ಜನಸಂಖ್ಯೆಯ ಪ್ರಮಾಣದಲ್ಲಿ ಚೀಣಾವನ್ನು ಭಾರತ ಹಿಂದಿಕ್ಕಬಹುದೆಂಬ ಸಂಭವಮಂಡನೆ ಒಂದಷ್ಟು ಸಮಯದಿಂದ ಪ್ರಚಲಿತವಿತ್ತು. ಈ ಊಹನೆಯು ನಿಜವಾಗುತ್ತಿದೆಯೆಂಬ ಸೂಚನೆ ಇತ್ತೀಚೆಗೆ ಲಭಿಸಿದೆ. ಈ ವರ್ಷದ (೨೦೨೩) ನಡುಭಾಗದ ವೇಳೆಗೆ ಭಾರತದ ಜನಸಂಖ್ಯೆ ಚೀಣಾದ್ದಕ್ಕಿಂತ ಮೂವತ್ತು ಲಕ್ಷದಷ್ಟು ಅಧಿಕವಾಗಬಹುದು – ಎಂಬ ಅಂದಾಜನ್ನು ಇದೀಗ ವಿಶ್ವಸಂಸ್ಥೆ ಪ್ರಕಟಿಸಿದೆ. ಆ ಅಂದಾಜಿನಂತೆ ಭಾರತದ ಜನಸಂಖ್ಯೆ ೧.೪೨೮೬ ಶತಕೋಟಿ ತಲಪುತ್ತದೆ; ಚೀಣಾದ್ದು ೧.೪೨೫೭ ಶತಕೋಟಿಯಷ್ಟು ಇರುತ್ತದೆ.
ಈ ಮಾಹಿತಿ ಆರ್ಥಿಕಾದಿ ವಲಯಗಳಲ್ಲಿ ಪರಾಮರ್ಶನೆಗೆ ಗ್ರಾಸವಾಗಿದೆ.
ಜನಸಂಖ್ಯೆ ಹೆಚ್ಚಿದಷ್ಟೂ ಸಮಸ್ಯೆಗಳು ಹೆಚ್ಚುತ್ತವೆಂಬ ಹಿಂದೆ ವಾಡಿಕೆಯಾಗಿದ್ದಂಥ ಗಾಬರಿಗಳಿಗೆ ಕಾರಣವಿಲ್ಲವೆಂದೂ ಟಿಪ್ಪಣಿ ಮಾಡಿರುವ ವಿಶ್ವಸಂಸ್ಥೆಯ ವರದಿ ‘೮ ಶತಕೋಟಿ ಜೀವಗಳು, ಅನಂತ ಸಾಧ್ಯತೆಗಳು, ಸ್ಥಿರೀಕೃತ ಹಕ್ಕುಗಳು, ಹೆಚ್ಚಿನ ಆಯ್ಕೆ ಅವಕಾಶಗಳು’ ಎಂದು ಸದ್ಯಃಸ್ಥಿತಿಯ ಗುಣಾಂಶಗಳನ್ನು ಪ್ರಮುಖವಾಗಿ ನಮೂದಿಸಿದೆ.
ವರವೆ, ಶಾಪವೆ?
ಜನಸಂಖ್ಯೆಯ ಹೆಚ್ಚಳ ದೇಶಕ್ಕೆ ಅನುಕೂಲಕರವೆಂದು ಒಂದು ವರ್ಗದ ತಜ್ಞರ ಅಭಿಮತವಿದ್ದರೆ ಈ ಹೆಚ್ಚಳದಿಂದ ಭೂಮಿ, ಕಾಡು, ನೀರು, ಗಾಳಿ ಮೊದಲಾದ ದೇಶದ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚಿ ಕೊರತೆಗಳುಂಟಾಗುತ್ತವೆ ಎಂಬುದು ಕೆಲವರ ವಾದ. ‘ಇರುವುದೊಂದೇ ಭೂಮಿ.’
ಒಂದು ದೇಶದ ಜನಸಂಖ್ಯೆಯ ಪ್ರಮಾಣವನ್ನು ಜಾಗತಿಕ ಸ್ಥಿತಿಯ ಭೂಮಿಕೆಯಲ್ಲಿಯೂ ವಿಶ್ಲೇಷಣೆ ಮಾಡಬೇಕಾಗುತ್ತದೆಂಬುದು ಮತ್ತೊಂದು ವಾದ.
ಸ್ಥೂಲವಾಗಿ ಹೇಳುವುದಾದರೆ ಒಂದು ದೇಶದ ಜನಸಂಖ್ಯೆಗೂ ಅದರ ಆರ್ಥಿಕ ಮುನ್ನಡೆಗೂ ಸಂಬಂಧವಿರುತ್ತದೆ. ದುಡಿಯುವ ಕೈಗಳು ಹೆಚ್ಚಾಗಿದ್ದಲ್ಲಿ ಸಂಪದುತ್ಪಾದನೆ ಸಹಜವಾಗಿ ಹೆಚ್ಚುತ್ತದೆ – ಎಂಬುದು ಸರಳ ತರ್ಕ. ಹಿಂದಿನ ವರ್ಷಗಳಲ್ಲಿ ಚೀಣಾದ ಆರ್ಥಿಕತೆಯ ವೃದ್ಧಿಗೆ ಕಾರಣವಾಗಿದ್ದ ಅಂಶಗಳಲ್ಲೊಂದು ಅಲ್ಲಿಯ ಜನಸಂಖ್ಯಾಧಿಕ್ಯವೇ. ಪೂರಕವಾಗುವ ಅನ್ಯ ಅಂಶಗಳು ಹಲವು ಇದ್ದರೂ ಅಧಿಕ ಜನಸಂಖ್ಯೆಯೂ ಒಂದು ಪ್ರಮುಖ ಸಂಪನ್ಮೂಲವೆಂಬುದನ್ನು ಅಲ್ಲಗಳೆಯಲಾಗದು. ದುಡಿಯುವ ವರ್ಗದ ಹೆಚ್ಚಳವಾದಲ್ಲಿ ಉತ್ಪಾದನೆಯ ವೃದ್ಧಿ ಮಾತ್ರವಲ್ಲದೆ ಉಳಿತಾಯದ ಹೆಚ್ಚಳ ಮೊದಲಾದ ಅನ್ಯ ಲಾಭಗಳೂ ಸಿದ್ಧಿಸುತ್ತವೆ. ಇದರ ಫಲವಾಗಿ ಹಣದ ಹೂಡಿಕೆಯೂ ಅಧಿಕಗೊಳ್ಳುತ್ತದೆ. ಯೂರೋಪಿನ ಎಲ್ಲೆಡೆ ದುಡಿಯಲಾಗದ ಅಪರವಯಸ್ಕರ ಪ್ರಮಾಣ ನಿರಂತರ ಏರುತ್ತಿದ್ದು ಅವರ ಪೋಷಣೆಯ ಹೊರೆ ಆತಂಕ ತರುತ್ತಿದೆ. ಅಮೆರಿಕದಲ್ಲೂ ಅದೇ ಸ್ಥಿತಿ ಇದೆ.
ಬೇರೆಡೆಗಳಂತಲ್ಲದೆ ಭಾರತದಲ್ಲಿ ತರುಣರ ಎಂದರೆ ದುಡಿಯಬಲ್ಲವರ ಪ್ರಮಾಣ ಅಧಿಕವಾಗಿದ್ದು ಇದೇ ಸ್ಥಿತಿ ಹಲವು ದಶಕಗಳ ಕಾಲ ಮುಂದುವರಿಯಲಿದೆ. ಈ ಸನ್ನಿವೇಶ ಭಾರತಕ್ಕೆ ವರದಾನವಾಗಿದೆ.
ಸವಾಲುಗಳು
ಇದರ ಪ್ರಯೋಜನ ಒಂದಷ್ಟುಮಟ್ಟಿಗೆ ಸಹಜ ಲಬ್ಧವಾದರೂ ಪೂರ್ಣ ಲಾಭ ಕೈಹತ್ತಬೇಕಾದರೆ ಹಲವು ಪೂರಕ ಕ್ರಮಗಳೂ ಅನಿವರ್ಯ. ಮುಂದಿನ ಹಲವು ದಶಕಗಳಲ್ಲಿ ತಿಂಗಳಿಗೆ ಹತ್ತು ಲಕ್ಷದಷ್ಟು ಹೊಸಬರು ಕಾರ್ಮಿಕ ಪಡೆಗೆ ಸೇರ್ಪಡೆಗೊಳ್ಳಲಿದ್ದಾರೆ. ಉದ್ಯೋಗಸೃಷ್ಟಿಯೂ ಶಿಕ್ಷಣವೂ ಕೌಶಲಾಭಿವೃದ್ಧಿಯೂ ಆ ಪ್ರಮಾಣದಲ್ಲಿ ಬೆಳೆಯಬೇಕಾಗುತ್ತದೆ. ಇದೆಲ್ಲ ತಾನಾಗಿ ಆಗುವಂಥದಲ್ಲ. ವಿಶೇಷ ಯೋಜನೆಗಳು ಅವಶ್ಯಬೀಳುತ್ತವೆ. ನವೋದ್ಯಮ ಸೃಷ್ಟಿಯ ವೇಗ ಈಗ ಇರುವುದಕ್ಕಿಂತ ಬಹುಪಾಲು ಹೆಚ್ಚಬೇಕಾಗಿದೆ. ಹಾಗೆ ಆದಲ್ಲಿ ಮಾತ್ರ ನಮ್ಮ ಜನಸಂಖ್ಯಾಧಿಕ್ಯದ ಮತ್ತು ವಿಶೇಷವಾಗಿ ತರುಣಶಕ್ತಿಯ ಲಭ್ಯತೆಯ ಪೂರ್ಣ ಪ್ರಯೋಜನ ನಮಗೆ ಸಿದ್ಧಿಸಬಲ್ಲದು.
ಬೃಹನ್ನಗರಗಳಿಗೆ ಹೋಲಿಸಿದಲ್ಲಿ ದ್ವಿತೀಯದರ್ಜೆಯ ನಗರಗಳಲ್ಲಿಯೂ ಗ್ರಾಮೀಣಭಾಗಗಳಲ್ಲಿಯೂ ಔದ್ಯಮಿಕ ಚೇತರಿಕೆ ಇದೀಗ ಅಪೇಕ್ಷಿತ ಮಟ್ಟದಲ್ಲಿಲ್ಲ. ಈ ಅಂತರವನ್ನು ಕಡಮೆ ಮಾಡಬೇಕಾದ ಆವಶ್ಯಕತೆ ಇದೆ. ಮಹಿಳೆಯರ ಉದ್ಯೋಗಾವಕಾಶಗಳಲ್ಲಿಯೂ ಹೆಚ್ಚಳ ಆಗಬೇಕಾಗಿದೆ. ನಿರುದ್ಯೋಗ-ಅರೆಉದ್ಯೋಗದ ಸ್ಥಿತಿ ನೀಗಬೇಕಾಗಿದೆ.
ಇದು ಸೂಕ್ಷ್ಮವೂ ಜಟಿಲವೂ ಆದ ಪ್ರಕ್ರಿಯೆ. ಬಹು-ಸ್ತರೀಯ ಉದ್ಯಮನಿರ್ಮಿತಿಯೂ ಕೌಶಲವೃದ್ಧಿಯೂ ಸಾಧ್ಯವಾಗಬೇಕಾದರೆ ಆಧಾರಮಟ್ಟದ ಒಳಹಂದರದ ಮತ್ತು ಮೂಲಸೌಕರ್ಯಗಳ ವರ್ಧನೆ ಅತ್ಯವಶ್ಯ. ಇದಕ್ಕೆ ಇತ್ತೀಚಿನ ವರ್ಷಗಳಲ್ಲಿ ಆದ್ಯತೆ ಸಲ್ಲುತ್ತಿರುವುದು ಆಶಾಸ್ಪದವಾಗಿದೆ. ಬೇರೆ ಶಬ್ದಗಳಲ್ಲಿ ಹೇಳಬೇಕಾದರೆ – ಮಾನವಶಕ್ತಿ ಸಂವರ್ಧನೆಗೆ ಆದ್ಯತೆ ಸಲ್ಲಬೇಕಾಗಿದೆ.
ತರುಣ ಸಮುದಾಯದವರಲ್ಲಿ ಉದ್ಯೋಗಾರ್ಹ ಕ್ಷಮತೆಯನ್ನು ಬೆಳೆಸಲೂ ವಿಶೇಷ ಯೋಜನೆಗಳ ಆವಶ್ಯಕತೆಯಿದೆ.
ಸಂಧಿಕಾಲ
ಈ ಸಂಗತಿಗಳನ್ನೆಲ್ಲ ಪರಿಶೀಲಿಸಿದಲ್ಲಿ ಹೊಮ್ಮುವ ತಥ್ಯವೆಂದರೆ ಇದೀಗ ಭಾರತದ್ದು ಒಂದು ಸಂಧಿಕಾಲವಾಗಿದೆಯೆಂಬುದು.
ಆರ್ಥಿಕ ಹಿಂಜರಿತವಿದ್ದಾಗ ಜನಸಂಖ್ಯಾಧಿಕ್ಯ ಹೊರೆಯೆನಿಸುವುದು ಸಹಜ.
ಆರ್ಥಿಕವೃದ್ಧಿಗೆ ಹಲವು ಸಹಜ ಪರಿಮಿತಿಗಳೂ ಇವೆ. ಉದಾಹರಣೆಗೆ: ಭಾರತ ಕೃಷಿಪ್ರಧಾನ ದೇಶ. ಆದರೆ ಕಾಲಕ್ರಮದಲ್ಲಿ ಜಮೀನುಗಳು ಪಾಲಾಗುತ್ತ ಹೋಗಿ ಹಿಡುವಳಿಗಳ ಗಾತ್ರ ಕುಗ್ಗುತ್ತಿದೆ. ಈ ಕೊರತೆಯನ್ನು ಸರಿದೂಗಿಸಲು ಔದ್ಯಮಿಕೋತ್ಪಾದನೆ ಬಹುಪಾಲು ಹೆಚ್ಚಬೇಕಾಗುತ್ತದೆ. ಇದನ್ನು ಸಾಧಿಸಲು ದೀರ್ಘಕಾಲದ ದೃಢ ಪ್ರಯಾಸ ಆಗಬೇಕಾಗುತ್ತದೆ.
ಇನ್ನು ಎರಡೂವರೆ ದಶಕಗಳಲ್ಲಿ ‘ಅಭಿವರ್ಧಿತ’ ರಾಷ್ಟ್ರಗಳ ಪಾಲಿಗೆ ಸೇರಬೇಕೆಂಬ ಭಾರತದ ಲಕ್ಷ್ಯ ಈಡೇರಬೇಕಾದರೆ ಜನಸಂಖ್ಯಾಧಿಕ್ಯದ ಪೂರ್ಣ ಲಾಭ ಪಡೆಯುವ ದಿಶೆಯಲ್ಲಿ ಸಮರೋಪಾದಿಯ ಪ್ರಯತ್ನಗಳು ನಡೆಯುವುದು ಆವಶ್ಯಕವಿದೆ. ಮುಂದಿನ ಮೂರು ದಶಕಗಳಲ್ಲಿ ೩೦ ಕೋಟಿ ದಾಟಲಿರುವ ವೃದ್ಧರ ಪ್ರಮಾಣ, ಜಾಗತಿಕ ಆರ್ಥಿಕ ಸಂಕ್ಷೋಭೆಗಳು, ಹವಾಮಾನ ವೈಪರೀತ್ಯಗಳು – ಈ ಪರಿಮಿತಿಗಳನ್ನೆಲ್ಲ ಮೆಟ್ಟಿ ನಿಂತು ಜನಸಂಖ್ಯೆಯ ಹೆಚ್ಚಳವನ್ನು ಲಾಭಕಾರಿಯಾಗಿಸಿಕೊಳ್ಳಲು ಸರ್ಕಾರದ ನೀತಿರೂಪಣ ಮತ್ತು ಅನುಷ್ಠಾನಗಳಲ್ಲಿ ದಾರ್ಢ್ಯವೂ ಪ್ರಯತ್ನಸಾತತ್ಯವೂ ವಿವಿಧ ಜನವರ್ಗಗಳ ಉತ್ಸಾಹಪೂರ್ಣ ಸಹಕಾರವೂ ಅವಶ್ಯವಾಗುತ್ತವೆ. ಅವೆಲ್ಲ ಕೂಡಿಬರಲೆಂದು ಹಾರೈಸೋಣ.