ಮನುಷ್ಯ ಯಾವ ಲೋಕಕ್ಕೇ ಹೋಗಲಿ ಅಲ್ಲಿಗೆ ತನ್ನ ಹಳೇ ಚಾಳಿ, ಹಳೇ ಹಳವಂಡ ಗುಣಗಳನ್ನು ಒಯ್ಯುವುದು ಗ್ಯಾರಂಟಿ. ನಾನು ಬ್ರಹ್ಮಾಂಡದ ಯಾವುದೇ ತಾರಾಪುಂಜಕ್ಕೆ ಹೋದರೂ ಅಲ್ಲಿ ನಾನು ಕೇಳುವ ಮೊದಲ ಪ್ರಶ್ನೆ “ನೀವು ಯಾವ ಜಾತಿ? ಲಿಂಗಾಯಿತರೋ, ವೀರಶೈವರೋ? ನಮಗೂ ನಿಮಗೂ ಹೆಣ್ಗಂಡು ಆಗುತ್ತದೆಯೆ?”
ಅಬ್ಬಾ! ನಮ್ಮಿಂದ ಕೇವಲ ಹನ್ನೊಂದು ಪ್ರಕಾಶವರ್ಷ ದೂರದಲ್ಲಿ ಒಂದು ಪುಟ್ಟ ಮರಿ: ‘ರೋಸ್ 128ಬಿ’ ಎಂಬ ಹೊಸ ಗ್ರಹವನ್ನು “ಯೂರೋಪಿನ ಸದರ್ನ್ ಆಬ್ಜರ್ವೇಟರಿ” (European Southern Observatory)ಯವರು ಪತ್ತೆಹಚ್ಚಿದ ಸುದ್ದಿ ಓದಿ ರೊಮಾಂಚಿತನಾದೆ. ಕಾರಣ ಅಲ್ಲಿ ನಮ್ಮದೇ ಪೃಥ್ವಿಯ ರೀತಿಯ ವಾತಾವರಣ, ಇಲ್ಲಿಯಂತೆಯೇ ನೀರುನಿಡಿ, ಕುಚುಕುಚು ತಿನ್ನುಣ್ಣುವ ಅವಕಾಶ ಎಲ್ಲಾ ಇದೆಯಂತೆ. ಇನ್ನೇನು ಬೇಕು ನಮಗೆ?
ಹನ್ನೊಂದು ಪ್ರಕಾಶವರ್ಷ ಅಂದರೆ ಖಂಡಿತ ಅದು ದೂರವಲ್ಲ. ಇಲ್ಲಿ ಎಡವಿದರೆ ಅಲ್ಲಿ ಬೀಳುವುದು ಗ್ಯಾರಂಟಿ. ಅಮೆರಿಕದ ವಿಜ್ಞಾನಿಯೊಬ್ಬರು “ನಾವು ಉಗುಳಿದರೆ ಅಲ್ಲಿ ಸಿಡಿಯುತ್ತದೆ” ಎಂದು ಜೋಕ್ ಮಾಡಿದ್ದರು.
ಒಂದು ಪ್ರಕಾಶವರ್ಷ ಅಂದರೆ 9.46 ಟ್ರಿಲಿಯನ್ ಕಿ.ಮೀ., ಅರ್ಥಾತ್ 5.85 ಟ್ರಿಲಿಯನ್ ಮೈಲುಗಳು. ಮಿಲಿಯನ್ನ ಆಚೆಗೆ ಬಿಲಿಯನ್, ಬಿಲಿಯನ್ನ ಆಚೆಗೆ ಟ್ರಿಲಿಯನ್! ಕನ್ನಡದ ಅರ್ಥದಲ್ಲಿ ಕಂಡಾಪಟ್ಟಿ ಕಾಣಾಪಟ್ಟಿ ಕೂಗಳತಿ!
ನನಗೆ ಬೇಕಾದ ಅತಿಮುಖ್ಯ ಸಂಗತಿ ಇದರಲ್ಲಿದೆ. ಹೆಂಡತಿಯೊಂದಿಗೆ ಜಗಳವಾಡಿದರೆ ಅಲ್ಲಿಗೆ ಹೋಗಿ ಆರಾಮಾಗಿ ಮಸಾಲೆದೋಸೆ ತಿನ್ನಬಹುದೇ? ಥೇಟ್ ಬೆಂಗಳೂರಿನಂತೆಯೇ ವಾತಾವರಣ, ಹುಬ್ಬಳ್ಳಿಯ ಹುಂಚೀಮರ, ಮೈಸೂರಿನ ಅರಮನೆ ಮೈದಾನ ಅಲ್ಲಿದೆಯಂತೆ.
ಮನುಷ್ಯ ಯಾವ ಲೋಕಕ್ಕೇ ಹೋಗಲಿ ಅಲ್ಲಿಗೆ ತನ್ನ ಹಳೇ ಚಾಳಿ, ಹಳೇ ಹಳವಂಡ ಗುಣಗಳನ್ನು ಒಯ್ಯುವುದು ಗ್ಯಾರಂಟಿ. ನಾನು ಬ್ರಹ್ಮಾಂಡದ ಯಾವುದೇ ತಾರಾಪುಂಜಕ್ಕೆ ಹೋದರೂ ಅಲ್ಲಿ ನಾನು ಕೇಳುವ ಮೊದಲ ಪ್ರಶ್ನೆ “ನೀವು ಯಾವ ಜಾತಿ? ಲಿಂಗಾಯಿತರೋ, ವೀರಶೈವರೋ? ನಮಗೂ ನಿಮಗೂ ಹೆಣ್ಗಂಡು ಆಗುತ್ತದೆಯೆ?”
ಮನುಷ್ಯನ ಕೈಯಲ್ಲಿ ಸಿಕ್ಕರೆ ‘ಜ್ಯೋತಿ’ ಜಾತಿಯಾಗುತ್ತದೆ. ಬಯಲು ಆಲಯವಾಗುತ್ತದೆ. ಬ್ರಹ್ಮಾಂಡ-ಪಿಂಡಾಂಡದ ಪಂಚತತ್ತ್ವದ ಹುಳುಕು ಹುಂಚೀಹಣ್ಣು ಆಗುತ್ತದೆ.
ನಮ್ಮ ರಾಜಕಾರಣಿಗಳು ಕೇಳುವ ಮೊದಲ ಪ್ರಶ್ನೆ “ಅಲ್ಲಿ ನಮ್ಮ ಪಾರ್ಟಿ ಆಫೀಸ್ ಇದೆಯೆ?” ಅವರಿಗೆ ದೇಶ ಮುಖ್ಯವಲ್ಲ; ವೋಟು ಮುಖ್ಯ! ನನ್ನ ಹೆಂಡತಿ ಕೇಳುತ್ತಾಳೆ “ರೀ… ಅಲ್ಲೆ ಕುಕಿಂಗ್ ಮಾಹಿತಿ ಕೊಡಲು ಟೀವಿ ಚಾನಲ್ ಇದೆಯೆ?” ಎಂದು.
ನಮ್ಮಲ್ಲಿ ಕೆಲವರು ಚಾರಿತ್ರಿಕ ಪುರಷರಿದ್ದಾರೆ ಅನ್ನಿ! ಕಾರಣ, ಪೃಥ್ವಿಯ ಇತಿಹಾಸದಲ್ಲಿ ಪರ್ವತಾರೋಹಿ ತೇನಸಿಂಗ್ ಪ್ರಪ್ರಥಮ ಬಾರಿಗೆ ಎವರೆಸ್ಟ್ ಶಿಖರ ಏರಿ, ಅಲ್ಲಿ ನಮ್ಮ ಧ್ವಜ ನಿಲ್ಲಿಸುವ ಕಾಲಕ್ಕೆ ಅವನಿಗೆ ಆಕಸ್ಮಿಕವಾಗಿ ಕಪ್ಪುಬಸಿ ಸಪ್ಪಳ ಕೇಳಿತಂತೆ. ಈ ಶಬ್ದ ಇಲ್ಲೇಕೆ ಬಂತು ಎಂದು ತೇನಸಿಂಗ್ ಹೊರಳಿ ನೋಡಿದರೆ, ಅಲ್ಲಿ ಒಂದು ಬೋರ್ಡು ಇತ್ತು. ಅದು “ಉಡುಪಿ ಬ್ರಾಹ್ಮಣರ ಟೀ-ಕಾಫಿ ಹೋಟಲ್”!
ನಾನು ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋದ ಜಗತ್ಪ್ರಸಿದ್ಧ ‘ಗೋಲ್ಡನ್ ಗೇಟ್ ಗಾರ್ಡನ್’ಗೆ ಹೋದಾಗ ಅಲ್ಲಿಯ ಹುಲ್ಲುಹಾಸಿನ ಮೇಲೆ ಒಬ್ಬ ವಿದೇಶೀ ಮಹಿಳೆ ಹತ್ತಾರು ವಿದ್ಯಾರ್ಥಿಗಳಿಗೆ ಭಾರತೀಯ ಪದ್ಧತಿಯ ಯೋಗಾಸನಗಳನ್ನು ಹೇಳಿಕೊಡುತ್ತಿದ್ದಳು. ಅಲ್ಲಿಯೂ ಶೀರ್ಷಾಸನ, ಅಲ್ಲಿಯೂ ವಜ್ರಾಸನ, ಅಲ್ಲಿಯೂ ಹಠಯೋಗದ ಪಾಠ!
ನನ್ನ ಹೆಂಡತಿ ಹೇಳಿದಳು: “ನೋಡ್ರಿ… ಅವ್ರು ನಮ್ಮಿಂದ ಒಳ್ಳೇದನ್ನ ಕಲ್ಯಾಕತ್ತಾರು. ನಾವು ಅವರಿಂದ ಕಲ್ತದ್ದೆಲ್ಲಾ ಕೆಟ್ಟದ್ದು…!” ನಾನು ಚೂರು ತಡಮಾಡಿ ‘ಹೂಂ’ ಅಂದೆ! ಸ್ಯಾನ್ಫ್ರಾನ್ಸಿಸ್ಕೋದ ಮಗನ ಮನೆಯಲ್ಲಿ ಮೂರು ತಿಂಗಳು ಇದ್ದರೂ ಅವಳು ಪಡ್ಡು, ದೋಸೆ, ಇಡ್ಲಿ, ವಡಾ, ಹೋಳಿಗೆ, ಕಡಬು, ಕರ್ಚೀಕಾಯಿ, ಹುರಕ್ಕಿಹೋಳಿಗೆ, ಬದ್ನೀಕಾಯಿ ಎಣಗಾಯಿ, ಕೆಂಪಕಾಯಿ ಚಟ್ನಿ ಮಾಡುವುದನ್ನು ಬಿಡಲಿಲ್ಲ. ಹುಬ್ವಳ್ಳಿಯ ಕೈ ಅಮೆರಿಕದಲ್ಲಿ ತೋರಿಸಿದಳು. ಅಮೆರಿಕದ ಅರಸೊಪ್ಪು ಡುಮಿಕ್ಯಾ ‘ಡಾಗ್ ಬ್ರೆಡ್’ ನಾವು ಮುಟ್ಟಲೇ ಇಲ್ಲ.
ಈಗಾಗಲೇ ಗಾರ್ಡನ್ ಸಿಟಿ ಬೆಂಗಳೂರು ಗಾರ್ಬೇಜ್ ಸಿಟಿ ಆಗಿದೆ. ಸುರಸುಂದರ ದಿಲ್ಲಿ ಮಹಾನಗರ ಹೊಗಿ ಮಂಜಿನ ವಿಷಗಾಳಿಯಿಂದ ತುಂಬಿದೆ. ಮಂಗಳೂರು ಕೂಡಾ ಸಮುದ್ರದಲ್ಲಿ ಯಶಸ್ವಿಯಾಗಿ ಮುಳುಗಲಿದೆಯಂತೆ! ಇನ್ನು ಆ ಮುದ್ದುಮರಿ ‘ರೋಸ್ 128ಬಿ’ ಗ್ರಹ ನಮ್ಮ ಕೈಯಲ್ಲಿ ಸಿಕ್ಕರೆ, ಅಲ್ಲಿ ಬೆಂಗಳೂರಿನವರು ಭೂಮಿ ಖರೀದಿಸಿ, ಒಂದು ದುಡ್ಡಿನ ಸೈಟ್ ನಿರ್ಮಿಸಿ ಕೋಟಿಗಟ್ಟಲೆ ಹಣ ಏರಿಸಿ ಮಾರುವುದು ಗ್ಯಾರಂಟಿ. 30 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಾಗ 500 ರೂಪಾಯಿಗೆ ಇದ್ದ ಸೈಟು ಈಗ ಮೆಟ್ರೋ-ಮಾನಿನಿ ಬಂದಮೇಲೆ 70-80 ಲಕ್ಷಕ್ಕೆ ಮಾರುತ್ತಿದ್ದಾರೆ. ಕೈಲಾಸಕ್ಕೆ ಹೋದರೂ ಹೆಣ್ಣು-ಹೊನ್ನು-ಮಣ್ಣಿನ ದಾಹ ಕೈಬಿಡದು. ಓ ಹೌದು. ನಮ್ಮ ಜನರ ಕೈಯಲ್ಲಿ ಸ್ವಯಂ ದೇವರು ಸಿಕ್ಕರೂ ಅವನನ್ನು ಹೆಚ್ಚಿ ಪ್ಯಾಕ್ ಮಾಡಿ ಡಬ್ಬಾದಲ್ಲಿ ತುಂಬಿ ಮಾರುವುದು ಗ್ಯಾರಂಟಿ. ಓ ಹೊಸ ಗ್ರಹತಾರೆ ನಕ್ಷತ್ರಗಳೇ, ದಯವಿಟ್ಟು ನಿಮ್ಮ ಪಾಡಿಗೆ ನೀವು ಇದ್ದುಬಿಡಿ. ಈ ಮನುಷ್ಯಲೋಕಕ್ಕೆ ಬರಬೇಡಿ!