ಪ್ರಧಾನಿ ಮೋದಿಯವರ ಚಿಂತನೆಗಳನ್ನು ತಿಳಿದವರಿಗೆ ದೀನದಯಾಳ್ ಉಪಾಧ್ಯಾಯರು ಹೇಳಿದ ‘ಅಂತ್ಯೋದಯ’ವೇ ಅವರ ಆಡಳಿತದ ಕೇಂದ್ರ ಎಂದು ತಿಳಿದಿರುತ್ತದೆ. ಜೊತೆಗೆ ಫಲಾನುಭವಿಗಳನ್ನು ಜಾತಿ-ಮತಗಳ ಆಧಾರದಲ್ಲಿ ಒಡೆಯುವುದಕ್ಕೆ ಬದಲಾಗಿ ಅವರ ನಡುವೆ ಒಗ್ಗಟ್ಟು ತರುವುದು ಇವರ ಕ್ರಮ. ಜಾತಿಯ ವಾಸ್ತವಗಳು, ಅದರಲ್ಲೂ ವಿಶೇಷವಾಗಿ ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನರ ವಿಷಯ ಮೋದಿ ಅವರಿಗೆ ಗೊತ್ತಿಲ್ಲ ಎಂದಲ್ಲ; ಆದರೆ ಅವರು ವಿಷಯಕ್ಕೆ ಒತ್ತು ನೀಡುವ ಕ್ರಮ ಇತರರಿಗಿಂತ ಭಿನ್ನವಾದದ್ದು… ಹಿಂದುತ್ವ ಮತ್ತು ಅಭಿವೃದ್ಧಿಯ ಕ್ರಾಂತಿಯನ್ನು ಒಟ್ಟಿಗೇ ಒಯ್ಯುವುದು ಕೂಡ ಕಷ್ಟದ ಕೆಲಸ; ಸ್ವಲ್ಪ ಸಮಯ ಅದನ್ನು ಸಾಧಿಸಿದರೂ ಕೂಡ ಬಹುಕಾಲ ಕಷ್ಟ ಎನ್ನಲಾಗುತ್ತದೆ. ಆದರೂ ಮೋದಿ ಅದನ್ನು ಸಾಧಿಸಿ ಬಿಜೆಪಿಗೆ ಹಲವೆಡೆ ಜಯ ತಂದುಕೊಟ್ಟಿದ್ದಾರೆ.
ರಾಜಕಾರಣಿಯಾಗಿ ಮತ್ತು ಓರ್ವ ವ್ಯಕ್ತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಸಾಮಾನ್ಯವಾಗಿ ಎಲ್ಲರೂ ಒಂದು ವಿಶೇಷ ಅಂಶವನ್ನು ಗುರುತಿಸಿದ್ದಾರೆ. ಅದೆಂದರೆ ಅವರ ಜನಪ್ರಿಯತೆಯು ನಿರಂತರವಾಗಿ ಮುಂದುವರಿಯುತ್ತದೆ. ಸ್ವಲ್ಪ ಸಣ್ಣ ಏರುಪೇರುಗಳು ಇರಬಹುದಾದರೂ ಒಟ್ಟಾರೆಯಾಗಿ ಅವರ ಜನಪ್ರಿಯತೆ ಹಾಗೂ ಆಕರ್ಷಣೆಗಳು ಮುಕ್ಕಾಗುವುದಿಲ್ಲ. ಓರ್ವ ಉನ್ನತಮಟ್ಟದ ರಾಜಕಾರಣಿಯಾಗಿ ದಿನದಿನವೂ ಸುದ್ದಿಯಲ್ಲಿ ಇರಬೇಕಾದವರಲ್ಲಿ ಇದು ಅಸಾಧ್ಯವೆನಿಸುವಂತಹ ಒಂದು ವಿದ್ಯಮಾನವಾಗಿದೆ. ಜನರ ನಡುವೆ ತಮ್ಮ ವರ್ಚಸ್ಸು, ಆಕರ್ಷಣೆಗಳನ್ನು ನಿಡುಗಾಲ, ಅಂದರೆ ಒಂದೆರಡು ದಶಕಗಳಷ್ಟು ಸುದೀರ್ಘಕಾಲ ಕಾಯ್ದುಕೊಳ್ಳಬೇಕೆಂದರೆ ಅದಕ್ಕೆ ಯಾವುದೋ ಅತಿಶಯವಾದ ಸಾಮಥ್ರ್ಯ ಇರಲೇಬೇಕು. ನಮ್ಮ ದೇಶದಲ್ಲಂತೂ ಆಡಳಿತವಿರೋಧಿ ಅಲೆ ಅಥವಾ anti-incumbency ಎಂಬುದು ಎಲ್ಲೆಡೆ ಕಾಣುವಂಥದು. ಅದನ್ನು ಅನುಭವಿಸದೆ ಇರುವವರು ತೀರಾ ವಿರಳ; ಏಕೆಂದರೆ ಇದು ಪ್ರವಾಹದ ವಿರುದ್ಧ ಈಜಿದಂತೆ.
ಪ್ರಧಾನಿಯಾಗಿ ಒಂಭತ್ತು ವರ್ಷ ಸಮೀಪಿಸಿದರೂ ಮೋದಿ ಅವರ ಜನಪ್ರಿಯತೆಯು ಕುಂದದೆ ಮುಂದುವರಿದಿರುವ ಬಗ್ಗೆ ಸುದ್ದಿಸಂಸ್ಥೆ ಐಎಎನ್ಎಸ್ ಮತ್ತು ಸಿ-ವೋಟರ್ಗಳು ನಡೆಸಿದ ಸಮೀಕ್ಷೆಯು “ಮೋದಿ ಅವರ ಆಡಳಿತದ ಬಗ್ಗೆ ಜನ ತೃಪ್ತಿ ಹೊಂದಿದ್ದಾರೆ. ಅವರ ವಿರುದ್ಧ ಆಡಳಿತವಿರೋಧಿ ಅಲೆ ತೀರಾ ಕಡಮೆ” ಎಂದು ಹೇಳಿದೆ. ಮುಂದುವರಿದು, ಮೋದಿ ಅವರ ಬಗ್ಗೆ ಅತೃಪ್ತಿಯ ಪ್ರಮಾಣ ತೀರಾ ಕಡಮೆ. ಆಡಳಿತವಿರೋಧಿ ಅಲೆಯು ಕನಿಷ್ಠ ಮಟ್ಟದ್ದು. ಛತ್ತೀಸ್ಗಢದಲ್ಲಿ ಶೇ. 6.7ರಷ್ಟು, ದೆಹಲಿಯಲ್ಲಿ ಶೇ. 8.6, ಪಶ್ಚಿಮ ಬಂಗಾಳದಲ್ಲಿ ಶೇ. 9.8; ಇದಕ್ಕಿಂತ ಬಿಜೆಪಿ ಆಡಳಿತದ ರಾಜ್ಯಗಳಾದ ಗೋವಾ, ಜಾರ್ಖಂಡ್, ಕರ್ನಾಟಕಗಳಲ್ಲೇ ಅತೃಪ್ತಿಯ ಪ್ರಮಾಣ ಸ್ವಲ್ಪ ಜಾಸ್ತಿ ಇದೆ – ಎಂದು ಸಮೀಕ್ಷೆ ತಿಳಿಸಿದೆ.
ಮೋದಿ ಮುಖಕ್ಕೆ ವೋಟು
“ಹಿಂದೆ ಇಂದಿರಾಗಾಂಧಿ, ಅನಂತರ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನ ಮೇಲೆ ದೇಶದ ತುಂಬೆಲ್ಲ ವೋಟುಗಳು ಬೀಳುತ್ತಿದ್ದವು. ಇಂದು ಆ ಶಕ್ತಿ ಇರುವುದು ನರೇಂದ್ರ ಮೋದಿ ಅವರಿಗೆ ಮಾತ್ರ. ಯಾವುದೇ ಚುನಾವಣೆಯಲ್ಲಿ ಕೂಡ ಶೇಕಡ ಆರರಿಂದ ಎಂಟರಷ್ಟು ವೋಟು ತನ್ನ ಹೆಸರಿನ ಮೇಲೆ ಹಾಕಿಸುವ ಶಕ್ತಿ ಇರುವುದರಿಂದಲೇ ‘ಮೋದಿ ಫ್ಯಾಕ್ಟರ್’ ಬಗ್ಗೆ ಇಷ್ಟು ಪರ-ವಿರೋಧ ಚರ್ಚೆ ನಡೆಯುತ್ತಿದೆ. ಕಳೆದ ಎಂಟು ವರ್ಷಕ್ಕೂ ಮಿಕ್ಕಿ ಬಿಜೆಪಿಗೆ ಮೋದಿ ಅವರ ಕಾರಣದಿಂದ ಒಂದು ಕಡೆ ದೊಡ್ಡಸಂಖ್ಯೆಯಲ್ಲಿ ಹೊಸ ಮತದಾರರು ಲಭಿಸಿದರೆ, ಇನ್ನೊಂದೆಡೆ ಬಿಜೆಪಿ ಶಾಸಕ, ಸಂಸದ, ಸರ್ಕಾರ ಮತ್ತು ಪಕ್ಷದ ಮೇಲೆ ಮುನಿಸಿಕೊಂಡ ಮತದಾರರು ಕೂಡ ವೋಟು ಹಾಕುವಾಗ ಮೋದಿ ಅವರ ಕಾರಣದಿಂದ ಬಿಜೆಪಿ ಬಿಟ್ಟು ಬೇರೆಯವರಿಗೆ ವೋಟು ಹಾಕಲು ಮನಸ್ಸು ಮಾಡುತ್ತಿಲ್ಲ. ಇದು ಬಿಜೆಪಿಗೆ ದೊಡ್ಡ ಚುನಾವಣಾ ಲಾಭವನ್ನು ತರುತ್ತಿದೆ. ಸ್ಥಳೀಯ ನಾಯಕರು ಒಳ್ಳೆಯ ಆಡಳಿತ ನೀಡಿದ ಗುಜರಾತ್, ಉತ್ತರಪ್ರದೇಶ, ಅಸ್ಸಾಂ, ಹರ್ಯಾಣಾ, ಮಹಾರಾಷ್ಟ್ರಗಳಲ್ಲಿ ಮೋದಿ ಫ್ಯಾಕ್ಟರ್ ಕೂಡ ಸೇರಿಕೊಂಡು ಅದ್ಭುತ ಫಲಿತಾಂಶವನ್ನು ಬಿಜೆಪಿಗೆ ತಂದಿತ್ತಿದೆ” ಎನ್ನುವ ವಿಶ್ಲೇಷಣೆ ಪತ್ರಕರ್ತ ಪ್ರಶಾಂತ್ ನಾತು ಅವರದ್ದು.
“ಕರ್ನಾಟಕದಲ್ಲಿ ಮೋದಿ ಅವರ ಮುಖ ನೋಡಿಕೊಂಡು ವೋಟು ಹಾಕುವ ಮತದಾರರ ದೊಡ್ಡ ಸಮೂಹ ಇದೆ ಎನ್ನುವುದನ್ನು 2014, 2018 ಮತ್ತು 2019ರ ಚುನಾವಣೆಗಳು ಸ್ಪಷ್ಟಪಡಿಸಿವೆ. ಲೋಕಸಭಾ ಚುನಾವಣೆಗಳಲ್ಲಿ ಈ ವೋಟಿನ ಪ್ರಮಾಣ ಜಾಸ್ತಿ ಇದ್ದರೆ, ವಿಧಾನಸಭಾ ಚುನಾವಣೆಯಲ್ಲಿ ಕಡಮೆ ಇರುತ್ತದೆ. ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಶೇ. 50ಕ್ಕಿಂತ ಜಾಸ್ತಿ ವೋಟು ಪಡೆದಿದ್ದಿದೆ” ಎಂದವರು ವಿವರಿಸಿದ್ದಾರೆ.
ಕಳೆದ ವರ್ಷದ ಆರಂಭದಲ್ಲಿ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿತು. ವರ್ಷದ ಕೊನೆಯಲ್ಲಿ ನಡೆದ ಗುಜರಾತ್ ಚುನಾವಣೆಯದ್ದು ಕೂಡ ಅರ್ಹ ವಿಜಯವಾಗಿತ್ತು. ಗುಜರಾತ್ನದ್ದು ನಿರಂತರ ಆರನೇ ವಿಜಯವಾಗಿತ್ತು. ಅದರಲ್ಲಿ ಮುಖ್ಯಮಂತ್ರಿಯಾಗಿ ಮೋದಿ ಅವರ ವಿಜಯಗಳು ಕೂಡ ಸೇರಿವೆ. ತಮ್ಮ ರಾಜ್ಯಕ್ಕೆ ಭೇಟಿ ನೀಡಿದರೆ ಎಲ್ಲವನ್ನೂ ಸೂಪರ್ವೈಟ್ ಮಾಡುತ್ತಾರೆನ್ನುವುದು ಗಮನಾರ್ಹ. ಅದೇ ಕಾರಣದಿಂದ ಅಲ್ಲಿ ಉತ್ತಮ ಹಿಡಿತ ಹೊಂದಿರುವ ಅವರಿಗೆ (ಅಮಿತ್ ಶಾ ಸಹಿತ) ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ 42ರಷ್ಟು ಹೊಸಮುಖಗಳನ್ನು ತರಲು ಸಾಧ್ಯವಾಯಿತು. ಇದು ಅವರ ಕೆಲಸದ ಶೈಲಿ; ಮತ್ತು ಗುಜರಾತಿನಷ್ಟು ಅಲ್ಲವಾದರೂ ಮುಂದಿನ ಲೋಕಸಭಾ ಚುನಾವಣೆಗೆ (2024) ಮುನ್ನ ಬರುವ ಎಲ್ಲ ವಿಧಾನಸಭಾ ಚುನಾವಣೆಗಳಲ್ಲಿ ಮೋದಿ ಮುಂಚೂಣಿಯಲ್ಲಿ ಇದ್ದೇ ಇರುತ್ತಾರೆ. ಈಚೆಗೆ ಮುಗಿದ ಚುನಾವಣೆಗಳು ಅದಕ್ಕೆ ಸಾಕ್ಷ್ಯ ಹೇಳುತ್ತವೆ. ವಿರೋಧಪಕ್ಷಗಳ ಮೇಲಿನ ಅವರ ಪಾರಮ್ಯವು ಅಲ್ಲಿ ಎದ್ದುಕಂಡಿದೆ.
ಜಗತ್ತಿನ ಹಲವು ದೇಶಗಳು ಕೋವಿಡ್-19 ನಿರ್ವಹಣೆ ಮತ್ತು ಆರ್ಥಿಕ ಸಂಕಷ್ಟ (ಹಿಂಜರಿಕೆ)ದಂತಹ ಸಮಸ್ಯೆಗಳನ್ನು ಈಗಲೂ ಎದುರಿಸುತ್ತಿವೆ; ಆಳುವ ಪಕ್ಷಗಳು ಜನಬೆಂಬಲವನ್ನು ಕಳೆದುಕೊಳ್ಳುತ್ತಿವೆ. ಆದರೆ ನಮ್ಮ ಬಹುತೇಕ ಎಲ್ಲ ವಿಧಾನಸಭಾ ಚುನಾವಣೆಗಳಲ್ಲಿ ಜನ ಬಿಜೆಪಿಯನ್ನು ಬೆಂಬಲಿಸುತ್ತಲೇ ಇದ್ದಾರೆ. ಜಾಗತಿಕ ಜನಾಭಿಪ್ರಾಯ ಸಂಗ್ರಾಹಕ-ಸಂಸ್ಥೆಗಳ ಸಮೀಕ್ಷೆಯಲ್ಲಿ “ಭಾರತದಲ್ಲಿ ಸರ್ಕಾರ ಸೇರಿದಂತೆ ವಿವಿಧ ಸಂಸ್ಥೆಗಳ ಮೇಲಿನ ವಿಶ್ವಾಸವು ದೃಢವಾಗಿದೆ” ಎಂದು ತಿಳಿಸಲಾಗಿದೆ. ತಜ್ಞರು ಮತ್ತು ವ್ಯಾಖ್ಯಾನಕಾರರು (ಕಾಮೆಂಟೇಟರ್) ಎಂಬವರಿಗೆ ಪ್ರಧಾನಿ ಮೋದಿ “ಹೇಳಿದ್ದನ್ನೇ ಹೇಳುವ ಗ್ರಾಮಾಫೋನ್ನಂತಹ ಹಳೆಯ ರೆಕಾರ್ಡ್ಗಳನ್ನು ಬಿಟ್ಟುಬಿಡಿ; ದೇಶದಲ್ಲಿ ಆಗುತ್ತಿರುವ ವ್ಯಾಪಕ ಬದಲಾವಣೆಗಳನ್ನು ಗಮನಿಸಿ” ಎಂದು ಹೇಳಿದ್ದಿದೆ. ಇಲ್ಲಿ ಕಾಣುವ ಆತ್ಮವಿಶ್ವಾಸ ಸಣ್ಣದಲ್ಲ; ಅವರ ಜನಪ್ರಿಯತೆ ಕುಂದಿಲ್ಲದೆ ಸಾಗುತ್ತಿರುವುದಕ್ಕೆ ಅವರು ಹೇಳುವ ‘ವ್ಯಾಪಕ ಬದಲಾವಣೆ’ಯೇ ಕಾರಣವೆಂದರೆ ತಪ್ಪಾಗದು. ಹಲವು ದೇಶಗಳಲ್ಲಿ ಕೋವಿಡ್ ಲಸಿಕೆಯು ವಿವಾದಕ್ಕೀಡಾಯಿತು. ಆದರೆ ಭಾರತದಲ್ಲಿ 50 ಕೋಟಿ, ನೂರು ಕೋಟಿ ಹೀಗೆ ಸಾಗುತ್ತಲೇ ಇತ್ತು. ಅದು ಆಡಳಿತದ ಸಾಮಥ್ರ್ಯ!
ವೋಟು ತಿರುಗಿಸುವ ಸಾಮಥ್ರ್ಯ
ಸೋಲು-ಗೆಲವು ಡೋಲಾಯಮಾನ ಸ್ಥಿತಿಯಲ್ಲಿದ್ದಾಗ ಅದನ್ನು ಗೆಲವಿನತ್ತ ತಿರುಗಿಸುವ ಸಾಮಥ್ರ್ಯ ಮೋದಿ ಅವರಿಗಿದೆ ಎಂಬುದು ಈಗಾಗಲೇ ಹಲವು ರಾಜ್ಯಗಳಲ್ಲಿ ಸಾಬೀತಾಗಿದೆ. ಉತ್ತರಾಖಂಡದಲ್ಲಿ ಅದೇ ರೀತಿ ಇತ್ತು. ಸ್ವಲ್ಪಮಟ್ಟಿನ ಆಡಳಿತವಿರೋಧಿ ಅಲೆ ಇತ್ತು. ಮೂವರು ಮುಖ್ಯಮಂತ್ರಿಗಳನ್ನು ಬದಲಾಯಿಸಿದ್ದು ಕೂಡ ಪಕ್ಷಕ್ಕೆ ಪ್ರತಿಕೂಲ ವಾತಾವರಣವನ್ನು ಸೃಷ್ಟಿಸಿತ್ತು. ಆಗ ಮೋದಿ ಅವರು ವ್ಯಾಪಕ ಪ್ರಚಾರ ನಡೆಸಿದರು. ಕಾಂಗ್ರೆಸ್ ಎಂದರೆ ಫ್ಯಾಮಿಲಿರಾಜ್ ಮತ್ತು ಭ್ರಷ್ಟಾಚಾರ ಎನ್ನುವ ಅವರ ವಾಗ್ದಾಳಿಯನ್ನು ಮತದಾರರು ಒಪ್ಪಿಕೊಂಡರು ಎಂಬಂತೆ ಬಿಜೆಪಿ ಅಲ್ಲಿ ವಿಜಯದ ನಗೆ ಬೀರಿತು.
ತಮ್ಮ ಸಾರ್ವಜನಿಕ ಭಾಷಣ ಮತ್ತು ಚುನಾವಣಾ ಪ್ರಚಾರಗಳಲ್ಲಿ ಮೋದಿ ಹಲವು ನಿರೀಕ್ಷಿತ ವಿಷಯಗಳನ್ನು ಮುಟ್ಟದೆ ಅಚ್ಚರಿ ಮೂಡಿಸುವುದಿದೆ. ಉದಾಹರಣೆಗೆ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಅವರು ರಾಮಮಂದಿರ ನಿರ್ಮಾಣದಂತಹ ಭಾವನಾತ್ಮಕ ವಿಷಯಗಳನ್ನು ಎತ್ತಿಕೊಳ್ಳಲಿಲ್ಲ. ಬದಲಾಗಿ ಬಡವರಿಗೆ ಪಾರದರ್ಶಕವಾಗಿ ನೆರವು ನೀಡಬೇಕೆಂದು ಪ್ರತಿಪಾದಿಸಿದರು. ಅತಿ ಬಡವರಿಗೆ ನೆರವು ತಲಪಿಸುವುದು ಕಷ್ಟವೆಂದು ಪಕ್ಷದ ಓರ್ವ ನಾಯಕರು ಹೇಳಿದಾಗ “ಏನಿದ್ದರೂ ಬಡವರ ಮನೆ ಬಾಗಿಲಿಗೆ ಸರ್ಕಾರದ ನೆರವು ತಲಪುವ ತನಕ ನಾನು ವಿರಮಿಸುವುದಿಲ್ಲ” ಎಂದು ಘೋಷಿಸಿದರು. ಇದು ಅವರ ಪ್ರತಿಜ್ಞೆಯಂತಿತ್ತು. ಆಡಳಿತವನ್ನು ಚುರುಕುಗೊಳಿಸುವಲ್ಲಿ ಅದು ಎಂತಹ ಪರಿಣಾಮ ಬೀರಿತೆಂದರೆ ಉತ್ತರಪ್ರದೇಶದಲ್ಲಿ ಅದೇ ‘ಗೆಲವಿನ ಹೊಡೆತ’ (ವಿನ್ನಿಂಗ್ ಪಂಚ್) ಆಯಿತೆಂದು ಬಿಜೆಪಿ ಭಾವಿಸಿತು.
ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಎಲ್ಲ ಜಾತಿ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಆಡಳಿತವಿರೋಧಿ ಅಲೆಗೆ ಅವಕಾಶ ನೀಡದೆ ಯೋಗಿ ಆದಿತ್ಯನಾಥ್ ಮತ್ತೆ ಅಧಿಕಾರಕ್ಕೆ ಮರಳಿದ್ದು ದೊಡ್ಡ ಸಾಧನೆ ಎನಿಸಿದೆ. ಯೋಗಿ ಸರ್ಕಾರ ಅಲ್ಲಿ ಜಾರಿಗೊಳಿಸಿದ ಕಲ್ಯಾಣ ಮತ್ತು ಆರ್ಥಿಕ ನೆರವು ಕಾರ್ಯಕ್ರಮಗಳು ಪೂರ್ತಿಯಾಗಿ ಮೋದಿ ಅವರ ಅಪೇಕ್ಷೆಗೆ ಅನುಗುಣವಾಗಿದ್ದವು; ಮತ್ತು ಮೋದಿ ಅವರು ಹೇಳುವ ‘ಡಬಲ್ ಎಂಜಿನ್ ಸರ್ಕಾರ’ ಎನ್ನುವ ಪರಿಕಲ್ಪನೆಗೆ ಅದೆಲ್ಲ ಹೊಂದುವಂತಿತ್ತು ಎನ್ನಬಹುದು. ಉತ್ತಮ ಪಡಿತರ ವ್ಯವಸ್ಥೆ (ರೇಶನ್), ಗೃಹನಿರ್ಮಾಣ, ಮನೆಗಳಿಗೆ ನೀರಿನ ಸಂಪರ್ಕ, ವಿದ್ಯಾರ್ಥಿ ವೇತನ, ವೃದ್ಧಾಪ್ಯ ವೇತನ, ಸಣ್ಣ ವ್ಯವಹಾರಕ್ಕೆ (ವ್ಯಾಪಾರ) ನೆರವು ಇವುಗಳ ಬಗ್ಗೆ ರಾಜ್ಯಸರ್ಕಾರ ನಿರಂತರ ಪ್ರಯತ್ನ ನಡೆಸಿತ್ತು. ಈ ಪ್ರಯತ್ನಗಳ ಫಲವಾಗಿ ಎರಡು ವರ್ಷಗಳ ಕೋವಿಡ್ ಸಂಕಷ್ಟ ಮತ್ತು ನಿರುದ್ಯೋಗದಂತಹ ದೂರುಗಳ ನಡುವೆ ಮಂಡಲ್ ವರದಿ ಪರ ಪಕ್ಷಗಳು ಜಾತಿ ಗುರುತುಗಳನ್ನು ಹಿಡಿದುಕೊಂಡು ಮುಂದೆ ಬಂದರೂ ಕೂಡ ಪ್ರಧಾನ ಭೂಮಿಕೆಗೆ (ಸೆಂಟರ್ ಸ್ಟೇಜ್) ಮರಳಲು ಅವುಗಳಿಗೆ ಸಾಧ್ಯವಾಗಲಿಲ್ಲ. ಸುಮಾರು 1990ರಿಂದ 2014ರ ವರೆಗೆ ಉತ್ತರಪ್ರದೇಶದಲ್ಲಿ ಅದೇ ನಡೆದಿತ್ತು.
ಅಂತ್ಯೋದಯವೇ ಕೇಂದ್ರ
ಪ್ರಧಾನಿಯವರ ಚಿಂತನೆಗಳನ್ನು ತಿಳಿದವರಿಗೆ ದೀನದಯಾಳ್ ಉಪಾಧ್ಯಾಯರು ಹೇಳಿದ ‘ಅಂತ್ಯೋದಯ’ವೇ ಅವರ ಆಡಳಿತದ ಕೇಂದ್ರ ಎಂದು ತಿಳಿದಿರುತ್ತದೆ. ಜೊತೆಗೆ ಫಲಾನುಭವಿಗಳನ್ನು ಜಾತಿ-ಮತಗಳ ಆಧಾರದಲ್ಲಿ ಒಡೆಯುವುದಕ್ಕೆ ಬದಲಾಗಿ ಅವರ ನಡುವೆ ಒಗ್ಗಟ್ಟು ತರುವುದು ಇವರ ಕ್ರಮ. ಜಾತಿಯ ವಾಸ್ತವಗಳು, ಅದರಲ್ಲೂ ವಿಶೇಷವಾಗಿ ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನರ ವಿಷಯ ಮೋದಿ ಅವರಿಗೆ ಗೊತ್ತಿಲ್ಲ ಎಂದಲ್ಲ; ಆದರೆ ಅವರು ವಿಷಯಕ್ಕೆ ಒತ್ತು ನೀಡುವ ಕ್ರಮ ಇತರರಿಗಿಂತ ಭಿನ್ನವಾದದ್ದು. ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷಗಳು (ಬಿಎಸ್ಪಿ) ಈ ನಿಟ್ಟಿನಲ್ಲಿ ಅನುಸರಿಸುವ ಕ್ರಮವನ್ನು ಮೋದಿ ವಿರೋಧಿಸುತ್ತಾರೆ; ಅದಕ್ಕೆ ಅವರ ಬಳಿ ಬದಲಿಯಾದ ಸಬಲೀಕರಣದ ಒಂದು ಸೂತ್ರ (ಫಾರ್ಮುಲಾ) ಇದೆ. ಆ ಮೂಲಕ ಅವರು ಹಿಂದುತ್ವ ಟೆಂಟ್ನಲ್ಲಿ ಹಿಂದುಳಿದವರು, ದಲಿತರು ಎಲ್ಲರಿಗೂ ಅವಕಾಶ ನೀಡುತ್ತಾರೆ.
ಇದರೊಂದಿಗೆ ಮೇಲ್ಜಾತಿಯವರು ಸಾಮಾನ್ಯವಾಗಿ ಬಿಜೆಪಿಯ ಬೆಂಬಲಿಗರಾದ ಕಾರಣ ಅವರನ್ನು ಸಂಭಾಳಿಸುವ ಕೆಲಸವೂ ಆಗಬೇಕು. ಈ ಎಲ್ಲದರ ನಡುವೆ ಸಮತೋಲನವು ಸವಾಲಿನ ಕೆಲಸವೇ ಸರಿ. ಹಿಂದುತ್ವ ಮತ್ತು ಅಭಿವೃದ್ಧಿಯ ಕ್ರಾಂತಿಯನ್ನು ಒಟ್ಟಿಗೇ ಒಯ್ಯುವುದು ಕೂಡ ಕಷ್ಟದ ಕೆಲಸ; ಸ್ವಲ್ಪ ಸಮಯ ಅದನ್ನು ಸಾಧಿಸಿದರೂ ಕೂಡ ಬಹುಕಾಲ ಕಷ್ಟ ಎನ್ನಲಾಗುತ್ತದೆ. ಆದರೂ ಮೋದಿ ಅದನ್ನು ಸಾಧಿಸಿ ಬಿಜೆಪಿಗೆ ಹಲವೆಡೆ ಜಯ ತಂದುಕೊಟ್ಟಿದ್ದಾರೆ. ಜಯದ ಪ್ರಭಾವವನ್ನು ಇತರ ಪಕ್ಷಗಳ ಮೇಲೆ ಮೂಡಿಸಿ ಅವರನ್ನು ಬದಿಗೊತ್ತಲು ಯತ್ನಿಸುತ್ತಿದ್ದಾರೆ ಎಂದೂ ವ್ಯಾಖ್ಯಾನಿಸಲಾಗಿದೆ.
ಬಿಜೆಪಿ ಒಂದು ಕಾಲದಲ್ಲಿ ಹೇಳುತ್ತಿದ್ದ ಸಾಂಸ್ಕøತಿಕ ಯುದ್ಧ ಅಥವಾ ಧ್ರುವೀಕರಣದ ಚರ್ಚೆ ಈಗ ಮುಗಿದ ಅಧ್ಯಾಯವೆ? – ಎನ್ನುವ ಒಂದು ಪ್ರಶ್ನೆ ಇಲ್ಲಿ ಉದ್ಭವಿಸಬಹುದು. ಇಲ್ಲ, ಹಾಗೇನೂ ಇಲ್ಲ. ಅದನ್ನು ಕೈಬಿಟ್ಟಿಲ್ಲ; ನೀಡುವ ಒತ್ತಿನಲ್ಲಿ ವ್ಯತ್ಯಾಸವಾಗಿದೆ, ಅಷ್ಟೆ ಎಂದು ಅದನ್ನು ಸ್ಪಷ್ಟಪಡಿಸಲಾಗಿದೆ. ಅದಕ್ಕೆ ಉದಾಹರಣೆ ಎಂಬಂತೆ, ಚುನಾವಣೆಯಿಂದ ಸ್ವಲ್ಪ ಬಿಡುವಾದೊಡನೆ ಪ್ರಧಾನಿ ಮೋದಿ ‘ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ಮಾಪಕರನ್ನು ಭೇಟಿ ಮಾಡಿದರು; ಮತ್ತು “ಬಹುಕಾಲ ಅದುಮಿ ಇಟ್ಟಿದ್ದ ಒಂದು ಕಥನವನ್ನು ಜನರ ಮುಂದಿಟ್ಟಿದ್ದೀರಿ” ಎಂದು ಶ್ಲಾಘಿಸಿದರು. ಪ್ರಧಾನಿ ಅವರ ಬೆಂಬಲ ಇಲ್ಲವಾಗಿದ್ದರೆ ಆ ಚಿತ್ರದ ಬಿಡುಗಡೆ ಕಷ್ಟವಿತ್ತೆಂದು ಹಲವರು ಹೇಳಿದ್ದಿದೆ. ಚಿತ್ರದಿಂದ ಇಡೀ ‘ಇಕೋಸಿಸ್ಟಮ್’(ವ್ಯವಸ್ಥೆ) ಗಲಿಬಿಲಿಗೊಂಡಿದೆ ಎಂದು ಕೂಡ ಮೋದಿ ಅವರು ಹೇಳಿದ್ದರು.
‘ಇಕೋಸಿಸ್ಟಮ್’ ಬಗ್ಗೆ ಪ್ರಧಾನಿ ಆಗಾಗ ಹೇಳುತ್ತಾರೆ. ಕಾಂಗ್ರೆಸ್ನವರು ಅಥವಾ ಬಿಜೆಪಿಗೆ ವಿರುದ್ಧವಾದ ಒಂದು ಬುದ್ಧಿಜೀವಿ ವರ್ಗ ಎಂದು ಅದರರ್ಥ ಎನಿಸುತ್ತದೆ. ಕಾಂಗ್ರೆಸ್ ಬದಲಾಗಲು ಅದರ ಇಕೋಸಿಸ್ಟಮ್ ಬಿಡುತ್ತಿಲ್ಲ ಎಂದು ಅವರೊಮ್ಮೆ ಹೇಳಿದ್ದರು. ಎಡಪಂಥೀಯರ ಜೊತೆಗಿನ ಸೈದ್ಧಾಂತಿಕ ಮತ್ತು ರಾಜಕೀಯ ‘ಯುದ್ಧ’ವನ್ನು ಮೋದಿ ನಿಲ್ಲಿಸುವವರಲ್ಲ. ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಅದು ಪೂರಕ ಎನ್ನುವ ಒಂದು ಅಭಿಪ್ರಾಯ ಕೂಡ ಇದೆ.
ಮತದಾರರ ದೊಡ್ಡ ಗುಂಪಿಗೆ ಮೋದಿ ಅವರು ನೀಡುವ ಸಂದೇಶದಲ್ಲಿ ಇತರ ಕೆಲವು ಅಂಶಗಳು ಕೂಡ ಸೇರಿರುತ್ತವೆ. ಬಡವರ ಪರ ನಿಲವಲ್ಲದೆ ಅವರು ವಂಶಾಡಳಿತದ ಮೇಲೆ ದಾಳಿ ನಡೆಸುತ್ತಾರೆ. ವಂಶಾಡಳಿತದ ಕೆಡುಕನ್ನು ಗಮನಿಸಬೇಕು. ಬಿಜೆಪಿಗೆ ಸವಾಲು ಹಾಕುವಾಗ ಇಕೋಸಿಸ್ಟಮ್ ಇದನ್ನೆಲ್ಲ ನೋಡುವುದಿಲ್ಲ. ಸೋಲುಗಳ ಸರಣಿಯೇ ಆದರೂ ಕೂಡ ಕಾಂಗ್ರೆಸ್ನಲ್ಲಿ ಅದರ ಹೊಣೆ ಹೊರುವವರಿಲ್ಲ ಎಂದು ಚುಚ್ಚುತ್ತಾರೆ. ತಮ್ಮ ಮಕ್ಕಳು ಹಾಗೂ ಬಂಧುಗಳಿಗೆ ಟಿಕೆಟ್ ಪಡೆಯುವ ಪ್ರಯತ್ನ ಬೇಡವೆಂದು ಅವರು ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲೇ ಹೇಳಿದರು. ವಂಶಾಡಳಿತದಿಂದ ಸ್ವಹಿತಾಸಕ್ತಿ ಬರುತ್ತದೆ ಎಂಬುದು ಮೋದಿ ಅವರ ಆಕ್ಷೇಪ.
ಮುಖ್ಯ ಪ್ರತಿಪಕ್ಷ ಹಾಗೂ ಇತರ ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿಯ ವಿರೋಧಿಗಳು. ಹಿಂದಿನ ಸರ್ಕಾರಗಳು ಹಗರಣಗಳಲ್ಲೇ ತೊಡಗಿದ್ದರೆ ಬಿಜೆಪಿ ಸರ್ಕಾರಗಳು ಕೆಲಸ ಮಾಡಿದವು. ಅದರಿಂದಾಗಿ ಜನ ಮತ್ತೆ ಬೆಂಬಲಿಸಿದರು – ಎನ್ನುವ ಮೋದಿ, ಬಿಜೆಪಿ ಕೋಮುವಾದವನ್ನು ಅನುಸರಿಸುತ್ತದೆ ಎಂಬುದಕ್ಕೆ ಪ್ರತಿಯಾಗಿ ವಿರೋಧಿಗಳ ತುಷ್ಟೀಕರಣವನ್ನು ತರುತ್ತಾರೆ; ಮತ್ತು ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವನೆಯನ್ನು ತರುವುದನ್ನು ಟೀಕಿಸುತ್ತಾರೆ.
ಭ್ರಷ್ಟಾಚಾರದ ವಿರುದ್ಧ ಕೈಗೊಂಡ ಕ್ರಮಗಳನ್ನು ಬಲವಾಗಿ ಸಮರ್ಥಿಸುವ ಮೋದಿ ಪ್ರತಿಪಕ್ಷದವರ ವಿರುದ್ಧ ದಾಖಲಾದ ಪ್ರಕರಣಗಳ ಬಗ್ಗೆ ಹೇಳುತ್ತಾರೆ. ಭ್ರಷ್ಟಾಚಾರಕ್ಕೂ ವಂಶಾಡಳಿತಕ್ಕೂ ಸಂಬಂಧವಿದೆ ಎನ್ನುವ ಅವರು ಸಾರ್ವಜನಿಕ ಸಭೆಯಲ್ಲಿ ಜನರ ಮುಂದೆ ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳುವುದನ್ನು ನಿಲ್ಲಿಸಬೇಕಾ ಎಂದು ಕೇಳುತ್ತಾರೆ. ಈ ವಿಷಯದಲ್ಲಿ ತನಿಖಾ ಸಂಸ್ಥೆಗಳಿಗೆ ಕಳಂಕ ಮೆತ್ತುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸುತ್ತಾರೆ. ಹಿಂದಿನ ಮಹಾರಾಷ್ಟ್ರ ಸರ್ಕಾರ ಪೊಲೀಸ್ ಮತ್ತು ಜಾರಿ ನಿರ್ದೇಶನಾಲಯದ (ಇ.ಡಿ.) ವಿರುದ್ಧ ಕೇಸು ದಾಖಲಿಸಿದ್ದನ್ನು ನೆನಪಿಸಿ, ಅಂದಿನ ಆಳುವ ಕೂಟದ ಪ್ರಮುಖರ ಮೇಲೆ ದಾಳಿ ನಡೆಸಿದ್ದಕ್ಕೆ ಹಾಗೆ ಮಾಡಿರಬಹುದು; ಏನಿದ್ದರೂ ಭ್ರಷ್ಟಾಚಾರವಿರೋಧಿ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡುತ್ತ ಇರಬೇಕಾಗುತ್ತದೆ ಎಂದು ಸಮರ್ಥಿಸುತ್ತಾರೆ. ತನಿಖಾಸಂಸ್ಥೆಗಳ (ಸಿಬಿಐ ಇತ್ಯಾದಿ) ಕೆಲಸವನ್ನು ಪ್ರಶ್ನಿಸಿ 14 ಪಕ್ಷಗಳು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಈಚೆಗೆ ವಜಾ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್ನ ದಾರಿ ತಮ್ಮದಲ್ಲ ಎಂದು ಮೋದಿ ತಮ್ಮ ಭಾಷಣಗಳಲ್ಲಿ ಜನತೆಗೆ ಮನವರಿಕೆ ಮಾಡಿಕೊಡುತ್ತಾರೆ. ಅದೇ ರೀತಿ ಈ ಸರ್ಕಾರದ ಉನ್ನತ ಸ್ಥಾನದಲ್ಲಿ ಭ್ರಷ್ಟಾಚಾರದ ಬಗ್ಗೆ ಕೇಳಿದ್ದಿಲ್ಲ. ಅದರಿಂದಾಗಿ ಪ್ರಧಾನಿಯವರ ವಿಶ್ವಾಸಾರ್ಹತೆ ಉನ್ನತಸ್ಥಿತಿಯಲ್ಲಿದೆ. ಯೋಗಿ ಆದಿತ್ಯನಾಥರಂತಹ ಬಿಜೆಪಿಯ ಇತರ ನಾಯಕರು ಕೂಡ ಹಾಗೆಯೇ ಕಾಣುತ್ತಾರೆ. ಯೋಗಿ ಬಡವರ, ಶ್ರೀಸಾಮಾನ್ಯರ ಏಳಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ; ಸ್ವಾರ್ಥಸಾಧನೆಗೆ ಅಲ್ಲಿ ಅವಕಾಶವಿಲ್ಲ. ಯೋಗಿ ಸರ್ಕಾರವು ಆಡಳಿತವಿರೋಧಿ ಅಲೆಯನ್ನು ಸಮರ್ಥವಾಗಿ ಎದುರಿಸಿದ್ದಕ್ಕೆ ಅದೇ ಕಾರಣವೆಂದು ನಂಬಲಾಗಿದೆ. ಈ ಸಂಬಂಧವಾಗಿ ಎಸ್ಪಿ, ಬಿಎಸ್ಪಿಗಳು ಏನು ಮಾಡಿವೆ ಎಂಬುದನ್ನು ನೆನಪಿಸಿಕೊಂಡು ಜನ ಬಿಜೆಪಿಯತ್ತ ವಾಲಿರಬಹುದು. ಆಧಾರ್ಕಾರ್ಡ್ಗೆ ಲಿಂಕ್ ಮಾಡಿ ನೆರವನ್ನು ಫಲಾನುಭವಿಗಳಿಗೆ ನೇರವಾಗಿ ಹಸ್ತಾಂತರ ಮಾಡಬೇಕೆನ್ನುವ (ಡಿಬಿಟಿ) ಮೋದಿ ಅವರ ಆಶಯವನ್ನು ಯೋಗಿ ಸರ್ಕಾರ ಪೂರೈಸಿತ್ತು. ಆಡಳಿತ ಮತ್ತು ದಕ್ಷತೆಯಲ್ಲಿ ಪಾರದರ್ಶಕತೆ ಬರುವಂತೆ ಸರ್ಕಾರ ನೇಮಕಾತಿಯಲ್ಲಿ ಸುಧಾರಣೆಗಳನ್ನು ತಂದಿತ್ತು.
ಕಾನೂನು-ಸುವ್ಯವಸ್ಥೆಯಲ್ಲಿ
ಆಡಳಿತವು ನಿಷ್ಪಕ್ಷವಾಗಿರಬೇಕೆನ್ನುವ ಮೋದಿ ಅವರ ಕ್ರಮವನ್ನು ಯೋಗಿ ಜಾರಿಗೆ ತಂದಿದ್ದರು. ಹಿಂದಿನ ಎಸ್ಪಿ ಸರ್ಕಾರ ಇದಕ್ಕೆ ವಿರುದ್ಧವಾಗಿತ್ತು. ಜನ ತಮ್ಮ ಪುತ್ರಿ-ಸೋದರಿಯರ ಭದ್ರತೆಯ ಬಗ್ಗೆ ಆತಂಕಗೊಂಡಿದ್ದರು. ಆಗ ಗಲಭೆಗಳು ನಡೆಯುತ್ತಿದ್ದವು. ಪೊಲೀಸ್ ವ್ಯವಸ್ಥೆಯಲ್ಲೂ ಜಾತೀಯತೆಯನ್ನು ತಂದದ್ದೇ ಅದಕ್ಕೆ ಕಾರಣವೆಂದು ಮೋದಿ ಆರೋಪಿಸಿದಾಗ ಅದು ಎಲ್ಲರೂ ನಂಬುವಂತಿತ್ತು. ಆಗ ಉತ್ತರಪ್ರದೇಶದಲ್ಲಿ ರಾಜಕೀಯ ಮಾಫಿಯಾ ಜೋರಾಗಿತ್ತು.
ಉತ್ತರಪ್ರದೇಶದ ಚುನಾವಣಾ ಫಲಿತಾಂಶವು ಮಹಿಳಾ ಮತದಾರರ ಮಹತ್ತ್ವದ ಕಡೆಗೆ ಗಮನ ಸೆಳೆಯಿತು. ಫಲಿತಾಂಶ ಪ್ರಕಟವಾದಾಗ ಮೋದಿ “ದೇಶದ ಮಹಿಳೆಯರಿಗೆ ನಾನು ತಲೆಬಾಗುತ್ತೇನೆ; ಏಕೆಂದರೆ ನಮ್ಮ ಯಶಸ್ಸಿನಲ್ಲಿ ಅವರ ಕೊಡುಗೆಯ ಪಾತ್ರ ತುಂಬಾ ದೊಡ್ಡದು” ಎಂದು ಹೇಳಿದರು. ಜೊತೆಗೆ ಅವರು ಯುವಜನರಿಗೆ ಕೂಡ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದರು. ಅವರ ರ್ಯಾಲಿಗಳಲ್ಲಿ ಮಹಿಳೆಯರು ಮತ್ತು ಯುವಜನರು ದೊಡ್ಡಸಂಖ್ಯೆಯಲ್ಲಿ ಸೇರುತ್ತಾರೆ; ಅದರಿಂದ ಉತ್ತರಾಖಂಡದಲ್ಲಿ ಕೂಡ ಅನುಕೂಲವಾಗಿತ್ತು. ಕೇಂದ್ರಸರ್ಕಾರ ತಂದ ‘ಪೋಷಣ್’ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ, ಗರ್ಭಿಣಿ ಮತ್ತು ಮಗುವಿಗೆ ಹಾಲು ಕೊಡುವ ತಾಯಂದಿರಿಗೆ ಉತ್ತಮ ಆಹಾರ – ಇಂತಹ ಅಂಶಗಳಿಗೆ ಗಮನಕೊಡಲಾಯಿತು. ಉಜ್ಜ್ವಲಾ (ಅಡುಗೆ ಅನಿಲ) ಮತ್ತು ಇಂದ್ರಧನುಷ್ (ರೋಗನಿರೋಧಕತೆ) ಕಾರ್ಯಕ್ರಮಗಳು ಕೂಡ ಮಹಿಳಾಪರ ಆದಂಥವೇ. ಇವೆಲ್ಲ ರಾಜ್ಯದ ಮಹಿಳೆಯರಿಗೆ ಇಷ್ಟವಾಗಿದ್ದವು. ಸಮೀಕ್ಷೆ ನಡೆಸಿ ಅವುಗಳಲ್ಲಿ ಸುಧಾರಣೆಗಳನ್ನು ಕೂಡ ತಂದರು. ಹೀಗೆ ಬಿಜೆಪಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಲ್ಲಿ ಮಹಿಳೆಯರಿಗೆ ಹೆಚ್ಚಿನ ಮಹತ್ತ್ವ ನೀಡುತ್ತಿದೆ. ಇವರು ಕೆಲಸ ಮಾಡುತ್ತಾರೆಂದು ಜನರಿಗೆ ಮೋದಿ ಅವರಲ್ಲಿ ನಂಬಿಕೆಯೂ ಬಂದಿದೆ.
ಉಕ್ರೇನ್-ರಷ್ಯಾ ಯುದ್ಧದಿಂದ ದೇಶದ ಆರ್ಥಿಕತೆಗೆ ತುಂಬ ತೊಂದರೆ ಆಗಬಹುದಿತ್ತು. ಉಕ್ರೇನ್ ಹಿಂದೆ ಅಮೆರಿಕ, ಯೂರೋಪ್ ಮತ್ತಿತರ ದೇಶಗಳ ಬಲಿಷ್ಠ ನ್ಯಾಟೋ ಇತ್ತು. ಭಾರತ ರಕ್ಷಣಾ ಸಾಮಗ್ರಿ, ಇಂಧನ ಸೇರಿದಂತೆ ಎರಡೂ ದೇಶಗಳ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಆದರೆ ಮೋದಿ ಜಗತ್ತಿಗೇ ಆದರ್ಶವಾಗುವಂತಹ ಗಟ್ಟಿದಾರಿಯನ್ನು ತುಳಿದು ದೇಶದ ಹಿತ ಕಾಪಾಡಿದರು. ಒಂದೆಡೆ ಚೀನಾದ ಗಡಿಸಮಸ್ಯೆ, ಇನ್ನೊಂದೆಡೆ ಕೊರೋನಾ ತಂದ ಆಘಾತಕಾರಿ ಸಮಸ್ಯೆಗಳಿಂದ ಸರ್ಕಾರವೇ ಪತನ ಆಗಬಹುದಿತ್ತು. ಆದರೆ ಮೋದಿ ‘ದೇಶ ಮೊದಲು’ ಮತ್ತು ಆತ್ಮನಿರ್ಭರ (ಸ್ವಾವಲಂಬನೆ)ದಂತಹ ತತ್ತ್ವಗಳನ್ನು ದೃಢವಾಗಿ ಅನುಸಂಧಾನ ಮಾಡಿಕೊಂಡು ದೇಶವನ್ನು ಪಾರು ಮಾಡಿದರು. ಆತ್ಮನಿರ್ಭರ್ ಯೋಜನೆಯು ವೇಗವಾಗಿ ಮುಂದುವರಿಯುತ್ತಿದ್ದು, ಎಚ್ಎಎಲ್ನಂತಹ ದೇಶೀಯ ಸಂಸ್ಥೆಗಳು ಚುರುಕಾಗಿವೆ; ಮತ್ತು ದೇಶದಲ್ಲಿ ಸ್ಟಾರ್ಟಪ್ ಕಲ್ಚರ್ (ಹೊಸ ಉದ್ಯಮ ಸ್ಥಾಪನೆ) ಬೇರೂರುತ್ತಿದೆ; ಜನ ಇವನ್ನು ಸ್ವಾಗತಿಸುತ್ತಿದ್ದಾರೆ.
ಲೋಹಿಯಾ ಹಾದಿಯಲ್ಲಿ
ಉತ್ತರಪ್ರದೇಶದ ಹೊಸ ಬೆಳವಣಿಗೆಗಳನ್ನು ಸಮಾಜವಾದಿ ಚಿಂತಕ, ರಾಜಕೀಯ ನಾಯಕ ರಾಮಮನೋಹರ ಲೋಹಿಯಾ ಅವರ ಕಡೆಗೆ ಹೊರಳಿಕೊಂಡ ಬಗೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಬಿಜೆಪಿ ಅಲ್ಲಿ ಲೋಹಿಯಾ ಅವರ ಕೆಲವು ಬೋಧನೆಗಳನ್ನು ಅಂತಃಸ್ಥಗೊಳಿಸಿಕೊಂಡು ಮುಂದುವರಿಯುತ್ತಿದೆ. ಜಾತಿ ಮತ್ತು ಲಿಂಗ ತಾರತಮ್ಯಗಳನ್ನು ಲೋಹಿಯಾ ತೀವ್ರವಾಗಿ ವಿರೋಧಿಸಿದ್ದರು. ಅವರ ಪ್ರಕಾರ ಭಾರತೀಯತೆ ಕುಸಿಯಲು ಆ ತಾರತಮ್ಯಗಳೇ ಕಾರಣ. ಬಡತನ ನಿರ್ಮೂಲನದ ಯಾವುದೇ ಪ್ರಯತ್ನದ ಜೊತೆಗೆ ಮಹಿಳಾ ತಾರತಮ್ಯವು ತೊಲಗಬೇಕು; ಪುರುಷಪ್ರಧಾನ ವ್ಯವಸ್ಥಾವಿಕೃತಿಯ ವಿರುದ್ಧ ಸಮರ ನಡೆಯಬೇಕು; ಮತ್ತು ಹಿಂದುಳಿದವರಿಗೆ ಉತ್ತಮ ಪ್ರಾತಿನಿಧ್ಯ ಸಿಗಬೇಕು – ಎಂದು ಲೋಹಿಯಾ ಪ್ರತಿಪಾದಿಸಿದರು. ಅವರ ಸಂಯುಕ್ತ ಸೋಷಲಿಸ್ಟ್ ಪಾರ್ಟಿ (ಎಸ್ಎಸ್ಪಿ) ಆ ಬಗ್ಗೆ ಪ್ರತಿಜ್ಞೆ ಮಾಡಿತ್ತು. ಹಿಂದುಳಿದವರಿಗೆ ಶೇ. 60ರಷ್ಟು ಪಾಲು ಸಿಗಬೇಕೆಂದು ಲೋಹಿಯಾ ವಾದಿಸಿದ್ದರು. ಅದರಲ್ಲಿ ಮಹಿಳೆಯರ ಪಾಲು ಕೂಡ ಇತ್ತು.
ಆದರೆ ಲೋಹಿಯಾ ಅವರ ಉತ್ತರಾಧಿಕಾರಿಯೆಂದು ಹೇಳಿಕೊಳ್ಳುವ ಸಮಾಜವಾದಿ ಪಕ್ಷ ಕ್ರಮೇಣ ಈ ದಾರಿಯನ್ನು ಪೂರ್ತಿಯಾಗಿ ತ್ಯಜಿಸಿದೆ. ಹಿಂದುಳಿದವರೆಂದರೆ ಯಾದವರೆನ್ನುವ ಒಂದೇ ಜಾತಿಗೆ ಅವಕಾಶ ಎನ್ನುವ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ; ಇದು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಾರ್ಟಿ. ಯೋಗಿ ಆದಿತ್ಯನಾಥ್ ಅವರ ವಿಜಯದಲ್ಲಿ ಮಹಿಳೆಯರ ದೊಡ್ಡ ಪಾಲು ಇರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಹಲವಾರು ಮಹಿಳಾ ಕೇಂದ್ರಿತ ಕಾರ್ಯಕ್ರಮಗಳನ್ನು ಅವರು ಜಾರಿ ಮಾಡಿದ್ದಾರೆ. ಮಹಿಳೆಯ ಜೀವನದ ಪ್ರಮುಖ ಅಂಶಗಳಿಗೆಲ್ಲ ಅಲ್ಲಿ ಗಮನಕೊಡಲಾಗಿದೆ. ಗರ್ಭಿಣಿಯರ ಆರೋಗ್ಯ, ಹೆರಿಗೆ, ಉಚಿತ ಹಾಗೂ ಕಡಮೆ ದರದಲ್ಲಿ ಆಹಾರ (ರೇಶನ್), ಪೌಷ್ಟಿಕ ಆಹಾರ, ಸಮಗ್ರ ಆರೋಗ್ಯ, ಶಿಕ್ಷಣಕ್ಕೆ ನೆರವು, ಸ್ವ-ಉದ್ಯೋಗ, ಸಾಮಾಜಿಕ-ಆರ್ಥಿಕ ದುರ್ಬಲರಿಗೆ ಸಣ್ಣ ಸಾಲ, ಜೀವನೋಪಾಯ ವ್ಯವಸ್ಥೆ, ಉತ್ತಮ ಕಾನೂನು-ಸುವ್ಯವಸ್ಥೆ – ಮುಂತಾದ ಕ್ರಮಗಳಿಂದ ರಾಜ್ಯದಲ್ಲಿ ಮಹಿಳೆಯರ ನಡುವೆ ಯೋಗಿ ಸರ್ಕಾರದ ಪರವಾಗಿ ಮೌನಕ್ರಾಂತಿಯೇ ನಡೆಯಿತು. ಮಹಿಳೆಯರ ಮತದಾನದಲ್ಲಿ ಹಿಂದೆಂದೂ ಇಲ್ಲದ ಶೇ. 11ರಷ್ಟು ಏರಿಕೆ ಕಂಡುಬಂತು. ರಾಜ್ಯದ ಈ ಕಾರ್ಯಕ್ರಮಗಳು ಪ್ರಧಾನಿಯವರ ಉಜ್ಜ್ವಲಾ ಯೋಜನೆಗಿಂತ ತುಂಬ ಮುಂದಿವೆ ಎನ್ನುವ ಶ್ಲಾಘನೆಯೂ ಬಂತು.
2017ರ ಅನಂತರದ ಉತ್ತರಪ್ರದೇಶದ ನಿರ್ಣಾಯಕ ಯೋಜನೆಗಳಲ್ಲಿ ಭಾಗ್ಯಲಕ್ಷ್ಮಿ ಯೋಜನೆಯೂ ಸೇರಿದೆ. ಅದರಿಂದ ಬಡಕುಟುಂಬದ ಬಾಲಕಿಯರಿಗೆ 50 ಸಾವಿರ ರೂ.ಗಳ ಬಾಂಡ್ ನೀಡುವ ಮೂಲಕ ಪದವಿ ಶಿಕ್ಷಣದವರೆಗೆ ಸಹಾಯ ಕಲ್ಪಿಸಲಾಗುತ್ತದೆ. ಸರ್ಕಾರೀ ಶಾಲೆಗಳ ಸ್ಥಿತಿ ಸುಧಾರಣೆಗೆ ‘ಕಾಯಕಲ್ಪ ಯೋಜನೆ’ಯನ್ನು ತಂದರು. (ಅದರಲ್ಲಿ ಬಾಲಕಿಯರಿಗೆ ಹೆಚ್ಚಿನ ಪ್ರೋತ್ಸಾಹ, ‘ಸ್ಕೂಲ್ ಚಲೋ’ ಅಭಿಯಾನದ ಮೂಲಕ ಬಾಲಕಿಯರಿಗೆ ಸಮವಸ್ತ್ರ ಇತ್ಯಾದಿ ಒದಗಿಸಿದರು. ಇದರಿಂದ 60 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಅನುಕೂಲವಾಯಿತು.)
ಮೋದಿ ಅವರಿರಲಿ ಅಥವಾ ಯೋಗಿ ಅವರಿರಲಿ ಇಂತಹ ಕೊಡುಗೆ ನೀಡುವಾಗ ಎರಡು ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡಿದ್ದಾರೆ. ಅವುಗಳೆಂದರೆ: ಒಂದು – ನೀಡುವ ನೆರವು ಆಯಾ ಫಲಾನುಭವಿಗಳಿಗೆ ನೇರವಾಗಿ ಸಿಗಬೇಕು; ಇನ್ನೊಂದು – ನೆರವು ನೀಡುವ ಸರ್ಕಾರ ತನ್ನ ಆರ್ಥಿಕ ಕ್ಷಮತೆಯನ್ನು ಮರೆಯಬಾರದು. ಸಮತೋಲನ ಸಾಧಿಸಿಯೇ ಅಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂಬುದು. ಉಚಿತ ಕೊಡುಗೆ ನೀಡುವುದರ ಬಗ್ಗೆ ಪ್ರಧಾನಿ ಮೋದಿ ಅವರು ಆಗಾಗ ಎಚ್ಚರಿಕೆಯ ಮಾತುಗಳನ್ನು ಹೇಳುವುದನ್ನಿಲ್ಲಿ ಸ್ಮರಿಸಬಹುದು.
ದಲಿತರು: ಬದಲಾದ ನಿಷ್ಠೆ
ಬಿಜೆಪಿಯ ಹಿಂದುಳಿದವರ ಸಬಲೀಕರಣದ ಬಗ್ಗೆ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು, “ಕಾಂಗ್ರೆಸ್ ದಲಿತರು ಮತ್ತು ಹಿಂದುಳಿದವರನ್ನು ವೋಟ್ಬ್ಯಾಂಕಾಗಿ ಮಾಡಿಕೊಂಡಿತ್ತು. ಅವರಿಗೆ ಕಾಂಗ್ರೆಸ್ನ ಕುರುಡುನಿಷ್ಠೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ನ ವೇಷದ ರಾಜಕೀಯದ ಬಣ್ಣ ಬಯಲಾಯಿತು; ಮತ್ತು ಆಗುತ್ತ ಇದೆ” ಎಂದಿದ್ದಾರೆ. “ಕಾಂಗ್ರೆಸ್ನ ವಿಭಾಜಕ ರಾಜಕಾರಣ ಮತ್ತು ಪ್ರಾದೇಶಿಕ ಪಕ್ಷ (ಜೆಡಿಎಸ್)ಗಳ ಕುಟುಂಬ ರಾಜಕಾರಣ ಎರಡನ್ನೂ ಬಿಜೆಪಿ ಸೈದ್ಧಾಂತಿಕವಾಗಿ ವಿರೋಧಿಸುತ್ತ ಬಂದಿದೆ. ಸಮಾಜದ ಸಕಲ ಸಮುದಾಯಗಳ ಸಮಷ್ಟಿ ಹಿತವನ್ನು (ಸಬ್ ಕಾ ಸಾಥ್, ಸಬ್ ಕಾ ವಿಕಾಸ್) ಪ್ರತಿಪಾದಿಸಿಕೊಂಡು ಬಂದಿದೆ; ಹಿಂದುಳಿದ ಸಮುದಾಯಗಳ ಹಿತಾಸಕ್ತಿಯನ್ನು ಪ್ರಾಮಾಣಿಕವಾಗಿ ಕಾಪಾಡಿಕೊಂಡು ಬಂದಿದೆ. ದೀನದಯಾಳ ಉಪಾಧ್ಯಾಯರ ಅಂತ್ಯೋದಯ, ವಾಜಪೇಯಿ ಅವರ ಎಲ್ಲರನ್ನೂ ಒಳಗೊಳ್ಳುವ (inclusive) ರಾಜಕಾರಣ, ಆಡ್ವಾಣಿ ಅವರ ಧ್ಯೇಯನಿಷ್ಠ ರಾಜಕಾರಣ, ಮೋದಿ ಅವರ ಸಂಕಲ್ಪ ಬಲದ ಅಭಿವೃದ್ಧಿ ಕೇಂದ್ರಿತ ರಾಜಕಾರಣ – ಎಲ್ಲವೂ ಇಲ್ಲಿ ಸೇರಿವೆ. ಹಿಂದುಳಿದ ಸಮುದಾಯಗಳೆಂದರೆ ಬಿಜೆಪಿಗೆ ರಾಜಕೀಯ ಬಂಡವಾಳವಲ್ಲ. ಸಮುದಾಯಗಳು ಒಂದು ಸಮಾಜದ ಶ್ರೀಮಂತಿಕೆಯನ್ನು ಕಾಪಾಡುವ ಶಕ್ತಿಗಳು ಎಂಬುದು ಬಿಜೆಪಿಯ ನಂಬಿಕೆ. ಹಿಂದುಳಿದ ಸಮುದಾಯಗಳ ಆಶೋತ್ತರಗಳಿಗೆ ಸ್ಪಂದಿಸುವ ಶಕೆ ಈಗ ಆರಂಭವಾಗಿದೆ” ಎಂದು ಈಶ್ವರಪ್ಪ ಮೋದಿ ಅವರ ಕಾರ್ಯಶೈಲಿಯನ್ನು ವಿಶ್ಲೇಷಿಸಿದ್ದಾರೆ.
ಸಂದರ್ಶನವೊಂದರಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ಗುಜರಾತ್ ಹಾಗೂ ಮೋದಿ ಅವರ ಬಗೆಗೆ ಕೆಲವು ಮಾತುಗಳನ್ನು ಹೇಳಿದ್ದರು. “ಗುಜರಾತಿನ ಯುವಜನರು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವನ್ನು ನೋಡಿಯೇ ಇಲ್ಲ. ಇತರ ರಾಜ್ಯಗಳ ಕಾಂಗ್ರೆಸ್ ಆಡಳಿತ ಮತ್ತು ಕೇಂದ್ರದಲ್ಲಿ ಸುಮಾರು 12 ಲಕ್ಷ ಕೋಟಿ ರೂ. ಅವ್ಯವಹಾರ ನಡೆಸಿದ್ದನ್ನು ಅವರು ಗಮನಿಸಿದ್ದಾರೆ. ಜಗತ್ತಿನ 11ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕತೆಯನ್ನು ನಮ್ಮ ಸರ್ಕಾರ ಐದನೇ ಸ್ಥಾನಕ್ಕೆ ತಂದು ನಿಲ್ಲಿಸಿದೆ. ದೇಶದ ಗಡಿಭಾಗಗಳನ್ನು ಭಯೋತ್ಪಾದನೆಯ ಆತಂಕದಿಂದ ಮುಕ್ತಗೊಳಿಸಿದೆ. ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದು ದೇಶದ ಗೌರವವನ್ನು ಹೆಚ್ಚಿಸಿದೆ. ಕಾಂಗ್ರೆಸ್ ಆಳ್ವಿಕೆಯ ವೇಳೆ (ಗುಜರಾತಿನಲ್ಲಿ) ವರ್ಷದ 365 ದಿನಗಳ ಪೈಕಿ 250 ದಿನ ಕಫ್ರ್ಯೂ ಇರುತ್ತಿತ್ತು. ದಿನದಲ್ಲಿ ಕೇವಲ ಏಳು ತಾಸು ವಿದ್ಯುತ್ ಸಿಗುತ್ತಿದ್ದ ರಾಜ್ಯದಲ್ಲೀಗ ಪೂರ್ತಿ 24 ತಾಸು ವಿದ್ಯುತ್ ಲಭ್ಯವಿದೆ. ಯುವಜನತೆ ತಮ್ಮ ಉಜ್ಜ್ವಲ ಭವಿಷ್ಯವು ಬಿಜೆಪಿಯ ಜೊತೆಗಿದೆ ಎಂದು ತಿಳಿದಿದ್ದಾರೆ” ಎಂದರು.
“ನಾವು ರಾಜ್ಯದಲ್ಲಿ 9 ಹೆದ್ದಾರಿಗಳನ್ನು ನಿರ್ಮಿಸಿದೆವು. ಉತ್ತಮ ಶಿಕ್ಷಣ ಸಂಸ್ಥೆಗಳನ್ನು ರೂಪಿಸಿದೆವು. ಹಳ್ಳಿಗಳಿಗೂ ಉತ್ತಮ ರಸ್ತೆ ಆಗಿದೆ. ಸ್ಟಾರ್ಟಪ್ಗಳು ಬರುತ್ತಿವೆ. ರಾಜ್ಯದಲ್ಲಿ ಅಭಿವೃದ್ಧಿಯ ವಾತಾವರಣವನ್ನು ಸೃಷ್ಟಿಸಿದ್ದೇವೆ. ಇಪ್ಪತ್ತೇಳು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. 1990ರ ಬಳಿಕ ಯಾವುದೇ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿಲ್ಲ. ಈ ಸಲ ಕೆಲವು ಹಿರಿಯರಿಗೆ ಟಿಕೆಟ್ ನೀಡಿಲ್ಲ. ಆದರೂ ಯಾರೂ ಮುನಿಸಿಕೊಂಡಿಲ್ಲ. ಹೊಸಬರಿಗೆ ಅವಕಾಶ ಕೊಡುವುದಕ್ಕಾಗಿ ಈ ವ್ಯವಸ್ಥೆ” ಎಂದ ಅಮಿತ್ ಶಾ, ಎಲ್ಲೆಡೆ ಮೋದಿ ಅವರ ಹೆಸರೇ ಏಕೆಂದು ಕೇಳಿದಾಗ, “ಈಗ ಗುಜರಾತಿನಲ್ಲಿ 182 ಶಾಸಕರಿದ್ದಾರೆ. ಅವರೆಲ್ಲರ ಹೆಸರು ಹೇಳುತ್ತ ಕೂರಲು ಸಾಧ್ಯವೆ? ಸರ್ವೋಚ್ಚ ನಾಯಕನ ಹೆಸರು ಹೇಳುವುದರಲ್ಲಿ (ಬಳಸಿಕೊಳ್ಳುವುದರಲ್ಲಿ) ತಪ್ಪೇನೂ ಇಲ್ಲ. ಜನ ಮೋದಿ ಸರ್ಕಾರದ ಸಾಧನೆಯನ್ನು ನೋಡಿ ವೋಟು ಹಾಕುತ್ತಾರೆಯೇ ಹೊರತು ಪ್ರತಿಪಕ್ಷದವರ ಸುಳ್ಳು ಆಶ್ವಾಸನೆಗಳನ್ನು ಕೇಳಿ ಅಲ್ಲ” ಎಂದು ಉತ್ತರಿಸಿದ್ದರು.
ಆತ್ಮನಿರ್ಭರ ಭಾರತ
ಮೋದಿ ಅವರ ಆತ್ಮನಿರ್ಭರ ಭಾರತ ಅಭಿಯಾನವು ದೇಶದ ಆರ್ಥಿಕತೆಯ ಸ್ವರೂಪವನ್ನೇ ಬದಲಿಸುತ್ತಿದೆ. ಅವರು ಸ್ವದೇಶೀ ಆಂದೋಲನದ ಹೃದಯವನ್ನು ತೆಗೆದುಕೊಂಡು ಆತ್ಮನಿರ್ಭರ ಭಾರತ ಅಭಿಯಾನವನ್ನು ರೂಪಿಸಿದ್ದಾರೆ. ಅಭಿಯಾನವು ತನಗೆ ಅನುಕೂಲವಾದ ದೇಶೀಯ ಕೈಗಾರಿಕೆಗಳನ್ನು ಬಲಪಡಿಸಲು ಮತ್ತು ಅವುಗಳನ್ನು ಜಾಗತಿಕ ಬ್ರಾಂಡ್ಗಳಾಗಿ ಉತ್ತೇಜಿಸಲು ಬಯಸುತ್ತದೆ. ಮತ್ತೊಂದೆಡೆ ಸ್ಥಳೀಯ ಮತ್ತು ಜಾಗತಿಕವನ್ನು ಬೆಸೆಯಲು (ತೊಡಗಿಸಲು) ವಿದೇಶೀ ನೇರ ಹೂಡಿಕೆಯನ್ನು (ಎಫ್ಡಿಐ) ಸ್ವಾಗತಿಸುತ್ತದೆ. ಆದ್ದರಿಂದ ಆತ್ಮನಿರ್ಭರವನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಾಗುವುದಿಲ್ಲ. ಇದು ಸ್ಥಳೀಯ ಮತ್ತು ವಿದೇಶೀ ಹೂಡಿಕೆಗಾಗಿ ರೂಪಿಸಿದ ಸಮಗ್ರ ಮಿಶ್ರಣವಾಗಿದೆ. ಬಿಕ್ಕಟ್ಟುಗಳನ್ನು ಅವಕಾಶಗಳಾಗಿ ಪರಿವರ್ತಿಸಬೇಕು, ಉದ್ಯೋಗ ಸೃಷ್ಟಿಸಬೇಕು; ಬಡತನ ನಿರ್ಮೂಲನೆ, ಬೇಡಿಕೆ-ಪೂರೈಕೆ ಸರಪಳಿಯ ಪುನರುಜ್ಜೀವನ, ಜನಶಕ್ತಿಯನ್ನು ಆರ್ಥಿಕ ಅಭಿವೃದ್ಧಿಯಲ್ಲಿ ಬಳಸಿಕೊಳ್ಳುವುದು – ಇವೆಲ್ಲ ಆತ್ಮನಿರ್ಭರದ ವ್ಯಾಪ್ತಿಯಲ್ಲಿ ಬರುತ್ತವೆ. ಇದು ಗಾಂಧಿಯವರನ್ನು ನಿರಂತರವಾಗಿ ಸಮಕಾಲೀನಗೊಳಿಸುವ ಪ್ರಯತ್ನ ಕೂಡ ಆಗಿದೆ. ಆ ನಿಟ್ಟಿನಲ್ಲಿ ಸರ್ಕಾರ ಖಾದಿ, ಗ್ರಾಮೋದ್ಯೋಗ ಮತ್ತು ಸಣ್ಣ ಕೈಗಾರಿಕೆಗಳನ್ನು ಬೆಳೆಸುತ್ತಿದೆ – ಎಂದು ವಿಶ್ಲೇಷಿಸಲಾಗಿದೆ.
ಹೊಸ ಲಾಜಿಸ್ಟಿಕ್ಸ್ ನೀತಿ
“ಆಫ್ರಿಕದ ಚೀತಾಗಳು ಭಾರತದ ಮಣ್ಣಿಗೆ ಆಗಮಿಸಿದ (ಮರಳಿದ) ದಿನವೇ ಹೊಸ ಲಾಜಿಸ್ಟಿಕ್ಸ್ ನೀತಿಯನ್ನು ಘೋಷಿಸಲಾಯಿತು. ಈ ಮೂಲಕ ಪ್ರಧಾನಿ ‘ನೀವು ಚೀತಾಗಳ ವೇಗದಲ್ಲಿ ಸರಕುಗಳನ್ನು ಸಾಗಿಸುತ್ತೀರಿ ಎಂದು ನಿರೀಕ್ಷಿಸುತ್ತೇನೆ’ ಎಂದು ಲಾಜಿಸ್ಟಿಕ್ಸ್ ಕ್ಷೇತ್ರಕ್ಕೆ ಸಂದೇಶ ನೀಡಿದರು. ಹೊಸ ನೀತಿಯೊಂದಿಗೆ ಭಾರತವು ಮುಂದುವರಿದ ದೇಶವಾಗಲು ಖಂಡಿತ ಚೀತಾದಂತೆ ರಭಸವಾಗಿ ಮುನ್ನುಗ್ಗಲಿದೆ ಎಂದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು ಭಾರತದ ಅಭ್ಯುದಯವನ್ನು ವೇಗಗೊಳಿಸಲು ಕೈಗೊಂಡ ಇತ್ತೀಚಿನ ಕ್ರಮವೆಂದರೆ ಹೊಸ ಲಾಜಿಸ್ಟಿಕ್ಸ್ ನೀತಿ. ಸೂಕ್ತ ಉತ್ಪನ್ನವನ್ನು ಸೂಕ್ತ ಸ್ಥಿತಿಯಲ್ಲಿ, ಸೂಕ್ತ ಸ್ಥಳದಲ್ಲಿ, ಸೂಕ್ತ ಸಮಯದಲ್ಲಿ, ಸೂಕ್ತ ಗ್ರಾಹಕರಿಗೆ ತಲಪಿಸುವುದು ಇದರ ಉದ್ದೇಶ. ಹೊಸ ನೀತಿಯಿಂದ ಸಣ್ಣ ರೈತರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು, ದೊಡ್ಡ ಕಾರ್ಖಾನೆಗಳು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ. ಇದರಿಂದ ಕೋಟ್ಯಂತರ ಉದ್ಯೋಗಗಳು ಸೃಷ್ಟಿಯಾಗುವುದರಿಂದ ಆರ್ಥಿಕತೆಯ ಎಂಜಿನ್ ವೇಗಗೊಳ್ಳುತ್ತದೆ ಮತ್ತು ಪುನಶ್ಚೇತನಗೊಳ್ಳುತ್ತದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಣ ಅಸಮಾನತೆ ದೂರವಾಗುತ್ತದೆ. ಸರಕು ಸಾಗಾಟ ಮತ್ತು ಜನರ ಸಂಚಾರ ವೇಗಗೊಳ್ಳುವುದರಿಂದ ದಕ್ಷತೆ ಬಂದು ಉಳಿತಾಯ ಸಾಧ್ಯವಾಗುತ್ತದೆ. ಲಾಜಿಸ್ಟಿಕ್ಸ್ ವೆಚ್ಚವನ್ನು ಜಿಡಿಪಿಯ ಶೇ. 13-14ರಿಂದ ಒಂದಂಕಿಗೆ ಇಳಿಸುತ್ತದೆ. ಇದರಿಂದ ಭಾರೀ ಲಾಭ ಸಾಧ್ಯ – ಎಂದವರು ಹೇಳಿದ್ದಾರೆ.
ಕಡಮೆ ಮೌಲ್ಯದ ಸರಕುಗಳ ಸಾಗಾಟಕ್ಕೆ ಈಗ ದೊಡ್ಡ ವೆಚ್ಚ ಆಗುತ್ತಿದೆ. ಅದು ಇಳಿದಾಗ ರೈತರು, ಸಣ್ಣ ಕೈಗಾರಿಕೆಯವರಿಗೆ ಬಹಳಷ್ಟು ಲಾಭವಾಗುತ್ತದೆ. ಉತ್ತಮ ಲಾಜಿಸ್ಟಿಕ್ಸ್ನಿಂದ ಈ ಸರಕುಗಳು ಬಹುದೂರಕ್ಕೆ ಬಹುಬೇಗ ಸಾಗಾಟವಾಗಬಹುದು. ಅದರಿಂದ ಹೊಸ ಮಾರುಕಟ್ಟೆ ಸಿಗಲು ಸಾಧ್ಯ. ಕೃಷಿ ಉತ್ಪನ್ನಗಳ ಶೀಘ್ರ ಸಾಗಾಟದಿಂದ ರೈತರಿಗೆ ಲಾಭವಾಗುತ್ತದೆ; ಮತ್ತು ಗ್ರಾಹಕರಿಗೆ ವಸ್ತುಗಳು ಅಗ್ಗ ಬೆಲೆಯಲ್ಲಿ ಸಿಗುತ್ತವೆ. ಏಕೆಂದರೆ ಇಲ್ಲಿ ಮಧ್ಯವರ್ತಿಗಳ ಅಗತ್ಯ ಇರುವುದಿಲ್ಲ – ಎಂದು ಸಚಿವ ಗೋಯಲ್ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಫೋನ್ ರಫ್ತು
ಮೊಬೈಲ್ ಫೋನ್ಗಳ ಉತ್ಪಾದನೆ ಮತ್ತು ರಫ್ತಿನಲ್ಲಿ ಭಾರತ ಒಂದು ವಿಕ್ರಮವನ್ನೇ ಸಾಧಿಸಲು ಹೊರಟಿದೆ. ಜಗತ್ತು ಭಾರೀ ವೇಗದಲ್ಲಿ ಡಿಜಿಟಲೀಕರಣಗೊಳ್ಳುತ್ತಿದ್ದಂತೆ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಭವಿಷ್ಯದ ಪ್ರಮುಖ ಉದ್ಯಮಗಳಲ್ಲಿ ಒಂದಾಗಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು 2026ರ ವೇಳೆಗೆ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಭಾರತವನ್ನು 30 ಸಾವಿರ ಕೋಟಿ ಡಾಲರ್ (24 ಲಕ್ಷ ಕೋಟಿ ರೂ.) ಹಬ್ ಮಾಡಬೇಕೆಂಬ ಗುರಿಯನ್ನು ಇರಿಸಿಕೊಂಡಿದ್ದಾರೆ.
ಈ ಸರ್ಕಾರದ ಅಡಿಯಲ್ಲಿ ವೇಗವಾಗಿ ಬೆಳೆದ ಉದ್ಯಮಗಳಲ್ಲಿ ಮೊಬೈಲ್ ಫೋನ್ ಉತ್ಪಾದನೆಯೂ ಒಂದು. 2014ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪತನಗೊಳ್ಳುವಾಗ ದೇಶದಲ್ಲಿ ಬಳಕೆಯಾಗುತ್ತಿದ್ದ ಮೊಬೈಲ್ ಫೋನ್ಗಳಲ್ಲಿ ಶೇ. 80ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಕಳೆದ ಹಣಕಾಸು ವರ್ಷದಲ್ಲಿ (2021-2022) ದೇಶದಲ್ಲಿ ಮಾರಾಟವಾದ ಮೊಬೈಲ್ಗಳು ಮೌಲ್ಯದ ಆಧಾರದಲ್ಲಿ ಶೇ. 95ರಷ್ಟು ಮತ್ತು ಉತ್ಪನ್ನದ ಆಧಾರದಲ್ಲಿ ಶೇ. 98.8ರಷ್ಟು ಭಾರತದಲ್ಲಿಯೇ ಉತ್ಪಾದನೆಯಾಗಿವೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರು ತಿಳಿಸಿದ್ದಾರೆ. ಯುಪಿಎ ಆಳ್ವಿಕೆಯ ವೇಳೆ ನಡೆದ 2ಜಿ ಹಗರಣ ಉತ್ಪಾದನಾ ಕ್ಷೇತ್ರಕ್ಕೆ ಒಂದು ಆಘಾತ ನೀಡಿದರೆ ನೋಕಿಯಾ ಕಂಪೆನಿ ಪತನದ ಅನಂತರ ಕ್ಷೇತ್ರವು ಘಾಸಿಗೊಂಡಿತು. ಮೋದಿ ಸರ್ಕಾರವು ಒಂದೆಡೆ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಿದರೆ ಇನ್ನೊಂದೆಡೆ ಆಮದನ್ನು ಕಡಮೆ ಮಾಡಲು ಕ್ರಮಕೈಗೊಂಡಿತು. ಈ ಕ್ರಮಗಳಿಂದ 2021ರ ವೇಳೆಗೆ ಪ್ರಚಂಡ ಫಲಿತಾಂಶವು ಕಂಡುಬಂತು. ಸ್ವಾವಲಂಬನೆಯ ಬಳಿಕ ಈಗ ಮೊಬೈಲ್ ಫೋನ್ ರಫ್ತನ್ನು ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ಭಾರತದಿಂದ ರಫ್ತಾಗುವ ಟಾಪ್ 10 ಸರಕುಗಳಲ್ಲಿ ಮೊಬೈಲ್ ಫೋನ್ ಇರುವಂತೆ ಮಾಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.
ರಾಗಿ ಪರ ವಕೀಲಿ
ಆರ್ಥಿಕತೆ ಇರಲಿ, ಜನರ ಜೀವನಕ್ಕೆ ಸಂಬಂಧಪಟ್ಟ ವಿಷಯವಿರಲಿ, ಪ್ರಧಾನಿ ಮೋದಿ ಅವರು ಸಣ್ಣ-ಪುಟ್ಟ ವಿಷಯಗಳನ್ನು ಕೂಡ ಗಮನಿಸುತ್ತಾರೆ ಎಂಬುದಕ್ಕೆ ಕೆಲವು ತಿಂಗಳು ಹಿಂದೆ ಜಿ-20 ಸಭೆಯಲ್ಲಿ ರಾಗಿಯನ್ನು ಕುರಿತು ಅವರಾಡಿದ ಮಾತನ್ನು ಉದಾಹರಿಸಬಹುದು. “ಅಪೌಷ್ಟಿಕತೆ ಮತ್ತು ಹಸಿವನ್ನು ಹಿಂಗಿಸುವಲ್ಲಿ ರಾಗಿಯ ಪಾತ್ರ ತುಂಬ ದೊಡ್ಡದು” ಎಂದು ಹೇಳುವ ಮೂಲಕ ಮೋದಿ ಭಾರತದ ಸೂಪರ್ಫುಡ್ ರಾಗಿಯ ಕಡೆಗೆ ಜಗತ್ತಿನ ಗಮನವನ್ನು ಸೆಳೆದರು. “ಭಾರತದಲ್ಲಿ ಸುಸ್ಥಿರ ಆಹಾರ ಭದ್ರತೆಗಾಗಿ ನಾವು ನೈಸರ್ಗಿಕ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದೇವೆ. ರಾಗಿಯಂತಹ ಪೌಷ್ಟಿಕ, ಸಾಂಪ್ರದಾಯಿಕ ಆಹಾರಧಾನ್ಯವನ್ನು ಮತ್ತೆ ಜನಪ್ರಿಯಗೊಳಿಸುತ್ತಿದ್ದೇವೆ. ಮುಂದಿನ ವರ್ಷವನ್ನು ನಾವು ಅಂತಾರಾಷ್ಟ್ರೀಯ ‘ರಾಗಿ ವರ್ಷ’ವನ್ನಾಗಿ ಆಚರಿಸಬೇಕು” ಎಂದು ಮೋದಿ ತಮ್ಮ ಭಾಷಣದಲ್ಲಿ (ದಿನಾಂಕ 17-11-2022) ಹೇಳಿದರು. ಭಾರತದ ಈ ನಿಲವಿಗೆ ಮಹತ್ತ್ವವಿದೆ; ಏಕೆಂದರೆ ಜಗತ್ತಿನ ಒಟ್ಟು ರಾಗಿಯಲ್ಲಿ ಶೇ. 41ರಷ್ಟನ್ನು ಭಾರತದಲ್ಲಿಯೇ ಬೆಳೆಯಲಾಗುತ್ತದೆ.
ಡಾ. ಮೂರ್ತಿ ಮೆಚ್ಚುಗೆ
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಆಡಳಿತ ಮತ್ತು ಆರ್ಥಿಕ ನಿರ್ವಹಣೆಗೆ ಕಂಪ್ಯೂಟರ್ ಕ್ಷೇತ್ರದ ದಿಗ್ಗಜ, ಇನ್ಫೋಸಿಸ್ ಸಹಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರಿಂದಲೇ ಶ್ಲಾಘನೆ ಬಂದಿದೆ. “ಯುಪಿಎ ಕಾಲದಲ್ಲಿ ದೇಶದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಂತಿತ್ತು. ಡಾ|| ಮನಮೋಹನ್ಸಿಂಗ್ ಅವರು ಪ್ರಧಾನಿಯಾಗಿ ಯಶಸ್ವಿಯಾಗಲಿಲ್ಲ. ಅವರು ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ. 2008-2012ರ ವೇಳೆ ನಾನು ಜಾಗತಿಕ ಸಂಸ್ಥೆ ಎಚ್ಎಸ್ಬಿಸಿಯ ಬೋರ್ಡ್ನಲ್ಲಿದ್ದೆ. ಅಲ್ಲಿ ಭಾರತದ ಹೆಸರು ಬರುತ್ತಲೇ ಇರಲಿಲ್ಲ. ಚೀನಾದ ಹೆಸರು ಮೇಲಿಂದ ಮೇಲೆ ಬರುತ್ತಿತ್ತು. ಡಾ|| ಸಿಂಗ್ ಅವರು ಸಮಯಕ್ಕೆ ಸರಿಯಾಗಿ ನಿರ್ಧಾರಗಳನ್ನು ಕೈಗೊಳ್ಳದ ಕಾರಣ ಎಲ್ಲವೂ ತಡವಾಯಿತು. ಬಹುಪಾಲು ಪಾಶ್ಚಾತ್ಯರು ಭಾರತವನ್ನು ಕೀಳಾಗಿ ಕಾಣುತ್ತಿದ್ದರು. ಆದರೆ ಈಗ ಭಾರತದ ಬಗ್ಗೆ ಉನ್ನತಮಟ್ಟದ ಗೌರವವಿದೆ. ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟಪ್ ಇಂಡಿಯಾಗಳು ದೇಶವನ್ನು ಮುನ್ನೆಲೆಗೆ ತರಲು ನೆರವಾಗಿವೆ. ಕೇವಲ 44 ವರ್ಷಗಳಲ್ಲಿ (1978-2022) ಚೀನಾ ಭಾರತಕ್ಕಿಂತ ಭಾರೀ ಮುಂದೆ ಸಾಗಿದೆ. ಅದರ ಆರ್ಥಿಕತೆ ಭಾರತದ ಆರುಪಟ್ಟು ಇದೆ” ಎಂದು ಡಾ|| ನಾರಾಯಣಮೂರ್ತಿ ಮೋದಿ ಸರ್ಕಾರದ ಸಾಧನೆಯನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಕ್ಷಣಾ ಸಾಮಗ್ರಿ ರಫ್ತು
ಈಚೆಗೆ ವಿಶೇಷ ಪ್ರಗತಿ ಸಾಧಿಸುತ್ತಿರುವ ಕ್ಷೇತ್ರಗಳಲ್ಲಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯೂ ಒಂದು. ಅಲ್ಲಿಯ ಮೇಕ್ ಇನ್ ಇಂಡಿಯಾ ಉಪಕ್ರಮವು ಆತ್ಮನಿರ್ಭರ ಭಾರತದ ಅಂಗವಾಗಿದ್ದು, ವಿನ್ಯಾಸದ ವಿಷಯ ಪ್ರಬಲವೆನಿಸಿದೆ. ದೇಶೀಯ ತಂತ್ರಜ್ಞಾನದ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡ ಕಾರಣ ಕಳೆದ ನಾಲ್ಕು ವರ್ಷಗಳಲ್ಲಿ 2500ಕ್ಕೂ ಅಧಿಕ ಪೇಟೆಂಟ್ ಅರ್ಜಿಗಳು ಸಲ್ಲಿಕೆಯಾಗಿವೆ.
ಮೇಕ್ ಇನ್ ಇಂಡಿಯಾ ನಿರ್ಮಿತ ಶಸ್ತ್ರಾಸ್ತ್ರಗಳು, ಸಮರ ವಾಹನಗಳು ಮತ್ತು ಪ್ಲಾಟ್ಫಾರ್ಮ್ಗಳನ್ನು ಹೊಂದಿದಾಗ ಅವುಗಳ ಸಾಮಥ್ರ್ಯಕ್ಕೆ ಹೊಸ ಆಯಾಮ ಬರುತ್ತದೆ. ಇಂತಹ ಶಸ್ತ್ರಾಸ್ತ್ರಗಳ ಸಾಮಥ್ರ್ಯ ಮತ್ತು ಬಳಕೆಯ ಬಗ್ಗೆ ಶತ್ರುದೇಶಗಳಿಗೆ ಮಾಹಿತಿ ಇಲ್ಲದಿರುವುದರಿಂದ ಅವುಗಳ ಬಳಕೆಯಿಂದ ನಮ್ಮ ಸೇನೆ ಶತ್ರುದೇಶಗಳಿಗೆ ಅಚ್ಚರಿ-ಆಘಾತ ಉಂಟುಮಾಡಬಲ್ಲದೆಂದು ಲೇಖಕ ಗಿರೀಶ್ ಲಿಂಗಣ್ಣ ಅವರು ತಿಳಿಸಿದ್ದಾರೆ.
“ಭಾರತೀಯ ಸೇನೆ ದೇಶೀಯ ನಿರ್ಮಾಣದ ಮೇಲೆ ನಂಬಿಕೆಯಿಡಲು ದೇಶದಲ್ಲಿ ಅತ್ಯಂತ ವೇಗವಾಗಿ ನಡೆಯುತ್ತಿರುವ ಆವಿಷ್ಕಾರಗಳೇ ಕಾರಣ. ಇದು ಸರ್ಕಾರ ಕೈಗೊಳ್ಳುತ್ತಿರುವ ನೀತಿ-ನಿಲವುಗಳ ಪರಿಣಾಮವಾಗಿದೆ. ಹಿಂದೆ ಒಂದು ಹೊತ್ತಿಗೆ ಕೆಲವು ತಂತ್ರಜ್ಞಾನಗಳು ಕಾರ್ಯಗತವಾದರೆ ಈಗ ಭಾರತೀಯ ಸೇನೆ ಏಕಕಾಲಕ್ಕೆ ನೂರಾರು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. ದೇಶದ ಸ್ಟಾರ್ಟಪ್ ಕಂಪೆನಿಗಳು ಈಚೆಗೆ ಅತ್ಯಂತ ಕಡಮೆ ಅವಧಿಯಲ್ಲಿ (ಎರಡು ವರ್ಷ) ಅಭಿವೃದ್ಧಿಪಡಿಸಿದ 14 ಹೊಸ ತಂತ್ರಜ್ಞಾನಗಳನ್ನು ನಮ್ಮ ಸೇನೆ ಪಡೆದುಕೊಳ್ಳಲಿದೆ. ಮೊದಲೆಲ್ಲ ಇಂತಹ ತಂತ್ರಜ್ಞಾನ ಅಭಿವೃದ್ಧಿಗೆ ದಶಕಗಳೇ ಹಿಡಿಯುತ್ತಿದ್ದವು” ಎಂದವರು ವಿವರಿಸಿದ್ದಾರೆ.
ಸರ್ಕಾರೀ ಕ್ಷೇತ್ರದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅಂತೂ ಮೋದಿ ಸರ್ಕಾರದ ಅಡಿಯಲ್ಲಿ ಮೈಕೊಡವಿಕೊಂಡು ಎದ್ದುನಿಂತಿದೆ; ಯುಪಿಎ ಸರ್ಕಾರ ಅದನ್ನು ಸರಿಯಾಗಿ ಬಳಸಿಕೊಳ್ಳಲೇ ಇಲ್ಲ. ವರ್ಷಕ್ಕೆ 16 ಯುದ್ಧವಿಮಾನಗಳನ್ನು ನಿರ್ಮಿಸುವ ಎಚ್ಎಎಲ್ ಸಾಮಥ್ರ್ಯವನ್ನೀಗ ಇಮ್ಮಡಿಗೊಳಿಸುವ (30 ಯುದ್ಧವಿಮಾನ) ಪ್ರಕ್ರಿಯೆ ಸಾಗಿದೆ. ಹಲವು ದೇಶಗಳಿಂದ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಾಗಿ ವಿಮಾನಗಳನ್ನು ನಿರ್ಮಿಸಲು ಎಚ್ಎಎಲ್ ಸಜ್ಜುಗೊಳ್ಳುತ್ತಿದೆ. ಎಚ್ಎಎಲ್ ಈಗಾಗಲೆ ಲಘು ಬಳಕೆ ಹೆಲಿಕಾಪ್ಟರ್ (ಎಲ್ಯುಎಚ್) ಗಳನ್ನು ವಿನ್ಯಾಸಗೊಳಿಸಿ ನಿರ್ಮಿಸಿದ್ದು ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್ಗಳ ಬದಲಿಗೆ ಅದನ್ನು ಬಳಸಲು ಆಲೋಚಿಸಲಾಗಿದೆ. ಸಾಮಥ್ರ್ಯದ ಬಗ್ಗೆ ಹೇಳುವುದಾದರೆ, ಕಳೆದ ಇಪ್ಪತ್ತು ವರ್ಷಗಳಲ್ಲಿ ಸುಮಾರು 300 ಹೆಲಿಕಾಪ್ಟರ್ಗಳನ್ನು ತಯಾರಿಸಿದ ಎಚ್ಎಎಲ್ ಈಗ ವರ್ಷಕ್ಕೆ 50ಕ್ಕೂ ಹೆಚ್ಚು ಹೆಲಿಕಾಪ್ಟರ್ ತಯಾರಿಸುವ ಸಾಮಥ್ರ್ಯ ಹೊಂದಿದೆ. ಅವುಗಳ ರಫ್ತಿನ ಕುರಿತು ಆಲೋಚನೆ ಸಾಗಿದೆ. ದೇಶೀಯ ಮಾರುಕಟ್ಟೆಯಿಂದಲೇ ಹೆಚ್ಚಿನ ರಕ್ಷಣಾ ಸಾಮಗ್ರಿಗಳನ್ನು ಖರೀದಿಸಬೇಕೆಂದು ಭಾರತೀಯ ಸೇನೆ ನಿರ್ಧರಿಸಿದೆ. ದೇಶದ ರಕ್ಷಣಾ ಉತ್ಪನ್ನಗಳ ವಲಯದ ಸ್ವಾವಲಂಬನೆಯ ಮೇಲೆ ಇಟ್ಟಿರುವ ನಂಬಿಕೆ ಸರಿಯಾಗಿಯೇ ಇದೆ ಎಂಬುದನ್ನು ಈಚಿನ ಭೌಗೋಳಿಕ-ರಾಜಕೀಯ ಪರಿಸ್ಥಿತಿಯು ಸಾಬೀತುಪಡಿಸುತ್ತಿದೆ ಎಂದು ಹೇಳುವ ಗಿರೀಶ್ ಲಿಂಗಣ್ಣ ಭಾರತೀಯ ಸಮರ ವಾಹನಗಳು ಜಗತ್ತನ್ನು ಆಳುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. (‘ವಿಶ್ವವಾಣಿ’ಯಲ್ಲಿ ಲೇಖನ).
ದೇಶದ ವಿವಿಧ ಭಾಗಗಳಲ್ಲಿ ಬೃಹತ್ ಹೆದ್ದಾರಿಗಳ ನಿರ್ಮಾಣವು ನಡೆಯುತ್ತಿದ್ದು ಅದು ಖಂಡಿತವಾಗಿಯೂ ಮೋದಿ ಸರ್ಕಾರದ ಮಹತ್ತ್ವದ ಸಾಧನೆಗಳ ಪಟ್ಟಿಗೆ ಸೇರಲಿದೆ. ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇದನ್ನು ಸಮರೋಪಾದಿಯಲ್ಲಿ ನಡೆಸುತ್ತಿದ್ದು ಅಂತಹ ಒಂದು ದಶಪಥ ರಸ್ತೆಯು ಈಚೆಗೆ ಬೆಂಗಳೂರು-ಮೈಸೂರು ನಡುವೆ ಉದ್ಘಾಟನೆಗೊಂಡಿತು. ಈ ರಸ್ತೆಗಳಲ್ಲಿ ಪ್ರಯಾಣಕ್ಕೆ ತಗಲುವ ಸಮಯ ಹಿಂದಿನ ಸಮಯದ ಅರ್ಧದಷ್ಟು ಅಥವಾ ಅದಕ್ಕಿಂತಲೂ ಕಡಮೆ. ಸರ್ಕಾರ ಪ್ರಕಟಿಸಿದ ಹೊಸ ಲಾಜಿಸ್ಟಿಕ್ಸ್ ನೀತಿಗೆ ಇದು ಪೂರಕವಾಗಿದ್ದು, ಸಮಾಜದ ವಿವಿಧ ವರ್ಗಗಳು ಇದರ ನೇರ ಪ್ರಯೋಜನವನ್ನು ಪಡೆಯಲಿವೆ. ಸಮಯದ ಉಳಿತಾಯ, ಇಂಧನ ಉಳಿತಾಯ, ದೂರದ ಮಾರುಕಟ್ಟೆಗಳ ಲಭ್ಯತೆ ಮುಂತಾದ ಲಾಭಗಳಿಗೆ ಇಡೀ ದೇಶವೇ ಸಜ್ಜಾಗುತ್ತಿದೆ ಎಂದರೆ ತಪ್ಪಲ್ಲ.
ಧರ್ಮ-ಸಂಸ್ಕೃತಿ
ಹಿಡಿದ ಕೆಲಸವನ್ನು ಪಟ್ಟುಹಿಡಿದು ಕಾರ್ಯಗತಗೊಳಿಸುವ ನರೇಂದ್ರ ಮೋದಿ ಅವರ ಸ್ವಭಾವದಿಂದ ದೇಶದ ಅನೇಕ ಪವಿತ್ರ ಕ್ಷೇತ್ರಗಳಿಗೆ ಪ್ರಯೋಜನವಾಗುತ್ತಿದೆ. ಅಯೋಧ್ಯೆಯ ರಾಮಮಂದಿರ ನಿರ್ಮಾಣದ ವಿಷಯದಲ್ಲಿ ಅವರ ಸರ್ಕಾರವು ವಹಿಸಿದ ತಾಳ್ಮೆ, ಜೊತೆಗೆ ನ್ಯಾಯಾಲಯ ಸೇರಿದಂತೆ ವಿವಿಧ ಸ್ಥಾನಗಳಲ್ಲಿ ಹಂತಹಂತವಾಗಿ ವಿಜಯ ಗಳಿಸುತ್ತ ಹೋದದ್ದು, ವಿಘ್ನಗಳ ನಿವಾರಣೆ, ಅಂತಿಮವಾಗಿ ಬೃಹತ್ ಮಂದಿರದ ನಿರ್ಮಾಣ ಇದೆಲ್ಲ ಕೇವಲ ಅವರಿಗೇ ಸಾಧ್ಯ ಎನ್ನುವಂಥದು. ಬರುವ ಲೋಕಸಭಾ ಚುನಾವಣೆಗೆ ಮುನ್ನ ಗರ್ಭಗುಡಿ ಸೇರಿದಂತೆ ಮಂದಿರದ ನಿರ್ಮಾಣವು ಪೂರ್ಣಗೊಂಡು ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯು ಜರಗುವುದೆಂದು ನಂಬಲಾಗಿದೆ. ಇದು ದೇಶದ ಹಿಂದುಗಳ ಪಾಲಿಗೆ ಒಂದು ಸಾರ್ಥಕತೆಯ ಕ್ಷಣ ಎನಿಸಲಿದೆ.
ಇನ್ನು ಹಿಂದುಗಳ ಶ್ರದ್ಧಾಕೇಂದ್ರ ವಾರಾಣಸಿಯನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ಮೋದಿಯವರು ಕಾಶಿ ವಿಶ್ವನಾಥ ಮಂದಿರದ ಪುನರುಜ್ಜೀವನವನ್ನು ಕಳೆದ ವರ್ಷ ಪೂರ್ಣಗೊಳಿಸಿದರು. ದೇವಳದ ಪರಿಸರವು ನಡೆದಾಡಲು ಸಾಧ್ಯವಾಗದ ಕೊಂಪೆಯಂತಿದ್ದು, ಕ್ಷೇತ್ರಕ್ಕೆ ಭೇಟಿ ನೀಡಿದ ಶ್ರದ್ಧಾಳು ಭಕ್ತರು ಬೇಸರದಿಂದ ಮರಳುವ ಪರಿಸ್ಥಿತಿಯಿತ್ತು. ಅದನ್ನೆಲ್ಲ ತೆರವುಗೊಳಿಸಿ ಶತಮಾನಗಳಿಂದ ಅಲ್ಲಿ ಬೇರುಬಿಟ್ಟಿದ್ದ ಅವ್ಯವಸ್ಥೆ-ಗೊಂದಲಗಳಿಗೆ ಮೋಕ್ಷ ಕಾಣಿಸಿದರು. ಇದಕ್ಕೆ ಕಲಶವಿಟ್ಟಂತೆ ಸಮೀಪವೇ ಹರಿಯುವ ಮಲಿನ ಗಂಗೆಯನ್ನು ಶುಚಿಗೊಳಿಸಿ ಲೋಕಪಾವನೆಯ ಪಟ್ಟವನ್ನು ಆಕೆಗೆ ಮರಳಿ ಕೊಡಿಸಿದರು. ಅದು ಭಗೀರಥ ಯತ್ನವೇ ಆಗಿತ್ತು. ಗಬ್ಬುನಾರುತ್ತಿರುವ ವಾರಾಣಸಿಯ ಘಾಟ್ಗಳೀಗ ಶುಭ್ರವಾಗಿವೆ. ದೇಶಕ್ಕೆ ಬರುವ ವಿದೇಶೀ ಗಣ್ಯರು ಗಂಗಾ ತಟದಲ್ಲಿ ಕುಳಿತು ಸಮಯ ಕಳೆಯಲು ಇಷ್ಟಪಡುತ್ತಿದ್ದಾರೆ. ಚಿತ್ತಾಕರ್ಷಕವಾದ ಗಂಗಾರತಿಯನ್ನು ನೋಡುತ್ತಿದ್ದಾರೆ.
ಕಳೆದ ಅಕ್ಟೋಬರ್ನಲ್ಲಿ ಉಜ್ಜೈನಿಯ ಮಹಾಕಾಲ ದೇವಳದ ಕಾರಿಡಾರ್ ಕೂಡ ನಿರ್ಮಾಣಗೊಂಡಿತು; ಅದರ ಹಿಂದೆ ಕೂಡ ಮೋದಿ ಸರ್ಕಾರದ ಇಚ್ಛಾಶಕ್ತಿಯನ್ನು ಗುರುತಿಸಬಹುದು. ಈ ಪಟ್ಟಿಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದುಃಸ್ಥಿತಿಯಲ್ಲಿರುವ ಹಿಂದೂ ಶ್ರದ್ಧಾಕೇಂದ್ರಗಳು ಬೇಕಾದಷ್ಟಿವೆ. ಅವುಗಳನ್ನೆಲ್ಲ ಜೀರ್ಣೋದ್ಧಾರ ಮಾಡಿದರೆ ಧಾರ್ಮಿಕ-ಸಾಂಸ್ಕøತಿಕ ಕಾರಿಡಾರ್ ಇನ್ನಷ್ಟು ಸಶಕ್ತವಾಗಲು ಸಾಧ್ಯ ಎನ್ನುವ ನಂಬಿಕೆ ಬಿಜೆಪಿಗಿದ್ದರೆ ಅದನ್ನು ಅಲ್ಲಗಳೆಯಲಾಗದು. ಈ ದಿಸೆಯಲ್ಲಿ ಮೋದಿ ಸರ್ಕಾರವು ಗಟ್ಟಿಯಾದ ಹೆಜ್ಜೆಗಳನ್ನು ಇಡುತ್ತಿದೆ ಎಂದು ನಂಬಬಹುದು.
‘ನಮಾಮಿ ಗಂಗೇ’
‘ನಮಾಮಿ ಗಂಗೇ-ನಿರ್ಮಲ ಗಂಗೇ’ ಎನ್ನುವ ಯೋಜನೆಯನ್ನು ಆರಂಭಿಸುವುದರ ಹಿಂದೆ ಮೋದಿ ಸರ್ಕಾರಕ್ಕೆ ಬಹುದೊಡ್ಡ ಕನಸಿತ್ತು. ನಮಾಮಿ ಗಂಗೇ ಎನ್ನುವುದು ಕೇವಲ ನದಿ ಸ್ವಚ್ಛತೆ ಯೋಜನೆಯಲ್ಲ; 2,500 ಕಿ.ಮೀ. ಉದ್ದಕ್ಕೆ ಹರಿಯುವ ಈ ಬೃಹತ್ ನದಿಯ ಪಕ್ಕದಲ್ಲಿ ವಾಸಿಸುವ ಕೋಟ್ಯಂತರ ಜನರ ಹಿತವನ್ನು ಕೂಡ ಅದು ಒಳಗೊಂಡಿತ್ತು. ಆದರೆ ಅದು ಸುಲಭದ ಕೆಲಸವಾಗಿರಲಿಲ್ಲ. ನಗರ-ಪಟ್ಟಣಗಳ ತ್ಯಾಜ್ಯ ನೀರು, ಕೈಗಾರಿಕೆಗಳ ಘನ-ದ್ರವ ತ್ಯಾಜ್ಯಗಳು, ಪಕ್ಕದ ಘಾಟ್ಗಳಲ್ಲಿ ನಡೆಯುವ ಶವದಹನದಂತಹ ಕಾರ್ಯಗಳು – ಎಲ್ಲಕ್ಕೂ ಗಂಗೆಯೇ ಆಸರೆ ಮತ್ತು ಬಲಿ.
ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗಳಿಸಿದ ನೀರಜ್ ಚೋಪ್ರಾ ತನ್ನ ಜಾವೆಲಿನನ್ನು ಈ ಯೋಜನೆಯ ಬಗ್ಗೆ ನೀಡಿದರು; ಅದರ ಹರಾಜಿನಿಂದ ಬಂದ ಹಣ ಯೋಜನೆಗೆ ವಿನಿಯೋಗವಾಯಿತು. ಅದಕ್ಕೆ ಸ್ಫೂರ್ತಿ ಬೇರಾರೂ ಅಲ್ಲ; ಪ್ರಧಾನಿ ನರೇಂದ್ರ ಮೋದಿ ಅವರೇ. ನಮಾಮಿ ಗಂಗೇ ಯೋಜನೆಗಾಗಿ ಪ್ರಧಾನಿ ತಾವು ಸ್ವೀಕರಿಸಿದ ಉಡುಗೊರೆಗಳನ್ನೆಲ್ಲ ಹರಾಜು ಹಾಕುತ್ತ ಬಂದಿದ್ದಾರೆ. ಯೋಜನೆಯ ಬಗ್ಗೆ ಅವರ ನಂಬಿಕೆ ಮತ್ತು ಬದ್ಧತೆಯನ್ನು ಅದು ಹೇಳುತ್ತದೆ. ಡಿಸೆಂಬರ್ 15, 2022ರಂದು ವಿಶ್ವಸಂಸ್ಥೆಯು ಜಗತ್ತಿನ ಮೊದಲ ಹತ್ತು (ಟಾಪ್ ಟೆನ್) ಪರಿಸರ ಪುನರುಜ್ಜೀವನ ಕಾರ್ಯಕ್ರಮಗಳಲ್ಲಿ ನಮಾಮಿ ಗಂಗೇ ಯೋಜನೆಯೂ ಒಂದೆಂದು ಅಂಗೀಕರಿಸಿತು.
ಗಂಗೆಯ ಅನಿರ್ಬಂಧಿತ ಹರಿವು ಮತ್ತು ನಿರ್ಮಲೀಕರಣಕ್ಕಾಗಿ 2014ರಲ್ಲಿ ‘ನಮಾಮಿ ಗಂಗೇ’ ಯೋಜನೆಯನ್ನು ಆರಂಭಿಸಲಾಯಿತು. ಅದಕ್ಕೆ ಜನಗಂಗಾ (ಸಾರ್ವಜನಿಕರ ಭಾಗವಹಿಸುವಿಕೆ), ಜ್ಞಾನಗಂಗಾ, ಸ್ವಯಂ ಸುಸ್ಥಿರ ಆರ್ಥಿಕ ನಿರ್ವಹಣೆ ಎನ್ನುವ ಮೂರು ಅಂಗಗಳು ಯೋಜನೆಯ ಅಡಿಯಲ್ಲಿ ಕೊಳಚೆ ನೀರು ಸಂಸ್ಕರಣೆ, ನದಿ ತಟದ ಅಭಿವೃದ್ಧಿ, ನದಿಯ ಸ್ವಚ್ಛತೆ, ಜೀವವೈವಿಧ್ಯ ರಕ್ಷಣೆ, ಅರಣ್ಯೀಕರಣ, ಜನಜಾಗೃತಿ, ಕೈಗಾರಿಕಾ ತ್ಯಾಜ್ಯಗಳ ಮೇಲೆ ನಿಗಾ ಇತ್ಯಾದಿ ಸೇರಿ ಸುಮಾರು 33 ಸಾವಿರ ಕೋಟಿ ರೂ. ಗಳ 400 ಕಾರ್ಯಕ್ರಮಗಳಿಗೆ ಮಂಜೂರಾತಿ ನೀಡಲಾಗಿದೆ.
ತ್ಯಾಜ್ಯ ನೀರಿನ ಸಂಸ್ಕರಣೆಯಲ್ಲಿ ಹೊಸ ಪರಿಣಾಮಕಾರಿ ವಿಧಾನವನ್ನು ಅನುಸರಿಸಲಾಗಿದೆ. ನದಿ ದಡದಲ್ಲಿರುವ ಹೆಚ್ಚು ಮಾಲಿನ್ಯಕಾರಕ ಕಾರ್ಖಾನೆಗಳನ್ನು ಗುರುತಿಸಲಾಗಿದೆ. ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಿಂದ ಅವುಗಳ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಕೈಗಾರಿಕೆಗಳ ತ್ಯಾಜ್ಯ ನೀರು ನದಿಗೆ ನೇರವಾಗಿ ಸೇರುವುದನ್ನು ತಪ್ಪಿಸಲಾಗಿದೆ. ಚರ್ಮಸಂಸ್ಕರಣೆಗೆ ಹೆಸರಾದ ಕಾನ್ಪುರದಲ್ಲಿ ಹೆಚ್ಚಿನ ಕ್ರಮ ಅನುಸರಿಸಲಾಗಿದೆ. ಹಲವಾರು ಸ್ಥಳಗಳಲ್ಲಿ ಗಂಗೆಯ ನೀರಿನ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಕುಂಭಮೇಳದ ವೇಳೆ 20 ಕೋಟಿಗೂ ಹೆಚ್ಚು ಮಂದಿ ಗಂಗೆಯಲ್ಲಿ ಸ್ನಾನ ಮಾಡಿದ್ದಾರೆ. ಇಲ್ಲಿ ಈಗ ಡಾಲ್ಫಿನ್, ಮೊಸಳೆ ಮತ್ತಿತರ ಜಲಚರಗಳು ಕಾಣಸಿಗುತ್ತವೆ. ಗಂಗಾಜಲಾನಯನ ಪ್ರದೇಶದಲ್ಲಿ 30 ಸಾವಿರ ಹೆಕ್ಟೇರ್ ಅರಣ್ಯೀಕರಣ, ಜಲ ಪುನಶ್ಚೇತನ, ಜೌಗುಪ್ರದೇಶ ಸಂರಕ್ಷಣೆ, ಸಾಂಪ್ರದಾಯಿಕ ಜಲಮೂಲಗಳ ಉಜ್ಜೀವನ ಕೂಡ ಸಾಧ್ಯವಾಗಿದೆ; ಹಾಗೂ ನಮಾಮಿಗಂಗೇ ಯೋಜನೆಗೆ ಲಭಿಸಿರುವ ಯಶಸ್ಸು ದೇಶದ ಇತರ ನದಿಗಳ ಪುನರುಜ್ಜೀವನಕ್ಕೆ ಮಾದರಿಯಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ವಿವರಿಸಿದ್ದಾರೆ. ಕಳೆದ ಕುಂಭಮೇಳಕ್ಕೆ ಹೋಗಿ ಬಂದವರ ಮೂಲಕ ಈ ಸಂದೇಶವು ದೇಶಾದ್ಯಂತ ರವಾನೆಯಾಗಿತ್ತು.
ಪಿಎಫ್ಐ ನಿಷೇಧ
ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ಮೋದಿ ಸರ್ಕಾರ ಎಂದೂ ಅಲಕ್ಷಿಸಿದ್ದಿಲ್ಲ; ರಾಜಿಮನೋಭಾವವನ್ನು ತೋರಿದ್ದು ಕೂಡ ಇಲ್ಲ. ಅದಕ್ಕೊಂದು ಉದಾಹರಣೆ ಕಳೆದ ಸೆಪ್ಟೆಂಬರ್ನಲ್ಲಿ ಕೈಗೊಂಡ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತಿತರ ಅಪಾಯಕಾರಿ ಸಂಘಟನೆಗಳ ನಿಷೇಧ. ಹೇಳುವುದಕ್ಕೆ ಅದು ಮುಸ್ಲಿಮರಿಗಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸುವ ಸಂಸ್ಥೆ. ಅದು ಮೇಲ್ನೋಟಕ್ಕೆ ಮಾತ್ರ; ನಿಜವಾಗಿ ಮಾಡುತ್ತಿದ್ದುದೇ ಬೇರೆ. ಅನಾಥರ ಶವಸಂಸ್ಕಾರ (ಕೋವಿಡ್ ವೇಳೆ), ಪತ್ರಿಕಾಗೋಷ್ಠಿ ನಡೆಸಿ ತನ್ನ ನಿಲವನ್ನು ಹೇಳುವುದು, ಪ್ರಜಾಸತ್ತಾತ್ಮಕ ಅಹಿಂಸಾತ್ಮಕ ಪ್ರತಿಭಟನೆಗಳು ಅದರ ಕಪಟತೆಯ ಒಂದು ಮುಖ ಮಾತ್ರ. ನಿಜವಾಗಿ ಅದು ಎಂತಹ ರಕ್ತಪಿಪಾಸು ಎಂಬುದಕ್ಕೆ ನೂಪುರ್ ಶರ್ಮ ವಿವಾದದ ವೇಳೆ ನಡೆದ ಹತ್ಯೆಗಳು ಸಾಕ್ಷಿಯಾದವು; ಹತ್ಯೆಗೂ ತರಬೇತಿ ಕೊಡುವ ಸಂಸ್ಥೆ ಅದು. ಅದಕ್ಕೆಲ್ಲ ವಿದೇಶದಿಂದ ಹಣ ಬರುತ್ತದೆ. ಇಲ್ಲಿ ಭೀಕರ ಹತ್ಯೆ ನಡೆಸಿ ಅದರ ಸಚಿತ್ರ ವರದಿಗಳನ್ನು ಅದು ಪಾಕಿಸ್ತಾನದ ಐಎಸ್ಐ, ಸಿರಿಯ ಮತ್ತಿತರ ಕಡೆಯ ಐಎಸ್ಐನಂತಹ ಭಯೋತ್ಪಾದಕ ಸಂಸ್ಥೆಗಳಿಗೆ ಕಳುಹಿಸುತ್ತದೆ.
ಉಗ್ರಕೃತ್ಯಗಳಿಗಾಗಿ ಮೊದಲೇ ನಿಷೇಧಿತವಾದ ಸಿಮಿಯ ಕೂಸು ಪಿಎಫ್ಐ. ಕಾಲೇಜುಗಳಲ್ಲಿ ದಾಂಧಲೆ ನಡೆಸುವುದು, ಲವ್ ಜಿಹಾದ್ ಇತ್ಯಾದಿಗಳ ರೂವಾರಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ಅದರ ಅಂಗಸಂಸ್ಥೆ. ಹಿಂದೂ ಕಾರ್ಯಕರ್ತರ ಹತ್ಯೆ, ಗಲಭೆಗೆ ಕುಮ್ಮಕ್ಕು ನೀಡುವುದು, ಅಭದ್ರತೆಯ ಭಾವನೆ ಮೂಡಿಸಿ ಒಂದು ಸಮುದಾಯದವರನ್ನು ತನ್ನತ್ತ ಸೆಳೆಯುವುದು, ಯುವ ಸಮೂಹವನ್ನು ದಾರಿ ತಪ್ಪಿಸುವುದು ಇತ್ಯಾದಿ ಕಾರಣಗಳಿಗಾಗಿ ಪಿಎಫ್ಐ ನಿಷೇಧ ಆಗಬೇಕೆನ್ನುವ ಕೂಗು ದೇಶಾದ್ಯಂತ ಕೇಳಿಬಂದರೂ ಸರ್ಕಾರ ವಿಳಂಬ ಮಾಡಿತೆನ್ನುವ ದೂರಿದೆ. ನಾಲ್ಕು ತಿಂಗಳಿಂದಲೇ ಕೇಂದ್ರಸರ್ಕಾರ ಪಿಎಫ್ಐ ಖೆಡ್ಡಾಕ್ಕೆ ಸಿದ್ಧತೆ ನಡೆಸುತ್ತಿತ್ತು. ಅಮಿತ್ ಶಾ ಅವರು ಸಭೆ ನಡೆಸಿ ದಾಖಲೆಗಳನ್ನು ಸಂಗ್ರಹಿಸಲು ಸೂಚಿಸಿದ್ದರು. ಕಾನೂನಿನ ಮುಂದೆ ಸೋಲಾಗದಂತೆ ಎಚ್ಚರವಹಿಸುವ ಅಗತ್ಯವಿತ್ತು. ಕೆಲಸದಲ್ಲಿ ರಹಸ್ಯ ಕಾಪಾಡಿಕೊಂಡಿದ್ದರು – ಎಂಬೆಲ್ಲ ವಿವರಣೆಗಳಿವೆ.
ನಿಷೇಧದ ವೇಳೆ ಸರ್ಕಾರ ಮುಸ್ಲಿಂ ಸಮುದಾಯದ ವಿಶ್ವಾಸ ಗಳಿಸುವ ಪ್ರಯತ್ನ ನಡೆಸಿದ್ದು ಸತ್ಯ. ದೇಶದ ಅತಿ ಹಳೆಯ ಮುಸ್ಲಿಂ ಸಂಘಟನೆ ಜಮಾತ್ ಉಲುಮ್ ಹಿಂದ್ ಪಿಎಫ್ಐ ನಿಷೇಧವನ್ನು ಬೆಂಬಲಿಸಿದ್ದಲ್ಲದೆ, ಕ್ರಮಪ್ರಕಾರ ಇಲ್ಲದ ಮದರಸಾಗಳ ಬಗ್ಗೆ ಉತ್ತರಪ್ರದೇಶ ಸರ್ಕಾರವು ಸಮೀಕ್ಷೆ ನಡೆಸುವುದಕ್ಕೂ ಸಹಮತ ವ್ಯಕ್ತಪಡಿಸಿತ್ತು. ದೇಶಾದ್ಯಂತ ಪಿಎಫ್ಐ ಮೇಲೆ ದಾಳಿ ನಡೆಸಿ ನೂರಾರು ನಾಯಕರನ್ನು ಬಂಧಿಸಿದಾಗ ಜಮಾತ್ ಮೌನವಾಗಿದ್ದು, ಕಾರ್ಯಾಚರಣೆ ನ್ಯಾಯಸಮ್ಮತ ಮತ್ತು ಪಾರದರ್ಶಕ ಆಗಿರಲಿ. ಕಾನೂನು ತನ್ನ ಕೆಲಸ ಮಾಡಲಿ ಎಂದಷ್ಟೇ ಹೇಳಿತ್ತು.
ಕೇಂದ್ರ ಭದ್ರತಾ ಸಲಹೆಗಾರ ಅಜಿತ್ ದೊವಲ್ ಅವರು ಪ್ರಮುಖ ಮುಸ್ಲಿಂ ಸಂಘಟನೆಗಳ ಜೊತೆ ಸಭೆ ನಡೆಸಿ ಪಿಎಫ್ಐ ಮುಂತಾದವುಗಳ ಬಗ್ಗೆ ಅವರ ಅಭಿಪ್ರಾಯ ಕೇಳಿದರು; ಅನಂತರವೇ ದಾಳಿ, ನಿಷೇಧಗಳ ಬಗ್ಗೆ ನಿರ್ಧರಿಸಲಾಯಿತು. ಸಭೆಯಲ್ಲಿ ಮುಸ್ಲಿಂ ಸಂಘಟನೆಗಳು, ದೇಶವಿರೋಧಿ ಮತ್ತು ಭಯೋತ್ಪಾದಕ ಚಟುವಟಿಕೆ ನಡೆಸುವ ಪಿಎಫ್ಐ ಇತ್ಯಾದಿಗಳ ವಿರುದ್ಧ ಕಠಿಣಕ್ರಮಕ್ಕೆ ಆಗ್ರಹಿಸಿದವು. ಭಯೋತ್ಪಾದನೆ, ಕೋಮುಗಲಭೆ ಸೃಷ್ಟಿ ಮತ್ತು ದೇಶವಿರೋಧಿ ಕೃತ್ಯ ನಡೆಸುವವರ ಸೊಕ್ಕು ಮುರಿಯಬೇಕು ಎಂದ ಸಂಘಟನೆಗಳು, ಸರ್ಕಾರದ ಕಠಿಣ ಕ್ರಮವನ್ನು ನಾವೆಲ್ಲ ಸ್ವಾಗತಿಸಬೇಕು; ದೇಶದ ಹಿತಕ್ಕೆ ಧಕ್ಕೆ ತರುವವರು ಇರಬಾರದು ಎಂದು ಒತ್ತಾಯಿಸಿದವು. ಸೂಫಿ ಸಂಘಟನೆಯ ಪ್ರಚ್ಛನ್ನ ಉಗ್ರವಾದವನ್ನು ಕೊನೆಗೊಳಿಸಬೇಕು; ಕ್ರಮ ಅನಿವಾರ್ಯ ಎಂದು ಹೇಳಿತು. ಅದರಂತೆ ಪಿಎಫ್ಐ, ಸಿಎಫ್ಐ ಸಹಿತ ಒಂಭತ್ತು ಸಂಘಟನೆಗಳನ್ನು ನಿಷೇಧಿಸಲಾಯಿತು. ನಿಷೇಧಿತ ಸಂಘಟನೆಗಳು ದೇಣಿಗೆ ಸಂಗ್ರಹಿಸಬಾರದು; ಅವುಗಳ ನಂಟು ಇದ್ದವರಿಗೆ ಎರಡು ವರ್ಷ ಜೈಲುವಾಸ; ಪ್ರತಿಭಟನೆ, ಪ್ರಕಟಣೆ, ಸಮ್ಮೇಳನ ಇತ್ಯಾದಿ ನಡೆಸುವಂತಿಲ್ಲ; ಬ್ಯಾಂಕ್ಖಾತೆ, ಆಸ್ತಿ-ಪಾಸ್ತಿ ಹೊಂದುವಂತಿಲ್ಲ – ಇವು ನಿಷೇಧದ ಪ್ರಮುಖ ಅಂಶಗಳು.
ಈ ನಡುವೆ ಅದೇ ಬಳಗದ ರಾಜಕೀಯ ಪಕ್ಷವಾದ ಎಸ್ಡಿಪಿಐ ನಿಷೇಧಿತವಾಗದೆ ಉಳಿದುಕೊಂಡಿದೆ. ರಾಜಕೀಯ ಪಕ್ಷವಾದ ಕಾರಣ ಅದರ ನಿಷೇಧಕ್ಕೆ ತೊಡಕಿದೆ ಎಂಬ ವಿವರಣೆ ಬಂದಿದೆ. ಆದರೆ ಇದರ ದುರುಪಯೋಗವಾಗುವ ಸಾಧ್ಯತೆ ಕಂಡುಬಂದಿದೆ. “ಪಿಎಫ್ಐಯ ನಾವೆಲ್ಲ ಈಗ ಎಸ್ಡಿಪಿಐಯಲ್ಲಿದ್ದು ನಮ್ಮ ಚಟುವಟಿಕೆಗಳನ್ನು ಅದೇ ರೀತಿ ಮುಂದುವರಿಸಿಕೊಂಡು ಬಂದಿದ್ದೇವೆ” ಎಂದು ಮಾಧ್ಯಮ ಸಂಸ್ಥೆಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಒಬ್ಬಾತ ಹೇಳಿದ್ದಾನೆ. ಅದು ನಿಜವಾದರೆ ಸೂಕ್ತ ಕ್ರಮ ಅಗತ್ಯ.
ಮೋದಿ ಸರ್ಕಾರದ ಅವಧಿಯಲ್ಲಿ ಭಯೋತ್ಪಾದಕ ದಾಳಿಗಳ ಸಂಖ್ಯೆ ಇಳಿಯುತ್ತಿರುವುದು ನಮ್ಮ ಕಣ್ಣ ಮುಂದಿದೆ. 2004-2013ರ ಯುಪಿಎ ಸರ್ಕಾರದ ಅವಧಿಯಲ್ಲಿ ಕಾಶ್ಮೀರದಲ್ಲಿ 9,321 ಭಯೋತ್ಪಾದಕ ದಾಳಿಗಳು ನಡೆದಿದ್ದವು. ಭದ್ರತಾಪಡೆಗಳು 4,005 ಉಗ್ರರನ್ನು ಕೊಂದು, 878 ಉಗ್ರರನ್ನು ಬಂಧಿಸಿದ್ದವು. ಈಗ ಕಾಶ್ಮೀರದ ಚಿತ್ರವೇ ಬದಲಾಗಿದೆ. 2014ರಿಂದ ಇದುವರೆಗೆ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗಳು 2,132; ಸೇನಾಪಡೆಗಳು 1,538 ಭಯೋತ್ಪಾದಕರನ್ನು ಸದೆಬಡಿದು, 1,432 ಉಗ್ರರನ್ನು ಬಂಧಿಸಿವೆ. ಪಾಕಿಸ್ತಾನದ ಮೇಲೆ ಸರ್ಜಿಕಲ್ಸ್ಟ್ರೈಕ್ (ದಾಳಿ) ನಡೆಸಿದ ಅನಂತರ ಭಯೋತ್ಪಾದಕರ ಬೆನ್ನುಮೂಳೆ ಮುರಿದಂತಾಗಿ ಉಗ್ರರ ನುಸುಳುವಿಕೆ ಮತ್ತು ದಾಳಿಗಳು ಹಿನ್ನಡೆಯಲ್ಲಿವೆ.
ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಕಾಶ್ಮೀರವನ್ನು ಇತರ ರಾಜ್ಯಗಳ ಸಾಲಿಗೆ ತಂದ ಪರಿಣಾಮ ಅಲ್ಲಿ ಬಂದ ವ್ಯಾಪಕ ಬದಲಾವಣೆಯನ್ನು ಗುರುತಿಸಲಾಗಿದೆ. ಮೋದಿ ಸರ್ಕಾರದ ಬಿಗಿಹಿಡಿತದ ಅನುಭವ ಗಲಭೆಕೋರರಿಗಾಗಿದೆ. ಅಲ್ಲೀಗ ದೇಶದ ಯಾವ ನಾಗರಿಕರಾದರೂ ಭೂಮಿ ಖರೀದಿಸಬಹುದು; ಸ್ಥಿರಾಸ್ತಿಯನ್ನು ಹೊಂದಬಹುದು. ಅಲ್ಲೀಗ ಪ್ರತ್ಯೇಕ ಧ್ವಜ ಇಲ್ಲ. ರಣಬೀರ್ ದಂಡಸಂಹಿತೆ ಜಾರಿಯಲ್ಲಿಲ್ಲ. ಭಾರತೀಯ ಸಂವಿಧಾನವನ್ನೇ ಅನುಸರಿಸಬೇಕು. ಹಿಂದೆ ರಾಜ್ಯದ ಹೊರಗಿನವರನ್ನು ಮದುವೆಯಾದ ಕಾಶ್ಮೀರದ ಮಹಿಳೆ ಎಲ್ಲ ಸೌಲಭ್ಯದಿಂದ ವಂಚಿತಳಾಗುತ್ತಿದ್ದಳು. ಈಗ ಅವರಿಗೆ ಸಮಾನತೆಯ ಹಕ್ಕು ಲಭಿಸಿದೆ. ಕಾಶ್ಮೀರ ಸಹಜಸ್ಥಿತಿಗೆ ಮರಳುತ್ತಿದೆ.
ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಹಾಗೂ ಇತರರು ಪ್ರಮುಖ ವೇದಿಕೆಗಳಲ್ಲೆಲ್ಲ ಭಯೋತ್ಪಾದನೆಯನ್ನು ಖಂಡಿಸುತ್ತ ಬಂದಿದ್ದಾರೆ. ಇದರಿಂದ ಹೆಚ್ಚು ನಷ್ಟಕ್ಕೊಳಗಾದ ದೇಶವೆಂದರೆ ಪಾಕಿಸ್ತಾನ. ಬಹಳಷ್ಟು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅದು ಒಬ್ಬಂಟಿಯಾಗುವ ಪರಿಸ್ಥಿತಿ ಬಂದಿದೆ.
ನಕ್ಸಲ್ ಸಮಸ್ಯೆ ಅಂತ್ಯ?
ಸರ್ಕಾರದ ಸಾಧನೆ ಬಹುದೊಡ್ಡದಿದ್ದರೂ ಅದನ್ನು ಅಷ್ಟಾಗಿ ಹೇಳಿಕೊಳ್ಳದೆ ಎಲ್ಲೋ ಒಂದೆರಡು ಮಾತುಗಳಲ್ಲಿ ಅದು ಬಂದುಹೋಗುವ ಸಂದರ್ಭಗಳೂ ಇರುತ್ತವೆ. ದೇಶದ ನಕ್ಸಲ್ ಸಮಸ್ಯೆಯನ್ನು ಕುರಿತು ಗೃಹಸಚಿವ ಅಮಿತ್ ಶಾ ಅವರು ಈಚೆಗೆ ನೀಡಿದ ಒಂದು ಹೇಳಿಕೆಯನ್ನು ಅದಕ್ಕೆ ಉದಾಹರಣೆಯೆಂದು ಗುರುತಿಸಬಹುದು. ಲೋಕಸಭೆ ಚುನಾವಣೆಗೆ (2024) ಮುನ್ನ ದೇಶದ ನಕ್ಸಲ್ ಸಮಸ್ಯೆಯನ್ನು ಸಂಪೂರ್ಣ ನಿಗ್ರಹಿಸಲಾಗುವುದು ಎಂದವರು ಹೇಳಿದರು.
“2009ರಲ್ಲಿ ನಕ್ಸಲರ ದುರ್ಘಟನೆಗಳು 2,258 ನಡೆದಿದ್ದರೆ 2021ರಲ್ಲಿ ಅವುಗಳ ಸಂಖ್ಯೆ 501ಕ್ಕೆ ಇಳಿದಿದೆ. ಮೋದಿ ಸರ್ಕಾರ ಆ ಸಂಘಟನೆಯಲ್ಲಿರುವ ಯುವಕ-ಯುವತಿಯರಿಗೆ ‘ಶಸ್ತ್ರಾಸ್ತ್ರ ತ್ಯಾಗ ಮಾಡಿ ಬನ್ನಿ; ಉತ್ತಮ ಭವಿಷ್ಯವಿದೆ’ ಎಂದು ಮನವಿ ಮಾಡಿದ್ದು ಕೂಡಾ ಫಲ ನೀಡಿದೆ” ಎಂದು ಗೃಹಸಚಿವರು ತಿಳಿಸಿದರು. ದೇಶದ ಕೆಲವು ಭಾಗಗಳಲ್ಲಿ ಕೆಲವು ಪ್ರದೇಶಗಳನ್ನು ವಶದಲ್ಲಿರಿಸಿಕೊಂಡು ರಕ್ತದ ಓಕುಳಿಯಾಡುತ್ತಿದ್ದ ಒಂದು ಸಶಸ್ತ್ರಪಡೆಯನ್ನು ಈ ಸ್ಥಿತಿಗೆ ತಂದುದರಲ್ಲಿ ಎನ್ಡಿಎ ಸರ್ಕಾರದ ಸಾಮಥ್ರ್ಯವನ್ನು ನಾವು ಒಪ್ಪಲೇಬೇಕಲ್ಲವೇ? ಅದರ ಹಿಂದೆ ಶಸ್ತ್ರಾಸ್ತ್ರ ನೀಡಿ ಬೆಂಬಲಿಸುತ್ತಿರುವ ಚೀನಾ ಕೂಡ ಇದೆ. ನಕ್ಸಲ್ ಯುವಕ-ಯುವತಿಯರು ಗುಂಪುಗುಂಪಾಗಿ ಸರ್ಕಾರಕ್ಕೆ ಶರಣಾಗುತ್ತಿರುವಾಗ ಅವರಿಗೆ ಹೇಗನ್ನಿಸಬಹುದು?
ಗಡಿಯಲ್ಲಿ ಚೀನಾದ ಕಿರಿಕಿರಿ ಈಗಲೂ ಮುಂದುವರಿದಿದೆ. ಗಲ್ವಾನ್ನಲ್ಲಿ ಭಾರತೀಯ ಯೋಧರು ಚೀನೀ ಪಡೆಗಳಿಗೆ ಸೂಕ್ತ ಉತ್ತರವನ್ನು ನೀಡಿದ್ದು, ಸಮರ್ಥ ರಾಜತಾಂತ್ರಿಕ ಕ್ರಮಗಳ ಮೂಲಕ ಚೀನಾ ತನ್ನ ಪಡೆಗಳನ್ನು ವಾಪಸು ಕರೆಸಿಕೊಂಡದ್ದು ಎಲ್ಲವೂ ಆದರೂ ಕೂಡ ಈಚೆಗೆ ಅರುಣಾಚಲ ಪ್ರದೇಶದ ಗಡಿಯಲ್ಲಿ ಮತ್ತೆ ಮುಂದೆ ಬಂದು ನಮ್ಮ ಯೋಧರ ಕೈರುಚಿ ನೋಡಿದರು. “ಚೀನಾ ವಿಶ್ವಾಸಾರ್ಹ ದೇಶವಲ್ಲ; ಗಡಿಯಲ್ಲಿ ಆತಂಕ ವಾತಾವರಣ ಈಗಲೂ ಇದೆ” ಎಂದು ವಿದೇಶಾಂಗ ಸಚಿವರು ಹೇಳುತ್ತಲೇ ಇದ್ದಾರೆ. ಪ್ರಧಾನಿ ಮತ್ತು ರಕ್ಷಣಾ ಸಚಿವ ರಾಜನಾಥಸಿಂಗ್ ‘ಕೆದಕಿದರೆ ನಮ್ಮ ಶಕ್ತಿಯ ರುಚಿ ತೋರಿಸುತ್ತೇವೆ’ ಎಂಬಂತಹ ಮಾತುಗಳನ್ನು ಆಡುತ್ತಿದ್ದಾರೆ. ಈ ವಿಷಯದಲ್ಲಿ ಭಾರತಕ್ಕೆ ಹಲವು ದೇಶಗಳ ಬೆಂಬಲ ಇರುವುದು ಸತ್ಯ. ಸೇನೆಯನ್ನಂತೂ ಮೋದಿ ಸರ್ಕಾರ ಹಂತಹಂತವಾಗಿ ಬಲಪಡಿಸುತ್ತಲೇ ಇದೆ.
ಜಿ-20 ನಾಯಕತ್ವ
ಇದೀಗ ಭಾರತಕ್ಕೆ ಇಪ್ಪತ್ತು ದೇಶಗಳ ಕೂಟವಾದ ಜಿ-20 ನಾಯಕತ್ವ ಲಭಿಸಿದೆ. “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬುದನ್ನು ಭಾರತದ ಅಧ್ಯಕ್ಷತೆಯ ಜಿ-20 ವರ್ಷದ ಥೀಮ್ (ವಸ್ತು) ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇದನ್ನು ಭಾರತವು ‘ವಸುಧೈವ ಕುಟುಂಬಕಮ್’ ಎಂದು ಕರೆದಿದೆ. ಈ ಬಾರಿಯ ಎಲ್ಲ ಜಿ-20 ಸಭೆಗಳನ್ನು ಇದೇ ವಸ್ತುವಿನ ಅಡಿಯಲ್ಲಿ ನಡೆಸಲಾಗುತ್ತದೆ.
ಆ ಕುರಿತು ಹೇಳಿಕೆ ನೀಡಿರುವ ಪ್ರಧಾನಿ ಮೋದಿ “ಹಿಂದೆ ವಿವಿಧ ದೇಶಗಳ ನೇತೃತ್ವದಲ್ಲಿ ನಡೆದಿರುವ 17 ಜಿ-20 ಶೃಂಗಸಭೆಗಳು ಆರ್ಥಿಕ ಸ್ಥಿರತೆ, ಸಾಲದ ಹೊರೆ ತಗ್ಗಿಸುವ ಮತ್ತು ಅಂತಾರಾಷ್ಟ್ರೀಯ ತೆರಿಗೆಗಳಲ್ಲಿ ಸುಧಾರಣೆ ತರುವ ಮಹತ್ತ್ವದ ಫಲಿತಾಂಶಗಳಿಗೆ ಕಾರಣವಾಗಿವೆ. ಭಾರತವು 18ನೇ ಶೃಂಗಸಭೆಯ ನೇತೃತ್ವವನ್ನು ವಹಿಸಿಕೊಳ್ಳುತ್ತಿದ್ದು, ಈಗ ಆಗಿರುವ ಸಾಧನೆಗಳನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಲು ಹಾಗೂ ಮಾನವೀಯತೆಗೆ ಲಾಭವಾಗುವ ನಿಟ್ಟಿನಲ್ಲಿ ಪರಿವರ್ತಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಳ್ಳುತ್ತೇನೆ; ಹೌದು, ನಮ್ಮಿಂದ ಇದನ್ನು ಮಾಡಲು ಸಾಧ್ಯವಿದೆ” ಎಂದಿದ್ದಾರೆ. ‘ವಸುಧೈವ ಕುಟುಂಬಕಮ್’ ತತ್ತ್ವವನ್ನು ತಮ್ಮ ವಿದೇಶಾಂಗ ನೀತಿಗೇ ಅಳವಡಿಸಿಕೊಂಡಿರುವ ಮೋದಿ ಅವರಿಂದ ನಾವು ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಬಹುದಾಗಿದೆ. ಈಗಾಗಲೆ ಅವರು ಜಗತ್ತಿನ ಒಂದನೇ ಜನಪ್ರಿಯ ನಾಯಕರಾಗಿದ್ದಾರೆ.
ಜಗತ್ತಿನ ಎಲ್ಲ ಕಡೆಯಿಂದ ಪ್ರಧಾನಿ ಮೋದಿ ಅವರಿಗೆ ಶ್ಲಾಘನೆಗಳು ಬರುತ್ತಲೇ ಇವೆ. ಅವುಗಳ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕೂಡ ಸೇರಿಕೊಂಡಿದ್ದರೆ ಹೇಗೆ? ಇದು ಆಶ್ಚರ್ಯವಾದರೂ ಸತ್ಯ. ಪುಟಿನ್ ಹೇಳಿದ್ದು ಹೀಗೆ: “ನರೇಂದ್ರ ಮೋದಿಯವರು ವಿಶ್ವದಲ್ಲೇ ಅಪರೂಪದ ರಾಜಕಾರಣಿ. ಅವರು ಎಲ್ಲ ಒತ್ತಡಗಳ ನಡುವೆ ತನ್ನ ದೇಶದ ವಿದೇಶಾಂಗ ನೀತಿಯ ಬಗ್ಗೆ ಖಚಿತವಾದ ಚಿಂತನೆ ಮತ್ತು ಆಲೋಚನೆ ಹೊಂದಿರುವ ವ್ಯಕ್ತಿ. ವಿಶ್ವ ಸಮುದಾಯ ಭಾರತದ ಮೇಲೆ ದಿಗ್ಬಂಧನ ಹೇರುವ ಎಲ್ಲ ಸಾಧ್ಯತೆಗಳಿದ್ದಾಗಲೂ ಅದನ್ನೆಲ್ಲ ಪಕ್ಕಕ್ಕಿಟ್ಟು ರಷ್ಯಾ ಕಡೆಗೆ ಸ್ನೇಹಹಸ್ತ ಚಾಚಿದ ಮೋದಿ ಒಬ್ಬ ವಿಶ್ವಮಾನ್ಯ ನಾಯಕ. ಭಾರತದ ಭವಿಷ್ಯವೀಗ ಉಜ್ಜ್ವಲವಾಗಿದೆ.” ಅದೇ ವೇಳೆ ಉಕ್ರೇನ್ ಕೂಡ ಭಾರತದ ಬಗ್ಗೆ ವಿಶ್ವಾಸ ಹೊಂದಿರುವುದು ಗಮನಾರ್ಹ.
ವಿದೇಶವಾಸಿ ಭಾರತೀಯರಲ್ಲಿ ಭಾರತದ ಬಗ್ಗೆ ಹೆಚ್ಚಿನ ಹೆಮ್ಮೆ ಮೂಡಿಸಿದವರು ಮೋದಿ; ಇದೊಂದು ವ್ಯಾಪಕ ವಿದ್ಯಮಾನವೇ ಸರಿ. “ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದವರು ‘ನಾವು ಭಾರತೀಯರು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಕಾಲವೀಗ ಬಂದಿದೆ. ಜಗತ್ತು ಪ್ರಸ್ತುತ ಎದುರಿಸುತ್ತಿರುವ ಬಿಕ್ಕಟ್ಟಿನ ನಿವಾರಣೆಗೆ ಮತ್ತು ಶಾಂತಿಸ್ಥಾಪನೆಗೆ ಭಾರತದ ನಾಯಕತ್ವವೇ ಸೂಕ್ತ ಆಯ್ಕೆ ಎಂದು ಹಲವು ರಾಷ್ಟ್ರಗಳು ಹೇಳುತ್ತಿವೆ” – ಎನ್ನುವ ಸಿದ್ಧಾರ್ಥ ವಾಡೆನ್ನವರ ಅವರ ಮಾತು ಇಲ್ಲಿ ಉಲ್ಲೇಖಾರ್ಹ.
ಅಗಲಿದ ತಾಯಿಗೆ ಗೌರವ: ಮೋದಿ ಮೇಲ್ಪಂಕ್ತಿ
ತಮ್ಮ ಬಿಡುವಿಲ್ಲದ ದಿನಚರಿಯ ನಡುವೆಯೂ ಪ್ರಧಾನಿ ಮೋದಿ ಅವರು ನಿರಂತರವಾಗಿ ಕಾಯ್ದುಕೊಂಡು ಬಂದ ಒಂದು ಕೆಲಸವೆಂದರೆ ವೃದ್ಧೆ ತಾಯಿಯೊಂದಿಗೆ ಸಂಪರ್ಕ. ವಿಶೇಷ ಸಂದರ್ಭಗಳಲ್ಲಿ ಮತ್ತು ಗುಜರಾತ್ ಕಡೆಗೆ ಹೋದಾಗ ಅವರನ್ನು ತಪ್ಪದೆ ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದರು. ಆ ಮಹಾಮಾತೆ ಕೂಡ ಪ್ರಧಾನಿಯಾದ ಮಗನಿಂದ ಏನನ್ನೂ ಅಪೇಕ್ಷಿಸದೆ ‘ಜನಹಿತವನ್ನು ಮಾಡು; ಲಂಚ-ಭ್ರಷ್ಟಾಚಾರಗಳಿಂದ ದೂರವಿರು’ ಇಂತಹ ಮಾತುಗಳನ್ನಷ್ಟೇ ಹೇಳುತ್ತಿದ್ದರು. ಶತಾಯುಷಿಯಾದ ಅಂತಹ ವಾತ್ಸಲ್ಯಮಯ ತಾಯಿ ಹೀರಾಬೆನ್ ಅವರು ಕಳೆದ ಡಿಸೆಂಬರ್ನಲ್ಲಿ ಅಗಲಿದಾಗ ಮೋದಿ ಅವರು ಆ ಘನ ವ್ಯಕ್ತಿತ್ವಕ್ಕೆ ಅನುಗುಣವಾಗಿ ನಡೆದುಕೊಂಡು ತಾಯಿಯ ಅಂತ್ಯಕ್ರಿಯೆಯನ್ನು ಅಷ್ಟೇ ಸರಳವಾಗಿ ಯಾವುದೇ ಆಡಂಬರವಿಲ್ಲದೆ ನೆರವೇರಿಸಿದರು. ತಾಯಿಯ ಪವಿತ್ರ ದೇಹವನ್ನು ಹೆಗಲಿಗೇರಿಸಿಕೊಂಡು ಅವರು ಬರಿಗಾಲಿನಲ್ಲಿ ನಡೆದುಹೋದ ಅವರು, ಉಕ್ಕಿಬರುತ್ತಿದ್ದ ದುಃಖವನ್ನು ನುಂಗಿಕೊಳ್ಳುವುದು ಕಾಣಿಸುತ್ತಿತ್ತು. ಬೆಳಗ್ಗೆ ಮೃತದೇಹವನ್ನು ಪಂಚಭೂತಗಳಲ್ಲಿ ಲೀನಗೊಳಿಸಿದ ಮೋದಿ ಅಷ್ಟೇ ಸಹಜವಾಗಿ ತಮ್ಮ ಎಂದಿನ ಕಾರ್ಯಕ್ರಮಗಳಿಗೆ ಹಾಜರಾದರು.
“ಒಬ್ಬ ಸಂತನಲ್ಲಿರಬಹುದಾದ ಸಹನಶೀಲತೆ, ನಿಗರ್ವಿ ಗುಣ ಮೋದಿಜೀ ಅವರ ಈ ನಡವಳಿಕೆಯಲ್ಲಿ ಕಾಣಿಸುತ್ತಿತ್ತು. ತಾಯಿಯ ಅಂತ್ಯಸಂಸ್ಕಾರದಿಂದಾಗಿ ಸಾರ್ವಜನಿಕರು ಯಾರಿಗೂ ತೊಂದರೆಯಾಗದಂತೆ ಅವರು ನೋಡಿಕೊಂಡಿದ್ದರು; ಕ್ರಿಯಾಕರ್ಮಗಳನ್ನು ಕೆಲವೇ ಗಂಟೆಗಳಲ್ಲಿ ಪೂರ್ತಿಗೊಳಿಸಿದ್ದರು. ಅನಂತರ ತಡವಿಲ್ಲದೆ ಅವರು ನಿಗದಿತ ಸರ್ಕಾರಿ ಕಾರ್ಯಕ್ರಮಗಳಿಗೆ ತೆರಳಿದರು. ಪ್ರಧಾನಿಯಾಗಿ ಒಂಭತ್ತು ವರ್ಷವಾದರೂ ಒಂದು ದಿನವೂ ರಜೆ ಪಡೆಯದೆ ಕೆಲಸ ಮಾಡಿ ದಾಖಲೆ ಸೃಷ್ಟಿಸಿರುವ ಮೋದಿಜೀ ಅವರ ವ್ಯಕ್ತಿತ್ವಕ್ಕೆ ಈ ನಡೆ ಕಳಸಪ್ರಾಯವಾಗಿತ್ತು” ಎಂದು ಕರ್ನಾಟಕ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವರು ಲೇಖನವೊಂದರಲ್ಲಿ ಹೇಳಿದ್ದಾರೆ. ರಾಷ್ಟ್ರನಾಯಕರು ನಿಧನ ಹೊಂದಿದಾಗ ರಜೆ ಪಡೆಯದೆ ದಿನಕ್ಕಿಂತ ಹೆಚ್ಚು ಕೆಲಸ ಮಾಡುವ ಮೂಲಕ ದಿವಂಗತರಿಗೆ ಗೌರವ ಸಲ್ಲಿಸುವ ಕೆಲವು ದೇಶಗಳ ಕ್ರಮವನ್ನು ಮೋದಿ ಕೂಡ ಅನುಸರಿಸಿ ಅಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟರೆನ್ನಬಹುದು.
ಸರ್ಕಾರ ರಚನೆ: ಮೋದಿ ಮ್ಯಾಜಿಕ್
ಬಿಜೆಪಿ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರ ಮೋದಿ ಅವರು 1998ರಲ್ಲಿ ಹಿಮಾಚಲ ಪ್ರದೇಶದ ಪ್ರಭಾರಿ ಆಗಿದ್ದಾಗ ವಿಧಾನಸಭಾ ಚುನಾವಣೆ ನಡೆಯಿತು. 67 ಸದಸ್ಯ ಬಲದ ಸದನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಗಳು ತಲಾ 33 ಸ್ಥಾನಗಳನ್ನು ಗಳಿಸಿದವು. ಮುಖ್ಯಮಂತ್ರಿ ಯಾರೆಂದು ಜಿದ್ದು ಉಂಟಾಯಿತು. ಒಬ್ಬ ಪಕ್ಷೇತರ ಶಾಸಕ (ರಮೇಶ್ ಧವಾಲಾ)ನನ್ನು ಅಪಹರಿಸಿ ಕಾಂಗ್ರೆಸ್ನ ವೀರಭದ್ರ ಸಿಂಗ್ ಮುಖ್ಯಮಂತ್ರಿಯಾದರು. ಮೋದಿ ಅವರಿಗೆ ಅದು ಸವಾಲಿನ ವಿಷಯವಾಯಿತು. ಆಗ ಅವರು ಶಿಮ್ಲಾದ ಪೀಟರ್ ಆಫ್ನಲ್ಲಿ ಉಳಿದುಕೊಂಡಿದ್ದರು. ರಾತ್ರೋರಾತ್ರಿ ಪಕ್ಷದ ಶಾಸಕ ಜೆ.ಪಿ. ನಡ್ಡಾ ಸಹಾಯದಿಂದ ಹಿಮಾಚಲ ಟೂರಿಸಂನ ಒಬ್ಬ ಅಡುಗೆಯವನನ್ನು ಕರೆಯಿಸಿ, ಮುಖ ಒರೆಸುವ ಟಿಶ್ಯೂ ಪೇಪರ್ ಮೇಲೆ ಸಂದೇಶ ಬರೆದು ಆತನ ಮೂಲಕ ಪಕ್ಷೇತರ ಶಾಸಕನಿಗೆ ಕಳುಹಿಸಿದರು. ಅದನ್ನೋದಿದ ಆತ ಕಾಂಗ್ರೆಸ್ನವರ ಕಾರಿನಿಂದ ಜಿಗಿದು ಬಂದು ಬಿಜೆಪಿ ಕ್ಯಾಂಪಿಗೆ ಸೇರಿಕೊಂಡರು. ಬಿಜೆಪಿ ಸರ್ಕಾರ ರಚನೆಯಾಗಿ ಪ್ರೇಂಕುಮಾರ್ ಧುಮಾಲ್ ಮುಖ್ಯಮಂತ್ರಿಯಾದರು. ಆಗ ಆ ರಾಜ್ಯದ ಪ್ರಭಾರಿಯಾಗಿದ್ದ ನರೇಂದ್ರ ಮೋದಿ ಈಗ ಪ್ರಧಾನಿಯಾದರೆ ಜೆ.ಪಿ. ನಡ್ಡಾ ಪಕ್ಷದ ಅಧ್ಯಕ್ಷರಾಗಿದ್ದಾರೆ.