ಮ್ಯೋಗ್ಲಿಂಗ್ ಅವರ ಸಾಹಿತ್ಯಕೃತಿ ‘ಈರಾರು ಪತ್ರಿಕೆ’ ಪ್ರಕಟವಾದುದು ೧೮೪೮ರಲ್ಲಿ ಇರಬೇಕೆಂದು ಊಹಿಸಲಾಗಿದೆ. ಈ ಕೃತಿಗೆ ಆಧಾರವಾಗಿರುವುದು ಮ್ಯೋಗ್ಲಿಂಗ್ ಮಂಗಳೂರಿನಲ್ಲಿ ೧೮೪೪ರಲ್ಲಿ ಮಾಡಿದ ಆನಂದರಾವ್ ಕೌಂಡಿನ್ಯ ಎಂಬ ಯುವಕನ ಮತಾಂತರದ ಸುತ್ತಮುತ್ತ ಹುಟ್ಟಿಕೊಂಡ ವಿವಾದ ಮತ್ತು ಅಶಾಂತಿಯ ಸನ್ನಿವೇಶ. (ಆತ ಮುಂದೆ ರೆವರೆಂಡ್ ಆನಂದರಾವ್ ಕೌಂಡಿನ್ಯ ಎಂಬ ಧರ್ಮಬೋಧಕರಾಗಿ ಸೇವೆ ಸಲ್ಲಿಸಿದರು.) ಆನಂದರಾವ್ ಸಾರಸ್ವತ ಬ್ರಾಹ್ಮಣ, ವಿವಾಹಿತ ಯುವಕ. ಮ್ಯೋಗ್ಲಿಂಗ್ ಈತನನ್ನು ಮತಾಂತರಿಸಿದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಮಿಲಿಟರಿಯನ್ನು ನಿಯೋಜಿಸುವ ಸಂದರ್ಭ ಬಂದಿತ್ತು. ಈ ಘಟನೆಯನ್ನು ಆಧರಿಸಿ, ಹನ್ನೆರಡು ಪತ್ರಗಳ ಸಂವಾದ ರೂಪದಲ್ಲಿ ಕಟ್ಟಿದ ಕಥಾನಕದ ರೂಪದಲ್ಲಿ ಈ ಕೃತಿ ಇದೆ.
ಎರಡು ಮಿಷನರಿ ಕೃತಿಗಳು
ಬಾಸೆಲ್ ಮಿಷನಿನ ಮಂಗಳೂರು ಕೇಂದ್ರದ ಹೆರ್ಮನ್ ಮ್ಯೋಗ್ಲಿಂಗ್ ಅವರ ಎರಡು ವಿಶಿಷ್ಟ ಕೃತಿಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ಮೂಲಕ ದಕ್ಷಿಣಕನ್ನಡದಲ್ಲಿ ವಸಾಹತುಕಾಲದ ಮತಾಂತರಗಳು, ಬ್ರಿಟಿಷ್ ಸರಕಾರದ ಗುಪ್ತ ಅಜೆಂಡಾ ಮತ್ತು ಜಾಣನಡೆಗಳ ಬಗ್ಗೆ ಬಹಳ ಸೂಕ್ಷ್ಮವಾಗಿ ಕೆಲವು ಸತ್ಯಗಳನ್ನು ತಿಳಿಯಬಹುದು. ಆ ಕೃತಿಗಳೆಂದರೆ ‘ಈರಾರು ಪತ್ರಿಕೆ’ ಮತ್ತು ‘ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ: ಮಿಷನರಿ ಡೈರಿ’. ಇವುಗಳ ಸೂಕ್ಷ್ಮ ಓದಿನ ಮೂಲಕ ಆ ಕಾಲದ ಸಾಮಾಜಿಕ ಚರಿತ್ರೆಯನ್ನೂ ಗ್ರಹಿಸಲು ಸಾಧ್ಯವಿದೆ. ಪ್ರಕೃತ ಬರಹ ಅಂತಹದೊಂದು ಪ್ರಯತ್ನವಾಗಿದೆ.
ಮತಾಂತರದ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ, ನಿಜವಾದ ನಂಬಿಕೆಯಿಂದ ನಿರ್ವಹಿಸಿರುವ ಮ್ಯೋಗ್ಲಿಂಗ್ ಅವರ ಚಟುವಟಿಕೆಗಳನ್ನು ಹತ್ತೊಂಬತ್ತನೆಯ ಶತಮಾನದ ಸಾಮಾಜಿಕ ಸ್ಥಿತಿಗತಿಗಳನ್ನು ಅರಿತುಕೊಳ್ಳುವ ಕುತೂಹಲದಿಂದಷ್ಟೆ ಇಲ್ಲಿ ಗಮನಿಸಲಾಗಿದೆ. ಮ್ಯೋಗ್ಲಿಂಗ್ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಅನುಪಮವಾದುದು.
‘ಈರಾರು ಪತ್ರಿಕೆ’ ಸೃಜನಶೀಲ ಕೃತಿಯ ಕರ್ತೃ ಮ್ಯೋಗ್ಲಿಂಗ್ ಮತ್ತು ‘ಮಿಷನರಿ ಪ್ರವಾಸ’ ದಿನಚರಿಯ ಸಹಕರ್ತೃಕ ರೆ|| ವೈಗ್ಲೆ ಅವರ ಒಂದು ಸಂಕ್ಷಿಪ್ತ ಪರಿಚಯ ಹೀಗಿದೆ:
ರೆ|| ಹೆರ್ಮನ್ ಮ್ಯೋಗ್ಲಿಂಗ್: ರೆ|| ಹೆರ್ಮನ್ ಮ್ಯೋಗ್ಲಿಂಗ್ (೧೮೮೧) ಬಾಸೆಲ್ ಮಿಷನರಿಯಾಗಿ ೧೮೩೬ರಲ್ಲಿ ಮಂಗಳೂರಿಗೆ ಬಂದರು. ಮ್ಯೋಗ್ಲಿಂಗ್ ಶೀಘ್ರವಾಗಿ ಕನ್ನಡದಲ್ಲಿ ಪಾಂಡಿತ್ಯವನ್ನು ಸಂಪಾದಿಸಿದರು. ೧೮೪೬ರಲ್ಲಿ ಅವರು ಮಂಗಳೂರಲ್ಲಿ ಇಂಗ್ಲಿಷ್ ಶಾಲೆಯನ್ನು ಮತ್ತು ದೈವಜ್ಞಾನ ಶಾಲೆಯನ್ನು ತೆರೆದರು. ಮ್ಯೋಗ್ಲಿಂಗ್ರ ಜತೆಗಾರ ಮಿಷನರಿ ವೈಗ್ಲೆ ಮ್ಯೋಗ್ಲಿಂಗ್ರ ಸಂಬಂಧಿಯೂ ಹೌದು. ಇವರಿಬ್ಬರೂ ಸೇರಿ ಮಾಡಿದ ಕೆಲಸವನ್ನು ಕನ್ನಡನಾಡು ಕೃತಜ್ಞತೆಯಿಂದ ಸ್ಮರಿಸಬೇಕು. ಅವರಿಬ್ಬರೂ ಸೇರಿ ಮಂಗಳೂರಿನಲ್ಲಿ ಕಲ್ಲಚ್ಚಿನ ಯಂತ್ರದ ಮುದ್ರಣಾಲಯವನ್ನು ಸ್ಥಾಪಿಸಿದರು. ೧೮೪೩ರಲ್ಲಿ ಮ್ಯೋಗ್ಲಿಂಗ್ ಸಂಪಾದಕತ್ವದಲ್ಲಿ ‘ಮಂಗಳೂರು ಸಮಾಚಾರ’ ಎಂಬ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದರು. ಒಂದಷ್ಟು ಕಾಲ ಮಂಗಳೂರಿಂದ ಪ್ರಕಟವಾದ ಈ ಪತ್ರಿಕೆ ಮುಂದೆ ‘ಕಂನಡ ಸಮಾಚಾರ’ ಎಂಬ ಹೆಸರಲ್ಲಿ ಬಳ್ಳಾರಿಯಿಂದ ಪ್ರಕಟವಾಗತೊಡಗಿತು. ‘ಈರಾರು ಪತ್ರಿಕೆ’ ಅವರ ಸೃಜನಶೀಲ ಗದ್ಯಕಥನ.
ಮ್ಯೋಗ್ಲಿಂಗ್ ಪ್ರಾಚೀನ ಕನ್ನಡ ಕಾವ್ಯಗಳನ್ನು ಸಂಪಾದಿಸಿ ‘ಬಿಬ್ಲಿಯೋಥಿಕಾ ಕರ್ಣಾಟಿಕಾ’ ಎಂಬ ಪ್ರಕಾಶನ ಮಾಲಿಕೆಯಲ್ಲಿ ಮುದ್ರಿಸಿದರು. ಇದಕ್ಕೆ ಬಾಸೆಲ್ ಮಿಷನರಿ ಸಂಸ್ಥೆ ಬೆಂಬಲ ಕೊಡದಿದ್ದಾಗ ನಿವೃತ್ತ ಬ್ರಿಟಿಷ್ ನ್ಯಾಯಾಧೀಶ ಜಾರ್ಜ್ ಜೆ. ಕ್ಯಾಸಮೇಜರ್ ಅವರ ಆರ್ಥಿಕ ನೆರವಿನೊಂದಿಗೆ ಈ ಪುಸ್ತಕಗಳನ್ನು ಕಲ್ಲಚ್ಚಿನಲ್ಲಿ ಪ್ರಕಟಿಸಿದರು: ೧) ಜೈಮಿನಿಭಾರತ, ೧೮೪೮. ೨) ತೊರವೆ ರಾಮಾಯಣ, ೧೮೪೯ (ಅಪೂರ್ಣ).
೩) ದಾಸರ ಪದಗಳು, ೧೮೫೦. ೪) ಹರಿಭಕ್ತಿಸಾರ, ೧೮೫೦. ೫) ಕುಮಾರವ್ಯಾಸ ಭಾರತ, ೧೮೫೧ (ಅಪೂರ್ಣ). ೬) ಬಸವಪುರಾಣ, ೧೮೫೦. ೭) ಚನ್ನಬಸವ ಪುರಾಣ, ೧೮೫೧. ೮) ರಾವಣೇಶ್ವರ ದಿಗ್ವಿಜಯ (ಯಕ್ಷಗಾನ), ೧೮೫೯. ೯) ಕನ್ನಡ ಗಾದೆಗಳು, ೧೮೫೨.
ಗಾಟ್ಫ್ರಿಡ್ ವೈಗ್ಲೆ: ಬಾಸೆಲ್ ಮಿಷನರಿ ವೈಗ್ಲೆ (೧೮೧೬-೧೮೫೫) ಬಹುಭಾಷಾ ಪಂಡಿತರು. ಅವರು ೧೮೪೦ರಲ್ಲಿ ಮಂಗಳೂರು ತಲಪಿದರು. ಅವರು ಇಂಗ್ಲಿಷ್, ಜರ್ಮನ್, ಸಂಸ್ಕೃತ, ಲ್ಯಾಟಿನ್ ಮತ್ತು ಪರ್ಶಿಯನ್ ಭಾಷೆಗಳನ್ನು ಬಲ್ಲವರಾಗಿದ್ದರು. ಇಲ್ಲಿಗೆ ಬಂದ ಬಳಿಕ ಕನ್ನಡ, ತುಳು ಭಾಷೆಗಳನ್ನು ಕೂಡ ಕಲಿತರು. ಬೈಬಲನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಂಗಳೂರಲ್ಲಿ ಮ್ಯೋಗ್ಲಿಂಗ್ ಆರಂಭಿಸಿದ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ಇಂಗ್ಲಿಷ್ ಬೋಧಿಸುತ್ತಿದ್ದರು. ೧೮೪೦ರ ಮಿಷನರಿ ಪ್ರವಾಸದಲ್ಲಿ ಮ್ಯೋಗ್ಲಿಂಗ್ ಜತೆಗಿದ್ದ ವೈಗ್ಲೆ ಕರಾವಳಿ ಜಿಲ್ಲೆಯ ಭೌಗೋಳಿಕ ಲಕ್ಷಣಗಳು, ಮಣ್ಣಿನ ಗುಣ, ಸಸ್ಯಸಂಪತ್ತು ಇತ್ಯಾದಿಗಳನ್ನು ದಾಖಲಿಸಿದ್ದಾರೆ. ಈ ಡೈರಿಯಲ್ಲಿ ಮ್ಯೋಗ್ಲಿಂಗ್ ಮತ್ತು ವೈಗ್ಲೆ ಪ್ರತ್ಯೇಕವಾಗಿ ಆಯಾಯ ದಿನಗಳಂದು ತಾವು ಪಡೆದಿದ್ದ ಅನುಭವಗಳನ್ನು, ಗಮನಿಸಿದ್ದ ವಿಚಾರಗಳನ್ನು ದಾಖಲಿಸಿದ್ದಾರೆ.
ಸಾಮಾಜಿಕ ಚರಿತ್ರೆಗೆ ಆಕರವಾಗುವ
ಎರಡು ಕೃತಿಗಳು
ಅ) ಈರಾರು ಪತ್ರಿಕೆ: ಮ್ಯೋಗ್ಲಿಂಗ್ ಅವರ ಸಾಹಿತ್ಯಕೃತಿ ‘ಈರಾರು ಪತ್ರಿಕೆ’ ಪ್ರಕಟವಾದುದು ೧೮೪೮ರಲ್ಲಿ ಇರಬೇಕೆಂದು ಊಹಿಸಲಾಗಿದೆ. ಈ ಕೃತಿಗೆ ಆಧಾರವಾಗಿರುವುದು ಮ್ಯೋಗ್ಲಿಂಗ್ ಮಂಗಳೂರಿನಲ್ಲಿ ೧೮೪೪ರಲ್ಲಿ ಮಾಡಿದ ಆನಂದರಾವ್ ಕೌಂಡಿನ್ಯ ಎಂಬ ಯುವಕನ ಮತಾಂತರದ ಸುತ್ತಮುತ್ತ ಹುಟ್ಟಿಕೊಂಡ ವಿವಾದ ಮತ್ತು ಅಶಾಂತಿಯ ಸನ್ನಿವೇಶ. (ಆತ ಮುಂದೆ ರೆವರೆಂಡ್ ಆನಂದರಾವ್ ಕೌಂಡಿನ್ಯ ಎಂಬ ಧರ್ಮಬೋಧಕರಾಗಿ ಸೇವೆ ಸಲ್ಲಿಸಿದರು.) ಆನಂದರಾವ್ ಸಾರಸ್ವತ ಬ್ರಾಹ್ಮಣ, ವಿವಾಹಿತ ಯುವಕ. ಮ್ಯೋಗ್ಲಿಂಗ್ ಈತನನ್ನು ಮತಾಂತರಿಸಿದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಮಿಲಿಟರಿಯನ್ನು ನಿಯೋಜಿಸುವ ಸಂದರ್ಭ ಬಂದಿತ್ತು. ಈ ಘಟನೆಯನ್ನು ಆಧರಿಸಿ, ಹನ್ನೆರಡು ಪತ್ರಗಳ ಸಂವಾದ ರೂಪದಲ್ಲಿ ಕಟ್ಟಿದ ಕಥಾನಕದ ರೂಪದಲ್ಲಿ ಈ ಕೃತಿ ಇದೆ. ಆ ಕಾಲದ ಒಂದು ಮಹತ್ತ್ವದ ಘಟನೆಯನ್ನು ಸಾಹಿತ್ಯಿಕವಾಗಿ, ಹೆಸರುಗಳನ್ನು ಬದಲಾಯಿಸಿ ಸೃಜನಶೀಲ ಕೃತಿಯಾಗಿಸಿರುವುದು ಒಂದು ಬಗೆಯ ಸಾಂಸ್ಕೃತಿಕ ದಾಖಲೀಕರಣವೇ ಸರಿ. ಅದನ್ನು ಮ್ಯೋಗ್ಲಿಂಗ್ ಆನಂದರಾವ್ ಕೌಂಡಿನ್ಯನ ಮತಾಂತರದ ಶೀಘ್ರ ತರುವಾಯ ಬರೆದಿರಬಹುದು. ಇದು ನಲವತ್ತಾರು ಪುಟಗಳಷ್ಟಿದೆ. ವಸಾಹತುಕಾಲದಲ್ಲಿ ಈ ಕೃತಿ ಹಲವಾರು ಮುದ್ರಣಗಳನ್ನು ಕಂಡಿದ್ದುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಮ್ಯೋಗ್ಲಿಂಗ್ ಅವರ ‘ಈರಾರು ಪತ್ರಿಕೆ’ ಆಧುನಿಕ ಕನ್ನಡದ ಮೊದಲನೆಯ ಸೃಜನಶೀಲ ಗದ್ಯ ಬರವಣಿಗೆ ಎನ್ನುವುದು ಈ ಲೇಖಕನ ವಾದವಾಗಿದೆ.
ಆ) ಮಿಷನರಿ ಪ್ರವಾಸ: ಮಂಗಳೂರಿಂದ ಸುಬ್ರಹ್ಮಣ್ಯಕ್ಕೆ. ೧೮೪೦: ಮಂಗಳೂರು ಕೇಂದ್ರದ ಬಾಸೆಲ್ ಮಿಷನರಿಗಳಾದ ಮ್ಯೋಗ್ಲಿಂಗ್ ಮತ್ತು ವೈಗ್ಲೆ ೧೮೪೦ರಲ್ಲಿ ಮತಪ್ರಚಾರದ ಮುಖ್ಯ ಉದ್ದೇಶದಿಂದ ಮತ್ತು ಈ ಜಿಲ್ಲೆಯನ್ನು ಅರಿತುಕೊಳ್ಳುವ ಆನುಷಂಗಿಕ ಉದ್ದೇಶದಿಂದ ಒಂದು ಕಾಲ್ನಡಿಗೆಯ ಪ್ರವಾಸವನ್ನು ಕೈಗೊಳ್ಳುತ್ತಾರೆ. ಇದು ಬಹಳ ಯೋಜಿತ ಪ್ರವಾಸವಾಗಿತ್ತು. ಲಕ್ಷದೀಪೋತ್ಸವದ ಕಾಲದಲ್ಲಿ ಧರ್ಮಸ್ಥಳಕ್ಕೆ ಹೋಗಿ, ಸುಬ್ರಹ್ಮಣ್ಯದ ಷಷ್ಠಿ ಉತ್ಸವದ ಕಾಲಕ್ಕೆ ಅಲ್ಲಿಗೆ ತಲಪಿ, ಷಷ್ಠಿ ಉತ್ಸವದ ಜತೆಗೆ ಕುಳಕುಂದದ ಜಾನುವಾರು ಜಾತ್ರೆಯನ್ನೂ ನೋಡಿ, ಬಿಸಿಲೆಘಾಟಿ ಹತ್ತಿ, ಹಿಂದಿರುಗಿ ಸುಬ್ರಹ್ಮಣ್ಯದ ಮುಖಾಂತರ ಸುಳ್ಯಕ್ಕೆ ಹೋಗಿ ಮಂಗಳೂರಿಗೆ ಹಿಂದಿರುಗಿದ ಕಾಲ್ನಡಿಗೆಯ ಪ್ರವಾಸದ ದಿನಚರಿ ದಾಖಲೆ ಇದು. ಮೂಲ ಜರ್ಮನ್ ಭಾಷೆಯಲ್ಲಿದ್ದುದನ್ನು ೨೦೧೧ರಲ್ಲಿ ಜೆನ್ನಿಫರ್ ಜೆಂಕಿನ್ಸ್ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಅದನ್ನು ಪ್ರೊ. ಎ.ವಿ. ನಾವಡ ಅವರು ನಂದಕಿಶೋರ್ ಎಸ್. ಅವರ ಸಹಾಯದಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ (ಕುವೆಂಪು ಭಾಷಾಭಾರತಿ ಪ್ರಕಟಣೆ: ೨೦೨೨).
ಈ ಕಾಲ್ನಡಿಗೆಯ ಪ್ರವಾಸದ ನಿಜವಾದ ಉದ್ದೇಶ ಜಿಲ್ಲೆಯ ಎರಡು ಪ್ರಧಾನ ದೇವಾಲಯಗಳ ಜಾತ್ರೆಯ ಸಂದರ್ಭದಲ್ಲಿ ಅಪಾರ ಜನ ಸೇರುವುದರಿಂದ ತಮ್ಮ ಮತಬೋಧನೆಗೆ ಬಹಳಷ್ಟು ಜನ ಶ್ರೋತೃಗಳು ಸಿಗುತ್ತಾರೆ ಎನ್ನುವುದು. ೧೮೪೦ ನವೆಂಬರ್ ೧೮ರಂದು ಮಂಗಳೂರಿನಿAದ ಹೊರಟು ಫರಂಗಿಪೇಟೆ, ಬಂಟವಾಳ, ಕಾರಿಂಜ, ವೇಣೂರು, ಜಮಾಲಾಬಾದ್ ಬೆಟ್ಟ, ಗುರುವಾಯನಕೆರೆ, ಬೆಳ್ತಂಗಡಿ, ಧರ್ಮಸ್ಥಳ, ಕೊಕ್ಕಡ, ಕುಳುಕುಂದ, ಸುಬ್ರಹ್ಮಣ್ಯ, ಸುಳ್ಯ, ಅಡೂರು, ಕಾಸರಗೋಡು, ಕುಂಬಳೆ, ಮಂಜೇಶ್ವರಗಳನ್ನು ಹಾದು ಮರಳಿ ಮಂಗಳೂರು ತಲಪಿದ ಧರ್ಮಪ್ರಚಾರ ಪ್ರವಾಸ ಇದು. ಹೀಗೆ ಹೋಗುವ ಸಂದರ್ಭದಲ್ಲಿ ಅವರ ಜೊತೆ ಮಂಗಳೂರಿನಿಂದಲೇ ಕರೆದುಕೊಂಡು ಬಂದ ಒಬ್ಬ ಅಡುಗೆಯವ ಮತ್ತು ಇನ್ನೊಬ್ಬ ಸಹಾಯಕ ಇರುತ್ತಿದ್ದ. (ಅವರು ಹಿಂದುಗಳಾಗಿದ್ದು ಮಿಷನರಿಗಳಿಗೆ ಪ್ರವಾಸದಲ್ಲಿ ಸಾಕಷ್ಟು ಕಿರುಕುಳ ಕೊಟ್ಟರಂತೆ. ಬಹುಶಃ ಅವರಿಗೆ ರಿಪ್ಲೇಸ್ಮೆಂಟ್ ಆಗಿ ಮ್ಯೋಗ್ಲಿಂಗ್ ರಾಮ ಮತ್ತು ಕೃಷ್ಣ ಎಂಬ ಹುಡುಗರನ್ನು ನೇಮಿಸಿಕೊಂಡಿರುತ್ತಾರೆ. ಆಮೇಲೆ ಹಳಬರನ್ನು ಅಡೂರಿನಿಂದ ಮಂಗಳೂರಿಗೆ ಹಿಂದೆ ಕಳುಹಿಸುತ್ತಾರೆ. ಹೊಸ ಹುಡುಗರು ಕ್ರೈಸ್ತರಾಗಲು ಒಪ್ಪಿಗೆ ನೀಡಿದ್ದಾರೆಂದು ಕೂಡ ಮ್ಯೋಗ್ಲಿಂಗ್ ದಾಖಲಿಸುತ್ತಾರೆ. ಆದರೆ ಅವರನ್ನು ದಾರಿಯಲ್ಲಿ ಎಲ್ಲಿ, ಹೇಗೆ ಸಂಧಿಸಿದರು ಇತ್ಯಾದಿ ವಿವರಗಳಿಲ್ಲ. ಹಾಗಾಗಿ ಪ್ರವಾಸದ ಹಲವು ವಿವರಗಳನ್ನು ಮಿಷನರಿಗಳು ಹೇಳದೆಯೂ ಬಿಟ್ಟಿರಬಹುದು ಎಂದು ಕಾಣುತ್ತದೆ). ಮಿಷನರಿಗಳು ಒಂದೂರಿನ ಮೊಕ್ಕಾಂನಿಂದ ಇನ್ನೊಂದೂರಿಗೆ ಹೊರಟಾಗ ತಲೆಹೊರೆಯಲ್ಲಿ ಅವರ ವಸ್ತುಗಳನ್ನು ಹೊತ್ತುಕೊಂಡುಹೋಗಲು ಹತ್ತಾರು ಮಂದಿ (ಒಂಬತ್ತು, ಹತ್ತು, ಹನ್ನೆರಡು – ಹೀಗೆ ಸಂಖ್ಯೆಯಲ್ಲಿ ಹೆಚ್ಚುಕಡಮೆ ಇರುತ್ತಿತ್ತು) ಹೊರೆಯಾಳುಗಳು ಇರುತ್ತಿದ್ದರು. ಸಾಮಾನ್ಯವಾಗಿ ಸ್ಥಳೀಯ ಯುವಕರನ್ನು ಇದಕ್ಕೆ ನಿಯುಕ್ತಿಗೊಳಿಸಿಕೊಳ್ಳುತ್ತಿದ್ದರು.
ಮಿಷನರಿಗಳಿಗೆ ಕಂಪೆನಿ ಸರಕಾರದ ಬೆಂಬಲ ಮತ್ತು ರಕ್ಷಣೆ
ಈ ಪ್ರವಾಸಕಥನವೇ ಮಿಷನರಿಗಳಿಗೆ ಕಂಪೆನಿ ಸರಕಾರದ ಬೆಂಬಲ ಮತ್ತು ರಕ್ಷಣೆ ಎಷ್ಟುಮಟ್ಟಿಗೆ ಇರುತ್ತಿತ್ತು ಎನ್ನುವುದನ್ನು ತಿಳಿಸುವ ದಾಖಲೆಯೂ ಆಗಿರುವುದು ವಿಶೇಷ.
ಮಿಷನರಿಗಳ ಪ್ರವಾಸದಲ್ಲಿ ಒಂದೂರಿನಿಂದ ಮುಂದಿನ ಠಿಕಾಣಿಯವರೆಗೆ ಇವರ ಅಡುಗೆಸಾಮಾನು, ಮೇಜು-ಕುರ್ಚಿಗಳನ್ನು ಹೊತ್ತುಕೊಂಡುಹೋಗಿ ಇಟ್ಟುಬರುವುದಕ್ಕೆ ಇವರನ್ನು ನೇಮಿಸಿಕೊಡುವ ಜವಾಬ್ದಾರಿ ಊರ ಪಟೇಲನದಾಗಿರುತ್ತಿತ್ತು. ಇನ್ನೊಂದು ಊರಿನ ಪಟೇಲನು ಇವರ ಜವಾಬ್ದಾರಿ ವಹಿಸಿಕೊಳ್ಳುವವರೆಗೆ ಹಿಂದಿನ ಊರಿನ ಹೊರೆಯಾಳುಗಳು ಇವರ ಜತೆಗೆ ಇರುತ್ತಿದ್ದರು. ಅವರ ದಾರಿಯಲ್ಲಿ ಸಿಗುವ ಎಲ್ಲ ಊರುಗಳ ಪಟೇಲರಿಗೂ ಕಂಪೆನಿ ಸರಕಾರದಿಂದ ಸೂಚನೆ ಹೋಗಿತ್ತು ಎನ್ನುವುದು ಸ್ಪಷ್ಟವಾಗುವುದು ಈ ಕೆಳಗೆ ಕೊಟ್ಟಿರುವ ಉಲ್ಲೇಖಗಳಿಂದ.
“ಸ್ವಲ್ಪ ಹೊತ್ತಿನ ಬಳಿಕ ಸ್ಥಳೀಯ ಗ್ರಾಮ ಮುಖ್ಯಸ್ಥ ಬಂದ. ನಮಗೆ ಏನು ಬೇಕೋ ಅವುಗಳನ್ನು ತಂದುಕೊಡುವಂತೆ ತನ್ನ ಸಹಾಯಕರಿಗೆ ತಿಳಿಸಿದ. ಊರಿನ ಮಂದಿಯನ್ನು ಕರೆದು ಮುಂದಿನ ಊರಿಗೆ ತೆರಳಲು ನಮ್ಮ ಹೊರೆಯನ್ನು ಒಯ್ಯಲು ಸೂಕ್ತ ಹೊರೆಯಾಳುಗಳ ವ್ಯವಸ್ಥೆ ಮಾಡುವಂತೆ ಸೂಚಿಸಿದ. ….ನಮ್ಮಲ್ಲಿ ಒಟ್ಟು ೧೦ ಹೊರೆಯಷ್ಟು ಸರಂಜಾಮುಗಳಿದ್ದವು. ಅವುಗಳಲ್ಲಿ ನಮ್ಮ ಮೇಜು ಕುರ್ಚಿ ಹಾಗೂ ಅಡುಗೆಯ ಸಾಮಗ್ರಿಗಳು ಇದ್ದವು. ಸುಬ್ರಹ್ಮಣ್ಯದಿಂದ ನಮ್ಮೊಂದಿಗೆ ಬಂದಿದ್ದ ಒಬ್ಬ ಹೊರೆಯಾಳು ಇದ್ದ. ಹೀಗಾಗಿ ನಮಗೆ ಒಂಬತ್ತು ಹೊರೆಯಾಳುಗಳ ಆವಶ್ಯಕತೆಯಿತ್ತು.” (ಪುಟ ೧೧೦)
“ನಿನ್ನೆ ಮಧ್ಯಾಹ್ನ ಬಂಗ್ಲೆ ಮೈದಾನದ ಗೇಟ್ನ ಎದುರಿನ ಬಯಲು ಜಾಗದಿಂದ ಮುಂದೆ ನನಗೆ ಹೋಗಲಾಗಲಿಲ್ಲ. ಮಧ್ಯಾಹ್ನ ದೊಡ್ಡ ಸಂಖ್ಯೆಯ ಜನ ಭೇಟಿ ನೀಡಲು ಉತ್ಸುಕರಾಗಿ ನನ್ನೆಡೆಗೆ ಬಂದಿದ್ದರು. ಬೈಬಲ್ನ್ನು ಓದಿ ಅವರಿಗೆ ವಿವರಿಸಿ ಹೇಳಿದೆ ಹಾಗೂ ಅವರು ಕೆಲವು ಕರಪತ್ರಗಳನ್ನು ನಮ್ಮಿಂದ ಸ್ವೀಕರಿಸಿದರು. ಆದುದರಿಂದ ಹಳ್ಳಿಯೊಳಗೆ ನಾನು ಹೋಗುವುದು ವಿಳಂಬವಾಯಿತು. ಒಬ್ಬ ಗುಮಾಸ್ತ, ಆಡಳಿತಗಾರ ಹಾಗೂ ಆ ಗ್ರಾಮದ ಪಟೇಲ ಗೇಟ್ ಬಳಿ ನಿಂತಿದ್ದರು.”
ಈ ಮಿಷನರಿಗಳಿಗೆ ದಾರಿಯುದ್ದಕ್ಕೂ ಊರ ಪಟೇಲರು ಸಹಾಯ ಮಾಡಬೇಕಾಗಿತ್ತು ಎನ್ನುವುದು ಇಂತಹ ಉಲ್ಲೇಖಗಳಿಂದ ಊಹಿಸಬಹುದಾದ ಸಂಗತಿ. ಒಂದು ಕಡೆ ಪಟೇಲನಿಗೆ ಈ ಮಿಷನರಿಗಳಿಗೆ ಒದಗಿಸಬೇಕಾಗಿದ್ದ ಕೋಳಿ ಊಟವನ್ನು ಒದಗಿಸಲು ಆಗುವುದಿಲ್ಲ ಎಂದು ಕಾಣುತ್ತದೆ. ಅವನು ಸ್ವಲ್ಪ ನಿರಾಸಕ್ತಿ ತೋರಿಸಿದ್ದರೂ ತೋರಿಸಿರಬಹುದು; ಪಟೇಲನಿಂದ ಆಗದುದನ್ನು ಒಬ್ಬ ಹೊಲೆಯನು ಮಾಡಿದನು ಎಂಬ ವ್ಯಂಗ್ಯದ ಮಾತೂ ಇಲ್ಲಿ ಬಂದಿದೆ. ಮಿಷನರಿಗಳು ತಮ್ಮ ಹಕ್ಕು ಎಂಬಂತೆ ಕೋಳಿ, ಹಾಲು ಇತ್ಯಾದಿಗಳನ್ನು ಕೇಳುವುದು ಇಲ್ಲಿ ತಿಳಿಯುತ್ತದೆ. ಆ ಸಂದರ್ಭದ ದಾಖಲೆ ಮಿಷನರಿಗಳ ಡೈರಿಯಲ್ಲಿ ಹೀಗಿದೆ:
“ಶನಿವಾರ, ಡಿಸೆಂಬರ್ ೧೨.
….ಊರಪಟೇಲ ನಮಗಾಗಿ ಒಂದು ಕೋಳಿ ತರಬೇಕಾಗಿತ್ತು. ಕೊನೆಗೂ ತಡ ಮಧ್ಯಾಹ್ನ ಒಂದು ಚಿಕ್ಕ ಕೋಳಿಯನ್ನು ನಮಗಾಗಿ ತಂದುಕೊಟ್ಟ. ಪಟೇಲ ನಮಗೆ ಕೋಳಿ ತರುವ ಸಲುವಾಗಿ ಹಲವರಲ್ಲಿ ಹೇಳಿದ್ದ. ಕೊನೆಗೆ ನಮಗಾಗಿ ಕೋಳಿ ತರುವಲ್ಲಿ ತಡವಾದರೂ ಯಶಸ್ವಿಯಾದ. ನಾವು ಆ ಊರ ಹೊಲೆಯನೊಬ್ಬನಲ್ಲಿ ಹೇಳಿದಾಗ ಹದಿನೈದು ನಿಮಿಷಕ್ಕೆ ನಮಗಾಗಿ ಉತ್ತಮ ಜಾತಿಯ ಕೋಳಿಯನ್ನು ಆತ ತಂದುಕೊಟ್ಟ. ಅದು ನಮಗೆ ಹಾಗೂ ನಮ್ಮ ಹುಡುಗರ ಹೊಟ್ಟೆ ಹಸಿವನ್ನು ಹಿಂಗಿಸಿತು. ಆದರೆ ನಮ್ಮ ಮಧ್ಯಾಹ್ನದ ಊಟ ಸಾಯಂಕಾಲದ ಹೊತ್ತಿಗೆ ಬಂತು. ಊಟದ ಜೊತೆಗೆ ಹಾಲು ಬರಲಿಲ್ಲ. ಹುಲ್ಲು ಮೇಯಲು ಹೋಗಿದ್ದ ಹಸುಗಳು ತಡವಾಗಿ ಬಂದ ಬಳಿಕ ನಮಗೆ ಒಂದು ಲೋಟ ತುಂಬಾ ತಾಜಾ ಹಾಲು ಸಿಕ್ಕಿತು. ಆ ಬಳಿಕ ಬಿಸಿ ಬಿಸಿ ಹಾಲು ಕೂಡಾ ಬಂತು.”
ಡೈರಿಯಲ್ಲಿ, ಅಂದರೆ ಈ ಪುಸ್ತಕದಲ್ಲಿರುವಷ್ಟು ಭಾಗದಲ್ಲಿ – ಎಲ್ಲಿಯೂ ಉಲ್ಲೇಖಿಸದಿದ್ದರೂ ಈಸ್ಟ್ ಇಂಡಿಯಾ ಕಂಪೆನಿ ಸರಕಾರ ಈ ಧರ್ಮಬೋಧನೆಯ ಪ್ರವಾಸಕ್ಕೆ ರಕ್ಷಣೆ ಕೊಟ್ಟು ವ್ಯವಸ್ಥೆ ಮಾಡಿತ್ತು ಎನ್ನುವುದು ಸಾಲುಗಳ ನಡುವೆ ಓದುವಾಗ ತಿಳಿದುಬರುತ್ತದೆ. ಮಿಷನರಿಗಳು ಯಾವ ಊರಿಗೆ ಹೋದರೂ ನೇರವಾಗಿ ಸರಕಾರಿ ಕಚೇರಿಗೆ ಹೋಗಿ, ಅಧಿಕಾರಿಗಳು ತಮ್ಮ ಬಿಡಾರಕ್ಕೆ ವ್ಯವಸ್ಥೆಯನ್ನು ಎಲ್ಲಿ ಮಾಡಿದ್ದಾರೆ ಎನ್ನುವುದನ್ನು ಹಕ್ಕಿನಿಂದ ಕೇಳುತ್ತಿದ್ದರು. ಸುಬ್ರಹ್ಮಣ್ಯಕ್ಕೆ ಇವರು ತಲಪಿದಾಗ ರಾತ್ರಿಯಾಗುವ ಕಾರಣ ಇವರು ಸರಕಾರಿ ಕಚೇರಿಯಲ್ಲಿಯೇ ಮಲಗುತ್ತಾರೆ. ಪೊಲೀಸ್ ಸ್ಟೇಷನ್ ಕೂಡ ಅದೇ ಆಗಿತ್ತು. ಮರುದಿನ ಅಲ್ಲಿಂದ ಹೊರಟು ಬೇರೊಂದು ಬಿಡಾರಕ್ಕೆ ಹೋಗುತ್ತಾರೆ.
ಈ ನಡುವೆ ಮಿಷನರಿಗಳು ಸರಕಾರಿ ಕಚೇರಿಯಲ್ಲಿಯೇ ಬೀಡುಬಿಟ್ಟಿದ್ದಾರೆ ಎಂಬ ವರದಿ ಕಲೆಕ್ಟರ್ ಬ್ಲೇರ್ಗೆ ತಲಪಿರುತ್ತದೆ. ೧೮೩೭ರ ಕ್ರಾಂತಿ ನಡೆದು ಮೂರೇ ವರ್ಷ ಆಗಿದ್ದ ಸಂದರ್ಭ ಅದು (೧೮೪೦). ಜಿಲ್ಲಾಧಿಕಾರಿಗೆ ಕಳವಳವಾಗುತ್ತದೆ. ಅವನು ತಮ್ಮ ಸರಕಾರ ಮತಾಂತರಿಗಳಿಗೆ ಸಹಾಯಕವಾಗಿರುವುದು ಜನರಿಗೆ ತಿಳಿದು ಮತ್ತೆ ಸರಕಾರದ ವಿರುದ್ಧ ಅಶಾಂತಿ ಭುಗಿಲೇಳುವುದೋ ಎಂದು ಕಳವಳಗೊಂಡು ತಕ್ಷಣ ಒಂದು ಪತ್ರವನ್ನು ಸುಬ್ರಹ್ಮಣ್ಯದ ತಹಶೀಲ್ದಾರನಿಗೂ, ಇನ್ನೊಂದು ಪತ್ರವನ್ನು ಮ್ಯೋಗ್ಲಿಂಗರಿಗೂ ಬರೆದು, ತಕ್ಷಣವೇ ಸರಕಾರಿ ಕಚೇರಿಯನ್ನು ಖಾಲಿ ಮಾಡಿ ಬೇರೆ ಬಿಡಾರದಲ್ಲಿ ಅವರನ್ನು ಉಳಿಸಬೇಕು ಎಂಬ ಸೂಚನೆಯನ್ನು ಕೊಡುತ್ತಾನೆ. (ಈ ಪತ್ರ ಬರುವುದಕ್ಕಿಂತ ಮುಂಚೆಯೇ ಮಿಷನರಿಗಳು ತಮಗೆ ನಿಗದಿಪಡಿಸಿದ ಬಿಡಾರಕ್ಕೆ ಹೋಗಿ ಬಿಡಾರ ಹೂಡಿರುತ್ತಾರೆ ಎನ್ನುವುದು ಕಲೆಕ್ಟರ್ ಬ್ಲೇರ್ಗೆ ತಿಳಿದಿರುವುದಿಲ್ಲ. ಅಥವಾ ತಿಳಿದಿದ್ದರೂ ಮಿಷನರಿಗಳಿಗೆ ಸೂಕ್ಷ್ಮವಾಗಿ ಸರಕಾರಿ ಕಚೇರಿಗಳನ್ನೇ ಹಕ್ಕಿನಿಂದ ಎಂಬಂತೆ ಬಳಸಿಕೊಳ್ಳಬೇಡಿ ಎಂದು ತಿಳಿಯಹೇಳಲು ಬ್ಲೇರ್ ಬಯಸಿದ್ದಿರಬಹುದು.)
ಆ ಸನ್ನಿವೇಶದ ದಿನಚರಿ ಮ್ಯೋಗ್ಲಿಂಗ್ ಅವರ ಮಾತುಗಳಲ್ಲಿ ಹೀಗಿದೆ:
ಮ್ಯೋಗ್ಲಿಂಗ್: ಶನಿವಾರ, ನವೆಂಬರ್ ೨೮: ನಮ್ಮ ಪ್ರಯಾಣದ ಗುರಿಯಂತೆ ನಾವು ಸುಬ್ರಹ್ಮಣ್ಯವನ್ನು ತಲಪಿದೆವು. ಆದರೂ ಇನ್ನೂ ನಮಗೆ ಆ ರಾತ್ರಿ ತಂಗಲು ಸೂಕ್ತ ನೆಲೆ ದೊರೆತಿಲ್ಲ. ಈ ಜನವಿದೂರ ಪ್ರದೇಶದಲ್ಲಿ ತಂಗಲು ನಾವು ಇಷ್ಟಪಡಲಿಲ್ಲ. ಹಾಗೂ ಅಲ್ಲಿನ ದೊಡ್ಡ ದೇವಸ್ಥಾನದ ಪಕ್ಕದಲ್ಲಿ ಸರಕಾರಿ ಬಂಗ್ಲೆಯಲ್ಲಿ ಇರಲು ಬಯಸಿದೆವು. ನಾವು ಈ ತನಕ ದೊಡ್ಡ ಜನಸಮೂಹವುಳ್ಳ ಸಂತೆ ಪ್ರದೇಶವನ್ನು ಬಿಟ್ಟು ಇಂತಹ ಪ್ರದೇಶವನ್ನು ಕಂಡಿಲ್ಲ, ಕೇಳಿಲ್ಲ.
ನಾವು ಮಧ್ಯಾಹ್ನದ ಹೊತ್ತಿಗೆ ಸುಬ್ರಹ್ಮಣ್ಯ ತಲಪಿದಾಗ ಸುಬ್ರಹ್ಮಣ್ಯ ಸರಕಾರಿ ಕಚೇರಿಗೆ ಒಬ್ಬ ಪೇದೆಯನ್ನು ಕಳುಹಿಸಿ ಸರಕಾರಿ ಕಚೇರಿಯಲ್ಲಿ ತಂಗಬಹುದೇ ಎಂದು ಕೇಳಿದೆವು. ಅದಾಗಲೇ ಸಂಜೆ ಐದು ದಾಟಿತ್ತು. ಅವನು ಐದು ಜನ ಹೊರೆಯಾಳುಗಳೊಂದಿಗೆ ಹಿಂದಿರುಗಿ ಬಂದ, ಸರಕಾರಿ ಕಚೇರಿಯಲ್ಲಿ ತಂಗಲು ಅವಕಾಶವಿಲ್ಲ ಎಂದು ತಿಳಿಸಿದ. ಆದರೆ ನಾವು ನಿಜವಾಗಿಯೂ ಅಲ್ಲೇ ತಂಗಲು ಬಯಸಿದರೆ ಕೂಡಲೇ ಹೊರಟುಬರಬೇಕು. ಕಾರಣ ಈಗ ಹೊರೆಯಾಳುಗಳು ಸಿಗುತ್ತಾರೆ; ಅದಕ್ಕಾಗಿ ಎಂದು ತಿಳಿಸಿದ…
ರವಿವಾರ, ನವೆಂಬರ್ ೨೯: ಬೆಳಗ್ಗೆ ಪುತ್ತೂರಿನ ಪೇಶ್ಕಾರ್ನ (ತಹಶೀಲ್ದಾರನ) ಭೇಟಿಯಾಯಿತು. ಅವನು ರಾತ್ರಿಯನ್ನು ನಮ್ಮ ಪಕ್ಕದ ಸಣ್ಣ ಕೊಠಡಿಯಲ್ಲಿ ಕಳೆದಿದ್ದ, ಆತ ಇಲ್ಲಿನ ಮುಖ್ಯ ಅಧಿಕಾರಿಯ ವ್ಯಕ್ತಿ. ಆತ ಸುತ್ತು ಬಳಸದೆ ಸಂಕ್ಷೇಪವಾಗಿ ನಾವು ಬಂಗ್ಲೆಗೆ ಮರಳುವುದು ಒಳ್ಳೆಯದೆಂದೂ ಅಲ್ಲಿ ಶಾಂತ ವಾತಾವರಣವಿದೆ ಹಾಗೂ ಅಲ್ಲಿನ ಕೊಠಡಿಗಳು ಹೆಚ್ಚು ವಿಶಾಲವಾಗಿವೆ, ಅಷ್ಟೇ ಅಲ್ಲ ನಮ್ಮ ಅಗತ್ಯಗಳನ್ನು ತಾನು ನೋಡಿಕೊಳ್ಳುವುದಾಗಿ ಹೇಳಿದ, ನಾವು ಅದಕ್ಕೆ ಸಮ್ಮತಿಸಿದೆವು. ನಮ್ಮ ಹೊರೆಗಳನ್ನು ಬಂಗ್ಲೆಗೆ ಒಯ್ಯುವ ಸಲುವಾಗಿ ಕೆಲವು ಹೊರೆಯಾಳುಗಳನ್ನು ಆತ ಬರಹೇಳಿದ….
ಡಿಸೆಂಬರ್ ೫: ನಾನು ಪಟ್ಟಣವನ್ನು ಹಾದು ‘ಕಚೇರಿ’ಗೆ ಹೋದೆ. ನಮ್ಮ ಹೊರೆಯಾಳುಗಳನ್ನು ಅಲ್ಲಿಗೆ ಬರಹೇಳಿದ್ದೆ. ನಾವು ನಾಳೆ ಬೆಳಗ್ಗೆ ಇಲ್ಲಿಂದ ಹೊರಡುವ ಆಲೋಚನೆಯಲ್ಲಿದ್ದೇವೆ. ಈ ಬಾರಿ ನಮ್ಮ ಪ್ರಯಾಣವನ್ನು ದಕ್ಷಿಣದ ಬೆಟ್ಟಗಳ ಮೂಲಕ ಸುಳ್ಯದ ಅಡೂರಿಗೆ ಹೋಗುವ ಆಲೋಚನೆ ಮಾಡಿದೆವು. ಅಲ್ಲಿಂದ ಮುಂದೆ ಮಂಗಳೂರಿಗೆ ಹೋಗುವ ನಿರ್ಧಾರ ನಮ್ಮದು. ಪುತ್ತೂರಿನ ಪೇಶ್ಕಾರ್ ಇನ್ನೂ ಅಲ್ಲೇ (ಸುಬ್ರಹ್ಮಣ್ಯ) ಉಳಿದಿದ್ದ. ನನ್ನನ್ನು ಖುಷಿಯಿಂದ ಭೇಟಿಯಾದಂತೆ ಕಂಡಿತು. ನಮ್ಮನ್ನು ಈ ‘ಕಚೇರಿ’ಯಲ್ಲಿ ಉಳಿಯಬಿಡಬಾರದೆನ್ನುವ ಜಿಲ್ಲಾ ಕಲೆಕ್ಟರರ ಆದೇಶ ಪತ್ರ ಅವನ ಕೈಯಲ್ಲಿತ್ತು. “ಹಾಗಾದರೆ ಅದು ಒಳ್ಳೆಯ ಸಂಗತಿ” ಎಂದು ನಾನು ಹೇಳಿದೆ. “ನಾವು ನಮ್ಮದೇ ನಿರ್ಧಾರದಂತೆ ಇಲ್ಲಿಂದ ದೂರ ಹೋಗಿ ದೂರ ಉಳಿದದ್ದು” ಎಂದೆ. “ಆ” ಎಂದು ಉದ್ಗರಿಸಿದ ಆತ. “ಹೌದು, ಖಂಡಿತವಾಗಿ. ಅಲ್ಲಿಂದ ಬಂದ ಆದೇಶ ಇಲ್ಲಿದೆ. ನಾನು ಅದನ್ನು ಓದುತ್ತೇನೆ.” ಅವನು ಎದ್ದು ನಿಂತು ಕನ್ನಡದಲ್ಲಿ ಬರೆದಿರುವ ಆ ಪತ್ರವನ್ನು ಓದಿ ಹೇಳುವುದಾಗಿ ಹೇಳಿದ. ಕಲೆಕ್ಟರ್ ಬ್ಲೇರ್ ಬರೆದ ಪತ್ರ ಅದು. ಸರಕಾರ ಕಾನೂನನ್ನು ಬಿಟ್ಟು ಏನನ್ನೂ ಮಾಡುವಂತಿಲ್ಲ. “ಪ್ರವಾಸಿಗಳಾದ ನೀವು ಪ್ರವಾಸಿ ಬಂಗ್ಲೆಯಲ್ಲೇ ಉಳಿಯಬೇಕು. ಆಗ ನಿಮ್ಮ ಕಾಳಜಿಯನ್ನು ನಾವು ನೋಡಿಕೊಳ್ಳಬಹುದು. ಹೀಗಾಗಿ ಕೂಡಲೇ ಕಚೇರಿಯನ್ನು ತೊರೆಯಬೇಕು” ಎಂದು ಕಲೆಕ್ಟರ್ ಬ್ಲೇರ್ ಆಗ್ರಹಪೂರ್ವಕವಾಗಿ ಬರೆದಿದ್ದ.
ಅದೇ ಸಮಯದಲ್ಲಿ ಮಿ. ಬ್ಲೇರ್ ಅವರಿಂದ ಬಂದಿದ್ದ ವೈಯಕ್ತಿಕ ಪತ್ರವನ್ನು ಪೇಶ್ಕಾರ್ ನನಗೆ ನೀಡಿದ. ನಾನು ಅದನ್ನು ನಿಧಾನವಾಗಿ ಓದಿದೆ. ನನ್ನ ಮನಸ್ಸನ್ನು ಸರಿದೂಗಿಸಿಕೊಳ್ಳುವ ಸಲುವಾಗಿ ಅದು ಕುತೂಹಲದಾಯಕವಾಗಿತ್ತು. ಕಚೇರಿಯಲ್ಲಿ ನಾವು ಉಳಿದರೆ ಸರಕಾರದ ವಿರುದ್ಧ ಕ್ರಾಂತಿಯ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ಬರೆದಿತ್ತು. ನಾವು ಅಲ್ಲಿಂದ ಹೊರಡುವ ಆಲೋಚನೆ ಮಾಡಿದ್ದು, ಸೂಕ್ತವಾದ ನಿರ್ಧಾರ ಎಂದು ಭಾವಿಸಿದೆವು. ಇಲ್ಲಿ ನಮ್ಮ ಚಟುವಟಿಕೆಗಳು ಆಪ್ಯಾಯರಹಿತವಾಗಿರಲಿಲ್ಲ. ನಾವು ಅಲ್ಲಿ ದಿನಕ್ಕೆರಡು ಬಾರಿ ಪೇಟೆಯ ಕಡೆ ನಡೆದು ಅಲ್ಲಿಯ ಜನರೊಂದಿಗೆ ಮಾತುಕತೆ ನಡೆಸುತ್ತಿದ್ದೆವು. ಜನರೊಂದಿಗೆ ನಮ್ಮ ಒಡನಾಟ ಶಾಂತಿಯುತವೇ ಆಗಿತ್ತು.
ಬ್ಲೇರ್ ಅವರು ಬರೆದಿದ್ದ ಪತ್ರವನ್ನು ನಾನು ಓದಿ ಮುಗಿಸಿದೊಡನೆಯೇ ಪೇಶ್ಕಾರ್ ಕೇಳಿದ; “ಈ ಬಗ್ಗೆ ನಿಮಗೆ ಏನು ಹೇಳಲಿಕ್ಕಿದೆ? ಕಲೆಕ್ಟರ್ ನಿಮ್ಮ ಪತ್ರದಲ್ಲಿ ಏನು ಬರೆದಿದ್ದಾರೆ?” ನಾನು ಹೇಳಿದೆ, “ನಮ್ಮ ಇರುವಿಕೆಯಿಂದ ಅವರು ಹೆದರಿಕೊಂಡಂತಿದೆ.” “ಯಾರು?” ಎಂದು ಕೇಳಿದ. (ನಾನು ಈ ಪತ್ರದಿಂದ ಬೆದರಿದ್ದೇನೆ ಎಂದು ಪೇಶ್ಕಾರ್ ಭಾವಿಸಿದಂತಿದೆ). ನಾನು ಹೇಳಿದೆ “ಕಲೆಕ್ಟರ್” ಎಂದು. ಆಗ ಪೇಶ್ಕಾರ್ ಕೋಪ ಮತ್ತು ಆಶ್ಚರ್ಯದಿಂದ “ಯಾರು, ಕಲೆಕ್ಟರರೇ?” ಎಂದು ಕೇಳಿದ. “ಹೌದು” ಎಂದು ನಾನು ಉತ್ತರಿಸಿದೆ. “ನಾವು ಸರಕಾರಿ ಕಚೇರಿಯಲ್ಲಿ ತಂಗಿದರೆ, ಇಲ್ಲಿ ನಾವು ಸಾರ್ವಜನಿಕರಿಗೆ ಬೋಧನೆ ಮಾಡಿದರೆ ಅದರಿಂದ ಗಲಭೆಯಾಗಬಹುದೆಂದು ಅವರು ಹೆದರಿದ್ದಾರೆ” ಎಂದೆ. ಪೇಶ್ಕಾರ್ ಇದನ್ನು ಕೇಳಿ ಮೌನಿಯಾದ. ನಾನು ಸ್ವಲ್ಪ ಹೊತ್ತಲ್ಲೇ ಅಲ್ಲಿಂದ ಹೊರಟೆ. ಹೊರೆಯಾಳುಗಳುಗಳಿಗೆ ಸೂಕ್ತ ಸೂಚನೆ ನೀಡಿ ನಾವು ಅಲ್ಲಿಂದ ಹೊರ ನಡೆದೆವು.
ನಮ್ಮ ನಡವಳಿಕೆಯಿಂದ ಕಳವಳಗೊಂಡಿರುವ ನಮ್ಮ ಆತ್ಮೀಯ ಕಲೆಕ್ಟರ್ ಬ್ಲೇರ್ ಮಹಾಶಯನಿಗೆ ನಾವು ಉತ್ತರಿಸಬೇಕಾಗಿದೆ….”
ಈಸ್ಟ್ ಇಂಡಿಯಾ ಸರಕಾರ ಅವರಿಗೆ ಸರಕಾರಿ ಅಧಿಕಾರಿಗಳಂತೆಯೆ ರಾಜೋಪಚಾರ ನೀಡಲು ಅವರ ದಾರಿಯಲ್ಲಿ ಸಿಗುವ ಎಲ್ಲ ಗ್ರಾಮಾಧಿಕಾರಿಗಳಿಗೆ ಸೂಚನೆ ಕೊಟ್ಟಿರುತ್ತಿತ್ತು ಎನ್ನುವುದು ಇಲ್ಲಿ ಸೂಕ್ಷ್ಮವಾಗಿ ತಿಳಿಯುವ ವಿಚಾರ. ಮಿಷನರಿಗಳ ರಕ್ಷಣೆಯ ಹೊಣೆಯನ್ನು ಅಧಿಕಾರಿಗಳು ವಹಿಸಿಕೊಳ್ಳಬೇಕಿತ್ತು; ಮಿಷನರಿಗಳ ರಕ್ಷಣೆಗಾಗಿ ಜಿಲ್ಲಾಡಳಿತ ಗುಪ್ತಚರರ ಮೂಲಕ ಮೇಲೆ ಕಣ್ಣಿಟ್ಟುಕೊಂಡಿರುತ್ತಿತ್ತು ಎನ್ನುವುದು ಇಲ್ಲಿ ಸೂಕ್ಷ್ಮವಾಗಿ ದಾಖಲಾಗಿದೆ.
೧೮೩೭ ಮತ್ತು ೧೮೫೭ರ ಕ್ರಾಂತಿಗಳ ನಂತರ ಬ್ರಿಟಿಷರು ಹಿಂದುಗಳನ್ನು ಮತ್ತು ಮುಸ್ಲಿಮರನ್ನು ನೇರಾನೇರ ಎದುರು ಹಾಕಿಕೊಳ್ಳಲು ಇಚ್ಛಿಸುತ್ತಿರಲಿಲ್ಲ. ಮ್ಯೋಗ್ಲಿಂಗ್ ಡೈರಿಯ ಕಾಲ ೧೮೪೦, ಅಂದರೆ ಈ ಎರಡು ಘಟನೆಗಳ ನಡುವಿನದು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾಧಿಕಾರಿ ಬ್ಲೇರ್ ಕೇವಲ ೩ ವರ್ಷಗಳ ಕೆಳಗೆ ಕಲ್ಯಾಣಪ್ಪನ ಕ್ರಾಂತಿಯಿಂದ ತತ್ತರಿಸಿದ ಆಡಳಿತಯಂತ್ರದ ಚುಕ್ಕಾಣಿ ಹಿಡಿದಿದ್ದುದರಿಂದ, ಅವನು ಹಿಂದುಗಳ ಧಾರ್ಮಿಕ ವಿಷಯಕ್ಕೆ ತಲೆಹಾಕಲು ಹಿಂಜರಿದಿದ್ದುದು ಸಹಜವಾಗಿದೆ. ಆದರೆ ಬ್ರಿಟಿಷ್ ಸರಕಾರ ಇಡಿಯ ಭಾರತಕ್ಕೆ ಸಂಬಂಧಿಸಿದಂತೆ ಮಿಷನರಿಗಳನ್ನು ಬೆಂಬಲಿಸುವ ತೀರ್ಮಾನ ತೆಗೆದುಕೊಂಡಿತ್ತಲ್ಲ, ಅದನ್ನು ಪಾಲಿಸುವ ಹೊಣೆಗಾರಿಕೆಯೂ ಅವನದಾಗಿತ್ತು.
ಮ್ಯೋಗ್ಲಿಂಗ್ ಕೃತಿಗಳ ಹಿನ್ನೆಲೆಯಲ್ಲಿರುವುದು ಕರಾವಳಿಯಲ್ಲಿ ಹಿಂದುಗಳನ್ನು ಮತ್ತು ಸಾಧ್ಯವಾದರೆ ಮುಸ್ಲಿಮರನ್ನು ಕ್ರೈಸ್ತ ಮತಕ್ಕೆ ಮತಾಂತರಿಸುವ ಅವರ ಜೀವನಧ್ಯೇಯ. ಅವರಿಗೆ ಎದುರಾಗಿರಬಹುದಾದ ಪ್ರತಿರೋಧಗಳು ಮತ್ತು ಸಿಕ್ಕಿರಬಹುದಾದ ಬೆಂಬಲವನ್ನು ಅರ್ಥಮಾಡಿಕೊಳ್ಳಲು ಆ ಕಾಲದ ಪರಿಸ್ಥಿತಿಯನ್ನು – ಮುಖ್ಯವಾಗಿ ಕ್ರೈಸ್ತ ಮತಾಂತರಕ್ಕೆ ಸಂಬಂಧಿಸಿದ್ದನ್ನು ಈ ಪ್ರಬಂಧದಲ್ಲಿ ದಾಖಲಿಸಲಾಗಿದೆ.
– ಭಾಗ: ಎರಡು –
ಕರಾವಳಿಯಲ್ಲಿ ಕ್ರೈಸ್ತ ಮತಾಂತರಗಳು
ಕರಾವಳಿಯಲ್ಲಿ ಕ್ರೈಸ್ತ ಧರ್ಮ
ವಾಸ್ಕೋಡಗಾಮನ ಆಗಮನದ ನಂತರ ಪೋರ್ಚುಗೀಸರು ಭಾರತದ ಪಶ್ಚಿಮ ಕರಾವಳಿಯ ಮೇಲೆ ಹತೋಟಿ ಸಾಧಿಸಿದರು. ದಕ್ಷಿಣಕನ್ನಡದ ಮಂಗಳೂರು ಕೆಲವು ಶತಮಾನಗಳಿಗಿಂತ ಮೊದಲೇ ವಿದೇಶೀ ವ್ಯಾಪಾರಕ್ಕೆ ತೆರೆದುಕೊಂಡ ಬಂದರಾಗಿತ್ತು. ಅರಬರೂ ಯಹೂದಿಯರೂ ನಿರಂತರವಾಗಿ ವ್ಯಾಪಾರ ನಿಮಿತ್ತ ಬಂದುಹೋಗುತ್ತಿದ್ದರು ಮತ್ತು ವ್ಯಾಪಾರ ಕೋಠಿಗಳನ್ನು ಕಟ್ಟಿಕೊಂಡು ಕೆಲವರು ಇಲ್ಲಿಯೇ ನೆಲಸಿದ್ದರು ಕೂಡ. ಪೋರ್ಚುಗೀಸರು ಅರಬರ ವ್ಯಾಪಾರದ ಏಕಸ್ವಾಮ್ಯವನ್ನು ಮುರಿದರು.
೧೫೨೬ರಲ್ಲಿ ಪೋರ್ಚುಗೀಸ್ ವೈಸ್ರಾಯ್ ಲೋಪೋ ವಾಜ್ ಡಿ. ಸಂಪಯೊ (Lopo Vaz de Sampaio: ವಿಜಯನಗರದ ಕೃಷ್ಣದೇವರಾಯನ ಸಮಕಾಲೀನ) ಮಂಗಳೂರನ್ನು ವಶಪಡಿಸಿಕೊಂಡ. ಆ ಸಂದರ್ಭದಲ್ಲಿ ವಿಜಯನಗರದವರು ಮತ್ತು ಅನಂತರ ಕೆಳದಿ ರಾಜರು ಇಲ್ಲಿನ ಸಾಮ್ರಾಟರಾಗಿದ್ದರು; ಸ್ಥಳೀಯ ಸಾಮಂತರು (ಉದಾಹರಣೆಗೆ ಚೌಟರಾಣಿ ಅಬ್ಬಕ್ಕ) ಆಳುತ್ತಿದ್ದರು. ವ್ಯಾಪಾರವೆಲ್ಲ ಅರಬರ ಕೈಯಲ್ಲಿತ್ತು. ಪೋರ್ಚುಗೀಸರು ವ್ಯಾಪಾರಕೋಠಿಗಳನ್ನು ನೋಡಿಕೊಂಡಿರುತ್ತೇವೆ ಎಂದು ವಿಜಯನಗರದ ಅಥವಾ ಕೆಳದಿಯ ಅರಸರಿಂದ ಅನುಮತಿ ಪಡೆದುಕೊಂಡು, ಸೈನ್ಯವನ್ನಿಟ್ಟುಕೊಂಡು ಮಂಗಳೂರನ್ನು
ಹತೋಟಿಯಲ್ಲಿಟ್ಟುಕೊಂಡಿದ್ದರು. ಸ್ಥಳೀಯ ಆಡಳಿತಗಾರರು ಮತ್ತು ಅವರ ನಡುವಿನ ಸಂಬಂಧ ಜಿಗುಟಿನದಾಗಿತ್ತು. ಪೋರ್ಚುಗೀಸರಿಂದ ವ್ಯಾಪಾರಿಗಳಾದ ಅರಬರಿಗೆ ಹೆಚ್ಚಿನ ಸಮಸ್ಯೆಯಿದ್ದುದರಿಂದ ಇವರನ್ನು ಓಡಿಸಲು ಅವರೂ ಪ್ರಯತ್ನಿಸುತ್ತಿದ್ದರು.
೧೫೬೮ರಲ್ಲಿ ಅಡ್ಮಿರಲ್ ಡಿಯಾಗೋ ಡಿ. ಸಿಲ್ವೆರಾ ನೇತೃತ್ವದಲ್ಲಿ ಪೋರ್ಚುಗೀಸ್ ನೌಕಾಪಡೆಯು ಮಂಗಳೂರಿನ ಮಿಲಿಟರಿ ಆಯಕಟ್ಟಿನ ಕೋಟೆಯ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡಿತು ಮತ್ತು ಸೈಂಟ್ ಸೆಬಾಸ್ಟಿಯನ್ ಎಂಬ ಹೆಸರಿನ ತಮ್ಮದೇ ಆದ ಕೋಟೆಯನ್ನು ನಿರ್ಮಿಸಿತು (ಈಗ ಡೆಪ್ಯೂಟಿ ಕಮಿಷನರ್ ಕಚೇರಿ ಇರುವ ಸ್ಥಳದಲ್ಲಿ). ಪೋರ್ಚುಗೀಸರು ೧೭೬೩ರವರೆಗೆ ಮಂಗಳೂರಿನ ಮೇಲೆ ಹತೋಟಿ ಸಾಧಿಸಿದ್ದರು. ಆ ವರ್ಷ ಹೈದರ್ ಅಲಿ ಮಂಗಳೂರನ್ನು ವಶಪಡಿಸಿಕೊಂಡು ನೌಕಾನೆಲೆಯನ್ನು ನಿರ್ಮಿಸಿದ. ೧೭೬೮ರಲ್ಲಿ ಮಂಗಳೂರನ್ನು ಇಂಗ್ಲಿಷ್ ಸೈನ್ಯವು ವಶಪಡಿಸಿಕೊಂಡಿತು. ೧೭೮೩ರಲ್ಲಿ ಹೈದರಾಲಿಯ ಪುತ್ರ ಟಿಪ್ಪು ಸುಲ್ತಾನನ ವಶಕ್ಕೆ ಮಂಗಳೂರು ಬಂತು. ೧೭೮೪ರಲ್ಲಿ ಅವನು ಕರಾವಳಿಯ ಕ್ರೈಸ್ತರನ್ನು ಹಿಡಿದು ಶ್ರೀರಂಗಪಟ್ಟಣಕ್ಕೆ ನಡೆಸಿಕೊಂಡುಹೋಗಿ ದೌರ್ಜನ್ಯ ಎಸಗಿದ. ೧೭೯೯ರಲ್ಲಿ ಟಿಪ್ಪು ಸುಲ್ತಾನನ ಪತನವಾದಾಗ ಈಸ್ಟ್ ಇಂಡಿಯಾ ಕಂಪೆನಿ ಮಂಗಳೂರಿನ ಒಡೆತನವನ್ನು ಸಂಪಾದಿಸಿ ಥಾಮಸ್ ಮನ್ರೋನನ್ನು ಇಲ್ಲಿನ ಮೊದಲನೆಯ ಜಿಲ್ಲಾಧಿಕಾರಿ (ಕಲೆಕ್ಟರ್) ಆಗಿ ನೇಮಿಸಿತು. ೧೮೩೭ರಲ್ಲಿ ಕಲ್ಯಾಣಪ್ಪನ ಕ್ರಾಂತಿಯ ಸಂದರ್ಭದಲ್ಲಿ ಬ್ರಿಟಿಷರನ್ನು ೧೩ ದಿನಗಳ ಕಾಲ ಮಂಗಳೂರಿನಿಂದ ಓಡಿಸಿ ಕ್ರಾಂತಿಕಾರಿಗಳು ಆಡಳಿತ ನಡೆಸಿದ್ದರು. ಆಗ ಜಿಲ್ಲಾಧಿಕಾರಿ ಆಗಿದ್ದವನು ಲೆವಿನ್. ೧೮೪೦ರಲ್ಲಿ ಮಿಷನರಿ ಪ್ರವಾಸದ ಕಥೆ ನಡೆದಾಗ ಜಿಲ್ಲಾಧಿಕಾರಿ ಆಗಿದ್ದವನು ಬ್ಲೇರ್. ಇದಿಷ್ಟು ಮಾಹಿತಿ ಇಲ್ಲಿನ ಕೆಲವು ವಿವರಗಳಿಗೆ ಹಿನ್ನೆಲೆಯಾಗಿ ಓದುಗರ ಗಮನದಲ್ಲಿದ್ದರೆ ಒಳ್ಳೆಯದು.
೧೬ನೆಯ ಶತಮಾನದಲ್ಲಿ ಪೋರ್ಚುಗೀಸರು ಗೋವಾವನ್ನು ತಮ್ಮ ಭಾರತದ ರಾಜಧಾನಿಯನ್ನಾಗಿ ಮಾಡಿಕೊಂಡು ಇಡೀ ಭಾರತವನ್ನು ತಮ್ಮ ವಸಾಹತನ್ನಾಗಿ ಮಾಡಿಕೊಂಡು ಆಳುವ ಕನಸನ್ನು ಕಾಣತೊಡಗಿದರು. ಅವರಿಗೆ ಆರ್ಥಿಕ ಲಾಭದಷ್ಟೇ – ಅದಕ್ಕಿಂತಲೂ – ಮುಖ್ಯವಾದದ್ದು ಈ ದೇಶದ ಜನರನ್ನು ಕ್ರೈಸ್ತರನ್ನಾಗಿ ಮತಾಂತರ ಮಾಡುವುದಾಗಿತ್ತು. ಅದೇ ಅವರಿಗೆ ಹಿನ್ನಡೆ ಆಯಿತೆಂದೂ ಅಭಿಪ್ರಾಯವಿದೆ. ಬ್ರಿಟಿಷರು ಈಗ ಹೆಚ್ಚು ಸೆಕ್ಯೂಲರ್ ಜನಾಂಗವಾಗಿದ್ದರೂ ವಸಾಹತುಕಾಲದಲ್ಲಿ ಆಂಗ್ಲಿಕನ್ ಕ್ರೈಸ್ತರಾಗಿ ಸ್ವಧರ್ಮವ್ಯಾಮೋಹಿಗಳಾಗಿದ್ದರು. ಆದರೆ ಅವರು ಹೆಚ್ಚು ಜಾಣರಾಗಿದ್ದುದರಿಂದ ಅಧಿಕಾರದಲ್ಲಿ ಉಳಿಯಲು ಮತ್ತು ಆರ್ಥಿಕ ಲಾಭ ಗಳಿಸಲು ಹೆಚ್ಚು ಗಮನಹರಿಸಿದರು. ಇವೆರಡು ಸಾಧ್ಯವಾಗಬೇಕಿದ್ದರೆ ತಾವು ಭಾರತೀಯರ ಧಾರ್ಮಿಕ ವಿಷಯಗಳಿಗೆ ತಲೆಹಾಕಬಾರದು ಎನ್ನುವುದು ಅವರಿಗೆ ಗೊತ್ತಿತ್ತು. ಆದರೂ ಕ್ರೈಸ್ತ ಮಿಷನರಿಗಳು ಸರಕಾರದ ಮೇಲೆ ಒತ್ತಡ ಹಾಕಿ ಮತಪ್ರಚಾರಕ್ಕೆ ಅನುಮತಿ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರು. ೧೯ನೆಯ ಶತಮಾನದ ಪ್ರಾರಂಭದ ವರ್ಷಗಳಲ್ಲಿ ಹೊಸ ಹೊಸ ಪಂಥದ ಮಿಷನರಿಗಳಿಗೆ ಭಾರತಕ್ಕೆ ಬರಲು ಅನುಮತಿ ಸಿಗುತ್ತದೆ.
ಅ) ರೋಮನ್ ಕೆಥೋಲಿಕ್
ಪೋರ್ಚುಗೀಸರು ೧೬ನೆಯ ಶತಮಾನದಲ್ಲಿ ಭಾರತದ ಪಶ್ಚಿಮ ಕರಾವಳಿಯನ್ನೆಲ್ಲ ತಮ್ಮ ನೌಕಾಪಡೆ, ಮದ್ದುಗುಂಡು, ಫಿರಂಗಿಗಳ ಮಿಲಿಟರಿ ಶಕ್ತಿಯಿಂದ ವಶದಲ್ಲಿ ಇಟ್ಟುಕೊಂಡಿದ್ದರು. ಅವರಿಗೆ ಕ್ರೈಸ್ತ ಧರ್ಮ ಪ್ರಚಾರ ಬಹಳ ಮುಖ್ಯವಾಗಿತ್ತು. ಪೋರ್ಚುಗೀಸ್ ಸಾಮ್ರಾಜ್ಯಶಾಹಿಯ ಉದ್ದೇಶ ಧರ್ಮಪ್ರಸಾರ. ಪೋಪ್ ಆರನೆಯ ಅಲೆಕ್ಸಾಂಡರ್ ಪೋರ್ಚುಗೀಸರಿಗೆ ತಾವು ವಶಪಡಿಸಿಕೊಳ್ಳುವ ಸಾಮ್ರಾಜ್ಯಗಳಲ್ಲಿ ರೋಮನ್ ಕೆಥೋಲಿಕ್ ಧರ್ಮವನ್ನು ಹರಡಿಸಬೇಕೆಂದು ಶರತ್ತು ಹಾಕಿದ್ದ. ಪೋರ್ಚುಗಲ್ಲಿನ ಕಮೋಯಿಂಶ್ ಕವಿ ‘ಲೂಸಿಯಾಡ್ಸ್’ ಕಾವ್ಯದಲ್ಲಿ ವಾಸ್ಕೋಡ ಗಾಮನ ಯಾತ್ರೆಯ ಉದ್ದೇಶ ಧರ್ಮಪ್ರಸಾರವೆಂದೇ ಆಗಾಗ ಹೇಳುತ್ತಾನೆ.
೧೫೭೦ರ ಸುಮಾರಿಗೆ ಆಫ್ರಿಕಾ, ಭಾರತ ಮತ್ತು ಚೀನಾಗಳಲ್ಲಿ ಪೋರ್ಚುಗೀಸರ ಧರ್ಮಪ್ರಸಾರದ ತೀವ್ರತೆ ಯಾವ ಮಟ್ಟಕ್ಕೆ ಹೋಯಿತೆಂದರೆ ಅವರು ಮಾಡತೊಡಗಿದ ನರಮೇಧವನ್ನು ನಿಲ್ಲಿಸಲು ಪೇಗನ್ ರಾಜರು ದಂಡೆತ್ತಿ ಬರಬೇಕಾಯಿತು. ಅಬಿಸೀನಿಯದಲ್ಲಿ ರಾಜರ ಪ್ರಾಣಹರಣವೂ ನಡೆಯಿತು. ಆಫ್ರಿಕಾ, ಭಾರತ ಮತ್ತು ಚೀನಾಗಳಲ್ಲಿ ಜೆಸುಯಿತ್ ಪಾದ್ರಿಗಳು ಪ್ರಭುತ್ವದ ಬೆಂಬಲ ಪಡೆದು, ಮತಾಂತರಕ್ಕಾಗಿ ಬೇರೆ ಧರ್ಮಗಳ ಜನರನ್ನು ಹಿಡಿದು ಹಿಂಸಿಸುವುದು ಎಷ್ಟು ಹೆಚ್ಚಾಯಿತೆಂದರೆ ಪೋರ್ಚುಗೀಸರು ಎಲ್ಲ ಕಡೆಗಳಲ್ಲಿಯೂ ದ್ವೇಷಿಸಲ್ಪಟ್ಟು, ಜನರಿಂದ ದೂರವಾದರು. ಗೋವಾದಲ್ಲಿ ಪೋರ್ಚುಗೀಸರು ನಡೆಸಿದ ಇನ್ಕ್ವಿಸಿಶನ್ ಬಗ್ಗೆ ಈಗಲೂ ಭಾರತದಲ್ಲಿ ಅಧ್ಯಯನ ನಡೆಯುತ್ತ ಕೃತಿಗಳು ಬರುತ್ತಿವೆ. ಕನ್ನಡದಲ್ಲಿ ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ ಎಂಬ ಕಾದಂಬರಿ ಬಂದಿದೆ. ಕೊಂಕಣಿ, ಮರಾಠಿಗಳಲ್ಲಿಯೂ ಕೃತಿಗಳು ಬಂದಿವೆ. ಅಂತರ್ಜಾಲದಲ್ಲಿ ಈ ಕ್ರೂರ ನರಮೇಧದ ಬಗ್ಗೆ ಮಾಹಿತಿಗಳು ಲಭ್ಯ ಇವೆ. ಮತಾಂತರಕ್ಕೆ ನೀಡಿದ ಮಹತ್ತ್ವದಿಂದಾಗಿ ಪೋರ್ಚುಗೀಸರ ಸಾಮ್ರಾಜ್ಯವಿಸ್ತರಣೆಯ ಆಸೆಗೂ ಕಲ್ಲುಬಿತ್ತು. ಬ್ರಿಟಿಷರು ಮತೀಯ ವಿಚಾರಗಳಲ್ಲಿ ಹೆಚ್ಚು ಸಹಿಷ್ಣುಗಳಾಗಿದ್ದರು; ಧರ್ಮಪ್ರಸಾರಕ್ಕೆ ಬೆಂಬಲ ಕೊಟ್ಟರೂ ವ್ಯಕ್ತವಾಗಿ ತಮ್ಮ ಉದ್ದೇಶವನ್ನು ಅವರು ಎಂದೂ ತೋರಿಸಿಕೊಳ್ಳಲಿಲ್ಲ.
ಮಂಗಳೂರಿನಲ್ಲಿ ರೋಮನ್ ಕೆಥೋಲಿಕರು:
೧೫೨೬ರಲ್ಲಿ ಗೋವಾದ ಪೋರ್ಚುಗೀಸ್ ವೈಸ್ರಾಯ್ ಲೋಪೋ ವಾಜ್ ಡಿ ಸಂಪಯೊ ಕರೆಸಿದ ಫ್ರಾನ್ಸಿಸ್ಕನರು (The Franciscans: ಫ್ರಾನ್ಸಿಸ್ಕನ್ ಎನ್ನುವುದು ಒಂದು ರೋಮನ್ ಕೆಥೋಲಿಕ್ ಪಂಥ. ೧೨೦೯ರಲ್ಲಿ ಇಟಾಲಿಯನ್ ಫ್ರಯರ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಸ್ಥಾಪಿಸಿದ ಸಂಸ್ಥೆ) ಮಂಗಳೂರಿನ ಸುತ್ತಮುತ್ತ ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿ ಮಗ್ನರಾಗಿದ್ದರು. ಸಂಪಯೊ ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಕ್ರೈಸ್ತ ಮತಪ್ರಚಾರಕ್ಕೆ ಮತ್ತು ಮತಾಂತರಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿ, ಮಂಗಳೂರಿನಲ್ಲಿ ಅವರ್ ಲೇಡಿ ಆಫ್ ದಿ ರೋಸರಿ ಚರ್ಚನ್ನು ಸ್ಥಾಪಿಸಿದ. ಫ್ರಾನ್ಸಿಸ್ಕನರು ಉಳ್ಳಾಲದಲ್ಲಿ ಮತ್ತು ಫರಂಗಿಪೇಟೆಯಲ್ಲಿ ಚರ್ಚುಗಳನ್ನು ಸ್ಥಾಪಿಸಿದರು. ಮಂಗಳೂರಿನಲ್ಲಿ ಸೈಂಟ್ ಆ್ಯಂಟನಿ ಎಂಬ ಮತ್ತೊಂದು ಚರ್ಚನ್ನು ಕೂಡ ನಿರ್ಮಿಸಿದರು. ಈ ಚರ್ಚುಗಳನ್ನು ನಿರ್ಮಿಸಲು ಸ್ಥಳವನ್ನೂ ಧನಸಹಾಯವನ್ನೂ ನೀಡಿದವರು ಧರ್ಮಸಹಿಷ್ಣುಗಳಾದ ಕೆಳದಿ ಸಂಸ್ಥಾನದ ರಾಜರು. ಮಂಗಳೂರಿನ ಮಿಲಾಗ್ರೆಸ್ ಚರ್ಚಾಗಲಿ (೧೬೮೦/ ನೂತನ ಚರ್ಚ್ ೧೭೫೬), ಕಲ್ಯಾಣಪುರದ ಮಿಲಾಗ್ರೆಸ್ ಚರ್ಚಾಗಲಿ (೧೬೭೮) ಹೀಗೆಯೆ ಕಟ್ಟಲ್ಪಟ್ಟದ್ದು. ಕಿನ್ನಿಗೋಳಿ ಕಿರೆಂ ಚರ್ಚನ್ನು ನಿರ್ಮಿಸಲು ಮೂಲ್ಕಿಯ ಸಾವಂತರಸರು (ಇಲ್ಲಿಯ ಅರಸರು ವಿಜಯನಗರ, ಆಮೇಲೆ ಕೆಳದಿಯ ಸಾಮಂತರು) ಸ್ಥಳವನ್ನೂ, ಆದಾಯಕ್ಕೆ ಭೂಮಿಯನ್ನೂ ನೀಡಿದ್ದರು. ವಿಜಯನಗರ, ಕೆಳದಿ ಮತ್ತು ಸ್ಥಳೀಯ ಅರಸರೆಲ್ಲ ಮತಸಹಿಷ್ಣುಗಳಾಗಿದ್ದುದರಿಂದ ಕ್ರೈಸ್ತರ ಧರ್ಮಬೋಧನೆ ಮತ್ತು ಮತಾಂತರಕ್ಕೆ ಯಾರೂ ತಡೆಯೊಡ್ಡುತ್ತಿರಲಿಲ್ಲ.
ಕರಾವಳಿಯಲ್ಲಿ ರೋಮನ್ ಕೆಥೋಲಿಕರ ಫ್ರಾನ್ಸಿಸ್ಕನ್, ಕಾರ್ಮೆಲೈಟ್, ಜೆಸುಯಿತ್, ಡೊಮಿನಿಕನ್ ಮೊದಲಾದ ಪಂಗಡಗಳು ಸ್ಥಾಪಿಸಿದ ಮಿಶನ್ಗಳು ಸಕ್ರಿಯವಾಗಿದ್ದವು. ಗೋವಾವೇ ಅವರ ಮೂಲ ನೆಲೆಯಾಗಿತ್ತು ಮತ್ತು ಪೋರ್ಚುಗೀಸರೇ ಅವರ ಧಾರ್ಮಿಕ ಆಶ್ರಯದಾತರಾಗಿದ್ದರು. ನಡುವೆ ಒಮ್ಮೆ ಗೋವಾದಲ್ಲಿ ತಕರಾರು ಎದ್ದು, ಮಂಗಳೂರು ಕ್ರೈಸ್ತರು ಎರಡು ಗುಂಪಾಗಿ ಒಂದು ಗುಂಪು ಕೇರಳದಲ್ಲಿದ್ದ ಕಾರ್ಮೆಲ್ ಪಂಥದವರನ್ನು ಆಹ್ವಾನಿಸಿದ್ದೂ ಇದೆ. ಕೊನೆಗೆ ವ್ಯಾಟಿಕನ್ ಆಡಳಿತ ಮಂಗಳೂರನ್ನೇ ಧರ್ಮಕೇಂದ್ರವಾಗಿ ಗುರುತಿಸಿತು.
ರೋಮನ್ ಕೆಥೋಲಿಕ್ ಧರ್ಮಪ್ರಚಾರಕರು ಕರಾವಳಿಯ ಮೇಲುವರ್ಗದವರನ್ನು ರೋಮನ್ ಕೆಥೋಲಿಕ್ ಪಂಥಕ್ಕೆ ಮತಾಂತರ ಮಾಡಿದ್ದರು. ಕೆಲವು ಉದಾಹರಣೆಗಳಿಂದ ಊಹಿಸಬಹುದಾದಂತೆ ಪೋರ್ಚುಗೀಸ್ ಕೇಂದ್ರಗಳ ಅಧಿಕಾರಿಗಳು ಸ್ಥಳೀಯ ಕುಟುಂಬಗಳ ಆಸ್ತಿಯ ತಕರಾರುಗಳಿಗೂ ತಲೆಹಾಕಿ, ಅವರಲ್ಲಿ ಒಬ್ಬನಿಗೆ ಆಮಿಷ ತೋರಿಸಿ ಕುಟುಂಬದ ಆಸ್ತಿ ಪಡೆಯಲು ಸಹಾಯ ಮಾಡುವ ಆಮಿಷದಿಂದ ಮತಾಂತರ ಮಾಡುತ್ತಿದ್ದರು. ಆಮೇಲೆ ಅವನಿಗೆ ಅಥವಾ ಅವಳಿಗೆ ತಮ್ಮ ಉಸ್ತುವಾರಿಯಲ್ಲಿ ಆಸ್ತಿಯನ್ನು ಕೊಡಿಸುತ್ತಿದ್ದರು. ಒಬ್ಬ ವಿಧವೆ ಹೀಗೆ ಮತಾಂತರವಾಗಿ ಆಸ್ತಿಯನ್ನು ಪಡೆದ ಉದಾಹರಣೆಯಿದೆ.
ವಿಜಯನಗರ ಮತ್ತು ಕೆಳದಿ ಸಂಸ್ಥಾನಗಳು ರೋಮನ್ ಕೆಥೋಲಿಕ್ ಕ್ರೈಸ್ತರಿಗೆ ಬೆಂಬಲ, ರಕ್ಷಣೆಗಳನ್ನು ಕೊಡುತ್ತಿದ್ದುದರಿಂದ ಹೊಸ ಧರ್ಮದ ಕುರಿತಾದ ಆಕರ್ಷಣೆಯಿಂದಲೂ ಮತಾಂತರವಾಗಿರುವ ಸಾಧ್ಯತೆಯಿದೆ.
ಮಂಗಳೂರಿನಲ್ಲಿ ಸಾಕಷ್ಟು ಕುಟುಂಬಗಳು ರೋಮನ್ ಕೆಥೋಲಿಕ್ ಪಂಥಕ್ಕೆ ಮತಾಂತರವಾಗಿದ್ದವು. ಅವರಲ್ಲಿ ಜೈನ, ಬಂಟ, ಬ್ರಾಹ್ಮಣ ಇತ್ಯಾದಿ ಜಾತಿಯ ಕುಟುಂಬಗಳಿದ್ದವು. ಅವರಿಗೂ ಪೋರ್ಚುಗೀಸರ ಸರ್ನೇಮ್ (ಲೋಬೋ, ರೋಡ್ರಿಗಸ್, ಡಿಸೋಜ ಇತ್ಯಾದಿ ಪೋರ್ಚುಗೀಸರ ಕುಲನಾಮಗಳು) ಇರಲು ಕಾರಣವೆಂದರೆ ಮತಾಂತರದ ಸಂದರ್ಭದಲ್ಲಿ ಸಂಕಲ್ಪದ ಹಿರಿತನವನ್ನು ವಹಿಸಿ, ದೇವಪಿತರಾಗುವ ಗಣ್ಯರ ಸರ್ನೇಮ್ ಅನ್ನು ಸ್ವೀಕರಿಸಿರುವುದು.
ಗೋವಾದಲ್ಲಿ ಪೋರ್ಚುಗೀಸ್ ಸೈನಿಕರನ್ನು ವರಿಸಿದ ಸ್ಥಳೀಯ ಮಹಿಳೆಯರ ಮಕ್ಕಳಿಗೂ ಅಂತಹ ಉಪನಾಮಗಳು ಬಂದಿರಬಹುದು. ಅಫೋನ್ಸೋ ಡ ಆಲ್ಬುಕರ್ಕ್ ಗೋವಾದ ಗವರ್ನರ್ ಆಗಿದ್ದಾಗ (೧೫೦೯-೧೫೧೫) ಸ್ಥಳೀಯ ಹೆಣ್ಣುಮಕ್ಕಳನ್ನು ಹಿಡಿದು, ಹಾಸ್ಟೆಲಲ್ಲಿಟ್ಟು ತರಬೇತಿ ಕೊಟ್ಟು ಪೋರ್ಚುಗೀಸ್ ಸೈನಿಕರಿಗೆ ಮದುವೆ ಮಾಡಿಸುತ್ತಿದ್ದ. ಕಮೋಯಿಂಶ್ ಕವಿಯ ‘ಲೂಸಿಯಾಡ್ಸ್’ ಮಹಾಕಾವ್ಯದಲ್ಲಿ ಇದರ ಸೂಚನೆಯಿದೆ. ಅವನು ತನ್ನ ‘ಮಗಳು’ ಎಂದು ಕರೆಯುತ್ತಿದ್ದ ಸುಂದರಿಯಾದ ಕನ್ಯೆಯನ್ನು ಪೋರ್ಚುಗೀಸ್ ಸೈನಿಕ ಯುವಕನೊಬ್ಬ ಕೆಡಿಸಿದ್ದು ಗೊತ್ತಾಗಿ ಯುವಕನನ್ನು ಗಲ್ಲಿಗೇರಿಸಿದ. ಆ ಹುಡುಗಿಯನ್ನು ಆಲ್ಬುಕರ್ಕ್ ಬಯಸಿದ್ದ ಎಂದು ಊಹಿಸಬಹುದು.
ಆಲ್ಬುಕರ್ಕ್ನ ಮಗಳಂದಿರ ಕಥೆ ಹೀಗಿದೆ: ಅವನು ಭಾರತವನ್ನು ಕ್ರೈಸ್ತಧರ್ಮಕ್ಕೆ ಪರಿವರ್ತಿಸುವುದು ತನ್ನ ಮೂರು ಮುಖ್ಯ ಧ್ಯೇಯಗಳಲ್ಲಿ ಒಂದು ಎಂದು ನಿಶ್ಚಯಿಸಿದ್ದ. (ಇನ್ನೆರಡು – ಮುಸಲ್ಮಾನರನ್ನು ಓಡಿಸುವುದು ಮತ್ತು ಸಂಬಾರ ಪದಾರ್ಥಗಳ ವ್ಯಾಪಾರದ ಏಕಸ್ವಾಮ್ಯವನ್ನು ಸಾಧಿಸುವುದು.) ಆಲ್ಬುಕರ್ಕ್ ಪೋರ್ಚುಗೀಸ್ ಸೈನಿಕರಿಗೆ ಭಾರತದ ಸುಂದರಿಯರಾದ ಯುವತಿಯರನ್ನು ಮದುವೆ ಮಾಡಿಕೊಡುತ್ತಿದ್ದ. ಈ ಯುವತಿಯರನ್ನು ಬಹುಶಃ ಬಲಾತ್ಕಾರವಾಗಿ ಹೊತ್ತುಕೊಂಡು ಬರಲಾಗುತ್ತಿತ್ತು. ಅವರನ್ನು ಸಾಕಿ, ಪೋರ್ಚುಗೀಸ್ ಭಾಷೆ-ಸಂಸ್ಕೃತಿಗಳಲ್ಲಿ ಶಿಕ್ಷಣವನ್ನು ಕೊಟ್ಟು, ಕ್ರೈಸ್ತಧರ್ಮಕ್ಕೆ ಮತಾಂತರಿಸಿ ಸಾಮೂಹಿಕ ವಿವಾಹದ ಮೂಲಕ ಸೈನಿಕರಿಗೆ ಮದುವೆ ಮಾಡಿಕೊಡಲಾಗುತ್ತಿತ್ತು. ಹೀಗೆ ಹಿಡಿದುತಂದ ನೂರಾರು ಹುಡುಗಿಯರನ್ನು ಆಲ್ಬುಕರ್ಕ್ ತನ್ನ ‘ಮಗಳಂದಿರು’ ಎಂದು ಕರೆಯುತ್ತಿದ್ದ. ಇವರಲ್ಲಿ ಒಬ್ಬಳು ‘ಮಗಳು’ ಅವನ ಮನೆಯಲ್ಲಿಯೇ ಇದ್ದಳೆಂದರೆ ಅವಳ ಬಗ್ಗೆ ಅವನಿಗೆ ವಿಶೇಷವಾದ ವ್ಯಾಮೋಹ ಇರಬಹುದು. ಅವಳನ್ನು ಪ್ರೀತಿಸಿ ಮರಣದಂಡನೆಗೆ ಗುರಿಯಾದ ಯುವಕ ರಯ್ ಡಯಾಸ್ (Ruy Diaz) ಎಂಬ ಪೋರ್ಚುಗೀಸ್ ಸೈನಿಕ.
ಗೋವಾದಲ್ಲಿ ಇನ್ಕ್ವಿಸಿಷನ್ ತೀವ್ರತೆಯಿಂದ ತಪ್ಪಿಸಿಕೊಳ್ಳಲು ಕ್ರೈಸ್ತಧರ್ಮಕ್ಕೆ ಮತಾಂತರವಾಗಿದ್ದ ಕುಟುಂಬಗಳೂ ಕೆಳದಿ ರಾಜ್ಯಕ್ಕೆ – ಮಂಗಳೂರು, ಕಲ್ಯಾಣಪುರ, ಕುಂದಾಪುರ, ಬಸರೂರು ಮುಂತಾದ ಕರಾವಳಿಯ ಪಟ್ಟಣಗಳಿಗೆ – ಓಡಿಬಂದರು. ಗೋವಾದಿಂದ ಮೂರು ವಲಸೆಗಳು ನಡೆದವು. ಅವು: ಅ) ೧೫೭೦ರಲ್ಲಿ ಬಿಜಾಪುರದ ಸುಲ್ತಾನನ ಗೋವೆಯ ದಾಳಿಯ ಫಲವಾಗಿ ಅನೇಕ ಕ್ರೈಸ್ತರು ಕ್ರಿ.ಶ. ೧೫೭೪ರಲ್ಲಿ ಗೋವೆಯನ್ನು ತೊರೆದು ಕೆಳದಿ ರಾಜ್ಯಕ್ಕೆ ಬಂದರು, ಆ) ಸಂಭಾಜಿಯು ಕ್ರಿ.ಶ. ೧೬೮೩ರಲ್ಲಿ
ದಾಳಿ ಮಾಡಿದಾಗ ಕ್ರೈಸ್ತರು ವಲಸೆ ಬಂದರು. ಇ) ಮರಾಠರು ೧೭೩೯ರಲ್ಲಿ ಗೋವೆಯ ಮೇಲೆ ಆಕ್ರಮಣ ಮಾಡಿದ ನಂತರ ೧೭೪೦ರಲ್ಲಿ ಮೂರನೆಯ ವಲಸೆ.
ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಕ್ರೈಸ್ತ ನೆಲೆಗಳು ಕಾಣಿಸಿಕೊಂಡದ್ದಕ್ಕೆ ಮುಖ್ಯ ಕಾರಣ ಗೋವೆಯಿಂದ ಕ್ರೈಸ್ತರು ಅಲ್ಲಿಗೆ ವಲಸೆ ಬಂದದ್ದು. ಹೀಗೆ ಬಂದವರು ಬಹುಮಟ್ಟಿಗೆ ಕರಾವಳಿ ಪಟ್ಟಣಗಳಲ್ಲೂ, ನಗರ ಪ್ರದೇಶಗಳಲ್ಲೂ ನೆಲಸಿದರು. ಇವರನ್ನು ಕೊಂಕಣಿ ಕ್ರೈಸ್ತರು ಎನ್ನುವುದು ವಾಡಿಕೆ. ಅವರ ಮನೆಮಾತು ಕೊಂಕಣಿ – ಮೂಲತಃ ಗೋವೆಯಲ್ಲಿ ಅವರಾಡುತ್ತಿದ್ದ ಭಾಷೆ. (ಅವರು ಸ್ಥಳೀಯ ಭಾಷೆಯನ್ನು ಆಡಲು ಸಿದ್ಧರಿಲ್ಲದ ಕಾರಣ ಇಲ್ಲಿ ಮೊದಲೇ ಮತಾಂತರವಾದವರು – ಅವರನ್ನು ಪಡುವಳರು ಎನ್ನುತ್ತಿದ್ದರು – ತಾವೇ ಕೊಂಕಣಿಯನ್ನು ಕಲಿತರು.) ಕ್ರೈಸ್ತ ವಲಸಿಗರು ತಮ್ಮೊಂದಿಗೆ ಉದ್ಯೋಗ ಕೌಶಲಗಳನ್ನು ಮತ್ತು ಹೊಸ ಕಸಬುಗಳನ್ನು ತಂದರು. ಅವರು ಹೊಸ ಹೊಸ ಕ್ರೈಸ್ತ ನೆಲೆಗಳನ್ನು ಸ್ಥಾಪಿಸಿದರು. ಕ್ರೈಸ್ತರು ಎಲ್ಲ ಊರುಗಳಲ್ಲಿಯೂ ವಿರಳವಾಗಿ ವಾಸಿಸುತ್ತಿರಲಿಲ್ಲ. ಅವರು ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಕೇಂದ್ರೀಕೃತವಾದರು. ಇಲ್ಲಿ ಗಮನಿಸಬೇಕಾದುದೇನೆಂದರೆ ೧೮೩೪ರಲ್ಲಿ ಬಾಸೆಲ್ ಮಿಷನ್ ಇಲ್ಲಿ ಕಾರ್ಯಾಚರಣೆ ಮಾಡಿದ ಮೇಲೆ ಇಲ್ಲಿನ ತುಳುವರು ಆ ಪಂಥಕ್ಕೆ ಮತಾಂತರಗೊಂಡರು. ಅವರಲ್ಲಿ ಹೆಚ್ಚಿನವರು ಬಿಲ್ಲವರು. ಆನಂದರಾವ್ ಕೌಂಡಿನ್ಯ ಮುಂತಾದ ಬ್ರಾಹ್ಮಣರೂ, ಇತರ ಜಾತಿಯವರೂ ಇದ್ದರು. ಇವರೆಲ್ಲ ತುಳು ಭಾಷೆಯನ್ನೇ ಮಾತೃಭಾಷೆಯಾಗಿ ಮುಂದುವರಿಸಿದರು. ಹೀಗಾಗಿ ಈ ಎರಡು ಪಂಗಡಗಳ ನಡುವೆ ಭಾಷೆಯ ಭಿನ್ನತೆಯೂ ಇದೆ, ಅವರಿಬ್ಬರೂ ಒಂದೇ ದೇವಾಲಯಗಳಿಗೆ ಹೋಗುವುದಿಲ್ಲ, ವಿವಾಹ ಸಂಬಂಧಗಳಿಲ್ಲ ಇತ್ಯಾದಿ ವ್ಯತ್ಯಾಸಗಳು ಮೊದಲಿಂದಲೂ ಇವೆ.
ಹದಿನಾರನೆಯ ಶತಮಾನದ ಆರಂಭ ಕಾಲದಲ್ಲಿ ಮಂಗಳೂರು ಗಣನೀಯ ಪ್ರಾಮುಖ್ಯವುಳ್ಳ ಕ್ರೈಸ್ತ ನೆಲೆಯಾಗಿ ಕಾಣಿಸಿಕೊಂಡಿತು. ಸಮೀಪದ ಪ್ರದೇಶಗಳಾದ ಉಳ್ಳಾಲ, ಫರಂಗಿಪೇಟೆ ಮೊದಲಾದೆಡೆಗಳಲ್ಲಿ ಚರ್ಚುಗಳನ್ನು ಸ್ಥಾಪಿಸಲಾಗಿತ್ತು. ಮಂಗಳೂರಿನಲ್ಲಿಯೇ ಮೂರು ಚರ್ಚುಗಳಿದ್ದುದನ್ನು ೧೬೨೩ರಲ್ಲಿ ಪಿಯೆತ್ರೋ ದಲಾವೆಲೆ ದಾಖಲಿಸಿದ್ದಾನೆ.
ರೋಮನ್ ಕೆಥೋಲಿಕರು ಶ್ರೀಮಂತರೂ ಜಮೀನುದಾರರೂ ಗಣ್ಯರೂ ಆಗಿದ್ದರು. ಹೈದರಾಲಿಯ ಆಳ್ವಿಕೆಯಲ್ಲಿ ಕೆಲವರು ಅವನಿಗೆ ಮಿತ್ರರಾಗಿದ್ದುದೂ ಇದೆ. ಆದರೆ ಬ್ರಿಟಿಷ್ ಸೈನ್ಯ ಕರಾವಳಿಯನ್ನು ವಶಪಡಿಸಿಕೊಳ್ಳಲು ಬಂದಾಗ ಅವರಿಗೆ ದಾರಿ ತೋರಿಸಿ, ಆಹಾರ ನೀಡಿ, ಹಣವನ್ನು ನೀಡಿ ಸಹಕರಿಸಿದ್ದು ಟಿಪ್ಪು ಸುಲ್ತಾನನಿಗೆ ಗೊತ್ತಾಗಿತ್ತು. ಅದಕ್ಕಾಗಿ ಅವನು ರೋಮನ್ ಕೆಥೋಲಿಕ್ ಚರ್ಚುಗಳನ್ನು ಪುಡಿಗುಟ್ಟಿ ಆ ಪಂಥದ ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಕ್ರೈಸ್ತರನ್ನು (ನಿರ್ದಿಷ್ಟ ಸಂಖ್ಯೆಯ ಬಗೆಗೆ ವಿವಿಧ ವರದಿಗಳಿವೆ -ಮನ್ರೋ ಪ್ರಕಾರ ೬೦,೦೦೦ ಕ್ರೈಸ್ತರು; ೮೦,೦೦೦ ಎಂಬ ಹೇಳಿಕೆಯೂ ಇದೆ) ಬಂಧಿಸಿ ಶ್ರೀರಂಗಪಟ್ಟಣಕ್ಕೆ ನಡೆಸಿಕೊಂಡು ಹೋಗಿದ್ದ. ಸಾವಿರಾರು ಜನರನ್ನು ಕೊಲ್ಲಿಸಿದ್ದ. ಇನ್ನು ಸಾವಿರಾರು ಜನರು ತಲೆಮರೆಸಿಕೊಂಡು ಬೇರೆ ಬೇರೆ ಪ್ರದೇಶಗಳಿಗೆ ಓಡಿಹೋಗಿದ್ದರು. ಟಿಪ್ಪುವಿನ ಪತನಾನಂತರ ಅಳಿದುಳಿದವರು ಕರಾವಳಿಗೆ ಹಿಂದಿರುಗಿ ಬಂದರು. ಈಸ್ಟ್ ಇಂಡಿಯಾ ಕಂಪೆನಿ ಅವರ ಪುನರ್ವಸತಿಗೆ ಸಹಕರಿಸಿತು. ಯಾಕೆಂದರೆ ಈಸ್ಟ್ ಇಂಡಿಯ ಕಂಪೆನಿಗೆ ಸಹಕರಿಸಿದ್ದಕ್ಕಾಗಿಯೇ ಅವರು ಟಿಪ್ಪುವಿನ ವಿರೋಧವನ್ನು ಕಟ್ಟಿಕೊಂಡಿದ್ದರು.
ಆದರೆ ಈಸ್ಟ್ ಇಂಡಿಯಾ ಕಂಪೆನಿ ಪ್ರೊಟೆಸ್ಟೆಂಟ್ ಪಂಥಗಳಿಗೆ ಬೆಂಬಲ ನೀಡುತ್ತಿತ್ತು. ಇಂಗ್ಲಿಷರು ತಮ್ಮದೇ ಆದ ಒಂದು ಪ್ರೊಟೆಸ್ಟೆಂಟ್ ಪಂಥದ ಕ್ರೈಸ್ತರಾಗಿದ್ದುದರಿಂದ ಈ ನೀತಿಯನ್ನು ಅವರು ಅನುಸರಿಸಿದರು.
ಆ) ಪ್ರೊಟೆಸ್ಟೆಂಟ್ ಪಂಥಗಳು
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಪ್ರಾರಂಭದಲ್ಲಿ ಭಾರತದಲ್ಲಿ ಅಧಿಕಾರ ಪಡೆದು ಹಣ ಸಂಪಾದಿಸಿದರೆ ಸಾಕು ಎಂದಿತ್ತು. ಆದರೆ ಕಂಪೆನಿಗೆ ಇಡಿಯ ಭಾರತದ ಆಡಳಿತ ಸಿಗುವುದು ಖಚಿತವಾದ ಕೂಡಲೆ, ಕ್ರೈಸ್ತ ಮಿಶನರಿ ಸಂಸ್ಥೆಗಳಿಂದ ಭಾರತದಲ್ಲಿ ಧರ್ಮಬೋಧನೆಗೆ ಅವಕಾಶ ಕೊಡಬೇಕೆಂಬ ಒತ್ತಡ ಬ್ರಿಟಿಷ್ ಸರಕಾರದ ಮೇಲೆ ಹೆಚ್ಚಾಗುತ್ತ ಹೋಯಿತು. ಕೊನೆಗೆ ೧೮೧೩ರಲ್ಲಿ ‘ಚಾರ್ಟರ್ ಆ್ಯಕ್ಟ್’ ಮೂಲಕ ಈಸ್ಟ್ ಇಂಡಿಯಾ ಕಂಪೆನಿಗೆ ಭಾರತದ ಮೇಲಿದ್ದ ಹತೋಟಿಯನ್ನು ಕಡಮೆಮಾಡಿ ಎಲ್ಲ ಬ್ರಿಟಿಷರಿಗೂ, ಪ್ರೊಟೆಸ್ಟೆಂಟ್ ಕ್ರೈಸ್ತ ಮತಪ್ರಚಾರಕರಿಗೂ ಮುಕ್ತ ಅವಕಾಶ ಕೊಟ್ಟ ಕಾರಣ ಹಲವು ಮಿಷನರಿ ಪಂಥಗಳು ಭಾರತವನ್ನು ಪ್ರವೇಶಿಸಿದವು. ಅವರಲ್ಲಿ ಅಮೆರಿಕ, ಇಂಗ್ಲೆಂಡ್ ಮತ್ತು ಜರ್ಮನಿಯ ಪ್ರೊಟೆಸ್ಟೆಂಟ್ ಪಂಥಗಳ ಧರ್ಮಪ್ರಸಾರ ಸಂಸ್ಥೆಗಳಿದ್ದವು. ಅವು – ಬ್ಯಾಪ್ಟಿಸ್ಟ್ಗಳು, ಮೆಥೋಡಿಸ್ಟ್ಗಳು, ಲುಥೆರನ್ಗಳು, ಪ್ರೆಸ್ಬಿಟೇರಿಯನ್ಗಳು, ಇವಾಂಜೆಲಿಕಲ್ಗಳು ಮತ್ತು ಪೆಂಟೆಕೋಸ್ಟಲ್ಗಳು (Baptists, Methodists, Lutherans, Presbyterians, Evangelicals, and Pentecostals).
ಇವುಗಳಲ್ಲಿ ದಕ್ಷಿಣಕನ್ನಡದಲ್ಲಿ ಬಾಸೆಲ್ (ಈ ಹೆಸರಿನ ಊರು ಈಗ ಸ್ವಿಟ್ಸರ್ಲೆಂಡಿನಲ್ಲಿದೆ – ಆಗ ಜರ್ಮನಿಗೆ ಸೇರಿತ್ತು) ಇವಾಂಜೆಲಿಕಲ್ ಮಿಷನ್ ಮತ್ತು ಬೆಂಗಳೂರು ಮೈಸೂರುಗಳಲ್ಲಿ ವೆಸ್ಲಿಯನ್ (ಜಾನ್ ವೆಸ್ಲಿ, ಅವನ ಸಹೋದರ ಚಾರ್ಲ್ಸ್ ವೆಸ್ಲಿ ಮತ್ತು ಜಾರ್ಜ್ ವೈಟ್ಫೀಲ್ಡ್ ಈ ಪಂಥದ ಪ್ರವರ್ತಕರು) ಮೆಥೊಡಿಸ್ಟ್ ಮಿಷನ್ ಸಕ್ರಿಯವಾಗಿದ್ದವು. ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ ಉತ್ತಮ ಗುಣಮಟ್ಟದ ಮುದ್ರಣಕ್ಕೆ ಪ್ರಸಿದ್ಧವಾಗಿದ್ದಂತೆ ಮೈಸೂರಿನ ವೆಸ್ಲಿಯನ್ ಪ್ರೆಸ್ ಕೂಡ ಪ್ರಸಿದ್ಧವಾಗಿತ್ತು.
* * *
ಬ್ರಿಟಿಷರಿಗೆ ರೋಮನ್ ಕೆಥೋಲಿಸಿಸಮ್ ಬಗ್ಗೆ ಹಿತವಿರಲಿಲ್ಲ; ಆದರೆ ಪೋರ್ಚುಗೀಸರ ಕಾಲದಲ್ಲಿ ಭಾರತಕ್ಕೆ ಬಂದು ಕಾರ್ಯನಿರತವಾಗಿದ್ದ ರೋಮನ್ ಕೆಥೋಲಿಕ್ ಸಂಸ್ಥೆಗಳಿಗೆ ಅವರು ಭಾರತದಲ್ಲಿ ಅಡ್ಡಿಯುಂಟುಮಾಡಲಿಲ್ಲ.
ಕರಾವಳಿಯಲ್ಲಿ ರೋಮನ್ ಕೆಥೋಲಿಕ್ ಪಂಥದ ಕ್ರೈಸ್ತರಿಗೂ ಬಾಸೆಲ್ ಮಿಷನಿನ ಪಾದ್ರಿಗಳಿಗೂ ನಡುವೆ ಒಳಗಿಂದೊಳಗೆ ಸೌಹಾರ್ದಯುತವಾದ ಸಂಬಂಧ ಇರಲಿಲ್ಲ ಎನ್ನುವುದು ಮ್ಯೋಗ್ಲಿಂಗ್ನ ಕೃತಿಗಳಿಂದ ತಿಳಿದುಬರುತ್ತದೆ. ಮುಂದೆ ಎರಡೂ ಕೃತಿಗಳಿಂದ ಅದಕ್ಕೆ ಉದಾಹರಣೆಗಳನ್ನು ಕೊಡಬಹುದು:
ಉದಾಹರಣೆ-ಒಂದು: ‘ಮಂಗಳೂರಿಂದ ಸುಬ್ರಹ್ಮಣ್ಯಕ್ಕೆ’ ಮಿಷನರಿ ದಿನಚರಿಯಲ್ಲಿ, ನವೆಂಬರ್ ೧೯ರಂದು ಫರಂಗಿಪೇಟೆಯ (ರೋಮನ್ ಕೆಥೋಲಿಕ್) ಚರ್ಚ್ಗೆ ಭೇಟಿ ನೀಡಿದ ಬಗ್ಗೆ ಮ್ಯೋಗ್ಲಿಂಗ್ ಬರೆಯುತ್ತಾರೆ: “ಮಧ್ಯಾಹ್ನದ ಬಳಿಕ ಬಂಟವಾಳದ ಕಡೆಗೆ ಪ್ರಯಾಣಿಸಲು ನಾವು ನಿರ್ಧರಿಸಿದೆವು. ಆದರೆ ಹೊರಡುವ ಮುನ್ನ ನಾವು ಪಕ್ಕದ ಗುಡ್ಡದ ಮೇಲಿನ ಪಾಳುಬಿದ್ದ ಇಗರ್ಜಿಯಲ್ಲಿ ವಾಸಿಸುತ್ತಿರುವ ಕೆಥೋಲಿಕ್ ಪಾದ್ರಿಗಳನ್ನು ಕಾಣಲು ನಿರ್ಧರಿಸಿದೆವು. ಸಮೀಪದ ದಾರಿಹಿಡಿದು ನಾವು ಅಲ್ಲಿಗೆ ಹೋದೆವು. ಇಬ್ಬರಲ್ಲಿ ಒಬ್ಬ ಪಾದ್ರಿ ವಾಸಿಸಿದ್ದ ಕೋಣೆಯ ಬಳಿಗೆ ನಾವು ತಲಪಿದೆವು. ಅವರಲ್ಲಿ ಒಬ್ಬ ಕೋವಿಯನ್ನು ಸ್ವಚ್ಛಗೊಳಿಸುವುದರಲ್ಲಿ ನಿರತನಾಗಿದ್ದನು. ನಮ್ಮನ್ನು ಕಂಡೊಡನೆ ಕೋವಿಯೊಂದಿಗೆ ಆತ ತನ್ನ ಯಜಮಾನನೊಂದಿಗೆ ಮರೆಯಾದ.
ಅದೇ ದಿನದ ಘಟನೆಯನ್ನು ವೈಗ್ಲೆ ದಾಖಲಿಸಿರುವುದು ಹೀಗೆ: “ಫರಂಗಿಪೇಟೆ ಅದರ ಹೆಸರೇ ಸೂಚಿಸುವಂತೆ ಅದೊಂದು ಪೋರ್ಚುಗೀಸ್ ತಾಣವಾಗಿತ್ತು. ಅದು ಹಿಂದೆ ಟಿಪ್ಪುಸುಲ್ತಾನನಿಂದ ನಾಶವಾಗಿದ್ದ ಭೂಪ್ರದೇಶ. ಅಲ್ಲೊಂದು ಸುಂದರವಾದ ಆದರೆ ಟಿಪ್ಪುವಿನಿಂದ ಜರ್ಜರಿತವಾದ ಚರ್ಚ್ ಇದೆ. ಅಲ್ಲಿ ಇಬ್ಬರು ಕೆಥೋಲಿಕ್ ಪಾದ್ರಿಗಳು ವಾಸವಾಗಿದ್ದಾರೆ. ಇಬ್ಬರು ಹುಡುಗರಿಗೆ ಕಲಿಸುವುದನ್ನು ಬಿಟ್ಟರೆ ಅವರಿಗೆ ಅಲ್ಲೇನೂ ಕೆಲಸವಿರಲಿಲ್ಲ. ನಾವು ಅವರನ್ನು ಭೇಟಿಯಾಗಲು ಪ್ರಯತ್ನಿಸಿದೆವು. ಆದರೆ ತಾವು ಇಲ್ಲ ಎಂಬ ನೆಪಹೇಳಿ ನಮ್ಮನ್ನು ಭೇಟಿಯಾಗಲು ನಿರಾಕರಿಸಿದರು. ಆದರೂ ಅವರ ಹುಡುಗರೊಂದಿಗೆ ಮಾತಾಡುವ, ಕೆಲವೊಂದು ವಿಚಾರಗಳನ್ನು ಚರ್ಚಿಸುವ ಅವಕಾಶ ದೊರೆಯಿತು. ನಾವಿಲ್ಲಿ ದಾಖಲಿಸಿಕೊಂಡ ಕೆಲವೊಂದು ವಿಚಾರಗಳು ಅವರೊಂದಿಗೆ ನಾವು ಮಾಡಿದ ಮಾತುಕತೆಗಳ ಫಲ…..”
ಅನುವಾದಕರ ಟಿಪ್ಪಣಿ ಹೀಗಿದೆ: “ಫರಂಗಿಪೇಟೆ ಮಂಗಳೂರಿಂದ ಪೂರ್ವಕ್ಕೆ ಸುಮಾರು ಹತ್ತು ಕಿ.ಮೀ. ದೂರದಲ್ಲಿದೆ. ಈ ಹಳ್ಳಿ ನೇತ್ರಾವತಿ ನದಿಯ ಮಗ್ಗುಲಲ್ಲಿದೆ. ಇಲ್ಲಿ ಪೋರ್ಚುಗೀಸರು (ಫರಂಗಿ ಎಂದರೆ ವಿದೇಶೀಯರು ಎಂಬ ಸಾಮಾನ್ಯಾರ್ಥವಿದೆ) ಕ್ರಿ.ಶ. ೧೫೬೮ರಲ್ಲಿ ಕ್ರೈಸ್ತ ಚರ್ಚನ್ನು ಸ್ಥಾಪಿಸಿದರು. ಮುಂದೆ ಟಿಪ್ಪುಸುಲ್ತಾನ್ ಕೆನರಾದ ಬಹುತೇಕ ಚರ್ಚ್ಗಳನ್ನು ನಾಶಪಡಿಸಿದ್ದ. ಆದರೆ ಫರಂಗಿಪೇಟೆಯ ಈ ಚರ್ಚನ್ನು ಪೂರ್ಣ ನಾಶಪಡಿಸದೆ ಉಳಿಸಿದ್ದ. ಕಾರಣ ತನ್ನ ತಂದೆ ಹೈದರಾಲಿ ಮತ್ತು ಚರ್ಚ್ನ ಧರ್ಮಗುರು ಜೋಕಿಂ ಮಿರಾಂಡ ಅವರ ನಡುವಿನ ಸ್ನೇಹಕ್ಕಾಗಿ.”
ಇಲ್ಲಿ ಗಮನಿಸಬೇಕಾದುದು ಬಾಸೆಲ್ ಮಿಷನರಿಗಳನ್ನು ರೋಮನ್ ಕೆಥೋಲಿಕ್ ಪಾದ್ರಿಗಳು ಭೇಟಿಯಾಗಲು ನಿರಾಕರಿಸುವ ಅಂಶವನ್ನು.
ಉದಾಹರಣೆ–ಎರಡು: ಅಡೂರು ಎಂಬಲ್ಲಿನ ದಿನಚರಿಯನ್ನು ಮ್ಯೋಗ್ಲಿಂಗ್ ಬರೆದಿರಿಸಿರುವುದು ಹೀಗೆ: “ನಾವು ಸಣ್ಣ ಪಟ್ಟಣವನ್ನು ತಲಪಿದೆವು. ಅಲ್ಲಿ ಕೆಲವು ಮಾಪಿಳ್ಳೆಗಳನ್ನು, ಕೊಂಕಣಿ ಬ್ರಾಹ್ಮಣರನ್ನು ಭೇಟಿಯಾದೆವು. ಅಲ್ಲಿನ ವೆಂಕಟರಮಣ ದೇವಾಲಯದ ಮುಖ್ಯಸ್ಥನನ್ನು ಬೀದಿಯಲ್ಲಿ ಭೇಟಿಯಾದೆನು. ನಾನು ಅಲ್ಲಿನ ಅಂಗಡಿಸಾಲುಗಳಲ್ಲಿ ಅಂಗಡಿ ಇರಿಸಿಕೊಂಡಿದ್ದ ಕೊಂಕಣಿ ಬ್ರಾಹ್ಮಣನನ್ನು ಭೇಟಿಯಾದೆ. ಬಹಳ ಸಂಕೋಚದ ಬಳಿಕ ಅವರಲ್ಲಿ ಒಬ್ಬ ನನ್ನಿಂದ ಸ್ವಲ್ಪ ದೂರದಲ್ಲಿ ಕುಳಿತು ಮಾತಿಗೆ ತೊಡಗಿದ. ತನ್ನ ಜಾತಿ, ತನ್ನ ಸಮುದಾಯದ ಮೂಲಸ್ಥಾನ ಗೋವಾದ ಬಗ್ಗೆ ಚರ್ಚಿಸಲು ಇಷ್ಟಪಟ್ಟ. ಅವರ ಪೂರ್ವಜರು ಗೋವಾದಿಂದ ಮುನ್ನೂರು ವರ್ಷಗಳ ಹಿಂದೆ ಮೂರು ಹಡಗುಗಳಲ್ಲಿ ಇತ್ತ ಓಡಿಬಂದಿದ್ದರು. ಅವರ ಕುಲದೇವರು ಇರುವುದು ಗೋವಾದಲ್ಲಿ, ಇಲ್ಲಿ ಆ ದೇವರು ಅಪರಿಚಿತ. ಆಗಂತುಕರಾದ ನಾವು ಕೂಡಾ ಮೊದಲಿಗೆ ಇಲ್ಲಿ ಅಪರಿಚಿತರು. ಆದರೆ ನಮ್ಮವರು ನಾಲ್ಕು ವೇದ ವಿದ್ಯಾಪಾರಂಗತರು. ಅಡೂರಿನ ಶಿವಳ್ಳಿ ಬ್ರಾಹ್ಮಣರು ಮೂರು ವೇದಗಳಲ್ಲಿ ಮಾತ್ರ ಪಾರಂಗತರು ಎನ್ನುವ ವಿಚಾರವನ್ನು ತಿಳಿಸಿ ಮುಂದೆ ಆತ ಹೇಳಿದ: ಅಡೂರಿನವರು ನಿಜವಾದ ಬ್ರಾಹ್ಮಣರಲ್ಲ ಹಾಗೂ ಅವರ ಶಾಸ್ತ್ರ (ಭಾಷ್ಯ: ಗಟ್ಟಿಯಾಗಿ ಪಾರಾಯಣ ಮಾಡತಕ್ಕ ಗ್ರಂಥಗಳು) ಗ್ರಂಥಗಳಿಗೆ ಭಾಷ್ಯ ಬರೆದವರು ಉಡುಪಿಯ ಮಧ್ವಾಚಾರ್ಯರು. ಅವರಲ್ಲಿ ಕೆಲವರನ್ನು ಕ್ರೈಸ್ತಧರ್ಮಕ್ಕೆ ಬಲವಂತವಾಗಿ ಸೇರಿಸಿಕೊಳ್ಳಲಾಯಿತು. ಉಳಿದ ದೊಡ್ಡ ಗುಂಪನ್ನು ಮುಸ್ಲಿಮರು ಬಲವಂತವಾಗಿ ಸುನ್ನತಿ ಮಾಡಿದರು. ಇನ್ನು ಉಳಿದವರು ತಮ್ಮ ಪೂರ್ವಜರ ಬಳಗದಲ್ಲೇ ಉಳಿದುಕೊಂಡರು” ಎಂದ. ಅವರ ಮಾತುಗಳಿಗೆ ಪ್ರತ್ಯುತ್ತರವಾಗಿ “ಪೋರ್ಚುಗೀಸರು ಈಗ ಬಲಹೀನರಾಗಿದ್ದಾರೆ. ಹಾಗೇನೆ ಇಂದಿನ ಮುಸ್ಲಿಮರು ತಣ್ಣಗಾಗಿದ್ದಾರೆ. ಈಗಿನ ಬ್ರಿಟಿಷ್ ಕಂಪೆನಿ ಸರಕಾರ ಯಾರನ್ನೂ ಬಲವಂತಪಡಿಸುತ್ತಿಲ್ಲ” ಎಂದು ನಾನು ಆ ಕೊಂಕಣಿ ಮಂದಿಗೆ ತಿಳಿಸಿದೆ. ಏನಿದ್ದರೂ ನಂಬಿಕೆಯನ್ನು ಬಲವಂತದಿಂದ ಹೇರುವುದು ಸಾಧ್ಯವಿಲ್ಲ ಎಂದೆ.” (ಇಲ್ಲಿ ರೋಮನ್ ಕೆಥೋಲಿಕರು ಬಲಾತ್ಕಾರದಿಂದ ಮತಾಂತರ ಮಾಡಿರುವುದು ತಪ್ಪು; ತಾವು ಮನ ಒಲಿಸಿ, ನೀವು ಒಪ್ಪಿದರೆ ಮಾತ್ರ ಮತಾಂತರಿಸುತ್ತೇವೆ ಎಂಬ ಧ್ವನಿಯನ್ನು ಕಾಣಬಹುದು).
ಉದಾಹರಣೆ–ಮೂರು: ‘ಈರಾರು ಪತ್ರಿಕೆ’ಯಲ್ಲಿ ಕಂಡುಬರುವ ಸೂಕ್ಷ್ಮ ವಿಚಾರಗಳು. ಇದನ್ನು ಈ ಲೇಖನದ ಕೊನೆಯ ಭಾಗದಲ್ಲಿ ವಿವರಿಸಲಾಗಿದೆ.
ಬ್ರಿಟಿಷರು ತಮಗೆ ಬೆಂಬಲ ನೀಡಲು ಮುಂದೆ ಬಂದ ಕರಾವಳಿಯ ಬಹುಸಂಖ್ಯಾತ ಕ್ರೈಸ್ತರಾದ ರೋಮನ್ ಕೆಥೋಲಿಕರಿಗೂ, ಪ್ರೊಟೆಸ್ಟೆಂಟ್ ಮತಪ್ರಚಾರಕ್ಕಾಗಿ ಮುಂದೆ ಜರ್ಮನರಿಗೂ ಸಮಾನ ಬೆಂಬಲ ನೀಡಿದರು. ಈ ಬೆಂಬಲ ಬಹುಮಟ್ಟಿಗೆ ಪ್ರಚ್ಛನ್ನ ಸ್ವರೂಪದ್ದಾಗಿತ್ತು. ಮುಂದೆ ೧೯೧೪ರಲ್ಲಿ ವಿಶ್ವಯುದ್ಧ ಪ್ರಾರಂಭವಾದಾಗ ಜರ್ಮನ್ ಮಿಷನರಿಗಳು ತಮ್ಮ ದೇಶಕ್ಕೆ ಮರಳಿದರು. ಬ್ರಿಟಿಷ್ ಸರಕಾರ ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತು. ಮೊದಲನೆಯ ಯುದ್ಧ ಮುಗಿದ ಮೇಲೆ ಬಂದರಾದರೂ, ಅವರು ಮಿಷನಿನ ಆಸ್ತಿಪಾಸ್ತಿಗಳಿಗೆ ಮುಂದೆ ತೊಂದರೆಯಾಗದಂತೆ, ವಿದೇಶೀ ಒಡೆತನವನ್ನು ತೆಗೆದುಹಾಕಿ ಭಾರತದಲ್ಲಿದ್ದವರೇ ನೋಡಿಕೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದರು.
– ಭಾಗ: ಮೂರು –
‘ಈರಾರು ಪತ್ರಿಕೆ’ಯಲ್ಲಿ ತೆರೆಮರೆಯ ಗುದ್ದಾಟ
ಮ್ಯೋಗ್ಲಿಂಗ್ ಮಾಡಿದ ಆನಂದರಾವ್ ಕೌಂಡಿನ್ಯನ ಮತಾಂತರದ ಕಥೆಯನ್ನು ಅವರೇ ಸೃಜನಶೀಲ ಕೃತಿಯಾಗಿ ಬರೆದು ದಾಖಲಿಸಿರುವ ‘ಈರಾರು ಪತ್ರಿಕೆ’ಯಲ್ಲಿ ರೋಮನ್ ಕೆಥೋಲಿಕ್ ದೊರೆಗಳನ್ನು ಕುರಿತು ಬರೆಯುವಾಗ ‘ರೋಮನ್ ಕೆಥೋಲಿಕ್’ ಪದವನ್ನು ಬಳಸದೆ ಸೂಕ್ಷ್ಮವಾಗಿ ಹೇಳಿದ್ದಾರೆ. (ಬಿಳಿಚರ್ಮದ ವಿದೇಶಿಗಳನ್ನೆಲ್ಲ ಸ್ಥಳೀಯರು ದೊರೆಗಳೆಂದು ಕರೆಯುತ್ತಿದ್ದರು. ಹಾಗೆ ಕರೆಯಲು ಅವರದೇ ಚಿತಾವಣೆ ಇದ್ದಿರಲೂ ಸಾಕು. ಮ್ಯೋಗ್ಲಿಂಗ್ ತಮ್ಮ ಬಗ್ಗೆಯೂ ಅದೇ ಶಬ್ದವನ್ನು ಬಳಸುವುದುಂಟು. ಈ ಪದದ ಅರ್ಥ ಅವರಿಗೆ ತಿಳಿಯದೆ ಬಳಸಿದ್ದಲ್ಲ, ಆದರೆ ವಾಡಿಕೆಯಲ್ಲಿ ಆಗಲೇ ಇದ್ದುದನ್ನು ಸ್ವೀಕರಿಸಿಕೊಂಡಿದ್ದಾರೆ).
ಕಂಪೆನಿ ಸರಕಾರವು ಮಿಷನರಿಗಳ ಹಿತರಕ್ಷಣೆಗೆ ಕಟಿಬದ್ಧವಾಗಿತ್ತು. ಈಗ ಇಲ್ಲಿ ಒಂದು ಬಗೆಯ ತ್ರಿಕೋನ ವ್ಯವಸ್ಥೆಯಿತ್ತು ಎನ್ನುವುದು ಕುತೂಹಲಕರ. ಅದು
೧) ಬಾಸೆಲ್ ಮಿಷನ್; ೨) ಪ್ರೊಟೆಸ್ಟೆಂಟ್ ಕೆಥೋಲಿಕ್ ಅಂಶಗಳುಳ್ಳ ಆಂಗ್ಲಿಕನ್ ಚರ್ಚಿನ ಅನುಯಾಯಿಗಳಾದ ಈಸ್ಟ್ ಇಂಡಿಯಾ ಕಂಪೆನಿಯ ಸರಕಾರದ ನಿಲವು;
೩) ಪೋರ್ಚುಗೀಸರಿಂದ ಮತಾಂತರಗೊಂಡಿದ್ದ ಸ್ಥಳೀಯ ರೋಮನ್ ಕೆಥೋಲಿಕ್ ಕ್ರೈಸ್ತರು; ಬ್ರಿಟಿಷರಿಗೆ ನಿಷ್ಠರು. ಇವರು ಕೂಡ ಕ್ರೈಸ್ತರಾಗಿದ್ದುದರಿಂದ ಬ್ರಿಟಿಷರಿಗೆ ಹಿಂದು-ಮುಸ್ಲಿಮರಿಗಿಂತ ಹೆಚ್ಚು ಹತ್ತಿರವಾಗಿದ್ದರು. ಕೆಲವು ಅಧಿಕಾರಸ್ಥಾನಗಳಲ್ಲಿ ಮತ್ತು ಶಾಲೆಗಳಲ್ಲಿ ಶಿಕ್ಷಕರಾಗಿ ಇವರಿದ್ದರು.
ಜರ್ಮನ್ ಮೂಲದ ಪ್ರೊಟೆಸ್ಟೆಂಟ್ ಇವೇಂಜಲಿಕಲ್ ಪಂಥದ ಬಾಸೆಲ್ ಮಿಷನಿನ ಮತಾಂತರ ಕಾರ್ಯ ಚಟುವಟಿಕೆಗಳಿಗೆ ಬೆಂಬಲ ಕೊಡಬೇಕಾದುದು ಇಂಗ್ಲೆಂಡಿನ ಚಾರ್ಟರ್ ಆ್ಯಕ್ಟ್ ಪ್ರಕಾರ ಅಧಿಕಾರಿಗಳ ಕರ್ತವ್ಯವಾಗಿತ್ತು. ಆದರೆ ಅಧಿಕಾರಿಗಳಿಗೆ ವೈಯಕ್ತಿಕವಾಗಿ ಬೇರೊಂದು ಪಂಥದ ಈ ಹೊಸಬರು ಇಷ್ಟವಾಗದೆ ಹೋಗಬಹುದು. ಹಾಗೆ ಅಸಹಕಾರ ಕೊಟ್ಟರೂ ಸರಕಾರದ ಗಮನಕ್ಕೆ ಬರುವ ಸಂಗತಿ ಎಂದಾದರೆ ತಕ್ಷಣವೇ ಎಚ್ಚೆತ್ತುಕೊಂಡು ಮನಸ್ಸಿಲ್ಲದ ಮನಸ್ಸಿನಿಂದ ಈ ಮಿಷನರಿ ಚಟುವಟಿಕೆಗಳಿಗೆ ಬೆಂಬಲ ಕೊಡುತ್ತಿದ್ದರು ಅನಿಸುತ್ತದೆ. ಯಾಕೆಂದರೆ ‘ಈರಾರು ಪತ್ರಿಕೆ’ ಮಂಗಳೂರಿನ ಸನ್ನಿವೇಶವನ್ನು ಹಾಗೆ ದಾಖಲಿಸಿದೆ.
ಕಥಾನಾಯಕ ಆನಂದಯ್ಯನು ಕ್ರೈಸ್ತಮತಕ್ಕೆ ಹೋಗಬಯಸಿ, ಮನೆಗೆ ಹಿಂದಿರುಗದೆ ದೇವಪುರದಲ್ಲಿ (ನಿಜಜೀವನದ ‘ಮಂಗಳೂರು’) ಮಿಷನರಿಗಳ ರಕ್ಷಣೆಯಲ್ಲಿ ಇರುತ್ತಾನೆ. ಕ್ರೈಸ್ತ ಮತವು ಯಾಕೆ ಶ್ರೇಷ್ಠ ಎಂದು ವಾದಿಸುತ್ತಾ ಊರಿನಲ್ಲಿದ್ದ ಭಾವ ರಾಮಚಂದ್ರಯ್ಯನಿಗೆ ಪತ್ರಗಳನ್ನು ಬರೆಯುತ್ತಿರುತ್ತಾನೆ. ಆನಂದಯ್ಯನ ಮತಾಂತರದ ವಿಷಯವನ್ನು ತಿಳಿದು ಅವನ ತಂದೆ ಅನ್ನೋದಕವನ್ನು ಬಿಟ್ಟು ಕೊರಗುತ್ತಾನೆ, ತಾಯಿ ಹಾಸಿಗೆ ಹಿಡಿಯುತ್ತಾಳೆ. ಹೆಂಡತಿ ಮಂಗಳಸೂತ್ರವನ್ನು ಕಿತ್ತು ಗಂಡನಿಗೆ ಕಳಿಸುತ್ತಾಳೆ. ಅನಂತರ ಜಾತಿಬಾಂಧವರು ಕೆಲವು ಹಿಂದೂ ಧಾರ್ಮಿಕ ಮುಖಂಡರನ್ನು ಕರೆದುಕೊಂಡು ಆನಂದಯ್ಯ ಉಳಿದುಕೊಂಡಿರುವ ಮಿಷನರಿ ಪಾದ್ರಿಯ ಮನೆಗೆ ಹೋಗಿ ಅವನ ಮನಸ್ಸನ್ನು ಹಿಂದೂ ಧರ್ಮದ ಕಡೆಗೆ ತಿರುಗಿಸಲು ಚರ್ಚೆಗೆ ತೊಡಗುತ್ತಾರೆ. ಆನಂದಯ್ಯ ತನ್ನ ಪಟ್ಟನ್ನು ಬಿಡದೆ, ಅಂದರೆ ತಾನು ಹೊಸದಾಗಿ ಕಂಡುಕೊಂಡ ಸತ್ಯವನ್ನು ನಂಬಿಕೊಂಡು ನೆಲಕಚ್ಚಿ ನಿಲ್ಲುತ್ತಾನೆ. ಕೊನೆಗೆ ಜಾತಿಬಾಂಧವರು ಆನಂದಯ್ಯನಿಗೆ ಬಹಿಷ್ಕಾರ ಹಾಕಿ ಘಟಶ್ರಾದ್ಧ ಮಾಡುತ್ತಾರೆ.
ಮುಂದೆ ರಾಮಚಂದ್ರಯ್ಯನ ಪತ್ರಗಳಲ್ಲಿ ಆನಂದಯ್ಯನು ಕ್ರೈಸ್ತ ಮತಕ್ಕೆ ಸೇರಬಾರದೆಂದು ಮಂಡಿಸುವ ವಾದಗಳ ಜತೆಗೆ ಆನಂದಯ್ಯನ ಮನೆಯವರ ಸಂಕಟ, ಊರಿನವರ ವಿರೋಧ, ಕ್ರೈಸ್ತನೇ ಆದ ‘ಇಸ್ಕೂಲ್ ಮೇಸ್ತ್ರಿ’ಯ ಹಿತವಚನ, ಮತಾಂತರವಾದರೆ ಕೆಲಸ ಕಳೆದುಕೊಳ್ಳುವ ಭೀತಿ, ಮತಾಂತರವಾಗದಿದ್ದರೆ ದೊಡ್ಡಪ್ಪ ಶಾಂತಪ್ಪಯ್ಯ ತಮ್ಮ ಆಸ್ತಿಯಲ್ಲಿ ಪಾಲು ಕೊಡುವುದಾಗಿ ತೋರಿಸಿದ ಆಮಿಷ – ಹೀಗೆ ಬುದ್ಧಿವಾದ ಮತ್ತು ಊರಿನಲ್ಲಿ ನಡೆದ ಸಂಗತಿಗಳ ವರದಿ – ಇತ್ಯಾದಿಗಳಿರುತ್ತವೆ.
ಈ ಪತ್ರಗಳಿಂದ ಆ ಕಾಲದ ಕೆಲವು ಸಾಮಾಜಿಕ, ಆಡಳಿತಾತ್ಮಕ ಮತ್ತು ಧಾರ್ಮಿಕ ಸೂಕ್ಷ್ಮಗಳು ನಮಗೆ ತಿಳಿಯುತ್ತವೆ. ಆನಂದಯ್ಯನ ಮತಾಂತರದ ಸುದ್ದಿ ಹಬ್ಬಿದ್ದರಿಂದ ಊರಿನ ‘ಇಸ್ಕೂಲ್ ಮೇಸ್ತ್ರಿ’ಯು ರಾಮಚಂದ್ರಯ್ಯನನ್ನು ಮನೆಗೆ ಕರೆದು, ಆನಂದಯ್ಯನು ಮತಾಂತರವಾಗುವುದು ಒಳ್ಳೆಯ ಸುದ್ದಿಯಲ್ಲವೆಂದು ಹೇಳಿ, ತಾನೂ ಕ್ರೈಸ್ತ; ಆನಂದಯ್ಯನು ತನ್ನ ಬಳಿ ಬಂದರೆ ಸರಿಯಾದ ತಿಳಿವಳಿಕೆ ನೀಡುವುದಾಗಿ ಹೇಳುತ್ತಾನೆ. ಈ ದೃಶ್ಯವು ಸ್ವಾರಸ್ಯಕರವಾಗಿದೆ. ಇಸ್ಕೂಲ್ ಮೇಸ್ತ್ರಿ ಅಂದರೆ ಶಾಲೆಯ ಹೆಡ್ಮಾಸ್ಟರನು (ಮೆಸ್ತೆರೆ / ಮಾಸ್ಟರ್ ಎಂಬ ಪದದಿಂದಲೇ ‘ಮೇಸ್ತ್ರಿ’ ಮತ್ತು ‘ಮಾಸ್ಟರು’ ಎರಡೂ ಪದಗಳು ಉತ್ಪನ್ನಗೊಂಡಿವೆ) ಮದ್ಯಪಾನ ಮಾಡುತ್ತಾ ಕುಳಿತಿದ್ದುದನ್ನು ಮ್ಯೋಗ್ಲಿಂಗ್ ಬಹಳ ಚೆನ್ನಾಗಿ ವರ್ಣಿಸಿದ್ದಾನೆ. ಕ್ರೈಸ್ತನೇ ಆದ (ಇವನು ರೋಮನ್ ಕೆಥೋಲಿಕ್ ಎಂದು ಊಹಿಸಬಹುದು) ಇಸ್ಕೂಲ್ ಮೇಸ್ತ್ರಿಯು ಮದ್ಯಪಾನಿ ಎಂದು ಆನಂದಯ್ಯನು ಅವನಿಗೆ ಗೌರವ ಕೊಡುವುದಿಲ್ಲ.
ಪೋರ್ಚುಗೀಸರಿಂದ ಮತಾಂತರವಾಗಿದ್ದ ರೋಮನ್ ಕೆಥೋಲಿಕ್ ಕ್ರೈಸ್ತರಿಗೆ ಬಾಸೆಲ್ ಮಿಷನಿನ ಚಟುವಟಿಕೆಗಳ ಬಗ್ಗೆ ನೇರವಾಗಿ ವಿರೋಧ ಇಲ್ಲದಿದ್ದರೂ ಅದನ್ನು ಬೆಂಬಲಿಸುತ್ತಿರಲಿಲ್ಲ. ಸರಕಾರ ನಡೆಸುತ್ತಿದ್ದ ಬ್ರಿಟಿಷರು ತಮ್ಮದೇ ಆದ ಪ್ರೊಟೆಸ್ಟೆಂಟ್ ಮತವನ್ನು ಅನುಸರಿಸುತ್ತಿದ್ದರು.
ಮಿಷನಿನ ಚಟುವಟಿಕೆಗಳಿಗೆ ಬ್ರಿಟಿಷ್ ಸರಕಾರ ಬೆಂಬಲವನ್ನು ನೀಡಿದ್ದಲ್ಲದೆ ಅವರ ಭಾಷಾ ಚಟುವಟಿಕೆಗಳಿಗೆ, ನಿಘಂಟು ವ್ಯಾಕರಣ ಇತ್ಯಾದಿ ಗ್ರಂಥಗಳ ಪ್ರಕಟಣೆಗಳಿಗೆ ಧನಸಹಾಯ ನೀಡುತ್ತಲೂ ಇತ್ತು. ಮ್ಯೋಗ್ಲಿಂಗ್ ಮಂಗಳೂರಿನಲ್ಲಿದ್ದ ಕಾಲದಲ್ಲಿಯೇ ಕಲ್ಯಾಣಪ್ಪನ ಕ್ರಾಂತಿ ನಡೆದು, ಬೆಲ್ಮೌಂಟ್ (ಈಗ ಜನರ ಬಾಯಿಯಲ್ಲಿ ಈ ಪದ ‘ಬಲ್ಮಠ’ವಾಗಿ ಮತಾಂತರಗೊಂಡಿದೆ!) ಪ್ರದೇಶದಲ್ಲಿದ್ದ ಬ್ರಿಟಿಷರ ಸರಕಾರಿ ಕಚೇರಿಗಳನ್ನು ಅವರು ಸುಟ್ಟುಹಾಕಿದ್ದರು. ಬ್ರಿಟಿಷರು ಹದಿಮೂರು ದಿನಗಳ ಕಾಲ ಮಂಗಳೂರಿನಿಂದ ಓಡಿಹೋಗಿದ್ದರು. ಬ್ರಿಟಿಷರು ಹಿಂದೆ ಬಂದ ಮೇಲೆ ಬೇರೆ ಕಡೆ ಸರಕಾರಿ ಕಚೇರಿಗಳನ್ನು ಕಟ್ಟಿಕೊಂಡರು. ಈ ಸುಟ್ಟುಹೋದ ಕಟ್ಟಡಗಳಿದ್ದ ‘ಬಲ್ಮಠ’ದ ‘ಸರಕಾರಿ’ ಜಾಗವನ್ನು ಜಿಲ್ಲಾಧಿಕಾರಿ ಬ್ಲೇರ್ ತನ್ನ ವೈಯಕ್ತಿಕ ನೆಲೆಯಲ್ಲಿ ‘ಹರಾಜಿನಲ್ಲಿ ಖರೀದಿಸಿ’ ಕೊಂಡುಕೊಂಡು ಬಾಸೆಲ್ ಮಿಷನಿಗೆ ದಾನವಾಗಿ ಕೊಟ್ಟಿದ್ದ. ಈ ಮಿಷನರಿ ಪ್ರವಾಸದ ಬಳಿಕ ೧೮೪೭ ರಲ್ಲಿ ಇದೇ ಬ್ಲೇರ್ ಕೊಣಾಜೆಯ ಬೊಲ್ಮದಲ್ಲಿ ನೂರಾರು ಎಕರೆಯನ್ನು ಹೀಗೆಯೇ ‘ಖರೀದಿಸಿ’ ಮಿಷನಿಗೆ ದಾನವಾಗಿ ಕೊಟ್ಟನು.
ಹಾಗೆಯೆ ಮ್ಯೋಗ್ಲಿಂಗ್ ಪ್ರಕಟಣ ಸಾಹಸ ಬಿಬ್ಲಿಯೋಥಿಕಾ ಕರ್ನಾಟಿಕಾದ ಪ್ರಕಟಣ ವೆಚ್ಚವನ್ನು ಕ್ಯಾಸಮೇಜರ್ ಎಂಬ ನಿವೃತ್ತ ಬ್ರಿಟಿಷ್ ನ್ಯಾಯಾಧೀಶ ವೈಯಕ್ತಿಕ ನೆಲೆಯಲ್ಲಿ ವಹಿಸಿಕೊಳ್ಳುತ್ತಾನೆ. ಈ ವೈಯಕ್ತಿಕ ನೆಲೆಯ ಸಹಾಯಗಳು ಬೇರೆ ಪ್ರದೇಶಗಳಲ್ಲಿಯೂ ಕಂಡುಬರುತ್ತವೆ. ಇಂತಹ ವೈಯಕ್ತಿಕ ಧನಸಹಾಯಗಳು, ಜನರ ಕಣ್ಣಿಗೆ ಬೀಳದ ಹಾಗೆ ಸರಕಾರವೇ ಸಹಾಯ ಮಾಡುವ ಒಂದು ವಿಧಾನವಾಗಿದ್ದರೂ ಇರಬಹುದು. ೧೮೫೫ರಲ್ಲಿ ಉಡುಪಿಯಲ್ಲಿ ಕಂಪೆನಿ ಸರಕಾರ ಬಾಸೆಲ್ ಮಿಷನಿಗೆ ಸ್ಥಳವನ್ನು ಮಂಜೂರು ಮಾಡಿತು. ಆ ಸಂದರ್ಭದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಬಹುಶಃ ವೈಯಕ್ತಿಕ ನೆಲೆಯಲ್ಲಿ ದಾನ ಮಾಡಿದರೆ ಜನರು ಸರಕಾರದ ಬಗ್ಗೆ ಬೇಸರಪಡುವುದಿಲ್ಲ ಎನ್ನುವುದೇ ಇದಕ್ಕೆ ಕಾರಣವಿರಬಹುದು.
ಆದರೆ ತಮ್ಮ ಸರಕಾರಕ್ಕೆ ವಿರೋಧವೇನಾದರೂ ಕಂಡುಬಂದರೆ ಬಾಸೆಲ್ ಮಿಷನಿನವರನ್ನು ಸರಕಾರ ಗದರಿಸುತ್ತಿತ್ತು. ೧೮೩೭ರಲ್ಲಿ ಬ್ರಿಟಿಷರ ವಿರುದ್ಧ ಮಂಗಳೂರಿನಲ್ಲಿ ಕಲ್ಯಾಣಪ್ಪನ ಕ್ರಾಂತಿ ನಡೆದಿತ್ತು; ಆ ಕುರಿತ ಪುಸ್ತಕವೊಂದನ್ನು ಬಾಸೆಲ್ ಮಿಷನ್ ಪ್ರಕಟಿಸಿದ್ದುದಕ್ಕಾಗಿ ಅವರ ಮುದ್ರಣಾಲಯವನ್ನು ಮುಚ್ಚಿಸುವ ಬೆದರಿಕೆಯನ್ನು ಸರಕಾರ ಹಾಕಿತ್ತು. ಮುದ್ರಿತ ಪ್ರತಿಗಳನ್ನೆಲ್ಲ ನಾಶಮಾಡಿ ಕ್ಷಮಾಪಣೆ ಕೇಳಿದ ಮೇಲೆ ಅವರನ್ನು ಕ್ಷಮಿಸಲಾಯಿತು. (ಜಿಲ್ಲಾಧಿಕಾರಿ ಬ್ಲೇರ್ ಸುಬ್ರಹ್ಮಣ್ಯದ ಸರಕಾರಿ ಕಚೇರಿಯಲ್ಲಿ ಮಿಷನರಿಗಳು ತಂಗಿದುದಕ್ಕೆ ಆಕ್ಷೇಪಣೆಯ ಪತ್ರ ಬರೆದಿದ್ದ ಘಟನೆಯೂ ಇದೇ ಮನೋಭಾವದ ಸಣ್ಣ ಘಟನೆ).
‘ಈರಾರು ಪತ್ರಿಕೆ’ಯಲ್ಲಿ ಬ್ರಿಟಿಷ್ ದೊರೆಯ ವೈಯಕ್ತಿಕ ‘ಅಸಹಕಾರ’ದ ಕಾರಣವಾಗಿ ಆನಂದಯ್ಯನ ಕೆಲಸ ಹೋಗುವ ಪರಿಸ್ಥಿತಿ ಬರುತ್ತದೆ. ಈ ದೊರೆಯು ಕೃಷ್ಣಾಪುರದಲ್ಲಿ ಆನಂದರಾಯನು ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಕಛೇರಿಯ ಮುಖ್ಯಸ್ಥ. ಅವನು ರಾಮಚಂದ್ರಯ್ಯನನ್ನು ಕರೆದು, ‘ಅವನ ಭಾವ ಆನಂದಯ್ಯನ ರಜೆಯೆಲ್ಲ ಮುಗಿದಿದೆ; ಅವನು ತಕ್ಷಣವೇ ಕೆಲಸಕ್ಕೆ ಹಾಜರಾಗತಕ್ಕದ್ದು’ ಎಂದು ತಿಳಿಸುತ್ತಾನೆ. ಆನಂದಯ್ಯನು ಮತ್ತೆ ಊರಿಗೆ ಹಿಂದಿರುಗಿ ಕಛೇರಿಗೆ ಹಾಜರಾದರೆ ಅವನಿಗೆ ಮೇಲಿನ ಹುದ್ದೆಗೆ ಪ್ರೊಮೋಷನ್ ಕೊಡುವುದಾಗಿ ಪ್ರಲೋಭನೆ ಒಡ್ಡುತ್ತಾನೆ. ಇಲ್ಲದಿದ್ದರೆ ಅವನನ್ನು ಕೆಲಸದಿಂದ ಕಿತ್ತುಹಾಕಲಾಗುವುದೆಂದು ಹೇಳುತ್ತಾನೆ.
ಸೂಕ್ಷ್ಮವಾಗಿ ನೋಡಿದರೆ ಇದು ಅವನ ಮತಾಂತರವನ್ನು ತಡೆಯಲು ಮಾಡಿದ ಪ್ರಯತ್ನವೇ ಹೌದು. ಮಂಗಳೂರಿನ ಮಿಷನ್ ಹೌಸಿನಲ್ಲಿ ಅಡಗಿಸಿಡಲಾಗಿದ್ದ ಆನಂದಯ್ಯನು ಊರಿಗೆ ಹಿಂದಿರುಗಿ ತನ್ನ ಉದ್ಯೋಗವನ್ನು ಮಾಡಲಾರಂಭಿಸಿದರೆ ತನ್ನ ಜನರ ಪ್ರಭಾವಕ್ಕೆ ಮತ್ತೆ ಒಳಗಾಗುತ್ತಾನೆ, ಆಗ ಅವನ ಮನಃಪರಿವರ್ತನೆ ಆಗಬಹುದು. ಅದಕ್ಕಾಗಿ ಮ್ಯೋಗ್ಲಿಂಗ್ ಅವನನ್ನು ಹೊರಗೆ ಬಿಡಲು ಇಚ್ಛಿಸಿರಲಿಲ್ಲ.
ಆದರೆ ಕೊನೆಯಲ್ಲಿ ಈ ಬ್ರಿಟಿಷ್ ಅಧಿಕಾರಿ ತನ್ನ ವಿರೋಧವನ್ನು ಬಿಟ್ಟು ಆನಂದರಾಯನ ಪರವಾಗಿ ನಿಲ್ಲುವ ಒಂದು ಸೂಕ್ಷ್ಮ ತಿರುವು ‘ಈರಾರು ಪತ್ರಿಕೆ’ಯಲ್ಲಿ ಕಾಣಿಸುತ್ತದೆ. ಕೃಷ್ಣಾಪುರದ ದೊರೆಗೆ ಸ್ಥಳೀಯ ಹೆಣ್ಣುಮಗಳೊಬ್ಬಳು ಉಪಪತ್ನಿಯಾಗಿ (ಇಟ್ಟುಕೊಂಡಾಕೆ) ಇರುತ್ತಾಳೆ. ಅವಳು ಶಾಂತಪ್ಪಯ್ಯ ಎಂಬವನ ಉಪಪತ್ನಿಯ ಮಗಳು. ಈ ಸಂಬಂಧದಿಂದಾಗಿ, ತನ್ನ ವಿಷಯದಲ್ಲಿ ದೊರೆಯು ನಿರ್ದಾಕ್ಷಿಣ್ಯನಾಗಿ ವರ್ತಿಸಲು ಶಾಂತಪ್ಪಯ್ಯನು ದೊರೆಯ ಈ ಉಪಪತ್ನಿಯ ಮೂಲಕ ನಡೆಸಿದ ಚಿತಾವಣೆಯೇ ಕಾರಣ ಎಂದು ಆನಂದಯ್ಯನು ಒಂದು ಪತ್ರದಲ್ಲಿ ಆರೋಪಿಸುವುದಿದೆ.
ಈರಾರು (ಅಂದರೆ ಎರಡು ಆರು: ೬+೬ = ೧೨) ಪತ್ರಗಳ ಪೈಕಿ ಹನ್ನೊಂದನೆಯ ಪತ್ರದಲ್ಲಿ ಆನಂದಯ್ಯನ ಪತ್ನಿ ಭಾಗಮ್ಮ ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳೆಂದು ರಾಮಚಂದ್ರಯ್ಯ ಬರೆಯುತ್ತಾನೆ. ಹನ್ನೆರಡನೆಯ ಪತ್ರದಲ್ಲಿ ಆನಂದಯ್ಯನು, ಕೆರೆಗೆ ಹಾರಿದ ಪತ್ನಿ ಭಾಗಮ್ಮ ಮತ್ತು ಮಕ್ಕಳನ್ನು ಮನೆಯ ಆಳು ಕರಿವೀರನು ರಕ್ಷಿಸಿ ತನ್ನ ಬಳಿಗೆ ತಂದು ತಲಪಿಸಿದ್ದಾನೆ ಎಂಬ ಸುಖ ಸಮಾಚಾರವನ್ನು ತಿಳಿಸುತ್ತಾನೆ.
ಕರಿವೀರನು ಆನಂದಯ್ಯನನ್ನು ನಡುದಾರಿಯ ಪಟ್ಟಣದಲ್ಲಿ ಭೇಟಿ ಮಾಡಿ ಭಾಗಮ್ಮ ಮತ್ತು ಮಕ್ಕಳನ್ನು ಒಪ್ಪಿಸುವವರೆಗೆ ಬ್ರಿಟಿಷ್ ಅಧಿಕಾರಿ (ಕೃಷ್ಣಾಪುರದ ದೊರೆ) ನೇಮಿಸಿ ಕಳುಹಿಸಿದ ಒಬ್ಬ ಆಳು ಹಿಂಬಾಲಿಸಿಕೊಂಡು ಬಂದು ಅವರಿಗೆ ರಕ್ಷಣೆ ಕೊಟ್ಟಿದ್ದನು. ಅವರು ಆನಂದಯ್ಯನನ್ನು ಸೇರಿಕೊಂಡದ್ದನ್ನು ಖಚಿತಪಡಿಸಿಕೊಂಡ ನಂತರ ಹಿಂದಿರುಗಿ ಹೋಗಿದ್ದನು.
ಈ ಸಂಗತಿಯನ್ನು ಮ್ಯೋಗ್ಲಿಂಗ್ ಸೂಕ್ಷ್ಮವಾಗಿ ದಾಖಲಿಸಿದ್ದಾನೆ. ಇದು ಬ್ರಿಟಿಷ್ ಸರಕಾರದ ಬೆಂಬಲ ಎಂದು ಕಾಣುವಂತೆ ಚಿತ್ರಿಸದೆ ದೊರೆಯ ಮನಃಪರಿವರ್ತನೆ ಎಂಬಂತೆ ಚಿತ್ರಿಸಿದ್ದಾನೆ. ತಾನು ಉಪಪತ್ನಿಯ ಮಾತನ್ನು ಕೇಳಿ ಆನಂದಯ್ಯನ ಮತಾಂತರದಲ್ಲಿ ಹಿಂದುಗಳ ಪರವಾಗಿ ಇದ್ದೇನೆ ಎಂದು ತನ್ನ ಮೇಲೆ ಹೊರಿಸಲಾದ ಆರೋಪವು ಹೇಗೋ ದೊರೆಗೆ ತಿಳಿದುಬಂದು ಅವನು ಆನಂದಯ್ಯನ ಬಗ್ಗೆ ತನ್ನ ನಿಲವನ್ನು ಬದಲಾಯಿಸಿ ತನ್ನ ವರ್ತನೆಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ತನ್ನ ಉಪಪತ್ನಿಯ ಕುಟುಂಬವನ್ನೇ ಯೋಗ್ಯ ಪರಿಹಾರ ಕೊಟ್ಟು ಕಾಶಿಗೆ ಗಡೀಪಾರು ಮಾಡುತ್ತಾನೆ. ಇಂತಹ ಬದಲಾವಣೆಗೆ ಕಾರಣ ಏನು ಎನ್ನುವುದರ ಬಗ್ಗೆ ಕೃತಿ ಮೌನವಾಗಿದೆ. ಈ ಬಗ್ಗೆ ಪತ್ರ ಬರೆದ ರಾಮಚಂದ್ರಯ್ಯನು ಕೂಡ ಹೀಗೆ ಆಶ್ಚರ್ಯ ವ್ಯಕ್ತಪಡಿಸುತ್ತಾನೆ: “ಅವರಿಗೂ ಭ್ರಮೆ ಹಿಡಿಯಿತೋ ಏನೋ ತಿಳಿಯುವುದಿಲ್ಲ…. ಇದೆಲ್ಲಾ ಮಾಡಿದವರ್ಯಾರು?” (ಪತ್ರ ೧೧).
ವಾಸ್ತವವಾಗಿ ಬ್ರಿಟಿಷರು ಜರ್ಮನ್ ಮಿಷನರಿಗಳಿಗೆ ರಹಸ್ಯವಾಗಿ ಬೆಂಬಲವನ್ನೂ ರಕ್ಷಣೆಯನ್ನೂ ಕೊಡಬೇಕಾಗಿತ್ತು ಎನ್ನುವುದನ್ನು ದಿನಚರಿಯ ಆಧಾರದಲ್ಲಿ ಈಗಾಗಲೇ ಹೇಳಲಾಗಿದೆ. ಈ ಕೃತಿಯಲ್ಲಿಯೂ ಕೃಷ್ಣಾಪುರದ ದೊರೆಯು ಸರಕಾರದ ನಿಲವಿಗೆ ಅನುಗುಣವಾಗಿ, ಆನಂದಯ್ಯನ ಪತ್ನಿ ಮತ್ತು ಮಕ್ಕಳನ್ನು ಕರಿವೀರನು ಗಾಡಿಯಲ್ಲಿ ಕರೆದುಕೊಂಡು ಹೋಗುವಾಗ ರಹಸ್ಯವಾಗಿ ರಕ್ಷಣೆ ಕೊಟ್ಟಿದ್ದನು. ಮೇಲಧಿಕಾರಿಗಳ ಸೂಚನೆ ಇಲ್ಲದಿದ್ದರೆ ದೊರೆಯು ಇಂತಹ ಸೇವೆಯನ್ನಂತೂ ಖಂಡಿತ ಮಾಡುತ್ತಿರಲಿಲ್ಲ.
ಕೃಷ್ಣಾಪುರದ ಬ್ರಿಟಿಷ್ ದೊರೆಯು ಆನಂದಯ್ಯನ ಪರವಾಗಿ ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಂಡದ್ದಕ್ಕೆ ಬ್ರಿಟಿಷ್ ಸರಕಾರವು ಮಿಷನರಿಗಳಿಗೆ ಬೆಂಬಲವಾಗಿದ್ದುದೇ ನಿಜವಾದ ಕಾರಣವಾಗಿತ್ತು ಅನಿಸುತ್ತದೆ.
* * *
ಹೀಗೆ, ಜರ್ಮನ್ ಮಿಷನರಿ ಮ್ಯೋಗ್ಲಿಂಗ್ನ ಎರಡು ಕೃತಿಗಳ ಮೂಲಕ ನಮ್ಮ ನಾಡಿನ ಒಂದು ಪ್ರದೇಶದ ವಸಾಹತುಕಾಲದ ಧಾರ್ಮಿಕ ಸಂಘರ್ಷದ ಚರಿತ್ರೆಯನ್ನು ಅರಿಯಲು ಪ್ರಯತ್ನಿಸಲಾಗಿದೆ.
ಗ್ರಂಥ ಋಣ
೧ .‘ಹರ್ಮನ್ ಮೊಗ್ಲಿಂಗ್ನ ಈರಾರು ಪತ್ರಿಕೆ’
ಸಂಪಾದಕರು: ಡಾ. ಹಾ.ತಿ. ಕೃಷ್ಣೇಗೌಡ
ವಾಚಸ್ಪತಿ ಪ್ರಕಾಶನ, ಮೈಸೂರು. ೨೦೨೧
೨. ‘ಮಿಷನರಿ ಪ್ರವಾಸ: ಮಂಗಳೂರಿನಿಂದ
ಸುಬ್ರಹ್ಮಣ್ಯಕ್ಕೆ -೧೮೪೦’.
ಜರ್ಮನ್ ಮೂಲ: ಹೆರ್ಮನ್ ಮ್ಯೋಗ್ಲಿಂಗ್ ಮತ್ತು ಗಾಟ್ಫ್ರೈಡ್ ವೈಗ್ಲೆ
ಇಂಗ್ಲಿಷಿಗೆ: ಜೆನ್ನಿಫರ್ ಜೆಂಕಿನ್ಸ್
ಕನ್ನಡಕ್ಕೆ: ಪ್ರೊ. ಎ. ವಿ. ನಾವಡ.
ನೆರವು: ನಂದಕಿಶೋರ್ ಎಸ್.
೩. ‘ಲೂಸಿಯಾಡ್ಸ್’
ಮೂಲ: (ಪೋರ್ಚುಗೀಸ್) ಕಮೋಯಿಂಶ್
ಇಂಗ್ಲಿಷ್ಗೆ ಅನುವಾದ: ವಿಲಿಯಮ್ ಜೂಲಿಯಸ್ ಮಿಕ್ಲ್. ಕನ್ನಡಕ್ಕೆ: ಬಿ. ಜನಾರ್ದನ ಭಟ್
ಪ್ರ.: ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು. (ಪ್ರಕಟವಾಗಬೇಕಿದೆ)
೪. ಕರಾವಳಿ ಕರ್ನಾಟಕದ ಕ್ರೆöÊಸ್ತರ ಇತಿಹಾಸ
(ಕ್ರಿ.ಶ. ೧೫೦೦-೧೭೬೩)
ಡಾ. ಪಿಯುಸ್ ಫಿಡೆಲಿಸ್ ಪಿಂಟೊ
ಸಮನ್ವಯ ಪ್ರಕಾಶನ, ಮಂಗಳೂರು. ೧೯೯೯
೫. ಆಂಗ್ಲೋ-ಮೈಸೂರು ಸಂಬಂಧದ ಹಿನ್ನೆಲೆಯಲ್ಲಿ
ಕರಾವಳಿ ಕರ್ನಾಟಕದ ಕೊಂಕಣಿ ಕ್ರೈಸ್ತರು
(ಕ್ರಿ.ಶ. ೧೭೬೧-೧೭೯೯)
ಸಮನ್ವಯ ಪ್ರಕಾಶನ, ಮಂಗಳೂರು. ೧೯೯೯
೬. ಮಿಷನರಿಗಳ ಕನ್ನಡ ವೃತ್ತಾಂತವು
ಪ್ರೊ. ಎ. ವಿ. ನಾವಡ
ಶೋಧನ ಪ್ರಕಾಶನ, ಮಂಗಳೂರು. ೨೦೧೭