ಯಾವುದೇ ರಾಜಕೀಯ ಪಕ್ಷಕ್ಕೆ ಅದರದೇ ಆದ ಸಣ್ಣದೋ ದೊಡ್ಡದೋ ನಿಷ್ಠಾವಂತ ಬೆಂಬಲಿಗರ ಗುಂಪೊಂದಿರುತ್ತದೆ. ಅವರು ತಮ್ಮ ಪಕ್ಷದ ಸರ್ಕಾರದಿಂದ ಪುಕ್ಕಟೆ ಸೌಲಭ್ಯಗಳನ್ನು ಬಯಸುವುದಿಲ್ಲ. ಅವರು ನಿರೀಕ್ಷಿಸುವುದು ಸ್ಥಾಪಿತ ಮೌಲ್ಯಗಳಿಗೆ ತಮ್ಮ ಪಕ್ಷ ಹಾಗೂ ಸರ್ಕಾರದ ನಿರಂತರ ನಿಷ್ಠೆಯನ್ನಷ್ಟೇ. ಬಿಜೆಪಿಯ ಆ ಬಗೆಯ ನಿಷ್ಠಾವಂತ ಬೆಂಬಲಿಗರು ಬಯಸುವುದು ಹಿಂದೂ/ಭಾರತೀಯ ಮೌಲ್ಯಗಳಿಗೆ ಪಕ್ಷದ ಹಾಗೂ ಸರ್ಕಾರದ ಮುಕ್ಕಾಗದ ಬದ್ಧತೆ. ಅದನ್ನು ಬಿಜೆಪಿ ತೋರಿದೆಯೇ? ರಾಷ್ಟ್ರಮಟ್ಟದಲ್ಲೇ ನೋಡುವುದಾದರೆ ನೂಪುರ್ ಶರ್ಮ, ಕಾಜಲ್ ಹಿಂದೂಸ್ತಾನಿಯಂತಹವರ ಸಂಕಷ್ಟಗಳನ್ನು ದೂರ ಮಾಡಲು ಕೇಂದ್ರಸರ್ಕಾರ ಅಗತ್ಯವಿರುವಷ್ಟು ಮನಸ್ಸು ಮಾಡುತ್ತಿಲ್ಲ ಎನ್ನುವುದು ನಿಷ್ಠಾವಂತ ಬಿಜೆಪಿಗರಿಗೆ ಅರ್ಥವಾಗಿದೆ. ನೂಪುರ್ ಶರ್ಮಗೆ ಸಂಬಂಧಿಸಿದಂತೆ ಪುಟ್ಟ ಖತರ್ನ ಎದುರು ಕೇಂದ್ರಸರ್ಕಾರ ಬಾಗಿದ್ದು ಬಿಜೆಪಿಯ ಕಟ್ಟಾ ಬೆಂಬಲಿಗರಿಗೆ ಸಮ್ಮತವಾಗಿಲ್ಲ. ಜೊತೆಗೆ ಸಮಾನ ನಾಗರಿಕ ಕಾಯಿದೆ, ಪೌರತ್ವ ತಿದ್ದುಪಡಿ ಕಾಯಿದೆಗಳನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರಲು; ಹಿಂದೂ–ವಿರೋಧಿಯಾದ ವಕ್ಫ್ ಕಾಯಿದೆ, ಅಲ್ಪಸಂಖ್ಯಾತರ ಹಕ್ಕುಗಳ ಕಾಯಿದೆ, ಪೂಜಾಸ್ಥಳಗಳ ಕಾಯಿದೆಗಳನ್ನು ರದ್ದುಗೊಳಿಸಲು ಸರ್ಕಾರ ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂಬ ಅನಿಸಿಕೆಯೂ ಅವರಲ್ಲಿ ಗಾಢವಾಗುತ್ತಿದೆ.
ಕರ್ನಾಟಕದ ಜನತೆ ಹದಿನಾರನೆಯ ವಿಧಾನಸಭೆಯನ್ನು ಆಯ್ಕೆ ಮಾಡಿದ್ದಾರೆ. ಚುನಾವಣಾ ಫಲಿತಾಂಶಗಳು ಹೊರಬಿದ್ದು ಈ ಲೇಖನ ಬರೆಯುವ ಹೊತ್ತಿಗೆ ಐದು ದಿನಗಳಾಗುತ್ತಿವೆ. ರಾಜ್ಯಕ್ಕೆ ಹೊಸಸರ್ಕಾರ ದಕ್ಕುವುದರಲ್ಲಿ ನಾಲ್ಕೈದು ದಿನಗಳ ವಿಳಂಬವಾದದ್ದು ಅಸಹಜವೇನಲ್ಲ. ೨೦೧೪ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆದು ವಾರ ಕಳೆದರೂ ಸರ್ಕಾರ ರಚನೆಯಾಗಿರಲಿಲ್ಲ. ಕರ್ನಾಟಕವನ್ನೇ ತೆಗೆದುಕೊಂಡರೆ ೨೦೧೮ರ ಚುನಾವಣೆಗಳಾಗಿ ಎರಡು ವಾರಗಳು ಕಳೆದರೂ ರಾಜ್ಯದ ಜನತೆ ಹೊಸಸರ್ಕಾರಕ್ಕಾಗಿ ಕಾಯುತ್ತಲೇ ಇದ್ದುದನ್ನು ನೆನಪಿಸಿಕೊಳ್ಳಬಹುದು. ಆದರೆ ಆ ಎರಡು ಪ್ರಕರಣಗಳಿಗೂ ಇಂದಿನ ಕರ್‘ನಾಟಕ’ಕ್ಕೂ ವ್ಯತ್ಯಾಸವಿದೆ. ಉತ್ತರಪ್ರದೇಶದಲ್ಲಿ ರಾಜಕೀಯ ರಂಗದಾಚೆಯಿಂದ ಹೊಸಮುಖವೊಂದನ್ನು ತಂದು ದೆಹಲಿಯ ಗದ್ದುಗೆಗೆ ಕೀಲಿಕೈ ಎಂದು ಕರೆಸಿಕೊಳ್ಳುತ್ತಿದ್ದರೂ ದಶಕಗಳಿಂದಲೂ ಅವ್ಯವಸ್ಥೆಯ ಆಗರವಾಗಿದ್ದ ರಾಜ್ಯ ರಾಜಕಾರಣವನ್ನು ಸ್ವಚ್ಛಗೊಳಿಸಲು ಬಿಜೆಪಿ ಕೇಂದ್ರೀಯ ನಾಯಕತ್ವ ನಿರ್ಣಾಯಕ ನಡೆಯಲ್ಲಿ ತೊಡಗಿದ್ದರಿಂದ ಹೊಸಸರ್ಕಾರ ರಚನೆ ವಿಳಂಬಗೊಂಡಿತ್ತು. ಅತಂತ್ರ ವಿಧಾನಸಭೆಗೆ ಮುಖಾಮುಖಿಯಾದ ಕರ್ನಾಟಕದಲ್ಲಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೂ ಸಂಪುಟ ರಚಿಸಿ ಸರ್ಕಾರವನ್ನು ಸ್ಥಾಪಿಸುವ ಅವಕಾಶ ಸಿಗದೆ ರಾಜೀನಾಮೆ ನೀಡಿದ್ದು, ಅನಂತರ ಜೆಡಿ(ಎಸ್) ಮತ್ತು ಕಾಂಗ್ರೆಸ್ ಒಟ್ಟುಗೂಡಿ, ಸಮ್ಮಿಶ್ರಸರ್ಕಾರ ರಚನೆಗೆ ಸಾಂವಿಧಾನಿಕ ಅವಕಾಶ ಪಡೆದಾಗ್ಯೂ ಎರಡೂ ಪಕ್ಷಗಳ ನಡುವೆ ಖಾತೆಗಳ ಕ್ಯಾತೆಯಾಗಿ ಸರ್ಕಾರ ರಚನೆ ಮುಂದುಮುಂದಕ್ಕೆ ಹೋಗುತ್ತಲೇ ಇತ್ತು.
ಉತ್ತರಪ್ರದೇಶದಲ್ಲಿ ಬಿಜೆಪಿ ಕೇಂದ್ರೀಯ ನಾಯಕತ್ವದ ಲೆಕ್ಕಾಚಾರಿಕ ಅಪಾಯ ನಿರ್ವಹಣಾ ನಡೆ ಅದ್ಭುತ ಯಶಸ್ಸು ಕಂಡು ರಾಜ್ಯದ ರಾಜಕೀಯ, ಆಡಳಿತಾತ್ಮಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮುಖವೇ ಊಹಿಸಲಾಗದಿದ್ದ ಮಟ್ಟಕ್ಕೆ ಈ ಆರು ವರ್ಷಗಳಲ್ಲಿ ಬದಲಾಗಿಹೋಗಿರುವುದನ್ನೂ, ಆ ಪ್ರಕ್ರಿಯೆ ಡಬಲ್ ಎಂಜಿನ್ ಸಾಮರ್ಥ್ಯದಲ್ಲಿ ವೇಗವಾಗಿ ಮುಂದುವರಿಯುತ್ತಿರುವುದನ್ನೂ ನಾವು ನೋಡುತ್ತಲೇ ಇದ್ದೇವೆ. ಇದಕ್ಕೆ ವಿರುದ್ಧವಾಗಿ ಕರ್ನಾಟಕದಲ್ಲಿ ಅವಕಾಶವಾದಿ ರಾಜಕಾರಣಿಗಳು ನಡೆಸಿದ ರಾಜಕೀಯ ದೊಂಬರಾಟ ಒಂದೂವರೆ ವರ್ಷದಲ್ಲಿ ನೆಲಕಚ್ಚಿ, ಸರ್ಕಾರ ರಚನೆಯ ಸಾಮರ್ಥ್ಯ ಬಿಜೆಪಿಯ ಪಾಲಿಗೆ ದಕ್ಕಿದ್ದನ್ನೂ ಕಂಡಿದ್ದೇವೆ. ಇಂದಿನ ಕರ್ನಾಟಕದ ಸ್ಥಿತಿ ಇವೆರಡಕ್ಕಿಂತಲೂ ಹಲವು ಬಗೆಯಲ್ಲಿ ಭಿನ್ನ.
ಕಳೆದ ಮೂರೂವರೆ ವರ್ಷಗಳು ರಾಜ್ಯದ ಚುಕ್ಕಾಣಿ ಹಿಡಿದ ಬಿಜೆಪಿ ರಾಜ್ಯದಲ್ಲಿನ ಹಣದುಬ್ಬರ ಪ್ರಮಾಣ ಮತ್ತು ನಿರುದ್ಯೋಗ ಸ್ಥಿತಿಯನ್ನು ರಾಷ್ಟ್ರೀಯ ಸರಾಸರಿಗಿಂತ ಕ್ರಮವಾಗಿ ೨% ಮತ್ತು ೫% ಕೆಳಗೆ ಇರಿಸಿದರೂ, ಜಾಗತಿಕ ವರ್ಚಸ್ವೀ ರಾಜಕೀಯ ನೇತಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಉಸಿರುಗಟ್ಟುವ ವೇಗ ಮತ್ತು ಒತ್ತಡದಲ್ಲಿ ಪ್ರಚಾರ ನಡೆಸಿದರೂ ಬಿಜೆಪಿಗೆ ದಕ್ಕಿರುವುದು ಕಳೆದ ಹತ್ತೊಂಬತ್ತು ವರ್ಷಗಳಲ್ಲೇ ಅತ್ಯಂತ ಕಡಮೆ ಸ್ಥಾನಗಳು. ಅದಕ್ಕೆ ವಿರುದ್ಧವಾಗಿ ರಾಹುಲ್ಗಾಂಧಿಯವರ ವಿದೂಷಕ ನಡೆನುಡಿಗಳು, ಪ್ರಿಯಾಂಕಾಗಾಂಧಿಯವರ ವೈಯಕ್ತಿಕ ವರ್ಚಸ್ಸಿನ ವೃದ್ಧಿಯೇ ಪ್ರಧಾನವಾದ ಕಸರತ್ತುಗಳು, ಸೋನಿಯಾಗಾಂಧಿಯವರ ಕೊನೆಗಳಿಗೆಯ ಎಡವಟ್ಟು ಉಕ್ತಿಗಳು ಮತ್ತು ಒಟ್ಟಾರೆ ಕಾಂಗ್ರೆಸ್ ಪಕ್ಷದ ಪ್ರಶ್ನಾರ್ಹ ಆಶ್ವಾಸನೆಗಳು; ಇವೆಲ್ಲ ಇದ್ದೂ ಚುನಾವಣಾ ಪ್ರಣಾಳಿಕೆಯ ಹೊರತಾಗಿಯೂ ಆ ಪಕ್ಷ ಮೂವತ್ತೈದು ವರ್ಷಗಳ ನಂತರ ನಿಚ್ಚಳ ಬಹುಮತ ಪಡೆದಿದೆ ಮತ್ತು ಅದು ಬಿಜೆಪಿ ಸಾಧಿಸಿದ್ದಕ್ಕಿಂತಲೂ ಎರಡುಪಟ್ಟು ಹೆಚ್ಚಾಗಿದೆ.
ಹಾಗಿದ್ದರೆ ಕರ್ನಾಟಕದಲ್ಲಿ ನಡೆದದ್ದೇನು? ರಾಷ್ಟ್ರೀಯ ಮಟ್ಟದಲ್ಲಿ ೫೯% ಸಮ್ಮತಿ ಪ್ರಮಾಣ ಗಳಿಸಿ ಸಮೀಪದ ಪ್ರತಿಸ್ಪರ್ಧಿ ರಾಹುಲ್ಗಾಂಧಿಯವರಿಗಿಂತ ಆರುಪಟ್ಟು ಹೆಚ್ಚು ಮುಂದಿರುವ ನರೇಂದ್ರ ಮೋದಿಯವರ ವರ್ಚಸ್ಸು ಕುಗ್ಗುತ್ತಿದೆಯೇ? ‘ಮೋದಿ ಮ್ಯಾಜಿಕ್’ನ ಅಂತ್ಯದ ಆರಂಭವೇ ಇದು? ರಾಷ್ಟ್ರರಾಜಕಾರಣದಲ್ಲಿ ಅಪ್ರಸ್ತುತತೆಯ ದಾರಿಗಿಳಿದಿದ್ದ ರಾಹುಲ್ಗಾಂಧಿಯವರಿಗೆ ಕರ್ನಾಟಕದ ಜನತೆ ಮರುಜೀವ ನೀಡಿದ್ದಾರೆಯೇ? – ಇವು ಕರ್ನಾಟಕ ಚುನಾವಣಾ ಫಲಿತಾಂಶಕ್ಕೆ ಕಾರಣಗಳನ್ನು ರಾಜ್ಯದಾಚೆ ಹುಡುಕುವ ಕೆಲವು ಪ್ರಯತ್ನಗಳು ಸೃಷ್ಟಿಸಿರುವ ಪ್ರಶ್ನೆಗಳು. ಇನ್ನು ಬಿಜೆಪಿ ಹಿನ್ನಡೆ ಮತ್ತು ಕಾಂಗ್ರೆಸ್ ಮುನ್ನಡೆಗೆ ರಾಜ್ಯದೊಳಗೆ ಕಾರಣ ಹುಡುಕುವ ಕೆಲವು ಪ್ರಯತ್ನಗಳು ನೀಡುವ ಚಿತ್ರಣಗಳಲ್ಲೊಂದು ರಾಜ್ಯದ ಜನತೆ ಬಿಜೆಪಿಸರ್ಕಾರ ಸೃಷ್ಟಿಸಿಕೊಟ್ಟಿರುವ ಐತಿಹಾಸಿಕ ಉತ್ತಮ ಜೀವನಮಟ್ಟವನ್ನು ನಿರ್ಲಕ್ಷಿಸಿ, ಕಾಂಗ್ರೆಸ್ ಕಣ್ಣಮುಂದೆ ಅಲ್ಲಾಡಿಸಿದ ಅವಾಸ್ತವಿಕ ಆಶ್ವಾಸನೆಗಳಿಗೆ ಬಲಿಬಿದ್ದು “ಮೇಲಿನ ಮೋಡ ನೋಡಿ ಸೇದೋ ಬಾವಿಯನ್ನು ಕೆಡಿಸಿದಂತಹ ಎಡವಟ್ಟು ಕೆಲಸ” ಮಾಡಿದ್ದಾರೆಯೇ?
ಇವೆಲ್ಲ ಪ್ರಶ್ನೆಗಳಿಗೆ ಒಂದೇ ಪದದ ಉತ್ತರ – ಒಂದು ದೊಡ್ಡ “ಇಲ್ಲ.’’
ಹಾಗಿದ್ದರೆ ಇಂದಿನ ಕರ್ನಾಟಕದ ನಾಟಕದ ವಿಮರ್ಶೆಗಿರುವ ಸೂಕ್ತ ಮಾನದಂಡಗಳೇನು? ರಂಗಸ್ಥಳವನ್ನು ನಾವು ಯಾವ ಕೋನದಿಂದ ವೀಕ್ಷಿಸಬೇಕು?
ನಿಷ್ಪಕ್ಷಪಾತ ಮನಃಸ್ಥಿತಿಯಿಂದ ಈ ಪ್ರಶ್ನೆಯನ್ನು ಗಂಭೀರವಾಗಿ ವಿಶ್ಲೇಷಿಸಲು ಹೋದರೆ ಒಂದಕ್ಕಿಂತ ಹೆಚ್ಚು ಕಹಿಸತ್ಯಗಳನ್ನು ಅನಿವಾರ್ಯವಾಗಿ ಹೇಳಲೇಬೇಕಾಗುತ್ತದೆ.
ಅದೆಷ್ಟೋ ಕನಸುಗಳೊಂದಿಗೆ ೧೯೫೬ರಲ್ಲಿ ಮೈಸೂರು ರಾಜ್ಯವಾಗಿ ಉದಯಿಸಿ, ಹದಿನೇಳರ ಜಾರುವ ನೆಲದಲ್ಲಿ ಕರ್ನಾಟಕವೆಂದು ದೇಶದ ಕಣ್ಸೆಳೆಯುವ ಹೊತ್ತಿಗೆ ಸ್ವಾತಂತ್ರ್ಯ, ಸ್ವಾವಲಂಬನೆ, ಆತ್ಮಗೌರವ, ಬಡತನ ನಿರ್ಮೂಲನೆ, ಸ್ವಚ್ಛ ಆಡಳಿತಗಳೆಂಬ ರೊಮ್ಯಾಂಟಿಕ್ ಮೌಲ್ಯಗಳೆಲ್ಲ್ಲ ಬಣ್ಣ ಕಳೆದುಕೊಂಡು ತಗಡುಗಳಾಗಿಹೋಗಿದ್ದವು. ಮೊದಮೊದಲು ನಾಚಿಕೆಯಲ್ಲಿ ಮುಖ ಮುಚ್ಚಿಕೊಳ್ಳುತ್ತಿದ್ದ ‘ಸಮಾಜವಾದಿಗಳ’ ಭ್ರಷ್ಟಾಚಾರ ಬೀದಿಯಲ್ಲಿ ಬೆತ್ತಲೆ ಕುಣಿಯಲೂತೊಡಗಿತ್ತು. ಹೀಗೆ ಕಾಂಗ್ರೆಸ್ಸಿಗರು ಗರೀಬಿ ಹಠಾವೋ ಎಂದು ಘೋಷಣೆ ಕೂಗುತ್ತಲೇ ತಮ್ಮ ಹಾಗೂ ಸ್ವಜನರ ಗರೀಬಿಯನ್ನು ಹಠಾಯಿಸಿಕೊಳ್ಳುವುದರಲ್ಲಿ ನಿರತರಾಗಿಹೋಗಿದ್ದರು. “ನಮ್ಮ ಜನರಿಗೆ ಉಪಕಾರ ಮಾಡದಿದ್ದರೆ ನಾನು ಮುಖ್ಯಮಂತ್ರಿಯಾಗಿದ್ದು ಏನು ಪ್ರಯೋಜನ?’’ ಎಂದು ಮುಖ್ಯಮಂತ್ರಿಯಾಗಿ ಆರ್. ಗುಂಡೂರಾವ್ ಕೇಳಿದಾಗ, “ನಿಮ್ಮ ಜನರನ್ನೆಲ್ಲ್ಲ ಒಂದು ಲಾರಿಯಲ್ಲಿ ತುಂಬಿ ಗುಂಡ್ಲುಪೇಟೆಗೋ ಚಾಮರಾಜನಗರಕ್ಕೋ ಬಿಟ್ಟು ಬನ್ನಿ” ಎಂದು ನಜೀರ್ಸಾಬ್ರಿಗೆ ಲಂಕೇಶ್ ಹೇಳಿದಾಗ ಸ್ವಜನಪಕ್ಷಪಾತ ಯಾವ ಮಟ್ಟದಲ್ಲಿದೆಯೆಂದು ನಾವೆಲ್ಲ ಬೆರಗುಗೊಂಡೆವು. ಅದೇ ಆವಧಿಯಲ್ಲಿ ‘ಮೌಲ್ಯಾಧಾರಿತ’ ಆಡಳಿತವೆಂಬ ಕನಸು ಬಿತ್ತಿದ ರಾಮಕೃಷ್ಣ ಹೆಗಡೆಯವರ ಮೌಲ್ಯ ಟೆಲಿಫೋನ್ ತಂತಿಗಳಲ್ಲಿ ಹರಿದುಹೋದದ್ದನ್ನು ಕಂಡು ನಾವು ಇನ್ನಷ್ಟು ಕನಲಿಹೋದೆವು. ಆಮೇಲೆ ಗೌಡರ ಗದ್ಲ, ತಂದೆ-ಮಕ್ಕಳ ಅಧಿಕಾರದಾಹಗಳನ್ನೂ ಕಂಡದ್ದಾಯಿತು ಬಿಡಿ. ಬಿಜೆಪಿಯ ಬೆನ್ನೇರಿ ಕುರ್ಚಿಗೆ ಜಾರಿಕೊಂಡ ಮಗರಾಯ ತಂದೆಯ ಮಾತು ಕೇಳಿ ವಿಶ್ವಾಸಘಾತಕತನ ತೋರಿ ಪಿತೃವಾಕ್ಯಪರಿಪಾಲನೆ ಮಾಡಿದಾಗ ರಾಜಕಾರಣ ಈ ಬಗೆಯ ಕೊಚ್ಚೆಯೇ ಎಂದು ದಿಗ್ಭ್ರಮೆಗೊಂಡೂಬಿಟ್ಟೆವು.
ಆನಂತರ ಬಿಜೆಪಿ ಯುಗ ಆರಂಭವಾದರೂ ಈ ಹದಿನೈದು ವರ್ಷಗಳಲ್ಲಿ ಆ ಪಕ್ಷಕ್ಕೆ ರಾಜ್ಯದ ಜನತೆ ಎಂದೂ ನಿಚ್ಚಳ ಬಹುಮತ ನೀಡಲಿಲ್ಲ ಎನ್ನುವುದನ್ನೂ ಗುರುತಿಸಬೇಕು. ಪರಿಣಾಮವಾಗಿ ನಡೆದ ಆಪರೇಷನ್ ಕಮಲಕ್ಕೆ ಗಣಿಧಣಿಗಳ ಹಣದ ಹೊಲಿಗೆ ಬಿದ್ದು ಎಲ್ಲ ಕಾಗೆಗಳೂ ಕಪ್ಪು ಎನ್ನುವಂತೆ ಎಲ್ಲ ರಾಜಕಾರಣಿಗಳೂ ಭ್ರಷ್ಟರೇ ಎಂದು ಮುಖ ತಿರುವಿದವರೆಷ್ಟೋ ಜನ. ಗೌಡರ ಗದ್ಲದಲ್ಲಿ ತನ್ನ ಕೂಗೇನೂ ಕೇಳದು ಎಂದು ಜೆಡಿಎಸ್ ತೊರೆದು ಕಾಂಗ್ರೆಸ್ ಪಾಳಯ ಸೇರಿ ಕನಸಿನ ನನಸಿಗೆ ಹತ್ತಿರಾಗುತ್ತಿದ್ದ ಎಸ್. ಸಿದ್ದರಾಮಯ್ಯ ಅಕ್ಟೋಬರ್ ೧೨, ೨೦೧೦ರಂದು ವಿಧಾನಸಭೆಯಲ್ಲಿ ಮೇಜು ಹತ್ತಿ ತೋಳೇರಿಸಿ ಕುಣಿದು ರಾಜ್ಯದ ಮುಂದಿನ ರಾಜಕಾರಣದ ಒಂದು ಟ್ರೇಲರ್ ಬಿಡುಗಡೆ ಮಾಡಿದರು. ಎರಡೂವರೆ ವರ್ಷಗಳಲ್ಲಿ ಸಿನೆಮಾ ‘ಸಿದ್ಧ’ಗೊಂಡು ರಿಲೀಸ್ ಸಹ ಆಯಿತು. ಅನಂತರದ ಐದು ವರ್ಷಗಳ ಕಾಂಗ್ರೆಸ್ ಆಡಳಿತ ಹಲವು ಅಧ್ವಾನಗಳ ಸರಮಾಲೆ. ತಥಾಕಥಿತ ಪ್ರಗತಿಪರರ ಅಟ್ಟಹಾಸ, ಸೆಕ್ಯೂಲರಿಸ್ಟರ ಕೋಮುವಾದಿ ಕಿಡಿಗೇಡಿತನ, ಧಾರ್ಮಿಕ ಕಂದರವನ್ನು ಆಳ-ಅಗಲಗೊಳಿಸುವ ಸರ್ಕಾರದ ನೀತಿಗಳು ಕಳೆದ ಚುನಾವಣೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ತರಬಹುದೆಂಬ ನಿರೀಕ್ಷೆ ಸುಳ್ಳಾದದ್ದು ಮತದಾರ ಎಸೆಯುವ ವಿವಿಧ ಗೂಗ್ಲಿಗಳಲ್ಲೊಂದು.
ಇಲ್ಲೊಂದು ಅಚ್ಚರಿಯ ವಾಸ್ತವವನ್ನು ಗಮನಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಆಧಿಕಾರ ಗಳಿಸಲಿ ಕಳೆದುಕೊಳ್ಳಲಿ, ಅದರ ಮತ ಪ್ರಮಾಣ ಯಾವಾಗಲೂ ಬಿಜೆಪಿ ಗಳಿಸಿದ್ದಕ್ಕಿಂತ ಹೆಚ್ಚಾಗಿರುತ್ತದೆ. ಕಳೆದ ಚುನಾವಣೆಗಳಲ್ಲಿಯೂ ಬಿಜೆಪಿ ಮೂರಂಕೆ ದಾಟಿ ಅತಿ ದೊಡ್ಡ ಪಕ್ಷವಾಗಿ ಎದ್ದು ನಿಂತರೂ ಮತ ಪ್ರಮಾಣದಲ್ಲಿ ಅದು ಕಾಂಗ್ರೆಸ್ಗಿಂತ ಹಿಂದಿತ್ತು.
ಇಷ್ಟು ಪೂರ್ವಭಾವಿ ಅರಿವಿನೊಂದಿಗೆ ಪ್ರಸಕ್ತ ಚುನಾವಣೆಗಳನ್ನು ವಿಶ್ಲೇಷಿಸೋಣ.
ಈ ಬಾರಿಯ ಹಣಾಹಣಿಯಲ್ಲಿ ವರ್ಚಸ್ಸು ಕಳೆದುಕೊಂಡ ಕಾಂಗ್ರೆಸ್ ಕೇಂದ್ರೀಯ ನಾಯಕತ್ವ, ವರ್ಚಸ್ಸು ಗಳಿಸಿಕೊಳ್ಳಲು ಪ್ರಯತ್ನಿಸುತ್ತ ಸಾಗಿದ ಕಾಂಗ್ರೆಸ್ ರಾಜ್ಯ ನಾಯಕತ್ವ ಒಂದು ಕಡೆಯಿದ್ದರೆ, ಇನ್ನೊಂದು ಕಡೆ ವರ್ಚಸ್ಸು ವೃದ್ಧಿಸಿಕೊಂಡ ಬಿಜೆಪಿ ಕೇಂದ್ರೀಯ ನಾಯಕತ್ವ ಮತ್ತು ಅದಷ್ಟೇ ಸಾಕು, ತನಗೆ ವರ್ಚಸ್ಸಿನ ಉಸಾಬರಿಯೇನೂ ಬೇಡ ಎಂದು ತಿಳಿದ ರಾಜ್ಯ ಬಿಜೆಪಿ ಇದ್ದವು. ಮೊದಲಿಗೆ ರಾಜ್ಯ ಬಿಜೆಪಿ ವರ್ಚಸ್ಸು ಕಳೆದುಕೊಂಡ ಬಗೆಯನ್ನು ನೋಡೋಣ. ಬಿ.ಎಸ್. ಯಡಿಯೂರಪ್ಪನವರ ಬಗ್ಗೆ ರಾಜ್ಯ/ಕೇಂದ್ರ ಬಿಜೆಪಿ ನಾಯಕತ್ವಕ್ಕೆ ಯಾವುದೇ ನಕಾರಾತ್ಮಕ ಭಾವನೆ, ಅದಕ್ಕೆ ಕಾರಣ ನಿಜವಾದದ್ದೇ ಇರಲಿ ಅಥವಾ ಕಲ್ಪಿತವೇ ಇರಲಿ, ರಾಜ್ಯದ ಏಕೈಕ ವರ್ಚಸ್ವಿ ಮುಖ ಆ ಹಿರಿಯ ನಾಯಕರೇ ಎನ್ನುವುದು ನಿರ್ವಿವಾದ. ಅವರನ್ನು ನಾಯಕತ್ವದಿಂದ ಇಳಿಸಿದಾಗ ಅವರೇ ಸೂಚಿಸಿದ ಬಸವರಾಜ ಬೊಮ್ಮಾಯಿ ಬಿಜೆಪಿಗರಿಗೇ ಸಹ್ಯ ಮುಖವೆನಿಸಲಿಲ್ಲ. ಯಡಿಯೂರಪ್ಪನವರ ಸ್ಥಾನವನ್ನು, ಅವರನ್ನು ಸರಿಗಟ್ಟುವ ಹಾಗೆ ಭರ್ತಿ ಮಾಡುವಂತಹ ನಾಯಕನೊಬ್ಬನನ್ನು ಸೃಷ್ಟಿಸಿಕೊಳ್ಳಲಾಗದ್ದು ಬಿಜೆಪಿಯ ಅತಿ ದೊಡ್ಡ ಬಲಹೀನತೆಯೇ ಸರಿ. ಬೊಮ್ಮಾಯಿಯವರಿಗೆ ಮೋದಿ ತಮ್ಮ ವರ್ಚಸ್ಸನ್ನು ಕಡ ನೀಡಿ ತಕ್ಕಡಿ ತೂಗಿಸುತ್ತಾರೆಂದು ಪಕ್ಷದಲ್ಲಿ ಯಾರಾದರೂ ತಿಳಿದಿದ್ದರೆ ಅವರನ್ನು ಚುನಾವಣಾ ರಾಜಕಾರಣದಲ್ಲಿ ಅನನುಭವಿಗಳೆನ್ನಬೇಕು. ರಾಷ್ಟ್ರರಾಜಕಾರಣದಲ್ಲಿ ಹೆಚ್ಚಿನ ಮತದಾರರ ಕಣ್ಮಣಿಯಾದ ಮೋದಿಯವರ ವರ್ಚಸ್ಸು ಲೋಕಸಭಾ ಚುನಾವಣೆಗಳಲ್ಲಿ ಮಾಡುವ ಮೋಡಿಯನ್ನು ವಿಧಾನಸಭಾ ಚುನಾವಣೆಗಳಲ್ಲಿ ಮಾಡಲಾರದು. ಅವರ ಸ್ವಂತದ ರಾಜ್ಯವಾದ ಗುಜರಾತ್ನಲ್ಲಿ ಅದು ನಡೆದರೂ ಇತರೆಡೆ ಅದು ನಡೆಯುವುದಿಲ್ಲ. ಅದು ಕರ್ನಾಟಕದಲ್ಲಿ ೨೦೧೮ರಲ್ಲಿ; ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡ್ಗಳಲ್ಲಿ ಅದೇ ವರ್ಷದ ಕೊನೆಯಲ್ಲಿ ಮತ್ತು ಮರುವರ್ಷ ಮಹಾರಾದಲ್ಲಿ ಸಾಬೀತಾಗಿದೆ. ಇಂದಿರಾಗಾಂಧಿಯವರ ಕಾಲಕ್ಕಿಂತ ಚುನಾವಣಾ ರಾಜಕಾರಣ ಅದೆಷ್ಟೋ ಮುಂದೆ ಸಾಗಿಬಿಟ್ಟಿದೆ. ಉತ್ತರಪ್ರದೇಶ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಸತತ ಎರಡನೆಯ ಬಾರಿ ಗೆಲವು ಸಾಧಿಸಿದ್ದು ಸ್ಥಳೀಯ ನಾಯಕತ್ವದ ವರ್ಚಸ್ಸಿನಿಂದ.
ಯಾವುದೇ ರಾಜಕೀಯ ಪಕ್ಷಕ್ಕೆ ಅದರದೇ ಆದ ಸಣ್ಣದೋ ದೊಡ್ಡದೋ ನಿಷ್ಠಾವಂತ ಬೆಂಬಲಿಗರ ಗುಂಪೊಂದಿರುತ್ತದೆ. ಅವರು ತಮ್ಮ ಪಕ್ಷದ ಸರ್ಕಾರದಿಂದ ಪುಕ್ಕಟೆ ಸೌಲಭ್ಯಗಳನ್ನು ಬಯಸುವುದಿಲ್ಲ. ಅವರು ನಿರೀಕ್ಷಿಸುವುದು ಸ್ಥಾಪಿತ ಮೌಲ್ಯಗಳಿಗೆ ತಮ್ಮ ಪಕ್ಷ ಹಾಗೂ ಸರ್ಕಾರದ ನಿರಂತರ ನಿಷ್ಠೆಯನ್ನಷ್ಟೇ. ಬಿಜೆಪಿಯ ಆ ಬಗೆಯ ನಿಷ್ಠಾವಂತ ಬೆಂಬಲಿಗರು ಬಯಸುವುದು ಹಿಂದೂ/ಭಾರತೀಯ ಮೌಲ್ಯಗಳಿಗೆ ಪಕ್ಷದ ಹಾಗೂ ಸರ್ಕಾರದ ಮುಕ್ಕಾಗದ ಬದ್ಧತೆ. ಅದನ್ನು ಬಿಜೆಪಿ ತೋರಿದೆಯೇ? ರಾಷ್ಟ್ರಮಟ್ಟದಲ್ಲೆ ನೋಡುವುದಾದರೆ ನೂಪುರ್ ಶರ್ಮ, ಕಾಜಲ್ ಹಿಂದೂಸ್ತಾನಿಯಂತಹವರ ಸಂಕಷ್ಟಗಳನ್ನು ದೂರ ಮಾಡಲು ಕೇಂದ್ರಸರ್ಕಾರ ಅಗತ್ಯವಿರುವಷ್ಟು ಮನಸ್ಸು ಮಾಡುತ್ತಿಲ್ಲ ಎನ್ನುವುದು ನಿಷ್ಠಾವಂತ ಬಿಜೆಪಿಗರಿಗೆ ಅರ್ಥವಾಗಿದೆ. ನೂಪುರ್ ಶರ್ಮಗೆ ಸಂಬಂಧಿಸಿದಂತೆ ಪುಟ್ಟ ಖತರ್ನ ಎದುರು ಕೇಂದ್ರಸರ್ಕಾರ ಬಾಗಿದ್ದು ಬಿಜೆಪಿಯ ಕಟ್ಟಾ ಬೆಂಬಲಿಗರಿಗೆ ಸಮ್ಮತವಾಗಿಲ್ಲ. ಜೊತೆಗೆ ಸಮಾನ ನಾಗರಿಕ ಕಾಯಿದೆ, ಪೌರತ್ವ ತಿದ್ದುಪಡಿ ಕಾಯಿದೆಗಳನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರಲು; ಹಿಂದೂ-ವಿರೋಧಿಯಾದ ವಕ್ಫ್ ಕಾಯಿದೆ, ಅಲ್ಪಸಂಖ್ಯಾತರ ಹಕ್ಕುಗಳ ಕಾಯಿದೆ, ಪೂಜಾಸ್ಥಳಗಳ ಕಾಯಿದೆಗಳನ್ನು ರದ್ದುಗೊಳಿಸಲು ಸರ್ಕಾರ ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂಬ ಅನಿಸಿಕೆಯೂ ಅವರಲ್ಲಿ ಗಾಢವಾಗುತ್ತಿದೆ.
ರಾಜ್ಯದ ಬಗ್ಗೆ ಹೇಳುವುದಾದರೆ ಹಿಂದೂಗಳ ವಿರುದ್ಧದ ಹಿಂಸಾಚಾರದ ತಡೆಗೂ ಗಂಭೀರ ಪ್ರಯತ್ನಗಳಾಗುತ್ತಿಲ್ಲ ಎಂಬ ಭಾವನೆ ಜನಜನಿತವಾಗಿದೆ. ಜೊತೆಗೆ, ಭಾರತೀಯ ಹಾಗೂ ಹಿಂದೂ ಮೌಲ್ಯಗಳ ಬಗ್ಗೆ ಆಳ ಜ್ಞಾನ ಹಾಗೂ ವಿಶ್ವಾಸ ಹೊಂದಿರುವ ಮತ್ತು ಆ ಕಾರಣದಿಂದಲೇ ಅಸಂಖ್ಯಾತ ಹಿಂದೂಗಳ ಪ್ರೀತಿ ಹಾಗೂ ಗೌರವಗಳಿಗೆ ಪಾತ್ರರಾಗಿರುವ ಹಲವರು ಹಿರಿಯರು ತಮ್ಮ ಉಪನ್ಯಾಸಗಳು ಮತ್ತು ಬರಹಗಳ ಮೂಲಕ ಬಿಜೆಪಿಯ ಜನಪ್ರಿಯ ಹೆಚ್ಚಳಕ್ಕೆ ಕಾರಣರಾಗಿರುವುದನ್ನು ರಾಜ್ಯ ಬಿಜೆಪಿಸರ್ಕಾರ ಗುರುತಿಸಿ ಗೌರವಿಸಿಲ್ಲ ಎನ್ನುವ ಕೊರಗೂ ಸಹ ಪಕ್ಷದ ನಿಷ್ಠಾವಂತ ಬೆಂಬಲಿಗರಲ್ಲಿದೆ. ನಿದರ್ಶನಕ್ಕೆ: ಹಿರಿಯ ವಿದ್ವಾಂಸರಾದ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಗತಿಸಿದಾಗ ಆ ಬಗ್ಗೆ ರಾಜ್ಯಸರ್ಕಾರ ತೋರಿದ ಉದಾಸೀನದ ನಡವಳಿಕೆ ನೋವುಂಟು ಮಾಡಿದ್ದು ಲಕ್ಷಾಂತರ ಜನರಿಗೆ.
ಹೀಗೆ ಅಸಮಾಧಾನಗೊಂಡ ನಿಷ್ಠಾವಂತರೇನೂ ಏಕಾಏಕಿ ಪಕ್ಷ ಬದಲಾಯಿಸುವುದಿಲ್ಲ. ಅಧಿಕಾರಲಾಲಸಿ ರಾಜಕಾರಣಿಗಳೇನಲ್ಲ ಅವರು. ನೆಚ್ಚಿನ ಎಮ್ಮೆ ಕೋಣ ಕರುವನ್ನು ಈದಿದೆ ಎಂದು ತಿಳಿದಾಗ ಅವರು ಮತಗಟ್ಟೆಗಳಿಗೆ ಹೋಗುವುದಿಲ್ಲ, ಹೋದರೂ ನೋಟಾ ಚಲಾಯಿಸುತ್ತಾರೆ ಅಷ್ಟೇ. ಪಕ್ಷಕ್ಕೆ ಅಷ್ಟರಮಟ್ಟಿಗೆ ಹಾನಿ ಖಂಡಿತ.
ಪುಟ್ಟ ನಿಷ್ಠಾವಂತ ಬೆಂಬಲಿಗ ವರ್ಗವನ್ನು ಉಳಿಸಿಕೊಳ್ಳುವುದರ ಜೊತೆಗೆ ಪಕ್ಷದತ್ತ ಮುಖ ಮಾಡಿ ಅಡ್ಡಗೋಡೆಯ ಮೇಲೆ ಕುಳಿತ ದೊಡ್ಡ ವರ್ಗವನ್ನು ಸೆಳೆಯಲು ರಾಜಕೀಯ ಪಕ್ಷಗಳು ಕಸರತ್ತು ನಡೆಸಬೇಕಾಗುತ್ತದೆ. ಉಚಿತ ಗ್ಯಾಸ್ ಸಿಲಿಂಡರ್ ನೀಡುವುದರಿಂದ, ಯಾವಾವುದೋ ಹೆಸರಿನಲ್ಲಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವುದರಿಂದ; ಮನೆ, ಶೌಚಾಲಯ ಕಟ್ಟಿಸಿಕೊಡುವುದರಿಂದ ಅವರನ್ನು ಒಂದು ಪಕ್ಷ ಶಾಶ್ವತವಾಗಿ ತನ್ನತ್ತ ಸೆಳೆದುಕೊಳ್ಳಲಾದೀತೆ ಎಂಬುದು ಪ್ರಶ್ನಾರ್ಹ. ಅವರಿಗೆ ಪಕ್ಷ/ಸರ್ಕಾರದಿಂದ ಬೇಕಾಗಿರುವುದು ‘ಹೈ ಪ್ರೊಫೈಲ್’ ನಡೆಗಳು. ಅಣ್ವಸ್ತ್ರ ಪರೀಕ್ಷೆ, ಕಾರ್ಗಿಲ್ ವಿಜಯ, ಬಾಲಾಕೋಟ್ ದಾಳಿ, ೩೭೦ನೇ ವಿಧಿಯ ರದ್ದತಿ, ರಾಮಮಂದಿರ ನಿರ್ಮಾಣದಂತಹ ಪ್ರಕರಣಗಳು ಇವರನ್ನು ಪ್ರಭಾವಿಸುವಷ್ಟು ಹಣ, ಸಿಲಿಂಡರ್ಗಳು ಅಥವಾ ಶೌಚಾಲಯಗಳು ಇವರನ್ನು ಪ್ರಭಾವಿಸಲಾರವೇನೊ. ಚುನಾವಣೆಗಳಲ್ಲಿ ವಿಜಯ ಬಯಸುವ ಯಾವುದೇ ಪಕ್ಷ ಅಗತ್ಯವಾಗಿ ಪರೀಕ್ಷಿಸಿಕೊಳ್ಳಬೇಕಾದ ವಾಸ್ತವವಿದು.
ಮೂರೋ ಐದೋ ಟೆಸ್ಟ್ಗಳ ಕ್ರಿಕೆಟ್ ಸರಣಿಯಲ್ಲಿ ಹೊಸಮುಖಗಳನ್ನು ಪಿಚ್ಗೆ ಇಳಿಸಬಹುದು. ಮೊದಲ ಯತ್ನದಲ್ಲಿ ಪ್ರಯೋಗ ವಿಫಲವಾದರೆ ಅನಂತರದ ಟೆಸ್ಟ್ ಗಳಲ್ಲಿ ಸರಿದೂಗಿಸಿಕೊಳ್ಳಬಹುದು. ಆದರೆ ಒಂದೇ ಟೆಸ್ಟ್ ನಂತಹ ಚುನಾವಣೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಹೊಸಮುಖಗಳನ್ನು ಮುಂದೆ ನಿಲ್ಲಿಸುವುದು ಆತ್ಮಹತ್ಯೆಯಂತಹ ನಡೆ.
ಕಾಂಗ್ರೆಸ್ ಸ್ಥಳೀಯರಿಗೆ ಪರಿಚಿತವಾದ ಮುಖಗಳನ್ನೇ ಕಣಕ್ಕಿಳಿಸಿದ್ದು, ಬಿಜೆಪಿ ಪ್ರಯೋಗಕ್ಕೆ ಇಳಿದದ್ದು ಮತ್ತು ಇವು ತಂದ ಫಲಿತಾಂಶಗಳು ಇಲ್ಲಿ ಪರಿಶೀಲನಾರ್ಹ. ಬಿಜೆಪಿಯ ೧೦೩ ಹೊಸಮುಖಗಳಲ್ಲಿ ಜಯ ಗಳಿಸಿದವರು ಕೇವಲ ೧೭ ಎನ್ನುವುದು ಪಕ್ಷ ನಡೆಸಿದ ಪ್ರಯೋಗದ ದುರಂತ ಕಥೆ ಹೇಳುತ್ತದೆ. “ಅಪರಿಚಿತ ದೇವದೂತರಿಗಿಂತಲೂ ಪರಿಚಿತ ದೆವ್ವವೇ ಉತ್ತಮ” ಎಂದು ತರ್ಕಿಸಿದ ಅದೆಷ್ಟೋ ಕೇರಿ, ಹಳ್ಳಿ, ಊರುಗಳು ಸಾರಾಸಗಟಾಗಿ ಬಿಜೆಪಿ ತೊರೆದು ಕಾಂಗ್ರೆಸ್ನತ್ತ ತಿರುಗಿದ್ದು ಈ ಬಾರಿಯ ಚುನಾವಣೆಯ ಗಮನಾರ್ಹ ಅಂಶಗಳಲ್ಲೊಂದು. ಒಂದುವೇಳೆ ಕರ್ನಾಟಕ ಚುನಾವಣೆಯನ್ನು ಕ್ವಾರ್ಟರ್ ಫೈನಲ್ಸ್, ಡಿಸೆಂಬರ್ನಲ್ಲಿನ ನಾಲ್ಕು ರಾಜ್ಯಗಳ ಚುನಾವಣೆಗಳನ್ನು ಸೆಮಿಫೈನಲ್ಸ್, ಮುಂದಿನ ವರ್ಷದ ಲೋಕಸಭಾ ಚುನಾವಣೆಗಳನ್ನು ಫೈನಲ್ಸ್ ಎಂದು ಬಿಜೆಪಿಯ ಕೇಂದ್ರ ಸಮಿತಿ ತಿಳಿದಿದ್ದರೆ ಕರ್ನಾಟಕದಲ್ಲಿ ಕಲಿತ ಪಾಠಗಳಿಂದ ತನ್ನ ಮುಂದಿನ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸುತ್ತದೆ ಎಂದು ಆಶಿಸೋಣ.
ಇನ್ನು ಮೋದಿಯವರ ಪ್ರಚಾರದ ವಿಷಯ. ಕರ್ನಾಟಕದಲ್ಲಿ ಅದೇನೂ ವ್ಯರ್ಥವಾಗಿಲ್ಲ. ಕಳೆದ ಬಾರಿಗಿಂತ ಈ ಬಾರಿ ಪಕ್ಷ ಗಳಿಸಿರುವ ಮತಗಳ ಪ್ರಮಾಣದಲ್ಲಿನ ಅಂತರ ಇಲ್ಲವೇ ಇಲ್ಲ ಎನ್ನುವಷ್ಟು ನಗಣ್ಯ. ಇದರರ್ಥ, ವರ್ಚಸ್ಸುಹೀನ ರಾಜ್ಯ ಬಿಜೆಪಿ ಮುಖಗಳು ಮತ್ತು ಈ ಬಾರಿ ಒಟ್ಟಾರೆ ಪಕ್ಷದ ಎಡವಟ್ಟು ಪ್ರಯೋಗಗಳು ಬಿಜೆಪಿಯಿಂದ ಸಾಕಷ್ಟು ಮತಗಳನ್ನು ದೂರ ಮಾಡಿದ್ದರೂ ನಷ್ಟವನ್ನು ತುಂಬಿದ್ದು ಮೋದಿಯವರ ಭಾಷಣಗಳು, ರೋಡ್ ಶೋಗಳು. ಇದರ ಜೊತೆಗೆ ಜೆಡಿಎಸ್ನಿಂದ ಒಕ್ಕಲಿಗ ಮತಗಳನ್ನು ಕಿತ್ತು ಡಿ.ಕೆ. ಶಿವಕುಮಾರ್ ಕಾಂಗ್ರೆಸ್ಗೆ ತಂದಂತೆ ಲಿಂಗಾಯತ ಮತಗಳನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಬೊಮ್ಮಾಯಿ ಅಥವಾ ಬೇರೆ ಯಾರಾದರೂ ಬಿಜೆಪಿ ನಾಯಕ ತೋರಿದ್ದಿದ್ದರೆ ಈ ಸೋಲನ್ನು ತಪ್ಪಿಸಬಹುದಾಗಿತ್ತು.
ಕರ್ನಾಟಕದ ಈ ಫಲಿತಾಂಶಗಳು ಬಿಜೆಪಿಗೆ ಒಂದು ಪಾಠವಷ್ಟೇ ಹೊರತು ತಡೆಗೋಡೆಯೇನಲ್ಲ. ಲೋಕಸಭಾ ಚುನಾವಣೆಗಳಲ್ಲಿ ಮೋದಿಯವರನ್ನು ಸರಿಗಟ್ಟುವುದಿರಲಿ, ಹತ್ತಿರಕ್ಕೂ ಬರುವ ಸಾಮರ್ಥ್ಯ ದೇಶದ ಯಾವುದೇ ನಾಯಕ/ನಾಯಕಿಗೆ ಈಗ ಇಲ್ಲ. ಜೊತೆಗೆ, ಕರ್ನಾಟಕದಲ್ಲಿನ ಕಾಂಗ್ರೆಸ್ ವಿಜಯ ಬಿಜೆಪಿಗಿಂತಲೂ ಇತರ ವಿರೋಧಪಕ್ಷಗಳಿಗೆ ದುಃಸ್ವಪ್ನವಾಗಿದೆ. ರಾಹುಲ್ಗಾಂಧಿಯವರ ಅನಾಕರ್ಷಕ ಹಾಗೂ ನಗೆಪಾಟಲೆನಿಸುವ ನಡೆನುಡಿಗಳಿಂದಾಗಿ ಅವರನ್ನೂ ಅವರ ಪಕ್ಷವನ್ನೂ ನಿರ್ಲಕ್ಷಿಸಿದ್ದ ತೃಣಮೂಲ ಕಾಂಗ್ರೆಸ್, ಜೆಡಿಯು, ಎನ್ಸಿಪಿಯಂತಹ ಪಕ್ಷಗಳು ಈಗ ಕಾಂಗ್ರೆಸ್ ಬಗ್ಗೆ ಮರುಚಿಂತನೆ ನಡೆಸುವ ಒತ್ತಡಕ್ಕೊಳಗಾಗಿವೆ. ಅಷ್ಟರಮಟ್ಟಿಗೆ ಅವುಗಳ ಗೊಂದಲ ಹೆಚ್ಚಿದೆ. ಇದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲಕರವಾಗುತ್ತದೆ. ಆ ಚುನಾವಣೆಗಳಲ್ಲಿ ಈ ಕಡೆ ಬಸವರಾಜ ಬೊಮ್ಮಾಯಿಯವರು, ಆ ಕಡೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇರುವುದಿಲ್ಲ. ಅಲ್ಲಿ ಈ ಕಡೆ ನರೇಂದ್ರ ಮೋದಿ ಇದ್ದರೆ, ಆ ಕಡೆ ರಾಹುಲ್ಗಾಂಧಿ, ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಸುಪ್ರಿಯಾ ಸುಳೆ, ಉದ್ಧವ್ ಠಾಕ್ರೆ ಮತ್ತು ನಿತೀಶ್ಕುಮಾರ್ ಅಂತಹವರು ಇರುತ್ತಾರೆ. ಇಂದು ಸ್ವಾಭಿಮಾನಿಯಾಗಿರುವ ಭಾರತೀಯರ ಒಲವು ಯಾರ ಕಡೆ ಇರುತ್ತದೆಂದು ಇಲ್ಲಿ ವಿವರಿಸಿ ಹೇಳಬೇಕಾಗಿಲ್ಲ.
ಇದೀಗ ಸಿದ್ದರಾಮಯ್ಯ ಮುಖ್ಯಮಂತ್ರಿ ಮತ್ತು ಶಿವಕುಮಾರ್ ಉಪ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಹೈಕಮಾಂಡ್ ನಿರ್ಣಯಿಸಿದೆ. ತನ್ನ ಮತ ದಾರಿತಪ್ಪಿತೆ ಎಂದು ಕರ್ನಾಟಕದ ‘ಜಾಣ’ ಮತದಾರವರ್ಗ ಚಿಂತನೆಗೊಳಗಾದೀತೆ? ಮುಂದಿನ ಚುನಾವಣೆ ಇನ್ನೆಷ್ಟು ದೂರ? ಅಥವಾ ಇನ್ನೆಷ್ಟು ಹತ್ತಿರ?
ಇನ್ನು ಕಾಲ ವೇಗವಾಗಿ ಸರಿಯುತ್ತದೆ!