‘ಅಮೆ ದಿಕ್ಕೆಲ್’ ಎಂಬುದು ತುಳು ಭಾಷೆಯ ಎರಡು ಪದಗಳ ಗೊಂಚಲು. ಕೆಲವರು ಇದು ಕನ್ನಡ ಮತ್ತು ತುಳುವಿನ ಎರಡು ಪದಗಳು ಎಂದು ಭಾವಿಸಿಕೊಂಡು ಇಲ್ಲಿರುವ ಅಮೆ ಎಂಬ ಪದವನ್ನು ‘ಆಮೆ’ ಎಂದು ತಪ್ಪು ತಿಳಿದು ಇದನ್ನು ಆಮೆ ದಿಕ್ಕೆಲ – ಆಮೆಯಂತಹ ಒಲೆ ಎಂದು ಅಪಭ್ರಂಶ ಮಾಡುತ್ತಾರೆ. ಇದು ನಿಜವಾಗಿ ಅಮೆ ಎಂದರೆ ‘ಮೈಲಿಗೆ’ ಎಂದೂ ದಿಕ್ಕೆಲ್ ಎಂದರೆ ‘ಒಲೆ’ ಎಂದೂ ಅರ್ಥ ಹೊಂದಿದೆ. ಇದಕ್ಕೆ ಶಿಖರಾಗ್ರದಲ್ಲಿರುವ ಒಲೆಯಂತೆ ಸಂಯೋಜನೆ ಹೊಂದಿರುವ ಮೂರು ಬೃಹತ್ ಬಂಡೆಗಳು ಕಾರಣವಾಗಿವೆ. ಜನಜನಿತವಾದ ಪೌರಾಣಿಕ ಕಥಾನಕದ ಮೂಲಕ ರಾಮಾಯಣ ಕಾಲದಲ್ಲಿ ರಾಮ-ಸೀತೆ ಕಾಡಿನಲ್ಲಿ ಸಂಚರಿಸುತ್ತ ಬಂದಾಗ ಸೀತೆ ಮೈಲಿಗೆಯ ಸಮಯದಲ್ಲಿ ಇಲ್ಲಿ ಒಲೆ ಹೂಡಿದ್ದಳಂತೆ…
ನಮ್ಮ ಕರಾವಳಿಯ ತಟದಿಂದ ಪರ್ವತಸೀಮೆ ಏರಿ ಬಯಲುಸೀಮೆ ಕಡೆಗೆ ಪ್ರಯಾಣಿಸುವಾಗ ಮುಖ್ಯವಾಗಿ ಎರಡು ಘಟ್ಟಪ್ರದೇಶಗಳು ಎದುರಾಗುತ್ತವೆ. ಒಂದು ಶಿರಾಡಿ ಘಾಟಿ, ಮತ್ತೊಂದು ಚಾರ್ಮಾಡಿ ಘಾಟಿ. ಇವೆರಡರಲ್ಲಿ ಶಿರಾಡಿ ಸರಳವಾದ ಘಟ್ಟ ಪ್ರದೇಶವಾದರೆ ಚಾರ್ಮಾಡಿ ಘಾಟಿಯು ಹಲವಾರು ಹೇರ್ಪಿನ್ ತಿರವುಗಳನ್ನು ಹೊಂದಿದ್ದು ದುರ್ಗಮ ರಸ್ತೆಯಾಗಿದೆ. ಹಾಗೆಯೇ ಚಾರ್ಮಾಡಿ ಘಾಟಿಯಲ್ಲಿರುವ ಅನೇಕಾನೇಕ ಗಿರಿಪಂಕ್ತಿಗಳೂ ಕಡಿದಾದ ದುರ್ಗಮ ಬೆಟ್ಟಗಳೇ ಆಗಿವೆ. ಇಲ್ಲಿ ಹರಡಿರುವ ಮಲೆಗಳು ದಟ್ಟಕಾನನಗಳಿಂದಲೂ ವಿಶಾಲವಾದ ಹುಲ್ಲುಗಾವಲುಗಳಿಂದಲೂ ಬೆಟ್ಟದ ಮೇಲೆ ಹುಟ್ಟಿ ಹರಿಯುವ ನೀರ ತೊರೆಗಳಿಂದಲೂ ಅದ್ಭುತವಾದ ದೃಶ್ಯಕಾವ್ಯವನ್ನು ಸೃಷ್ಟಿಸುತ್ತವೆ. ಹಾಗಾಗಿ ಈ ಪರ್ವತ ಶ್ರೇಣಿಯು ನಾಡಿನ ಎಲ್ಲ ಚಾರಣಿಗರನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ. ಚಾರ್ಮಾಡಿ ಘಾಟಿಯಲ್ಲಿರುವ ಜನಪ್ರಿಯ ಚಾರಣದ ಹಾದಿಗಳೆಂದರೆ ಕೊಡೆಕಲ್, ಬಾಳೆಕಲ್, ಜೇನುಕಲ್, ಎತ್ತಿನಭುಜ, ಶಿಶಿಲಬೆಟ್ಟ, ಉದಯಗಿರಿ, ಅಮೆ ದಿಕ್ಕೆಲ್ ಇತ್ಯಾದಿ ಪರ್ವತಗಳು. ಇವುಗಳಲ್ಲಿ ಕೊಡೆಕಲ್, ಉದಯಗಿರಿಯಂತಹ ಚಾರಣಗಳು ಸುಲಭದ ಚಾರಣಗಳಾದರೆ ಎತ್ತಿನಭುಜ, ಅಮೆ ದಿಕ್ಕೆಲ್ನಂತಹ ಪರ್ವತದ ಚಾರಣ ಕ್ಲಿಷ್ಟಕರವಾದುದು. ಈ ಎರಡು ಶಿಖರಾಗ್ರಗಳನ್ನು ತಲಪುವುದು ಅನುಭವಿಗಳಿಗೆ ಮಾತ್ರ ಸಾಧ್ಯ. ನಾವು ‘ಅಮೆ ದಿಕ್ಕೆಲ್’ ಎಂಬ ವಿಶಿಷ್ಟ ಹೆಸರಿನ ಪರ್ವತದ ದುರ್ಗಮ ಹಾದಿಯಲ್ಲಿ ಚಾರಣ ಮಾಡಿದ ಅನುಭವ ಇಲ್ಲಿದೆ.
‘ಅಮೆ ದಿಕ್ಕೆಲ್’ ಎಂಬುದು ತುಳು ಭಾಷೆಯ ಎರಡು ಪದಗಳ ಗೊಂಚಲು. ಕೆಲವರು ಇದು ಕನ್ನಡ ಮತ್ತು ತುಳುವಿನ ಎರಡು ಪದಗಳು ಎಂದು ಭಾವಿಸಿಕೊಂಡು ಇಲ್ಲಿರುವ ಅಮೆ ಎಂಬ ಪದವನ್ನು ‘ಆಮೆ’ ಎಂದು ತಪ್ಪು ತಿಳಿದು ಇದನ್ನು ಆಮೆ ದಿಕ್ಕೆಲ – ಆಮೆಯಂತಹ ಒಲೆ ಎಂದು ಅಪಭ್ರಂಶ ಮಾಡುತ್ತಾರೆ. ಇದು ನಿಜವಾಗಿ ಅಮೆ ಎಂದರೆ ‘ಮೈಲಿಗೆ’ ಎಂದೂ ದಿಕ್ಕೆಲ್ ಎಂದರೆ ‘ಒಲೆ’ ಎಂದೂ ಅರ್ಥ ಹೊಂದಿದೆ. ಇದಕ್ಕೆ ಶಿಖರಾಗ್ರದಲ್ಲಿರುವ ಒಲೆಯಂತೆ ಸಂಯೋಜನೆ ಹೊಂದಿರುವ ಮೂರು ಬೃಹತ್ ಬಂಡೆಗಳು ಕಾರಣವಾಗಿವೆ. ಜನಜನಿತವಾದ ಪೌರಾಣಿಕ ಕಥಾನಕದ ಮೂಲಕ ರಾಮಾಯಣ ಕಾಲದಲ್ಲಿ ರಾಮ-ಸೀತೆ ಕಾಡಿನಲ್ಲಿ ಸಂಚರಿಸುತ್ತ ಬಂದಾಗ ಸೀತೆ ಮೈಲಿಗೆಯ ಸಮಯದಲ್ಲಿ ಇಲ್ಲಿ ಒಲೆ ಹೂಡಿದ್ದಳೆಂಬ ಕಾರಣ ನೀಡಲಾಗುತ್ತದೆ. ರಾಮಾಯಣಕ್ಕೆ ಸಂಬಂಧಿಸಿದ ಇಂತಹ ಹಲವಾರು ಕಥಾನಕದ ಉದಾಹರಣೆಗಳು ಭಾರತದ ತುಂಬೆಲ್ಲ ಪ್ರಚಲಿತದಲ್ಲಿರುವುದನ್ನು ನಾವು ಗಮನಿಸಬಹುದು.
ಚಾರ್ಮಾಡಿ ಘಾಟಿಯಲ್ಲಿ ಕೆಳಗಿಳಿದರೆ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಹೋಗುವ ಹಾದಿಯಲ್ಲಿ ಸಿಗುವ ಶಿಶಿಲದ ಕಿರುದಾರಿಯಲ್ಲಿ ಹೋದರೆ ಶಿಶಿಲವನ್ನು ಆವರಿಸಿರುವ ಹಲವಾರು ಪರ್ವತಗಳಲ್ಲಿ ಅಮೆ ದಿಕ್ಕೆಲ್ ಮುಖ್ಯವಾದ ಪರ್ವತ. ಹಾಗೆ ಶಿರಾಡಿ ಘಾಟಿಯಿಂದ ಕೆಳಗಿಳಿದರೆ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಹೋಗುವ ಹಾದಿಯಲ್ಲಿ ಮತ್ತೆ ಶಿಶಿಲಕ್ಕೆ ಹೋಗಿ ಸೇರಬೇಕು. ಹೀಗಾಗಿ ಅಮೆ ದಿಕ್ಕೆಲ್ ಚಾರಣಿಗರಿಗೆ ಶಿಶಿಲದ ರಮ್ಯ ಪರಿಸರ, ಶಿಶಿಲೇಶ್ವರ ದೇವಾಲಯ ಮತ್ತು ಅದರ ಪಕ್ಕದಲ್ಲೆ ಹರಿಯುವ ಕಪಿಲಾ ನದಿ ಹಾಗೂ ನದಿಯಲ್ಲಿರುವ ಅಪರೂಪದ ಮಹಶೀರ್ ಮೀನುಗಳ ದರ್ಶನ ಒಂದು ಅನುಪಮ ಬೋನಸ್ನಂತೆ ಭಾಸವಾಗುತ್ತದೆ.
ಮೊದಲೇ ಹೇಳಿದಂತೆ ಅಮೆ ದಿಕ್ಕೆಲ್ ಚಾರಣ ಕಷ್ಟಸಾಧ್ಯವಾದ ಚಾರಣ. ಕಡಿದಾದ ಶೋಲಾ ಅರಣ್ಯ ಭಾಗವನ್ನು ಎಚ್ಚರಿಕೆಯಿಂದ ದಾಟಿದರೆ ಮೇಲ್ಭಾಗದ ಹುಲ್ಲುಗಾವಲಿನಲ್ಲಿ ಆಹಾರಕ್ಕೆ ಬರುವ ಆನೆಗಳ ಹಿಂಡು ಎದುರಾಗಬಹುದು, ಕಾಡುಹಂದಿಗಳು ಹಾಗೂ ಹಾವುಗಳೂ ಸಿಗಬಹುದು, ಅಪರೂಪಕ್ಕೆ ಚಿರತೆಗಳೂ ಕೆಲವು ಚಾರಣ ತಂಡಕ್ಕೆ ಎದುರಾಗುವುದಿದೆ. ಜೊತೆಗಾರರಿಲ್ಲದೆ ಅಥವಾ ಸ್ಥಳೀಯ ಗೈಡ್ಗಳಿಲ್ಲದೆ ಚಾರಣಕ್ಕೆ ಉಪಕ್ರಮಿಸುವ ದುಸ್ಸಾಹಸ ಮಾಡಲೇಬಾರದು. ಹಾಗೆಯೇ ಸಂಬಂಧಿಸಿದ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಅನಿವಾರ್ಯ. ಆದರೂ ಘಟ್ಟದ ಮೇಲಿನಿಂದ ಚಾರಣಕ್ಕೆ ಬರುವ ಇಲ್ಲಿನ ಕಗ್ಗಾಡಿನ ಪರಿಚಯವಿಲ್ಲದ ಚಾರಣಿಗರು ಯಾವ ಮುನ್ನೆಚ್ಚರಿಕೆಯನ್ನೂ ತೆಗೆದುಕೊಳ್ಳದೆ, ಅರಣ್ಯ ಇಲಾಖೆಗೂ ತಿಳಿಸದೆ ಗೂಗಲ್ ಮ್ಯಾಪಿನ ಸಹಾಯ ನಂಬಿಕೊಂಡು ಬರುವುದಿದೆ. ಆದರೆ ದುರ್ಗಮ ಪರ್ವತದ ಕಾಡಿನೊಳಗೆ ಮೊಬೈಲಿನ ಸಿಗ್ನಲ್ ಸಿಗದೆ ದಾರಿ ತಪ್ಪಿಸಿಕೊಂಡು ನರಳಾಡಿದ ಹಲವು ಉದಾಹರಣೆಗಳೂ ಇವೆ. ಹೀಗಾಗಿ ದೇಹದಲ್ಲಿ ಶಕ್ತಿ, ಸಾಹಸದ ಮನೋಭಾವನೆ ಇರುವವರು ಹಾಗೂ ಅಗತ್ಯವಾಗಿ ಸ್ಥಳೀಯ ಗೈಡುಗಳ ಸಹಾಯವನ್ನು ಪಡೆದರೆ ಅಮೆ ದಿಕ್ಕೆಲ್ ನಿಜಕ್ಕೂ ಒಂದು ಅತ್ಯದ್ಭುತ ಚಾರಣವಾಗುತ್ತದೆ.
ಅಮೆ ದಿಕ್ಕೆಲ್ – ಅದು ಎರಡು ದಿನಗಳ ಚಾರಣದ ಕಾರ್ಯಕ್ರಮ. ಆದರೆ ನಾವು ಅದನ್ನು ಒಂದೆ ದಿನದಲ್ಲಿ ಮುಗಿಸುವ ಅನಿವಾರ್ಯತೆ ಬಂದಿತ್ತು. ಕಾರಣವೇನೆಂದರೆ ಚಾರಣದ ದಿನ ನಾವು ಹೊರಟದ್ದು ಒಂದು ದಿನದ ಚಾರಣಕ್ಕೆ ಸೂಕ್ತವಾದ ಶಿಶಿಲದ ಸನಿಹದ ಉದಯಗಿರಿಗೆ. ಬೆಳಗ್ಗೆ ಇನ್ನೂ ಕತ್ತಲಿದ್ದಾಗಲೆ ಮಂಗಳೂರಿನಿಂದ ಹೊರಟು ದಾರಿಯಲ್ಲಿ ಸಿಕ್ಕ ಹೊಟೇಲಿನಲ್ಲಿ ಉಪಾಹಾರ ಮುಗಿಸಿ ಮಧ್ಯಾಹ್ನದ ಊಟಕ್ಕೆ ಸ್ವಲ್ಪ ಆಹಾರ ಪಾರ್ಸೆಲ್ ತೆಗೆದುಕೊಂಡು ಕ್ಲಪ್ತ ಸಮಯಕ್ಕೆ ಶಿಶಿಲವನ್ನು ತಲಪಿದೆವು. ಆದರೆ ಶಿಶಿಲ ಮುಟ್ಟಿದಾಗ ಗೊತ್ತಾದ ಸಂಗತಿಯೆಂದರೆ ಹಿಂಡಿನಿಂದ ತಪ್ಪಿಸಿಕೊಂಡಿದ್ದ ಸಲಗವೊಂದು ಉದಯಗಿರಿಯಲ್ಲಿ ಪುಂಡಾಟ ಮಾಡಿಕೊಂಡಿತ್ತು. ಹಾಗಾಗಿ ನಾವು ಅನಿವಾರ್ಯವಾಗಿ ಚಾರಣದ ಗಮ್ಯವನ್ನು ಬದಲಾಯಿಸಬೇಕಾಗಿತ್ತು. ನಮ್ಮಲ್ಲಿ ಹೆಚ್ಚಿನವರಿಗೆ ಅಮೆ ದಿಕ್ಕೆಲ್ ಚಾರಣದ ಆಸೆ ಇದ್ದುದರಿಂದ ನಮ್ಮ ಟೀಂ ಲೀಡರ್ ಆತುರಾತುರದಲ್ಲಿ ಸಂಬಂಧಿಸಿದ ಅಧಿಕಾರಿಯನ್ನು ಸಂಪರ್ಕಿಸಿ ಅನುಮತಿ ಪಡೆದು ನಂತರ ಅಮೆ ದಿಕ್ಕೆಲ್ನ ಚಾರಣ ಆರಂಭಿಸಲಾಯಿತು.
ಇದು ದೀರ್ಘ ಚಾರಣದ ಹಾದಿ. ಮಾಮೂಲಿಯಂತೆ ನಡೆದರೆ ಆರೋಹಣ ಮತ್ತು ಅವರೋಹಣಕ್ಕೆ ಎಂಟು ಅಥವಾ ಒಂಭತ್ತು ಘಂಟೆ ಸಮಯ ಬೇಕು. ಸ್ವಲ್ಪ ವೇಗವಾಗಿ ನಡೆದುದಾದರೆ ಸುಮಾರು ಒಂದು ಘಂಟೆಯಷ್ಟು ಸಮಂiÀi ಉಳಿಸಬಹುದು. ಅಂದು ನಮ್ಮ ಚಾರಣದ ತಂಡದಲ್ಲಿದ್ದ ಎಲ್ಲ ಸದಸ್ಯರು ಸಾಕಷ್ಟು ಅನುಭವಿಗಳು ಹಾಗೂ ದಿಕ್ಕೆಲ್ ನೋಡುವ ಉಮೇದಿನಲ್ಲಿದ್ದ ಕಾರಣ ಚಾರಣವನ್ನು ಆರಂಭಿಸಿಯೇಬಿಟ್ಟೆವು.
ಸುಮಾರು ಬೆಳಗಿನ ಹತ್ತು ಘಂಟೆಗೆ ಚಾರಣ ಆರಂಭಿಸಿದ ನಾವು ಮೊದಲಿಗೆ ದಟ್ಟ ಅರಣ್ಯ ಇದ್ದುದರಿಂದ ಬಿಸಿಲಿನ ಝಳಕ್ಕೆ ಸಿಗಲಿಲ್ಲ. ಆದರೆ ಹನ್ನೆರಡು ಘಂಟೆಯ ನಂತರ ಅರಣ್ಯ ಪ್ರದೇಶ ಮುಗಿದು ಸುದೀರ್ಘವಾದ ಹುಲ್ಲಿನಿಂದ ಆವೃತವಾದ ಬಯಲು ಪ್ರದೇಶ ತಲಪಿದೆವು. ಸೂರ್ಯನ ಬಿಸಿ ಏರತೊಡಗಿತು. ಮನುಷ್ಯನಿಗಿಂತ ಎತ್ತರಕ್ಕೆ ದಟ್ಟವಾಗಿ ಬೆಳೆಯುವ ಆನೆಹುಲ್ಲು ಎಂದು ಕರೆಸಿಕೊಳ್ಳುವ ಹುಲ್ಲಿನ ಜಿಗ್ಗಿನ ನಡುವೆ ಎಲ್ಲರೂ ಸಾಲಾಗಿ ತಪ್ಪಿಸಿಕೊಳ್ಳದಂತೆ ಹೋಗಬೇಕು. ಯಾರಾದರೂ ತಪ್ಪಿಸಿಕೊಂಡಲ್ಲಿ ಅವರು ಹಿಂದಿರುಗುವುದಾಗಲಿ ಉಳಿದವರು ಅವರನ್ನು ಹುಡುಕುವುದಾಗಲಿ ತೀರಾ ಕಷ್ಟದ ಕೆಲಸ. ಅಲ್ಲದೆ ತಮಗೆ ಇಷ್ಟವಾದ ಹುಲ್ಲನ್ನು ಮೇಯಲು ಆನೆಗಳು ಆಗಾಗ ಅಲ್ಲಿಗೆ ಬರುವುದರಿಂದ ಅವುಗಳ ಇರುವನ್ನು ದೂರದಿಂದಲೆ ಗುರುತಿಸಲು ಮಾರ್ಗದರ್ಶಿ ಇರಲೇ ಬೇಕು. ನಾವು ಮೇಲೇರುವಾಗ ಮೊದಲಿಗೆ ಅನೇಕ ನಿರುಪದ್ರವಕಾರಿ ಹಾವುಗಳು ಕಾಣಿಸಿಕೊಂಡರೂ ಅವು ನಮ್ಮ ಭಯದಲ್ಲಿ ಅಡಗಿಕೊಳ್ಳುತ್ತಿದ್ದವು. ಅಲ್ಲಲ್ಲಿ ರಾಶಿರಾಶಿಯಾಗಿ ಹಬೆಯಾಡುವ ಬೆಚ್ಚಗಿನ ಲದ್ದಿ ಕಾಣುತ್ತಿದ್ದುದರಿಂದ ಆನೆಗಳ ಗುಂಪು ಈಗಷ್ಟೆ ಇಲ್ಲಿಂದ ತೆರಳಿವೆ ಎಂದರಿವಾಯಿತು. ಅಲ್ಲಲ್ಲಿ ಮಾಂಸಾಹಾರಿ ಪ್ರಾಣಿಗಳ ಮಲವೂ ಕಾಣಿಸಿದ್ದರಿಂದ ಕ್ರೂರ ಮೃಗಗಳು ಓಡಾಡಿದ್ದರ ಸುಳಿವು ಸಿಕ್ಕಿ ಎಚ್ಚರಿಕೆಯಿಂದ ಮುನ್ನಡೆಯಬೇಕಾಯಿತು. (ನಾವು ನೋಡಿದ ಮಲದಲ್ಲಿ ಸಣ್ಣಸಣ್ಣ ಮೂಳೆ ಹಾಗೂ ಕೂದಲು ಕಾಣಿಸಿದ್ದರಿಂದ ಅದು ನಿಸ್ಸಂಶಯವಾಗಿ ಮಾಂಸಾಹಾರಿಯದ್ದೇ ಆಗಿರುತ್ತದೆ.) ಮುಂದೆ ಕಾಡುಹಂದಿಯೊಂದನ್ನು ಬೇಟೆಯಾಡಿದ್ದ ಯಾವುದೋ ಮಾಂಸಾಹಾರಿ ಪ್ರಾಣಿ ಹಂದಿಯನ್ನು ಅರ್ಧದಷ್ಟು ತಿಂದು ಉಳಿದ ಕಳೇಬರವನ್ನು ಅಲ್ಲಿಯೇ ಬಿಟ್ಟುಹೋದದ್ದು ಕಾಣಿಸಿತು. ಒಟ್ಟಾರೆ ನಮಗೆ ವನ್ಯಜೀವಿಗಳಿಂದ ಯಾವುದೇ ಉಪದ್ರವ ಆಗಲಿಲ್ಲ. ನಮ್ಮ ಮಾರ್ಗದರ್ಶಿ ಹೇಳಿದ ಪ್ರಕಾರ ಆನೆಗಳಾಗಲಿ ಇತರೆ ವನ್ಯಮೃಗಗಳಾಗಲಿ ನಮ್ಮ ವಾಸನೆಯನ್ನು ದೊರದಿಂದಲೆ ಗ್ರಹಿಸುವುದರಿಂದ ಅವು ನಮ್ಮ ಮುಖಾಮುಖಿಯಾಗುವುದರಿಂದ ತಪ್ಪಿಸಿಕೊಳ್ಳುತ್ತವಂತೆ.
ಸುಮಾರು ಒಂದು ಒಂದೂವರೆ ಘಂಟೆಯ ಸುಮಾರಿಗೆ ಹುಲ್ಲುಗಾವಲಿನ ನಡುವೆ ಕೆಲವು ಮರಗಳು ಕಾಣಿಸಿ ಅದರ ಕೆಳಗೆ ವಿಶ್ರಮಿಸಿದಾಗ ದೇಹಕ್ಕೆ ಹಾಯೆನ್ನಿಸಿತು. ನಮ್ಮ ಲೀಡರ್ ‘ಇಲ್ಲೆ ಊಟ ಮುಗಿಸಿಬಿಡುವ, ಅಲ್ಪ ವಿಶ್ರಾಂತಿಯ ನಂತರ ಉಳಿದ ಭಾಗ ಕ್ರಮಿಸಿ ಅಮೆ ದಿಕ್ಕೆಲ್ ಬುಡಕ್ಕೆ ಹೋಗಿ ಬರೋಣ’ ಎಂದು ಸೂಚಿಸಿದಾಗ ಅದಾಗಲೆ ಹಸಿವು ಬಾಯಾರಿಕೆಯಿಂದ ಬಳಲಿದ್ದ ನಾವು ನಮ್ಮನಮ್ಮ ಬ್ಯಾಕ್ಪ್ಯಾಕ್ನಲ್ಲಿದ್ದ ಆಹಾರ ಮತ್ತು ನೀರನ್ನು ಸೇವಿಸಿ ಮುಂದೆ ಹೊರಟೆವು. ಅದಾಗಲೆ ಬಿಸಿಲಿನ ತಾಪ ಹೆಚ್ಚಿದ್ದರಿಂದ ಬಾಯಾರಿಕೆ ಕಳೆಯಲು ದಾರಿಯಲ್ಲಿ ತಿನ್ನಲು ನಮ್ಮ ಲೀಡರ್ ಎಲ್ಲರಿಗೊ ಕಿತ್ತಲೆಹಣ್ಣು ಹಂಚಿದರು. ತಂಡದಲ್ಲಿದ್ದ ಕೆಲವರಾಗಲೆ ಆಯಾಸಗೊಂಡಿದ್ದರಿಂದ ಮುಂದೆ ಕ್ರಮಿಸಲು ನಿರಾಕರಿಸಿ ನಾವು ವಾಪಾಸು ಬರುವವರೆಗೆ ಅಲ್ಲಿಯೇ ವಿಶ್ರಮಿಸುವುದಾಗಿ ಹೇಳಿದರು. ಹಾಗಾಗಿ ನಾವು ಕೆಲವೇ ಜನ ಮುಂದಿನ ಸುಮಾರು ನಲವತ್ತೈದು ನಿಮಿಷದ ಹಾದಿ ಕ್ರಮಿಸಿ ಅಮೆ ದಿಕ್ಕೆಲ್ಲನ್ನು ರೂಪಿಸಿದ್ದ ಮೂರು ಬೃಹತ್ ಶಿಲೆಗಳ ಬುಡಕ್ಕೆ ತಲಪುವಲ್ಲಿ ಯಶಸ್ವಿಯಾದರೂ ಮುಂದಿನ ಶಿಖರಾಗ್ರಕ್ಕೆ ಹೋಗಲು ದೇಹ ಸಹಕರಿಸುವುದಿಲ್ಲ ಎಂದು ನಿಶ್ಚಯಿಸಿ ಅಲ್ಲಿಂದಲೆ ಅವರೋಹಣ ಆರಂಭಿಸಿದೆವು. ಹಾಗಾಗಿ ಶಿಖರಾಗ್ರದಿಂದ ಕಾಣಬಹುದಾಗಿದ್ದ ಸುತ್ತಲಿನ ಪ್ರಕೃತಿಯ ಮಹಾವಿಸ್ಮಯದ ಸೌಂದರ್ಯದಿಂದ ವಂಚಿತರಾದೆವು. ಪರ್ವತದ ಮೇಲಿಂದ ದೂರದಲ್ಲಿ ಕಾಣಿಸುತ್ತಿದ್ದ, ಅಮೆ ದಿಕ್ಕೆಲ್ಗಿಂತ ಕಠಿಣ ಚಾರಣವಾಗಬಹುದಾದ ಎತ್ತಿನಭುಜ ಪರ್ವತ ಕಾಣುತ್ತಿತ್ತು. ಅದನ್ನು ಏರುವ ಯೋಗ ಎಂದು ದೊರಕುವುದೊ? – ಎಂದು ಆಲೋಚಿಸುತ್ತ ಕೆಳಗಿಳಿಯತೊಡಗಿದೆವು.
ನಾವು ಹಿಂದಿರುಗುವ ವೇಳೆಗಾಗಲೆ ಮರದ ನೆರಳಿನಲ್ಲಿ ವಿಶ್ರಮಿಸಿದ್ದ ನಮ್ಮ ಸಂಗಡಿಗರು ಅದಾಗಲೆ ಶಕ್ತಿಸಂಚಯ ಮಾಡಿಕೊಂಡು ಕೆಳಗಿಳಿಯಲು ಸಿದ್ಧರಾಗಿದ್ದರು. ನಾವು ಕೆಳಗಿಳಿಯುವ ವೇಳೆಗಾಗಲೆ ನಮ್ಮನ್ನು ಕರೆತಂದಿದ್ದ ಟ್ಯಾಕ್ಸಿ ನಮಗಾಗಿ ಕಾಯುತ್ತಿತ್ತು. ಅಲ್ಲಿಂದ ನಾವು ಶಿಶಿಲಕ್ಕೆ ಹೋಗಿ ಶಿಶಿಲೇಶ್ವರ ದೇವಾಲಯ, ಕಪಿಲಾ ನದಿ ಹಾಗೂ ಮಹಶೀರ್ ಮೀನುಗಳನ್ನು ನೋಡಿದೆವು. ಕಪಿಲಾ ನದಿಯ ದಡದಲ್ಲಿ ನಿಂತು ಸಂಜೆಯ ಸೂರ್ಯಾಸ್ತವನ್ನು ಆನಂದಿಸಿ ರಾತ್ರಿಯ ವೇಳೆಗೆ ಮಂಗಳೂರನ್ನು ಮುಟ್ಟಿದೆವು.
ಇಷ್ಟಾಗಿ ನಮ್ಮಲ್ಲಿ ಒಂದು ಅಸಮಾಧಾನ ಉಳಿದೇಬಿಟ್ಟಿತ್ತು. ಅದೆಂದರೆ ಮೊದಲೇ ಹೇಳಿದಂತೆ ಅಮೆ ದಿಕ್ಕೆಲ್ ಎರಡು ದಿನದ ಚಾರಣಕ್ಕೆ ಸೂಕ್ತವಾದ ಪರ್ವತ. ಮೊದಲ ದಿನ ಆರಾಮವಾಗಿ ಶಿಖರವನ್ನು ಮುಟ್ಟುವುದಾದರೆ ಪ್ರಕೃತಿಯನ್ನು ಸಾವಧಾನವಾಗಿ ಆಸ್ವಾದಿಸಬಹುದಿತ್ತು. ರಾತ್ರಿ ಅಲ್ಲಿ ಕ್ಯಾಂಪ್ ಹಾಕಿ ಅಡುಗೆ ಮಾಡಿಕೊಂಡು ಊಟ ಮಾಡಿ ಮರುದಿನ ಮುಂಜಾನೆ ನಗರದ ದೈನಂದಿನ ಜೀವನದಲ್ಲಿ ಅಲಭ್ಯವೆನ್ನಿಸುವ ಕುಳಿರ್ಗಾಳಿ ಹಾಗೂ ಜೊತೆಜೊತೆಯಲ್ಲೆ ಕಾಣಿಸುವ ದಿವ್ಯಾನುಭವದ ಸೂರ್ಯೋದಯ ಇವನ್ನೆಲ್ಲ ನೋಡುವ ಅವಕಾಶದಿಂದ ವಂಚಿತರಾದೆವೆನ್ನುವುದೇ ಆ ಅಸಮಾಧಾನ. ಆದರೆ ಹೊರಟದ್ದು ಒಂದು ದಿನದ ಚಾರಣಕ್ಕೆ. ಪುಂಡ ಆನೆಯ ಕಾರಣಕ್ಕೆ ದಿಕ್ಕು ಬದಲಿಸಿ ಅಮೆ ದಿಕ್ಕೆಲ್ ಏರಿದ್ದೆವು. ಅಂದು ಬಿಟ್ಟರೆ ಮತ್ತೆ ಅಮೆ ದಿಕ್ಕೆಲ್ ಮತ್ತೆಂದಾದರೂ ಏರಲು ಸಾಧ್ಯವಾಗುತ್ತದೊ ಇಲ್ಲವೋ ಎಂಬ ಅನುಮಾನ ನಮ್ಮಲ್ಲಿ ಹಲವರಿಗಿತ್ತು.
ಚಾರಣಕ್ಕೆ ಹೋಗುವಾಗ ಒಂದಷ್ಟು ಆವಶ್ಯಕ ಮಾಹಿತಿ
ಯಾವುದೇ ಚಾರಣಕ್ಕೆ ಹೋಗುವಾಗ ಒಂದಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಹಾಗೇ ಕೆಲವು ಜವಾಬ್ದಾರಿಗಳನ್ನೂ ನಿರ್ವಹಿಸಬೇಕಾಗುತ್ತದೆ. ಹೊರಡುವ ಮೊದಲು ಒಂದು ದಿನ ಅಥವಾ ಎರಡು ದಿನದ ಚಾರಣ ಎಂದು ನಿರ್ಧರಿಸಿ ಅದಕ್ಕೆ ಸಾಕಷ್ಟು ಆಹಾರ ಮತ್ತು ನೀರನ್ನು ತೆಗೆದುಕೊಳ್ಳಬೇಕಾಗುತ್ತದೆ. ಬೇಸಿಗೆಯಾದರೆ ಮೇಲೆಮೇಲೆ ಹೋದಂತೆ ನೀರು ಸಿಗುವ ಸಂಭವ ಕಡಮೆ. ಹೊಸಬರಾದರೆ ಒಂದಷ್ಟು ಡ್ರೈಫ್ರೂಟ್ಸ್ ಮತ್ತು ಒಂದಷ್ಟು ಕಿತ್ತಲೆ, ಮೋಸಂಬಿ ಹಣ್ಣು ಜೊತೆಗಿಟ್ಟುಕೊಳ್ಳಬೇಕಾಗುತ್ತದೆ. ಇವೆಲ್ಲ ದೇಹದ ನಿರ್ಜಲೀಕರಣವನ್ನು ತಡೆಯಲು ಸಹಕಾರಿ. ಮಳೆಗಾಲದಲ್ಲಿ ಹೊರಟರೆ ಜಿಗಣೆಗಳಿಂದ ರಕ್ಷಣೆಗೆ ಸುಣ್ಣ, ಹೊಗೆಸೊಪ್ಪು ಅಥವಾ ಡೆಟ್ಟಾಲ್ ಕೊಂಡೊಯ್ಯಬೇಕು. ಹಾಗೆಯೇ ಕೆಲವು ಜವಾಬ್ದಾರಿಗಳನ್ನೂ ಪೆÇರೈಸಬೇಕಾಗುತ್ತದೆ. ಚಾರಣ ಮಾಡುವುದು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವ ಉದ್ದೇಶದಿಂದಲೇ ಹೊರತು ಅಲ್ಲಿ ಮದ್ಯಪಾನ ಮಾಡಿ ಮೈಮರೆಯುವುದಕ್ಕಲ್ಲ. ಅಲ್ಲದೆ ಬೇಜವಾಬ್ದಾರಿಯಿಂದ ಎಸೆದು ಬರುವ ಪ್ಲಾಸ್ಟಿಕ್ ಬಾಟಲಿಗಳು ಸಣ್ಣ ತೊರೆಗಳ ಜಲಮೂಲವನ್ನು ಮುಚ್ಚಬಹುದು, ಮದ್ಯಪಾನ ಮಾಡಿ ಎಸೆದು ಬರುವ ಗಾಜಿನ ಬಾಟಲುಗಳು ಅಲ್ಲಿನ ವನ್ಯಜೀವಿಗಳ ಪಾದಕ್ಕೆ ಚುಚ್ಚಿಕೊಂಡರೆ ಅವು ಸಹಜ ಜೀವನ ನಡೆಸಲಾರದೆ ಪ್ರಾಣಕ್ಕೆರವಾಗಲೂಬಹುದು. ಹಾಗೆಯೇ ರಾತ್ರಿ ಆನಂದಿಸಲು ಹಾಕಿದ ಕ್ಯಾಂಪ್ಫೈರ್ ಮುಗಿದ ನಂತರ ಅದರ ಮೇಲೆ ನೀರು ಸುರಿದು ಬೆಂಕಿಯನ್ನು ಸಂಪೂರ್ಣ ನಂದಿಸುವ ಕೆಲಸ ಮಾಡಲೇಬೇಕು. ಇಲ್ಲವಾದರೆ ಅಲ್ಲಿ ನಿಮ್ಮಿಂದ ಉಳಿದ ಬೆಂಕಿ ವಿಸ್ತರಿಸಿ ಅರಣ್ಯವನ್ನು ನಾಶಮಾಡಬಹುದು.