ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮೊದಲನೆಯ ಭಾಗವಾದರೆ, ಅನಂತರ ಸರ್ಕಾರದ ಪಾತ್ರ. ಚುನಾವಣೆ ವ್ಯವಸ್ಥೆಯ ಮೂಲಕ ಆಡಳಿತದ ಭಾಗವಾಗಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಗಾಂಧಿಯವರು ಹೇಳಿದ್ದರು: “ಬಲ ಇರುವವರಿಗೆ ನೀಡುವಷ್ಟೆ ಅವಕಾಶವನ್ನು ಬಲಹೀನರಿಗೂ ಪ್ರಜಾಪ್ರಭುತ್ವ ನೀಡುತ್ತದೆ ಎಂದು ನಾನು ತಿಳಿದಿದ್ದೇನೆ” ಎಂದು. ಈ ಹಿಂದೆ ಚರ್ಚೆ ನಡೆಸಿದ ಹಣದ ಶಕ್ತಿಯ ಆಧಾರದಲ್ಲೆ ಈಗ ಅನೇಕ ಬಲಹೀನರು ಚುನಾವಣೆ ವ್ಯವಸ್ಥೆಯಿಂದ ಹೊರಗೆ ಹೋಗುತ್ತಾರೆ.
ಈಗಷ್ಟೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಹಬ್ಬ ಮುಗಿದಿದೆ. ಕರ್ನಾಟಕದ ಇತಿಹಾಸದಲ್ಲೆ ಅತಿ ಹೆಚ್ಚು ಎನ್ನಬಹುದಾದ ಶೇ. ೭೩.೧೯ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರ ಮೂಲಕ ಸ್ಪಷ್ಟ ಬಹುಮತದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸರ್ಕಾರಕ್ಕೆ ಅವಕಾಶ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಹಂಚಿಕೆ, ಅನಂತರದ ಹೊಂದಾಣಿಕೆಯಲ್ಲಿ ಯಾವುದೇ ತೊಂದರೆ ಮಾಡಿಕೊಳ್ಳದಿದ್ದರೆ ಮುಂದಿನ ಐದು ವರ್ಷಗಳವರೆಗೆ ಚುನಾವಣೆ ಇಲ್ಲದಂತೆ ಸರ್ಕಾರ ನಡೆಯಬೇಕು. ಇದೆಲ್ಲದರ ನಡುವೆ ಒಂದು ಪ್ರಶ್ನೆಯೆಂದರೆ, ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟು ಮಟ್ಟಿಗೆ ಅರ್ಥವಂತವಾಗಿದೆ?
ಹೀಗೆ ಹೇಳಿದ ತಕ್ಷಣ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟದ (ಎನ್ಡಿಎ) ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಯಾರೂ ಕಣ್ಣು ಕೆಂಪಾಗಿಸಿಕೊಳ್ಳಬೇಕಿಲ್ಲ. ಇದು ಒಂದು ಸಾಮಾನ್ಯ ಪ್ರಶ್ನೆ. ಚುನಾವಣೆಯ ಪ್ರಕ್ರಿಯೆ ನಿಜವಾಗಿಯೂ ಪ್ರಜಾತಾಂತ್ರಿಕವಾಗಿ ನಡೆಯುತ್ತದೆಯೇ? ಹೀಗೆ ಯಾರಾದರೂ ಎದೆ ಮುಟ್ಟಿ ಹೇಳಿಕೊಳ್ಳಲು ಸಾಧ್ಯವೇ?
ದೇಶ ಕಂಡ ಮುತ್ಸದ್ದಿ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರು ಒಮ್ಮೆ ಹೇಳಿದ್ದರು: “ಪ್ರತಿ ಹೊಸ ಶಾಸಕನೂ ಸುಳ್ಳು ಹೇಳುವ ಮೂಲಕ ತನ್ನ ರಾಜಕೀಯ ಜೀವನವನ್ನು ಆರಂಭಿಸುತ್ತಾನೆ. ಅದೆಂದರೆ ಚುನಾವಣಾ ಖರ್ಚಿನ ಲೆಕ್ಕದ ವರದಿ” ಎಂದಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವವರು ಹಣದ ಹೊಳೆ ಹರಿಸಬಾರದು, ನಿಯಂತ್ರಣದಲ್ಲಿರಬೇಕು ಎಂಬ ಕಾರಣಕ್ಕೆ ಒಬ್ಬ ಅಭ್ಯರ್ಥಿಗೆ ೪೦ ಲಕ್ಷ ರೂ. ಮಿತಿ ವಿಧಿಸಲಾಗಿದೆ. ಅಷ್ಟರೊಳಗೇ ಆತ ಚುನಾವಣೆಯನ್ನು ಪೂರ್ಣಗೊಳಿಸಬೇಕು ಎನ್ನುವುದು ಉದ್ದೇಶ. ಇದಕ್ಕಾಗಿ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳ ಮೇಲೆ ‘ಹದ್ದಿನ ಕಣ್ಣು’ ಇಟ್ಟಿರುತ್ತೇವೆ ಎಂದು ಹೇಳುತ್ತಾರೆ. ಆದರೆ ಈ ಹದ್ದಿನ ಕಣ್ಣಿನ ಎದುರೇ ಕೋಟ್ಯಂತರ ರೂ. ಖರ್ಚಾಗುತಿರುತ್ತದೆ, ಅದಕ್ಕೆ ಗೊತ್ತೇ ಆಗುವುದಿಲ್ಲ.
ರಾಜಕೀಯ ಪರಿಭಾಷೆಯಲ್ಲಿ ತಿರುಮಂಗಲಂ ಸೂತ್ರ ಎಂಬ ಮಾತೊಂದಿದೆ. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ. ಕರುಣಾನಿಧಿ ಅವಧಿಯಲ್ಲಿ ನಡೆದ ಘಟನೆ ಇದು. ಯಾರು ಉತ್ತರಾಧಿಕಾರಿ ಆಗಬೇಕು ಎಂದು ಕರುಣಾನಿಧಿ ಅವರ ಇಬ್ಬರು ಪುತ್ರರಾದ ಅಳಗಿರಿ ಹಾಗೂ ಈಗ ತಮಿಳುನಾಡು ಮುಖ್ಯಮಂತ್ರಿಯಾಗಿರುವ ಸ್ಟಾಲಿನ್ ನಡುವೆ ಪೈಪೋಟಿ ನಡೆದಿತ್ತು. ಹಿರಿಯಪುತ್ರ ಅಳಗಿರಿಗಿಂತಲೂ ಕಿರಿಯಪುತ್ರ ಸ್ಟಾಲಿನ್ ಮೇಲೆ ಕರುಣಾನಿಧಿ ಅವರಿಗೆ ಹೆಚ್ಚು ವಿಶ್ವಾಸ. ಇದೇ ಸಮಯಕ್ಕೆ ೨೦೦೯ರಲ್ಲಿ ತಿರುಮಂಗಲಂ ಉಪಚುನಾವಣೆ ಘೋಷಣೆಯಾಯಿತು. ಹಾಗೆ ನೋಡಿದರೆ ಉಪಚುನಾವಣೆಯಲ್ಲಿ ಕರುಣಾನಿಧಿ ಅವರ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಗೆಲ್ಲುವುದು ಬಹುತೇಕ ಖಚಿತವಾಗಿತ್ತು. ಆದರೂ ಈ ಚುನಾವಣೆಯಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡುವ ಮೂಲಕ ಅಪ್ಪನ ಮನವೊಲಿಸಬೇಕು ಎಂದು ಅಳಗಿರಿ ನಿರ್ಧರಿಸಿದರು.
ಪಕ್ಷದ ಸಂಪೂರ್ಣ ವ್ಯವಸ್ಥೆಯನ್ನು ಆ ಚುನಾವಣೆಯಲ್ಲಿ ತೊಡಗಿಸಿದರು. ಬೂತ್ಮಟ್ಟದಲ್ಲಿ ಕಾರ್ಯಕರ್ತರನ್ನು ನಿಯೋಜನೆ ಮಾಡಿ ಪ್ರತಿ ಮನೆಯ ಮತದಾರರ ತಲೆಗಳನ್ನು ಗುರುತಿಸಿದರು. ಚುನಾವಣಾ ಆಯೋಗದ ಕಣ್ಣಿಗೆ ಬೀಳದಂತೆ ಪ್ರತಿ ಮತದಾರನಿಗೆ ಎನ್ವಲಪ್ ಕವರ್ನಲ್ಲಿ ೫೦೦ ರೂ. ತಲಪಿಸಿದರು. ಚುನಾವಣೆಯಲ್ಲಿ ಡಿಎಂಕೆ ಅಭ್ಯರ್ಥಿ ಲತಾ ಜಯಗಳಿಸಿದರು. ಆದರೆ ತಾನು ಚುನಾವಣೆ ಎದುರಿಸಲು ಬಳಸುತ್ತಿದ್ದ ಮಾರ್ಗವನ್ನು ಬಿಟ್ಟು ವಾಮಮಾರ್ಗವನ್ನು ಅನುಸರಿಸಿದ ಎಂದು ಕರುಣಾನಿಧಿ ಬೇಸರ ವ್ಯಕ್ತಪಡಿಸಿದರು. ವಿಪರ್ಯಾಸ ಎಂದರೆ ಅನಂತರದ ದಿನಗಳಲ್ಲಿ ಡಿಎಂಕೆ ಹಾಗೂ ಎದುರಾಳಿ ಎಐಎಡಿಎಂಕೆ ಸಹ ಇದೇ ‘ತಿರುಮಂಗಲಂ ಸೂತ್ರ’ವನ್ನು ಮುಂದಿನ ಎಲ್ಲ ಚುನಾವಣೆಗಳಲ್ಲಿ ಅಳವಡಿಸಿಕೊಂಡವು. ಅಷ್ಟೆ ಅಲ್ಲ, ದೇಶಾದ್ಯಂತ ಇದೀಗ ಎಲ್ಲ ಕಡೆಯೂ ತಿರುಮಂಗಲಂ ಸೂತ್ರ ನಡೆಯುತ್ತಿದೆ.
ಇದೀಗ ಕರ್ನಾಟಕದಲ್ಲಿ ಮುಕ್ತಾಯವಾದ ಚುನಾವಣೆಯಲ್ಲೂ ಹಣದ ಹೊಳೆ ಹರಿದಿದೆ. ಚುನಾವಣಾ ಆಯೋಗ ಈ ಬಾರಿ ಚುನಾವಣಾ ಘೋಷಣೆ ಮಾಡುವ ಸಂದರ್ಭದಲ್ಲಿ ಎರಡು ಸವಾಲುಗಳ ಬಗ್ಗೆ ಉಲ್ಲೇಖಿಸಿತ್ತು. ಕರ್ನಾಟಕದಲ್ಲಿ ಚುನಾವಣೆ ನಡೆಸುವಾಗ ಎದುರಾಗುವ ಎರಡು ಸವಾಲೆಂದರೆ, ಮೊದಲನೆಯದು, ನಗರ ಮತದಾರರು ಮತಗಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸದೆ ಇರುವುದನ್ನು ಸರಿಪಡಿಸುವುದು. ಎರಡನೆಯದು, ಹಣದ ಹೊಳೆ ಹರಿಯುವುದನ್ನು ತಡೆಯುವುದು. ಮತದಾನ ಪ್ರಮಾಣ ಗಣನೀಯವಾಗಿಯಲ್ಲದಿದ್ದರೂ ಸ್ವಲ್ಪವಾದರೂ ಹೆಚ್ಚಾಗಿದೆ ಎಂದು ಹೇಳಬಹುದು. ಹಾಗೆಯೇ ಚುನಾವಣಾ ಆಯೋಗ ವಶಪಡಿಸಿಕೊಂಡಿರುವ ಮೊತ್ತವೂ ಬಹು ಹೆಚ್ಚಾಗಿದೆ. ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುವ ವೇಳೆಗೆ ಸುಮಾರು ೪೦೦ ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ನಗದು, ಮದ್ಯ, ಚಿನ್ನ, ಬೆಳ್ಳಿ, ಉಡುಗೊರೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಾರಿ ಚುನಾವಣೆ ನೀತಿಸಂಹಿತೆ ಜಾರಿಯಾಗುವ ಮುನ್ನವೇ ೫೮ ಕೋಟಿ ರೂ. ಮೌಲ್ಯದ ನಗದು, ಇನ್ನಿತರೆ ವಸ್ತುಗಳನ್ನು ಚುನಾವಣಾ ಆಯೋಗ ವಶಕ್ಕೆ ಪಡೆದಿತ್ತು. ೨೦೧೮ರಲ್ಲಿ ವಶಕ್ಕೆ ಪಡೆದಿದ್ದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಚುನಾವಣೆ ಘೋಷಣೆಗೆ ಮುನ್ನವೇ ಸೀಜ್ ಮಾಡಿತ್ತು. ಇದು ದೊಡ್ಡ ಮೊತ್ತದಂತೆ ಕಾಣುತ್ತದೆ. ಆದರೆ ನಿಜವಾಗಿಯೂ ಇದು ಒಟ್ಟು ಚುನಾವಣೆಯಲ್ಲಿ ನಡೆಯುವ ವಹಿವಾಟಿನ ಶೇ. ೪-೫ ಮಾತ್ರ. ಏಕೆಂದರೆ ರಾಜಕೀಯ ಪಕ್ಷಗಳ ಮುಖಂಡರು ಹೇಳುವ ಪ್ರಕಾರ ಒಂದು ದೊಡ್ಡ ಪಕ್ಷ ಒಂದು ಕ್ಷೇತ್ರಕ್ಕೆ ಸರಾಸರಿ ೨೦ ಕೋಟಿ ರೂ. ವೆಚ್ಚ ಮಾಡುತ್ತದೆ. ಈ ರೀತಿ ಕರ್ನಾಟಕದಲ್ಲಿ ಎರಡು ದೊಡ್ಡ ಪಕ್ಷಗಳು, ಒಂದು ಸಣ್ಣ ಪಕ್ಷ ಇವೆ. ಇದೆಲ್ಲವನ್ನೂ ಸೇರಿಸಿದರೆ ಕರ್ನಾಟಕದ ಚುನಾವಣಾ ಬಜೆಟ್ ೧೦ ಸಾವಿರ ಕೋಟಿ ರೂ. ಆಗುತ್ತದೆ. ಇದಕ್ಕೆ ಎಲ್ಲೂ ಲೆಕ್ಕ ಸಿಗುವುದಿಲ್ಲವಾದ್ದರಿಂದ ನಿರೂಪಿಸುವುದು ಅಸಾಧ್ಯ. ಈ ಪರಿಯ ಹಣದ ಹೊಳೆ ಹರಿಯುತ್ತಿರುವುದಕ್ಕೆ ರಾಜಕೀಯ ಪಕ್ಷಗಳನ್ನು ದೂಷಿಸಬಹುದು, ದೂಷಿಸಬೇಕು. ಆದರೆ ಜನಸಾಮಾನ್ಯರ ಬೆಂಬಲ, ಸಹಕಾರ ಇಲ್ಲದೆ ಇದು ಹೇಗೆ ನಡೆಯುತ್ತದೆ? ೨೦೦೮, ೨೦೦೯ ಹಾಗೂ ೨೦೧೪ರ ಚುನಾವಣೆಗಳ ಕುರಿತು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (ಸಿಎಂಎಸ್) ಎಂಬ ಸಂಸ್ಥೆ ಮಾಡಿದ ಸಮೀಕ್ಷೆ ಪ್ರಕಾರ ದೇಶದ ಐದನೇ ಒಂದು ಭಾಗದಷ್ಟು ಮತದಾರರು ಹಣ ಪಡೆದಿದ್ದಾರೆ. ಅಲ್ಲಿಗೆ, ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿ, ತಾನು ೪೦ ಲಕ್ಷ ರೂ. ಒಳಗೆ ವೆಚ್ಚ ಮಾಡಿದ್ದೇನೆ ಎಂದು ಸುಳ್ಳು ಲೆಕ್ಕ ನೀಡುವ ಮೂಲಕ ರಾಜಕೀಯ ಜೀವನ ಆರಂಭಿಸುತ್ತಾನೆ.
ಸರ್ಕಾರಗಳು ನಡೆಯುವುದು ಪ್ರಜಾತಾಂತ್ರಿಕವಾಗಿಯೇ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮೊದಲನೆಯ ಭಾಗವಾದರೆ, ಅನಂತರ ಸರ್ಕಾರದ ಪಾತ್ರ. ಚುನಾವಣೆ ವ್ಯವಸ್ಥೆಯ ಮೂಲಕ ಆಡಳಿತದ ಭಾಗವಾಗಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಗಾಂಧಿಯವರು ಹೇಳಿದ್ದರು: “ಬಲ ಇರುವವರಿಗೆ ನೀಡುವಷ್ಟೆ ಅವಕಾಶವನ್ನು ಬಲಹೀನರಿಗೂ ಪ್ರಜಾಪ್ರಭುತ್ವ ನೀಡುತ್ತದೆ ಎಂದು ನಾನು ತಿಳಿದಿದ್ದೇನೆ” ಎಂದು. ಈ ಹಿಂದೆ ಚರ್ಚೆ ನಡೆಸಿದ ಹಣದ ಶಕ್ತಿಯ ಆಧಾರದಲ್ಲೆ ಈಗ ಅನೇಕ ಬಲಹೀನರು ಚುನಾವಣೆ ವ್ಯವಸ್ಥೆಯಿಂದ ಹೊರಗೆ ಹೋಗುತ್ತಾರೆ.
ಯಾವುದೇ ವ್ಯವಸ್ಥೆಗೆ ಹೊಸಬರು ಹಾಗೂ ಹಣವಿಲ್ಲದವರು ಪ್ರವೇಶಿಸಲು ಪ್ರತಿಬಂಧ ಇದ್ದರೆ ಅದನ್ನು ನೈಸರ್ಗಿಕ ವ್ಯವಸ್ಥೆ ಎಂದು ಹೇಳಲಾಗದು. ಒಂದು ಉದ್ಯಮವು ಯಾವುದೋ ಕುಟುಂಬದ ಅಥವಾ ಸಂಸ್ಥೆಯ ಏಕಚಕ್ರಾಧಿಪತ್ಯಕ್ಕೆ ಅವಕಾಶ ನೀಡಬಾರದು. ಇದಕ್ಕಾಗಿ ಅನೇಕ ಕಾನೂನುಗಳನ್ನು ರೂಪಿಸಲಾಗಿದೆ, ಆಯೋಗಗಳಿವೆ. ಆದರೆ ರಾಜಕೀಯದಲ್ಲಿ ಸಾಂಸ್ಥಿಕ ವ್ಯವಸ್ಥೆಯನ್ನು ಸುಭದ್ರಗೊಳಿಸಲು, ಸ್ವತಂತ್ರವಾಗಿ ಜನರ ಸೇವೆ ಮಾಡಬಯಸುವವರನ್ನು ತಡೆಯುವಂತೆಯೇ ಎಲ್ಲ ವ್ಯವಸ್ಥೆಗಳಿವೆ.
ಉದಾಹರಣೆಗೆ ಕರ್ನಾಟಕದಲ್ಲಿ ೧೯೫೭ರಲ್ಲಿ ೩೫ ಪಕ್ಷೇತರ ಶಾಸಕರು ಆಯ್ಕೆಯಾಗಿದ್ದರು. ಇದೇ ಸಂಖ್ಯೆ ೧೯೬೨ರಲ್ಲಿ ೨೭, ೧೯೬೭ರಲ್ಲಿ ೪೧, ೧೯೭೨ರಲ್ಲಿ ೨೦ ಶಾಸಕರು ಆಯ್ಕೆಯಾದರು. ಅನಂತರ ನಿರಂತರ ಇಳಿಮುಖವಾಗಿಯೇ ಸಾಗಿ ೨೦೧೮ರಲ್ಲಿ ಕೇವಲ ಒಬ್ಬ ಸ್ವತಂತ್ರ ಶಾಸಕರು ಆಯ್ಕೆಯಾದರು. ಇದೀಗ ೨೦೨೩ರ ಚುನಾವಣೆಯಲ್ಲಿ ಕೇವಲ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. (ಲತಾ ಮಲ್ಲಿಕಾರ್ಜುನ – ಹರಪನಹಳ್ಳಿ, ಕೆ. ಪುಟ್ಟಸ್ವಾಮಿಗೌಡ – ಗೌರಿಬಿದನೂರು). ಸ್ವತಂತ್ರ ಅಭ್ಯರ್ಥಿಗಳು ಪಡೆದ ಒಟ್ಟು ಮತದ ಪ್ರಮಾಣ ೧೯೫೭ರ ಶೇ. ೨೮.೭೪ರಿಂದ ಇದೀಗ ಶೇ. ೪ರ ಆಸುಪಾಸಿಗೆ ಬಂದಿದೆ.
ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಜಯಗಳಿಸಲು ಬಹುತೇಕ ಅಸಾಧ್ಯ ಎನ್ನುವ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ. ಮೊದಲನೆಯದಾಗಿ ಈಗಾಗಲೆ ಚರ್ಚೆ ನಡೆಸಿದ ಹಣದ ಬಲದ ಪರಿಣಾಮ. ದೊಡ್ಡ ಪಕ್ಷಗಳಿಗೆ ಹಣವಿರುತ್ತದೆ, ಅವರು ಅದನ್ನು ಹಂಚುವ ಮೂಲಕ, ದೊಡ್ಡ ಪ್ರಚಾರ ಕಾರ್ಯಕ್ರಮ ನಡೆಸುವ ಮೂಲಕ, ಜಾಹೀರಾತಿನ ಮೂಲಕ ಜನರನ್ನು ಸೆಳೆಯುತ್ತಾರೆ. ಎರಡನೆಯದು, ಸರ್ಕಾರ ನಡೆಯುವ ರೀತಿಯಲ್ಲೇ, ಸ್ವತಂತ್ರ ಅಭ್ಯರ್ಥಿಗಳು ಜಯಿಸದಂತೆ ನಿರ್ಬಂಧಿಸಲಾಗುತ್ತದೆ.
ಶಾಸಕ ಎಂದರೆ ಏನು? ಆತನು ಒಂದು ಕ್ಷೇತ್ರವನ್ನು ಪ್ರತಿನಿಧಿಸುವ ಕರ್ನಾಟಕ ವಿಧಾನಸಭೆಯ ಸದಸ್ಯ ಎಂದಲ್ಲವೇ? ಆತನು ತನ್ನ ಕ್ಷೇತ್ರವನ್ನೂ ಸೇರಿ ಇಡೀ ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಅನುಕೂಲವಾಗುವ ನೀತಿಗಳನ್ನು ವಿಧಾನಸಭೆಯಲ್ಲಿ ರೂಪಿಸಬೇಕು. ಇದರಿಂದ ಒಟ್ಟಾರೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಿ ಜನರ ಜೀವನ ಹಸನಾಗಬೇಕು. ಆದರೆ ಈಗಿನ ಶಾಸಕರು ತಾವು ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದಾರೆ. ಶಾಸನ ರಚನೆಯ ಕೆಲಸವನ್ನು ಬಿಟ್ಟು ಸ್ಥಳೀಯ ಸಂಸ್ಥೆಯ ಸದಸ್ಯನ ರೀತಿ ಕೇವಲ ರಸ್ತೆ, ಚರಂಡಿ ಸಮಸ್ಯೆಗಳನ್ನು ಬಗೆಹರಿಸಲು ಖುದ್ದಾಗಿ ನಿಲ್ಲುತ್ತಿದ್ದಾನೆ.
ಈ ಸಮಸ್ಯೆಗಳನ್ನು ಪರಿಹರಿಸುವುದು ಶಾಸಕನ ಕೆಲಸ ಅಲ್ಲ ಎನ್ನುವುದು ಈ ಮಾತಿನ ಅರ್ಥವಲ್ಲ. ಆದರೆ ಇವೆಲ್ಲ ನಿಜವಾಗಿಯೂ ನಗರ ಪಾಲಿಕೆ, ಗ್ರಾಮ ಪಂಚಾಯಿತಿ ಸದಸ್ಯರು ಮಾಡಬೇಕಾದ ಕೆಲಸ. ಅವರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಿ, ಅವರಿಂದ ಸೂಕ್ತ ಕೆಲಸ ತೆಗೆಸುವುದು ಶಾಸಕನ ಕೆಲಸವಲ್ಲವೇ? ಆದರೆ ಸರ್ಕಾರದಲ್ಲಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಎಂಬ ಅನುದಾನ ನೀಡಲಾಗುತ್ತದೆ. ಯೋಜನೆಗಳ ಮೂಲಕ ಎಲ್ಲ ಕ್ಷೇತ್ರಗಳಿಗೆ, ಯೋಜನೆಗಳಿಗೆ ನೀಡುವ ಹಣವಲ್ಲದೆ, ಪ್ರತಿ ಕ್ಷೇತ್ರದ ಶಾಸಕನಿಗೆ ವಾರ್ಷಿಕ ೨ ಕೋಟಿ ರೂ. ನಿಧಿ ಮೀಸಲಿರುತ್ತದೆ. ಈ ಹಣವನ್ನು ಆತ ಸೂಚಿತ ಸಾರ್ವಜನಿಕ ಕಾರ್ಯಗಳಿಗೆ ವಿನಿಯೋಗ ಮಾಡಬಹುದು. ಈ ನಿಧಿಯ ಮೂಲಕ ಶಾಸಕನಿಗೆ, ಹಣವನ್ನು ಎಲ್ಲಿ ವೆಚ್ಚ ಮಾಡಬೇಕು ಎಂಬ ನಿರ್ಧಾರ ಕೈಗೊಳ್ಳುವ ಕಾರ್ಯಾಂಗದ ಕಾರ್ಯವನ್ನೂ ನೀಡಲಾಯಿತು. ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ, ಮುಖ್ಯಮಂತ್ರಿಯವರ ವಿವೇಚನಾಧಿಕಾರ ನಿಧಿ ಎಂಬ ಹಣವಿದೆ. ಯಾವುದೇ ಮಾನದಂಡ, ಷರತ್ತು ಇಲ್ಲದೆ ಮುಖ್ಯಮಂತ್ರಿ ತನಗೆ ತೋಚಿದ ಮೊತ್ತವನ್ನು ಶಾಸಕರ ಕ್ಷೇತ್ರಗಳಿಗೆ ನೀಡಬಹುದು. ‘ಈ ಎರಡು ನಿಧಿಗಳನ್ನು ಸಾರ್ವಜನಿಕ ಕಾರ್ಯಗಳಿಗೆ ತಾನೆ ವಿನಿಯೋಗಿಸುವುದು? ಇದರಲ್ಲಿ ತಪ್ಪೇನಿದೆ?’ ಎಂದು ಹೇಳಬಹುದು.
ಆದರೆ ಇದರಿಂದ ಶಾಸಕನು ತನ್ನ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳುತ್ತಾನೆ. ಸರ್ಕಾರ ಏನೇ ತಪ್ಪು ಮಾಡಿದರೂ, ಭ್ರಷ್ಟಾಚಾರ ನಡೆಸಿದರೂ ಪ್ರಶ್ನೆ ಮಾಡದೆ ಸುಮ್ಮನೆ ಕೂರುತ್ತಾನೆ. ಸರ್ಕಾರವು ತನ್ನ ಕಡೆಯ ಹಾಗೂ ವಿರೋಧ ಪಕ್ಷದ ಶಾಸಕರಿಗೂ ವಿಶೇಷ ಅನುದಾನಗಳನ್ನು ನೀಡುತ್ತ ಎಲ್ಲರ ಬಾಯಿಮುಚ್ಚಿಸುವ ಕೆಲಸ ಮಾಡುತ್ತದೆ. ಈ ರೀತಿಯ ವಿಶೇಷ ಅನುದಾನದ ಅನುಕೂಲವು ಪಕ್ಷೇತರ ಅಥವಾ ಸ್ವತಂತ್ರ ಅಭ್ಯರ್ಥಿಗಳಿಗೆ ಇರುವುದಿಲ್ಲ. ಸರ್ಕಾರದ ಭಾಗವಾಗಬಹುದಾದ ಪಕ್ಷದ ಶಾಸಕನನ್ನೇ ಜನರು ಸಹಜವಾಗಿ ಇಷ್ಟಪಡುತ್ತಾರೆ. ಅಲ್ಲಿಗೆ ಗಾಂಧಿ ಹೇಳಿದಂತೆ, ಎಲ್ಲರಿಗೂ ಸಮಾನ ಅವಕಾಶ ಸಿಗುವ ಸಾಧ್ಯತೆ ಮರೀಚಿಕೆಯಾಯಿತು.
ವ್ಯವಸ್ಥೆಯೊಳಗಿನ ಪ್ರಜಾಪ್ರಭುತ್ವ
ಮೊದಲನೆಯದು ಚುನಾವಣೆಯಲ್ಲಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ, ಎರಡನೆಯದು ಆಡಳಿತದಲ್ಲಿ ಧ್ವನಿಯನ್ನು ಅಡಗಿಸುವ ಕೆಲಸ. ಮೂರನೆಯ ಹಾಗೂ ಕೊನೆಯ ಅಂಶವೆAದರೆ ವ್ಯವಸ್ಥೆಯಲ್ಲಿನ ದೋಷ. ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಒಂದು ವಿಚಿತ್ರ ಪದ್ಧತಿ ಇದೆ. ‘ವಿಪ್’ ನೀಡುವುದು ಎಂದು ಇದನ್ನು ಹೇಳಲಾಗುತ್ತದೆ. ಸರ್ಕಾರ ಒಂದು ಮಸೂದೆಯನ್ನು ಅಂಗೀಕರಿಸಬೇಕು ಎಂದು ಸದನಕ್ಕೆ ಮನವಿ ಮಾಡುತ್ತದೆ. ಸದನವು ಅಂಗೀಕರಿಸಿದರೆ ಅದು ಕಾಯ್ದೆ ಆಗುತ್ತದೆ. ಅಂಗೀಕರಿಸುವ ಮುನ್ನ ಎಲ್ಲ ಶಾಸಕರೂ ಧ್ವನಿಮತದ ಮೂಲಕ ತಮ್ಮ ಸಮ್ಮತಿಯನ್ನು ಸೂಚಿಸುತ್ತಾರೆ. ಆದರೆ ಕೆಲವು ಕ್ಲಿಷ್ಟಕರ ಸನ್ನಿವೇಶದಲ್ಲಿ ಮತದಾನ ಮಾಡಬೇಕಾಗುತ್ತದೆ. ಸಹಜವಾಗಿ ಸರ್ಕಾರದ ಕಡೆಗೆ ಬಹುಮತ ಇರುತ್ತದೆ, ಅವರೇ ಗೆಲ್ಲಬೇಕು ಅಲ್ಲವೇ? ಆದರೆ ಎಲ್ಲಿ ತನ್ನ ಕಡೆಯ ಶಾಸಕರು ತನ್ನ ನಿರ್ಧಾರಕ್ಕೆ ವಿರುದ್ಧವಾಗಿ ಮತ ಚಲಾಯಿಸುತ್ತಾರೋ ಎಂದು ಸರ್ಕಾರಗಳಿಗೆ ಭಯವಿರುತ್ತದೆ. ಅದಕ್ಕಾಗಿ ವಿಪ್ ಹೊರಡಿಸಲಾಗುತ್ತದೆ. ಸರ್ಕಾರದ ಪರವಾಗಿಯೇ ಮತ ಚಲಾಯಿಸಬೇಕು ಎಂದು ಅದರಲ್ಲಿ ತಿಳಿಸಿರಲಾಗುತ್ತದೆ. ಹಾಗೊಂದು ವೇಳೆ ವಿಪ್ ಉಲ್ಲಂಘನೆ ಮಾಡಿದರೆ ಆತನನ್ನು ಸದಸ್ಯತ್ವದಿಂದ ಅಮಾನತುಗೊಳಿಸಲು ಅವಕಾಶ ಇರುತ್ತದೆ.
ಇದೇ ವ್ಯವಸ್ಥೆ ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲೂ ಇದೆ. ಶಾಸಕರು ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ವಿಪ್ ಹೊರಡಿಸಲಾಗುತ್ತದೆ. ಅಭ್ಯರ್ಥಿ ತಾನು ಚಲಾಯಿಸಿದ ಮತವನ್ನು ತನ್ನ ಪಕ್ಷದ ಏಜೆಂಟ್ಗೆ ತೋರಿಸಬೇಕು. ಹಾಗೇನಾದರೂ ಆತ ವಿರುದ್ಧ ಮತ ಚಲಾಯಿಸಿದ್ದು ಕಂಡುಬಂದರೆ ಆತನನ್ನು ಅಮಾನತು ಮಾಡಲು ಅವಕಾಶವಿರುತ್ತದೆ. ಚುನಾವಣೆ ಎಂದರೆ ಏನು, ಮತದಾನ ಎಂದರೆ ಏನು ಎಂಬ ಮೂಲಭೂತ ಪ್ರಜಾಪ್ರಭುತ್ವ ಅಂಶಗಳಿಗೆ ಈ ವ್ಯವಸ್ಥೆ ವಿರುದ್ಧವಾಗಿದೆ. ಒಬ್ಬ ಶಾಸಕ ತನ್ನ ಇಚ್ಛೆಯಂತೆ ಮತದಾನ ಮಾಡಲಾಗದಿದ್ದರೆ ಆ ಮತದಾನಕ್ಕೆ ಯಾವ ಬೆಲೆ ಇದೆ? ಇದೆಲ್ಲವೂ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮಾಡಿಕೊಂಡಿರುವ ವ್ಯವಸ್ಥೆಗಳು. ಪ್ರಜಾತಾಂತ್ರಿಕ ವ್ಯವಸ್ಥೆ ಇದೆ ಎಂದು ಮೇಲ್ನೋಟಕ್ಕೆ ಕಂಡರೂ, ಆ ವ್ಯವಸ್ಥೆಗೆ ತದ್ವಿರುದ್ಧವಾದ ಅನೇಕ ಕಾನೂನಾತ್ಮಕ, ಕಾನೂನುಬಾಹಿರ ಚಟುವಟಿಕೆಗಳು ನಿರಂತರ ನಡೆದಿವೆ. ನಿಜವಾಗಲೂ ಪ್ರಜಾಪ್ರಭುತ್ವ ವ್ಯವಸ್ಥೆ ಜಯಗಳಿಸಬೇಕು ಎಂದರೆ ಇಂತಹ ಮೂಲಭೂತ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕು. ಇಲ್ಲದಿದ್ದರೆ, ನಾವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ, ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಪ್ರಜಾಪ್ರಭುತ್ವ ಪರಿಚಯಿಸಿದ ರಾಷ್ಟ್ರ ಎನ್ನುವುದು ಕೇವಲ ಒಣ ಹೇಳಿಕೆಗಳಾಗುತ್ತವೆ.