ಉತ್ತರಪ್ರದೇಶ-ಕೇಂದ್ರಿತವಾಗಿದ್ದ ‘ಸಿಮಿ’ (‘ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯ’) ಈಗ್ಗೆ ನಾಲ್ಕು ದಶಕಗಳ ಹಿಂದೆಯೆ ದೇಶದಾದ್ಯಂತ ಕಾರ್ಯಪ್ರವೃತ್ತವಾಗಿತ್ತು. ಹಿಂಸಾಮಾರ್ಗವನ್ನನುಸರಿಸಿಯಾದರೂ ಇಡೀ ದೇಶವನ್ನು ಇಸ್ಲಾಮೀಕರಿಸಬೇಕು – ಎಂಬುದು ಅದರ ಲಕ್ಷ್ಯವಾಗಿತ್ತು. ಸಾಮಾಜಿಕ ಸಂಘಟನೆಯೆಂದು ತನ್ನ ಬಗೆಗೆ ಪ್ರಚಾರ ನಡೆಸುತ್ತಿದ್ದ ‘ಸಿಮಿ’ಯ ನಿಜಸ್ವರೂಪ ಕ್ರಮೇಣ ಜಾಹೀರಾಗಿ ಅದು 2001ರಲ್ಲಿ ನಿಷೇಧಿಸಲ್ಪಟ್ಟಿತು. ಆದರೆ ಎಂದಿನಿಂದಲೂ ಮುಸ್ಲಿಂ ಪಕ್ಷಪಾತಿಯಾದ ಸೋನಿಯಾಗಾಂಧಿ-ನಿಯಂತ್ರಿತ ಯು.ಪಿ.ಎ. ಸರ್ಕಾರ 2005ರಲ್ಲಿ ಆ ನಿಷೇಧವನ್ನು ರದ್ದುಪಡಿಸಿತು. ಆದರೆ ‘ಸಿಮಿ’ಯ ರಾಷ್ಟ್ರಘಾತಕ ಕಾರ್ಯಾವಳಿಗಳು ಎಷ್ಟು ಹರಡುತ್ತ ಹೋದವೆಂದರೆ ಮನಮೋಹನ್ಸಿಂಗ್ ಪ್ರಧಾನಿಯಾಗಿದ್ದ ಕಾಂಗ್ರೆಸ್ ಸರ್ಕಾರವೇ 2008ರಲ್ಲಿ ಮತ್ತೆ ನಿಷೇಧ ಹೇರುವುದು ಅನಿವಾರ್ಯವಾಯಿತು.
ಕಳೆದ ಸೆಪ್ಟೆಂಬರ್ 27ರಂದು ಒಂದೇ ಬಾರಿಗೆ ನ್ಯಾಶನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್.ಐ.ಎ.) ದೇಶದೆಲ್ಲೆಡೆ ಒಂದು ಸಂಘಟನೆಗೆ ಸಂಬಂಧಿಸಿ ಹದಿನೈದು ರಾಜ್ಯಗಳಲ್ಲಿದ್ದ ಅದರ ಸಹವರ್ತಿ ಸಂಸ್ಥಾಸಮೂಹಗಳ ಮೇಲೆ ದಾಳಿ ನಡೆಸಿದುದು ದೇಶವನ್ನೇ ಚಕಿತಗೊಳಿಸಿತು. ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ’ (ಪಿ.ಎಫ್.ಐ.) ಎಂಬ ಉಗ್ರವಾದಿ ಜಾಲದ ಬಗೆಗೆ ಸಾಮಾನ್ಯ ಜನತೆಗೆ ತಿಳಿದಿರುವುದು ಕಡಮೆ; ಆದರೆ ಅದು ನಡೆಸುವ ವಿಧ್ವಂಸಕಾರ್ಯಗಳು ಜನಜನಿತ. ಪಿ.ಎಫ್.ಐ. ಚಟುವಟಿಕೆಗಳು ರಾಷ್ಟ್ರದ ಭದ್ರತೆಗೆ ಧಕ್ಕೆ ತರುವಂಥವಾಗಿವೆ ಎಂದು ಕೇಂದ್ರಸರ್ಕಾರದ ಗೃಹಖಾತೆಯ ವರದಿ ಇದೆ.
ರಾಜಕೀಯ ಹತ್ಯೆಗಳು, ‘ಮನಿ ಲಾಂಡರಿಂಗ್’, ವಿಧಿಬಾಹಿರ ಮತಾಂತರಣ, ‘ದೈವವಿರೋಧಿ’ಗಳ ವಿರುದ್ಧ ಹಿಂಸಾತಾಂಡವ – ಇಂತಹ ಪ್ರಕರಣಗಳ ಸಂಬಂಧದಲ್ಲಿ ಆಗಿಂದಾಗ ‘ಪಿ.ಎಫ್.ಐ.’ ಹೆಸರು ಉಲ್ಲೇಖಗೊಳ್ಳುತ್ತಿರುತ್ತದೆ. ‘ಅನ್ಲಾಫುಲ್ ಆ್ಯಕ್ಟಿವಿಟೀಸ್ (ಪ್ರಿವೆನ್ಶನ್) ಆ್ಯಕ್ಟ್’, ‘ಎಕ್ಸ್ಪ್ಲೋಸಿವ್ ಸಬ್ಸ್ಟೆನ್ಸಸ್ ಆ್ಯಕ್ಟ್’ ಮೊದಲಾದ ವಿವಿಧ ಶಾಸನಗಳಡಿಯಲ್ಲಿ 1,400 ಕ್ರಿಮಿನಲ್ ಮೊಕದ್ದಮೆಗಳು ದಾಖಲೆಗೊಂಡಿವೆ. ಹಿಂದೂ ಕಾರ್ಯಕರ್ತರ ಹತ್ಯೆಗಾಗಿಯೆ ಕೊಲೆಗಾರ ತಂಡವೊಂದನ್ನು ಪಿ.ಎಫ್.ಐ. ಏರ್ಪಡಿಸಿರುವುದೂ ಸರ್ಕಾರದ ಗಮನಕ್ಕೆ ಬಂದಿದೆ.
ವಿವಿಧ ನಾಮಾಂತರಗಳು
ಅದು ಕಾಲದಿಂದ ಕಾಲಕ್ಕೆ ಬೇರೆಬೇರೆ ಹೆಸರುಗಳನ್ನು ಧರಿಸಿ ರಾಷ್ಟ್ರವಿರೋಧಿ ಕಾರ್ಯಗಳಲ್ಲಿ ತೊಡಗುವುದೂ ಪಿ.ಎಫ್.ಐ. ಬಗೆಗೆ ಜನಕ್ಕೆ ಹೆಚ್ಚು ತಿಳಿಯದಿರುವುದಕ್ಕೆ ಒಂದು ಕಾರಣ.
ಅದರ ಶಾಖೆ-ಉಪಶಾಖೆಗಳೇ ಕರ್ನಾಟಕದಲ್ಲಿ ‘ಫೋರಂ ಫಾರ್ ಡಿಗ್ನಿಟಿ’, ಆಂಧ್ರಪ್ರದೇಶದಲ್ಲಿ ‘ಅಸೋಸಿಯೇಶನ್ ಫಾರ್ ಸೋಷಲ್ ಜಸ್ಟಿಸ್”, ಗೋವಾದಲ್ಲಿ ‘ಸಿಟಿಜನ್ಸ್ ಫೋರಂ’, ಬಂಗಾಳದಲ್ಲಿ ‘ನಾಗರಿಕ ಅಧಿಕಾರ ಸುರಕ್ಷಾ ಸಮಿತಿ’, ರಾಜಸ್ಥಾನದಲ್ಲಿ ‘ಕಮ್ಯೂನಿಟಿ ಸೋಷಲ್ ಅಂಡ್ ಎಜುಕೇಶನಲ್ ಸೊಸೈಟಿ’ ಮೊದಲಾದ ನಾನಾ ಹೆಸರುಗಳಡಿಯಲ್ಲಿ ಕಾರ್ಯಪ್ರವೃತ್ತವಾಗಿದ್ದವು. ವಿರೋಧಿಗಳ ಹತ್ಯೆ, ಮತದ್ವೇಷ ಪ್ರಸಾರ, ಲವ್-ಜೆಹಾದ್ ಪ್ರಕರಣಗಳೆಲ್ಲದರ ಹಿಂದಿದ್ದವು ಈ ಜಾಲಗಳೇ. 2012ರಲ್ಲಿ ಪ್ಯಾಲೆಸ್ಟೀನಿನ ಮೇಲೆ ಇಸ್ರೇಲ್ ದಾಳಿ ನಡೆದಾಗ ಅದನ್ನು ವಿರೋಧಿಸಿ ದೆಹಲಿಯ ಇಸ್ರೇಲ್ ದೂತಾವಾಸ ಕಚೇರಿಯ ಮುಂದೆ ಪ್ರತಿಭಟನೆಗಳನ್ನು ಆಯೋಜಿಸಿದ್ದವು ಈ ಜಾಲಗಳೇ. ಸಿಟಿಜನ್ಶಿಪ್ ಅಮೆಂಡ್ಮೆಂಟ್ ಆ್ಯಕ್ಟ್ (ಸಿ.ಎ.ಎ.) ವಿರುದ್ಧ ಪ್ರತಿಭಟನೆಗಳು ಮೊದಲಾದ ಕಾರ್ಯಾವಳಿಗಳ ಹಿಂದೆ ಕೆಲಸ ಮಾಡಿದ್ದವೂ ಇವೇ.
ಈ ಹಿಂದೆಯೆ 355 ಮಂದಿ ಪಿ.ಎಫ್.ಐ. ಕಾರ್ಯಕರ್ತರ ವಿರುದ್ಧ ಮೊಕದ್ದಮೆಗಳು ದಾಖಲೆಯಾಗಿ 46 ಮಂದಿಗೆ ದಂಡನೆಯನ್ನೂ ವಿಧಿಸಲಾಗಿತ್ತು.
ಕಳೆದ (2022) ಜುಲೈ 12ರಂದು ಪಟ್ನಾಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ಅಶಾಂತಿಯನ್ನು ಸೃಷ್ಟಿಸಿದ್ದುದು ಪಿ.ಎಫ್.ಐ.
ಇತ್ತೀಚಿನ ‘ಹಿಜಾಬ್’ ಸಮಸ್ಯೆಯನ್ನು ಹುಟ್ಟುಹಾಕುವುದರಲ್ಲಿಯೂ ಪಿ.ಎಫ್.ಐ. ಪಾತ್ರವಿತ್ತು. ಕರ್ನಾಟಕದಲ್ಲಿ ಹಿಜಾಬ್ ಪರ ಚಳವಳಿಯನ್ನು ಹುಟ್ಟುಹಾಕಿದ ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯ’ ಸೇರಿದಂತೆ ಪಿ.ಎಫ್.ಐ.-ಪ್ರವರ್ತಿತ ವೇದಿಕೆಗಳು ಹಲವಾರು.
ಸತತವಾಗಿ ಸರ್ಕಾರದ ವಿರುದ್ಧ ಪ್ರಚಾರ ನಡೆಸುವುದು ಪಿ.ಎಫ್.ಐ.ನ ಆದ್ಯತೆಯ ಕಾರ್ಯಕ್ರಮವಾಗಿದೆ. ‘ಸಂವಿಧಾನ್ ಸುರಕ್ಷಾ ಆಂದೋಲನ್’ ಮೊದಲಾದ ಹೆಸರುಗಳಲ್ಲಿ ಪಿ.ಎಫ್.ಐ. ಸರ್ಕಾರದ ಧೋರಣೆಗಳಿಗೆ ವಿರೋಧವನ್ನು ಸಂಘಟಿಸುತ್ತದೆ.
ಹೊಸ ಅವತರಣ
1990ರ ದಶಕದಲ್ಲಿ ನ್ಯಾಶನಲ್ ಡೆವಲಪ್ಮೆಂಟ್ ಫ್ರಂಟ್ ಮೊದಲಾದ ಹೆಸರುಗಳಲ್ಲಿ ಕಾರ್ಯಶೀಲವಾಗಿದ್ದ ಕರ್ನಾಟಕ, ತಮಿಳುನಾಡು ಮೊದಲಾದೆಡೆಗಳ ತಂಡಗಳೇ ಅನಂತರ ‘ಪಿ.ಎಫ್.ಐ.’ ಸಂಘಟನೆಯಡಿ ಒಗ್ಗೂಡಿದವು. ಕೇರಳದಲ್ಲಿಯೆ ಪಿ.ಎಫ್.ಐ.ಗೆ 50,000 ಸದಸ್ಯರೂ ಎರಡು ಲಕ್ಷಕ್ಕೂ ಮಿಕ್ಕ ಬೆಂಬಲಿಗರೂ ಇದ್ದಾರೆಂದು ಅಂದಾಜು.
ಸಾಮಾನ್ಯವಾಗಿ ಸರ್ಕಾರ ಇಂತಹ ತೀಕ್ಷ್ಣ ಕ್ರಮಗಳನ್ನು ಕೈಗೊಂಡಾಗ ‘ಉದಾರವಾದಿ’ಗಳೂ ತಥೋಕ್ತ ‘ಸೆಕ್ಯುಲರಿಸ್ಟ’ರೂ ಸಿ.ಪಿ.ಎಂ. ಪಕ್ಷ ಪ್ರಭೃತಿಗಳೂ ಸರ್ಕಾರವು ಅಮಾನವೀಯ, ಅನಿಯಂತ್ರಿತ, ಸ್ವಚ್ಛಂದ ಎಂದೆಲ್ಲ ಹುಯಿಲೆಬ್ಬಿಸುವುದು ವಾಡಿಕೆ. ಆದರೆ ಪಿ.ಎಫ್.ಐ.ಯನ್ನು ಕೇಂದ್ರಸರ್ಕಾರ ನಿಷೇಧಿಸಿ ಅದನ್ನು ಅಣಗಿಸಹೊರಟಿರುವಾಗ ಯಾರೂ ಕಿಮಕ್ಕೆಂದಿಲ್ಲದುದನ್ನು ಗಮನಿಸಬೇಕು. ತೀಕ್ಷ್ಣ ಕಾರ್ಯಾಚರಣೆ ಪಿ.ಎಫ್.ಐ. ವಿರುದ್ಧ ನಡೆಯಬೇಕಾಗಿದ್ದುದರ ಅನಿವಾರ್ಯತೆಯನ್ನು ಈ ಬೆರಕೆ ಕೂಟಗಳೂ ಮನಗಂಡಿವೆಯೆಂದು ಇದರಿಂದ ದ್ಯೋತವಾಗುತ್ತದೆ. ಸರ್ಕಾರದ ಕ್ರಮ ಸರಿಯಾಗಿದೆಯೆಂದು ಸಮರ್ಥಿಸುವ ಧ್ವನಿಗಳೂ ಧಾರಾಳವಾಗಿ ಕೇಳಬಂದಿವೆ. ಮೋದಿ ಪ್ರಭುತ್ವದ ಸರ್ವೇಸಮಸ್ತ ಕ್ರಮಗಳನ್ನೂ ಟೀಕಿಸುವುದನ್ನೇ ಹವ್ಯಾಸವಾಗಿಸಿಕೊಂಡಿರುವ ಕೆಲವು ಮಾಧ್ಯಮಗಳೂ ಈಗಿನ ಎನ್.ಐ.ಎ.ಯ ಕ್ರಮಕ್ಕೆ ಆಕ್ಷೇಪಿಸಿಲ್ಲ. ಹೀಗೆ ಪಿ.ಎಫ್.ಐ.ಯ ದಂಡನಾರ್ಹತೆ ಎಲ್ಲೆಡೆ ಸಾಬೀತಾಗಿದೆ.
ಪೂರ್ವಾವತಾರ: ‘ಸಿಮಿ’
ಉತ್ತರಪ್ರದೇಶ-ಕೇಂದ್ರಿತವಾಗಿದ್ದ ‘ಸಿಮಿ’ (‘ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯ’) ಈಗ್ಗೆ ನಾಲ್ಕು ದಶಕಗಳ ಹಿಂದೆಯೆ ದೇಶದಾದ್ಯಂತ ಕಾರ್ಯಪ್ರವೃತ್ತವಾಗಿತ್ತು. ಹಿಂಸಾಮಾರ್ಗವನ್ನನುಸರಿಸಿಯಾದರೂ ಇಡೀ ದೇಶವನ್ನು ಇಸ್ಲಾಮೀಕರಿಸಬೇಕು – ಎಂಬುದು ಅದರ ಲಕ್ಷ್ಯವಾಗಿತ್ತು. ಸಾಮಾಜಿಕ ಸಂಘಟನೆಯೆಂದು ತನ್ನ ಬಗೆಗೆ ಪ್ರಚಾರ ನಡೆಸುತ್ತಿದ್ದ ‘ಸಿಮಿ’ಯ ನಿಜಸ್ವರೂಪ ಕ್ರಮೇಣ ಜಾಹೀರಾಗಿ ಅದು 2001ರಲ್ಲಿ ನಿಷೇಧಿಸಲ್ಪಟ್ಟಿತು. ಆದರೆ ಎಂದಿನಿಂದಲೂ ಮುಸ್ಲಿಂ ಪಕ್ಷಪಾತಿಯಾದ ಸೋನಿಯಾಗಾಂಧಿ-ನಿಯಂತ್ರಿತ ಯು.ಪಿ.ಎ. ಸರ್ಕಾರ 2005ರಲ್ಲಿ ಆ ನಿಷೇಧವನ್ನು ರದ್ದುಪಡಿಸಿತು. ಆದರೆ ‘ಸಿಮಿ’ಯ ರಾಷ್ಟ್ರಘಾತಕ ಕಾರ್ಯಾವಳಿಗಳು ಎಷ್ಟು ಹರಡುತ್ತ ಹೋದವೆಂದರೆ ಮನಮೋಹನ್ಸಿಂಗ್ ಪ್ರಧಾನಿಯಾಗಿದ್ದ ಕಾಂಗ್ರೆಸ್ ಸರ್ಕಾರವೇ 2008ರಲ್ಲಿ ಮತ್ತೆ ನಿಷೇಧ ಹೇರುವುದು ಅನಿವಾರ್ಯವಾಯಿತು. ಆಗಿನಿಂದ ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ದರೂ ‘ಸಿಮಿ’ ನಿಷೇಧ ಪುನರಾವೃತ್ತಗೊಳ್ಳುತ್ತ ಬಂದಿದೆ.
ನಿಷೇಧಿತ ‘ಸಿಮಿ’ಯ 2006ರ ತರುವಾಯದ ನೂತನ ರೂಪವೇ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ’ ಅಥವಾ ‘ಪೀಪಲ್ಸ್ ಫ್ರಂಟ್ ಆಫ್ ಇಂಡಿಯ’. ಅದರ ಲಕ್ಷ್ಯವಾದರೋ ಹಿಂದಿನದೇ – ‘ಜೆಹಾದ್’ ಆಚರಣೆ, ಇಸ್ಲಾಮೀಕರಣ.
ಇದು ಕ್ರಮೇಣ ಎಷ್ಟು ವ್ಯಾಪಕಗೊಂಡಿತೆಂದರೆ ಕೇರಳದ ಕಾಂಗ್ರೆಸ್-ಯು.ಡಿ.ಎಫ್. ಸರ್ಕಾರ 2012ರಲ್ಲಿ ಪಿ.ಎಫ್.ಐ. ರಾಷ್ಟ್ರಘಾತಕ ಸಂಘಟನೆಯೆಂದೂ ಅದು ‘ಮುಜಾಹಿದೀನ್’ಗೆ ಅನುಬಂಧವಾಗಿ ಕೆಲಸ ಮಾಡುತ್ತಿದೆಯೆಂದೂ ಅದರ ಹಲವರು ಸದಸ್ಯರಿಗೆ ತಾಲಿಬಾನಿನೊಡನೆ, ಅಲ್ಖೈದಾದೊಡನೆ ನಂಟು ಇರುವುದು ಸಾಕ್ಷ್ಯಪಟ್ಟಿದೆಯೆಂದೂ ಕೇಂದ್ರಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇಸ್ಲಾಮೀಕರಣದ ಗುರಿ ಹೊಂದಿದ್ದ ನಾಲ್ಕಾರು ಸಂಸ್ಥೆಗಳು ಪಿ.ಎಫ್.ಐ.ನಲ್ಲಿ ವಿಲೀನಗೊಂಡಿದ್ದವು.
ಉಗ್ರವಾದಿ ತರಬೇತಿ ಕೇಂದ್ರಗಳು
ವಿದೇಶಗಳಲ್ಲೂ ಪಿ.ಎಫ್.ಐ ಬೆಂಬಲಿಗ ವ್ಯವಸ್ಥೆಗಳಿವೆ. ಇತ್ತೀಚೆಗೂ ವಿದೇಶಗಳಿಂದ ಅದಕ್ಕೆ 120 ಕೋಟಿ ರೂ. ಹಣ ಹರಿದುಬಂದಿತ್ತು. ಟರ್ಕಿ-ಸ್ಥಿತ ಉಗ್ರವಾದಿ ಸಂಘಟನೆಗಳೊಡನೆ ಪಿ.ಎಫ್.ಐ. ನಂಟು ಇರುವುದು ತಿಳಿದುಬಂದಿದೆ.
ಬಾಬ್ರಿ ಕಟ್ಟಡ ಧ್ವಂಸ, ಗುಜರಾತ್ ಗಲಭೆಗಳು ಮೊದಲಾದವಕ್ಕೆ ಸಂಬಂಧಿಸಿದ ವಿಡಿಯೋಗಳು, ‘India 2047: Towards Rule of Islam in India’ ಮೊದಲಾದ ಪ್ರಚಾರಸಾಹಿತ್ಯ, ವಿರೋಧಿಗಳ ಅಂಗಚ್ಛೇದನ ಚಿತ್ರಗಳು – ಇವೆಲ್ಲ ಧಾರಾಳವಾಗಿ ಪಿ.ಎಫ್.ಐ. ತರಬೇತಿ ಕಾರ್ಯಕ್ರಮಗಳಲ್ಲಿ ಬಳಕೆಗೊಳ್ಳುತ್ತವೆ.
ನಿಜಾಮಾಬಾದ್ ಭಾಗದಲ್ಲಿ ಒಬ್ಬ ಶಿಕ್ಷಕನೇ 200 ಉಗ್ರವಾದಿ ತಂಡಗಳನ್ನು ಸಿದ್ಧಪಡಿಸಿದ್ದುದರ ವರದಿಯಿದೆ.
‘ಐಸಿಸ್’ಗೆ ಸೇರುವುದಕ್ಕಾಗಿ ತರಬೇತಿಗಾಗಿ ಸಿರಿಯಾಕ್ಕೆ ಕರ್ನಾಟಕ-ಕೇರಳಗಳಿಂದ ತಂಡಗಳನ್ನು ರಚಿಸಿ ಕಳಿಸಿದ್ದುದೂ ಪಿ.ಎಫ್.ಐ. ಜಾಲವೇ.
ಬಂಗ್ಲಾದೇಶದೊಳಗಿನ ಉಗ್ರವಾದಿ ಮೂಲಗಳಿಂದ ಹಣ ಪಡೆದು ಪೂರ್ವಾಂಚಲ ಭಾರತದೆಲ್ಲೆಡೆ ಅಶಾಂತಿ ನಿರ್ಮಿಸುತ್ತಿರುವವು ಪಿ.ಎಫ್.ಐ. ಸಹವರ್ತಿ ಸಂಘಟನೆಗಳೇ.
ಮತಬ್ಯಾಂಕ್ ಬೇಟೆಯ ವಿಕೃತಿಗಳು
ಎಲ್ಲ ಮುಸ್ಲಿಂ ಸಂಘಟನೆಗಳನ್ನೂ ತಮ್ಮ ಮತ-ಬ್ಯಾಂಕ್ ವರ್ಧನೆಗಾಗಿ ಬಳಸಿಕೊಳ್ಳುವ ರಾಜಕಾರಣಿಗಳ ದೌರ್ಬಲ್ಯ ಪಿ.ಎಫ್.ಐ.ಗೆ ವರದಾನವಾಗಿದೆ. ಕೇರಳದಲ್ಲಿ ಮೊದಲಿಗೇ ಬೇರುಬಿಟ್ಟಿದ್ದ ಪಿ.ಎಫ್.ಐ. ಅನುಕೂಲ ಪರಿಸರವನ್ನು ಗಮನಿಸಿ ಕರ್ನಾಟಕಕ್ಕೂ ವಿಸ್ತರಿಸಿ ‘ಸೋಷಲ್ ಡೆಮೊಕ್ರ್ಯಾಟಿಕ್ ಪಾರ್ಟಿ’ ಎಂಬ ಹೆಸರಿನಲ್ಲಿ ಚುನಾವಣೆಯ ಕಣಕ್ಕೂ ಇಳಿದಿತ್ತು – ವಿಶೇಷವಾಗಿ ಕರಾವಳಿ ಭಾಗದಲ್ಲಿ. ಅದರ ಬೆಂಬಲವನ್ನು ಕಾಂಗ್ರೆಸ್, ಜೆ.ಡಿ.ಎಸ್. ಎರಡೂ ಬಳಸಿಕೊಂಡವು. ಆ ದ್ವಿಪಕ್ಷ ಕೂಡಿಕೆ ಸರ್ಕಾರ ಅಧಿಷ್ಠಿತವಾದೊಡನೆ ಮಾಡಿದ ಕೆಲಸವೆಂದರೆ ಪಿ.ಎಫ್.ಐ. ಕಾರ್ಯಕರ್ತರ ವಿರುದ್ಧ ನಡೆದಿದ್ದ ಮೊಕದ್ದಮೆಗಳನ್ನು ಬರಖಾಸ್ತುಗೊಳಿಸಿದ್ದು.
ಎಲ್ಲ ರಾಷ್ಟ್ರವಿರೋಧಿ ಪ್ರಯಾಸಗಳನ್ನು ನೇರವಾಗಿಯೂ ಪರೋಕ್ಷವಾಗಿಯೂ ಬೆಂಬಲಿಸುವ ಪರಂಪರೆ ಇರುವ ಸಿ.ಪಿ.ಎಂ.ಗೆ ಈಗ ಪಿ.ಎಫ್.ಐ. ಅದರದೇ ಕಂಕುಳ ಕುರು ಆಗಿರುವುದರಿಂದ ಅದರ ವಿರುದ್ಧ ಕಾರ್ಯಾಚರಣೆಗಳನ್ನೂ ಪ್ರಚಾರಾಭಿಯಾನವನ್ನೂ ನಡೆಸಿದೆ.
ಮತವಿದ್ವೇಷ-ಹಿಂಸಾಚರಣೆಗಳನ್ನೂ ರಾಜ್ಯಾಂಗೀಯ-ಸಾಮಾಜಿಕ ವ್ಯವಸ್ಥೆಗಳನ್ನು ಉಧ್ವಸ್ತಗೊಳಿಸುವುದನ್ನು ತಮ್ಮ ಕಾರ್ಯಪದ್ಧತಿಯನ್ನಾಗಿಸಿಕೊಂಡಿರುವ, ಹಾಗೂ ಎಲ್ಲ ಕಾನೂನು-ಸಭ್ಯತೆಗಳನ್ನೂ ಧಿಕ್ಕರಿಸುವ ಪಿ.ಎಫ್.ಐ.ನಂಥ ವಿಘಾತಕ ಸಂಸ್ಥಾಜಾಲಗಳಿಗೆ ಯಾವ ವ್ಯವಸ್ಥಾನಿಬದ್ಧ ದೇಶದಲ್ಲಿಯೂ ಸ್ಥಾನವಿರಬಾರದು. ಎಲ್ಲ ಸ್ವೀಕೃತ ಮೌಲ್ಯಗಳಿಗೂ ವ್ಯತಿರಿಕ್ತವಾಗಿರುವ ಈ ಮತ್ತು ತತ್ಸದೃಶ ಅನ್ಯ ಕೂಟಗಳ ದಮನಕ್ಕೆ ಆದ್ಯತೆ ಸಲ್ಲುತ್ತದೆ. ಇದೀಗ ಉಪಕ್ರಮಗೊಂಡಿರುವ ಮೋದಿ ಸರ್ಕಾರದ ದುಷ್ಟದಂಡನಾಭಿಯಾನ ಸಫಲಗೊಳ್ಳಲಿ ಎಂಬುದು ಇಡೀ ದೇಶದ ತೀವ್ರಾಕಾಂಕ್ಷೆಯಾಗಿದೆ.