಧ ಹದಿನೆಂಟು ದಿನಗಳ ಕಾಲ ನಡೆಯಿತು. ಪ್ರತಿ ದಿನ ಏನಿಲ್ಲವೆಂದರೂ ಲಕ್ಷ ಯೋಧರು ಹತರಾಗುತ್ತಿದ್ದರು. ಕುರುಸೇನೆಯನ್ನು ಹತ್ತು ದಿನಗಳ ಕಾಲ ಮುನ್ನಡೆಸಿದ ಭೀಷ್ಮಾಚಾರ್ಯರು ಶರಶಯ್ಯೆಯ ಮೇಲೆ ಮಲಗಿದರು, ದ್ರೋಣಾಚಾರ್ಯರು ದ್ರುಪದ ಪುತ್ರನಿಂದ ಹತರಾದರು, ಕರ್ಣನನ್ನು ಅನುಜನಾದ ಧನಂಜಯನು ಸಂಹರಿಸಿದನು, ಶಲ್ಯನನ್ನು ಯುಧಿಷ್ಠಿರನು ವಧಿಸಿದನು, ಹದಿನೆಂಟನೆಯ ದಿನ ಸಮಂತಪಂಚಕದಲ್ಲಿ ನಡೆದ ಗದಾಯುದ್ಧದಲ್ಲಿ ಭೀಮನು ಸುಯೋಧನನನ್ನು ಮರ್ದಿಸುವ ಮೂಲಕ ಯುದ್ಧಕ್ಕೆ ತೆರೆಬಿದ್ದಿತು. ಯುದ್ಧದ ಸಾವು ನೋವುಗಳು, ಬಂಧುಗಳನ್ನು ಕಳೆದುಕೊಂಡವರ ಆಕ್ರಂದನ, ಭೀಷ್ಮ-ದ್ರೋಣರಂಥ ಮಹಾರಥಿಗಳ ಅವಸಾನ ಯಾವುವೂ ವ್ಯಾಸರನ್ನು ವಿಚಲಿತಗೊಳಿಸಲಿಲ್ಲ.

ಆದಿಪರ್ವದಿಂದ ಗದಾಪರ್ವದವರೆಗೆ ಒಟ್ಟು ಹತ್ತು ಪರ್ವಗಳಲ್ಲಿ ಮಹಾಭಾರತಯುದ್ಧದ ಅಂತ್ಯದವರೆಗಿನ ಘಟನೆಗಳನ್ನು ವ್ಯಾಸರು ದಾಖಲಿಸಿದರೆ, ಸ್ತ್ರೀಪರ್ವ ಹಾಗೂ ಶಾಂತಿಪರ್ವಗಳಲ್ಲಿ ಯುಧಿಷ್ಠಿರನ ಸಿಂಹಾಸನಾರೋಹಣದ ಮುಂಚಿನ ಯುದ್ಧಾನಂತರದ ಘಟನೆಗಳನ್ನು ದಾಖಲಿಸಿದರು.

* * *

ಇಂದು ಯುಧಿಷ್ಠಿರನ ಪಟ್ಟಾಭಿಷೇಕ ಮಹೋತ್ಸವ. ಅಂಗ, ವಂಗ, ಕಳಿಂಗ, ಸಿಂಧೂ, ಸೌರಾಷ್ಟ್ರ, ಕಾಂಭೋಜ, ದ್ರಾವಿಡ, ಚೋಳ, ಗಾಂಧಾರ, ಕಾಶ್ಮೀರ, ಕರ್ಣಾಟಕ, ಮಾಳ್ವ, ವಿದರ್ಭ ಮೊದಲಾದ ದೇಶಗಳ ಅರಸು ಮಕ್ಕಳಿಂದ, ರಾಯಭಾರಿಗಳಿಂದ, ಗಣ್ಯರಿಂದ ಹಸ್ತಿನಾವತಿ ನಗರ ತುಂಬಿಹೋಗಿದೆ. ಸ್ವಾಗತಸಮಿತಿಯ ನೇತೃತ್ವವನ್ನು ಸ್ವತಃ ವಾಸುದೇವನೇ ವಹಿಸಿಕೊಂಡಿದ್ದಾನೆ. ಮನೆಗಳ ಮುಂದೆ ಪನ್ನೀರು ಎರಚಿ, ಅಂಗಳವನ್ನು ಗೋಮಯದಿಂದ ಸಾರಿಸಿ, ಮಾನಿನಿಯರು ರಂಗವಲ್ಲಿಗಳನ್ನು ಬಿಡಿಸಿದ್ದಾರೆ. ರಾಜವೀಧಿಯನ್ನು ತಳಿರು ತೋರಣ, ಹೂವುಗಳಿಂದ ಸಿಂಗರಿಸಲಾಗಿದೆ. ಭರತವರ್ಷದಲ್ಲಿಯೇ ಅತ್ಯಂತ ವೈಭವೋಪೇತವಾಗಿ ನಡೆಯಲಿರುವ ಈ ಸಮಾರಂಭವನ್ನು ಕಣ್ತುಂಬಿಕೊಳ್ಳಲು ದೂರದೂರುಗಳಿಂದ ಬಂದಿರುವ ಬಂಧು ಬಾಂಧವರ ಸತ್ಕಾರಕ್ಕೆಂದು ನದೀತೀರಗಳಲ್ಲಿ ತಾತ್ಕಾಲಿಕ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಗಣ್ಯ ವ್ಯಕ್ತಿಗಳ ಮನರಂಜನೆಗಾಗಿ ನಾನಾ ಊರುಗಳಿಂದ ನರ್ತಕಿಯರೂ ವೇಶ್ಯೆಯರೂ ಆಗಮಿಸಿದ್ದಾರೆ. ಒಟ್ಟಿನಲ್ಲಿ ಪುರಾತನವಾದ ಹಸ್ತಿನಾವತಿ ನಗರಿಯು ಷೋಡಶ ಪ್ರಾಯದ ನವವಧುವಿನಂತೆ ಅಲಂಕೃತಗೊಂಡಿದೆ.

ಇತ್ತ ಅರಮನೆಯನ್ನು ತಾವರೆ, ನೈದಿಲೆ, ಮಲ್ಲಿಗೆ, ಸಂಪಿಗೆ ಮೊದಲಾದ ವನಸುಮಗಳಿಂದ ಸಿಂಗರಿಸಲಾಗಿದೆ. ಚಕ್ರವರ್ತಿಯಾಗಲಿರುವ ಯುಧಿಷ್ಠಿರನ ಅಲಂಕಾರಕ್ಕೆಂದೇ ಸಮುದ್ರ ತಳದಿಂದ ಶ್ರೇಷ್ಠವಾದ ಮುತ್ತು, ರತ್ನ, ಹವಳಗಳನ್ನು ಆರಿಸಿ ತರಲಾಗಿದೆ. ರಾಜ ಪರಿವಾರದವರ ಅಲಂಕಾರಕ್ಕಾಗಿ ವಜ್ರ ವೈಡೂರ್ಯಗಳ ಕಸೂತಿ ಮಾಡಲಾಗಿರುವ ಪೀತಾಂಬರ ವಸ್ತ್ರಗಳನ್ನು ಸಾಮಂತ ರಾಜರು ಕೊಡುಗೆಯಾಗಿ ನೀಡಿದ್ದಾರೆ. ಬ್ರಾಹ್ಮಣರಿಗೆ ದಾನವಾಗಿ ನೀಡಲು ಹೇರಳವಾದ ಗೋಸಂಪತ್ತನ್ನು ಸಂಗ್ರಹಿಸಲಾಗಿದೆ. ಬಡಬಗ್ಗರಿಗೆ ನೀಡಲು ವಸ್ತ್ರ, ಧಾನ್ಯಗಳ ರಾಶಿಯನ್ನು ಆಕಾಶದೆತ್ತರಕ್ಕೆ ಪೇರಿಸಲಾಗಿದೆ. ಲೋಕಕಲ್ಯಾಣಾರ್ಥವಾಗಿ ನೆರವೇರಲಿರುವ ಯಜ್ಞ ಯಾಗಾದಿಗಳಲ್ಲಿ ಹೋತೃ, ಅಧ್ವರ್ಯು, ಉದ್ಗಾತೃ ಮತ್ತು ಬ್ರಹ್ಮರಾಗಿ ಭಾಗವಹಿಸಲು ಉತ್ತರಾಪಥ ಮತ್ತು ದಕ್ಷಿಣಾಪಥಗಳಿಂದ ಮಹರ್ಷಿಗಳ ಗಡಣವೇ ಬಂದು ಸೇರಿದೆ. ಒಮ್ಮೆಲೇ ಸಾವಿರಾರು ಮಂದಿ ಕುಳಿತು ಭೋಜನ ಸವಿಯಬಹುದಾದ ಬೃಹತ್ ಭೋಜನಶಾಲೆ, ಅದರ ಒಂದು ಪಾರ್ಶ್ವದಲ್ಲಿ ಸುಸಜ್ಜಿತವಾದ ಪಾಕಶಾಲೆಯನ್ನು ಕಟ್ಟಲಾಗಿದೆ. ದ್ರಾಕ್ಷಿ, ಗೋಡಂಬಿ, ಬಾದಾಮಿ, ಖರ್ಜೂರ, ಉತ್ತುತ್ತೆ, ಹಾಲು, ಮೊಸರು, ಬೆಣ್ಣೆ, ತುಪ್ಪಗಳನ್ನು ಯಥೇಚ್ಛವಾಗಿ ಸುರಿದು ನುರಿತ ಪಾಕಶಾಸ್ತ್ರಜ್ಞರು ಷಡ್ರಸಯುಕ್ತ ಪಂಚಭಕ್ಷ್ಯ ಪರಮಾನ್ನಗಳನ್ನು ಸಿದ್ಧಪಡಿಸುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇಂದ್ರನ ರಾಜಧಾನಿ ಅಮರಾವತಿ ನಗರಿಯೇ ಭುವಿಗಿಳಿದಂತೆ ಹಸ್ತಿನಾವತಿ ಶೋಭಿಸುತ್ತಿದೆ.

ಈ ವಿಶೇಷ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಭಗವಾನ್ ವೇದವ್ಯಾಸರ ಶಿಷ್ಯಪರಿವಾರದ ಅಂಗವಾಗಿ ನಾನೂ ಭಾಗವಹಿಸಿದ್ದೇನೆ. ಗುರುದೇವರು ಅವರೇ ಹೇಳಿದಂತೆ ಧರ್ಮಪ್ರತಿಷ್ಠಾಪನೆಯಾಗಲಿರುವ ಆ ಸುಮುಹೂರ್ತವನ್ನು ನೋಡಲು ಕಾತರರಾಗಿ ಕುಳಿತಿದ್ದಾರೆ. ಯುಧಿಷ್ಠಿರನು ಕುಲಪುರೋಹಿತರ ಮೇಲ್ವಿಚಾರಣೆಯಲ್ಲಿ ಸಿಂಹಾಸನವೇರುವ ಮುನ್ನ ನೆರವೇರಿಸಬೇಕಾದ ವಿಧಿಗಳನ್ನು ಶಾಸ್ತ್ರೋಕ್ತವಾಗಿ ಪೂರೈಸಿದನು. ವಿಧಿಗಳ ಕೊನೆಯ ಹಂತವಾಗಿ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ನಮಸ್ಕರಿಸಿದನು. ಭರತನೇ ಮೊದಲಾದ ಚಕ್ರವರ್ತಿಗಳು ಅಲಂಕರಿಸಿದ್ದ ಆ ರತ್ನಖಚಿತವಾದ ಸಿಂಹಾಸನವನ್ನು ಇನ್ನೇನು ಯುಧಿಷ್ಠಿರನು ಆರೋಹಣ ಮಾಡಬೇಕು, ಅಷ್ಟರಲ್ಲಿ ವಿಚಿತ್ರವೊಂದು ಸಂಭವಿಸಿತು.

ಧರ್ಮರಾಯನ ಮೇಲೆ ಪುಷ್ಪವೃಷ್ಟಿಗೈಯಲು ಆಗಸದಲ್ಲಿ ನೆರೆದಿದ್ದ ಯಕ್ಷ, ಕಿನ್ನರ, ಕಿಂಪುರುಷ, ದೇವ, ಗಂಧರ್ವಾದಿಗಳು, ಹಸ್ತಿನಾವತಿಯಲ್ಲಿ ಸೇರಿದ ಸಾಮಂತ – ಧೀಮಂತರೆಲ್ಲರೂ ವಿಸ್ಮಯದಿಂದ ನೋಡುತ್ತಿರುವಂತೆಯೇ, ಆ ದಿವ್ಯವಾದ ಸಿಂಹಾಸನವು ನೆಲದಿಂದ ಮೇಲೆದ್ದು ಊರ್ಧ್ವಮುಖಿಯಾಗಿ ಚಲಿಸಲಾರಂಭಿಸಿ ಯಾವ ಆಧಾರವೂ ಇಲ್ಲದೆ ಎತ್ತರದಲ್ಲಿ ಸ್ಥಿರವಾಗಿ ನಿಂತಿತು. ಹಸ್ತಿನಾವತಿಯ ಆಗಸದಲ್ಲಿನ ಮೋಡಗಳು ಮರೆಮಾಡಿ ಕತ್ತಲಾವರಿಸಿತು, ಭಯಗ್ರಸ್ತವಾದ ಖಗ-ಮಿಗಗಳು ಕರ್ಕಶವಾದ ಶಬ್ದಗಳನ್ನು ಹೊರಡಿಸುತ್ತ ತಮ್ಮತಮ್ಮ ತಾವುಗಳನ್ನು ಸೇರಿಕೊಂಡವು. ಬಾನಿನಲ್ಲಿ ಧೂಮಕೇತು ಕಾಣಿಸಿಕೊಂಡಿತು, ಉಲ್ಕಾಪಾತವಾಯಿತು. ಕಾಲವು ಸ್ತಂಭಿಸಿತು.

ಈ ಅಪಶಕುನಗಳಿಂದ ಭೀತರಾಗಿ ಎಲ್ಲರೂ ಆತಂಕಗೊಂಡಿರಲು ಲೋಹದಿಂದ ಲೋಹಕ್ಕೆ ಬಡಿದಾಗ ಉಂಟಾಗುವ ಠೇಂಕಾರದಂತಹ ಉಚ್ಚ ಸ್ವರದಲ್ಲಿ ಆ ಸಿಂಹಾಸನವು ಮಾತನಾಡಲಾರಂಭಿಸಿತು:

“ಹೇ ಆರ್ಯಪುತ್ರ! ಚಂದ್ರವಂಶದಲ್ಲಿ ಜನಿಸಿದ ಮಹಾಮಹಿಮರು ನನ್ನನ್ನು ಆರೋಹಣ ಮಾಡಿ ನನ್ನ ಅಸ್ತಿತ್ವವನ್ನು ಪುನೀತಗೊಳಿಸಿದ್ದಾರೆ. ಶ್ರೇಷ್ಠ ಗುಣಗಳಿಂದ ಸಂಪನ್ನರಾದ ವ್ಯಕ್ತಿಗಳು ಮಾತ್ರವೇ ಅಲಂಕರಿಸಬಹುದಾದ ಸಿಂಹಾಸನವಿದು. ಅಖಂಡ ಭರತದೇಶವೇ ನನ್ನ ಮುಂದೆ ನಿಂತು ತಲೆಬಾಗಿ ಗೌರವಿಸುತ್ತದೆ. ಈ ಸಿಂಹಾಸನಕ್ಕಾಗಿ ಭೀಷ್ಮ, ದ್ರೋಣ, ಕರ್ಣರಂಥ ಅತಿಬಲ ಪರಾಕ್ರಮಿಗಳು ಪ್ರಾಣಾರ್ಪಣೆಗೈದಿದ್ದಾರೆ. ಅಸಂಖ್ಯ ಸೈನಿಕರು ತಮ್ಮ ಜೀವವನ್ನೇ ಬಲಿದಾನವಾಗಿ ನೀಡಿದ್ದಾರೆ. ಸಹಸ್ರಾರು ಮಂದಿ ಪತಿವಿಯೋಗ, ಪುತ್ರವಿಯೋಗ, ಪಿತೃವಿಯೋಗದಿಂದ ದುಃಖಿಸುತ್ತಿದ್ದಾರೆ. ಈ ಯುದ್ಧಕ್ಕಾಗಿ ಅಪಾರವಾದ ಸಂಪತ್ತಿನ ನಷ್ಟವಾಗಿದೆ. ಹಸ್ತಿನಾವತಿಯ ಪ್ರಜೆಗಳಿಂದ ಸುಯೋಧನನು ಹದಿನಾರು ವರ್ಷಗಳ ತೆರಿಗೆಯ ಹಣವನ್ನು ಮುಂಚಿತವಾಗಿಯೆ ಸಂಗ್ರಹಿಸಿ ಯುದ್ಧಕ್ಕಾಗಿ ವಿನಿಯೋಗಿಸಿದ್ದಾನೆ. ನನ್ನನ್ನು ಅಲಂಕರಿಸಿ ರಾಜ್ಯಭಾರ ನಡೆಸಲು ಇಂತಹ ಅಗಾಧವಾದ ಸಂಘರ್ಷ, ತ್ಯಾಗ, ಬಲಿದಾನಗಳು ನಡೆದಿರುವಾಗ – ಅಕಳಂಕಚರಿತನಾದ ವ್ಯಕ್ತಿಯೊಬ್ಬ ನನ್ನನ್ನು ಏರಿದರೆ ಮಾತ್ರ ಈ ತ್ಯಾಗ, ಬಲಿದಾನಗಳಿಗೆ ಸಾರ್ಥಕತೆ ದೊರೆಯುತ್ತದೆ. ಹೇ ಭರತಕುಲಪ್ರಸೂತ! ನೀನೇ ಹೇಳು, ಈ ಸಿಂಹಾಸನವನ್ನೇರಲು ನಿನಗೇನು ಅರ್ಹತೆಯಿದೆ? ಈ ಅತ್ಯುನ್ನತವಾದ ಸ್ಥಾನವನ್ನಲಂಕರಿಸಲು ನೀನು ಮಾಡಿರುವ ತ್ಯಾಗ, ಬಲಿದಾನಗಳಾದರೂ ಏನು? ನನ್ನ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ನೀಡಿ ನನ್ನನ್ನು ತೃಪ್ತಿಗೊಳಿಸಿದರಷ್ಟೇ ನಾನು ಮತ್ತೆ ಕೆಳಗಿಳಿದು ಮೃತ್ತಿಕೆಯ ಮೇಲೆ ಸ್ಥಾಪಿತವಾಗಿ ನಿನ್ನ ಸಿಂಹಾಸನಾರೋಹಣಕ್ಕೆ ಅವಕಾಶ ನೀಡುತ್ತೇನೆ. ಇಲ್ಲದಿದ್ದರೆ ರಾಜಕಾರ್ಯದಿಂದ ನಿವೃತ್ತಿ ಪಡೆದು ಅರ್ಹ ವ್ಯಕ್ತಿಯೊಬ್ಬನನ್ನು ಚಕ್ರವರ್ತಿಯನ್ನಾಗಿಸು.”

ಸಿಂಹಾಸನದ ಮಾತುಗಳನ್ನು ಕೇಳಿಸಿಕೊಂಡ ಯುಧಿಷ್ಠಿರನು ರಾಜೋಚಿತವಾದ ತಾಳ್ಮೆ ಮತ್ತು ಗಾಂಭೀರ್ಯಗಳಿಂದ ಈ ಮಾತುಗಳನ್ನು ಹೇಳಿದನು. “ಸ್ವರ್ಣ, ರಜತ, ವಜ್ರ, ವೈಡೂರ್ಯ, ಪಚ್ಚೆ, ಮರಕತ, ಮುತ್ತು, ರತ್ನ, ಹವಳಗಳಿಂದ ಸುಶೋಭಿತವಾದ ಅವಿಚ್ಛಿನ್ನವಾದ ಶಶಿವಂಶ ಪರಂಪರೆಯ ಸಿಂಹಾಸನವೇ, ಶಂತನುವಿನ ಪ್ರಪೌತ್ರನಾದ, ಭೀಷ್ಮನ ಪೌತ್ರನಾದ, ಪಾಂಡುಪುತ್ರನಾದ ಯುಧಿಷ್ಠಿರನ ನಮಸ್ಕಾರಗಳನ್ನು ಸ್ವೀಕರಿಸು. ಶ್ರೇಷ್ಠನಾದ ವ್ಯಕ್ತಿಯ ಕಾರ್ಯಗಳೇ ಆತನ ಶ್ರೇಷ್ಠತೆಯನ್ನು ಬಿಂಬಿಸಬೇಕೇ ಹೊರತು ಆತನ ಮಾತುಗಳಲ್ಲ. ಆತ್ಮಪ್ರಶಂಸೆಯು ತಾಮಸಗುಣದ ಅಭಿವ್ಯಕ್ತಿಗಳಲ್ಲಿ ಒಂದು. ಆತ್ಮಪ್ರಶಂಸೆಯನ್ನು ಮಾಡಿಕೊಳ್ಳುವುದು ಎಂದರೆ ಪಾವಕನು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ತನ್ನನ್ನೇ ತಾನು ದಹಿಸಿಕೊಂಡಂತೆ. ಆದರೂ ನೀನು ನನ್ನ ಅರ್ಹತೆಯನ್ನು ಪ್ರಶ್ನಿಸಿರುವುದರಿಂದ ಅನಿವಾರ್ಯವಾಗಿ ನನ್ನ ಶ್ರೇಷ್ಠತೆಯನ್ನು ನಿನ್ನ ಅವಗಾಹನೆಗೆ ತರುತ್ತಿದ್ದೇನೆ. ಭರತವರ್ಷದಲ್ಲಿ ಅತ್ಯಂತ ಪ್ರತಿಷ್ಠಿತವಾದ ರಾಜಕುಲಗಳು ಸೂರ್ಯವಂಶ ಮತ್ತು ಚಂದ್ರವಂಶಗಳು. ಸಮಸ್ತ ವಿಶ್ವವೇ ಗೌರವಿಸುವ ಚಂದ್ರವಂಶದಲ್ಲಿ ನಾನು ಜನಿಸಿದ್ದೇನೆ. ಇಹಲೋಕದ ನ್ಯಾಯಾನ್ಯಾಯಗಳನ್ನು ಪರಲೋಕದಲ್ಲಿ ನಿರ್ಣಯಿಸುವ ತ್ರಿಲೋಕಗಳ ಸರ್ವೋಚ್ಚ ನ್ಯಾಯಾಧೀಶನಾದ, ಧರ್ಮದ ಅಧಿದೇವತೆಯಾದ ಯಮಧರ್ಮ ನನ್ನ ಜನಕ. ನಾನೆಂದೂ ನನ್ನ ಜೀವನದಲ್ಲಿ ಋಜುಮಾರ್ಗವನ್ನು ಮೀರಿಲ್ಲ. ಸತ್ಯದಲ್ಲಿ ಹರಿಶ್ಚಂದ್ರನಿಗೆ, ಧರ್ಮದಲ್ಲಿ ಶ್ರೀರಾಮಚಂದ್ರನಿಗೆ, ನೀತಿಯಲ್ಲಿ ವಿದುರನಿಗೆ ನಾನು ಸಮನೆಂದು ತಿಳಿದವರು ವರ್ಣಿಸಿದ್ದಾರೆ. ಇದು ನನ್ನ ಅರ್ಹತೆ. ಇನ್ನು ಹಸ್ತಿನಾವತಿಯ ಕ್ಷೋಣಿಗೋಸ್ಕರ ನಾನು ಮಾಡಿರುವ ತ್ಯಾಗ ಬಲಿದಾನಗಳನ್ನು ಪ್ರಶ್ನಿಸುತ್ತಿರುವೆ. ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸವನ್ನು ನಾನು ಅನುಭವಿಸಿಲ್ಲವೆ? ನನ್ನ ಕಣ್ಣೆದುರಿಗೇ ನನ್ನ ಪತ್ನಿಯ ವಸ್ತ್ರಾಪಹರಣವಾಗಲಿಲ್ಲವೆ? ಯುದ್ಧದಲ್ಲಿ ನನ್ನ ಮಕ್ಕಳು ಮೊಮ್ಮಕ್ಕಳನ್ನು ಕಳೆದುಕೊಂಡಿಲ್ಲವೆ? ಇದೆಲ್ಲವೂ ತ್ಯಾಗವಲ್ಲದೆ ಮತ್ತೇನು?”

ಧರ್ಮರಾಯನ ಮಾತುಗಳಿಂದ ಎಲ್ಲರೂ ತೃಪ್ತರಾಗಿ ತಲೆದೂಗುತ್ತಿರಲು ಸಿಂಹಾಸನವು ಹೀಗೆ ಹೇಳಿತು: “ಯುಧಿಷ್ಠಿರ, ನಿನ್ನ ಪತ್ನಿಯ ವಸ್ತ್ರಾಪಹರಣವಾಗಲು, ನೀವು ವನವಾಸ -ಅಜ್ಞಾತವಾಸಗಳನ್ನು ಅನುಭವಿಸಲು, ಯುದ್ಧಭೂಮಿಯಲ್ಲಿ ಬಂಧು ಮಿತ್ರರನ್ನು ಕಳೆದುಕೊಳ್ಳಲು ಯಾರು ಕಾರಣ ಎಂದು ನೀನೇ ಶಾಂತಚಿತ್ತನಾಗಿ ಯೋಚಿಸು. ನಿನ್ನ ಜೂಜುಕೋರತನವೇ ಇದಕ್ಕೆಲ್ಲ ಮೂಲ ಕಾರಣವಲ್ಲವೆ? ನಿನ್ನ ಜೂಜಿನ ವ್ಯಸನವನ್ನು ಧರ್ಮದ ಮುಖವಾಡದ ಹಿಂದೆ ಅಡಗಿಸಬೇಡ. ಅಗ್ನಿಸಾಕ್ಷಿಯಾಗಿ, ತ್ರಿಕರಣಪೂರ್ವಕವಾಗಿ ಕೈಹಿಡಿದ ಧರ್ಮಪತ್ನಿಯನ್ನು ಜೂಜಿನಲ್ಲಿ ಪಣಕ್ಕಿಟ್ಟವನು ನೀನು. ನಾಳೆ ಪಟ್ಟವೇರಿದ ಮೇಲೆ ಹಸ್ತಿನಾವತಿಯ ಸ್ತ್ರೀಯರನ್ನು ಜೂಜಿನಲ್ಲಿ ಪಣಕ್ಕಿಟ್ಟರೆ ಆಶ್ಚರ್ಯವೇನಿದೆ? ಕೈಹಿಡಿದ ಹೆಂಡತಿಯ ಮಾನವನ್ನೇ ರಕ್ಷಿಸಲಾಗದ ನಿನ್ನಿಂದ ಈ ರಾಜ್ಯಲಕ್ಷ್ಮಿಯ ರಕ್ಷಣೆ ಸಾಧ್ಯವಾದೀತೆ? ನಿಜಕ್ಕೂ ದ್ರೌಪದಿಯ ವಸ್ತ್ರಾಪಹರಣ ಮಾಡಿದವನು ನೀನೇ; ದುಶ್ಶಾಸನ ನಿಮಿತ್ತ ಮಾತ್ರ! ಪತಿಯಾಗಿ ಹೋಗಲಿ, ಅಣ್ಣನಾಗಿಯಾದರೂ ನಿನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಫಲನಾಗಿರುವೆಯಾ ಎಂದು ಆತ್ಮಾವಲೋಕನ ಮಾಡಿಕೋ. ಅಣ್ಣನಾದವನು ತಮ್ಮಂದಿರಿಗೆ ಉತ್ಕರ್ಷದ ದಾರಿಯನ್ನು ತೋರಬೇಕು. ಆದರೆ ನಿನ್ನ ದುಶ್ಚಟದಿಂದಾಗಿ ನಿನ್ನ ಅನುಜರು ರಾಜವಂಶದಲ್ಲಿ ಜನಿಸಿದರೂ ಕಾಡಿನ ಹಾದಿಯನ್ನು ಹಿಡಿಯಬೇಕಾಯಿತು. ಹಂಸತೂಲಿಕಾತಲ್ಪದ ಮೇಲೆ ಮಲಗುತ್ತಿದ್ದವರು ಮರದ ಬುಡಕ್ಕೆ ತಲೆಯೊರಗಿಸಿ ಮಲಗುವಂತಾಯಿತು. ನಿನ್ನ ಕುಟುಂಬವನ್ನೇ ರಕ್ಷಿಸಲಾಗದವನು, ಇಂತಹ ಬೃಹತ್ ಸಾಮ್ರಾಜ್ಯವನ್ನು ಹೇಗೆ ತಾನೇ ರಕ್ಷಿಸುವೆ? ಹಿಂದೆ ಶಕುನಿಯೊಂದಿಗಿನ ದ್ಯೂತದಲ್ಲಿ ಇಂದ್ರಪ್ರಸ್ಥದ ಸಿಂಹಾಸನವನ್ನೇ ಪಣಕ್ಕಿಟ್ಟವನು ನೀನು, ನಾಳೆ ಇನ್ನಾರೋ ರಾಜನೊಂದಿಗಿನ ಜೂಜಿನಲ್ಲಿ ನನ್ನನ್ನು ಪಣಕ್ಕಿಡುವುದಿಲ್ಲ ಎಂದು ಹೇಗೆ ತಾನೇ ನಂಬಲಿ? ಆದ್ದರಿಂದ ಸರ್ವಥಾ ನೀನು ಈ ಸಿಂಹಾಸನವನ್ನೇರಲು ಯೋಗ್ಯನಲ್ಲ. ನಿನಗಿಂತ ಅರ್ಹರಾದವರಿಗೆ ಅವಕಾಶ ನೀಡಿ ನಿವೃತ್ತಿಯಾಗುವುದು ಉಚಿತ ಎಂದು ನಾನು ಸೂಚಿಸುತ್ತಿದ್ದೇನೆ.”

ಸಿಂಹಾಸನದ ಮಾತುಗಳನ್ನು ಕೇಳಿ ತಲೆತಗ್ಗಿಸಿದ ಯುಧಿಷ್ಠಿರ ಬಂಧುಗಳೊಂದಿಗೆ, ಹಿತೈಷಿಗಳೊಂದಿಗೆ ಚರ್ಚಿಸಿ ತಾನು ಹಿಂದೆ ಸರಿದು ತನ್ನ ತಮ್ಮನಾದ ಭೀಮನ ಹೆಸರನ್ನು ಚಕ್ರವರ್ತಿ ಸ್ಥಾನಕ್ಕೆ ಸೂಚಿಸಿದನು. ಈ ಪ್ರಸ್ತಾವನೆಯನ್ನು ಕೇಳಿದ ಸಿಂಹಾಸನವು ಭೀಮನನ್ನುದ್ದೇಶಿಸಿ, “ಹೇ ವೃಕೋದರ, ನೀನು ನಿನ್ನ ಪೂರ್ವೇತಿಹಾಸವನ್ನೆಲ್ಲ ಮರೆತಿರುವೆ ಎಂದು ತೋರುತ್ತಿದೆ. ಬಾಲ್ಯದಿಂದಲೂ ನೀನು ಇನ್ನೊಬ್ಬರ ಪಾಲನ್ನು ಕಿತ್ತು ತಿನ್ನುತ್ತಿದ್ದೆ. ನೀವು ಏಕಚಕ್ರನಗರಿಯಲ್ಲಿದ್ದಾಗ ಭಿಕ್ಷೆ ಬೇಡಿ ತಂದ ಆಹಾರವನ್ನು ಎರಡು ಪಾಲು ಮಾಡಿ ಒಂದು ಪಾಲನ್ನು ನೀನು ತಿನ್ನುತ್ತಿದ್ದೆ, ಇನ್ನೊಂದು ಪಾಲನ್ನು ನಿನ್ನ ತಾಯಿ ಮತ್ತು ಸಹೋದರರು ಹಂಚಿ ತಿನ್ನುತ್ತಿದ್ದರು. ರಾಜನಾದವನು ಹೊಟ್ಟೆಬಾಕನಾಗಿರಬಾರದು, ಕ್ಷಾಮದಂತಹ ಪರಿಸ್ಥಿತಿ ಉದ್ಭವಿಸಿದಾಗ ತನ್ನ ತಟ್ಟೆಯಲ್ಲಿನ ತುತ್ತನ್ನೂ ಸಂತ್ರಸ್ತರಿಗೆ ಉಣಿಸಬೇಕು. ಚಕ್ರವರ್ತಿಯಾದವನು ಮೊದಲು ಜನರ ಹಸಿವನ್ನು, ಕಷ್ಟಗಳನ್ನು ನೀಗಿಸುವತ್ತ ಗಮನ ನೀಡಿ ನಂತರ ತನ್ನ ಹಸಿವು, ಸಂಕಷ್ಟಗಳ ಬಗ್ಗೆ ಗಮನ ಹರಿಸಬೇಕು. ನಿನ್ನಲ್ಲಿ ಮಹಾರಾಜನಾಗುವ ಲಕ್ಷಣಗಳಿಲ್ಲ” ಎಂದಿತು.

ಸಿಂಹಾಸನದ ಮಾತುಗಳಿಂದ ವಿಚಲಿತರಾಗದ ಪಾಂಡುಪುತ್ರರು, ನರರಲ್ಲಿಯೇ ಸರ್ವೋತ್ತಮನೆಂದು ಖ್ಯಾತಿವೆತ್ತ ಅರ್ಜುನನ ಹೆಸರನ್ನು ಚಕ್ರವರ್ತಿ ಸ್ಥಾನಕ್ಕೆ ಒಮ್ಮತದಿಂದ ಸೂಚಿಸಿದರು. ತನ್ನನ್ನೇರಲು ಸನ್ನದ್ಧನಾದ ಅರ್ಜುನನನ್ನು ಉದ್ದೇಶಿಸಿ ಸಿಂಹಾಸನವು “ಧನಂಜಯ, ನಿನಗಾವ ಅರ್ಹತೆಗಳಿವೆಯೆಂದು ಚಂದ್ರವಂಶದ ಚಕ್ರವರ್ತಿಯಾಗಲು ಹಂಬಲಿಸುತ್ತಿರುವೆ? ಮರೆತೆಯಾ, ನಿನ್ನ ಮತ್ಸರ ಗುಣದಿಂದಾಗಿ ಏಕಲವ್ಯ ಹೆಬ್ಬೆರಳು ಕಳೆದುಕೊಳ್ಳುವಂತೆ ಮಾಡಿ ವಿಕೃತವಾದ ಆನಂದವನ್ನು ಅನುಭವಿಸಿದೆ. ನಿನ್ನ ಪರಾಕ್ರಮದ ಬಗೆಗಿನ ನಿನ್ನ ಅಹಂಕಾರ ಜನಜನಿತವಾದುದು. ಸಮರಧರ್ಮವನ್ನು ಮೀರಿ ಭೀಷ್ಮ, ಕರ್ಣರನ್ನು ಮೋಸದಿಂದ ಸಂಹರಿಸಿದೆ. ಭ್ರಾತೃಹತ್ಯೆಯ ದೋಷದಿಂದ ನೀನು ಮಲಿನನಾಗಿರುವೆ. ತೀರ್ಥಯಾತ್ರೆಗೆಂದು ಹೋದವನು ಹಲವು ಸ್ತ್ರೀಯರ ಮೋಹಪಾಶಕ್ಕೆ ಸಿಲುಕಿದೆ. ಸಾತ್ತ್ವಿಕ, ರಾಜಸ ಗುಣಗಳಿಗಿಂತ ಮಿಗಿಲಾಗಿ ಕಾಮ, ಮೋಹ, ಮದ, ಮಾತ್ಸರ್ಯವೇ ಮೊದಲಾದ ತಾಮಸ ಗುಣಗಳನ್ನು ಹೊಂದಿರುವ ನೀನು ಈ ಸ್ಥಾನಕ್ಕೆ ಸರ್ವಥಾ ಯೋಗ್ಯನಲ್ಲ” ಎಂದಿತು.

ಅನಿರೀಕ್ಷಿತವೂ, ಅತಿಮಾನುಷವೂ ಆದ ಈ ಪ್ರಸಂಗದಿಂದ ಕ್ಷೋಭೆಗೊಳಗಾದ ಪಾಂಡವರು ಅತ್ಯಂತ ದೈನ್ಯದಿಂದ ಮಾದ್ರಿಸುತರಲ್ಲಿ ಒಬ್ಬರನ್ನು ಚಕ್ರವರ್ತಿಯನ್ನಾಗಿ ಸ್ವೀಕರಿಸಬೇಕೆಂದು, ತನ್ಮೂಲಕ ಚಂದ್ರವಂಶದ ಗೌರವವನ್ನು ರಕ್ಷಿಸಬೇಕೆಂದು ಸಿಂಹಾಸನದ ಬಳಿ ಬೇಡಿಕೊಂಡರು. ಆದರೆ ಸಿಂಹಾಸನವು “ನಕುಲನು ತನ್ನ ಕುಲದಲ್ಲಿಯೇ ತಾನು ಅತ್ಯಂತ ರೂಪವಂತನು ಎಂಬ ಕಾರಣದಿಂದ ದುರಭಿಮಾನವನ್ನು ತಳೆದವನು. ಸಹದೇವನಾದರೋ ತನ್ನ ದಿವ್ಯಜ್ಞಾನದಿಂದ ಮದೋನ್ಮತ್ತನಾಗಿದ್ದಾನೆ. ಅಷ್ಟೇ ಅಲ್ಲದೆ ಈ ಸ್ಥಾನವನ್ನು ಪಡೆಯಲು ಅವನೇನೂ ಅಂತಹ ಮಹತ್ತರವಾದ ತ್ಯಾಗವನ್ನು ಮಾಡಿಲ್ಲ. ಕಿರಿಯವನೆಂಬ ಕಾರಣದಿಂದ ಕುಂತಿ ಮತ್ತು ದ್ರೌಪದಿಯರು ಯಾವ ಕಷ್ಟಗಳೂ ತಗುಲದಂತೆ ಅತ್ಯಂತ ಜಾಗರೂಕತೆಯಿಂದ ಆತನನ್ನು ಪೋಷಿಸಿದ್ದಾರೆ” ಎಂದಿತು.

* * *

ಅಂತೂ ಕುಂತಿಯ ಮಕ್ಕಳಿಗೆ ಪಟ್ಟ ಸಿಗಲಿಲ್ಲ. ದೀರ್ಘವಾದ ಕತ್ತಲನ್ನು ಭೇದಿಸಿ ಮೂಡಿದ್ದ ಬಾಲರವಿಗೆ ಮತ್ತೆ ಗ್ರಹಣ ಕವಿದಂತಾಯಿತು. ನೆರೆದ ಪ್ರತಿಯೊಬ್ಬರೂ ಸ್ಮಶಾನದ ಪ್ರೇತಗಳಂತೆ ಅಮಂಗಳಕರವಾದ ಮುಖಭಾವವನ್ನು ಹೊದ್ದು ನಿಂತರು. ಧರ್ಮ ಪ್ರತಿಷ್ಠಾಪನೆಯನ್ನು ನೋಡಲು ಬಂದಿದ್ದ ವೇದವ್ಯಾಸರ ಮೊಗದಲ್ಲೂ ರಕ್ತವಿಲ್ಲ. ಕೊನೆಯ ಮಾರ್ಗವೆಂಬಂತೆ ಕುರುಕುಲದ ಹಿರಿಯರು, ಹಿತೈಷಿಗಳು, ರಾಜಕೀಯ ಮುತ್ಸದ್ದಿಗಳು ಒಮ್ಮತದಿಂದ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದರು. ಎಲ್ಲರ ಪರವಾಗಿ ಯುಧಿಷ್ಠಿರನು ನಭದಲ್ಲಿ ನಿಂತಿದ್ದ ಸಿಂಹಾಸನವನ್ನು ಕುರಿತು “ಎಲೈ ಸಿಂಹಾಸನವೇ, ನಿನ್ನನ್ನು ಏರುವ, ಏರಿ ಭರತದೇಶವನ್ನು ಆಳುವ ತೇಜಸ್ಸಿರುವ ಗಂಡು ಕುರುಕುಲದಲ್ಲಿ ಯಾರಿಹರೆಂದು ನೀನೇ ಸೂಚಿಸಿ ನಮ್ಮನ್ನು ಈ ಸಂಕಟದಿಂದ ಪಾರು ಮಾಡು” ಎಂದು ವಿನಂತಿಸಿಕೊಂಡನು.

ಈ ಮಾತಿಗೆ ಸಿಂಹಾಸನವು “ಧರ್ಮಪುತ್ರ, ನನ್ನನ್ನು ಏರುವ ಸಾಮರ್ಥ್ಯವಿರುವ ಏಕಮೇವ ವ್ಯಕ್ತಿ ಕುರುಕುಲದಲ್ಲಿದ್ದರೆ ಅದು ದ್ರೌಪದಿ ಮಾತ್ರ! ಆಕೆ ಯಜ್ಞಕುಂಡದಿಂದ ಉದ್ಭವಳಾದ ದೈವಾಂಶಳು. ತಂದೆ ದ್ರುಪದನಿಂದ ರಾಜಕುಮಾರರಿಗೆ ಉಚಿತವಾದ ವಿದ್ಯಾಭ್ಯಾಸವನ್ನು ಪಡೆದವಳು. ಐವರು ಪತಿಯರನ್ನು ಹೊಂದಿದ್ದರೂ ಪಂಚ ಪತಿವ್ರತೆಯರ ಸಾಲಿನಲ್ಲಿ ಪೂಜಿಸಲ್ಪಡುವವಳು. ಸದಾ ಸಮರವಿಮುಖಿಯಾಗಿದ್ದ ಪತಿ ಯುಧಿಷ್ಠಿರನಲ್ಲಿ ಸಮರೋತ್ಸಾಹವನ್ನು ತುಂಬಿದವಳು, ಭೀಮಾರ್ಜುನರಿಗೆ ಸ್ಫೂರ್ತಿಯಾದವಳು, ಕುಂತಿಯ ಅನುಪಸ್ಥಿತಿಯಲ್ಲಿ ನಕುಲ, ಸಹದೇವರಿಗೆ ವಾತ್ಸಲ್ಯವನ್ನು ಉಣಬಡಿಸಿದವಳು. ಹದಿಮೂರು ವರ್ಷಗಳ ಕಾಲ ತನ್ನ ಶ್ರೀಮುಡಿಯನ್ನು ಕಟ್ಟದೆ, ದುಶ್ಶಾಸನನ ಮೇಲಿನ ಪ್ರತೀಕಾರಕ್ಕಾಗಿ ಛಲದಿಂದ ಕಾದವಳು. ಆಕೆಯ ಶೌರ್ಯ, ಧೈರ್ಯಗಳು ಧರ್ಮಜನಿಗಿಲ್ಲ, ಅವಳ ತ್ಯಾಗಬುದ್ಧಿ ಭೀಮನಿಗಿಲ್ಲ, ಅವಳ ವಿವೇಕ ಅರ್ಜುನನಿಗೆಲ್ಲಿದೆ? ಆಕೆಯ ತೇಜಸ್ಸು ಯಮಳರಿಗಿಲ್ಲ. ತನ್ನ ಮಾನವನ್ನೇ ರಕ್ಷಿಸದ ಗಂಡಂದಿರನ್ನು ವನವಾಸ ಕಾಲದಲ್ಲಿ ದುರ್ವಾಸರ ಶಾಪದಿಂದ ರಕ್ಷಿಸಿದವಳು ಅವಳು. ಧೈರ್ಯ, ತೇಜಸ್ಸು, ಶೂರತನ ಮೊದಲಾದ ರಾಜಸ ಗುಣಗಳ ಮತ್ತು ಪ್ರೀತಿ, ತಾಳ್ಮೆ, ವಾತ್ಸಲ್ಯ ಮೊದಲಾದ ಸಾತ್ತ್ವಿಕ ಗುಣಗಳ ಅಪರೂಪದ ಸಮನ್ವಯತೆ ಅವಳಲ್ಲಿದೆ. ಧರ್ಮಪಾಲನೆಯಲ್ಲಿ ಅವಳು ಯುಧಿಷ್ಠಿರ, ಛಲದಲ್ಲಿ ಭೀಮ, ಸಾತ್ತ್ವಿಕತೆಯಲ್ಲಿ ಅರ್ಜುನ, ರೂಪದಲ್ಲಿ ನಕುಲ, ಜ್ಞಾನದಲ್ಲಿ ಆಕೆ ಸಹದೇವ. ಅಷ್ಟೇ ಅಲ್ಲದೆ ಈ ಸಿಂಹಾಸನಕ್ಕಾಗಿ ಅತಿ ಹೆಚ್ಚು ಬಲಿದಾನಗಳನ್ನು ಮಾಡಿದವಳು ದ್ರೌಪದಿಯೇ ಅಲ್ಲವೇ? ತುಂಬಿದ ಕುರುಸಭೆಯಲ್ಲಿ ರಜಸ್ವಲೆಯಾಗಿ ಏಕವಸ್ತ್ರಧಾರಿಣಿಯಾಗಿದ್ದ ಅವಳ ವಸ್ತ್ರಾಪಹರಣವಾಯಿತು. ಹದಿಮೂರು ವರ್ಷಗಳ ಕಾಲ ತನ್ನ ಮಕ್ಕಳನ್ನು ಅಗಲಿ ಮಾತೃತ್ವದ ಸುಖದಿಂದ ವಂಚಿತಳಾದಳು. ಅಜ್ಞಾತವಾಸದಲ್ಲಿ ಮತ್ತೆ ಕೀಚಕನಿಂದ ಅವಮಾನ, ಶೋಷಣೆಗಳಿಗೆ ಗುರಿಯಾದಳು. ಕುರುಕ್ಷೇತ್ರ ಯುದ್ಧದ ಗೆಲವನ್ನು ಸಂಭ್ರಮಿಸುವ ಮುನ್ನವೇ ತನ್ನ ಮಕ್ಕಳನ್ನೂ ಸಹೋದರರನ್ನೂ ಕಳೆದುಕೊಂಡಳು. ಅವಳು ಅನುಭವಿಸಿದ ನೋವು, ಹತಾಶೆ, ಅವಮಾನಗಳ ಮುಂದೆ ನಿಮ್ಮ ಕಷ್ಟ ನಷ್ಟಗಳು ತೃಣಸಮಾನವಾದುವು. ನಿಜಕ್ಕೂ ಈ ಸಿಂಹಾಸನವನ್ನೇರುವ ಅರ್ಹತೆ, ಯೋಗ್ಯತೆಗಳು ಯಾರಲ್ಲಾದರೂ ಇದ್ದರೆ ಅದು ಈ ದ್ರುಪದಪುತ್ರಿ, ಯಜ್ಞೋದ್ಭವಿ ಪಾಂಚಾಲಿಗೆ ಮಾತ್ರ! ದ್ರೌಪದಿ ನನ್ನನ್ನು ಆರೋಹಣ ಮಾಡುವುದಾದರೆ ಮಾತ್ರ, ನಾನು ನಿಮ್ಮೆಲ್ಲರ ಅಪೇಕ್ಷೆಯಂತೆ ಕೆಳಗಿಳಿದು ಪಟ್ಟಾಭಿಷೇಕ ಮಹೋತ್ಸವ ಮುಂದುವರಿಯಲು ಅನುವು ಮಾಡಿಕೊಡುತ್ತೇನೆ” ಎಂದುತ್ತರಿಸಿತು.

ಸಿಂಹಾಸನದ ಮಾತುಗಳನ್ನು ಕೇಳಿ ಸ್ತಂಭೀಭೂತರಾದ ಪಾಂಡವರು ತಮ್ಮೊಳಗೇ ಸಮಾಲೋಚಿಸಿ, ದ್ರೌಪದಿಯನ್ನೇ ಪಟ್ಟಕ್ಕೇರಿಸುವುದಾಗಿ ಆಶ್ವಾಸನೆ ನೀಡಿದರು. ಆ ಕ್ಷಣವೇ ಕುರುಕುಲದ ಪುಣ್ಯವೇ ಮೂರ್ತಿವೆತ್ತಂತಿದ್ದ ಆ ಸಿಂಹಾಸನವು ಗರುಡ ಪಕ್ಷಿಯು ತನ್ನ ರೆಕ್ಕೆಗಳನ್ನು ಬಿಚ್ಚಿ ಸಾವಕಾಶದಿಂದ ನೆಲಕ್ಕಿಳಿಯುವಂತೆ ರಾಜಗಾಂಭೀರ್ಯದಿಂದ ನೆಲಕ್ಕಿಳಿದು ತನ್ನ ಸ್ವಸ್ಥಾನದಲ್ಲಿ ಸ್ಥಿರವಾಯಿತು. ದಿವ್ಯವಾದ ಆಭರಣಗಳಿಂದ, ಕಂಠೀಹಾರಗಳಿಂದ ಭೂಷಿತಳಾದ, ಚಂದನ ಗಂಧ ಲೇಪಿತಳಾದ ಕೃಷ್ಣೆ ಗಜಗಮನದಿಂದ ಮುಂದೆ ಬಂದು ತನ್ನ ಕುಲದ ಹಿರಿಯರಿಗೆ, ನೆರೆದಿದ್ದ ಋಷಿಗಣಕ್ಕೆ, ಹಸ್ತಿನಾವತಿಯ ಪ್ರಜೆಗಳಿಗೆ ನಮಸ್ಕರಿಸಿ, ಅಭಿಷೇಚನಕ್ಕೆ ತಲೆಯೊಡ್ಡಿ ಸಿಂಹಾಸನಕ್ಕೂ ಪ್ರಣಾಮಗಳನ್ನು ಸಲ್ಲಿಸಿ ಅತ್ಯಂತ ಗಾಂಭೀರ್ಯದಿಂದ ಮೆಟ್ಟಿಲುಗಳನ್ನು ಹತ್ತಿ ಸಿಂಹಾಸನವನ್ನು ಏರಿ ರಾಜಮುದ್ರೆಯಲ್ಲಿ ಕುಳಿತಳು. ನೆರೆದಿದ್ದ ಜನವೃಂದ ಜಯಕಾರದ ಉದ್ಘೋಷ ಮಾಡಿತು. ಪುಷ್ಪವೃಷ್ಟಿಯಾಯಿತು. ಎಲ್ಲರಲ್ಲೂ ಕವಿದಿದ್ದ ದುಗುಡ, ಆತಂಕ ಕಳೆದು ನೆರೆದಿದ್ದ ಪ್ರತಿಯೊಬ್ಬರೂ ಮಂದಸ್ಮಿತರಾದರು.

ಆದರೆ ದ್ರೌಪದಿ ಸಿಂಹಾಸನವೇರಿದ ಮರುಕ್ಷಣದಲ್ಲಿಯೇ ಮತ್ತೊಂದು ಪವಾಡವೇ ಅಲ್ಲಿ ಸಂಭವಿಸಿತು. ಸಿಂಹಾಸನದ ಶಿರೋಭಾಗದಲ್ಲಿ ಕೆತ್ತಲಾಗಿದ್ದ ಬಂಗಾರದ ಹಂಸಪಕ್ಷಿಗಳು ಜೀವತಳೆದು ದ್ರೌಪದಿಯ ಮುಂದೆ ಬಂದು ನಿಂತವು. ನೋಡನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಗಂಡು ಹಂಸ ಪಕ್ಷಿಯು ತೇಜೋರೂಪಿಯಾದ ತಪಸ್ವಿಯಾಗಿ ಮತ್ತು ಹೆಣ್ಣು ಹಂಸಪಕ್ಷಿಯು ರೂಪವತಿಯೂ ಸಾಧ್ವಿಯೂ ಆದ ತಪಸ್ವಿನಿಯಾಗಿ ರೂಪಾಂತರ ಹೊಂದಿದರು. ನೆರೆದಿದ್ದ ಎಲ್ಲರಿಗೂ ಕೈಜೋಡಿಸಿ ನಮಸ್ಕರಿಸಿದ ತಪಸ್ವಿಯು ಪಶ್ಚಾತ್ತಾಪದ ಭಾವದಿಂದ ಮಂದ್ರಸ್ಥಾಯಿಯಲ್ಲಿ ಮಾತನಾಡಲಾರಂಭಿಸಿದನು: “ಪ್ರಥಮವಾಗಿ ಇಲ್ಲಿ ನೆರೆದಿರುವ ಪ್ರತಿಯೊಬ್ಬರಲ್ಲಿಯೂ ವಿನಯಪೂರ್ವಕವಾಗಿ ಕ್ಷಮಾಪಣೆಯನ್ನು ಬೇಡುತ್ತಿದ್ದೇನೆ, ನಮ್ಮ ಉದ್ಧಟತನವನ್ನು ಚತುರಮತಿಗಳಾದ ಹಸ್ತಿನಾವತಿಯ ಪ್ರಜೆಗಳು ಕ್ಷಮಿಸಬೇಕು. ಪರಿಸ್ಥಿತಿಯ ಅನಿವಾರ್ಯತೆಯಿಂದ ಈ ಪ್ರಸಂಗವನ್ನು ಸೃಷ್ಟಿಸಿ ನಿಮ್ಮೆಲ್ಲರ ಗೊಂದಲ, ದುಗುಡಗಳಿಗೆ ಕಾರಣವಾಗಬೇಕಾಯಿತು. ನಾನು ಮಹಾಮುನಿ ಜ್ಞಾನವ್ರತ, ಈಕೆ ನನ್ನ ಪತ್ನಿ ತಪಸ್ವಿನಿಯಾದ ವಿದ್ಯಾಧರೆ, ಸಹಸ್ರಾರು ವಸಂತಗಳ ಹಿಂದೆ ಕಪಿಲಾ ನದಿಯ ತೀರದಲ್ಲಿ ಬೃಹದರಣ್ಯ ಪ್ರದೇಶದಲ್ಲಿ ನಾವು ಪರ್ಣಕುಟೀರವನ್ನು ರಚಿಸಿಕೊಂಡು ಬ್ರಾಹ್ಮಣ ಮತ್ತು ಕ್ಷತ್ರಿಯ ಕುಮಾರರಿಗೆ ವಿದ್ಯಾದಾನವನ್ನು ನೀಡುತ್ತಿದ್ದೆವು, ಲೋಕಕಲ್ಯಾಣಾರ್ಥವಾಗಿ ಯಜ್ಞ ಯಾಗಾದಿಗಳನ್ನು ನೆರವೇರಿಸುತ್ತಿದ್ದೆವು. ಒಂದು ವಸಂತಋತುವಿನ ಮುಂಜಾವು ಅತ್ಯಂತ ಸುಮನೋಹರವಾದ ಚೆಲುವಿನಿಂದ ಕಂಗೊಳಿಸುತ್ತಿದ್ದ ಪ್ರಕೃತಿಯನ್ನು ನೋಡಿ ಆನಂದೋದ್ರೇಕಕ್ಕೆ ಒಳಗಾದ ನಾವು ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡು ಮನ್ಮಥನ ಶರಾಘಾತಕ್ಕೆ ನಮ್ಮ ಹೃದಯಗಳನ್ನು ತೆರೆದುಕೊಂಡೆವು. ಪ್ರಾತಃಕಾಲದಲ್ಲಿ ಆಶ್ರಮದಲ್ಲಿ ಪ್ರಣಯವು ನಿಷಿದ್ಧವಾಗಿದ್ದರಿಂದಲೂ, ಯಾರಾದರೂ ಗಮನಿಸಬಹುದೆಂಬ ಅಂಜಿಕೆಯಿಂದಲೂ ನಮ್ಮ ತಪಃಶಕ್ತಿಯಿಂದ ಮಾನವರೂಪವನ್ನು ತ್ಯಜಿಸಿ ಹಂಸ ಪಕ್ಷಿಗಳ ರೂಪವನ್ನು ಧರಿಸಿ ಮಿಲನಕ್ರಿಯೆಯಲ್ಲಿ ತೊಡಗಿಕೊಂಡೆವು. ವಿಧಿನಿಯಾಮಕವೇನೋ ಎಂಬಂತೆ ಅದೇ ಸಮಯದಲ್ಲಿ ಬ್ರಹ್ಮರ್ಷಿ ವಿಶ್ವಾಮಿತ್ರರು ನಮ್ಮ ಆಶ್ರಮಕ್ಕೆ ಆಗಮಿಸಿದರು. ಮಿಲನಮಹೋತ್ಸವದ ತುತ್ತತುದಿಯಲ್ಲಿ ಸಮಾಧಿಸ್ಥರಾಗಿದ್ದ ನಮಗೆ ಅವರ ಆಗಮನ ಅರಿವಿಗೇ ಬರಲಿಲ್ಲ. ವಿಶ್ವಾಮಿತ್ರರು ತಮ್ಮ ದಿವ್ಯದೃಷ್ಟಿಯಿಂದ ನಾವು ಹಂಸಪಕ್ಷಿಗಳ ರೂಪದಲ್ಲಿ ಸುಖಿಸುತ್ತಿರುವುದನ್ನು ನೋಡಿದರು. ಉಗ್ರಕೋಪಿಯಾದ ಆ ಮಹಾಮುನಿಯು ಕ್ರೋಧದಿಂದ ‘ಬ್ರಹ್ಮರ್ಷಿಯಾದ ನನ್ನನ್ನು ಅರ್ಘ್ಯ, ಪಾದ್ಯ, ಅಚಮನಗಳನ್ನು ನೀಡಿ ಯಥೋಚಿತವಾಗಿ ಸತ್ಕರಿಸದೆ, ನನ್ನ ಇರುವನ್ನು ಉಪೇಕ್ಷಿಸಿ ಅವಮಾನಕ್ಕೆ ಈಡುಮಾಡಿದ್ದೀರಿ. ತಪಸ್ವಿಗಳಾಗಿ ನಿಮ್ಮ ಕರ್ತವ್ಯಗಳನ್ನು ಆಚರಿಸುವ ಬದಲು ಪ್ರಾಣಿಗಳ ರೂಪದಲ್ಲಿ ಅಸಹ್ಯಕರವಾದ, ಅನೀತಿಕರವಾದ ಪಾಶವೀ ಕಾಮದಲ್ಲಿ ತೊಡಗಿ ಈ ಸ್ಥಳದ ಪಾವಿತ್ರ್ಯವನ್ನು ಹಾಳುಗೆಡಹಿದ್ದೀರಿ. ಅತಿಥಿಗಳನ್ನು ಸತ್ಕರಿಸುವ ಸಾತ್ತ್ವಿಕ ಕರ್ತವ್ಯವನ್ನು ನಿರ್ಲಕ್ಷಿಸಿ ದೇಹಕಾಮನೆಗೆ ವಶರಾಗಿ ರಾಜಸವಾದ ವರ್ತನೆಯನ್ನು ತೋರಿದ್ದೀರಿ. ಈ ಸ್ಥಾನದಲ್ಲಿರಲು ನೀವು ಸರ್ವಥಾ ಅರ್ಹರಲ್ಲ. ರಾಜಸ ಗುಣಗಳಿಂದ ಉನ್ಮತ್ತರಾದ ನೀವು ಚಂದ್ರವಂಶದ ರಾಜರ ಸಿಂಹಾಸನದಲ್ಲಿ, ನೀವು ಧರಿಸಿರುವ ಹಂಸಪಕ್ಷಿಗಳ ರೂಪದಲ್ಲಿಯೇ ಜಡವಾಗಿ ನೆಲೆಸಿ’ ಎಂದು ಶಾಪವಿತ್ತರು. ಶೃಂಗಾರದಿಂದ ತೋಯ್ದ ಬತ್ತಲು ದೇಹಗಳ ಮೇಲೆ ರೌದ್ರ ರಸವನ್ನು ಎರಚಿದಂತಾಯಿತು. ಹೀರುತ್ತಿದ್ದ ಜೇನು ಕಹಿಯಾಯಿತು. ಸ್ವರ್ಗಾನಂದದ ಮಧುಬಟ್ಟಲು ಸಿಡಿದು ಚೂರಾಯಿತು! ಅದ್ಭುತವಾಗಿದ್ದ ನಿಸರ್ಗವು ಕ್ಷಣಮಾತ್ರದಲ್ಲಿ ಎದ್ದ ಬಿರುಗಾಳಿಯಿಂದ ಬೀಭತ್ಸವಾಯಿತು. ಆವರಿಸಿದ್ದ ಮಾಯೆಯ ತೆರೆ ಸರಿದು ನಮ್ಮ ನಯನಗಳು ಶುಭ್ರವಾದವು.

ಅಪರಾಧದ ಅರಿವಾಗಿ, ವಿಶ್ರಾಮಿತ್ರರ ಕಾಲುಗಳ ಮೇಲೆರಗಿ ಅಶ್ರುರಸಧಾರೆಯಿಂದ ಅವರ ಪಾದಗಳನ್ನು ತೊಳೆದೆವು. ನಮ್ಮ ತಪ್ಪನ್ನು ಮನ್ನಿಸಿದ ವಿಶ್ವಾಮಿತ್ರರು ‘ಮುಂದೆ ದ್ವಾಪರಯುಗದಲ್ಲಿ ಪಾಂಚಾಲ ನರೇಶನಾದ ದ್ರುಪದನಿಗೆ ಯಜ್ಞಕುಂಡದಿಂದ ಪುತ್ರಿಯೊಬ್ಬಳು ಜನಿಸುತ್ತಾಳೆ. ಅವಳು ಚಂದ್ರವಂಶದ ಪಾಂಡುಮಹಾರಾಜನ ಐವರು ಪುತ್ರರನ್ನು ವರಿಸುತ್ತಾಳೆ. ಅವಳ ಶ್ರೀಮುಡಿ ನಿಮ್ಮನ್ನು ಸ್ಪರ್ಶಿಸಿದ ದಿನ ನೀವು ಶಾಪವಿಮೋಚನೆ ಹೊಂದಿ ಮೊದಲಿನ ರೂಪವನ್ನು ಪಡೆಯುತ್ತೀರಿ. ನೀವು ಜಡವಾಗಿದ್ದರೂ ನೀವು ಸಂಚಯಿಸಿದ ತಪಃಶಕ್ತಿ ಚೈತನ್ಯವಾಗಿ ನಿಮ್ಮೊಂದಿಗಿರುತ್ತದೆ ಎಂದು ಉಶ್ಶಾಪವನ್ನು ನೀಡಿ ಹೊರಟುಹೋದರು. ಅಂದಿನಿಂದ ಈ ಕ್ಷಣಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದೆವು. ಸಿಂಹಾಸನದ ಶಿರೋಭಾಗದಲ್ಲಿರುವ ನಮ್ಮನ್ನು ದ್ರೌಪದಿಯ ಶ್ರೀಮುಡಿ ಸ್ಪರ್ಶಿಸಬೇಕೆಂದರೆ ಅವಳು ಸಿಂಹಾಸನವನ್ನೇರುವುದು ಅನಿವಾರ್ಯವಾಗಿತ್ತು. ಅದಕ್ಕೆಂತಲೇ ಈ ನಾಟಕವನ್ನು ಸೃಷ್ಟಿಸಿದೆವು. ನಾವಿನ್ನು ಹೊರಡುತ್ತೇವೆ, ನಿಮಗೆಲ್ಲ ಮಂಗಳವುಂಟಾಗಲಿ’ ಎಂದು ಆ ತಪಸ್ವಿಯು ಹರಸಿ ಅಲ್ಲಿಂದ ಪತ್ನೀಸಮೇತನಾಗಿ ನಿರ್ಗಮಿಸಿದನು.

ಅವರು ನಿರ್ಗಮಿಸುತ್ತಿದ್ದಂತೆಯೇ ನೆರೆದವರೆಲ್ಲರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಅಲ್ಲಿಯವರೆಗೆ ವ್ಯವಸ್ಥಿತವಾಗಿ ನಡೆಯುತ್ತಿದ್ದ ಸಭೆಯಲ್ಲಿ ಗುಜುಗುಜು ಮಾತಿನ ಗೊಂದಲವೆದ್ದಿತು. “ಚಂದ್ರವಂಶದ ಅರಸೊತ್ತಿಗೆಯನ್ನು ಹೆಣ್ಣೊಬ್ಬಳು ಏರಿದ ಐತಿಹ್ಯವೇ ಇಲ್ಲ” ಎಂಬ ಅಸ್ಪಷ್ಟ ಕೂಗು ಯಾವುದೋ ಮೂಲೆಯಿಂದ ಕೇಳಿಬಂದಿತು. ಕೆಲವೇ ಕ್ಷಣಗಳಲ್ಲಿ ಅದೇ ಕೂಗು ಸಭಾಂಗಣದ ಮೂಲೆಮೂಲೆಗಳಲ್ಲಿಯೂ ಪ್ರತಿಧ್ವನಿಸಿತು. ಎಲ್ಲರೂ ಕಾತರದಿಂದ ಧರ್ಮಶಾಸ್ತ್ರಜ್ಞರ ಮುಖಗಳನ್ನು ನೋಡಿದರು. ತಮ್ಮೊಳಗೆಯೇ ಸಮಾಲೋಚಿಸಿದ ಶಾಸ್ತ್ರಜ್ಞರು, “ಆರೋಹಣದ ಮುಹೂರ್ತದಲ್ಲಿ ಅವರೋಹಣ ಮಾಡಲು ಶಾಸ್ತ್ರದಲ್ಲಿ ಅವಕಾಶಗಳಿಲ್ಲ. ಶಾಸ್ತ್ರದ ದೃಷ್ಟಿಯಿಂದ ನೋಡಿದರೆ ಮಾತ್ರ ದ್ರೌಪದಿಯೇ ಆರ್ಯಾವರ್ತದ ನೂತನ ಸಾಮ್ರಾಜ್ಞಿ” ಎಂಬ ಅಭಿಪ್ರಾಯವನ್ನು ಮಂಡಿಸಿ ಮೌನಕ್ಕೆ ಜಾರಿದರು. ಧರ್ಮಜನು ಕಡೆಯ ದಾರಿಯೆಂಬಂತೆ ವ್ಯಾಸರ ಸಮಕ್ಷಕ್ಕೆ ಬಂದು ಕೈಮುಗಿದು ನಿಂತ. ಸುದೀರ್ಘವಾಗಿ ಯೋಚಿಸಿದ ನಂತರ ವ್ಯಾಸರು, “ಪರಂಪರೆ ಮುರಿಯಕೂಡದು, ಶಾಸ್ತ್ರವನ್ನೂ ಧಿಕ್ಕರಿಸಲಾಗದು, ನಿಮ್ಮೆಲ್ಲರ ದನಿಯನ್ನೂ ನಿರಾಕರಿಸಲಾಗದು. ಆದ್ದರಿಂದ ಯಾರಿಗೂ ಅಸಮಾಧಾನವಾಗದಂತಹ ಆಪದ್ಧರ್ಮವನ್ನು ಸೂಚಿಸುತ್ತಿದ್ದೇನೆ. ದ್ರೌಪದಿ, ಏರಿದ ಸಿಂಹಾಸನವನ್ನು ಇಳಿಯುವುದೇನೂ ಬೇಕಿಲ್ಲ. ಶಾಸ್ತ್ರಕ್ಕಾಗಿ ಆಕೆಯೇ ಚಕ್ರವರ್ತಿನಿಯಾಗಿರಲಿ, ಆದರೆ ಆಡಳಿತದ ಸೂತ್ರಗಳು ಯುಧಿಷ್ಠಿರನ ಕೈಯಲ್ಲಿರಲಿ. ರಾಜದಂಡವನ್ನು ದ್ರೌಪದಿಯೇ ಹಿಡಿಯಲಿ, ಆದರೆ ಅವಳ ಹೆಸರಿನಲ್ಲಿ ಅದನ್ನು ಧರ್ಮಜನೇ ಪ್ರಯೋಗಿಸಲಿ. ಪಾಂಚಾಲಿ ತನ್ನ ಪತಿಗಳು ರೂಪಿಸಿದ ಶಾಸನಗಳ ಮೇಲೆ ರಾಜಮುದ್ರೆಯನ್ನು ಒತ್ತಿದರೆ ಸಾಕು. ಈ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಗೊಂದಲ, ಪ್ರತಿರೋಧಗಳಿಗೆ ಆಸ್ಪದವಿಲ್ಲದಂತೆ, ಶಾಸ್ತ್ರಕ್ಕೂ ಅಪಚಾರವಾಗದ ಹಾಗೆ ಸಾಂಗವಾಗಿ ರಾಜ್ಯಾಡಳಿತವನ್ನು ನಿರ್ವಹಿಸಬಹುದು. ಭವಿಷ್ಯದಲ್ಲಿ ಮತ್ತೊಮ್ಮೆ ಉಚಿತ ಮುಹೂರ್ತವು ಸನ್ನಿಹಿತವಾದಾಗ ದ್ರೌಪದಿಯು ತಾನೇ ಮುಂದಾಗಿ ಪದತ್ಯಾಗ ಮಾಡಲಿ, ಆಗ ವೈಭವದಿಂದ ಧರ್ಮಜನ ಅಭಿಷೇಚನವನ್ನು ಮಾಡಿದರಾಯಿತು” ಎಂದರು.

ವ್ಯಾಸರ ಮಾತಿಗೆ ಸಭೆ ಕರತಾಡನದ ಮೂಲಕ ತನ್ನ ಸಮ್ಮತಿಯನ್ನು ದಾಖಲಿಸಿತು.

“ಈ ಘಟನೆಯೂ ಮಹಾಕಾವ್ಯದಲ್ಲಿ ಸೇರಿಕೊಳ್ಳುತ್ತದೆಯೇ?” – ನಾನು ಕುತೂಹಲದಿಂದ ಗುರುಗಳನ್ನು ಪ್ರಶ್ನಿಸಿದೆ. “ಇದು ಮಹಾಕಾವ್ಯವು ಒಳಗೊಳ್ಳುವಷ್ಟು ಚಾರಿತ್ರಿಕವಾದ ಘಟನೆಯೇನೂ ಅಲ್ಲ” ಎಂದು ಚುಟುಕಾಗಿ ಉತ್ತರಿಸಿದರು ವ್ಯಾಸರು. ಇಷ್ಟೆಲ್ಲ ನಡೆಯುವಾಗ ಮೌನವಾಗಿದ್ದ ದ್ರೌಪದಿಯು ಈಗ ಕುಳಿತಲ್ಲೇ ಕಿರುನಗೆಯೊಂದನ್ನು ಸೂಸಿದಳು. ಬ್ರಹ್ಮಸೂತ್ರವನ್ನು ಬರೆದ ಬಾದರಾಯಣರು ಆ ನಗುವಿನ ಮರ್ಮವೇನಿರಬಹುದೆಂದು ಯೋಚಿಸತೊಡಗಿದರು.

(ಉತ್ಥಾನ ಕಥಾಸ್ಪರ್ಧೆ -೨೦೨೧ರಲ್ಲಿ ಮೂರನೆಯ ಬಹುಮಾನ ಪಡೆದ ಕಥೆ)

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat