”ದೇಶದ ಹತ್ತಾರು ಜಿಲ್ಲೆಗಳೂ ತಾಲ್ಲೂಕುಗಳೂ ಮುಸ್ಲಿಂಪ್ರಧಾನ ಭಾಗಗಳಾದಲ್ಲಿ ಇನ್ನಷ್ಟು ಜಮ್ಮು-ಕಾಶ್ಮೀರಗಳು ನಿರ್ಮಾಣಗೊಳ್ಳುವುದಿಲ್ಲವೆ?”
೨೦೧೧ರ ರಾಷ್ಟ್ರೀಯ ಜನಗಣತಿಯ ಫಲಿತಗಳು ಅಂತಿಮರೂಪದಲ್ಲಿ ಇನ್ನೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಆದರೂ ಹಲವು ಪ್ರಮುಖ ಅಂಶಗಳು ಶೋಧಕ ಪತ್ರಕರ್ತರ ಗಮನಕ್ಕೆ ಬಂದಿವೆ. ಎದ್ದುಕಾಣುವ ಒಂದು ಅಂಶ ಇದು: ಕಳೆದ ಒಂದು ದಶಕದ ಅವಧಿಯಲ್ಲಿ ಇಡೀ ಭಾರತದ ವಾರ್ಷಿಕ ಸರಾಸರಿ ಜನಸಂಖ್ಯಾಹೆಚ್ಚಳದ ವೇಗ ಶೇ. ೧೭.೭ರಷ್ಟು. ಹಿಂದೂ ಜನವರ್ಗದ ಹೆಚ್ಚಳದ ವೇಗ ಸರಾಸರಿ ಪ್ರಮಾಣಕ್ಕಿಂತ ಕಡಮೆಯಿದ್ದು ಶೇ. ೧೪.೫ರಷ್ಟು ಮಾತ್ರವಿದೆ. ಮುಸ್ಲಿಂ ಜನಸಂಖ್ಯೆಯ ಹೆಚ್ಚಳದ ವೇಗ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿ ಶೇ. ೨೪.೪ರಷ್ಟು ಅಧಿಕ ಮಟ್ಟದಲ್ಲಿದೆ. ಈ ಅಸಮತೋಲವು ಪರಾಮರ್ಶನೀಯವಾಗಿದೆ.
ಇತಿಹಾಸತಥ್ಯಗಳು
ಈ ಮಾಹಿತಿಯ ವಿಶ್ಲೇಷಣೆಗೆ ತೊಡಗುವುದಕ್ಕೆ ಮೊದಲು ಕೆಲವು ಇತಿಹಾಸತಥ್ಯಗಳನ್ನು ನೆನಪು ಮಾಡಿಕೊಳ್ಳುವುದು ಸಂಗತ. ಯಾವುದೇ ದೇಶದಲ್ಲಿ ಯಾವುದಾದರೂ ಒಂದು ವಿಶಿಷ್ಟ ಸಮುದಾಯದ ಪ್ರಮಾಣವು ಗಣನೀಯವಾಗಿ ಹೆಚ್ಚಿದಾಗ ಅದು ಸಾಂಸ್ಕೃತಿಕ ಏರುಪೇರುಗಳಿಗೂ ಕಾರಣವಾಗುತ್ತದೆ. ಮೊದಲ ಸಹಸ್ರಾಬ್ದದ ಆರಂಭದ ಮುನ್ನೂರು ವರ್ಷಗಳಲ್ಲಿ ಯೂರೋಪಿನಲ್ಲಿ ಆದ ಜನಸಂಖ್ಯಾ ಪ್ರಮಾಣ ವ್ಯತ್ಯಯದಿಂದಾಗಿ ಹಿಂದಿನ ರೋಮನ್ ಸಾಮ್ರಾಜ್ಯ ಮರೆಯಾಗಿ ಕ್ರೈಸ್ತಪ್ರಭುತ್ವವು ನೆಲೆಗೊಂಡಿತು. ಈಚಿನ ಕಾಲದಲ್ಲಿ ಲೆಬನಾನ್ ಮೊದಲಾದೆಡೆಗಳಲ್ಲಿ ಜನಸಂಖ್ಯಾ ಪ್ರಮಾಣದ ಅಸಮತೋಲ ಏರ್ಪಟ್ಟುದರಿಂದಾಗಿ ಅಂತರ್ಯುದ್ಧಗಳೇ ನಡೆದಿವೆ. ಭಾರತದಲ್ಲಂತೂ ಅಸಮತೋಲವು ಅತ್ಯಂತ ಗಂಭೀರ ಪರಿಣಾಮಗಳನ್ನು ಉಂಟುಮಾಡಬಲ್ಲದು ಎಂಬುದು ಸ್ಪಷ್ಟವೇ ಆಗಿದೆ. ಇಲ್ಲಿ ಹಿಂದೂ-ಮುಸ್ಲಿಂ ಜನಸಂಖ್ಯಾ ಪ್ರಮಾಣಗಳ ವ್ಯತ್ಯಯ ಕಳೆದ ನೂರು ವರ್ಷಗಳುದ್ದಕ್ಕೂ ತೀಕ್ಷ್ಣಗೊಳ್ಳುತ್ತ ಸಾಗಿದೆ. “ಮುಸ್ಲಿಂ ಜನಸಂಖ್ಯೆಯು ವೇಗವಾಗಿ ಹೆಚ್ಚುತ್ತಿರಲಾಗಿ ಹಿಂದೂಗಳ ಜನಸಂಖ್ಯಾ ಪ್ರಮಾಣ ಇಳಿಮುಖವಾಗುತ್ತ ಸಾಗಿದೆ” ಎಂದು ಸ್ವಾಮಿ ಶ್ರದ್ಧಾನಂದರು ೧೯೨೬ರಷ್ಟು ಹಿಂದೆಯೇ ಎಚ್ಚರಿಸಿದ್ದರು. ಕಳೆದ ನೂರು ವರ್ಷಗಳ ಸ್ಥಿತಿಯೇ ಮುಂದುವರಿದರೆ ಇನ್ನು ನಾಲ್ಕೋ ಆರೋ ಶತಮಾನಗಳೊಳಗೆ ಹಿಂದೂ ಜನಾಂಗವೇ ಭಾರತದಲ್ಲಿ ಅದೃಶ್ಯವಾಗುವ ಸಂಭವವಿದೆಯೆಂದು ಹಲವರು ತಜ್ಞರ ವಿಶ್ಲೇಷಣೆಯಿದೆ. `ಊiಟಿಜus, ಚಿ ಆಥಿiಟಿg ಖಚಿಛಿe’ ಎಂಬ ಸಂಶೋಧನಪ್ರಬಂಧವನ್ನೇ ಯು.ಎನ್. ಮುಖರ್ಜಿ ಎಂಬ ವಿದ್ವಾಂಸರು ೧೯೦೯ರಷ್ಟು ಹಿಂದೆ ಬರೆದಿದ್ದರು.
ಅದು ಹೇಗಾದರಿರಲಿ. ಕಳೆದ ಅರವತ್ತು ವರ್ಷಗಳ ವಾಸ್ತವ ಅಂಕಿ-ಅಂಶಗಳನ್ನಷ್ಟೇ ಗಮನಿಸಿದರೂ ಅಸಮತೋಲವು ಹೆಚ್ಚುತ್ತ ಬಂದಿರುವುದು ಸ್ಥಿರಪಟ್ಟಿದೆ: ೧೯೫೧-೧೯೯೧ರ ಅವಧಿಯಲ್ಲಿ ಹಿಂದೂಗಳ ಜನಸಂಖ್ಯಾಪ್ರಮಾಣವು ಶೇ. ೮೪.೯೮ರಿಂದ ೮೧.೮ಕ್ಕೆ ಇಳಿದಿದೆ; ಇದೇ ಅವಧಿಯಲ್ಲಿ ಮುಸ್ಲಿಂ ಜನಸಂಖ್ಯೆಯ ಶೇಕಡಾ ಪ್ರಮಾಣ ೯.೯೧ರಿಂದ ೧೨.೨ಕ್ಕೆ ಏರಿದೆ. ಅನಂತರವೂ ಇದೇ ಜಾಡು ಮುಂದುವರಿದಿದೆ. ಅಸಮತೋಲವು ಆತಂಕಕಾರಿಯಲ್ಲವೆಂದು ವಾದಿಸಿರುವ ಹಲವರೂ (ಉದಾ: ಎನ್. ಭಂಡಾರೆ ಮೊದಲಾದವರು) ಮುಂದಿನ ೩೧೬ ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಹಿಂದೂಗಳದ್ದಕ್ಕಿಂತ ಅಧಿಕವಾಗಬಹುದು ಎಂದು ಒಪ್ಪಿದ್ದಾರೆ.
ಮುಸ್ಲಿಂ ಜನಸಂಖ್ಯೆಯ ಪ್ರಮಾಣವು ಹೆಚ್ಚುತ್ತಿರುವುದು ಭಾರತದಲ್ಲಿ ಮಾತ್ರವೇನಲ್ಲ. ಇಂಡೊನೇಷಿಯಾ, ಟರ್ಕಿ, ಇರಾನ್, ಜೋರ್ಡಾನ್, ಕುವೇತ್ ಮೊದಲಾದೆಡೆಗಳಲ್ಲೆಲ್ಲ ಮುಸ್ಲಿಂ ಜನಸಂಖ್ಯೆಯು ಜಾಗತಿಕ ಹಾಗೂ ಪ್ರತ್ಯೇಕ ರಾಷ್ಟ್ರೀಯ ಸರಾಸರಿಗಿಂತ ಅಧಿಕ ವೇಗದಲ್ಲಿ ಹೆಚ್ಚುತ್ತ ಬಂದಿರುವುದು ಎಲ್ಲೆಡೆಯ ಅನುಭವವಾಗಿದೆ.ಈ ವಾಸ್ತವಗಳ ಹಿನ್ನೆಲೆಯಲ್ಲಿ ಭಾರತದಲ್ಲಿನ ೨೦೧೧ರ ಜನಸಂಖ್ಯಾಸಂಬಂಧಿತ ಮಾಹಿತಿಯನ್ನು ಅವಲೋಕಿಸಬೇಕಾಗಿದೆ.
೨೦೦೧ರಲ್ಲಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರದು ಶೇ. ೧೩.೪ರಷ್ಟು ಇದ್ದಿತು. ೨೦೧೧ರಲ್ಲಿ ಅದು ಶೇ. ೧೪.೨ಕ್ಕೆ ಏರಿದೆ. ೦.೮ರಷ್ಟು ಹೆಚ್ಚಳವೂ ದೇಶದ ಸಾಮಾಜಿಕ, ರಾಜಕೀಯ, ಭೌಗೋಳಿಕ ಸಮತೋಲನದ ಮೇಲೆ ಗಣನೀಯ ಪರಿಣಾಮ ಬೀರಬಲ್ಲದು.ಈ ಹೆಚ್ಚಳ ಅಲ್ಪಕಾಲಿಕವೆಂದು ಭಾವಿಸಲು ಕಾರಣವಿಲ್ಲ. ಏಕೆಂದರೆ ೧೯೮೦ರ ದಶಕದಲ್ಲಿ ಮತ್ತು ೧೯೯೦ರ ದಶಕದಲ್ಲಿಯೂ ಇದೇ ರೀತಿಯ ಸಂಖ್ಯಾವೃದ್ಧಿಯು ಕಂಡಿದೆ.
ದೇಶವಿಭಜನೆಗೆ ಹಿಂದಿನ ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯಾ ವೃದ್ಧಿವೇಗ ಅಷ್ಟೇನೂ ಗಮನಾರ್ಹವಾಗಿರಲಿಲ್ಲ. ಆ ವರ್ಷಗಳಲ್ಲಿ ಬಂಗ್ಲಾದೇಶ ಭಾಗದಲ್ಲಷ್ಟೆ ಈ ಹೆಚ್ಚಳ ಗಮನ ಸೆಳೆಯುವಷ್ಟು ಇದ್ದಿತು. ವಿಭಜನೆಯ ಅನಂತರ ಪಾಕಿಸ್ತಾನದಲ್ಲಿ ಮುಸ್ಲಿಮೇತರ ಸಮುದಾಯವಾವುದೂ ಉಳಿದೇ ಇಲ್ಲ. ದೀರ್ಘಾವಧಿಯ ಜನಸಂಖ್ಯಾವಿನ್ಯಾಸವನ್ನು ಪರಿಶೀಲಿಸಿದರೆ ಇದೇ ಅಸಮತೋಲ ಕಂಡುಬರುತ್ತದೆ. ೧೮೮೧ರಿಂದೀಚಿನ ೧೩೦ ವರ್ಷಗಳ ಅವಧಿಯಲ್ಲಿ (ಸಿಖ್ಖರು ಮೊದಲಾದವರು ಸೇರಿದಂತೆ) ಹಿಂದೂಗಳ ಜನಸಂಖ್ಯಾಪ್ರಮಾಣ ಶೇ. ೧೫ರಷ್ಟು ಇಳಿದಿದೆ.
ಚಿಂತನೀಯ ಅಂಶಗಳು
ಈ ಜಾಡಿನ ಅಸಮತೋಲದ ಹೆಚ್ಚಳದಷ್ಟೆ ಚಿಂತನೀಯವಾದ ಇತರ ಅಂಶಗಳೂ ಉಂಟು. ದೇಶದ ಯಾವ ಭಾಗಗಳಲ್ಲಿ ಮುಸ್ಲಿಂ ಜನಸಂಖ್ಯೆ ಉಳಿದೆಡೆಗಿಂತ ಹೆಚ್ಚು ವೇಗದಲ್ಲಿ ವರ್ಧಿಸಿದೆ ಎಂಬುದೂ ಗಮನ ಸೆಳೆಯುತ್ತದೆ. ಹೀಗೆ ಉಳಿದೆಡೆಗಳಿಗಿಂತ ವೇಗವಾಗಿ ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿರುವುದು ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ಗೋವಾ, ಉತ್ತರಾಖಂಡ್, ಜಮ್ಮು-ಕಾಶ್ಮೀರ, ದೆಹಲಿ ಮತ್ತು ಹರಿಯಾಣಾಗಳಲ್ಲಿ. ಅಸ್ಸಾಮಿನಲ್ಲಿ ೨೦೦೧ರಲ್ಲಿ ಶೇ. ೩೦.೯ ಇದ್ದ ಮುಸ್ಲಿಂ ಜನಸಂಖ್ಯಾ ಪ್ರಮಾಣ ೨೦೧೧ರಲ್ಲಿ ಶೇ. ೩೪.೨ಕ್ಕೆ ಏರಿದೆ. (೧೯೭೧ರಲ್ಲಿ ಅದು ಶೇ. ೨೪.೬ರಷ್ಟು ಮಾತ್ರ ಇದ್ದಿತು.) ಈಚಿನ ವರ್ಷಗಳಲ್ಲಿ ಅಸ್ಸಾಮಿನ ಹಲವು ಜಿಲ್ಲೆಗಳೂ ತಾಲ್ಲೂಕುಗಳೂ ಹೆಚ್ಚುಕಡಮೆ ಪೂರ್ಣ ಮುಸ್ಲಿಂಪ್ರದೇಶಗಳೇ ಆಗಿರುವುದನ್ನು ಕಾಣಬಹುದು. ಕೇರಳ, ಪಶ್ಚಿಮ ಬಂಗಾಳ, ಹರಿಯಾಣಾ ರಾಜ್ಯಗಳ ಹಲವು ಜಿಲ್ಲೆ-ತಾಲ್ಲೂಕುಗಳಲ್ಲಿಯೂ ಈಗಾಗಲೇ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ.
ಕೇರಳದಂತಹ ರಾಜ್ಯದಲ್ಲಿಯೂ ಮುಸ್ಲಿಮರ ಪ್ರಮಾಣ ಏರಿರುವುದನ್ನು ಗಮನಿಸಿದಲ್ಲಿ ಕೇವಲ ಅನಕ್ಷರತೆಯೇ ಸಂಖ್ಯಾವೃದ್ಧಿಗೆ ಕಾರಣವೆಂಬ ಊಹೆಗೆ ಆಧಾರ ಕಾಣದು. ಪೂರ್ವಾಂಚಲ ಮೊದಲಾದೆಡೆಗಳ ಮಾಹಿತಿ ಇನ್ನೂ ಲಭ್ಯವಿಲ್ಲದ ಕಾರಣ ಕ್ರೈಸ್ತರ ಜನಸಂಖ್ಯಾವಿನ್ಯಾಸ ವಿವರಗಳನ್ನು ಕಾದುನೋಡಬೇಕಾಗಿದೆ. ಲಬ್ಧವಿರುವಷ್ಟು ವಿವರಗಳಿಂದಲೂ ಸ್ಥಿರಪಡುವ ಸಂಗತಿ ಯೆಂದರೆ – ಈಚಿನ ಅವಧಿಯನ್ನಷ್ಟೆ ಪರಿಶೀಲಿಸಿದರೂ – ಇಡೀ ದೇಶದಲ್ಲಿ ೨೦೦೧ರಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ. ೮೦.೪೫ರಷ್ಟಿದ್ದ ಹಿಂದೂಗಳ ಪ್ರಮಾಣ ೨೦೧೧ರಲ್ಲಿ ಶೇ. ೭೮.೩೫ಕ್ಕೆ ಇಳಿದಿದೆ.ಸರ್ಕಾರಗಳ ಸತತ ಅಲ್ಪಸಂಖ್ಯಾತಪರ ಧೋರಣೆಗಳು ಮತ್ತಿತರ ಕಾರಣಗಳಿಂದಲೂ ಹಿಂದೂಗಳಿಂದ ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಕೊಳ್ಳಬಯಸುವ ಸಮುದಾಯಗಳು ಅನೇಕ ಇವೆ. ಇಂತಹ ಸಮುದಾಯಗಳ ಸಂಖ್ಯೆ ೧೯೯೦ರ ದಶಕದಲ್ಲಿ ೩೩ ಲಕ್ಷ ಮಾತ್ರವಿದ್ದದ್ದು ಈಗ ೬೬ ಲಕ್ಷ ದಾಟಿದೆ. ಇದೂ ಹಿಂದೂಗಳ ಜನಸಂಖ್ಯಾಪ್ರಮಾಣದ ಹ್ರಾಸಕ್ಕೆ ಕಾರಣವಾಗಿದೆ.
೨೦೧೧ರ ಜನಗಣತಿಯ ಸಂದರ್ಭದಲ್ಲಿ ದೇಶದ ಹಲವು ಭಾಗಗಳಲ್ಲಿ ಜನರು ತಮ್ಮನ್ನು ಹಿಂದೂಗಳೆಂದು ಗುರುತಿಸಿಕೊಳ್ಳದಿರುವಂತೆ ಅವರನ್ನು ಓಲೈಸಲು ಆಸಕ್ತ ತಂಡಗಳು ವ್ಯಾಪಕ ಪ್ರಚಾರ ನಡೆಸಿದ್ದವು. ಅಧಿಕೃತ ಸಂಖ್ಯೆಗಳು ಸೂಚಿಸುವುದಕ್ಕಿಂತ ಮುಸ್ಲಿಂ ಜನಸಂಖ್ಯೆ ಸುಮಾರು ಶೇ.೩ರಷ್ಟು ಅಧಿಕವಾಗಿದೆ ಎಂದು ಇಮಾಮ್ ಬುಖಾರಿ ಆಗಾಗ ಹೇಳಿರುವುದುಂಟು. ೧೯೮೦ರ ಒಂದು ದಶಕದಲ್ಲಿಯೆ ಉತ್ತರಪ್ರದೇಶದಲ್ಲಿ ಮುಸ್ಲಿಂ ಜನಸಂಖ್ಯೆಯ ಪ್ರಮಾಣ ಶೇ. ೧೫.೫೩ರಿಂದ ಶೇ. ೧೭.೩೩ಕ್ಕೆ ಏರಿತ್ತು. ಅದೇ ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಸಂಖ್ಯೆಯ ಪ್ರಮಾಣ ಶೇ. ೨೯.೫೫ರಿಂದ ಶೇ. ೩೬.೮೯ಕ್ಕೆ ಜಿಗಿದಿತ್ತು.ಒಂ ದೇ ಮಾತಿನಲ್ಲಿ ಹೇಳುವುದಾದರೆ: ಭಾರತದಲ್ಲಿ ವ್ಯವಸ್ಥಿತ ಜನಗಣತಿ ಆರಂಭವಾದಾಗಿನಿಂದ (೧೮೮೧) ಇದೇ ಅಸಮತೋಲವೃದ್ಧಿಯನ್ನು ಕಾಣುತ್ತೇವೆ.
ವಿದಿತ ಆತಂಕ
ಬಂಗ್ಲಾದೇಶದಿಂದಲೂ ಇತರ ಹಲವೆಡೆಗಳಿಂದಲೂ ಬಂಗ್ಲಾದೇಶಮೂಲದ ಮುಸ್ಲಿಮರು ಲಕ್ಷಾವಧಿ ಸಂಖ್ಯೆಯಲ್ಲಿ ಭಾರತದೊಳಕ್ಕೆ ಅಕ್ರಮಪ್ರವೇಶ ಮಾಡುತ್ತಿರುವುದು ವಿದಿತವೇ ಆಗಿದೆ.
೧೯೭೨ರಲ್ಲಿ ಢಾಕಾ ಶಿಬಿರಗಳಲ್ಲಿ ಏಳೂವರೆ ಲಕ್ಷದಷ್ಟು ಬಿಹಾರಿ ಮುಸ್ಲಿಮರು ಇದ್ದರು. ಅವರಲ್ಲಿ ೩೩ ಸಾವಿರದಷ್ಟು ಮಂದಿಗೆ ಸೌದಿ ಅರೇಬಿಯಾ ಆಸರೆ ನೀಡಿತು. ಇದೀಗ ಢಾಕಾ ಶಿಬಿರಗಳಲ್ಲಿ ಇರುವವರ ಸಂಖ್ಯೆ ಎರಡು ಲಕ್ಷಕ್ಕೂ ಕಡಮೆ. ಹಾಗಾದರೆ ಉಳಿದ ೫ ಲಕ್ಷ ಮಂದಿ ಎಲ್ಲಿಗೆ ಹೋದರು?
ನುಸುಳುಕೋರರು ದೇಶದೆಲ್ಲೆಡೆ ಹರಡಿಕೊಂಡಿರುವುದರಿಂದ ಈಚಿನ ವರ್ಷಗಳಲ್ಲಿ ಗುಜರಾತ್, ದೆಹಲಿ, ಮಹಾರಾಷ್ಟ್ರ, ದೆಹಲಿ ಮೊದಲಾದೆಡೆಗಳಲ್ಲಿ ದೊಡ್ಡ ಸಮಸ್ಯೆಗಳು ತಲೆದೋರಿವೆ.
ದೇಶದ ಹತ್ತಾರು ಜಿಲ್ಲೆಗಳೂ ತಾಲ್ಲೂಕುಗಳೂ ಮುಸ್ಲಿಂ ಪ್ರಧಾನ ಭಾಗಗಳಾದಲ್ಲಿ ಇನ್ನಷ್ಟು ಜಮ್ಮು-ಕಾಶ್ಮೀರಗಳು ನಿರ್ಮಾಣಗೊಳ್ಳುವುದಿಲ್ಲವೆ?
ಇಷ್ಟಾಗಿ ಮುಸ್ಲಿಂ ಜನಬಾಹುಳ್ಯದಿಂದಾಗಿ ಭಾರತದಲ್ಲಷ್ಟೆ ಸಮಸ್ಯೆಗಳು ಏರ್ಪಡುತ್ತಿವೆ ಎಂದೇನು ಭಾವಿಸಲು ಕಾರಣವಿಲ್ಲ. ಉದಾಹರಣೆಗೆ: ಮಲೇಷಿಯಾದಲ್ಲಿಯೂ ದೊಡ್ಡ ಪ್ರಮಾಣದ ಮುಸ್ಲಿಮೇತರರು ಉಚ್ಚಾಟಿತರಾಗಿದ್ದಾರೆ.
ಈಚಿನ ದಿನಗಳಲ್ಲಿ `ಘರ್ ವಾಪಸೀ’ ಪ್ರಕ್ರಿಯೆಯ ಬಗ್ಗೆ ಎಲ್ಲೆಡೆ ಹುಯಿಲೆದ್ದಿದೆ. ತಾಳ್ಮೆಯಿಂದ ಯೋಚಿಸುವಾಗ – ಕೃತಕ ಕಾರಣಗಳಿಂದಲೋ ಒತ್ತಡಗಳಿಂದಲೋ ಮತಾಂತರಿತರಾದವರಿಗೆ ಮಾತೃಧರ್ಮಕ್ಕೆ ಮರಳಲು ಅವಕಾಶ ಕಲ್ಪಿಸುವುದಕ್ಕಿಂತ ಸಭ್ಯ ಪರಿಹಾರ ಬೇರೆ ಯಾವುದು ಇದ್ದೀತು?
ಬಾಹ್ಯ ಪರಿವರ್ತನೆಗಳ ವ್ಯರ್ಥತೆಯ ಮತ್ತು ಅಧ್ಯಾತ್ಮದೃಷ್ಟಿಯ ಪಾರಮ್ಯದ ಬಗೆಗೆ ವ್ಯಾಪಕ ಜನಶಿಕ್ಷಣ ನಡೆಯುವುದು ಅಪೇಕ್ಷಣೀಯವಾದರೂ, ಇಂತಹ ಪ್ರಕ್ರಿಯೆಗಳು ಅಪೇಕ್ಷಿತ ಕಾಲಪರಿಧಿಗಳೊಳಗೆ ಶಕ್ಯವಾಗುವ ಸಂಭವ ಕಾಣದು.?